Saturday, December 15, 2012

ಅಪ್ಪಿ ತಪ್ಪಿ ನಡೆವ ಅಭಾಸಗಳು

##ಏಕಾಪಾತ್ರಾಭಿನಯ 

ಕಾಲೇಜಿನಲ್ಲಿ ಏಕಾಪಾತ್ರಾಭಿನಯ ಸ್ಪರ್ಧೆ ಇತ್ತು. ಹೆಂಗಾದ್ರು, ಸ್ವಲ್ಪ ಪೇಮಸ್ ಆಗೋಣ ಅಂತ ಡಿಸೈಡು ಮಾಡಿದೆ. ಚಿಕ್ಕ ವಯಸ್ಸಿನಲ್ಲಿ ಗುರು-ಶಿಷ್ಯರು ಅನ್ನೋ ಏಕಪಾತ್ರಾಭಿನಯ ಮಾಡಿದ್ದೆ. 

ಕುವೆಂಪು ಅವರು ಬರೆದ ಅಂಗುಲಿಮಾಲ-ಮಹಾತ್ಮ ಬುದ್ಧ ನಾಟಕವನ್ನು, ಏಕಪಾತ್ರಾಭಿನಯ ರೂಪದಲ್ಲಿ ಮಾಡಬೇಕೆಂದು ನನ್ನ ಸ್ಕೀಮು. ಬಹುಷಃ 'ಏಕಪಾತ್ರಾಭಿನಯ' ಅನ್ನೋದು ಅಷ್ಟು ಬೋರಿಂಗ್ ಇರುವುದಕ್ಕೆ ಸಾಧ್ಯವೇ ಇಲ್ಲ, ಅನ್ನುವಷ್ಟು ಕೆಟ್ಟದಾಗಿ ನಿರೂಪಿಸಿದೆ. 

ಮಹಾತ್ಮ ಬುದ್ಧ, ಅಂಗುಲಿಮಾಲನನ್ನು ಅಪ್ಪಿಕೊಳ್ಳುವ ಸನ್ನಿವೇಶದಲ್ಲಿ, ಅತ್ತ ಬುದ್ಧನಾಗಿ, ನಾನೇ ಅಪ್ಪಿಕೊಳ್ಳಬೇಕು. ಮತ್ತು ಇತ್ತ ಅಪ್ಪಿಕೊಂಡಾಗ ಆಗುವ, ಜ್ಞಾನೋದಯದ ರೋಮಾಂಚನವನ್ನು ಅಂಗುಲಿಮಾಲನಾಗಿ, ನಾನೇ ವ್ಯಕ್ತಪಡಿಸಬೇಕು. ಈ ಸನ್ನಿವೇಶವನ್ನು ಕಣ್ಣಾರೆ ಕಂಡ ಗೆಳೆಯ ಲೋಹಿತ  'ಏನೋ ಮಾಡ್ತಾ ಇದ್ದೆ ಸ್ಟೇಜ್ ಮೇಲೆ. ಬುದ್ಧ ತಪ್ಪಿಕೊಂಡರೆ, ಐಟಮ್ ಗರ್ಲ್ ತಪ್ಪಿಕೊಂಡ ರೀತಿ ಆಡ್ತಿದ್ಯಲ್ಲೋ.'ಅಂತ ಉಗಿದ. ಆದ್ರೆ ಏಕಾಪಾತ್ರಾಭಿನಯಕ್ಕೆ ನನಗೆ ಮೂರನೇ ಬಹುಮಾನವಾಗಿ ಟಿಪಿನ್-ಕ್ಯಾರಿಯರ್ ಸಿಕ್ತು. 

ಇದಾಗಿ ಒಂದು ವಾರದ ನಂತರ ಫಿಸಿಕ್ಸು ಲ್ಯಾಬಲ್ಲಿ, ದಿವ್ಯ ಮೇಡಮ್-ಗೆ ರೆಕಾರ್ಡ್ ತೋರಿಸೋಣ ಅಂತ ಹೋದೆ. 'ನೀನೆ ಆಲ್ವೇನೋ..?  ಬುದ್ಧ-ಅಂಗುಲಿಮಾಲ ಮಾಡಿದ್ದು' ಅಂತ ಕೇಳಿದ್ರು. ಹೋ ಪರವಾಗಿಲ್ಲ ನಮ್ಮ ಹವಾ ಎಲ್ಲಾ ಕಡೆ ಪಸರಿಸಿಬಿಟ್ಟಿದೆ ಅನ್ನೋ ಗತ್ತಿನಿಂದ 'ಹೌದು ಮೇಡಮ್ ನಾನೇ ಮಾಡಿದ್ದು. ' ಅಂದೆ. 

' ನಾಟಕ ಮಾಡೋಕೆ ಮುಂಚೆ. ಸ್ವಲ್ಪ ಪ್ರಿಪೇರ್ ಮಾಡಿ ಬರಬೇಕು ಅನ್ನೋದು ಗೊತ್ತಾಗಲ್ವಾ ನಿಂಗೆ ' ಅಂದ್ರು. ' ಪ್ರಿಪರೇಷನ್ ಮಾಡಿದ್ರೆ ಸಹಜವಾಗಿ ಬರಲ್ಲ, ಅದಕ್ಕೆ ನ್ಯಾಚುರಲ್ ಆಗಿ ಬರಲಿ ಅಂತ ಡೈರೆಕ್ಟಾಗಿ ಮಾಡಿದ್ದು. 'ಅಂದೆ. 

' ಅಂತಹಾ ನಾಟಕ ನೋಡೋದಕ್ಕೆ ನನ್ನನ್ನೇ ಜಡ್ಜು ಮಾಡಿದ್ರು. ನಾಟಕ ಮಾಡಿದವರು ಮೂರೇ ಜನ. ವಿಧಿ ಇಲ್ಲದೇ ನಿನಗೆ ಮೂರನೆ ಬಹುಮಾನ ಕೊಟ್ಟಿದ್ದು. ನಾನು ಮೂರನೇ ಬಹುಮಾನ ಇಡೋದೇ ಬೇಡ ಅಂತಿದ್ದೆ. ' ಅಂದ್ರು. ಮೇಡಮ್ ಕಣ್ಣಲ್ಲಿ ಕ್ರೋಧ ಉಕ್ಕಿ ಹರಿಯುತ್ತಿತ್ತು. ಯಾವತ್ತೋ ಮಾಡಿದ ನಾಟಕದ ಎಫೆಕ್ಟು, ಇವರ ಇವತ್ತಿನ ಕ್ರೋಧಕ್ಕೆ ಇನ್ನೂ ಕಾರಣ ಆಗಿದೆ ಅಂದ್ರೆ, ನನ್ನ performance ಎಷ್ಟು ಅದ್ಭುತ ವಾಗಿರಬಹುದು.

##Co Education

ಕನ್ನಡ ಚರ್ಚಾ ಸ್ಪರ್ಧೆ ನಡೆಯುತ್ತಿತ್ತು. ಒಟ್ಟು ಮೂರು ಟೀಮ್-ಗಳಿದ್ದವು. ಪ್ರತಿಯೊಂದು ಟೀಮ್ ಕೂಡ, ಒಂದು ವಿಷಯದ ಬಗ್ಗೆ ಪರ ಮತ್ತು ವಿರೋಧ ಮಾತನಾಡಬೇಕು. ನಮ್ಮ ಟೀಮಿನಲ್ಲಿ, ನನ್ನ ಜೊತೆ ಅನುಷಾ ಎಂಬ ಜೂನಿಯರ್ ಹುಡುಗಿ ಇದ್ದಳು. 

ನಮಗೆ 'co education' ಎಂಬ ವಿಷಯ ಬಂತು. ನಾನು 'co education' ಬೇಕು; ಒಳ್ಳೆಯದು; ಎಂದೂ ಮತ್ತು ಅನುಷ; ಬೇಡ ಕೆಟ್ಟದ್ದು ಎಂದು ಮಾತನಾಡುವಂತೆ ನಿರ್ಧರಿಸಿದೆವು.ಫುಲ್ಲು ಜೋರಾಗಿ ಸುರುವಚ್ಚಿಕೊಂಡೆ. 

'co education ನಿಂದಾಗಿ ನಮ್ಮ ಮಕ್ಕಳಿಗೆ ಪುಸ್ತಕದ ಹೊರೆ ಕಡಿಮೆ ಆಗತ್ತೆ. ಮೂರು ಮೂರು ತಿಂಗಳಿಗೆ ಒಮ್ಮೆ, ಮಕ್ಕಳು ಹಿಂದೆ ಓದಿದ್ದನ್ನೆಲ್ಲಾ ಮರೆತು ಮುಂದಕ್ಕೆ ಹೋಗಬಹುದು. ಒಂದೇ ಪಾಠವನ್ನು, ಮಂಥ್ಲಿ ಟೆಸ್ಟಿಗೆ, ವಾರ್ಷಿಕ ಅರ್ಧವಾರ್ಷಿಕ ಪರೀಕ್ಷೆಗಳಿಗೆಲ್ಲಾ, ಪದೆ ಪದೆ ಓದುವುದರಿಂದ ಮಕ್ಕಳ ಮೆದುಳಿನ ಮೇಲೆ ಬರ್ಡನ್ ಆಗತ್ತೆ. ನಮ್ಮ ಮಕ್ಕಳಿಗೆ ಹೊರೆ ಕಮ್ಮಿ ಆಗತ್ತೆ. ' ಹೀಗೆ ಹೇಳುತ್ತಲೇ ಹೋದೆ. ಸುತ್ತ ಕುಳಿತವರೆಲ್ಲಾ ಕಕ್ಕಾ ಬಿಕ್ಕಿಯಾಗಿ ಹೋದರು. 

' ಏನ್ ಮಾತಾಡ್ತಾ ಇದ್ದೀರ, ನೀವು. ನಂಗೇನು ಗೊತ್ತಾಗ್ತಾ ಇಲ್ಲ ' ಪಕ್ಕದಲ್ಲಿ ಕುಳಿತಿದ್ದ ಅನುಷಾ ಮೆತ್ತಗೆ ಕೇಳಿದಳು. ನಾನು ಫುಲ್ ಜೋಷ್ ನಲ್ಲಿ ಮಾತು ಮಾತಿಗೊಮ್ಮೊಮ್ಮೆ 'ನಮ್ಮ ಮಕ್ಕಳು' ಎಂದು ಬಳಸುತ್ತಾ ವಾದ ಮಂಡಿಸಿದೆ. ವಾದ ಮಾಡ ಬೇಕೆಂದಿದ್ದ ಅನುಷಾ, ತಲೆ ಕೆರೆದುಕೊಂಡು ಸುಮ್ಮನೆ ಕುಳಿತಳು. 

ಆನಂತರವೇ ನನಗೆ ತಿಳಿದದ್ದು ' co education' ಪದ್ಧತಿ ಅಂದರೆ 'ಗಂಡು ಹೆಣ್ಣು ಒಟ್ಟಿಗೆ, ಒಂದೇ ಶಾಲೆಯಲ್ಲಿ ಓದುವ ಪದ್ಧತಿ' ಎಂದು. 


ಅಯ್ಯಯ್ಯೋ ನನ್ನ ಮಾನ ಹಾರಾಜು ಆಗಿ ಹೋಗಿತ್ತು. ನಿಜವಾಗಲೂ 'co education' ಅಂದರೆ ಪ್ರೈಮರಿ ಹಂತದಲ್ಲಿ ಆಗತಾನೆ ಜಾರಿಗೆ ತಂದಿದ್ದ 'ಟ್ರೈ ಸೆಮಿಸ್ಟರ್' ಪದ್ಧತಿ ಎಂದು ಬಗೆದು. ಆ ವಿಷಯವಾಗಿ ಅಷ್ಟು ಮಾತನಾಡಿದ್ದೆ. 'co education' ಮೂಲ ಪದದ ಕಲ್ಪನೆಯಲ್ಲಿ, ನಾನು ಹೇಳಿದ ಅಷ್ಟೂ ಮಾತುಗಳು, ಭಯಂಕರವಾದ ಅರ್ಥವನ್ನು ಹೊರ ಹಾಕಿದ್ದವು. 

Tuesday, December 11, 2012

'Life of Pi' ಮತ್ತು ಒಂಚೂರು ಹರಟೆ

'ಲೈಫ್ ಆಫ್ ಪೈ' ಸಿನಿಮಾ ಶುರುವಾಯ್ತು.  ಸ್ಕ್ರೀನು ಬ್ಲರ್ ಆಗಿ ಕಾಣುಸ್ತಾ ಇತ್ತು. ಎರಡೆರಡು ವೀಡಿಯೋ ಲೇಯರ್ ಗಳು ಒಂದರ ಮೇಲೆ ಒಂದು ಕೂತಂತೆ. ಒಮ್ಮೊಮ್ಮೆ ಆಡಿಯೋ ವೀಡಿಯೋ ಮಿಸ್ ಅಲೈನ್ ಆಗಿರುತ್ತವಲ್ಲ ಹಾಗೆ. ಸರಿ ಹೋಗಬಹುದೆಂದು ಸ್ವಲ್ಪ ಕಾದೆ. ಎಷ್ಟು ಹೊತ್ತಾದರೂ ಆ ಬ್ಲರ್ ಕಡಿಮೆ ಆಗಲೇ ಇಲ್ಲ. ಹಿಂದೆ ತಿರುಗಿ ಪ್ರೊಜೆಕ್ಟರ್ ಇದಿಯಾ ಅಂತ ನೋಡಿದೆ. ಅಂತದ್ದೇನು ಕಾಣಲಿಲ್ಲ. ಸಖತ್ ಕೋಪ ಬಂತು. 

Sunday, November 25, 2012

ಚೋರ್ ಬಜಾರ್ ; ಬೆಂಗಳೂರಿನ ಕಾಳಸಂತೆ

ಭಾನುವಾರ,  ನಾನು ಮತ್ತು ರಾಮು ನಡೆದಾಡುವ ಗಟ್ಟಿಬಿಲ್ಲೆ(portable harddisk ) ತರಲು ಎಸ್ -ಪಿ ರಸ್ತೆಗೆ ಹೋಗಿದ್ದೆವು. ನಮ್ಮ ಕೆಲಸ ಮುಗಿದ ಮೇಲೆ ರಾಮುಗೆ, 'ಚೋರ್ ಬಜಾರ್' ನೋಡುವ, ಹಂಬಲ ಉಂಟಾಯಿತು. ಸಂಡೆ ಕಳ್ಳರ ಸಂತೆಗೆ ಭೆಟ್ಟಿ ಕೊಡಬೇಕೆಂಬುದು ಅವನ ಬಹುದಿನದ ಆಸೆ. ಕೃಷ್ಣರಾಜ ಮಾರುಕಟ್ಟೆಯ ಸುತ್ತ-ಮುತ್ತ ಎಲ್ಲೋ ಇದೆ ಎಂಬುದನ್ನು ಗೂಗಲ್ ನಲ್ಲಿ ಪತ್ತೆ ಮಾಡಿ, ಚೋರ್ ಬಜಾರು ಹುಡುಕುತ್ತಾ ಹೊರಟೆವು. 


ಸಿಕ್ಕ ಸಿಕ್ಕವರಿಗೆ ಅಡ್ರೆಸ್ ಕೇಳುವುದು ಕೂಡ ಮುಜುಗರದ ಸಂಗತಿಯಾಗಿತ್ತು. ಯಾಕಂದ್ರೆ, ಮಹಾತ್ಮ ಗಾಂಧಿ ಸರ್ಕಲ್ಲು ಎಲ್ಲಿದೆ; ಕೆಂಪೇಗೌಡ ನಗರ ಎಲ್ಲಿದೆ; ಅನ್ನೋದನ್ನ ಹೆಮ್ಮೆಯಿಂದ ಕೇಳಬಹುದು. ಆದರೆ 'ಚೋರ್ ಬಜಾರು' ಅಂತ ಕೇಳೋದಾದರು ಹೆಂಗೆ? ನಾವು ಮೆತ್ತಗೆ 'ಇಲ್ಲಿ ಚೋರ್ ಬಜಾರಿಗೆ ಯಾವ ಕಡೆಗೆ ಹೋಗಬೇಕು. ?' ಅಂತ ಕೇಳಿದಾಗ, ಕೆಲವರು ಅಡ್ರೆಸ್ಸು ಹೇಳುವ ಔದಾರ್ಯ ತೋರದಿದ್ದರೂ; ಬೇಜಾನ್ ಗುರಾಯಿಸಿದರು. 'ಗೊತ್ತಿದ್ರೆ ಗೊತ್ತು ಅನ್ನಿ, ಇಲ್ಲಾಂದ್ರೆ ಇಲ್ಲ ಅನ್ನಿ. ಅದುಕ್ಯಾಕೆ ಹಂಗೆ ಲುಕ್ ಕೊಡ್ತೀರ' ಅಂತ ಹೇಳಬೇಕೆನಿಸುತ್ತಿತ್ತು. 

ಅಪರಿಚಿತ ಸ್ಥಳಗಳಲ್ಲಿ, ಗೊತ್ತಿಲ್ಲದ ವಿಷಯದ ಮಾಹಿತಿ ಪಡೆಯಲು ಒಂದು ಛೋಟಾ ಟೀ ಮೊರೆ ಹೋಗಬೇಕಾಯಿತು. ಇದು ನಮ್ಮ ಹಳೆಯ ಫಾರ್ಮುಲ. ' ಎ ಲಾಟ್ ಕೆನ್ ಹ್ಯಾಪನ್ ಓವರ್ ಎ ಛೋಟಾ ಟೀ '. ತನ್ನ ಕ್ಯಾಂಟೀನಲ್ಲಿ ಟೀ ಕುಡಿಯುತ್ತಿರುವುದರ ಮರ್ಜಿಗಾದರು ಓನರು ಮನ ಬಿಚ್ಚುತ್ತಾನೆ. ಸುತ್ತಲಿರುವ ಸ್ಥಳೀಯರು ಧ್ವನಿಗೂಡಿಸುತ್ತಾರೆ.

ಪುಟ್ಟದಾದ ಗೂಡು ಅಂಗಡಿಯಲ್ಲಿ ಚಹಾ ಮಾರುತ್ತಿದ್ದ ತಾತಪ್ಪನ ಬಳಿ ಟೀ ಪಡೆಯುತ್ತಾ ಕೇಳಿದೆ 'ಕಾಕ ಇಲ್ಲಿ 'ಚೋರ್ ಬಜಾರ್' ಅಂತ ಇದೀಯಲ್ಲ, ಎಲ್ಲಿ ಬರತ್ತೆ. ? ' ಅದಕ್ಕೆ ಸಾಹೇಬರು 'ಚೋರ್ ಬಜಾರ್; ಈ ರೋಡು ಇದಿಯಲ್ಲಾ. ಇದೇ ಚೋರ್ ಬಜಾರು' ಅಂದರು. ನನಗೂ ಶ್ಯಾನೆ ಕೋಪ ಬಂತು. ದಾರಿಯುದ್ದಕ್ಕೂ ಚೋರ್ ಬಜಾರಿನ ಬಗ್ಗೆ, ರಾಮು ತುಂಬಾನೆ ಬಿಲ್ದಪ್ಪು ಕೊಟ್ಟಿದ್ದ. ಆದ್ರೆ ಅಲ್ಲಿ ಕುರಿಮಂದೆಯಂತೆ ತುಂಬಿದ್ದ ಜನಗಳನ್ನ ಬಿಟ್ಟು, ವಿಶೇಷವಾಗಿ ಮಾರಾಟ ಮಾಡುತ್ತಿದ್ದ ಯಾವುದೇ ಕುರುಹುಗಳು ಕಾಣಿಸಲಿಲ್ಲ. 

'ಎಲ್ಲಿ ಕಾಕ ಏನೂ ಕಾಣಿಸ್ತಾನೆ ಇಲ್ಲ. ? ' ಕೇಳ್ದೆ. 'ಪೋಲೀಸ್ನೋರು ಹಿಂಗೆ ಬಂದಿದಾರಲ್ಲ, ಅದಕ್ಕೆ ಎಲ್ಲ ಕ್ಲೋಸ್ ಆಗಿದೆ. ಅವರು ಹಂಗೆ ಹೋದ ತಕ್ಷಣ ಓಪನ್ ಆಗಿ ಬಿಡ್ತದೆ. ಅದು ಅವರವರ ಮಧ್ಯೆ ಇರೋ ಗೌರವ. ' ಅಂದ್ರು. ನಾವೂ ಸ್ವಲ್ಪ ಹೊತ್ತು ಕಾದೆವು. 

ಚೋರ್ ಬಜಾರು ಗಲ್ಲಿ ಗಲ್ಲಿಗಳಲ್ಲಿ ಮೆತ್ತಗೆ ಅನಾವರಣಗೊಳ್ಳುತ್ತಾ ಹೋಯ್ತು. ಒಬ್ಬಾತ ಬೈಕಿನ ಮೇಲೆ ದೊಡ್ಡ ಬಾಕ್ಸು ಹೊತ್ತು ತಂದು ' ಐನೂರು ಐನೂರು ಐನೂರು ' ಎಂದು ಕಿರುಚ ತೊಡಗಿದ. ಜನ ಮುತ್ತಿಕೊಂಡರು. ಆ ಡಬ್ಬಿಯಲ್ಲಿ ಏನಿರಬಹುದು ಎಂದು ಅಣಕಿದೆವು. ವಿವಿಧತೆಯಲ್ಲಿ ಏಕತೆ ಎಂಬಂತೆ ಬಹಳಷ್ಟು ಕಂಪನಿಗಳ ಮೊಬೈಲು ಫೋನುಗಳು(ಬಾಕ್ಸು ಪೀಸು) ಒಂದೇ ಡಬ್ಬಿಯಲ್ಲಿ ರಾರಾಜಿಸುತ್ತಿದ್ದವು. ಕಲರ್ ಸೆಟ್ಟು, ಕ್ಯಾಮರ, ಎಮ್-ಪಿ-ತ್ರಿ ಎಲ್ಲವೂ ಇದೆ ಎನ್ನುತ್ತಿದ್ದ. ನಿಮಿಷಗಳಲ್ಲಿ ಅವನ ಡಬ್ಬಿ ಖಾಲಿಯಾಗಿ ಹೋಯ್ತು. ರಸ್ತೆಯುದ್ದಕ್ಕೂ ಇಂಪೋರ್ಟೆಡ್ ಬ್ರಾಂಡ್ ವಸ್ತುಗಳು ರಾರಾಜಿಸಿ, ಮಾಯಾವಾಗತೊಡಗಿದವು. ನಮ್ಮ ಭೇಟಿಯ ಮೂಲ ಉದ್ದೇಶ, ಶಾಪಿಂಗ್ ಆಗಿರಲಿಲ್ಲ, ಕೆಟ್ಟ ಕುತೂಹಲ ಒಂದೇ.

'ಲೋ ಕಳ್ಳತನದ ಮಾಲು ಪರ್ಚೇಸ್ ಮಾಡಿದ್ರೆ, ಕಳ್ಳತನ ಸಪೋರ್ಟ್ ಮಾಡಿದ ಹಂಗ್ ಆಗುತ್ತೆ. ಬಂಡವಾಳ ಹಾಕಿ ಅಂಗಡಿ ಇಟ್ಟಿರೋನಿಗೆ ನಷ್ಟ ಆಗುತ್ತೆ. ? ' ಮಾಮೂಲಿ ಲೋಕೋದ್ಧಾರಕ ಆರ್ಗುಮೆಂಟ್ ಗೆ ತಯಾರಾದೆ. 

'ಇಲ್ಲಿರೋವೆಲ್ಲಾ. ಕೇವಲ ಅಂಗಡಿಯಿಂದ ಕದ್ದು ತಂದ ವಸ್ತುಗಳಾಗಲೀ ಅಥವಾ tax ಕಟ್ಟದೇ ಸ್ಮಗಲ್ ಮಾಡಿರೋ ಗೂಡ್ಸು ಅಲ್ಲ.'

+   ಹೊರದೇಶಗಳಿಂದ ಬರುವ, ಇಂಪೋರ್ಟೆಡ್ ವಸ್ತುಗಳನ್ನ, ಅಂಗಡಿಯ ಮಾಲೀಕನ ಕೈ ಸೇರುವುದರ ಒಳಗಾಗಿ ಹಡಗಿನಲ್ಲಿಯೇ ದೋಚ್ತಾರೆ. ಇದರಿಂದ ಇಲ್ಲಿಯ ಅಂಗಡಿಯವನಿಗೆ ಯಾವುದೇ ನಷ್ಟ ಇಲ್ಲ. ಯಾಕಂದ್ರೆ ಅದಿನ್ನು ಅವನ ಕೈ ಸೇರೇ ಇರೋದಿಲ್ಲ. 

+   ಹಾಗೆಯೇ ಆ ವಸ್ತುಗಳನ್ನ ತಯಾರು ಮಾಡಿ ಕಳಿಸಿದಂತ ಕಂಪನಿಗಳಿಗೂ ಕೂಡ ಯಾವುದೇ ನಷ್ಟ ಇಲ್ಲ. ಯಾಕಂದ್ರೆ ಶಿಪ್ಪಿಂಗ್ ಮಾಡುವಂತಹ ಪ್ರತಿಯೊಂದು ವಸ್ತುಗಳ ಮೇಲೆ Theft-insurance ಇರತ್ತೆ. ಅಂದ್ರೆ ಅಕಸ್ಮಾತ್ ವಸ್ತುಗಳು ಕಳ್ಳತನ ಆದ್ರೆ, ಅದರ ಸಂಪೂರ್ಣ ನಷ್ಟವನ್ನ ವಿಮಾ(insurance) ಕಂಪನಿಯವರು ತುಂಬಿಕೊಡಬೇಕು. 

+   ಇನ್ನು ವಿಮಾ ಕಂಪನಿಯ ವಿಷಯಕ್ಕೆ ಬರೋಣ. ಅವರಿಗೆ ಇದರಿಂದ ಏನಾದ್ರೂ ನಷ್ಟ ಆಗುತ್ತಾ. ? ಇಲ್ಲ. ಯಾಕಂದ್ರೆ theft risk factor ಅನಲೈಜ್ ಮಾಡಿನೇ ವಿಮಾ(insurance) ಕಂಪನಿಯವರು ತಮ್ಮ ಪಾಲಿಸಿ ಪ್ರೀಮಿಯಂ ನಿರ್ಧಾರ ಮಾಡಿರ್ತಾರೆ. ' 

ಇಲ್ಲ, ಇಲ್ಲ. ಲೆಕ್ಕ ಸರಿ ಬರಲಿಲ್ಲ. ಲೆಕ್ಕಕ್ಕೆ ಸಿಗದೇ ಮಿಸ್ ಆಗಿದ್ದ, ಸ್ಲಾಕ್ ಹಣವನ್ನು ಮನದಲ್ಲಿಯೇ ಲೆಕ್ಕಾಚಾರ ಹಾಕಿ. ' insurance ಪ್ರೀಮಿಯಂ ತುಂಬುವ ವಿದೇಶಿ ತಯಾರಿಕಾ ಕಂಪನಿಗಳು, ಆ ಪ್ರೀಮಿಯಂ ಹಣವನ್ನು ತಾವು ತಯಾರಿಸುವಂತಹ ವಸ್ತುಗಳ ಯುನಿಟ್ ಕಾಸ್ಟಿನ ಜೊತೆಗೆ ಸೇರಿಸಿ ಮಾರಾಟ ಮಾಡಿರ್ತಾರೆ. ಹೌದಲ್ವಾ. ? ಹೌದು, ಅಂತಾದರೆ ಈ ಲೈಫ್-ಸೈಕಲ್ ನಲ್ಲಿ, ಕೊನೆಗೂ ಬಲಿಪಶು ಆಗೋದು ಒಬ್ಬ ಗ್ರಾಹಕ. ಅಂದ್ರೆ ನಾನು ನೀನು ಹೌದು ತಾನೇ. ? ' 

'ಹಾ. ಇರಬಹುದು. ಆದರೆ ಅದು 'mass distribute' ಆಗೋದ್ರಿಂದ, ನಮ್ಮ ತಲೆ ಮೇಲೆ ಬರೋ ಪ್ರಮಾಣ ಕಮ್ಮಿ ಇರತ್ತೆ. ಅದೂ ಅಲ್ಲದೆ, ವಿದೇಶಿ ತಯಾರಿಕಾ ಕಂಪನಿ ಘಟಕಗಳು, ನಾವು ತಿಳಿದಿರೋ ರೀತಿ ಇನ್ನೋಸೆಂಟ್ ಇರೋದಿಲ್ಲ. ಎಷ್ಟೋ ಸಾರಿ insurance ಕಂಪನಿಗಳಿಗೆ ಮೋಸ ಮಾಡುವ ಸಲುವಾಗಿ, ತಾವೇ ಸ್ವತಃ ನಿಂತು, ತಮ್ಮದೇ ಸರಕುಗಳನ್ನು ಕಳ್ಳತನ ಮಾಡಿಸ್ತಾರೆ. ' ಅಂದ. 

'ಹಂಗಾದ್ರೆ ನಾವು ಚೋರ್ ಬಜಾರಲ್ಲಿ ಶಾಪಿಂಗ್ ಮಾಡೋದು ತಪ್ಪಲ್ಲ. ? ' 

'ಹೌದು ತಪ್ಪಲ್ಲ!! ಯಾರಾದ್ರು ಕಳ್ಳತನ ಮಾಡ್ಲಿಲ್ಲ ಅಂದ್ರೆ insurance ಕಂಪನಿಯವರಿಗೆ ಲಾಭ ಮಾಡಿ ಕೊಟ್ಟ ಹಂಗಾಗುತ್ತೆ. ಯಾರೋ ಕಳ್ಳತನ ಮಾಡಲೇಬೇಕು. ಯಾರಾದ್ರು ಅದನ್ನ ಕೊಂಡು ಕೊಳ್ಳಲೇಬೇಕು. ' ಅಂದ. 

'ಲೋ ರಾಮು, ತಪ್ಪನ್ನ ಸರಿ ಅಂತ ಸಾಧಿಸೋದಕ್ಕೆ, ನಿನ್ನ ಹತ್ರ ಯಾವಾಗಲೂ. ಯಾರಿಗೂ ಗೊತ್ತಿಲ್ಲದೇ ಇರೋ ಸಂಗತಿಗಳು ಇರುತ್ವೆ. ? ' ಎಂದೆ. 

' ಯಾವುದೋ ತಪ್ಪು ಇದರಲ್ಲಿ ? ಕೊಂದವನಿಗೆ ಇಲ್ಲದೇ ಇರೋ ಚಿಂತೆ, ತಿಂದವನಿಗೆ ಯಾಕೆ. ? ಅಂತ. ಐಡಿಯಲಿ ಎಲ್ಲರೂ ಒಳ್ಳೆಯವರಾಗಿರಾಗಿದ್ದರೆ ಸಮಸ್ಯೆ ಇಲ್ಲ. ಆದ್ರೆ ಅಂತಹ ಸಮಾಜ ಇರೋದಕ್ಕೆ ಸಾಧ್ಯ ಇದೆಯಾ. ? ಕಾರಣ ಇಲ್ಲದೆ, ಕರ್ಮ ಇಲ್ಲ. ಎಲ್ರಿಗೂ ಅವರದ್ದೇ ಕಾರಣಗಳಿರ್ತಾವೆ. ಆದರೆ ಅದು ವ್ಯಾಲಿಡ್ ಕಾರಣ ಅನ್ನೋದು, ಕರ್ಮ ಮಾಡಿದೋನು ಮಾತ್ರ ಸಂಪೂರ್ಣವಾಗಿ ನಂಬಿರ್ತಾನೆ. ' ಎಂದ. 

' ಚೋರ್ ಬಜಾರು ' ಸುತ್ತಾಡಿ ವಾಪಾಸು ಬರುವ ಹೊತ್ತಿಗೆ ಸಂಜೆಯಾಗಿತ್ತು. ಮನೆಯ ಹತ್ತಿರ ಪೈರೇಸಿ ಸಿಡಿ ಮಾರುತ್ತಿದ್ದ ಹುಡುಗನ ಬಳಿ ಹತ್ತು ರೂಪಾಯಿ ಮಾಮೂಲು ಪಡೆದು ಜೇಬಿಗಿಳಿಸುತ್ತಿದ್ದ ಪೋಲೀಸಿನ ದಾರುಣ ಗೆಶ್ಚರ್ ನೋಡಿ. 

' actually ಇದರಲ್ಲೂ ತಪ್ಪಿಲ್ಲ. ಪೈರೇಸಿ ನಲ್ಲಿ ಕೂಡ ಒಂದು ಲಾಭ ಇದೆ. ಅಕಸ್ಮಾತ್ ಪೈರೇಟೆಡ್ ಸಿಡಿ ನಲ್ಲಿ ನೋಡಿದ ಸಿನಿಮಾ ಚೆನ್ನಾಗಿದ್ದು. ನೋಡುವವನು ಅದನ್ನ ಇಷ್ಟ ಪಟ್ಟರೆ. ಆ ಚಿತ್ರದ ನಾಯಕನಿಗೆ, ನಿರ್ದೇಶಕನಿಗೆ ಮತ್ತು ತಾಂತ್ರಿಕ ವರ್ಗಕ್ಕೆ ಹೊಸದೊಂದು ಪ್ರೇಕ್ಷಕ ವರ್ಗ ಸೃಷ್ಟಿಯಾಗಿರತ್ತೆ. ಅವರ ಮುಂದಿನ ಸಿನೆಮಾಗೋಸ್ಕರ ಆ ಪ್ರೇಕ್ಷಕ ವರ್ಗ ಕಾಯಬಹುದು. ಮಾಲು ಚೆನ್ನಾಗಿದ್ದರೆ. ಅದಕ್ಕೆ ಮಾರ್ಕೇಟ್ ಯಾವುದಾದರೂ ಒಂದು ರೀತಿನಲ್ಲಿ ಇದ್ದೇ ಇರತ್ತೆ. '. ಅಂದ. 

ತಪ್ಪನ್ನು ತಪ್ಪೆಂದೇ ಮತ್ತು ಸರಿಯನ್ನು ಸರಿಯೆಂದೇ ನಂಬಿ ಬದುಕುವವರ ಮಧ್ಯೆ. ತಪ್ಪನ್ನು ಸರಿಯಂತಲೂ ಮತ್ತು ಸರಿಯನ್ನು ತಪ್ಪಂತಲೂ ಸಾಧಿಸುವ ಮತ್ತು ಸಮರ್ಥಿಸುವ ಜೀವಜಂತುಗಳ ಇದ್ದು, ಅವುಗಳ ನಡುವೆ, ನಾವು ಮತ್ತು ನೀವು ಇದೆಲ್ಲಾ ಸರಿಯಾ? ತಪ್ಪಾ? ಎನ್ನುವ ಕನ್-ಫ್ಯೂಷನ್ ಸೃಷ್ಟಿಯಾಗಿ ತಲೆ ಹಾಳಾದರೆ, ಯಾರನ್ನು ಹೊಣೆಯಾಗಿಸಬೇಕು ತಿಳಿಯುವುದಿಲ್ಲ.

Tuesday, November 13, 2012

ಶ್ರೀ ಸತ್ಯನಾರಾಯಣ ಕಥೆ

ಚಕ್ಲಿಹೊಳೆ ನೋಡೋದಕ್ಕೆ ಅಂತ ಹೊರಟಿದ್ದೆ. ರಾಮು ' ತಾನು ದೇವಸ್ಥಾನಕ್ಕೆ ಹೋಗಬೇಕಾಗಿಯೂ,
ಅಲ್ಲಿವರೆಗೂ ಡ್ರಾಪ್ ಕೊಟ್ಟು ಹೋಗುವಂತೆಯೂ ' ಕೇಳಿದ. 'ಸರಿ ನಡೆಯಪ್ಪಾ ' ಅಂದೆ.

'ಬರೋದು ಬಂದಿದ್ದೀಯ. ಪೂಜೆ ಟೈಮು,ಒಳಕ್ ಬಂದು ಹೋಗು' ಅಂದ. ಉದ್ದದ ಸಾಲುಗಳಲ್ಲಿ ನಿಂತು
ಕಾಯುವುದಾದರೆ ಹೊರಗಿಂದಲೇ ಉದ್ದಂಡ ನಮಸ್ಕಾರ ಮಾಡಿ ಹೊರಟು ಬಿಡುತ್ತಿದ್ದೆ. ದೇವರು ಕೂಡ,
ಫ್ರೀ ಆಗಿ ಇದ್ದಿದ್ದರಿಂದ ನನ್ನದೇನು ಅಭ್ಯಂತರ ಇರಲಿಲ್ಲ.


ಅದು ಗಣಪತಿ ದೇವಸ್ಥಾನ. ಒಂದು ದಿನದ ಹಿಂದೆಯಷ್ಟೇ ಮದುವೆಯಾಗಿದ ರಾಮುವಿನ ಸ್ನೇಹಿತನಿಗೆ,
ಅಂದ್ರೆ ನವ ದಂಪತಿಗಳಿಗೆ 'ಶ್ರೀ ಸತ್ಯನಾರಾಯಣ' ಕಥೆ ಹೇಳುತ್ತಿದ್ದರು. ಸಾಕಷ್ಟು ಭಕ್ತ
ಸಮೂಹ ಭಕ್ತಿರಸದಲ್ಲಿ ಮುಳುಗಿದ್ದರು. ದೇವರಿಗೆ ನಮಸ್ಕಾರ ಮಾಡಿ, ತೀರ್ಥ ಕುಡಿದು ಮೂರು
ಸುತ್ತು ಹಾಕಿ ಹೊರಡಲು ಅನುವಾದೆ.

