Friday, December 27, 2013

ಕುದ್ರು ದ್ವೀಪದಲ್ಲಿ


ನಾವು ಇದ್ದವರು ಒಟ್ಟು ಐದು ಜನ(ಅಭಿ, ರವಿ, ರೂಪಿ, ಶೈಲು ಮತ್ತು ನಾನು). ಮಂಗಳೂರಿನಿಂದ ಪ್ರವಾಸಕ್ಕೆಂದು ಹೊರಟವರು,    ಗೂಗಲ್ ನಲ್ಲಿ ಪತ್ತೆ ಮಾಡಿದ ಒಂದು ದ್ವೀಪವನ್ನು ಹುಡುಕುತ್ತಾ ಕರಾವಳಿ ತೀರದಲ್ಲಿ ಸಮುದ್ರಕ್ಕೆ ಸಮಾನಾಂತರವಾಗಿ ಅಲೆಯುತ್ತಿದ್ದೆವು. GPS, ನೀರಿನ ಮೇಲೆಲ್ಲಾ ದಾರಿ ತೋರಿಸಿದ್ದರಿಂದ, ಕಾರು ದಾರಿ ತಪ್ಪಿತ್ತು.
ಅಂತೂ ದಾರಿಹೋಕರ ಮಾರ್ಗದರ್ಶನದಂತೆ 'ಕುದ್ರು’ ಅನ್ನೋ ದ್ವೀಪಕ್ಕೆ ಬಂದ್ವು. ಎಲ್ಲಿಗೋ ಹೋಗಬೇಕಾದವರು,
ಮತ್ತೆಲ್ಲಿಗೋ ಬಂದು ಸೇರಿದೆವಾದರೂ, ಡೆಸ್ಟಿನಿ ಅನ್ನೋದು ನಮ್ಮನ್ನ ತುಂಬಾ ಒಳ್ಳೆಯ ಜಾಗಕ್ಕೆ ತಂದು
ಹಾಕಿತ್ತು.

ನಾವುಗಳು ಸ್ಕೂಲಲ್ಲಿ ಓದಿರುವ ಪ್ರಕಾರ, ಸುತ್ತಲೂ ನೀರಿನಿಂದ ಆವರಿಸಿರುವ ಮಧ್ಯದ ಯಾವುದೇ ನೆಲಭಾಗವನ್ನು ದ್ವೀಪ ಅಂತ ಕರೀತಾರೆ. ಕುದ್ರು ಅನ್ನೋದು ಹದಿನೆಂಟು ಎಕರೆಯಷ್ಟು ವಿಶಾಲವಾಗಿರುವ ಭೂ ಭಾಗ. ಸುತ್ತಲೂ ಹರಿಯುವುದು ಸೌಪರ್ಣಿಕ
ನದಿ. ಕಲ್ಲೂರಿನಲ್ಲಿ ಹುಟ್ಟುವ ಸೌಪರ್ಣಿಕ ನದಿ, ಮರವಂತೆ ಬೀಚ್ ಹತ್ತಿರ ಮುಂದೆಲ್ಲೋ ಅರಬ್ಬೀ ಸಮುದ್ರವನ್ನು ಸೇರುತ್ತದೆ. ತಾನು ಹರಿಯುವಾಗ ಈ ಪುಟ್ಟ ದ್ವೀಪವನ್ನು ಸೃಷ್ಟಿಸಿದೆ.

ನೀರು ದಾಟಿ ದ್ವೀಪಕ್ಕೆ ಹೋಗಬೇಕೆಂದು ಕಾಯುತ್ತಾ ನಿಂತವರಿಗೆ, ಅಲ್ಲೇ ಇದ್ದ ಒಬ್ಬರು ಮಹಿಳೆಯಿಂದ ಇವಿಷ್ಟು ಇನ್ಫಾರ್ಮೇಷನ್ ಸಿಕ್ತು. ಅಂದರೆ ಇದೊಂದು ಪ್ರವಾಸೀ ತಾಣ ಅಲ್ಲ. ಒಂದು ವಿಭಿನ್ನ ಅನುಭವಕ್ಕಾಗಿ ಬಂದು ನಿಂತವರಿಗೆ, ಅಲ್ಲಿ ಯಾವ ವಿಧವಾದ ಸಹಕಾರ, ಸ್ವಾಗತ ಸಿಗುತ್ತದೆಯೋ ಎಂಬ ಅಂಜಿಕೆಯಿಂದಲೇ ನಿಂತಿದ್ದೆವು.

ನಾವು ಮಾತನಾಡಿಸುತ್ತಿದ್ದ ಅದೇ ಮಹಿಳೆ, ಆಚೆಕಡೆಗೆ ಇದ್ದ ದ್ವೀಪಕ್ಕೆ ದೋಣಿಯಲ್ಲಿ ಕರೆದೊಯ್ಯಲು, ಮುಂದಾದರು.
ಅವರಿಗೂ, ನಮಗೂ ಯಾವುದೇ ರೀತಿಯ ಗುರುತು ಪರಿಚಯವಿಲ್ಲ. ಸೌಜನ್ಯದಿಂದಲೇ ಎಲ್ಲರನ್ನೂ ದೋಣಿಯಲ್ಲಿ ಕೂರುವಂತೆ ಹೇಳಿದರು, ಅತಿಥಿಗಳಿಗೆಂಬಂತೆ. ನಾಲ್ಕು ಜನರು ದೋಣಿಯಲ್ಲಿ ಕುಳಿತ ಮೇಲೆ, ಇನ್ನೊಂದು ಟ್ರಿಪ್ಪಿಗೆ ಹೋಗುವುದೆಂದು ಹೇಳಿ ನನ್ನೊಬ್ಬನನ್ನು ಬಿಟ್ಟು ಹೊರಟರು.

ದೋಣಿ ಅತ್ತ ಕಡೆಗೆ ಹೊರಟ ಮೇಲೆ, ಇಬ್ಬರು ಅಜ್ಜಿಯರು ನಾನು ನಿಂತಿದ್ದಲ್ಲಿಗೆ ಬಂದರು.
ಒಂದು ಅಜ್ಜಿ ಹಣ್ಣಣ್ಣು ಮುದುಕಿ ಅಂತ ಹೇಳಬಹುದು. ಮತ್ತೊಂದು ಅಜ್ಜಿಗೆ
ನಡು-ನೈಂಟಿ-ಡಿಗ್ರಿ-ಬಾಗಿದೆ. ಬಾಡಿರುವ ಜೀವ. ಸೊಟ್ಟಗಿದ್ದ ಅಜ್ಜಿಯನ್ನು ಬಿಟ್ಟು ನೆಟ್ಟಗಿಡ್ಡ ಅಜ್ಜಿಯ ಜೊತೆ ಮಾತಿಗೆ ನಿಂತೆ.

ನಾವು ಯಾರು..? ಯಾತಕ್ಕಾಗಿ ಬಂದದ್ದು ಎಲ್ಲಾ ಕೇಳಿದ ಮೇಲೆ ಅಜ್ಜಿಯು ಮಾತಿಗಿಳಿಯಿತು.

"ಅದೋ!! ಆ ದ್ವೀಪದಲ್ಲಿ ನನ್ನದೂ ಒಂದು ಮನೆ ಇದೆ. ಇವಳು ನನ್ನ ಅಕ್ಕ. ನಮ್ಮ ಮನಿಗೆ ಅಕ್ಕನನ್ನು ಕರ್ಕೊಂಡ್ ಬರೋದಕ್ಕೆ ಊರಿಗ್ ಹೋಗಿದ್ದೆ" ಅಂತು.
ಬೆಂಗ್ಳೂರು ಮಂಗ್ಳೂರಿಂದ  ನಮ್ಮೂರು ನೋಡಕ್ ಬಂದಿರುವ ನನ್ನನ್ನು ನೋಡಿ ಖುಷಿಯಾಗಿರುವುದಾಗಿಯೂ ಹೇಳ್ತು ಅಜ್ಜಿ.

ಸರಿ!! ಅತ್ತ ಕಡೆಯಿಂದ ಬಂತು, ಅವರನ್ನು ಇಳಿಸಿ ಬಂದ ಆ ದೋಣಿ. ಸೀರೆಯ ನೆರಿಗೆ ಗಂಟು ನೆನೆಯದಂತೆ
ಸೊಂಟಕ್ಕೆ ಸಿಕ್ಕಿಸಿಕೊಂಡು, ಅಕ್ಕನ ಭುಜವನ್ನು ಹಿಡಿದು ಮೆಲ್ಲಗೆ ದೋಣಿ ಹತ್ತಿಸಿ, ತಾನೂ
ಹತ್ತಿ ನಿಂತಳು ಅಜ್ಜಿ. ನಾನೂ ಆ ದೋಣಿ ಹತ್ತಿದೆ. ಜೊತೆಗೊಬ್ಬ ಇವರನ್ನು ಕರ್ಕೊಂಡ್ ಬಂದಿದ್ದ ಕಾರ್ ಡೈವರು ಹತ್ತಿದ.

ಈ ಕಡೆಯಿಂದ ದೋಣಿ ಬಿಟ್ಟುಕೊಂಡು ಹೋದ ಮಹಿಳೆ ದೋಣಿ ಬಿಟ್ಟು ಇಳಿದರು. ನಮ್ಮಜ್ಜಿ ದೋಣಿಯ
ಹುಟ್ಟನ್ನು ತನ್ನ ಕೈಗೆ ತೆಗೆದುಕೊಂಡಿತು. ಸೋ, ಈಗ ದೋಣಿ ಚಲಾಯಿಸುವವಳು ನಮ್ಮಜ್ಜಿ .
ಕುಲುಕುವ ದೋಣಿ ಹತ್ತುವಾಗ, ನನಗೆ ಕೊಂಚ ಭಯವಾಗಿದ್ದಂತು ಹೌದು. ಈಗ ಅಜ್ಜಿಯ ಕೈಲಿ ದೋಣಿಯ ಹುಟ್ಟು ನೋಡಿದ
ಮೇಲೆ, ಅದೊಂದು ರೀತಿಯ ಮಿಕ್ಸುಡು ಪೀಲಿಂಗ್ಸು. ಆ ಕ್ಷಣದ ರೋಚಕತೆಯನ್ನು ತಡೆಯಲಾಗಲಿಲ್ಲ.

‘ಅಜ್ಜಿ ನೀನಾ..? ದೋಣಿ ಓಡ್ಸೋದು. ’ ಅಂತ ಕೇಳಿಯೇಬಿಟ್ಟೆ.

ಅದು ಆರಾಮಾಗಿ, ‘ಹೂಂ ನಂದೇ ಇದು ದೋಣಿ. ನಾ ಕೊಡಲ್ಲ ನಿಮಗೆ’ ಅಂತು.

ಅಬ್ಬಬ್ಬಾ!! ಅದೊಂದು ಅಮೇಜಿಂಗ್ ಜರ್ನಿ. ಅಜ್ಜಿಯದು ಗಿನ್ನಿಸ್ ದಾಖಲೆಯಲ್ಲಿ ಬರೆವ ಸಾಧನೆ ಅಲ್ಲದಿರಬಹುದು ಅಥವಾ ಅದೊಂದು ಹೇಳಿಕೊಳ್ಳಲು ಯೋಗ್ಯವಾದುದಂಥಾ ವಿಚಾರವೇ ಅಲ್ಲದಿರಬಹುದು. ಆದರೆ ಆ ಕ್ಷಣ ಅಜ್ಜಿಯಲ್ಲಿದ್ದ ‘ಜೀವನ
ಪ್ರೀತಿ’ ಯನ್ನು ಹತ್ತಿರದಿಂದ ನೋಡಿ ಪುಳಕಗೊಂಡೆ. ಆಚೆ ದಡದಲ್ಲಿ, ಅಂದ್ರೆ ದ್ವೀಪದಲ್ಲಿದ್ದ
ನನ್ನ ಸ್ನೇಹಿತರಿಗೆ ಕೈ ಬೀಸುತ್ತಾ ಸಂಭ್ರಮಿಸಿದೆ.

ತಮ್ಮಲ್ಲಿ ಬೆಳೆವ ಮಕ್ಕಳನ್ನು ನೀರಿಗೆ ಹಾಕಿ; ಈಜು ಕಲಿತು; ದೋಣಿ ಬಿಡುವುದನ್ನು ಕಲಿತ ಮೇಲೆಯೇ ಸ್ಕೂಲಿಗೆ
ಕಳಿಸುವುದಾಗಿ ಹೇಳಿತು. ಅಂದರೆ ಅಜ್ಜಿ ಈಗಲೂ ಬೇಕಾದ್ರೆ ಈಜುತ್ತೇನೆ ಅನ್ನೋ ಅರ್ಥದಲ್ಲಿ ಹೇಳಿದ್ದು.

ದ್ವೀಪ ತಲುಪಿದ ಮೇಲೆ, ಎಲ್ಲಾ ಬಿಟ್ಟು ನಾವು ಅಜ್ಜಿಯನ್ನೇ ಹಿಂಬಾಲಿಸಿದೆವು. ಅದರ ಸ್ಪೀಡ್-ಸ್ಪೀಡ್ ಮಾತುಗಳು; ನಗೆ; ನಾಚಿಕೆ; ಅಕ್ಕನ ಮೇಲಿದ್ದ ಅಂಥಾ ಮಮಕಾರ ಎಲ್ಲವೂ ವಿಶೇಷವೆನ್ನಿಸಿತು. ಒಬ್ಬ ವ್ಯಕ್ತಿಯನ್ನು ಮೆಚ್ಚಲು, ಆ ಕ್ಷಣ ನಮ್ಮ ಚೇತನಕ್ಕೆ ತಾಗುವ
ಇಂತಹಾ ಬಣ್ಣಿಸಲಸದಳವಾದ ಅನುಭವವೇ ಸಾಕು.

----

ತೆಂಗು ಬಾಳೆ ಪ್ರಮುಖವಾಗಿ ಕಾಣುತ್ತಿದ್ದ ಬೆಳೆಗಳು. ಹಸು ಎಮ್ಮೆಗಳೂ ಇದ್ದುವು.
ದ್ವೀಪದಲ್ಲಿ ಒಟ್ಟು ಏಳು ಮನೆಗಳಿವೆ. ಓಪನ್ ಮನೆಗಳು.ಅಂದರೆ ಅರ್ಧಕ್ಕರ್ದ ಮನೆಗೆ ಗೋಡೆ ಇರೋದಿಲ್ಲ. ಹೊರಗೇ ಇರ್ತದೆ.  ಯಾರನ್ನೇ ನೋಡಿದರೂ, ನಗುಮೊಗದ ಆತ್ಮೀಯ ವೆಲ್-ಕಮ್.
‘ಎಂಥ, ದ್ವೀಪ ನೋಡ್ಲಿಕ್ಕೆ. ಬಂದದ್ದಾ. ಎಲ್ಲಿಂದ. ? ಎಂಥ ಮಾಡ್ತಿರದು. ? ‘ ಮುಂತಾದ
ಪ್ರಶ್ನೆಗಳು.

ದ್ವೀಪವನ್ನು ಒಳಗಿಂದಲೇ ಸುತ್ತುತ್ತಾ ನೀರಿಗೆ ಕಾಲು ಬಿಟ್ಟುಕೊಂಡು ಸ್ವಲ್ಪ ಹೊತ್ತು ತಣ್ಣಗೆ ಕುಳಿತೆವು.

ಈ ಮಧ್ಯೆ ಉಲ್ಲಾಸ್ ಕಾರಂತ್ ಎಂಬ ಪೋಸ್ಟ್ ಮ್ಯಾನ್ ಒಬ್ಬರ ಪರಿಚಯವಾಯಿತು. ಅವರ ಮಗ ’
ಪನ್ನಗ ‘ ಮತ್ತು ’ ಮಾಚ ‘ ಎಂಬ ಶ್ವಾನವೂ ನಮ್ಮನ್ನು ಕೂಡಿಕೊಂಡರು.

ಕುಡಿಯೋದಕ್ಕೆ ಎಳನೀರು ಕೊಚ್ಚಿ ಕೊಟ್ರು. ಅಷ್ಟಕ್ಕೇ ಬಿಡದೆ ತಮ್ಮ ದೋಣಿಯಲ್ಲಿ ದ್ವೀಪವನ್ನೆಲ್ಲಾ ಒಂದು ಸುತ್ತು ಹಾಕಲು
ಕರೆದೊಯ್ದರು. ಉದ್ದಕ್ಕೂ. ದ್ವೀಪದಲ್ಲಿನ ಏಕತಾನತೆಯ ಬಗ್ಗೆ ಮತ್ತು ನೆರೆ ಸಂದರ್ಭದ ರೋಚಕ
ಅನುಭವಗಳನ್ನು ಹಂಚಿಕೊಂಡರು.

ಆದರೂ ಮದುವೆ, ಮುಂಜಿ, ಹಬ್ಬ ಜಾತ್ರೆಗಳನ್ನೆಲ್ಲಾ ಹೆಂಗ್ ಸೆಲೆಬ್ರೇಟ್ ಮಾಡ್ತೀರ ಅಂತೆಲ್ಲಾ ಕೇಳಿದ್ದಾಯ್ತು. ನಮ್ಮ ಕುತೂಹಲದ ಅರ್ಥ, ಅಲ್ಲಿರೋರು ಮನುಷ್ಯರೇ ಅಲ್ಲಾ ಅಂತಲ್ಲ. ಆದರೂ ಹೇಗೆಲ್ಲಾ ಮಾಡಬೋದು ಅನ್ನೋದನ್ನ ತಿಳ್ಕೋಳೋ ಆಸೆ.
ಎರಡೆರಡು ದೋಣಿ ಪಕ್ಕ ಕಟ್ಟಿಕೊಂಡು ದಂಡಿಗಟ್ಟಲೆ ಜನ ಸಾಗುಸ್ತೀವಿ ಅಂದ್ರು.

ಮಳೆಗಾಲದಲ್ಲಿ, ನೆರೆ ಬಂದಾಗ ನೀರಿನ ಸೆಳೆತ ಜಾಸ್ತಿ ಇರುತ್ತದೆ. ನೀರಿನ ಮಟ್ಟ ಏರಿ;
ದ್ವೀಪವೆಲ್ಲಾ ಮುಳುಗಿ; ಸಾಲದ್ದಕ್ಕೆ ಎತ್ತರದ ಜಾಗದಲ್ಲಿರುವ ನಮ್ಮ ಮನೆಗಳಿಗೂ ನೀರು ನುಗ್ಗುತ್ತದೆ.

' ಮನೆ ಒಳಗೆ ನೀರು ಬಂದಾಗ. , ಎಲ್ಲಿ ಮಲಗ್ತೀರಿ. ? ’ ಅಂತ ಕೇಳಿದ್ದಕ್ಕೆ ‘ ಅಟ್ಟದ
ಮೇಲೆ ಹೋಗಿ ಮಲಗೋದು. ’ ಅಂದರು, ಅನಾಯಸವಾಗಿ.

ನೆರೆ(ಪ್ರವಾಹ) ಇದ್ದಾಗ, ದ್ವೀಪದ ಉಳಿದ ಮನೆಯವರೊಂದಿಗೆ ಸಂಪರ್ಕ ಸಾಧಿಸಲು, ದೋಣಿಯನ್ನು ಬಳಸುವುದಾಗಿ ಹೇಳಿದರು. ಅಂದ್ರೆ ಒಂದು ಮನೆಯಿಂದ ಮತ್ತೊಂದು ಮನೆಗೆ, ಮರಗಳ ಮಧ್ಯದಿಂದ ದೋಣಿ ಓಡಿಸಿಕೊಂಡು ಓಡಾಡುವುದು.
`ಯೊಪ್ಪಾ..?!!`

ನೀರು ಉಕ್ಕಿ ಹರಿಯುವಾಗ, ಕೊಲ್ಲೂರು ಕಾಡಿನಲ್ಲಿ ಪ್ರಾಣಿಗಳು ನೀರಿಗೆ ಬಿದ್ದು ಸಾಯುತ್ತವೆ. ಅವು ಕೊಚ್ಚಿ ಬಂದು ದ್ವೀಪದಲ್ಲಿ ಬೀಳುತ್ತವೆ. ಕೆಲವೊಮ್ಮೆ ಭಯಂಕರ ಸರ್ಪಗಳು, ಹೆಬ್ಬಾವುಗಳು ನೀರಲ್ಲಿ ಕೊಚ್ಚಿ ಬಂದು; ಮರ ತಬ್ಬಿ ಕೂತು; ನೆರೆ ಇಳಿದ ಮೇಲೆ, ಏನ್ ಮಾಡಬೇಕು ಅಂತ ಗೊತ್ತಾಗದೇ ಕಕ್ಕಾ ಬಿಕ್ಕಿಯಾಗಿ ದ್ವೀಪದಲ್ಲೆಲ್ಲಾ ಓಡಾಡುವುದಿದೆಯಂತೆ.
ಇಂಥವನ್ನೆಲ್ಲಾ ಊಹಿಸಿಕೊಳ್ಳುವಾಗ ದ್ವೀಪದಲ್ಲೇ ಒಂದು ಆನಕೊಂಡ ಸಿನಿಮಾ ನೋಡುತ್ತಿರುವ ಅನುಭವ.

