ನಿನ್ನ ಹೆಸ್ರನ್ನ ಗುನುಗ್ತಾ ಇದ್ರೆ!! ಹಿಪ್ನಾಟೈಸ್ ಮಾಡಿದಂಗ್ ಆಗ್ತದೆ.


ಹುಡುಗ್ರಲ್ಲಿ ನಾವದನ್ನ 'ಬಕೇಟ್' ಹಿಡಿಯೋದು ಅಂತೇವೆ. ಬಗ್ಗಿ ಬಕೇಟ್ ಹಿಡ್ದು, ಬೆನ್ ನೋವು ಬಂದದ್ದಷ್ಟೇ ಭಾಗ್ಯ. ನಿನಗೆ ನನ್ನ ಒಲವಿನ ಸುಳಿವು ಸಿಗಲಿಲ್ಲ. ನಿನ್ನೋರ್ವಳನು ಹೊಗ್ಳಿದ್ದು ಸಾಲದೆಂಬಂತೆ, ಫ್ರೆಂಡುಗಳು ಅಪ್ಪ ಅಮ್ಮ ಅಜ್ಜಿ ತಾತ ಅಕ್ಕನ ಮಕ್ಕಳು, ಅಯ್ಯೋ ದೇವರೆನಿನ್ನ ಆಪ್ತ ವಲಯವನ್ನೆಲ್ಲಾ ಹತ್ತಿ-ಇಳಿಸಬೇಕಾಯ್ತು. 


ನಿಂಕೆ ನೆಪ್ಪಿದೆಯಾ. ?ಯಾವ್ದೋ ಮಗು ಕೆನ್ನೆಗೆ, ಕೆನ್ನೆ ಒತ್ತಿ ಹಿಡಿದ ಫೋಟೋ ಒಂದನ್ನ ಫೇಸ್-ಬುಕ್ಕಲ್ಲಿ ಹಾಕಿದೆ. ಹತ್ತು ಸೆಕೆಂಡುಗಳ ಒಳಗಾಗಿ, "ವಾ. ವ್ ನೈಸ್ ಕಿಡ್. " ಅಂತ ಕಾಮೆಂಟು ಹಾಕಿದ್ದಕ್ಕೆ. ನೀನು ಆ ಮಗುವಿನ ಕುಲ, ಗೋತ್ರ, ನಕ್ಷತ್ರಾದಿಯಾಗಿ ಒಂದನ್ನೂ ಬಿಡದೆ ಉದ್ದುದ್ದು ಹೇಳಿದೆ. ಯಾವನಿಗೆ ಬೇಕಿತ್ತು ಅಷ್ಟೋಂದು ಡೀಟೈಲ್ಸು. ? ಒಂದು ಗುಟ್ಟು ಹೇಳ್ಳಾ. 'ನೈಸ್ ಕಿಡ್' ಅಂದದ್ದು ಆ ಮಗುಗಲ್ವೇ. 

ಆವತ್ತೊಂದಿನ ತಿಳಿ ನೀಲಿ ಬಣ್ಣದ ಅಂಗಿ ಹಾಕಿ ಬಂದಾಗ, ನೀನೂ ಕೂಡ ಅದೇ ಕಲರಿಂದು ಚೂಡಿ ಹಾಕಿ ಬಂದಿದ್ದೆ. ಚೂಡಿಯ ಮೇಲೆ ಮಿಂಚ್-ಮಿಂಚಾದ ಕಸೂತಿ ಕೆಲ್ಸದ ಜಾತ್ರೆ ಇದ್ದಾಗಿಯೂ ಕೂಡ, ಆ ಧಿರಿಸಿನ ಡಾಮಿನೇಟ್ ಕಲರು ಲೈಟ್ ಬ್ಲೂನಮ್ಮ. ನಮ್ಮ ಆತ್ಮಗಳಿಗೆ ಸಮಾನ ವರ್ಣಾಭಿರುಚಿ ಇರುವುದಾಗಿ ಮನ್ಸು 'ಸೇಮ್ ಪಿಂಚ್' ಮಾಡಿ, ಮುಗುಳ್ನಕ್ಕಿತ್ತು. 

ಇಂಥ ಕಮ್ಮಿ ಕಮ್ಮಿ ಖುಷಿಯಲ್ಲಿ, ಮೂಖಪ್ರಾಣಿ ತರ ಸಾಕ್ಕೋಂಡಿದ್ವು ಮನ್ಸನ್ನ. ಈಗ ಮನ್ಸು ಬಂಡಾಯದ ಬಾವುಟ ಹಾರಿಸಿ, ಭ್ರಮೆಗಳ ಬೌಂಡರಿ ದಾಟಿಹೋಗಿ ಕುಂತದೆ. 'ಲೋ ಮರಿ, ಯಾಮಾರ್ತಾ ಇದೀಯ. ಬಂದು ಬಿಡಪ್ಪ' ಅಂತ ಆ ಮನ್ಸನ್ನ ಕರೆದ್ರೆ, 'ಊ ಹುಂ' ಸುತಾರಾಂ ಒಪ್ತಾ ಇಲ್ಲ. 

