Skip to main content

ಅಮ್ಮಂಗೆ ಒ೦ದು ಪ್ರೀತಿಯ ಪತ್ರ


ಥ್ಯಾಂಕು ಮಮ್ಮಿ. ಲಾಲಿಸಿ, ಪಾಲಿಸಿ ಇಷ್ಟು ದೊಡ್ದವನನ್ನಾಗಿ ಮಾಡಿರೋದಕ್ಕಲ್ಲ. ನನಗೆ ಜನ್ಮ ಕೊಟ್ಟಿದ್ದಕ್ಕೆ. ಈ ಅದ್ಭುತ ವಿಶ್ವದಲ್ಲಿ ನಾನೂ ಒಬ್ಬ ಅನ್ನೋ ರೀತಿ ಮಾಡಿದ್ದಕ್ಕೆ. ಥ್ಯಾಂಕ್ ಯು.

‘ ಅಮ್ಮ ’ ಅನ್ನೋದು ವಿಶ್ವದ ಅತ್ಯಂತ ಹೆಚ್ಚು ಘನತೆ, ಗೌರವ ಇರುವ ಸರ್ವ ಶ್ರೇಷ್ಠ ಸಂಬಂಧಕ್ಕೆ ನಾವುಗಳು ಕೊಟ್ಟಿರುವ ಹೆಸರು. ಆದರೆ ನನಗೆ, ಅಮ್ಮ ಅಂದಾಗ ಕಣ್ಣ ಮುಂದೆ ಬರೋದು.. ನಿನ್ನ ಪೆದ್ದು ಪೆದ್ದು ಮುಖ. ನಾನು ಹೇಳುವ ಅಷ್ಟೂ ಸುಳ್ಳುಗಳನ್ನು ಅಷ್ಟೇ ಮುಗ್ಧವಾಗಿ ನಂಬುತ್ತಾ ಬಂದಿರುವ ಆ ಒಂದು ಪೆದ್ದು ಜೀವ.

ನನ್ನನ್ನು ಅಚ್ಚರಿ ಮತ್ತು ಕೌತುಕದ ಸುಳಿಯಲ್ಲಿ ಸಿಕ್ಕಿಸಿರುವ ವಿಚಾರ ಅಂದ್ರೆ, ಎಲ್ಲಾ ಅಮ್ಮಂದಿರಿಗೆ!! ತಮ್ಮ ಮಕ್ಕಳು ಅಂದರೆ ಯಾಕೆ ಅಷ್ಟು ಇಷ್ಟ. ಹೇಳಮ್ಮಾ .. ಪ್ಲೀಸ್..

ಇನ್ನೂರ ಎಪ್ಪತ್ತು ದಿನಗಳು ಅಂದ್ರೆ 9 ಮಂತ್ಸ್ , ನಿನ್ನ ಒಡಲೊಳಗೆ ಬೆಚ್ಚಗೆ ಬಚ್ಚಿಟ್ಟು ಕೊಂಡಿರುವ ಹೊತ್ತಲ್ಲಿ ಮೋಹದ ಕೊಂಡಿ ಸೃಷ್ಟಿಸಿಯಾಗುತ್ತದೆಯಾ. ?

ಆ ಹೊತ್ತಲ್ಲಿ ಇದು ನನ್ನ ಸ್ವತ್ತು, ನಾನು ಇದರ ವಾರಸುಧಾರಿಣಿ, ಇದರ ಸರ್ವಾಂಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ.. ಹೀಗೆಲ್ಲಾ ನಿನಗೆ ನೀನೆ ಏನೇನೋ ಅಂದುಕೊಂಡು ಬಿಟ್ಟೆಯಾ. ?

ಅಮ್ಮ ನೀನೇ ಒಂದು ಸಮುದ್ರ. ನಿನ್ನ ಭಾವ ಪ್ರಪಂಚ ಆಳ ಅಗಲಗಳು ಎಷ್ಟೇ ವಿಶಾಲವಾಗಿದ್ದರೂ, ಮನಸ್ಸು ಮಾತ್ರ ಯಾವಾಗಲೂ ದಡದಲ್ಲಿ ಕೂತಿರುವ ಮಗುವಿನ ಮೇಲೆಯೇ. ಕ್ಷಣ ಕ್ಷಣವೂ ಬಂದು ಸೋಕಿಸಿ ಹೋಗುವೆ. ಈ ನಿಷ್ಕಲ್ಮಶ ಕಾಳಜಿಯ ಅಲೆಗಳ ಸ್ಪರ್ಶಕ್ಕೆ ಬೆಲೆ ಕಟ್ಟೋದಕ್ಕೆ ಆಗಲ್ಲ ಬಿಡು.

ಒಂದು ದಿನ, ವಸುಧಾ ಆಸ್ಪತ್ರೆಯ ನರ್ಸ್ ಅಜ್ಜಿಯ ಕಡೆ ತೋರಿಸಿ ‘ಈ ಪ್ರಪಂಚಕ್ಕೆ ಕಾಲಿಟ್ಟಾಗ ಇವಳೇ ನಿನ್ನನ್ನು ಮೊದಲು ನೋಡಿದಾಕೆ’ ಎಂದಿದ್ದೆ. ನೆನಪಿದೆಯಾ. ? ನನಗಾಗ ತುಂಬಾ ಖುಷಿ ಆಗಿತ್ತು. ನೀನು ಅವಳಿಗೆ, ನನ್ನನ್ನು ಪರಿಚಯಿಸಿದಾಗ, ಆಕೆಯು ಅಚ್ಚರಿಯಿಂದ ಮಾತನಾಡಿಸಿದ್ದಳು. ಆದರೆ ನಿಜ ಹೇಳ್ತೇನೆ ಮಮ್ಮಿ. ನನ್ನನ್ನು ಮೊದಲು ನೋಡಿದವಳು ಆ ನರ್ಸ್ ಅಜ್ಜಿ ಅಲ್ಲ, ನೀನು.

ನಿನ್ನ ಹೊಟ್ಟೆಯಲ್ಲಿದ್ದ ನನ್ನ ರೂಪಕ್ಕೆ, ಇನ್ನೂ ಕೈ ಕಾಲುಗಳು ಮೂಡಿರಲಿಲ್ಲ. ಅದಾಗಲೇ ನಿನ್ನ ಕನಸಲ್ಲಿ ನಾ. ಅಂಬೆಗಾಲಿಟ್ಟು ನಡೆದಾಡುತ್ತಿದ್ದೆ. ಹಂಗಾದ್ರೆ ನನ್ನನ್ನು ಮೊದಲು ನೋಡಿದವಳು ನೀನು ತಾನೆ. ? ಹೇಳು ಮತ್ತೆ. ನನ್ನ ಹುಟ್ಟು ಹಬ್ಬವನ್ನ, actual ಆಗಿ, ನಾನು ಯಾವ ದಿನ ಆಚರಿಸಿಕೊಳ್ಳಲಿ..? ಗರ್ಭದಲ್ಲೊಂದು ಜೀವಸೆಲೆ ಮಿಡಿಯುತ್ತಿದ್ದರೆ, ಅದರ ಸುಖದಲ್ಲಿ ಹೊರಗೊಂದು ಜೀವ ನಲಿಯುತಿರುತ್ತೆ. ಬರಿ ಸ್ಪರ್ಷದ ಆಧಾರದಲ್ಲಿ, ಬಿಟ್ಟ ಕಣ್ಣುಗಳಲಿ ನನ್ನ ಪ್ರತಿಮೆ ರೂಪುಗೊಳ್ಳುತಿರುತ್ತೆ.

ಹೆತ್ತವಳಿಗೆ ಹೆಗ್ಗಣ ಮುದ್ದು ಅನ್ನೋದು ಗಾದೆ. ಆದರೂ ನಮ್ಮಂತ ಮಕ್ಕಳನ್ನು ಹೆಗ್ಗಣಕ್ಕೆ ಹೋಲಿಕೆ ಮಾಡುದ್ರೆ ಹೆಂಗೆ..? ನನ್ನನು ಹೆತ್ತ ನಿನಗೆ ನನ್ನ ಮೂಗು ಅಂದ್ರೆ ತುಂಬಾ ಮುದ್ದು. ದಿನಕ್ಕೆ ಹತ್ತಾರು ಬಾರಿ ಅದನ್ನ ಹಿಡಿದು ಜಗ್ಗಿ ಉದ್ದ ಮಾಡಿಬಿಟ್ಟಿದಿಯ.