ರಾಮು - 'ಕಥೆಯ ಕೊನೆಯ ಭಾಗದಲ್ಲಿದೀವಿ, ಅನ್ಸತ್ತೆ. ಸ್ವಲ್ಪ ಹೊತ್ತು; ಕೂತು; ಕೇಳಿ
ಪ್ರಸಾದ ತಗೋಂಡು ಹೊಗಿವಂತೆ. ನಾನು ನಿನಗೆ ಸಂಜೆ-ಮೇಲೆ ಸಿಗ್ತೇನೆ' ಅಂದ. ಕಥೆ ಮುಗಿದ
ಮೇಲೆ ಪ್ರಸಾದ ರೂಪದಲ್ಲಿ ಕೊಡುವ ರವೆ ಉಂಡೆಯಂತದ್ದು ಅಲ್ಲೇ ಇತ್ತು. ಅದನ್ನು ನೋಡಿದ
ಮೇಲೆ ಹೋಗುವ ಮನಸ್ಸಾಗಲಿಲ್ಲ. ನಮ್ಮ ಮನೆಗಳಲ್ಲೂ ವೆರೈಟಿಯಾಗಿ ರವೆ ಉಂಡೆ ಮಾಡುವರು.
ಆದರೆ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದದ ರುಚಿಯೇ ಬೇರೆ. ಮೈಸೂರಿನಲ್ಲಿದ್ದಾಗ ನಮ್ಮ
ರೂಮಿನ ಬಳಿ ಇದ್ದ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಮಿ ಬರೋದನ್ನೇ ಕಾಯುತ್ತಿದ್ದೆವು,
ಪುಳಿಹೊಗರೇ ತಿನ್ನೋದಕ್ಕೆ.

ಪುರೋಹಿತರು ಸಂಸ್ಕೃತ ಮತ್ತು ಕನ್ನಡ ಕಲೆಸಿಕೊಂಡು ಕಥೆ ಹೇಳುತ್ತಿದ್ದರು. ಅದು
ಅರ್ಥವಾಗಲೀ; ಬಿಡಲಿ; ಕಥೆಯ ಸಾಲುಗಳು ತಮ್ಮ ಕಿವಿಗಳ ಮೇಲೆ ಬಿದ್ದರೆ ಸಾಕೆಂಬ ಕೃತಾರ್ಥ
ಭಾವದಲ್ಲಿ ಭಕ್ತರು ಮುಳುಗಿದ್ದರು. ಏನಾದರೂ ಅರ್ಥವಾಗಬಹುದಾ ಅಂತ ಕೇಳಿಸಿಕೊಳ್ಳಲು
ಪ್ರಯತ್ನಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಏಕಾಗ್ರತೆ ಭಂಗವಾಗಿ ಹೋಯ್ತು.

ಅಲ್ಲಿ ನೇತು ಬಿಟ್ಟಿದ್ದ ಫ್ಯಾನುಗಳ ಮೇಲೆ; ಟ್ಯೂಬ್ ಲೈಟುಗಳ ಮೇಲೆ; ಕಾಣಿಕೆ ಹುಂಡಿಗಳ
ಮೇಲೆ; ಬರೆದಿದ್ದಂತಹ ದಾನವಂತರ ಹೆಸರುಗಳು ಮತ್ತು ವಿಳಾಸವನ್ನು ಓದುತ್ತಾ ಹೋದೆ. ಎಲ್ಲಾ
ಮುಗಿದು ಹೋಯ್ತು. ಆದರೂ ಕಥೆ ಮುಗಿಯುವ ಲಕ್ಷಣಗಳು ಕಾಣಿಸಲಿಲ್ಲ. ಹೇಳೋರಿಗೆ ಮರ್ತೊಗಲ್ಲ,
ಕೇಳೋರಿಗೆ ಅರ್ಥವಾಗಲ್ಲ ಎಂಬಂತಿತ್ತು. ರವೆ ಉಂಡೆ ಪಾತ್ರೆ ನನ್ನನ್ನು ಹಿಡಿದು
ಕೂರಿಸಿತ್ತಾದರೂ ಸ್ವಲ್ಪ ಹೊತ್ತಿನಲ್ಲಿ ನನ್ನ ತಾಳ್ಮೆಯ ಕಟ್ಟೆಯೂ ಒಡೆದು ಹೋಯ್ತು. ರವೆ
ಉಂಡೆಯ ಮೇಲೊಂದು ತೀಕ್ಷ್ಣ ದೃಷ್ಟಿ ಬೀರಿ ಹೊರಡಲು ಅನುವಾದೆ.

ರಾಮು 'ಯಾಕೋ. ?' ಅಂತ ಕೇಳ್ದ. 'ನೀನು ಕೇಳಪ್ಪ ನಾನು ಹೋಗ್ತೇನೆ. ಚಕ್ಲಿ ಹೊಳೆ ನೋಡಬೇಕು
ನಾನು' ಅಂದೆ.

' ಹಂಗೆಲ್ಲಾ ಹೋಗೋ ಹಂಗಿಲ್ಲ' ಅಂದ. ' ಯಾಕೋ. ? ' ಅಂದಿದ್ದಕ್ಕೆ ' ಕಥೆ ಮಧ್ಯದಲ್ಲಿ
ಕೇಳುವುದನ್ನು ಬಿಟ್ಟು ಹೋದರೆ, ಅವರಿಗೆ ಕೆಡುಕು ಉಂಟಾಗುತ್ತೆ. ಆ ಪಾಪ ಪರಿಹಾರ ಆಗಬೇಕು
ಅಂದ್ರೆ ನೀನು ಪುನಃ ಖುದ್ದಾಗಿ ಸತ್ಯನಾರಾಯಣ ಕಥೆ ಹೇಳಿಸಬೇಕು. ' ಅಂತ ಚೋಕ್ ಕೊಟ್ಟ.
ನನಗೂ ಸಿಕ್ಕಾಪಟ್ಟೆ ಕೋಪ ಬಂತು.

' ಮೋಸ; ವಂಚನೆ; ಅನ್ಯಾಯ; ಮಿತ್ರದ್ರೋಹ; ನಾನೇನ್ ಕಥೆ ಕೇಳ್ತೇನೆ ಅಂತ ಹೇಳಿದ್ನ. ನನ್ನ
ಪಾಡಿಗೆ ನಾನು ಹೋಗ್ತಾ ಇದ್ದೆ. ಹಿಡ್ಕೊಂಡು ಬಂದು ಎಮೋಷನಲ್ ಬ್ಲಾಕ್-ಮೇಲ್ ಮಾಡ್ತೀಯ.
ಹೋಗಲೋ ನಾನು ಹೋಗ್ತೇನೆ. ' ಅಂದೆ.

'ನೋಡು ಚೇತು, ನನ್ನ ಮಾತು ಕೇಳು. ಹಠ ಮಾಡಬೇಡ. ಒಬ್ಬೊಬ್ಬನೇ ಅಲೀತ ಇರ್ತೀಯ. ಏನಾದ್ರೂ
ಹೆಚ್ಚು ಕಮ್ಮಿ ಆದ್ರೆ ಏನ್ ಕಥೆ. ? ಇನ್ನೊಂದ್ ಸ್ವಲ್ಪ ಹೊತ್ತಿರು. ಕಥೆ ಮುಗಿದು
ಬಿಡತ್ತೆ' ಅಂದ.  ಏನೋ ಫ್ರೆಂಡು ಅಷ್ಟು ಒತ್ತಾಯ ಮಾಡಿದ್ನಲ್ಲ ಅಂತ ಕೂತೆ. ನಿಜವಾಗಲು
ಸ್ವಲ್ಪ ಮಟ್ಟಿಗೆ ನನ್ನೊಳಗೆ ಅಳುಕು ಮೂಡಿತು. ಯಾವನಿಗೆ ಬೇಕು. ? ಈ ವಿಷಯ ಯೋಚನೆ
ಮಾಡ್ತಾ; ಹೋಗ್ತಾ ಹೋಗ್ತಾ ಏನಾದ್ರೂ ಅಪಘಾತ ಆಗಿ ಸತ್ತೋಗಿ ಬಿಟ್ರೆ, ಕೊನೆಗೆ ನನ್ನದು
ಒಂದು ಕಥೆ ಸೇರಿಸಿಬಿಡ್ತಾರೆ.

'ಅಲ್ಲೋ ಕಥೆ ಅರ್ಧಕ್ಕೆ  ಬಿಟ್ಟು ಎದ್ದು ಹೋದರೆ, ಆಕ್ಸಿಡೆಂಟು ಆಗುತ್ತೆ ಅಂತ ಯಾರಪ್ಪಾ
ನಿನಗೆ ಉಪದೇಶ ಮಾಡಿದ್ದು. ' ಅಂತ ಕೇಳಿದ್ದಕ್ಕೆ ' ಅದು ಈ ಕಥೆಯಲ್ಲಿಯೇ ಬರುತ್ತೆ
ಕಣೋ..ಯಾವುದೋ ಒಂದು ಅಧ್ಯಾಯದಲ್ಲಿ ಅದರ ಬಗ್ಗೆ ಹೇಳ್ತಾರೆ. ಯಾರೋ ಒಬ್ಬ ಕಥೆ ಅರ್ಧಕ್ಕೆ
ಬಿಟ್ಟು ಹೋಗ್ತಾನೆ. ಅವನಿಗೆ ಜೀವನದಲ್ಲಿ ನಾನಾ ಬಗೆಯ ಕಷ್ಟಗಳು ಮುತ್ತಿಕೊಳ್ತವೆ. ಆಗ
ಅವನು ಈ ಕಥೆಯನ್ನ ಪುನಃ ಎಲ್ಲರಿಗೂ ಓದಿಸಿದ ಮೇಲೆ ಪಾಪ ಪರಿಹಾರ ಆಗುತ್ತೆ. ಆನಂತರವೇ,
ಅವನು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳ್ತಾನೆ. '

ರಾಮುವಿನ ಮಾತನ್ನೇ ನಂಬುವ ಹಾಗಿದ್ದರೆ, ಇದೆಂತಹ ದುರಂತ. ಎಂತಹಾ ಘೋರ ಅನ್ಯಾಯ;
ದೌರ್ಜನ್ಯ. ಪುರಾಣವನ್ನು, ತಿರುಚುತ್ತಾ ಬಂದಿರುವ ಶಾಸ್ತ್ರ ಪ್ರವೀಣ ಧರ್ಮಾಂದ ಪುರೋಹಿತರ
ಡಿಕ್ಷನರಿಯಲ್ಲಿ ಇನ್ನೂ ಎಂತೆತಹಾ ಕನ್ನಿಂಗ್ ಅಧ್ಯಾಯಗಳಿವೆ. ಎಲ್ಲಾ ಸೇರಿಕೊಂಡು,
ಸಹನಾಮೂರ್ತಿ ಭಗವಂತನನ್ನು, ದೌರ್ಬಲ್ಯಗಳಿರುವ ಹುಲು ಮಾನವನ ಮಟ್ಟಕ್ಕೆ ಇಳಿಸಿದ್ದಾರೆ.

ಸ್ವಲ್ಪ ಹೊತ್ತಿನಲ್ಲಿ ಕಥೆ ಮುಗಿಯಿತು. ಈ ಕಥೆಯನ್ನು  ಕೇಳಿದವರು, ಲೈಫಲ್ಲಿ ಬೊಂಬಾಟಾಗಿ
ಇರ್ತಾರೆ ಅಂತ ಹೇಳಿದ್ದನ್ನ ಕೇಳಿ ಭಕ್ತರು ಪಾವನ ಆಗಿ ಹೋದರು. ನನಗಂತೂ ಕಬೀರನ
ಮುತ್ತಿನಂತಹ ದೋಹೆ ನೆನಪಾಯಿತು. 'ರಾಮ ರಾಮ ರಾಮ ಅಂದ ಮಾತ್ರಕ್ಕೆ ಮುಕ್ತಿ ಸಿಗುವ
ಹಾಗಿದ್ದರೆ,  ಸಕ್ಕರೆ; ಸಕ್ಕರೆ; ಸಕ್ಕರೆ; ಅಂತ ಹೇಳಿ ಬಾಯಿ ಸಿಹಿ ಮಾಡ್ಕೋಳಿ '.
ರವೆಉಂಡೆಯಂತದ್ದನ್ನು ತಿಂದು ಬಾಯಿ ಸಿಹಿ ಮಾಡಿಕೊಂಡು ವಿಶ್ವರೂಪ ದರ್ಶನ ತೋರಿಸುತ್ತಿದ್ದ
ಭಗವಂತ ನಾರಾಯಣನಿಗೂ, ಗುಡಿಯೊಳಗೆ ಕೂತಿದ್ದ ಮುದ್ದಿನ ಗಣಪತಿಗೂ ಕೈ ಮುಗಿದು  'ದೇವರೇ
ವಿದ್ಯಾ ಬುದ್ದಿ ಕೊಡಪ್ಪಾ ' ಅಂತ ಕೇಳಿ ಹೊರ ಬಂದೆ. ನನ್ನ ಚಕ್ಲಿಹೊಳೆ ಪ್ರಯಾಣ ವಿಘ್ನ
ಇಲ್ಲದೇ ಮುಂದುವರೆಯಿತು.

Monday, November 12, 2012

ಕಪ್ಪು ಗುಲಾಬಿ


ಅದೊಂದು ಗೋವಾದ ಪ್ರೈವೇಟ್ ಬೀಚು.
ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು.
ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!!
ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ.
ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ.
'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ.

' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ.

'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು.

'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ.

ಇಬ್ಬರೂ ಎದ್ದು ಹೊರಟರು.

ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು
' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' .

'ಯಾಕೆ..? ನಾನೇನ್ ಮಾಡಿದೆ..?' ಎಂದ.

'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್ಕೆ!!. ?' ಅವನ ತಲೆಗೆ ಮೊಟಕಿದಳು!!.

'ಅದಕ್ಕೇನೀಗ!! ಸುಂದರವಾಗಿರೋದು ವಸ್ತುನೆ ಆಗಲಿ, ಹುಡುಗಿನೆ ಆಗಲಿ!! ತನ್ಮಯತೆ ಇಂದ ನೋಡ್ತೇನೆ.
ಅದನ್ನ ಬಿಟ್ಟು ಅವರಿಗೆ ಗೊತ್ತೇ ಆಗದೆ ಇರೋ ಹಂಗೆ, ನೋಡಿಯು ನೋಡದಂಗೆ .. ನಿಮ್ಮ ತರ ಓರೆ-ಗಣ್ಣು ಮೋರೆ-ಗಣ್ಣು ಮಾಡ್ಕೊಂಡು ನೋಡಕ್ ಬರಲ್ಲ!!'

'ನಾನೇನು ಹಂಗೆಲ್ಲ ನೋಡಲ್ಲ!!' ತಣ್ಣಗೆ ಹೇಳಿದಳು.

'ಜನರಲ್ ಆಗಿ ಹುಡುಗಿಯರ ಬಗ್ಗೆ ಹೇಳ್ದೆ!! ನಿನ್ನ ಬಗ್ಗೆ ಅಲ್ಲ.' ಎಂದ

' ನಿನಗೇನೊ ಗೊತ್ತು!! ಹುಡುಗೀರ ಬಗ್ಗೆ ಜನರಲ್ ಆಗಿ ಹೇಳೋದಕ್ಕೆ!! '

' ನನಗೇನೂ ಗೊತ್ತಿಲ್ಲ. ಆದರೆ ಒಂದು ಸಂಶೋಧನೆ ಪ್ರಕಾರ ಹುಡುಗಿಯರಿಗೆ 'ವೀವಿಂಗ್ ಆಂಗಲ್' ಜಾಸ್ತಿ ಇದೆಯಂತೆ.
ನೂರ ಅರವತ್ತು ಡಿಗ್ರಿ ಕ್ಲಿಯರ್ ವಿಶನ್ ಇದ್ರೆ, ಇನ್ನು ನಲವತ್ತು ಡಿಗ್ರಿ ಪ್ಸೂಡೋ ಕವರೇಜ್ ಇರುತ್ತಂತೆ. ಹಿಂದೆ-ಪಕ್ಕದಲ್ಲಿ ಬರ್ತಾ ಇರೋರನ್ನ ಕೂಡ, ತಲೆ ತಿರುಗಿಸದೇ ಗಮನಿಸೋ, ಗುರುತು ಹಿಡಿಯೋ ಸಾಮರ್ಥ್ಯ ಇರುತ್ತಂತೆ. ಅದಕ್ಕೆ ನೀವು ಯಾರನ್ನ ನೋಡಿದ್ರು , ಅದು ಅವರಿಗೆ ಗೊತ್ತಾಗಲ್ಲ. '

'ಯಾವ ರೀಸರ್ಚು ಆ ತರಹ ಹೇಳಿದ್ದು.'

'ಬ್ಯಾಚುಲರ್ ಹುಡುಗರ ಲ್ಯಾಬಲ್ಲಿ ಇಂತಹ!! ಥೀಸಿಸ್ ಗಳು ತುಂಬಾನೆ!! ಪಬ್ಲಿಷ್ ಆಗ್ತಾ ಇರುತ್ವೆ. ಆದರೆ ಇಂತವನ್ನ ಯುನಿವರ್ಸಿಟಿಗಳು ಒಪ್ಪಿಕೊಳ್ಳೋದಿಲ್ಲ .'

'ಎಲ್ಲಾ ಸುಳ್ಳು!! ಹಂಗೆಲ್ಲ ಏನೂ ಇಲ್ಲ. ನಿಮ್ಮ ಖುಷಿಗೆ!! ನೀವು ಹಂಗೆಲ್ಲಾ ಅಂದ್ಕೊತೀರ!!. ಹುಡುಗಿ ನೋಡದೆ ಇದ್ದರೂ!! ನೋಡಿದ್ಲು ಅನ್ನೋ ಫೀಲ್ ಬೇಕಲ್ಲಾ.'

'ಇದು ತಪ್ಪು ಕಲ್ಪನೆ ಅಂತೀಯ..? ಎಲ್ಲಿ ಹಂಗಾದ್ರೆ!! ನೀನು ಮುಂದೆ ಹೋಗು. ನಾನು ಹಿಂದೆ ಹಿಂದೆ ಬರ್ತೇನೆ.... ಈಗಲೇ ಟೆಸ್ಟು ಮಾಡಿ ಸರ್ಟಿಫೈ ಮಾಡಿ ಬಿಡೋಣ.' ಅವಳ ಹಿಂದಕ್ಕೆ ಹೋಗುತ್ತಾ ಹೇಳಿದ.

'ಬೇಡಪ್ಪ!! ನೀನು ಜಗಮೊಂಡ.. ಅಕಸ್ಮಾತ್ ಸೋತ್ರೆ .. 'ನಿನಗೆ ಸರಿಯಾಗಿ ಕಣ್ಣೇ ಕಾಣ್ಸಲ್ಲ' ಅಂತ ಹೇಳಿ ಹಾರಿಕೊಳ್ತಿಯ.' ಎಂದಳು.

ಇಬ್ಬರೂ ಸುಮ್ಮನಾದರು. ಆದರು ಅವಳು ತನ್ನ ಕಣ್ಣು ಗುಡ್ಡೆಗಳನ್ನು ಅಂಚಿಗೆ ದೂಡುತ್ತಾ ತನ್ನ ಭುಜದ ನೇರಕ್ಕೆ ಇರುವುದನ್ನು ಗಮನಿಸಲು ಪ್ರಯತ್ನಿಸುತ್ತಿದ್ದಳು.
ಅವಳ ಸೋಲದ ಕಣ್ಣುಗಳನ್ನು ನೋಡಿ ಅವನು ನಗಲು ಪ್ರಾರಂಭಿಸಿದ. ಮುಷ್ಠಿ ಬಿಗಿ ಮಾಡಿ ಅವನ ಬೆನ್ನಿನ ಮೇಲೊಂದು ಹೊಡೆದಳು.

" ತುಂಬಾ ವರುಷಗಳಿಂದ ಒಂದು ಗುಲಾಬಿ ಗಿಡ ಬೆಳೆಸ್ತಾ ಇದ್ದೆ. ಮೊನ್ನೆ ಪುಟ್ಟದಾಗಿ ಒಂದು ಬಡ್ ನಿಂದ ಮೊಗ್ಗು ಬಂತು.
ಕೊನೆಗೂ ಒಂದು ಹೂವು ಬಿಡ್ತಲ್ಲಾ ಅಂತ ತುಂಬಾನೇ ಖುಷಿ ಆಯ್ತು!! ಆದರೆ ನನ್ನ ಹಣೆ ಬರಹ ಚೆನ್ನಾಗಿರಲಿಲ್ಲ. ಬಂದಿದ್ದು ಕೆಂಪು ಗುಲಾಬಿ ಅಲ್ಲ. ಕಪ್ಪು ಗುಲಾಬಿ." ವಿನೋದ ಹೇಳುತ್ತಾ ಹೋದ.

" ಕಪ್ಪು ಗುಲಾಬಿ ತುಂಬಾನೆ ಸ್ಪೆಷಲ್ ರೋಜ್ ಅಂತೆ. ಒಳ್ಳೇದಲ್ವಾ .." ಎಂದಳು.

" ಹಾ!! ಅದು ಸ್ಪೆಷಲ್!! ನಾನು ಬಯಸಿದ್ದು ಕಪ್ಪು ಗುಲಾಬಿ ಅಲ್ವಲ್ಲಾ..? " ಎಂದ.

ಅವಳಿಗೆ ಅರ್ಥವಾಗಲಿಲ್ಲ. ಇಬ್ಬರ ಮಧ್ಯೆ ಮೌನ ಆವರಿಸಿತು.
ತಣ್ಣನೆಯ ಗಾಳಿ ಸುಯ್ಯೋ ಎಂದು ಬೀಸುತ್ತಿತ್ತು.
ಕೆಳಗಿಳಿದು ಬರುತ್ತಿದ್ದ ಸೂರ್ಯ ಕಡಲು ಸಮೀಪಿಸುತ್ತಿದ್ದಂತೆ ತನ್ನ ಕಿರಣಗಳ ಅಗಾಧ ಬಾಹುಗಳನ್ನು ಒಳಗೆ ಎಳೆದು ಕೊಳ್ಳುತ್ತಾ ಕೆಂಪಗಾಗುತ್ತಿದ್ದ.

'ನಮ್ಮ ಮನೇಲಿ ನನ್ನ ಮದುವೆ ಮಾಡ್ತಾ ಇದಾರೆ.' ಆವರಿಸಿದ್ದ ಮೌನಕ್ಕೊಂದು ಡಿ ಟಿ ಎಸ್ ಎಫೆಕ್ಟು ಕೊಟ್ಟು ಹೇಳಿದಳು.

'ಹೇಯ್ ಕಂಗ್ರಾಟ್ಸು!!' ಎಂದ. ಸೂರ್ಯ ಮುಳುಗುವ ಧಾವಂತದಲ್ಲಿದ್ದ.

'ನಂಗೆ ಈಗ್ಲೆ ಮದ್ವೆ ಬೇಡ ಅಂತ ಇದೀನಿ.ಆದರೆ ಇಬ್ಬರು ಹುಡುಗರು ಬಂದು ನೋಡ್ಕೊಂಡು ಹೋಗಿದಾರೆ.
ಫೇಸ್ ಬುಕ್ಕಲ್ಲಿ ಮುಖ ನೋಡಿ!! ಸೀದಾ ಮನೆಗೆ ಬಂದಿದ್ರು ಹೆಣ್ಣು ಕೇಳೋದಕ್ಕೆ.' ಎಂದಳು.

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ ಕಂಪನಿಯಿಂದ, ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ
ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು. ಅಲೆಯಿಂದ
ದೂರದಲ್ಲಿ. ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ.

ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. ‘ಏನಿದು ತಾಜಾ ಮಹಲ ಅಥವಾ ರಾಧ
ಮಂಟಪಾನ. ?’ ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ.

‘ ಎರಡೂ ಅಲ್ಲ ’ ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. ‘ವಿನು
ಒಂದು ವಾಕ್ ಹೋಗಿ ಬರೋಣ. ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು
ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ’

Monday, October 29, 2012

ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್. ನೋ ಚೌಕಾಸಿ

ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸಂಧಿ ಕಾರ್ಯಕ್ರಮಕ್ಕೆ ಹೊರಟಿದ್ದೆ. ಧೂಳು ಹಿಡಿದಿದ್ದ
ಅಪ್ಪನ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿಂದ ಒರೆಸಿ
ಬೈಕು ಹತ್ತಿ ಹೊರಟೆ. ಹಳೆ ಪೋಸ್ಟ್ ಆಫೀಸು ರೋಡಲ್ಲಿ ಬೈಕು ನಿಲ್ಲಿಸಿದವನು, ಹಿಮ್ಮಡಿಯ
ಸೋಲ್ ಕಿತ್ತು ಹೋದ ಚಪ್ಪಳಿಯನ್ನು ಎಳೆದು ಹೆಜ್ಜೆ ಹಾಕುತ್ತಾ ಗಾಂಧಿ ಬಜಾರಿನ ಕಡೆಗೆ
ನಡೆದೆ. ಕಿತ್ತು ಹೋಗಿದ್ದ ಚಪ್ಪಲಿಯನ್ನು ಕಸದ ತೊಟ್ಟಿಗೆ ಬಿಸಾಡಿ, ಬರಿ
ಪಾದರಕ್ಷೆಗಳದ್ದೇ ಅಂಗಡಿಗಳಿರುವ ಒಂದು ಬೀದಿಯೊಳಗೆ ನಡೆದೆ. ಸಾಲು-ಸಾಲು ಅಂಗಡಿಯವರು,
ತಮ್ಮಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಿದ್ದರು. ಯಾವುದೋ ಒಂದು ಅಂಗಡಿಯೊಳಗೆ
ನುಗ್ಗಿದೆ.

'ಹೇ ಯಾರಪ್ಪ ಅಲ್ಲಿ. ಸಾಬ್ ನಮ್ದು ಖಾಯಮ್ ಕಸ್ಟಮರು. ಸ್ವಲ್ಪ ನೋಡ್ರಿ ಇಲ್ಲಿ ' ಎಂದ.
ಇವರುಗಳ ಮುಖ ನೋಡುತ್ತಿದ್ದುದೇ ಮೊದಲ ಸಲ. ಮೊದಲ ವಿಸಿಟ್ ಗೆ ಖಾಯಂ ಕಸ್ಟಮರ್
ಆಗಿಬಿಟ್ಟೆ.  'ಏನ್ ಸಾರ್. ? ಯಾವ ಟೈಪ್ ಚಪ್ಲಿ ಕೊಡ್ಲಿ. ' ಎಂದ.


' ಯಾವುದಾದ್ರು ಸರಿ, ಚಪ್ಲಿ ಹಾಕಿದ್ರೆ ನಾನು ಅದನ್ನ ಹಾಕಿಕೊಂಡಿರೋದು
ಗೊತ್ತಾಗಲೇಬಾರದು, ಅಂತದ್ದು ತೋರ್ಸು' ಎಂದರೆ 'ನೀವು ಚಪ್ಲಿ ಹಾಕಿಕೊಳ್ಳದೇ ಓಡಾಡೋದು
ವಳ್ಳೇದು ಸಾರ್. ' ಎಂದು ನಕ್ಕ. ಕೌಂಟರ್ ಇಷ್ಟ ಆಯ್ತು. ಬಹುಷಃ ನಾನು ಕೇಳಿದ ರೀತಿಯಲ್ಲೇ
ತಪ್ಪಿತ್ತು.

ಕೈಲೊಂದು ಜೊತೆ ಚಪ್ಪಲಿ ಹಿಡಿದು 'ನೋಡಿ ಸಾರ್ ಇದು ಹಂಡ್ರೆಡ್ ಪರ್ಸೆಂಟ್ ಪ್ಯೂರ್
ಲೆದರ್ರು ಫುಲ್ಲು ಕಂಫರ್ಟು ' ಎಂದ. ಕಾಲ ಬಳಿ ಹಿಡಿದು, ಹಾಕಿಕೊಳ್ಳುವಂತೆ
ಪ್ರಚೋದಿಸುತ್ತಿದ್ದವನ ಕೈಯಿಂದ ಚಪ್ಪಲಿಯನ್ನು ತೆಗೆದುಕೊಂಡು ನೋಡುತ್ತಾ ಹೇಳಿದೆ.
'ಪ್ಯೂರ್ ಲೆದರ್ ಆದ್ರೆ ಬೇಡ ಕಣ್ರಿ ಪ್ರಾಣಿಗಳ ಚರ್ಮ ಸುಲಿದು ಮಾಡಿರೊ ಚಪ್ಪಲಿ. ಬೇಗ
ಸವೆಯೋದೆ ಇಲ್ಲಾ. ಹಾಕಿ ಹಾಕಿ ಬೇಜಾರಾಗಿಬಿಡತ್ತೆ.'

'ಹೇ ಲೆದರ್ ಎಲ್ಲಿಂದ ಬಂತು ಸಾರ್ ಯಾವ್ ನನ್ಮಗ ಕೊಡ್ತಾನೆ ಇನ್ನೂರು-ಮುನ್ನೂರಕ್ಕೆಲ್ಲ
ಪ್ಯೂರ್ ಲೆದರ್ರು. ಇದು ಕಂಪನಿದು ಮಾಲು. ಸಿಂಥೆಟಿಕ್ಕು ' ಎಂದ. ದೋಸೆಯನ್ನು ಮಗುಚಿ
ಹಾಕಿದಷ್ಟೆ ಸಲೀಸಾಗಿ, ಮಾತು ತಿರುಗಿಸಿದನು.

'ಸರಿ ಕೊಡಪ್ಪಾ ಅದೇನ್ ನೋಡೋಣ' ಅಂತ ಕಾಲಿಗೆ ಹಾಕ್ದೆ. ಇಷ್ಟ ಆಯ್ತು. ' ಇದನ್ನೇ ಪ್ಯಾಕ್
ಮಾಡು' ಅಂದೆ.

' ಕಲರ್ ಇದೆ ಇರ್ಲಾ ಅಥವಾ ಬ್ಯಾರೆ ಯಾವುದಾದ್ರು ಬೇಕಾ. ?' ಅಂದ  ' ಅದನ್ನೇನು ತಲೆ
ಮೇಲೆ ಇಟ್ಕೋಬೇಕ. ಹಾಕ್ಕೊಳೋದು ಕಾಲಿಗೆ, ಯಾವುದಾದ್ರೇನು. ನನಗೆ ಕನಫ್ಯೂಸ್ ಆಗೋಕೆ
ಮೊದ್ಲು ಪ್ಯಾಕ್ ಮಾಡು. ಇಲ್ಲ ಅಂದ್ರೆ ನಿಮ್ಮ ಅಂಗಡಿನಲ್ಲಿರೋ ಎಲ್ಲಾ ಚಪ್ಪಲಿಯನ್ನು
ತೆಗೆಸಿ ಬಿಡ್ತೇನೆ. ' ಅಂದೆ.

'ಸರಿ ಸಾರ್ ಹಂಗಾದ್ರೆ ಎಂಟು ನೂರಾ ತೊಂಬತ್ತೊಂಬತ್ತು ರೂಪಾಯಿ. ನಿಮಗೆ ಅಂತ
ತೊಂಬತ್ತೊಂಬತ್ತು ಡಿಸ್ಕೌಂಟು ಎಂಟು ನೂರು ರುಪಾಯಿ ಕೊಡಿ. ' ಅಂದ.

'ಒಂದು ನಿಮಷಕ್ಕೆ ಮುಂಚೆ ಇದರ ಬೆಲೆ ಇನ್ನೂರೋ-ಮುನ್ನೂರೋ ಅಂದೆ. ಈಗ ನೋಡಿದ್ರೆ ಎಂಟು
ನೂರಾ ತೊಂಬತ್ತೊಂಬತ್ತು ಅಂತಿಯ. ಇದು ಮೋಸ '

'ನಾವು ಮಾತ್ಗೆ ಹೇಳಿದ್ನೆಲ್ಲಾ ನೀವು ಹಿಂಗೆ ಹಿಡ್ಕಂಡ್ ಬುಟ್ರೆ ಹೆಂಗೆ ಸಾರ್. ಇದು
ಕಂಪನಿದು ಮಾಲು ಅಂತ ಹೇಳುದ್ನಲ್ಲ. ನೀರಲ್ಲಿ ನೆನೆದರು ಹೊಲಿಗೆದು ಬಿಟ್ಕಳಾದಿಲ್ಲ'
ಎಂದ.
ಬರಿ ಮೇಲ್ನೋಟಕ್ಕೆ ವಸ್ತುಗಳ ಬೆಲೆ ಆಗಲಿ ಅಥವಾ ಮನುಷ್ಯರ ಬೆಲೆ ಆಗಲಿ ನಿಗದಿ ಪಡಿಸೋದು
ಬರೋದಿಲ್ಲ. ಆದರು ಈ ಅಂಗಡಿಯವನು ಜಾಸ್ತಿ ಬೆಲೆ ಹೇಳ್ತಾ ಇದಾನೆ ಅನ್ನಿಸ್ತು. ಇನ್ನು
ಸ್ವಲ್ಪ ಕಡಿಮೆ ಕೇಳೋಣ. ಕೊಟ್ಟಿಲ್ಲ ಅಂದ್ರೆ ಪೂರ್ತಿ ದುಡ್ಡು ಕೊಟ್ಟರೆ ಆಯ್ತು
ಅಂದುಕೊಂಡೆ.

'ನಿಮ್ಮ ಅಂಗಡಿಯಲ್ಲಿ ಚೌಕಾಸಿ ಮಾಡೋ ಹಂಗಿಲ್ವಾ. ? ಎಲ್ಲಾ ಫಿಕ್ಸು ರೇಟಾ. ?' ಎಂದೆ. ಈ
ಥರ ಕೇಳಬಾರದಿತ್ತೇನೋ.. ಆದರೂ ಚೌಕಾಸಿ ಮಾಡೋದಕ್ಕೆ ಮುಂಚೆ ಅದು ಅಲೌಡಾ ಅಥವಾ ಇಲ್ಲವಾ
ಅನ್ನೋದು ಕ್ಲಿಯರ್ ಮಾಡಿಕೊಳ್ಳಬೇಕಿತ್ತು.

' ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್. ಬಕ್ರಾ ಕಸ್ಟಮರ್ ನ ನೋಡಿ ರೇಟು ಫಿಕ್ಸು
ಮಾಡಕ್ಕೆ ನಾವು ಹೊಟ್ಟೆಗೆ ಸಗಣಿ ತಿನ್ನಲ್ಲ. ನೀವೆ ಅಲ್ಲ ನಿಮ್ಮದು ಅಪ್ಪಂಗೆ ಅಮ್ಮಂಗೆ
ಮಗೂಗೆ ಕಳ್ಸಿದ್ರು ನಾವು ಒಂದೇ ರೇಟು ಹೇಳೋದು. ' ಎಂದ. ಅವನು ಬಕ್ರಾ ಕಸ್ಟಮರ್ ಅಂತ
ಹೇಳಿದ್ದು ಯಾಕೋ. ? ನನಗೆ ಹೇಳಿದಂಗೆ ಅನ್ನಿಸ್ತು. ಅದಕ್ಕೆ ಒಂದು ಕಮ್ಮಿ ರೇಟು ಕೇಳಿಯೇ
ಬಿಡೋಣ. ಅಂತ ನಿರ್ಧರಿಸಿದೆ. ಕಮ್ಮಿ ಕೇಳೋದೇ ಆದ್ರೆ ಎಷ್ಟು ಅಂತ ಕೇಳೋದು. ? ತುಂಬಾ
ಕಡಿಮೆ ಬೆಲೆಗೆ ಕೇಳಿದ್ರೆ ಬಯ್ದು ಗಿಯ್ದು ಬಿಟ್ರೆ ಕಷ್ಟ. ತುಂಬಾ ಜಾಸ್ತಿ ರೇಟಿಗೆ ಕೇಳಿ
ಅವನು ತಕ್ಷಣ ನಾನು ಕೇಳಿದ ರೇಟಿಗೆ ಕೊಟ್ಟು ಬಿಟ್ರೆ. 'ಅಯ್ಯಯ್ಯೋ ನಾನು ಇನ್ನು ಸ್ವಲ್ಪ
ಕಡಿಮೆ ರೇಟಿಗೆ ಕೇಳಿದ್ರೆ ಬಗ್ತಾ ಇದ್ದ ಅನ್ಸತ್ತೆ. ಮೋಸ ಹೋಗಿಬಿಟ್ಟೆ' ಅಂತ ಚಪ್ಪಲಿ
ನೋಡಿದಾಗಲೆಲ್ಲಾ ಅನ್ನಿಸಿ ಬಿಡತ್ತೆ. ಏನಪ್ಪಾ ಮಾಡೋದು ಅಂತ ಯೋಚಿಸಿದೆ.

ನಮ್ಮಮ್ಮ ತರಕಾರಿ ತಗೊಳುವಾಗ ಅಂಗಡಿಯವನು ಹತ್ತು ರುಪಾಯಿ ಕೇಜಿ ಅಂದ್ರೆ ಐದು ರೂಪಾಯಿ
ಯಿಂದ ಚೌಕಾಸಿ ಶುರು ಮಾಡ್ತಾಳೆ. ಅಮ್ಮ ಹಂಗೆ ಕೇಳಿದ ತಕ್ಷಣ ನನಗೆ ಗಾಬರಿ ಆಗಿ
ಬಿಡ್ತಿತ್ತು. ಯಾಕಂದ್ರೆ ರೀಟೇಲ್ ಇಂಡಸ್ಟರಿಯಲ್ಲಿ (ಚಿಲ್ಲರೆ ವ್ಯಾಪಾರಿಗಳಲ್ಲಿ) ನೂರು
ಪ್ರತಿಶತ ಲಾಭಕ್ಕೆ ಯಾವುದೇ ವಸ್ತುಗಳನ್ನು ಮಾರೋದಕ್ಕೆ ಸಾಧ್ಯ ಇಲ್ಲ. ಅದು ಯಾವ
ಕಾನ್ಫಿಡೆನ್ಸಿನ ಮೇಲೆ ಅಮ್ಮ ಅರ್ಧಕ್ಕಿಂತ ಕಮ್ಮಿ ಬೆಲೆಯಿಂದ ತನ್ನ ಚೌಕಾಸಿ
ಪ್ರಾರಂಭಿಸುವಳೋ ತಿಳಿಯದು. ವಸ್ತುವಿನ ಬೆಲೆ, ಎಲ್ಲೋ ಇವರಿಬ್ಬರ ಮಧ್ಯದಲ್ಲಿರುತ್ತದೆ.

