Monday, October 29, 2012

ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್. ನೋ ಚೌಕಾಸಿ

ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸಂಧಿ ಕಾರ್ಯಕ್ರಮಕ್ಕೆ ಹೊರಟಿದ್ದೆ. ಧೂಳು ಹಿಡಿದಿದ್ದ
ಅಪ್ಪನ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿಂದ ಒರೆಸಿ
ಬೈಕು ಹತ್ತಿ ಹೊರಟೆ. ಹಳೆ ಪೋಸ್ಟ್ ಆಫೀಸು ರೋಡಲ್ಲಿ ಬೈಕು ನಿಲ್ಲಿಸಿದವನು, ಹಿಮ್ಮಡಿಯ
ಸೋಲ್ ಕಿತ್ತು ಹೋದ ಚಪ್ಪಳಿಯನ್ನು ಎಳೆದು ಹೆಜ್ಜೆ ಹಾಕುತ್ತಾ ಗಾಂಧಿ ಬಜಾರಿನ ಕಡೆಗೆ
ನಡೆದೆ. ಕಿತ್ತು ಹೋಗಿದ್ದ ಚಪ್ಪಲಿಯನ್ನು ಕಸದ ತೊಟ್ಟಿಗೆ ಬಿಸಾಡಿ, ಬರಿ
ಪಾದರಕ್ಷೆಗಳದ್ದೇ ಅಂಗಡಿಗಳಿರುವ ಒಂದು ಬೀದಿಯೊಳಗೆ ನಡೆದೆ. ಸಾಲು-ಸಾಲು ಅಂಗಡಿಯವರು,
ತಮ್ಮಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಿದ್ದರು. ಯಾವುದೋ ಒಂದು ಅಂಗಡಿಯೊಳಗೆ
ನುಗ್ಗಿದೆ.

'ಹೇ ಯಾರಪ್ಪ ಅಲ್ಲಿ. ಸಾಬ್ ನಮ್ದು ಖಾಯಮ್ ಕಸ್ಟಮರು. ಸ್ವಲ್ಪ ನೋಡ್ರಿ ಇಲ್ಲಿ ' ಎಂದ.
ಇವರುಗಳ ಮುಖ ನೋಡುತ್ತಿದ್ದುದೇ ಮೊದಲ ಸಲ. ಮೊದಲ ವಿಸಿಟ್ ಗೆ ಖಾಯಂ ಕಸ್ಟಮರ್
ಆಗಿಬಿಟ್ಟೆ.  'ಏನ್ ಸಾರ್. ? ಯಾವ ಟೈಪ್ ಚಪ್ಲಿ ಕೊಡ್ಲಿ. ' ಎಂದ.


' ಯಾವುದಾದ್ರು ಸರಿ, ಚಪ್ಲಿ ಹಾಕಿದ್ರೆ ನಾನು ಅದನ್ನ ಹಾಕಿಕೊಂಡಿರೋದು
ಗೊತ್ತಾಗಲೇಬಾರದು, ಅಂತದ್ದು ತೋರ್ಸು' ಎಂದರೆ 'ನೀವು ಚಪ್ಲಿ ಹಾಕಿಕೊಳ್ಳದೇ ಓಡಾಡೋದು
ವಳ್ಳೇದು ಸಾರ್. ' ಎಂದು ನಕ್ಕ. ಕೌಂಟರ್ ಇಷ್ಟ ಆಯ್ತು. ಬಹುಷಃ ನಾನು ಕೇಳಿದ ರೀತಿಯಲ್ಲೇ
ತಪ್ಪಿತ್ತು.

ಕೈಲೊಂದು ಜೊತೆ ಚಪ್ಪಲಿ ಹಿಡಿದು 'ನೋಡಿ ಸಾರ್ ಇದು ಹಂಡ್ರೆಡ್ ಪರ್ಸೆಂಟ್ ಪ್ಯೂರ್
ಲೆದರ್ರು ಫುಲ್ಲು ಕಂಫರ್ಟು ' ಎಂದ. ಕಾಲ ಬಳಿ ಹಿಡಿದು, ಹಾಕಿಕೊಳ್ಳುವಂತೆ
ಪ್ರಚೋದಿಸುತ್ತಿದ್ದವನ ಕೈಯಿಂದ ಚಪ್ಪಲಿಯನ್ನು ತೆಗೆದುಕೊಂಡು ನೋಡುತ್ತಾ ಹೇಳಿದೆ.
'ಪ್ಯೂರ್ ಲೆದರ್ ಆದ್ರೆ ಬೇಡ ಕಣ್ರಿ ಪ್ರಾಣಿಗಳ ಚರ್ಮ ಸುಲಿದು ಮಾಡಿರೊ ಚಪ್ಪಲಿ. ಬೇಗ
ಸವೆಯೋದೆ ಇಲ್ಲಾ. ಹಾಕಿ ಹಾಕಿ ಬೇಜಾರಾಗಿಬಿಡತ್ತೆ.'

'ಹೇ ಲೆದರ್ ಎಲ್ಲಿಂದ ಬಂತು ಸಾರ್ ಯಾವ್ ನನ್ಮಗ ಕೊಡ್ತಾನೆ ಇನ್ನೂರು-ಮುನ್ನೂರಕ್ಕೆಲ್ಲ
ಪ್ಯೂರ್ ಲೆದರ್ರು. ಇದು ಕಂಪನಿದು ಮಾಲು. ಸಿಂಥೆಟಿಕ್ಕು ' ಎಂದ. ದೋಸೆಯನ್ನು ಮಗುಚಿ
ಹಾಕಿದಷ್ಟೆ ಸಲೀಸಾಗಿ, ಮಾತು ತಿರುಗಿಸಿದನು.

'ಸರಿ ಕೊಡಪ್ಪಾ ಅದೇನ್ ನೋಡೋಣ' ಅಂತ ಕಾಲಿಗೆ ಹಾಕ್ದೆ. ಇಷ್ಟ ಆಯ್ತು. ' ಇದನ್ನೇ ಪ್ಯಾಕ್
ಮಾಡು' ಅಂದೆ.

' ಕಲರ್ ಇದೆ ಇರ್ಲಾ ಅಥವಾ ಬ್ಯಾರೆ ಯಾವುದಾದ್ರು ಬೇಕಾ. ?' ಅಂದ  ' ಅದನ್ನೇನು ತಲೆ
ಮೇಲೆ ಇಟ್ಕೋಬೇಕ. ಹಾಕ್ಕೊಳೋದು ಕಾಲಿಗೆ, ಯಾವುದಾದ್ರೇನು. ನನಗೆ ಕನಫ್ಯೂಸ್ ಆಗೋಕೆ
ಮೊದ್ಲು ಪ್ಯಾಕ್ ಮಾಡು. ಇಲ್ಲ ಅಂದ್ರೆ ನಿಮ್ಮ ಅಂಗಡಿನಲ್ಲಿರೋ ಎಲ್ಲಾ ಚಪ್ಪಲಿಯನ್ನು
ತೆಗೆಸಿ ಬಿಡ್ತೇನೆ. ' ಅಂದೆ.

'ಸರಿ ಸಾರ್ ಹಂಗಾದ್ರೆ ಎಂಟು ನೂರಾ ತೊಂಬತ್ತೊಂಬತ್ತು ರೂಪಾಯಿ. ನಿಮಗೆ ಅಂತ
ತೊಂಬತ್ತೊಂಬತ್ತು ಡಿಸ್ಕೌಂಟು ಎಂಟು ನೂರು ರುಪಾಯಿ ಕೊಡಿ. ' ಅಂದ.

