ಒಂದು ಸಣ್ಣ ನಡಿಗೆ, ಸಿಹಿಗಬ್ಬಿನ ಕಡೆಗೆ

ವೀರಪ್ಪನ್ ಇದ್ದ ಸತ್ಯಮಂಗಳ ಕಾಡಿನ ಮಧ್ಯೆ ನಗರಗದ ನಾಗರೀಕತೆಯಿಂದ ಬಹುದೂರ ... ತಮ್ಮದೇ ಖಯಾಲಿಯಲಿ ಬದುಕುತ್ತಿರುವ ಕ್ರೇಜಿ ಜನಗಳ ಊರು ಹತ್ತೂರು.
 
ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ, ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ. ರಾಜೇಂದ್ರ ಮೈಸೂರಿನಲ್ಲಿ ರಿಸರ್ವ್ ಬ್ಯಾಂಕ್ ನಲ್ಲಿ ನೌಕರಿ ಮಾಡುತ್ತಿರುವ ಹತ್ತೂರಿನ ಒಬ್ನೇ ಡಿಗ್ರಿ ಹೋಲ್ಡರ್.

ಆಗತಾನೆ ಒಂದು ಹೆಂಗಸನ್ನು ಬೈಕಿನಿಂದ ಕೆಳಗಿಳಿಸಿ ಮಾತನಾಡಿಸುತ್ತಿದ್ದ ಗಿರೀಶನು ರಾಜೇಶನ ಬರವನ್ನು ದೂರದಿಂದಲೇ ಗಮನಿಸಿ!! ಬೈಕನ್ನು ಅಲ್ಲೇ ಬಿಟ್ಟು.. ರಾಜೇಶನ ಕಡೆಗೆ  ದೌಡಾಯಿಸಿ ಬಂದ.
 

ಗಿರೀಶ!! ಹತ್ತೂರಿನ ಶಿವದೇವಸ್ಥಾನದ ಪೂಜಾರಿ.
 

ಇವನ ರಾಸಲೀಲೆಗೆ ಬಲಿಯಾದ ಹೆಣ್ಮಕ್ಕಳ ಲೆಕ್ಕ ಇವನಿಗೇ ತಿಳಿಯದು. ಆದರೆ  ದೊಡ್ಡ ಅಯ್ನೋರ ಮಗ ಅಂತೇಳಿ, ಗಿರೀಶನಿಗಿದ್ದ ಮಾನ ಮತ್ತು ಮರ್ಯಾದೆಯ ಹಿಂದಿನ ಲಾಜಿಕ್ ಮಾತ್ರ ಗಿರೀಶನ ಚಡ್ಡಿ ದೋಸ್ತು, ರಾಜೇಂದ್ರನಿಗೆ ಇದುವರೆಗೂ ಅರ್ಥವಾಗಿಲ್ಲ.

"ಹೊಯ್!! ಏನಡಾ ರಾಜೆ!! ಯಾವಾಗ್ ಬಂದೆ ಊರಿಗೆ ..?"

''ಬೆಳಗ್ಗೆ ಬಂದೆ ಡಾ!! ಬಾ ಹಿಂಗೆ ನಮ್ಮ ಚಿಕ್ಕಪ್ಪನ ಆಲೆಮನೆ ಹತ್ರ ಹೋಗ್ ಬರೋಣ!! ಇವತ್ತೇನೋ ಕಬ್ಬು ಕೊಡ್ತಾರಂತೆ"

"ಹೌದಾ.. ಹೋಗುಪ್ಪಾ .. ಸರಿ" ಎಂದ ಗಿರೀಶ .