ಇವರ ಚೌಕಾಸಿಯ ಹಗ್ಗ-ಜಗ್ಗಾಟದಲ್ಲಿ ಕೊನೆಗೆ ತಾನು ಮೋಸ ಹೋಗಲಿಲ್ಲವೆಂಬ ಕೃತಾರ್ತ ಭಾವನೆ
ಗ್ರಾಹಕನಿಗೆ ಮೂಡಬೇಕು. ಅದಕ್ಕಿಂತ ಹೆಚ್ಚಾಗಿ ಇದೊಂದು ಜೀವನ ಶೈಲಿ. ಮಾಲ್-ಗಳಲ್ಲಿ
ಶಾಪಿಂಗ್ ಮಾಡುವ ಹವ್ಯಾಸ ಕೆಲವರಿಗಿರುವಂತೆ ರಸ್ತೆ ಮೇಲೆ ಚೌಕಾಸಿ ಮಾಡುವ ಹವ್ಯಾಸ ಇನ್ನು
ಕೆಲವರಿಗೆ. ಕೊನೆಗೆ ಕೊಂಡು ಕೊಂಡ ಆ ವಸ್ತುಗಳು ತಮ್ಮ ಅಷ್ಟು ವರುಷಗಳ ಚೌಕಾಸಿ ಕಲೆಯ
ಅಭಿವ್ಯಕ್ತಿಯಂತೆ ಗ್ರಾಹಕನ ಮನೆಯ ಸ್ಟೋರ್ ರೂಮ್ ಸೇರಿ ಬಿಡುತ್ತವೆ.  ಅಮ್ಮನ
ಫಾರ್ಮುಲದಂತೆ ಅರ್ಧ ರೇಟಿನಿಂದ ಚೌಕಾಸಿ ಶುರು ಮಾಡುವ ಧೈರ್ಯ ನನಗಿರಲಿಲ್ಲ.

' ಎಂಟು ನೂರು ರೂಪಾಯಿ ಜಾಸ್ತಿ ಆಯ್ತು ಆರು ನೂರು ರುಪಾಯಿಗೆ ಕೊಡಿ. ' ಎಂದಷ್ಟೇ
ಹೇಳಿದೆ. ಅವರ ಮುಂದೆ ಮತ್ತೆ ಏನೆಲ್ಲಾ ಮಾತುಗಳನ್ನು ಆಡಬಹುದು ಎಂದು ತಿಳಿಯಲಿಲ್ಲ. ಅಮ್ಮ
ಆಗಿದ್ದರೆ ತಾನು ವಂಶ ವೃಕ್ಷದ ಪ್ರತಿ ಜೀವಕ್ಕೂ ಇದೇ ಅಂಗಡಿಯಿಂದ ಚಪ್ಪಲಿ
ಖರೀದಿಸಿದ್ದಾಗಿಯು. ನೀವು ಖಾಯಂ ಕಸ್ಟಮರಿಗೆ ಮೋಸ ಮಾಡುತ್ತಿರುವುದಾಗಿಯೂ. ಏನೆಲ್ಲಾ
ಹೇಳಿ ಬಿಡುತ್ತಿದ್ದಳು.

ನಾನು ಆರು ನೂರು ರೂಪಾಯಿ ಎನ್ನುತ್ತಲೇ, ಅಂಗಡಿಯವನು ಚಪ್ಪಲಿ ಬಾಕ್ಸು ಓಪನ್ ಮಾಡಿ
ಕೈಯಲ್ಲಿ ಚಪ್ಪಲಿ ಹಿಡ್ಕೊಂಡು ಬರಬರನೆ ನನ್ನ ಬಳಿಗೆ ಬಂದ. ಹತ್ತಿರ ಬಂದವನೇ
ಚಪ್ಪಲಿಯನ್ನು ಹಿಂದಕ್ಕೂ ಮುಂದಕ್ಕೂ ಬಗ್ಗಿಸುತ್ತಾ, ನೆಲದ ಮೇಲೆ ಬಾರಿಸುತ್ತಾ ಹೇಳಿದ -
' ನೋಡಿ ಸಾರ್ ಇಂತ ಮಾಲಿಗೆ ಹೋಗಿ ನೀವು ಚೌಕಾಸಿ ಮಾಡ್ತೀರಲ್ಲ. ನೀವು ನಮ್ಮ ಸ್ಪೆಷಲ್
ಕಸ್ಟಮರ್ ಅಂತ ನಿಮಗೆ ತುಂಬಾನೆ ಕಮ್ಮಿ ಹೇಳಿದೀವಿ ಸಾರ್. ಹೋಗ್ಲಿ ತಗಳಿ. ನಮಗೆ ಲಾಭಾನೆ
ಬೇಡ. ಕಂಪನಿ ರೇಟು ಏಳುನೂರು ರೂಪಾಯಿ. ಕಸ್ಟಮರ್ ಕಳ್ಕೋಬಾರ್ದು ಅನ್ನೋ ಒಂದೇ ಒಂದು
ಕಾರಣಕ್ಕೆ ಕೊಡ್ತಾ ಇದೀನಿ. ತಗೋಳಿ ಸಾರ್ ಏಳು ನೂರು ಕೊಡಿ' ಎಂದ.
ನನ್ನ ಚೌಕಾಸಿ ಕುಶಲತೆಯಿಂದ ನೂರು ರೂಪಾಯಿ ಉಳಿಸಿಬಿಟ್ಟೆ.

Saturday, October 27, 2012

ಕವಿಶೈಲ - ಸುಂದರ ಅನುಭವ

ಇದು ಮಲೆನಾಡಲ್ಲ
ಕವಿಯ ಕಾಡು!!
ಇಲ್ಲಿ
ಹುಟ್ಟಿರುವುದು ಮಹಾ ಕಾವ್ಯಗಳಲ್ಲ!!
ಆ ಕವಿ ಕೂತಿದ್ದಾಗ ಈ ಕಾಡಿಗೆಸೆದ
ಬೇಸರದ ಕಲ್ಲುಗಳು!!

ಕವಿಶೈಲದ ಕುವೆಂಪು ಬಂಡೆಯನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಸಾಲುಗಳಿವು.
ತಮ್ಮೊಳಗಿರುವ ಎಲುಬುಗಳಿಗಿಂತಲೂ ಹೆಚ್ಚು ಸಂಖ್ಯೆಯ ಗುಂಪು ಕಟ್ಟಿಕೊಂಡು ಎಲ್ಲಾ ಗುಂಪುಗಳಿಗೂ ಆಕ್ಟೀವ್ ಮೆಂಬರ್ ಆಗಿ ತೊಳಲಾಡುವ ಮತಿಜೀವಿ ಸಂಘ ಜೀವಿ ಎನಿಸಿಕೊಂಡ ಮನುಷ್ಯ ಸಂಕುಲಕ್ಕೆ
'ವಿಶ್ವಮಾನವ ಸಂದೇಶ' ವನ್ನು ಸಾರಿದ ಮಹಾನ್ ಚೇತನ ಕುವೆಂಪುರವರು. ಎಷ್ಟು ಉನ್ನತ ಮಟ್ಟದ ಆಲೋಚನೆ .
ಗೆಳೆಯ ಶಶಾಂಕ ಒಮ್ಮೆ ಹೇಳಿದ್ದ - ' ಸೌಂಧರ್ಯದ ಏಕತಾನತೆ ಕುವೆಂಪು ಅವರನ್ನು ಬಿಗಿಯಲಿಲ್ಲವೇಕೆ..?' ಎಂದು.
ಅಂದ್ರೆ ಸಮುದ್ರ ತೀರದಲ್ಲಿ ಹುಟ್ಟಿದವನಿಗೆ ಸಮುದ್ರದ ಅಲೆಗಳು ಅದೆಷ್ಟು ಮೋಡಿ ಮಾಡಲು ಸಾಧ್ಯ!!
ಅಂತೆಯೇ ಮಲೆನಾಡಿನಲ್ಲಿ ಹುಟ್ಟಿದ್ದರೂ ಕೊನೆವರೆಗೂ ಆ ಮಲೆನಾಡಿನ ಯಾತ್ರಿಕನಂತೆಯೇ ಪ್ರತಿ ಸೊಬಗನ್ನು ಕೌತುಕದಿಂದ ಅನುಭವಿಸಿ
ಅದರ ಹೂರಣವನ್ನು ಓದುಗನಿಗೆ ಹಿಡಿ ಹಿಡಿ ಯಾಗಿ ಹಂಚಿದ ಮಹಾನ್ ಚೇತನ.

ಸರ್ವ ಮತಗಳಿಗಿಂತಲೂ
ಶುದ್ಧ ಹೃದಯದ ಮತ್ತು ಸನ್ಮತೀಯ ಮತವೇ ಮಹೋನ್ನತವಾದದ್ದು .
ಆ ಗುರು
ಈ ಆಚಾರ್ಯ
ಆ ಧರ್ಮಶಾಸ್ತ್ರ
ಈ ಮನುಸ್ಮೃತಿ
ಏನೇ ಹೇಳಲಿ ;
ಎಲ್ಲವನ್ನೂ ವಿಮರ್ಶಿಸುವ,
ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.
ಈಶ್ವರನು ನಮ್ಮಲ್ಲಿಯೂ ಇದ್ದಾನೆ.
ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುಧಿಯಲ್ಲಿಯು ಪ್ರಕಾಶಿಸುತ್ತವೆ.
ಆ ಪ್ರಕಾಶವೇ ಮತಿ.
- ಶಾಸ್ತ್ರಬದ್ಧವಾಗಿ ಮೂಲಭೂತವಾದಕ್ಕೆ ಬಂಡಾಯದ ಬಿಸಿ ಮುಟ್ಟಿಸುವ ಕುವೆಂಪು ಅವರ ಈ ಮಾತುಗಳು ಜೀವನಸತ್ಯ!! ಕೂಡ ಹೌದು.


ಇನ್ನೊಂದು ಕಡೆ ಸಾಹಿತ್ಯದ ಜರೂರತ್ತಿನ ಬಗ್ಗೆ ಈ ರೀತಿ ಬರೆಯುತ್ತಾರೆ -

ಜನ ಜೀವನವನ್ನು ಎಚ್ಚರಿಸುವ ತೂರ್ಯ ಧ್ವನಿ ಸಾಹಿತ್ಯದಿಂದ ಬರುತ್ತದೆ.
ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ.
ಕೃತ ವಿಧ್ಯರಾದ ಯುವಕರು ತಮ್ಮ ಆಶೆ ಆಕಾಂಕ್ಷೆಗಳನ್ನು ಬರೆದು ಓದಿ ಮತ್ತೆ ಮತ್ತೆ ಹೇಳಿ ಹೇಳಿ,
ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು.


ಕವಿತೆ ಹುಟ್ಟುವ ಬಗ್ಗೆ ಅವರ ಮಾತುಗಳು -

ಪ್ರತಿಭಾ ಸಂಪನ್ನನಾದ ಕವಿಯ ಎದೆಯಲ್ಲಿ
ಉದ್ರೇಕವಾದಾಗ ಹಸಿರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ,
ನಿರಾಯಾಸವಾಗಿ ಚಿಮ್ಮಿ ಹೊಮ್ಮುವ ಭಾವನಾತ್ಮಕ ಲಲಿತ ಪದಗಳ ಮನೋಹರವಾದ
ಇಂಪಾದ ವಸಂತ ನೃತ್ಯವೇ, ಸುಗ್ಗಿಯ ಕುಣಿತವೇ, ನಿಜವಾದ ಕವಿತೆ!
ಕವಿತೆಗೆ ಕಲ್ಪನಾ ಪ್ರತಿಭೆ ಬೇಕೇಬೇಕು;
ಭಾವವೇ ಅದರ ಆತ್ಮ, ಶಬ್ದಗಳೇ ಅದರ ದೇಹ.
ಅದು ಆತ್ಮವೇ ತನಗೆ ತಾನೇ ಆಡಿಕೊಳ್ಳುವ ಮಾತು.

ಇಂತಹ ಅದೆಷ್ಟೋ ಮುತ್ತಿನ ನುಡಿಗಳನ್ನು ಕವಿಶೈಲದ ಗೋಡೆ, ಕಲ್ಲು ಬಂಡೆಗಳ ಮೇಲೆ ಕಾಣಬಹುದು.

ನಂತರ ಕವಿಶೈಲದಲ್ಲಿ ನಾನು ಹುಡುಕಾಡಿದ್ದು ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವನ್ನು .
ನನಗೆ ಓದಿನ ಗೀಳು ಹತ್ತಿದ್ದು ತೇಜಸ್ವಿಯವರ ಪುಸ್ತಕಗಳಿಂದಲೇ!!
ಶಿವಮೊಗ್ಗದ ಸೆಂಟ್ರಲ್ ಲೈಬ್ರರಿಯಲ್ಲಿ ಅಪ್ಪಿ ತಪ್ಪಿ ನನ್ನ ಕೈಗೆ ಸಿಕ್ಕ ಅವರ 'ಮಹಾಪಲಾಯನ' ಪುಸ್ತಕವನ್ನು ಉಸಿರು ಹಿಡಿದು ಓದಿ ಮುಗಿಸಿದ್ದೆ.
ಅಲ್ಲಿಂದಾಚೆ ತೇಜಸ್ವಿಯವರ ಯಾವ ಪುಸ್ತಕವನ್ನು ಶಿರ್ಷಿಕೆ ಕಡೆಗೆ ಗಮನವನ್ನೂ ಹರಿಸದೆ ಕೊಳ್ಳುತ್ತಿದ್ದೆ.
ಅವರ ಪುಸ್ತಕವನ್ನು ಕೊಳ್ಳುವಾಗ ಪುಟ ಸಂಖ್ಯೆ ಮತ್ತು ಬೆಲೆ ತಾಳ ಮೇಳ ನೋಡಿ ಯಾವುದು ವರ್ತ್ ಅನ್ನಿಸುತ್ತಿತ್ತೋ ಅಂತದನ್ನು ಕೊಳ್ಳುತ್ತಿದ್ದೆ .
ಸಾಹಿತ್ಯದ ಗಂಧ ಗಾಳಿ ಇಲ್ಲದಿದ್ದರೂ ನಾವು ಕೂಡ ನಮ್ಮ ಅನುಭವಗಳಿಗೆ ಅಕ್ಷರ ರೂಪ ಕೊಡಬಹುದು ಎಂಬ ಆತ್ಮವಿಶ್ವಾಸ ಪುಟಿದೊಡೆದದ್ದು ತೇಜಸ್ವಿ ಅವರ ಬರಹಗಳಿಂದ.
ಅವರದು 'ತಮ್ಮ ಪುಸ್ತಕಗಳಾಚೆಗು' ಕಾಡಿದ ಮಹಾನ್ ವ್ಯಕ್ತಿತ್ವ.


ಇಷ್ಟೇ ಅಲ್ಲದೆ
ಪ್ರವಾಸಿಗನಿಗೂ ಕವಿಶೈಲ ಮುದ ನೀಡುತ್ತದೆ.
ಕವಿಮನೆ!! ಮಲೆನಾಡಿನ ಟಿಪಿಕಲ್ ತೊಟ್ಟಿಮನೆಯ ದರ್ಶನ ಮಾಡಿಸುತ್ತದೆ.
ಅಲ್ಲಿಂದ ಬೆಟ್ಟದ ಮೇಲೆ ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ!!
ಕಲಾ ಗ್ಯಾಲರಿ!!
ಎಲ್ಲಕ್ಕಿಂತ ಹೆಚ್ಚಾಗಿ ಈ ಭಾಗದಲ್ಲಿ ಎಲ್ಲೂ ನಿಲ್ಲದೆ ರಸ್ತೆಯ ಮೇಲೆ ತಲೆ ಹೊರಗೆ ಹಾಕ್ಕೊಂಡು ಸಂಚರಿಸುತ್ತಿದ್ದರು ಸಾಕು!! ಮಲೆನಾಡು ನಿಮ್ಮನ್ನು ತೋಯಿಸಿ ಬಿಡುತ್ತದೆ.


kavimane ( photo courtesy: MALENADIGE BAA(kuvempu memorial bio-park))


Wednesday, October 17, 2012

ಒಂದು ಸಣ್ಣ ನಡಿಗೆ, ಸಿಹಿಗಬ್ಬಿನ ಕಡೆಗೆ

ವೀರಪ್ಪನ್ ಇದ್ದ ಸತ್ಯಮಂಗಳ ಕಾಡಿನ ಮಧ್ಯೆ ನಗರಗದ ನಾಗರೀಕತೆಯಿಂದ ಬಹುದೂರ ... ತಮ್ಮದೇ ಖಯಾಲಿಯಲಿ ಬದುಕುತ್ತಿರುವ ಕ್ರೇಜಿ ಜನಗಳ ಊರು ಹತ್ತೂರು.
 
ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ, ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ. ರಾಜೇಂದ್ರ ಮೈಸೂರಿನಲ್ಲಿ ರಿಸರ್ವ್ ಬ್ಯಾಂಕ್ ನಲ್ಲಿ ನೌಕರಿ ಮಾಡುತ್ತಿರುವ ಹತ್ತೂರಿನ ಒಬ್ನೇ ಡಿಗ್ರಿ ಹೋಲ್ಡರ್.

ಆಗತಾನೆ ಒಂದು ಹೆಂಗಸನ್ನು ಬೈಕಿನಿಂದ ಕೆಳಗಿಳಿಸಿ ಮಾತನಾಡಿಸುತ್ತಿದ್ದ ಗಿರೀಶನು ರಾಜೇಶನ ಬರವನ್ನು ದೂರದಿಂದಲೇ ಗಮನಿಸಿ!! ಬೈಕನ್ನು ಅಲ್ಲೇ ಬಿಟ್ಟು.. ರಾಜೇಶನ ಕಡೆಗೆ  ದೌಡಾಯಿಸಿ ಬಂದ.
 

ಗಿರೀಶ!! ಹತ್ತೂರಿನ ಶಿವದೇವಸ್ಥಾನದ ಪೂಜಾರಿ.
 

ಇವನ ರಾಸಲೀಲೆಗೆ ಬಲಿಯಾದ ಹೆಣ್ಮಕ್ಕಳ ಲೆಕ್ಕ ಇವನಿಗೇ ತಿಳಿಯದು. ಆದರೆ  ದೊಡ್ಡ ಅಯ್ನೋರ ಮಗ ಅಂತೇಳಿ, ಗಿರೀಶನಿಗಿದ್ದ ಮಾನ ಮತ್ತು ಮರ್ಯಾದೆಯ ಹಿಂದಿನ ಲಾಜಿಕ್ ಮಾತ್ರ ಗಿರೀಶನ ಚಡ್ಡಿ ದೋಸ್ತು, ರಾಜೇಂದ್ರನಿಗೆ ಇದುವರೆಗೂ ಅರ್ಥವಾಗಿಲ್ಲ.

"ಹೊಯ್!! ಏನಡಾ ರಾಜೆ!! ಯಾವಾಗ್ ಬಂದೆ ಊರಿಗೆ ..?"

''ಬೆಳಗ್ಗೆ ಬಂದೆ ಡಾ!! ಬಾ ಹಿಂಗೆ ನಮ್ಮ ಚಿಕ್ಕಪ್ಪನ ಆಲೆಮನೆ ಹತ್ರ ಹೋಗ್ ಬರೋಣ!! ಇವತ್ತೇನೋ ಕಬ್ಬು ಕೊಡ್ತಾರಂತೆ"

"ಹೌದಾ.. ಹೋಗುಪ್ಪಾ .. ಸರಿ" ಎಂದ ಗಿರೀಶ .

"ಅಲ್ಲಡಾ ಗಿರೀಶ!! ಯಾರಡ ಅದು ನಿಂಜೊತೆ ಮಾತಾಡ್ತಾ ಇದ್ದಿದ್ದು.
ನಿನ್ನ ಮನ್ಮಥನ ಮೆರವಣಿಗೆ ಯಾವಾಗಲು ಚಾಲೂನಲ್ಲೇ ಇರುತ್ತಲ್ಲೋ.
ಥೂ!! ನಿನ್ನ ಜನ್ಮಕ್ಕೆ ಬೆಂಕಿ ಹಾಕ!!!.
ನಿನ್ನ ಮನೆಯೊಳಗೆ ಬಿಟ್ಕೊಳೋದೆ ಮಹಾಪಾಪ.
ಅಂಥದ್ರಲ್ಲಿ ನಮ್ಮ ಜನ ನಿನ್ನ ಅಯ್ನೋರೆ!! ಅಯ್ನೋರೆ!! ಅಂತ ಕರೆದು ಪಾದ ತೊಳೆದು ಪೂಜೆ ಮಾಡ್ತಾರೆ." ಉಗಿದ ರಾಜೇಂದ್ರ.

"ಮೊದಲನೇ ಪಾಯಿಂಟು!! ನೀನು ನನ್ನ ವಿಕೃತವಾಗಿ ನೋಡಬೇಡ. ನಾ ಯಾರಿಗೂ ಬಲವಂತ ಮಾಡೋನಲ್ಲ. ಎಂಟರ್ ಟೆನ್ ಮೆಂಟು ಅಷ್ಟೇ. ಒಂಥರಾ ಸಮಾಜ ಸೇವೆ.  ಇನ್ನು ಜನಗಳಿಗೆ ಯಾಕೆ ಅ೦ತೀಯ ಬಿಡು ರಾಜೆ.
ಕೈಯಲ್ಲಿರೋದು ಕೆಟ್ಟದ್ದು ಅಂತ ಅನ್ನಿಸದೆ ಇದ್ರೆ ಅದು ಅಸಹ್ಯ ಅನಿಸಲ್ಲ.
ಪಾಪ!! ನಾನು ಇ೦ತವನು ಅ೦ತ ಯೋಚನೆ ಮಾಡಿದ್ರುನು, ಪಾಪ ಸುತ್ತಿಕೊಳ್ಳುತ್ತೆ ಅ೦ತ ಹೆದರ್ತಾರೆ. ಆಚಾರಗಳ ಬೇರು!! ಬಾಳ ಆಳದಲ್ಲಿ ನಂಬಿಕೆ ಅನ್ನೋ ಸೆಲೆಯನ್ನ ಹುಡುಕ್ಕಂಡ್ ಹೋಗಿರತ್ತೆ.
ಆದರೂ ಏನೇ ಹೇಳು.  ನಿನ್ನ ಹಂಗೆ ಬಯ್ಯೋನಿಲ್ಲ!! ನನ್ನ ಹಂಗೆ ಬಯ್ಸಿಕೊಳ್ಲೋನಿಲ್ಲ ಮತ್ತೆ. "

"ಪೌರೋಹಿತ್ಯಕ್ಕೆ ತಲೆ ತಗ್ಗಿಸಿ ಬದುಕ್ತಾ ಇರೋ!!
ನಮ್ಮ ಕುತ್ತಿಗೆ ಮೇಲಿರೋ ಒ೦ದು ಜನರೆಷನ್ನ ಒ೦ದು ಕಡೆಯಿ೦ದ ಕೊಚ್ಚಿ ಹಾಕಿ ಬಿಡಬೇಕು ಅನ್ನೋ ಅಷ್ಟು ಕೋಪ ಬರುತ್ತೆ.
ಆವಾಗ್ಲಾದ್ರು ನಿಮಗೆ ಸರಿಸಮಾನವಾಗಿ ಕೂತು ಮಾತಾಡೋ ನನ್ನ ಯ೦ಗ್ ಜನರೆಷನ್ನು ಮಾತ್ರ ಉಳ್ಕೊಳತ್ತೆ.
ಏನ್ ಮಾಡೋದು....? ಬೇರೆಯವರಿಗೆ ಹೇಳೋದಿರಲಿ ...ನಮ್ಮ ಮನೆಯವರಿಗೆ ನಾವು ಹೇಳಕ್ಕಾಗಲ್ಲ!!" ಹತಾಶೆ ಹೊರಹಾಕಿದ ರಾಜೇಂದ್ರ .

"ಹೋಗ್ಲಿ!! ಬಿಡೋ..  ಜಾಸ್ತಿ ಆಯಾಸ ಮಾಡ್ಕೋಬೇಡ.
ಎರಡು ದಿನಕ್ಕೆ ಅ೦ತ ಊರಿಗೆ ಬರ್ತೀಯ. ಬಂದಾಗೆಲ್ಲಾ ಕ್ರಾಂತಿ ಕ್ರಾಂತಿ ಅಂತ ಬಡಬಡಿಸ್ತಾ ಇರ್ತೀಯ.
ಲೋ!! ಇಲ್ಲಿ೦ದು ಕಲರ್ ಕಲರ್ ಕಥೆಗಳನ್ನ ಕೇಳಿ,,, ಮಜಾ ತಗೋ೦ಡ್ ಹೋಗೋದ್ ಬಿಟ್ಟು !! ಎನಡಾ!!! ನಿಂದು!! ಯಾವಾಗಲು ರೋದನೆ."

" ಆದರೂ ಗಿರೀಶ!!! ಈ ರೀತಿ ಶೋಕಿ ಮಾಡಿಕೊ೦ಡು ಓಡಾಡೋದೇ ಆಯ್ತು ನಿನ್ನ ಜೀವನ. ಈ ಪೂಜೆ-ಗೀಜೆ ಕೆಲ್ಸಾನೆಲ್ಲ ನಿಮ್ಮಪ್ಪ೦ಗೆ ಬಿಟ್ಟು ಕೊಟ್ಟು, ಯಾವುದಾದರು ಕೆಲಸ ನೋಡಿಕೊ೦ಡು ಮೈಸೂರಿಗೆ ಯಾಕೆ ಬರಬಾರದು...?
ಹೆಂಗೂ ನಾನು ಅಲ್ಲೇ ಇದೀನಿ."

" ನಿನಗಿ೦ತ ಓದಲ್ಲಿ ಮು೦ದೆ ಇದ್ರೂ, ಮಗನೆ!! ನೀನು!! ಸ್ಕಾಲರ್ - ಷಿಪ್ಪು , ರಿಸರ್ವೇಷನ್ನು ಅ೦ದುಕೊ೦ಡು ಗೋರ್ಮೆ೦ಟು ನೌಕರಿ ಗಿಟ್ಟಿಸಿಕೊ೦ಡೆ.
ದೇವಸ್ಥಾನದಲ್ಲಿ ಘ೦ಟೆ ನಾನು ಬಾರಿಸಿದರು , ದೇವರು ವರ ಕೊಟ್ಟಿದ್ದು ನಿನಗೆ."

"ಗರ್ಭಗುಡಿ ಹೊರಗೆ ನಿಂತಿರೋ ಹೆಣ್ಣು ದೇವರ ಕಡೆ ನೋಡಿಕೊಂಡು ಗಂಟೆ ಬಾರಿಸಿದರೆ ದೇವ್ರು ಹೆಂಗೋ .. ವರ ಕೊಡ್ತಾನೆ ."

ಇಬ್ಬರೂ ನಕ್ಕರು.


"ಅಲ್ನೋಡೋ!! ಚಾ೦ದಿನಿ, ನಜ್ಮಾ ಬರ್ತಾ ಇದಾರೆ . " ಎ೦ದ
ಗಿರೀಶ.

ಕೈ ಕಾಲು ಕುಯ್ಯೋ ಕಬ್ಬಿನ ಊರಿನಲ್ಲಿ ಯಾರಪ್ಪಾ ಅದು ಚಾ೦ದಿನಿ, ನಜ್ಮಾ ಎನ್ನುತ್ತಾ ರಾಜೇಂದ್ರ ಅಚ್ಚರಿ ವ್ಯಕ್ತಪಡಿಸಿದ.


"ನಮ್ಮೂರು ಹೋಟ್ಲು ರುದ್ರನ ಹೆ೦ಡ್ತೀರು ಚೆನ್ನಿ, ನಾಗಿ ಕಣೋ..
ಯಾವುದೋ ಆಲೆಮನೆ ಕಡೆ ಹೋಗ್ತಾ ಇದಾರೆ ಅನ್ಸತ್ತೆ. ತಡಿ ಸ್ವಲ್ಪ ರೆಗಿಸ್ತೀನಿ .." ಎನ್ನುತ್ತಾ... ಗಿರೀಶ ಮು೦ದೆ ಮು೦ದೆ ಬ೦ದ.

"ಲೋ!! ಗಿರೀಶ!! ಹಲ್ಕಟ್ ಸುವರ್!!
ನೀನು ಒಬ್ಬನೇ ಇದ್ದಾಗ ಏನಾದ್ರೂ ಮಾಡ್ಕೋ.
ಈಗ ನನ್ನ ಮರ್ಯಾದೆ ತೆಗಿಬೇಡ. ನಿನ್ನ ಕಾಲಿಗೆ ಬೀಳ್ತೇನೆ ...
ಬಾಯಿ ಮುಚ್ ಕೊ೦ಡ್ ಸುಮ್ನೆ ಬಾ " ಎನ್ನುತ್ತಾ ರಾಜೇ೦ದ್ರ ಮುಜುಗರದಿ೦ದ ಬಳಲಾಡಿದ.

" ಅವರೇನು ಭಾರಿ ಪತಿವ್ರತೆಯರು ಅ೦ತ ಹಿ೦ಗಾಡ್ತಿಯೇನೊ!!
ನೋಡ್ತಾ ಇರು ... ಈಗ ಏನ್ ಮಾಡ್ತೀನಿ .." ಎನ್ನುತ್ತಾ ಗಿರೀಶ ಅವರ ಬರವನ್ನೇ ಎದುರು ನೋಡುತ್ತಿದ್ದ.

ರಾಜೇಶನಿಗೆ ದಿಗಿಲು ಹೆಚ್ಚಾಗಿ 'ಮೊದಲೇ ಹುಚ್ ಮುಂಡೆ ಮಗ ಅದೇನ್ ಮಾಡ್ತಾನೋ.. 'ಎನ್ನುತ್ತಾ, ಎರಡು ಎರಡು ಹೆಜ್ಜೆ ಮುಂದೆ ಹಾಕಿ ನಡೆದ .

ಚೆನ್ನಿ ನಾಗಿ ಹತ್ತಿರಾಗುತ್ತಲೇ ಗಿರೀಶ ತನ್ನ ಎಂದಿನ ಪೋಲಿ ಮಾತುಗಳಿಂದ ಅವರನ್ನು ರೇಗಿಸಿದ.

ಚೆನ್ನಿ "ಹೇ!! ಸುಮ್ಕಿರಿ ಅಯ್ನೋರೆ!! ತಮಾಷೆ ಮಾಡಬ್ಯಾಡಿ. ಪಾಪ!! ಈ ಸ್ವಾಮೇರ ಮು೦ದೆಲ್ಲಾ ಏನು ನಿಮ್ಮದು " ಎನ್ನುತ್ತಾ ಗಿರೀಶನ ಸೋಟೆ ತಿರುವಿದಳು.

"ಹಾ!! ಪಾಪನ!! ... ಆ ಸ್ವಾಮೇರೆ ಕೇಳ್ತಾ ಇದ್ರು. ಚೆನ್ನಿ ಹೆ೦ಗೆ ಅ೦ತ !! " ಎನ್ನುತ್ತಾ ಗಿರೀಶ ಇನ್ನು ಏನನ್ನೋ ಹೇಳಲು ಹೋಗುತ್ತಿದ್ದ೦ತೆ,
ರಾಜೇ೦ದ್ರ ತಿರುಗಿಯೂ ನೋಡದೆ ಎದ್ದು ಬಿದ್ದು ಓಡಲು ಶುರು ಮಾಡಿದ.
ಇವನು ಓಡಿದ್ದನ್ನು ನೋಡಿ ಚೆನ್ನಿ ನಾಗಿ ನಕ್ಕರು.

ಗಿರೀಶ " ಅಯ್ಯೋ!! ನಿ೦ತ್ಕೋಳೊ ರಾಜೆ!! ಅವರೇನು ನಿನ್ನ ತಿನ್ನಲ್ಲ." ಎನ್ನುತ್ತಾ ರಾಜೇ೦ದ್ರನ ಹಿ೦ದೆ ಓಡಿದ.


***** ೧ ****** 


ಇವರು ಆಲೆಮನೆಗೆ ಬರುವ ಹೊತ್ತಿಗೆ ಸ೦ಜೆಯಾಗಿತ್ತು.
ಅಲ್ಲಿ ತೋಟದ ಆಳುಗಳಾದ ಸಿದ್ಧ!! ಮಾರ!! ಆಲೆಮನೆ ಕಬ್ಬಿನ ಕೋಲುಗಳನ್ನು ಹೂವಿನಿ೦ದ ಸಿ೦ಗರಿಸಿ ಪೂಜೆ, ನೈವೇದ್ಯ ಮಾಡಿದ್ದರು.

ಗಿರೀಶನನ್ನು ನೋಡುತ್ತಲೇ
"ಪೂಜೆ ಹೊತ್ತಲ್ಲಿ ಕರೆದು ಕಳಿಸಿರೋ ರೀತಿ ಬ೦ದುಬಿಟ್ರಲ್ಲಾ ಅಯ್ನೋರೆ. ನಮ್ಮ ಪುಣ್ಯ ಇದು." ಎನ್ನುತ್ತಾ ರಾಜೇ೦ದ್ರನ ಚಿಕ್ಕಪ್ಪ, ಚಿಕ್ಕಮ್ಮ - ಎಲೆ,ಅಡಿಕೆ ಕೈಗೆ ಕೊಟ್ಟು ಗಿರೀಶನ ಕಾಲುಗಳಿಗೆ ದೊಪ್ಪನೆ ಬಿದ್ದರು. ಎಲೆಯಡಿಕೆಯ ಮಧ್ಯೆ ಐವತ್ತೊಂದು
ರೂಪಾಯಿ ದುಡ್ಡು  ಇಡುವುದನ್ನು ಅವರು ಮರೆಯಲಿಲ್ಲ. 
 
ತನ್ನನ್ನು ಸರ್ವಶಕ್ತನ ಅಪರಾವತಾರವೆ೦ಬತೆ ಪೋಸು ಕೊಡುತ್ತಾ ಗಿರೀಶ ಅವರನ್ನು ಆಶೀರ್ವದಿಸಿದ. ಗಿರೀಶನ ಕಾಲಿಗೆ ಮೆತ್ತಿಕೊ೦ಡಿದ್ದ ಕರಿ ಜೇಡಿ ಮಣ್ಣು ಇವರಿಬ್ಬರ ಹಣೆಗೆ ಹತ್ತಿದ್ದನ್ನ ನೋಡಿ ರಾಜೇ೦ದ್ರನಿಗೆ ಹೊಟ್ಟೆ ತೊಳಸಿದ೦ತಾಗಿ ವಾಕರಿಕೆ ಬ೦ತು.

ಗಿರೀಶ ಮಾತ್ರ ಕ್ಷಣಕಾಲ ಮುಖದ ಮೇಲೆ ದೈವಿಕ ಮೌನವನ್ನು ಅಲಂಕರಿಸಿದ್ದ .
ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಇಬ್ಬರೂ ಅಲೆಮನೆಯಿ೦ದ ಹೊರ ನಡೆದರು.

" ಎಲ್ಲಾ ಬಿಟ್ಟು ಆ ಕೀಳು ಜಾತಿಯ ಸಿದ್ಧ!! ಮಾರನ!! ಕೈಯಲ್ಲಿ ಪೂಜೆ ಮಾಡಿಸ್ತಾ ಇದಾರಲ್ಲ..ರಾಜೆ .... ನಿಮ್ಮ ಮನೆಯವರಿಗೆ ಸ್ವಲ್ಪನಾದ್ರು ಬುದ್ಧಿ ಇದಿಯ.
ನಾವೆಲ್ಲಾ  ಸತ್ತು ಹೋಗಿದಿವೇನೋ...? ಹೇಳಿ ಕಳಿಸಿದ್ರೆ ಒಂದ್ ರೌಂಡ್ ಬಂದು ಪೂಜೆ ಮಾಡಿ ಹೋಗ್ತಿದ್ನಲ್ಲೋ ..? " ಎಂದ.

"ಲೋ!! ಮನ್ಷಾನೆನೊ ನೀನು.  ನನ್ನ ಹತ್ರ ಮತ್ತೆ ಉಗಿಸ್ಕೊಳಕ್ಕೆ ಹಿಂಗೆ ಕೇಳ್ತಾ ಇದಿಯ ನೀನು "

"ಇಲ್ಲಡಾ!! ಎಲ್ಲಾದಕ್ಕೂ ಒಂದು ನೀತಿ ನಿಯಮ ರೀತಿ ರಿವಾಜು ಅಂತ ಇರ್ತಾವೆ."ಎಂದ ಗಿರೀಶ .

"ಎನಡಾ!! ರೀತಿ ರಿವಾಜು !! ಪುಂಗಿ!!! ಬದನೇಕಾಯಿ !!
ನಿನಗೆ ಕ೦ಪೇರ್ ಮಾಡಿದ್ರೆ ಅವ್ರು ಎಷ್ಟೋ ಮೇಲು ಬಿಡು. ಯಾಕಂದ್ರೆ!! ಪದ್ಧತಿ ಸರಿ ಇಲ್ಲದೇ ಇದ್ದರೂ ಆ ಜಾಗದಲ್ಲಿ ಕೆಲಸ ಮಾಡಿಕೊಂಡು ಬದುಕಿರೋ ಅವರಿಗೆ!! ನಿನಗಿಂತ ಜಾಸ್ತಿ ಶ್ರದ್ಧೆ, ಭಕ್ತಿ ಇದೆ. ಆದೂ ಅಲ್ಲದೆ ಸಿದ್ಧ!! ಮಾರ!! ಅಥವಾ ಮತ್ಯಾರೋ ಆಲೆಮನೆ ಪೂಜೆ ಮಾಡಿದ್ರೆ, ಬರೋ ಬೆಲ್ಲ ಕಹಿ ಆಗಿರುತ್ತೆ. ಅದೇ ನಿಮ್ಮ೦ತ ದೈವಮಾನವರು ಪೂಜೆ ಮಾಡಿದ್ರೆ ಬರೋ ಬೆಲ್ಲ ಭಯ೦ಕರ ಸಿಹಿ ಆಗಿ ಇರುತ್ತಾ ...? " ಎ೦ದ ರಾಜೇ೦ದ್ರ.