'ಒಂದು ನಿಮಷಕ್ಕೆ ಮುಂಚೆ ಇದರ ಬೆಲೆ ಇನ್ನೂರೋ-ಮುನ್ನೂರೋ ಅಂದೆ. ಈಗ ನೋಡಿದ್ರೆ ಎಂಟು
ನೂರಾ ತೊಂಬತ್ತೊಂಬತ್ತು ಅಂತಿಯ. ಇದು ಮೋಸ '

'ನಾವು ಮಾತ್ಗೆ ಹೇಳಿದ್ನೆಲ್ಲಾ ನೀವು ಹಿಂಗೆ ಹಿಡ್ಕಂಡ್ ಬುಟ್ರೆ ಹೆಂಗೆ ಸಾರ್. ಇದು
ಕಂಪನಿದು ಮಾಲು ಅಂತ ಹೇಳುದ್ನಲ್ಲ. ನೀರಲ್ಲಿ ನೆನೆದರು ಹೊಲಿಗೆದು ಬಿಟ್ಕಳಾದಿಲ್ಲ'
ಎಂದ.
ಬರಿ ಮೇಲ್ನೋಟಕ್ಕೆ ವಸ್ತುಗಳ ಬೆಲೆ ಆಗಲಿ ಅಥವಾ ಮನುಷ್ಯರ ಬೆಲೆ ಆಗಲಿ ನಿಗದಿ ಪಡಿಸೋದು
ಬರೋದಿಲ್ಲ. ಆದರು ಈ ಅಂಗಡಿಯವನು ಜಾಸ್ತಿ ಬೆಲೆ ಹೇಳ್ತಾ ಇದಾನೆ ಅನ್ನಿಸ್ತು. ಇನ್ನು
ಸ್ವಲ್ಪ ಕಡಿಮೆ ಕೇಳೋಣ. ಕೊಟ್ಟಿಲ್ಲ ಅಂದ್ರೆ ಪೂರ್ತಿ ದುಡ್ಡು ಕೊಟ್ಟರೆ ಆಯ್ತು
ಅಂದುಕೊಂಡೆ.

'ನಿಮ್ಮ ಅಂಗಡಿಯಲ್ಲಿ ಚೌಕಾಸಿ ಮಾಡೋ ಹಂಗಿಲ್ವಾ. ? ಎಲ್ಲಾ ಫಿಕ್ಸು ರೇಟಾ. ?' ಎಂದೆ. ಈ
ಥರ ಕೇಳಬಾರದಿತ್ತೇನೋ.. ಆದರೂ ಚೌಕಾಸಿ ಮಾಡೋದಕ್ಕೆ ಮುಂಚೆ ಅದು ಅಲೌಡಾ ಅಥವಾ ಇಲ್ಲವಾ
ಅನ್ನೋದು ಕ್ಲಿಯರ್ ಮಾಡಿಕೊಳ್ಳಬೇಕಿತ್ತು.

' ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್. ಬಕ್ರಾ ಕಸ್ಟಮರ್ ನ ನೋಡಿ ರೇಟು ಫಿಕ್ಸು
ಮಾಡಕ್ಕೆ ನಾವು ಹೊಟ್ಟೆಗೆ ಸಗಣಿ ತಿನ್ನಲ್ಲ. ನೀವೆ ಅಲ್ಲ ನಿಮ್ಮದು ಅಪ್ಪಂಗೆ ಅಮ್ಮಂಗೆ
ಮಗೂಗೆ ಕಳ್ಸಿದ್ರು ನಾವು ಒಂದೇ ರೇಟು ಹೇಳೋದು. ' ಎಂದ. ಅವನು ಬಕ್ರಾ ಕಸ್ಟಮರ್ ಅಂತ
ಹೇಳಿದ್ದು ಯಾಕೋ. ? ನನಗೆ ಹೇಳಿದಂಗೆ ಅನ್ನಿಸ್ತು. ಅದಕ್ಕೆ ಒಂದು ಕಮ್ಮಿ ರೇಟು ಕೇಳಿಯೇ
ಬಿಡೋಣ. ಅಂತ ನಿರ್ಧರಿಸಿದೆ. ಕಮ್ಮಿ ಕೇಳೋದೇ ಆದ್ರೆ ಎಷ್ಟು ಅಂತ ಕೇಳೋದು. ? ತುಂಬಾ
ಕಡಿಮೆ ಬೆಲೆಗೆ ಕೇಳಿದ್ರೆ ಬಯ್ದು ಗಿಯ್ದು ಬಿಟ್ರೆ ಕಷ್ಟ. ತುಂಬಾ ಜಾಸ್ತಿ ರೇಟಿಗೆ ಕೇಳಿ
ಅವನು ತಕ್ಷಣ ನಾನು ಕೇಳಿದ ರೇಟಿಗೆ ಕೊಟ್ಟು ಬಿಟ್ರೆ. 'ಅಯ್ಯಯ್ಯೋ ನಾನು ಇನ್ನು ಸ್ವಲ್ಪ
ಕಡಿಮೆ ರೇಟಿಗೆ ಕೇಳಿದ್ರೆ ಬಗ್ತಾ ಇದ್ದ ಅನ್ಸತ್ತೆ. ಮೋಸ ಹೋಗಿಬಿಟ್ಟೆ' ಅಂತ ಚಪ್ಪಲಿ
ನೋಡಿದಾಗಲೆಲ್ಲಾ ಅನ್ನಿಸಿ ಬಿಡತ್ತೆ. ಏನಪ್ಪಾ ಮಾಡೋದು ಅಂತ ಯೋಚಿಸಿದೆ.

ನಮ್ಮಮ್ಮ ತರಕಾರಿ ತಗೊಳುವಾಗ ಅಂಗಡಿಯವನು ಹತ್ತು ರುಪಾಯಿ ಕೇಜಿ ಅಂದ್ರೆ ಐದು ರೂಪಾಯಿ
ಯಿಂದ ಚೌಕಾಸಿ ಶುರು ಮಾಡ್ತಾಳೆ. ಅಮ್ಮ ಹಂಗೆ ಕೇಳಿದ ತಕ್ಷಣ ನನಗೆ ಗಾಬರಿ ಆಗಿ
ಬಿಡ್ತಿತ್ತು. ಯಾಕಂದ್ರೆ ರೀಟೇಲ್ ಇಂಡಸ್ಟರಿಯಲ್ಲಿ (ಚಿಲ್ಲರೆ ವ್ಯಾಪಾರಿಗಳಲ್ಲಿ) ನೂರು
ಪ್ರತಿಶತ ಲಾಭಕ್ಕೆ ಯಾವುದೇ ವಸ್ತುಗಳನ್ನು ಮಾರೋದಕ್ಕೆ ಸಾಧ್ಯ ಇಲ್ಲ. ಅದು ಯಾವ
ಕಾನ್ಫಿಡೆನ್ಸಿನ ಮೇಲೆ ಅಮ್ಮ ಅರ್ಧಕ್ಕಿಂತ ಕಮ್ಮಿ ಬೆಲೆಯಿಂದ ತನ್ನ ಚೌಕಾಸಿ
ಪ್ರಾರಂಭಿಸುವಳೋ ತಿಳಿಯದು. ವಸ್ತುವಿನ ಬೆಲೆ, ಎಲ್ಲೋ ಇವರಿಬ್ಬರ ಮಧ್ಯದಲ್ಲಿರುತ್ತದೆ.

ಇವರ ಚೌಕಾಸಿಯ ಹಗ್ಗ-ಜಗ್ಗಾಟದಲ್ಲಿ ಕೊನೆಗೆ ತಾನು ಮೋಸ ಹೋಗಲಿಲ್ಲವೆಂಬ ಕೃತಾರ್ತ ಭಾವನೆ
ಗ್ರಾಹಕನಿಗೆ ಮೂಡಬೇಕು. ಅದಕ್ಕಿಂತ ಹೆಚ್ಚಾಗಿ ಇದೊಂದು ಜೀವನ ಶೈಲಿ. ಮಾಲ್-ಗಳಲ್ಲಿ
ಶಾಪಿಂಗ್ ಮಾಡುವ ಹವ್ಯಾಸ ಕೆಲವರಿಗಿರುವಂತೆ ರಸ್ತೆ ಮೇಲೆ ಚೌಕಾಸಿ ಮಾಡುವ ಹವ್ಯಾಸ ಇನ್ನು
ಕೆಲವರಿಗೆ. ಕೊನೆಗೆ ಕೊಂಡು ಕೊಂಡ ಆ ವಸ್ತುಗಳು ತಮ್ಮ ಅಷ್ಟು ವರುಷಗಳ ಚೌಕಾಸಿ ಕಲೆಯ
ಅಭಿವ್ಯಕ್ತಿಯಂತೆ ಗ್ರಾಹಕನ ಮನೆಯ ಸ್ಟೋರ್ ರೂಮ್ ಸೇರಿ ಬಿಡುತ್ತವೆ.  ಅಮ್ಮನ
ಫಾರ್ಮುಲದಂತೆ ಅರ್ಧ ರೇಟಿನಿಂದ ಚೌಕಾಸಿ ಶುರು ಮಾಡುವ ಧೈರ್ಯ ನನಗಿರಲಿಲ್ಲ.

