ಚಕ್ಕಳಂಬಕ್ಕಳ ಹಾಕಿ ಕುಳಿತಿದ್ದ ಸೀನನ ಮಂಡಿಯು, ಬಲಭಾಗದಲ್ಲಿ ಕುಳಿತಿದ್ದ ಗೌತಮನ ಮಂಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು, ಆಗಾಗ ಮಂಡಿಯನ್ನು ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ. ಸೀನನ ಎಡಭಾಗದಲ್ಲಿ ಕುಳಿತಿದ್ದ ಪುತ್ತು, ಇವರ ತಿಕ್ಕಾಟದ ಪರಿವಿಯೇ ಇಲ್ಲದೆ ಕಲಾವತಿ ಟೀಚರ್ ಹೇಳುತ್ತಿದ್ದ ಭಾರತ ಸಂವಿಧಾನದ ಕಥೆಯನ್ನು ಕೇಳುತ್ತಿದ್ದ. ಗೌತಮ ತನ್ನ ಮಂಡಿಯನ್ನು ಎತ್ತಿ ಸೀನನ ಮೇಲೆ ಹಾಕಿದ. ಸೀನ ಗುಟುರು ಹಾಕಿದ ‘ಲೇ ಗೌತಮ ಬುದ್ಧ, ಬ್ಯಾಡ ನೋಡು. ಆವಾಗ್ಲಿಂದ ನೀನೆ ಮೇಲೆ ಹಾಕಿದ್ದೆ ’. ‘ಹಿಂದೆ ಮಹಾ ಪುರುಷರುಗಳೆಲ್ಲಾ ಬೀದಿ ದೀಪದಲ್ಲಿ ಓದಿ ಮುಂದೆ ಬಂದರು. ಅವರೆಲ್ಲಾ ನಮಗೆ ಆದರ್ಶವಾಗಬೇಕು. ’ ಕಲಾವತಿ ಟೀಚರಿನ ಪಾಠ ಮುಂದುವರೆದಿತ್ತು. ‘ ನಾನು, ರಾತ್ರಿ ಸೀಮೆ ಎಣ್ಣೆ ಬುಡ್ಡಿ ಕೆಳಗೆ ಸಮಾಜ ವಿಜ್ಞಾನ ಓದ್ತಾ ಇದ್ದೆ. ಹಂಗೇ ನಿದ್ದೆ ಬಂದು ತೂಕಡಿಸಿದೆ. ಮುಂದೆ ತಲೆಗೂದಲು ದೀಪಕ್ಕೆ ತಾಗಿ ಚರ್ ಅಂದಾಗಲೇ ಎಚ್ಚರ ಆಗಿದ್ದು. ನೋಡು ಇಲ್ಲಿ ಕೂದಲು ಹೆಂಗ್ ಅರ್ಧಂಬರ್ದ ಸುಟ್ಟು ಹೋಗಿದೆ.’ ಗೌತಮ ಬುದ್ಧ ನಕ್ಕ. ಅರ್ಧ ಸುಟ್ಟು ಹೋಗಿದ್ದ ಕೂದಲು ಅದುವರೆಗೂ ಗಮನಿಸಿಯೇ ಇರಲಿಲ್ಲವೆಂಬಂತೆ ‘ಸಸ್ ’ ಎನ್ನುತ್ತಾ ನೋಡಿ ‘ಆಮೇಲೆ. ? ’ ಎಂದು ಪುತ್ತು ಪ್ರಶ್ನೆ ಮಾಡಿದ. ಇವರ ಗುಸುಗುಸು ಪಿಸಿಪಿಸು ಮಾತು ನಡೆದೇ ಇತ್ತು. ‘ ಪುತ್ತು. ಎದ್ದೇಳು ಮೇಲೆ. ’ ಟೀಚರು ಕೂಗಿದರು. ಗಾಬರಿಯಲ್ಲಿ ಪುತ್ತು ಎದ್ದು ನಿಂತ. ಅಕಸ್ಮಾತ್