ಕನ್ಫೆಷನ್ ಟೈಮು!! ಸಾರಿ, ಮಮ್ಮಿ. ನಿನಗೆ ಸುಳ್ಳು ಹೇಳಬೇಕು ಅನ್ನೋ ಇರಾದೆ ನನಗೂ ಇಲ್ಲ. ಆದರೆ ಹೇಳೋದಾದರೂ ಏನು ..? ಪ್ರತಿ ಸಾರಿ ಸತ್ಯ ಹೇಳಿ, ನಿನಗದು ಅರ್ಥ ಮಾಡಿಸಿ, ಅದರಿಂದ ನನ್ನ ಧೀರ್ಘಾವಧಿ ಜೀವನಕ್ಕೆ ಏನೂ ತೊಂದರೆ ಇಲ್ಲ ಅನ್ನೋದನ್ನ ಮನದಟ್ಟು ಮಾಡಿಸುವ ಬದಲು, ಒಂದು ಸುಳ್ಳಿನಲ್ಲಿ ಮಾತು ಮುಗಿಸುತ್ತಿದ್ದೆ ಅಷ್ಟೆ. ನಾನು ಮಾಡುವುದಕ್ಕೆಲ್ಲಾ ನಿನ್ನ ಒಪ್ಪಿಗೆ, ಇದ್ದೆ ಇರುತ್ತೆ ಅನ್ನೋ ನಂಬಿಕೆಯಲ್ಲಿ ನಾನೂ ಮುಂದುವರೆಯುತ್ತಿದ್ದೇನೆ. ಅದೂ ಅಲ್ಲದೆ, ಮಕ್ಕಳು ಯಾವಾಗಲು ಖುಷಿಯಾಗಿರಬೇಕು ಅಂತ ಬಯಸೋ ಅಮ್ಮಂದಿರ ಬೆಟ್ಟದಷ್ಟು ಆಸೆಗೆ ತಣ್ಣೀರು ಎರಚೋದಕ್ಕಾಗುತ್ತ.?

ದೇವರ ಹೆಸರಲ್ಲಿ ಊಟ ಮಾಡುವ ಸಂಪ್ರದಾಯ ಒಳ್ಳೇದು. ಉಪವಾಸ ಇರೋ ಸಂಪ್ರದಾಯ ಕೆಟ್ಟದ್ದು ಅಂತ ವಾದಿಸುವಾಗ, ಬಲವಂತವಾಗಿ ಹಿಡಿದು ಭಗವಂತನೊಂದಿಗೆ ಟಚ್ ನಲ್ಲಿ ಇರೋ ಹಂಗೆ ಮಾಡ್ತಿಯ.

***********

ಸ್ಕೂಲ್ ಡೇ ಗಳಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ, ತಟ್ಟೆ , ಟಿಫೀನು ಕ್ಯಾರಿಯರು ಮತ್ತು ದೊಡ್ಡ ಬೇಸಿನುಗಳನ್ನು ಗೆದ್ದು ತಂದಾಗ ಖುಷಿ ಪಡುತ್ತಿದ್ದೆ. ಅದನ್ನ ಹೇಳಿಕೊಳ್ಳುತ್ತಿದ್ದುದರಲ್ಲಿಯೂ ಯಾವುದೇ ಚೌಕಾಸಿ ಇರುತ್ತಿರಲಿಲ್ಲ. ಮನೆಗೆ ಬರುತ್ತಿದ್ದ ಹೆಣ್ಣು ಅತಿಥಿಗಳನ್ನು, ಸೀದಾ ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಅಕಸ್ಮಾತ್ ಗೆದ್ದು ತಂದಿದ್ದ ಬಾಕ್ಸಿನಲ್ಲಿ ಏನಾದರು ಇದ್ದರೆ, ಅದನ್ನು ಇನ್ನೊಂದಕ್ಕೆ ಸುರಿದು; ತೋರಿಸುತ್ತಾ - ‘ ಇವು ನನ್ನ ಮಗನಿಗೆ ಪ್ರೈಜ್ ಬಂದಿರೋವು ’ ಅಂತಿದ್ದೆ. ಸ್ಟೀಲ್ ತಟ್ಟೆ, ಬೇಸಿನ್ನುಗಳ ಮುಂದೆ!! ಯಾವುದೇ ಸರ್ಟಿಫಿಕೇಟುಗಳು, ಮೊಮೆಂಟೋಗಳು ನಿನ್ನ ಪಾಲಿಗೆ ತೃಣಕ್ಕೆ ಸಮಾನ.

ಆ ದಿನ ರಾತ್ರಿ, ಕಾಲೇಜಿನ ಹಾಸ್ಟೆಲ್ ನಿಂದ ಫೋನ್ ಮಾಡಿದೆ. ‘ ಮಮ್ಮಿ ನನಗೆ ಡಾಕ್ಟರ್ ಆಗೋಕೆ ಇಷ್ಟ ಇಲ್ಲ. ವಾಪಾಸ್ ಮನೆಗೆ ಬರ್ತೀನಿ. ’ ಎಂದೆ. ಮೆಡಿಕಲ್ ಕಾಲೇಜಿಗೆ ಸೇರಿ ಹತ್ತು ದಿನಗಳಾಗಿದ್ದವು. ‘ಹಾಸ್ಟೆಲ್ ಸಮಸ್ಯೆನಾ. ? ಮನೆ ನೆನಪಾಗ್ತಾ ಇದ್ದೀಯ. ? ಹೊಸ ಕಾಲೇಜು ಅಂತ ಭಯಾನ. ? ನಾನೆ ಅಲ್ಲಿಗೆ ಬಂದು ನಿನ್ನ ಜೊತೆ ಇರ್ತೀನಿ. ಯೋಚನೆ ಮಾಡು. ಒಳ್ಳೆ ಅವಕಾಶ ಕಳ್ಕೊಬೇಡ. ’ ಎಂದೆಲ್ಲಾ ವಿಧವಿಧವಾಗಿ ಪೂಸಿ ಹೊಡೆದೆ. ನನ್ನ ಕೈಲಿ ಸಾಧ್ಯಾನೆ ಇಲ್ಲ ಅಂತ ನಿರ್ಧಾರವನ್ನ ಹೇಳಿದೆ. ಬಹುಶಃ ನೀನು ಒಪ್ಪೋದಿಲ್ಲ, ಇನ್ನ ಪುಸಲಾಯಿಸೋದಕ್ಕೆ ನೋಡ್ತಿಯ ಎಂದುಕೊಂಡಿದ್ದೆ.

ಆದರೆ ನೀನು ಹೇಳಿದ್ದು - ‘ಸರಿ ಬಂದು ಬಿಡು. ನಿನಗೇ ಇಷ್ಟ ಇಲ್ಲ ಅಂದ ಮೇಲೆ ಎಷ್ಟು ದೊಡ್ದದಾಗಿದ್ದರು ಬೇಡ. ಮನಸ್ಸಿಗೆ ಒಗ್ಗದಿರುವ ಕೆಲಸ ಮಾಡಬಾರದು. ’ ಏನ್ ಡೈಲಾಗ್ ಅಮ್ಮಿ ಅದು. ಅಬ್ಬಾ!! ಥ್ಯಾಂಕ್ ಯು ಮಮ್ಮಿ. ನನ್ನನ್ನ ನನ್ನ ಪಾಡಿಗೆ ಬಿಟ್ಟಿದ್ದಕ್ಕೆ.

ಇವತ್ತಿಗೂ ನೀನು ನನ್ನನ್ನು ನೋಡಿ ಬೀಗುವುದು!! ಇಂಜಿನಿಯರು ಆಗಿದ್ದೇನೆಂದಲ್ಲ, ಬದಲಿಗೆ ಹತ್ತು ದಿನ ಡಾಕ್ಟರು ಓದಿ ಬಂದಿದ್ದೇನೆಂದು.

