ರಂಗಪ್ಪ; Slavery is in poor mens blood

ಓಣಿಯಲ್ಲಿ ನಿಲ್ಲಿಸಿದ್ದ, ಹೊಸ ಪಲ್ಸರ್ ಬೈಕು ಹೊರಗೆಳೆದು ಕೆಲಸಕ್ಕೆಂದು ಹೊರಡುತ್ತಿದ್ದೆ.  'ತಲೆಗೆ ಹಾಕ್ಕಂತರಲ್ಲ, ಅದುನ್ನ ಹಾಕ್ಕಂಡೆ ಹೋಗಪ್ಪ.  ' ಎಂದಳು ಅಜ್ಜಿ.  'ತಲೆಗೆ ಏನು ಹಾಕ್ಕಂತಾರಜ್ಜಿ. ? ' ಅಂದ್ರೆ 'ಅದೇ ಕಣಪ್ಪ ತಲೆಗೆ ಹಾಕ್ಕಾಂತಾರಲ್ಲ ಅದೇ ತಲ್ಮೆಟ್ಟು ' ಅಂದಳು. 

ಏನೆಂದು ಹೇಳಬೇಕು, ಅಜ್ಜಿಯ ನುಡಿಗಟ್ಟಿಗೆ. ಕಾಲಿಗೆ ಹಾಕ್ಕೋಳೋದು ಕಾಲ್ಮೆಟ್ಟು ಆದ್ರೆ, ತಲೆಗೆ ಹಾಕ್ಕೋಳದು ತಲ್ಮೆಟ್ಟು. ಒಡೆದು ನೋಡಿದರೆ ಅರ್ಥಗರ್ಭಿತವಾದ ಪದ ಎನ್ನಿಸಿದರೂ ಕೇಳುವುದಕ್ಕೆ ಅಷ್ಟೋಂದು ಸಹನೀಯವಲ್ಲ. 


ಮನೆಯಿಂದ ಕೇವಲ ನಾಲ್ಕು ಮೈಲಿ ದೂರವಿದ್ದ ನಮ್ಮ ಆಫೀಸು ತಲುಪಲು ಹತ್ತು ನಿಮಿಷವೂ ಹಿಡಿಯಲಿಲ್ಲ. ನಮ್ಮ ಡಿಪಾರ್ಟ್-ಮೆಂಟು ಕಾರು 'ಆನ್ ಡ್ಯೂಟಿ, ಭಾರತ ಸರ್ಕಾರ ' ಅನ್ನೋ ಶಿರೋನಾಮೆ ಬರೆದುಕೊಂಡು ಗೇಟಿನ ಬಳಿಯೇ ರಾರಾಜಿಸುತ್ತಿತ್ತು. ನನ್ನ ಮುದ್ದಿನ ಪಲ್ಸರು ಬೈಕನ್ನು ಬೇಸ್‍ಮೆಂಟ್ ಫ್ಲೋರಿನ ಕಡೆಗೆ ಚಲಾಯಿಸಿದೆ.

ಬೈಕು ನಿಲ್ಲಿಸುತ್ತಿರುವಾಗ ನಮ್ಮ ಕ್ಯಾಷುಯಲ್ ಲೇಬರ್ ರಂಗಪ್ಪಾ  'ನಮಸ್ಕಾರ ಸಾರ್ ' ಎಂದರು. ನಾನೂ ತಿರುಗ 'ನಮಸ್ಕಾರ' ಎಂದೆ. ನಮಸ್ಕಾರ ಹೊಡೆದು, ತುಕ್ಕು ಹಿಡಿದಿದ್ದ ತಮ್ಮ ಹಳೆ ಸೈಕಲನ್ನು ಬಟ್ಟೆಯಿಂದ ಒರೆಸುವ ಕೆಲಸದಲ್ಲಿ ರಂಗಪ್ಪ ಮಗ್ನರಾದರು. ರಂಗಪ್ಪನಿಗೆ ಸುಮಾರು ಐವತ್ತು ವರುಷ ವಯಸ್ಸು. ಡಿಪಾರ್ಟ್-ಮೆಂಟಿನಲ್ಲಿಯೇ ಮುಕ್ಕಾಲು ವಾಸಿ ಜೀವನ ಮುಗಿಸಿದ್ದಾರೆ. ನಿಲ್ಲಿಸಿ ಹೊರಡುವ ಮುನ್ನ, ಧೂಳಾಗಿದ್ದ ಬೈಕಿನ ಕಡೆಗೆ ನೋಡಿದೆ. ರಂಗಪ್ಪನ ಬಳಿ ಬಟ್ಟೆ ಪ ಡೆದು ಒರೆಸೋಣವೆಂದು ಅವರು ಮುಗಿಸುವುದನ್ನೇ ಕಾಯುತ್ತಾ ನಿಂತಿದ್ದೆ. 