ಯಾರನ್ನೂ ಇಷ್ಟೋಂದು ಹಚ್ಚಿಕೊಳ್ಳಲಿಲ್ಲವೆ. ನೆಚ್ಚಿಕೊಳ್ಳಲಿಲ್ಲವೆ. ನಿನ್ನ ಮೆಚ್ಚಿದೆ. 

ಪ್ರತಿ ಸಾರಿ, ಮಾತು ಮುಗಿದಾಗಲೂ. ಯಾವಾಗ. ? ಹೇಗೆ. ? ಮತ್ತೆ ಮಾತು ಶುರುಮಾಡಬಹುದಂತಲೇ, ನಿಲ್ಲದ ಆಲೋಚನೆಗಳು ಹೆಗಲೇರುವವು. ಅದೆಷ್ಟೋ ಮಾತುಗಳಲ್ಲಿ 'ಸೆನ್ಸು' ಇರೋದಿಲ್ಲ ಅನ್ನೋದು ಬೇರೆ ಮಾತು. ಆದರೂ ಬೇಕಾದ್ದು ಹೇಳು. ಕೇಳುವ ಆಸೆಯಿದೆ. 

ಮಾತಾಡ್-ಬೇಕು, ಒಟ್ಟಿಗೆ ಕನ್ಸು ಕಾಣಬೇಕು, ಹಠಕಟ್ಟಿಬದುಕಬೇಕು, ಹುಚ್ಚಿಗ್ ಬಿದ್ದು  ಪ್ರೇಮಿಸಬೇಕು. ಜೀವನ ಅ೦ದ್ರೆ, 'ನೀನೆ ಅಲ್ಲ', 'ಬರಿ ಪ್ರೀತಿನೆ ಅಲ್ಲ' ಅಂತೆಲ್ಲಾ ಅನಿಸಿದಾಗ, ಉಳಿಯುವುದು ಒಂದು ಕೃತಕ ನಿರುದ್ಯೋಗ. ಅದೇನೋ, ಕನಸುಗಳಿರದ ಇಲಾಜೇ ಇಲ್ಲದ ಕಳೆಹೀನ ರೋಗ. 

> ಸದಾ ನಾ ಓಡಾಡೋ ರಸ್ತೆಯ ಕೊನೆಯಲ್ಲಿ ನಿಂತು, ನನ್ನ ಹಂಬಲವನ್ನ ಹಂಗಿಸಿದಂತಾಗತ್ತೆ. ಅಷ್ಟರ ಮಟ್ಟಿಗೆ ಆವರಿಸಿದ್ದೀಯ. 

ಅರೇ!! ರಾತ್ರಿಯಾಗುವಾಗಲೆಲ್ಲಾ ನನ್ನ ಆಯಸ್ಸು ಒಂದು ದಿನ ಕಡ್ಮೆ ಆಗೋಯ್ತು, ಅನ್ನೋ ಹತಾಶೆ. ಈ ತಳಮಳವನ್ನೆಲ್ಲಾ ಹೇಳಬೇಕಂತಲೂ ಬರ್ತೇನೆ. ನಿನ್ನ ನಗು, ಮಾತು,ಕಣ್ಣ ಸನ್ನೆ ಮತ್ತು ಅಂಗ ಚೇಷ್ಟೆಗಳ ಜೊತೆಗೆ ನಮ್ಮ 'ಗುರಿ' ಗಿರಿಗಿಟ್ಟಲೆ ಹೊಡೆದು,ತಕ್ಕಮಟ್ಟಿಗಿದ್ದ ನಮ್ಮ ಆತ್ಮವಿಶ್ವಾಸವೂ ಡೈಲೂಟಾಗಿ, ' ಹಿಂಗೇ, ಮಾತಾಡ್ಕೋಂಡು ಚೆನ್ನಾಗಿದಿವಿ ಅಲ್ವಾ, ಚನ್ನಾಗೈತೆ ಲೈಫು' ಅಂತನ್ನಿಸಿ, 'ಅಸಹಾಯಕತೆ' ಯು 'ಅಲ್ಪತೃಪ್ತಿ' ಯ ನೆರಳಲ್ಲಿ ಕಣ್ಣಾಮುಚ್ಚಾಲೆ ಆಡುವುದು. 