' ಎಂಟು ನೂರು ರೂಪಾಯಿ ಜಾಸ್ತಿ ಆಯ್ತು ಆರು ನೂರು ರುಪಾಯಿಗೆ ಕೊಡಿ. ' ಎಂದಷ್ಟೇ
ಹೇಳಿದೆ. ಅವರ ಮುಂದೆ ಮತ್ತೆ ಏನೆಲ್ಲಾ ಮಾತುಗಳನ್ನು ಆಡಬಹುದು ಎಂದು ತಿಳಿಯಲಿಲ್ಲ. ಅಮ್ಮ
ಆಗಿದ್ದರೆ ತಾನು ವಂಶ ವೃಕ್ಷದ ಪ್ರತಿ ಜೀವಕ್ಕೂ ಇದೇ ಅಂಗಡಿಯಿಂದ ಚಪ್ಪಲಿ
ಖರೀದಿಸಿದ್ದಾಗಿಯು. ನೀವು ಖಾಯಂ ಕಸ್ಟಮರಿಗೆ ಮೋಸ ಮಾಡುತ್ತಿರುವುದಾಗಿಯೂ. ಏನೆಲ್ಲಾ
ಹೇಳಿ ಬಿಡುತ್ತಿದ್ದಳು.

ನಾನು ಆರು ನೂರು ರೂಪಾಯಿ ಎನ್ನುತ್ತಲೇ, ಅಂಗಡಿಯವನು ಚಪ್ಪಲಿ ಬಾಕ್ಸು ಓಪನ್ ಮಾಡಿ
ಕೈಯಲ್ಲಿ ಚಪ್ಪಲಿ ಹಿಡ್ಕೊಂಡು ಬರಬರನೆ ನನ್ನ ಬಳಿಗೆ ಬಂದ. ಹತ್ತಿರ ಬಂದವನೇ
ಚಪ್ಪಲಿಯನ್ನು ಹಿಂದಕ್ಕೂ ಮುಂದಕ್ಕೂ ಬಗ್ಗಿಸುತ್ತಾ, ನೆಲದ ಮೇಲೆ ಬಾರಿಸುತ್ತಾ ಹೇಳಿದ -
' ನೋಡಿ ಸಾರ್ ಇಂತ ಮಾಲಿಗೆ ಹೋಗಿ ನೀವು ಚೌಕಾಸಿ ಮಾಡ್ತೀರಲ್ಲ. ನೀವು ನಮ್ಮ ಸ್ಪೆಷಲ್
ಕಸ್ಟಮರ್ ಅಂತ ನಿಮಗೆ ತುಂಬಾನೆ ಕಮ್ಮಿ ಹೇಳಿದೀವಿ ಸಾರ್. ಹೋಗ್ಲಿ ತಗಳಿ. ನಮಗೆ ಲಾಭಾನೆ
ಬೇಡ. ಕಂಪನಿ ರೇಟು ಏಳುನೂರು ರೂಪಾಯಿ. ಕಸ್ಟಮರ್ ಕಳ್ಕೋಬಾರ್ದು ಅನ್ನೋ ಒಂದೇ ಒಂದು
ಕಾರಣಕ್ಕೆ ಕೊಡ್ತಾ ಇದೀನಿ. ತಗೋಳಿ ಸಾರ್ ಏಳು ನೂರು ಕೊಡಿ' ಎಂದ.
ನನ್ನ ಚೌಕಾಸಿ ಕುಶಲತೆಯಿಂದ ನೂರು ರೂಪಾಯಿ ಉಳಿಸಿಬಿಟ್ಟೆ.

Saturday, October 27, 2012

ಕವಿಶೈಲ - ಸುಂದರ ಅನುಭವ

ಇದು ಮಲೆನಾಡಲ್ಲ
ಕವಿಯ ಕಾಡು!!
ಇಲ್ಲಿ
ಹುಟ್ಟಿರುವುದು ಮಹಾ ಕಾವ್ಯಗಳಲ್ಲ!!
ಆ ಕವಿ ಕೂತಿದ್ದಾಗ ಈ ಕಾಡಿಗೆಸೆದ
ಬೇಸರದ ಕಲ್ಲುಗಳು!!

ಕವಿಶೈಲದ ಕುವೆಂಪು ಬಂಡೆಯನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಸಾಲುಗಳಿವು.
ತಮ್ಮೊಳಗಿರುವ ಎಲುಬುಗಳಿಗಿಂತಲೂ ಹೆಚ್ಚು ಸಂಖ್ಯೆಯ ಗುಂಪು ಕಟ್ಟಿಕೊಂಡು ಎಲ್ಲಾ ಗುಂಪುಗಳಿಗೂ ಆಕ್ಟೀವ್ ಮೆಂಬರ್ ಆಗಿ ತೊಳಲಾಡುವ ಮತಿಜೀವಿ ಸಂಘ ಜೀವಿ ಎನಿಸಿಕೊಂಡ ಮನುಷ್ಯ ಸಂಕುಲಕ್ಕೆ
'ವಿಶ್ವಮಾನವ ಸಂದೇಶ' ವನ್ನು ಸಾರಿದ ಮಹಾನ್ ಚೇತನ ಕುವೆಂಪುರವರು. ಎಷ್ಟು ಉನ್ನತ ಮಟ್ಟದ ಆಲೋಚನೆ .
ಗೆಳೆಯ ಶಶಾಂಕ ಒಮ್ಮೆ ಹೇಳಿದ್ದ - ' ಸೌಂಧರ್ಯದ ಏಕತಾನತೆ ಕುವೆಂಪು ಅವರನ್ನು ಬಿಗಿಯಲಿಲ್ಲವೇಕೆ..?' ಎಂದು.
ಅಂದ್ರೆ ಸಮುದ್ರ ತೀರದಲ್ಲಿ ಹುಟ್ಟಿದವನಿಗೆ ಸಮುದ್ರದ ಅಲೆಗಳು ಅದೆಷ್ಟು ಮೋಡಿ ಮಾಡಲು ಸಾಧ್ಯ!!
ಅಂತೆಯೇ ಮಲೆನಾಡಿನಲ್ಲಿ ಹುಟ್ಟಿದ್ದರೂ ಕೊನೆವರೆಗೂ ಆ ಮಲೆನಾಡಿನ ಯಾತ್ರಿಕನಂತೆಯೇ ಪ್ರತಿ ಸೊಬಗನ್ನು ಕೌತುಕದಿಂದ ಅನುಭವಿಸಿ
ಅದರ ಹೂರಣವನ್ನು ಓದುಗನಿಗೆ ಹಿಡಿ ಹಿಡಿ ಯಾಗಿ ಹಂಚಿದ ಮಹಾನ್ ಚೇತನ.

ಸರ್ವ ಮತಗಳಿಗಿಂತಲೂ
ಶುದ್ಧ ಹೃದಯದ ಮತ್ತು ಸನ್ಮತೀಯ ಮತವೇ ಮಹೋನ್ನತವಾದದ್ದು .
ಆ ಗುರು
ಈ ಆಚಾರ್ಯ
ಆ ಧರ್ಮಶಾಸ್ತ್ರ
ಈ ಮನುಸ್ಮೃತಿ
ಏನೇ ಹೇಳಲಿ ;
ಎಲ್ಲವನ್ನೂ ವಿಮರ್ಶಿಸುವ,
ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.
ಈಶ್ವರನು ನಮ್ಮಲ್ಲಿಯೂ ಇದ್ದಾನೆ.
ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುಧಿಯಲ್ಲಿಯು ಪ್ರಕಾಶಿಸುತ್ತವೆ.
ಆ ಪ್ರಕಾಶವೇ ಮತಿ.
- ಶಾಸ್ತ್ರಬದ್ಧವಾಗಿ ಮೂಲಭೂತವಾದಕ್ಕೆ ಬಂಡಾಯದ ಬಿಸಿ ಮುಟ್ಟಿಸುವ ಕುವೆಂಪು ಅವರ ಈ ಮಾತುಗಳು ಜೀವನಸತ್ಯ!! ಕೂಡ ಹೌದು.


