ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು, ಬೇಸಿಗೆ ರಜೆ ಪ್ರಾರಂಭವಾಗಿತ್ತು.ಗುಳ್ಳ ಮತ್ತು ಚಿದ ಹರಳಿಮರದ ಕಟ್ಟೆಮೇಲೆ ಕುಳಿತು, ಚೌಕಾಬರ ಆಡುತ್ತಿದ್ದರು. ಚಿದ - “ ಗುಳ್ಳಾ ಅಂತೂ ಹತ್ತನೆ-ಕ್ಲಾಸು ಮುಗಿದೇ ಹೋಯ್ತಲ್ಲೋ..?. ಮುಂದೆ ಕಾಮರ್ಸ್ ತಗೋಬೇಕುಅಂತಿದ್ದೀನಿ.” ಅಂದ ಕಾಲೇಜ್ ಕ್ಯಾಂಟಿನುಗಳಲ್ಲಿ, ಪಾರ್ಕುಗಳಲ್ಲಿ ಹುಡುಗ-ಹುಡುಗಿಯರ ಸಲುಗೆಯ ನಡೆ-ನುಡಿಗಳು ಅವನ ಮನದಲ್ಲಿ ಹುಚ್ಚು ಫ್ಯಾಂಟಸಿಯನ್ನು ಸ್ರುಷ್ಟಿಸಿದ್ದವು. ಕಾಲೇಜು ಸೇರಿದಾಕ್ಷಣ ಸರಸ-ಸಲ್ಲಾಪಗಳು ಕಾಂಪ್ಲಿಮೆಂಟರಿಯಂತೆ ಮತ್ತು ಹಚ್ ನಾಯಿಯಂತೆ ಹಿಂಬಾಲಿಸುತ್ತವೆಂದು ಭಾವಿಸಿದ್ದ. “ನೀ ಪಾಸಾದ್ರೆ ಅಲ್ವೇನೋ..ಕಾಲೇಜು-ಕಾಮ-ಕಾಮರ್ಸು ಇತ್ಯಾದಿ,ಇತ್ಯಾದಿ! ಈ ಊರಲ್ಲಿ ಒಂದೇ ಸಾರ್ತಿಗೆ ಹತ್ತನೆ ಕ್ಲಾಸು ಪಾಸಾದ ಮೇಧಾವಿಗಳು ಎಷ್ಟಿದ್ದಾರೆ..? ಸ್ಕೂಲಿಗಿಂತ ಹೆಚ್ಚಾಗಿ ವೀರಭದ್ರೇಶ್ವರ ಟಾಕೀಸು, ಗಾಂಧಿ-ಪಾರ್ಕು ಪ್ರದಕ್ಷಿಣೆ ಹಾಕಿದ್ದೀರ. ತನ್ನ ಮನೆಯಿಂದಲೇ ಅಡಿಕೆ ಕದ್ದು, ಶೆಟ್ಟಿ ಅಂಗಡಿಗೆ ಮಾರಿ, ದುಡ್ಡು ತೀರುವವರೆಗೂ ಪೇಟೆ ಸುತ್ತಿದ್ದೀರ. ಅಷ್ಟಕ್ಕೂ ನಿಂಗ್ಯಾಕೆ ಕಾಲೇಜು..? ಹೆಂಗೂ ನಿಮ್ಮಪ್ಪ ಇನ್ನೆರಡು ಎಕರೆ ಭತ್ತದ ಗದ್ದೆಗೆ, ಅಡಿಕೆ ಸಸಿ ನೆಟ್ಟು ತೋಟ ಮಾಡ್ತಿದ್ದಾರಂತೆ. ತೋಟ ಗೇಯ್ಕೋಂಡು ಇಲ್ಲೇ ಇದ್ದುಬಿಡು.” ಗುಳ್ಳ, ಚಿದನ ಕಾಲೇಜು ಕನಸಿಗೆ ಕೊಳ್ಳಿ ಇಟ್ಟಿದ್ದೂ ಅಲ್ಲದೇ.., ಆದರ್ಶ ರೈತನಾಗುವ ಬಿಟ್ಟಿ ಸಲಹೆಯನ್ನೂ ನೀಡಿದ. “ ನಿನ್ ಬಾಯಲ್ಲಿ ಒಳ್ಳೆ ಮಾತೆ ಬ