' ಪಟ್ಟಣಗಳಲ್ಲಿ ಕೆಲಸ ಸಿಕ್ಕುತ್ತಿದ್ದಂತೆ, ಒಬ್ಬೊಬ್ಬರಾಗಿಯೇ ದ್ವೀಪವನ್ನು ಬಿಟ್ಟು ಹೊರಡುತ್ತಿದ್ದಾರೆ. ಮೊದಲೆಲ್ಲಾ ಒಂದೊಂದು ಮನೆಯಲ್ಲಿ 25-30 ಜನಗಳು ಇರುತ್ತಿದ್ದರು. ಈಗ ಹೆಚ್ಚೆಂದರೆ, ಮನೆಯಲ್ಲಿ ಐದಾರು ಜನರಿದ್ದಾರೆ. ಈ
ದ್ವೀಪವನ್ನು ಹೋಲ್-ಸೇಲ್ ಆಗಿ ಕೊಂಡು ಕೊಳ್ಳೋದಕ್ಕಂತ ಕೆಲವರು ಬರ್ತಿದಾರೆ. ಒಳ್ಳೆ ರೇಟ್ ಸಿಕ್ಕು ಎಲ್ಲಾ ಮಾರಾಟ ಆದರೆ, ಎಲ್ಲರೂ ದ್ವೀಪ ಬಿಟ್ಟು ಹೊರಟು ಬಿಡ್ತೀವಿ. ' ಅಂದರು.

' ಮಳೆಗಾಲದಲ್ಲಿ ತುಂಬಾ ಕಷ್ಟ ಆಗತ್ತೆ. ಅದೂ ಅಲ್ಲದೇ ಈಗ ನೀರಿಗೆ ಕಟ್ಟೆ ಕಟ್ಟಿರೋದ್ರಿಂದ,
ನೆರೆ ಬಂದಾಗ ನೀರು ಬೇಗ ಇಳಿಯಲ್ಲ. ಮೊದಲು ಜನಗಳಾದರೂ ಜಾಸ್ತಿ ಇದ್ರು. ಧೈರ್ಯಾನು
ಇರ್ತಿತ್ತು. ಈಗೆಲ್ಲಾ ನಾವೇ ಒಂದಷ್ಟು ಜನ. ಎಂಥ ಮಾಡದು ಇಲ್ಲಿ. ಎಲ್ಲೋ ವರ್ಷಕ್ಕೋ ಅಥವಾ
ಎರಡು ವರ್ಷಕ್ಕೋ ದ್ವೀಪ ಬಿಟ್ಟು ಹೋಗಿರೋರು ಬರ್ತಾರೆ. ಸ್ವಲ್ಪ ದಿನ ಆಯಾಸ ಕಳೆಯೋವರ್ಗು
ಇರ್ತಾರೆ. ಆಮೇಲೆ ಹೊರಟು ಬಿಡ್ತಾರೆ. ಈಗೆಲ್ಲಾ ದ್ವೀಪದಲ್ಲಿ ಕೆಲ್ಸ ಮಾಡ್ಸದು ಕೂಡ ಕಷ್ಟ
ಇದೆ. ಆಳುಗಳು ಸಿಗಲ್ಲ ‘ ಎನ್ನುವುದು ಅವರ ಅಂತಃಕರಣ.

ಸಂಜೆಯಾಗುತ್ತಲೂ, ವಾಪಾಸು ಹೊರಡುವಾಗ, ಪುನಃ ಅಜ್ಜಿಯ ಬಳಿ ನಡೆದೆವು. ಅಜ್ಜಿ ‘ ಕಾಫಿ
ಮಾಡಿಕೊಡ್ಲಾ. ’ ಅಂತ ಕೇಳ್ತದೆ. ನೀರು ಮಾತ್ರ. ಕೇಳಿ ಕುಡಿದೆವು.

‘ಬೆಳಿಗ್ಗೆ ಹೋಗಂತೆ. ಇಲ್ಲೇ ಇರ್ರೋ’ ಅನ್ನೋ ಅತ್ಯಂತ ಆದರಣೀಯ ಹಾಸ್ಪಿಟಾಲಿಟಿಯ ಆಫರ್
ಕೂಡ ಬಂತು ಅಜ್ಜಿ ಕಡೆಯಿಂದ. ಇಲ್ಲ ಹೋಗ್ತೀವಿ ಅಂದಾಗ,‘ ನೆರೆ ಬಂದಾಗ ಬನ್ರೋ!!
ಇಲ್ಲೆಲ್ಲಾ. ನೀರಿರ್ತದೆ. ಸುತ್ತಾ ನೀರು ಅಂದ್ರೆ ನೀರೇ; ಚನ್ನಾಗಿರ್ತದೆ. ’ ಅಂತು
ಅಜ್ಜಿ .

ನೆರೆಯನ್ನು ನೆನೆಸಿಕೊಂಡರೂ, ಬೆನ್ನು ಹುರಿಯಲ್ಲಿ ನಡುಕ ಮೂಡುವಾಗ, ಈವಜ್ಜಿ ಅದನ್ನ
ಎಂಜಾಯ್ ಮಾಡೋದೂ ಅಲ್ಲದೇ. ನಮ್ಮನ್ನೂ ಕರೀತ ಇದೆ.

ಅಜ್ಜಿಯನ್ನು ಪುಸಲಾಯಿಸಿ ಒಂದು
ಫೋಟೋಗೆ ಪೋಸ್ ಕೊಡಲು ಕೇಳಿಕೊಂಡೆವು. ಅದು ಕ್ಯಾಮರ ನೋಡಿ ಬಾಳ ನಾಚ್ಕೋತಾದ್ರು,
ಕ್ಲಿಕ್ಕಿಸುವಾಗ ಥೇಟು ರೀಲ್ ಕ್ಯಾಮರಾಗಳ ಕಾಲದ ಪೋಸನ್ನೇ ನೀಡಿತು.

ಅಲ್ಲಿಂದ ಹೊರಟ ಮೇಲೆ, ಮರವಂತೆಯಲ್ಲಿನ ಸೂರ್ಯಾಸ್ತ ನಮ್ಮ ಸುಂದರವಾದ ದಿನಕ್ಕೆ ಮಧುರವಾದ
ತೆರೆ ಎಳಿಯಿತು.

ದೋಣಿಯೊಳಗೆ ಹಾರಲು.. ದ್ವೀಪದ ಸುತ್ತಲೂ ಕಾತುರದಿಂದ ಓಡಾಡಿದ ಮಾಚ*** **** 

Friday, December 20, 2013

ಈ ತುದಿಯಿಂದ ಆ ತುದಿಗೆ

1. 06-09-2010, ಸೋಮವಾರ
---------------------
ಕೆಲಸದಿಂದ ಬಂದಾಗ ಆರು ವರೆಯಾಗಿತ್ತು. ಅಡುಗೆ ಮನೆಗೆ ಹೋದೆ. ಈರುಳ್ಳಿ, ಟಮೋಟ, ಹಸಿ
ಮೆಣಸಿನಕಾಯಿ, ತೊಗರಿ ಬೇಳೆ; ಇಷ್ಟನ್ನ ಕುಕ್ಕರ್ ಒಳಗೆ ಹಾಕಿ; ಎರಡು ಲೋಟ ನೀರು ಸುರಿದು;
ಸ್ಟೌವ್ ಮೇಲಿಟ್ಟೆ. ಕುಕ್ಕರಿನ ಮುಚ್ಚಳವನ್ನೂ, ವಿಷಲ್ ಹಾಕುವ ತೂತನ್ನೂ. ಒಮ್ಮೆ ಉಸಿರು
ಕಟ್ಟಿ ಊದಿ, ಮುಚ್ಚಿದ್ದಾಯ್ತು.

ಐದಾರು ವಿಷಲ್ ಕೂಗುತ್ತಿದ್ದಂತೆ, ಎರಡು ಚಮಚೆ, ಅಮ್ಮ ಮಾಡಿ ಕೊಟ್ಟಿದ್ದ ಸಾಂಬಾರ್ ಪುಡಿ,
ಸ್ವಲ್ಪ ಉಪ್ಪು ; ಇಷ್ಟನ್ನ ಹಾಕಿ; ಮಸೆದು; ಸಾಸಿವೆ ಸಿಡಿಸಿ ಒಗ್ಗರಣೆ ಹಾಕಿದರಾಯ್ತು.
ಎಲ್ಲಿದ್ದರೂ ಮನೆಯದ್ದೇ ರುಚಿಯ ಸಾಂಬಾರು ತಯಾರಾಗುತ್ತದೆ.

ಗ್ಯಾಸ್ ಹೊತ್ತಿಸಿ ಸ್ನಾನಕ್ಕೆಂದು ಹೋದೆ. ಚೆನೈನಲ್ಲಿ ಇರುವಷ್ಟು ಸಮಯ ದಿನಕ್ಕೆರಡು
ಸ್ನಾನ ದಿನಚರಿಯಾಗಿತ್ತು. ಸ್ನಾನ ಮುಗಿಸಿ ಹೊರ ಬಂದಾಗ, ಮನೆಯಿಂದ ಎರಡು ಮಿಸ್ ಕಾಲುಗಳು
ಬಂದಿದ್ದವು. ಆರನೇ ಪ್ರಜ್ಞೆ ಅನ್ನೋದೊಂದು ಮನಸ್ಸೊಳಗೇ ಯಾವಾಗಲೂ ಜಾಗೃತವಾಗೇ
ಇರುತ್ತಿತ್ತು. ‘ ಮನೆಯಿಂದ ಇಂತದೊಂದು ಮಿಸ್ ಕಾಲು ಬರಬಹುದು ’ ಎಂದು ವಿಚಿತ್ರ
ಆಲೋಚನೆಗಳು ತಲೆಯನ್ನು ಬಳಸಿ, ಸುತ್ತಿ ಹೋಗುತ್ತಿದ್ದವು. ತಿರುಗ ಮನೆಗೆ ಫೋನಾಯಿಸಿದೆ.
ಬೆರಳುಗಳು ನಡುಗಿತ್ತಿದ್ದವು. ಅತ್ತ ಕಡೆ ಅಪ್ಪಾಜಿ ಫೋನ್ ರಿಸೀವ್ ಮಾಡಿದರು.

‘ ರಜೆ ಇದ್ದರೆ ಊರಿಗೆ ಬಾss ಪ್ಪ, ಪವನಿ ನಿನ್ನ ನೋಡಬೇಕು ಅಂತಿದ್ದಾನೆ ’ ಅಂದರು.

ಅಪ್ಪಾಜಿನೆ ಫೋನ್ ಮಾಡಿದ ಮೇಲೆ, ಪರಿಸ್ಥಿತಿ ಗಂಭೀರವಾಗಿರುವುದು ಗೊತ್ತಾಯ್ತು.
ಅಷ್ಟರಲ್ಲಿ ಅಜ್ಜಿ, ಅಪ್ಪನಿಂದ ಫೋನ್ ಪಡೆದು, ಮನೆಯಿಂದ ಹೊರ ಬಂದು ಮಾತಾಡೋದಕ್ಕೆ ಶುರು
ಮಾಡಿದರು.

‘ ಅವನು ಉಳಿಯೋದು ಕಷ್ಟ ಇದೆ. ಬಂದುಬಿಡಪ್ಪ ಊರಿಗೆ. ಕೊನೆಯದಾಗಿ ನಿನ್ನ ತಮ್ಮನ ಜೊತೆ
ಸ್ವಲ್ಪ ದಿನ ಕಳೆಯುವಂತೆ. ’

ಅಜ್ಜಿಯ ಧನಿಯಲ್ಲಿ ದುಃಖ ಇದ್ದರೂ, ತುಂಬಾ ಸುಲಭವಾಗಿ ಆ ಮಾತನ್ನ ಅವರು ಹೇಳಿದರು. ಪುನಃ
ಅಮ್ಮನ ಬಾಯಲ್ಲೂ, ಅದೇ ಮಾತನ್ನ ಕೇಳೋ ಆಸೆ ಇರಲಿಲ್ಲ. ಯಾಕಂದರೆ, ಅವಳು ಅಜ್ಜಿಯಂತೆ,
ಮನೆಯಿಂದ ಹೊರ ನಡೆದು ಬಂದು ಮಾತನಾಡುವಷ್ಟು ಅದೃಷ್ಟವಂತೆಯಾಗಿರಲಿಲ್ಲ.

ಒಂದು ಸಣ್ಣ ಅವಘಡದಲ್ಲಿ ಕಾಲಿನ ಮೂಳೆ ಮುರಿದಿದ್ದರಿಂದ, ಬ್ಯಾಂಡೇಜು ಸುತ್ತಿದ್ದ
ಕಾಲನ್ನು ಚಾಚಿಕೊಂಡು ಮಂಚದ ಮೇಲೆಯೇ ಮಲಗಿರುತ್ತಿದ್ದಳು. ತಮ್ಮನ ಮಗ್ಗುಲಲ್ಲೇ ಸದಾ
ಕಾಯುತ್ತಾ ಮಲಗಿರುವ, ಅನಿವಾರ್ಯತೆಯು ಸೃಷ್ಟಿಯಾಗಿದ್ದು ಕಾಕತಾಳೀಯ ಮಾತ್ರವಾಗಿತ್ತು.

ಅಧಿಕೃತ ಕರೆ ಬಂದ ಮೇಲೆ, ಗ್ಯಾಸ್ ಬಂದ್ ಮಾಡಿ; ಸಿಕ್ಕ-ಷ್ಟು ಬಟ್ಟೆ ಬ್ಯಾಗಿಗೆ
ತುಂಬಿಕೊಂಡು ಹೊರಟೆ. ಮತ್ತೆ ಮನೆಯಿಂದ ಕಾಲ್ ಬಂತು.

‘ ಗಾಬರಿ ಮಾಡ್ಕೋಂಡ್ ಬರಬೇಡ; ಆರಾಮಾಗಿ ಬಾ; ಅಂಥಾದ್ದೇನಿಲ್ಲ; ಹುಷಾರಿಲ್ವಲ್ಲಾ.
ಸ್ವಲ್ಪ ದಿನ ಜೊತೆನಲ್ಲಿ ಇದ್ದರೆ; ಚೆನ್ನಾಗಿರ್ತಿತ್ತು ಅಂತ; ಅಷ್ಟೆ. ’ ಒಂದೊಂದು
ಒಕ್ಕಣೆಗೂ ಎರಡೆರಡು ಸೆಕೆಂಡ್ ಪಾಜ್ ಕೊಟ್ಟು ಹೇಳುವರು. ಅವರು ಅಷ್ಟಾಗಿ ನನ್ನನ್ನು
ಸಂತೈಸುವ ಅಗತ್ಯವಿರಲಿಲ್ಲ.

* * * * *

2. ಚೆನೈ ಇಂದ ಹೊನ್ನವಿಲೆ ಕಡೆಗೆ
---------------------------

ರಾತ್ರಿ ಹನ್ನೊಂದು ಘಂಟೆ. ಚನೈನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ರೈಲುಗಾಡಿ
ಸಂಪೂರ್ಣವಾಗಿ ತುಂಬಿ ಹೋಗಿತ್ತಾದರೂ, ಕಿಟಕಿಯ ಬಳಿ ಸೀಟು ಪಡೆದುಕೊಳ್ಳುವಲ್ಲಿ
ಯಶಸ್ವಿಯಾಗಿದ್ದೆ. ಇನ್ನು, ಬೆಂಗಳೂರು ಬರೋ ವರೆಗೂ ಯಾರೂ ಅಲ್ಲಾಡುವಂತಿಲ್ಲ. ಟಾಯ್ಲೆಟ್
ಬಂದವರೂ ಎದ್ದು ಹೋಗುವಂತಿಲ್ಲ.

ಇಪ್ಪತ್ತು ವರ್ಷ ಪ್ರಾಯದ ತಮ್ಮನಿಗೆ ಸೀರಿಯಸ್ಸು. ನಾನು ಅವನನ್ನ ನೋಡೊದಕ್ಕೆ ಹೋಗ್ತಾ
ಇದೀನಿ. ಹುಟ್ಟಿನಿಂದಲೂ ಹೃದಯರೋಗಿ ಅವನು. ಮೂರು ವರುಷಗಳ ಹಿಂದೆ, ಖ್ಯಾತ ಹಾರ್ಟ್
ಆಸ್ಪತ್ರೆಯೊಂದರಲ್ಲಿ ಹಾರ್ಟ್-ಆಪರೇಷನ್, ಮಾಡಿಸಿಕೊಂಡು ಬಂದಿದ್ದರು(ಹಂಗಂತ
ಹೇಳಿದ್ದರು). ತದನಂತರ, ಅವನು ಸಂಪೂರ್ಣ ಗುಣನಾದನು ಎಂಬ ಭ್ರಮೆಯಲ್ಲಿ ನಾನೂ ಇದ್ದೆ.

‘ ಅವನಿನ್ನೂ ಚಿಕ್ಕ ಹುಡುಗ ಅಲ್ಲವಾಗಿಯೂ; ತನ್ನ ಕಾಲ ಮೇಲೆ ನಿಂತು ’ ಸ್ವಾವಲಂಬಿ ‘
ಯಾಗಬೇಕಾದಲ್ಲಿ, ಸ್ವಲ್ಪಮಟ್ಟಿಗಾದರು ಎಜುಕೇಷನ್ ಅನಿವರ್ಯವೂ. ’ ಎಂದೆಲ್ಲಾ ವಿವರಿಸಿ,
‘ಪವಿ ’ ಯನ್ನು ಹೈಸ್ಕೂಲಿಗೆ ಕಳುಹಿಸುವಂತೆ ಪಟ್ಟು ಹಿಡಿದೆ.

ಅವನಿಗೂ ಸ್ಕೂಲು-ಕಾಲೇಜಿನ ಕಲ್ಪನೆಗಳು ಅತೀವವಾಗಿ ಸೆಳೆದಿದ್ದವು.

ನನ್ನ ಮಾತಿಗೆ ಮನೆಯವರು ಸೊಪ್ಪು ಹಾಕಲಿಲ್ಲ. ಹಳ್ಳಿಯಿಂದ ದೂರವಿದ್ದ ಹೈಸ್ಕೂಲಿಗೆ
ಯಾವುದೇ ಕಾರಣಕ್ಕೂ ಕಳುಹಿಸುವುದಿಲ್ಲವಾಗಿ ಹೇಳಿದರು.

ನಾನು ಓದುತ್ತಿದ್ದ ಮೈಸೂರಿನ ಕಾಲೇಜಿನ ಪಕ್ಕದಲ್ಲಿ ಒಂದು ಅಂಗವಿಕಲರ ಡಿಪ್ಲೋಮಾ ಕಾಲೇಜು
ಇತ್ತು. ಅದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ‘ಅಲ್ಲಿ ಎಂಥೆಂತ ಊನತೆ ಇದ್ದವರೂ, ಅಷ್ಟು
ಆಶಾವಾದದಿಂದ ಕಲಿತು ಬಾಳುತ್ತಿರುವಾಗ, ಇವನನ್ನ ಮನೆಯಲ್ಲಿಯೇ ಇಟ್ಟುಕೊಳ್ಳುವುದು ತಪ್ಪು
’ ಮುಂತಾಗಿ.

ಆ ದಿನಗಳಲ್ಲಿ ಪವಿಯ ಆರೋಗ್ಯ ಸಮಸ್ಯೆಯ ಆಳ-ಅರಿವುಗಳ ಕಲ್ಪನೆ ನನಗಿರಲಿಲ್ಲ. ಅಮ್ಮ,
ಪವಿಗಾಗಿರುವ, ಹಾರ್ಟ್ ಆಪರೇಷನ್ ಪ್ರಸಂಗ ಕೇವಲ ಒಂದು ನಾಟಕವಾಗಿಯೂ; ಅವನ ಹೃದಯ, ರಿಪೇರಿ
ಮಾಡಲಾಗದಷ್ಟು ಹದಗೆಟ್ಟಿದೆಯೆಂದೂ; ತನ್ನ ಜೀವನದ ಕೊನೆಯ ದಿನಗಳನ್ನು
ಬದುಕುತ್ತಿರುವುದೆಂದೂ ತಿಳಿಸಿದ ಮೇಲೆ ನನಗಾದ ದಿಗ್ಭ್ರಮೆ ಅಷ್ಟಿಷ್ಟಲ್ಲ.

ನನ್ನ ಕಣ್ಣಿಗೆ ಕಾಣುವ ಪ್ರಪಂಚಕ್ಕೂ ಮತ್ತು ಎಂದೆಂದಿಗೂ ನನಗೇ ಅರ್ಥವೇ ಆಗಲಾರದ
ಮತ್ತೊಂದು ಪ್ರಪಂಚಕ್ಕೂ ಬಹಳ ಅಂತರವಿತ್ತು.