ಇನ್ನೊಂದು ಕಡೆ ಸಾಹಿತ್ಯದ ಜರೂರತ್ತಿನ ಬಗ್ಗೆ ಈ ರೀತಿ ಬರೆಯುತ್ತಾರೆ -

ಜನ ಜೀವನವನ್ನು ಎಚ್ಚರಿಸುವ ತೂರ್ಯ ಧ್ವನಿ ಸಾಹಿತ್ಯದಿಂದ ಬರುತ್ತದೆ.
ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ.
ಕೃತ ವಿಧ್ಯರಾದ ಯುವಕರು ತಮ್ಮ ಆಶೆ ಆಕಾಂಕ್ಷೆಗಳನ್ನು ಬರೆದು ಓದಿ ಮತ್ತೆ ಮತ್ತೆ ಹೇಳಿ ಹೇಳಿ,
ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು.


ಕವಿತೆ ಹುಟ್ಟುವ ಬಗ್ಗೆ ಅವರ ಮಾತುಗಳು -

ಪ್ರತಿಭಾ ಸಂಪನ್ನನಾದ ಕವಿಯ ಎದೆಯಲ್ಲಿ
ಉದ್ರೇಕವಾದಾಗ ಹಸಿರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ,
ನಿರಾಯಾಸವಾಗಿ ಚಿಮ್ಮಿ ಹೊಮ್ಮುವ ಭಾವನಾತ್ಮಕ ಲಲಿತ ಪದಗಳ ಮನೋಹರವಾದ
ಇಂಪಾದ ವಸಂತ ನೃತ್ಯವೇ, ಸುಗ್ಗಿಯ ಕುಣಿತವೇ, ನಿಜವಾದ ಕವಿತೆ!
ಕವಿತೆಗೆ ಕಲ್ಪನಾ ಪ್ರತಿಭೆ ಬೇಕೇಬೇಕು;
ಭಾವವೇ ಅದರ ಆತ್ಮ, ಶಬ್ದಗಳೇ ಅದರ ದೇಹ.
ಅದು ಆತ್ಮವೇ ತನಗೆ ತಾನೇ ಆಡಿಕೊಳ್ಳುವ ಮಾತು.

ಇಂತಹ ಅದೆಷ್ಟೋ ಮುತ್ತಿನ ನುಡಿಗಳನ್ನು ಕವಿಶೈಲದ ಗೋಡೆ, ಕಲ್ಲು ಬಂಡೆಗಳ ಮೇಲೆ ಕಾಣಬಹುದು.

ನಂತರ ಕವಿಶೈಲದಲ್ಲಿ ನಾನು ಹುಡುಕಾಡಿದ್ದು ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವನ್ನು .
ನನಗೆ ಓದಿನ ಗೀಳು ಹತ್ತಿದ್ದು ತೇಜಸ್ವಿಯವರ ಪುಸ್ತಕಗಳಿಂದಲೇ!!
ಶಿವಮೊಗ್ಗದ ಸೆಂಟ್ರಲ್ ಲೈಬ್ರರಿಯಲ್ಲಿ ಅಪ್ಪಿ ತಪ್ಪಿ ನನ್ನ ಕೈಗೆ ಸಿಕ್ಕ ಅವರ 'ಮಹಾಪಲಾಯನ' ಪುಸ್ತಕವನ್ನು ಉಸಿರು ಹಿಡಿದು ಓದಿ ಮುಗಿಸಿದ್ದೆ.
ಅಲ್ಲಿಂದಾಚೆ ತೇಜಸ್ವಿಯವರ ಯಾವ ಪುಸ್ತಕವನ್ನು ಶಿರ್ಷಿಕೆ ಕಡೆಗೆ ಗಮನವನ್ನೂ ಹರಿಸದೆ ಕೊಳ್ಳುತ್ತಿದ್ದೆ.
ಅವರ ಪುಸ್ತಕವನ್ನು ಕೊಳ್ಳುವಾಗ ಪುಟ ಸಂಖ್ಯೆ ಮತ್ತು ಬೆಲೆ ತಾಳ ಮೇಳ ನೋಡಿ ಯಾವುದು ವರ್ತ್ ಅನ್ನಿಸುತ್ತಿತ್ತೋ ಅಂತದನ್ನು ಕೊಳ್ಳುತ್ತಿದ್ದೆ .
ಸಾಹಿತ್ಯದ ಗಂಧ ಗಾಳಿ ಇಲ್ಲದಿದ್ದರೂ ನಾವು ಕೂಡ ನಮ್ಮ ಅನುಭವಗಳಿಗೆ ಅಕ್ಷರ ರೂಪ ಕೊಡಬಹುದು ಎಂಬ ಆತ್ಮವಿಶ್ವಾಸ ಪುಟಿದೊಡೆದದ್ದು ತೇಜಸ್ವಿ ಅವರ ಬರಹಗಳಿಂದ.
ಅವರದು 'ತಮ್ಮ ಪುಸ್ತಕಗಳಾಚೆಗು' ಕಾಡಿದ ಮಹಾನ್ ವ್ಯಕ್ತಿತ್ವ.


ಇಷ್ಟೇ ಅಲ್ಲದೆ
ಪ್ರವಾಸಿಗನಿಗೂ ಕವಿಶೈಲ ಮುದ ನೀಡುತ್ತದೆ.
ಕವಿಮನೆ!! ಮಲೆನಾಡಿನ ಟಿಪಿಕಲ್ ತೊಟ್ಟಿಮನೆಯ ದರ್ಶನ ಮಾಡಿಸುತ್ತದೆ.
ಅಲ್ಲಿಂದ ಬೆಟ್ಟದ ಮೇಲೆ ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ!!
ಕಲಾ ಗ್ಯಾಲರಿ!!
ಎಲ್ಲಕ್ಕಿಂತ ಹೆಚ್ಚಾಗಿ ಈ ಭಾಗದಲ್ಲಿ ಎಲ್ಲೂ ನಿಲ್ಲದೆ ರಸ್ತೆಯ ಮೇಲೆ ತಲೆ ಹೊರಗೆ ಹಾಕ್ಕೊಂಡು ಸಂಚರಿಸುತ್ತಿದ್ದರು ಸಾಕು!! ಮಲೆನಾಡು ನಿಮ್ಮನ್ನು ತೋಯಿಸಿ ಬಿಡುತ್ತದೆ.


kavimane ( photo courtesy: MALENADIGE BAA(kuvempu memorial bio-park))


Wednesday, October 17, 2012

ಒಂದು ಸಣ್ಣ ನಡಿಗೆ, ಸಿಹಿಗಬ್ಬಿನ ಕಡೆಗೆ

ವೀರಪ್ಪನ್ ಇದ್ದ ಸತ್ಯಮಂಗಳ ಕಾಡಿನ ಮಧ್ಯೆ ನಗರಗದ ನಾಗರೀಕತೆಯಿಂದ ಬಹುದೂರ ... ತಮ್ಮದೇ ಖಯಾಲಿಯಲಿ ಬದುಕುತ್ತಿರುವ ಕ್ರೇಜಿ ಜನಗಳ ಊರು ಹತ್ತೂರು.
 
ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ, ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ. ರಾಜೇಂದ್ರ ಮೈಸೂರಿನಲ್ಲಿ ರಿಸರ್ವ್ ಬ್ಯಾಂಕ್ ನಲ್ಲಿ ನೌಕರಿ ಮಾಡುತ್ತಿರುವ ಹತ್ತೂರಿನ ಒಬ್ನೇ ಡಿಗ್ರಿ ಹೋಲ್ಡರ್.

ಆಗತಾನೆ ಒಂದು ಹೆಂಗಸನ್ನು ಬೈಕಿನಿಂದ ಕೆಳಗಿಳಿಸಿ ಮಾತನಾಡಿಸುತ್ತಿದ್ದ ಗಿರೀಶನು ರಾಜೇಶನ ಬರವನ್ನು ದೂರದಿಂದಲೇ ಗಮನಿಸಿ!! ಬೈಕನ್ನು ಅಲ್ಲೇ ಬಿಟ್ಟು.. ರಾಜೇಶನ ಕಡೆಗೆ  ದೌಡಾಯಿಸಿ ಬಂದ.
 

ಗಿರೀಶ!! ಹತ್ತೂರಿನ ಶಿವದೇವಸ್ಥಾನದ ಪೂಜಾರಿ.
 