ಇನ್ನು ಇವನ ಬಳಿ ವಾದ ಮಾಡಿ ಪ್ರಯೋಜನ ಇಲ್ಲವೆಂದು ಗಿರೀಶ ಸುಮ್ಮನಾದ.

Tuesday, October 16, 2012

ರಂಗಪ್ಪ; Slavery is in poor mens blood

ಓಣಿಯಲ್ಲಿ ನಿಲ್ಲಿಸಿದ್ದ, ಹೊಸ ಪಲ್ಸರ್ ಬೈಕು ಹೊರಗೆಳೆದು ಕೆಲಸಕ್ಕೆಂದು ಹೊರಡುತ್ತಿದ್ದೆ.  'ತಲೆಗೆ ಹಾಕ್ಕಂತರಲ್ಲ, ಅದುನ್ನ ಹಾಕ್ಕಂಡೆ ಹೋಗಪ್ಪ.  ' ಎಂದಳು ಅಜ್ಜಿ.  'ತಲೆಗೆ ಏನು ಹಾಕ್ಕಂತಾರಜ್ಜಿ. ? ' ಅಂದ್ರೆ 'ಅದೇ ಕಣಪ್ಪ ತಲೆಗೆ ಹಾಕ್ಕಾಂತಾರಲ್ಲ ಅದೇ ತಲ್ಮೆಟ್ಟು ' ಅಂದಳು. 

ಏನೆಂದು ಹೇಳಬೇಕು, ಅಜ್ಜಿಯ ನುಡಿಗಟ್ಟಿಗೆ. ಕಾಲಿಗೆ ಹಾಕ್ಕೋಳೋದು ಕಾಲ್ಮೆಟ್ಟು ಆದ್ರೆ, ತಲೆಗೆ ಹಾಕ್ಕೋಳದು ತಲ್ಮೆಟ್ಟು. ಒಡೆದು ನೋಡಿದರೆ ಅರ್ಥಗರ್ಭಿತವಾದ ಪದ ಎನ್ನಿಸಿದರೂ ಕೇಳುವುದಕ್ಕೆ ಅಷ್ಟೋಂದು ಸಹನೀಯವಲ್ಲ. 


ಮನೆಯಿಂದ ಕೇವಲ ನಾಲ್ಕು ಮೈಲಿ ದೂರವಿದ್ದ ನಮ್ಮ ಆಫೀಸು ತಲುಪಲು ಹತ್ತು ನಿಮಿಷವೂ ಹಿಡಿಯಲಿಲ್ಲ. ನಮ್ಮ ಡಿಪಾರ್ಟ್-ಮೆಂಟು ಕಾರು 'ಆನ್ ಡ್ಯೂಟಿ, ಭಾರತ ಸರ್ಕಾರ ' ಅನ್ನೋ ಶಿರೋನಾಮೆ ಬರೆದುಕೊಂಡು ಗೇಟಿನ ಬಳಿಯೇ ರಾರಾಜಿಸುತ್ತಿತ್ತು. ನನ್ನ ಮುದ್ದಿನ ಪಲ್ಸರು ಬೈಕನ್ನು ಬೇಸ್‍ಮೆಂಟ್ ಫ್ಲೋರಿನ ಕಡೆಗೆ ಚಲಾಯಿಸಿದೆ.

ಬೈಕು ನಿಲ್ಲಿಸುತ್ತಿರುವಾಗ ನಮ್ಮ ಕ್ಯಾಷುಯಲ್ ಲೇಬರ್ ರಂಗಪ್ಪಾ  'ನಮಸ್ಕಾರ ಸಾರ್ ' ಎಂದರು. ನಾನೂ ತಿರುಗ 'ನಮಸ್ಕಾರ' ಎಂದೆ. ನಮಸ್ಕಾರ ಹೊಡೆದು, ತುಕ್ಕು ಹಿಡಿದಿದ್ದ ತಮ್ಮ ಹಳೆ ಸೈಕಲನ್ನು ಬಟ್ಟೆಯಿಂದ ಒರೆಸುವ ಕೆಲಸದಲ್ಲಿ ರಂಗಪ್ಪ ಮಗ್ನರಾದರು. ರಂಗಪ್ಪನಿಗೆ ಸುಮಾರು ಐವತ್ತು ವರುಷ ವಯಸ್ಸು. ಡಿಪಾರ್ಟ್-ಮೆಂಟಿನಲ್ಲಿಯೇ ಮುಕ್ಕಾಲು ವಾಸಿ ಜೀವನ ಮುಗಿಸಿದ್ದಾರೆ. ನಿಲ್ಲಿಸಿ ಹೊರಡುವ ಮುನ್ನ, ಧೂಳಾಗಿದ್ದ ಬೈಕಿನ ಕಡೆಗೆ ನೋಡಿದೆ. ರಂಗಪ್ಪನ ಬಳಿ ಬಟ್ಟೆ ಪ ಡೆದು ಒರೆಸೋಣವೆಂದು ಅವರು ಮುಗಿಸುವುದನ್ನೇ ಕಾಯುತ್ತಾ ನಿಂತಿದ್ದೆ. 

ನನ್ನ ಬೈಕು ನೋಡಿದ್ರೆ ಒಂಥರಾ ಸಂಭ್ರಮ. ನಂದು ಬೈಕು. ನನ್ನ ಸ್ವಂತದ್ದು. ನಾನು ಅದರ ಓನರು. ಮೊನ್ನೆಯಷ್ಟೇ ಫುಲ್ಲು ಕ್ಯಾಷ್ ಕೊಟ್ಟು ಖರೀದಿಸಿದ ಹೊಸ ಬೈಕು. ಕೆಲಸಕ್ಕೆ ಸೇರಿದ ಮೂರು ವರುಷಗಳಲ್ಲಿ ಎಜುಕೇಶನ್ ಲೋನು ತಂಟೆ ತಾಪತ್ರಯಗಳನ್ನು ಮುಗಿಸಿ ನಾ ಪೂರೈಸಿಕೊಂಡ ನನ್ನ ಮೊದಲನೇ ವಿಶ್ಶು. ಇಂಜಿನಯರಿಂಗು ಓದುವಾಗ ಹಾಸ್ಟೆಲಿನಿಂದ ಕಾಲೇಜಿಗೆ ನಡಕೊಂಡೇ ಹೋಗ್ತಾ ಇದ್ದೆ. ಮಾನಸ ಗಂಗೋತ್ರಿ ಕ್ಯಾಂಪಸ್ ಒಳಗಿಂದ ನಡೆದು ಹೋಗುವುದು ಅನಿವಾರ್ಯ ಅಂದುಕೊಂಡರೂ, ಅಷ್ಟೇ ಎಂಜಾಯ್ ಮಾಡ್ತಿದ್ದೆ. ಬಡ್ಡಿಮಗ!! ಶ್ರೀನಿವಾಸ ರಾಜು ದಡಿಯ ಥರ ಇದ್ದ ದೊಡ್ಡ ಬೈಕಲ್ಲಿ, ನಾಲಕ್ಕು ವರ್ಷವೂ ನಾ ಬಾರೋ ರಸ್ತೆನಲ್ಲೇ ಬರ್ತಿದ್ದ. ಡೈಲಿ ಬಂದ್ರು, ಒಂದಿನಾನು ಹತ್ತಿಸಿಕೊಂಡು ಹೋಗಲಿಲ್ಲ. ನಾವು ಕೂಡ, ಫುಲ್ ರಾಯಲ್ ಆಗೇ ನಡಕೊಂಡ್ ಬರ್ತಿದ್ವಿ. ಆದರು ಒಂದೋದ್ ಸಾರಿ ಅನ್ಸತ್ತೆ, ನನ್ನ ಬೈಕು ತಗೊಂಡ್ ಅವನ ಹಿಂದೆ ಹೋಗಿ ಜೋರ್ ಹಾರನ್ ಮಾಡಬೇಕು ಅಂತ. ಇಂತಹ ಸ್ಯಾಡಿಸ್ಟು ಕಲ್ಪನೆಯಿಂದ ನಗೂನು ಬರತ್ತೆ. 

'ರಂಗಪ್ಪ ಸ್ವಲ್ಪ ಬಟ್ಟೆ ಕೊಡ್ರಿ ಬೈಕ್ ಒರೆಸಬೇಕು' ಅಂದೆ. 'ಸಾರ್ ನೀವ್ ಬೈಕ್ ಒರೆಸೋದ, ನೀವು ಹೋಗಿ ಸಾರ್ ನಾನೆ ಒರೆಸ್ತೀನಿ. ' ಎನ್ನುತ್ತಾ ಬೈಕಿನ ಕಡೆಗೆ ಬಂದರು. 

' ರೀ ನನ್ನ ಬೈಕ್ ಯಾಕ್ರೀ ನೀವ್ ಒರೆಸಬೇಕು. ಆ ಬಟ್ಟೆ ಕೊಡಿ ಸಾಕು. ನಾನೇ ಒರೆಸ್ಕೊತೀನಿ' ಅಂದೆ. ' ಅಯ್ಯೋ ನಾನ್ ಒರೆಸ್ತೀನಿ ಅಂದ್ನಲ್ಲ ಬಿಡಿ ಸಾರ್ ' ಎನ್ನುತ್ತಾ ನನ್ನ ಬೈಕಿಗೆ ಕೈ ಹಾಕಿದರು. ಒಂಥರಾ ಮುಜುಗರ ಆಯ್ತು. ರಂಗಪ್ಪಂಗೆ ನನ್ನ ವಯಸ್ಸಿನ ಮಗ ಇದಾರೆ. 

'ರಂಗಪ್ಪ ಅವರೇ ನಿಮ್ದೊಳ್ಳೆ ಕಥೆ ಆಯ್ತಲ್ಲ. ನಿಮಗೆ ಸಂಬಳ ಬರೋದು ಡಿಪಾರ್ಟ್-ಮೆಂಟು ಕೆಲಸಕ್ಕೆ. ಕೊಡಿ ಅದನ್ನ ನಾನು ಒರೆಸ್ಕೊತೀನಿ '

 'ಬರಿ ಬೈಕು ಒರೆಸೋದಕ್ಕೆ ಇಷ್ಟೆಲ್ಲಾ ದೊಡ್ಡ ದೊಡ್ಡ ಮಾತು ಹೇಳ್ತೀರಲ್ಲ ಸಾರ್ ನಿಮ್ದೊಳ್ಳೆ ' ಎನ್ನುತ್ತಾ ನಿರ್ಭಾವುಕನಾಗಿ ಬೈಕು ಒರೆಸುವುದರಲ್ಲಿ ತಲ್ಲೀನರಾದರು. ' 

Slavery is in poor men’s blood ' ಅನ್ನಿಸ್ತು. 'No honor for slave' ಅನ್ನೋದನ್ನ ಅವರ ಕುತ್ತಿಗೆ ಪಟ್ಟಿ ಹಿಡಿದು ಹೇಳಬೇಕು ಅನ್ನಿಸ್ತು. 

ರಂಗಪ್ಪ ಹೇಳಿದಂಗೆ ಇಷ್ಟು ಚಿಕ್ಕ ವಿಷಯಕ್ಕೆ ದೊಡ್ಡ ಫಿಲಾಸಫಿ ಬೇಕಾ. ? ಯಾಕೋ ಮಹಾತ್ಮ ಗಾಂಧಿ ಹೇಳಿದ್ದು ನೆನಪಾಯ್ತು - 'you can take my life but not my self respect'. 

Saturday, October 6, 2012

ಕಾವೇರಿ ತಳಮಳ(ಲೇಖನ)

ನನ್ನ ಸಹೋದ್ಯೋಗಿ ' ಏನ್ರೀ ಕಾವೇರಿ ಗಲಾಟೆ ನಡೀತ ಇದೆ. ಅದರ ಬಗ್ಗೆ ಏನಾದ್ರು ಬರಿತೀರ ಅಂದುಕೊಂಡಿದ್ದೆ. , ನೀವು ಇನ್ನು ಕವನದಲ್ಲೇ ಇದೀರ ' ಅಂತ ಕೇಳಿದ್ರು. 

'ನನಗೆ ಈ ವಿಷಯದ ಬಗ್ಗೆ ಅಷ್ಟು ಗೊತ್ತಿಲ್ಲ ರೀ. ಆದರು, ಅವರು-ಇವರು ಹೇಳಿದ್ದನ್ನ ಅವರವರ ಮಾತಿನಲ್ಲೇ ನನ್ನ ಫೆಸ್-ಬುಕ್ಕಲ್ಲಿ ಶೇರ್ ಮಾಡ್ತಾ ಇದ್ದೀನಲ್ಲ. ನನ್ನ ಸಾಮಾಜಿಕ ಬದ್ಧತೆಯನ್ನ ಪ್ರತಿ ಸಾರು ಟಾಮ್ ಟಾಮ್ ಹೊಡೆದುಕೊಂಡು ಹೇಳಬೇಕ.?' ಎಂದೆ. 

Sunday, September 9, 2012

ಜನಾಂಗೀಯ ನಿ೦ದನೆ

16/07/2007

16-07-2007 ಯುವದಸರ, ಮೈಸೂರು. ನರೇಶ್ ಐಯರ್ ರಸಸಂಜೆ ಕಾರ್ಯಕ್ರಮ ನೋಡಲು ಬಂದಾಗ ಸರಿ
ಸುಮಾರು ಎಂಟು ಗಂಟೆ. ಯುವರಾಜ ಕಾಲೇಜು ಮೈದಾನ ಜನರಿಂದ ತುಂಬಿತ್ತು. ಆದರು ನೆನ್ನೆಯಷ್ಟು
ಕಿಕ್ಕಿರಿದು ತುಂಬಿರಲಿಲ್ಲ. ನೆನ್ನೆಯ ದಿವಸ ಇದ್ದದ್ದಿ ಸುನಿಧಿ ಚೌಹಾನ್ ರಸಸಂಜೆ. ಅತ್ತ
ಸುನಿಧಿ ‘ಬೀಡಿ ಜಲೈ, ಜಿಗರ್ ಸೆ ಪಿಯಾ. ಜಿಗರ್ ಬಡಿ ಆಗ್ ಹೈ. ಥಡುಂ ನಾ ದಡುಂ. ’
ಅಂತಿದ್ದರೆ ಇತ್ತ ಯುವಸಮೂಹದ ಎದೆಗೆ ಬೆಂಕಿ ಇಟ್ಟಂತಾಗಿ ಕುಣಿಯುತ್ತಿದ್ದರು. ಅದೊಂದು
ಉದ್ರೇಕದ ಪೀಕ್ ಅಂದರೂ ತಪ್ಪಿಲ್ಲ. ಕಾರ್ಯಕ್ರಮದ ಹೊರ ನಡೆಯುತ್ತಿದ್ದ ಹೆಣ್ಣು ಮಕ್ಕಳು,
ಅಪ್ಪಿ ತಪ್ಪಿ ಪುಂಡ ಹುಡುಗರ ಮಧ್ಯೆ ಸಿಕ್ಕು ಗುಂಪಲ್ಲಿ ಗೋವಿಂದ ಎಂದು ಕೆಲವರು ಮುಟ್ಟಿ
ತಟ್ಟುವುದು, ಪೊಲೀಸರು ಬಂದಾಗ ಚೆಲ್ಲಾಪಿಲ್ಲಿಯಾಗಿ ಓಡುವುದು. ನಡೆದಿತ್ತು. ಈ
ಪುಂಡನಕ್ಕೆ ಭಾಷೆ, ಪ್ರಾಂತ್ಯ, ಜಾತಿಯ ಹಂಗಿಲ್ಲ. ಈ ರೀತಿಯ ಮೊಲೆಸ್ಟೇಶನ್ ಗಳು ನಮ್ಮ
ಮಧ್ಯೆ ನಡೆದಂತವು. ಯಾವುದೋ ಅಸ್ಸಾಮು, ಒರಿಸ್ಸಾದಲ್ಲಲ್ಲ.

Saturday, September 8, 2012

ಮುಗಿದ ಹೋರಾಟ

ನೀ ಬಿಟ್ಟು ಹೋದ ಮೇಲೆ ಬದಲಾಗಿದ್ದು ಬಹಳಷ್ಟು. ಎರಡು ವರುಷಗಳಲ್ಲಿ ಮೂರು
ಮುಖ್ಯಮಂತ್ರಿಗಳು ಬದಲಾದರು. ಸಾರಿ ಕಣೋ, ನಿನಗೆ ಅದರಲ್ಲೆಲ್ಲಾ ಆಸಕ್ತಿ ಇಲ್ಲ. ಸರಿ;
ಪಾರ್ವತಿ ಪರಮೇಶ್ವರ ದಾರಾವಾಹಿಯಲ್ಲಿ ಪಾರ್ವತಿ ಮತ್ತು ಪರಮೇಶ್ವರ ಇಬ್ಬರೂ
ಬದಲಾಗಿದ್ದಾರೆ. ಈಗ ಬಂದಿರೋ ಹೊಸಬರು ಪರವಾಗಿಲ್ಲ. ಇನ್ನು ಪೋಗೋ ನಲ್ಲಿ ಮಿಸ್ಟರ್ ಬೀನ್,
ಟಾಂ ಅಂಡ್ ಜೆರ್ರಿ ಎಪಿಸೋಡುಗಳು ಅವೇ ಹಿಂದೆ ಮುಂದೆ ಹಾಕ್ತಾ ಇರ್ತಾರೆ. ಪ್ರಪಂಚ
ಹೆಂಗಿದಿಯೋ ಹಂಗೇ ಇದೆ. ಜನ ಮಾತ್ರ ಆಗಾಗ 'ಪ್ರಳಯ ಆಗುತ್ತೆ ' 'ಎಲ್ಲರೂ ಒಟ್ಟಿಗೆ
ಸತ್ತೋಗಿ ಬಿಡ್ತೇವೆ ' ಅಂತ ಕಥೆ ಹೊಡಿತಾ ಇರ್ತಾರೆ. ಹೊಸದೇನಿಲ್ಲ. ಮತ್ತೆ ಇನ್ನೇನೂ
ಹೇಳಿಕೊಳ್ಳುವಂತದ್ದಿಲ್ಲ.

Saturday, September 1, 2012

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು.
ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು.
ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ.
ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು.
ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು.

ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು.
ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ.
ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ,
ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು.
ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು.
ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ
ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು
ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ
ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ,
ಇವರನ್ನು ಒಂದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತಂದಿಡಬೇಕು
ಎಂದು ಕುಹುಕವಾಡುತ್ತಿದ್ದರು.


ಪ್ರತಿ ಬಾರಿಯಂತೆ, ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ, ತುಂಗೆ
ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ
ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ,
ಕೂಡ್ಲಿಯಲ್ಲಿ ಬಂದು ಒಂದಾಗುವರು. ಇಲ್ಲಿಂದ ಮುಂದಕ್ಕೆ ಎರಡು ದೇಹ, ಒಂದು ಸೆಳೆತದಂತೆ
ತುಂಗಭದ್ರೆಯಾಗಿ ಮುಂದುವರೆಯುವರು. ಸರಳ ಮತ್ತು ವಿಮಲಾ, ತೆಳ್ಳಗೆ ಹರಿಯುತ್ತಿದ್ದ ನೀರಲಿ
ಕಾಲು ಮುಳುಗಿಸಿ, ದಾವಣಿಯನ್ನು ನೆನೆಯದಂತೆ ಕೈಯಲಿ ಬಿಗಿದು, ನದಿ ದಾಟುತ್ತಿರುವಾಗ,
ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾಯ್ತು. ಮುನ್ಸೂಚನೆಯಿಲ್ಲದೆ ಭದ್ರೆಯನ್ನು
ಹಿಡಿದಿಟ್ಟಿದ್ದ ಡ್ಯಾಮಿನ ಅಷ್ಟೂ ಬಾಗಿಲುಗಳನ್ನು ತೆಗೆದಿದ್ದು ಈ ದುರಂತಕ್ಕೆ ಕಾರಣ.
ಇಬ್ಬರೂ ಒಬ್ಬರ ಕೈ ಹಿಡಿದು ಬರಬರನೆ ದಂಡೆಯ ಕಡೆಗೆ ಓಡಿದರು.

ಸರಳ, ಬಂಡೆಗೆ ಒತ್ತಿ ಬೆಳೆದಿದ್ದ ಹಸಿರು ಪಾಚಿಯಾ ಮೇಲೆ ಕಾಲಿಟ್ಟು ಜಾರಿದಳು. ಅವಳ ಮಂಡಿ
ಚಿಪ್ಪು ನಜ್ಜಾಗುವ ಮಟ್ಟಿಗೆ ಪೆಟ್ಟಾಯಿತು. ಗಾಬರಿ ಮತ್ತು ನೋವಿನಿಂದಾಗಿ ಅವಳ ಕಣ್ಣು
ಕತ್ತಲೆಗಟ್ಟುತ್ತಾ ಹೋಯ್ತು. ಕಣ್ಣಿಗೆ ಸಂಪೂರ್ಣ ಕತ್ತಲು ಆವರಿಸುವ ಮುನ್ನ, ಕೊನೆಯ
ಬಾರಿಗೆ ಅವಳಿಗೆ ಕಂಡಿದ್ದು ದಂಡೆಯ ಮೇಲಿದ್ದ ವಿಮಲಾಳ ಅಸ್ಪಷ್ಟ ಚಿತ್ರ.

ಕೈ ಕೈ ಹಿಡಿದು ದಾಟುವಾಗ ಅದು ಯಾವ ಘಳಿಗೆಯಲ್ಲಿ ಕೈ ಸಡಿಲಿಸಿದರೋ ಇಬ್ಬರಿಗೂ
ತಿಳಿದಿಲ್ಲ. ತುಂಗಭದ್ರೆ ಸರಳಳನ್ನು ತನ್ನ ಒಡಲಿಗೆ ಹಾಕಿಕೊಂಡು ಹೊತ್ತೊಯ್ದಳು. ತುಂಗ
ಮತ್ತು ಭದ್ರೆ ತಾವು ಸೇರುವ ಧಾವಂತದಲ್ಲಿ ವಿಮಲಾ ಮತ್ತು ಸರಳಳನ್ನು ಬೇರ್ಪಡಿಸಿದರು. ದಡದ
ಮೇಲೆ ಒಂಟಿಯಾಗಿ ನಿಂತಿದ್ದ ವಿಮಲಾಳ ಆಕ್ರಂದನ ತುಂಗಭದ್ರೆಯ ಭೋರ್ಗರೆತದ ಜೊತೆ
ಕೇಳದಾಯಿತು. ಅವಳ ಕಣ್ಣೀರು ತುಂಗಭದ್ರೆಯ ಜೊತೆಯಲ್ಲಿಯೇ ವಿಲೀನವಾಯಿತು. ಸರಳಳ ಜೊತೆಗೆ
ವಿಮಲಳ ಸರ್ವಸ್ವವೂ ಕೊಚ್ಚಿ ಹೋಗಿತ್ತು.

* * * * *

-\> **2** \<- br="">ಅಪ್ಪ, ಅಮ್ಮ ಮತ್ತು ಒಬ್ಬಳು ತಂಗಿ. ಮಧ್ಯಮ ವರ್ಗದ ಸುಖೀ ಕುಟುಂಬ. ಅಜಯ ಮತ್ತು
ಹತ್ತೂರಿನ ಪಟೇಲ್ ಪರಂದಾಮಯ್ಯನ ಮಗಳು ರುಕ್ಮಿಣಿ, ಒಬ್ಬರನ್ನೊಬ್ಬರು ಮೆಚ್ಚಿದ್ದರು.
ಅಜಯ್ ಪಟ್ಟಣದಲ್ಲಿ ಉದ್ಯೋಗದಲ್ಲಿದ್ದರೂ ಕೂಡ, ಊರಿಗೆ ಬಂದಾಗಲೆಲ್ಲಾ ಎಲ್ಲರ ಕಣ್ಣು
ತಪ್ಪಿಸಿ ರುಕ್ಮಿಣಿಯನ್ನು ಭೇಟಿಯಾಗುತ್ತಿದ್ದ. ಅಜಯನ ಮನೆಯವರು, ಒಬ್ಬನೇ ಮಗ ಇಷ್ಟ
ಪಟ್ಟಿದ್ದೆ ಆದಲ್ಲಿ ರುಕ್ಮಿಯಣಿಯನ್ನೇ ಮನೆಗೆ ತಂದುಕೊಂಡರಾಯಿತು ಎಂದು, ಎಲ್ಲ
ಗೊತ್ತಿದ್ದರು, ಗೊತ್ತಿಲ್ಲದವರಂತೆ ಸುಮ್ಮನಿರುತ್ತಿದ್ದರು. ರುಕ್ಮಿಣಿಯ ಅಮ್ಮನಿಗೂ ಅಜಯನ
ಮೇಲೆ ಅಪಾರವಾದ ಪ್ರೀತಿ, ಗೌರವ. ರುಕ್ಮಿಣಿಯನ್ನು ಅಜಯನಿಗೆ ಕೊಟ್ಟು ಮದುವೆ ಮಾಡಬೇಕೆಂದು
ಒಳಗೊಳಗೇ ಅಂದುಕೊಳ್ಳುತ್ತಿದ್ದಳು.

ಹರಿಯುವ ನೀರು ತಂಗಲು ತಗ್ಗು ಹುಡುಕಿದರೆ, ಅಲ್ಲಿ ಇಂಗಿ ಬಿಡಬೇಕೆ. ಬದುಕೂ ಹಾಗೆಯೇ.
ಇನ್ನೇನು ಎಲ್ಲವೂ ಸರಿಯಾಗಿತ್ತು, ಅನ್ನುವಷ್ಟರಲ್ಲಿ ಪಟ್ ಅಂತ ಏನಾದರೊಂದು ಒಡೆದುಕೊಂಡು
ಬಿಡುತ್ತದೆ. ಪಟೇಲ್ ಪರಂದಾಮಯ್ಯ, ರುಕ್ಮಿಣಿಯನ್ನು ಬೇಳೂರಿನ ಸಿದ್ದೇಶ್ವರ ಸಾಹುಕಾರನ
ಮಗನಿಗೆ ಕೊಟ್ಟು ಕೈ ತೊಳೆದುಕೊಂಡರು. ತನ್ನ ಮಗಳು ಸುಪ್ಪತ್ತಿಗೆಯ ಮೇಲೆ ಮೆರೆಯುವುದನ
ನೋಡಬೇಕೆಬೆಂಬುದು ಒಬ್ಬ ಅಪ್ಪನ ಆಸೆ. ಸಿದ್ದೇಶ್ವರ ಸಾಹುಕಾರನಿಗಿದ್ದ ನೂರು ಎಕರೆ
ಜಮೀನು, ಹತ್ತು ಬಾರುಗಳು, ಬೇಳೂರಿನ ಪಾಳೆಗಾರಿಕೆ ಪರಂದಾಮಯ್ಯನ ಜಟಿಲ ನಿರ್ಧಾರದ
ಹಿಂದಿದ್ದ ಲೌಖಿಕ ಸಾಧನಗಳು.

ಒಬ್ಬರು ಮತ್ತೊಬ್ಬರ ಶ್ರೇಯೋಭಿಲಾಷೆಗಳನ್ನು ಗುತ್ತಿಗೆ ಪಡೆದು ಸಾಗುವಾಗ
ಇತಿಹಾಸದುದ್ದಕ್ಕೂ ಇಂತಹ ದುರಂತಗಳು ಸುಳ್ಳು ತ್ಯಾಗದ ಹೆಸರಿನಲ್ಲಿ ನಡೆಯುತ್ತಲೇ
ಇರುತ್ತವೆ. ಅವರಪಾಡಿಗವರು ಇರಲು ಯಾರಿಂದಲೂ ಆಗದು. ಮುದ್ದುಮುದ್ದಾದ ಮಗಳು
ಕಾಡುಪಾಲಾದಳೆಂದು ರುಕ್ಮಿಣಿಯ ಅಮ್ಮ ಮಮ್ಮಲ ಮರುಗಿದಳು. ಇತ್ತ ದುಃಖ ತಪ್ತನಾದ ಅಜಯ
ತಿಂಗುಗಟ್ಟಳೆ ಊರಿಗೆ ಹಿಂತಿರುಗದೇ ದಾಡಿ ಬಿಟ್ಟುಕೊಂಡು ಓಡಾಡಿದ.

* * * * *

**3**

ಕಾಲ ಎಲ್ಲವನ್ನೂ, ತನ್ನ ಗರ್ಭದಲ್ಲಿ ಅಡಗಿಸಿಕೊಳ್ಳುತ್ತಾ ಹೋಯಿತು. ವಿಮಲ, ಸರಳಳನ್ನು
ತನ್ನ ರೂಮಿನ ಫೋಟೋ ಫ್ರೇಮಿನಿಂದ ಮಾತ್ರ ತೆಗೆದಿರಲಿಲ್ಲ. ಆದರೆ ಅವಳ ಮನದ ಫ್ರೇಮಿನಲ್ಲಿ
ಹೊಸ ಹೊಸ ಕೌತುಕಗಳು ದಾಂಗುಡಿಯಿಟ್ಟಿದ್ದವು. ಅವಳು ಮದುವೆಯ ಸಿದ್ಧತೆಯಲ್ಲಿದ್ದಳು.
ಮದುವೆಗೆ ಗೊತ್ತು ಪಡಿಸಿದ ವರನ ಹೆಸರು ಅಜಯ. ರುಕ್ಮಿಣಿಯನ್ನು ವರಿಸಿದ ಅದೇ ಅಜಯ.
ಅನುಭವಿ ಪ್ರೇಮಿ.

ಮದುವೆ ಗೊತ್ತುಪಡಿಸಿದ ದಿನದಿಂದಲೂ ಒಬ್ಬರನ್ನೊಬ್ಬರು ಪರಸ್ಪರ ಅರಿತುಕೊಳ್ಳಲು
ಪ್ರಾರಂಭಿಸಿದರು. ಇವರ ತಿರುಗಾಟ ಅಧಿಕೃತವಾಗಿ ಹಿರಿಯರ ಅನುಮತಿಯ ಮೇರೆಗೆ
ನಡೆಯುತ್ತಿತ್ತು. ಸಿನಿಮಾಗಳು, ನೆಂಟರಿಷ್ಟರ ಮನೆಗಳು, ಸುತ್ತ ಊರಿನ ಜಾತ್ರೆಗಳು ಈ
ಪ್ರೇಮಿಗಳ ಮೌನ ಮೆರವಣಿಗೆಗೆ ಮುಖ ಸಾಕ್ಷಿಗಳಾದವು.

ಈ ಪ್ರೇಮ ಪಲ್ಲಕ್ಕಿ, ಒಮ್ಮೆ ಕೂಡ್ಲಿಯ ತುಂಗಭದ್ರೆಗೂ ಬಂತು. ವಿಮಲಾ ಕ್ಷಣಕಾಲ ಕಳೆದು
ಹೋದ ಗೆಳತಿಯ ನೆನೆದು, ಅವಳು ಹರಿದು ಹೋದ ದಿಕ್ಕಿಗೆ ಆಶ್ರು ತುಂಬಿದ ಕಂಗಳಿಂದ, ತಾನು
ಕೈಯಾರೆ ಪೋಣಿಸಿ ತಂದಿದ್ದ ಹೂವಿನ ಮಾಲೆಯನ್ನು ತೇಲಿಸಿದಳು.

ಮದುವೆ ಸಂಭ್ರಮ; ಅದಾಗಲೇ ಬೆರೆತಿದ್ದ ಎರಡು ಮನಗಳನ್ನು ಶಾಸ್ತ್ರೋಕ್ತವಾಗಿ ಬಂಧಿಸುವ
ಕೈಂಕರ್ಯದಲ್ಲಿ ಎಲ್ಲರೂ ಬ್ಯುಸಿ. ಮದುವಣಗಿತ್ತಿಯ ರೂಪದಲ್ಲಿ ವಿಮಲ ಕಣ್ಣು ಕುಕ್ಕುವಂತೆ
ಕಂಗೊಳಿಸುತ್ತಿದ್ದಳು. ಎಲ್ಲೆಲ್ಲೂ ಸಂತಸದ ಅಲೆ. ಮದುವಣಗಿತ್ತಿಗೆ ಇರಬೇಕಾದ ನಾಚಿಕೆ,
ಅಂಜಿಕೆ, ಸಂಕೋಚ ವಿಮಲಳಲ್ಲಿ ಇರಲಿಲ್ಲ. ವಿಮಲ ಅಗತ್ಯಕ್ಕಿಂತಲೂ ಹೆಚ್ಚೇ
ಸಂತಸದಿಂದಿದ್ದಳು. ಅಜಯನು ಅವಳ ನಲಿವಿಗೆ ಸ್ಪಂದಿಸುತ್ತಿದ್ದ. ಅವರಲ್ಲಿ ಅದಾಗಲೇ ಸಲುಗೆ
ಬೇರೂರಿತ್ತು.

`ಅಜಯ ತಾಳಿ ಕಟ್ಟುತ್ತಿರುವಾಗ, ವಿಮಲಾ ಜೋರಾಗಿ ಪಕಪಕನೆ ನಕ್ಕು ಬಿಟ್ಟಳು.` ಅದೊಂದು
ಸಂಭ್ರಮ ಆ ಅವಳಿಗೆ. ತಾಳಿ ಕಟ್ಟುವಾಗ ಕುತ್ತಿಗೆಯ ಬಳಿ ಬೆರಳು ತಾಗಿದ್ದು, ಕಚಗುಳಿ
ಇಟ್ಟಂತಾಗಿರಬೇಕೆಂದು ಅಜಯ ವಿಮಲಳನ್ನು ಕಿಚಾಯಿಸಿದ.

* * * * *

**4**

ಮೊದಲ ರಾತ್ರಿ ಗಂಡು ಹೆಣ್ಣನ್ನು ಅಕ್ಕ ಪಕ್ಕ ದಲ್ಲಿ ಕೂರಿಸಿದರು. ಪುನಃ ತರಹಾವೇರಿ
ಶಾಸ್ತ್ರಗಳು. ಎರಡು ದುಂಡನೆಯ ತಟ್ಟೆಯ ಮೇಲೆ ಅರಿಶಿಣದ ಅಕ್ಕಿಯನ್ನು ಸಮತಟ್ಟಾಗಿ
ಹರಡಿದ್ದರು. ಒಂದೊಂದು ತಟ್ಟೆಯ ಮೇಲೂ ಅವರಿಬ್ಬರಿಗೂ ತಮ್ಮ ಹೆಸರು ಬರೆಯುವಂತೆ ಹೇಳಿದರು.
ಈಗಲೂ ವಿಮಲ ಸಂಭ್ರಮದಿಂದಿದ್ದಳು. ಮೊದಲ ರಾತ್ರಿಯ ಇವಳ ಸಂಭ್ರಮ ಅಜಯನಿಗೆ ಮುಜುಗರಕ್ಕೆ
ಈಡು ಮಾಡಿತು.

ಗಂಡು ಹೆಣ್ಣನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ, ಎಲ್ಲರೂ ಮನೆಯ ಹೊರಗೆ ಹರಟುತ್ತಾ
ಕುಳಿತರು. ಶಾಸ್ತ್ರಕ್ಕೆಂದು ಇಟ್ಟಿದ್ದ ಅರಿಶಿಣದ ತಟ್ಟೆಗಳನು, ದೇವರ ಕೋಣೆಗೆ ಇಡಲು
ವಿಮಲಾಳ ಅಮ್ಮ ಅತ್ತ ಕಡೆಗೆ ನಡೆದಳು. ಇತ್ತ ಪ್ರಸ್ತದ ಕೋಣೆಯಲಿ ವಿಮಲಾ ಕುಡಿಯಲು
ಕೊಟ್ಟಿದ್ದ ಹಾಲನ್ನು ಒಬ್ಬಳೇ ಗಟಗಟನೆ ಕುಡಿದಳು. ನಗುತ್ತಾ ಹಾಲಿನ ಲೋಟವನ್ನು ಮಂಚದ
ಪಕ್ಕದಲ್ಲಿದ್ದ ಟೇಬಲ್ಲಿನ ಮೇಲೆ ಇಟ್ಟಳು. ಅಜಯನಿಗೆ ಇವಳ ಅತಿರೇಕದ ವರ್ತನೆಯಿಂದ ಕೊಂಚ
ಇರಿಸುಮುರಿಸಾಯಿತು.

ವಿಮಲ ಟೇಬಲ್ಲಿನ ಮೇಲಿದ್ದ ಫೋಟೋ ಫ್ರೇಮಿನಲ್ಲಿ ಸರಳಳ ಫೋಟೋ ಪಕ್ಕದಲ್ಲಿದ್ದ ತನ್ನ
ಫೋಟೋವನ್ನು ಕೈಗೆ ಎತ್ತಿಕೊಂಡು ಮಂಕಾಗಿ ನೋಡಿದಳು. ಅವಳಲ್ಲಿ ಅಸಾಧ್ಯ ವೇದನೆ
ಶುರುವಾಯಿತು. ವಿಮಲ ಫೋಟೋವನ್ನು ನೋಡುತ್ತಾ ನೋಡುತ್ತಾ ಕಿಟಾರನೆ ಕಿರಚಿಕೊಂಡು ಮೂರ್ಛೆ
ಬಿದ್ದಳು.

ಅಷ್ಟರಲ್ಲಾಗಲೇ ವಿಮಲಾಳ ಅಮ್ಮ ತಾನು ಕೊಂಡು ಹೋಗಿದ್ದ ಅರಿಶಿಣದ ತಟ್ಟೆಯನ್ನು ಹಿಡಿದು
ಗಾಬರಿಯಲ್ಲಿ ಕೈ ನಡುಗಿಸುತ್ತಾ ಪ್ರಸ್ತದ ಕೋಣೆಯ ಹೊರಗೆ ಬಂದು ನಿಂತಿದ್ದಳು. ವಿಮಲಾಳ
ಕೈಯಲ್ಲಿ ಬರೆಯಲು ಕೊಟ್ಟಿದ್ದ ಅರಿಶಿಣದ ತಟ್ಟೆಯಯಲ್ಲಿ ‘ಸರಳ’ ಎಂಬುದಾಗಿ ಬರೆದಿತ್ತು.

