'Life of Pi' ಮತ್ತು ಒಂಚೂರು ಹರಟೆ

'ಲೈಫ್ ಆಫ್ ಪೈ' ಸಿನಿಮಾ ಶುರುವಾಯ್ತು.  ಸ್ಕ್ರೀನು ಬ್ಲರ್ ಆಗಿ ಕಾಣುಸ್ತಾ ಇತ್ತು. ಎರಡೆರಡು ವೀಡಿಯೋ ಲೇಯರ್ ಗಳು ಒಂದರ ಮೇಲೆ ಒಂದು ಕೂತಂತೆ. ಒಮ್ಮೊಮ್ಮೆ ಆಡಿಯೋ ವೀಡಿಯೋ ಮಿಸ್ ಅಲೈನ್ ಆಗಿರುತ್ತವಲ್ಲ ಹಾಗೆ. ಸರಿ ಹೋಗಬಹುದೆಂದು ಸ್ವಲ್ಪ ಕಾದೆ. ಎಷ್ಟು ಹೊತ್ತಾದರೂ ಆ ಬ್ಲರ್ ಕಡಿಮೆ ಆಗಲೇ ಇಲ್ಲ. ಹಿಂದೆ ತಿರುಗಿ ಪ್ರೊಜೆಕ್ಟರ್ ಇದಿಯಾ ಅಂತ ನೋಡಿದೆ. ಅಂತದ್ದೇನು ಕಾಣಲಿಲ್ಲ. ಸಖತ್ ಕೋಪ ಬಂತು. ' ಬಡ್ಡಿಮಕ್ಕಳ್ರು ಇನ್ನೂರ ಐವತ್ತು ರೂಪಾಯಿ, ದುಡ್ಡು ಈಸ್ಕೊಂಡಿದಾರೆ. ಕಿತ್ತೋಗಿರೋ ಸ್ಕ್ರೀನು!! ' ಬಯ್ಯುತ್ತಿದ್ದೆ. ಪಕ್ಕದಲ್ಲಿ ಕುಳಿತಿದ್ದ ಅಭಿಗೆ 'ಲೋ ನನಗೆ ಎಲ್ಲಾ ಎರಡೆರಡು ಕಾಣಿಸ್ತಾ ಇದಾವೆ ಕಣೋ' ಅಂದೆ. 

'ಹೌದಾ ನನಗೆ ಸರಿಯಾಗೇ ಕಾಣಿಸ್ತಾ ಇದೆ' ಅಂದ. ನನ್ನ ಮುಖ ನೋಡಿ- ' ಕೊಟ್ಟಿರೋ ತ್ರಿಡಿ ಕನ್ನಡಕ ಹಾಕ್ಕೊಳೋ ಲೇ ' ಉಗಿದ. 'ಅಯ್ಯಯ್ಯೋ ಎಂತಾ ಗುಬಾಲ್' ಅಂದುಕೊಂಡು ಕನ್ನಡಕ ಹಾಕ್ಕೊಂಡೆ. ಕಣ್ಣಿಗೆ ಹಾಕಬೇಕಿದ್ದ, ತ್ರಿಡಿ ಕನ್ನಡಕ ಜೇಬಿನಲ್ಲಿಟ್ಟು ಮರೆತಿದ್ದೆ. ಕನ್ನಡಕ ಹಾಕ್ಕೊಂಡ್ ಮೇಲೆ ಬ್ಲರ್ ಹೋಗಿ,ತ್ರಿಡಿ ಬಂತು. ಅಭಿ ಬಿದ್ದು ಬಿದ್ದು ನಗುತ್ತಾ 