-   ನನ್ನದೇ ಆರ್ಗುಮೆಂಟ್ಸ್ ಗಳನ್ನ ನೆನೆಸಿಕೊಂಡು, ನಾನೆಷ್ಟು ತುಚ್ಚನೆಂಬುದಾಗಿ ನನ್ನ
    ಮೇಲೆಯೇ ಮೂಡಿದ ಅಸಹ್ಯ ಭಾವವೂ;

-   ಇಷ್ಟೆಲ್ಲಾ ನೋವು-ಸಂಕಟಗಳನ್ನು ಒಳಗೆ ಇಟ್ಟುಕೊಂಡು, ಯಾರೊಂದಿಗೂ ಹಂಚಿಕೊಳ್ಳಲಾಗದೆ
    ನರಳುತ್ತಿದ್ದ ಅಪ್ಪ, ಅಮ್ಮನ ಮೇಲೆ ವಿಷಾದ ಮಿಶ್ರಿತ ಹೆಮ್ಮೆಯೂ;

-   ನಗುನಗುತ್ತಾ ಓಡಾಡುವ ಪವಿಯನ್ನು ನೋಡುವಾಗ, ಬದುಕಿನ ಅಸಹಾಯಕತೆಯ ಬಗ್ಗೆ
    ಮೂಡುತ್ತಿದ್ದ ಖಿನ್ನತೆಯೂ;

ಎಲ್ಲವೂ ಕಲಸುಮೆಲೋಗರ.

ರೈಲಿನ ಒಳಾಂಗಣಕ್ಕೆ ಬೆನ್ನು ಮಾಡಿಕೊಂಡು, ಮುಖಾದಿಯಾಗಿ ಸಂಪೂರ್ಣ ಕಿಟಕಿಯ ಕಡೆಗೆ
ತಿರುಗಿ ಕುಳಿತಿದ್ದೆ. ಬಹುಷಃ ‘ ಭಾವನೆಗಳನ್ನು ಅದುಮಿಕೊಳ್ಳಲಾಗದೆಯೇ ಸುರಿಯುತ್ತಿದ್ದ
ಕಣ್ಣೀರನ್ನು ಇತರರು ಗಮನಿಸಬಾರದು ’ ಎಂಬುದು ನನ್ನ ಉದ್ದೇಶವಾಗಿತ್ತು. ತುಂಬಾನೆ
ದುಃಖದಲ್ಲಿದ್ದೇನೆ. ಅವನನ್ನು ನೆನೆಪಿಸಿಕೊಂಡ ತಕ್ಷಣ ಬರುತ್ತಿದ್ದ, ಅಳುವಿನ ಹೊರತಾಗಿ ಆ
ಮೂಲೆಯಲ್ಲಿ ಕುಳಿತು ಏನೂ ಮಾಡುವಂತಿರಲಿಲ್ಲ.

‘ ಚೆನೈ ಸಿಟಿಯ ಮಧ್ಯದಲ್ಲಿಯೇ ಇದ್ದ ಕಪಾಲೇಶ್ವರ ದೇವರ ಬಳಿ, ಏನನ್ನು ಕೇಳಿಕೊಂಡರೂ, ಅದು
ನೆರವೇರುತ್ತದೆ ’ ಎಂಬುದಾಗಿ ಕಲ್ಕತ್ತೆಯ ಸಹೋದ್ಯೋಗಿ ಗೆಳತಿ ಮೋಮಿತ ಹೇಳುತ್ತಿದ್ದಳು.

‘ ತನಗೆ ಮತ್ತು ತನ್ನ ಗೆಳತಿಗೆ, ಕಲ್ಕತ್ತೆಗೆ ದಿಢೀರ್ ವರ್ಗಾವಣೆಯಾಗಬೇಕೆಂಬುದಾಗಿ ’
ಕಪಾಲೇಶ್ವರ ದೇವರ ಬಳಿ ಕೇಳಿಕೊಂಡಾಗ, ದೇವರು ತನ್ನ ಗೆಳತಿಗೆ ವರ್ಗಾವಣೆಯ ಸೌಭಾಗ್ಯ
ದಯಪಾಲಿಸಿ, ತನಗೆ ಕೈ ಕೊಟ್ಟಿದ್ದ.

‘ ನಾವು ಬೇರೆಯವರಿಗಾಗಿ ಏನನ್ನಾದರು ಕೇಳಿಕೊಂಡರೆ ಮಾತ್ರ ಅದು ನೆರವೇರುತ್ತದೆ ’
ಎಂಬುದಾಗಿ ದೇವರ ಈ ಪಕ್ಷಪಾತಿ ನಿರ್ಧಾರಕ್ಕೆ ತಾನೇ ಸಮಜಾಯಿಷಿಯನ್ನೂ ನೀಡುವಳು.

‘ ಹಂಗಾದರೆ, ಇದೇ ತರದ ಬೇಡಿಕೆಯನ್ನ ನಿನ್ನ ಗೆಳತಿಗೂ ಕೇಳಿಕೊಳ್ಳುವಂತೆ ಹೇಳು. ’
ಎಂಬುದಾಗಿ ಸಲಹೆ ನೀಡಿದಾಗ ‘ ನೋ, ಐ ಯಾಮ್ ನಾಟ್ ಸಪ್ಪೋಸ್ ಟು ಸೇ ದಟ್ ಟು ಹರ್. ಶ್,
ಗಾಡ್ ಈಸ್ ಲಿಸನಿಂಗ್. ’ ಎನ್ನುವಳು. ಇಷ್ಟರ ಮಟ್ಟಿಗೆ ದೇವರು ‘ ಆನ್ಸರಬಲ್ ’ ಅನ್ನೋ
ವಿಷಯ ತಿಳಿದು, ನಗು ಬಂದಿತ್ತು.

ನಡಿ ಹತ್ಲಾಗೆ ಅಂತ, ಭಾನುವಾರವಷ್ಟೇ ಆ ಕಪಾಲೇಶ್ವರ ದೇವಸ್ಥಾನಕ್ಕೆ ಹೋಗಿ ಬಂದಿದ್ದೆ.
ದೇವರು ಅಂದ್ರೆ ಶುದ್ಧ ಹೃದಯದ ಒಂದು ಆತ್ಮ, ಎಂಬುದಾಗಿ ನಂಬುತ್ತೇನಾದರೂ, ಆತನಿಗೆ
ಅತೀಂದ್ರೀಯ ಶಕ್ತಿಗಳು ಇರುತ್ತವೆ ಎಂಬುದನ್ನು ವಿರೋಧಿಸುವೆನು.

ಆದರೂ ಪ್ರಸ್ತುತ, ನನ್ನ ಆತ್ಮ ಸಂತೋಷಕ್ಕಾಗಿ, ತಮ್ಮನ ಆರೋಗ್ಯ ವೃದ್ಧಿಗಾಗಿ,
ಕಪಾಲೇಶ್ವರನ ಮುಂದೆ ಹಣ್ಣು, ಹೂವು, ಕಾಯಿ ಹಿಡಿದು ಕ್ಯೂನಲ್ಲಿ ನಿಂತೆ.

‘ ನಿನ್ನದೇ ಸೃಷ್ಟಿ ಯ ಒಂದು ಜೀವ, ತಿಂಗಳುಗಳಿಂದ ಅನ್ನಾಹಾರ, ನಿದ್ರೆ ಬಿಟ್ಟು
ನರಳುತ್ತ್ತಿದೆ. ನಿನ್ನ ಹತ್ತಿರ ತುಂಬಾ ಅಂತೇನು ಕೇಳಿಕೊಳ್ಳೋದಿಲ್ಲ. ಅವನು ಹೊಟ್ಟೆ
ತುಂಬಾ ಊಟ ಮಾಡಬೇಕು. ಕಣ್ತುಂಬಾ ನಿದ್ದೆ ಮಾಡಬೇಕು. ’

ಅದಕ್ಕಿಂತ ಹೆಚ್ಚಿಗೆ., ಏನನ್ನ ಕೇಳಬೇಕು ಅನ್ನೋದು ತೋಚಲಿಲ್ಲ.

* * * * *

3. ಆ ದಿನ ಜನಶತಾಬ್ಧಿ ರೈಲು ಇರ್ಲಿಲ್ಲ
--------------------------------

ಬೆಳಗಿನ ಜಾವ ಐದು ಘಂಟೆ. ಬೆಂಗಳೂರು ರೈಲ್ವೇ ಸ್ಟೇಷನ್ನಲ್ಲಿ. ಜನಶತಾಬ್ಧಿ ರೈಲಿಗೆ
ಟಿಕೇಟು ಪಡೆಯಲೆಂದು ಸಾಲಿನಲ್ಲಿ ನಿಂತೆ. ಮನೆಯಿಂದ ಫೋನ್ ಬಂತು.

ಕಾಲ್ ರಿಸೀವ್ ಮಾಡುವಾಗ ಆದಂತಹ ತಲ್ಲಣವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ.

‘ ಸ್ಟ್ರಾಂಗ್ ಆಗಿ ಇರಬೇಕು ’ ಅಂತಾರೆ, ಆದರೆ ಆಗುದಿಲ್ವೇ

ಉಸಿರು ಬಿಗಿ ಹಿಡಿದು ರಿಸೀವ್ ಮಾಡಿದೆ. ಹಲೋ ಅಂತಲೂ ಹೇಳದೆ, ಫೋನನ್ನು ಕಿವಿಗೆ ಒತ್ತಿ
ಹಿಡಿದು ನಿಂತೆ. ಅ ಕಡೆಯಿಂದ ಅಪ್ಪ,

‘ ಹಲೋ, ಚೇತನ ಎಲ್ಲಿದಿಯಾ ..? ಬೆಂಗ್ಳೂರಿಗೆ ಬಂದ್ಯಾ ..? ’ ಅಂದರು.

‘ ಹಾ, ಬಂದೆ. ಬೆಂಗ್ಳೂರಲ್ಲಿದೀನಿ. ಏನಕ್ಕೆ ಫೋನ್ ಮಾಡಿದ್ದು. ’ ಅಂದೆ

‘ ಹೇ, ಏನಿಲ್ಲ; ಬರ್ತಾ ಇದಿಯೋ; ಎಲ್ಲಿದಿಯೋ. ..? ಅನ್ನೋದನ್ನ ಕೇಳೋದಕ್ಕೆ ಫೋನ್
ಮಾಡ್ದೆ. ಅಲ್ಲೇ ಏನಾದ್ರು ಹೊಟ್ಟೆಗೆ ತಿಂದು, ಟ್ರೈನ್ ಹತ್ತು. ’ ಎಂದು ಹೇಳಿ ಕಾಲ್ ಕಟ್
ಮಾಡಿದರು.

‘ ಇಲ್ಲ, ಏನೂ ಆಗಿಲ್ಲ, ’ ಎಂಬುದಾಗಿ ನಾನೇ ಕನ್ವೀನ್ಸ್ ಮಾಡಿಕೊಂಡ ಮೇಲೆ ಉಸಿರಾಟ
ನಿರಾಳವಾಯಿತು.

ಆ ದಿನ ಜನಶತಾಬ್ದಿ ರೈಲು ಇಲ್ಲವೆಂದರು. ಬಸ್ ಜರ್ನಿ ತುಂಬಾ ಹೊತ್ತು ಹಿಡಿಯುತ್ತದೆಂದು,
ಆರು ವರೆಗೆ ಇದ್ದ ಶಿವಮೊಗ್ಗ ಪ್ಯಾಸೆಂಜರ್ ರೈಲುಗಾಡಿಗೆ ಟಿಕೇಟು ಪಡೆದು ಪ್ಲಾಟ್-ಫಾರಂ
ಕಡೆಗೆ ಹೋದೆ.

* * * * *

4. ಆನೆ ನಡೆದದ್ದೇ ದಾರಿ
--------------------

ನಾವು ಗೆಳೆಯರೆಲ್ಲಾ ಬಿಳಿಗಿರಿರಂಗ ಬೆಟ್ಟದಲ್ಲಿದ್ದ ‘ ವಿಶ್ವಶಾಂತಿನಿಕೇತನ ’
ಆಶ್ರಮಕ್ಕೆ ಹೋಗಿದ್ದೆವು. ನಮ್ಮಲ್ಲಿ ಯಾರಿಗೂ ಆಧ್ಯಾತ್ಮದ ಬಗ್ಗೆ ಆಸಕ್ತಿ ಇರಲಿಲ್ಲ.
ತಪ್ಪಾಗಿ; ಬೇಸಿಗೆಯಲ್ಲಿ ಬೆಟ್ಟಕ್ಕೆ ಹೋಗಿ; ಮಾಡಲು ಕೆಲಸವಿಲ್ಲದೇ; ನೋಡಲು
ತಾಣಗಳಿಲ್ಲದೇ; ಅಚಾನಕ್ಕಾಗಿ ನಮ್ಮ ಪಯಣ ವಿಶ್ವಶಾಂತಿನಿಕೇತನದಲ್ಲಿ ಕೊನೆಯಾಗಿತ್ತು.

ಧ್ಯಾನದಲ್ಲಿದ್ದ ಸ್ವಾಮಿಗಳ ಜೊತೆಗೆ ಆಧ್ಯಾತ್ಮ, ದೇವರು, ನಂಬಿಕೆ ಇತ್ಯಾದಿಯಾಗಿ
ಚರ್ಚೆಗಳು ನಡೆಯುತ್ತಿದ್ದವು.

ನಾವು ಏನೇ ಕೇಳಿದರು ಸ್ವಾಮಿಗಳು

‘ ಪ್ರಾರಬ್ಧ ಕರ್ಮ ’, ಹಿಂದಿನ ಜನ್ಮದ ‘ ಪಾಪ ಪುಣ್ಯಗಳು’ ಇಷ್ಟನ್ನೇ ಇಟ್ಟುಕೊಂಡು
ಎಲ್ಲವನ್ನೂ ವಿವರಿಸುತ್ತಿದ್ದರು.

ಹಂಗಾದ್ರೆ ‘ ನಿಸ್ವಾರ್ಥ ಪ್ರೀತಿ, ಅನ್ನೋದೆಲ್ಲಾ ಇರೋದೇ ಇಲ್ವಾ ..? ’ ಅಂದರೆ ‘ ಇಲ್ಲ
’ ಎನ್ನುವರು.

‘ ಅಪ್ಪ, ಅಮ್ಮ ಅಷ್ಟು ಪ್ರೀತಿಯಿಂದ ಮಕ್ಕಳನ್ನು ಯಾಕೆ ನೋಡ್ಕೋತಾರೆ ..? ’ ಅಂತ
ಕೇಳುದ್ರೆ

‘ ಕೊನೆಗಾಲದಲ್ಲಿ ನೀವು ಅವರಿಗೆ ಆಸರೆಯಾಗ್ತೀರಿ ಅನ್ನೋ ಲೆಕ್ಕಾಚಾರ ಇರುತ್ತೆ ’
ಅಂತಾರೆ. ನನಗೂ ತಲೆ ಕೆಟ್ಟೋಯ್ತು.

‘ ಹಂಗಾದ್ರೆ ಒಂದು ಖಾಯಿಲೆಯಿಂದಲೇ ಹುಟ್ಟಿದ ಮಗು; ಅಥವಾ ಅಂಗವಿಕಲ ಮಗು; ಅದು
ಬದುಕಿರುವವರೆಗೂ ಯಾವುದೇ ಕಾರಣಕ್ಕೂ ತಮಗೆ ಉಪಯೋಗಕ್ಕೆ ಬರಲ್ಲ; ಅನ್ನೋದು ಅಪ್ಪ
ಅಮ್ಮನಿಗೆ ಗೊತ್ತು. ಆದರೂ ಆವರು ಅದನ್ನ ಸಾಕ್ತಾರೆ, ಬೆಳೆಸ್ತಾರೆ, ಪ್ರೀತಿಸ್ತಾರೆ.
ಇಲ್ಲಿ ಯಾವ ವಿಧದ ಲೆಕ್ಕಾಚಾರ ಇರತ್ತೆ ’ ಎಂಬುದು ನನ್ನ ಪ್ರಶ್ನೆಯಾಗಿತ್ತು.

‘ ಸಮಾಜಕ್ಕೆ ಹೆದರಿ ಅವರು ಮಗುವನ್ನು ಬೆಳೆಸ್ತಾರೆ. ಅಂಥಾ ಮಗುವನ್ನು ನೋಡ್ಕೊಳ್ಳಿಲ್ಲ
ಅಂದರೆ, ಎಲ್ಲಿ ಈ ಸಮಾಜ ಆಡಿಕೊಳ್ಳುತ್ತೋ ಅನ್ನೋ ಭಯದಲ್ಲಿ, ಸಂಕೋಚದಲ್ಲಿ ಮಗುವನ್ನು
ಬೆಳೆಸುತ್ತಾ ಹೋಗ್ತಾರೆ. ’

ಇಲ್ಲ, ಒಪ್ಪಿಕೊಳ್ಳಲಾಗಲಿಲ್ಲ. ಈ ವಯ್ಯಂದು ಒಳ್ಳೆ ಕಥೆಯಾಯ್ತಲ್ಲ ಅಂತ ತಲೆ ಕೆರ್ಕೊಂಡು
ಅಲ್ಲಿಂದ ಬಂದಿದ್ದಾಯ್ತು.

ಈ ಮಾತುಕಥೆಗಳನ್ನೇ ಆಧಾರವಾಗಿಟ್ಟುಕೊಂಡು ‘ ತೀರದ ಹುಡುಕಾಟ ’ ಅನ್ನೋ ಕಥೆ ಬರೆದೆ.
ಅಲ್ಲಿ ಕೂಡ ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸಿಕೊಂಡು, ಮನೆಯವರ ಮುಂದೆ ಸೋತು ಕಥೆ
ಮುಗಿಸಿದೆ.

‘ ಈ ಮಟೀರಿಯಲಿಸ್ಟಿಕ್ ಪ್ರಪಂಚ ಕೊಡಬಹುದಾದ ಯಾವುದನ್ನೂ ಆತ, ಅವರಿಗೆ ಕೊಡಲು
ಸಾಧ್ಯವಿರಲಿಲ್ಲ ’ ಎಂಬುದು ಗೊತ್ತಿದ್ದರೂ, ಅಪ್ಪ-ಅಮ್ಮ, ಪವಿಯನ್ನು ಮುದ್ದಿನಿಂದ
ಸಾಕುತ್ತಿದ್ದರು.

‘ ನಾನ್ ವೆಜ್ ’ ಹಬ್ಬದ ದಿನಗಳಲ್ಲಿ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಕುಳಿತು ಕುಡಿಯುವರು.

‘ ಅಯ್ಯೋ, ಡಾಕ್ಟರ್ ಹೇಳಿದಾರೆ, ಅವನ ಆರೋಗ್ಯ ಹಾಳಾಗುತ್ತೆ ’ ಅಂತ ಅಮ್ಮ ಅಡ್ಡಗಾಲು
ಹಾಕುವಾಗ,

‘ ಹೇಯ್, ಡಾಕ್ಟರು ಹೇಳ್ದಂಗ್ ಕೇಳ್ತಾ ಹೋದ್ರೆ ಆಯ್ತಲ್ಲಾ ಕಥೆ. ಅವರು ಹೇಳ್ತಾರೆ
ಇವನನ್ನ ನಡೆಸಬೇಡಿ; ಹಾಸಿಗೆಯಿಂದ ಏಳಿಸಲೇಬೇಡಿ; ಏನೂ ಮಾಡಿಸಬೇಡಿ; ಹಂಗ್ ಸಾಕಿದ್ರೆ
ನನ್ನ ಮಗ ಬದುಕೋದು ಯಾವಾಗ, ’ ಎನ್ನುವರು.

‘ ನನ್ನ ಮಗ ಇಂತದ್ದು ಬೇಕು ಅಂದರೂ ಸಾಕು, ಅದನ್ನ ಕೊಡುಸ್ತೀನಿ. ’ ಅಂತ ಅಪ್ಪ ಯಾರ
ಮುಂದೇನಾದ್ರು ಹೇಳಿಕೊಳ್ಳುವಾಗ.,

‘ ಅಕಸ್ಮಾತ್ ಅವನು ಆಕಾಶದಲ್ಲಿ ಹಾರಾಡೋ ಹೆಲಿಕಾಪ್ಟರ್ ಕೇಳುದ್ರೆ, ಇವರು ಕೊಡುಸ್ತಾರ
..? ’ ಅನ್ನೋ ಡೌಟ್ ಬಂದು ನಗ್ತಿದ್ದೆ.

ಅವನೂ ಕೂಡ, ಇಂತದ್ದೇ ಬೇಕು ಅಂತ ಹಠ ಹಿಡಿಯೋ ಸ್ವಭಾವದವನಾಗಿರಲಿಲ್ಲ. ಆಗಲ್ಲ, ಅಂತ
ಅವನನ್ನು ಓಲೈಸೋದು ತುಂಬಾ ಸುಲಭ ಆಗಿದ್ದರೂ ಕೂಡ, ಯಾವುದಕ್ಕೂ ಕಾಂಪ್ರಮೈಸ್ ಆಗದ
ರೀತಿಯಲ್ಲಿ ನೋಡಿಕೊಳ್ಳುವರು. ಕೇಳಿ, ಕೇಳಿದ್ದನ್ನ ಕೊಡಿಸುವರು. ತಾನು ಇಷ್ಟ ಪಟ್ಟ
ರೀತಿಯಲ್ಲಿ, ಬದುಕಲು ಬಿಟ್ಟರು.