ಇಂಜಿನಿಯರಿಂಗ್ ಓದುವಾಗ, ಮೊದಲ ಬಾರಿಗೆ ಎರಡು ವಿಷಯಗಳಲ್ಲಿ ಅನುತ್ತಿರ್ಣ ಕೀರ್ತಿ ಪತಾಕೆಯನ್ನು ಹಾರಿಸಿದೆ. ಎರಡು ವಿಷಯಗಳಲ್ಲಿ ಡಮ್ ಚಿಕಿ ಡಮ್!! ಅಂದ್ರೆ ತಮಾಷೆನಾ. ಗೆಳೆಯರೆಲ್ಲಾ ಆತ್ಮೀಯರಾಗುತ್ತಾ ಮೆರೆಯಲು ಪ್ರಾರಂಭಿಸಿದ ಸುವರ್ಣಯುಗದ ಆದಿ ಕಾಲದ ಸಮಯ. ಎಜುಕೇಶನ್ ಸಿಸ್ಟಮ್ಮೆ ಸರಿಯಿಲ್ಲ ಎಂದು ದೂರುವಷ್ಟರ ಮಟ್ಟಿಗೆ ದೊಡ್ದವರಾಗಿದ್ದೆವು.

ಫೇಲು ಅನ್ನೋದೊಂದು ಕೆಟ್ಟ ಸಮಾಚಾರ. ಅದಕ್ಕೆ ನೀನು ಹೇಗೆ ಪ್ರತಿಕ್ರಿಯೆ ಕೊಡಬಹುದು ಅನ್ನೋ ಅಂಜಿಕೆಯಿಂದಲೇ ಹೇಳಿದೆ.

‘ಹೌದಾ!! ನೀನು ಬೇಜಾರು ಮಾಡ್ಕೋಬೇಡ ಮಗನೆ. ಮತ್ತೆ ಪಾಸ್ ಮಾಡಿದರಾಯಿತು’ ಎಂದುಬಿಡೋದಾ ನೀನು. ನನಗೆ ತಲೆ ಸುತ್ತೋದೊಂದು ಬಾಕಿ ಮಮ್ಮಿ. ಕೊನೆ ಪಕ್ಷ ಒಂದು ಮಾತಾದರು ಬಯ್ಯಬಹುದಿತ್ತು.

‘ಯಾರಾದರೂ ಫೇಲ್ ಆಗಬೇಕು ಅಂತ ಪರೀಕ್ಷೆ ಬರಿತಾರ ಮಗನೆ. ನೀನು ಫೇಲ್ ಆಗಿದಿಯ. ನೀನೆ ಪಾಸ್ ಮಾಡ್ತಿಯ. ‘ಅಂತ ಬೇರೆ ಹೇಳ್ತೀಯ. ಅಕಸ್ಮಾತ್ ರಕ್ತದಲ್ಲಿ ಸ್ಪರ್ಧಾ ಮನೋಭಾವವೇ ಇಂಗಿ ಹೋಗಿ, ಅಲ್ಪಕ್ಕೆ ತ್ರುಪ್ತನಾಗುವ ಮನಸ್ತಿತಿ ಬಂದಿದ್ದಲ್ಲಿ, ಅದಕ್ಕೆಲ್ಲಾ ಮೂಲ ಕಾರಣ ನನ್ನ ಸೋಲುಗಳ ಬಗೆಗಿನ ನಿನ್ನ ದಿವ್ಯ ನಿರ್ಲಕ್ಷ್ಯ..

*******

ನನ್ನ ಮೇಲೆ ಸ್ವಲ್ಪಾನು ಭರವಸೆ ಅಥವಾ ಆತ್ಮವಿಶ್ವಾಸ ಅನ್ನೋದೆ ಇಲ್ಲ ನಿನಗೆ. ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಲು ಹೊರಟು ನಿಂತದಿನ ನೀನು ನನಗೆ ಹೇಳಿದ್ದೇನು

‘ ಮಗನೇ!! ನೀನು ಅಲ್ಲಿ ಕೂಡ ತುಂಬಾ ದಿನ ಇರಲ್ಲ, ಓಡಿ ಬಿಡ್ತೀಯ. ಆದರೂ ದಯವಿಟ್ಟು ಇರೋ ಕೆಲಸ ಬಿಟ್ಟು, ಬಂಗಾರದಂತಹ ನಿನ್ನ ಜೀವನ ಹಾಳು ಮಾಡ್ಕೋಬೇಡ. ದೊಡ್ಡದೋ, ಚಿಕ್ಕದೋ ನಮ್ಮ ಪಾಲಿಗೆ ಬಂದಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಅದರಲ್ಲೇ ಖುಷಿ ಕಾಣಬೇಕು’. ಇದೊಂತರ ಬೈದಂಗೂ ಇತ್ತು. ಬುದ್ಧಿ ಹೇಳಿದ ಹಂಗೂ ಇತ್ತು.

ನನ್ನ ಮೊದಲ ಸಂಬಳ ಹಿಡಿದು ಮನೆಗೆ ಬರೋಕೆ ಮುಂಚೆ ‘ಮಮ್ಮಿ!! ನಿಂಗೆ ಏನ್ ತರಲಿ’ ಅಂತ ಕೇಳಿದೆ. ಏನಾದ್ರೂ ತುಂಬಾ ದೊಡ್ಡದನ್ನು ಕೇಳಿ ಬಿಡ್ತಿಯೇನೋ ಅಂತ ಭಯ ಇತ್ತು. ಆದರೆ ನೀನು ಕೇಳಿದ್ದು- ‘ ಆಲೂಗಡ್ಡೆ ಚಿಪ್ಸು’. ಮಗನ ಮೊದಲ ಸಂಬಳದಲ್ಲಿ ಅಮ್ಮ ತನಗಾಗಿ ಕೇಳಬಹುದಾದ ಅಮೂಲ್ಯ ವಸ್ತು ಇದೇನಾ.

ಓಲೆ ಕೊಳ್ಳಲು ದೊಡ್ಡ ಚಿನ್ನದ ಅಂಗಡಿಗೆ ಹೋದಾಗ - ಅಮ್ಮ!! ಹಳೇ ಸಿನಿಮಾಗಳಲ್ಲಿ ವಿಲನ್ ಗಳಿಗೆ ನಿಧಿ ಸಿಕ್ಕಾಗ ಸಂಭ್ರಮ ಪಡುತ್ತಾ ನೋಡುತ್ತಾ ನಿಲ್ಲುವರಲ್ಲಾ. ? ಅಂತಹಾ ರಿಯಾಕ್ಷನ್ನು ನಿಂದು.

ಗಾಂಧಿ ಬಜಾರಲಿ ಅಡವಿಟ್ಟುಕೊಳ್ತಿದ್ದ ಪುಟ್ಟ ಅಂಗಡಿಗಳನ್ನಷ್ಟೇ ನೋಡಿದ್ದವಳು, ದೊಡ್ಡ ಚಿನ್ನದ ಭಂಡಾರಕ್ಕೆ ಭೇಟಿ ಕೊಟ್ಟಾಗ - ‘ಚೇತನ ಇವೆಲ್ಲಾ ನಿಜವಾಗಲು ಚಿನ್ನದ ಆಭರಣಗಳೇನೊ. ? ಟಿವಿನಲ್ಲಿ ಸುಮ್ಮನೆ ಉಮಾ ಗೋಲ್ಡು ಹಾಕ್ಕೊಂಡ್ ತೋರುಸ್ತಾರೆ ಅನ್ಕೊಂಡಿದ್ದೆ. ನಿಜವಾಗಲು ಇರುತ್ವೆ ಅಂತ ಗೊತ್ತೇ ಇರಲಿಲ್ಲ ’ ಅಂದೆ.

