Skip to main content

ಸಾವಿನ ಮನೆಯಲ್ಲಿ ಸ್ವರ್ಣ

ರಾತ್ರಿಯ ಕನಸು, ಕನಸೆಂದು ಅರ್ಥವಾಗುವುದರೊಳಗೆ ಬೆಳಗಾಗಿಬಿಟ್ಟಿತ್ತು. ಮೇಲೆ-ಕೆಳಗೆ ಒಳಗೆ-ಹೊರಗೆ ಟೂಥ್ ಬ್ರಸ್ಸು ಎಳೆದಾಡುತ್ತಾ, ಹರಿದು ಹೋದ ಹಾಳೆಯಂತಿದ್ದ ರಾತ್ರಿಯ ಕನಸಿನ ತುಂಡುಗಳನ್ನು ಜೋಡಿಸಲು ಪ್ರಯತ್ನಿಸುತ್ತಿದ್ದೆ. ಗೆಳೆಯ ಸೀನನ ಮುಖ ಅಂಗಳದಲ್ಲಿ ಕಾಣಿಸಿತು. ಕೊಂಚ ದಿಗಿಲುಗೊಂಡವನಂತೆ ಕಾಣುತ್ತಿದ್ದ. ದಿನವಿಡಿ ನಮ್ಮ ಜೊತೆ ಕಾಲೇಜಿನಲ್ಲಿ ಓದುವ ಕೆಲಸ ಮಾಡಿ, ಸಂಜೆಯಾದ ಮೇಲೆ ಸ್ವರ್ಣಚಂಪ  ಅಗರಬತ್ತಿಯನ್ನು, ಮಿಳಗಟ್ಟದ ಪ್ರತಿಯೊಂದು ದಿನಸಿ ಅಂಗಡಿಗಳಿಗೆ ಸಪ್ಲೈ ಮಾಡುತ್ತಿದ್ದ. ಸ್ವರ್ಣಚಂಪ ಅಗರಬತ್ತಿಗೆ ಬ್ರಾಂಡ್ ಅಂಬಾಸಿಡರ್ ಅವನು.  ' ಏನ ಸೀನ, ಇತ್ತ ಸವಾರಿ ಒಳಗೆ ಬಾ ಕಾಫಿ ಕುಡಿಯುವಂತೆ ' ಕರೆದೆ.'ಅಯ್ಯೋ ಕಾಫಿ ಮನೆ ಹಾಳಾಯ್ತು. ಗೀತ ಸುಸೈಡ್ ಮಾಡ್ಕೊಂಡಿದಾಳಂತೆ. ' ಎಂದ. 

ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯಲಿಲ್ಲ. ಸಾವು ಪ್ರಧಾನಮಂತ್ರಿಯದ್ದೇ ಆಗಲಿ ಅಥವಾ ಮಗ್ಗುಲು ಮನೆಯ ಮುದಿ ಅಜ್ಜನದ್ದೇ ಆಗಿರಲಿ. ಅದೊಂದು ದುಃಖದ ಸಮಾಚಾರ. ಸುದ್ದಿಯನ್ನು ಕೇಳಿದ ತಕ್ಷಣ ಸಂತಾಪ ಸೂಚಕ ಪದಗಳು ತಿಳಿಯುವುದೇ ಇಲ್ಲ. ಗೀತ ಪಕ್ಕದ ಕೇರಿಯ ಓರಗೆಯ ಹುಡುಗಿ. ಮದುವೆಗಳಲ್ಲಿ,  ಜಾತ್ರೆಗಳಲ್ಲಿ ನೋಡಿ ಕಣ್ಣು ತುಂಬಿಕೊಡದ್ದಷ್ಟೆ ನೆನಪು.   

'ಗೀತಳಿಗೆ ಪಕ್ಕದೂರಿನ ಜಮೀನ್ದಾರು ಮನೆ ಹುಡುಗನೊಂದಿಗೆ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರಿಲ್ಲಿ ಇವಳು ಮೇಲೂರು ಶೆಟ್ಟರ ಮನೆ ಹುಡುಗನಿಗೆ ಮನಸು ಕೊಟ್ಟು ಕೂತವ್ಳೆ. ಅದೇನೋ ಜಾತ್ರೇಲಿ ಪಾನಕ, ಕೋಸುಂಬರಿ ಕೊಡುವ ನೆಪದಲ್ಲಿ, ಕಣ್ಣು ಕಣ್ಣು ಮೊದಲಾಗಿ ಪ್ಯಾರ್ ಕುದುರಿದೆ. ಪ್ರೇಮವನ್ನು ಉಳಿಸಿಕೊಳ್ಳುವ ಬಲವಾದ ಪ್ರಯತ್ನವೂ ಇರಲಿಲ್ಲವಾದರೂ, ಅಪ್ಪ ಅಮ್ಮನ ಆಸೆಯಂತೆ ಮದುವೆಗೆ ಒಪ್ಪಿಕೊಂಡಿದ್ದಾಳೆ. '