'ಡಬಲ್ ಕಾಣ್ತಾ ಇದೆ, ಅಂದಾಗಲೇ ಗೊತ್ತಾಗಬೇಕಿತ್ತು ನಿಂಗೆ. ತ್ರಿಡಿ ಹೆಂಗೆ ವರ್ಕ್ ಆಗತ್ತೆ ಗೊತ್ತಿಲ್ವೇನೋ. ? ' ಏನ್ನುತ್ತಾ ಶುರುವಚ್ಚಿಕೊಂಡಾ 'ಎರಡು ಲೇಯರ್-ಗಳ ಮಧ್ಯೆ ಸಣ್ಣ ಗ್ಯಾಪ್ ಇದಿಯಲ್ಲ ಅದನ್ನ ಬಳಸಿಕೊಂಡೆ ತ್ರಿ-ಡಿ ಇಲ್ಲುಶನ್ ಸೃಷ್ಟಿ ಮಾಡ್ತಾರೆ. ತ್ರಿಡಿ ಕನ್ನಡಕದಲ್ಲಿ ಕಲರ್ ಫಿಲ್ಟರ್ ಗಳು ಇರುತ್ವೆ. ಒಂದು ಕಣ್ಣು ಒಂದು ಲೇಯರ್ ನೋಡ್ತಾ ಇದ್ರೆ, ಮತ್ತೊಂದು ಕಣ್ಣು ಇನ್ನೊಂದು ಲೇಯರ್ ನೋಡ್ತಾ ಇರತ್ತೆ. ಆದ್ರೆ ಕಂಟೆಂಟ್ ಬೇರೆ ಬೇರೆ ಇದ್ರೂ, ಅವುಗಳನ್ನ ಒಂದೇ ಸಾರ್ತಿಗೆ ಇಲ್ಲೇ ಹತ್ತಿರದಲ್ಲಿ ನೋಡೋ ಪ್ರಯತ್ನ ಮಾಡ್ತೇವೆ. ಆಗ ನಮಗೆ ಇಲ್ಲುಶನ್ ಕ್ರಿಯೇಟ್ ಆಗತ್ತೆ. ' ಹೀಗೆ ಅಭಿ ಕೈ ಬೆರಳುಗಳಿಂದ ಥಿಯೇಟರ್ ನಲ್ಲಿ ತ್ರಿಡಿ ಕಾನ್ಸೆಪ್ಟು ವಿವರಿಸುತ್ತಿದ್ದ. ವಿಷಯ ಗೊತ್ತಿರೋರ ಮುಂದೆ,  ಪ್ರಶ್ನೆ ಪ್ರಸ್ತಾಪಿಸಬಾರದು. ಪ್ರಾಣ ಹಿಂಡಿ ಬಿಡುವರು. ಸಧ್ಯ ಪಕ್ಕದಲ್ಲಿ ಬೇರೆ ಪ್ರೇಕ್ಷಕರು ಇರಲಿಲ್ಲ. 'ಲೋ ತಪ್ಪಾಯ್ತು ಬಿಟ್ಟು ಬಿಡ್ಲಾ ಈಗ ಸಿನಿಮಾ ನೋಡೋಣ' ಅಂದೆ. ಸುಮ್ಮನಾದ. 

ತೆರೆಯ ಮೇಲೆ(ಸಾರಿ ತೆರೆಯ ಮೇಲಲ್ಲ, ಕಣ್ಣಿನ ಮುಂದೆ) ಜೋರು ಬಿರುಗಾಳಿ ಬೀಸಲು ಪ್ರಾರಂಭಿಸಿತು. 'ಮಗಾ ನಂಗೆ ತ್ರಿಡಿ ಜೊತೆಗೆ, ಚಳಿ ಗಾಳಿ ಮಳೆನೂ ಫೀಲ್ ಆಗ್ತಿದೆ' ಅಂದೆ. 'ಎ ಸಿ ಅಡಿನಲ್ಲಿ ಕೂತಿದ್ದೀವಿ ಮಗ ' ಅಂದ ಟೇಸ್ಟ್-ಲೆಸ್ ಫೆಲೋ. 

---

ಲೈಫ್ ಆಫ್ ಪೈ ಸಿನಿಮಾದ ಬಗ್ಗೆ ಒಂದು ಪದದಲ್ಲಿ ಹೇಳೋದಾದ್ರೆ, Awesome. ಏನೂ ಅಲ್ಲದಿದ್ದರೂ, ದೃಶ್ಯ-ವೈಭವ ನೋಡುವುದಕ್ಕಾದರು ಒಮ್ಮೆ ನೋಡಬೇಕು. 'ಅಬ್ಬಬ್ಬಾ' ಅನ್ನುವಂತಿದೆ. 

ಸಮುದ್ರ ಅಷ್ಟೊಂದು ರೊಮ್ಯಾಂಟಿಕ್ ಆಗಿರತ್ತಾ; ಅಷ್ಟು ಭಯಂಕರವಾಗಿ ಇರತ್ತಾ; ಅಷ್ಟು ಕಲಾತ್ಮಕವಾಗಿಯೂ ಇರತ್ತಾ; ತೋರಿಸುವ ಮುನ್ನ, ಅದು ಹೇಗೆ ಅಷ್ಟೋಂದು ವಿಷಯಗಳನ್ನು ವಿಷುಯಲೈಸ್ ಮಾಡಿಕೊಳ್ಳುವರು. ಸಿಡಿಯುವ ಸಿಡಿಲು ಆಗಿರಬಹುದು; ಮಗುಚಿ ಹಾಕುವ ಅಲೆಗಳ ರುದ್ರ ನರ್ತನ ಆಗಿರಬಹುದು; ವ್ಯಾಘ್ರ-ಗರ್ಜನೆ ಆಗಿರಬಹುದು; ಅನಂತ ಸಾಗರದ ನೀರವ ಮೌನ ಆಗಿರಬಹುದು; ಮನೋಜ್ಞವಾಗಿ ಕಟ್ಟಿ ಕೊಳ್ಳುತ್ತಾ ಹೋಗತ್ತೆ. ಕಥೆ ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತದೆ. 