ಬಂಗಾರದ ಮೇಲೀನ ಸ್ತ್ರೀ ಸಹಜ ವ್ಯಾಮೋಹ ನಿನಗೆ. ನೋಡಿ ಸಂಭ್ರಮ ಪಟ್ಟು ಸುಮ್ಮನಾಗಿ ಬಿಡುವವಳಲ್ಲ. ಅಲ್ಲಿದ್ದ ಭವ್ಯವಾದ ದೊಡ್ಡ ಆಭರಣಗಳ, ಬೆಲೆ ತಿಳಿದುಕೊಳ್ಳುವ ಕುತೂಹಲ. ಆದರೂ ಅಷ್ಟು ದೊಡ್ಡ ಅಂಗಡಿ. ಬೆಲೆ ಕೇಳಿಬಿಟ್ಟರೆ ಕೊಂಡುಕೊಳ್ಳಲೇ ಬೇಕಾಗುತ್ತದೇನೊ ಎಂಬ ಮುಜುಗರ. ಆದರೂ ಕೇಳಬೇಕು ಆಂದುಕೊಂಡದ್ದನ್ನು, ಗಂಟಲೊಳಗೆ ಇಟ್ಟುಕೊಳ್ಳುವ ಸ್ತ್ರೀ ಜಾಯಮಾನವಲ್ಲ ನಿಂದು. ಸೇಲ್ಸ್ ಮ್ಯಾನ್ ಹುಡುಗನಿಗೆ ರೇಟು ಕೇಳಿದ್ದಕ್ಕೆ, ಆ ವಡವೆಯನ್ನೇ ತಂದು ನಿನ್ನ ಕೈಗೆ ಕೊಟ್ಟು ಬಿಟ್ಟ.

‘ಬೇಡ ಬೇಡ ರೇಟ್ ತಿಳಿದುಕೊಳ್ಳೋಣ ಅಂತ ಅಷ್ಟೇ. ಪರ್ಚೇಸ್ ಮಾಡಲ್ಲ. ’ ಅಂದರೂ ‘ಅಯ್ಯೋ ನೋಡಿದ್ದನ್ನೆಲ್ಲಾ ತಗೋಬೇಕು ಅಂತೆಲ್ಲಾ ಇಲ್ಲಮ್ಮ. ಪರವಾಗಿಲ್ಲ ನೋಡಿ. ’ ಎನ್ನುತ್ತಾ ನೀನು ಬೊಟ್ಟು ಮಾಡಿದ್ದನ್ನೆಲ್ಲಾ, ಶೋಕೇಸ್ ನಿಂದ ಹೊರ ತೆಗೆದು ತಂದು ತೋರಿಸಿದ.‘ಇವುನ್ನೆಲ್ಲಾ ಯಾರಾದ್ರು ಪರ್ಚೇಸ್ ಮಾಡ್ತಾರ. ?’ ಎಂಬ ಮತ್ತದೇ ಮುಗ್ಧ ಪ್ರಶ್ನೆ ನಿಂದು.

ಒಂದ್ಸಾರಿ ಊರಿಂದ ಬಂದ ಗೆಳೆಯ ರವಿ, ‘ ಇವತ್ತು ಊಟ ಪ್ಯಾಕ್ ಮಾಡಿರೋಳು ನಮ್ಮಕ್ಕ ’ ಅಂದ. ಹೆಂಗ್ ಹೇಳ್ತೀಯೋ ಅಂದ್ರೆ ‘ತುಂಬಾ ಸಿಂಪಲ್ ಊಟಕ್ಕೆ ‘ಮೂರು ಚಪಾತಿ ಕಟ್ರಿ’ ಅಂತ ಹೇಳಿದ್ದೆ. ಕರೆಕ್ಟ್ ಆಗಿ ಮೂರೇ ಚಪಾತಿ ಇದೆ ಬಾಕ್ಸಲ್ಲಿ. ಸೊ ಡೌಟೇ ಇಲ್ಲ. ಇದು ನಮ್ಮಕ್ಕ ತುಂಬಿರೋದು. ಅದೇ ನಮ್ಮಮ್ಮ ತುಂಬಿದ್ರೆ, ನಾನು ಬಯ್ತೀನಿ ಅಂತ ಗೊತ್ತಿದ್ದರೂ, ಕೊನೆಪಕ್ಷ ಇನ್ನು ಒಂದಾದ್ರು ಜಾಸ್ತಿ ತುಂಬಿರ್ತಿದ್ದಳು ‘ ಅಂದಿದ್ದ. ಆಗ ನೆನೆಪಾದವಳು ನೀನೆ. ಇಷ್ಟೇ ಅಮ್ಮನಿಗೂ, ಬೇರೆಯವರಿಗೂ ಇರುವ ಚಿಕ್ಕ ವ್ಯತ್ಯಾಸ. ಅಡುಗೆ ಚೆನ್ನಾಗಿದ್ದು, ಅಕಸ್ಮಾತ್ ಕ್ವಾಂಟಿಟಿ ಕಡಿಮೆ ಇದ್ದಲ್ಲಿ ಯಾರಿಗೂ ಗೊತ್ತಾಗದ ಹಾಗೆ ನಿನ್ನ ಊಟದ ಸ್ಪೀಡ್ ಕಡಿಮೆ ಆಗಿ ಬಿಟ್ಟರತ್ತೆ.

ನೂರಾರು ರೂಪಾಯಿ ದುಡ್ಡು ಕೊಟ್ಟು ಕಥೆ, ಕಾದಂಬರಿ ಪುಸ್ತಕಗಳನ್ನು ಕೊಂಡು ಮನೆಗೆ ಬಂದಾಗ, ಅಷ್ಟೂ ಪುಸ್ತಕಗಳನ್ನೂ ತಿರುಗಾ-ಮುರುಗಾ ಎರಡೆರಡು ಸಲ ನೋಡಿ- ‘ ಚೇತನ!! ಇಷ್ಟು ದುಡ್ಡಲ್ಲಿ ಎರಡು ಸೀರೆ ಬರ್ತಿದ್ವಲ್ಲೋ. ? ’ ಅಂತ ಅಚ್ಚರಿ ಪಡುತ್ತ ಕೇಳ್ತಿದ್ದೆ. ಹಾಹಾ ನಿನ್ನ ಪ್ರಿಯಾರಿಟಿಗಳನ್ನ ಅರ್ಥ ಮಾಡಿಕೊಳ್ಳೋದು ತುಂಬಾ ಕಷ್ಟ ಬಿಡು.

ಸ್ಕೂಲ್ ಟೈಮಿಗೆ ಬರೋ ರೆಡ್ ಬಸ್ ನೋಡಿದಾಗೆಲ್ಲಾ ಹೇಳ್ತಾ ಇರ್ತಿಯ ‘ಈಗಲೂ ಯೂನಿಫಾರಂ ತೊಡಿಸಿ, ಸ್ಕೂಲ್ ಬ್ಯಾಗು ಹಾಕಿ, ಕೈಯಲ್ಲೊಂದು ಊಟದ ಬುಟ್ಟಿ ಕೊಟ್ಟು ನಿನ್ನ, ಮತ್ತೆ ಸ್ಕೂಲಿಗೆ ಕಳಿಸಬೇಕು ಅನ್ನಿಸುತ್ತೆ. ನನ್ನ ಕಣ್ಣಿಗೆ ನೀನು ದೊಡ್ಡವನ ರೀತಿ ಕಾಣಿಸೋದೆ ಇಲ್ಲ’ ಅಂತ. ಈ ರೀತಿಯ ವಯಸ್ಸಿಲ್ಲದ ಆಸೆಗಳಿಗೆ ಏನು ಹೇಳೋದು. ? ಆದರೂ ನಿನ್ನ ಕಲ್ಪನೆಯೇ ವಿಚಿತ್ರ.

ಒಮ್ಮೆ ನಾನು ಬರೆದಿದ್ದ ಸಾಕು ನಾಯಿ ಜಿಮ್ಮಿಯ ಬರಹ ಓದಲು ಕೊಟ್ಟಿದ್ದಾಗ, ಪ್ರತಿ ಸಾಲುಗಳನ್ನು ಓದುವಾಗಲೂ ಬಿದ್ದು ಬಿದ್ದು ನಗುತ್ತಿದ್ದೆ. ಯಾಕೆ೦ದರೆ ಆ ನಾಯಿಯ ತಳ ಬುಡ ಗೊತ್ತಿದ್ದುದು ನಮ್ಮಿಬ್ಬರಿಗೆ.

“ಎ೦ಥಾ ನಾಯಿ ಅದು. ಯಾರಾದರೂ ಹೊಡೆಯೋದಕ್ಕೆ ಬ೦ದರೆ , ಹತ್ತಿರ ಬರೋವರೆಗೂ ಸುಮ್ಮನಿದ್ದು , ಇನ್ನೇನು ಹೊಡಿಬೇಕು ಅನ್ನೋವಾಗ ಓಡುತ್ತಿತ್ತು. ” ಎಂದು ನೆನಪಿಸಿಕೊಂಡು ನಕ್ಕಿದ್ದೆ. ಅಲ್ಲಿಗೆ ನಾನು ಬರೆದದ್ದು ಸಾರ್ಥಕ ಆಯ್ತು ಅನ್ನಿಸ್ತು.