"ಅಲ್ಲಡಾ ಗಿರೀಶ!! ಯಾರಡ ಅದು ನಿಂಜೊತೆ ಮಾತಾಡ್ತಾ ಇದ್ದಿದ್ದು.
ನಿನ್ನ ಮನ್ಮಥನ ಮೆರವಣಿಗೆ ಯಾವಾಗಲು ಚಾಲೂನಲ್ಲೇ ಇರುತ್ತಲ್ಲೋ.
ಥೂ!! ನಿನ್ನ ಜನ್ಮಕ್ಕೆ ಬೆಂಕಿ ಹಾಕ!!!.
ನಿನ್ನ ಮನೆಯೊಳಗೆ ಬಿಟ್ಕೊಳೋದೆ ಮಹಾಪಾಪ.
ಅಂಥದ್ರಲ್ಲಿ ನಮ್ಮ ಜನ ನಿನ್ನ ಅಯ್ನೋರೆ!! ಅಯ್ನೋರೆ!! ಅಂತ ಕರೆದು ಪಾದ ತೊಳೆದು ಪೂಜೆ ಮಾಡ್ತಾರೆ." ಉಗಿದ ರಾಜೇಂದ್ರ.

"ಮೊದಲನೇ ಪಾಯಿಂಟು!! ನೀನು ನನ್ನ ವಿಕೃತವಾಗಿ ನೋಡಬೇಡ. ನಾ ಯಾರಿಗೂ ಬಲವಂತ ಮಾಡೋನಲ್ಲ. ಎಂಟರ್ ಟೆನ್ ಮೆಂಟು ಅಷ್ಟೇ. ಒಂಥರಾ ಸಮಾಜ ಸೇವೆ.  ಇನ್ನು ಜನಗಳಿಗೆ ಯಾಕೆ ಅ೦ತೀಯ ಬಿಡು ರಾಜೆ.
ಕೈಯಲ್ಲಿರೋದು ಕೆಟ್ಟದ್ದು ಅಂತ ಅನ್ನಿಸದೆ ಇದ್ರೆ ಅದು ಅಸಹ್ಯ ಅನಿಸಲ್ಲ.
ಪಾಪ!! ನಾನು ಇ೦ತವನು ಅ೦ತ ಯೋಚನೆ ಮಾಡಿದ್ರುನು, ಪಾಪ ಸುತ್ತಿಕೊಳ್ಳುತ್ತೆ ಅ೦ತ ಹೆದರ್ತಾರೆ. ಆಚಾರಗಳ ಬೇರು!! ಬಾಳ ಆಳದಲ್ಲಿ ನಂಬಿಕೆ ಅನ್ನೋ ಸೆಲೆಯನ್ನ ಹುಡುಕ್ಕಂಡ್ ಹೋಗಿರತ್ತೆ.
ಆದರೂ ಏನೇ ಹೇಳು.  ನಿನ್ನ ಹಂಗೆ ಬಯ್ಯೋನಿಲ್ಲ!! ನನ್ನ ಹಂಗೆ ಬಯ್ಸಿಕೊಳ್ಲೋನಿಲ್ಲ ಮತ್ತೆ. "

"ಪೌರೋಹಿತ್ಯಕ್ಕೆ ತಲೆ ತಗ್ಗಿಸಿ ಬದುಕ್ತಾ ಇರೋ!!
ನಮ್ಮ ಕುತ್ತಿಗೆ ಮೇಲಿರೋ ಒ೦ದು ಜನರೆಷನ್ನ ಒ೦ದು ಕಡೆಯಿ೦ದ ಕೊಚ್ಚಿ ಹಾಕಿ ಬಿಡಬೇಕು ಅನ್ನೋ ಅಷ್ಟು ಕೋಪ ಬರುತ್ತೆ.
ಆವಾಗ್ಲಾದ್ರು ನಿಮಗೆ ಸರಿಸಮಾನವಾಗಿ ಕೂತು ಮಾತಾಡೋ ನನ್ನ ಯ೦ಗ್ ಜನರೆಷನ್ನು ಮಾತ್ರ ಉಳ್ಕೊಳತ್ತೆ.
ಏನ್ ಮಾಡೋದು....? ಬೇರೆಯವರಿಗೆ ಹೇಳೋದಿರಲಿ ...ನಮ್ಮ ಮನೆಯವರಿಗೆ ನಾವು ಹೇಳಕ್ಕಾಗಲ್ಲ!!" ಹತಾಶೆ ಹೊರಹಾಕಿದ ರಾಜೇಂದ್ರ .