ಆದರೂ ಬಿಡದೆ ನನ್ನನಗೇ ಇಲ್ಲ ಸಲ್ಲದ ಆಸೆ ಆಮಿಷಗಳನ್ನು ತೋರಿಸಿಕೊಂಡು, ಮಕ್ಕಿಕಾಮಕ್ಕಿ ಲವ್ವಿನ ಡೈಲಾಗುಗಳನ್ನ ಅಚ್ಚಿ ಇಳಿಸಿ,ಪ್ರಪೋಸಿಸುವಭರದಲ್ಲಿ ಬಂದರೇ ಸ್ಪೆಷಲ್ ಎಫೆಕ್ಟುಗಳೆಲ್ಲಾ ತಪ್ಪಿ ಹೋಗಿ,ನನ್ನ ಬೌದ್ಧಿಕ ಆತ್ಮಾಹುತಿಗೆ ಇಡೀ ಪ್ರಪಂಚವೇ ನಕ್ಕಂತಾಗಿ ಬಿಡುವುದು. 

ಈ 'ಪ್ರೀತಿ' ಅನ್ನೋ ಒಳಸಂಚು ತಿಳಿದಾಕ್ಷಣ, ಧಿಗ್ಭ್ರಾಂತಳಾಗುವೆಯಾ. ? ನಂಗ್ಯಾಕೊ ಡೌಟು. ಎಲ್ಲಾ ಗೊತ್ತಿದ್ದೂ, ಸುಮ್ಮನೇ ಎಲ್ಲವನ್ನೂ ಗಮನಿಸುತ್ತಿದ್ದಿ  ಅನ್ನಿಸ್ತಿದೆ. 

ಸದ್ಯಕ್ಕೆ ದೇವರ ಹತ್ರ ತತ್ಕಾಲ್ ಬೇಡಿಕೆ ಅಂದ್ರೆ," ನಮ್ಮ-ನಮ್ಮ, ವಿಷಯಗಳು ಇತ್ಯರ್ಥ ಆಗುವವರೆಗೂ. ತಮಗೆ ಕಂಕಣ ಭಾಗ್ಯ ಕೂಡದೇ ಇರಲಿ. " ಅನ್ನೋದು. ಕ್ಷಮಿಸು ಮಾರಾಯ್ತಿ, ನಮಗಿಲ್ಲಿ ಸಂಬಂಧಗಳ ಕ್ಲಾರಿಟಿ ಸಿಗುವುದರೊಳಗೆ. ,ಯಾರೋ ಬಂದು, ಉಪ್ಪಿಟ್ಟು ಕೇಸ್ರಿಬಾತು ತಿಂದು, ನಿನ್ನೂ ಕರ್ಕೋಂಡು ಹೋದ್ರೆ. .. ' ನೆನೆಸಿಕೊಂಡ್ರೆ ಉಮ್ಮಳಿಸಿ ಬರುತ್ತದೆ, ಕ್ರೋಧ. 

ನಮ್ಮ ಜೀವನದ ' ಒಳಗೆ ' ಬರೋ ಪಾತ್ರಗಳ ಮೇಲೆ ನಮಗೆ ನಿಯಂತ್ರಣ ಇಲ್ಲದೇ ಇರಬಹುದು. ಆದರೆ ಉಳಿದು ಹೋಗುವಪಾತ್ರಗಳ ಆಯ್ಕೆ ಸ್ವಾತಂತ್ರ ಖಂಡಿತ ಇರತ್ತೆ. ಬಹುಶಃ ಅದು ಪರಸ್ಪರರ ಆಸಕ್ತಿ ಯನ್ನ ಅವಲಂಭಿಸಿರತ್ತೆ. 

' ನನ್ನ ಮೇಲೆ ಆ ಥರದ್ದೊಂದು ಆಸಕ್ತಿ ಇದೆಯಾ. ? ' ಅನ್ನೋ ಮುಕ್ತ ಪ್ರಶ್ನೆ ಇಟ್ಟುಕೊಂಡು, ಸುಮಾರು ಕಾಪಿ-ಕಟ್-ಪೇಸ್ಟುಗಳಿಂದ ಡ್ರಾಫ್ಟಿನಲ್ಲಿ ಕೊಳೆ ಹಾಕಿದ್ದ ಪತ್ರದ ಸ್ಟೇಬಲ್ ವರ್ಷನ್ ರಿಲೀಸ್ ಮಾಡ್ತಾ ಇದ್ದೇನೆ. 

ನಿನ್ನ ಹೆಸ್ರನ್ನ ಗುನುಗ್ತಾ ಇದ್ರೆ ಹಿಪ್ನಾಟೈಸ್ ಮಾಡಿದಂಗ್ ಆಗ್ತದೆ. ಅದಕ್ಕೆ ಆ ಶಬ್ಧದ ಹಂಗಿಲ್ಲದೆ. ಈ ಪತ್ರ ಬರೆದಿರೋದು.

Comments