***********

ಆದರೂ ಒಂದು ಸೀಕ್ರೆಟ್ ಕೇಳ್ತೇನೆ. ನಿನಗೆ ಯಾಕೆ ಮಮ್ಮಿ, ಆಗಾಗ ದಬಾರನೆ ಬೀಳುವ ವಿಲಕ್ಷಣ ಅಭ್ಯಾಸ ಇದೆ. ನೀನು ಬೀಳೋದು ಎಷ್ಟು ಕಾಮನ್ನು ಅಂದ್ರೆ, ಅಡುಗೆ ಮನೆಯಲ್ಲಿ ಪಾತ್ರೆಗಳು ಬಿದ್ದ ಸದ್ದಾದರೂ ಅಪ್ಪಾಜಿ ನಡುಮನೆಯಿಂದಲೇ ಕೂಗುವರು ‘ ಅಯ್ಯೋ!! ನಿಮ್ಮಮ್ಮ ಬಿದ್ಲು ಅನ್ಸತ್ತೆ ನೋಡ್ರೋ’ ಅಂತ. ಅಕಸ್ಮಾತ್ ಬಿದ್ದಿದ್ದರು ಥಟ್ ಅಂತ ಎದ್ದು ಕೂತು ಬಿಡ್ತಿಯ. ಬಿದ್ದಾಗ ನಿನ್ನ ಗಮನ ನೋವಿನ ಮೇಲೆ ಇರ್ತಾ ಇರಲಿಲ್ಲ. ಬದಲಾಗಿ ನೀನು ಬಿದ್ದಿದ್ದನ್ನು ಯಾರಾದರು ನೋಡುದ್ರಾ ಅನ್ನೋದರಾ ಬಗ್ಗೆ. ಪೂರ್ ಮದರ್. ಚಿಕ್ಕ ಹುಡುಗಿ ತರಹ ಬಿಳ್ತಾ ಇರ್ತಿಯ. ಸ್ವಲ್ಪ ನೋಡಿಕೊಂಡು ನಡಿಬಾರದೆ.

ಮೊದಲೆಲ್ಲಾ ಪರವಾಗಿಲ್ಲ. ಯಂಗ್ ಆಗಿದ್ದೆ. ಬಿದ್ದಾಗ ಅಷ್ಟು ಪೆಟ್ಟಾಗುತ್ತಿರಲಿಲ್ಲ. ಆದರೆ ಈಗ ಮುದುಕಿ ಆಗ್ತಾ ಇದ್ದೀಯ. ಒಂದೊಂದು ಸಾರಿ ಬಿದ್ದಾಗಲು ಸಾವರಿಸಿಕೊಳ್ಳಲು ತುಂಬಾ ದಿನ ತಗೋತಿಯ.

ತೋಟದಮನೆಯ ಚರಂಡಿ ದಾಟುವಾಗ ಬಿದ್ದಾಗ, ನಿನ್ನ ಪಾದದ ಮೂಳೆಯೇ ಮುರಿದು ಹೋಗಿತ್ತು. ನಾನಾಗ ಚೆನೈ ನಲ್ಲಿದ್ದೆ. ನನಗೆ ಈ ವಿಷಯವನ್ನು ತಿಳಿಸಲಿಲ್ಲ.

ಊರಿಗೆ ಬಂದಾಗ, ಹಾಸಿಗೆಯ ಮೇಲೆ ಮಲಗಿದಿಯ. ತುದಿಬೆರಳಿನಿಂದ ಹಿಡಿದು ಮೊಣಕಾಲಿನವರೆಗೂ ಬ್ಯಾಂಡೇಜು. ತುಂಬಾ ದುಃಖ ಆಯ್ತು. ಯಾಕಂದ್ರೆ ನಾನು ಪ್ರತಿ ಸಾರಿ ಊರಿಗೆ ಹೋದಾಗಲು, ಬಾಗಿಲಲ್ಲಿ ನನಗಾಗಿ ಕಾಯುತ್ತಾ ನಿಂತು, ಬಂದ ತಕ್ಷಣ ಟಾಪ್ ಟು ಬಾಟಮ್ ನನ್ನ ನೋಡಿ- ‘ಹೋದ ಸಾರಿ ಬಂದಿದ್ದಕ್ಕಿಂತಲೂ ಈ ಸಾರಿ ಇನ್ನು ಸಣ್ಣ ಆಗಿದ್ದಿಯ’, ಅಂತ ಅದೇ ಹಳೆ ಡೈಲಾಗ್ ಹೊಡೆದು, ನನ್ನ ಮೂಗು ಹಿಡಿದು ಜಗ್ಗಿ, ಮುತ್ತು ಕೊಡುತ್ತಿದ್ದವಳು ಅಸಹಾಯಕಳಾಗಿ ಹಾಸಿಗೆ ಮೇಲೆ ಮಲಗಿದ್ದೆ.

‘ಏನ್ ಮಮ್ಮಿ. ಇಷ್ಟೆಲ್ಲಾ ಆಗಿದ್ದರೂ ನನಗೆ ಒಂದು ಮಾತು ಕೂಡ ಹೇಳಿಲ್ಲ. ? ಆಲ್ವಾ ’ ಅಂತ ಪ್ರಶ್ನಿಸಿದೆ.

ಅದಕ್ಕೆ ನೀನು - ‘ಹೇ!! ಹೋಗೋ!! ‘ಚಿಕ್ಕ ಹುಡುಗಿ ತರ ಬಿಳ್ತಾ ಇರ್ತಿಯ ಅಂತ ಆಡ್ಕೊತಿಯ. ’ ಅದಕ್ಕೆ ನಿನಗೆ ಹೇಳಲಿಲ್ಲ. ‘ ಎಂದೆ.

ಅಂಥ ಹೊತ್ತಲ್ಲೂ ನಿನ್ನ ಹಾಸ್ಯ ಪ್ರಜ್ಞೆಗೆ ಏನು ಹೇಳಬೇಕೋ ತೋಚಲಿಲ್ಲ. ಅಪ್ಪಿಕೊಂಡು ಹೇಳಿದ್ದೆ ‘ಹೆಂಗೂ ಕಾಲ್ ಮುರಕೊಂಡಿದೀಯಾ. ಇನ್ನು ಮುಂದೆ ಬೀಳೋ ಪ್ರಮೇಯನೆ ಇಲ್ಲ ‘ಅಂತ.

Comments

  1. ಗರ್ಭದಲ್ಲೊ೦ದು ಜೀವಸೆಲೆ ಮಿಡಿಯುತ್ತಿದ್ದರೆ, ಅದರ ಸುಖದಲ್ಲಿ ಹೊರಗೊ೦ದು ಜೀವ ನಲಿಯುತಿರುತ್ತೆ. super

    ReplyDelete

Post a Comment

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು.

ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ.

ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ.
ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು.

'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು.

ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ...
'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ '
ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು.

' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು.

' ಲೋ!! ಇವ್ರು ಆಲ್ಬಂ ಕೊ…

ಕಾಮೆಂಟ್ ಕವಿಗಳು

ಕವಿತೆಗಳನ್ನು ಮೆಚ್ಚಿ, ಯಾರಾದ್ರು ಬರೆದಾಗ ತುಂಬಾ ಖುಷಿ ಆಗತ್ತೆ. ಆ ರೀತಿ ಉತ್ಸಾಹದಿಂದ
ಬರೆದವರನ್ನ, ಸರಿಯಾಗಿ aknowledge ಮಾಡಕ್ಕಾಗದೇ ಇದ್ರೂ ಕೂಡ, ಅವರುಗಳ ಸಾಲುಗಳು
ಮಾತ್ರ, ನನ್ನ ಖುಷಿಯ ಬುತ್ತಿಯ ತುತ್ತುಗಳಂತಿವೆ.