ಅವನ ಜೀವನ ಟ್ರಾಫಿಕ್ಕಲ್ಲಿ ಹೋಗ್ತಾ ಇರೋ ಆಂಬುಲೆನ್ಸ್ ರೀತಿ. ಯಾವ ಸಿಗ್ನಲ್-ಗಳಿಗೂ
ನಿಲ್ಲಿಸುವಂತಿಲ್ಲ. ಸುತ್ತಮುತ್ತ ಇದ್ದವರು; ಸಂಬಂದವಿಲ್ಲದಿದ್ದರೂ ತಾವಾಗಿಯೇ ದಾರಿ
ಬಿಟ್ಟು ಕೊಡುವರು. ಅದೊಂದು ರೀತಿಯ ಪ್ರಿವಿಲೈಜಡ್ ಲೈಫು.

ಆದರೆ ದೊಡ್ಡವನಾದಂತೆ, ಮುದ್ದು-ಮುದ್ದಾದ ಮುಖದ ಮೇಲೆ ಮೂಡುತ್ತಿದ್ದ ಚಿಗುರು ಮೀಸೆಯು,
ಪ್ರಪಂಚದ ವಿಕಾರತೆಯನ್ನೂ ಅರ್ಥಮಾಡಿಕೊಳ್ಳುವ ಹಂತಕ್ಕೆ ಮೆಚೂರ್ ಆಗ್ತಾ ಹೋಯ್ತು.

ಪವಿಯ ಸ್ನೇಹಿತರಲ್ಲಿ ಯಾರೋ ‘ ನೀನೀಗ ಚಿಕ್ಕ ಹುಡುಗ ಅಲ್ಲ, ದೊಡ್ಡೋನು; ಕೊನೆವರೆಗೂ
ಅಪ್ಪ-ಅಮ್ಮನ ಹಂಗಲ್ಲಿ ಹಿಂಗೇ. ಬದುಕಿರಬೇಕು; ನಿನ್ನ ಕೈಲಿ ಏನೂ ಕೆಲಸ ಮಾಡೋದಕ್ಕೆ
ಆಗಲ್ಲ; ವೇಸ್ಟ್ ಬಾಡಿ; ’ ಎಂದೆಲ್ಲಾ ವಿಧವಿಧವಾಗಿ ಹಂಗಿಸಿದ್ದಾರೆ.

ಪವಿ, ತುಂಬಾ ಸೂಕ್ಷ್ಮ ಸ್ವಭಾವದವನು. ಆ ಮಾತುಗಳ, ಆಳ ಅಗಲಗಳನ್ನು ಬಹುವಾಗಿ
ಪರಾಮರ್ಶಿಸಿದ್ದಾನೆ. ಊಟ, ತಿಂಡಿ ಬಿಟ್ಟು ಒಂದೇ ಸಮನೆ ಅಳುತ್ತಿದ್ದಾನೆ.

ದೊಡ್ಡವನಾಗುತ್ತಾ ಹೋದಂತೆ, ಇಂತಹ ಮತ್ತು ಇದಕ್ಕಿಂತಲೂ ಹರಿತವಾದ ಮಾತುಗಳಿಗೆ ಅವನು
ತಯಾರಾಗಬೇಕಿತ್ತು. ಬಹುಷಃ ತನ್ನ ದೇಹ ಸತತವಾಗಿ ನೀಡುತ್ತಾ ಹಿಂಸೆಗಿಂತಲೂ, ತಾನು
ದೊಡ್ಡವನಾದಂತೆ ಬದಲಾಗುತ್ತಿದ್ದ ಜನರ ಧೋರಣೆ, ಹೆಚ್ಚಾಗಿ ನೋಯಿಸಿರಬೇಕು.

ನಮ್ಮ ದೇಹ ಒಂದೇ-ಒಂದು ಸಣ್ಣ ಸಮಸ್ಯೆಯಿಂದ ಬಳಲಿದಾಗ, ನಮ್ಮ ವಿಷ್-ಲಿಸ್ಟಿನ ಕಡೆಗೆ
ಮಲಗಿದ್ದಲ್ಲಿಂದಲೇ ಕಣ್ಣಾಯಿಸಿ.. \
 ‘ ದೇಹ ಕೊಂಚ ದಣಿದು ಬಿಟ್ಟದೆ. ಆರಾಮಾದ ಮೇಲೆ ಕೂಡ, ಆ ಬದುಕನ್ನು ಮತ್ತೆ ಜೀವಿಸಬಹುದು.
ಈ ಕ್ಷಣಕ್ಕೆ ನನಗೆ ವಿಶ್ರಾಂತಿ ಬೇಕು. ’ ಎಂದು ಹೇಳಿ ಸುಮ್ಮನಾಗುತ್ತೇವೆ.

ಆದರೆ ತಮ್ಮ ಖಾತೆಯಲ್ಲಿ ಹೆಚ್ಚು ಸಮಯ ಇಲ್ಲದೇ ಇರುವವರು.

ಹಂಗೆಲ್ಲಾ ಚಿಕ್ಕ ಚಿಕ್ಕ ನೋವುಗಳಿಗೆ ಸೋತು ಮಲಗುವಂತಿಲ್ಲ. ಇನ್ನೇನು, ದೇಹ
ತನ್ನಿಂದಾಗದು ಅಂತ ಮುಷ್ಕರ ಹೂಡುವವರೆಗಾದರೂ, ತಮ್ಮಿಷ್ಟದ ಬದುಕನ್ನು ಅವರು ಜೀವಿಸಬೇಕು.

ಪವಿ!! ಬದುಕ್ತಾ ಇದ್ದಿದ್ದು ಅಂತದೇ ಬದುಕನ್ನು. ‘ ಏನಾದ್ರು ಆಗಲಿ, ಎಷ್ಟಾಗತ್ತೋ.
ಅಷ್ಟು ಬದುಕಿ ಬಿಡೋಣ ’ ಅನ್ನೋ ಆತುರ.

ಒಂದು ವಾರದ ಹಿಂದೆಯಷ್ಟೇ ತನ್ನ ಶಾಲಾ ಗೆಳತಿಯ ಮದುವೆಗೆಂದು ಹೋಗಿದ್ದ. ನಲುಗಿದ ದೇಹದ
ಮೇಲೊಂದು ಗರಿ-ಗರಿ ಬಟ್ಟೆ ಹಾಕಿ, ಸೋತು ಸುಣ್ಣವಾಗಿರುವ ಮುಖದ ತುಂಬಾ ಲವಲವಿಕೆಯ ನಗು
ತುಂಬಿಕೊಂಡು, ಅಪ್ಪನ ಜೊತೆಯಾಗಿ ಮದುವೆಗೆ ಹೋದನು. ಅಪ್ಪನದ್ದು ಒಂದು ರೀತಿಯ ಕಾವಲುಗಾರನ
ಕೆಲಸ. ಅವನನ್ನು, ಅವನ ಪಾಡಿಗೆ ಎಲ್ಲರ ಮಧ್ಯೆ ಬಿಟ್ಟು., ತಾವು ಒಂದಷ್ಟು ದೂರದಲ್ಲಿ
ಕಾಯುವ ಕೆಲಸ. ಈ ವಾಚ್ ಮ್ಯಾನ್ ಕೆಲಸವನ್ನು ಅವರು ಸುಮಾರು ಇಪ್ಪತ್ತು ವರ್ಷಗಳಿಂದಲೂ
ಮಾಡುತ್ತಲೇ ಬಂದಿದ್ದಾರೆ.

ಮದುವೆಯಲ್ಲಿ, ತನ್ನ ಎಲ್ಲ ಗೆಳೆಯರ ಜೊತೆ ಹರಟು, ನಕ್ಕು, ಒಂದು ಕುರ್ಚಿಯ ಮೇಲೆ
ವಿಶ್ರಾಂತಿಗೆಂದು ಕುಳಿತಿದ್ದಾನೆ. ಅಷ್ಟೇ, ಅಪ್ಪಾಜಿಯನ್ನು ಸನ್ನೆ ಮಾಡಿ ಕರೆದು,
ತನ್ನಿಂದಾಗದು ಎಂದು ಹೇಳಿ ಕುಸಿದಿದ್ದಾನೆ. ಅಲ್ಲಿಂದ ಆಸ್ಪತ್ರೆಗೆ ತೋರಿಸಿಕೊಂಡು,
ವಾಪಸು ಮನೆಗೆ ಬಂದಿದ್ದಾರೆ. ಅವತ್ತಿನಿಂದ ಮತ್ತೆ ಅವನು ಮನೆಯಿಂದ ಹೊರಗೆ ಬಂದಿಲ್ಲ.

ಪ್ರತಿ ದಿನ ಫೋನಾಯಿಸಿದಾಗ ‘ ಊಟ ಮಾಡಿದನಾ ..? ನಿದ್ದೆ ಮಾಡಿದನಾ ..? ’ ಎಂದು
ಕೇಳುತ್ತಿದ್ದ ಎರಡು ಪ್ರಶ್ನೆಗಳಿಗೆ ಅಮ್ಮ ಅತ್ತು-ಕರೆದು ವಿವರಿಸುತ್ತಿದ್ದಳು.

ಸ್ವಲ್ಪ ಊಟ ಜೀರ್ಣವಾಗಿ; ರಿಲಾಕ್ಸ್ ಆದನೆಂದರೆ, ಪವಾಡ ನಡೆದ ರೀತಿಯಲ್ಲಿ ಎದ್ದು ಕುಳಿತು
ಎಲ್ಲರನ್ನೂ ಅಚ್ಚರಿಗೊಳಿಸುವನು.

* * * * *

5. ರೈಲಿನ ಪೆಟ್ಟಿಗೆಗಳಂತೆ ಇದ್ದ ಮನೆಯೊಳಗೆ
------------------------------------

ಸಾಮಾನ್ಯವಾಗಿ ಮಧ್ಯಾಹ್ನ 12 ಅಥವಾ 1 ಘಂಟೆಯೊಳಗೆ ಮನೆಯಲ್ಲಿರುತ್ತಿದ್ದೆ. ರೈಲು
ತಡವಾದ್ದರಿಂದ, ಮನೆ ತಲುಪಿದಾಗ ಎರಡು ಘಂಟೆ. ನಮ್ಮ, ಮನೆ ಇರೋದು ಕೂಡ ರೈಲಿನಂತೆ.
ಬೋಗಿಗಳು ಒಂದಕ್ಕೊಂದು ಅಂಟಿಕೊಂಡಂತೆ, ಒಂದರ ಹಿಂದೊಂದಿವೆ. ಅಗಲ ಕಮ್ಮಿ., ಉದ್ದ
ಜಾಸ್ತಿ.

ಚಪ್ಪಲಿ ಬಿಚ್ಚಿ ಪಡಸಾಲೆಯಲ್ಲಿದ್ದ ಕಾಟ್ ನ ಅಡಿಯಲ್ಲಿ ಸರಿಸಿ, ಹಾಲ್ ದಾಟಿಕೊಂಡು
ರೂಮಿಗೆ ಹೋದೆ. ಮಂಚದ ಮೇಲೆ ಅಮ್ಮ, ಮತ್ತು ತಮ್ಮ ಮಲಗಿದ್ದಾರೆ.

ನನ್ನನ್ನು ನೋಡಿದವನೇ ತಮ್ಮ, ಕಾಲು ಕೆಳಗೆ ಇಳಿ ಬಿಟ್ಟು ಎದ್ದು ಕುಳಿತ. ಅವನ ಪಕ್ಕದಲ್ಲಿ
ಕುಳಿತೆ.

ಹೆಗಲ ಮೇಲೆ ಕೈ ಹಾಕಿ ‘ ಅಣ್ಣಯ್ಯ, ಹೆಂಗಿದಿಯಾ ..? ನಿಮ್ಮೂರ್ ಕಡೆ ಮಳೆ-ಬೆಳೆ ಎಲ್ಲಾ
ಹೆಂಗಿದೆ ’ ಅಂದ.

‘ ಚೆನ್ನಾಗಿದೆ ’ ಅಂದೆ. ತಪ್ಪಿಕೊಂಡು ಒಂದು ಮುತ್ತು ಕೊಟ್ಟೆ.

‘ ಅಣ್ಣಯ್ಯಾ ’ ಅನ್ನೋದು ಸಾಮಾನ್ಯವಾಗಿ ಖುಷಿಯ ತುದಿಯಲ್ಲಿದ್ದಾಗ, ಪ್ರೀತಿಯಾಗಿ ಅವನು
ಬಳಸುವ ಸಲೂಟೇಷನ್ನು. ಆ ಕ್ಷಣ!! ಅದು ಅವನಿಗಿಂತ ನನಗೇ ಹೆಚ್ಚು ಆತ್ಮೀಯವೆನಿಸಿತ್ತು.
ನನ್ನ ನೋಡಿದವನು, ಬಹುವಾಗಿ ಸಂಭ್ರಮಿಸಿದ.

ಅವನ ಹಿಂದೆ ಎದ್ದು ಕುಳಿತಳು ಅಮ್ಮ. ಸ್ವಲ್ಪವೂ ಸದ್ದು ಮಾಡದ ರೀತಿಯಲ್ಲಿ, ಬಿಕ್ಕಳಿಸಿ
ಅಳುತ್ತಾ, ಸಂಜ್ನೆಯಲ್ಲಿ ವಿವರಿಸತೊಡಗಿದಳು.

‘ ಒಂದು ವಾರ ಆಯ್ತು. ನನ್ನ ಮಗ ಊಟ ಮಾಡಿಲ್ಲ. ನಿದ್ದೆ ಮಾಡಿಲ್ಲ. ದೇವರು!! ಸರಿಯಿಲ್ಲ ’
ಇನ್ನು ಮುಂತಾಗಿ.

ಅವಳ ಸಧ್ಯದ ಪರಿಸ್ಥಿತಿ, ಯಾರೂ ಊಹಿಸಲಾಗದಷ್ಟು ಕಠೋರವಾಗಿತ್ತು. ತಮ್ಮನನ್ನು ಬಿಟ್ಟು
ಹೋಗಿ ಅಮ್ಮನನ್ನು ಅಪ್ಪಿ ಕುಳಿತೆ.

‘ ಅಣ್ಣನ್ ನೋಡುದ್ ತಕ್ಷಣ ಚಿಗುರು ಬುಟ್ಯಲ್ಲೋ. ಹನ್ನೆರಡು ಘಂಟೆಯಿಂದಾನೂ ಏಳೋದು;
ಬಾಗಿಲು ಕಡೆ ನೋಡೋದು.; ಟೈಮ್ ನೋಡೋದು; ಮಲಗೋದು; ಇವೇ ಮಾಡ್ತಾ ಇದಾನೆ.
`ಸುಮ್ನೆ ಮಲಗೋ ಸುಸ್ತಾಗತ್ತೆ. ಅವನು ಬರ್ತಾನೆ` ಅಂದ್ರೆ.
`ಪ್ಚ ಇಷ್ಟೊತ್ತಿಗೆ ಅಣ್ಣಯ್ಯ ಬರಬೇಕಿತ್ತು ಆಲ್ವಾ ..? ಟ್ರೈನು ಇನ್ನೂ ಬಂದಿಲ್ವಾ ಮ್ಮ`
ಅಂತ ಕೇಳೋನು. ’

‘ I don ’ t deserve it ‘ ಅಂತ ಬೊಬ್ಬೆ ಹೊಡೆಯುವಷ್ಟು ಆಕ್ರೋಶ. ಇಂತಾ ಪ್ರೀತಿಯನ್ನು
ಅನುಭವಿಸೋದಕ್ಕೆ ನನಗೆ ಮಾತ್ರ ಅಲ್ಲ, ಪ್ರಪಂಚದ ಯಾರಿಗೂ ಅರ್ಹತೆ ಇಲ್ಲ. ಯಾಕೆ ..?
ಮನಸ್ಸುಗಳು ಇಷ್ಟು ಮುಗ್ಧವಾಗಿ ವರ್ತಿಸುತ್ತವೆಯೋ ಅರ್ಥ ಆಗೋದಿಲ್ಲ.

ಹೆಚ್ಚು ಹೊತ್ತು ಅಲ್ಲಿ ಕೂರಲು, ಆಗಲಿಲ್ಲ. ಎದ್ದು ಹೋದೆ.

ತಂಗಿ ಬಚ್ಚಲಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಅಮ್ಮ ಮತ್ತು ತಮ್ಮನನ್ನು ನೋಡಿ-ಹೋಗಲು
ಬರುತ್ತಿದ್ದ ನೆಂಟರ ಸಲುವಾಗಿ ಸೃಷ್ಟಿಯಾಗಿದ್ದ ಎಂಜಲು ತಟ್ಟೆ, ಪಾತ್ರೆ ಗಳನ್ನು
ತೊಳೆಯುತ್ತಿದ್ದಳು.

‘ ಏನೆ ಮಾಡ್ತಿದಿಯಾ ..? ’ ಅಂದೆ.

ಅವಳು ಏನೂ ಹೇಳಲಿಲ್ಲ.

ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಅತ್ತು ಅತ್ತು ಕಣ್ಣುಗಳು
ಊದಿಕೊಂಡಿದ್ದು ಮಾತ್ರ ಕಾಣುತ್ತಿತ್ತು. ಅಲ್ಲಿಂದ ಹಾಗೇ ಹಿತ್ತಲ ಕಡೆಗೆ ನಡೆದೆ.

* * * * *

6. ತಿತಿತಿ ಅನ್ನೋದನ್ನ ಮೂರ್ತಿ ಅಂತ ಓದಿಕೊಳ್ಳಬೇಕು
-------------------------------------------

ರಾತ್ರಿ 8 ಘಂಟೆ. ಹಾಲ್-ನಲ್ಲಿ, ಖುರ್ಚಿಯ ಮೇಲೆ ಕುಳಿತಿದ್ದಾನೆ ಪವಿ. ಅಮ್ಮ, ತುತ್ತು
ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರೂ. ಸುತ್ತ ಕುಳಿತಿದ್ದೇವೆ.

ಈ ರೀತಿ ತೃಪ್ತಿಯಾಗಿ. ಊಟ ಮಾಡಿಯೂ ಬಹಳ ದಿನಗಳಾಗಿತ್ತಂತೆ.

‘ ಸ್ವಲ್ಪ ಊಟ ಅರಗಿಸಿಕೊಂಡರೂ ಸಾಕು, ಎದ್ದುಬಿಡುವನು ’ ಅನ್ನುತ್ತಿದ್ದ ಅಮ್ಮನಿಗೆ
ಒಳಗೊಳಗೆ ಸಂತಸ.

‘ ಸ್ವಲ್ಪ ಚೇತರಿಸಿಕೊಳ್ಳಲಿ. ಬೆಂಗಳೂರಿಗೆ ಕರ್ಕೋಂಡ್ ಹೋಗಿ, ಆಪರೇಶನ್ ಮಾಡಿಸಿಯೇ
ಬಿಡುವ. ಏನಾಗುತ್ತೋ ಆಗಿ ಹೋಗ್ಲಿ. ಈ ರೀತಿಯಾಗಿ, ಕಷ್ಟ ಪಡೋದು ನೋಡಕ್ಕಾಗಲ್ಲ . ’
ಅಂತಿದ್ದರು ಅಪ್ಪ.

ಊಟ ಮುಗಿದ ಮೇಲೆ, ಕುಳಿತಿದ್ದ ಖುರ್ಚಿಯಲ್ಲಿಯೇ ಕೊಂಚ ನಿದ್ರಿಸುವನಂತೆ ಮಾಡಿದ.

ನಂತರ ಕಣ್ಣು ಬಿಟ್ಟು, ಎಲ್ಲರನ್ನೂ ನೋಡುವುದು; ಸಂಜ್ನೆ ಮಾಡುವುದು; ಮಾತಾನಾಡಲು
ಪ್ರಯತ್ನಿಸುವುದು; ಕೈ ಬೀಸುವುದು; ನಡೆದಿತ್ತು.

ನನ್ನ ಕಡೆಗೆ ಕೈ ಬೀಸಿ ಕರೆಯುತ್ತಾ ‘ ನನಗೆ ಮನೆ ಕೊಡು ’ ಎಂದ.

‘ ಯಾವ ಮನೆ ..? ’ ಎಂದು ಕೇಳಿದ್ದಕ್ಕೆ ಮತ್ತೂ ಕ್ರೋಧಗೊಂಡು ‘ ನನ್ನ ಮನೆ ಕೊಡು ’ ಎಂದ.

ಯಾವ ಮನೆಯೆಂದು ಅರ್ಥವಾಗಲಿಲ್ಲ.

ಬಣ್ಣದ ಹಾಳೆಗಳು, ನೋಟ್ ಬುಕ್ಕಿನ ಹಾರ್ಡ್ ಬೈಂಡ್ ಗಳನ್ನು ಬಳಸಿ ಮನೆ, ದೇವಸ್ಥಾನ
ಮೊದಲಾದ ಮಾಡೆಲ್ ಗಳನ್ನು ಮಾಡಿ, ಯಾರಿಗಾದರೂ ಕೊಡುತ್ತಿದ್ದ.