ಇವನ ರಾಸಲೀಲೆಗೆ ಬಲಿಯಾದ ಹೆಣ್ಮಕ್ಕಳ ಲೆಕ್ಕ ಇವನಿಗೇ ತಿಳಿಯದು. ಆದರೆ  ದೊಡ್ಡ ಅಯ್ನೋರ ಮಗ ಅಂತೇಳಿ, ಗಿರೀಶನಿಗಿದ್ದ ಮಾನ ಮತ್ತು ಮರ್ಯಾದೆಯ ಹಿಂದಿನ ಲಾಜಿಕ್ ಮಾತ್ರ ಗಿರೀಶನ ಚಡ್ಡಿ ದೋಸ್ತು, ರಾಜೇಂದ್ರನಿಗೆ ಇದುವರೆಗೂ ಅರ್ಥವಾಗಿಲ್ಲ.

"ಹೊಯ್!! ಏನಡಾ ರಾಜೆ!! ಯಾವಾಗ್ ಬಂದೆ ಊರಿಗೆ ..?"

''ಬೆಳಗ್ಗೆ ಬಂದೆ ಡಾ!! ಬಾ ಹಿಂಗೆ ನಮ್ಮ ಚಿಕ್ಕಪ್ಪನ ಆಲೆಮನೆ ಹತ್ರ ಹೋಗ್ ಬರೋಣ!! ಇವತ್ತೇನೋ ಕಬ್ಬು ಕೊಡ್ತಾರಂತೆ"

"ಹೌದಾ.. ಹೋಗುಪ್ಪಾ .. ಸರಿ" ಎಂದ ಗಿರೀಶ .

"ಅಲ್ಲಡಾ ಗಿರೀಶ!! ಯಾರಡ ಅದು ನಿಂಜೊತೆ ಮಾತಾಡ್ತಾ ಇದ್ದಿದ್ದು.
ನಿನ್ನ ಮನ್ಮಥನ ಮೆರವಣಿಗೆ ಯಾವಾಗಲು ಚಾಲೂನಲ್ಲೇ ಇರುತ್ತಲ್ಲೋ.
ಥೂ!! ನಿನ್ನ ಜನ್ಮಕ್ಕೆ ಬೆಂಕಿ ಹಾಕ!!!.
ನಿನ್ನ ಮನೆಯೊಳಗೆ ಬಿಟ್ಕೊಳೋದೆ ಮಹಾಪಾಪ.
ಅಂಥದ್ರಲ್ಲಿ ನಮ್ಮ ಜನ ನಿನ್ನ ಅಯ್ನೋರೆ!! ಅಯ್ನೋರೆ!! ಅಂತ ಕರೆದು ಪಾದ ತೊಳೆದು ಪೂಜೆ ಮಾಡ್ತಾರೆ." ಉಗಿದ ರಾಜೇಂದ್ರ.

"ಮೊದಲನೇ ಪಾಯಿಂಟು!! ನೀನು ನನ್ನ ವಿಕೃತವಾಗಿ ನೋಡಬೇಡ. ನಾ ಯಾರಿಗೂ ಬಲವಂತ ಮಾಡೋನಲ್ಲ. ಎಂಟರ್ ಟೆನ್ ಮೆಂಟು ಅಷ್ಟೇ. ಒಂಥರಾ ಸಮಾಜ ಸೇವೆ.  ಇನ್ನು ಜನಗಳಿಗೆ ಯಾಕೆ ಅ೦ತೀಯ ಬಿಡು ರಾಜೆ.
ಕೈಯಲ್ಲಿರೋದು ಕೆಟ್ಟದ್ದು ಅಂತ ಅನ್ನಿಸದೆ ಇದ್ರೆ ಅದು ಅಸಹ್ಯ ಅನಿಸಲ್ಲ.
ಪಾಪ!! ನಾನು ಇ೦ತವನು ಅ೦ತ ಯೋಚನೆ ಮಾಡಿದ್ರುನು, ಪಾಪ ಸುತ್ತಿಕೊಳ್ಳುತ್ತೆ ಅ೦ತ ಹೆದರ್ತಾರೆ. ಆಚಾರಗಳ ಬೇರು!! ಬಾಳ ಆಳದಲ್ಲಿ ನಂಬಿಕೆ ಅನ್ನೋ ಸೆಲೆಯನ್ನ ಹುಡುಕ್ಕಂಡ್ ಹೋಗಿರತ್ತೆ.
ಆದರೂ ಏನೇ ಹೇಳು.  ನಿನ್ನ ಹಂಗೆ ಬಯ್ಯೋನಿಲ್ಲ!! ನನ್ನ ಹಂಗೆ ಬಯ್ಸಿಕೊಳ್ಲೋನಿಲ್ಲ ಮತ್ತೆ. "

"ಪೌರೋಹಿತ್ಯಕ್ಕೆ ತಲೆ ತಗ್ಗಿಸಿ ಬದುಕ್ತಾ ಇರೋ!!
ನಮ್ಮ ಕುತ್ತಿಗೆ ಮೇಲಿರೋ ಒ೦ದು ಜನರೆಷನ್ನ ಒ೦ದು ಕಡೆಯಿ೦ದ ಕೊಚ್ಚಿ ಹಾಕಿ ಬಿಡಬೇಕು ಅನ್ನೋ ಅಷ್ಟು ಕೋಪ ಬರುತ್ತೆ.
ಆವಾಗ್ಲಾದ್ರು ನಿಮಗೆ ಸರಿಸಮಾನವಾಗಿ ಕೂತು ಮಾತಾಡೋ ನನ್ನ ಯ೦ಗ್ ಜನರೆಷನ್ನು ಮಾತ್ರ ಉಳ್ಕೊಳತ್ತೆ.
ಏನ್ ಮಾಡೋದು....? ಬೇರೆಯವರಿಗೆ ಹೇಳೋದಿರಲಿ ...ನಮ್ಮ ಮನೆಯವರಿಗೆ ನಾವು ಹೇಳಕ್ಕಾಗಲ್ಲ!!" ಹತಾಶೆ ಹೊರಹಾಕಿದ ರಾಜೇಂದ್ರ .

"ಹೋಗ್ಲಿ!! ಬಿಡೋ..  ಜಾಸ್ತಿ ಆಯಾಸ ಮಾಡ್ಕೋಬೇಡ.
ಎರಡು ದಿನಕ್ಕೆ ಅ೦ತ ಊರಿಗೆ ಬರ್ತೀಯ. ಬಂದಾಗೆಲ್ಲಾ ಕ್ರಾಂತಿ ಕ್ರಾಂತಿ ಅಂತ ಬಡಬಡಿಸ್ತಾ ಇರ್ತೀಯ.
ಲೋ!! ಇಲ್ಲಿ೦ದು ಕಲರ್ ಕಲರ್ ಕಥೆಗಳನ್ನ ಕೇಳಿ,,, ಮಜಾ ತಗೋ೦ಡ್ ಹೋಗೋದ್ ಬಿಟ್ಟು !! ಎನಡಾ!!! ನಿಂದು!! ಯಾವಾಗಲು ರೋದನೆ."

" ಆದರೂ ಗಿರೀಶ!!! ಈ ರೀತಿ ಶೋಕಿ ಮಾಡಿಕೊ೦ಡು ಓಡಾಡೋದೇ ಆಯ್ತು ನಿನ್ನ ಜೀವನ. ಈ ಪೂಜೆ-ಗೀಜೆ ಕೆಲ್ಸಾನೆಲ್ಲ ನಿಮ್ಮಪ್ಪ೦ಗೆ ಬಿಟ್ಟು ಕೊಟ್ಟು, ಯಾವುದಾದರು ಕೆಲಸ ನೋಡಿಕೊ೦ಡು ಮೈಸೂರಿಗೆ ಯಾಕೆ ಬರಬಾರದು...?
ಹೆಂಗೂ ನಾನು ಅಲ್ಲೇ ಇದೀನಿ."

" ನಿನಗಿ೦ತ ಓದಲ್ಲಿ ಮು೦ದೆ ಇದ್ರೂ, ಮಗನೆ!! ನೀನು!! ಸ್ಕಾಲರ್ - ಷಿಪ್ಪು , ರಿಸರ್ವೇಷನ್ನು ಅ೦ದುಕೊ೦ಡು ಗೋರ್ಮೆ೦ಟು ನೌಕರಿ ಗಿಟ್ಟಿಸಿಕೊ೦ಡೆ.
ದೇವಸ್ಥಾನದಲ್ಲಿ ಘ೦ಟೆ ನಾನು ಬಾರಿಸಿದರು , ದೇವರು ವರ ಕೊಟ್ಟಿದ್ದು ನಿನಗೆ."

