Thursday, December 1, 2011

ಮೂಢ ಅಮ್ಮನ ನಂಬಿಕೆಗಳು

ಕನ್ನಡಿಯ ಮುಂದೆ ನಿಂತು ' ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮವಾsss'
ಆರ್ಭಟಿಸುತ್ತಾ,  ಮುಷ್ಟಿಯನ್ನು ಬಿಗಿಹಿಡಿದು, ಅಲ್ಪ ಸ್ವಲ್ಪ ಊದಿಕೊಂಡಿದ್ದ ತೋಳಿನ
ಮಾಂಸಖಂಡಗಳನ್ನು ನೋಡಿಕೊಳ್ಳುತ್ತಿದ್ದೆ. ಅಮ್ಮ ನಕ್ಕಳು. ಆ ಒಂದು ನಗುವಿನಲ್ಲಿಯೇ
ಹೇಳಬೇಕಾದುದನ್ನೆಲ್ಲಾ ಹೇಳಿಯಾಗಿತ್ತು.

'ಇರ್ಲಿ ಮಾತೆ. ನಮಗೂ ಟೈಮ್ ಬರುತ್ತೆ. ಒಂದಲ್ಲಾ ಒಂದು ದಿನ ನಾನೂ ದಪ್ಪ ಆಗ್ತೀನಿ.
ನಾಲ್ಕು ನಾಲ್ಕು ಬಾರಿ ಊಟ ಮಾಡಿಯಾದ್ರೂ ಸರಿ.' ಎಂದೆ.

'ಬರಿ ಊಟ ಮಾಡಿದ್ರೆ ದಪ್ಪ ಆಗಲ್ಲ ಮಗನೆ. ತಲೆಯಲ್ಲಿ ಒಳ್ಳೆ ಬುದ್ಧಿ ಇರಬೇಕು.
ಅವಾಗೇನಾದ್ರು ದಪ್ಪ ಆಗಬಹುದು.' ಅಣಕಿಸಿದಳು. ನಾನು ಅದನ್ನು ಒಪ್ಪಲಾರೆ.
ದಪ್ಪವಾಗುವುದಕ್ಕೂ ತಲೆಯಲ್ಲಿನ ಒಳ್ಳೆ ಬುದ್ಧಿಗಳಿಗೂ ಅಂತಹಾ ಸಂಬಂಧವಿರಲಾರದು.

'ಹಂಗಾದ್ರೆ ಜಾಸ್ತಿ ದಪ್ಪ ಇದ್ದವರಿಗೆ, ಜಾಸ್ತಿ ಜಾಸ್ತಿ ಒಳ್ಳೆ ಬುದ್ಧಿ ಇರುತ್ತೆ
ಅಂತಲೋ ನಿನ್ನ ಮಾತಿನ ಅರ್ಥ.'

'ಹಾ!! ಅಷ್ಟು ಖಂಡಿತವಾಗಿ ಹೇಳಕ್ಕಾಗಲ್ಲ, ಆದ್ರೆ ಸ್ವಲ್ಪಮಟ್ಟಿಗೆ ಊಹೆ ಮಾಡಬಹುದು.
ನನ್ನ ಕೈ ಅಡುಗೆ ತಿಂದ ಮೇಲೂ, ನೀ ದಪ್ಪ ಆಗ್ತಿಲ್ಲ ಅಂದ್ರೆ ಇನ್ನೇನು ಹೇಳೋದು. ಊರಲ್ಲಿ
`ನಿನ್ನ ಮಗನಿಗೆ ಸರಿಯಾಗಿ ಊಟ ಹಾಕಲ್ವ` ಅಂತ ನನ್ನ ಕೇಳ್ತಾರೆ. ಕೊನೆಪಕ್ಷ ದೇವರ
ಮುಂದೆನಾದ್ರು ನಿಂತು, ಒಳ್ಳೆ ಬುದ್ಧಿ ಕೊಡಪ್ಪಾ ಅಂತ ಬೇಡಿಕೊ. ಬುದ್ಧಿ ಬಂದರೂ
ಬರಬಹುದು. ದಪ್ಪ ಆದ್ರೂ ಆಗಬಹುದು. ' ಅಮ್ಮ  ಎಂದಳು.

ಆದರೂ ಒಳ್ಳೆಯ ಬುದ್ಧಿಗಾಗಿ, ದೇವರ ಮೊರೆ ಹೋಗುವುದೇ. ಯಾಕಂದ್ರೆ,' ದೇವ್ರೆ ವಿದ್ಯಾ
ಬುದ್ದಿ ಕೊಡಪ್ಪಾ' ಎಂಬುದು ನಮ್ಮಜ್ಜಿ ಸುಮಾರು ಇಪ್ಪತ್ತು ವರುಷಗಳ ಹಿಂದೆ ದೇವರ ಮುಂದೆ
ಕೈಮುಗಿದು ನಿಂತಾಗ ಹೇಳಿಕೊಟ್ಟಿದ್ದ ಮಾತು. ಒಂದು ವರೆ ಕತ್ತೆ ವಯಸ್ಸಾದರೂ ದೇವರ ಮುಂದೆ
ನಿಂತಾಗ irrespective of gender  'ದೇವರೆ ವಿದ್ಯಾ ಬುದ್ಧಿ ಕೊಡಪ್ಪಾ' ಅಂತ
ಕೇಳುತ್ತಲೇ ಬಂದಿದ್ದೀನಿ. ಅದಕ್ಕಿಂತ ಹೆಚ್ಚು ಅಥವಾ ಕಮ್ಮಿ ಏನನ್ನೂ ಕೇಳಿಲ್ಲ. ಆದರೆ
ಇಲ್ಲಿ ವಿದ್ಯಾ ಬುದ್ಧಿ ಎಂಬುದು ನಾಮಪದವೋ ಕ್ರಿಯಾಪದವೋ ಎಂಬ ಧರ್ಮಸಂಕಟದಲಿ ದೇವರನ್ನು
ಒದ್ದಾಡುವಂತೆ ಮಾಡಿದ್ದು ಮಾತ್ರ ಕಹಿಸತ್ಯ.

'ಯಾರ ಹತ್ರ, ಏನು ಇರವುದಿಲ್ವೊ ಅದುನ್ನ ಅವರು ಬೇರೆಯವರಿಗೆ ಹೆಂಗೆ ಕೊಡ್ತಾರೆ ಮಮ್ಮಿ. '
ಎಂದೆ.

ಅಂದ್ರೆ ದೇವರಿಗೂ ಬುದ್ಧಿ ಇಲ್ಲ ಎಂಬ ನನ್ನ ವಿಡಂಬನೆಯನ್ನು ಕೊಂಚ ತಡವಾಗಿಯೇ ಅರ್ಥ
ಮಾಡಿಕೊಂಡ ಅಮ್ಮ ಕೋಪಿಸಿಕೊಂಡಳು. 'ದೇವರು ಅಂದ್ರೆ ಭಯ  ಭಕ್ತಿ ಇಲ್ಲ. ಹಂಗೆಲ್ಲಾ
ಹಗುರವಾಗಿ ಮಾತಾಡಬಾರದು ಮಗನೆ. ದೇವರು ಕಣ್ಣು ಕಳೀತಾನೆ.'

'ಅಯ್ಯಯ್ಯೋ!! ಸಣ್ಣವನಿದ್ದಾಗಿಂದಲೂ, ಅದನ್ನೇ ಹೇಳ್ತಾ ಬಂದಿದೀಯಾ? ನೀನು ನಿಮ್ಮಜ್ಜಿ,
 ಅವರಜ್ಜಿ. ಎಲ್ಲರೂ ದೇವರು ಕಣ್ಣು ಕಳೀತಾನೆ ಅಂತ್ಲೇ ಇರ್ತೀರಲ್ಲ. ದೇವರ ಶಾಪಗಳಲ್ಲಾದರೂ
ಅಪ್ ಡೇಟ್ ಆಗಬಾರದ. ದೇವರು ಕಿವಿ ಕಳೀತಾನೆ, ಕಿಡ್ನಿ ಫೇಲ್ ಮಾಡ್ತಾನೆ, ಹಾರ್ಟು ಬ್ಲಾಕ್
ಮಾಡ್ತಾನೆ, ಬ್ರೇನ್ ನಲ್ಲಿ ಟ್ಯೂಮರ್ ಇಡ್ತಾನೆ, ಹಿಂಗೆ ವೆರೈಟಿಯಾಗಿ ಹೇಳಬೇಕಪ್ಪಾ.'.

ಜೀವನದ ಬಗೆಗಿನ ಹತಾಶೆಯ ಮಾತುಗಳು ಮನೆಯೊಳಗೆ ಆಡುವಂತಿಲ್ಲ. ಈ ಕೆಟ್ಟ ಕೆಟ್ಟ ಖಾಯಿಲೆಗಳ
ಹೆಸರು ಕೇಳುತ್ತಲೇ ಅಮ್ಮ ಶಿವ ಶಿವಾ ಎಂದಳು. 'ಥೂ ಬಾಳಿ ಬದುಕಬೇಕಾದವರ ಬಾಯಲ್ಲಿ, ಎಂತಾ
ಅಪಶಕುನದ ಮಾತುಗಳು. ಬಿಡ್ತು ಅನ್ನು ಮಗನೆ. ಅಶ್ವಿನಿ ದೇವತೆಗಳು ಇಲ್ಲೇ ಸುತ್ತಾಡ್ತಾ
ಇರ್ತಾರೆ. ಅಸ್ತು ಅಂದು ಬಿಡ್ತಾರೆ' ಎನ್ನುತ್ತಾ ನನ್ನ ಪರವಾಗಿ ತನ್ನ ದೇವರಿಗೆ ಸಾವಿರ
ಸಾರಿಗಳನ್ನು ತಲುಪಿಸಿದಳು.

'ಒಳ್ಳೆ ಒಳ್ಳೆ ವಿಷಯಗಳು ಮಾತಾಡುವಾಗ ನಿನ್ನ ಅಶ್ವಿನಿ ದೇವತೆಗಳು ಐಸ್ ಪೈಸ್ ಆಡೋದಕ್ಕೆ
ಹೋಗಿರ್ತಾರ'ಎಂದೆ.

'ನಾಲಕ್ಕು ಅಕ್ಷರ ಜಾಸ್ತಿ ಓದಿದ ಮಾತ್ರಕ್ಕೆ, ತಾವೇ ಸರ್ವಜ್ನರು ಅನ್ನೋ ದುರಹಂಕಾರ
ಬರಬಾರದು. ನಮ್ಮ ಹಿರಿಯರು ಏನೇ ಮಾಡಿದ್ರೂ, ಅದಕ್ಕೊಂದು ಅರ್ಥ ಇರುತ್ತೆ. ಆ ದೇವರ ಕೄಪೆ
ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡೋದಿಲ್ಲ.' '

' ಅಲ್ಲವೇ ಮತ್ತೆ. ದೇವರ ಕೄಪೆ ಇಲ್ಲದೆ, ಹುಲ್ಲು ಕಡ್ಡಿ ಅಲ್ಲಾಡೋದು ಬಿಟ್ಟು
 ಬೇರೆಲ್ಲಾ ಕ್ರಿಯೆಗಳು ಆಗುತ್ತವೆ. ಪಾಪ ನೀವೆಲ್ಲಾ ಸೇರಿಕೊಂಡು ದೇವರನ್ನ ಬರೀ ಹುಲ್ಲು
ಕಡ್ಡಿ ಅಲ್ಲಾಡಿಸುವುದಕ್ಕಂತಲೇ ಕೂರಿಸಿಬಿಟ್ಟಿದ್ದೀರಿ' ಎಂದೆ.

ಮೊಂಡು ವಾದ ಮಾಡಲೇಬೇಕೆಂದು ಕುಳಿತಿರುವವನ ಮುಂದೆ ಬಡಪಾಯಿ ಅಮ್ಮ ಏನು ಮಾಡಲು ಸಾಧ್ಯ.
ಬಿಗಿಯಾದವರು ಸಿಕ್ಕರೆ, ವಾದಿಸುವುದು ಕಷ್ಟ. ಅಮ್ಮನ ಜೊತೆ ನನ್ನದೇ ಮೇಲುಗೈ.

'ನಿಮ್ಮ ಜನರೇಷನ್ನೇ ತಿಕ್ಕಲು ತಿಕ್ಕಲು. ನಮ್ಮಜ್ಜಿ, ನಮ್ಮಮ್ಮ ಹ್ಯಾಗಿದ್ದರೋ ನಾವು
ಹಂಗೇ ಇದೀವಿ. ನಿಜಾನೋ ಸುಳ್ಳೋ ಇರೋದನ್ನೆಲ್ಲಾ ಒಪ್ಪಿಕೊಂಡು ಬದುಕ್ತಿಲ್ವ. ಈ
ನಂಬಿಕೆಗಳಲ್ಲೇ ಬಾಳಿ ಬದುಕಿ ಸತ್ತವರನ್ನ ಎಬ್ಬಿಸಿ, ನೀವು ತಿಳ್ಕಂಡಿದ್ದು ಸತ್ಯ ಅಲ್ಲ,
ಸತ್ಯಗಳನ್ನು ತಿಳ್ಕಂಡಿ ಪುನಃ ಬದುಕ್ರಿ ಅನ್ನೋಕಾಗುತ್ತ. ಇವು ನಂಬಿಕೆಗಳು ನಂಬಬೇಕು
ಅಷ್ಟೇ' ಎಂದು ಉದ್ದುದ್ದ ಪಿಲಾಸಪಿ ಹೊಡೆದು ಹೊರಟುಬಿಟ್ಟಳು.

---
-> **2** <- br="">
ಹೊಟ್ಟೆಗೆ ಊಟ ಬಿದ್ದು ಅಂದಿಗೆ ನಾಲ್ಕು ದಿನಗಳು. ತಿಂದದ್ದೆಲ್ಲಾ ಎರಡೂ ಹೆದ್ದಾರಿಗಳ
ಮೂಲಕ ಹೊರನಡೆಯುತ್ತಿದ್ದುದರಿಂದ, ಉದರದಲ್ಲಿ ಶಕ್ತಿ ಉತ್ಪಾದಿಸುವ ಮೂಲ ದ್ರವ್ಯಗಳಾವುವು
ಉಳಿದಿರಲಿಲ್ಲ. ಡಾಕ್ಟರು, ಕೊಟ್ಟ ಮಾತ್ರೆಗಳು ನುಂಗಿದ ಮರುಕ್ಷಣದಲ್ಲಿಯೇ ಬಂದ
ದಾರಿಯಲ್ಲಿಯೇ ವಾಪಾಸಾಗುತ್ತಿದ್ದವು. ರಕ್ತ ಮೂತ್ರಾದಿಯಾಗಿ, ದೇಹದ ಸಕಲ ಅಂಗಾಂಗಳನ್ನೂ
ಪರೀಕ್ಷಿಸಿದ ಡಾಕ್ಟರು, ದುಬಾರಿ ವೆಚ್ಚದ ಪ್ರಾಣ ಹೋಗುವಂತ ಖಾಯಿಲೆ ಅಗಿಲ್ಲವೆಂದು
ಧೃಢಪಡಿಸಿದರು.

ಇನ್ನು ದೀನ ದೇಹಕ್ಕೆ ಶಕ್ತಿ ತುಂಬಲು ಗ್ಲುಕೋಸ್(ಡ್ರಿಪ್ಸ್) ಹಾಕಲು ಸೂಚಿಸಿದರು.
ನರ್ಸಮ್ಮ ನನ್ನ ಕೈಯಲ್ಲಿ ನರವನ್ನು ಹುಡುಕುತ್ತಾ ನಾಲ್ಕೈದು ಕಡೆ ಸೂಜಿಯಿಂದ ಚುಚ್ಚಿದಳು.
ನನಗೂ ನೋವು ಮಿಶ್ರಿತ ಕೋಪ ಬಂತು.

'ಸಿಸ್ಟರ್!! ಇದು ನನ್ನ ಕೈ ಕಣ್ರೀ. ನೋಯುತ್ತೆ ಚುಚ್ಚುದ್ರೆ' ಎಂದೆ.

'ಅಯ್ಯಾ ನರ ಸಿಗ್ತಿಲ್ಲ ಸುಮ್ನಿರಪ್ಪಾ. ಏನ್ರಿ ನಿಮ್ಮ ಹುಡುಗ ಸಣ್ಣ ಮಗ ಆಡಿದಂಗೆ
ಆಡ್ತಾನೆ' ಎನ್ನುತ್ತಾ ಮತ್ತೆ ಮತ್ತೆ ಚುಚ್ಚಿದಳು. ವಯಸ್ಸಿನ ಜೊತೆ ನೋವನ್ನು
ಸಹಿಸಿಕೊಳ್ಳುವ ಸಹನೆ ಬೆಳೆದುಬಿಡಬೇಕೆ. ? ಅಂತೂ ಒಂದು ಕಡೆ ಚುಚ್ಚಿ ಗೆದ್ದೆನೆಂಬ
ಭಾವದಲ್ಲಿ ಹೊರಟು ಹೋದಳು. ಇತ್ತ ಚುಚ್ಚಿದ ಜಾಗದಲ್ಲಿ ಕೈ ಬಬ್ಬಲ್ ಗಮ್ ಊದುವಂತೆ
ಊದುತ್ತಾ ಹೋಯಿತು. ನಾನೂ' ಮಮ್ಮಿ ಅಯ್ಯಯ್ಯೋ' ಎಂದು ಚೀರಿಕೊಂಡೆ. ತಕ್ಷಣ ನರ್ಸಮ್ಮ
ವಾಪಾಸು ಓಡಿ ಬಂದಳು.

'ಸರಿಯಾಗಿಯೇ ಚುಚ್ಚಿದ್ದೆನಲ್ಲಾ, ನರ ಮಿಸ್ ಆಗಿ ಹೋಯ್ತ.' ಎನ್ನುತ್ತಾ ನಿರ್ಭಾವುಕಳಾಗಿ
ಚುಚ್ಚಿದ್ದ ಸೂಜಿಯನ್ನು ಕಿತ್ತು ಬೇರೆಡೆಗೆ ಚುಚ್ಚಿದಳು. ನಾಲ್ಕು ಡ್ರಿಪ್ಸ್ ಬಾಟಲ್
ಗಳನ್ನು ಹೀರಿದ ಮೇಲೆ ಡಾಕ್ಟರು ಡಿಸ್ಚಾರ್ಜು ಮಾಡಿದರು. ಮಾತ್ರೆಗಳ ಬದಲಾಗಿ ಟಾನಿಕ್ಕು
ಮತ್ತು ಜೇನುತುಪ್ಪದ ಬಾಟಲಿಯನ್ನು ಕೊಟ್ಟರು. ಮನೆಗೆ ಬಂದ ಕೂಡಲೇ ಅಮ್ಮನಿಗೆ ವಾಂತಿ
ನಿಂತಿದೆಯೋ, ಇಲ್ಲವೋ ಎಂದು ಪರೀಕ್ಷಿಸಿ ನೋಡುವ ಕಾತುರ. ಕೆಲವೇ ನಿಮಿಷಗಳಲ್ಲಿ ರವೆ
ಗಂಜಿಯನ್ನು ಮಾಡಿಕೊಂಡು ನನ್ನ ಮುಂದಿರಿಸಿದಳು. ಇದರ ದೆಸೆಯಿಂದಾಗಿ, ತಿನ್ನುವ
ಪದಾರ್ಥಗಳೆಲ್ಲವೂ ಹಾಗಲಕಾಯಿಗಿಂತಲೂ ಅದರಕ್ಕೆ ಅನಿಷ್ಟವೆಂಬಂತೆ ಕಾಣುತ್ತಿದ್ದವು. ಏನೇನೂ
ಬೇಡವೆಂದರೂ ಹಠ ಹಿಡಿದು ನಿಂತಳು ಅಮ್ಮ.

' ನನ್ನನ್ನು ನೆಮ್ಮದಿಯಾಗಿ ಮಲಗಲಿಕ್ಕೆ ಬಿಡು ಮಾತೆ ' ಎಂದರೂ ಬಿಡದೆ
ಒತ್ತಾಯಪೂರ್ವಕವಾಗಿ 'ಸ್ವಲ್ಪ ಕುಡಿದು ಮಲಗಿಬಿಡು. ಆಮೇಲೆ ನಿನ್ನ ತಂಟೆಗೆ ಬರಲ್ಲ.'
ಎನ್ನುತ್ತಾ ಹಂಡ್ರೆಡ್ ಎಮ್ ಎಲ್ ಕುಡಿಸಿಯೂ ಬಿಟ್ಟಳು. ನನ್ನ ಗಮನವೆಲ್ಲವೂ
ಪೆರಿಸ್ಟಾಲೈಸಿಸ್ ಚಲನೆಯಿಂದ ಹೊಟ್ಟೆಗೆ ಇಳಿದಿರುವ ಮತ್ತು ಗುರುತ್ವಾಕರ್ಷಣೆಗೆ
ವಿರುದ್ಧವಾಗಿ ಹೊಟ್ಟೆಯಿಂದ ಮೇಲ್ಮುಖವಾಗಿ ಹರಿಯಲು ಕಾತರವಾಗಿರುವ ಗಂಜಿಯ ಮೇಲೆ
ಕೇಂದ್ರೀಕೄತವಾಗಿತ್ತು. ರೋಗಿ ಬಯಸಿದಂತೆಯೇ ಗಂಜಿ ಹೊರಬಂತು. ಹೈರಾಣಾಗಿ ಹಾಸಿಗೆಯ ಮೇಲೆ
ಬಿದ್ದೆ.

'ಮನಸ್ಸು ಗಟ್ಟಿ ಇರ್ಬೇಕು. ಪದೆ ಪದೆ ಆಗುತ್ತೆ ಆಗುತ್ತೆ ಅಂತ ಮನಸ್ಸಲ್ಲಿ ಅನ್ಕೋತ
ಇದ್ರೆ, ಅದು ಆಗುತ್ತೆ. ಏನು ಆಗುತ್ತೊ ಆಗ್ಲಿ ಅಂತ ಮೊಂಡು ಬೀಳಬೇಕು' ಎಂದಳು. ದೇಹದ
ಮೂಳೆ ಮಾಂಸ ಖಂಡಗಳಿಗೂ, ಮನಸ್ಸಿನ ಅಗೋಚರ ಭಾವನೆಗಳಿಗೂ ಶಾರ್ಟ್ ಸರ್ಕೂಟ್ ಮಾಡಿಸುವಂತೆ
ಜೋಕು ಮಾಡಿದಳು.