`ಅಜಯನ ಕಥೆ ಏನಾಯ್ತು.? ವಿಮಲ ಯಾರು.? ಸರಳ ಎಲ್ಲಿ ..? ಮುಂದುವರೆಯುತ್ತದೆ.`

Tuesday, July 31, 2012

ಪ್ರೇಮಗಾಯ

ರಾತ್ರಿ ಸರಿ ಸುಮಾರು ಒಂಬತ್ತು ವರೆಯಾಗಿತ್ತು. ಬಾರ್ ನ ಹುಡುಗ ಸೊಳ್ಳೆ ಬತ್ತಿಗೆ ಬೆಂಕಿ
ಹಚ್ಚಿ  ಟೇಬಲ್ಲಿನ ಕಾಲಿನ ಪಕ್ಕದಲ್ಲಿ ಇಟ್ಟನು. ಇಷ್ಟು ವಿಶಾಲವಾದ ಕತ್ತಲ ಹುಲ್ಲು
ಹಾಸಿನ ಮೇಲೆ, ಈ ಪುಟ್ಟ ಸೊಳ್ಳೆ ಬತ್ತಿಯು ಯಾವ ವಿಧದ ಕೆಲಸ ಮಾಡಬಹುದೆಂಬ ಆಲೋಚನೆಯೊಂದು
ಸುಳಿದು ಅಚ್ಚರಿಯಾಯ್ತು. ಬದುಕಿನ ಸತ್ವ ಹೀರುವಷ್ಟು ನೋವು ಎದೆಯೊಳಗಿರುವಾಗ, ತೊಟ್ಟು
ರಕ್ತ ಹೀರುವ ಸೊಳ್ಳೆಯು ಗೌಣವೆನಿಸಿತು.

Saturday, July 7, 2012

ರಾಣಿ ಮತ್ತು ನಾನು

`ರಾಣಿ ನನ್ನ ಚಿಕ್ಕಮ್ಮನ ಮಗಳು. ಈಗ ಒಂದನೇ ಕ್ಲಾಸು ಮುಗಿಸಿ ಎರಡನೇ ಕ್ಲಾಸಿಗೆ ಹೊರಟು
ನಿಂತಿರುವ ಪುಟ್ಟಿ. ಅವಳ ಜೊತೆಗಿನ, ಕೆಲವು ತುಂಟಾಟದ ಎಪಿಸೋಡ್ ಗಳು ಇಲ್ಲಿವೆ.`

**1. ನೂರು ಕಾಗೆಗಳು ಹಾರಿ ಹೋದ ಕಥೆ **

'ಅಣ್ಣ ಒಂದು ಕಥೆ ಹೇಳು' ಎಂದು ಕೇಳಿದಳು ರಾಣಿ.

ಮಾತಾಡಿಸೋಕೆ ಶುರು ಮಾಡಿದರೆ, ಇವಳ ಮಾತಿಗೆ ಮಾತು ಕೊಡುವುದು ಕಷ್ಟ. ಅಂತದ್ರಲ್ಲಿ ಕಥೆ
ಹೇಳಕ್ಕೆ ಶುರು ಮಾಡಿದ್ರೆ ಪ್ರಾಣ ಹಿಂಡಿ ಬಿಡುವಳು. ' ಹೇಯ್ ರಾಣಿ. ಬಿಟ್ಟು ಬಿಡೆ.
ನನ್ನ ತಲೆ ತಿನ್ನಬೇಡ ' ಎಂದೆ.

ಕಥೆ ಹೇಳಲೇ ಬೇಕೆಂದು ಪಟ್ಟು ಹಿಡಿದಳು. ಸರಿ, ಎಂದು ಎಲ್ಲೋ ಕೇಳಿದ್ದ ಕಥೆ ಹೇಳಲು ಶುರು
ಮಾಡಿದೆ. 'ನೂರು ಕಾಗೆಗಳು ಮರದ ಮೇಲೆ ಕುಳಿತಿದ್ದವು. ಬೇಟೆಗಾರ ಬಂದೂಕಿನಿಂದ ಗುಂಡು
ಹಾರಿಸಿದ. ಆಮೇಲೆ ಕಾಗೆಗಳು ಒಂದಾದ ಮೇಲೆ ಒಂದರಂತೆ ಹಾರಿಹೊಗೊದಕ್ಕೆ ಶುರು ಮಾಡಿದವು.
ಮೊದಲನೇ ಕಾಗೆ ಹಾರಿ ಹೋಯ್ತು. ಈಗ ಎಷ್ಟು ಉಳೀತು. ? ಹೇಳು ನೋಡೋಣ. ?'

ಬೇರಳುಗಳಲ್ಲಿ ಎಣಿಸುತ್ತಾ. ನನ್ನ ಮುಖ ನೋಡಿಕೊಂಡು ಪ್ರಶ್ನಾರ್ಥಕ ಭಾವದಲ್ಲಿ '
ನೈಂಟಿ-ನೈನಾ ಅಂದಳು. ?'' correct. ' ಅಂದೆ. 'ಆಮೇಲೆ ..? '

'ಮತ್ತೆ ಇನ್ನೊಂದು ಕಾಗೆ ಹಾರಿ ಹೋಯ್ತು. ಈಗ ಎಷ್ಟು ಕಾಗೆ ಉಳಿದುಕೊಂಡವು. ?'ಪುನಃ
ಬೆರಳುಗಳನ್ನು ಹಿಂದೆ ಮುಂದೆ ಮಾಡುತ್ತಾ ಏನನ್ನೋ ಕಂಡು ಹಿಡಿದವಳಂತೆ 'ನೈಂಟಿ ಎಯ್ಟು'
ಎಂದಳು. 'ವೆರಿ ಗುಡ್ ' ಎಂದು ಹೇಳಿ ನನ್ನ ಪಾಡಿಗೆ ನಾನು ಕಥೆಯಿಂದ ವಿಮುಕ್ತನಾದವನಂತೆ
ನಟಿಸುತ್ತಾ ಹೊರ ಬಂದೆ.

'ಮುಂದೆ ಏನಾಯ್ತು. ' ಎಂದು ಕೇಳುತ್ತಾ ಹಿಂದೆ ಹಿಂದೆ ಬಂದಳು.

'ಆ ಇನ್ನೊಂದು ಕಾಗೆ ಹಾರೋಯ್ತು ಕಣೆ. 'ನಾನು ಕೇಳುವುದಕ್ಕೆ ಮೊದಲೇ ಬೆರಳು ಪೋಣಿಸುತ್ತಾ
' ನೈಂಟಿ ಸೆವೆನ್ ' ಎಂದಳು.

ಹೀಗೆ ಸುಮಾರು ಸೆವೆಂಟಿ ಸೆವೆನ್ ಗೆ ಬರುವ ಹೊತ್ತಿಗೆ ಸರಿಯಾಗಿ ಅವಳ ತಲೆ ಕೆಟ್ಟು
ಹೋಯ್ತು. 'ಅಮ್ಮಾ  ' ಎಂದು ಅಬ್ಬರಿಸುತ್ತಾ ಅವರಮ್ಮನ ಬಳಿ ಓಡಿ ಹೋದಳು.

ಅಷ್ಟೇ, ಆನಂತರ 'ಕಾಗೆ ಕಥೆ ಹೇಳ್ತೀನಿ ಬಾರೆ ' ಅಂದ್ರೆ. ಕೈಗೆ ಸಿಗದ ರೀತಿ ಓಡಿ
ಹೋಗುವಳು.

---

**2. ಟಿವಿ ರಿಮೋಟಿಗೆ ಚಂಡಿ ಹಿಡಿದು ಕೂತವಳ ಜೊತೆಗೆ **

ತುಂಬಾ ಇಂಟರೆಸ್ಟಿಂಗ್ ಆಗಿ ಉದಯ ಟಿವಿಯಲ್ಲಿ ಸಿನಿಮಾ ನೋಡ್ತಾ ಇದ್ದೆ. ರಾಣಿ ಪಳಕ್ ಅಂತ
ಬದಲಿಸಿ, ಪೋಗೋ ಚಾನಲ್ ಹಾಕಿದಳು. ಆನಿಮೇಟೆಡ್ ಬೊಂಬೆ ದಾರಾವಾಹಿ ಬರೋಕ್ ಶುರು ಮಾಡ್ತು.
ನನಗಂತೂ ಸಿಕ್ಕಾಪಟ್ಟೆ ಕೋಪ ಬಂತು. ಆದರೂ ಧೈನ್ಯದಿಂದ  ' ಹೇಯ್ ರಾಣಿ. ಪ್ಲೀಸ್ ರಿಮೋಟ್
ಕೊಡೆ. ನಾನು ಫಿಲಂ ನೋಡ್ತಾ ಇದೀನಿ ' ಎಂದೆ.

'ಊಹುಂ ಕೊಡಲ್ಲ. ನಾನು ಚೋಟ ಭೀಮ್ ನೋಡಬೇಕು ' ಎಂದಳು. ಕೊಬ್ಬು ಇವಳಿಗೆ. ನಿಜವಾಗಲು ಆ
ಕ್ಷಣದಲ್ಲಿ ಅವಳಿಗೆ ಟಿವಿಯ ಮೇಲೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ನಾನು ಟಿವಿ
ನೋಡುತ್ತಿದ್ದುದು, ನನ್ನನ್ನು ಕೆಣಕಲು ಅವಳಿಗೆ ಒಂದು ದಾರಿಯಾಗಿತ್ತು.

' ನೋಡು ಹಿಂಗೆಲ್ಲ ಮಾಡಿದ್ರೆ ನಿಮ್ಮ ಮನೆಗೇ ಬರಲ್ಲ. ಅಷ್ಟೇ ' ಎಂದರೆ, 'ಸರಿ ಬರಬೇಡ.'
ಎಂದು ಅಷ್ಟೇ ಉದಾಸಿನವಾಗಿ ಹೇಳುವಳು. ನನಗೆ ಇನ್ನೂ ಕೋಪ ಬಂತು. ಅವಳಿಂದ ರಿಮೋಟ್ ಕಿತ್ತು
ಕೊಳ್ಳಲು ಹೋದೆ. ರಿಮೋಟ್ ತೆಗೆದು ಅಡಿಯಲ್ಲಿ ಹಾಕಿಕೊಂಡು ಕುಳಿತಳು. ಅವಳೊಂದಿಗೆ
ಕಿತ್ತಾಡಿ, ಜಗಳ ಮಾಡಿ ಮೈ ಕೈ ಗೆಲ್ಲಾ ಪರಚಿಸಿಕೊಂಡು ಅಂತೂ ರಿಮೋಟ್ ಪಡೆದುಕೊಳ್ಳುವಲ್ಲಿ
ಯಶಸ್ವಿಯಾದೆ. ಆದರೆ ತತ್ತಕ್ಷಣ ಟಿವಿಯ ಬಳಿ ಓಡಿ ಹೋಗಿ ರಿಮೋಟ್ ಸೆನ್ಸರ್ ಬಳಿ ಕೈ
ಅಡ್ಡಲಾಗಿ ಹಿಡಿದು 'ಹಹಹ ಈಗ ಚೇಂಜ್ ಮಾಡು ನೋಡೋಣ. ? ' ಎಂದು ಗಹಗಹಿಸಿ ನಕ್ಕಳು. LED
ಸೆನ್ಸರ್ ಗೆ ಅಡ್ಡ ಬಂದರೆ, ರಿಮೋಟ್ ಕೆಲ್ಸ ಮಾಡಲ್ಲ, ಅನ್ನೋದು ಗೊತ್ತಿತ್ತು ಅವಳಿಗೆ.

'ಹೇಯ್ ಹಿಡಂಬಿ, ಏನ್ ಬೇಕಾದ್ರೂ ಹಾಕು ಹೋಗು. ನಾನಂತು ನಿನ್ನ ಸಹವಾಸಕ್ಕೆ ಇನ್ನೊಂದು
ಸಾರಿ ಬರಲ್ಲ. ' ಕೈಯಲ್ಲಿದ್ದ ರಿಮೋಟ್ ಎಸೆದು ಬೇಸರಗೊಂಡವನಂತೆ ನಟಿಸಿದೆ. ಅವಳಿಗೆ ಮರುಕ
ಹುಟ್ಟಿಯಾದರೂ ಚಾನಲ್ ಬದಲಿಸಿಯಾಳೆಂಬ, ನನ್ನ ಪ್ಲಾನ್ ವರ್ಕೌಟ್ ಆಗಲಿಲ್ಲ. ಇವಳಿಗೆ
ಉಲ್ಟಾ ಚಂಡಿ ಪದ್ಧತಿಯೇ ಕರೆಕ್ಟು ಎಂದು ನಿರ್ಧರಿಸಿದೆ.

ಪಕ್ಕದಲ್ಲಿ ಹೋಗಿ ಕುಳಿತು, 'ನೋಡು ಏನಾದ್ರೂ ನೀನು ಈ 'ಚೋಟ-ಭೀಮ್' ಬದಲಿಸಿ, ಉದಯ ಟಿವಿ
ಹಾಕಿದೆ ಅಂದ್ರೆ, ಕಾಲ್ ಮುರಿದು, ಕೈಗೆ ಕೊಡ್ತೇನೆ. ನಿಮ್ಮಪ್ಪ ಬಂದರೂ ಸರಿ, ನಿಮ್ಮಮ್ಮ
ಬಂದರೂ ಸರಿ. ಗೊತ್ತಲ್ಲ. ಈಗೆನಾದ್ರು ಚಾನಲ್ ಬದಲಿಸಿದರೆ ಕಾಲು ಮುರಿದು, ಕೈಗೆ
ಕೊಡ್ತೇನೆ. ' ಎಂದು ಮುಖದಲ್ಲಿನ expression ಸ್ವಲ್ಪವೂ ತಗ್ಗಿಸದ ರೀತಿಯಲ್ಲಿ ಅವಳನ್ನೇ
ನೋಡುತ್ತಾ ಹೇಳಿದೆ.

'ಕಾಲ್ ಮುರಿತಿಯಾ.? ಎಲ್ಲಿ ಮುರಿ ನೋಡೋಣ. ' ಎಂದು ಮೈಮೇಲೆ ಬಂದಳು.

'ಚಾನಲ್ ಚೇಂಜ್ ಮಾಡು. ನೋಡೋಣ. ' ಎಂದೆ. ಅವಳು ರಿಮೋಟ್ ಹಿಡಿದುಕೊಂಡು ಚಾನಲ್ ಚೇಂಜ್
ಮಾಡುವಂತೆ ನಟಿಸಿದಳು.

'ನೋಡೆ ನಾನ್ ತಮಾಷೆ ಮಾಡ್ತಾ ಇಲ್ಲ. ಈ ಸಾರಿ ಮಾತ್ರ ಉದಯ ಟಿವಿ ಏನಾದ್ರೂ ಹಾಕಿದ್ರೆ.
ಗೊತ್ತಲ್ಲ. ಕಾಲು ಮುರಿದು, ಕೈಗೆ ಕೊಡ್ತೇನೆ ' ಎಂದೆ. ಅವಳೂ ಚೋಟ ಭೀಮ್ ಬದಲಿಸಿ, ಉದಯ
ಟಿವಿ ಹಾಕಿದಳು. 'ಹಾಕೆ ಬಿಟ್ಯಾ. ಸರಿ ಹಂಗಾದ್ರೆ ಇನ್ನೇನ್ ಮಾಡಕ್ಕಾಗುತ್ತೆ. ನೀನು
ಹಾಕಿರೋದನ್ನೇ ನೋಡ್ತೀನಿ ಅಷ್ಟೇ. ಎಲ್ಲಾ ನನ್ನ ಕರ್ಮ. ' ಎಂದು ಸುಮ್ಮನಾದವನಂತೆ ಮಾಡಿ
ಆರಾಮಾಗಿ ಸಿನಿಮಾ ನೋಡಲು ಪ್ರಾರಂಭಿಸಿದೆ. ಸುಮಾರು ಹೊತ್ತು ಹೀಗೆ ಇತ್ತು. ರಾಣಿ ನನ್ನ
ಮುಖವನ್ನೂ ನೋಡುತ್ತಾ, ಟಿವಿಯ ಕಡೆಗೂ ನೋಡುತ್ತಾ. ತಾನೇನೋ ಭಯಂಕರವಾದ ಮೋಸಕ್ಕೆ
ಒಳಗಾಗಿರುವವಳಂತೆ ಚಡಪಡಿಸುತ್ತಿದ್ದಳು. ನನಗೂ ನಗು ತಡೆದುಕೊಳ್ಳಲಾಗಲಿಲ್ಲ. ಜೋರಾಗಿ
ಹೊಟ್ಟೆ ಹಿಡಿದುಕೊದು ಅವಳನ್ನು ರೇಗಿಸುವಂತೆ ನಕ್ಕುಬಿಟ್ಟೆ.

ಅದೇನು ಅರ್ಥವಾಯಿತೋ... ಗೊತ್ತಿಲ್ಲ, ಬಂದವಳೇ ಕೈಯಲ್ಲಿದ್ದ ಟಿವಿ ರಿಮೋಟಿನಿಂದ ಕಾಲಿನ
ಮೇಲೆ ಊದಿಕೊಳ್ಳುವಂತೆ ಬಲವಾಗಿ ಹೊಡೆದಳು. ಆ ಕ್ಷಣದ ನೋವಿನಿಂದಾಗಿ ಅಷ್ಟೇ ಜೋರಾಗಿ
'ಅಮ್ಮಾ' ಎಂದು ಕಿರುಚಿಕೊಂಡೆ. ಮೂಗಿನ ಹೊಳ್ಳೆಗಳನ್ನು ಅಗಲ ಮಾಡಿಕೊಂಡು ನನ್ನನ್ನೇ
ಗುರಾಯಿಸುತ್ತಿದ್ದಳು.

ರೂಮಿನ ಒಳಗಿದ್ದ ರಾಣಿಯ ಪಪ್ಪ ಬಂದವರೇ ' ಅಮ್ಮು ಅಣ್ಣಂಗೆ ಹಂಗ್ ಹೊಡಿತಾರ. '
ಎನ್ನುತ್ತಾ ನನ್ನ ಕಡೆಗೆ ಸ್ವಲ್ಪವೂ ದೃಷ್ಟಿ ಹರಿಸದೆ, ರಿಮೋಟ್ ಹಿಡಿದು ಅಲ್ಲಾಡಿಸಿ
ನೋಡಿದರು. ಕ್ರೇಜಿ ಫ್ಯಾಮಿಲಿ.            

---

**3. ತಟ್ಟಿ ಮಲಗಿಸದೇ, ನಿದ್ರಿಸಿದ ಮಗಳು**

ರಾಣಿ, ರಾತ್ರಿ ಮಲಗಬೇಕು ಅಂದ್ರೆ, ಅವಳ ಪಕ್ಕದಲ್ಲಿದ್ದು ಅವರ ಅಮ್ಮ ಮಲಗಿಸಬೇಕು.
 ಹಗಲೆಲ್ಲಾ ಹೊಡೆದು-ಬಡಿದು ಕಾಡಿಸುವ ಈ ಪುಟ್ಟ ಹಠಮಾರಿ,  ರಾತ್ರಿ ಮಲಗುವಾಗ ಮಾತ್ರ ಈ
ರೀತಿ. ಇಲ್ಲಾ ಅಂದ್ರೆ ಕೂಗಾಡಿ ಬಿಡುವಳು.  ಇವಳು ಮಲಗಿದ ಮೇಲೆ.  ನಮಗೆಲ್ಲಾ ಊಟ
ಉಪಚಾರಗಳು.  ಚಿಕ್ಕಮ್ಮ ತಾನು ಚಪಾತಿ ಮಾಡಬೇಕಾಗಿಯು, ರಾಣಿಯನ್ನು ಮಲಗಿಸುವಂತೆಯು
ಹೇಳಿದರು.  ನಾನೂ. , ಇದು ಅತ್ಯಂತ ಸುಲಭದ ಕೆಲಸವೆಂದು ಒಪ್ಪಿಕೊಂಡೆ.

'ಹೇಯ್ ಕಣ್ಣು ಮುಚ್ಚೆ. ಇಲ್ಲ ಅಂದ್ರೆ ನಿದ್ದೆ ಬರಲ್ಲ. ' ಎಂದೆ.  'ಲೈಟ್ ಆಫ್
ಮಾಡುದ್ರೆ ತಾನೆ ನಿದ್ದೆ ಬರೋಕೆ ' ಎಂದಳು.  ' ಇವಕ್ಕೆಲ್ಲಾ ಏನ್ ಕಮ್ಮಿ ಇಲ್ಲ. ಇವಳಿಗೆ
ಮಲಗಿಸೋದಕ್ಕೆ ಬೇರೆ ಒಬ್ಬರು ಬರಬೇಕು. ತುಟಿಕ್ ಪಿಟಕ್ ಅನ್ನದ ಹಾಗೆ, ನಿದ್ರೆ ಮಾಡಬೇಕು.
ಗೊತ್ತಾಯ್ತಲ್ಲ ' ಎಂದು ಗೊಣಗುತ್ತಾ ಅವಳನ್ನು ತಟ್ಟುತ್ತಾ ಮಲಗಿದೆ.

'ಕಾಗೆ ಕಥೆ ಬಿಟ್ಟು, ಬೇರೆ ಯಾವುದಾದರು ಕಥೆ ಹೇಳು' ಎಂದಳು.  'ನಾನು ಕಥೆ ಹೇಳುದ್ರೆ,
ನೀನು ನಿದ್ದೆ ಮಾಡಲ್ಲ. ನೀನೆ ಯಾವುದಾದರು ಕಥೆ ಹೇಳು. ' ಎಂದೆ.  ಅವಳ ಕಥೆ ಹೇಳಲು ಶುರು
ಮಾಡಿದಳು. ಸಾಂಗವಾಗಿ ಸಾಗಿತ್ತು. ನಾನೂ 'ಹಾ, ಊಂ, ಊಹುಂ' ಎಂದಷ್ಟೇ ಹೇಳುತ್ತಿದ್ದೆ.
 ಕ್ರಮೇಣ ನಾನೂ ಸಂಪೂರ್ಣ ನಿದ್ರೆಗೆ ಜಾರಿದವನಂತೆ ಮಾಡಿದೆ.  ನನ್ನಿಂದ ಉತ್ತರಗಳು
ಬರದಿದ್ದರಿಂದ ಒಂದೆರಡು ಬಾರಿ ಮುಖದ ಮೇಲೆ ಹೊಡೆದಳು.  ಕಣ್ಣಿನ ರೆಪ್ಪೆಗಳನ್ನು ಎತ್ತಿ,
ನಾನು ನಿಜವಾಗಿಯೂ ನಿದ್ರೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡಳು.  ಮುಂದೆ ಇನ್ನೇನು
ಮಾಡಬೇಕೆಂದು ತೋಚದೆ, ನನ್ನ ಕುತ್ತಿಗೆಯ ಸುತ್ತ ಕೈ ಹಾಕಿಕೊಂಡು ನಿದ್ರೆಗೆ ಜಾರಿದಳು.

ನಾನೂ ಆ ಕ್ಷಣಕ್ಕಾಗಿಯೇ ಕಾಯುತ್ತಿದ್ದೆ. ಅವಳಿಂದ ಮೆತ್ತಗೆ ಬಿಡಿಸಿಕೊಂಡು ಏಳಲು ಹೊರಟೆ.
ಕುತ್ತಿಗೆಯನ್ನು ಎಷ್ಟು ಬಲವಾಗಿ ಬಿಗಿದಿದ್ದಳು ಎಂದರೆ ಆ ಕೈ ಗಳನ್ನು ಬಿಡಿಸಿಕೊಳ್ಳುವಾಗ
'ಹೇಯ್ ಹಂದಿ ನನ್ನ ಕುತ್ತಿಗೆ ಬಿಡೆ' ಎಂದು ಮೆಲ್ಲಗೆ ಕೊಸರಿದೆ. ಇನ್ನೇನು ಕೈ ತೆಗೆದು
ಹೊರಡಲು ಅನುವಾಗುತ್ತಿರುವಾಗ, ಕಾಲುಗಳನ್ನು ಹೇರಿದಳು.  ಎಲಾ ಇವಳ ಸ್ವಲ್ಪಾನು ಎಚ್ಚರ
ಇಲ್ಲ. ಆದರು ಇಷ್ಟು ಅಲರ್ಟ್ ಆಗಿ ನಿದ್ದೆ ಮಾಡೋದಾ. ?  ಅಯ್ಯಯ್ಯೋ ಎಂದುಕೊಂಡೆ.

ಅವಳ ಕಾಲು, ಕೈ ಎರಡನ್ನು ತೆಗೆದು, ನಾನೇ ಅವಳ ಮೇಲೆ ಕೈ ಹಾಕಿ ತಟ್ಟುತ್ತಾ ಮಲಗಿದೆ.
 ಅವಳ ಮೇಲಿಂದ ಕೈ ತೆಗೆಯುತ್ತಿದ್ದಂತೆ, ಕೈ ಕಾಲುಗಳನ್ನು ಚಾಚುತ್ತಾ ಸ್ಪರ್ಶಕ್ಕಾಗಿ
ಹುಡುಕುತ್ತಿದ್ದಳು. ತಕ್ಷಣ ನಾನು ತಟ್ಟುತ್ತಿದ್ದೆ. ಸಂಪೂರ್ಣ ನಿದ್ರೆಯಲ್ಲಿದ್ದರೂ ಅವಳ
sub consciousness ಮಾತ್ರ ತನ್ನ ಪಕ್ಕದಲ್ಲಿ ಇದ್ದಾರಾ ಎಂಬುದನ್ನು ಖಚಿತ
ಪಡಿಸಿಕೊಳ್ಳುತ್ತಿತ್ತು.   ಬಹಳ ಹೊತ್ತಿನವರೆಗೂ ಈ ಪ್ರಹಸನ ನಡೆದೇ ಇತ್ತು.

ಮಂಚದ ಮೇಲಿಂದ ಕೆಳಗಿಳಿದು, ಅವಳ ಮೇಲೆ ಕೈ ಇಟ್ಟುಕೊಂಡು ಸ್ವಲ್ಪ ಹೊತ್ತು ಕುಳಿತೆ. ನನಗು
ತಲೆ ಕೆಟ್ಟು ಹೋಗಿತ್ತು. ಸುಮಾರು ಹೊತ್ತಿನ ಬಳಿಕ ಮೆತ್ತಗೆ ಕೈ ಎತ್ತಿದೆ. ಇದು ಒಂಥರಾ
ಮರಳಿನಲ್ಲಿ ಗೂಡು ಕಟ್ಟುವಾಗ ಮೆತ್ತಗೆ ಗೂಡು ಬೀಳದಂತೆ ಕೈ ಬಿಡಿಸಿಕೊಂಡಂತಿತ್ತು. ಆದರೂ
ತಾಳ್ಮೆಯನ್ನು  ಮೆಚ್ಚಿಕೊಳ್ಳಲೇಬೇಕು.

ನನ್ನ ಸ್ಥಿತಿಯನ್ನು ಮೊದಲೇ ಊಹಿಸಿದ್ದ ಮನೆಯವರು, ಮುಖವನ್ನು ನೋಡಿ ಬಿದ್ದು ಬಿದ್ದು
ನಕ್ಕರು.              

---

**4. ಅಕ್ವೇರಿಯಂ ಮೀನಿಗೆ ತೂಕಡಿಕೆ ಬರಿಸಿದಾಕೆ**

ಮಂಚದ ಮೇಲೆ ಅಂಗಾತ ಮಲಗಿಕೊಂಡಿದ್ದೆ. ರಾಣಿ ಫಿಷ್ ಟ್ಯಾಂಕಿನಲ್ಲಿ ಹರಿದಾಡುತ್ತಿದ್ದ
ಬಣ್ಣದ ಮೀನುಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಲಿದ್ದಳು. ಅವಳ ಸಣ್ಣ ತಲೆಯಲ್ಲೇನೋ
ಭಾರಿ ಗೊಂದಲಗಳು ನಡೆಯುತ್ತಿದ್ದವು. ಅಲ್ಲಿಂದ ಬಂದವಳೇ, ನನ್ನ ಹೊಟ್ಟೆಯ ಮೇಲೆ ದಬಾರನೆ
ಕುಳಿತಳು. ಪ್ರಶ್ನಾವಳಿ ಕಾರ್ಯಕ್ರಮ ಪಕ್ಕಾ ಎಂದು ಮಾನಸಿಕವಾಗಿ ಸಿದ್ಧನಾದೆ.

'ಅನ್ನಾ ಮೀನು ನೀರಲಿ ಮಂಕನುತ್ತಾ. ?' ಎಂದು ಕೇಳಿದಳು. ಅದುವರೆಗೂ ಈ ವಿಚಾರವಾಗಿ ನಾನು
ಯೋಚಿಸಿಯೇ ಇರಲಿಲ್ಲ.  ಬೆಕ್ಕು ಕುಳಿತುಕೊಂಡೇ ತೂಕಡಿಸುವುದನ್ನು ನೋಡಿದ್ದೇನೆ. ನಾಯಿ
ಬಿಂದಾಸಾಗಿ ಮೈ ಚಾಚಿ ನಿದ್ದೆ ಹೊಡೆಯುವುದನ್ನು ನೋಡಿದ್ದೇನೆ. ನಿದ್ದೆ ಎಲ್ಲಾ ಜೀವ ಜಂತು
ಗಳ ಆಜನ್ಮಸಿದ್ಧ ಹಕ್ಕು ಎಂದೇ ಭಾವಿಸಿದ್ದೆ.  ಈಗ ಇವಳಿಗೆ ಹೌದು ಅಥವಾ ಇಲ್ಲ ಎಂಬ ಎರಡೇ
ಉತ್ತರಗಳನ್ನು ಮಾತ್ರ ಕೊಡಲು ಸಾಧ್ಯ. ಅದೂ ಕೂಡ ಕೊಟ್ಟ ಉತ್ತರವನ್ನು
ಸಮರ್ಥಿಸಿಕೊಳ್ಳುವಂತಿರಬೇಕು.  'ಹೂ ಮೀನು ನಮ್ಮಂಗೆ ನಿದ್ದೆ ಮಾಡ್ತವೆ. ' ಎಂದೆ.

'ನಿದ್ದೆ ಹೆಂಗ್ ಮಾರುತ್ತೆ. ಮತ್ತೆ ಮೀನಿಗೆ ನೀರಲ್ಲಿ ಚೊಲಿ(ಚಳಿ) ಆಗಲ್ವಾ ಆ.. ? '
ಎಂದು ರಾಗ ತೆಗೆದಳು.  ಈ ರೀತಿಯದ್ದೊಂದು ಪ್ರಶ್ನೆ ತಿರುಗಿ ಬರಬಹುದು ಎಂದು
ಊಹಿಸಿರಲಿಲ್ಲ. 'ಇಲ್ಲ ಮೀನಿಗೆ ಚಳಿ ಆಗಲ್ಲ. 'ಅಂದೆ ಗಟ್ಟಿಯಾಗಿ.

 ' ಯಾಕೆ. ? ' ಎಂದಳು.  'ನನಗೊತ್ತು. ಯಾಕೆ ಅಂತ. ಆದರೆ ನಾನು ಹೇಳಲ್ಲ; ಹೇಳಲ್ಲ;
ಹೇಳಲ್ಲ' ನಾನು ಮೊಂಡುತನ ಮಾಡಿದೆ.

' ಏಯ್  ಹೇಳು ಮತ್ತೆ. ಮೀನಿಗೆ ನೀರಲ್ಲಿ ಚೊಲಿ ಆಗಲ್ವಾ. ? ನಿದ್ದೆ ಹೆಂಗ್ ಮಾರತ್ತೆ.
?. ' ಎನ್ನುತ್ತಾ ಕುತ್ತಿಗೆ ಹಿಡಿದಳು. 'ಹೇಯ್ ಬಿಡೆ. ಮೀನು ಹುಟ್ಟುವಾಗಲೇ ಸ್ವೆಟರ್
ಹಾಕ್ಕೊಂಡೆ ಹುಟ್ಟಿರ್ತಾವೆ. ಅದಕ್ಕೆ ಚಳಿ ಆಗಲ್ಲ. ' ಎಂದೆ. 'ಹೌದಾ ' ಎನ್ನುತ್ತಾ ಪುನಃ
ಫಿಶ್ ಟ್ಯಾಂಕ್ ಬಳಿ ಓಡಿ ಹೋದಳು.  ಮೀನಿನ ಮೈಮೇಲಿದ್ದ ಪೊರೆ ನೋಡಿ ಕನ್ವೀನ್ಸ್
ಆಗಿರಬೇಕು. ಸ್ವಲ್ಪ ಹೊತ್ತು ಏನೂ ಕೇಳಲಿಲ್ಲ.

' ಅಯ್ಯೋ ಅನ್ನಾ ಬಾ ಇಲ್ಲಿ. ನಿಂಗೆ ಏನೋ ಒಂದು ತೋರಿಸ್ತೀನಿ. ' ಫಿಷ್ ಟ್ಯಾಂಕ್ ಕಡೆಗೆ
ನೋಡುತ್ತಾ ಕೂಗಿದಳು. ' ಅದೇನು ಅಲ್ಲಿಂದಾನೆ ಹೇಳು' ಎಂದೆ. ಯಾಕಂದ್ರೆ ಇವಳು
ಹತ್ತಿರಕ್ಕೆ ಕರೆಯುವ ಬಹಳಷ್ಟು ವಿಷಯಗಳು ಅಸಹನೀಯವಾಗುವಷ್ಟು ಮಟ್ಟಿಗೆ ಸಿಲ್ಲಿ ಸಿಲ್ಲಿ
ಆಗಿರುತ್ತವೆ.

' ಅಯ್ಯೋ ಬಾ ಅಂದ್ರೆ, ಬರಬೇಕು ' ಎಂದು ಮತ್ತೆ ಕೂಗಿದಳು. ಅದೇನು ನೋಡೋಣ ಎಂದು
ಅವಳಿದ್ದಲ್ಲಿಗೆ ಹೋದೆ. ' ಅಯ್ಯೋ ನೋಡಿಲ್ಲಿ ಮೀನು ಕನ್ನೇ ಮುಚ್ತಾ ಇಲ್ಲ. ' ಎಂದು
ತೋರಿಸಿದಳು. 'ಮೀನು ಕಣ್ಣು ಮುಚ್ಚೋದಕ್ಕೆ, ಅವಕ್ಕೆ ಕಣ್ ರೆಪ್ಪೆ ಇರೋದೆ ಇಲ್ಲ. ಅವು
ಯಾವಾಗಲು ಕಣ್ಣು ಬಿಟ್ಟುಕೊಂಡೆ ಇರ್ತಾವೆ. ' ಎಂದೆ.

'ಹೌದಾ ಆ ಆ. ಮತ್ತೆ ಕನ್ನಿಗೆ ಧೂಲು ಬಿದ್ರೆ. ? ' 'ಹೇಯ್ ಹಂದಿ!! ಮೀನು ನೀರಲ್ಲೇ
ಇರೋವಾಗ, ಧೂಳು ಹೆಂಗೇ ಬೀಳತ್ತೆ. ? ' ಅಸಹನೀಯವಾಗಿ ಹೇಳಿದೆ. 'ಹೌದಾ ಆ. ' ಎಂದು ರಾಗ
ತೆಗೆದಳು.

ಪುನಃ ' ಅಯ್ಯೋ ಅನ್ನಾ ನೋರಿಲ್ಲಿ. ಮೀನು ಪಪ್ಪನ ರೀತಿ ಗೊರಕೆ ಹೊರಿತಾ. ನಿದ್ದೆ
ಮಾರ್ತಿದೆ. ಹಹಹ ' ಎಂದು ನಗುತ್ತಾ ತೋರಿಸಿದಳು. ಮೀನು ಬಾಯಿ ತೆರೆದು ಗುಳುಂ ಗುಳುಂ ಅಂತ
ನೀರು ಕುಡಿಯುತ್ತಿದ್ದುದು ಇವಳ ಕಣ್ಣಲ್ಲಿ ಗೊರಕೆಯ ರೀತಿ ಕಾಣಿಸಿತ್ತು.

'ಹೇಯ್ ಅದು ಗೊರಕೆ ಹೊಡಿತಿಲ್ಲ. ಮೀನಿಗೆ ಉಸಿರಾಡಕ್ಕೆ ನಮ್ಮ ಹಾಗೆ ಮೂಗು ಇರಲ್ಲ.
ಬಾಯಿಯಲ್ಲಿ ಉಸಿರಾಡ್ತಾ ಇದೆ ' ಎಂದೆ.

'ಹೌದಾ ಮತ್ತೆ ಮೀನಿಗೆ ಶಿಮ್ಮಿ ಬಂದ್ರೆ ಏನ್ ಮಾಡುತ್ತೆ. ಮೂಗು ಇಲ್ವಲ್ಲಾ. ?' ಎಂದಳು.
ನನ್ನ ತಲೆ ತಗೋಂಡ್ ಹೋಗಿ ರೈಲು ಹಳಿಗೆ ಇಡಬೇಕು ಅನ್ನಿಸಿತು.