ಟೀಚರ್ ಟ್ರೈನಿಂಗ್, ಮಾಡುತ್ತಿದ್ದ ಕಜಿನ್ ತಂಗಿಗೆ, ಅವಳ ಟ್ರೈನಿಂಗಿಗೆ ಬೇಕಾದ ರಟ್ಟಿನ
ಮಾಡೆಲ್ ಗಳನ್ನು ಮಾಡಿಕೊಡುವವನು ಇವನೇ..

ಹಾಗದರೆ, ಅವನು ಕೇಳುತ್ತಿದ್ದುದು ಅಂಥಹುದೇ ಯಾವುದೋ ಮನೆ ಇರಬೇಕು, ಎಂದೆಣಿಸಿ ಅಟ್ಟದ
ಮೇಲೆ ಹೋಗಿ, ಹುಡುಕಿದೆ. ಯಾವುದೂ ಸಿಗಲಿಲ್ಲ. ಕೇವಲ ರಟ್ಟಿನ ಮಾಡೆಲ್ ಗಳೂ ಅಲ್ಲದೆ,

ತನಗೆ ಮನಸ್ಸಿಗೆ ಬಂದದ್ದನ್ನೆಲ್ಲಾ ಹಾಳೆಯಲ್ಲಿ ಗೀಚಿ, ಹೊಲಿದು ಪುಸ್ತಕದಂತೆ
ಮಾಡಿಕೊಂಡಿದ್ದ. ‘ ತಿತಿತಿ ಎಂಬ ಹುಡುಗನು ತಿತಿತಿತಿತಿತಿ ಎಂಬ ಹುಡುಗಿಯನ್ನು ಎತ್ತಲು
ಹೋಗಿ ಚೆಚೆಚೆ ಹೋದನು. ’ ಎಂಬ ಒಂದು ಜೋಕು ಆ ಪುಸ್ತಕದಲ್ಲಿತ್ತು. ಬಹುಷಃ ಅದನ್ನು ಅವನು
ಬಹಳ ಎಂಜಾಯ್ ಮಾಡಿದ್ದಿರಬೇಕು.

ಸರಕ್-ಸರಕ್-ಸರಕ್ ಎಂದು ತಿರುಗಿಸಿ, ಕೆಲವೇ ಮೂವ್-ಗಳಲ್ಲಿ, ರೂಬಿಕ್ ಕ್ಯೂಬ್ ನ
ಕ್ಲಿಷ್ಟಕರವಾದ ಪಜಲ್ ಬಿಡಿಸಿ ಅಚ್ಚರಿ ಪಡಿಸುವನು. ಅವನ ತಲೆ ತುಂಬಾ ಚೆನ್ನಾಗಿಯೇ ಕೆಲ್ಸ
ಮಾಡ್ತಿತ್ತು.

‘ ಮನೆ ಕೊಡು, ಮನೆ ಕೊಡು. ’ ಎಂದು ಕೇಳುತ್ತಿದ್ದವನು ಸ್ವಲ್ಪ ಹೊತ್ತಿನಲ್ಲಿ
ಸುಮ್ಮನಾದ. ಮತ್ತೆ ಎಚ್ಚರಗೊಂಡು ಹೂವಿನ ಊಜಿಯ ಒಳಗೆ ಬಚ್ಚಿಟ್ಟಿದ್ದ ನೂರು ರೂಪಾಯಿ
ಹಣವನ್ನು ತೆಗೆದು,

‘ ಅಣ್ಣಯ್ಯಾ. ಬಟ್ಟೆ ತಗೋ ’ ಅಂತ ನನ್ನ ಕೈಗಿಟ್ಟ.

ನಾನು ಯಾವಾಗಲೂ ಕೆಟ್ಟ ಬಟ್ಟೆ ಉಡುವುದಾಗಿಯೂ; ಅದಕ್ಕೆ ಅವನು ಒಳ್ಳೆ ಬಟ್ಟೆ ತಗೋ ಅಂತ
ದುಡ್ಡು ಕೊಡುತ್ತಿರುವುದಾಗಿಯೂ; ಹಣವನ್ನು ಪಡೆದುಕೊಳ್ಳಬೇಕಾಗಿಯೂ; ಅವನ ಮಾತು
ಸಂಜ್ನೆಗಳನ್ನು ಇಂಟರ್-ಪ್ರಿಟ್ ಮಾಡಿ, ನಕ್ಕರು. ನಾನೂ ನಕ್ಕೆ.

ಅಂಗವಿಕಲ ಅಥವಾ ಬುಧ್ಧಿಮಾಂದ್ಯ ಮಕ್ಕಳುಗಳ ಬಹುದ್ಡೊಡ್ಡ ಸಮಸ್ಯೆ ಅಂದರೆ, ‘ ಪ್ರಪಂಚ
ತಾನು ಅಸಹ್ಯ ಪಟ್ಟುಕೊಳ್ಳುವ ವಿಷಯಗಳು, ಅವರ ಪಾಲಿಗೆ ಏನೂ ಅನ್ನಿಸದೇ ಇರುವುದು.’ ಅಂದರೆ
ಗಲೀಜು ಮಾಡಿಕೊಳ್ಳುವುದು. ಕೆಲವೊಮ್ಮೆ ಅದು ಅವರಿಗೆ ಅನಿವಾರ್ಯ ಕೂಡ.

ಬಹುಷಃ ಅಮ್ಮ, ಬಿಟ್ಟರೆ ಮತ್ಯಾರೂ ಆ ಗಲೀಜು ಕೆಲಸಗಳಿಗೆ ಕೈ ಹಾಕಲಾರರು. ಪ್ರೀತಿ-ಪೇಮದ
ಬಗ್ಗೆ ಮಾತಾಡೋದು ಸುಲ್ಬ, ಹೇಲು ಬಾಚೋದು ಅಷ್ಟು ಸುಲ್ಬ ಅಲ್ಲ.\
 ‘ ಅಂತ ವಿಷಯಗಳಲ್ಲಿ ನನ್ನ ಮಗ ಯಾವತ್ತೂ ನನಗೆ ತೊಂದರೆ ಕೊಡಲಿಲ್ಲ. ರಕ್ತವನ್ನೇ ಕಕ್ಕಿ,
ಕುಸಿದು ಬೀಳುವಂತಹ ಪರಿಸ್ಥಿತಿ ಇದ್ದಾಗಲೂ ಕೂಡ, ಟಾಯ್ಲೆಟ್ ಬಂದ್ ತಕ್ಷಣ
ತೇಗುತ್ತಲಾದರೂ. ಹೋಗಿ; ಕೂತು; ಬಂದುಬಿಡುತ್ತಿದ್ದ ’ ಎಂದು ಅಮ್ಮ ಹೇಳುತ್ತಿದ್ದುದನ್ನು
ಕೇಳಿದ್ದೆ.

ಈಗ ಎರಡು ದಿನಗಳಿಂದ ಉಚ್ಚೆ ಕೂಡ ನಿಂತು ಹೋಗಿತ್ತಂತೆ. ಕಿಡ್ನಿಯಲ್ಲಿಯೂ ಏನೋ
ಸಮಸ್ಯೆಯಾಗಿರಬೇಕು ಎಂದರು. ಅವನ ದೇಹದಲ್ಲಿ ಏನು ಚೆನ್ನಾಗಿದೆ. ಅವನು, ಬದುಕಿರೋದಾದರೂ
ಹೆಂಗೆ ಅಂತ ಉತ್ತರ ಹೇಳೋದಕ್ಕೂ ಅಲ್ಲಿ ಯಾರೂ ಇರಲಿಲ್ಲ.

ಡಾಕ್ಟರುಗಳು, ಸುಮ್ನೆ ನಾಮಕಾವಸ್ಥೆಗೆ ಟ್ರೀಟ್ ಮೆಂಟ್ ಕೊಟ್ಟ ಹಂಗ್ ಮಾಡ್ತಿದ್ರು
ಅಶ್ಟೇ, ‘ ದೊಡ್ಡ ಡಾಕ್ಟ್ರೇ ಆಗಲ್ಲ ಅಂದ ಮೇಲೆ ಇಲ್ಲಿ ನಾವೇನ್ ಮಾಡಕ್ಕಾಗತ್ತೆ. ’
ಅನ್ನೋದು ಅವರ ಅಂಬೋಣ.

ರೀಸಸ್ ಮಾಡಲು ಅಣ್ಣನ ಜೊತೆ ಹೊರಗೆ ಹೋಗಿ ಬರುವಂತೆ, ಅಪ್ಪ ಹೇಳಿದಾಗ, ಸುತಾರಾಂ
ಒಪ್ಪಲಿಲ್ಲ ಅವನು. ಅಪ್ಪ ಪೂಸಿ ಹೊಡೆದು ಅವನನ್ನು ಕಳುಹಿಸಿದರು.

ನಾನು ಮತ್ತು ಮಾಮ, ಅವನನ್ನು ಹಿಡಿದುಕೊಂಡು ಹಿತ್ತಲ ಕಡೆಗೆ ಬಂದು ಪ್ಯಾಂಟಿನ ಜಿಪ್ಪು
ಸಡಿಲಿಸಿದಾಗ, ತನ್ನ ಜೀವವನ್ನೇ ಹಿಂಡಿಕೊಂಡು ಚಿಕ್ಕದು ಮಾಡಿಕೊಂಡ.

‘ ಏನೂ ಆಗಲ್ಲ, ಕಣೋ ’ ಅಂದರೂ

‘ ಅಣ್ಣಯ್ಯಾ. ನೀನು ಕೆಳಗಡೆ ನೋಡಬೇಡ ’ ಅನ್ನುವನು.

ಈ ‘ ಅಚ್ಚುಕಟ್ಟುತನಕ್ಕೆ ’, ‘ ಸ್ವಾಭಿಮಾನಕ್ಕೆ ’ ಏನು ಹೇಳಬೇಕು.

ನಾನು ಯಾವತ್ತೂ ಅವನ ಸೇವೆ ಮಾಡಿಲ್ಲ. ಬಹುಷಃ ಮಾಡುವಂತಹ ಅನಿವಾರ್ಯತೆ
ಸೃಷ್ಟಿಯಾಗಿದ್ದಲ್ಲಿ, ಮಾಡುತ್ತಿರಲಿಲ್ಲವೇನೋ ..? ಗೊತ್ತಿಲ್ಲ. ಮನುಷ್ಯ ಸ್ವಭಾವಗಳು,
ಹಿಂಗೇ ಅಂತ ಹೇಳುಕ್ಕಾಗಲ್ಲ.

ಕಾಲ ಯಾರನ್ನು ಬೇಕಾದ್ರೂ ಬದಲಾಯಿಸಬಹುದು. ಆದರೆ ಅಪ್ಪ-ಅಮ್ಮ ರಿಗೆ ಅವನ ಮೇಲಿದ್ದ
ಪ್ರೀತಿ, ಬದಲಾಗಲು ಸಾಧ್ಯವಿರಲಿಲ್ಲ. ಅವನ ಆರೈಕೆ, ಪೋಷಣೆ, ಶುಶ್ರೂಶೆ, ಮುಂತಾದವೆಲ್ಲಾ
ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ಹೋಗಿದ್ದವು.

ಪವಿಗೆ, ಅಪ್ಪ-ಅಮ್ಮನ ಅವಶ್ಯಕತೆಗಿಂತ ಹೆಚ್ಚಾಗಿ, ತಮ್ಮಗಳ ಭಾವನಾತ್ಮಕ ಬೇಕುಗಳಿಗೆ ಇವರು
ಪವಿಯನ್ನು ಹೆಚ್ಚಾಗಿ ಅವಲಂಬಿಸಿದ್ದರು. ಅವನ ಸುತ್ತಲೇ, ಒಂದಷ್ಟು ಬಯಕೆಗಳ ಕೋಟೆ ಕಟ್ಟಿ,
ಸುಖಿಸುತ್ತಿದ್ದರು. ಅದೂ ಅಲ್ಲದೆ, ತನ್ನ ಅಮ್ಮನ ಹೊರತಾಗಿ ಯಾರ ಬಳಿಯೂ ಸೇವೆ
ಸ್ವೀಕರಿಸದ, ಉತ್ಸವಮೂರ್ತಿ ಅವನು.

ಒಮ್ಮೊಮ್ಮೆ, ಬೆಳಗಿನ ಜಾವ ಎದ್ದು ಕಣ್ಣು ಬಿಟ್ಟಾಗ, ಪೆಚ್ಚು ಮೋರೆ ಹಾಕಿ ಕೊಂಡು
ಸುತ್ತಲೂ ಕುಳಿತಿರುತ್ತಿದ್ದರು, ಅಪ್ಪ-ಅಮ್ಮ. ತಾವುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ
ತಮ್ಮನನ್ನು ಕಾದಿರುತ್ತಿದ್ದ ವಿಚಾರವನ್ನು ಹೇಳುವರು.

‘ ರಾತ್ರಿಯೆಲ್ಲಾ ವಾಂತಿ, ನೋವು, ನರಳಾಟಗಳ, ಅಷ್ಟು ಸದ್ದಿದ್ದರೂ, ಒಂಚೂರು ಕಮಕ್ಕಿಮಕ್
ಅನ್ನದ ಹಾಂಗೆ ಮಲಗಿದ್ದೀಯಲ್ಲ, ನಿನ್ನ ನಂಬಿ ನನ್ನ ಮಗನ್ನ ಬಿಟ್ಟು ಹೋದ್ರೆ ಏನ್ ಕಥೆ
..? ಹಿಂಗೇ ಏನಪ್ಪಾ ಸಾಕ್ಕೋಳೋದು ನೀನು. ’ ಎಂದು ಅಮ್ಮ ಸೆಂಟಿಮೆಂಟ್ ಮಾಡುವಳು.

ನನಗೋ. ನಿದ್ದೆ, ಅಂದ್ರೆ ಯಮ ನಿದ್ದೆ,

ಆದರೆ, ತಾವು ಎಚ್ಚರವಿದ್ದಾಗಿಯೂ, ನನ್ನ ನಿದ್ರೆಗೆ ಭಂಗ ಬರದಂತೆ ನೋಡಿಕೊಂಡಿರುತ್ತಿದ್ದ
ಸೂಕ್ಷ್ಮತೆಯು ಅವರ ಪ್ರೀತಿಯ ಅರ್ಥವಾಗದ ಮತ್ತೊಂದು ಸ್ವರೂಪ.

ಹೀಗೆ ಪವಿ, ಸೀರಿಯಸ್ಲಿ ಸೀರಿಯಸ್ ಆಗುತ್ತಿದ್ದುದು ಅಷ್ಟೇ, ಸ್ಪೀಡ್ ಮತ್ತು ರಿಕವರಿ
ಆಗುತ್ತಾ ಇದ್ದುದೂ ಕೂಡ ಅಷ್ಟೇ ಸ್ಪೀಡ್.

ಎಲ್ಲಾ ಕೈ ಮೀರಿತು ಅನ್ನುತ್ತಿದ್ದ ಹಾಗೆ, ಸಕ್ಕರೆ ನೀರು ಕುಡಿಸಿ ಮತ್ತು ಅದನ್ನು ಅವನು
ಅರಗಿಸಿಕೊಳ್ಳುವುದನ್ನೇ ಕಾಯುತ್ತಾ ಕೂರುವರು. ಸಕ್ಕರೆ ನೀರು ಸಕ್ಸಸ್ ಫುಲ್ಲಾಗಿ ಒಳ್ಗೆ
ಹೋಯ್ತು ಅಂದರೆ, ಅದು ಡೈಜೆಸ್ಟ್ ಆಗೋದರೊಳಗೆ ಎದ್ದು ಕೂರುವನು. ಹೊಸದಾಗಿ ನೋಡುವವರು
ಗಾಬರಿ ಬೀಳುತ್ತಿದ್ದರು.

ಹಿತ್ತಲಿಂದ ವಾಪಾಸು ಕರೆತಂದು, ಮೊದಲು ಮಲಗಿದ್ದ ಮಂಚದ ಮೇಲೆ ಮಲಗಿಸಿದೆವು. ಊಟ ಮಾಡಿದ
ಮೇಲೆ ಸದ್ದಿಲ್ಲದೇ ಮಲಗಿದ. ಗಂಟೆಗಳು ಕಳೆದರೂ ಯಾವುದೇ ನರಳಾಟವಿಲ್ಲ. ಎರಡು ದಿನಗಳ
ಹಿಂದೆ ಕಪಾಲೇಶ್ವರ ದೇವರ ಬಳಿ ಬೇಡಿಕೊಂಡಿದ್ದಂತೆ,\
 ಊಟ, ನಿದ್ರೆಯನ್ನು ಸಂಪಾಗಿ ದಯಪಾಲಿಸಿದ್ದ ಶಿವ.

ಪವಿಯ ತಲೆ ಸವರುತ್ತಾ ಹಿಂದಿನ ದಿನ ನಡೆದ ಸಂಗತಿಯನ್ನು ಅಮ್ಮ, ವಿವರಿಸಿದಳು.

‘ ನೆನ್ನೆ ನನ್ನ ಮಗ ಹೋಗ್-ಬಿಟ್ಟಿದ್ದ. ದೇವರ ದಯ ಬದುಕುಳಿದ. ಇನ್ನು ಅವನಿಗೆ ಏನು
ಆಗಲ್ಲ. ’ ಪ್ರಾಯಕ್ಕೆ ಬರುವ ಹೊತ್ತಿಗೆ ಅವನ ಜೀವನದಲ್ಲಿ ಒಂದು ಕಂಟಕ ಬರುತ್ತೆ. ಅದನ್ನು
ಅವನು ಜಯಿಸಿಬಿಟ್ಟ ಅಂದ್ರೆ, ಚಿರಂಜೀವಿ ಆಗಿ ಬಿಡ್ತಾನೆ ‘ ಅಂತ ಶಾಸ್ತ್ರದಲ್ಲಿ
ಹೇಳಿದ್ರು. ಪಂಚಾಗದ ಪ್ರಕಾರ ನೆನ್ನೆಗೇ ಅವನಿಗೆ ವರ್ಷ ತುಂಬ್ತು. ಇನ್ನು, ಏನು ಆಗಲ್ಲ
ಅವನಿಗೆ. ’

‘ರಾತ್ರಿ ಒಂದು-ಎರಡು ಘಂಟೆ ಆಗಿತ್ತು ಅನ್ಸತ್ತೆ. ಹೋಗ್ ಬಿಟ್ಟಿದ್ದ ನನ್ನ ಮಗ. ಉಸಿರು
ಕೂಡ ನಿಂತು ಬಿಟ್ಟಿತ್ತು. ದೊಡ್ಡ ಜೀವ ಹೊರಟು ಬಿಟ್ಟಿತ್ತು. ಪವನಿ, ಪವನಿ, ಅಂತ
ಕಿರುಚಿಕೊಂಡ್ರು ಸದ್ದಿಲ್ಲ. ಅಯ್ಯೋ, ಪವಿ, ಎದ್ದೇಳಪ್ಪಾ, ಅಣ್ಣ ಬರ್ತಿದಾನೆ ಕಣೋss
ಎದ್ದಳೋss ಅಂತಂದರೂ ಏನೂ ಸದ್ದಿಲ್ಲ.’

‘ ಐದು ನಿಮಿಷದ ಮೇಲೆ ಉಸಿರು ತಿರುಗಿಸಿಕೊಂಡ. ಅದು ಹೆಂಗ್ ತಿರುಗಿಸಿಕೊಂಡ್ ಮೇಲೆದ್ದನೋ.
ಆ ಶಿವನಿಗೇ ಗೊತ್ತು. ಎದ್ದವನೇ,
`ಅಮ್ಮಾss  ಅಳಬೇಡಮ್ಮ. ನೀ ಅತ್ತೆ ಅಂತ ಬಂದೆ. ನಾನು ಎಲ್ಲೂ ಹೋಗಲ್ಲಮ್ಮಾ. ಅಳಬೇಡಮ್ಮಾ.`
ಅಂದ. ’

ಅಮ್ಮ ತನ್ನ ಲಹರಿಯಲ್ಲಿ ಹೇಳುತ್ತಿದ್ದಳು.

ಈ ರಂಪಾಟದಲ್ಲಿ ಅಮ್ಮ, ತನ್ನ ಮೂಳೆ ಮುರಿದಿದ್ದ ಕಾಲಿಗೆ ಸುತ್ತಿದ್ದ ಬ್ಯಾಂಡೇಜನ್ನು
ಹಾಳು ಮಾಡಿಕೊಂಡದ್ದಾಗಿಯೂ; ಕಾಲು ಮತ್ತಷ್ಟು ಹಾಳಾಗಿದ್ದಾಗಿಯೂ ತಿಳಿಯಿತು. ಬೆಳಗಿನ
ಜಾವವೇ ಬಂದಿದ್ದ ಕರೆಗೆ ಇದೇ ಕಾರಣವೂ ಎಂದೂ ತಿಳಿಯಿತು.