ರಾತ್ರಿಯ ಹೊತ್ತಿಗೆ ಅಮ್ಮ ಏನನ್ನೋ ಭಯಂಕರವಾದುದನ್ನು ಮಾಡುವ ಮಸಲತ್ತು
ನಡೆಸುತ್ತಿದ್ದಳು. ನನ್ನ ಹತ್ತಿರ ಬಂದು 'ನಿಂಗೆ ಅನ್ನ ದೋಷವಾಗಿದೆ. ಅನ್ನ ಸೇರದಂತೆ,
ಯಾರದ್ದೋ ಕೆಟ್ಟ ದೄಷ್ಟಿ ನಿನ್ನ ಮೇಲೆ ಬಿದ್ದಿದೆ. ದೄಷ್ಟಿ ತೆಗೀಬೇಕು. ನೀವಾಳಿಸಬೇಕು.'
ಮಸ್ಕಾ ಹೊಡೆಯುತ್ತಾ ಕೇಳಿದಳು.

'ಟುಪಿಡ್; ಈಡಿಯಟ್; ನನ್ನ ಕಷ್ಟ ನಂಗೆ. ಸುಮ್ನೆ ನನ್ನನ್ನು ಬಿಟ್ಟು ಬಿಡು ಮಮ್ಮಿ.
ಪ್ಲೀಸ್' ಎಂದು ಖಡಾ ಖಂಡಿತವಾಗಿ ತಿಳಿಸಿದೆ. ಅಮ್ಮಾ ಪರಿ ಪರಿಯಾಗಿ ಬೇಡಿಕೊಂಡಳು. '
ನನಗೆ ಇಂಥಾದ್ರಲ್ಲೆಲ್ಲಾ ನಂಬಿಕೆ ಇಲ್ಲ. ನಿಮ್ಮ ಸಮಾಧಾನಕ್ಕೆ ಏನಾದ್ರು ಮಾಡೋದಿದ್ರೆ
ಮಾಡ್ಕಳಿ.' ಉಡಾಫೆಯ ರೀತಿಯಲ್ಲಿ ಹೇಳಿದೆ. ತೋರಿಕೆಯಲ್ಲಿ ತಿರಸ್ಕಾರವಿರುತ್ತಿತ್ತಾದರೂ,
ಮನಸ್ಸು ಈ ಅಂಧ ನಂಬಿಕೆಗೆ ನೈತಿಕ ಒಪ್ಪಿಗೆಯನ್ನು ನೀಡಿಯಾಗಿತ್ತು. ಹೆಂಗೋ ಹುಷಾರಾದರೆ
ಸಾಲದೇ ಎಂಬ ಶರಣಾಗತ ಭಾವ.

ಮುಷ್ಟಿಯಲ್ಲಿ ಅನ್ನವನ್ನು ಹಿಡಿದು, ನನ್ನ ಮುಖಕ್ಕೆ ನೀವಾಳಿಸಿ ಎಸೆದಳು. ಚುಟಕಿ
ಹಾಕುತ್ತೇನೆಂದು ಹೇಳಿ, ಕಪ್ಪು ಬಳೆಯನ್ನು ಕೆಂಪಾಗುವವರೆಗೂ ಕಾಯಿಸಿ ನಾಲ್ಕೈದು ಕಡೆ
ಸುಟ್ಟುಬಿಟ್ಟಳು. ಕೊನೆಗೂ ಸೇಡು ತೀರಿಸಿಕೊಂಡಳು. ಈ ಪ್ರೊಸೀಜರ್ ಗಳೆಲ್ಲಾ ನನ್ನ ಅಜ್ಜಿಯ
ಮನೆಯಿಂದ ವರದಕ್ಷಿಣೆಯ ಬದಲಾಗಿ ತಂದ ಸಾಮಗ್ರಿಗಳು. ಕೊನೆಯದಾಗಿ ಪೊರಕೆಕಡ್ಡಿಗೆ ಬೆಂಕಿ
ತಾಗಿಸಿ. ' ಹಾದಿ ಕಣ್ಣು ಬೀದಿ ಕಣ್ಣು, ರಂಡೆ ಕಣ್ಣು ಮುಂಡೆ ಕಣ್ಣು, ಬಸ್ರಿ ಕಣ್ಣು....
ಥೂ ಥೂ ಥೂಥುಥು' ಮುಖದ ಮುಂದೆ ತಿರುಗಿಸುತ್ತಾ ನಾಲ್ಕೈದು ಬಾರಿ ಉಗಿದಳು. 'ಪಕ್ಕದ ಮನೆ
ಹುಡ್ಗೀರ್ ಕಣ್ಣು, ಸೇರಿಸಿ ಉಗಿ.' ಎಂದೆ. ಸೀನೆ ಇಲ್ಲ ಎಂಬಂತ ಅಣುಕು ನಗು.

ಮಾರನೆಯ ದಿನದಿಂದ ವಾಂತಿ ತಲೆ ನೋವು ಸ್ತಬ್ಧವಾಯಿತು. ಅಮ್ಮ ನನ್ನನ್ನು ನೋಡಿದಾಗಲೆಲ್ಲ,
ಹೆಮ್ಮೆಯ ನಗು ತೋರುವಳು. ನನಗೂ ಅರ್ಥವಾಯಿತು. 'ಜಾಸ್ತಿ ಖುಷಿ ಪಡೋ ಅಗತ್ಯ ಇಲ್ಲ.
ಡಾಕ್ಟರು ಕೊಟ್ಟ ಟಾನಿಕ್ಕು ಈ ದಿನದಿಂದ  ಕೆಲಸ ಶುರುಮಾಡಿದೆ. ಇದು co incidence.
ಕಾಕತಾಳೀಯ' ಎಂದೆ. ಮತ್ತೂ ನಕ್ಕಳು.

Saturday, October 1, 2011

ನಿನ್ನ ಹೆಸ್ರನ್ನ ಗುನುಗ್ತಾ ಇದ್ರೆ!! ಹಿಪ್ನಾಟೈಸ್ ಮಾಡಿದಂಗ್ ಆಗ್ತದೆ.


ಹುಡುಗ್ರಲ್ಲಿ ನಾವದನ್ನ 'ಬಕೇಟ್' ಹಿಡಿಯೋದು ಅಂತೇವೆ. ಬಗ್ಗಿ ಬಕೇಟ್ ಹಿಡ್ದು, ಬೆನ್ ನೋವು ಬಂದದ್ದಷ್ಟೇ ಭಾಗ್ಯ. ನಿನಗೆ ನನ್ನ ಒಲವಿನ ಸುಳಿವು ಸಿಗಲಿಲ್ಲ. ನಿನ್ನೋರ್ವಳನು ಹೊಗ್ಳಿದ್ದು ಸಾಲದೆಂಬಂತೆ, ಫ್ರೆಂಡುಗಳು ಅಪ್ಪ ಅಮ್ಮ ಅಜ್ಜಿ ತಾತ ಅಕ್ಕನ ಮಕ್ಕಳು, ಅಯ್ಯೋ ದೇವರೆನಿನ್ನ ಆಪ್ತ ವಲಯವನ್ನೆಲ್ಲಾ ಹತ್ತಿ-ಇಳಿಸಬೇಕಾಯ್ತು. 


ನಿಂಕೆ ನೆಪ್ಪಿದೆಯಾ. ?ಯಾವ್ದೋ ಮಗು ಕೆನ್ನೆಗೆ, ಕೆನ್ನೆ ಒತ್ತಿ ಹಿಡಿದ ಫೋಟೋ ಒಂದನ್ನ ಫೇಸ್-ಬುಕ್ಕಲ್ಲಿ ಹಾಕಿದೆ. ಹತ್ತು ಸೆಕೆಂಡುಗಳ ಒಳಗಾಗಿ, "ವಾ. ವ್ ನೈಸ್ ಕಿಡ್. " ಅಂತ ಕಾಮೆಂಟು ಹಾಕಿದ್ದಕ್ಕೆ. ನೀನು ಆ ಮಗುವಿನ ಕುಲ, ಗೋತ್ರ, ನಕ್ಷತ್ರಾದಿಯಾಗಿ ಒಂದನ್ನೂ ಬಿಡದೆ ಉದ್ದುದ್ದು ಹೇಳಿದೆ. ಯಾವನಿಗೆ ಬೇಕಿತ್ತು ಅಷ್ಟೋಂದು ಡೀಟೈಲ್ಸು. ? ಒಂದು ಗುಟ್ಟು ಹೇಳ್ಳಾ. 'ನೈಸ್ ಕಿಡ್' ಅಂದದ್ದು ಆ ಮಗುಗಲ್ವೇ. 

ಆವತ್ತೊಂದಿನ ತಿಳಿ ನೀಲಿ ಬಣ್ಣದ ಅಂಗಿ ಹಾಕಿ ಬಂದಾಗ, ನೀನೂ ಕೂಡ ಅದೇ ಕಲರಿಂದು ಚೂಡಿ ಹಾಕಿ ಬಂದಿದ್ದೆ. ಚೂಡಿಯ ಮೇಲೆ ಮಿಂಚ್-ಮಿಂಚಾದ ಕಸೂತಿ ಕೆಲ್ಸದ ಜಾತ್ರೆ ಇದ್ದಾಗಿಯೂ ಕೂಡ, ಆ ಧಿರಿಸಿನ ಡಾಮಿನೇಟ್ ಕಲರು ಲೈಟ್ ಬ್ಲೂನಮ್ಮ. ನಮ್ಮ ಆತ್ಮಗಳಿಗೆ ಸಮಾನ ವರ್ಣಾಭಿರುಚಿ ಇರುವುದಾಗಿ ಮನ್ಸು 'ಸೇಮ್ ಪಿಂಚ್' ಮಾಡಿ, ಮುಗುಳ್ನಕ್ಕಿತ್ತು. 

ಇಂಥ ಕಮ್ಮಿ ಕಮ್ಮಿ ಖುಷಿಯಲ್ಲಿ, ಮೂಖಪ್ರಾಣಿ ತರ ಸಾಕ್ಕೋಂಡಿದ್ವು ಮನ್ಸನ್ನ. ಈಗ ಮನ್ಸು ಬಂಡಾಯದ ಬಾವುಟ ಹಾರಿಸಿ, ಭ್ರಮೆಗಳ ಬೌಂಡರಿ ದಾಟಿಹೋಗಿ ಕುಂತದೆ. 'ಲೋ ಮರಿ, ಯಾಮಾರ್ತಾ ಇದೀಯ. ಬಂದು ಬಿಡಪ್ಪ' ಅಂತ ಆ ಮನ್ಸನ್ನ ಕರೆದ್ರೆ, 'ಊ ಹುಂ' ಸುತಾರಾಂ ಒಪ್ತಾ ಇಲ್ಲ. 

ಯಾರನ್ನೂ ಇಷ್ಟೋಂದು ಹಚ್ಚಿಕೊಳ್ಳಲಿಲ್ಲವೆ. ನೆಚ್ಚಿಕೊಳ್ಳಲಿಲ್ಲವೆ. ನಿನ್ನ ಮೆಚ್ಚಿದೆ. 

ಪ್ರತಿ ಸಾರಿ, ಮಾತು ಮುಗಿದಾಗಲೂ. ಯಾವಾಗ. ? ಹೇಗೆ. ? ಮತ್ತೆ ಮಾತು ಶುರುಮಾಡಬಹುದಂತಲೇ, ನಿಲ್ಲದ ಆಲೋಚನೆಗಳು ಹೆಗಲೇರುವವು. ಅದೆಷ್ಟೋ ಮಾತುಗಳಲ್ಲಿ 'ಸೆನ್ಸು' ಇರೋದಿಲ್ಲ ಅನ್ನೋದು ಬೇರೆ ಮಾತು. ಆದರೂ ಬೇಕಾದ್ದು ಹೇಳು. ಕೇಳುವ ಆಸೆಯಿದೆ. 

ಮಾತಾಡ್-ಬೇಕು, ಒಟ್ಟಿಗೆ ಕನ್ಸು ಕಾಣಬೇಕು, ಹಠಕಟ್ಟಿಬದುಕಬೇಕು, ಹುಚ್ಚಿಗ್ ಬಿದ್ದು  ಪ್ರೇಮಿಸಬೇಕು. ಜೀವನ ಅ೦ದ್ರೆ, 'ನೀನೆ ಅಲ್ಲ', 'ಬರಿ ಪ್ರೀತಿನೆ ಅಲ್ಲ' ಅಂತೆಲ್ಲಾ ಅನಿಸಿದಾಗ, ಉಳಿಯುವುದು ಒಂದು ಕೃತಕ ನಿರುದ್ಯೋಗ. ಅದೇನೋ, ಕನಸುಗಳಿರದ ಇಲಾಜೇ ಇಲ್ಲದ ಕಳೆಹೀನ ರೋಗ. 

> ಸದಾ ನಾ ಓಡಾಡೋ ರಸ್ತೆಯ ಕೊನೆಯಲ್ಲಿ ನಿಂತು, ನನ್ನ ಹಂಬಲವನ್ನ ಹಂಗಿಸಿದಂತಾಗತ್ತೆ. ಅಷ್ಟರ ಮಟ್ಟಿಗೆ ಆವರಿಸಿದ್ದೀಯ. 

ಅರೇ!! ರಾತ್ರಿಯಾಗುವಾಗಲೆಲ್ಲಾ ನನ್ನ ಆಯಸ್ಸು ಒಂದು ದಿನ ಕಡ್ಮೆ ಆಗೋಯ್ತು, ಅನ್ನೋ ಹತಾಶೆ. ಈ ತಳಮಳವನ್ನೆಲ್ಲಾ ಹೇಳಬೇಕಂತಲೂ ಬರ್ತೇನೆ. ನಿನ್ನ ನಗು, ಮಾತು,ಕಣ್ಣ ಸನ್ನೆ ಮತ್ತು ಅಂಗ ಚೇಷ್ಟೆಗಳ ಜೊತೆಗೆ ನಮ್ಮ 'ಗುರಿ' ಗಿರಿಗಿಟ್ಟಲೆ ಹೊಡೆದು,ತಕ್ಕಮಟ್ಟಿಗಿದ್ದ ನಮ್ಮ ಆತ್ಮವಿಶ್ವಾಸವೂ ಡೈಲೂಟಾಗಿ, ' ಹಿಂಗೇ, ಮಾತಾಡ್ಕೋಂಡು ಚೆನ್ನಾಗಿದಿವಿ ಅಲ್ವಾ, ಚನ್ನಾಗೈತೆ ಲೈಫು' ಅಂತನ್ನಿಸಿ, 'ಅಸಹಾಯಕತೆ' ಯು 'ಅಲ್ಪತೃಪ್ತಿ' ಯ ನೆರಳಲ್ಲಿ ಕಣ್ಣಾಮುಚ್ಚಾಲೆ ಆಡುವುದು. 

ಆದರೂ ಬಿಡದೆ ನನ್ನನಗೇ ಇಲ್ಲ ಸಲ್ಲದ ಆಸೆ ಆಮಿಷಗಳನ್ನು ತೋರಿಸಿಕೊಂಡು, ಮಕ್ಕಿಕಾಮಕ್ಕಿ ಲವ್ವಿನ ಡೈಲಾಗುಗಳನ್ನ ಅಚ್ಚಿ ಇಳಿಸಿ,ಪ್ರಪೋಸಿಸುವಭರದಲ್ಲಿ ಬಂದರೇ ಸ್ಪೆಷಲ್ ಎಫೆಕ್ಟುಗಳೆಲ್ಲಾ ತಪ್ಪಿ ಹೋಗಿ,ನನ್ನ ಬೌದ್ಧಿಕ ಆತ್ಮಾಹುತಿಗೆ ಇಡೀ ಪ್ರಪಂಚವೇ ನಕ್ಕಂತಾಗಿ ಬಿಡುವುದು. 

ಈ 'ಪ್ರೀತಿ' ಅನ್ನೋ ಒಳಸಂಚು ತಿಳಿದಾಕ್ಷಣ, ಧಿಗ್ಭ್ರಾಂತಳಾಗುವೆಯಾ. ? ನಂಗ್ಯಾಕೊ ಡೌಟು. ಎಲ್ಲಾ ಗೊತ್ತಿದ್ದೂ, ಸುಮ್ಮನೇ ಎಲ್ಲವನ್ನೂ ಗಮನಿಸುತ್ತಿದ್ದಿ  ಅನ್ನಿಸ್ತಿದೆ. 

ಸದ್ಯಕ್ಕೆ ದೇವರ ಹತ್ರ ತತ್ಕಾಲ್ ಬೇಡಿಕೆ ಅಂದ್ರೆ," ನಮ್ಮ-ನಮ್ಮ, ವಿಷಯಗಳು ಇತ್ಯರ್ಥ ಆಗುವವರೆಗೂ. ತಮಗೆ ಕಂಕಣ ಭಾಗ್ಯ ಕೂಡದೇ ಇರಲಿ. " ಅನ್ನೋದು. ಕ್ಷಮಿಸು ಮಾರಾಯ್ತಿ, ನಮಗಿಲ್ಲಿ ಸಂಬಂಧಗಳ ಕ್ಲಾರಿಟಿ ಸಿಗುವುದರೊಳಗೆ. ,ಯಾರೋ ಬಂದು, ಉಪ್ಪಿಟ್ಟು ಕೇಸ್ರಿಬಾತು ತಿಂದು, ನಿನ್ನೂ ಕರ್ಕೋಂಡು ಹೋದ್ರೆ. .. ' ನೆನೆಸಿಕೊಂಡ್ರೆ ಉಮ್ಮಳಿಸಿ ಬರುತ್ತದೆ, ಕ್ರೋಧ. 

ನಮ್ಮ ಜೀವನದ ' ಒಳಗೆ ' ಬರೋ ಪಾತ್ರಗಳ ಮೇಲೆ ನಮಗೆ ನಿಯಂತ್ರಣ ಇಲ್ಲದೇ ಇರಬಹುದು. ಆದರೆ ಉಳಿದು ಹೋಗುವಪಾತ್ರಗಳ ಆಯ್ಕೆ ಸ್ವಾತಂತ್ರ ಖಂಡಿತ ಇರತ್ತೆ. ಬಹುಶಃ ಅದು ಪರಸ್ಪರರ ಆಸಕ್ತಿ ಯನ್ನ ಅವಲಂಭಿಸಿರತ್ತೆ. 

' ನನ್ನ ಮೇಲೆ ಆ ಥರದ್ದೊಂದು ಆಸಕ್ತಿ ಇದೆಯಾ. ? ' ಅನ್ನೋ ಮುಕ್ತ ಪ್ರಶ್ನೆ ಇಟ್ಟುಕೊಂಡು, ಸುಮಾರು ಕಾಪಿ-ಕಟ್-ಪೇಸ್ಟುಗಳಿಂದ ಡ್ರಾಫ್ಟಿನಲ್ಲಿ ಕೊಳೆ ಹಾಕಿದ್ದ ಪತ್ರದ ಸ್ಟೇಬಲ್ ವರ್ಷನ್ ರಿಲೀಸ್ ಮಾಡ್ತಾ ಇದ್ದೇನೆ. 

ನಿನ್ನ ಹೆಸ್ರನ್ನ ಗುನುಗ್ತಾ ಇದ್ರೆ ಹಿಪ್ನಾಟೈಸ್ ಮಾಡಿದಂಗ್ ಆಗ್ತದೆ. ಅದಕ್ಕೆ ಆ ಶಬ್ಧದ ಹಂಗಿಲ್ಲದೆ. ಈ ಪತ್ರ ಬರೆದಿರೋದು.

Wednesday, July 13, 2011

ತಡಿಯ೦ಡಮೋಳ್-ಗೆ ಸಾಗಸಮಯ ಯಾತ್ರೆ!!!

ತಡಿಯಂಡಮೋಳ್ ಮಡಿಕೇರಿಯ ಅತಿ ಎತ್ತರದ ಶಿಖರ. ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚಗೆ
ಮಲಗುವುದು ಬಿಟ್ಟು, ತಡಿಯಂಡಮೋಳ್ ಬೆಟ್ಟವನ್ನು ಹತ್ತಿ, ಟೆಂಟ್ ಹಾಕಿ, ಬೆಂಕಿ
ಹಚ್ಚಿಟ್ಟು, ರಾತ್ರಿಯೆಲ್ಲಾ ತೂಕಡಿಸಿದೆವು. ಈ ಸೌಭಾಗ್ಯಕ್ಕೆ ಅಷ್ಟು ದೂರ
ಹೋಗಬೇಕಿತ್ತಾ. ? ಗೊತ್ತಿಲ್ಲ.

ನಾವು ಏಳು ಜನ ಆಪ್ತಮಿತ್ರರು ' ಅಬಿ-ಜಾಬಿ-ರವಿ-ರೂಪಿ-ಗಜ-ಷೇಕು ಮತ್ತು ನಾನು '
ಚಾರಣಕ್ಕೆಂದು ಹೊರಟವರು. ಇವರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವ ದರ್ಶನವನ್ನು ಮಾಡಿಸುವುದು,
ಸ್ಥಳ ಪುರಾಣವನ್ನು ವಿವರಿಸುವುದು, ಮುಖಸ್ತುತಿ ಇತ್ಯಾದಿ ಇತ್ಯಾದಿಗಳನ್ನು ಮಾಡುವುದು ಈ
ಬರಹದ ಉದ್ದೇಶವಲ್ಲ. ಮುಂದುವರೆಯೋಣ.

