ಕಾವೇರಿ ತಳಮಳ(ಲೇಖನ)

ನನ್ನ ಸಹೋದ್ಯೋಗಿ ' ಏನ್ರೀ ಕಾವೇರಿ ಗಲಾಟೆ ನಡೀತ ಇದೆ. ಅದರ ಬಗ್ಗೆ ಏನಾದ್ರು ಬರಿತೀರ ಅಂದುಕೊಂಡಿದ್ದೆ. , ನೀವು ಇನ್ನು ಕವನದಲ್ಲೇ ಇದೀರ ' ಅಂತ ಕೇಳಿದ್ರು. 

'ನನಗೆ ಈ ವಿಷಯದ ಬಗ್ಗೆ ಅಷ್ಟು ಗೊತ್ತಿಲ್ಲ ರೀ. ಆದರು, ಅವರು-ಇವರು ಹೇಳಿದ್ದನ್ನ ಅವರವರ ಮಾತಿನಲ್ಲೇ ನನ್ನ ಫೆಸ್-ಬುಕ್ಕಲ್ಲಿ ಶೇರ್ ಮಾಡ್ತಾ ಇದ್ದೀನಲ್ಲ. ನನ್ನ ಸಾಮಾಜಿಕ ಬದ್ಧತೆಯನ್ನ ಪ್ರತಿ ಸಾರು ಟಾಮ್ ಟಾಮ್ ಹೊಡೆದುಕೊಂಡು ಹೇಳಬೇಕ.?' ಎಂದೆ.  'ಅಂದರೆ ನೀವು ತಮಿಳುನಾಡಿಗೆ ಸಪೋರ್ಟಾ ಇದರಲ್ಲಿ ಗೊತ್ತು ಮಾಡಿಕೊಳ್ಳೋದು ಏನ್ರಿ ಇದೆ. ನೀರು ಬಿಡ್ತಾ ಇದಾರೆ. ಅದನ್ನ ಬಿಡಬಾರದು ಅಂತ ಹೇಳ ಬೇಕು ಅಷ್ಟೇ. ' 

'ಹೌದು ನಮ್ಮ ರೈತರ ಮೇಲೆ ಮೋಸ ಆಗ್ತಿದೆ ಅನ್ನೋದು ಮೇಲಿಂದಲೇ ಗೊತ್ತಾಗತ್ತೆ. ಅದಕ್ಕೇ ವಿಷಯ ಸ್ಪಷ್ಟವಾಗಿ ಗೊತ್ತಿಲ್ಲದೇ ಇದ್ದರೂ ಸಪೋರ್ಟ್ ಮಾಡ್ತಾ ಇದೀನಿ. ಆದರೆ ಇದರ ಬಗ್ಗೆ ಬರೆಯೋದಕ್ಕೆ ನನಗೆ ಸ್ವಂತಕ್ಕೆ ಅಂತ ಯಾವುದೇ ವಿಚಾರಗಳಿಲ್ಲ. ' 

 'ರೀ ಏನೇನೋ ಬರೀತಾ ಇರ್ತೀರ. ತಾಯ್ನಾಡಿನ ವಿಷಯ ಬಂದಾಗ ಡೌಟ್ ಇಟ್ಕೊಳ್ಳದೆ, ನಮ್ಮ ನಮ್ಮ ಮಿತಿಯಲ್ಲಿ ಹೋರಾಟಕ್ಕೆ ಇಳಿಬೇಕು. ಒಗ್ಗಟ್ಟು ಅಂದ್ರೆ ಏನು ಅನ್ನೋದನ್ನ ತಮಿಳರನ್ನ ನೋಡಿ ಕಲಿತುಕೊಳ್ರಿ. ' 