ದೇವರನ್ನು ಹುಡುಕುವ ದ್ವಂದ್ವ ಹುಡುಗನ ಮುಗ್ಧ ಫಿಲಾಸಫಿಗಳಿಂದ ಕಥೆ ಪ್ರಾರಂಭ ಆಗತ್ತೆ. ಕ್ರೂರ ಹುಲಿಗೆ ಮಾಂಸದ ತುಣುಕು ನೀಡುತ್ತಾ, ಅದರ ಕಣ್ಣಲ್ಲಿ ಪ್ರತಿಯಾಗಿ ಪ್ರೀತಿಯನ್ನು ಕಾಣ ಬಯಸುತ್ತಾನೆ ಹುಡುಗ. ಹುಡುಗನ ಅಪ್ಪ ಹುಲಿಯ ಮುಂದೆ ಕುರಿ ಕಟ್ಟಿ ಹೇಳ್ತಾನೆ - ' ನೀನು ಆ ಹುಲಿಯಲ್ಲಿ ನೋಡಿದ್ದು, ನಿನ್ನದೇ ಭಾವನೆಗಳ ಪ್ರತಿಬಿಂಬ. ಆದರೆ ಅದು ಹುಲಿ ' ಅಂತ. ಮೊದಲ ಬಾರಿಗೆ ಬೋಟಿನಿಂದ ಚಿಮ್ಮಿ ಹೊರಬರುವ ರಿಚರ್ಡ್ ಪಾರ್ಕರ್(ಹುಲಿ) ತ್ರಿಡಿಯಿಂದಾಗಿ ಮೈ ನಡುಗಿಸಿ ಬಿಡುವನು. ಆದ್ರೆ ಹೋಗ್ತಾ ಹೋಗ್ತಾ ಅದೇ ರಿಚರ್ಡ್ ಪಾರ್ಕರ್, ಮನೆಯ ಸಾಕು ಬೆಕ್ಕಿನಂತೆ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಾನೆ. ಮೊದಲು, ಎಳೆ ಕುರಿಯನ್ನು ಕಚ್ಚಿ ಎಳೆದುಕೊಂಡು ಹೋಗುವಾಗ ರಾಕ್ಷಸನಂತೆ ಅನಿಸುವ ರಿಚರ್ಡ್ ಪಾರ್ಕರ್, ಹಾರುವ ಮೀನುಗಳನ್ನು ಹಿಡಿಯಲಾಗದೇ ಒದ್ದಾಡುವಾಗ 'ಅಯ್ಯೋ ಪಾಪ' ಅನ್ನಿಸುತ್ತದೆ. ರಿಚರ್ಡ್ ಪಾರ್ಕರ್ ಮತ್ತು ಪೈ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋದಂತೆ, ಕಾಡುವ ಪ್ರಶ್ನೆ ಆ ಹುಲಿ ಯಾರು. ? ಎಂಬುದು. 


ದೇವರ ಮೇಲಿನ ಭಯ, ಆ ಹುಲಿಯಂತೆ ಜೊತೆ ಜೊತೆಗಿದ್ದು ನಮ್ಮ ಜೀವನೋತ್ಸಾಹಕ್ಕೆ ಕರ್ತೃ ಆಗಿರುತ್ತಾ. ? ಹೌದಾ. ? ಹಾಗಾದ್ರೆ ನಾವು ದೇವರನ್ನೇ ಪಳಗಿಸುವ ದುಸ್ಸಾಹಸಕ್ಕೆ ಕೈ ಹಾಕಿರ್ತೆವಾ. ? ಹಾಗಾದ್ರೆ ಆ ಹುಲಿ ನಿಜವಾಗಲು 'symbol of spirituality' ನಾ. ? ಕಾಡು ಸಿಕ್ಕ ಮೇಲೆ ಮೈಮುರಿದು, ಸ್ವಲ್ಪವೂ ಭಾವುಕವಾಗದೇ ಕಾಡಿನ ಕಡೆಗೆ ನಡೆದು ಹೋಗುವ ಹುಲಿಯ ಮೇಲೆ, ನಮಗೆ ಕೋಪ ಬರಲ್ಲ. ಹುಲಿಯದ್ದು ಏನೂ ತಪ್ಪಿಲ್ಲ ಅನ್ಸತ್ತೆ. 'ಪೈ' ಮಾತ್ರ ಅಳ್ತಾ ಇರ್ತಾನೆ. ದೊಡ್ದವನಾದಾಗಲೂ ಕೂಡ. ಕೆಲವರಿಗೆ 'ಪೈ' ಬಗ್ಗೆ ಮರುಕ ಉಂಟಾಗತ್ತೆ. 

Comments