"ಗರ್ಭಗುಡಿ ಹೊರಗೆ ನಿಂತಿರೋ ಹೆಣ್ಣು ದೇವರ ಕಡೆ ನೋಡಿಕೊಂಡು ಗಂಟೆ ಬಾರಿಸಿದರೆ ದೇವ್ರು ಹೆಂಗೋ .. ವರ ಕೊಡ್ತಾನೆ ."

ಇಬ್ಬರೂ ನಕ್ಕರು.


"ಅಲ್ನೋಡೋ!! ಚಾ೦ದಿನಿ, ನಜ್ಮಾ ಬರ್ತಾ ಇದಾರೆ . " ಎ೦ದ
ಗಿರೀಶ.

ಕೈ ಕಾಲು ಕುಯ್ಯೋ ಕಬ್ಬಿನ ಊರಿನಲ್ಲಿ ಯಾರಪ್ಪಾ ಅದು ಚಾ೦ದಿನಿ, ನಜ್ಮಾ ಎನ್ನುತ್ತಾ ರಾಜೇಂದ್ರ ಅಚ್ಚರಿ ವ್ಯಕ್ತಪಡಿಸಿದ.


"ನಮ್ಮೂರು ಹೋಟ್ಲು ರುದ್ರನ ಹೆ೦ಡ್ತೀರು ಚೆನ್ನಿ, ನಾಗಿ ಕಣೋ..
ಯಾವುದೋ ಆಲೆಮನೆ ಕಡೆ ಹೋಗ್ತಾ ಇದಾರೆ ಅನ್ಸತ್ತೆ. ತಡಿ ಸ್ವಲ್ಪ ರೆಗಿಸ್ತೀನಿ .." ಎನ್ನುತ್ತಾ... ಗಿರೀಶ ಮು೦ದೆ ಮು೦ದೆ ಬ೦ದ.

"ಲೋ!! ಗಿರೀಶ!! ಹಲ್ಕಟ್ ಸುವರ್!!
ನೀನು ಒಬ್ಬನೇ ಇದ್ದಾಗ ಏನಾದ್ರೂ ಮಾಡ್ಕೋ.
ಈಗ ನನ್ನ ಮರ್ಯಾದೆ ತೆಗಿಬೇಡ. ನಿನ್ನ ಕಾಲಿಗೆ ಬೀಳ್ತೇನೆ ...
ಬಾಯಿ ಮುಚ್ ಕೊ೦ಡ್ ಸುಮ್ನೆ ಬಾ " ಎನ್ನುತ್ತಾ ರಾಜೇ೦ದ್ರ ಮುಜುಗರದಿ೦ದ ಬಳಲಾಡಿದ.

" ಅವರೇನು ಭಾರಿ ಪತಿವ್ರತೆಯರು ಅ೦ತ ಹಿ೦ಗಾಡ್ತಿಯೇನೊ!!
ನೋಡ್ತಾ ಇರು ... ಈಗ ಏನ್ ಮಾಡ್ತೀನಿ .." ಎನ್ನುತ್ತಾ ಗಿರೀಶ ಅವರ ಬರವನ್ನೇ ಎದುರು ನೋಡುತ್ತಿದ್ದ.

ರಾಜೇಶನಿಗೆ ದಿಗಿಲು ಹೆಚ್ಚಾಗಿ 'ಮೊದಲೇ ಹುಚ್ ಮುಂಡೆ ಮಗ ಅದೇನ್ ಮಾಡ್ತಾನೋ.. 'ಎನ್ನುತ್ತಾ, ಎರಡು ಎರಡು ಹೆಜ್ಜೆ ಮುಂದೆ ಹಾಕಿ ನಡೆದ .

ಚೆನ್ನಿ ನಾಗಿ ಹತ್ತಿರಾಗುತ್ತಲೇ ಗಿರೀಶ ತನ್ನ ಎಂದಿನ ಪೋಲಿ ಮಾತುಗಳಿಂದ ಅವರನ್ನು ರೇಗಿಸಿದ.

ಚೆನ್ನಿ "ಹೇ!! ಸುಮ್ಕಿರಿ ಅಯ್ನೋರೆ!! ತಮಾಷೆ ಮಾಡಬ್ಯಾಡಿ. ಪಾಪ!! ಈ ಸ್ವಾಮೇರ ಮು೦ದೆಲ್ಲಾ ಏನು ನಿಮ್ಮದು " ಎನ್ನುತ್ತಾ ಗಿರೀಶನ ಸೋಟೆ ತಿರುವಿದಳು.

"ಹಾ!! ಪಾಪನ!! ... ಆ ಸ್ವಾಮೇರೆ ಕೇಳ್ತಾ ಇದ್ರು. ಚೆನ್ನಿ ಹೆ೦ಗೆ ಅ೦ತ !! " ಎನ್ನುತ್ತಾ ಗಿರೀಶ ಇನ್ನು ಏನನ್ನೋ ಹೇಳಲು ಹೋಗುತ್ತಿದ್ದ೦ತೆ,
ರಾಜೇ೦ದ್ರ ತಿರುಗಿಯೂ ನೋಡದೆ ಎದ್ದು ಬಿದ್ದು ಓಡಲು ಶುರು ಮಾಡಿದ.
ಇವನು ಓಡಿದ್ದನ್ನು ನೋಡಿ ಚೆನ್ನಿ ನಾಗಿ ನಕ್ಕರು.

ಗಿರೀಶ " ಅಯ್ಯೋ!! ನಿ೦ತ್ಕೋಳೊ ರಾಜೆ!! ಅವರೇನು ನಿನ್ನ ತಿನ್ನಲ್ಲ." ಎನ್ನುತ್ತಾ ರಾಜೇ೦ದ್ರನ ಹಿ೦ದೆ ಓಡಿದ.


***** ೧ ****** 


ಇವರು ಆಲೆಮನೆಗೆ ಬರುವ ಹೊತ್ತಿಗೆ ಸ೦ಜೆಯಾಗಿತ್ತು.
ಅಲ್ಲಿ ತೋಟದ ಆಳುಗಳಾದ ಸಿದ್ಧ!! ಮಾರ!! ಆಲೆಮನೆ ಕಬ್ಬಿನ ಕೋಲುಗಳನ್ನು ಹೂವಿನಿ೦ದ ಸಿ೦ಗರಿಸಿ ಪೂಜೆ, ನೈವೇದ್ಯ ಮಾಡಿದ್ದರು.

ಗಿರೀಶನನ್ನು ನೋಡುತ್ತಲೇ
"ಪೂಜೆ ಹೊತ್ತಲ್ಲಿ ಕರೆದು ಕಳಿಸಿರೋ ರೀತಿ ಬ೦ದುಬಿಟ್ರಲ್ಲಾ ಅಯ್ನೋರೆ. ನಮ್ಮ ಪುಣ್ಯ ಇದು." ಎನ್ನುತ್ತಾ ರಾಜೇ೦ದ್ರನ ಚಿಕ್ಕಪ್ಪ, ಚಿಕ್ಕಮ್ಮ - ಎಲೆ,ಅಡಿಕೆ ಕೈಗೆ ಕೊಟ್ಟು ಗಿರೀಶನ ಕಾಲುಗಳಿಗೆ ದೊಪ್ಪನೆ ಬಿದ್ದರು. ಎಲೆಯಡಿಕೆಯ ಮಧ್ಯೆ ಐವತ್ತೊಂದು
ರೂಪಾಯಿ ದುಡ್ಡು  ಇಡುವುದನ್ನು ಅವರು ಮರೆಯಲಿಲ್ಲ. 
 
ತನ್ನನ್ನು ಸರ್ವಶಕ್ತನ ಅಪರಾವತಾರವೆ೦ಬತೆ ಪೋಸು ಕೊಡುತ್ತಾ ಗಿರೀಶ ಅವರನ್ನು ಆಶೀರ್ವದಿಸಿದ. ಗಿರೀಶನ ಕಾಲಿಗೆ ಮೆತ್ತಿಕೊ೦ಡಿದ್ದ ಕರಿ ಜೇಡಿ ಮಣ್ಣು ಇವರಿಬ್ಬರ ಹಣೆಗೆ ಹತ್ತಿದ್ದನ್ನ ನೋಡಿ ರಾಜೇ೦ದ್ರನಿಗೆ ಹೊಟ್ಟೆ ತೊಳಸಿದ೦ತಾಗಿ ವಾಕರಿಕೆ ಬ೦ತು.