ಒಂದು ಸುಂದರ ಸಂಜೆಯಂದು ಬೆಂಗಳೂರಿನಿಂದ ಒಟ್ಟಾಗಿ ಹೊರಟವರು, ಮಧ್ಯ-ರಾತ್ರಿ ಎರಡರ
ಹೊತ್ತಿಗೆ ಮೈಸೂರು ಮಾರ್ಗವಾಗಿ ಕುಶಾಲನಗರ ತಲುಪಿದೆವು. ಉಳಿದಿದ್ದ ಅಲ್ಪ ರಾತ್ರಿಯನ್ನು
ಜಾಬಿಯ ಮನೆಯಲ್ಲಿ ಕಳೆದು, ಬೆಳಗಿನ ಜಾವ ಚಾರಣಕ್ಕೆಂದು ಸಿದ್ಧರಾಗಿ ನಿಂತೆವು. ನಮ್ಮಂತಹ
ಅತಿಥಿಗಳ ಸೇವೆ ಮಾಡುವ ಪುಣ್ಯ ಜಾಬಿಗೆ ಲಭಿಸಿತ್ತು. ಆ ಪುಣ್ಯಕಾರ್ಯದಿಂದ ಜಾಬಿಯನ್ನು
ವಂಚಿತನನ್ನಾಗಿ ಮಾಡಬಾರದೆಂಬ ಉದ್ದೇಶದಿಂದ, ಅವನ ಅತಿಥಿ ಸತ್ಕಾರ್ಯವನ್ನೂ
ಸ್ವೀಕರಿಸಿದೆವು. ನಂತರ ಒಂದು ಕಾರು ಮತ್ತು ಒಂದು ಬೈಕಿನಲ್ಲಿ ನಮ್ಮ ಪ್ರಯಾಣ
ಮಡಿಕೇರಿಯತ್ತ ಸಾಗಿತು. ಪರ್ವತ ನಗರ ಮಡಿಕೇರಿಯನ್ನು ಸುತ್ತಿಕೊಂಡು ನಾಪೋಕ್ಲು ಎಂಬ ಊರಿನ
ಮಾರ್ಗವಾಗಿ ಕಕ್ಕಬ್ಬೆಯನ್ನು ತಲುಪಿದಾಗ ಮಧ್ಯಾಹ್ನ 12.

ಕರ್ನಾಟಕದೊಳಗೆಯೇ ಈ ರೀತಿ ಹೆಸರಿನ ಊರುಗಳಿರುತ್ತವೆ ಎಂಬುದು ಗೊತ್ತಿರಲಿಲ್ಲ. ಇಲ್ಲಿ '
ಕೊಡಗು ' ಎಲ್ಲಿದೆ ಎಂದು ಕೇಳಿದ್ದಕ್ಕೆ, ಇದೇ ' ಕೊಡಗು ' ಎಂದರು. ಸತ್ವಯುತ ಪ್ರಶ್ನೆಗೆ
ಸಿಕ್ಕ, ಅಸಂಬದ್ಧ ಉತ್ತರ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಇರುವಂತೆ, ದಾವಣ್ಗೆರೆ
ಜಿಲ್ಲೆಯಲ್ಲಿ ದಾವಣ್ಗೆರೆ ಇರುವಂತೆ, ಕೊಡಗಿನಲ್ಲಿ ಕೊಡಗು ಇರಬೇಕೆಂಬುದು ನನ್ನ ವಿಚಾರ.
ಕೊಡಗಿನಲ್ಲಿ ಕೊಡಗು ಎಂಬುದಾಗಿ ಸಪರೇಟಾದ ನಗರವಿಲ್ಲವೆಂದು, ಮಡಿಕೇರಿ ಎಂಬ ಊರು ಕೊಡಗಿನ
ಜಿಲ್ಲಾ ಕೇಂದ್ರವೆಂದು ಗೆಳೆಯರು ಬಿಡಿಸಿ-ಬಿಡಿಸಿ ಹೇಳಿದರು. ಉದಾಹರಣೆಯಾಗಿ ಮಂಗಳೂರು
ನಗರ, ದಕ್ಷಿಣ ಕನ್ನಡ ಜಿಲ್ಲೆಯನ್ನು ಹೇಳಿದರು.

----
-> **ಹಸಿವಿನ ಆ ನಡು-ದಿನ** <- br="">
ಸಂವಹನ ಮಾಧ್ಯಮದ ಕೊರತೆಯಿಂದಾಗಿ, ನಮ್ಮ ಚಾರಣದ ಮುಂದಾಳು ಅಭಿ ಮತ್ತು ಅವನ ಸ್ಥಳೀಯ
ಮಿತ್ರನ ನಡುವೆ ಕನೆಕ್ಷನ್ ತಪ್ಪಿ ಹೋಯಿತು. ಇದರಿಂದಾಗಿ ಕೆಲಕಾಲ ಕಕ್ಕಬ್ಬೆಯಲ್ಲಿಯೇ
ಬಂಧಿಯಾಗಬೇಕಾಯಿತು. ಹಸಿವಿನಿಂದ ಹೋಟೆಲುಗಳಿಗಾಗಿ ಹುಡುಕಾಡುತ್ತಿದ್ದಾಗ,
ಹತ್ತಿರದಲ್ಲೊಂದು ಧರ್ಮದೂಟದ ದೇವಸ್ಥಾನವಿರುವುದಾಗಿ ಸಲಹೆ ನೀಡಿದರು.

ಕಕ್ಕಬ್ಬೆಯಿಂದ ಐದು ಕಿ. ಮಿ ದೂರದಲ್ಲಿ, ದಟ್ಟವಾದ ಕಾಡಿನ ಮಧ್ಯೆ ಒಂದು ದೇವಸ್ಥಾನ.
ಹಸಿರುಬನಗಳ ಜೊತೆ ಎತ್ತರವಾದ ಜಾಗದಲ್ಲಿದ್ದ ದೇವಾಲಯ ಸೊಗಸಾಗಿತ್ತು. ಕೆಲವು ದೇವರುಗಳು
ಜನಸಂದಣಿಯಿಂದ ದೂರ ಸಾಗಿ, ಅರಣ್ಯಗಳನ್ನು ಆರಿಸಿಕೊಂಡು ಐಕ್ಯರಾಗುವುದು ಸಾಮಾನ್ಯ.
ವಿಶೇಷವೆಂದರೆ ಇಂತಹಾ ದೇವಾಲಯಗಳಿಗೇ ಭಕ್ತ ಸಮೂಹ ಹೆಚ್ಚಿರುತ್ತದೆ. ಮಂದಿರದ ಬಳಿ ನಡೆದಾಗ
'ಭಕ್ತಾಧಿಗಳಿಗೆ ಪ್ರವೇಶವಿಲ್ಲ' ಎಂಬ ಬೋರ್ಡು ನೇತು ಬಿಟ್ಟಿದ್ದರು.
ಒತ್ತಾಯಪೂರ್ವಕವಾಗಿ, ಧರಣಿ ನಡೆಸಿ ದೇವರನ್ನು ನೋಡಲೇಬೇಕು, ಎಂಬ ಹಠ ಖಂಡಿತ ಇರಲಿಲ್ಲ.
ಹೊರಗಿನ ಪೌಳಿಯಲ್ಲಿಯೇ ಆಸೀನರಾದೆವು. ಅಲ್ಲಿ ಘಂಟೆಯ ಬಳಿ ಇಂತಹದ್ದೇ ಮತ್ತೊಂದು ವಿಚಿತ್ರ
ಫಲಕದಲ್ಲಿ 'ಘಂಟೆಯನ್ನು ಮೆಲ್ಲಗೆ ಬಾರಿಸಿ' ಎಂದು ಬರೆದಿದ್ದರು. ಅಷ್ಟಿದ್ದರೆ ಅದನ್ನ
ತೆಗೆದೇ ಬಿಡುವುದು ಒಳ್ಳೆಯದಲ್ಲವೇ..?

ಈ ದೇವಸ್ಥಾನ ಕಟ್ಟಲು ಕಲ್ಲು-ಇಟ್ಟಿಗೆ ಸಿಮೆಂಟು ಎಲ್ಲಿಂದ ಹೊತ್ತು ತಂದರು; ಕರೆಂಟು ಯಾವ
ದಿಕ್ಕಿನಿಂದ ಎಳೆದಿರುವರು; ನೀರಿನ ಮೂಲ ಯಾವುದು ಎಂದು ಹುಡುಕುತ್ತಿದ್ದೆವು. ಅಷ್ಟರಲ್ಲಿ
ಒಬ್ಬರು ದೇವರನ್ನು (ಉತ್ಸವ ಮೂರ್ತಿ ) ಹೊತ್ತು ಹೊರಬಂದರು. ಆಹಾ ದೇವರೇ ದರ್ಶನ ಕೊಡಲು
ದೇವಸ್ಥಾನ ಬಿಟ್ಟು ಹೊರ ಬರುವುದು, ಅತಿ ಅದ್ಭುತ ವಿಚಾರ. ದೇವರ ಮುಂದೆ ವಾದ್ಯ
ಗೋಷ್ಟಿಯವರು ಕೊಡವ ಶೈಲಿಯಲ್ಲಿ ಟಕ್-ಟಕ್ ಎಂದು ಭಾರಿಸುತ್ತಿದ್ದರು. ಸಾಕಷ್ಟು
ಸಂಕೀರ್ಣವಾದ ಮತ್ತು ವೈವಿಧ್ಯಮಯವಾದ ಪೂಜಾ ವಿಧಿ-ವಿಧಾನಗಳಿಂದ ಆಕರ್ಷಿತರಾದ ಭಕ್ತ ಸಮೂಹ
ಭಕ್ತಿರಸದಲ್ಲಿ ತನ್ಮಯರಾಗಿದ್ದರು. ರವಿ ಅಲ್ಲಿದ್ದವರನ್ನೆಲ್ಲಾ ' ಸಾರ್ ಊಟ ಎಷ್ಟ್
ಗಂಟೆಗೆ ಹಾಕ್ತಾರೆ. ? ' ಎಂದು ಪದೆಪದೆ ಕೇಳುತ್ತಿದ್ದುದು ಹಾಸ್ಯಾಸ್ಪದವಾಗಿತ್ತು.
ಇವುಗಳನ್ನೆಲ್ಲಾ ಬೆರಗು-ಗಣ್ಗಳಿಂದ ನೋಡುತ್ತಿದ್ದ ಜಾಬಿ ' ಅದೇನು. ? ಇದ್ಯಾಕೆ. ?'
ಎಂದು ಉತ್ಸುಕನಾಗಿ ಕೇಳುತ್ತಿದ್ದ.

ಹಸಿವಿನಿಂದ ಕಂಗೆಟ್ಟು, ಪೂಜೆ ಮುಗಿಯುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತೆವು.
ಪೂಜೆ ಮುಗಿಯುತ್ತಿದ್ದಂತೆಯೇ ಅನ್ನಸಂತರ್ಪಣೆ ಶುರುವಾಯಿತು. ' ಪ್ರಸಾದ ತೆಗೆದುಕೊಂಡೇ
ಹೋಗಬೇಕು. ಹಾಗೆಯೇ ಹೋಗಬಾರದು ' ಎಂದು ಹಿರಿಕರೊಬ್ಬರು ಹೇಳಿದ್ದು, ತಿನ್ನಲೋಸುಗವೇ
ಇಲ್ಲಿಯವರೆಗೆ ಬಂದಿದ್ದ ನಮ್ಮನ್ನು ಅಣಕಿಸಿದಂತಾಯಿತು. ಊಟದ ಪಂಕ್ತಿಯಲ್ಲಿ ಹೋಗಿ
ಕುಳಿತೆವು. ಅನ್ನದ ಪಾಯಸ, ಕಜ್ಜಾಯವನ್ನು ನೀಡುತ್ತಾ ಬಂದರು. ರೊಟ್ಟಿ ಹಳಸಿತ್ತು, ನಾಯಿ
ಹಸಿದಿತ್ತು ಎಂಬತ ಸ್ಥಿತಿ ನಮ್ಮದು. ಎಲೆ ಮೇಲೆ ಪಾಯಸ ಬೀಳುತ್ತಿದ್ದಂತೆಯೇ ಗಜ
'ಪ್ರಾರ್ಥನೆ-ಮಂತ್ರ ಏನನ, ಹೇಳತಂಕ ಕಾಯ್-ಬೇಕ. ತಿನ್ನಬಹುದಾ. ?' ಎಂದು ಪ್ರಶ್ನಿಸಿದ.
ತಿನ್ನಲು ಬಾಯಿಯವರೆಗೆ ತಂದ ತುತ್ತನ್ನು, ತಿನ್ನದಂತೆ ಮಾಡಿ ಧರ್ಮಸಂಕಟ ಸೃಷ್ಟಿಸಿಬಿಟ್ಟ.
ನಿಜವಾಗಿಯು ಅಂತದ್ದೇನು ಇರಲಿಲ್ಲ. ಬಣ್ಣದ ಸೌತೆಕಾಯಿ ಸಾರು ಚಪ್ಪರಿಸುವಂತಿತ್ತು. ಒಂದು
ಹಿಡಿ ಹೆಚ್ಚೇ ಉಂಡೆವು.

----
-> **ಜಿಗಣೆಗಳು ಆನೆ ಲದ್ದಿಗಳು** <- br="">
ಮೃಷ್ಟಾನ್ನ ಭೋಜನ ಮುಗಿಸಿ ಕಕ್ಕಬ್ಬೆಗೆ ವಾಪಾಸಾದೆವು. ಅಲ್ಲಿಂದ ಅಭಿಯ ಮಿತ್ರನ
ಸಲಹೆಯಂತೆ, ತಡಿಯಂಡಮೋಳ್ ಬೆಟ್ಟದ ಬುಡದಲ್ಲಿ ಕಾರು, ಬೈಕು ನಿಲ್ಲಿಸಿ, ಎಲ್ಲಾ
ಸಾಮಾನುಗಳನ್ನು ಸಮಾನವಾಗಿ ಹಂಚಿಕೊಂಡು ಚಾರಣ ಪ್ರಾರಂಭಿಸಿದೆವು. ಸ್ವಲ್ಪ ದೂರದವರೆಗೂ
ಜೀಪಿನಲ್ಲಿ ಸಾಗಿದೆವು. ಕಾಡು ಸಿಗುತ್ತಲೇ ನಮ್ಮ ನಿಜವಾದ ಚಾರಣ ಪ್ರಾರಂಭವಾಯಿತು.

ಕಾಲುದಾರಿಗಳಲ್ಲಿ ನಡೆದು ಸಾಗುವಾಗ, ಲೀಚಸ್ ಗಳ ಸಮಸ್ಯೆ. ನೆತ್ತರು ಹೀರುವ ಈ
ಜಿಗಣೆಗಳಿಗೆ ಹೆದರಲೇಬೇಕು. ಎಲ್ಲರಿಗೂ ತಮ್ಮ ಅಂಗಾಂಗಗಳ ಮೇಲೆ ಡೆಟಾಲ್ ಸವರಿಕೊಳ್ಳುವಂತೆ
ಜಾಬಿ ಷರಾಯಿ ಹೊರಡಿಸಿದ. ಡೆಟಾಲ್ ವಾಸನೆಗೆ ಜಿಗಣೆಗಳು ಮೆತ್ತಿಕೊಳ್ಳುವುದಿಲ್ಲವೆಂಬುದು
ಜಾಬಿಯ ಪೂರ್ವಾಗ್ರಹ-ಪೀಡಿತ ನಿಲುವು.

ಅದಕ್ಕೆ ರವಿ 'ಲೋ ಜಾಬಿ. ನಿನ್ನ ರಕ್ತ ಕುಡುದ್ರೆ,, ಸೊಳ್ಳೆಗಳ್ಗೆ ಮಲೇರಿಯ ಬರುತ್ತೆ
ಇನ್ನು ಜಿಗಣೆಗಳು ಬದುಕ್ತವೇನೋ. ನಿನ್ನ ರಕ್ತ ಕುಡ್ಸಿ ಕಾಡಲ್ಲಿರೊ ಜಿಗಣೆಗಳ
ಸಂತತಿಯನ್ನೆ ನಾಶ ಮಾಡಿ ಬಿಡ್ತೀಯ. ' ಎಂದ.

ಎಲ್ಲರೂ ಹೌದಹುದು ಎಂದು ತಲೆ ಆಡಿಸಿ ನಕ್ಕರು. ಮತ್ಯಾಕೆ ರಿಸ್ಕು ಎನ್ನುತ್ತಾ, ಎಲ್ಲರೂ
ಡೆಟಾಲ್ ಮೆತ್ತಿಕೊಳ್ಳ ಹತ್ತಿದ್ದೆವು.

ಸಂಡಾಸಿಗಾಗಿ ನೀರಿನ ಮೂಲವನ್ನು ಹುಡುಕಿಕೊಂಡು ಹೋಗಿದ್ದ ಷೇಕು 'ಅಯ್ಯಯ್ಯೋ' ಎಂದು
ಕಿರುಚುತ್ತಾ ಓಡಿ ಬಂದ. ಅದೇನು ಅನಾಹುತವೋ ಎಂದು ಗಾಬರಿಯಿಂದ ವಿಚಾರಿಸಿದಾಗ ಜಿಗಣೆಗಳ
ಹಿಂಡು ಅವನನ್ನು ಮುತ್ತಿದ್ದು ತಿಳಿಯಿತು. ತನುವು ಇರುವ ಜಾಗದಲ್ಲಿ ಜಿಗ್ಣೆ ಗಳು
ಹೆಚ್ಚಿರುತ್ತವಂತೆ. ಷೇಕ್-ನನ್ನು ದೂರದಲ್ಲಿಯೇ ನಿಲ್ಲಿಸಿ, ಮೇಲಂಗಿ-ಪ್ಯಾಂಟು
ಬಿಚ್ಚಿಸಿ, ಅದನ್ನು ಪ್ಲಾಸ್ಟಿಕ್-ನಲ್ಲಿ ಕಟ್ಟಿದೆವು. ಲೀಚಸ್ ಅಂದ್ರೆ ಕಡೆಪಕ್ಷ
ಎರೆಹುಳು ಗಾತ್ರವಾದರೂ ಇರುತ್ತದೆಂದು ಅಂದಾಜಿಸಿದ್ದೆ. ಸೊಳ್ಳೆಯಂತೆ ಅಸ್ಥಿಹೀನವಾಗಿರುವ
ಕೀಟಕ್ಕೆ ಇಷ್ಟೆಲ್ಲಾ ಮರ್ಯಾದೆ ಕೊಟ್ಟೆವಲ್ಲಾ ಎಂದುಕೊಂಡೆ. ಅದಕ್ಕೆ ಉತ್ತರವಾಗಿ ರವಿ
'ರಕ್ತ ಕುಡಿದ ಮೇಲೆ ಅದರ ಸೈಜು ನೋಡಿವಂತೆ. ಬಾ? ' ಎಂದ.

3 ಘಂಟೆಗಳ ಸತತ ನಡಿಗೆಯ ನಂತರ ಕೂರ್ಗ್ ನ ಅತಿ ಎತ್ತರದ ಶಿಖರದ ತುದಿಯನ್ನು ತಲುಪಿದೆವು.
ಬೆಟ್ಟದ ತುದಿಯನ್ನು ಮುಟ್ಟಿದಾಕ್ಷಣ ರೋಮಾಂಚನವಾದ ಅನುಭವ. ನಿಜವಾಗಲೂ ಆ ಕ್ಷಣದ
ಎಗ್-ಜೈಟುಮೆಂಟಿಗೆ ನಮ್ಮ ಮೈಮೇಲಿನ ರೋಮಗಳೆಲ್ಲಾ ನಿಮಿರಿ ನಿಂತವು. ಅಲ್ಲಿ ಹಸಿ-ಹಸಿ
ಆನೆಲದ್ದಿಗಳಿಂದ ಹೊಮ್ಮುತ್ತಿದ್ದ ಮಂಜಿನಂತಹಾ ಹೊಗೆಯಿಂದ, ಅದರ ಫ್ರೆಷ್-ನೆಸ್ ಅನ್ನು
ಊಹಿಸಬಹುದಾಗಿತ್ತು. ಬಹುಶಃ ಈ ಲದ್ದಿಯನ್ನು ಹಾಕಿರುವ ಆನೆ, ಇಲ್ಲೇ ಯಾವುದೋ ಬಂಡೆಯ
ಮರೆಯಲ್ಲಿ ಮೇಯುತ್ತಲಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಬೆಟ್ಟದ ಅತ್ತಣ ಪಾರ್ಶ್ವ ದಟ್ಟವಾದ
ಕಾಡು. ಯಾವ ಅನಾಹುತವನ್ನು ಬೇಕಾದರೂ ನಿರೀಕ್ಷಿಸಬಹುದು. ತುದಿಯಲ್ಲಿಯೇ ಟೆಂಟ್ ಕಟ್ಟಿ
ರಾತ್ರಿ ಕಳೆಯುವ ಕಲ್ಪನೆ ಮಜವಾಗಿತ್ತಾದರೂ, ಬಹಳ ರಿಸ್ಕಿಯಾದ ನಿರ್ಧಾರ. ಅತಿಯಾದ ಗಾಳಿ,
ಭಯಬೀಳಿಸಿದ ಆನೆ ಲದ್ದಿ, ಅತ್ತಣ ಕಾಡು, ಬೆಂಕಿ ಹಾಕಲು ಕಟ್ಟಿಗೆಯ ಕೊರತೆ. ಇಷ್ಟೆಲ್ಲಾ
ಸಾಧಕ-ಬಾಧಕಗಳನ್ನು ಪರಿಗಣಿಸಿ ರಾತ್ರಿ ತಂಗುವ ಸ್ಥಳವನ್ನು ಆ ಅತಿ-ಎತ್ತರದ ಬೆಟ್ಟದಿಂದ
ಸ್ವಲ್ಪ ಕೆಳ ಭಾಗದಲ್ಲಿದ್ದ ಬೃಹದಾಕಾರದ ಬಂಡೆಯ ಬಳಿಗೆ ಗುರುತು ಮಾಡಿದೆವು.

ಟೆಂಟ್ ಕಟ್ಟುವ ವಿಚಾರದಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬೀಸುವ
ಗಾಳಿಗೆ ಬಂಡೆಯನ್ನು ಮರೆಯಾಗಿಸಿಕೊಂಡು, ಅದರ ಬುಡದಲ್ಲಿ ಟೆಂಟ್ ಕಟ್ಟಬೇಕೆಂಬುದು ನಮ್ಮ
ಅಭಿಪ್ರಾಯ. ಆದರೆ ಚಾರಣದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ
ಹೊತ್ತುಕೊಂಡಿದ್ದ ಜಾಬಿಯು, ಬಂಡೆಯ ಮೇಲೆಯೇ ಟೆಂಟ್ ಕಟ್ಟಬೇಕೆಂದು ಹಠ ಹಿಡಿದ. ಅಕಸ್ಮಾತ್
ಆನೆಗಳ ಹಿಂಡು ದಾಳಿ ಮಾಡಿದರೆ, ನೆಲದ ಮೇಲೆ ಇರುವುದಕ್ಕಿಂತ, ಬಂಡೆಯ ಮೇಲಿರುವಿದು ಸೇಫು
ಎಂಬುದು ಅವನ ವಾದ. ನಾನು,ಅಭಿ ಮತ್ತು ರವಿ ಬಂಡೆಯ ಮೇಲೆ ಟೆಂಟ್ ಕಟ್ಟುವ ಕಾರ್ಯವನ್ನು
ಬಲವಾಗಿ ವಿರೋಧಿಸಿದೆವು. ರೂಪಿ ನಿರ್ಲಿಪ್ತನಾಗಿ, 'ಹೆಂಗಾದ್ರು ಸಾಯ್-ರಿ ' ಎಂದ.