 'ನೀರು ಬಿಟ್ಟಿರೋದು ಶೆಟ್ರು. ನಾನೇ ಹೋಗಿ KRS ಗೇಟು ತೆಗೆದಿರೋ ಹಂಗೆ ನನಗ್ಯಾಕ್ರಿ ಬಯ್ತಾ ಇದೀರ. ಸರಿ ಈಗ ಒಬ್ಬ ಶ್ರೀಸಾಮಾನ್ಯನಾಗಿ ನನ್ನ ಏನ್ ಮಾಡು ಅಂತೀರ. ನಾಳೆ ಕಾವೇರಿ ಗಲಾಟೆ ಬಂದ್ ಗೆ ಸಪೋರ್ಟ್ ಮಾಡಿ ಒಂದಿನ ಫುಲ್ ಮನೇಲಿ ಇರ್ತೇನೆ. ಯಾವುದಾದರು ಶಾಂತಿಯುತವಾದ ಮೆರವಣಿಗೆ ಏನಾದ್ರು ಆದರೆ, ಕಷ್ಟ ಪಟ್ಟುಕೊಂಡು ಅವರ ಜೊತೆ ಹೋಗಿ ಬರ್ತೇನೆ. ' 

' ಟಿಪಿಕಲ್ ಟೆಕ್ಕಿ ರೀತಿ ಮಾತಾಡ್ತಿರಲ್ಲ. ನೀವು ಮನಸ್ಸಿಗೆ ಬಂದದ್ದನ್ನೆಲ್ಲಾ ಬರೆಯೋದಕ್ಕೆ ಈ ಭಾಷೆ ನಿಮಗೆ ಸುಂದರವಾದ ಪದಗಳನ್ನ, ವ್ಯಾಕರಣವನ್ನ ನೀಡಿದೆ. ಈಗ ಅದೇ ಭಾಷೆಯ ನೆಲಕ್ಕೆ, ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಅಂದಾಗ, ಅದರ ಬಗ್ಗೆ ನಾಲ್ಕು ಸಾಲುಗಳು ಬರೆದು, ನಿಮ್ಮ ಸಾಮಾಜಿಕ ಬದ್ಧತೆಯನ್ನ ತೋರಿಸೋದು ಬಿಟ್ಟು ತುಂಬಾ ಕೇರ್ ಲೆಸ್ ಆಗಿ, ಅಭಿಮಾನಶೂನ್ಯರ ರೀತಿ ಮಾತಾಡ್ತೀರಲ್ಲ' ಅಂದ್ರು.

ಗೊತ್ತಿಲ್ಲದೇ ಇರೋದನ್ನೆಲ್ಲಾ, ಜೈ ಅಂತ ಹೇಳೋದು ಅಂದ್ರೆ ಹೆಂಗೆ. ಇಲ್ಲಿನ ಸಮಸ್ಯೆಯ ಮೂಲಕ್ಕೆ ಹೋದರೆ ನಮ್ಮ ನೆಲದಲ್ಲಿ ಬಿದ್ದ ನೀರಿನ ಮೇಲೆ ಸಂಪೂರ್ಣ ಅಧಿಕಾರ ನಮಗಿದೆ. ಅದನ್ನ ನಾವು ಮೊದಲು ಸಾಕಷ್ಟು ಬಳಸಿದ ಮೇಲೆ ಬೇರೆಯವರ ಬಗ್ಗೆ ಯೋಚಿಸಬಹುದು. ಆದರೆ ನಾವು ಅನ್ನೋದಕ್ಕೆ ಸರಿಯಾದ ವ್ಯಾಖ್ಯಾನ ಇಲ್ವಲ್ಲಾ..?