Sunday, July 1, 2012

ಟಾಟಾ ವಿಕಾಸ್ ; ಜೀವನೋತ್ಸಾಹಕ್ಕೆ ವಿಕಾಸದ ಹೆಸರು

ಎಜುಕೇಶನ್ ಕಂಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕಂಪನಿಯ, ಮೊದಲ ಕೆಲವು ದಿನಗಳು ನಿಜಕ್ಕೂ ಅವಿಸ್ಮರಣೀಯ ವಾಗಿರುತ್ತವೆ. ಯಾಕಂದ್ರೆ ಲಾರ್ವ ದಿಂದ ಕಪ್ಪೆ ಆಗಿ ಬೆಳವಣಿಗೆ ಹೊಂದುವಂತೆ, ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ ತಿರುವು ಇದು. ನಮ್ಮ ಕಂಪನಿಯ ಮೊದಲ ತರಬೇತಿಯ ದಿನಗಳು ಸೂಪರ್ ಆಗಿದ್ದವು. ಹಲವಾರು ರಾಜ್ಯಗಳಿಂದ ಬಂದ, ವಿವಿಧ ಭಾಷೆಗಳಿಂದ ಕೂಡಿದ ವೈವಿಧ್ಯಮಯ ತಾಣ ತ್ರಿವೇಂಡ್ರಮ್ ನಲ್ಲಿದ್ದ ನಮ್ಮ learning temple. ಈ ತರಬೇತಿಯ ಹೆಸರು ILP. ಅಂದರೆ initial learning program. ನಲವತ್ತು ದಿನಗಳ ಈ ತರಬೇತಿ ಶಿಬಿರದಲ್ಲಿನ ಮೋಜು, ಮಸ್ತಿ, ನಾಲಕ್ಕು ವರ್ಷಗಳ ಇಂಜಿನಿಯರಿಂಗ್ ಜೀವನ ಮರುಕಳಿಸಿದಂತಿತ್ತು. 


Saturday, June 16, 2012

ಅಮ್ಮ

ಅಮ್ಮಭಕ್ತಿಗೀತೆಗಳನ್ನೂ,
 ಅಮ್ಮಸ್ತುತಿ ಮಾಡುವ ನುಡಿಮುತ್ತುಗಳನ್ನು
ಕೇಳುತ್ತಾ ಬೆಳೆದಿರುವ ನಮಗೆ “ಅಮ್ಮ” ಅ೦ದ್ರೆ ತು೦ಬಾ ಗ್ರೇಟು ಅನ್ನೋ ಭಾವನೆ ಇದೆ.

ಹೌದು ” ಅಮ್ಮ ” ಅನ್ನೋದು
 ವಿಶ್ವದ ಅತ್ಯ೦ತ ಹೆಚ್ಚು ಘನತೆ, ಗೌರವ ಇರುವ
ಸರ್ವ ಶ್ರೇಷ್ಠ ಸ೦ಭ೦ದಕ್ಕೆ ನಾವು ಕೊಟ್ಟಿರುವ ಹೆಸರು.

 ನನ್ನ ಪಾಲಿಗೆ “ಅಮ್ಮ” ಅ೦ದ್ರೆ ನಾನು ಹೇಳುವ ಅಷ್ಟೂ ಸುಳ್ಳುಗಳನ್ನು , ಅಷ್ಟೇ
ಮುಗ್ಧವಾಗಿ ನ೦ಬುತ್ತಾ ಬ೦ದಿರುವ ಹಾಗೂ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ನಾನು
ಚೆನ್ನಾಗಿರೋದನ್ನ ಬಯಸೋ ಒ೦ದು ಪೆದ್ದುಜೀವ.

ಪಾಲಿಸಿ ಪೋಷಿಸಿದ್ದಕ್ಕೆ ಅಲ್ಲದೆ ಹೋದರು , ಕಡೇಪಕ್ಷ ಜನ್ಮ ನೀಡಿದ್ದಕ್ಕಾದರು ಅಮ್ಮನಿಗೆ
ಒ೦ದು ಥ್ಯಾ೦ಕ್ಯು ಹೇಳಬೇಕು. ಈ ಅದ್ಭುತ ವಿಶ್ವದಲ್ಲಿ ಅವತರಿಸುವ೦ತೆ ಮಾಡಿದ್ದಕ್ಕಾದರೂ…


ಇಲ್ಲಿ ಪ್ರಶ್ನೆ ಇರೋದು ಅಮ್ಮ ನಮಗೆ ಯಾಕೆ.? ಇಷ್ಟ ಅನ್ನೋದಲ್ಲ. ಅಮ್ಮಂಗೆ ನಾವು ಅ೦ದ್ರೆ
ಯಾಕೆ ಅಷ್ಟು ಇಷ್ಟ ಅನ್ನೋದು. ಹಿ೦ಗೆ ಸ೦ಶೋಧನೆ ಮಾಡುತ್ತಿದ್ದೆ. ” ಇನ್ನೂರ ಐವತ್ತಕ್ಕೂ
ಜಾಸ್ತಿ ದಿನ ತನ್ನ ಒಡಲೊಳಗೆ ಬೆಚ್ಚಗೆ ಮಲಗಿಸಿಕೊ೦ಡಿರುವಾಗ ಇದು ನನ್ನ ಸ್ವತ್ತು, ನಾನು
ಇದರ ವಾರಸುಧಾರಿಣಿ, ಇದರ ಸರ್ವಾ೦ಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ, ಎ೦ದೆಲ್ಲಾ
ತನಗೆ ತಾನೇ ಸ್ವಯಂ ಸಿದ್ಧಾ೦ತಗಳನ್ನು ಹಾಕಿಕೊ೦ಡುಬಿಡುವಳು.ಬಹುಶಃ ಅವಳ ಮೋಹದ ಕೊ೦ಡಿ
ಇಲ್ಲಿ೦ದ ಪ್ರಾರ೦ಭ ಆಗುತ್ತೆ ಅನ್ನೋದು ನನ್ನ ಅ೦ಬೋಣ “.

ಒ೦ದು ದಿನ ಅಮ್ಮ್, ವಸುಧಾ ಆಸ್ಪತ್ರೆಯಲ್ಲಿ ಒಬ್ಬಳು ನರ್ಸ್ ಅಜ್ಜಿಯ ಕಡೆ ತೋರಿಸಿ
'ಈ ಪ್ರಪ೦ಚಕ್ಕೆ ಕಾಲಿಟ್ಟಾಗ ಇವಳೇ ನಿನ್ನನ್ನು ಮೊದಲು ನೋಡಿದಾಕೆ' ಎ೦ದಳು.
ಆದರೆ ನಮ್ಮನ್ನು ಮೊದಲು ನೋಡಿದವರು ಯಾವುದೋ ನರ್ಸು!! ಡಾಕ್ಟರು ಅಲ್ಲಾ!! ಅಮ್ಮ.


ಅವಳ ಹೊಟ್ಟೆಯಲ್ಲಿ ನಮ್ಮ ರೂಪಕ್ಕೆ, ಇನ್ನೂ ಕೈ ಕಾಲುಗಳು ಮೂಡಿರುವಿದೇ ಇಲ್ಲ... ಅದಾಗಲೇ
ಅವಳ ಕನಸಲ್ಲಿ ನಾವು ಅ೦ಬೆಗಾಲಿಟ್ಟು ನಡೆದಾಡುತ್ತಿರುತ್ತೇವೆ..ಗರ್ಭದಲ್ಲೊ೦ದು ಜೀವಸೆಲೆ
ಮಿಡಿಯುತ್ತಿದ್ದರೆ, ಅದರ ಸುಖದಲ್ಲಿ ಹೊರಗೊ೦ದು ಜೀವ ನಲಿಯುತಿರುತ್ತೆ. ಬರಿ ಸ್ಪರ್ಷದ
ಆಧಾರದಲ್ಲಿ, ಬಿಟ್ಟ ಕಣ್ಣುಗಳಲಿ ಪ್ರತಿಮೆ ರೂಪುಗೊಳ್ಳುತಿರುತ್ತೆ.


ಅಮ್ಮ ಒ೦ದು ಸಮುದ್ರ. ಅವಳ ಪ್ರಪ೦ಚ ಎಷ್ಟೇ ವಿಶಾಲವಾಗಿದ್ದರೂ ಮನಸ್ಸು ಮಾತ್ರ ಯಾವಾಗಲೂ
ದಡದಲ್ಲಿ ಕೂತಿರುವ ಮಗುವಿನ ಮೇಲೆಯೇ.. ಕ್ಷಣ ಕ್ಷಣವೂ ಬ೦ದು ಸೋಕಿಸಿ ಹೋಗುವಳು.ಆ
ನಿಷ್ಕಲ್ಮಶ ಕಾಳಜಿಯ ಅಲೆಗಳ ಸ್ಪರ್ಶಕ್ಕೆ ಬೆಲೆ ಕಟ್ಟೋದಕ್ಕೆ ಆಗಲ್ಲ.

ಹೀಗೆ ಜನರಲ್ ಆಗಿ ಅಮ್ಮಂದಿರ ಬಗ್ಗೆ ಬರೆಯೋದಕ್ಕಿ೦ತ , ಅಮ್ಮನ ಕಾಳಜಿಯ ಬೆಚ್ಚನೆಯ
ಹೊದಿಕೆಯೊಳಗೆ ಕಳೆದ ಹಲವು ಸನ್ನಿವೇಶಗಳನ್ನು ಬರೆಯುತ್ತಾ ಅಮ್ಮನ ಚಿತ್ರವನ್ನು ಬಿಡಿಸ
ಬಯಸುತ್ತೇನೆ. ತು೦ಬಾ ವೈಯಕ್ತಿಕ ಅನ್ನಿಸಿದರೂ ಸ್ವಾರಸ್ಯ ಇರುವುದರಿ೦ದ ಹೇಳಿಕೊಳ್ಳಲು
ಅ೦ಜಿಕೆ ಇಲ್ಲ. ಮು೦ದುವರೆಯೋಣ


********** 1**********

ನನಗೂ ಮತ್ತು ಅಮ್ಮನಿಗು ಒ೦ದು ಮ್ಯುಚುಯಲ್ ಋಣಭಾರವಿದೆ.

ನಾನು ಜನುಮ ತಾಳುವುದಕ್ಕೆ ಅಮ್ಮ ಕಾರಣ ಆದ್ರೆ, ಅಮ್ಮ ಜೀವ೦ತವಾಗಿ ಇರೋದಕ್ಕೆ ನಾನು
ರೀಸನ್ನು.
ಅದು ಹೇಗೆ೦ದರೆ-
ಜೀವ ವಿಕಾಸದ ಒ೦ದು ಹ೦ತದಲ್ಲಿ ಬಡತನ, ಧಾರಿದ್ರ್ಯಗಳ೦ಥಾ ಕ್ಷುಲ್ಲಕ ಕಾರಣಕ್ಕೆ ಅ೦ಜಿ
ಅಮ್ಮ ಆತ್ಮಹತ್ಯೆಯ೦ತಹ ಡೇ೦ಜರಸ್ ನಿರ್ಧಾರವನ್ನು ತೆಗೆದುಕೊ೦ಡಳು. ಇನ್ನೇನು ಸಾವಿನ ಮನೆಯ
ಬಾಗಿಲು ಬಡಿಯಬೇಕು ಅನ್ನುವಷ್ಟರಲ್ಲಿ ನಾನವಳನ್ನು ತಡೆದು ನಿಲ್ಲಿಸಿದೆ.
ಹೊಟ್ಟೆಯೊಳಗಿಂದಲೇ ಒದ್ದು.
” ಛೇ!! ಏನೂ ತಪ್ಪು ಮಾಡದ ನನ್ನ ಮಗು ಕಣ್ಣು ಬಿಡೋದಕ್ಕೆ ಮು೦ಚೆ ಇಲ್ಲವಾಗಿ
ಬಿಡುತ್ತಲ್ಲಾ .” ಅಮ್ಮ ಒ೦ದು ಕ್ಷಣ ಯೋಚಿಸಿದಳು.
ಭಾವುಕಳಾದಳು.
ಕೊನೆಗೆ ತನ್ನ ಆತ್ಮಾಹುತಿಯ ಪ್ರಕ್ರಿಯೆಯನ್ನು ಪೋಸ್ಟ್-ಪೋನ್ ಮಾಡಿದಳು.
ಇನ್ನು ನಮ್ಮ ಜನನ ಆದಮೇಲೆ ಇದರ ಬಗ್ಗೆ ಯೋಚನೆ ಕೂಡ ಮಾಡದಿರುವಷ್ಟರ ಮಟ್ಟಿಗೆ ಅವಳ ಜೀವನ
ಬ್ಯುಸಿ ಆಗೋಯ್ತು . ಅದಕ್ಕೆ ಹೇಳಿದ್ದು ಅಮ್ಮ ಮತ್ತು ನಾನು ಒಬ್ಬರಿಗೊಬ್ಬರು ಫುಲ್ಲು
ಥ್ಯಾ೦ಕ್ ಫುಲ್ ಅ೦ತ. ನಾವು ಬದುಕಿರುವ ಅಷ್ಟೂ ದಿನಗಳು ಕಾ೦ಪ್ಲಿಮೆ೦ಟರಿ ಡೆಸ್ ಇದ್ದ
ಹಾಗೆ.

“ಹೆತ್ತೋಳಿಗೆ ಹೆಗ್ಗಣ ಮುದ್ದು” ಎ೦ಬುದು ಗಾಧೆ ಮಾತು.
ಇಷ್ಟು ಮುದ್ದು ಮುದ್ದಾಗಿರುವ ಮಕ್ಕಳನ್ನು ಹೆಗ್ಗಣಕ್ಕೆ ಹೋಲಿಕೆ ಮಾಡೋದು ಅ೦ದ್ರೆ
ಏನರ್ಥ.?

ಈ ಗಾದೆ ಮಾತಿನ ವಿರುದ್ಧ ಮಾನನಷ್ಟ ಮುಖದ್ದಮೆಯನ್ನು ಹೂಡಬೇಕು.
ಹೀಗೆ ಹೆತ್ತೋಳಿಗೆ ಹೆಗ್ಗಣ ಮುದ್ದು ಆದರೆ ನನ್ನನ್ನು ಹಡೆದವಳಿಗೆ ನನ್ನ ಮೂಗು ಅ೦ದ್ರೆ
ಮುದ್ದು.
ಮನೆಯಲ್ಲಿದದಾಗಲೆಲ್ಲಾ ದಿನಕ್ಕೆ ಹತ್ತಾರು ಬಾರಿ ಹಿಡಿದು ಜಗ್ಗುವಳು.
ಅಕಸ್ಮಾತ್ ಅದು ಉದ್ದವಾಗಿ, ವಿಕಾರವಾದಲ್ಲಿ ಅದರ ಸ೦ಪೂರ್ಣ ನೈತಿಕ ಹೊಣೆ ಹೊರುವ ಭಾರ
ಅವಳದ್ದೆ.
ಒ೦ದು ಸಾರಿ ನಾನು ಮಾಡಿದ ಯಾವುದೋ ತಪ್ಪಿಗಾಗಿ ಮಮ್ಮಿ -
“ನಿನ್ನ ಬದಲು, ಒ೦ದು ಎಮ್ಮೆ ಸಾಕಿಕೊ೦ಡಿದ್ದರೂ ಎಷ್ಟೋ ಚೆನ್ನಾಗಿರ್ತಿತ್ತು” ಎ೦ದಳು.
 ನನಗೂ ಕೋಪ ಬ೦ದು-
“ಅದನ್ನೇ ಹೆರಬೇಕಿತ್ತು” ಅ೦ದುಬಿಟ್ಟೆ.
 ಅಯ್ಯೋ ಅಷ್ಟಕ್ಕೇ ಮಮ್ಮಿ ನನ್ನ ಜೊತೆ ಮಾತನಾಡೋದನ್ನೇ ನಿಲ್ಲಿಸಿಬಿಟ್ಟಳು.
ಎಷ್ಟು ಸಾರಿ “ಸಾರಿ” ಕೇಳಿದರೂ ಕರಗಲಿಲ್ಲ. ಕೊನೆಗೆ ನನ್ನ ಮಾಸ್ಟರ್ ಪ್ಲಾನ್
ಬಳಸಬೇಕಾಯ್ತು.

“ಸುಮ್ಮನೆ ಹುಷಾರಿಲ್ಲದವನ೦ತೆ ನಾಟ್ಕ ಮಾಡಿದೆ “.
ಒ೦ದೇ ಕ್ಷಣದಲ್ಲಿ ಅವಳ ಕೋಪ, ಮುನಿಸು, ಸ್ವಾಭಿಮಾನ ಧೂಳಿಪಟ ಆಗೋಯ್ತು.
ಮೆತ್ತಗೆ ಮಸ್ಕಾ ಹೊಡೆಯುತ್ತಾ ನನ್ನ ಹತ್ತಿರ ಬ೦ದಳು.
ಬೆಳಗ್ಗೆ ಜಾಸ್ತಿ ಹೊತ್ತು ನಿದ್ರೆ ಮಾಡಬೇಕೆ೦ದಿದ್ದರೂ , ಸ್ಕೂಲಿಗೆ ಚಕ್ಕರ್
ಹೊಡಿಯಬೇಕೆ೦ದಿದ್ದರೂ ಈ ಸೂತ್ರವನ್ನು ಅನಾಯಾಸವಾಗಿ ಬಳಸುತ್ತಿದ್ದೆ.
ವೆಜಟೇರಿಯನ್ ಮಿತ್ರರ ಸಹವಾಸ ದೋಷದಿ೦ದಾಗಿ , ಪ್ರಾಣಹಿ೦ಸೆ ಮಹಾಪಾಪ ಎ೦ದು ಬಗೆದು
ನಾನ್-ವೆಜ್ ತಿನ್ನುವುದನ್ನು ವರುಷಗಟ್ಟಲೆ ತ್ಯಜಿಸಿದೆ.
ಮಮ್ಮಿ, ಫುಲ್ ಡ್ರಾಮ ಮಾಡಿ, ಗೋಳಾಡಿ ನನ್ನ ಆದರ್ಶಕ್ಕೆ ಕೊಳ್ಳಿ ಇಟ್ಟು ಬಿಟ್ಟಳು.
“ಮಮ್ಮಿ ನಾನು ಆದರ್ಶವಾಗಿ ಬದುಕಬೇಕು ಅ೦ದ್ರೆ ಬಿಡದೆ ಇಲ್ಲ ಅ೦ತಿಯಲ್ಲ” ಅ೦ದಿದ್ದಕ್ಕೆ,

ಅವಳು “ಅವೆಲ್ಲಾ ನನಗ್ಗೊತ್ತಿಲ್ಲ. ನನಗೆ ಗೊತ್ತಿರೋದು ಏನಪ್ಪಾ ಅ೦ದ್ರೆ ನನ್ನ ಮಗನಿಗೆ
ಚಿಕನ್ ಅ೦ದ್ರೆ ಪ೦ಚಪ್ರಾಣ ಅನ್ನೋದು. ಅಷ್ಟೆ ” ಎ೦ದಳು.
ನಿಜವಾಗಲು ನನಗೆ ಅದು ನೆಸಸರಿ ಎವಿಲ್ ಆಗಿತ್ತು.
ನಾನು ಹೇಳುವ ಅಷ್ಟೂ ಸುಳ್ಳುಗಳನ್ನು ದೂಸರಾ ಮಾತಾಡದೆ ನ೦ಬುವಳು.
ನನ್ನ ಮೇಲೆ ಅಷ್ಟು ನ೦ಬಿಕೆನಾ .? ಅಥವಾ
ಅಮ್ಮ ನ೦ಬೋ ರೀತಿನಲ್ಲಿ ಸುಳ್ಳು ಹೇಳುವ ಕಲೆ ನನಗೆ ಕರಗತ ಆಗಿಬಿಟ್ಟಿದಿಯ.?

ನಾವು ಚಿಕ್ಕವರಿದ್ದಾಗ ಅಮ್ಮ ಹೇಳಿದ್ದ ಅಷ್ಟೂ ಸುಳ್ಳುಗಳಿಗೆ ಈಗ ಬಡ್ಡಿ ಸಮೇತ ನಾವು
ಸುಳ್ಳುಗಳನ್ನು ಹೇಳುತ್ತೇವೆ ಅಷ್ಟೇ..

*********** ೨ *********

ಆ ದಿನ ರಾತ್ರಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಿ೦ದ ಅಮ್ಮನಿಗೆ ಫೋನ್ ಮಾಡಿದೆ.

” ಮಮ್ಮಿ ನನಗೆ ಡಾಕ್ಟರ್ ಆಗೋಕೆ ಇಷ್ಟ ಇಲ್ಲ. ವಾಪಾಸ್ ಮನೆಗೆ ಬರ್ತೀನಿ.” ಎ೦ದೆ.

ಬಳ್ಳಾರಿ ಮೆಡಿಕಲ್ ಕಾಲೇಜಿಗೆ ಸೇರಿ ಹತ್ತು ದಿನಗಳಾಗಿದ್ದವು.
“ಹಾಸ್ಟೆಲ್ ಸಮಸ್ಯೆನಾ.?
ಮನೆ ನೆನಪಾಗ್ತಾ ಇದ್ದೀಯ.?
ಹೊಸ ಕಾಲೇಜು ಅ೦ತ ಭಯಾನ .?
 ನಾನೆ ಅಲ್ಲಿಗೆ ಬಂದು ನಿನ್ನ ಜೊತೆ ಇರ್ತೀನಿ. ಯೋಚನೆ ಮಾಡು. ಒಳ್ಳೆ ಅವಕಾಶ
ಕಳ್ಕೊಬೇಡ.”
 ಎ೦ದೆಲ್ಲಾ ವಿಧವಿಧವಾಗಿ ಕೇಳಿದಳು.

ನನ್ನ ಕೈಲಿ ಸಾಧ್ಯಾನೆ ಇಲ್ಲ ಅ೦ತ ನಿರ್ಧಾರವನ್ನ ಹೇಳಿದೆ.
ಬಹುಶಃ ಅಮ್ಮ ಒಪ್ಪೋದಿಲ್ಲ. ಇನ್ನ ಪುಸಲಾಯಿಸೋದಕ್ಕೆ ನೋಡ್ತಾಳೆ ಎ೦ದುಕೊ೦ಡಿದ್ದೆ.


ಆದರೆ ಅವಳು ಹೇಳಿದ್ದು ಇಷ್ಟೇ -
“ಸರಿ ಬ೦ದು ಬಿಡು. ನಿನಗೇ ಇಷ್ಟ ಇಲ್ಲ ಅ೦ದ ಮೇಲೆ ಬೇಡ. ಮನಸ್ಸಿಗೆ ಒಗ್ಗದಿದ್ದ ಮೇಲೆ
ಮಾಡಬಾರದು” .

ನಾನು ನನ್ನ ಮೆಡಿಕಲ್ ಸೀಟು ಸರ೦ಡರ್ ಮಾಡಿ, ಇ೦ಜಿನಿಯರಿ೦ಗು ಸೀಟು ಪಡೆಯಲು ಒ೦ದು ದಿನ
ಮಾತ್ರ ಉಳಿದಿತ್ತು. ಆದರೆ ಅಲ್ಲಿನ ಪ್ರಿನ್ಸಿಪಾಲ್ ನನ್ನ ಸೀಟು ಸರ೦ಡರ್ ಮಾಡಿಕೊಳ್ಳಲು
ಒಪ್ಪಲಿಲ್ಲ.

ಅಮ್ಮ ಪ್ರಿನ್ಸಿಪಾಲಿಗೆ ಫೋನು ಮಾಡಿ.

“ಸಾರ್!! ನನ್ನ ಮಗನಿಗೆ ಡಾಕ್ಟರು ಬೇಡ್ವ೦ತೆ. ಬಿಟ್ಟು ಬಿಡಿ ಅವನನ್ನ ” ಅ೦ತ ಹೇಳಿದಳು.


 ಅದಕ್ಕೆ ಪ್ರಿನ್ಸಿಪಾಲ್ “ನೋಡಿಮ್ಮಾ!! ನಿಮ್ಮ ಹುಡುಗನ ಮೇಲೆ ನಮಗೇನು ದ್ವೇಷ ಇಲ್ಲ.
ಸರ್ಕಾರಿ ಕಾಲೇಜಲ್ಲಿ ಫ್ರಿ ಮೆಡಿಕಲ್ ಸೀಟು ಸಿಗೋದಕ್ಕೆ ಅದೃಷ್ಟ ಮಾಡಿರಬೇಕು. ಡಾಕ್ಟರು
ಅ೦ದ್ರೆ ಸಮಾಜದಲ್ಲಿ ಎಷ್ಟು ಘನತೆ ಇದೆ ಗೊತ್ತಾ ನಿಮಗೆ. ಸುಮ್ಮನೆ ಒಳ್ಳೆಯ ಅವಕಾಶ
ಕಳ್ಕೊತ ಇದಾನೆ. ಬಯ್ದು ಬುದ್ಧಿ ಹೇಳೋದು ಬಿಟ್ಟು , ಅವನು ಹೇಳಿದ೦ಗೆ ಕೇಳ್ತಿರಲ್ಲಾ . ”
ಎ೦ದರು.

ಅದಕ್ಕೆ ಮಮ್ಮಿ -
“ನಾವು, ನೀವು ಏನಾದ್ರು ಓದೋದಕ್ಕಾಗುತ್ತ ಸಾರ್.
ಓದಬೇಕಾಗಿರೋನಿಗೆ ಇಷ್ಟ ಇಲ್ಲ ಅ೦ದ ಮೇಲೆ, ಅದು ಎಷ್ಟು ದೊಡ್ದದಾಗಿದ್ರೆ ತಗೋ೦ಡು ಏನ್
ಮಾಡ್ತಿರ.” ಎ೦ದಳು.
ಅಷ್ಟೇ!! ಮು೦ದಕ್ಕೆ ಪ್ರಿನ್ಸಿ ಮಾತೇ ಆಡಲಿಲ್ಲ.
ನನ್ನ ಎಪ್ರಾನು, ಬ್ಯಾಡ್ಜು, ಬೋನ್ ಸೆಟ್ಟು ಗಳನ್ನೆಲ್ಲಾ ಬಿಟ್ಟು ಮೆಡಿಕಲ್ ಕಾಲೇಜಿಗೆ
ಬೈ ಬೈ ಹೇಳಿದೆ.
ಕೆಮ್ಮು, ಶೀತ ಆದಾಗಲೆಲ್ಲಾ ಅಮ್ಮ ಇದನ್ನು ನೆನಪಿಸಿಕೊಳ್ಳುತ್ತಾ -


 ”ನೀನು ಎಲ್ಲಾದರು ಡಾಕ್ಟರ್ ಆಗಿದ್ದಿದ್ರೆ, ಕಡೇಪಕ್ಷ ನಾವಾದರು ನಿನ್ನ ಹತ್ತಿರ ಟ್ರೀಟ್
ಮೆ೦ಟಿಗೆ ಬರ್ತಾ ಇದ್ವಲ್ಲೋ ಮಗನೇ!! ” ಅ೦ತ ರೇಗಿಸುವಳು.(ನಾನು ಡಾಕ್ಟರ್ ಆಗೋದಕ್ಕೆ
ಹೋಗಿದ್ದನ್ನ.... ಚಾನ್ಸ್ ಸಿಕ್ಕಾಗೆಲ್ಲ.. ಹೇಳಿಕೊಳ್ತಾ ಇರ್ತೀನಿ.. :-) )

ನನ್ನ ಪ್ರತಿ ನಿರ್ಧಾರಗಳಿಗೂ ಬೆ೦ಬಲ ಕೊಟ್ಟಳು. ಸೋತರೂ ನ೦ಬಿಕೆ ಇಟ್ಟಳು.
ನಾನು ಇ೦ಜಿನಿಯರಿ೦ಗ್ ಓದುವಾಗ ಮೊಟ್ಟ ಮೊದಲ ಬಾರಿಗೆ ಎರಡು ವಿಷಯಗಳಲ್ಲಿ ಅನುತ್ತಿರ್ಣ
ಕೀರ್ತಿ ಪತಾಕೆಯನ್ನು ಹಾರಿಸಿದೆ.
ಅ೦ದ್ರೆ ಎರಡು ಸಬ್ಜೆಕ್ಟ್ ಗಳಲ್ಲಿ ಡಮ್ ಚಿಕಿ ಡಮ್.
 ಅದು ನಾವು ಗೆಳೆಯರೆಲ್ಲಾ ಆತ್ಮೀಯರಾಗುತ್ತಾ ,ಮೆರೆಯಲು ಪ್ರಾರ೦ಭಿಸಿದ ಸುವರ್ಣಯುಗದ ಆದಿ
ಕಾಲದ ಸಮಯ. ಎಜುಕೇಶನ್ ಸಿಸ್ಟಮ್ಮೆ ಸರಿಯಿಲ್ಲ ಎ೦ದು ದೂರುವಷ್ಟರ ಮಟ್ಟಿಗೆ
ದೊಡ್ದವರಾಗಿದ್ದೆವು.
 ನನ್ನ ಆತ್ಮೀಯ ಮಿತ್ರ ಬಳಗದಲ್ಲಿಯೂ ಹತ್ತು ಇಪ್ಪತ್ತು ಪರ್ಸೆ೦ಟ್ ಅ೦ಕಗಳು ಕಡಿಮೆಯಾದವು.

ಫೇಲು ಅನ್ನೋದೊ೦ದು ಕೆಟ್ಟ ಸಮಾಚಾರ.
ಅದಕ್ಕೆ ಮನೆಯವರು ಹೇಗೆ ಪ್ರತಿಕ್ರಿಯೆ ಕೊಡಬಹುದು ಅನ್ನೋ ಅ೦ಜಿಕೆಯಿ೦ದಲೇ ಅಮ್ಮನಿಗೆ
ಹೇಳಿದೆ.

ಅದಕ್ಕವಳು-
 ”ಹೌದಾ!! ನೀನು ಬೇಜಾರು ಮಾಡ್ಕೋಬೇಡ ಮಗನೆ. ಮತ್ತೆ ಪಾಸ್ ಮಾಡಿದರಾಯಿತು” ಎ೦ದಳು.
ನನಗೆ ತಲೆ ಕೆಟ್ಟು ಹೋಯ್ತು.
“ಮಮ್ಮಿ!! ಕೊನೆಪಕ್ಷ ಒ೦ದು ಮಾತಾದರು ಬಯ್ಯಿ. ಇಲ್ಲಾ ಅ೦ದ್ರೆ ನನಗೆ ಒ೦ಥರಾ ಪಾಪಪ್ರಜ್ಞೆ
ಕಾಡತ್ತೆ” ಎ೦ದೆ.
“ಯಾರಾದರೂ ಫೇಲ್ ಆಗಬೇಕು ಅ೦ತ ಪರೀಕ್ಷೆ ಬರಿತಾರ.ನೀನು ಫೇಲ್ ಆಗಿದಿಯ. ನೀನೆ ಪಾಸ್
ಮಾಡ್ತಿಯ. ಅದಕ್ಕೆ ನಾನು ಯಾಕೆ ಬಯ್ಯಬೇಕು “ಎ೦ದಳು.

ನನ್ನ ರಕ್ತದಲ್ಲಿ ಸ್ಪರ್ಧಾ ಮನೋಭಾವವೇ ಇ೦ಗಿ ಹೋಗಿ ,ಅಲ್ಪಕ್ಕೆ ತ್ರುಪ್ತನಾಗುವ
ಮನಸ್ತಿತಿ ಬ೦ದಲ್ಲಿ , ಅದಕ್ಕೆಲ್ಲಾ ಮೂಲ ಕಾರಣ ನನ್ನ ಸೋಲುಗಳ ಬಗೆಗಿನ ಅಮ್ಮನ ದಿವ್ಯ
ನಿರ್ಲಕ್ಷ್ಯ.


*********** ೩ **********
ನನ್ನ ವೃತ್ತಿ ಜೀವನವನ್ನು ಪ್ರಾರ೦ಭಿಸಲು ಹೊರಟು ನಿ೦ತದಿನ ಅಮ್ಮ ಹೇಳಿದಳು -


” ಮಗನೇ!! ನೀನು ಅಲ್ಲಿ ಕೂಡ ತು೦ಬಾ ದಿನ ಇರಲ್ಲ, ಓಡಿ ಬಿಡ್ತೀಯ ಅನ್ನೋದು ನನಗೆ
ಗೊತ್ತು. ಆದರೂ ಹೇಳ್ತೀನಿ. ದಯವಿಟ್ಟು ಇರೋ ಕೆಲಸ ಬಿಟ್ಟು, ಬ೦ಗಾರದ೦ತಹ ನಿನ್ನ ಜೀವನ
ಹಾಳು ಮಾಡ್ಕೋಬೇಡ. ದೊಡ್ಡದೋ, ಚಿಕ್ಕದೋ ನಮ್ಮ ಪಾಲಿಗೆ ಬ೦ದಿರುವ ಕೆಲಸವನ್ನು
ಶ್ರದ್ಧೆಯಿ೦ದ ಮಾಡಬೇಕು. ಅದರಲ್ಲೇ ಖುಷಿ ಕಾಣಬೇಕು” ಎ೦ದಳು. ಈ ರೀತಿಯ
ಬುದ್ಧಿಮಾತುಗಳನ್ನು ಅಷ್ಟಾಗಿ ಕೇಳುತ್ತಿರಲಿಲ್ಲ. ಆದರೂ ಈ ಬಾರಿ ಮಾತ್ರ ನನ್ನ
ಅ೦ತರ್ಯವನ್ನು ತಟ್ಟಿದ್ದಳು.
ನನ್ನ ಮೊದಲ ಕೆಲಸದ, ಮೊದಲ ಸ೦ಬಳ ಹಿಡಿದು ಮನೆಗೆ ಹೋಗುವ ಮುನ್ನ -

” ಮಮ್ಮಿ!! ನಿ೦ಗೆ ಏನ್ ತರಲಿ” ಅ೦ತ ಕೇಳಿದೆ.
ಅದಕ್ಕವಳು “ಒ೦ದು ಪ್ಯಾಕೆಟ್ ಆಲುಗಡ್ಡೆ ಚಿಪ್ಸ್ ತಗೊ೦ಡ್ ಬಾ ” ಅ೦ದಳು.
ಮಗನ ಮೊದಲ ಸ೦ಬಳದಲ್ಲಿ ಅಮ್ಮ ತನಗಾಗಿ ಕೇಳಿದ ಅಮೂಲ್ಯ ವಸ್ತು ಆಲುಗಡ್ಡೆ ಚಿಪ್ಸು.
ಇಷ್ಟೇ ಇವಳ ಪ್ರಪ೦ಚ. ತು೦ಬಾ ಚಿಕ್ಕದು.(ಆನ೦ತರ ಅವಳು ನನ್ನ ಮೊದಲ ಸ೦ಬಳವನ್ನು ಹೊರನಾಡು
ಅನ್ನಪೂರಣೆಶ್ವರಿ ದೇವಾಲಯದಲ್ಲಿ ಅನ್ನದಾಸೋಹಕ್ಕಾಗಿ ವಿನಿಯೋಗಿಸಿದ್ದು ಬೇರೆಮಾತು.)

ನೂರಾರು ರೂಪಾಯಿ ದುಡ್ಡು ಕೊಟ್ಟು ಕಥೆ, ಕಾದ೦ಬರಿ ಪುಸ್ತಕಗಳನ್ನು ಕೊ೦ಡು ಮನೆಗೆ ಹೋದಾಗ,

ಅಷ್ಟೂ ಪುಸ್ತಕಗಳನ್ನೂ ತಿರುಗಾ-ಮುರುಗಾ ಎರಡೆರಡು ಸಲ ನೋಡುವಳು.
” ಚೇತನ!! ಇಷ್ಟು ದುಡ್ಡಲ್ಲಿ ಎರಡು ಸೀರೆ ಬರ್ತಿದ್ವಲ್ಲೋ ..? “ಎ೦ದು ಅಚ್ಚರಿ ಪಡುತ್ತ
ಕೇಳುವಳು.
 ಹೀಗೆ ಅಮ್ಮನ ಪ್ರಿಯಾರಿಟಿಗಳೇ ಬೇರೆ.

ಅಮ್ಮ ಓದಿದ್ದು ಮೂರನೆಯ ಕ್ಲಾಸಿನವರೆಗೆ ಮಾತ್ರ. ಸುಲಲಿತವಾಗಿ ಓದಲು ಬಾರದು.
ಪದಗಳನ್ನು ಕೂಡಿಸಿಕೊ೦ಡು ಒ೦ದೊ೦ದೇ ಸಾಲುಗಳನ್ನು ಅರ್ಥ ಮಾಡಿಕೊಳ್ಳುತ್ತಾ ನಿಧಾನವಾಗಿ
ಓದುವಳು.
ಒಮ್ಮೆ ನಾನು ಬರೆದಿದ್ದ ನಮ್ಮ ಸಾಕು ನಾಯಿ ಜಿಮ್ಮಿಯ ಕಥೆಯನ್ನು ಅವಳಿಗೆ ಓದಲು ಕೊಟ್ಟೆ.

 ಪ್ರತಿ ಸಾಲುಗಳನ್ನು ಓದಿದಾಗಲೂ ಬಿದ್ದು ಬಿದ್ದು ನಕ್ಕಳು. ಯಾಕೆ೦ದರೆ ಜಿಮ್ಮಿಯ ಬಗ್ಗೆ
ಗೊತ್ತಿದ್ದವರ ಪೈಕಿ ಅಮ್ಮ ಎರಡನೆಯವಳು.

“ಎ೦ಥಾ ನಾಯಿ ಅದು. ಯಾರಾದರೂ ಹೊಡೆಯೋದಕ್ಕೆ ಬ೦ದರೆ , ಹತ್ತಿರ ಬರೋವರೆಗೂ ಸುಮ್ಮನಿದ್ದು
, ಇನ್ನೇನು ಹೊಡಿಬೇಕು ಅನ್ನೋವಾಗ ಓಡುತ್ತಿತ್ತು. ” ಎ೦ದಳು. ಮನಸೋಇಚ್ಛೆ ನಕ್ಕಳು.
ಅದನ್ನು ಬರೆದದ್ದು ಸಾರ್ಥಕ ಆಯ್ತು ಅನ್ನಿಸ್ತು.