ಗಾಳಿಗೆ ಹಾರಿ ಹೋಗದಂತೆ ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ ಕೊಡ್ತೇನೆ ಎಂದ. ಎಲ್ಲರೂ
ಸೇರಿ, ಅಡಿಯಲ್ಲಿ ಸಾಲಾಗಿ ಮಲಗಲು ಅನುವಾಗುವಂತೆ ಸೊಗಸಾಗಿಯೆ ಕಟ್ಟಿದೆವು. ಕೆಲವರು
ಕಾಡಿನಿಂದ ಒಣಗಿದ ಕಟ್ಟಿಗೆಯನ್ನು ಹೆಕ್ಕಿ ತಂದೆವು. ರಾತ್ರಿಯಿಡಿ ಕಾಡು-ಪ್ರಾಣಿಗಳಿಂದ,
ಕೊರೆಯುವ ಚಳಿಯಿಂದ, ಹೆದರಿಸುವ ಕತ್ತಲಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬೆಂಕಿಯೊಂದೇ
ಅಸ್ತ್ರವಾಗಿತ್ತು. ಬೄಹತ್ ಬಂಡೆಕಲ್ಲಿನ ಬುಡದಲ್ಲಿ ಬೆಂಕಿಯನ್ನು ಹೊತ್ತಿಸಿದೆವು.

ದುರಾದೄಷ್ಟವೆಂದರೆ, ಮೊದಲ ಶೀತ ಮಾರುತಕ್ಕೇ ಟೆಂಟಿನ ಕಚ್ಛಾವಸ್ತುಗಳು ಕಳಚಿ ಬಿದ್ದು
ದಿಕ್ಕಾಪಾಲಾಗಿ ಹೋದವು. ಅಕ್ಷರಶಃ ನಿರಾಶ್ರಿತರಾಗಿ ಹೋದೆವು. ಜಾಬಿಯ ' Laws
ofaerodynamics ' ಶೀತ ಮಾರುತದೊಂದಿಗೆ ವಿಲೀನವಾಗಿ ಹೋಯಿತು. ಕತ್ತಲಾಗುತ್ತಿದ್ದಂತೆ
ಬೆನ್ನುಹುರಿ ನಡುಗಿಸುವಂತಹ ಚಳಿ ಅಮರಿಕೊಳ್ಳಲಾರಂಭಿಸಿತು. ನಾವು ಹೊತ್ತಿಸಿದ್ದ ಬೆಂಕಿಯ
ಬೆಳಕಿನ ಪರಿಧಿಯಿಂದಾಚೆಗೆ ಕಪ್ಪು-ಕತ್ತಲು ಹೊರತು ಬೇರೆಯ ಸುಳಿವಿಲ್ಲ.

---
-> **ಕುಡಿತದ ದುಷ್ಪರಿಣಾಮಗಳು** <- br="">
ಅದ್ಯಾವ ಬ್ಯಾಗಿನಲ್ಲಿ ಅಡಗಿಸಿಟ್ಟಿದ್ದರೋ, ಚಳಿ ನಮ್ಮ ದೇಹದ ಸುತ್ತ ಗೂಡು
ಕಟ್ಟುತ್ತಿದ್ದಂತೆಯೇ ಬೀಯರ್ ಟಿನ್ ಗಳು ಒಂದೊಂದಾಗಿಯೇ ಹೊರ ಬಂದವು. ಈ ರೀತಿ ಹೊರಗಡೆ
ಪ್ರವಾಸಕ್ಕೆ ಹೋದಾಗ, ಕುಡಿದು ಗಬ್ಬೆಬ್ಬಿಸುವವರ ಕುರಿತು ಅಸಮಧಾನವಿತ್ತಾದರೂ..,
ಚಳಿಯಿಂದ ರಕ್ಷಿಸಿಕೊಳ್ಳಲು ಮಕ್ಕಳು ಬೀಯರಿನ ಮೊರೆ ಹೋದರು.

ನಮ್ಮಲ್ಲಿ ಅತಿ ಕುಡುಕನೆಂದರೆ ರವಿ. ರೂಪಿ ಮತ್ತು ಗಜ ಕುಡಿಯುವ ಪ್ರೊಫೆಶನ್ನಿಗೆ ಇನ್ನೂ
ಹೊಸಬರು. ಪಾಪದ ರೂಪಿಯನ್ನು ಕುಡಿಸಿ ಹಾಳು ಮಾಡಿದ ಕ್ರೆಡಿಟ್ಟು ಸಂಪೂರ್ಣವಾಗಿ ರವಿಗೇ
ಸಲ್ಲುತ್ತದೆ. ಅಭಿ ತನ್ನ ಆದರ್ಶಮಯ ಬದುಕಿನ ಬೋರ್ಡಿನಲ್ಲಿ 'ಕುಡಿಯುವುದು ಕೆಟ್ಟದ್ದು'
ಎಂದು ಬರೆದು ಕೊಡಿರುವನಾದ್ದರಿಂದ, ಅವನಿಂದ ಭವಿಷ್ಯತ್ಕಾಲದಲ್ಲಿಯೂ ಕುಡಿತವನ್ನು
ನಿರೀಕ್ಷಿಸುವಂತಿಲ್ಲ. ಇನ್ನೂ ಷೇಕು ತನ್ನ ಧರ್ಮದ ಕಟ್ಟಲೆಗಳನ್ನು, ಶ್ರದ್ಧೆಯಿಂದ
ಪಾಲಿಸುವನಾದ್ದರಿಂದ ಕುಡಿತದಿಂದ ವಂಚಿತನಾಗಿರುವನು. ಉಳಿದವನೆಂದರೆ ಜಾಬಿ. ಅವನ ಕಥೆ
ವಿಚಿತ್ರ. ಕೆಲವರು ಹುಟ್ಟಾ ಕುಡುಕರಾದರೂ ತಾವು ಕುಡುಕರೆಂದು ತೋರಿಸಿಕೊಳ್ಳುವುದಿಲ್ಲ.
ಇನ್ನು ಕೆಲವರು ಕುಡಿಯುವ 100 ಎಮ್-ಎಲ್ ಬಿಯರ್-ಗೆ ತಾವೇ ಕಲಿಯುಗದ ಕುಡುಕರೆಂಬಂತೆ
ಬಿಂಬಿಸಿಕೊಳ್ಳುವರು. ಜಾಬಿ ಎರಡನೆ ಕೆಟಗೆರಿಯವನು. ಒಂದು ಬಿಯರ್ ಟಿನ್ ಅನ್ನು
ಮೂರ್ನಾಲ್ಕು ಘಂಟೆಗಳ ಕಾಲ ಹಿಡ್ಕಂಡು ಚೀಪುತ್ತಾ ಕುಡಿಯುವುದರ ಬಗ್ಗೆ ಅನ್-ಲಿಮಿಟೆಡ್
ಉಪನ್ಯಾಸ ಕೊಡುವನು. ನನ್ನ ಬಗ್ಗೆ ಹೇಳಲಿಲ್ಲ. ?. ಇದುವರೆಗೂ ಕುಡಿದಿಲ್ಲ. ಮುಂದೆ
ಕುಡಿಯಲೂ ಬಹುದು. ಅದೇನು ದೊಡ್ಡ ಸಂಗತಿಯಲ್ಲ.

ಟಿನ್ ಓಪನ್ ಮಾಡುತ್ತಲೇ ಗಜ 'ಛೇ ಛೆಛೆ ಅಭಿ ರೀತಿ ಒಳ್ಳೆ ಹುಡುಗನ ಮುಂದೆ ಕುಡಿಯಕ್ಕೆ
ನಾಚ್ಕೆ ಆಗುತ್ತಪ್ಪ. ನಾವು ಕೆಟ್ಟ ಕೆಲ್ಸ ಮಾಡ್ತಿದಿವೇನೊ ಅನ್ನೋ ಫೀಲು' ಖ್ಯಾತೆ
ತೆಗೆದ.

ಒಂದೇ ಗುಟುಕಿಗೆ ಫುಲ್ ಟಿನ್ ಮುಗಿಸಿದ ರವಿ, ಬಾಯಿ ಒರೆಸಿಕೊಳ್ಳುತ್ತಾ ' ಹೌದಪ್ಪಾ ಅಬಿ
ವಳ್ಳೆ ಹುಡ್ಗ ಅಂತ ನಾ ಒಪ್ತೀ. ನಿ. ಹಂಗಂತ ಅವ್ನು ಸೊತ್ತೋದ್ ಮೇಲೆ ಒಳ್ಳೆ ಹುಡ್ಗ ಅಂತ
ಮ್ಯೂಜಿಯಮ್ ಲಿ ಇಟ್ಟಾರ. ನಮ್ಮಗಳ ಹಂಗೆ ಹೂತಾಕ್ತಾರೆ, ಇಲ್ಲ ಸುಟ್ಟಾಕ್ತರೆ. ಲೈಫ್
ಎಂಜಾಯ್ ಮಾಡದ್ ಗೊತ್ತಿಲ್ಲ. ಯಾವಾಗ್ಲು ನಾವು ಒಳ್ಳೆಯವ್ರು ಅನ್ನೋ ಭ್ರಮೇಲಿ ಬಿದ್ದು
ಸಾಯ್ತೀರ ' ಎಂದ.

ಹೀಗೆ ಉಲ್ಟ-ಸೀದ ಲಾಜಿಕ್ ಹೇಳಿ ನಮ್ಮ ಮೂಲಭೂತ ನಂಬಿಕೆಗಳನ್ನೇ ಅಲ್ಲಾಡಿಸಬಲ್ಲ
ನಿರಾಶಾವಾದಿ ಇವನು. ಕಾಲೇಜು ದಿನಗಳಲ್ಲಿ ಓದಲು ಕುಳಿತವನ ಮುಂದೆ ಬಂದು '
ವಿಶ್ವೇಶ್ವರಯ್ಯಾನು ಸತ್ತೋದ್ರು, ಐನ್-ಸ್ಟೈನು ಮಹಾತ್ಮ ಗಾಂಧೀಜಿನು ಸತ್ತೋದ್ರು. ಇನ್ನು
ನಾವ್ ಓದಿ ಯಾರನ್ನ ಉದ್ಧಾರ ಮಾಡಬೇಕು. ' ಎನ್ನುವನು. ಅವನ ಸಮ್ಮೋಹನ ಮಾತುಗಳಿಗೆ
ಮರುಳಾಗಿ ಪುಸ್ತಕ ಮುಚ್ಚಿ ಬಿಸಾಡಿದ್ದೂಉಂಟು. ಒಳಗೆ ಡ್ರಿಂಕ್ಸು ಹೋದರೆ ಇಂಗ್ಲೀಷು
ಬರಬೇಕು. ಆದರೆ ರವಿ ಸಂಸ್ಕೃತ ಶ್ಲೋಕಗಳನ್ನು ಶುರು ಮಾಡಿದ.

' ಯದಾಯದಾದಿ ಧರ್ಮಸ್ಯ, ಗಾನೆರ್ಭವತಿ ಭಾರತ, ಅಭ್ಯುದ್ದ ನಾಮ ಧರ್ಮಸ್ಯ. ಪ್ರಜಾತಮ್ಯಮ್
ಸುಜಾಃಮ್ಯಹಮ್.ಧರ್ಮ ಸಂಸ್ಥಾಪನಾರ್ತಾಯ ಸಂಭವಾಮಿ ಯುಗೆ ಯುಗೆ. '

' ನೋಡ್ರೋ ಕೊಟ್ಟ ಮಾತಿನಂತೆ ಮತ್ತೆ ಹುಟ್ಟಿ ಬಂದ್ದಿದ್ದೇನೆ. ಆದ್ರೆ ಯಾರು ನನ್ನ
ರೆಕಾಗ್ನೈಜ್ ಮಾಡ್ತಿಲ್ಲ. ನಾನೇ ಕೃಷ್ಣ!! ' ರವಿ ತಾನು ಧರ್ಮಸಂಸ್ಥಾಪನೆಗೆಂದು ಈ
ಯುಗದಲ್ಲಿ ಜನ್ಮ ತಾಳಿರುವ ಕೄಷ್ಣನ ಅವತಾರವೆಂದು ಹೇಳಿದ. ಸ್ವಲ್ಪ ಹೊತ್ತಿನಲ್ಲಿಯೇ
ಗಜನಿಗೂ ಬೀರು, ತಲೆಗೆ ತಾಗಿತು. ಅದೇನು ಕುಡಿಯುವುದರಿಂದ ಮನಸ್ಸು ಬಿಚ್ಚಿ ಮಾತನಾಡುವರೋ.
? ಅಥವಾ ನಾನೂ ಕುಡಿದ್ದೇನೆ ಎಂದು ಮಾತನಾಡುವರೋ. ? ಗೊತ್ತಿಲ್ಲ. ಅವನೂ ತನ್ನದೆ
ಶೈಲಿಯಲ್ಲಿ ಮಾತು ಪ್ರಾರಂಭಿಸಿದ.

' ಯಾವನಿಗೆ ಬೇಕು ಈ ಸಾಫ್ಟ್-ವೇರು ಕೆಲ್ಸ. ಬಡ್ಡಿ-ನನ್-ಮಕ್ಳು ಲೇ. ಇವತ್ತು ಬೆಳ್ಗೆ
ಹೋಗಿ, ನಾಳೆ ಬೆಳ್ಗೆ ವರೆಗು ಕೆಲ್ಸ ಮಾಡಿದೀನಿ. ಬಾಡೀಲಿ ಮೆಟಬಾಲಿಕ್ ಆಕ್ಟಿವಿಟೀಸ್ ಏರೂ
ಪೇರೂ. ಬೆಳ್ಗೆ ಯಾವ್ದು, ತಿಂಡಿ ಯಾವ್ದು, ನಿದ್ದೆ ಯಾವಾಗ ಮಾಡ್-ಬೇಕು ಎಲ್ಲಾ
ಮಿಕ್ಸ್-ಅಪ್. ಥೂ ಇವರ ಜನ್ಮಕ್ಕೆ ಬೆಂಕಿ ಹಾಕ. ಅದುಕ್ಕೆ ಬ್ಯಾಂಕ್ ಎಗ್-ಜಾಮ್ ಬರೀತ
ಇದೀನಿ. ಗೋರ್ಮೆಂಟು ಕೆಲ್ಸ ಸೇರಿಕೊಂಡು ಅರಾಮಾಗಿ ರೆಸ್ಟ್ ತಗೋಬೇಕು ಅಂತಿದ್ದೀನಿ. '
ಕೇಂದ್ರ ಸರ್ಕಾರಿ ನೌಕರಿಯ ರಾಯಭಾರಿಯಾಗಿದ್ದ ರವಿಗೆ(ನಮ್ಮ ಗುಂಪಿನಲ್ಲಿರುವ ಏಕೈಕ
ನಾನ್-ಟೆಕ್ಕಿ), ಗಜನ ಮಾತುಗಳು ಅಂತರಾಳವನ್ನು ಟಚ್ ಮಾಡಿಬಿಟ್ಟವು.

'ಥೂ ಹಲ್ಕ ನನ್ಮಕ್ಳ!! ರೆಸ್ಟ್ ತಗಳಕ್ಕೆ ಗೋರ್ಮೆಂಟ್ ಕೆಲ್ಸಾನೆ ಆಗ-ಬೇಕ. ?. ಸರ್ಕಾರಿ
ಕೆಲ್ಸ ಅಂದ್ರೆ ಏನ್ -ಏನು ?ಅಂದ್ಕೊಂಡ್ರಿ. ' ಅದಕ್ಕೆ ಅಭಿ ' ದೇವರ ಕೆಲ್ಸ. ಡೆಡ್ ಲೈನ್
ಇಲ್ದೆ ಇರೋದು ' ಎಂದ.

'ಲೇ ಪಬ್ಲಿಕ್ ಸೆಕ್ಟರ್ ನಲ್ಲಿ ಅತಿ-ನಾಗರಿಕ ಮತ್ತು ಅನಾಗರಿಕ ಜನಗಳ ಜೊತೆ ಕೆಲಸ
ಮಾಡಿನೋಡಿ. ? ಎಷ್ಟು ಚಾಲೆಂಜಿಂಗ್ ಇರ್ತದೆ ಅಂತ ತಿಳಿಯುತ್ತೆ. ಸರ್ಕಾರಿ ಕೆಲ್ಸಗಳ
ಬಗ್ಗೆ ಜನ ಅಲ್ಪ-ಸ್ವಲ್ಪ ಭರವಸೆ-ವಿಶ್ವಾಸ ಇಟ್ಟಿದಾರೆ ಅಂದ್ರೆ, ಅದುಕ್ಕೆ ನಮ್ಮಂತಹ
ಯಂಗ್-ಸ್ಟರ್ ಗಳ ಪರಿಶ್ರಮಾನೆ ರೀಸನ್ನು. ನಲವತ್ತು ವರ್ಷ ದಾಟಿದೋರ್ಗೆಲ್ಲಾ ವಿ-ಆರ್-ಎಸ್
ಕೊಟ್ಟು ಓಡಿಸಿಬಿಡಬೇಕು. ನಮ್ಮಲ್ಲೂ ಇದಾರೆ, ನಲವತ್ತು ಸಾವ್ರಕ್ಕೂ ಜಾಸ್ತಿ ಸಂಬ್ಳ
ತಗೋತಾರೆ. ಆಪರೆಟಿಂಗ್ ಸಿಸ್ಟಮ್ ಯಾವ್ದು ನೋಡಿ ಅಂದ್ರೆ.   ' ರವಿಯವರೆ ಇಲ್ಲಿ ಮಾನಿಟರ್
ಮ್ಯಾಲೆ ಅದೇನೊ ಡೆಲ್ ಅಂತ ಬರೆದಿದಾರೆ ಕಣ್ರಿ' ಅಂತಾರೆ. ಸಿ-ಪಿ-ಯು ಇಲ್ದೆ ಇರೊ,
ಮಾನಿಟರ್ ಆನ್ ಮಾಡಿ ' ರವಿಯವ್ರೆ ಯಾಕೊ ಕಂಪ್ಯೂಟರ್ ಬರ್ತಾ ಇಲ್ಲ ಕಣ್ರೀ ' ಅಂತಾರೆ.
ಬರಿ ಸೈನ್ ಮಾಡಿ ಸಂಬ್ಳ ತಗೋತಾರೆ. ಕಂಪ್ಯೂಟರ್ ಬಂದ್ ಮೇಲೆ, ಹಳಬರೆಲ್ಲಾ ಟೈಪರೇಟರ್ ತರ
ಔಟ್-ಡೇಟೆಡ್ . ಕೊನೆ ಪಕ್ಷ ಬನ್ರಿ ಹೇಳಿ ಕೊಡ್ತೀವಿ ಅಂದ್ರೆ, ಒಬ್ರೀಗು ಕಲಿಯೋ
ಮನ್ಸಿಲ್ಲ. ' ಎಂದು ಅಳಲು ತೋಡಿಕೊಂಡ.

ಅದಕ್ಕೆ ರೂಪಿ ' ನೆನೆಪಿಟ್ಟುಕೋ ಇದೇ ಮಾತು ಇನ್ನು ಇಪ್ಪತ್ತು ವರ್ಷ ಆದ್-ಮೇಲೆ ನಿಂಗೂ
ಉಪಯೋಗಕ್ಕೆ ಬರುತ್ತೆ. ' ಎಂದ. ನಿರುತ್ತರನಾದ ರವಿ ಇದ್ದಕ್ಕಿದ್ದಂತೆ ಮಾತು ಮರೆಸಲು,
ನಾಲಗೆ ಹೊರಳಿಸಿದ. ' ಲೋ ಗಜ ನನ್ನ ಮದ್ವೆಗೆ ಏನ್-ಏನು? ಗಿಫ್ಟ್ ಕೊಡ್ತೀಯ. ? ಹೇಳೊ. ?
'

' ಏನಾದ್ರು ಕೊಟ್ರಾಯ್ತು ಬಿಡಪ್ಪ ಮದ್ವೆ ಆದ ದಿನ ಕೊಟ್ಟಿರೋ ಗಿಫ್ಟು ಬಿಚ್ಚಿ ನೋಡಕ್ಕೆ
ಯಾರಿಗೆ ತಾನೆ ಟೈಮಿರುತ್ತೆ. ?ಹ್ಹಾ ಹ್ಹಾ' ತನ್ನ ಜೋಕಿಗೆ ತಾನೆ ನಗ-ಹತ್ತಿದನು.

ಈ ಮಧ್ಯೆ  ಶೇಕು ಕೂತಲ್ಲಿಂದಲೇ ಷಾಯರಿ ಹೇಳಲು ಪ್ರಾರಂಭಿಸಿದ. ' ನೀನು ಮುಂದ- ಮುಂದ
ಹೋದೆ. ನಾನು ಹಿಂದ-ಹಿಂದ ಬಂದೆ. ನೀನು ಹೋಗ್ತಾ-ಹೋಗ್ತಾನೆ ಹೋದೆ. ನಾ ಬರ್ತಾ-ಬರ್ತಾನೆ
ಬಂದೆ '

 ' ಮುಂದಕ್ಕೆ ಹೇಳ ಮಾರಯ ' ಅಂದ್ರೆ ' ನೀ ಮುಂದ-ಮುಂದ ಹೋದೆ ' ಎಂಬುದನ್ನು ಹಿಂದ ಮಗುಚಿ
ಹಾಕಿದ. ಕಾಲೇಜು ದಿನಗಳ ಸವಿ-ಸವಿ ನೆನಪುಗಳು, ನಮ್ಮ ಕಾಲೇಜು ಕನ್ಯೆಯರ ಹಾವ-ಭಾವ,
ಡೊಂಕು-ನಡಿಗೆ, ಕೊಂಕು ಮಾತುಗಳನ್ನು, ನಟಿಸಿ ಹೀಗಳೆಯುತ್ತಾ. ಕಾಲ ಹಾಕಿದೆವು. ಸ್ವಲ್ಪ
ಕಾಲ ಅಂತ್ಯಾಕ್ಷರಿಯ ಹೆಸರಿನಲ್ಲಿ ಶಬ್ದ ಮಾಲಿನ್ಯವೂ ನಡೆಯಿತು. ಬ್ರೆಡ್-ಜಾಮ್ ಮತ್ತು
ಕಕ್ಕಬ್ಬೆಯಿಂದ ಪಾರ್ಸೆಲ್ ತಂದಿದ್ದ ಮೀನಿನ ಫ್ರೈ ರಾತ್ರಿಯ ಫುಲ್ ಮೀಲ್ಸ್. ಎಲ್ಲರೂ
ಸರತಿಯಂತೆ ಕೆಲ-ಹೊತ್ತು ಮಲಗಿದರಾದರೂ, ರವಿ ಮಾತ್ರ ಎಚ್ಚರವಿದ್ದು, ರಾತಿಯಿಡಿ ಬೆಂಕಿ
ಆರದಂತೆ ನೋಡಿಕೊಂಡ.