ಮತ್ತೆ ಅಪ್ಪಾಜಿ ಶುರುಮಾಡಿದರು -

‘ ರಾತ್ರಿ, ಎರಡು ಕಣ್ಣುಗಳ ಮಧ್ಯೆ, ನರವೊಂದು ದಪ್ಪಗೆ ಕಾಣಿಸುವಂತೆ ಊದಿಕೊಳ್ಳುತ್ತಾ
ಬಂತು. ಸಂಕಟವನ್ನು ತಾಳಲಾರದೆ
`ಮ್ಮಾss ಕಣ್ಣು ಕಿತ್ತು ಬಿಡು; ಮ್ಮಾ ಕಣ್ಣು ಕಿತ್ತು ಬಿಡು` ಅಂತ ಕಣ್ಣನ್ನೇ
ಕಿತ್ತುಕೊಳ್ಳೋದಕ್ಕೆ ಹೋಗ್ತಿದ್ದ. ’

‘ ಪಾಪ, ಅದೆಷ್ಟು ನೋವು ಅನುಭವಿಸುತ್ತಿದ್ದನೋ. ..? ಏನೋ ..? ಸಮಾಧಾನ
ಮಾಡಕ್ಕಾಗ್ಲಿಲ್ಲ. ಇವತ್ತು ಬಾಳ ಅರಾಮಿದನಾಪ್ಪ. ನೆನ್ನೆಯದು ನೆನೆಸಿಕೊಂಡ್ರೆ ಭಯಾನೆ
ಆಗ್ತಿತ್ತು. ಇನ್ನು ಸರಿ ಹೋಗ್ತಾನೆ. ’

ನೆನ್ನೆದಿನ ತನ್ನ ದೊಡ್ಡಪ್ಪನ ಬಳಿ ಬೀಡಿ ಹಚ್ಚಿಸಿಕೊಂಡು, ಹೊಗೆಯನ್ನು ತನ್ನ ಅಜ್ಜಿಯ
ಮೇಲೆ ಬಿಡುತ್ತಾ, `ಏಯ್!!  ಓಲ್ಡ್ ಲೇಡಿ, ಲೈಫು ಎಂಜಾಯ್ ಮಾಡ್ಬೇಕು. ಗೊತ್ತಾಯ್ತಲ್ಲ`
ಅಂತಿದ್ದನಂತೆ. ಅದನ್ನೇ, ಎಲ್ಲರೂ ನೆನೆಸಿಕೊಂಡು ನಕ್ಕರು.

‘ ಮೊದಲ ಸಾರಿಗೆ ಬೀಡಿ ಬಾಯೊಳಗಿಟ್ಟಿದ್ದರಿಂದ ಕೆಮ್ಮಿದನೆಂದೂ; ಬೀಡಿ ಪಡೆದದ್ದನ್ನು ಯಾರ
ಬಳಿಯೂ ಹೇಳ ಬಾರದಂತ, ಪ್ರಾಮಿಸ್ ಮಾಡಿಸಿಕೊಂಡಿದ್ದನ್ನೂ; ’ ಹೇಳಿದರು.

7. ಎಲ್ಲರನ್ನೂ ಮಲಗಿಸಿ, ಮೋಸ ಮಾಡಿದವನು
---------------------------------

ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಅಪ್ಪ, ಅಮ್ಮ, ತಂಗಿ, ಅಜ್ಜಿ, ಮಾಮ ಯಾರಾದರೊಬ್ಬರು
ಎಚ್ಚರವಿರುವಂತೆ ನೋಡಿಕೊಂಡರು.

ಹಿಂದಿನ ದಿನ ರಾತ್ರಿ ರೈಲಿನಲ್ಲಿ, ನಿದ್ದೆ ಸರಿಯಾಗಿರದ ಕಾರಣಕ್ಕಿರಬಹುದು ಅಥವಾ
ಸಹಜವಾಗಿಯೇ ನಿದ್ದೆ ಆವರಿಸಿಕೊಂತು.

ರಾತ್ರಿ ಎರಡು ಘಂಟೆಯಾಗುತ್ತಿದ್ದಂತೆ ಎಚ್ಚರಗೊಂಡು, ತಾನು ಮಲಗಿದ್ದ ದಿಕ್ಕು ಬದಲಿಸಿದ.
ಹೀಗೆ. ಹಲವು ಬಾರಿ ತನಗೆ ತೃಪ್ತಿಯಾಗುವವರೆಗೂ ಉಲ್ಟಾ ಸೀದಾ ಎದ್ದು ಮಲಗಿ
ನಿದ್ರಿಸುತ್ತಿದ್ದ.

ಮುಂಜಾನೆ ನಾಲ್ಕು ಘಂಟೆಯ ಹೊತ್ತು. ನಾನು ಮತ್ತು ಅಪ್ಪಾಜಿ ಇಬ್ಬರು ಎಚ್ಚರಿದ್ದೆವು.
ಪವಿ, ಎದ್ದವನೇ, ಮೊಳೆಗಳಿಗೆ ನೇತು ಹಾಕಿದ್ದ ಬಟ್ಟೆಗಳಿಂದ ಒಂದು ಬಟ್ಟೆಯನ್ನು ಆರಿಸಿ.,\
 ಉಡಿಸುವಂತೆ ಹೇಳಿದ.

ಅದು ಅಪ್ಪಾಜಿ, ತನ್ನ ಕೈಯಾರೆ ಹೊಲಿದಿದ್ದ ಹೊಸ ಅಂಗಿ. ತಾವು ಟೈಲರಿಂಗ್ ಬಿಟ್ಟು
ಇಪ್ಪತ್ತು ವರ್ಷಗಳಾಗಿದ್ದರೂ, ಮಗನಿಗೆ ಮಾತ್ರ ಬಟ್ಟೆ ಹೊಲಿದು ಕೊಡುತ್ತಿದ್ದರು. ಕೊಂಚ,
ಸಿಲಿಂಡರ್ ಶೇಪ್ ನಲ್ಲಿದ್ದ ತಮ್ಮನ ಮೈಕಟ್ಟಿಗೆ ಒಪ್ಪುವಂತೆ , ಅಂಗಿಯನ್ನು ಹೊಲಿಯುವುದು
ಕೂಡ ಚಾಲೆಂಜಿಂಗ್ ಕೆಲಸ. ಹಾಗಾಗಿ ಅಪ್ಪಾಜಿ, ಹೊಲಿದಿದ್ದ ಅಂಗಿಗಳನ್ನು ಹೆಚ್ಚು ಇಷ್ಟ
ಪಡುತ್ತಿದ್ದ.

ಹೊಸ ಬಟ್ಟೆ ಹಾಕಿಕೊಂಡು ಮಲಗಿದ. ಅವನೊಳಗೆ ಏನು ನಡೆಯುತ್ತಿದ್ದಿರಬಹುದು ಎಂದು.
ಅರ್ಥವಾಗುತ್ತಿರಲಿಲ್ಲ.

ಯಾವುದೇ ರೀತಿಯ ಹೊಯ್ದಾಟವಿಲ್ಲ;

ನರಳಾಟವಿಲ್ಲ;

ಪ್ರಶಾಂತವಾಗಿದ್ದಾನೆ.

ಬೆಳಗಿನ ಜಾವ ಆರು ಘಂಟೆಯಾಗುತ್ತಲೂ, ವೇಗವಾಗಿ ಉಸಿರು ತೆಗೆದುಕೊಳ್ಳಲು ಪ್ರಾರಂಭಿಸಿದ.
ಮಲಗಿದ್ದ ಅಮ್ಮ, ಎದ್ದು ಕುಳಿತಳು.

ಅಪ್ಪಾಜಿ ಅವನನ್ನು ತೊಡೆಯ ಮೇಲೆ ಹಾಕಿಕೊಂಡರು.

ತೆರೆದ ಬಾಯಿಗೆ, ಸ್ವಲ್ಪ ಸ್ವಲ್ಪ ವೇ ನೀರು ಬಿಟ್ಟರು. ಮೊದಲೆರಡು ಸಿಪ್ ಗಳನ್ನು
ಗುಟುಕಿಸಿದ. ಆಮೇಲಿಂದು ವಾಪಾಸು ಬಂತು.

‘ ಅಯ್ಯೋ, ಕಂದ!! ಹಂಗೆಲ್ಲಾ. ಮಾಡಬೇಡ ಕಂದ. ಎರಡೇ ಎರಡು ಗುಟುಕು ತಗೋ ಕಂದ. ಪವನೀss ’
ಎಂಬುದಾಗಿ ಬೊಬ್ಬಿರಿದು, ಅಪ್ಪ ಎದೆಗೆ ಅವುಚಿಕೊಂಡರು.

ಅಮ್ಮ ಗೋಡೆಯ ಕಡೆಗೆ ತಿರುಗಿಕೊಂಡು, ಹಲ್ಲು ಕಚ್ಚಿಕೊಂಡು, ದೇವರ ಕಡೆಗೆ ಪ್ರಾರ್ಥಿಸಲು
ಪ್ರಾರಂಭಿಸಿದಳು.

ದೊಡ್ಡಮ್ಮ, ಅವನ ಪಾದ ಮುಟ್ಟಿ ನೋಡಿ. ‘ ಹೋಯ್ತು ಜೀವ ’ ಎಂದು ಹೇಳಿ ಅಳುತ್ತಾ ಹೊರಗೆ
ಹೋದರು.

ಆ ಕ್ಷಣದಲ್ಲಿ ನಾನು ಸಂಪೂರ್ಣ ಸ್ವಾರ್ಥಿಯಾದೆ. ತಮ್ಮನ ಕಡೆಗೂ ನೋಡಲಿಲ್ಲ.\
 ಮಂಚ ಹತ್ತಿ, ಅಮ್ಮನನ್ನು ಅಪ್ಪಿ ಕುಳಿತೆ.

ಅಮ್ಮ ಇನ್ನೂ, ಕಣ್ಣು ಮುಚ್ಚಿ ಒಂದೇ ಸಮನೆ ದೇವರನ್ನು ಪ್ರಾರ್ಥಿಸುತ್ತಿದ್ದಳು. ‘ ತನ್ನ
ಮಗ ಚಿರಂಜೀವಿ ಎಂದೂ. ಅವನಿಗೆ ಏನೂ ಆಗುವುದಿಲ್ಲವೆಂದೂ. ಇಷ್ಟು ವರ್ಷ ಬದುಕಿಸಿರುವ
ದೇವರೂ ಮತ್ತೂ ಅವನನ್ನು ಕಾಯುತ್ತಾನೆಂಬುದು. ’ ಅವಳ ನಂಬಿಕೆಯ ಮೂಲವಾಗಿತ್ತು.

ಈ ಕ್ಷಣ ಅಮ್ಮನಿಗೆ ಏನಾಗಬಹುದು; ಅವಳಿಗೆ ಏನು ಬೇಕಾದ್ರು ಆಗಬಹುದು;

‘ಅಯ್ಯೋss, ಕಪಾಲೇಶ್ವರ. ಮತ್ತೆ, ನಿನ್ನ ಹತ್ರ ಬಂದು ಹಣ್ಣು ಕಾಯಿ ಹೊಡುಸ್ತೀನಿ.
ದಯವಿಟ್ಟು ನನ್ನಮ್ಮನಿಗೆ ಏನೂ ಮಾಡಬೇಡ. ’ ಎಂಬುದಾಗಿ ಮನದೊಳಗೇ ಹರಕೆಯೊಂದನ್ನು
ಕಟ್ಟಿಕೊಂಡೆ. ಅವಕಾಶವಾದಿ ಭಕ್ತನಂತೆ.

ಅಮ್ಮ, ಕಣ್ಣು ಬಿಡಲೊಲ್ಲಳು, ಕಚ್ಚಿಕೊಂಡಿದ್ದ ಹಲ್ಲು ಸಡಿಲಿಸಲೊಲ್ಲಳು. ಬಿಗಿಯಾಗಿ
ತಪ್ಪಿಕೊಂಡು ಕುಳಿತೆ.

ಅಮ್ಮನನ್ನು ಕಳೆದುಕೊಂಡು ಬಿಡುವೆನೆಂಬ ಭಯ-ಆತಂಕಗಳು ಸೃಷ್ಟಿ ಯಾಗಿತ್ತೇ ವಿನಃ ಆ ಕ್ಷಣದ
ತಮ್ಮನ ನಿರ್ಗಮನವು, ನನ್ನ ಗಮನಕ್ಕೇ ಬರುತ್ತಿಲ್ಲ.

ಆ ಕ್ಷಣ ಅಳು ಬರಲಿಲ್ಲ. ದುಃಖ ಆಗಲಿಲ್ಲ. ಏನೂ ಅನ್ನಿಸ್ತಾನೆ ಇಲ್ಲ.

ಹಂಗಾದ್ರೆ, ನಾನು ನನ್ನ ತಮ್ಮನಿಗೆ ಏನೂ ಆಗಿರಲಿಲ್ಲವಾ …?

* * * * *

8. ತಮ್ಮನಾದವನು ಪಡಸಾಲೆಯಲಿ, ಅಮ್ಮನು ಆಸ್ಪತ್ರೇಲಿ
------------------------------------------

ತಮ್ಮನ ದೇಹವನ್ನು, ಮನೆಯ ಹೊರಗಿನ ಪಡಸಾಲೆಯ ಮಂಚದ ಮೇಲೆ ಇಟ್ಟಿದ್ದಾರೆ. ಅವನು ಮೊದಲು
ಮಲಗಿದ್ದ ಅದೇ ಹಾಸಿಗೆಯ ಮೇಲೇ ಒಳಗೆ ಕುಳಿತಿದ್ದ ಅಮ್ಮ,

‘ ಪವಿ, ಕಂದಾ, ನನ್ನ ಬಿಟ್ಟು ಹೋಗ್-ಬ್ಯಾಡೋ. ’ ಎಂದು ಘೀಳಿಡುತ್ತಾ, ಮಂಚದಿಂದ ಕೆಳಗೆ
ಹಾರಿದಳು. ಅದಾಗಲೇ ಮುರಿದಿದ್ದ ಕಾಲಿನ ಮೂಳೆ, ಇದರಿಂದ ಮತ್ತಷ್ಟು ಉಲ್ಬಣವಾಯಿತು.

ತೆವಳುತ್ತಲೇ, ತಮ್ಮನಿರುವಲ್ಲಿಗೆ ಬಂದು ಮಂಚದ ಪಕ್ಕದಲ್ಲಿ ಕುಳಿತಳು. ಅಳು
ನಿಲ್ಲಿಸಿದಳು. ಮತ್ತೆ, ಸಂಪೂರ್ಣ ನಿಶ್ಯಬ್ಧ.

ಮೆಲ್ಲಗೆ ತಮ್ಮನ ದೇಹವನ್ನು ಅಲುಗಿಸುತ್ತಾ, ‘ ಏಳು ಕಂದ, ಟೈಮಾಯ್ತು. ಬೂಸ್ಟ್
ಕುಡಿಯುವಂತೆ. ಯಾಕಪ್ಪ ಇಷ್ಟು ನಿದ್ದೆ ಮಾಡ್ತಾ ಇದಿಯಾ. ಎದ್ದೇಳು, … ಹೇ, ಯಾರೋ ಅದು
ಅವನ ಹಣೆ ಮೇಲೆ ಇಷ್ಟು ಕುಂಕುಮ ಇಟ್ಟಿರೋದು ’ ಎನ್ನುತ್ತಾ ಅದನ್ನು ಒರೆಸಿದಳು.

ಅವಳ ನೋವನ್ನು ಸ್ಪರ್ಷಿಸುವ ಶಕ್ತಿ ಯಾರಿಗೂ ಇರಲಿಲ್ಲ. ನನಗೂ ಇರಲಿಲ್ಲ. ಅಳುವ ಹಂಗೂ
ಇಲ್ಲ ಮತ್ತು ಆ ಜಾಗ ಬಿಟ್ಟು ಎದ್ದು ಬರೋ ಹಂಗೂ ಇಲ್ಲ.

‘ಬಾಡಿ’ ನೋಡಲು ಬರುತ್ತಿದ್ದ ಅವನ ಸ್ನೇಹಿತರಿಗೆಲ್ಲಾ ‘ ಹೇಯ್, ನೀನು ಅವನ ಫ್ರೆಂಡ್
ಅಲ್ವೇನೋ. ಗಣಪತಿ ಇಡೋದಕ್ಕೆ ದುಡ್ಡು ಕಲೆಕ್ಟ್ ಮಾಡಕ್ಕೆ ಕರ್ಕೋಂಡ್ ಹೋಗು. ನೀ
ಏಳ್ಸುದ್ರೆ, ಇವನು ಎದ್ದೇಳ್ತಾನೆ ’ ಎನ್ನುವಳು.

ಒಂದೊಂದು, ಕ್ಷಣವೂ ನನ್ನ ಗಮನವೆಲ್ಲಾ ಅಮ್ಮನ ಮೇಲೆಯೇ ಇದೆ ಹೊರತು, ಅಗಲಿರುವ ತಮ್ಮನ
ಮೇಲಿಲ್ಲ. ಅಳುತ್ತಿದ್ದುದೂ ಕೂಡ ಅಮ್ಮನ ಪರಿಸ್ಥಿತಿ ನೋಡಲಾಗದೆ.

ಆಗಿದ್ದು, ಆಗೋಯ್ತು. ಈಗ ನನಗೆ ಅಮ್ಮ ಬೇಕು.

ಅವಳಿಗೆ ಏನಾದ್ರು ಆದ್ರೆ, ನನಗೆ ಅಡುಗೆ ಮಾಡಾಕೋರು ಯಾರು ..? ನನ್ನ ಬಟ್ಟೆ ತೊಳೆಯೋರು
ಯಾರು ..? ತಮ್ಮನಿಂದ ಯಾರಿಗೆ ಏನು ಉಪಯೋಗ. ..? ಅಥವಾ ಮನಸ್ಸಿನೊಳಗೆ ಮತ್ತೇನು ಕಾಣದ
ಲೆಕ್ಕಾಚಾರವೋ ನಾ ಅರಿಯೆ..

ನನಗೆ ಆ ಸಂದರ್ಭದಲ್ಲಿ ಅಮ್ಮ ಬೇಕಿತ್ತು.

ನಡುಮನೆಯಲ್ಲಿ ಅಪ್ಪನ ಸರ್ಕಸ್ ಶುರುವಾಯ್ತು. ಡಾಕ್ಟರುಗಳು ಕೊಡುತ್ತಿದ್ದ
ರಿಪೋರ್ಟ್-ಗಳದ್ದೊಂದು ರಾಶಿ, ಹೃದಯವನ್ನು ಚಿತ್ರೀಕರಿಸಿದ್ದ ಸಿಡಿಗಳು, ಮಾತ್ರೆಗಳು,
ಔಷಧಿ ಡಬ್ಬಿಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕುಳಿತರು.

‘ ಫೈಲ್-ಗಳನ್ನೆಲ್ಲಾ, ಹೆಗ್ಲಿಗಾಕ್ಕೋಂಡು. ಮಗನ್ನ ಕರ್ಕೋಂಡು
ಆಸ್ಪತ್ರೆಯಿಂದ-ಆಸ್ಪತ್ರೆಗಳಿಗೆ ಅಲೀತಿದ್ದೆ.
`ಏನ್ ಕುಮಾರಪ್ಪ, ಮಗನ್ನ ಕರ್ಕೋಂಡು ಹೊಂಟ್ ಬುಟ್ಟಾ . ..?`ಅಂತ ಕೇಳೋರು ಜನ. ’

‘ ಯಾರೊಬ್ರೂ ನನ್ನ ಮಗನ್ನ ಉಳಿಸೋಕಾಗ್ಲಿಲ್ವಾ ..? ದೇವ್ರೇ, ನಿನಗೆ ನನ್ನ ಮಗನ ಮೇಲೆ
ಅಷ್ಟೂ ಕರುಣೆ ಇಲ್ಲದಾಯ್ತಾ. ಕೊನೆಗೂ, ಬಲಿ ತಗೋಂಡು ಬುಟ್ಯಲ್ಲಾ . ’ ಅಪ್ಪನ ಜೊತೆಗೆ
ತಂಗಿ ಸೇರಿಕೊಂಡಳು. ಅವರು ಅಪ್ಪ-ಮಗಳು ಒಬ್ಬರನ್ನೊಬ್ಬರು ಹಿಡ್ಕಂಡು ಗೊಳೋ, ಅನ್ನೋಕ್
ಶುರು ಮಾಡಿದ್ರು.

ಜನಗಳು ಬರೋದು, ಹೋಗದು, ಮಾಡಿದರೂ. ಅಮ್ಮನಿಗೆ ಏನೊಂದೂ ತಿಳಿಯುತ್ತಿಲ್ಲ. ಭುಜ ಅಲುಗಿಸಿ.
‘ ಅಳಮ್ಮಾ. ಅಳು ’ ಅಂದ್ರೂ ಅಳ್ತಿಲ್ಲ. ಮಗನ ಜೊತೆ ಸಂಭಾಷಣೆಯಲ್ಲಿ ತೊಡಗಿರುವಳು.

ಸುಮಾರು ಒಂಭತ್ತು ಘಂಟೆಯ ಹೊತ್ತಿಗೆ, ಅಮ್ಮನ ತಮ್ಮ, ಬಂದರು.