ಕರ್ನಾಟಕದವರು ಕೇಂದ್ರದವರ ಕಣ್ಣಿಗೆ ಅಲ್ಪಸಂಖ್ಯಾತರ ಹಾಗೆ ಕಾಣ್ತೇವೆ. ನಮ್ಮದು ಕಮ್ಮಿ MP ಗಳು. ಸಂಪೂರ್ಣ ಬಹುಮತ ಪಡೆದು ಪ್ರತಿ ಸಾರಿ ಆಡಳಿತಕ್ಕೆ ಬರೊ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು, ಅಧಿಕಾರದಲ್ಲಿರುವ ಪಕ್ಷಗಳ ಜೊತೆಗೆ ಸೇರಿಕೊಂಡು, ಕೇಂದ್ರದ ಮೇಲೆ ಒತ್ತಡ ಹೇರಿ ತಮ್ಮ ಕೆಲಸ ಮಾಡಿಸಿ ಕೊಳ್ತಾರೆ. ನಮ್ಮ ಕರ್ನಾಟಕದ ದುರಾದೃಷ್ಟ ಏನಪ್ಪಾ ಅಂದ್ರೆ ಇಲ್ಲಿ ಬರೊ ಸರ್ಕಾರ ಅಲ್ಲಿ ಇರಲ್ಲ, ಅಲ್ಲಿ ಇದ್ದಾಗ ಇಲ್ಲಿ ಬೇರೆ ಸರ್ಕಾರ ಇರತ್ತೆ. ಇದ್ದರೂ, ಎಲ್ಲವೂ ಕಿಚಡಿ ರೀತಿ ಬೇಕಾಬಿಟ್ಟಿಯಾಗಿ ಮೂರು ನಾಲ್ಕು ಸೀಟು ಗಳಂತೆ ಒಂದೊಂದು ಪಕ್ಷಗಳಲ್ಲಿ ಹಂಚಿ ಹೋಗಿರುತ್ತದೆ. 

ಆದರೆ ನಮ್ಮನ್ನೆಲ್ಲಾ ಕಾಯೋದಕ್ಕೆ ಅಂತಾನೆ, ಸಂವಿಧಾನ ಇದೆ. ನ್ಯಾಯ ನೀತಿ ಕೇಳೋದಕ್ಕೆ  ಸುಪ್ರಿಂ ಕೋರ್ಟ್ ಇದೆ. ತಮಿಳು ಮತ್ತು ಕನ್ನಡ ಎರಡು ದೇಶಗಳು. ವೈವಿಧ್ಯತೆ ಅನ್ನೋದು ಸಿಕ್ಕಾಪಟ್ಟೆ ಇರೋದ್ರಿಂದ ಹೊಂದಾಣಿಕೆ ಮರೀಚಿಕೆ. ಕಾನೂನು ಬದ್ಧವಾಗಿಯೇ ಎಲ್ಲಾ ಆಗಬೇಕು. ಈಗ ಸಮಸ್ಯೆಯ ತೀವ್ರತೆ ಅರಿವಾಗಿರಬೇಕಿರುವುದು ಸುಪ್ರಿಂ ಕೋರ್ಟಿಗೆ. ಅದನ್ನ ಅವರಿಗೆ ಗಟ್ಟಿಯಾಗಿ ಮನವರಿಕೆ ಮಾಡಿಕೊಡಬೇಕು. 

ಅದಕ್ಕೇ ಅಂತ ದೊಡ್ಡ ದೊಡ್ಡ ಲಾಯರ್ ಗಳಿದ್ದಾರೆ, ಎಲ್ಲಾ ತಿಳಿದಿರೋ ಮೇಧಾವಿಗಳಿದ್ದಾರೆ, ಮಾತುಗಾರರಿದ್ದಾರೆ. ಇದನ್ನೆಲ್ಲಾ ಆಡಳಿತ ಯಂತ್ರಕ್ಕೆ ಮನದಟ್ಟು ಮಾಡಿಕೊಡೋದಕ್ಕೆ ಅಂತಾನೆ ಫುಲ್ - ಟೈಮ್ ಸಮಾಜ ಸೇವಕರಾದ ನಮ್ಮ ಜನಪ್ರತಿನಿಧಿಗಳಿದ್ದಾರೆ. ಆದರೂ. ಒಬ್ಬ ಶ್ರೀ ಸಾಮಾನ್ಯ ಈ ಸಮಸ್ಯೆಗೆ ಹೇಗೆ ಪ್ರತಿಕ್ರಿಯಿಸಬಹುದು ಅನ್ನೋದು ಅರ್ಥವಾಗದ ವಿಷಯ. 

Comments