---
-> **ಮುಗಿದ ಚಾರಣದ ಹೂರಣ** <- br="">
ರಾತ್ರಿ ಕತ್ತಲೆಯ ಕಪ್ಪು ನಮ್ಮನ್ನು ಬಂಧಿಸಿತ್ತು. ಈಗ ಬೆಳಗಿನ ಮಂಜಿನ ತಿಳಿ ಬಿಳಿ
ಬಣ್ಣ. ಈಗಲೂ ಆ ಕಾಡು ನಮ್ಮ ಕಣ್ಣಿಗೆ ಅಭೇದ್ಯವಾಗಿದೆ. ಪ್ರಕೄತಿಯೇ ಒಂದು ವಿಸ್ಮಯ.
ಮಂಜನ್ನು ಸೀಳುತ್ತಾ ಮಂಜಿನಾಚೆಗೆ ಇರುವುದನ್ನು ನೋಡುವ ತವಕ. ಆದ್ರೆ. ಸೂರ್ಯನ ಹೊರತಾಗಿ,
ಬೇರಾರಿಗೂ ಆರಿಸುವ ಯುಕ್ತಿ ಇಲ್ಲ. ಅವನು ಬರುವವರೆಗೂ ಕಾಯುವ ಚೈತನ್ಯ ನಮ್ಮಲ್ಲಿರಲಿಲ್ಲ.
ಚಳಿ-ಚಳಿಯಲ್ಲಿಯೇ ಅವರೋಹಣ ಮಾದರಿಯ ಚಾರಣ ಪ್ರಾರಂಭಿಸಿದೆವು.

ಹೊತ್ತು ಮೂಡುವ ಹೊತ್ತಿಗಿ ಸರಿಯಾಗಿ ಬೆಟ್ಟದ ಬೇಸ್-ಮೆಂಟ್ ಫ್ಲೂರ್ ತಲುಪಿ,
ನಿಲ್ಲಿಸಿದ್ದ ಕಾರು ಬೈಕು ಹೊರ ತೆಗೆದು ಹೊರಡಲು ಅಣಿಯಾದೆವು. 'ಮುಖ ತೊಳೆದು, ಸ್ವಲ್ಪ
ಕಾಫಿ-ಕಷಾಯ ಕುಡ್ಕೊಂಡು ಪ್ರಯಾಣ ಬೆಳೆಸುವಿರಂತೆ ' ಎಂದು ಅಭಿಯ ಗೆಳೆಯ ವಿನಯವಾಗಿ
ಕೇಳಿಕೊಂಡ. ರಾತ್ರಿಯಿಡೀ ಬೂದಿಯಲ್ಲಿ ಹೊರಳಾಡಿ ಕೊಳೆತು ನಾರುತ್ತಿದ್ದ ನಮ್ಮ ದೇಹಗಳನ್ನು
ಶುದ್ಧ-ವೆಜಟಬಲ್-ಬ್ರಾಹ್ಮಣ ಮನೆಯೊಂದರೊಳಗೆ ನುಗ್ಗಿಸಲು ಯಾರಿಗೂ ಮನಸಿರಲಿಲ್ಲ. ನಮ್ಮ
ದೇಹಕ್ಕೆ ಮೆತ್ತಿಕೊಂಡಿದ್ದ ಕಳಂಕವನ್ನು ತೊಳೆಯಲು, ಹರಿಯುವ ನೀರಿನಿಂದ ಸಾಧ್ಯವೇ ಹೊರತು
ಸಿಂಟ್ಯಾಕ್ಸ್ ನೀರಿನಿಂದ ಸಾಧ್ಯವಿರಲಿಲ್ಲ. ಗೆಳೆತನದ ಮರ್ಜಿಗೆ ಸಿಕ್ಕು ಮುಖಭಂಗ
ಮಾಡ್ಕಳದು ಬೇಡವೆಂದು ನಿರ್ಧರಿಸಿ ಮುಂದೆ ಹೊರಟೆವು.

ಮಡಿಕೇರಿಗೆ ಹೋಗುವ ದಾರಿಯಲ್ಲಿ ಒಂದು ಕಡೆ ನೀರಿನ ಹರಿವು ಕಂಡು, ನಮ್ಮ ದೇಹವೆಂಬ
ಡಸ್ಟ್-ಬಿನ್ ಹೊತ್ತು ನೀರಿನ ಬಳಿ ನಡೆದೆವು. ಆಚೆ ಬದಿಯಲ್ಲಿ ಕೆಲ ಹೆಂಗಸರು ಬಟ್ಟೆ
ತೊಳೆಯುತ್ತಲಿದ್ದರು. ಕಣ್ಣು ಹಾಯಿಸುವವರೆಗೂ ಯಾವುದೇ ಕೆಂಪು-ಹಚಿನ ಮನೆಗಳಾಗಲಿ,
ಟಾರಸಿಗಳಾಗಲಿ ಕಾಣಸಿಗಲಿಲ್ಲ. ಎಲ್ಲಿಂದ ಬಂದರೋ ಈ ಹೆಂಗಸರು, ನಮ್ಮ ಪ್ರೈವೇಸಿಗೆ
ಅಡ್ಡಿಯಾಗಿಬಿಟ್ಟರು. ನಾವು ನೀರಿನತ್ತ ಸುಳಿಯುತ್ತಲೇ. , ನೀರಿಗೆ ಇಳಿಯಬಾರದೆಂದು
ಎಚ್ಚರಿಕೆಯನ್ನು ನೀಡಿದರು. ಕಾರಣ ಕದ್ದು ಮರಳು ಸಾಗಿಸಿವ ಮರಳ್ಗಳ್ಳರು, ಮರಳು
ಹೊತ್ತುಓ(ಡಿ)ರಿ ಮಾಡಿರುವರಂತೆ. ನೀರೊಳಗೆ ಸಮತಟ್ಟಾದ ನೆಲ ಕಾಣುತ್ತದಾದರೂ, ದಿಢೀರನೆ
ಆಳವಾದ ಗುಂಡಿಗಳು ಬಂದು ಬಿಡುತ್ತದೆ. ಈ ಗುಂಡಿಗಳು ನಮ್ಮಂತಹ ಅಮಾಯಕರು ಆತ್ಮಾಹುತಿ
ಮಾಡಿಕೊಳ್ಳುವ ಜಂಕ್ಷನ್-ಗಳು. ನಮ್ಮಂಗೆ ರೋಡಲ್ಲಿ ಹೋಗುವ ಪ್ರಯಾಸಿಗರು, ನೀರು
ನೋಡುತ್ತಿದ್ದಂತೆಯೇ ಜೊಲ್ಲು ಸುರಿಸುತ್ತಾ, ಬಟ್ಟೆ ಬಿಚ್ಚಿ ನೀರಿಗೆ ಹಾರಿದರೆಂದರೆ, ಅವರ
ಪ್ರವಾಸ ಸ್ವರ್ಗದಲ್ಲಿ ಮುಂದುವರೆಯುತ್ತದೆ. ಅದೂ ಕೂಡ ವಸ್ತ್ರ ಹೀನರಾಗಿ.

ದಡದಲ್ಲಿಯೇ ನಿಂತು, ಅಂಗಾಂಗಗಳಿಗೆ ನೀರು ತೋರಿಸಿ ಸ್ವಚ್ಛರಾದೆವು. ಮಡಿಕೇರಿಯಲ್ಲಿ
ಉಪಹಾರ ಮುಗಿಸಿ, ಎಲ್ಲರೂ ತಮ್ಮ-ತಮ್ಮ ದಿಕ್ಕಿನ ಕಡೆಗೆ ಪ್ರಯಾಣ ಮುಂದುವರೆಸಿದೆವು.

---
-> **ಪರಿಸಮಾಪ್ತಿ** <- br="">
ರವಿಗೆ ಫೋನಾಯಿಸಿದೆ. ' ಲೇ ರವಿ ನಮ್ಮ ತಡಿಯಂಡಮೋಳ್ ಪ್ರವಾಸ ಕಥೆ ಬರೆದೆ. ಮನುಷ್ಯನ
ಲೈಫ್ ಹೆಂಗಿದೆಯೋ ಹಂಗೆ ಬರೆದ್ರೆ ಅದಕ್ಕಿಂತ ಬೋರ್ ಹಿಡಿಸುವ ವ್ಯಥೆ ಬೇರೊಂದಿಲ್ಲ.
?ಕಲ್ಪನೆಗಳಿರಬೇಕು. ನಾನು ಹೆಂಗಿದ್ದೆ ಅನ್ನೋದಕ್ಕಿಂತ, ನಾನು ಹೆಂಗೆಲ್ಲಾ
ಇರಬಹುದಾಗಿತ್ತು ಅನ್ನೋ ವಿಷಯಗಳು ರಸಮಯವಾಗಿರ್ತವೆ. ಏನಂತಿಯ. ?'

 'ಯಾ ಯಾ ಯಾ ಅದಕ್ಕೇನಂತೆ ಇಂಟರಸ್ಟಿಂಗ್ ಮಾಡಬೇಕಂದ್ರೆ ನಮ್ಮಲ್ಲೇ ಯಾರನ್ನಾದ್ರೂ
ಸಾಯಿಸಿಬಿಡು. ಜನ ಸಾಯೋ ಕಥೆ ಆದ್ರೆ ಕಣ್ಣು ಬೆಳ್ಳಗೆ ಮಾಡ್ಕಂಡು ಓದ್ತಾರೆ. ಅದೂ ಅಲ್ಲದೆ
 ನಾವ್ ಸಾಯೋವರ್ಗು ನಮ್ಮ ಹುಡುಗ್ರು ಸಾಯಲ್ಲ. ಕೊನೆಪಕ್ಷ ಕಥೆಯಲ್ಲಾದ್ರು ಸಾಯೋದನ್ನ
ಕಣ್ತುಂಬ ನೋಡುವ ಭಾಗ್ಯ ಸಿಗಲಿ. ಬಡ್ಡಿಮಕ್ಕಳ್ರು' ಎಂದ.

' ಹಂಗಾದ್ರೆ. ಯಾರು-ಯಾರನ್ನಂತ ಸಾಯಿಸ್ಲಿ. ? '

' ಇದಾರಲ್ಲ ವೇಸ್ಟ್ ನನ್ಮಕ್ಳು ಅಬಿ-ಜಾಬಿ. ಇಬ್ರೂ ಸೊತ್ತೋದ್ರು ಅಂತ ಬರಿ. ಮಡಿಕೇರಿ
ಹತ್ರ ನದೀಲಿ ಮುಖ ತೊಳೆಯುವಾಗ ನೀರಿಗೆ ಬಿದ್ದು ಸತ್ತು ಹೋದ್ರು ಅಂತ ಕಥೆ ಮುಗಿಸಿಬಿಡು.
'

' ಸಾಯೋದಕ್ಕೆ ಮುಂಚೆ ಒಂದು ದೊಡ್ಡ ಮಾತಿನ ಚಕಿಮಕಿ ನಡೀತು. ನದಿ ಆಳ ಇದೆ ಅಂತ ಹೇಳಿದ
ಅಬಿ. ಇಲ್ಲ ಅಂತ ಜಾಬಿ. ಯಾಕಂದ್ರೆ ಅನುಭವ ಆಗದೆ ಅವನು ಏನನ್ನೂ ನಂಬಲ್ಲ, ನ್ಯೂಟನ್ನನ
ಬಂಟ. ಸೋ ನದಿ ಆಳ ನೋಡಕ್ಕೆ ಜಾಬಿ ನೀರಿಗೆ ಹಾರಿದ. ಆಳವಾದ ನೀರಿನಲ್ಲಿ ಮುಳುಗ್ತಾ ಇದ್ರೂ
ಸೋಲಬಾರದೆಂಬ ಪ್ರತಿಷ್ಠೆಯಲ್ಲಿ ಆಳ ಕಡಿಮೆ ಇರೋ ರೀತಿ ನಾಟಕ ಮಾಡಿದ. ಇದುನ್ನ ಕೇಳಿ
ಬಕ್ರಾ ಆದ ಅಭಿಯು ನೀರಿಗೆ ಇಳಿದ. ಇಬ್ಬರೂ ಉಸಿಕಿನಲ್ಲಿ ಮುಳುಗಲಾರಂಭಿಸಿದರು. ದಡದಿಂದ
ಬಂದ ಒಂದು ಬಳ್ಳಿ ಅವರಿಗೆ ಆಸರೆಯಾಗಿ ಸಿಕ್ಕಿತು. ಅದನ್ನು ಹಿಡಿದು ಕೊಳ್ಳುಲು ಜಗಳ
ಮಾಡುತ್ತಾ, ಎಳೆದಾಡಿ ಬಳ್ಳಿಯನ್ನೂ ಹರಿದು ಹಾಕಿದರು. ಬದುಕುವ ಪ್ರಯಾಸದಲ್ಲಿ
ಒಬ್ಬರಿಗೊಬ್ಬರು ತುಳಿದಾಡಿಕೊಂಡು ನೀರಿನ ಪಾಲಾಗಿ ಹೋದರು. '

' ಚೆನ್ನಾಗಿದೆ. ಆದರೂ ಅವರು ಸಾಯೋದು ಬ್ಯಾಡಲೇ ಕೆ. ಸಿ. ಹೆಂಗಾದ್ರು ಮಾಡಿ ಅವರನ್ನ
ಬದುಕಿಸಿ ಬಿಡು. ಥಿಂಕ್ ಮಾಡು!! ಶೀಲವಂತರಾಗಿರೋ ಈ ಬ್ಯಾಚಲರ್-ಗಳು ಸೊತ್ತೋದ್ರೆ,
ಇವರಿಗೆ ಸ್ವರ್ಗಾನು ಸಿಗಲ್ಲ, ನರಕಾನು ಸಿಗಲ್ಲ. ಇಬ್ಬರೂ ಏಳೇಳು ಜನ್ಮಕ್ಕೂ
ಕಾಮಪಿಶಾಚಿಗಳಾಗಿ ಬಿಡ್ತಾರೆ. ಆಮೇಲಿಂದ ಆ ಜಾಗದಲ್ಲಿ ಯಾವ ಹೆಣ್ಮಕ್ಕಳೂ ಬಟ್ಟೆ
ತೊಳೆಯೋದಕ್ಕೆ ನೀರಿನ ಹತ್ರ ಬರದ ಹಂಗಾಗುತ್ತೆ. ಮುಂದಿನದ್ದೆಲ್ಲಾ ಒಂದು ಫಿಕ್ಷನ್
ಸಿನೆಮಾ ಆಗಿಬಿಡತ್ತೆ. '

' ಸರಿ ಬಿಡಪ್ಪ ಬಳ್ಳಿ ಹರಿದು ಹೋದ ಮೇಲೆ, ಹೆಂಗಸೊಬ್ಬರು ಬುಟ್ಟಿಯಲ್ಲಿದ್ದ ಸೀರೆಯನ್ನು
ನೀರಿಗೆ ಬೀಸಿ ಅವರನ್ನು ದಡಕ್ಕೆ ಎಳೆದು ಹಾಕ್ತಾರೆ. '

' ಸಾಕು ಮುಗ್ಸು ಮಾರಾಯ. ನಮ್ಮನ್ನ ಬಿಟ್ಟು ಯಾವ್ ನನ್ಮಗ ಓದ್ತಾನೆ ನಿನ್ನ ಬಾಗ್ಲು,
ಅಲ್ಲ ಬ್ಲಾಗು ' ಅಂದ.

Thursday, July 7, 2011

ಬೆಕ್ಕಿಗೆ ಚೆಲ್ಲಾಟ,ಇಲಿಗೂ ಹುಡ್ಗಾಟ.. ನಮಗೆ ಪ್ರಾಣಸ೦ಕ್ಟ.ದೇವರಿಗೆ ಪೂಜೆ ಮಾಡಲೆಂದು ಪೂಜಾಗೃಹದ ಬಾಗಿಲು ತೆಗೆದೆ. ಆಹಾ ಆ ರಣಾಂಗಣವನ್ನು ಏನೆಂದು ಬಣ್ಣಿಸಲಿ. ? ಗಣೇಶನ ಮೂರ್ತಿ ಮಕಾಡೆ ಮಲಗಿತ್ತು. ಮನೆ ಬೆಳಗಬೇಕಾದ ಜೋಡಿ ದೀಪಗಳು ನೆಲ ನೋಡುತ್ತಿದ್ದವು. ಕಾದಾಟಕ್ಕೆ ನಿಂತಂತೆ ಎದಿರು ಬದಿರಾಗಿರುವ ದೇವರ ಫೋಟೋಗಳು. ನೈವೇದ್ಯಕ್ಕೆಂದು ಇಟ್ಟಿದ್ದ ಹಣ್ಣು-ಕಾಯಿಗಾಗಿ, ದೇವರ ಮನೆಗೇ ಅತಿಕ್ರಮಣ ನಡೆಸಿದ್ದ ಮೂಷಕ ಸೈನ್ಯದ ಸರ್ವನಾಶದ ಗುರುತುಗಳಿವು. ಇವುಗಳನ್ನೆಲ್ಲಾ ಅಸಾಹಯಕತೆಯಿಂದ ನೋಡುತ್ತಿದ್ದ ಎಂಟು ಪ್ಲಸ್ ಒಂದು ಒಂಭತ್ತು ದೇವರುಗಳು. 

Sunday, February 27, 2011

ಗೋಸುಂಬೆ ಮಠ ಮತ್ತು ಸುವಿಕಾಂತ

ಶಿವಮೊಗ್ಗ ನಗರದಿಂದ ಕೂಗಳತೆಯ ದೂರದಲ್ಲಿ ಒಂದು ಹಳ್ಳಿ. ಹೆಸರು ಹೂನವಿಲೆ. ಈ ಹೆಸರಿಗೆ
ಒಂದು ಪೌರಾಣಿಕ ಹಿನ್ನಲೆ ಇದೆ. ದೇವಾನು ದೇವತೆಗಳ ಕಾಲದಲ್ಲಿ, ಒಂದು ದಿನ ಹೀಗಾಯ್ತು.
ಶ್ರೀಲಕ್ಷ್ಮಿಯವರು(ಗಾಡೆಸ್) ತಮ್ಮ ಸೀರೆ ನೆರಿಗೆಯನ್ನು ಸರಿಪಡಿಸಿಕೊಳ್ಳುತ್ತಿರುವಾಗ,
ಕೈಲಿದ್ದ ಕಮಲದ ಹೂವಿನಿಂದ ದಳವೊಂದು ಜಾರಿ ಬಿದ್ದಿತು. ಲೋಕ ಲೋಕ ಗಳನ್ನು ದಾಟಿ
ಬರುತ್ತಿರುವಾಗ, ಕಮಲದ ದಳವು, ಜೀವ ಪಡೆದು ನವಿಲಿನ ರೂಪ ತಾಳಿ ಭೂಸ್ಪರ್ಷ ಮಾಡಿತು. ಹೀಗೆ
ಕಮಲದ ದಳದಿಂದ ನವಿಲು ಸೄಷ್ಟಿಗೊಂಡ ಈ ಪವಿತ್ರ ಸ್ಥಳವನ್ನು ಹೂನವಿಲೆ ಎಂದು ಕರೆಯಲು
ಪ್ರಾರಂಭಿಸಿದರು. ಈಗಲು ಲಕ್ಷ್ಮಿಯ ಕೈಲಿರುವ ಕಮಲದ ಹೂವಿನಲ್ಲಿ ದಳಗಳನ್ನು ಎಣಿಸಿ ನೋಡಿ.
ಒಂದು ಕಮ್ಮಿ ಇರುತ್ತದೆ.

ಐತಿಹಾಸಿಕ ಮನ್ನಣೆ ಇರುವ ಈ ಪುಣ್ಯಸ್ಥಳದಲ್ಲಿ ಒಂದು ಕ್ರಾಂತಿಕಾರಕ ಮಠ ವಿದೆ. ಮಠದ
ಹೆಸರು ಗೋಸುಂಬೆ ಮಠ. ಗೋಸುಂಬೆ ಬಣ್ಣ ಬದಲಿಸುತ್ತದೆ. ಆದರೆ ಗೋಸುಂಬೆ ಮಠ ಕಾಲದ ಬೆನ್ನ
ಮೇಲೆ ಕುಳಿತು, ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ, ತನ್ನ ಚಾರಿತ್ರ್ಯದ ಬಣ್ಣವನ್ನೂ,
ಕಾರ್ಯಸೂಚಿ ಗಳನ್ನೂ ಬದಲಿಸಿ ಕೊಳ್ಳುತ್ತಾ ಮುನ್ನಡೆಯುತ್ತಿದೆ. ಸರಳ ಸಜ್ಜನಿಕೆಯ
ಕ್ರಾಂತಿ ಮಠ. ಸಂಪ್ರದಾಯಸ್ಥ ಮೂಲಭೂತವಾದಿಗಳ ಭಾರೀ ವಿರೋಧದ ನಡುವೆಯು ಅಸ್ತಿತ್ವ
ಉಳಿಸಿಕೊಂಡಿರುವುದು ಮಠದ ಹೆಗ್ಗಳಿಕೆ.

ಈ ಹಿಂದೆ ಇದ್ದ ಗುರುಗಳು ಮದುವೆಯಾದ ನಂತರ, ಹೆಚ್ಚಿನ ಜವಾಬ್ದಾರಿಗಳನ್ನು
ನಿರ್ವಹಿಸಲಾರದೆ, ಸ್ವಯಂ ನಿವೄತ್ತಿ ಘೋಷಿಸಿದರು. ಟ್ಯಾಲೆಂಟ್ ಆಧಾರದ ಮೇಲೆ ನಲವತ್ತು
ವರ್ಷದ ಚಂದ್ರಕಾಂತ ಎಂಬುವರಿಗೆ ಹಂಗಾಮಿಯಾಗಿ ಗುರುವಿನ ಸ್ಥಾನವನ್ನು ನೀಡಲಾಯಿತು.
ಅಂದಿನಿಂದ ಮಠದಲ್ಲಿ ಕ್ರಾಂತಿಯ ಮೇಲೆ ಕ್ರಾಂತಿ ನಡೆಯುತ್ತಿದೆ.