ಗಿರೀಶ ಮಾತ್ರ ಕ್ಷಣಕಾಲ ಮುಖದ ಮೇಲೆ ದೈವಿಕ ಮೌನವನ್ನು ಅಲಂಕರಿಸಿದ್ದ .
ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಇಬ್ಬರೂ ಅಲೆಮನೆಯಿ೦ದ ಹೊರ ನಡೆದರು.

" ಎಲ್ಲಾ ಬಿಟ್ಟು ಆ ಕೀಳು ಜಾತಿಯ ಸಿದ್ಧ!! ಮಾರನ!! ಕೈಯಲ್ಲಿ ಪೂಜೆ ಮಾಡಿಸ್ತಾ ಇದಾರಲ್ಲ..ರಾಜೆ .... ನಿಮ್ಮ ಮನೆಯವರಿಗೆ ಸ್ವಲ್ಪನಾದ್ರು ಬುದ್ಧಿ ಇದಿಯ.
ನಾವೆಲ್ಲಾ  ಸತ್ತು ಹೋಗಿದಿವೇನೋ...? ಹೇಳಿ ಕಳಿಸಿದ್ರೆ ಒಂದ್ ರೌಂಡ್ ಬಂದು ಪೂಜೆ ಮಾಡಿ ಹೋಗ್ತಿದ್ನಲ್ಲೋ ..? " ಎಂದ.

"ಲೋ!! ಮನ್ಷಾನೆನೊ ನೀನು.  ನನ್ನ ಹತ್ರ ಮತ್ತೆ ಉಗಿಸ್ಕೊಳಕ್ಕೆ ಹಿಂಗೆ ಕೇಳ್ತಾ ಇದಿಯ ನೀನು "

"ಇಲ್ಲಡಾ!! ಎಲ್ಲಾದಕ್ಕೂ ಒಂದು ನೀತಿ ನಿಯಮ ರೀತಿ ರಿವಾಜು ಅಂತ ಇರ್ತಾವೆ."ಎಂದ ಗಿರೀಶ .

"ಎನಡಾ!! ರೀತಿ ರಿವಾಜು !! ಪುಂಗಿ!!! ಬದನೇಕಾಯಿ !!
ನಿನಗೆ ಕ೦ಪೇರ್ ಮಾಡಿದ್ರೆ ಅವ್ರು ಎಷ್ಟೋ ಮೇಲು ಬಿಡು. ಯಾಕಂದ್ರೆ!! ಪದ್ಧತಿ ಸರಿ ಇಲ್ಲದೇ ಇದ್ದರೂ ಆ ಜಾಗದಲ್ಲಿ ಕೆಲಸ ಮಾಡಿಕೊಂಡು ಬದುಕಿರೋ ಅವರಿಗೆ!! ನಿನಗಿಂತ ಜಾಸ್ತಿ ಶ್ರದ್ಧೆ, ಭಕ್ತಿ ಇದೆ. ಆದೂ ಅಲ್ಲದೆ ಸಿದ್ಧ!! ಮಾರ!! ಅಥವಾ ಮತ್ಯಾರೋ ಆಲೆಮನೆ ಪೂಜೆ ಮಾಡಿದ್ರೆ, ಬರೋ ಬೆಲ್ಲ ಕಹಿ ಆಗಿರುತ್ತೆ. ಅದೇ ನಿಮ್ಮ೦ತ ದೈವಮಾನವರು ಪೂಜೆ ಮಾಡಿದ್ರೆ ಬರೋ ಬೆಲ್ಲ ಭಯ೦ಕರ ಸಿಹಿ ಆಗಿ ಇರುತ್ತಾ ...? " ಎ೦ದ ರಾಜೇ೦ದ್ರ.

ಇನ್ನು ಇವನ ಬಳಿ ವಾದ ಮಾಡಿ ಪ್ರಯೋಜನ ಇಲ್ಲವೆಂದು ಗಿರೀಶ ಸುಮ್ಮನಾದ.

Tuesday, October 16, 2012

ರಂಗಪ್ಪ; Slavery is in poor mens blood

ಓಣಿಯಲ್ಲಿ ನಿಲ್ಲಿಸಿದ್ದ, ಹೊಸ ಪಲ್ಸರ್ ಬೈಕು ಹೊರಗೆಳೆದು ಕೆಲಸಕ್ಕೆಂದು ಹೊರಡುತ್ತಿದ್ದೆ.  'ತಲೆಗೆ ಹಾಕ್ಕಂತರಲ್ಲ, ಅದುನ್ನ ಹಾಕ್ಕಂಡೆ ಹೋಗಪ್ಪ.  ' ಎಂದಳು ಅಜ್ಜಿ.  'ತಲೆಗೆ ಏನು ಹಾಕ್ಕಂತಾರಜ್ಜಿ. ? ' ಅಂದ್ರೆ 'ಅದೇ ಕಣಪ್ಪ ತಲೆಗೆ ಹಾಕ್ಕಾಂತಾರಲ್ಲ ಅದೇ ತಲ್ಮೆಟ್ಟು ' ಅಂದಳು. 

ಏನೆಂದು ಹೇಳಬೇಕು, ಅಜ್ಜಿಯ ನುಡಿಗಟ್ಟಿಗೆ. ಕಾಲಿಗೆ ಹಾಕ್ಕೋಳೋದು ಕಾಲ್ಮೆಟ್ಟು ಆದ್ರೆ, ತಲೆಗೆ ಹಾಕ್ಕೋಳದು ತಲ್ಮೆಟ್ಟು. ಒಡೆದು ನೋಡಿದರೆ ಅರ್ಥಗರ್ಭಿತವಾದ ಪದ ಎನ್ನಿಸಿದರೂ ಕೇಳುವುದಕ್ಕೆ ಅಷ್ಟೋಂದು ಸಹನೀಯವಲ್ಲ. 


ಮನೆಯಿಂದ ಕೇವಲ ನಾಲ್ಕು ಮೈಲಿ ದೂರವಿದ್ದ ನಮ್ಮ ಆಫೀಸು ತಲುಪಲು ಹತ್ತು ನಿಮಿಷವೂ ಹಿಡಿಯಲಿಲ್ಲ. ನಮ್ಮ ಡಿಪಾರ್ಟ್-ಮೆಂಟು ಕಾರು 'ಆನ್ ಡ್ಯೂಟಿ, ಭಾರತ ಸರ್ಕಾರ ' ಅನ್ನೋ ಶಿರೋನಾಮೆ ಬರೆದುಕೊಂಡು ಗೇಟಿನ ಬಳಿಯೇ ರಾರಾಜಿಸುತ್ತಿತ್ತು. ನನ್ನ ಮುದ್ದಿನ ಪಲ್ಸರು ಬೈಕನ್ನು ಬೇಸ್‍ಮೆಂಟ್ ಫ್ಲೋರಿನ ಕಡೆಗೆ ಚಲಾಯಿಸಿದೆ.

ಬೈಕು ನಿಲ್ಲಿಸುತ್ತಿರುವಾಗ ನಮ್ಮ ಕ್ಯಾಷುಯಲ್ ಲೇಬರ್ ರಂಗಪ್ಪಾ  'ನಮಸ್ಕಾರ ಸಾರ್ ' ಎಂದರು. ನಾನೂ ತಿರುಗ 'ನಮಸ್ಕಾರ' ಎಂದೆ. ನಮಸ್ಕಾರ ಹೊಡೆದು, ತುಕ್ಕು ಹಿಡಿದಿದ್ದ ತಮ್ಮ ಹಳೆ ಸೈಕಲನ್ನು ಬಟ್ಟೆಯಿಂದ ಒರೆಸುವ ಕೆಲಸದಲ್ಲಿ ರಂಗಪ್ಪ ಮಗ್ನರಾದರು. ರಂಗಪ್ಪನಿಗೆ ಸುಮಾರು ಐವತ್ತು ವರುಷ ವಯಸ್ಸು. ಡಿಪಾರ್ಟ್-ಮೆಂಟಿನಲ್ಲಿಯೇ ಮುಕ್ಕಾಲು ವಾಸಿ ಜೀವನ ಮುಗಿಸಿದ್ದಾರೆ. ನಿಲ್ಲಿಸಿ ಹೊರಡುವ ಮುನ್ನ, ಧೂಳಾಗಿದ್ದ ಬೈಕಿನ ಕಡೆಗೆ ನೋಡಿದೆ. ರಂಗಪ್ಪನ ಬಳಿ ಬಟ್ಟೆ ಪ ಡೆದು ಒರೆಸೋಣವೆಂದು ಅವರು ಮುಗಿಸುವುದನ್ನೇ ಕಾಯುತ್ತಾ ನಿಂತಿದ್ದೆ. 