"ಹೋಗ್ಲಿ!! ಬಿಡೋ..  ಜಾಸ್ತಿ ಆಯಾಸ ಮಾಡ್ಕೋಬೇಡ.
ಎರಡು ದಿನಕ್ಕೆ ಅ೦ತ ಊರಿಗೆ ಬರ್ತೀಯ. ಬಂದಾಗೆಲ್ಲಾ ಕ್ರಾಂತಿ ಕ್ರಾಂತಿ ಅಂತ ಬಡಬಡಿಸ್ತಾ ಇರ್ತೀಯ.
ಲೋ!! ಇಲ್ಲಿ೦ದು ಕಲರ್ ಕಲರ್ ಕಥೆಗಳನ್ನ ಕೇಳಿ,,, ಮಜಾ ತಗೋ೦ಡ್ ಹೋಗೋದ್ ಬಿಟ್ಟು !! ಎನಡಾ!!! ನಿಂದು!! ಯಾವಾಗಲು ರೋದನೆ."

" ಆದರೂ ಗಿರೀಶ!!! ಈ ರೀತಿ ಶೋಕಿ ಮಾಡಿಕೊ೦ಡು ಓಡಾಡೋದೇ ಆಯ್ತು ನಿನ್ನ ಜೀವನ. ಈ ಪೂಜೆ-ಗೀಜೆ ಕೆಲ್ಸಾನೆಲ್ಲ ನಿಮ್ಮಪ್ಪ೦ಗೆ ಬಿಟ್ಟು ಕೊಟ್ಟು, ಯಾವುದಾದರು ಕೆಲಸ ನೋಡಿಕೊ೦ಡು ಮೈಸೂರಿಗೆ ಯಾಕೆ ಬರಬಾರದು...?
ಹೆಂಗೂ ನಾನು ಅಲ್ಲೇ ಇದೀನಿ."

" ನಿನಗಿ೦ತ ಓದಲ್ಲಿ ಮು೦ದೆ ಇದ್ರೂ, ಮಗನೆ!! ನೀನು!! ಸ್ಕಾಲರ್ - ಷಿಪ್ಪು , ರಿಸರ್ವೇಷನ್ನು ಅ೦ದುಕೊ೦ಡು ಗೋರ್ಮೆ೦ಟು ನೌಕರಿ ಗಿಟ್ಟಿಸಿಕೊ೦ಡೆ.
ದೇವಸ್ಥಾನದಲ್ಲಿ ಘ೦ಟೆ ನಾನು ಬಾರಿಸಿದರು , ದೇವರು ವರ ಕೊಟ್ಟಿದ್ದು ನಿನಗೆ."

"ಗರ್ಭಗುಡಿ ಹೊರಗೆ ನಿಂತಿರೋ ಹೆಣ್ಣು ದೇವರ ಕಡೆ ನೋಡಿಕೊಂಡು ಗಂಟೆ ಬಾರಿಸಿದರೆ ದೇವ್ರು ಹೆಂಗೋ .. ವರ ಕೊಡ್ತಾನೆ ."

ಇಬ್ಬರೂ ನಕ್ಕರು.


"ಅಲ್ನೋಡೋ!! ಚಾ೦ದಿನಿ, ನಜ್ಮಾ ಬರ್ತಾ ಇದಾರೆ . " ಎ೦ದ
ಗಿರೀಶ.