‘ ನಾನು, ಇಲ್ಲಿ ಬರುವ ಯಾವುದೇ ಭಕ್ತರಿಗಾಗಲಿ, ಅಥವಾ ಶಿಷ್ಯಂದಿರಿಗಾಗಲೀ
ಬ್ರಹ್ಮಚರ್ಯವನ್ನು ಭೋಧಿಸಲಾರೆ. ಎಲ್ಲರು ಬ್ರಹ್ಮಚರ್ಯ ಪಾಲಿಸಿದರೆ, ಮಕ್ಳಾಗುವುದು
ಹೇಗೆ..? ಲೋಕ ಬೆಳೆದು ಕಲ್ಯಾಣವಾಗುವುದು ಹೇಗೆ ? ಪಾದಪೂಜೆಯನ್ನು ನಾವು
ನಿಷೇಧಿಸಿದ್ದೇವೆ. ಎಲ್ಲರೂ ಸಮಾನರು. ನಿಮ್ಮಲ್ಲೂ ಬ್ರಹ್ಮನಿದ್ದಾನೆ, ನನ್ನಲ್ಲೂ
ಬ್ರಹ್ಮನಿದ್ದಾನೆ. ಅದೂ ಅಲ್ಲದೆ, ಹೆಣ್ಣುಮಕ್ಕಳು ಪಾದ ಸೋಕಿಸುವುದರಿಂದ ಆಗುತ್ತಿರುವ
ತಾಂತ್ರಿಕ ದೋಷಗಳ ನಿವಾರಣೆಗಾಗಿ ಈ ದಿಟ್ಟ ಹೆಜ್ಜೆಯನ್ನು. ’

‘ಆದ್ಯಾತ್ಮ ಎಂಬುದೇ ಇಲ್ಲ. ಕಣ್ಣ ಮುಂದಿರುವ ಲೌಕಿಕ ಲೋಕವೇ ಅಂತಿಮ. ನಿಮಗೆ ಒಳಗಣ್ಣು
ಎಂಬುದೊಂದು ಸಪರೇಟಾದ ಕಣ್ಣಾಗಲೀ, ಅಲ್ಲಿ ಬೆಳಕಾಗಲೀ ಇಲ್ಲ. ನಿಮ್ಮೊಳಗೆ ಇರುವುದು
ಹಾರ್ಟು, ಕಿಡ್ನಿ, ಬ್ರೇನು, ಲಿವರ್ರು ಮುಂತಾದ ಮಾಂಸ ಮುಳೆಗಳು. ಬೆಳಕಿರುವುದು ಹೊರಗೆ.
ನೀವದನ್ನು ನೋಡಬೇಕೆಂದರೆ ಸುಮ್ನೆ ಕಣ್ಣು ತೆರೆದರಾಯಿತು. ಸುಂದರ ಜಗತ್ತು
ಅನಾವರಣವಾಗುತ್ತದೆ. ನೀವು ಜೀವಿಸಬೇಕಿರುವುದು ಅಲ್ಲಿ.’

ಚಂದ್ರಕಾಂತ ಗುರುಗಳು, ತಮ್ಮ ಮಾಗಿದ ಮೂಗಿನ ನೇರದ ತತ್ವಶಾಸ್ತ್ರವನ್ನು
ಪುಂಖಾನುಪುಂಖವಾಗಿ ಹೊರಹಾಕುವ, ಸುಸಂಧರ್ಭದಲ್ಲಿ ಸುವಿಕಾಂತ, ಜೋಲು ಮೋರೆ ಹಾಕಿಕೊಂಡು
ಕುಳಿತಿದ್ದ. ಸುವಿಕಾಂತ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ. ಚಂದ್ರಕಾಂತ ಗುರುಗಳ
ಮೆಚ್ಚಿನ ಶಿಷ್ಯ. ಇವನ ಮನಸ್ಸು ಹಾಳಾಗಲು ಇಂತಹುದೇ ಎಂಬ ಗಟ್ಟಿ ಕಾರಣಗಳು ಬೇಕಿರಲಿಲ್ಲ.
ದಾರಿಯಲ್ಲಿ ಕೈ ಕಾಲು ಊನಗೊಂಡು ಬಿಕ್ಷೆ ಬೇಡುವವರನ್ನು ಕಂಡರೂ ಸಾಕು, ಏನನ್ನೋ ಕಳೇದು
ಕೊಂಡವನಂತೆ ಚಡಪಡಿಸುವನು. ಇಂತಹ ದುರ್ಬಲ ಮನಸ್ಸಿನ ಸುವಿಗೆ ತನ್ನ ಬಾಲ್ಯದ ಗೆಳತಿ
ಹರಿಣಿಯೊಂದಿಗೆ ಪ್ರೇಮಾಂಕುರವಾಗಿಬಿಟ್ಟಿದೆ.

> ಆತ್ಮೀಯ ಗೆಳತಿಯೊಂದಿಗಿನ ಆತ್ಮೀಯತೆ ಅಲರ್ಜಿಯಾಗುವಷ್ಟು ಅಧಿಕವಾಗಿ ಅನುರಾಗ ಅರಳಿದೆ.

ಚಂದ್ರಕಾಂತ ಗುರುಗಳು ಸುವಿಕಾಂತನನ್ನು ಹತ್ತಿರ ಕರೆದು ಕೇಳಿದರು ‘ ಏನಾಯಿತು ಸುವಿ.
ಪ್ರಪಂಚದ ಸಮಸ್ಯೆಗಳನ್ನೆಲ್ಲಾ ನಿನ್ನವೇ ಎಂಬಂತೆ ತೊಳಲಾಡುವೆ. ಯಾಕಿಷ್ಟು ಮೃದು ಸ್ವಭಾವ.
ನಿನ್ನ ಇಂದಿನ ಅನಾಥ ಮೌನಕ್ಕೆ ಕಾರಣವಾದರೂ ಏನು.’ ತುಂಬಾ ದಿನಗಳಿಂದ ಹೇಳಿಕೊಳ್ಳಲಾಗದೇ
ನರಳುತ್ತಿದ್ದವನು, ಎಲ್ಲವನ್ನೂ ಒಮ್ಮೆಲೆ ಹೊರಹಾಕಿದ. ಹರಿಣಿಯೊಂದಿಗಿನ ತನ್ನ ಅಫೇರು
ಮತ್ತು ಪ್ರೀತಿಯನ್ನು ನಿವೇದಿಸಲಾಗದೇ ಇರುವ ಸ್ಥಿತಿ.. ಮುಂತಾದವನ್ನೆಲ್ಲಾ.

ಗುರುಗಳು. ಸುರುವಚ್ಚಿಕೊಂಡರು ‘ಪ್ರೀತಿ ಪ್ರತಿ ಜೀವರಾಶಿಗಳಲ್ಲೂ ಹಬ್ಬಿರುವ ಒಂದು
ಮಧುರವಾದ ಅನುಭವ. ಅದು ಅವಳಲ್ಲಿ ತಾನಾಗಿಯೇ ಹುಟ್ಟುವಂತೆ ಮಾಡಬೇಕೆ ಹೊರತು ’ ಡೀಯರ್
ಡಾಲಿಂಗ್, ನನ್ನ ಪ್ರೀತಿಸ್ತೀಯಾ. ? ಯಾಕಂದ್ರೆ ನಾನು ನಿನ್ನ ಪ್ರೀತಿಸ್ತೇನೆ\`
ಅಂತೆಲ್ಲಾ ಕೇಳಬಾರದು. ಅಂಗಲಾಚಿ, ಪ್ರಲೋಭನೆ ತೋರಿಸಿ ಗಿಟ್ಟಿಸುವ ಪ್ರೀತಿಯಲ್ಲಿ
ಅರ್ಥವಿರುವುದಿಲ್ಲ. ಅದೊಂದು ಅವಕಾಶವಾದಿತನ.’

‘ ಹಂಗಾದ್ರೆ ನನ್ನನ್ನು ಏನ್ ಮಾಡು ಅಂತೀರ ಗುರುವರ್ಯ.’ ಎಂದು ಪುನೀತನಾಗಿ ಕೇಳಿದ
ಸುವಿಗೆ ‘ ಮೊದಲು ಆ ಸುಕೋಮಲೆ ಹೆಣ್ಣಲ್ಲಿ ಪ್ರೀತಿ ಹುಟ್ಟುವಂತೆ ಮಾಡಬೇಕು. ಆಮೇಲೆ ಆ
ಭಾವನೆಗಳು ಅವಳಿಗೇ ತಿಳಿಯುವಂತೆ ಮಾಡಬೇಕು. ಕೋರಿಕೆಯ ಮೇರೆಗೆ ಹುಟ್ಟಿದ ಪ್ರೀತಿಯಲ್ಲಿ
ನಾನಾ ಲೆಕ್ಕಾಚಾರಗಳಿರುತ್ತವೆ. ’ ಗುರುಗಳು ಹೇಳಿದ ಮಾತುಗಳು ಸರಿಯೆಂದು ಕಂಡಿತು. ‘ನಂಗೆ
ನೂರಾ ಒಂದು ಪರ್ಸೆಂಟ್ ಗ್ಯಾರೆಂಟಿ ಇದೆ ಗುರುಗಳೇ. ಅವಳಿಗೆ ನಾನು ಅಂದ್ರೆ ತುಂಬಾ ಇಷ್ಟ.


‘ ಸರಿ ಹಂಗಾದ್ರೆ, ಅದೇ ಆ ಇಷ್ಟವನ್ನು ಪ್ರೀತಿಯಾಗಿ ಕನ್-ವರ್ಟ್ ಮಾಡು. ಅದಕ್ಕಾಗಿ
ಅವಳನ್ನು ಸ್ವಲ್ಪ ದಿನ ಇಗ್ನೋರ್ ಮಾಡು. ಎಲ್ಲೆಲ್ಲಿಯು ಕಾಣಿಸಿಕೊಳ್ಳಬೇಡ. ನೀನಾಗಿಯೇ
ಅವಳನ್ನು ಸಂಧಿಸಬೇಡ. ಪ್ರೀತಿಯ ಅರಿವು ಅವಳಲ್ಲಿ ಮೂಡುತ್ತದೆ ’ ಗುರುವಿನ ಕೊನೆಯ ಮಾತಿಗೆ
ಸುವಿಯ ಸಂಪೂರ್ಣ ಸಮ್ಮತಿ ಇರಲಿಲ್ಲ. ಆದರೂ ಇದನ್ನು ಒಂದು ಟ್ರಿಕ್ ಎಂಬುದಾಗಿ ತಿಳಿದು,
ಉಪಯೋಗಿಸಲು ನಿರ್ಧರಿಸಿದ.

ಒಂದು ವಾರದ ತರುವಾಯ ಪುನಃ ಗುರುಗಳನ್ನು ನೋಡಲು ಆಶ್ರಮಕ್ಕೆ ಬಂದ. ಚಂದ್ರಕಾಂತ ಗುರುಗಳು
ಮುಕ್ತಿ ಮೋಕ್ಷ ಸಂತೋಷಗಳ ಬಗ್ಗೆ ಭಕ್ತರನ್ನು ಸೇರಿಸಿಕೊಂಡು ಹೇಳುತ್ತಿದ್ದರು.

-   ‘ಬ್ಯಾಗ್-ರೌಂಡ್ ಮ್ಯೂಸಿಕ್ ಹಾಕಿ, ಕಣ್ಣು ಮುಚ್ಚಿ ತೂಕಡಿಸಲು ಹೇಳಿ, ಸುಖದ
    ಭ್ರಮೆಯನ್ನು ಹುಟ್ಟಿಸಲು ಇಷ್ಟ ಪಡುವುದಿಲ್ಲ. ನನ್ನ ಮುಂದೆ ಕಣ್ಮುಚ್ಚಿ ಕುಳಿತರೆ
    ನೆಮ್ಮದಿ-ಸುಖ-ಸಂತೋಷಗಳು ಕಾಣಸಿಗುವುದಿಲ್ಲ. ನಿಮ್ಮ ಮಡದಿಯ ಮಗ್ಗುಲಲ್ಲಿ
    ಮಲಗಿದ್ದಾಗಲೂ ಆಗದ ಸ್ವರ್ಗದ ಅನುಭವವನ್ನು, ನಾನು ನಿಮಗೆ ಮ್ಯಾಜಿಕ್ ಗಿಮಿಕ್ ಮಾಡಿ
    ತೋರಿಸುವ ಭರವಸೆ ನೀಡಲಾರೆ. ಸ್ವರ್ಗ ಅಲ್ಲಿದೆ. ’

-   ‘ ದಿನದ ದುಡಿಮೆಯಲ್ಲಿ ಸ್ವಲ್ಪವನ್ನು ಮಿಕ್ಕಿಸಿ, ಅದರಲ್ಲಿ ನಿಮ್ಮ ಪುಟ್ಟ
    ಮಗಳಿಗೊಂದು ಅಂದದ ಗೊಂಬೆ ಕೊಂಡು ತಂದಾಗ,ಅವಳಿಗಾಗುವ ಸಂತಸದ ನೆರಳಿನಲ್ಲಿ, ನಿಮ್ಮ
    ದಣಿವು ಕರಗುವ ವಿಚಿತ್ರ ತಿರುವು, ನಲಿವಿನ ಉತ್ತುಂಗವನ್ನು ನಾನಿಲ್ಲಿ ಮರು
    ಸೄಷ್ಟಿಸಲಾರೆ. ಅದು ವಿಸ್ಮಯ.’

-   ‘ ಮಾದಕ ಮೈಮಾಟವಿರುವ ಸ್ವಾಮಿಗಳ ಮುಂದೆ ಹಲ್ಲುಗಿಂಜುತ್ತಾ ನಿಂತು, ಭಗವಂತನನ್ನು
    ತೋರಿಸೆಂದು ಪೀಡಿಸುವ, ಹೆಡ್ಡರಿಗೆಲ್ಲಾ ಅವರ ವೃದ್ಧ ತಂದೆ-ತಾಯಿಯರೊಂದಿಗೆ ಆಡುವ
    ಪ್ರೀತಿ-ವಾತ್ಸಲ್ಯದ ಮಾತುಗಳಲ್ಲಿ ಭಗವಂತನಿರುವನೆಂದು ಹೇಳುವ ವ್ಯರ್ಥ ಪ್ರಯತ್ನ
    ಮಾಡಲಾರೆ. ’

-   ‘ ಮಾತು; ಕಥೆ; ಪುರಾಣ; ಸೂತ್ರಗಳಲ್ಲಿ ಇರುವುದು ಬರಿ ಸೊನ್ನೆ. ಕೄತಿಯೊಂದೇ ಸತ್ಯ.
    ನಿಮ್ಮ ಮುಂದೆ ಮೈ-ಚಾಚಿ ಹಬ್ಬಿರುವ ವಿಶ್ವದಲ್ಲಿ ಜೀವಿಸಿ.’

-   ‘ ನಿಷ್ಕ್ರಿಯರಾದ ಜಡ-ಸೌಮ್ಯ-ಸಂಪನ್ನ-ಕರುಣಾಮೂರ್ತಿಗಳಿಂದ ಈ ಜಗತ್ತಿಗೆ ಏನೂ
    ಪ್ರಯೋಜನವಿಲ್ಲ. ಕಾರ್ಯೋನ್ಮುಖರಾಗಿ. ಬದುಕಲು ಕಲಿಯುವ ಪಾಠಶಾಲೆಗಳಲ್ಲಿ ಬದುಕು
    ವ್ಯರ್ಥವಾಗದಿರಲಿ. ’

ತಮ್ಮ ಪ್ರವಚನ ಮುಗಿಯುತ್ತಿದ್ದಂತೆ ಶ್ರಮಾಧಾನ ಮಾಡಲು ಭಕ್ತರನ್ನು ಕರೆದುಕೊಂಡು ಹೋಗಿ,
ಘಂಟೆಗಳ ಕಾಲ ತೋಟದಲ್ಲಿ ಕೆಲಸ ಮಾಡಿದರು. ತಾವು ಬರಿ ಮಾತಿನಲ್ಲಿ ನಂಬಿಕೆ ಇರಿಸಿರಲಿಲ್ಲ.

ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ಸುವಿ ಗುರುಗಳ ಹತ್ತಿರ ಬಂದನು. ‘ ಗುರುಗಳೆ
ಒಂದು ವಾರದವರೆಗೂ ನಾನು ಹರಿಣಿಯನ್ನು ಮಾತನಾಡಿಸಲಿಲ್ಲ. ಅವಳ ಕಣ್ಣಿಗೂ ಬೀಳದಂತೆ
ಓಡಾಡಿದೆ. ಆದರೆ ಯಾಕೋ..? ಏನೂ ವರ್ಕೌಟ್ ಆದಂಗೆ ಕಾಣಲಿಲ್ಲ. ಮರೆತು ಗಿರಿತು ಬಿಟ್ಟಾಳು
ಅನ್ನೋ ಭಯ ಆಯ್ತು. ಹೋಗಿ ಮಾತನಾಡಿಸಿಕೊಂಡು ಬಂದು ಬಿಟ್ಟೆ.’

‘ ಛೇ ಛೆಛೆಛೆ ಪ್ರೀತಿ ಅಂದರೆ ತಪಸ್ಸು ಸುವಿ. ಆ ವಿರಹದಲ್ಲೂ ಒಂದು ತೆರನಾದ ಖುಷಿ
ಇರುತ್ತದೆ. ನೀನು ಅದನ್ನು ಅನುಭವಿಸು. ಗರ್ಭದಲ್ಲಿ ಪ್ರೀತಿಯ ಕೂಸು ಆವರ್ಭವಿಸುವ
ಮುನ್ನವೆ ಅಬಾರ್ಷನ್ ಮಾಡಲು ಹೊರಟಿರುವೆಯಾ. ? ಕಾಯಬೇಕು ಸುವಿ. ಕಾಯಬೇಕು. ತಾಳಿದವನು
ಬಾಳಿಯನು. ಅವಳ ಮನಸ್ಸು ಗೊಂದಲದ ಗೂಡಾಗಬೇಕು. ನಿನ್ನ ಮೇಲೆ ಅವಳಿಗಿರಬಹುದಾದ ಅನಾಮಧೇಯ
ಭಾವನೆಗಳು ಮೊಸರನ್ನು ಕಡೆದಂತೆ ಕಡೆದು-ಕಡೆದು, ಮಿಕ್ಸ್ ಆಗಿ, ಕೊನೆಗೆ ಪವಿತ್ರ
ಪ್ರೀತಿಯು ಸ್ಪಷ್ಟವಾಗಿ ಬೆಣ್ಣೆಯಂತೆ ಅವಳ ಮನದ ಮಜ್ಜಿಗೆಯಲ್ಲಿ ತೇಲುವುದು. ಆ ಕ್ಷಣ
ಅವಳು ನೀನಿರುವೆಡೆಗೆ ಬರುವಳು.’

ವಾರಗಳು ಕಳೆದವು. ತಿಂಗಳುಗಳು ಕಳೆದವು. ಸುವಿ, ಹರಿಣಿಯೊಂದಿಗಿನ ಸಂಪರ್ಕವನ್ನು
ಸಂಪೂರ್ಣವಾಗಿ ಕಡಿದುಕೊಂಡ. ಮೊದಮೊದಲು ವಿರಹದ ಬೇಗೆ ದಗದಗಿಸಿದರೂ, ಪವಿತ್ರ
ಪ್ರೀತಿಯೊಂದು ಜನಿಸುತ್ತಿರುವ ಕನಸಿನಲ್ಲಿ ದಿನ ದೂಡಿದ. ಪದೆ ಪದೆ ಗುರುಗಳ ಬಳಿ ಬಂದು
‘ಗುರುಗಳೇ ಇಷ್ಟು ಹೊತ್ತಿಗಾಗಲೇ ನನ್ನ ಪ್ರೀತಿಗೆ ಕೈಕಾಲುಗಳು ಮೂಡಿರುತ್ತದೆಯಲ್ಲವೆ. ?
ರೂಪ ತಾಳಿರುತ್ತದೆಯಲ್ಲವೇ. ? ’ ಬೇಕೂಫನಂತೆ ಕೇಳುವನು.

ಪ್ರತಿಯುತ್ತರವಾಗಿ ಚಂದ್ರಕಾಂತ ಗುರುಗಳು. ‘ ಅಲ್ಲಿ ನೋಡು ಸುವಿ ಮೋಡಗಳು. ನಿನ್ನ
ಹುಡುಗಿ ನಿನಗಾಗಿ ಹಂಬಲಿಸುತ್ತಿರುವ ವಿಧ ವಿಧವಾದ ಪ್ಯಾಟರ್ನ್ ಗಳು. ಪ್ರಕೃತಿಯನ್ನು
ಕಣ್ತೆರೆದು ನೋಡು; ಸವಿ. ನಿನ್ನ ಪ್ರೀತಿಯ ಉಸಿರಿನ ಸದ್ದು ಕೇಳುತ್ತದೆ. ಶ್ವಾಸದ
ಏರಿಳಿತಗಳು,ಎದೆಬಡಿತಗಳು ಅನುಭವಕ್ಕೆ ಬರುತ್ತದೆ. ನೋಡುವ ಕಣ್ಣು ಬೇಕು. ಅನುಭವಿಸುವ
ಮನಸ್ಸು ಬೇಕು.’ ಗುರುಗಳ ಮಾತು ಕೇಳುತ್ತಲೇ ಸುವಿಗೆ ಬೆನ್ನಿನ ಮೇಲೆ ಕಚಗುಳಿ
ಇಟ್ಟಂತಾಯಿತು. ಅವರು ಹೇಳಿದ್ದನ್ನೆಲ್ಲಾ ಕಲ್ಪಿಸಿಕೊಂಡು ನಲಿದಾಡಿದ. ಗುರು ಶಿಷ್ಯರು
ಪ್ರೀತಿಗೆ ಹೊಸ ಆಯಾಮವನ್ನು ತೋರಿಸಿ, ಅಮರವಾಗಿಸಲು ಟೊಂಕ ಕಟ್ಟಿ ನಿಂತರು.