ಅವರನ್ನು ನೋಡಿದೊಡನೇ, ‘ ಚಂದ್ರು, ಬಾರೋ ನೀ ಹೇಳುದ್ರೆ, ಗ್ಯಾರಂಟಿ ಎದ್ದೇಳ್ತಾನೆ ಕಣೋ.
ಮಾಮನ ಮಾತು ಕೇಳ್ತಾನೆ ಕಣೋ ನೀನು ಎಬ್ಸೋ, ’ ಮಾಮನ ಕೊರಳಿಪಟ್ಟಿ ಹಿಡಿದು ಘೀಳಿಟ್ಟಳು.
ಅಷ್ಟು ಹೊತ್ತಿನ ದುಃಖ ಒಮ್ಮೆಲೇ ಹೊರಗೆ ಬಂತು.

ಉಸಿರು ತೆಗೆದುಕೊಳ್ಳಲಾಗದೇ, ದಬಾರನೆ ಮೂರ್ಛೆ ಬಿದ್ದಳು. ‘ ಮಿನಿ ಹಾರ್ಟ್ ಅಟ್ಯಾಕು ’
ಅಂದರು. ಅಲ್ಲಿಂದಲ್ಲೇ ಬಿಟ್ಟು . ಅಮ್ಮನ್ನ ಕರ್ಕೋಂಡು ಆಸ್ಪತ್ರೆಗೆ ಹೊರಟೆವು.

ನಮ್ಮ ಫ್ಯಾಮಿಲಿ ಡಾಕ್ಟರನ್ನು ಹುಡುಕಿಕೊಂಡು ಹೋದಾಗ, ಅವರು ಸಿಗಲಿಲ್ಲ.

ಅವರಿಗೆ ಫೋನಾಯಿಸಿದಾಗ, ‘ ಹುಚ್ಚಿ, ಅವಳು. ಅವಳನ್ನ ಯಾವ್ದಾದ್ರು ರೂಮಲ್ಲಿ ಕೂಡಿ
ಹಾಕ್ರಿ. ಇಲ್ಲಾಂದ್ರೆ, ಅವಳನ್ನೂ ಕಳ್ಕೋತೀರ. ..? ’ ಅಂದ್ರು. ಕೊನೆಗೆ ಚಿಕ್ಕ ಸ್ವಾಮಿ
ಆಸ್ಪತ್ರೆಗೆ ಹೋದೆವು.

‘ ಹೋದ ವಾರ ಪವನ್ ಅಂತ ಹಾರ್ಟ್ ಪೇಷೆಂಟ್ ಬಂದಿದ್ದನಲ್ಲಾ, ಅವನು, ಬೆಳಗ್ಗೆ ಎಕ್ಸ್-ಪೈರ್
ಆಗಿಬಿಟ್ಟ ಸಾರ್!! ಅವರಮ್ಮಂಗೆ ಸೀರಿಯಸ್ ಆಗಿದೆ. ’ ಅಂತ ಜೊತೆಯಲ್ಲಿ ಬಂದಿದ್ದ ಕಜಿನ್
ಬ್ರದರ್-ಗಳು ವಿವರಿಸಿದರು.

ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡು, ಡ್ರಿಪ್ಸ್ ಹಾಕಿದರು. ವಯಲೆಂಟ್ ಆಗದ
ರೀತಿಯಲ್ಲಿ, ‘ ಮತ್ತು ’ ಬರುವ ಚುಚ್ಚುಮದ್ದು ನೀಡಲು ಮುಂದಾದರು.

ಆದರೆ ಅಮ್ಮನ ಗಮನಕ್ಕೆ ಬಾರದ ರೀತಿಯಲ್ಲಿ, ಅಲ್ಲಿ ಅಂತಿಮಸಂಸ್ಕಾರ ನಡೆಯುವಂತಿರಲಿಲ್ಲ.

ಪ್ರಜ್ನೆ ಬಂದ ಮೇಲೆ, ‘ ನನ್ನ ಮಗ, ಎಲ್ಲಿ ..? ’ ಅಂತ ಕೇಳುದ್ರೆ

ಇವೆಲ್ಲಾ, ಭಾವನೆಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ, ಅತಿರೇಕಕ್ಕೆ ಹೋಗುವ ಮನುಷ್ಯ
ಸ್ವಭಾವಗಳು. ಹೊರಗೆ ನಿಂತು, ಡಿಬೇಟ್ ಮಾಡುವುದು ಸಾಧ್ಯವಿರಲಿಲ್ಲ.

ಮೈಲ್ಡ್ ಆಗಿ. ಮತ್ತು ಬರುವ ಚುಚ್ಚುಮದ್ದು ಕೊಟ್ಟರು. ನಂತರವೂ ಕೂಡ.,
ಅರೆಪ್ರಜ್ನಾವಸ್ಥೆಯಲ್ಲಿ.

‘ ಇಲ್ಲಾ, ನೀವೆಲ್ಲಾ ಸೇರ್ಕೊಂಡು, ನನಗೇನೋ ಮಾಡಿಬಿಟ್ರಿ. ನನಗೆ ಕಣ್ಣು ಬಿಡಕ್ ಆಗ್ತಾ
ಇಲ್ಲ. ಮತಾಡೋದಕ್ಕೆ ಆಗ್ತಾ ಇಲ್ಲ. ನಾನು ನನ್ನ ಮಗನ ಹತ್ತಿರ ಹೋಗಬೇಕು. ಅಲ್ಲಿಗೆ ಕರ್ಕೋ
ಹೋಗ್ರಿ. ನಾನು ನನ್ನ ಮಗನ ಹತ್ತಿರ ಹೋಗಬೇಕು. ’ ಎಂಬುದಾಗಿ ಸಣ್ಣಗೆ ಮಮ್ಮಲ
ಮರುಗುತ್ತಿದ್ದಳು.

ಕೈ ಹಿಡಿದು ಪಕ್ಕದಲ್ಲಿಯೇ ಕುಳಿತಿದ್ದವನಿಗೆ, ಆ ಮಾತುಗಳು ಕೇಳಿಸುತ್ತಿದ್ದವು.

ತಮ್ಮ ಶವವಾಗಿದ್ದಾನೆ. ಮನೆಯಲ್ಲಿ ಅಂತ್ಯ ಸಂಸ್ಕಾರದ ಸಿದ್ದತೆಗಳು ನಡೆಯುತ್ತಿವೆ. ನಾನು
ಆಸ್ಪತ್ರೆಯಲ್ಲಿ ಅಮ್ಮನ ಪಕ್ಕದಲ್ಲಿ ಕುಳಿತಿದ್ದೇನೆ.

* * * * *

9. ಮಣ್ಣಿಗೂ, ಮುತ್ತಿಗೂ ಧನ್ಯಮಿಲನ
-----------------------------

ಮಧ್ಯಾಹ್ನದ ಹೊತ್ತಿಗೆ, ಅಮ್ಮನನ್ನು ಡಿಸ್ಚಾರ್ಜ್ ಮಾಡಿಸಿದೆವು. ‘ ಇಂಜೆಕ್ಷನ್ ಪವರ್
ಸಂಜೆ ವರ್ಗೂ ಇರತ್ತಾದರೂ., ಬಹಳ ಭಾವಾವೇಶಕ್ಕೆ ಒಳಗಾಗದ ರೀತಿಯಲ್ಲಿ ಮ್ಯಾನೇಜ್ ಮಾಡ್ರಿ
’ ಅಂತ ಡಾಕ್ಟರು ಸಲಹೆಯನ್ನೂ ಕೊಟ್ಟರು.

ಬೇರೊಂದು ಮನೆಯಲ್ಲಿ ಅಮ್ಮನನ್ನು ಮಲಗಿಸಿ, ಅವಳ ಪಕ್ಕದಲ್ಲಿ ಕುಳಿತಿದ್ದೆ. ಈಗಲೂ
ಮನೆಯಲ್ಲಿ ಏನು ನಡೆಯುತ್ತಿದೆ, ಗೊತ್ತಿಲ್ಲ.

ನನಗೆ ಅಮ್ಮ ಬೇಕು. ಯಾರು ಏನಾದ್ರು ಹಾಕ್ಕೋಂಡ್ ಸಾಯ್ ಹೋಗ್ಲಿ.

ಸ್ವಲ್ಪ ಹೊತ್ತಿನಲ್ಲಿಯೇ ಪ್ರಜ್ನಾಹೀನ ಸ್ಥಿತಿಗೆ ತಲುಪಿದ ಮತ್ತೊಂದು ದೇಹವನ್ನು ತಂದು,\
 ಹಾಸಿಗೆಯ ಮೇಲೆ ಹಾಕಿದರು. ಆ ಬಾಡಿ ನನ್ನ ಚಿಕ್ಕಮ್ಮನದು(ಅಮ್ಮನ ತಂಗಿ).

ನನ್ನಮ್ಮ ದೇವಕಿಯಾದರೆ, ಚಿಕ್ಕಮ್ಮ ಅವನ ಪಾಲಿಗೆ ಯಶೋಧೆಯಂತೆ. ಅವರಿಬ್ಬರೂ.
ಅಮ್ಮ-ಮಗನಿಗಿಂತ ಹೆಚ್ಚಾಗಿ., ಸ್ನೇಹಿತರು. ಅವನು ತನ್ನ ಸ್ವಂತ ಬಾಲ್ಯವನ್ನು ಚಿಕ್ಕಮ್ಮನ
ಜೊತೆ ಕಳೆದರೆ,\
 ಚಿಕ್ಕಮ್ಮ, ತನ್ನ ಕಳೆದುಹೋದ ಬಾಲ್ಯವನ್ನು ಅವನ ಜೊತೆಗೆ ಕಳೆದು ನಲಿದಿದ್ದಳು. ಈಗ ದುಃಖ
ತಾಳಲಾರದೆ, ಅವಳೂ ಮೂರ್ಛೆ ಹೋಗಿದ್ದಾಳೆ.

ತಮ್ಮನ ದೇಹ, ಎತ್ತುವ ಹೊತ್ತಿಗೆ ಸರಿಯಾಗಿ ಅಮ್ಮನನ್ನು ಕರೆದುಕೊಂಡು ಹೋದೆ. ಅದಕ್ಕಿಂತ
ಮುಂಚೆ ಮನೆಗೆ ಹೋಗಿ, ‘ ಅಮ್ಮನನ್ನು ನೋಡಿ ಗೊಳೋ. ಅನ್ನುವುದಾಗಲೀ,\
 ಹೆಚ್ಚು ಮಾತನಾಡಿಸುವುದಾಗಲೀ ಮಾಡಬಾರದೆಂದು ’ ಅಲ್ಲಿರುವವರಿಗೆ. ಹೇಳಿದ್ದಾತು.

ಅಂತಿಮ ಯಾತ್ರೆ ಶುರುವಾಯಿತು. ಮನೆ ಮುಂದೆ ಬೆಂಕಿ ಹಾಕೋದ್ರಿಂದ ಹಿಡಿದು . ಸ್ಮಶಾಣದಲ್ಲಿ
ಗುಂಡಿ ಅಗಿದು ಮಣ್ಣು ಮಾಡುವ ಮಧ್ಯೆ ನೂರೆಂಟು ಪ್ರೊಸೀಜರ್ ಗಳು.

ಶಾಸ್ತ್ರ, ಸಂಪ್ರದಾಯಗಳು, ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದವು ಅಂದರೆ,\
 ಅಲ್ಲಿ ನೊಂದವರಿಗೆ ಅಳೋದಕ್ಕೂ. ಫೀಲ್ ಮಾಡಿಕೊಳ್ಳೋದಕ್ಕೂ ಸ್ಪೇಸ್ ಇಲ್ಲ.

‘ ಎಲ್ಲಾ, ಹೋಗ್ತೀರದೆ, ಮುಂದೆ. ನಮಗೂ ಇಂತಾದ್ದೊಂದು ಜರ್ನಿ ಇದ್ದೇ ಇದೆ. ’ ಎಂಬುದನ್ನು
ಸಲೀಸಾಗಿ ಹೇಳುತ್ತಾ, ಹೆಚ್ಚು ಭಾವುಕರಾದವರನ್ನು ಮನಸಾರೆ ಹಂಗಿಸುತ್ತಿದ್ದರು ಕೆಲವರು.
ಹೊರಗೆ ನಿಂತು ಸಾವು ನೋಡುವವರಿಗೆ ಇದು ಒಂದು, ‘ ಹಾ, ಏನೋ ಆಗಿದೆ. ’ ಅನ್ನೋ ಸಮಾಚಾರ.
ಆದರೆ ಒಂದು ಸಾವು ಇಷ್ಟು ಕಠೋರವಾಗಿರತ್ತಾ ..?

ಬರಬೇಕಾದವರು, ನೋಡಬೇಕಾದವರು, ಎಲ್ಲರೂ ಒಂದು ಸಾರಿ ನೋಡಿಕೊಂಡ ಮೇಲೆ,\
 ಬಾಡಿಯನ್ನು ಗುಂಡಿಯ ಒಳಗೆ ಇಟ್ಟರು. ಆಗ ಕುಸಿದು ಬಿದ್ದವಳೆಂದರೆ ನನ್ನ ತಂಗಿ.

ತಮ್ಮ-ತಂಗಿ ಹೆಚ್ಚೂ ಕಮ್ಮಿ ಓರಗೆಯವರು. ಜೊತೆಯಲ್ಲಿಯೇ ಬೆಳೆದವರು.ಜೊತೆಯಲ್ಲಿಯೇ
ಆಡಿದವರು. ಕಿತ್ತಾಡಲು ಕೂಡ ಇಬ್ಬರ ಮಧ್ಯೆ ಸಮಾನವಾದ ವಿಷಯಗಳಿರುತ್ತಿದ್ದವು. ಅವನ
ಸ್ಕೂಲಿನ ಬ್ಯಾಗುಗಳನ್ನು ಇವಳೇ ಹೊರಬೇಕಿತ್ತು. ಕೆಲವು ಸಾರಿ, ಕೂಸುಮರಿ ಮಾಡಿಕೊಂಡು
ಅವನನ್ನೂ ಹೊತ್ತುಕೊಂಡು ಬಂದದ್ದು ಇದೆ.

ನನಗೆ ಸ್ವಲ್ಪ ಕೊಬ್ಬು ಜಾಸ್ತಿ, ಅಣ್ಣನೆಂಬ ಗತ್ತು ಆಗಿರಬಹುದು ಅಥವಾ ಮತ್ತೇನೋ

* * * * *

10. ಮತ್ತೊಂದು ಕರಾಳ ರಾತ್ರಿ
------------------------

ಕತ್ತಲಾಯಿತು.

ದೇಹ ಮಣ್ಣು ಮಾಡಿದ ದಿನ, ಮನೆಯವರ ಹೊರತಾಗಿ ಯಾರೊಬ್ಬರೂ,\
 ತೀರಿ ಹೋದವರ ಮನೆಯಲ್ಲಿ ಉಳಿದುಕೊಳ್ಳುವಂತಿಲ್ಲ. ಇದು ಸಂಪ್ರದಾಯ.

ಬೆಳಗಿನಿಂದಲೂ ನಡೆಸಿದ ಸಂಪ್ರದಾಯಗಳಲ್ಲಿ, ಇದೊಂದೆ ನನಗೆ ಅಚ್ಚು ಮೆಚ್ಚು ಅನಿಸಿದ್ದು.
ಸಧ್ಯ, ಎಲ್ಲ ತೊಲಗಿದರು, ಅನ್ನೋ ನಿರಾಳ ಭಾವ.

ನಾನು, ಅಮ್ಮ, ಅಪ್ಪ ಮತ್ತು ತಂಗಿ. ನಾವು ನಾಲ್ಕೇ ಜನ ಮನೆಯಲ್ಲಿ. ಎಲ್ಲರೂ
ಸಮಾನದುಃಖಿಗಳು. ಈಗ ಯಾರೂ ಯಾರ ಮುಂದೆಯೂ ಬಹಿರಂಗವಾಗಿ ರೋಧಿಸುವಂತಿಲ್ಲ. ಎಲ್ಲರೂ,
ಎಲ್ಲರನ್ನೂ ಸಮಾಧಾನ ಪಡಿಸಬೇಕು.

ಮಂಚದ ಮೇಲೆ ಮಧ್ಯದಲ್ಲಿ ಅಮ್ಮ ಮಲಗಿದ್ದಾಳೆ. ಆಚೆಕಡೆ ತಂಗಿ, ಈಚೆಕಡೆ ನಾನು. ಅಪ್ಪಾ
ಅವರು ಕೆಳಗೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಯಾರೊಬ್ಬರೂ ನಿದ್ರಿಸುತ್ತಿಲ್ಲ.

ಮಾತು, ಮಾತು, ಮಾತು, ಮಧ್ಯೆ ಒಂದು ಧೀರ್ಘ ಮೌನ.

ಸೂರಿನ ಹೆಂಚುಗಳನ್ನ ದಿಟ್ಟಿಸುತ್ತಾ, ಒಂದಷ್ಟು ನೆನಪುಗಳ ಜೋಲಿಯಲಿ ತಾವು ತೂಗಿ, ಆನಂತರ
ಅನುಭವಿಸಿದ್ದನ್ನ ಹೇಳುವರು.

‘ ನೆನ್ನೆ ದಿನ ಇದೇ ಹಾಸಿಗೆಯ ಮೇಲೆ ರಣರಣ ಅಂತ ನರಳುತ್ತಿದ್ದ ನನ್ನ ಮಗ, ಈವತ್ತು
ಅರಾಮಾಗಿ ಮಲಗಿದ್ದಾನೆ. ಇನ್ನು ಮುಂದೆ, ಅವನಿಗೆ ಯಾವ ರೀತಿಯ ನೋವುಗಳೂ ಬಾಧಿಸುವುದಿಲ್ಲ.
’ ಅಂತ ಅಮ್ಮ ಹೇಳುವಾಗ ಅದು ನಿಜವಾ ..? ಹಾಗೂ ಇರತ್ತಾ ..? ಅಥವಾ ಹಾಗೂ ಯಾಕಿರಬಾರದು
ಅನ್ನೋ ಥಾಟು.

‘ `ತೊಟ್ಲಲ್ಲಿ ಮಗು ಬಿಟ್ಟು ಬಂದಿದ್ದೇನೆ` ಅಂತ ಅಮ್ಮಂದಿರು ಹೇಳೋ ಹಂಗೆ,\
 `ಅಯ್ಯೋ,  ಮನೆಯಲ್ಲಿ ನನ್ನ ಮಗ ಒಬ್ಬನ್ನೇ ಬಿಟ್ಟು ಬಂದಿದ್ದೇನೆ` ಅಂತ ಹೇಳಿ ಎಲ್ಲೇ
ಹೋದ್ರು, ಸಂಜೆಯೊಳಗೆ ಮನೆಗೆ ಬರ್ತಿದ್ದೆ. ಈಗ ಆ ಥರ ಏನೂ ಇಲ್ಲ. ’

‘ ಅವನೂ ದೊಡ್ಡವನಾಗ್ತಾ ಇದ್ದ. ಇನ್ನು ಬದುಕಿದ್ರೂ ತುಂಬಾ ಕಷ್ಟ ಪಡಬೇಕಿತ್ತು.
ಹೋಗಿದ್ದು ಒಳ್ಳೇದಾಯ್ತು. ’ ಅನ್ನುವಳು ಅಮ್ಮ.

ಯೊಪ್ಪಾ ಇಷ್ಟು ಬೇಗ ಎಲ್ಲಾ ಮುಗಿದು ಹೋಯ್ತಾ ..?

‘ ಸಾವು ಅಂದ್ರೆ ಏನು..? ’ ಅನ್ನೋದು ನಮ್ಮ ಅನುಭವಕ್ಕೆ ಮೊದಲ ಬಾರಿಗೆ ಯಾವತ್ತೋ ಒಂದಿನ
ಬಂದಿರತ್ತೆ.

ನಮ್ಮ ಪಕ್ಕದ ಮನೆಯಲ್ಲೊಬ್ಬರು ಅಜ್ಜಿ ಇದ್ದರು. ಸದಾ ಮನೆಯ ಹೊರಗಿನ ಕಾಂಕ್ರೀಟ್ ಜಗುಲಿಯ
ಮೇಲೆ ಕೂತಿರುತ್ತಿದ್ದರು. ಅನಾರೋಗ್ಯದಿಂದ ಒಂದಿನ ತೀರಿ ಹೋದರು. ಅವರ ಮರಣದ ದಿನ ಅದೇ
ಜಗುಲಿಯ ಮೇಲೆ ಶವವನ್ನು ಇಟ್ಟಿದ್ದರು. ಆ ವಾತಾವರಣವೇ ಡಿಸ್ಟರ್ಬಿಂಗ್
ಅನ್ನಿಸುತ್ತಿತ್ತು.

ಆ ನಂತರ, ಆ ಜಗುಲಿಯ ಮೇಲೆ ಅವರು ಕೂರುವುದನ್ನು ನಾನು ನೋಡಲೇ ಇಲ್ಲ. ಹಂಗಾದ್ರೆ ಅವರು
ಇನ್ಮೇಲೆ ಅಲ್ಲಿ ಕೂರೋದಿಲ್ವಾ ..? ಯಾರ ಕೈಗೂ ಸಿಗೋದಿಲ್ಲವಾ ..? ಯಾರ ಕಣ್ಣಿಗೂ
ಕಾಣೋದಿಲ್ಲವಾ ..? ಎಂಬ ವಿಚಾರಗಳೆಲ್ಲಾ ತಲೆಯನ್ನು ಹೊಕ್ಕಿ, ಮೊದಲ ಬಾರಿಗೆ ‘ ಸಾವು ’
ಭಯ ಮೂಡಿಸಿತ್ತು.