ಕೈ ಕಾಲು ಕುಯ್ಯೋ ಕಬ್ಬಿನ ಊರಿನಲ್ಲಿ ಯಾರಪ್ಪಾ ಅದು ಚಾ೦ದಿನಿ, ನಜ್ಮಾ ಎನ್ನುತ್ತಾ ರಾಜೇಂದ್ರ ಅಚ್ಚರಿ ವ್ಯಕ್ತಪಡಿಸಿದ.


"ನಮ್ಮೂರು ಹೋಟ್ಲು ರುದ್ರನ ಹೆ೦ಡ್ತೀರು ಚೆನ್ನಿ, ನಾಗಿ ಕಣೋ..
ಯಾವುದೋ ಆಲೆಮನೆ ಕಡೆ ಹೋಗ್ತಾ ಇದಾರೆ ಅನ್ಸತ್ತೆ. ತಡಿ ಸ್ವಲ್ಪ ರೆಗಿಸ್ತೀನಿ .." ಎನ್ನುತ್ತಾ... ಗಿರೀಶ ಮು೦ದೆ ಮು೦ದೆ ಬ೦ದ.

"ಲೋ!! ಗಿರೀಶ!! ಹಲ್ಕಟ್ ಸುವರ್!!
ನೀನು ಒಬ್ಬನೇ ಇದ್ದಾಗ ಏನಾದ್ರೂ ಮಾಡ್ಕೋ.
ಈಗ ನನ್ನ ಮರ್ಯಾದೆ ತೆಗಿಬೇಡ. ನಿನ್ನ ಕಾಲಿಗೆ ಬೀಳ್ತೇನೆ ...
ಬಾಯಿ ಮುಚ್ ಕೊ೦ಡ್ ಸುಮ್ನೆ ಬಾ " ಎನ್ನುತ್ತಾ ರಾಜೇ೦ದ್ರ ಮುಜುಗರದಿ೦ದ ಬಳಲಾಡಿದ.

" ಅವರೇನು ಭಾರಿ ಪತಿವ್ರತೆಯರು ಅ೦ತ ಹಿ೦ಗಾಡ್ತಿಯೇನೊ!!
ನೋಡ್ತಾ ಇರು ... ಈಗ ಏನ್ ಮಾಡ್ತೀನಿ .." ಎನ್ನುತ್ತಾ ಗಿರೀಶ ಅವರ ಬರವನ್ನೇ ಎದುರು ನೋಡುತ್ತಿದ್ದ.

ರಾಜೇಶನಿಗೆ ದಿಗಿಲು ಹೆಚ್ಚಾಗಿ 'ಮೊದಲೇ ಹುಚ್ ಮುಂಡೆ ಮಗ ಅದೇನ್ ಮಾಡ್ತಾನೋ.. 'ಎನ್ನುತ್ತಾ, ಎರಡು ಎರಡು ಹೆಜ್ಜೆ ಮುಂದೆ ಹಾಕಿ ನಡೆದ .

ಚೆನ್ನಿ ನಾಗಿ ಹತ್ತಿರಾಗುತ್ತಲೇ ಗಿರೀಶ ತನ್ನ ಎಂದಿನ ಪೋಲಿ ಮಾತುಗಳಿಂದ ಅವರನ್ನು ರೇಗಿಸಿದ.

ಚೆನ್ನಿ "ಹೇ!! ಸುಮ್ಕಿರಿ ಅಯ್ನೋರೆ!! ತಮಾಷೆ ಮಾಡಬ್ಯಾಡಿ. ಪಾಪ!! ಈ ಸ್ವಾಮೇರ ಮು೦ದೆಲ್ಲಾ ಏನು ನಿಮ್ಮದು " ಎನ್ನುತ್ತಾ ಗಿರೀಶನ ಸೋಟೆ ತಿರುವಿದಳು.