ಆರು ತಿಂಗಳುಗಳು ಕಳೆದವು. ಕೋಪೋದ್ರಿಕ್ತನಾದ ಸುವಿಕಾಂತ, ಗುರುಗಳ ಕಡೆಗೆ ದಡ-ದಡ-ದಡನೆ
ನಡೆದು ಬಂದ. ನೋವು ದುಃಖವನ್ನು ಯಾರ ಮೇಲೆ, ಹೇಗೆ ತೀರಿಸಿಕೊಳ್ಳಬೇಕೆಂದು ಅರಿಯದ
ಗುಬಾಲ್ಡು , ಗುರುಗಳ ಮುಂದೆ ಕಣ್ಣೀರಿಡುತ್ತಾ ಕುಳಿತ. ಶಿಷ್ಯನ ದಾರುಣ ಮುಖಚರ್ಯೆಯನ್ನು
ನೋಡಿದ ಗುರುಗಳು, ಅವನಷ್ಟೇ ನೋವು ತುಂಬಿದ ಧ್ವನಿಯಲ್ಲಿ ಕೇಳಿದರು ‘ಏನಾಯಿತು ಸುವಿ,
ನಿನ್ನ ಸೌಮ್ಯವಾದ ಮುಖದಲ್ಲಿಂದು, ದುರಂತದ ಗೆರೆಗಳು ಕಾಣಿಸುತ್ತಿವೆಯಲ್ಲ. ? ”

ಈಗ ಸುವಿಗೆ ಕ್ವಾಪ ನೆತ್ತಿಗೇರ್ತು. ‘ ಯೋ!! ಗುರುಗಳೆ ಎಲ್ಲವೂ ಮುಗಿದು ಹೋಯಿತು. ನಿಮ್ಮ
ಮಾತು ಕೇಳಿ ಹಾಳಾದೆ. ಸ್ವಂತ ಬುದ್ಧಿಗೆ ಮೋಸ ಮಾಡಿ ನಿಮ್ಮ ಮಾತಿನ ಮೋಡಿಗೆ ಮರುಳಾಗಿ
ನನ್ನ ಜೀವನವನ್ನೆ ಹಾಳುಮಾಡಿಕೊಂಡೆ. ನೀವು ನಂಗೆ ಹಿಂಗ್ ಮಾಡಬಾರದಿತ್ತು.’

‘ ಸಂದರ್ಭ ಸಹಿತ ವಿವರಿಸಬಾರದೇ. ?’

‘ ಹರಿಣಿ ಏಕಾಏಕಿ ಮಾತನಾಡಿಸುವುದಕ್ಕೆಂದು ಹುಡುಕಿಕೊಂಡು ಬಂದಿದ್ದಳು. ಇಷ್ಟು ದಿವಸ
ಎಲ್ಲಿ ಹಾಳಾಗಿ ಹೋಗಿದ್ದಿ ಅಂತ ಉಗಿದಳು. ಹೋದ ತಿಂಗಳು ಇಪ್ಪತ್ತೊಂದಕ್ಕೆ ಅವಳ ಮದುವೆ
ಆಗಿಹೋಯಿತಂತೆ. ಮನೆಯವರೇ ಹುಡುಕಿ ತಂದಿರುವ ಹುಡುಗ. ಮೊದಲೇ ನನ್ನ ಪ್ರೀತಿಯನ್ನು
ನಿವೇದಿಸಿಕೊಂಡಿದ್ದರೆ ಬಹುಷಃ ಸಿಗುತ್ತುದ್ದಳೇನೊ. ಏನೋ ಮಾಡಲು ಹೋಗಿ, ಇನ್ನೇನೋ
ಆದಂತಾಯಿತು ನನ್ನ ಸ್ಥಿತಿ. ಎಲ್ಲವೂ ನಿಮ್ಮಿಂದಲೇ, ನಿಮ್ಮಿಂದಲೇ ’\
 ಸುವಿ ಕೋಪದ ಉತ್ತುಂಗವನ್ನು ತನ್ನ ಏರು ಧ್ವನಿಯಿಂದ ಮಾತ್ರ ತೋರಿಸುವವನಾಗಿದ್ದ.
ಚಂದ್ರಕಾಂತ ಗುರುಗಳು ತಮ್ಮ ಮೌಢ್ಯದ ಮತ್ತೊಂದು ಬಲಿಪಶುವನ್ನು ಕಂಡು,

> “ಅಯ್ಯಾ!! ಇಗ್ನೋರ್ ಮಾಡು ಅಂದ್ರೆ ಕಂಪ್ಲೀ.. ಟಾಗಿ ಇಗ್ನೋರ್ ಮಾಡೊದೇನಯ್ಯಾ. ? ನೀನು
> ಇಗ್ನೋರ್ ಮಾಡ್ತಾ ಇರೋದು ಅವಳ ಗಮನಕ್ಕಾದರೂ ಬರಬೇಕಲ್ಲವೇ..?” ಎನ್ನುತ್ತಾ
> ನಿಟ್ಟುಸಿರು ಬಿಟ್ಟರು.

ಸುವಿ ಒಂದು ಕ್ಷಣ ಬೆಪ್ಪಾದ. ಗುರುಗಳು ಉಲ್ಟಾ ಹೊಡೆಯುತ್ತಿರುವರಲ್ಲಾ. ಮನಸ್ಸಿನ
ಆಳದಲ್ಲಿ ಹುದುಗಿರುವ ಪ್ರೀತಿಯನ್ನು ಹೊರ ಹಾಕುವಂತೆ ಪ್ರೇರೇಪಿಸಿ, ಇನ್ನೆಂತದೋ ಹೊಸ ರಾಗ
ತೆಗೆದರಲ್ಲ. ಹೌದಲ್ಲವೇ? ನಾನು ಅವಳನ್ನು ಇಗ್ನೋರ ಮಾಡುತ್ತಿದ್ದೇನೆ ಎಂಬ ವಿಷಯವಾದರು
ಅವಳಿಗೆ ಗೊತ್ತಾಗಿರಬೇಕಿತ್ತಲ್ಲವೇ. ? ಮೂಖ ವಿಸ್ಮಿತನಾದವನು ಸಾವರಿಸಿಕೊಂಡು ಕೇಳಿದ.

‘ ಹಂಗಾದ್ರೆ ಹುಡುಗಿಯರಿಗೆ ಗೊತ್ತಾಗುವ ರೀತಿಯಲ್ಲಿ ಅವರನ್ನ ಇಗ್ನೋರ್ ಮಾಡುವುದು ಹೇಗೆ.
ಗುರುಗಳೇ. ?’

‘ ಅಯ್ಯೋ ಮುಟ್ಟಾಳ. ಆ ಟೆಕ್ನಿಕ್ ನನಗೆ ಗೊತ್ತಿದ್ದಿದ್ದರೆ, ನಾನ್ಯಾಕೆ ಈವತ್ತು
ಸ್ವಾಮೀಜಿ ಆಗಿರ್ತಿದ್ದೆ. ನನ್ನದೂ ನಿನಗಿಂತ ದೊಡ್ಡ ಫ್ಲಾಷ್ ಬ್ಯಾಕಿದೆ..!!“
ಗುರುಗಳಿಂದ ಬಂದ ಎರಡನೇ ಪಂಚ್, ಸುವಿಯನ್ನು ಉಸಿಕಿನ ಕೆಸರಿನಲ್ಲಿ ತಂದು
ನಿಲ್ಲಿಸಿದಂತಾಯಿತು.

Wednesday, February 2, 2011

ಇಬ್ಬರು ಪೋಕರಿ ಮಕ್ಕಳ ಜೊತೆಗೆ


ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು
ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್
ಕೆ ಜಿ. ಮರಿ ಬ್ರದರ್ಸ್. ನನ್ನ ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ
ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು'
ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ
ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ
ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ
ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು ಬಿಲ ತೋಡುವುದರ ವರೆಗೆ
ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು
ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ
ಬಾಧೆ.

Wednesday, January 19, 2011

ಅಮೃತ; ಪ್ರೇಮಖೈದಿ

‘ಅಮೃತ’ ಎಂಬುದು ಹುಡುಗಿಯ ಹೆಸರೆಂದು ಓರಗೆಯ ಗೆಳೆಯರು ಪದೆಪದೆ ರೇಗಿಸುವರು. ಸ್ಕೂಲಿನ
ಶೀನಪ್ಪ ಮಾಸ್ತರಂತೂ ಹಾಜರಿ ಹಾಕುವಾಗ ‘ಅಮೃತಾ’ ಎಂದು ರಾಗವಾಗಿ ಕರೆಯುತ್ತಲಿ ಹುಡುಗಿಯರ
ಕಡೆಗೆ ನೋಡಿ, ‘ಹೋ!! ಅಮೃತಾ ಅಂದ್ರೆ ನೀನಲ್ಲವೆ ಹಹಹಾ’ ಅಣಕವಾಡುವರು. ಮುಂದಿನ
ದಿನಗಳಲ್ಲಿ ಸ್ಕೂಲಿನ ಕಡತಗಳಿಂದ ಅಮೃತ ಎಂಬುದನ್ನು ತೆಗೆಸಿ ‘ಅಮೃತ್’ ಎಂದು ಬದಲಾಯಿಸಲು
ಹೋಗಿದ್ದಕ್ಕೆ ಜಿದ್ದು ಮಾಡಿ, ‘ಅಮೃತ’ ಎಂಬುದಾಗಿಯೇ ಉಳಿಸಿಕೊಂಡ. ‘ಅಮೃತ್’ ಅಂತ
ಮಾಡಿದ್ರೆ ಇವನಪ್ಪನ ಗಂಟೇನು ಹೋದದ್ದು ಎಂದರು, ಎಲ್ಲರೂ. ಯಾವುದಕ್ಕೂ ತಲೆ
ಕೆಡಿಸಿಕೊಳ್ಳಲಿಲ್ಲ. ಆ ಹೆಸರಿನೊಂದಿಗೆ ಒಂದು ಆತ್ಮೀಯ ಭಾವ ಬೆಸೆದುಕೊಂಡಿತ್ತು.

Friday, January 7, 2011

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ  ಸಿಕ್ಕಿದ್ದವು.  ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ  ಹೊರಟೆ.   ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ,  ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು.   ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ,  ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು.  


ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ,  ಸ್ಕೂಟಿಯೊಂದು ಸರ್ರನೆ ಹೋದಂತಾಯಿತು.  ಸ್ಕೂಟಿಯ  ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ  ಎಂದು ಗುರುತಿಸುವುದು  ಕಷ್ಟವಾಗಲಿಲ್ಲ.  

ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ  ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು.  ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು  ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು.   ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ  ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. 

ರಾತ್ರಿ ಒಂಭತ್ತೋ,  ಹತ್ತೋ ಆಗಿತ್ತು.  ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು,  ಜಾತ್ರೆ ನೋಡಲು ಗುಡ್ಡೇ  ಕಲ್ಲಿಗೆ ಹೋಗಿದ್ದೆ.  ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ  ತೂಗುಯ್ಯಾಲೆಯನ್ನು ಇಬ್ಬರು ದಾಂಡಿಗರು ಗರಗರನೆ ಸುತ್ತಿಸುತ್ತಿದ್ದರು.  ಆ  ತೊಟ್ಟಿಲುಗಳಲ್ಲಿ ಕುಳಿತಿದ್ದವರೆಲ್ಲಾ " ಹಾ ಹೂ ಅಯ್ಯಯ್ಯೋ " ಎಂದು ಚೀರುತ್ತಿದ್ದರು.   ಅದೇನು ಗಾಬರಿಯಿಂದ ಕೂಗುತ್ತಿದ್ದರೋ ಅಥವಾ ಖುಷಿಯಿಂದ ಕಿರುಚಿಕೊಳ್ಳುತ್ತಿದ್ದರೋ  ಗೊತ್ತಾಗುತ್ತಿರಲಿಲ್ಲ.  ಅಷ್ಟೋಂದು ವೇಗವಾಗಿ ಸುತ್ತುತ್ತಿದ್ದ ವರ್ಟಿಕಲ್  ತೂಗುಯ್ಯಾಲೆಯಲಿ ಏನೂ ಆಗದವಳಂತೆ ಪಟ್ಟಿಯನ್ನು ಹಿಡಿದುಕೊಂಡು,  ಗಾಳಿಗೆ ಮುಖ ಚಾಚಿ  ಕುಳಿತಿದ್ದಳು ಇವಳು. 

" ಹೋಯ್ ಎಂಥದೆ ಅದು ಹೆದರಿಕೆ ಆಗಲ್ವಾ. ?"ಅಂಥ ಕೇಳಿದ್ದಕ್ಕೆ ಉಯ್ಯಾಲೆಯಲಿ ಆಟವಾಡುವ ಒಂದೇ ಉದ್ದೇಶದಿಂದ ಜಾತ್ರೆಗಳಿಗೆ ಬರುವುದಾಗಿ ಹೇಳಿದಳು.  ತನ್ನ ಎರಡನೆಯ ಉಯ್ಯಾಲೆಯ ಸುತ್ತಿಗೆ ನನ್ನನ್ನೂ ಕರೆದಾಗ, 'ಅಮ್ಮಾ  ತಾಯಿ ದುಡ್ಡು ಕೊಟ್ಟು ತಲೆ-ಸುತ್ತು ಬರಿಸುಕೊಳ್ಳುವ ಹುಚ್ಚು ನನಗಿಲ್ಲ. ಸ್ವಲ್ಪಾನು  ಸೇಫ್ಟಿ  ಇಲ್ಲ. ನನಗೆ ತಲೆ ಚಕ್ಕರ್ ಹೊಡಿಯತ್ತೆ. ಅದಕ್ಕಿಂತ ಹೆಚ್ಚಾಗಿ ಭಯ ಆಗತ್ತೆ. ' ಅಂದೆ. 

'ಅಯ್ಯೋ! ಹೆದರ್-ಪುಕ್ಲ.  ಜೀವದ ಮೇಲೆ ಅಷ್ಟೋಂದು ಭಯಾನ. ? ನೀ ಯಾವಾಗ್ಲೋ ದೊಡ್ಡವನಾಗೋದು ..? ' ಎಂದು ಮೂದಲಿಸಿದಳು.  

' ಜೀವದ ಮೇಲೆ ಭಯ ಇಲ್ಲ,  ಪ್ರೀತಿ' ಎಂದೆ.  ನನ್ನ ಧೈರ್ಯ ಪ್ರದರ್ಶಿಸಲು ಹೋಗಿ,  ಅಯ್ಯಯ್ಯೋ!! ಎಂದು ಕಿರುಚಿಕೊಂಡು ಮಾನ ಹರಾಜು ಹಾಕಿಸಿಕೊಳುವುದಕ್ಕಿಂತ ಸುಮ್ಮನಿರುವುದೇ ಲೇಸು ಎನಿಸಿತ್ತು.   

ಅವಳೆ!! ಅದೇ ಡೋಂಟ್ ಕೇರ್ ಮುಖ. ಓವರ್-ಟೇಕ್ ಮಾಡಿದವನೇ ಸ್ವಲ್ಪ ದೂರ ಹೋಗಿ ಬೈಕು  ನಿಲ್ಲಿಸಿದೆ.  ಬೈಕಿನಿಂದ ಇಳಿದು ಟ್ರಾಫಿಕ್ ಪ್ಯಾದೆಯಂತೆ ಅವಳ ಸ್ಕೂಟಿಗೆ ಅಡ್ಡಲಾಗಿ ಕೈ  ಮಾಡುತ್ತಾ ನನ್ನ ಅಷ್ಟೂ ದಂತಗಳು ಕಾಣುವಂತೆ ನಗುತ್ತಾ ನಿಂತೆ.  ನನ್ನ ಮೂತಿ ಗುರುತು  ಸಿಗುವುದು ಸ್ವಲ್ಪ ತಡವಾಗಿದ್ದರೂ, ಅವಳ ಕೈಲಿ ಉಗಿಸಿಕೊಳ್ಳುವ ಸಾಧ್ಯತೆ ಇತ್ತು.  ಸ್ಕೂಟಿ ನಿಲ್ಲಿಸಿದವಳೇ ಅಚ್ಚರಿಯಿಂದ ಕಣ್ಣು ಅರಳಿಸಿದಳು.  ಪರಿಚಿತರನ್ನು ಸಂಧಿಸಿದಾಗ  ಮೊದಲು ಅವರ ಕಣ್ಣುಗಳನ್ನು ನೋಡಬೇಕು.  ಅವುಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ.  

"ಹೆ!! ಹೇ ಚೇತು, ಹೆಂಗಿದ್ದೀಯೋ.  ಎಲ್ಲೋ ಹೋಗಿದ್ದೆ.  ಪತ್ತೇನೆ ಇಲ್ಲ. ?" 

' ಹ್ಹಿ!! ಹ್ಹಿ!! ಹ್ಹಿ!! ಅದು ಮೊದ್ಲು ಮೈಸೂರಲ್ಲಿ ಇಂಜಿನಿಯರ್ ಓದ್ತಿದ್ನಾ.  ಆಮೇಲೆ ಚೆನೈ, ಈಗ ಬೆಂಗ್ಳೂರು, ರಜ ಊರು '  ಏನೇನೊ ಹೇಳುತ್ತಿದ್ದೆ.   

' ನೀ ಎಲ್ಲಿಗೆ ಹೋದ್ರು ಬದಲಾಗಲ್ಲ ಬಿಡು.' ಅಂದಳು ನಗುತ್ತಾ. ಅದನ್ನು ಹೊಗಳಿಕೆ ಅಂದುಕೊಳ್ಳಬೇಕೊ, ತೆಗಳಿಕೆ ಅಂದುಕೊಳ್ಳಬೇಕೊ. ಕೆಟ್ಟ ಕನ್-ಫ್ಯೂಷನ್ನು. 

' ಇಲ್ಲಿ ರಸ್ತೆಯಲ್ಲಿ ನಿಂತು ಮಾತಾಡೋದು  ಬೇಡ.  ಇನ್ನೊಂದು ಸ್ವಲ್ಪ ದೂರ ಹೋದ್ರೆ ನಮ್ಮ ಮನೆ ಸಿಗುತ್ತೆ.  ನನ್ನ ಸ್ಕೂಟಿ ಫಾಲೋ  ಮಾಡ್ಕೋಂಡ್ ಬಾ. " ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಕಾಯದೇ ಸ್ಕೂಟಿ ಸ್ಟಾರ್ಟ್  ಮಾಡಿ ಹೊರಡಲು ಅನುವಾದಳು. ನಾನೂ ನೋಡುತ್ತಿದ್ದವನು ಹಾಗೆಯೇ ನಿಂತಿದ್ದೆ.  "ಹೋಯ್ ಎಂಥದೋ ಯೋಚನೆ ಮಾಡ್ತಾ ಇದ್ದೀಯ.  ಗಾಡಿ ಫಾಲೋ ಮಾಡಿಕೊಂಡು ಬಾ. " ಎಂದು ಹೊರಟುಬಿಟ್ಟಳು.  "ನೀನೂ ಕೂಡ ಬದಲಾಗಿಲ್ಲ " ಎಂದೆ.  ಅವಳಿಗದು ಕೇಳಿಸಲಿಲ್ಲ.   ಅವಳದು ಕೇಳುವ ವಂಶ ಅಲ್ಲ.  ಹೇಳುವ ವಂಶ.  ಅವಳ ಆಜ್ನೆಯಂತೆ ಹಿಂಬಾಲಿಸಿದೆನಾದರೂ  Actual ಆಗಿ ಅವಳ ಮನೆ ಅಲ್ಲಿರೋದು ನನಗೆ ಮೊದಲೇ ಗೊತ್ತಿತ್ತು.  

ಅದೊಂದು ಶುರುಪುರ ಎಂಬ ಊರು.  ನಗರಕ್ಕೆ ಅಂಟಿಕೊಂಡಿದ್ದರೂ ತುಂಗಾನದಿಯ ಸಲುವಾಗಿ ಸಿಟಿಯಿಂದ ಬೇರ್ಪಟ್ಟಿತ್ತು.   ದೊಡ್ಡ  ಮನೆ.  ಹೊರಗೊಂದು ರಾಜ್-ದೂತ್ ಬುಲೆಟ್ ನಿಂತಿತ್ತು.  ಮನೆಯ ಒಂದು ಪಾರ್ಶ್ವದಲ್ಲಿ ' ಮೇಘನ  ಕಂಪ್ಯೂಟರ್ ಎಂಜುಕೇಷನ್ಸ್‍  ' ಎಂಬ ಬೋರ್ಡು ನೇತು ಹಾಕಿದ್ದರು.  ಬಸವರಾಜ್ ಕೋರಿಮಠ, ಲ್ಯಾಂಡ್-ಲಾರ್ಡ್ ಎಂಬ ನಾಮಫಲಕವನ್ನು ಕಾಂಪೌಂಡಿಗೆ ಜಡಿದಿದ್ದರು.   

ತನ್ನ ಅಮ್ಮನಿಗೆ ಪರಿಚಯಿಸಿದಳು. ಬೆಂಗಳೂರಿನಲ್ಲಿ  ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್-ವೇರು ಎಂಜಿನೀಯರ್ ಕೆಲಸ  ಮಾಡುತ್ತಿರುವುದಾಗಿಯು,  ತಕ್ಕಮಟ್ಟಿಗೆ ಸಂಬಳ ಬರುತ್ತಿರುವುದಾಗಿಯೂ ಹೇಳಿದೆ.   

' ಇವನ ಮುಖದಲ್ಲಿ ಸರಸ್ವತಿ ಕಳೆ ಇದೆ.  " ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ನನ್ನನ್ನು ಸಂಕೋಚದ ಮುದ್ದೆಯನ್ನಾಗಿಸಿದ ಅವರ ಹೊಗಳಿಕೆಗೆ ಏನೆಂದು ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಒದ್ದಾಡುತ್ತಿದ್ದೆ.  ಸುಮ್ಮ ಸುಮ್ಮನೆ ಹೊಗಳುವರ ಮುಂದೆ, ಸುಮ್ಮನಿದ್ದರೂ ಮಾಡೆಸ್ಟು ಅಂದುಕೊಳ್ಳುವರು. ತತ್ತಕ್ಷಣ ಬಂತೊಂದು ಉತ್ತರ - ' ಹೊಗಳಿದ್ದು ಸಾಕು.  ಕುಡಿಯೋಕೆ ಏನಾದ್ರು ಕೊಡು. ' ವಿದ್ಯಾ ಅಮ್ಮನಿಗೆ ಆರ್ಡರ್ ಮಾಡಿದಳು.   