ಅಮ್ಮಾ ಸ್ಕೂಲ್ ಬಸ್ ಬ೦ದಾಗೆಲ್ಲಾ ಹೇಳ್ತಾ ಇರ್ತಾಳೆ -

“ಈಗಲೂ ಯೂನಿಫಾರಂ ತೊಡಿಸಿ, ಸ್ಕೂಲ್ ಬ್ಯಾಗು ಹಾಕಿ , ಕೈಯಲ್ಲೊ೦ದು ಊಟದ ಬುಟ್ಟಿ ಕೊಟ್ಟು
ನಿನ್ನ ಮತ್ತೆ ಸ್ಕೂಲಿಗೆ ಕಳಿಸಬೇಕು ಅನ್ನಿಸುತ್ತೆ. ನನ್ನ ಕಣ್ಣಿಗೆ ನೀನು ದೊಡ್ಡವನ
ರೀತಿ ಕಾಣಿಸೋದೆ ಇಲ್ಲ.” ಅ೦ತ. ಈ ರೀತಿಯ ವಯಸ್ಸಿಲ್ಲದ ಆಸೆಗಳಿಗೆ ಏನು ಹೇಳೋದು .? ಆದರೂ
ಅವಳ ಕಲ್ಪನೆಯೇ ವಿಚಿತ್ರ.

“ಮಗನೆ!! ನೀನು ಇ೦ಜಿನಿಯರ್ ಕಣೋ.

 (ಹೌದಾ ..? ) ನಿನಗಲ್ಲದೆ ಇದ್ದರೂ ನಿನ್ನ ವೃತ್ತಿಗಾದರು ಸ್ವಲ್ಪ ಮರ್ಯಾದೆ ಕೊಡು.

 ಟಿಪ್-ಟಾಪ್ ಆಗಿರೋದನ್ನ ಕಲಿ” ಅ೦ತ ಹೇಳ್ತಾ ಇರ್ತಾಳೆ.

 ಇಲ್ಲಿ “ಟಿಪ್-ಟಾಪ್” ಎನ್ನುವ ಪದದ ಪ್ರಯೋಗ ಕೇವಲ ನಾನು ತೊಡುವ ಬಟ್ಟೆಗಳಿಗೆ ಮಾತ್ರ
ಸೀಮಿತವಾಗಿದ್ದಿದ್ದಲ್ಲಿ ಅವಳ ಆಸೆಯನ್ನು ಪೂರೈಸಬಹುದಿತ್ತು. ಆದರೆ ಆ ಟಿಪ್-ಟಾಪ್
ಎನ್ನುವುದು ತಥಾಕತಿತ ದೊಡ್ಡತನದ ಸೀಮಾತೀತ ರೂಲ್-ಗಳು.


*************೪ *************
ಅಮ್ಮನಿಗೆ ಆಗಾಗ ಬೀಳುವ ವಿಲಕ್ಷಣ ಅಭ್ಯಾಸವಿದೆ. ಅದು ಯಾಕೆ ಅ೦ತ ಗೊತ್ತಿಲ್ಲ.
ಅಮ್ಮ ಬೀಳೋದು ಎಷ್ಟು ಕಾಮನ್ನು ಅ೦ದ್ರೆ, ಅಡುಗೆ ಮನೆಯಲ್ಲಿ ಪಾತ್ರೆಗಳು ಬಿದ್ದ
ಸದ್ದಾದರೂ ಅಪ್ಪಾಜಿ ನಡುಮನೆಯಿ೦ದಲೇ ಕೂಗುವರು -

” ಅಯ್ಯೋ!! ನಿಮ್ಮಮ್ಮ ಬಿದ್ಲು ಅನ್ಸತ್ತೆ ನೋಡ್ರೋ” ಅ೦ತ.
 ಅಕಸ್ಮಾತ್ ಬಿದ್ದಿದ್ದರು ಥಟ್ ಅ೦ತ ಎದ್ದು ಕೂತು ಏನು ಆಗಿಯೇ ಇಲ್ಲದ೦ತೆ ಇರುವಳು.
“ಏನ್!! ಮಮ್ಮಿ ಚಿಕ್ಕ ಹುಡುಗಿ ತರಹ ಬಿಳ್ತಾ ಇರ್ತಿಯ. ಸ್ವಲ್ಪ ನೋಡಿಕೊ೦ಡು ನಡಿಬಾರದೆ.”
ಅ೦ತ ನಾನೂ ಅಣಕಿಸುತ್ತಿದ್ದೆ.
 ಮೊದಲೆಲ್ಲಾ ಪರವಾಗಿಲ್ಲ. ಅಷ್ಟು ಪೆಟ್ಟಾಗುತ್ತಿರಲಿಲ್ಲ. ಆದರೆ ವಯಸ್ಸಾಗುತ್ತಾ ಬ೦ದ೦ತೆ
ಒ೦ದೊ೦ದು ಸಾರಿ ಬಿದ್ದಾಗಲು ಸಾವರಿಸಿಕೊಳ್ಳಲು ತು೦ಬಾ ದಿನ ತಗೋತ ಇದ್ಲು.

ಒಮ್ಮೆ ನಮ್ಮ ತೋಟದಮನೆಯ ಚರ೦ಡಿ ದಾಟುವಾಗ ಬಿದ್ದು , ಅವಳ ಪಾದದ ಮೂಳೆಯೇ ಮುರಿದು
ಹೋಯ್ತು. ಈ ವಿಷಯವನ್ನು ನನಗೆ ತಿಳಿಸಿರಲಿಲ್ಲ.
ನಾನಾಗ ಚೆನೈ ನಲ್ಲಿದ್ದೆ.
ಊರಿಗೆ ಹೋದಾಗ, ಮಮ್ಮಿ ಹಾಸಿಗೆಯ ಮೇಲೆ ಮಲಗಿದ್ದಳು.
ತುದಿಬೆರಳಿನಿ೦ದ ಹಿಡಿದು ಮೊಣಕಾಲಿನವರೆಗೂ ಪ್ಲಾಸ್ಟರ್ ಕಟ್ಟಿದ್ದರು.
ತು೦ಬಾ ದುಃಖ ಆಯ್ತು.

ಯಾಕ೦ದ್ರೆ
ನಾನು ಪ್ರತಿ ಸಾರಿ ಊರಿಗೆ ಹೋದಾಗಲು ..
 ಬಾಗಿಲಲ್ಲಿ ನನಗಾಗಿ ಕಾಯುತ್ತಾ ನಿ೦ತು,
ಬ೦ದ ತಕ್ಷಣ ಟಾಪ್ ಟು ಬಾಟಮ್ ನನ್ನ ನೋಡಿ -
“ಹೋದ ಸಾರಿ ಬ೦ದಿದ್ದಕ್ಕಿ೦ತಲೂ ಈ ಸಾರಿ ಇನ್ನು ಸಣ್ಣ ಆಗಿದ್ದಿಯ” ಅ೦ತ
ಅದೇ ಹಳೆ ಡೈಲಾಗ್ ಹೊಡೆದು,
 ನನ್ನ ಮೂಗು ಹಿಡಿದು ಜಗ್ಗಿ ,
ಮುತ್ತು ಕೊಡುತ್ತಿದ್ದ ಮಮ್ಮಿ,
 ಅಸಹಾಯಕಳಾಗಿ ಹಾಸಿಗೆ ಮೇಲೆ ಮಲಗಿದ್ದಳು.


“ಏನ್ ಮಮ್ಮಿ.
ಇಷ್ಟೆಲ್ಲಾ ಆಗಿದ್ದರೂ ನನಗೆ ಒ೦ದು ಮಾತು ಕೂಡ ಹೇಳಿಲ್ಲ.? ಆಲ್ವಾ ” ಅ೦ತ
ಪ್ರಶ್ನಿಸಿದೆ.
ಅದಕ್ಕವಳು -
 ”ಹೇ!! ಹೋಗೋ!! ‘ಚಿಕ್ಕ ಹುಡುಗಿ ತರ ಬಿಳ್ತಾ ಇರ್ತಿಯ ಅ೦ತ ಆಡ್ಕೊತಿಯ.’ ಅದಕ್ಕೆ ನಿನಗೆ
ಹೇಳಲಿಲ್ಲ.” ಎ೦ದಳು.

ಇ೦ಥ ಸಮಯದಲ್ಲೂ ಅಮ್ಮನ ಸೆನ್ಸ್ ಆಫ್ ಹ್ಯೂಮರ್ ನೋಡಿ ಏನು ಹೇಳಬೇಕೋ ತಿಳಿಯಲಿಲ್ಲ.
 ಅವಳನ್ನು ಅಪ್ಪಿಕೊ೦ಡು ಹೇಳಿದೆ “ಸರಿ!! ಬಿಡು ಇನ್ನು ಮು೦ದೆ ಬೀಳೋ ಪ್ರಮೇಯನೆ ಇಲ್ಲ
“.

************ ೫ ***********


ಅ೦ತೂ ನನ್ನ ಎದೆಯೊಳಗಿದ್ದ ಡೈರಿ ಯಿ೦ದ ಅಲ್ಲೊ೦ದು ಇಲ್ಲೊ೦ದು ಪೇಜು ಕಿತ್ತು , ಇಲ್ಲಿ
ಅ೦ಟಿಸಿದ್ದೇನೆ.

 ಅಮ್ಮನ ಜೊತೆಗಿನ ತು೦ಬಾ ಚಿಕ್ಕ ಮಾತು ಕಥೆ ಗಳಲ್ಲೂ ಸ್ವಾರಸ್ಯ ಕಾಣುವುದರಿ೦ದ ,
ಬರೆಯುತ್ತಾ ಹೋದರೆ ಅದಕ್ಕೊ೦ದು ಕೊನೆಯಿಲ್ಲ. ಈ ಲಹರಿಯನ್ನು ಒ೦ದು ಕಡೆ ನಿಲ್ಲಿಸಲೋಸುಗ
ಮುಗಿಸುತಿರುವೆ. ಓದಿದ ಮೇಲೆ ಯಾರಿಗಾದರು ಅಮ್ಮನ ನೆನಪಾದರೆ ಸ೦ತೋಷ. ಬರೆದು ಮುಗಿಸಿದ
ತಕ್ಷಣ ಫೋನ್ ಮಾಡಿದೆ.

“ಅಮ್ಮಾ ಜಾನ್ ಏನ್ ಮಾಡ್ತಾ ಇದ್ದೀಯ.? “

“ಚೇತನ!! ನಾನು ಎಲ್ಲಿಗೆ ಹೋಗಿದ್ದೆ.? ಹೇಳು ನೋಡೋಣ.”


ಬರಿ ಇ೦ಥವೇ ಸ್ಟುಪಿಡ್ ಪ್ರಶ್ನೆಗಳು.

“ನಿ ಹೇಳದೆ ನನಗೆ ಹೆ೦ಗ್ ಗೊತ್ತಾಗಬೇಕು ಮಮ್ಮಿ. ನೀನೆ ಹೇಳು “

“ಅರಸೀಕೆರೆ ಹತ್ತಿರ ಮಿನಿ ತಿರುಪತಿ ಬೆಟ್ಟ ಇದೆ ಗೊತ್ತಾ.?”

“ಹೂ ಗೊತ್ತು. ರೈಲಲ್ಲಿ ಹೋಗುವಾಗ ಕಾಣ್ಸತ್ತೆ.”
“ಅಲ್ಲಿಗೆ ಹೋಗಿದ್ವಿ ಕಣೋ!!. ಸಾವಿರದ ಐನೂರು ಮೆಟ್ಟಿಲು ಹತ್ತಿದ್ದು. ನಿಮ್ಮಪ್ಪಜಿಗಿ೦ತ
ನಾನೆ ಮೊದಲು ಹತ್ತಿದ್ದು. ” ಎ೦ದಳು .
ಈ ಹುಚ್ಚುತನಕ್ಕೆ ಏನು ಹೇಳಬೇಕೋ ತಿಳಿಯಲಿಲ್ಲ.
“ಅಲ್ಲಾ ಮಮ್ಮಿ. ನೆಲದ ಮೇಲೆ ಅಷ್ಟೋ೦ದು ದೇವರುಗಳು ಖಾಲಿ ಇರೋವಾಗ, ಕಷ್ಟ ಪಟ್ಟು ಬೆಟ್ಟ
ಹತ್ತಿ ಅಲ್ಲಿಗೆ ಹೋಗುವ ಅವಶ್ಯಕತೆ ಏನಿತ್ತು .? “

“ನನ್ನ ಮಕ್ಕಳಿಗೆ ಒಳ್ಳೆ ಆಯಸ್ಸು, ಆರೋಗ್ಯ ಕೊಡಲಿ ಅ೦ತ ಕೇಳೋದಕ್ಕೆ ಹೋಗಿದ್ದೆ ” ಎ೦ದಳು


“ಹೌದೌದು!! ನೀವು ಎಕ್ಸಸೈಜ್ ಮಾಡಿ, ನಮ್ಮ ಹೆಲ್ತು ಚೆನ್ನಾಗಿರಬೇಕು ಅ೦ದುಕೊ೦ಡರೆ , ಅದು
ಆಗುತ್ತಾ ಮಮ್ಮಿ ” ಎ೦ದೆ. ಅಮ್ಮ೦ಗೆ ನಾನು ಹೇಳಿದ್ದು ಅರ್ಥ ಆಗಲಿಲ್ಲ.

ಸುಮ್ಮನಾದಳು.

ಇನ್ನು ಒ೦ದು ವಾರಕ್ಕಿ೦ತಲೂ ಜಾಸ್ತಿ ಕಾಲು ನೋವಿರುತ್ತೆ. ತಾನೇ ಬೇಕು ಅ೦ತ
ಮಾಡಿಕೊ೦ಡಿರೋದರಿ೦ದ ಕಮಕ್ ಕಿಮಕ್ ಅನ್ನದೆ ಅನುಭವಿಸುವಳು.

Saturday, June 2, 2012

ಕನಸೂರಲ್ಲಿ ಸ್ಕೂಲ್ ಡೇಚಕ್ಕಳಂಬಕ್ಕಳ ಹಾಕಿ ಕುಳಿತಿದ್ದ ಸೀನನ ಮಂಡಿಯು, ಬಲಭಾಗದಲ್ಲಿ ಕುಳಿತಿದ್ದ ಗೌತಮನ
ಮಂಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು, ಆಗಾಗ ಮಂಡಿಯನ್ನು
ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ. ಸೀನನ ಎಡಭಾಗದಲ್ಲಿ ಕುಳಿತಿದ್ದ
ಪುತ್ತು, ಇವರ ತಿಕ್ಕಾಟದ ಪರಿವಿಯೇ ಇಲ್ಲದೆ ಕಲಾವತಿ ಟೀಚರ್ ಹೇಳುತ್ತಿದ್ದ ಭಾರತ
ಸಂವಿಧಾನದ ಕಥೆಯನ್ನು ಕೇಳುತ್ತಿದ್ದ.

‘ಭೀಮ್ ರಾವ್ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಕರಡು ನಕ್ಷೆಯನ್ನು ಬರೆದರು.
ಅಸ್ಪ್ರಷ್ಯತೆಯನ್ನು ಅವರು ಬಲವಾಗಿ ಖಂಡಿಸಿದರು. ಮಕ್ಕಳಾ ಅವರು ನಿಮ್ಮ ಹಾಗೆ ಸ್ಕೂಲಲ್ಲಿ
ಓದುವಾಗ ಅವರೊಬ್ಬರನ್ನೇ ಸಪರೆಟಾಗಿ ಬೇರೆ ಕಡೆ ಚೀಲದ ಮೇಲೆ ಕೂರಿಸುತ್ತಿದ್ದರು. ’

Friday, May 25, 2012

ಅಮ್ಮಂಗೆ ಒ೦ದು ಪ್ರೀತಿಯ ಪತ್ರ

ಥ್ಯಾಂಕು ಮಮ್ಮಿ. ಲಾಲಿಸಿ, ಪಾಲಿಸಿ ಇಷ್ಟು ದೊಡ್ದವನನ್ನಾಗಿ ಮಾಡಿರೋದಕ್ಕಲ್ಲ. ನನಗೆ
ಜನ್ಮ ಕೊಟ್ಟಿದ್ದಕ್ಕೆ. ಈ ಅದ್ಭುತ ವಿಶ್ವದಲ್ಲಿ ನಾನೂ ಒಬ್ಬ ಅನ್ನೋ ರೀತಿ
ಮಾಡಿದ್ದಕ್ಕೆ. ಥ್ಯಾಂಕ್ ಯು.

‘ ಅಮ್ಮ ’ ಅನ್ನೋದು ವಿಶ್ವದ ಅತ್ಯಂತ ಹೆಚ್ಚು ಘನತೆ, ಗೌರವ ಇರುವ ಸರ್ವ ಶ್ರೇಷ್ಠ
ಸಂಬಂಧಕ್ಕೆ ನಾವುಗಳು ಕೊಟ್ಟಿರುವ ಹೆಸರು. ಆದರೆ ನನಗೆ ಅಮ್ಮ ಅಂದಾಗ, ಕಣ್ಣ ಮುಂದೆ
ಬರೋದು.. ನಿನ್ನ ಪೆದ್ದು ಪೆದ್ದು ಮುಖ. ನಾನು ಹೇಳುವ ಅಷ್ಟೂ ಸುಳ್ಳುಗಳನ್ನು ಅಷ್ಟೇ
ಮುಗ್ಧವಾಗಿ ನಂಬುತ್ತಾ ಬಂದಿರುವ ನಿನ್ನ ಪೆದ್ದು ಜೀವ.

Thursday, April 26, 2012

Calling... sina; ಮಿಸ್ ಆದವನ ಫೋನ್ ಕಾಲ್


ಲ್ಯಾಂಡ್ ಲೈನ್ ಫೋನು ಒಂದೇ ಸಮನೆ ರಿಂಗಿಸುತ್ತಿತ್ತು. ನಿದ್ದೆಗಣ್ಣಿನಲ್ಲಿಯೇ ಫೋನು ಇರೋ
ಕಡೆಗೆ ಹೋದೆ. ರಿಸೀವರ್ ಮೇಲಕ್ಕೆತ್ತುವ ಮುಂಚೆ ಸ್ವಲ್ಪ ಅಳುಕು ಮೂಡಿತು. ಗಡಿಯಾರದ
ಕಡೆಗೆ ನೋಡಿದೆ. ಸರಿಯಾಗಿ ನಾಲಕ್ಕು ಘಂಟೆ. ಬೆಳಗಿನ ಜಾವ ಇಷ್ಟು ಹೊತ್ತಿನಲ್ಲಿ ಬರುವ
ಕರೆಗಳೆಲ್ಲಾ ಸಾಮಾನ್ಯವಾಗಿ ಏನಾದರೊಂದು ದುರಂತದ ಸಮಾಚಾರವನ್ನು ಹೊತ್ತು ತಂದಿರುತ್ತವೆ.
ಮೈ ಹಿಡಿದು ಜಗ್ಗುತ್ತಿದ್ದ ನಿದ್ದೆಯೂ ಒಂದು ಕ್ಷಣ ಹಾರಿ ಹೋಯ್ತು. ನಿಧಾನವಾಗಿ ರಿಸಿವರ್
ಮೆಲಕ್ಕೆತ್ತಿ, ಆತಂಕದ ಸ್ವರದಲ್ಲಿ ‘ಹಲೋ.. ’ ಎಂದೆ. ಅತ್ತ ಕಡೆಯಿಂದ ಯಾವುದೇ ಸದ್ದು
ಬರಲಿಲ್ಲ. ಕರೆ ಕತ್ತರಿಸಿ ಹೋಯ್ತು. ರೀ-ಡಯಲ್ ಮಾಡಿದೆ. ‘ಬ್ಯುಸಿ’ ರಿಂಗ್- ಟೋನು
ಕೇಳಿಸಿತು. ಸ್ವಲ್ಪ ಹೊತ್ತಿನ ನಂತರ ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ
ಪ್ರದೇಶದ ಹೊರಗಿದ್ದಾರೆ’ ರೆಕಾರ್ಡೆಡ್ ಮೆಸೇಜು ಹೆಣ್ಣಿನ ರಾಗದಲ್ಲಿ ಕೇಳಿಸಿತು. ಸ್ವಲ್ಪ
ಹೊತ್ತು ಕಾದೆ. ಯಾವುದೇ ಕರೆ ಬರಲಿಲ್ಲ.


‘ ಎಲ್ಲೋ. ? ಲೈನ್ ಪ್ರಾಬ್ಲಂ ಇರಬೇಕು. ’ ಎಂದುಕೊಂಡು, ಮಂಚದಿಂದ ಕೆಳಗೆ ಬಿದ್ದಿದ್ದ
ಹೊದಿಕೆಯನ್ನು ಮೇಲಕ್ಕೆ ಹಾಕಿ ಮಲಗಿದೆ. ಅತ್ತಿತ್ತ ಹೊರಳಾಡಿದರು ನಿದ್ದೆ ಬರಲಿಲ್ಲ.
ಯಾರಾಗಿರಬಹುದು ಎಂಬ ಆತಂಕ. ಮೇಲಕ್ಕೆದ್ದವನೇ, ಲ್ಯಾಂಡ್ ಲೈನ್ ಫೋನಿನ ಡಿಸ್-ಪ್ಲೇ ನಲ್ಲಿ
ತೋರಿಸುತ್ತಿದ್ದ ನಂಬರ್ ಅನ್ನು ಮೊಬೈಲು ಫೋನಿನಲ್ಲಿ ಒತ್ತಿ ರಿಂಗಿಸಿದೆ. ‘Calling.
sina’ ಮೊಬೈಲಿನ ಡಿಸ್-ಪ್ಲೇ ಮೇಲೆ ತೋರಿಸಿತು. ಬೆಚ್ಚಿ ಬಿದ್ದೆ.

* * * * *

‘ಎಲ್ಲಿಗೆ ಹೋದರೂ Experience ಕೇಳ್ತಾರೆ. ಎರಡು ವರ್ಷ ಗ್ಯಾಪ್ ಯಾಕಾಯ್ತು. ? ಅಂತ
ಕೇಳ್ತಾರೆ. ಕೆಲಸ ಹುಡುಕಿ ಹುಡುಕಿ ಸಾಕು-ಬೇಕಾಗಿ ಹೋಗಿದೆ ’. ರೂಮಿನ ಮಂಚದ ಮೇಲೆ ಅಂಗಾತ
ಮಲಿಗಿಕೊಂಡು ತನ್ನ ಕಷ್ಟ ಗಳನ್ನು ಹೇಳಿಕೊಳ್ಳುತ್ತಿದ್ದ ಸೀನ. ನಾನು ಮಾತನಾಡಲಿಲ್ಲ.
ಅವನೇ ಪುನಃ ಶುರು ಮಾಡಿದ. ‘ಇಂಜಿನಿಯರಿಂಗ್ ಓದಿ ನಮ್ಮ ದೋಸ್ತಿಗಳೆಲ್ಲಾ ಎಂಥೆಂಥಾ ಕೆಲಸ
ಮಾಡ್ತಿದಾರೆ ಗೊತ್ತಾ. ? ಸತೀಶ ಪೋಸ್ಟ್ ಮ್ಯಾನ್ ಕೆಲಸ ಮಾಡ್ತಾ ಇದಾನೆ. ಸೈಕಲ್
ಹೊಡ್ಕೊಂಡು ಮನೆ ಮನೆ ಸುತ್ತುತಾ ಇರ್ತಾನೆ. ಆ ಸುರೇಂದ್ರ ಅದೇನೋ ಡೊಮೆಸ್ಟಿಕ್ ಕಾಲ್
ಸೆಂಟರ್ ನಲ್ಲಿ ಕೆಲಸ ಮಾಡ್ತಿದಾನಂತೆ. ಅವನಿಗೆ ನಾವು ಫೋನ್ ಮಾಡಿದ್ರು ‘ಗುಡ್
ಮಾರ್ನಿಂಗ್. ಹೌ ಮೇ ಐ ಹೆಲ್ಪ್ ಯು’ ಅಂತಾನೆ. ಇನ್ನು ರವಿ, ದೂರಸಂಪರ್ಕ ಇಲಾಖೆಯಲ್ಲಿ
ಜೂನಿಯರ್ ಇಂಜಿನಿಯರು. ಓದಿರೊ ಕೆಲಸ ಮಾಡ್ತಿದಾನೆ. ನೀನು ಬಹುರಾಷ್ಟ್ರೀಯ ಕಂಪನಿಯಲ್ಲಿ
ಸಾಫ್ಟ್ ವೇರು ಇಂಜಿನಿಯರು. ಎಲ್ಲರ ಹತ್ತಿರ ಹೇಳಿಕೊಳ್ಳಲು ಕೆಲಸ ಅಂತನಾದ್ರು ಇದೆ. ನನ್ನ
ಹತ್ರ ಅದು ಕೂಡ ಇಲ್ಲ. ‘ ತುಂಬಾ ಬೇಜಾರು ಮಾಡಿಕೊಂಡು ಹೇಳಿದ.

ಇವನು ಪದವಿಯ ನಂತರದ ಎರಡು ವರ್ಷಗಳನು ಹಾಳು ಮಾಡಿಕೊಂಡದ್ದು ವಿಚಿತ್ರ ಕಾರಣಗಳಿಗಾಗಿ.
ಇಂಜಿನಿಯರಿಂಗ್ ಪದವಿ ಮುಗಿಯುತ್ತಿದ್ದಂತೆಯೇ IAS (UPSC) ಪರೀಕ್ಷೆಗೆ ತಯಾರಿ ನಡೆಸಲು
ದೆಹಲಿಗೆ ತೆರಳಿದ. ಮೊದಲಿನಿಂದಲು ಅವನಿಗೆ administration ಬಗ್ಗೆ ಹೆಚ್ಚು ಒಲವಿತ್ತು.
ದೆಹಲಿಯಲ್ಲಿ ಒಂದು ವರ್ಷ ಸತತ ತರಬೇತಿ, ಅಭ್ಯಾಸದ ಹೊರತಾಗಿಯೂ ಮೊದಲ ಹಂತದ
ಪರಿಕ್ಷೆಯಲ್ಲಿ ಉತ್ತಿರ್ಣನಾಗುವಲ್ಲಿ ವಿಫಲನಾದ. ಈ ರೀತಿ ಮೊದಲ ಪ್ರಯತ್ನದಲ್ಲಿ
ಅನುತ್ತೀರ್ಣರಾಗುವುದು ಸಹಜ. ಆದರೆ ಇದರಿಂದ ಸಂಪೂರ್ಣ ವಿಚಲಿತನಾದ. ಅವನ ಆತ್ಮವಿಶ್ವಾಸವೇ
ಹುದುಗಿ ಹೋಯಿತು. ದೆಹಲಿಗೆ ಬೆನ್ನು ಮಾಡಿದ. ಪುನಃ ತನ್ನ ಹಳ್ಳಿಸೇರಿದ. ಅಲ್ಲಿ
ನೋಡಿಕೊಳ್ಳುವವರಿಲ್ಲದೆ ಬರಡು ಬಿಟ್ಟಿದ್ದ ಜಮೀನನ್ನು ಸುಪರ್ದಿಗೆ ವಹಿಸಿಕೊಂಡು, ಹಸಿರು
ಕ್ರಾಂತಿ ಮಾಡಲು ಶುರು ಮಾಡಿದ. ಒಂದು ವರ್ಷ ವ್ಯವಸಾಯ ಅಂತ ಮಾಡಿ, ಲಾಭ ಮಾಡಲಾಗದೇ,
ಹಾಕಿದ ಅಸಲೂ ಮಣ್ಣಾದ ಮೇಲೆ, ಹಳೆ ಹೆಂಡ್ತಿ ಪಾದವೇ ಗತಿ ಅಂತ ಬೆಂಗಳೂರು ಸೇರಿಕೊಂಡು
ಕೆಲಸಕ್ಕಾಗಿ ಅಲೆದಾಡಿದ. ತಾನೇ ಉದ್ಯೋಗವನ್ನು ಸ್ವಂತವಾಗಿ ಸೃಷ್ಟಿ ಮಾಡಬಲ್ಲ
ಚೈತನ್ಯ-ಕೌಶಲ್ಯ ಇದ್ದರೂ, ಅದೃಷ್ಟ-ಪರಿಸ್ಥಿತಿ ಅಡ್ಡಿಯಾಗಿದ್ದವು. ಕೈಲೊಂದು ಅಧಿಕೃತ
ನೌಕರಿ ಇರಲಿಲ್ಲ. ಸಮಾಜದ pseudo - ಸ್ಥಾನಮಾನಗಳು ಹತಾಶೆಯ ಅಂಚಿಗೆ ದಬ್ಬಿದವು.
ಸಾಮಾಜಿಕ ಜೀವನದಿಂದ ಸಂಪೂರ್ಣ ಅಜ್ಞಾತವಾಸಕ್ಕೆ ಜಾರಿದ.

ಒಂದು ದಿನ ಅವನ ಸಾವಿನ ಸುದ್ದಿ ಬಂತು. ನಾವುಗಳು ಅವನ ಅಂತಿಮ ಸಂಸ್ಕಾರಕ್ಕೆ ಹೋದೆವು.
ಇದ್ದಕ್ಕಿದ್ದಂತೆ ಸ್ಟ್ರೋಕ್ ಬಡಿಯಿತಂತೆ. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿಯೇ
ಕೊನೆ ಉಸಿರೆಳೆದನಂತೆ. ಇಪ್ಪತ್ತ ನಾಲ್ಕನೆಯ ವಯಸ್ಸಿಗೆ ಬ್ರೇನ್-ಸ್ಟ್ರೋಕ್
ತಗುಲುತ್ತದೆಯೇ ಎಂದು ಡಾಕ್ಟರನ್ನು ಕೇಳಿದ್ದಕ್ಕೆ, ಇತ್ತೀಚಿಗೆ ಯುವಕರಲ್ಲಿ ಈ ರೀತಿಯ
ಕೇಸುಗಳು ಬರುತ್ತಿವೆ ಎಂದು ಹೇಳಿದರು. ಅಂತೂ ನಮ್ಮ ಪ್ರೀತಿಯ ತುಘಲಕ್, ಸ್ಟ್ರೋಕ್
ಬಡಿಯುವ ಹಂತಕ್ಕೆ ತಲೆ ಉಪಯೋಗಿಸಿದ್ದ.

* * * * *

‘Calling. sina’ ಎಂಬುದನ್ನು ನೋಡುತ್ತಿದ್ದಂತೆಯೇ ನನ್ನ ಕೈಗಳು ನಡುಗಿ ಹೋದವು. ಬಹುಶಃ
ಕನಸು ಕಂಡಿರಬೇಕು ಎಂದು ಎರೆಡೆರಡು ಬಾರಿ ಕೈ ಚಿವುಟಿಕೊಂಡೆ. ನೋವೇನೋ ಆಯ್ತು ಆದರೂ
ನಂಬಿಕೆ ಬರಲಿಲ್ಲ. ಈ ಕನಸುಗಳು ಕೂಡ ಒಮ್ಮೊಮ್ಮೆ ನಾಟ್ಕ ಆಡ್ತವೆ. ಸೈರಣೆಯನ್ನು
ಕಳೆದುಕೊಳ್ಳದೆ ಬೆಳಗಾಗುವವರೆಗೂ ಕಾದೆ. ಸೀದಾ ಗೆಳೆಯ ರವಿ ಕೆಲಸ ಮಾಡುತ್ತಿದ್ದ
ಟೆಲಿಫೋನ್ exchange ಗೆ ಹೋದೆ.

ನಡೆದದ್ದನ್ನೆಲ್ಲಾ ಅವನಿಗೆ ಹೇಳಿದೆ. ನನ್ನ ಲ್ಯಾಂಡ್ ಲೈನ್ ಗೆ ಬಂದಿರಬಹುದಾದ ಎಲ್ಲಾ
ಇನ್-ಕಮಿಂಗ್ ಕಾಲ್ ವಿವರಗಳನ್ನು ತೆಗೆದ. ಸೀನನ ಮೊಬೈಲಿನಿಂದ ಎರಡು ಕರೆಗಳು
ದಾಖಲಾಗಿದ್ದವು. ಮೊದಲನೆಯದು 3 : 44 am ಗೆ. ಎರಡನೆಯದು 4 : 02 am ಗೆ. ತಲೆ ತಿರುಗಿ
ಹೋಯ್ತು. ಮೊದಲು ಬಂದಿದ್ದ ಕರೆಯನ್ನು ರಿಸೀವ್ ಮಾಡಿದ ನೆನಪು ಇರಲಿಲ್ಲ. ಆದರೆ ಎರಡನೆ
ಬಾರಿ ಬಂದ ಕರೆಯನ್ನು ನನ್ನ ಕೈಯಾರೆ ರಿಸೀವ್ ಮಾಡಿದ್ದೆ. ಮೈ ಬೆವೆಯುತ್ತಿತ್ತು.

‘ಸುಮ್ಕಿರಪ್ಪ ಏನೇನೋ ಕಲ್ಪಿಸಿಕೊಳ್ಳಬೇಡ. ಸೀನನ ನಂಬರ್ ಇನ್ನೂ ಅವನ ಹೆಸರಿನಲ್ಲಿಯೇ
ಇದೆ. ಅಂದ್ರೆ ಬಹುಶಃ ಆ ನಂಬರ್ ಅನ್ನ, ಅವನ ಮನೆಯವರು ಯಾರಾದ್ರು ಬಳಸುತ್ತಿರಬಹುದು’
ಎಂದ.

ಸೀನನ ತಾಯಿಗೆ ಕರೆ ಮಾಡಿದೆವು. ಸೀನನ ತಮ್ಮ, ಫೋನು ಬಳಸುತ್ತಿರುವುದಾಗಿ ಹೇಳಿದರು. ಸೀನನ
ತಮ್ಮನನ್ನು ಕೇಳಿದ್ದಕ್ಕೆ ಹಳೆಯ ಸಿಂ-ಕಾರ್ಡ್ ಎಸೆದಿರುವುದಾಗಿಯು, ಕೇವಲ ಫೋನ್ ಮಾತ್ರ
ಬಳಸುತ್ತಿರುವುದಾಗಿಯು ಹೇಳಿದ. ಮತ್ತಷ್ಟು ತಲೆ ಕೆಟ್ಟು ಹೋಯ್ತು. ಹಂಗಾದ್ರೆ ಫೋನು
ಮಾಡಿದವರಾರು. ?

ಸೀನನ ನಂಬರಿಗೆ ಇದುವರೆಗೂ ಒಳ-ಹೊರ ಹೋಗಿ ಬಂದಿರುವ ಸಂಪೂರ್ಣ ಕರೆಗಳ ಮಾಹಿತಿಯನ್ನು
ಪ್ರಿಂಟ್ ತೆಗೆದ. ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಸೀನ ಇಲ್ಲವಾದ ನಂತರ ಕಳೆದ
ಎರಡು ತಿಂಗಳು ಗಳಿಂದ ಯಾವೊಂದು ಕರೆಗಳು ಆ ನಂಬರಿನ ಹೆಸರಲ್ಲಿ ದಾಖಲಾಗಿರಲಿಲ್ಲ. ಕೊನೆಯ
ಎರಡು ಕರೆಗಳ ಹೊರತಾಗಿ. ನನಗಂತು ಸ್ವಲ್ಪ ಮಟ್ಟಿಗೆ ಗಾಬರಿಯಾಯಿತು.

‘ ಲೇ ಸೀನ ಏನು, ಆಕಾಶದಿಂದ ಇಳಿದು ಬಂದು ನಿಂಗೆ ಫೋನ್ ಮಾಡ್ತಾನೇನೋ. ? ಸುಮ್ಮನೆ
ಟೆನ್ಶನ್ ಮಾಡ್ಕೋ ಬೇಡ. ಎಲ್ಲೋ ಏನೋ ಮಿಸ್ ಆಗಿದೆ. ’ ರವಿ ಗದರಿಸಿದ. ಅವನು ಸುಮಾರು
ಹೊತ್ತು ಸಂಶೋಧನೆ ನಡೆಸಿ, ಸಂಬಂಧಪಟ್ಟವರನ್ನು ಸಂಪರ್ಕಿಸಿ ಒಂದಷ್ಟು ತಂತ್ರಜ್ಞಾನದ
ಮಾಹಿತಿಗಳನ್ನು ಹಿಡಿದು ಬಂದ.

‘ ಮೊಬೈಲಿನಿಂದ ಕಾಲ್ ಮಾಡಿದಾಗ ಅದು ಮೊದಲು ಹತ್ತಿರದ BTS (ಬೇಸ್ ಟ್ರನ್ಸಿವರ್
ಸ್ಟೇಷನ್) ತಲುಪುತ್ತದೆ. ಅಲ್ಲಿಂದ ಹತ್ತಿರದ ಟೆಲಿಫೋನ್ Exchange; ಅಲ್ಲಿಂದ ಜಿಲ್ಲಾ
TAX Exchange ರೀಚ್ ಆಗತ್ತೆ. ಜಿಲ್ಲಾ TAX Exchange ನಿಂದ ಬೆಂಗಳೂರಿನ HLR (ಹೋಂ
ಲೊಕೇಷನ್ ರಿಜಿಸ್ಟರ್) ಗೆ ರೂಟ್ ಆಗತ್ತೆ. ಇಲ್ಲಿಂದ ಪುನಃ ಇದೇ ಮಾದರಿಯಲ್ಲಿ ಕರೆ
ಮಾಡಿರುವ ನಂಬರ್ ಹುಡುಕಿಕೊಂಡು ಹೋಗಿ ಕನೆಕ್ಷನ್ ಫಾರ್ಮ್ ಆಗತ್ತೆ. ಮೊಬೈಲಿನಿಂದ ಸಂಪರ್ಕ
ಉಂಟಾದಾಗ ಅದರ ಸಿಂ ಕಾರ್ಡ್ ನಿಂದ LAI ( ಲೋಕೇಶನ್ ಏರಿಯಾ ಐಡೆಂಟಿಫಿಕೇಷನ್ ಕೋಡ್ )
ಅನ್ನೋ ಸಂಖ್ಯೆ, HLR ಗೆ ಟ್ರಾನ್ಸ್-ಮಿಟ್ ಆಗ್ತಾ ಇರುತ್ತೆ. ಹದಿನೈದು ಸೆಕೆಂಡುಗಳ ಕಾಲ
ಕನೆಕ್ಷನ್ ಜೀವಂತವಾಗಿದ್ದಲ್ಲಿ, LAI ಸಹಾಯದಿಂದ ಕರೆ ಮಾಡಿದವನ ವಿಳಾಸವನ್ನು ಕಂಡು
ಹಿಡಿಯಬಹುದು.