"ಹಾ!! ಪಾಪನ!! ... ಆ ಸ್ವಾಮೇರೆ ಕೇಳ್ತಾ ಇದ್ರು. ಚೆನ್ನಿ ಹೆ೦ಗೆ ಅ೦ತ !! " ಎನ್ನುತ್ತಾ ಗಿರೀಶ ಇನ್ನು ಏನನ್ನೋ ಹೇಳಲು ಹೋಗುತ್ತಿದ್ದ೦ತೆ,
ರಾಜೇ೦ದ್ರ ತಿರುಗಿಯೂ ನೋಡದೆ ಎದ್ದು ಬಿದ್ದು ಓಡಲು ಶುರು ಮಾಡಿದ.
ಇವನು ಓಡಿದ್ದನ್ನು ನೋಡಿ ಚೆನ್ನಿ ನಾಗಿ ನಕ್ಕರು.

ಗಿರೀಶ " ಅಯ್ಯೋ!! ನಿ೦ತ್ಕೋಳೊ ರಾಜೆ!! ಅವರೇನು ನಿನ್ನ ತಿನ್ನಲ್ಲ." ಎನ್ನುತ್ತಾ ರಾಜೇ೦ದ್ರನ ಹಿ೦ದೆ ಓಡಿದ.


***** ೧ ****** 


ಇವರು ಆಲೆಮನೆಗೆ ಬರುವ ಹೊತ್ತಿಗೆ ಸ೦ಜೆಯಾಗಿತ್ತು.
ಅಲ್ಲಿ ತೋಟದ ಆಳುಗಳಾದ ಸಿದ್ಧ!! ಮಾರ!! ಆಲೆಮನೆ ಕಬ್ಬಿನ ಕೋಲುಗಳನ್ನು ಹೂವಿನಿ೦ದ ಸಿ೦ಗರಿಸಿ ಪೂಜೆ, ನೈವೇದ್ಯ ಮಾಡಿದ್ದರು.

ಗಿರೀಶನನ್ನು ನೋಡುತ್ತಲೇ
"ಪೂಜೆ ಹೊತ್ತಲ್ಲಿ ಕರೆದು ಕಳಿಸಿರೋ ರೀತಿ ಬ೦ದುಬಿಟ್ರಲ್ಲಾ ಅಯ್ನೋರೆ. ನಮ್ಮ ಪುಣ್ಯ ಇದು." ಎನ್ನುತ್ತಾ ರಾಜೇ೦ದ್ರನ ಚಿಕ್ಕಪ್ಪ, ಚಿಕ್ಕಮ್ಮ - ಎಲೆ,ಅಡಿಕೆ ಕೈಗೆ ಕೊಟ್ಟು ಗಿರೀಶನ ಕಾಲುಗಳಿಗೆ ದೊಪ್ಪನೆ ಬಿದ್ದರು. ಎಲೆಯಡಿಕೆಯ ಮಧ್ಯೆ ಐವತ್ತೊಂದು
ರೂಪಾಯಿ ದುಡ್ಡು  ಇಡುವುದನ್ನು ಅವರು ಮರೆಯಲಿಲ್ಲ. 
 
ತನ್ನನ್ನು ಸರ್ವಶಕ್ತನ ಅಪರಾವತಾರವೆ೦ಬತೆ ಪೋಸು ಕೊಡುತ್ತಾ ಗಿರೀಶ ಅವರನ್ನು ಆಶೀರ್ವದಿಸಿದ. ಗಿರೀಶನ ಕಾಲಿಗೆ ಮೆತ್ತಿಕೊ೦ಡಿದ್ದ ಕರಿ ಜೇಡಿ ಮಣ್ಣು ಇವರಿಬ್ಬರ ಹಣೆಗೆ ಹತ್ತಿದ್ದನ್ನ ನೋಡಿ ರಾಜೇ೦ದ್ರನಿಗೆ ಹೊಟ್ಟೆ ತೊಳಸಿದ೦ತಾಗಿ ವಾಕರಿಕೆ ಬ೦ತು.