ನನ್ನ ಬೈಕು ನೋಡಿದ್ರೆ ಒಂಥರಾ ಸಂಭ್ರಮ. ನಂದು ಬೈಕು. ನನ್ನ ಸ್ವಂತದ್ದು. ನಾನು ಅದರ ಓನರು. ಮೊನ್ನೆಯಷ್ಟೇ ಫುಲ್ಲು ಕ್ಯಾಷ್ ಕೊಟ್ಟು ಖರೀದಿಸಿದ ಹೊಸ ಬೈಕು. ಕೆಲಸಕ್ಕೆ ಸೇರಿದ ಮೂರು ವರುಷಗಳಲ್ಲಿ ಎಜುಕೇಶನ್ ಲೋನು ತಂಟೆ ತಾಪತ್ರಯಗಳನ್ನು ಮುಗಿಸಿ ನಾ ಪೂರೈಸಿಕೊಂಡ ನನ್ನ ಮೊದಲನೇ ವಿಶ್ಶು. ಇಂಜಿನಯರಿಂಗು ಓದುವಾಗ ಹಾಸ್ಟೆಲಿನಿಂದ ಕಾಲೇಜಿಗೆ ನಡಕೊಂಡೇ ಹೋಗ್ತಾ ಇದ್ದೆ. ಮಾನಸ ಗಂಗೋತ್ರಿ ಕ್ಯಾಂಪಸ್ ಒಳಗಿಂದ ನಡೆದು ಹೋಗುವುದು ಅನಿವಾರ್ಯ ಅಂದುಕೊಂಡರೂ, ಅಷ್ಟೇ ಎಂಜಾಯ್ ಮಾಡ್ತಿದ್ದೆ. ಬಡ್ಡಿಮಗ!! ಶ್ರೀನಿವಾಸ ರಾಜು ದಡಿಯ ಥರ ಇದ್ದ ದೊಡ್ಡ ಬೈಕಲ್ಲಿ, ನಾಲಕ್ಕು ವರ್ಷವೂ ನಾ ಬಾರೋ ರಸ್ತೆನಲ್ಲೇ ಬರ್ತಿದ್ದ. ಡೈಲಿ ಬಂದ್ರು, ಒಂದಿನಾನು ಹತ್ತಿಸಿಕೊಂಡು ಹೋಗಲಿಲ್ಲ. ನಾವು ಕೂಡ, ಫುಲ್ ರಾಯಲ್ ಆಗೇ ನಡಕೊಂಡ್ ಬರ್ತಿದ್ವಿ. ಆದರು ಒಂದೋದ್ ಸಾರಿ ಅನ್ಸತ್ತೆ, ನನ್ನ ಬೈಕು ತಗೊಂಡ್ ಅವನ ಹಿಂದೆ ಹೋಗಿ ಜೋರ್ ಹಾರನ್ ಮಾಡಬೇಕು ಅಂತ. ಇಂತಹ ಸ್ಯಾಡಿಸ್ಟು ಕಲ್ಪನೆಯಿಂದ ನಗೂನು ಬರತ್ತೆ. 

'ರಂಗಪ್ಪ ಸ್ವಲ್ಪ ಬಟ್ಟೆ ಕೊಡ್ರಿ ಬೈಕ್ ಒರೆಸಬೇಕು' ಅಂದೆ. 'ಸಾರ್ ನೀವ್ ಬೈಕ್ ಒರೆಸೋದ, ನೀವು ಹೋಗಿ ಸಾರ್ ನಾನೆ ಒರೆಸ್ತೀನಿ. ' ಎನ್ನುತ್ತಾ ಬೈಕಿನ ಕಡೆಗೆ ಬಂದರು. 

' ರೀ ನನ್ನ ಬೈಕ್ ಯಾಕ್ರೀ ನೀವ್ ಒರೆಸಬೇಕು. ಆ ಬಟ್ಟೆ ಕೊಡಿ ಸಾಕು. ನಾನೇ ಒರೆಸ್ಕೊತೀನಿ' ಅಂದೆ. ' ಅಯ್ಯೋ ನಾನ್ ಒರೆಸ್ತೀನಿ ಅಂದ್ನಲ್ಲ ಬಿಡಿ ಸಾರ್ ' ಎನ್ನುತ್ತಾ ನನ್ನ ಬೈಕಿಗೆ ಕೈ ಹಾಕಿದರು. ಒಂಥರಾ ಮುಜುಗರ ಆಯ್ತು. ರಂಗಪ್ಪಂಗೆ ನನ್ನ ವಯಸ್ಸಿನ ಮಗ ಇದಾರೆ. 

'ರಂಗಪ್ಪ ಅವರೇ ನಿಮ್ದೊಳ್ಳೆ ಕಥೆ ಆಯ್ತಲ್ಲ. ನಿಮಗೆ ಸಂಬಳ ಬರೋದು ಡಿಪಾರ್ಟ್-ಮೆಂಟು ಕೆಲಸಕ್ಕೆ. ಕೊಡಿ ಅದನ್ನ ನಾನು ಒರೆಸ್ಕೊತೀನಿ '

 'ಬರಿ ಬೈಕು ಒರೆಸೋದಕ್ಕೆ ಇಷ್ಟೆಲ್ಲಾ ದೊಡ್ಡ ದೊಡ್ಡ ಮಾತು ಹೇಳ್ತೀರಲ್ಲ ಸಾರ್ ನಿಮ್ದೊಳ್ಳೆ ' ಎನ್ನುತ್ತಾ ನಿರ್ಭಾವುಕನಾಗಿ ಬೈಕು ಒರೆಸುವುದರಲ್ಲಿ ತಲ್ಲೀನರಾದರು. ' 

Slavery is in poor men’s blood ' ಅನ್ನಿಸ್ತು. 'No honor for slave' ಅನ್ನೋದನ್ನ ಅವರ ಕುತ್ತಿಗೆ ಪಟ್ಟಿ ಹಿಡಿದು ಹೇಳಬೇಕು ಅನ್ನಿಸ್ತು. 

ರಂಗಪ್ಪ ಹೇಳಿದಂಗೆ ಇಷ್ಟು ಚಿಕ್ಕ ವಿಷಯಕ್ಕೆ ದೊಡ್ಡ ಫಿಲಾಸಫಿ ಬೇಕಾ. ? ಯಾಕೋ ಮಹಾತ್ಮ ಗಾಂಧಿ ಹೇಳಿದ್ದು ನೆನಪಾಯ್ತು - 'you can take my life but not my self respect'. 

Comments