'ಆದರೆ ಆ ಶೆಟ್ಟರ ಮಗ ಇಷ್ಟು  ಕೆಂಪಗಿರೋ ಹುಡುಗಿಯನ್ನ ಬಿಟ್ಟಾದರೂ ಬಿಡೋದುಂಟ, ಹೆಂಗಾದ್ರು ಮಾಡಿ ಈ ಮದುವೆ ನಿಲ್ಲಿಸಬೇಕು ಅಂತ ನಿರ್ಧರಿಸಿ, ಜಮೀನ್ದಾರು ಹುಡುಗನನ್ನು ಹಿಡಿದು ಹೆದರಿಸಿದ್ದಾನೆ. ಆ ಪ್ಯಾದೆ ಜಮೀನ್ದಾರು ಹುಡುಗ, ಇದರ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದೇ ಒಮ್ಮೆಲೇ ಹತಾಶನಾಗಿ, ಹುಡುಗಿಗೆ ಫೋನಾಯಿಸಿ ` ತಡಿ ಮನೆಗೆ ಬಂದು, ನಿಮ್ಮಪ್ಪಂಗೆ ಎಲ್ಲಾ ಹೇಳ್ತೇನೆ. ` ಎಂದಿದ್ದಾನೆ. ಇವಳು ಭಯ ಬಿದ್ದು ನೇಣು ಹಾಕ್ಕೋಂಡು, ಸತ್ತೋಗಿದ್ದಾಳೆ. 
ಈಗ ಪ್ರೇಮಿಸಿದ ಹುಡುಗ ಮತ್ತು ಮದುವೆಯಾಗಬೇಕೆಂದಿದ್ದ ಹುಡುಗ ಇಬ್ಬರನ್ನೂ ಪೋಲೀಸರು ಹುಡುಕುತ್ತಿದ್ದಾರೆ. ' 

ಸಾವಿನ ಮನೆಯ ಕಡೆಗೆ ನಡೆದು ಸಾಗುತ್ತಲೇ ಪ್ರಾಯಶಃ ನಡೆದಿರಬಹುದಾದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದನು ಸೀನ. ಈ ದುರಂತಕ್ಕೆ ಹುಡುಗಿಯ ಹುಡುಗು ಬುದ್ದಿಯಷ್ಟೇ ಕಾರಣವಾಗಿಯೂ, ಅಮರ ಪ್ರೇಮದ ಲೇಪನ ಸಲ್ಲದು ಎಂಬುದಾಗಿಯೂ ಹೇಳಿದನು. ಸಾವಿನ ಮನೆಯ ಸುತ್ತಲೂ ಅದಾಗಲೇ ಸಿಕ್ಕಾ-ಪಟ್ಟೆ ಜನ ಸೇರಿದ್ದರು. ಸಾವಿಗೆ ಸಾವಿರ ಕಾರಣಗಳನ್ನು ಹೇಳಿದ ಸೀನ. ಆದರೆ ಅಲ್ಲಿ ಹುಡುಗಿ ಅನ್-ರೂಲ್ಡ್ ಹಾಳೆಯ ಮೇಲೆ ' ನನ್ನ ಸಾವಿಗೆ ನಾನೇ ಕಾರಣ'  ಎಂದು ಬರೆದು, ಸಹಿ ಮಾಡಿದ್ದಳು. ಸಾಯುವ ಕೊನೆ ಹಂತದಲ್ಲಿಯು ಬದುಕಿನ ವೃತ್ತಿಪರತೆಯನ್ನು ಮೆರೆಯುವ ಪ್ರತಿಯೊಂದು ಆತ್ಮಾಹುತಿ  ಕೇಸುಗಳು ದುರಂತ-ಜೋಕುಗಳಂತೆ ಕಾಣುತ್ತವೆ. ಅಲ್ಲಾ ನನ್ನ ಸಾವಿಗೆ ನಾನೆ ಕಾರಣ ಅಂತ  ಬರೆದಿಡುವುದರ ಅವಶ್ಯಕತೆಯಾದರೂ ಏನಿರಬಹುದು. ತಾವೇ ಸತ್ತು ಸುಡುಗಾಡು ಸೇರುವ  ಹೊತ್ತಿನಲ್ಲಿಯು, ತಮ್ಮ ಸಾವಿಗೊಂದು ಷರಾಯಿ ಬರೆದು, ಅದನ್ನು ಲೋಕಾರ್ಪಣೆ ಮಾಡಿ ಹೋಗುವ  ಹುಚ್ಚು  ತೆವಲು ಯಾಕಿರಬಹುದು.. ? ' 