ನನ್ನ ಬೈಕು ನೋಡಿದ್ರೆ ಒಂಥರಾ ಸಂಭ್ರಮ. ನಂದು ಬೈಕು. ನನ್ನ ಸ್ವಂತದ್ದು. ನಾನು ಅದರ ಓನರು. ಮೊನ್ನೆಯಷ್ಟೇ ಫುಲ್ಲು ಕ್ಯಾಷ್ ಕೊಟ್ಟು ಖರೀದಿಸಿದ ಹೊಸ ಬೈಕು. ಕೆಲಸಕ್ಕೆ ಸೇರಿದ ಮೂರು ವರುಷಗಳಲ್ಲಿ ಎಜುಕೇಶನ್ ಲೋನು ತಂಟೆ ತಾಪತ್ರಯಗಳನ್ನು ಮುಗಿಸಿ ನಾ ಪೂರೈಸಿಕೊಂಡ ನನ್ನ ಮೊದಲನೇ ವಿಶ್ಶು. ಇಂಜಿನಯರಿಂಗು ಓದುವಾಗ ಹಾಸ್ಟೆಲಿನಿಂದ ಕಾಲೇಜಿಗೆ ನಡಕೊಂಡೇ ಹೋಗ್ತಾ ಇದ್ದೆ. ಮಾನಸ ಗಂಗೋತ್ರಿ ಕ್ಯಾಂಪಸ್ ಒಳಗಿಂದ ನಡೆದು ಹೋಗುವುದು ಅನಿವಾರ್ಯ ಅಂದುಕೊಂಡರೂ, ಅಷ್ಟೇ ಎಂಜಾಯ್ ಮಾಡ್ತಿದ್ದೆ. ಬಡ್ಡಿಮಗ!! ಶ್ರೀನಿವಾಸ ರಾಜು ದಡಿಯ ಥರ ಇದ್ದ ದೊಡ್ಡ ಬೈಕಲ್ಲಿ, ನಾಲಕ್ಕು ವರ್ಷವೂ ನಾ ಬಾರೋ ರಸ್ತೆನಲ್ಲೇ ಬರ್ತಿದ್ದ. ಡೈಲಿ ಬಂದ್ರು, ಒಂದಿನಾನು ಹತ್ತಿಸಿಕೊಂಡು ಹೋಗಲಿಲ್ಲ. ನಾವು ಕೂಡ, ಫುಲ್ ರಾಯಲ್ ಆಗೇ ನಡಕೊಂಡ್ ಬರ್ತಿದ್ವಿ. ಆದರು ಒಂದೋದ್ ಸಾರಿ ಅನ್ಸತ್ತೆ, ನನ್ನ ಬೈಕು ತಗೊಂಡ್ ಅವನ ಹಿಂದೆ ಹೋಗಿ ಜೋರ್ ಹಾರನ್ ಮಾಡಬೇಕು ಅಂತ. ಇಂತಹ ಸ್ಯಾಡಿಸ್ಟು ಕಲ್ಪನೆಯಿಂದ ನಗೂನು ಬರತ್ತೆ. 

'ರಂಗಪ್ಪ ಸ್ವಲ್ಪ ಬಟ್ಟೆ ಕೊಡ್ರಿ ಬೈಕ್ ಒರೆಸಬೇಕು' ಅಂದೆ. 'ಸಾರ್ ನೀವ್ ಬೈಕ್ ಒರೆಸೋದ, ನೀವು ಹೋಗಿ ಸಾರ್ ನಾನೆ ಒರೆಸ್ತೀನಿ. ' ಎನ್ನುತ್ತಾ ಬೈಕಿನ ಕಡೆಗೆ ಬಂದರು. 

' ರೀ ನನ್ನ ಬೈಕ್ ಯಾಕ್ರೀ ನೀವ್ ಒರೆಸಬೇಕು. ಆ ಬಟ್ಟೆ ಕೊಡಿ ಸಾಕು. ನಾನೇ ಒರೆಸ್ಕೊತೀನಿ' ಅಂದೆ. ' ಅಯ್ಯೋ ನಾನ್ ಒರೆಸ್ತೀನಿ ಅಂದ್ನಲ್ಲ ಬಿಡಿ ಸಾರ್ ' ಎನ್ನುತ್ತಾ ನನ್ನ ಬೈಕಿಗೆ ಕೈ ಹಾಕಿದರು. ಒಂಥರಾ ಮುಜುಗರ ಆಯ್ತು. ರಂಗಪ್ಪಂಗೆ ನನ್ನ ವಯಸ್ಸಿನ ಮಗ ಇದಾರೆ. 

'ರಂಗಪ್ಪ ಅವರೇ ನಿಮ್ದೊಳ್ಳೆ ಕಥೆ ಆಯ್ತಲ್ಲ. ನಿಮಗೆ ಸಂಬಳ ಬರೋದು ಡಿಪಾರ್ಟ್-ಮೆಂಟು ಕೆಲಸಕ್ಕೆ. ಕೊಡಿ ಅದನ್ನ ನಾನು ಒರೆಸ್ಕೊತೀನಿ '

 'ಬರಿ ಬೈಕು ಒರೆಸೋದಕ್ಕೆ ಇಷ್ಟೆಲ್ಲಾ ದೊಡ್ಡ ದೊಡ್ಡ ಮಾತು ಹೇಳ್ತೀರಲ್ಲ ಸಾರ್ ನಿಮ್ದೊಳ್ಳೆ ' ಎನ್ನುತ್ತಾ ನಿರ್ಭಾವುಕನಾಗಿ ಬೈಕು ಒರೆಸುವುದರಲ್ಲಿ ತಲ್ಲೀನರಾದರು. ' 

Slavery is in poor men’s blood ' ಅನ್ನಿಸ್ತು. 'No honor for slave' ಅನ್ನೋದನ್ನ ಅವರ ಕುತ್ತಿಗೆ ಪಟ್ಟಿ ಹಿಡಿದು ಹೇಳಬೇಕು ಅನ್ನಿಸ್ತು. 

ರಂಗಪ್ಪ ಹೇಳಿದಂಗೆ ಇಷ್ಟು ಚಿಕ್ಕ ವಿಷಯಕ್ಕೆ ದೊಡ್ಡ ಫಿಲಾಸಫಿ ಬೇಕಾ. ? ಯಾಕೋ ಮಹಾತ್ಮ ಗಾಂಧಿ ಹೇಳಿದ್ದು ನೆನಪಾಯ್ತು - 'you can take my life but not my self respect'. 

Saturday, October 6, 2012

ಕಾವೇರಿ ತಳಮಳ(ಲೇಖನ)

ನನ್ನ ಸಹೋದ್ಯೋಗಿ ' ಏನ್ರೀ ಕಾವೇರಿ ಗಲಾಟೆ ನಡೀತ ಇದೆ. ಅದರ ಬಗ್ಗೆ ಏನಾದ್ರು ಬರಿತೀರ ಅಂದುಕೊಂಡಿದ್ದೆ. , ನೀವು ಇನ್ನು ಕವನದಲ್ಲೇ ಇದೀರ ' ಅಂತ ಕೇಳಿದ್ರು. 

'ನನಗೆ ಈ ವಿಷಯದ ಬಗ್ಗೆ ಅಷ್ಟು ಗೊತ್ತಿಲ್ಲ ರೀ. ಆದರು, ಅವರು-ಇವರು ಹೇಳಿದ್ದನ್ನ ಅವರವರ ಮಾತಿನಲ್ಲೇ ನನ್ನ ಫೆಸ್-ಬುಕ್ಕಲ್ಲಿ ಶೇರ್ ಮಾಡ್ತಾ ಇದ್ದೀನಲ್ಲ. ನನ್ನ ಸಾಮಾಜಿಕ ಬದ್ಧತೆಯನ್ನ ಪ್ರತಿ ಸಾರು ಟಾಮ್ ಟಾಮ್ ಹೊಡೆದುಕೊಂಡು ಹೇಳಬೇಕ.?' ಎಂದೆ.