ಗಿರೀಶ ಮಾತ್ರ ಕ್ಷಣಕಾಲ ಮುಖದ ಮೇಲೆ ದೈವಿಕ ಮೌನವನ್ನು ಅಲಂಕರಿಸಿದ್ದ .
ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಇಬ್ಬರೂ ಅಲೆಮನೆಯಿ೦ದ ಹೊರ ನಡೆದರು.

" ಎಲ್ಲಾ ಬಿಟ್ಟು ಆ ಕೀಳು ಜಾತಿಯ ಸಿದ್ಧ!! ಮಾರನ!! ಕೈಯಲ್ಲಿ ಪೂಜೆ ಮಾಡಿಸ್ತಾ ಇದಾರಲ್ಲ..ರಾಜೆ .... ನಿಮ್ಮ ಮನೆಯವರಿಗೆ ಸ್ವಲ್ಪನಾದ್ರು ಬುದ್ಧಿ ಇದಿಯ.
ನಾವೆಲ್ಲಾ  ಸತ್ತು ಹೋಗಿದಿವೇನೋ...? ಹೇಳಿ ಕಳಿಸಿದ್ರೆ ಒಂದ್ ರೌಂಡ್ ಬಂದು ಪೂಜೆ ಮಾಡಿ ಹೋಗ್ತಿದ್ನಲ್ಲೋ ..? " ಎಂದ.

"ಲೋ!! ಮನ್ಷಾನೆನೊ ನೀನು.  ನನ್ನ ಹತ್ರ ಮತ್ತೆ ಉಗಿಸ್ಕೊಳಕ್ಕೆ ಹಿಂಗೆ ಕೇಳ್ತಾ ಇದಿಯ ನೀನು "

"ಇಲ್ಲಡಾ!! ಎಲ್ಲಾದಕ್ಕೂ ಒಂದು ನೀತಿ ನಿಯಮ ರೀತಿ ರಿವಾಜು ಅಂತ ಇರ್ತಾವೆ."ಎಂದ ಗಿರೀಶ .

"ಎನಡಾ!! ರೀತಿ ರಿವಾಜು !! ಪುಂಗಿ!!! ಬದನೇಕಾಯಿ !!
ನಿನಗೆ ಕ೦ಪೇರ್ ಮಾಡಿದ್ರೆ ಅವ್ರು ಎಷ್ಟೋ ಮೇಲು ಬಿಡು. ಯಾಕಂದ್ರೆ!! ಪದ್ಧತಿ ಸರಿ ಇಲ್ಲದೇ ಇದ್ದರೂ ಆ ಜಾಗದಲ್ಲಿ ಕೆಲಸ ಮಾಡಿಕೊಂಡು ಬದುಕಿರೋ ಅವರಿಗೆ!! ನಿನಗಿಂತ ಜಾಸ್ತಿ ಶ್ರದ್ಧೆ, ಭಕ್ತಿ ಇದೆ. ಆದೂ ಅಲ್ಲದೆ ಸಿದ್ಧ!! ಮಾರ!! ಅಥವಾ ಮತ್ಯಾರೋ ಆಲೆಮನೆ ಪೂಜೆ ಮಾಡಿದ್ರೆ, ಬರೋ ಬೆಲ್ಲ ಕಹಿ ಆಗಿರುತ್ತೆ. ಅದೇ ನಿಮ್ಮ೦ತ ದೈವಮಾನವರು ಪೂಜೆ ಮಾಡಿದ್ರೆ ಬರೋ ಬೆಲ್ಲ ಭಯ೦ಕರ ಸಿಹಿ ಆಗಿ ಇರುತ್ತಾ ...? " ಎ೦ದ ರಾಜೇ೦ದ್ರ.

ಇನ್ನು ಇವನ ಬಳಿ ವಾದ ಮಾಡಿ ಪ್ರಯೋಜನ ಇಲ್ಲವೆಂದು ಗಿರೀಶ ಸುಮ್ಮನಾದ.

Comments