' ಇಷ್ಟ ಪಟ್ಟವನ ಜೊತೆ,  ಮನೆಬಿಟ್ಟು ಓಡಿ ಹೋಗಬಹುದಿತ್ತಲ್ಲಮ್ಮಾ.  ಮಗಳು ಎಲ್ಲೋ ಒಂದು ಕಡೆ ಬದುಕಿದ್ದಾಳೆ ಅನ್ನೊ ಸಮಾಧಾನದಲ್ಲಿಯಾದರೂ ಇರ್ತಾ ಇದ್ವಿ. ?'  ಅಲ್ಲೊಂದು ಹೆಂಗಸು ಎದೆ ಬಡಿದುಕೊಳ್ಳುತ್ತಾ ಅಳುತ್ತಿತ್ತು. ಇದೊಂದು ದೊಡ್ಡವರ ಅವಕಾಶವಾದಿತನ ಎನಿಸಿತು. ಒಂದು ಸ್ಟುಪಿಡ್ ಮುದುಕಿ ಸತ್ತ ಹುಡುಗಿ ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಊಟ ಮಾಡಿದ್ದನ್ನೆ  ವಿಶೇಷಾರ್ಥಗಳನ್ನು ನೀಡುತ್ತಾಹೇಳುತ್ತಿದ್ದಳು. ಸತ್ತ ಮೇಲೆ ಸ್ವರ್ಗಕ್ಕೆ ಹೋಗುವವರೆಗೂ ಶಕ್ತಿ ಬೇಕಂತೆ. ಅದೊಂದು ಲಾಂಗ್-ವಾಕ್ ಅಂತೆ. ಅದಕ್ಕೆ ಸಾಯುವವರು, ಸಾಯುವ ಮುಂಚೆ, ತಮಗೆ ಗೊತ್ತಿಲ್ಲದಂತೆಯೇ ಜಾಸ್ತಿ ಊಟ ಮಾಡಿರ್ತಾರಂತೆ. ಕಾನ್ಸೆಪ್ಟ್ ಚೆನ್ನಾಗಿತ್ತು. ಆದರೆ ಸಾಯುವ ಮುನ್ನ ಸಂಡಾಸಿಗೆ ಹೋಗಿ ಬಂದವನಿಗೆ, ಯಾವ ಕಥೆ ಕಟ್ಟಿರುವರು ಎಂದು ಕೇಳಬೇಕೆನಿಸಿತು. 

ಅಂತೂ ಇಂತೂ ಸ್ವಲ್ಪ ಜಾಗ ಮಾಡಿಕೊಂಡು ಹುಡುಗಿಯ ಕಳೇಬರದ ಹತ್ತಿರ ನಡೆದೆವು. ಎಷ್ಟೇ ಹತ್ತಿರದವರು ಸತ್ತರೂ ಕೊನೆ ಘಳಿಗೆಯಲ್ಲಿ ಅವರ ಮುಖ ನೋಡುವುದು ಉಭಯ ಸಂಕಟದ ವಿಚಾರ.  ಯಾಕಂದ್ರೆ ಮುಂದೆ ಅವರ ಬಗ್ಗೆ ನೆನೆಸಿದಾಗಲೆಲ್ಲಾ ಕೊನೆಯ ಬಾರಿ ಕಂಡ ಆ ಮುಖವೇ ಕಣ್ಣ ಮುಂದೆ ಬಂದು ವೇದನೆಯಾಗುತ್ತದೆ.  ಅವಳ ಮುಖ ನೋಡುತ್ತಿದ್ದಂತೆ ಹೊಟ್ಟೆ ಕಿವುಚಿದಂತಾಯಿತು. ಅದೇನು ಸಂಬಂಧವಿಲ್ಲದಿದ್ದರೂ ಮುಖ ಸಪ್ಪಗಾಗಿ,  ಕಣ್ಣಲ್ಲಿ ಒಂದು  ಹನಿ ತುಂಬಿಕೊಂತು. ನನ್ನ ಪಕ್ಕದಲ್ಲಿಯೇ ನಿಂತಿದ್ದ ಸೀನನೂ ಸಾವಿನ ಮನೆಯ ಅನಾಥ ಮೌನವನ್ನು ಆಹ್ವಾನಿಸಿಕೊಂಡು ಧೈನ್ಯದಿಂದ ಕೈಮುಗಿದು ನಿಂತ. 

ಅದೇನು ನೆನಪಿಸಿಕೊಂಡನೋ... ' ಆಹಾ ನೋಡ್ಲಾ ಇಲ್ಲೂನು ಸ್ವರ್ಣಚಂಪ ಅಗರಬತ್ತಿ ಸ್ಮೆಲ್ ಬರ್ತಾ ಇದೆ. ನಮ್ಮ ಬ್ರಾಂಡ್'  ಎಂದ. ನಗು ತಡೆದುಕೊಳ್ಳಲಾಗಲಿಲ್ಲ. 

Comments

  1. chennagide le .... swalpa chikkadaythu ansuthe....

    ReplyDelete

Post a Comment