ಅರೆಘಳಿಗೆಯ ಮನೋಲ್ಲಾಸಕ್ಕೆ ಕಾರಣವಾದ ನನ್ನ ಪದ್ಯಗಳಿಗೂ ಮತ್ತು ಮೆಚ್ಚಿ ಭಾವನೆಗಳಿಗೆ
ಪ್ರತಿಯಾಗಿ ಸ್ಪಂದಿಸಿರುವ ಕಾಮೆಂಟ್ ಕವಿಗಳಿಗೂ ಇಬ್ರಿಗೂ ಥ್ಯಾಂಕ್ಯು. ಕೆಲವು ಕವಿತೆಗಳು
ಮತ್ತು ಕವಿತೆಯ ಭಾವಕ್ಕೆ ಕಾಮೆಂಟ್ ರೂಪದಲ್ಲಿ ಬಂದ ಗೆಳೆಯರ ಪ್ರತಿ ಭಾವಗಳನ್ನು ಇಲ್ಲಿ
ಹಾಕುತ್ತಿರುವೆ. Enjoy :)

1. ಕನಸೂರ ದಾರಿಯಲಿರೆಪ್ಪೆ ಕೂಡಿದ ಮೇಲೆ,  ತೆರೆದುಕೊಳ್ಳುವ ಮಾಯಾನಗರಿ(ಕನಸು)  ಮೈ ಕೊಡವಿ ಏಳುವ ಪಾತ್ರಗಳು  ಸೂತ್ರ ಹರಿದು ಸಜ್ಜಾಗುವ  ಎಲ್ಲೋ. ನೋಡಿದ ಮುಖಗಳು.
ಕನಸೂರ ದಾರಿಯಲಿ  ಅಂತ್ಯಗಾಣದ ದೃಶ್ಯಗಳು.  ಭ್ರಮೆಯ ಸೂರಿನಡಿಯಲ್ಲಿ  ನನ್ನ ಕೂಡುವ ಜೀವಗಳು.
ಅಲ್ಲೊಂದು ಕಥೆ,  ಕಥೆಯೊಳಗೊಂದು ಉಪಕಥೆ  ಎಚ್ಚರವಾದಾಗಲೆಲ್ಲಾ ಅದಲು ಬದಲಾಗುವ ಪಾತ್ರಗಳು.
ಕನಸುಗಳ ಮೌನ ಮೆರವಣಿಗೆಯಲ್ಲಿ  ಕಲ್ಪನೆಗಳದ್ದೆ ಕಾರು-ಬಾರು  ಅಲ್ಲಿ ನಾನೇ ರಾಜ, ಅವಳೇ ರಾಣಿ,  ನನ್ನ ಬಂಧು-ಮಿತ್ರರೆಲ್ಲಾ ಸೈನಿಕರು.
ಮೊದಮೊದಲು ನನ್ನ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ, ಗೆಳೆಯ ನಿರಂಜನ ಈ
ಕವಿತೆಗೆ ಪ್ರತಿಕ್ರಿಯಿಸಿದ್ದು ಹೀಗೆ.
`ಕನಸುಗಳ ಮೌನ ಮೆರವಣಿಗೆಯಲ್ಲಿ ಕಲ್ಪನೆಗಳದ್ದೆ ಕಾರು-ಬಾರು  ಅಲ್ಲಿ ನಾನೇ ರಾಜ……. ಅಲ್ಲಿ ನೀ ಪ್ರಣಯರಾಜ, ಪ್ರೇಮ…

ಒ೦ದು ಪ್ರೀತಿಯ ಕಥೆ

“ ಅಮ್ಮಾ!! ಅವಳ ಹುಟ್ಟುಹಬ್ಬಕ್ಕಾದರೆ ಪಾಯಸ ಮಾಡ್ತೀಯ. ಆದರೆ ಪ್ರತಿ ಸಾರಿ ನನ್ನ
ಹುಟ್ಟುಹಬ್ಬಕ್ಕಾದರೆ ಯಾಕಮ್ಮಾ… ? ಏನೂ ಮಾಡಲ್ಲ. ?. ನೋಡು!! ಈ ಸಾರಿ ನನ್ನ
ಹುಟ್ಟುಹಬ್ಬಕ್ಕೆ ಹೋಳಿಗೆ-ಊಟ ಮಾಡ್ಬೇಕು. ತಿಳೀತಾ. !!”.

“ ಸಾರಿ!! ಕಂದ. ತಪ್ಪಾಯ್ತು. ನಿನ್ನಾಣೆ ಮರೆಯೊಲ್ಲ. ಈ ಬಾರಿ ನಿನ್ನ ಹುಟ್ಟುಹಬ್ಬದ ದಿನ
ಹೋಳಿಗೆ ಊಟ ಮಾಡೋಣ, ಸರೀನಾ. ಅಡಿಕೆ ಕೊಯ್ಲು ಇರೋ ಟೈಮಲ್ಲೇ ನಿನ್ನ ಹುಟ್ಟುಹಬ್ಬ
ಬರುತ್ತಲ್ಲೋ ಮಗನೆ. ನಮ್ಮ ಕೆಲಸಗಳ ಮಧ್ಯೆ ಅದು ಬಂದದ್ದೂ; ಹೋದದ್ದು ಗೊತ್ತ್ ಇಲ್ಲ.
ಆದ್ರೆ ಈ ಸಾರಿ ಎಷ್ಟೇ. ಕಷ್ಟ ಆದರು. ಹೋಳಿಗೆ ಊಟ ಮಾಡೊಣ. ”

‘ ಆಯ್ತಮ್ಮಾ. ಸರಿ!! ’ ಎಂದನು ಚಿರಂಜೀವಿ. ಹುಟ್ಟುಹಬ್ಬಕ್ಕೆ ಹೋಳಿಗೆ ಅಡಿಗೆ ಮಾಡಬಾರದು
ಅಂತಲ್ಲ. ಆದರೆ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವಂತಹ ನಾಜೂಕು ಜೀವನ ಪದ್ಧತಿಯನ್ನು
ಅವರು ರೂಢಿಸಿಕೊಂಡಿರಲಿಲ್ಲ.

October 7, 2010 ‘ ಹೋಳಿಗೆ ಬೇಕು ಅಂದಿದ್ದ ಮಗು, ಇಷ್ಟು ಹೊತ್ತಾದರು ಊಟಕ್ಕೆ
ಯಾಕೆ ಬರಲಿಲ್ಲ.’ ಅಮ್ಮ ಹೋಳಿಗೆ ಅಡುಗೆ ಮಾಡಿಟ್ಟು ಮಗನ ಬರುವಿಗೆ ಕಾಯುತ್ತಾ,
ಗೊಣಗುತ್ತಾ ಕುಳಿತಿದ್ದಾಳೆ. ರಾತ್ರಿ ಹೊತ್ತು ಗೆಳೆಯರ ಮನೆಗೆ ಹೋಗಿ, ಹರಟುತ್ತಾ
ಕೂರುವುದು ಅವನ ಅಭ್ಯಾಸ. ಬಾಗಿಲ ಕಡೆಗೆ ನೋಡುತ್ತಾ “ ಪಾಪ ಮಗು!! ಹಗಲೆಲ್ಲಾ ಮನೇಲಿ,
ಒಬ್ಬನೇ ಕೂತು ಸಾಕಾಗಿರುತ್ತೆ. ಆಸರ-ಬೇಸರ ಕಳೆಯಲು ರಾತ್ರಿ ಹೊತ್ತು, ಒಂದಿಷ್ಟು
ಮಾತಾಡಿಕೊಂಡು ಬರುತ್ತೆ. ಸ್ಕೂಲಿಗೆ ಹೋಗುವ ಹುಡುಗರು ರಾತ್ರಿ ಹೊತ್ತು ಬಿಟ್…

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು.
ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು.
ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ.
ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು.
ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು.

ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು.
ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ.
ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ,
ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು.
ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು.
ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ
ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು
ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ
ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ,
ಇವರನ್ನು ಒಂದೇ ಮನೆಯ ಅಣ್ಣ ತಮ್ಮರಿಗೆ ಕ…

​ಶಿವಮೊಗ್ಗ ಸುತ್ತಮುತ್ತ ​ ( ದಿನ -1)

ರವಿ!! ರೂಪಿ!! ಮತ್ತು ನಾನು(ಚೇತನ್) ಚಳಿಗಾಲದ ಮಲೆನಾಡಿನ ಹಲ ತುಣುಕುಗಳ ಆಸ್ವಾದನೆಗೆಂದು ಹೊರಟವರು. ಮೂರು ದಿನಗಳ ಟ್ರಿಪ್ಪು. ಮಿಜಾಲ್ಟಿಗೆ ಬಂದಿರೋ ಗಂಡು ಮಕ್ಳದೆಲ್ಲಾ ಒಂದೇ ಸಮ ಮದ್ವೆಗಳು ನಡೆಯುತ್ತಿರುವುದರಿಂದ, ಟೆಂಪೋ ಟ್ರಾವೆಲ್ಸ್ ನಂಥ ಗಾಡಿಗಳಲ್ಲಿ ತಿರುಗುತ್ತಿದ್ದ ನಮ್ಮ ದೊಡ್ಡ ಗುಂಪು, ವ್ಯಾಗನಾರ್ ಗೂ ಸಾಕೆನಿಸುತ್ತಲಿದೆ.
ಪ್ರವಾಸದ ಸ್ಟಾರ್ಟಿಂಗ್ ಪಾಯಿಂಟ್ ಹೊನ್ನವಿಲೆ. ಅಂದರೆ ನನ್ನೂರು.  ಬಂದಿದ್ದ ಗೆಳೆಯರ ಅತಿಥಿ ಸತ್ಕಾರ ಮಾಡಿ, ಬೇಗಬೇಗ ಕಾರು ಹತ್ತಿಸುವ ಅನಿವಾರ್ಯತೆ ಇತ್ತು. ಯಾಕಂದ್ರೆ ಎಲ್ಲರ ಮದುವೆ ಮಾಡಿಸಿಯೇ ತೀರಬೇಕೆಂದು ಹಠ ತೊಟ್ಟಿರುವ ನಾವುಗಳು, ಪ್ರತಿ ಬಾರಿ ಒಬ್ಬೊಬ್ಬರ ಮನೆಗೆ ಹೋದಾಗಲೂ.. ಮದುವೆಯ ಬಗೆಗಿನ ಸಕಾರಣಗಳನ್ನು ವಿವರಿಸಿ ಪೋಷಕರ ಬ್ರೇನ್ ವಾಷ್ ಮಾಡುವ ಯಾನೆ ಫಿಟಿಂಗ್ ಇಟ್ಟು ಬರುವ ಕೆಲಸಗಳನ್ನು ಸಾಂಘಿಕವಾಗಿ ನಡೆಸುತ್ತಲಿದ್ದೆವು. ಈ ಬಾರಿ ಬಲಿ ಕಾ ಬಕ್ರ ನಾನು.

ಸಕ್ರೆಬೈಲು!! ಪಸ್ಟು ವಿಸಿಟ್ ಕೊಟ್ಟ ಸ್ಥಳ ಸಕ್ರೆಬೈಲು.  ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಆನೆ ಸವಾರಿ, ಆನೆ ಸೆಲ್ಫಿ, ಸೊಂಡಿಲು ಆಶೀರ್ವಾದ ಎಲ್ಲವೂ ಇದೆ. ರಜಾ ದಿನವಾದ್ದರಿಂದ ಆನೆಗಳನ್ನ ನೋಡೋದಕ್ಕೆ ತುಂಬಾ ಜನ ಮುತ್ತಿಕೊಂಡಿದ್ದರು. ಒಂದೊಂದು ಸೊಂಡಿಲ ಆಶಿರ್ವಾದಕ್ಕೂ ಹತ್ತು ರೂಪಾಯಿ ನೋಟು ಸೊಂಡಿಲ ಸಂದಿಗೆ ಸೇರಿಸುತ್ತಿದ್ದುದು ನೋಡಲು ಮಜವಾಗಿತ್ತು. ನಾವು, ಸೊಂಡಿಲಿನ ಏಟಿಗೂ, ಕೋರೆ ಹಲ್ಲಿನ ಸ್ಪರ್ಶಕ್ಕಾಗಿಯೂ …

ಒಂದು ಅಪಘಾತದ ಸುತ್ತ

ಇಂಜಿನಿಯರಿಂಗ್ ಅಂತಿಮ ವರ್ಷ. ಶೈಲು, ರವಿ ಹೊರತಾಗಿ ನಮ್ಮಲ್ಲಿ( ಗುಂಪಿನ ಹೆಸರು ಬಿ ಬಿ ಹುಡುಗರು) ಉಳಿದೋರಿಗೆಲ್ಲಾ ಕೆಲಸ ಸಿಕ್ಕಿತ್ತು. ಶೈಲುಗೆ, ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿ ಗೊತ್ತಿತ್ತು. ಸೋ ಅದರ ಬಗ್ಗೆ ವಿಷಾಧ ಇರಲಿಲ್ಲ. ಇನ್ನು ರವಿ:

ಒಂದು ಕೆಲಸದ ಅವಶ್ಯಕತೆ, ಎಲ್ಲರಿಗಿಂತಲು ಅವನಿಗೆ ಜಾಸ್ತಿ ಇತ್ತು. ಆ ಅವಶ್ಯಕತೆ ಅವನಿಗೆ ಮಾತ್ರ ಅಲ್ಲ, ಖುಷ್ ಖುಷಿಯಾಗಿದ್ದ ನಮ್ಮೆಲ್ಲರಿಗೂ ಇತ್ತು. ಸುಮಾರು ಕಂಪನಿಗಳಿಗೆ ಎಡತಾಕಿದರೂ, ಒಂದಕ್ಕೂ ಆಯ್ಕೆ ಆಗಲಿಲ್ಲ. ಅಭಿ, ಜೋಬಿ, ಶೇಕ್ ನಂತ ಗಮಾಡ್ ಗಳಿಗೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಸಿಕ್ಕಿರೋವಾಗ, ಧೈತ್ಯ ಪ್ರತಿಭೆ ‘ರವಿ’ ಗೆಕೆಲಸ ಸಿಗದೇ ಇದ್ದದ್ದು, ನಮಗೆಲ್ಲಾ ಖೇದಕರ ಅನ್ನಿಸುತ್ತಿತ್ತು.

ರವಿಗೆ ಕೆಲಸ ಸಿಗದೇ ಇದ್ದದ್ದಕ್ಕೆ, ಕಾರಣಗಳೂ ಇದ್ದವು. ಲಕ್ ಇರಲಿಲ್ಲ, ಇಂಗ್ಲೀಷ್ ಸಮಸ್ಯೆ. ಕೋಡಿಂಗ್ ಬಗ್ಗೆ ಆಸಕ್ತಿ ಇಲ್ಲದೇ ಇರೋದು. ಆದರೂ ಜೀವನೋಪಾಯಕ್ಕೆ ಒಂದು ಕೆಲಸದ ಅನಿವಾರ್ಯತೆ ಇತ್ತು. ಪ್ರತಿ ಕಂಪನಿ ಮಿಸ್ ಆದಾಗಲೂ. ‘ ನಿನಗೋಸ್ಕರ ಯಾವುದೋ ದೊಡ್ಡದು, ಕಾಯ್ತಾ ಇರಬೇಕು ಬಿಡು, ಮಗ ’ ಅಂತ ನಾವು, ಸಮಾಧಾನ ಮಾಡೋದಕ್ಕೆ ಹೋದರೆ, ‘ನನಗೆ, ನನ್ನ ಬಗ್ಗೆ ಬೇಜಾರಿಲ್ಲ ಮಗ. ಆದರೆ ಒಂದು ಒಳ್ಳೆ ಕಂಪನಿ, ಗ್ಲೋಬಲ್ ಟಾಪ್ ಟೆನ್ ಒಳಗೆ ಬರೋದನ್ನ, ಜಸ್ಟು ಮಿಸ್ ಮಾಡಿಕೊಂಡು ಬಿಡ್ತು. ‘ಎನ್ನುವನು. ‘ಎಲಾ ಬಡ್ಡಿಮಗನೆ ’ ಅಂದುಕೊಂಡುಸುಮ್ಮನಾಗುತ್ತಿದ್ದೆವು.

ಇಂತಹ ಸಂದಿಗ್ಧ, ಸುಸಂದರ್ಭದಲ್ಲಿ ಬಿ ಇ …

ಮದ್ವೆ 'ಈಗ ಬೇಡ..'