' ಹೇಳಪ್ಪಾ ಏನು ನಿನ್ನ ಸಮಾಚಾರ.  ಓದೋದು ಬಿಟ್ಟು,  ಬೇರೆ ಏನಾದ್ರು ಮಾಡಿದ್ಯಾ ಲೈಫಲ್ಲಿ. " ಕೇಳಿದಳು.  ಇನ್ನೂ  ಅದೇ ಕಮಾಂಡಿಂಗ್ ನೇಚರ್.  ಬದಲಾಗುವಾ ಛಾನ್ಸೇ ಇಲ್ಲ.  ಮೊದಲ ಬಾರಿಗೆ ಇವಳನ್ನು ನೋಡಿದರೆ  ಸೊಕ್ಕಿನ ಹುಡುಗಿ ಎಂದು ನಿರ್ಧರಿಸಿ ಬಿಡಬಹುದು.  ಆದರೆ ಯಾರಿಗೂ ಕೇರ್ ಮಾಡದೆ,  ತನ್ನ  ಮನಸ್ಸಿಗೆ ತೋಚಿದಂತೆ ಬದುಕುವ ಸ್ವಾಭಿಮಾನಿ ಹುಡುಗಿ.  ಲುಕ್ಕು ಕಠಿಣ.  ಆದರೆ ಬೈ ಹಾರ್ಟ್  ತುಂಬಾನೆ ಸೆನ್ಸಿಟೀವ್.  ತನ್ನವರನ್ನು ಎಂದೂ ಬಿಟ್ಟುಕೊಡದ ಜಗಳಗಂಟಿ.   

' ಹೇ!! ಅದ್ಯಾರೊ ನಿನ್ನ ಹೆಸರು ಹೇಳ್ಕೊಂಡು ಫೋನು ಮಾಡಿದ್ರಪ್ಪ. ಏನೇನೊ ಹೇಳ್ತಿದ್ವು. ಮತ್ತೆ  ಯಾರಿಗೂ ಫೋನ್ ಮಾಡಿರಬಾರದು, ಆ ರೀತಿ ಉಗಿದಿದ್ದೀನಿ " ಎಂದಳು.  ಮಿತ್ರ ದ್ರೋಹಿಗಳು.  ನನ್ನ ಹೆಸರನ್ನು ಈ ರೀತಿಯಾಗಿಯೂ ಅಪಮೌಲ್ಯ ಮಾಡಬಹುದು ಎಂದು ತೋರಿಸಿಕೊಟ್ಟಿದ್ದರು.   ಈ ವಿಷಯ ನನಗೂ ಗೊತ್ತಿತ್ತು.  ಯಾಕಂದ್ರೆ ನಾನೂ ಕೂಡ ನನ್ನ ಹೆಸರು ಹೇಳಿಕೊಂಡು ಒಮ್ಮೆ  ಫೋನ್ ಮಾಡಿ ಮಾತನಾಡಿಸಲು ಪ್ರಯತ್ನಿಸಿದ್ದೆ.  ಆದರೆ ನಾನು ನಾನೆ ಅಲ್ಲ ಎಂದಾಗ,  ನಾನು ಯಾರು ಎಂಬ ಪ್ರಶ್ನೆ ನನ್ನಲ್ಲೇ ಉದ್ಭವವಾಗಿತ್ತು.  ನಾನು ನಾನೇ ಎಂದುಕೊಂಡು ಫೋನು ಮಾಡಿದ ವಿಚಾರವನ್ನು ಹೇಳಬೇಕೆಂದುಕೊಂಡೆ.  ಆದರೆ ಹೇಳಲಿಲ್ಲ.   

ಯಾರಾದರೂ ಸಿಕ್ಕಾಗ ಓದು, ಕೆಲಸ ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಬಾರದು ಎಂದು ಎಷ್ಟು ಅಂದುಕೊಂಡರು ಮಾತುಗಳ ಮಧ್ಯೆ ಬಂದು ಬಿಡುತ್ತವೆ.  ಕೇಳಿದ್ದಕ್ಕೆ 
' ಬಿ. ಕಾಮ್ ಮುಗೀತು.  ಈಗ ಕರೆಸ್ಪಾಂಡೆನ್ಸ್‍ ನಲ್ಲಿ ಎಮ್. ಕಾಮ್ ಮಾಡ್ತಾ ಇದೀನಿ. ನನಗೆ ಪುನಃ ಕಾಲೇಜಿಗೆಲ್ಲಾ ಹೋಗೋದು ಇಷ್ಟ ಇಲ್ಲ.   ತಾಸುಗಟ್ಟಳೆ ಕುಳಿತು ಲೆಕ್ಚರ್ ಕೇಳಬೇಕಂದ್ರೆ ಹಿಂಸೆ ಆಗತ್ತೆ.  ಏನೋ ಒಂದು ಮಾಸ್ಟರ್  ಡಿಗ್ರಿ ಇರಲಿ ಅಂತ ಕರೆಸ್ಪಾಂಡೆನ್ಸ್-ನಲ್ಲಿ ಎಮ್. ಕಾಮ್ ಮಾಡ್ತಾ ಇದೀನಿ' ಎಂದಳು.   

' ಸ್ಕೂಲಿನಲ್ಲಿ ಮೊದಲ ಬೆಂಚಿನಲ್ಲಿಯೇ ಕುಳಿತು ನಿದ್ದೆ ಮಾಡುತ್ತಿದ್ದ ಸೋಮಾರಿ ಅಲ್ವೇ ನೀನು" ಎಂದೆ.  

' ಹಾ!! ಅದೇ ಮೊದಲ ಬೆಂಚಲ್ಲಿ ಕೂತು, ಸಿಕ್ಕಾಪಟ್ಟೆ ಪ್ರಶ್ನೆಗಳನ್ನ ಕೇಳುತ್ತಾ, ಶಿಕ್ಷಕರ  ವಿಧೇಯ ವಿದ್ಯಾರ್ಥಿ ಅಗಿದ್ದವನಲ್ಲವೇ ನೀನು" ನಗುತ್ತಾ ಹಳೆಯದನ್ನು ನೆನಪಿಸಿದಳು.   

'ಅದೇನದು ಮನೆಯ ಹೊರಗೆ ಮೇಘನ ಕಂಪ್ಯೂಟರ್ ಎಜುಕೇಷನ್ ಅಂತ ಬೋರ್ಡ್ ಹಾಕಿದ್ರಲ್ಲ.  ಈ ಮೂಲೆಯಲ್ಲಿ ಯಾರು. ?,  ಕಂಪ್ಯೂಟರ್ ಅಂಗಡಿ ತೆಗೆದಿರೋದು. ? '  

' ಕಂಪ್ಯೂಟರ್ ಅಂಗಡಿ ಅಲ್ಲ ಕಣೊ ಅದು. ಗಣಕಯಂತ್ರ್ ಕಲಿಕಾ ಕೇಂದ್ರ.  ಹಾ ಅದು!!! ನಾನೆ ಓಪನ್ ಮಾಡಿರೋದು.  ಮೇಘನ ನಮ್ಮ ಅಕ್ಕನ ಮಗಳ ಹೆಸರು" ಎಂದಳು.   

ನನಗೂ ಕುತೂಹಲ  ಜಾಸ್ತಿ ಆಯ್ತು.  ಪ್ರಶ್ನಿಸುತ್ತಾ ಹೋದೆ.  ' ಎರಡು ವರುಷಗಳಿಂದ, ನಾನು ಕಂಪ್ಯೂಟರ್ ಕಲಿತಿದ್ದೀನಿ. ಇನ್ನೊಬ್ಬಳು ನನ್ನ  ಫ್ರೆಂಡ್ ಇದಾಳೆ.  ಕಂಪ್ಯೂಟರ್ ನಲ್ಲಿ ಒಂದು ಬ್ಯಾಚುಲರ್ ಡಿಗ್ರಿ ಮಾಡಿಕೊಂಡಿದ್ದಾಳೆ.   ಇಬ್ಬರೂ ಸೇರಿಕೊಂಡು ಈ ಸೆಂಟರ್ ಓಪನ್ ಮಾಡಿದೀವಿ.  ಡಿಗ್ರಿ ಮುಗಿದ ಮೇಲೆ, ಏನಾದ್ರು  ಡಿಫರೆಂಟ್ ಆಗಿರೋದು ಮಾಡಬೇಕು ಅನ್ನಿಸ್ತು.  ಹೆಂಗಿದ್ರೂ ಕಂಪ್ಯೂಟರ್ ಬಗ್ಗೆ  ಗೊತ್ತಿತ್ತಲ್ಲ.  ಇಲ್ಲಿ ಸುತ್ತಮುತ್ತ ಕಾಲೇಜಿಗೆ ಹೋಗ್ತಾ ಇರೋ ಹುಡುಗಿಯರ ಸಪೋರ್ಟ್  ಸಿಗ್ತು.  ಅದಕ್ಕೆ ಒಂದು ಟ್ರೈನಿಂಗ್ ಸೆಂಟರ್ ಓಪನ್ ಮಾಡಿದ್ವಿ.  ಒಟ್ಟು ಮೂರು  ಬ್ಯಾಚ್-ನಿಂದ 50 ಜನ ಬರ್ತಿದಾರೆ. `ನನಗೆ ಅರ್ಧ ಮನೆ ಕೊಡು.  ಸ್ಕೂಲು ಮಾಡ್ತೀನಿ` ಅಂತ ನಮ್ಮ ಪಪ್ಪಂಗೆ ಕೇಳಿದೆ.  ಅವರೂ  ಹಿಂದೆ ಮುಂದೆ ನೋಡದೆ ಮುಂದಿನ ಕಾಂಪೌಂಡ್ ಹೊಡೆಸಿ ಗೋಡೆ ಕಟ್ಟಿ ಜಾಗ ಮಾಡಿಕೊಟ್ಟು  ಬಿಟ್ಟರು.  ಸೆಂಟರ್ ರಿಜಿಸ್ಟರ್ಡ್ ಮಾಡಿಸಿದೆ.  ಬೆಂಗ್ಳೂರಿಂದ ಹೊಸ ಪಿಸಿಗಳು.  ಒಂದಷ್ಟು  ಸೆಕೆಂಡ್ ಹ್ಯಾಂಡ್ ಪಿಸಿಗಳು ತರಿಸಿದೆ. ಇನ್ನು ಖುದ್ದಾಗಿ ಆಚಾರಿ ಜೊತೆ ಸೇರಿಕೊಂಡು ನಮ್ಮ  ಆಫೀಸ್‍ನ ನಾವೇ ಕ್ರಾಫ್ಟಿಂಗ್ ಮಾಡಿದ್ವಿ ಗೊತ್ತಾ. ?'  ನಗುತ್ತಾ ಎಲ್ಲವನ್ನೂ ಹೇಳಿದಳು. 

ಖುಷಿಯ ಜೊತೆಗೆ ಆಶ್ಚರ್ಯವನ್ನೂ ಪಡಬೇಕಾದ ವಿಷಯ.  ಆದರೂ ಪ್ರೊಫೆಶನಲ್ ಆಗಿ ತಾನು  ಕಲಿಯದೇ,  ಡಿಗ್ರಿಗಳು ಇಲ್ಲದೇ,  ಹಿಂಗೆಲ್ಲಾ ಕಲಿಕಾ ಕೇಂದ್ರ ಓಪನ್ ಮಾಡಬಹುದಾ ಎಂಬ ಆತಂಕ ಹುಟ್ಟಿತು. ಅವಳ ಕಲಿಸುವಿಕೆಯ ವಿಧಾನಗಳನ್ನು ಕೇಳಿದೆ.  

'ನಾವೇ ಹೊಸ ರೀತಿಯಲ್ಲಿ ಕೋರ್ಸ್-ಪ್ಲಾನ್ ಮಾಡಿದೀವಿ.   ತುಂಬಾ  ಸರಳವಾದ ಫಾರ್ಮುಲ.  ಕಂಪ್ಯೂಟರ್ ಅಂದ್ರೆ ಏನೇನೂ ಅಂತಲೂ ಗೊತ್ತಿಲ್ಲದಿದ್ದವರು ಕೂಡ,  ಪಿ. ಸಿ ಮುಟ್ಟುವುದಕ್ಕೆ ಅಂಜಬಾರದು.  ಕಂಪ್ಯೂಟರ್ ಅಂದ್ರೆ ಏನೋ ಅತಿ ಭಯಂಕರವಾದದ್ದು  ಅಲ್ಲ. ತಾವೂ ಕೂಡ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬಹುದು ಅನ್ನೋದನ್ನ  ತೋರಿಸಿ ಕೋಡುವುದು.  ಈ ಎ‍ಕ್ಸ್‍ಪೆರಿಮೆಂಟ್‍ಗೆ ನಮ್ಮ ಪಪ್ಪನ್ನೇ ಮೊದಲ ಬಲಿ ಕೊಟ್ಟದ್ದು.  ಕಂಪ್ಯೂಟರ್ ನಿಂದ ಏನೇನು ಸಾಧ್ಯಾನೊ ಅವನ್ನೆಲ್ಲಾ ಮಾಡಿಸೋದು.  ಇಲ್ಲಿ  ಸುತ್ತಮುತ್ತ ಹಳ್ಳಿಯಿಂದೆಲ್ಲಾ ಸ್ಕೂಲು ಕಾಲೇಜು ಹುಡ್ಗೀರು ಬರ್ತಾರೆ.  ಏನೋ  ಮಾಡ್ತಿದೀವಪ್ಪ.  ನಿಮ್ಮ ಹಾಗೆ ದೊಡ್ಡ ದೊಡ್ಡ ಇಂಜಿನಿಯರುಗಳನ್ನ ತಯಾರು ಮಾಡಕ್ಕಾಗದೇ  ಇದ್ದರೂ, ನಮ್ಮ ಹತ್ತಿರ ಕಲಿತವರು ಕಂಪ್ಯೂಟರ್ ಅನ್ನು ಇಷ್ಟೇನಾ ಅನ್ನುವ ಮಟ್ಟಿಗಾದರೂ ನೋಡ್ತಾರೆ.'  

ಸ್ವಲ್ಪವೂ ಉದ್ವೇಗವಿಲ್ಲದೆ ತನ್ನ ಕೆಲಸವನ್ನೂ, ಅದನ್ನವಳು ಪ್ರೀತಿಸುವ ಬಗೆಯನ್ನೂ ತಣ್ಣಗೆ ವಿವರಿಸಿದಳು.   'ಗುಡ್-ಗುಡ್.  ಈ ಥರಾ ಸ್ಪಿರಿಟ್ ಇರಬೇಕು.  ಒಳ್ಳೆ ಆಲೋಚನೆಗಳು. " ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.  

' ಹೇ ಅವನ ಫೋನ್ ನಂಬರು ಇಸ್ಕೋಳಮ್ಮ,  ನಿನ್ನ ಮದುವೆಗೆ ಕರೆಯುದಕ್ಕೆ ಬೇಕಾಗುತ್ತೆ. ? ' ಅವರಮ್ಮ ಅಡುಗೆ ಮನೆಯಿಂದಲೇ ಕೂಗಿ ಹೇಳಿದರು.  ಅವಳ ಮೇಲೆ ಪ್ರೀತಿ-ಪ್ರೇಮ  ಎಂಬ ಕ್ರೂರ ಭಾವನೆಗಳೇನು ಇಲ್ಲ.  ಆದರೂ ಓರಗೆಯ ಹೆಣ್ಣುಮಕ್ಕಳ ಮದುವೆಯ ಮಮತೆಯ  ಕರೆಯೋಲೆಯನ್ನು ಕೇಳಿದಾಗಲೆಲ್ಲ ಸಣ್ಣ ಪ್ರಮಾಣದ ಹೃದಯ ಸ್ತಂಬನ.  
' ಮದುವೆ ಮಾಡಬೇಕು ಅಂತ ಭಾರಿ ತಯಾರಿ ನಡೆಸ್ತಾ ಇದಾರೆ.  ಮೊನ್ನೆ ಒಬ್ಬ  ಹುಡುಗ ಬಂದು ನೋಡಿ ಹೋದ.  ನನಗಿಂತ ಹತ್ತು ವರ್ಷ ದೊಡ್ಡವನು.  ಆಗಲ್ಲ ಅಂದು ಬಿಟ್ಟೆ.  ಇಲ್ಲಿ  ಪ್ರಶ್ನೆ ವಯಸ್ಸಿನದ್ದಲ್ಲ.  ನಮ್ಮ ಆಸಕ್ತಿ, ಅಭಿರುಚಿಗಳದ್ದು.   ಕಷ್ಟ ಆಗುತ್ತಪ್ಪ.  ನಾವು ಅವರ ಮೇಲೆ ಭಕ್ತಿ, ಗೌರವ ಇಟ್ಟುಕೊಳ್ಳುವುದು.   ಅವರು ನಮ್ಮ ಬಗ್ಗೆ ಅತಿಯಾದ ಕಾಳಜಿ, ಪ್ರೀತಿ ಇಟ್ಟುಕೊಳ್ಳುವುದು.  ಇವೆಲ್ಲಾ ಯಾಕೆ ಬೇಕು. ಒಬ್ಬರನ್ನೊಬ್ಬರು ಸಮಾನವಾಗಿ, ವಿಶ್ವಾಸದಿಂದ ಕಂಡರೆ ಸಾಕು '

ಕಡ್ಡಿ ಮುರಿದಂತೆ ತನ್ನ  ನಿರ್ಧಾರಗಳನ್ನು ತಿಳಿಸುತ್ತಿದ್ದವಳನ್ನು ಕಂಡು ಅಚ್ಚರಿಯಾಯ್ತು.    ' ನಿನ್ನ ತಲೆಯಲ್ಲಿ ಯಾರಾದ್ರು ಇರುವರ.  ಅಂದ್ರೆ ಇನ್ ಪರ್ಟಿಕ್ಯುಲರ್ ಇವನು  ಆಗಿದ್ರೆ ನಿನ್ನ ಲೈಫು ಚೆನ್ನಾಗಿರುತ್ತೆ ಅನ್ನೋ ಆಸೆ ಆಕಾಂಕ್ಷೆ ಏನಾದ್ರು ಇದಿಯಾ. ? '  ಎಂದು ಕೇಳಿದೆ.  ಬಹುಷಃ ಮದುವೆ ಮಾಡಲು ಗಂಡು ಹುಡುಕುತ್ತಿರುವ ಮನೆಯಲ್ಲಿ  ಹುಡುಗಿಗೆ ಕೇಳಬಹುದಾದ ಅತ್ಯಂತ ಅನಾಗರಿಕ ಪ್ರಶ್ನೆ ಇದು ಎಂದೆನಿಸಿತು.  

ನಗುತ್ತಾ ಹೇಳಿದಳು. "ಈ  ವಿಷಯದಲ್ಲಿ ನನಗೆ ಅಷ್ಟು ಫ್ಯಾಂಟಸಿಗಳಿಲ್ಲ.  ಇದರ ಸಂಪೂರ್ಣ ಜವಾಬ್ದಾರಿಯನ್ನ ನಮ್ಮ  ಪಪ್ಪ-ಮಮ್ಮಂಗೆ ಕೊಟ್ಟು ಬಿಟ್ಟಿದ್ದೇನೆ.  ಪ್ರಪಂಚದ ದಿ ಬೆಸ್ಟ್‍ ಪೇರೆಂಟ್ಸ್‍ ಅವರು. ನನ್ನ ಬಗ್ಗೆ ಅವರಿಗೆ ಎಲ್ಲಾ ಗೊತ್ತು. ಒಳ್ಳೇದನ್ನೆ ಹುಡುಕ್ತಾರೆ ಅನ್ನೋ ನಂಬಿಕೆ. ಈ  ವಿಷಯದಲ್ಲಿ ಅವರು ಸಂಪೂರ್ಣ ಸ್ವತಂತ್ರರು. '   

ಚಂಡಿ!! ಹೆಣ್ಣುಮಗಳಿಗೆ ಜನುಮ ನೀಡಿದ್ದೂ ಅಲ್ಲದೆ,  ಅವಳು ಬೇಕಾದ್ದನ್ನು ಯೋಚಿಸುವ,   ಸ್ವತಂತ್ರ ವಾತಾವರಣ ನಿರ್ಮಿಸಿರುವ ಅವರ ಮನೆಯವರಿಗೊಂದು ದೊಡ್ಡ ನಮಸ್ಕಾರ ಹಾಕಿ  ಮನೆಯಿಂದ ಹೊರಬಂದೆ.  ಅವಳೂ ಬಾಗಿಲಿನವರೆಗು ಬಂದಳು.  

' ಮತ್ತೆ ಏನು..? ನಿನ್ನ ಫ್ಯೂಚರ್ ಪ್ಲಾನ್ಸು ? " ಎಂದು ಕೇಳಿದಳು.  ನಾನೂ ಯೋಚಿಸಿದೆ.  ಬಹುಷಃ ಕಂಪನಿಗಳನ್ನು ಬದಲಿಸುತ್ತಾ ಹೆಚ್ಚು-ಹೆಚ್ಚು ಸಂಬಳ ಪಡೆಯುವುದಿರಬಹುದು ಎನಿಸಿತು. 

ಸರಿ ಹೊರಡುವುದಾಗಿ ಹೇಳಿ, ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಹೆಜ್ಜೆ ಮುಂದಕ್ಕೆ  ಹೋಗುವುದರೊಳಗಾಗಿ, ಬೈಕಿನ ಹ್ಯಾಂಡಲ್ ತಿರುಗಿಸಲಾಗದೆ ದಬಾರನೆ ಬಿದ್ದೆ.  ನೆಲಕ್ಕೆ ಬಿದ್ದರೂ  ಬೈಕು ಬರ್ರೋ.  ಎಂದು ಹೊಡೆದುಕೊಳ್ಳುತ್ತಿತ್ತು.   ಅವಳು ಹೊರ ಬಂದವಳೇ ಬೈಕ್‍ನ ಇಗ್ನಿಷನ್ ಆಫ್ ಮಾಡಿದಳು.  ಸಾವರಿಸಿಕೊಡು ಮೇಲೇಳುವಾಗ  'ನೀ ಯಾವಾಗ್ಲೋ ದೊಡ್ಡವನಾಗೋದು. ? ಹ್ಯಾಂಡಲ್ ಲಾಕ್ ತೆಗೀದೆ ಬೈಕ್ ಬಿಡ್ತೀಯಲ್ಲ.  ಅಷ್ಟು ಕಾಮನ್-ಸೆನ್ಸ್‍ ಇಲ್ವಾ ' ಎಂದಳು. ಹಿಂತಿರುಗಿ ನೋಡದೆ ಹೊರಟೆ.