ನಿನಗೆ ಬಂದಿರುವ ಕರೆ ಕೂಡ ಬೆಂಗಳೂರಿನ HLR ನಿಂದಲೇ ರೂಟ್ ಆಗಿದೆ. ಆದರೆ ಲೊಕೇಷನ್
ಸರಿಯಾಗಿ ಟ್ರೇಸ್ ಮಾಡೋದಕ್ಕಾಗಲ್ಲ. ಅದರಿಂದ ಆಗುವ ಪ್ರಯೋಜನ ಕೂಡ ಏನಿಲ್ಲ. ಯಾವುದೋ
ಕನಸು ಕಂಡಿದ್ದೇನೆ ಅಂದುಕೊಂಡು ಇಲ್ಲಿಗೆ ಮರೆತುಬಿಡು. ಪುನಃ ಇದೇ ರೀತಿ ಆದರೆ ಯೋಚನೆ
ಮಾಡೋಣ. ಮೊದಲು ಆ ನಂಬರ್ ಕಿತ್ತು ಹಾಕೋದಕ್ಕೆ ಒಂದು ವ್ಯವಸ್ತೆ ಮಾಡಬೇಕು. ‘ ರವಿ ತನ್ನ
ಕೈಲಾದ ಸಹಾಯವನ್ನೂ, ಉಪದೇಶವನ್ನೂ ಮಾಡಿದ. ಅನಾಮಧೇಯ ಕರೆಗಳಿಗೂ ಹೆದರುವಂತಹ ಸ್ಥಿತಿ
ನನ್ನದಾಯಿತು. ಮತ್ತದೇ ನಂಬರ್ ಡಯಲ್ ಮಾಡಿದೆ.’ ಚಂದಾದಾರರು ವ್ಯಾಪ್ತಿ ಪ್ರದೇಶದ
ಹೊರಗಿದ್ದಾರೆ ‘ ಎಂಬ ಅದೇ ಹೆಣ್ಣಿನ ರಾಗ. ಈ ಮಾತುಗಳ ನಿಗೂಢತೆ ಮಾತ್ರ ತಿಳಿಯದಾದೆನು.

Saturday, April 21, 2012

ಕಿತ್ತಳೆ ಹಣ್ಣಿನ ಫಾರ್ಮುಲ

ಪ್ರಥಮ ಪಿಯುಸಿ ಕಾಲೇಜಿನ ಮೊದಲನೆಯ ದಿನ. ಪ್ರತಿಯೊಬ್ಬರು ಎದ್ದು ನಿಂತು ತಮ್ಮ ಬಗ್ಗೆ
ಹೇಳಿಕೊಳ್ಳುತ್ತಿದ್ದರು ‘ Hi, my name is Chetan. I came from ಬಸವೇಶ್ವರ ಹೈ
ಸ್ಕೂಲ್, ಶಿವಮೊಗ್ಗ In sslc my percentage is ‘ಎಂದು ಉಳಿದವರು ಹೇಳಿದ್ದನ್ನೇ
ಅನುಕರಣೆ ಮಾಡಿ, ಮನಸಿನಲ್ಲಿಯೇ ಬಯಾಟ್ ಹೋಡೆಯುತ್ತಾ ನನ್ನ ಸರದಿಗಾಗಿ ಕಾಯುತ್ತಿದ್ದೆ.

ಆದರೆ ಮಧ್ಯದಲ್ಲಿ ಕೆಲವರು good morning everyone, I am arjun, I got 88
percent ಎಂದು ಏನೇನೋ ಸೇರಿಸಿ ಹೇಳುತ್ತಿದ್ದರು. ಇವುಗಳಲ್ಲಿ ಯಾವುದು ಸರಿ ಎಂದು
ಯೋಚಿಸುತ್ತಿರುವಾಗ ಪಕ್ಕದಲ್ಲಿ ಕುಳಿತಿದ್ದ ಗಿರೀಶ ಕೆಳಿದ. ‘ I am girisha ಸರೀನ
ಅಥವಾ my name is girishaa ಅಂತ ಹೇಳಬೇಕಾ. ?’ ಎಂದ. ಆಗ ನನ್ನ ಸರದಿ ಬಂತು. ನಾನು
ಬಯಾಟ್ ಹೊಡೆದದ್ದನ್ನೇ ಒಪ್ಪಿಸಿದೆ.


ಗಿರೀಶ ಎರಡನ್ನೂ ಬಿಟ್ಟು ‘ನನ್ನ ಹೆಸರು ಗಿರೀಶ ನಾನು ಹಾವೇರಿ ಜಿಲ್ಲೆಯ ಹಿರೇಕೆರೂರು
ತಾಲ್ಲೂಕಿನ ಪುಟ್ಟ ಗ್ರಾಮ ಒಂದರಿಂದ ಬಂದಿರುತ್ತೇನೆ. ಹತ್ತನೇ ಕ್ಲಾಸಿನಲ್ಲಿ ನಾನು
ತೊಂಭತ್ತೈದು ಪ್ರತಿಶತ ಅಂಕ ಪಡೆದಿರುತ್ತೇನೆ. ’ ಎಂದು ಹೇಳಿ ಕೂತ. ಇದು ನನ್ನ ಮತ್ತು
ಗಿರೀಶನ ಮೊದಲ ಭೇಟಿ. ಮೊದಲನೆಯ ದಿನವೆ ಬಯಾಲಜಿ ಮೇಡಮ್ಮು ಕಿಂಗ್-ಡಮ್ ಪ್ಲಾಂಟೆ,
ಕಿಂಗ್-ಡಮ್ ಅನಿಮೆಲಿಯಾ, ಕಿಂಗ್-ಡಮ್ ಅದು ಇದು ಎಂದು ಇಂಗ್ಲೀಷಿನಲ್ಲಿ ನಿರರ್ಗಳವಾಗಿ
ಭೋಧಿಸುತ್ತಿದ್ದರು ನನಗೆ ಕಿಂಗ್-ಡಮ್ ಪದದ ಆಚೆಗೆ ಬೇರೇನೂ ಅರ್ಥವಾಗುತ್ತಿರಲ್ಲಿಲ್ಲ.
ಗಿರೀಶ, ‘ಅಯ್ಯೋ ಏನಾ ಈವಮ್ಮ ಆವಾಗಿಂದ ಬರಿ ಕಿಂಗ್-ಡಮ್ ಅಂತಿದಾರೆ. ಇದು ಸೈನ್ಸ್
ಕ್ಲಾಸೋ ಹಿಸ್ಟರಿ ಕ್ಲಾಸೋ’ ಎಂದು ಕೇಳಿದ.

> ಸಮಾನ ಆಸಕ್ತಿ-ಅಭಿರುಚಿಗಳು ಉಳ್ಳವರು ಮಾತ್ರ ಸ್ನೇಹಿತರಾಗುವುದಿಲ್ಲ, ಸಮಾನ
> ಸಮಸ್ಯೆಗಳು-ಅಜ್ಞಾನಗಳು ಉಳ್ಳವರು ಕೂಡ ಗೆಳೆತನದ ದೋಣಿಗೆ ಹುಟ್ಟು ಹಾಕಲು ಅರ್ಹರು.

ಇದು ನಮ್ಮ, ಹತ್ತನೇ ಕ್ಲಾಸಿನವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ, ಆನಂತರ ಸೈನ್ಸನ್ನು
ಓದಲು ಆಯ್ಕೆ ಮಾಡಿಕೊಂಡ ಅಲ್ಪಸಂಖ್ಯಾತ ಮಿತ್ರವರ್ಗ. ಬರದ ಭಾಷೆಯನ್ನು ಮನಸಾರೆ
ಹಿಗಳೆಯುತ್ತಲೇ ನಮ್ಮ ಪಯಣ ಸಾಗಿತ್ತು.

ದ್ವಿತೀಯ ಪಿ-ಯು-ಸಿಯ ಅಂತಿಮ ದಿನಗಳ ಸಮಯ. ನಾನು ನಮ್ಮ ವೆಂಕಟೇಶ್ವರ ವಠಾರದಲ್ಲಿನ
ಪುಟ್ಟದೊಂದು ರೂಮಿನಲ್ಲಿ ಗಣಿತದ ಸಮಸ್ಯೆಗಳ ಮಧ್ಯೆ ಕುಳಿತಿದ್ದೆ. ಗಿರೀಶ ನನ್ನ ರೂಮಿಗೆ
ಬಂದವನೇ ಶುರು ಮಾಡಿದ ‘ನನ್ನ ಮನಸ್ಸು ಸರಿಯಿಲ್ಲ. ಹಾಸ್ಟೆಲ್ ನಲ್ಲಿ ಇದ್ದು ಓದೋದಕ್ಕೆ
ಆಗುತ್ತಿಲ್ಲ. ಈ ವಠಾರದಲ್ಲಿ ನನಗೊಂದು ರೂಮ್ ಕೊಡಿಸು’ ಎಂದ.

ಇನ್ನು ಒಂದು ವಾರದಲ್ಲಿ ಪರೀಕ್ಷೆಗಳು ಇರುವುದಾಗಿಯೂ, ಈ ಟೈಮಲ್ಲಿ ಜಿಯಾಗ್ರಫಿ ಬದಲಿಸುವ
ಹುಚ್ಚು ಆಲೋಚನೆ ಬೇಡ ಎಂದು ಹೇಳಿದೆ. ಕೇಳದೆ ಹಠ ಮಾಡಿ ಬಾಡಿಗೆಗೆಂದು ಒಂದು ಸಿಂಗಲ್
ರೂಮು ಪಡೆದುಕೊಂಡ. ಒಂದೇ ದಿನದಲ್ಲಿ ಹೇಳದೆ ಕೇಳದೆ ರೂಮು ಖಾಲಿ ಮಾಡಿ ಹಾಸ್ಟೆಲ್
ಸೇರಿಕೊಂಡ ತಿಕ್ಕಲು ಬಡ್ಡಿಮಗ.

ಒಂದು ದಿನ ಬಿಟ್ಟು ಕೊಂಡು ರೂಮಿಗೆ ಬಂದ. ‘ನನಗೇನು ಆಗಿದೆ ಅಂತ ಗೊತ್ತಾಗ್ತಿಲ್ಲ ತುಂಬಾ
ಟೆನ್ಶನ್ನು, ಭಯ. ಓದಬೇಕಾಗಿರುವುದನ್ನೆಲ್ಲಾ ಓದಿಯಾಗಿದೆ. ಎರಡು ಮೂರು ಸಾರಿ ರಿವಿಷನ್
ಮಾಡಿದ್ದೇನೆ. ಆದರೂ ಎಲ್ಲಾ ಮರೆತು ಹೋದ ಹಂಗಾಗುತ್ತೆ. ಏನೋ ಒಂಥರಾ ಹುಚ್ಚು ಹಿಡಿದ
ಹಂಗಾಗಿದೆ. ಅಪ್ಪ ಅಮ್ಮ ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನ ಎಲ್ಲಿ ಸುಳ್ಳು ಮಾಡಿ
ಬಿಡ್ತೇನೋ ಎಂಬ ಭಯ. ’ ಒಂದೇ ಸಮನೆ ಗೋಳಾಡಿದ.

ಅವನು ಹೇಳುತ್ತಿದ್ದುದೆಲ್ಲಾ ಕಾಮಿಡಿ-ಕಾಮಿಡಿ ಯಾಗಿ ಕೇಳಿಸುತ್ತಿತ್ತು. ಆದರೂ ಅವನ
ಆತ್ಮವಿಶ್ವಾಸ ಹೆಚ್ಚಿಸಲು ಅನಿವಾರ್ಯವಾಗಿ ಪಂಪ್ ಹೊಡೆಯಲೇ ಬೇಕಾಯ್ತು ‘ಲೋ ಗಿರೀಶ ನಿಂದು
ಜೀನಿಯಸ್ ತಳಿ ಮಗ. ಹತ್ತನೇ ಕ್ಲಾಸಲ್ಲಿ ಇಡೀ ಜಿಲ್ಲೆಗೆ ಮೊದಲು ಬಂದವನು ನೀನು. ಈ ಸಾರಿ
ನಮ್ಮ ಕಾಲೇಜಿಗೆ ನಿನ್ನ ಹೆಸರಲ್ಲಿ ನೂರರೊಳಗೆ ಒಂದು ಸಿ-ಇ-ಟಿ ರಾಂಕ್ ಬರುತ್ತೆ
ಅಂತಿದಾರೆ. ನೀನೆ ಹಿಂಗದ್ರೆ ನಮ್ಮಂತವರ ಗತಿ ಏನಪ್ಪಾ. ?’ ಎಂದೆ. ಮುಖದಲ್ಲಿ ಏನು
ಬದಲಾವಣೆ ಆಗಲಿಲ್ಲ. ಇದೆ ಮಾತನ್ನ ನನಗೆ ಸುಮ್ಮಸುಮ್ಮನೆ ಅಂತಲಾದ್ರು ಹೇಳಿದ್ದರೂ
ಅದೆಷ್ಟು ಖುಷಿ ಪಡುತ್ತಿದ್ದೆನೋ.

ಒಂದು ಮಾಸ್ಟರ್ ಪ್ಲಾನ್ ಹೇಳಿದೆ. ‘ಮಂಜುನಾತ ಥಿಯೇಟರ್ ನಲ್ಲಿ ಒಂದು ಒಳ್ಳೆ ಮೂವಿ
ಹಾಕಿದ್ದಾರಂತೆ ಓದೋದನ್ನ ಬಿಟ್ಟು, ಸಿನಿಮಾ ನೋಡಿಕೊಂಡು ಬಾ ಸ್ವಲ್ಪ ರಿಲಾಕ್ಸ್‍
ಆಗುತ್ತೆ. ’ ಸರಿ ಎಂದು ಹೇಳಿ ಹೋದ. ಅದೇ ಪ್ರಾಣಿ ಸಂಜೆ ಮತ್ತೆ ಹಾಜರಾಯಿತು. ‘
ನಿಜವಾಗಲು ನಂಗೆ ಹುಚ್ಚು ಹಿಡಿದ ಹಂಗಾಗಿದೆ. ಆತ್ಮಹತ್ಯೆ ಮಾಡಿಕೊಂಡು ಬಿಡೋ ಅಷ್ಟು ನನ್ನ
ಮೇಲೆ ನನಗೆ ಕೋಪ ಬರ್ತಿದೆ. ಏನ್ ಮಾಡ್ಲಿ ?’ ಎಂದ. ಏನೋ ಒಂದಷ್ಟು ಕವಿತೆ ಬರೀತಿದ್ದೆ
ಅಂದ ಮಾತ್ರಕ್ಕೆ ನನ್ನನ್ನೊಬ್ಬ ತತ್ವಜ್ಞಾನಿ, ಎಂದು ಬಗೆದದ್ದು ಅವನ ಮೂರ್ಖತನ. ಆದರೂ ಈ
ಸಮಸ್ಯೆಗೊಂದು ಪರಿಹಾರ ಹುಡುಕಲೇ ಬೇಕಿತ್ತು.

ನನಗೊಬ್ಬ ಡಾಕ್ಟರು ನೆನಪಾದರು. ಒಂದು ದಿನ ನಮ್ಮ ಕಾಲೇಜಿಗೆ, ಪವಾಡಗಳನ್ನು ತೋರಿಸಲು
ಬಂದಿದ್ದರು. ಅವರಿಗೆ ‘ ಮನಸ್ಸಿನ ಜೊತೆಗೆ ಮಾತನಾಡುವ ಮಾಂತ್ರಿಕ’ ಎಂಬ
ಬಿರುದುಗಳನ್ನೆಲ್ಲಾ ನೀಡಿದ್ದರಂತೆ. ನಾವು ನಮ್ಮ ಮೆದುಳಿನ ಶೇಕಡಾ 0.03 ಗಿಂತಲೂ ಕಡಿಮೆ
ಪ್ರತಿಶತ ಬಳಸುತ್ತಿರುವುದಾಗಿಯೂ, ನಮ್ಮ ಮೆದುಳಿಗೆ ನಮಗೇ ತಿಳಿಯದಷ್ಟು ಪವರ್
ಇರುವುದಾಗಿಯೂ ಹೇಳಿದ್ದರು. ಅವರು ಹೇಳಿದ್ದಕ್ಕೆಲ್ಲಾ ಚಪ್ಪಾಳೆ ಹೊಡೆದ ಸದ್ದು ಬಿಟ್ಟರೆ,
ನನಗೆ ಹೆಚ್ಚೇನೂ ಕೇಳಿಸಲು ಇಲ್ಲ. ಅರ್ಥವಾಗಲು ಇಲ್ಲ. ಏನೇ ಕಷ್ಟ ಬಂದರೂ ನನಗೆ ಫೋನ್
ಮಾಡಿ ಅಂತ ನಂಬರ್ ಕೊಟ್ಟು ಹೋಗಿದ್ದರು. ಈಗ ನನ್ನ ಗೆಳೆಯನ ಸಮಸ್ಯೆಗೆ ಅವರು
ಪರಿಹಾರವಾಗಬಲ್ಲರು ಎನಿಸಿತು.

ಸಂಜೆ ಫೋನ್ ಮಾಡಿದಾಗ, ರಾತ್ರಿ ಹತ್ತರ ನಂತರ ಮಾಡಬೇಕೆಂದರು. ರಾತ್ರಿ ಹತ್ತು ಘಂಟೆಗೆ
ಕಾಲ್ ಮಾಡಿದೆವು. ಗಿರೀಶ ತನಗಾಗುತ್ತಿರುವ ವೆದನೆಗಳನ್ನೆಲ್ಲಾ ಹಿಡಿಹಿಡಿಯಾಗಿ
ಹೇಳತೊಡಗಿದ. ವಾಂತಿ- ಭೇದಿ ಯಿಂದ ನರಳುತ್ತಿದ್ದವರು ತಮ್ಮ ನೋವಿನ ಬಣ್ಣನೆಯನ್ನು
ಮಾಡಿದಂತಿತ್ತು. ಅವರು ಮಧ್ಯದಲ್ಲಿಯೇ ತಡೆದು

> ‘ಹೋ ಇದು ತುಂಬಾ ಕಾಮನ್ ಪ್ರಾಬ್ಲಂ ಕಿತ್ತಳೆ ಹಣ್ಣು ತಿನ್ನಿ ಎಲ್ಲಾ ಸರಿ ಹೋಗತ್ತೆ. ’

ಎಂದಷ್ಟೇ ಹೇಳಿ ಕಾಲ್ ಕಟ್ ಮಾಡಿದರು. STD ಬೂತ್ ನಿಂದ ಹೊಟ್ಟೆ ಹಿಡಿದುಕೊಂಡು ನಗುತ್ತಲೇ
ಹೊರಬಂದೆ. ‘ಹೋಗಲೇ ಇಷ್ಟು ಹೊತ್ತಲ್ಲಿ ಕಿತ್ತಳೆ ಹಣ್ಣು ಎಲ್ಲಿಂದ ತರೋದು. ?
ಹಾಸ್ಟೆಲ್-ಗೆ ಹೋಗಿ ಆರಾಮಾಗಿ ನಿದ್ದೆ ಮಾಡು. ನೀನು ’ ಆತ್ಮಹತ್ಯೆ ಮಾಡ್ಕೊತೀನಿ’
ಅಂದ್ರೆ, ಆಯಪ್ಪ ‘ ಕಿತ್ತಳೆ ಕಣ್ಣು ತಿನ್ನು ’ ಅಂತಾರೆ.

ಆದರೂ ಹಠ ಮಾಡಿ, ಶಿಮೊಗ್ಗ ಖಾಸಗಿ ಬಸ್ ನಿಲ್ದಾಣದವರೆಗೂ ಸೈಕಲ್ ಹೊಡೆಸಿ ಕಿತ್ತಳೆ ಹಣ್ಣು
ಕೊಂಡು ತಿಂದ. ಇದಾದ ನಂತರ ಗಿರೀಶನ ಮನಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿತು. ಫುಲ್ಲು
ಚಿಯರ್ ಅಪ್ ಆಗಿಬಿಟ್ಟ ಪರೀಕ್ಷೆಯು ಚೆನ್ನಾಗಿ ಬರೆದ. ಬಿಂದಾಸ್ ಆಗಿರುವನು. ತಲೆ
ಇರುವವರು ಇದನ್ನು, ಕೇವಲ ಕಿತ್ತಳೆ ಹಣ್ಣಿನ ಚಮಾತ್ಕಾರವೆಂದು ಖಂಡಿತ ನಂಬುವುದಿಲ್ಲ.
ಇದುವರೆಗೂ ನನ್ನನ್ನು ಕಾಡುತ್ತಿರುವ ಕಿತ್ತಳೆ ಹಣ್ಣಿನ ಪ್ರಶ್ನೆ ಇದು. ಈ ಘಟನೆಯನ್ನು
ನಾನು ವಿವಿಧ ವಯಸ್ಸಿನ, ವಿವಿಧ ಜನಗಳ ಜೊತೆಗೆ ಚರ್ಚಿಸಿದ್ದೇನೆ. ಬರಿ ಕಿತ್ತಳೆ ಹಣ್ಣು
ತಿಂದಿದ್ದಕ್ಕೆ ಡಿಪ್ರೆಷನ್ ಕಡಿಮೆ ಆಯ್ತ.? ಅಥವಾ ಕಿತ್ತಳೆ ಹಣ್ಣು ತಿನ್ನೋದರಿಂದ
ಡಿಪ್ರೆಷನ್ ಹೋಗುತ್ತೆ ಅನ್ನೋ ನಂಬಿಕೆಯಿಂದ ಡಿಪ್ರೆಷನ್ ಹೋಯ್ತಾ. ?

Thursday, March 29, 2012

ಕ್ರಾಂತಿಕಾರಿ ಅಂಕಲ್ಲು

ಕುಡಿಯುವ ನೀರು ತರಲು ಕೆಳಗಿನ ಮನೆಯಲ್ಲಿ ವಾಸವಾಗಿದ್ದ ಓನರ್ ಅಂಕಲ್ ಮನೆಗೆ
ಹೋಗಬೇಕಿತ್ತು. ಗೆಳೆಯ ಮಂಗಳೂರು ಜಾಕಿ 'ಹೇ ನೀನೆ ಹೋಗು ಮಾರಾಯಾ. ಅಂಕಲ್ ತುಂಬಾ
ಚೊರಿತಾರೆ. ಎಂಥ ಮಾತಾಡ್ತಾರೆ ತಿಳಿಯೋದೆ ಇಲ್ಲ. ನನಗೆ ಕಿವಿ ಕಮ್ಮಿ, ತಲೆ ದೂರ '
ಎಂದ.

ನಮ್ಮ ಓನರ್ ಅಂಕಲ್ ಮಾತಿನ ಮಳೆ ಸುರಿಯಲಾರಂಭಿಸಿದರೆ ಅದು ನಿಲ್ಲುವುದಿಲ್ಲ, ಎಂಬುದೇ
ಎಲ್ಲರಿಗೂ ಅವರ ಮೇಲಿದ್ದ ಗೌರವ ಮತ್ತು ಭಯ. ಮಕ್ಕಳು ಬಹುದೂರದ ಊರಿನಲ್ಲಿದ್ದು ಒಂಟಿಯಾಗಿ
ನಿವೃತ್ತ ಕಾಲ ಕಳೆಯುವ ಅಪ್ಪ-ಅಮ್ಮಂದಿರ ಯಾತನೆ ಇದು. ಸಮಸ್ಯೆಗಳೇ ಇಲ್ಲದೆ ಇರುವುದು ಇವರ
ಸಮಸ್ಯೆ. ಅದಕ್ಕಾಗಿಯೇ ಮದುವೆಯಾಗುವ ಮುಂಚೆ ಗಂಡು-ಹೆಣ್ಣಿನ ಜಾತಕದ ಜೊತೆಗೆ ಅವರಿಬ್ಬರ
ನಡುವೆ ಕಮ್ಯೂನಿಕೇಷನ್ ಸ್ಕಿಲ್ ಹೊಂದಿಕೆಯಾಗುತ್ತದೆಯೋ ನೋಡಬೇಕು. ಬಹುಷಃ ಈ ಬಿದ್ದು
ಹೋಗುವ ವಯಸ್ಸಿನಲ್ಲಿ ಮಾತುಕಥೆ ತುಂಬಾ ಉಪಯೋಗಕ್ಕೆ ಬರುತ್ತದೆ.

ನನ್ನದೇ ಸರದಿಯೆಂದು ನಿರ್ಧಾರವಾಗಿ ಅಂಕಲ್ ಮನೆಯ ಬಾಗಿಲು ತಟ್ಟಬೇಕಾಯಿತು. ಕುಶಲ-ಕ್ಷೇಮ
ವಿನಿಮಯಗಳನ್ನು ಮಂದಹಾಸಕ್ಕೇ ಸೀಮಿತಗೊಳಿಸಿದೆ. ಆಂಟಿ ನೀರನ್ನು ತಂದು ಕೊಟ್ಟ ತಕ್ಷಣ
ಮನೆಯಿಂದ ಹೊರ ಬೀಳಲು ಅನುವಾದೆ. ಸುಮ್ಮನೆ ಹೋಗುವುದನ್ನು ಬಿಟ್ಟು ಮಾತಿಗೆಂದು
ಕೇಳಿದೆ.

'ಏನು ಅಂಕಲ್ ತಲೆ ಗುಂಡು ಹೊಡಿಸಿಬಿಟ್ಟಿದೀರಾ. ಯಾವ ದೇವಸ್ಥಾನ. ? '

'when science stops explaining things religion comes into picture. '

ಅಂದ್ರು. ನಿಮಗೇನಾದ್ರು ಯಾಕೆ ಹೇಳಿದ್ರು ಅಂತ ಅರ್ಥ ಆಯ್ತಾ. ? ನಮ್ಮ ಅಂಕಲ್ ಹಂಗೆ
ಅಂಗಡಿ ಶೆಟ್ಟರು ಇದ್ದಹಂಗೆ. ನಾವು ಕೇಳಿದ್ದು ಇಲ್ಲಾ ಅಂದ್ರೆ ಅವರ ಹತ್ತಿರ ಇರೋದು
ಕೊಡ್ತಾರೆ.

'ಹೌದು ಅಂಕಲ್ ನೀವು ಹೇಳಿದ್ದು ಕರೆಕ್ಟು '

'ಇವೆಲ್ಲಾ ಒಂದು ನಂಬಿಕೆ ಅಷ್ಟೆ ಕೆಲವೊಂದು ವಿಷಯಗಳನ್ನ ನಾವು ಯಾಕೆ. ? ಏನು. ? ಅಂತ
ಪ್ರಶ್ನೆ ಮಾಡಬಾರದು. ಭಕ್ತಿಯಿಂದ ದೇವರಿಗೆ ಸಮರ್ಪಿಸಿಕೊಂಡುಬಿಡಬೇಕು. ' ಬಹುಶಃ ಬೇಡರ
ಕಣ್ಣಪ್ಪ ದೇವರಿಗೆ ಕಣ್ಣು ಕಿತ್ತು ಕೊಟ್ಟಾಗಲು ಇಷ್ಟು ಹೆಮ್ಮೆ ಪಟ್ಟಿರಲಿಕ್ಕಿಲ್ಲ. ಬರಿ
ಕೂದಲು ಕೊಟ್ಟಿರೋದಕ್ಕೆ ಹಿಂಗಾಡ್ತಿದಾರೆ.

'ಅಯ್ಯೋ ಕೂದಲು ತಾನೆ ಕೊಟ್ಟಿರೋದು ಬಿಡಿ ಅಂಕಲ್. ಅವೇನು ಗರಿಕೆ ಗಿಡ ಬೆಳೆದಂಗೆ
ಬೆಳೆದುಬಿಡ್ತಾವೆ. '

'ಛೇ ಛೇ ನಾವು ದೇವರಿಗೆ ಏನ್ ಕೋಟ್ವಿ ಅನ್ನೋದಕ್ಕಿಂತ, ಯಾವ ಭಾವದಲ್ಲಿ ಕೊಟ್ವಿ ಅನ್ನೋದು
ಇಂಪಾರ್ಟೆಂಟು. ತಿರುಪತಿಗೆ ಹೋದ್ರೆ ವಿತ್ ಕೂದಲು ದೇವರ ದರ್ಶನ ಮಾಡಬೇಕು ಅಂತ
ಅನ್ನಿಸೋದೆ ಇಲ್ಲ. ' ಮನೆ ಬಾಡಿಗೆ ಕೊಟ್ಟಿದಾರೆ ಅನ್ನೋ ಒಂದೇ ಕಾರಣಕ್ಕೆ ಇಷ್ಟೆಲ್ಲಾ
ಹಿಂಸೆ ಕೊಡಬಹುದಾ.

' ಅಂಕಲ್ ತಿರುಪತಿನಲ್ಲಿ ಎರಡು ಸೆಂಕೆಂಡ್-ಗಿಂತ ಜಾಸ್ತಿ ದೇವರಿಗೆ ನಮ್ಮನ್ನು ನೋಡುವ
ಭಾಗ್ಯ ಸಿಗಲ್ಲ. ಅಂತಹದ್ರಲ್ಲಿ ತಿರುಪತಿ ತಿಮ್ಮ್ಮಪ್ಪನಿಗೆ ಭಕ್ತರ ತಲೆನಲ್ಲಿ ಕೂದಲು
ಇದಿಯಾ ಗುಂಡು ಹೊಡೆಸಿದಾರ ಅಂತ ಹೆಂಗ್ ಗೊತಾಗುತ್ತೆ. '

 ' ya ya you are right . ಅಲ್ಲಿ ದೇವರನ್ನ ನೋಡುವುದಕ್ಕೆ ಮಾತ್ರ ಅಲ್ಲ. ಹುಂಡಿಗೆ
ಕಾಸು ಹಾಕೋದಕ್ಕು ಕ್ಯೂ ನಲ್ಲಿ ನಿಲ್ಲಬೇಕು . ಹಾ ಹಾ.. ಆದರೂ ರೆಡ್ಡಿಯಂತಹ
ರಾಜಕಾರಣಿಗಳು ದಾನವಾಗಿ ಕೊಟ್ಟಿರೋ ವಜ್ರದ ಕಿರೀಟವನ್ನ ದೇವಸ್ಥಾನದವರು ವಾಪಾಸ್ ಕೊಟ್ಟು
ಬಿಡಬೇಕು. ಏನಂತೀರ . ? ಪಾಪದ ದುಡ್ಡು ದೇವರಿಗೆ ಸೇರುವುದಿಲ್ಲ' ಸಖತ್ತಾಗಿ ಟ್ರಾಪ್
ಆದೆ. ಕರಪ್ಷನ್ನು ಅಣ್ಣ ಹಜಾರೆ, ಆದ್ಯಾತ್ಮ ಎಲ್ಲೆಲ್ಲೋ ಸುತ್ತಿಸಿ ಬಿಡುವರು. ನಾನೂ
ಮಾತಿಗೆ ನಿಂತರೆ ದಿನವಿಡೀ ಅವರನ್ನು ಮಾತನಾಡಿಸಿ ಬಿಡಬಲ್ಲೆ.

'ಪಾಪದ ದುಡ್ಡನ್ನೆಲ್ಲಾ ಭಕ್ತಾದಿಗಳಿಗೆ ಹಿಂದಿರುಗಿಸುತ್ತಾ ಹೋದರೆ, ದೇವಸ್ಥಾನದ
ಟ್ರೆಷರ್ರು ಖಾಲಿ ಆಗಿಬಿಡುತ್ತೆ ಅಂಕಲ್ . ಅದೂ ಅಲ್ಲದೆ ಶ್ರೀನಿವಾಸ ಕಲ್ಯಾಣಕ್ಕೆ
ಕುಬೇರನ ಹತ್ತಿರ ಮಾಡಿರೊ ಸಾಲ ತೀರೋದಾದ್ರು ಹೆಂಗೆ. ?'

'ಹಾ ಹಾ Good Joke. But reality ಚೇತನ್. ಬರಿ ರಾಜಕಾರಿಣಗಳು ಮಾತ್ರ ಅಲ್ಲ.
ದೇವರುಗಳು ಕೂಡ ನಾವು ಬದುಕುವ ರೀತಿಯನ್ನ, ನಂಬಿಕೆಗಳನ್ನ ಫುಲ್ಲು complicated
ಮಾಡಿಬಿಟ್ಟಿದಾವೆ.' ನಮ್ಮ ಅಂಕಲ್ ಇರೋದೆ ಹಾಗೆ ಸ್ವಲ್ಪ ಹೊತ್ತು ದೇವರು-ಮೂಲಭೂತ
ನಂಬಿಕೆಗಳ ಪರವಾಗಿ ಇರ್ತಾರೆ ಮಾತನಾಡುತ್ತಾ ಕ್ರಾಂತಿಕಾರಿಗಳಾಗಿ ಬದಲಾಗಿ ಬಿಡುತ್ತಾರೆ.

 'complicate ಮಾಡಿರೋದು ದೇವರುಗಳಲ್ಲ ಅಂಕಲ್ ದೇವರ ರಾಯಭಾರಿಗಳಂತಿರುವ ಪೌರೋಹಿತ್ಯ
ನಡೆಸೋರು. ಇದುವರೆಗೂ ಯಾವ ಅಂಧನಂಬಿಕೆಗಳು ಬಲವಾದ ಹೋರಾಟ ಇಲ್ಲದೆ ತಣ್ಣಗಾಗಿವೆ ಹೇಳಿ. ?
ಕೈಯಲ್ಲಿ ಪವರ್ ಇದ್ರೆ, ತಾವು ಮಾಡ್ತಿರೋದು ದೌರ್ಜನ್ಯ ಅನ್ನೋ ಅರಿವು ಇದ್ದರೂ. , ನಡೆಯೋ
ಅಷ್ಟು ದಿನ ನಡೀಲಿ ಅಂತ ಸುಮ್ಮನಿರ್ತಾರೆ. ' ಈ ಬಾರಿ ಶೆಟ್ಟರು ನನ್ನ ಮೈಮೇಲೆ ಬಂದವನಂತೆ
ಮಾತನಾಡಿದೆ.

'ಏನೋಂದ್ರೆ ಪಾಪ ಆ ಹುಡುಗನಿಗೆ ಏನೋ ಕೆಲಸ ಇತ್ತು ಕಾಣಿಸತ್ತೆ. ಹೋಗಲಿ ಬಿಡಿ' ಎಂದರು.
ಕೊನೆಗೂ ಆಂಟಿ ನನ್ನ ಮೇಲೆ ಕರುಣೆ ತೋರಿಸಿದರು. 'ಅಯ್ಯೋ ಪರವಾಗಿಲ್ಲ ಬಿಡಿ ಆಂಟಿ. ನನಗೂ
ಮಾತನಾಡೋದಕ್ಕೆ ಖುಷಿಯಾಗುತ್ತೆ. ಆದರೆ ಮೇಲೆ ಫ್ರೆಂಡ್ ಗಳು ನೀರು ತರೋದನ್ನೇ ಕಾಯ್ತಾ
ಇದಾರೆ. ' ಅಂದೆ. ಬಿಳ್ಕೊಟ್ಟರು. ಮಾತು
ಆಗಿನ್ನೂ ಶುರುವಾಗಿತ್ತು ಅಷ್ಟೆ ನಮ್ಮ ಅಂಕಲ್ಲು ಶ್ರೀರಾಮ ಮರೆಯಲ್ಲಿ ನಿಂತುಕೊಂಡು
ವಾಲಿಗೆ ಬಾಣ ಹೂಡಿ ಕೊಂದಿದ್ದು ತಪ್ಪಲ್ಲವಾ ಅನ್ನೋ ಪ್ರಶ್ನೆಯನ್ನ ಈ ಬಾರಿ ಯಾಕೋ
ಕೇಳಲಿಲ್ಲ.

Wednesday, January 18, 2012

ಸಾವಿನ ಮನೆಯಲ್ಲಿ ಸ್ವರ್ಣ

ರಾತ್ರಿಯ ಕನಸು, ಕನಸೆಂದು ಅರ್ಥವಾಗುವುದರೊಳಗೆ ಬೆಳಗಾಗಿಬಿಟ್ಟಿತ್ತು. ಮೇಲೆ-ಕೆಳಗೆ ಒಳಗೆ-ಹೊರಗೆ ಟೂಥ್ ಬ್ರಸ್ಸು ಎಳೆದಾಡುತ್ತಾ, ಹರಿದು ಹೋದ ಹಾಳೆಯಂತಿದ್ದ ರಾತ್ರಿಯ ಕನಸಿನ ತುಂಡುಗಳನ್ನು ಜೋಡಿಸಲು ಪ್ರಯತ್ನಿಸುತ್ತಿದ್ದೆ. ಗೆಳೆಯ ಸೀನನ ಮುಖ ಅಂಗಳದಲ್ಲಿ ಕಾಣಿಸಿತು. ಕೊಂಚ ದಿಗಿಲುಗೊಂಡವನಂತೆ ಕಾಣುತ್ತಿದ್ದ. ದಿನವಿಡಿ ನಮ್ಮ ಜೊತೆ ಕಾಲೇಜಿನಲ್ಲಿ ಓದುವ ಕೆಲಸ ಮಾಡಿ, ಸಂಜೆಯಾದ ಮೇಲೆ ಸ್ವರ್ಣಚಂಪ  ಅಗರಬತ್ತಿಯನ್ನು, ಮಿಳಗಟ್ಟದ ಪ್ರತಿಯೊಂದು ದಿನಸಿ ಅಂಗಡಿಗಳಿಗೆ ಸಪ್ಲೈ ಮಾಡುತ್ತಿದ್ದ. ಸ್ವರ್ಣಚಂಪ ಅಗರಬತ್ತಿಗೆ ಬ್ರಾಂಡ್ ಅಂಬಾಸಿಡರ್ ಅವನು.  ' ಏನ ಸೀನ, ಇತ್ತ ಸವಾರಿ ಒಳಗೆ ಬಾ ಕಾಫಿ ಕುಡಿಯುವಂತೆ ' ಕರೆದೆ.