ಟೀ ಕುಡಿಯೋದಕ್ಕೆ ಯಾವಾಗ ಎದ್ದೋಗದು ಅನ್ನೋ ಯೋಚ್ನೆಲಿದ್ದಾಗ ಸರಿಯಾಗಿ, ನಟ್ಟ ಫೋನ್ ಮಾಡಿದ.
“ಹಲ್ಲೋ…ದೇವ್ರು  ಯಾರಪ್ಪ..?” ಎಂದು ಕೇಳುತ್ತಾ ಆಫೀಸಿಂದ ಎಸ್ಕೇಪ್ ಆಗಿ, ಹೊರ ಬಂದೆ.  ಹೊತ್ತಲ್ಲದ ಹೊತ್ತಲ್ಲಿ ವಯಸ್ಸಿಗೆ ಬಂದಿರೋ(ವಯಸ್ಸಾಗಿರೋ.. ) ಹುಡುಗರ ಕಾಲ್ ಬಂದರೆ, ಅವರು ಹೇಳೋಕ್ ಮುಂಚೇನೆ ಅರ್ಥ ಮಾಡಿಕಂಡ್ ಬುಡಬೇಕು, ‘ಮದ್ವೆಯ… ಮಮತೆಯ ಕರೆಯೋಲೆ ‘ ಅಂತ .
ಆ ಕಡೆಯಿಂದ ನಟ್ಟ ನಗುವ ಸದ್ದು ಮಾತ್ರ ಕೇಳಿಸುತ್ತಿತ್ತು.
“ಹೇಳೊ ಮಾರಾಯ ದೇವ್ರು ಯಾರು ..? ” ಅಂದೆ.
“ಇಲ್ಲೇ ಮಗಾ.. ಸಾಸ್ವೆಹಳ್ಳದಿಂದ, ಒಂದು ದೇವಿ  ” ಅಂದ.
ನಾನು, ನಟ್ಟ ಪಿಯುಸಿ ನಲ್ಲಿ ರೂಮ್ ಮೇಟ್ಸು ಗಳು. ಹತ್ನೆ ಕ್ಲಾಸು ಓದುತ್ತಿದ್ದ, ಒಂದು ಹುಡುಗಿನ ಅವ್ನು ‘ನಮ್ಮ ದೇವ್ರು’ ಅಂತ ಕರೀತಿದ್ದ.
ಆ ನೆನಪಿನ ಆಧಾರದ ಮೇಲೆ ಆತನನ್ನು ರೇಗಿಸಲೆಂದೇ “ದೇವ್ರು ಯಾರು..? ” ಅಂತ ಕೇಳಿದ್ದು.
ಹುಡ್ಗ ಒಂದ್ ಸೆಕೆಂಡ್ ಫ್ಲಾಶ್ ಬ್ಯಾಕ್ ಹೋಗಿ ಬಂದ ಅನ್ಸತ್ತೆ.
ನಿಶ್ಚಿತಾರ್ಥಕ್ಕೆ, ಮದ್ವೆ ಗೆ ಎರಡಕ್ಕೂ ಆಮಂತ್ರಣ ಕೊಟ್ಟು, “ಅಪ್ಪಾಜಿ  ಫೋನ್ ನಂಬರ್ ಕೊಡು ” ಅಂದ.
” ನಮ್ಮಪ್ಪ ನ್ನೇನೊ ಕರೆಯೋದು. ನಾನೇ ಹೇಳ್ತೀನಿ ಬಿಡು ” ಅಂದೆ.
ಅವರಿಗೂ ಕರೆಯಲೇ ಬೇಕೆಂದು ಹಠ ಮಾಡಿ ನಂಬರ್ ಪಡೆದುಕೊಂಡ.
“ನೀನು ಮದ್ವೆ ಆಗು… ನೀನು ಮದ್ವೆ ಆಗು… ” ಅಂಬೋ ಕೊರ ಕೊರ ಕೊರ ಅನ್ನೋ ಗ್ರಾಮಾ ಫೋನು ಮತ್ತೊಂದು ರೌಂಡು ನಮ್ಮನೇಲಿ ಪ್ಲೇ ಆಗತ್ತೆ.
______________________________________________…

ಕಾರು, ದೇವರು ಮತ್ತು ಕಲ್ಪವೃಕ್ಷ

ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದೂ ಅಲ್ಲದೆ, ಆ ಕಾರನ್ನು ಮನೆವರೆಗೂ ತಂದು ಬಿಟ್ಟು ಹೋಗುವ ಕರ್ಮವು 'ಕರುಣ' ನ ತಲೆಗೇ ಅಂಟಿಕೊಂಡಿತು. ಕಾರು ಬೇಕು ಅಂತ ಅಂದುಕೊಂಡಾಗಲೇ ಡ್ರೈವಿಂಗ್ ಕಲಿಯಲು ಸೇರಿಕೊಳ್ಳಬೇಕೆಂಬುದು ಅವನ ವಾದ. ಆದರೆ ಕೂಸು ಹುಟ್ಟದೇ ಕುಲಾವಿ ಹೊಲಿಸೋದು ಬೇಡ ಎಂಬುದು ನನ್ನ ಮನಸ್ಥಿತಿ. ಅಂತೂ ಬೈದುಕೊಳ್ಳುತ್ತಲೇ ಮನೆವರೆಗೂ ಕಾರು ಓಡಿಸಿಕೊಂಡು ಬಂದ.


ಅಮ್ಮ; ಕಾರಿಗೆ ಭರ್ಜರಿಯಾಗಿಯೇ ಪೂಜೆ ಮಾಡಲು ಅನುವಾದಳು. ಅಪ್ಪನಂತು, ‘ ಎಷ್ಟು ಕೊಡಬೋದು ಹೇಳಿ ಕಾರಿಗೆ..? ’ ಅಂತ ಪೂಜೆಗೆ ನಿಂತಿದ್ದ ಊರಿನ ಸಹ ವರ್ತಿಗಳಿಗೆ ಕೇಳಿ; ಕೇಳಿ; ಹೆಮ್ಮೆಯಿಂದ ಬೀಗುತ್ತಿದ್ದರು. ಅದು ಅಭಿಮಾನಕ್ಕೂ ಹೆಚ್ಚಾಗಿ; ತನ್ನ ಮಗ ಮೋಸ ಹೋಗದೇ ವ್ಯವಹಾರವೊಂದನ್ನು ಕುದುರಿಸಿಕೊಂಡು ಕಾರು ತಂದಿದ್ದಾನೆಂಬುದನ್ನು ಪದೆಪದೆ ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದ ರೀತಿ. ಮಧ್ಯಮ ವರ್ಗದ ಪುಟ್ಟ ಪುಟ್ಟ ಸಂಭ್ರಮಗಳನ್ನು ಮರೆಸುವಂತೆ ಆವರಿಸಿಕೊಳ್ಳುವುದು ಅವರ ಅತಿಯಾದ ವ್ಯವಹಾರ ಜ್ನಾನ ಎನಿಸುತ್ತದೆ.


ಕಾರಿನ ಸಂಪೂರ್ಣ ಚೌಕಾಸಿ-ಡೀಲ್ ಅನ್ನು ಕರುಣನ ತಲೆಗೆ ಕಟ್ಟಿ ನಾ ನೆಮ್ಮದಿಯಿಂದಿದ್ದೆ. ಪೂಜೆ ಸಾಂಗವಾಗಿ ನಡೀತಲಿತ್ತು. ಅತ್ತ ಕಡೆ ಕಾರಿನ ಗುಣಗಾನ ಮತ್ತು ಅವಗುಣಗಾನದ ಕೆಲವು ಮಂತ್ರಗಳೂ ಕೇಳಿಸುತ್ತಿದ್ದವು.


ಹೇ!! ಪೆಟ್ರೋಲ್ ಕಾರಾ… ರೀಸೇಲ್ ವ್ಯಾಲ್ಯೂ ಕಮ್ಮಿ. ಯಾರ್ ತಗೋತಾರೆ.?


ಜಾಸ್ತಿ ಆಯ್ತೇನೋ, ಮಾಡೆಲ್ ಸ್ವಲ್ಪ ಹಳೇದು


ಎಷ್ಟ್ ಓಡಿದೆ..? ಟೈರ್ ಹೊಸಾವ. ಸ್ಟ…