ಇದಾದ ಮೇಲೆಯೂ ಕೂಡ ಸಾವಿನ ಸುದ್ದಿಗಳು, ಇತರೆ ಸಮಾಚಾರಗಳ ಜೊತೆಗೆ ಸುತ್ತಿಕೊಂಡು
ಹೋಗಿರುತ್ತಿದ್ದವು. ಅವರು ಬದುಕಿ ಹೋಗಿರುವುದರ ಬಗ್ಗೆ ಹೇಳುತ್ತಿದ್ದ ನಾಲ್ಕು ಒಳ್ಳೆಯ
ಮಾತುಗಳ ಆಚೆ, ಆ ವ್ಯಕ್ತಿಗಳ ಯಾವುದೇ ನೆನಹು, ಕುರುಹುಗಳು ಸಿಗದೇ, ಬಹಳ ಕಡಿಮೆ
ಸಮಯದೊಳಗೆ ಕಾಲಗರ್ಭದೊಳಗೆ ಅವರೆಲ್ಲಾ ಕಳೆದು ಹೋಗಿರುತ್ತಿದ್ದರು.

ಹೀಗೆ ಒಂದಿನ, ಸ್ಕೂಲು ಮುಗಿಸಿಕೊಂಡು ಒಬ್ಬನೇ ಮನೆಯ(ಊರಿನ) ಕಡೆಗೆ ನಡೆದು
ಬರುತ್ತಿದ್ದೆ. ಬೈಕಿನಲ್ಲಿ ಹೋಗುತ್ತಿದ್ದ ನಮ್ಮೂರಿನ ಇಬ್ಬರು ನಿಲ್ಲಿಸಿ,

‘ ನಿಮ್ಮಜ್ಜ ದನಗಳಿಗೆ ನೀರು ಕುಡ್ಸೋವಾಗ, ಚಾನಲ್ ಗೆ ಬಿದ್ದು ಸತ್ತೋದ್ರು. ’ ಅಂತ ಹೇಳಿ
ಅದೇ ಬೈಕಿನಲ್ಲಿ ಕೂರಿಸಿಕೊಂಡು ಊರಿಗೆ ಕರ್ಕೋಂಡು ಹೋದರು.

ವಯಸ್ಸು ಚಿಕ್ಕದಿದ್ದುದರಿಂದಲೋ ಅಥವಾ ಅಜ್ಜನ ಜೊತೆಗೆ ಅಷ್ಟಾಗಿ ಭಾವನಾತ್ಮಕಾವಾಗಿ
ಬೆರೆಯದಿದ್ದುದರ ಪ್ರಭಾವವೋ. ದುಃಖ ಅಂತೂ ಆಗಲಿಲ್ಲ.

ರಾತ್ರಿಯಿಡಿ ಶವವನ್ನು ಕಾಯುವಾಗ, ಭಜನೆ ಕಾರ್ಯಕ್ರಮವಿರುತ್ತದೆ. ನಾನು ಮತ್ತು ನನ್ನ
ವಯಸ್ಸಿನ ಕೆಲವು ಮೊಮ್ಮಕ್ಕಳು, ಭಜನೆಯವರ ಜೊತೆಗೆ ಸೇರಿಕೊಂಡು ರಾತ್ರಿಯಿಡೀ ಕಣ್ಣು
ಮುಚ್ಚದ ರೀತಿಯಲ್ಲಿ ಎಚ್ಚರವಿದ್ದು ನೃತ್ಯ ಮಾಡಿದೆವು.

ದೊಡ್ಡವರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿ ಹೋಗಿದ್ದರು. ಇದಾವುದರ ಪರಿವೇ ಇಲ್ಲದೇ
ಭಜನೆಯವರ ಜೊತೆ ಸೇರಿಕೊಂಡು ನಾವುಗಳು ಕುಣಿಯುತ್ತಿದ್ದೆವು. ನನಗೆ ನೆನಪಿರುವಂತೆ
ಮೊದಲಬಾರಿಗೆ, ರಾತ್ರಿಯಿಡೀ ಎಚ್ಚರವಿದ್ದು ಸೂರ್ಯೋದಯವನ್ನು ನೋಡಿದ ಮೊದಲ ಅನುಭವ ಅದು.

ಇದಾಗಿ ಎರಡು ದಿನಗಳ ಬಳಿಕ, ಶೋಕದಿಂದ ಕೊಂಚ ಹೊರಬಂದ ನಂತರ ನನ್ನ ಅಪ್ಪ ಮೊದಲು ಮಾಡಿದ
ಕೆಲಸ ಅಂದ್ರೆ,

‘ ನಮ್ಮಪ್ಪ ಸತ್ತೋದ್ರೆ ಡ್ಯಾನ್ಸ್ ಮಾಡ್ತೀಯ ..? ’ ಅಂತ ಬಯ್ದು ಅಂಡಿನ ಮೇಲೆ
ಬಾರಿಸಿದ್ದು.

ಆದ್ರೆ ಸಾವು ಇಷ್ಟು ಕ್ರೂರವಾಗಿರತ್ತೆ ಅಂತ ಗೊತ್ತಿರಲಿಲ್ಲ. ನನ್ನ ತಮ್ಮ ಇಲ್ಲವಾಗಿರುವ
ವ್ಯಾಕ್ಯೂಮ್, ಅವನನ್ನು ಮಣ್ಣುಮಾಡಿ ಬರುವುದರೊಳಗೆ ಹೊರಟು ಹೋಗಿತ್ತಾ . ..?

ಬೆಳಗಿನಷ್ಟು ಹೊಯ್ದಾಟವಿಲ್ಲ.

ಆತಂಕವಿಲ್ಲ.

ಅಂತಹಾ ಭಾವ ಯಾರಿಗೂ ಇದ್ದಂತೆ ಕಾಣಲಿಲ್ಲ. ಎಲ್ಲರೂ ಆರಾಮಾಗಿ, ಅವನ ನೆನಪುಗಳನ್ನು
ಮೆಲುಕು ಹಾಕುತ್ತಾ ನಗುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ನೆನೆದು ಸಾರ್ಥಕತೆಯನ್ನು
ಅನುಭವಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಮಧ್ಯೆ, ಗತ್ತು, ಗೌರವದಿಂದ ಅವನು ಬದುಕಿದ್ದೇ
ಒಂದು ಮಿರಾಕಲ್ ಅನ್ನುವಂತೆ ಮಾತನಾಡುತ್ತಿದ್ದಾರೆ.

ಅಥವಾ ಅವನು ಇಲ್ಲವಾಗಿರುವ ವಿಷಯವನ್ನು ಯಾರ ಚೇತನಗಳೂ ಒಪ್ಪಿಕೊಳ್ಳಲಾಗದೇ,\
 ಇಡೀ ಸನಿವೇಶವನ್ನು, ಕನಸೆಂಬಂತೆ ತಿಳಿದು ಮಾತನಾಡುತ್ತಿರಬಹುದಾ ..? ಇಷ್ಟು ಬೇಗ,
ಎಲ್ಲಾ ಮುಗಿದೋಯ್ತಾ . ..?

* * * * *

11. ರಿಟರ್ನ್ ಜರ್ನಿ
-----------------

ಅಷ್ಟು ದಿನಗಳವರೆಗೂ ., ನನ್ನ ಗೆಳೆಯರು ಅನ್ನಿಸಿಕೊಂಡ ಯಾರೊಂದಿಗೂ ಮಾತನಾಡಿರಲಿಲ್ಲ.
ಯಾರಾದ್ರು ನನ್ನ ಹುಡುಕ್ಕೊಂಡಾದ್ರು ಬರಬಾರದಾ ..? ಎಲ್ಲಾ ಹೇಳ್ಕೋಂಡು ಅವರ ಮುಂದೆ
‘ಗೊಳೋ, . ’ ಅಂತಾನಾದ್ರು ಅಳಬಾರ್ದಾ ..? ಅನ್ನೋ ಮನಸ್ಸಾಗ್ತಿತ್ತು.

ಅಮ್ಮ ಹೇಳ್ತಿದ್ದಂತೆ, ನಾನೊಬ್ಬ ಲೋನರ್, ಇರ್ಬೇಕು. ‘ ಜನಗಳ ಜೊತೆ ಇದ್ರೆ ಶ್ಯಾದ್ರೆ
ಆಗ್ತದೆ ನಿಂಗೆ. ಒಂಟಿ ಸಲಗ, ಒಂಟಿ ನಾಯಿ, ನೀನು ’ ಅಂತ ಅಮ್ಮ ಬಯ್ಯುತ್ತಿದ್ದಳು.

ಹೆಚ್ಚಾಗಿ ಯಾರೊಂದಿಗೂ ಸೇರದೆ, ನನ್ನ ಜೀವನವನ್ನೇ ಪ್ರೇಕ್ಷಣಾ ಸ್ಥಳಗಳನ್ನಾಗಿ
ಮಾಡಿಕೊಂಡು., ಅಂಡಲೆಯುವ ನನ್ನೊಳಗಿನ ಪ್ರವಾಸಿ.

ನನ್ನಂತಹಾ ತಿಕ್ಕಲು ಜೀವಿಗೂ, ಸಿಕ್ಕ-ಷ್ಟೂ ಜೀವನವನ್ನು ಹಿಡಿಹಿಡಿಯಾಗಿ ಅನುಭವಿಸಿ
ಬದುಕಿದ ಪವಿಗೂ ಉತ್ತರ ಧ್ರುವದಿಂ ದಕ್ಷಿಣ ಧ್ರುವದ ಅಂತರ.

‘ ಏನೇ, ಆಗಲಿ, ಅವನು ಬಂದಗೆ ನೀನು ಬರಲ್ಲ ಬಿಡು. ಅವನ ಬುದ್ಧಿನಲ್ಲಿ ಕಾಲು ಭಾಗ ಕೂಡ
ನಿನಗಿಲ್ಲ ಬಿಡು, ಚನ್ನಾಗಿದ್ದಿದ್ದರೆ, ನಿನ್ನ ಮೀರಿಸಿ ಬಿಟ್ಟಿರುತ್ತಿದ್ದ. ಅವನ ಕಾಲ್
ದೆಸೆ ನುಸುದ್ರು, ಅವನ ತರ ಆಗಲ್ಲ ನೀನು ’ ಎಂಬೆಲ್ಲಾ ಕರ್ಣಕಠೋರ ನಿಂದನೆಗಳು
ಎಲ್ಲರಿಂದಲೂ ತೇಲಿ ಬರುತ್ತಿದ್ದುದು, ಎಳೆಯ ಮನಸ್ಸಿನಲ್ಲಿ ಕೋಪ ಸಿಟ್ಟುಗಳನ್ನು
ಸೃಷ್ಟಿಸಿದರೂ., ಪವಿಯ, ಯಾತನೆಗಳನು ಮೀರಿದ ಅಸ್ತಿತ್ವವನ್ನು ನೋಡಿದಾಗ ‘
ಸಾಮಾನ್ಯದವನಲ್ಲ, ಇವನು ’ ಅಂತನಿಸುತ್ತಿತ್ತು.

ಬಹುಷಃ ಇದೇ ಕಾರಣಕ್ಕೆ ‘ ಬ್ಲಾಕ್ ’ ಸಿನಿಮಾ ತುಂಬಾ ಇಷ್ಟವಾಗಿ, ತಂಗಿ, ತನ್ನ ಮದುವೆಯ
ದಿನ, ಎಂದಿಗೂ ಮದುವೆಯಾಗಲಾರದ ಅಂಗವಿಕಲ ಅಕ್ಕನ ಮುಂದೆ confess ಮಾಡುವ ಇಡೀ ಸನ್ನಿವೇಶ
ಭಾವಪ್ರವಾಹದೊಳಗೆ ದಬ್ಬಿತ್ತು.

ಸುಮಾರು ಇಪ್ಪತ್ತು ದಿನಗಳವರೆಗೂ ಮನೆಯಲ್ಲಿಯೇ ಇದ್ದು, ‘ ಎಲ್ಲಾ ಸರಿ, ’ ಅಂತನ್ನಿಸಿದ
ಮೇಲೆ ಚೆನೈ ಕಡೆಗೆ ಹೊರಟೆ.

‘ ಈಗ ಕಣ್ಣ ಮುಂದೆ ಇರುವ ಮಕ್ಕಳ ಮುಖ ನೋಡಿಯಾದರೂ. ಬಾಳಬೇಕು. ’ ಎಂಬ ಎಮೋಷನಲ್ ಬ್ಲಾಕ್
ಮೇಲ್ ಗಳು ತಕ್ಕ ಮಟ್ಟಿಗೆ ವರ್ಕ್ ಔಟ್ ಆಗಿದ್ದವು.

ಚೆನೈ, ಕಡೆಗೆ ಸಾಗುವಾಗ, ಬೆಂಗಳೂರಲ್ಲಿ, ರೈಲ್ ಬದಲಿಸಬೇಕಿತ್ತು. ಬೆಂಗ್ಳೂರು ರೈಲ್ವೇ
ಟೇಷನ್ನಲ್ಲಿ, ರಘು, ಮತ್ತು ಚಿಪ್ಸು, ಇಬ್ಬರು ಗೆಳೆಯರು ಸಿಕ್ಕರು. ಮೊದಲನೇ ಸಾರಿ
ವಟವಟವಟ ಅಂತ ಹೇಳಿಕೊಂಡಿದ್ದು.

ಅರ್ಥ ಆಗ್ಲಿ, ಬಿಡ್ಲಿ ಸುಮ್ನೆ ಕೇಳ್ತಾನೆ ಇದ್ರು. ‘ ಅಯ್ಯೋ, ಪಾಪ, ’ ಅಂತ ಅವರು ಕರುಣೆ
ತೋರಿಸದಿದ್ದರೂ, ನನಗೆ ಮಾತನಾಡಬೇಕಿತ್ತು.

ಊರಲ್ಲಿದ್ದಾಗ, ಮನೆಯವರನ್ನು ಸಂತೈಸುವ ಭರದಲ್ಲಿ., ನಡೆದಿರುವ ಸಂಗತಿಯ ಅಗಾಧತೆಯ ಅನುಭವ
ಆಗಿರಲಿಲ್ಲ. ಆದರೆ ಚೆನೈ ಗೆ ಬಂದ ಮೇಲೆ, ಪರಿಸ್ಥಿತಿ ಬಿಗಡಾಯಿಸಿತು.

ನೆನಪುಗಳು; ‘ ಆ ಎರಡು ದಿನಗಳು ಸಂಪೂರ್ಣ ಕನಸೇ ಇರಬೇಕು ’ ಅನಿಸಿ ಆಗುತ್ತಿದ್ದ ಸುಳ್ಳೇ
ಖುಷಿಗಳು;\
 ಅತ್ಮ್ಮಿಯರು ಅನಿಸಿಕೊಂಡವರಿಗೆ ಮೊದಲಿಂದ-ಕೊನೆವರೆಗು ಹೇಳುತ್ತಿದ್ದ ಅವವೆ ಮಾತುಗಳು;
ಕಣ್ಣು ಮುಚ್ಚಿ ಬಿಡುವುದರೊಳಗೆ ಬದಲಾಗುತ್ತಿದ್ದ, ಚಿತ್ರ-ವಿಚಿತ್ರ ಸನ್ನಿವೇಶಗಳು;
ತಾತ್ಕಾಲಿಕ ಹುಚ್ಚು ತನ,

ಇವುಗಳ ಮಧ್ಯೆ, ಫೋನಿನಲ್ಲಿ ಅಪ್ಪ-ಅಮ್ಮ ರಿಗೆ - ‘ ಇವತ್ತು, ಅವನು ಹೋಗಿದಾನೆ, ಸ್ವಲ್ಪ
ದಿನ ಆದ ಮೇಲೆ ನಾವು ಹೋಗ್ತೇವೆ. ಜೀವನ ಅಂದರೆ ಕ್ಷಣಿಕ ’ ಇತ್ಯಾದಿ ಇನ್ನುಮುಂತಾದ
ಪ್ರವಚನಗಳು ನಡೆಯುತ್ತಲೇ ಇರುತ್ತಿದ್ದರೂ ಕೂಡ, ಅವನ್ನೆಲ್ಲಾ, ಅವರಿಗೆ ಹೇಳಿದಷ್ಟು
ಸುಲಭವಾಗಿ, ನಾನು ಒಪ್ಪಿಕೊಂಡಿರಲಿಲ್ಲ.

* * * * *

12. ಮುಕ್ತಾಯ
-----------

ಅರೆಹುಚ್ಚನಂತಿದ್ದವನಿಗೆ ಸಿಕ್ಕಿದ್ದು ‘ ವಂಶವೃಕ್ಷ ’ ಅನ್ನೋ ಕಾದಂಬರಿ.

ಕಾದಂಬರಿ ಓದಿ ಮುಗಿಸಿಕೊಳ್ಳುವವರೆಗೂ, ಪಾತ್ರಗಳು, ಸನ್ನಿವೇಶಗಳು ತಲೆಯ ಸುತ್ತಲೇ ಗಿರಕಿ
ಹೊಡೆಯುತ್ತಿದ್ದವು.

ಮೊದಲ ಕೆಲವು ಪುಟದಲ್ಲಿಯೇ ‘ ಸಾವಿನ ’ ಸನ್ನಿವೇಶದಿಂದ ಮೊದಲಾಗುವ ಕಾದಂಬರಿ,\
 ಒಂದು ಆರ್ಟಿಫಿಶಿಯಲ್ ಪ್ರಪಂಚವನ್ನು ಸೃಷ್ಟಿ ಮಾಡಿತು. ಸಾವು-ನೋವು ಅನ್ನೋದು ನನಗಷ್ಟೇ
ಅಥವಾ ನನ್ನ ತಮ್ಮನಿಗಷ್ಟೇ ಸೀಮಿತವಾದಂತುಹುದಲ್ಲ, ಅನ್ನೋ ಜ್ನಾನೋದಯ.

ಇಂತಹ ಮಿನಿ ಜ್ನಾನೋದಯಗಳು ದೈನಂದಿನ ಮಾತು-ಕಥೆ, ವ್ಯವಹಾರಗಳಲ್ಲಿ, ಬಹಳಷ್ಟು
ಆಗುತ್ತಿರುತ್ತವೆ. ಆದರೆ ಅವುಗಳ ಪರ್ಸಿಸ್ಟೆನ್ಸ್ ಕಡಿಮೆ. ಇದ್ದುದರಲ್ಲಿಯೇ ಕಾದಂಬರಿಯ
ಪ್ರಭಾವ, ಕೊಂಚ ಹೊತ್ತಿನವರೆಗೂ ಸಂಭಾಳಿಸಿತು.

ನನಗೆ ಅನ್ನಿಸ್ತಾ ಇರೋದನ್ನೆಲ್ಲಾ ಒಂದು ಕಡೆ ಬರೆಯುವ ಆಲೋಚನೆಯೂ ಮೂಡಿತು. ಬರೆಯೋದಕ್ಕೆ
ಪ್ರಾರಂಭ ಮಾಡಿದೆ. ಬೇರೆ ದಾರಿ ಇರ್ಲಿಲ್ಲ.

‘ ಮನಸ್ಸಿನಲ್ಲಿರೋದನ್ನೆಲ್ಲಾ ಗೊಳೋ ಅಂತ ಹೇಳಿಕೊಳ್ತಾ ಹೋದ್ರೆ, ಅಲ್ಲಿ ಯಾರು ..?
ಮುಖ್ಯರು-ಅಮುಖ್ಯರು ಅನ್ನೋ ಪ್ರಶ್ನೆ ಬರ್ತದೆ; ಎಲ್ಲಾ ವಿವರಗಳೂ,\
 ಸ್ವಲ್ಪವೂ ಅತಿಶಯೋಕ್ತಿ ಅಥವಾ ಉತ್ಪ್ರೇಕ್ಷೆ ಮಟ್ಟಕ್ಕೆ ಹೋಗದೆ,\
 ಎಫೆಕ್ಟೀವ್ ಆಗಿ ಕನ್ವೇ ಆಗಬೇಕು. ’ ತಮ್ಮ, ಮತ್ತು ಅಮ್ಮ, ಇಬ್ಬರನ್ನು
ಕೇಂದ್ರವಾಗಿಟ್ಟುಕೊಂಡು ಕಥೆ, ರೀತಿಯಲ್ಲಿ ಬರೆಯಲು ಪ್ರಾರಂಭಿಸಿದೆ.

ಒಂದೊಂದು ಘಟನೆಗಳನ್ನು ನೆನಪಿಸಿಕೊಳ್ಳುವಾಗಲೂ, ತೀವ್ರವಾಗಿ ಭಾವುಕನಾಗುವುದು;

ಅಳುವು ಬಂದಾಗ, ಬರೆಯೋದು ನಿಲ್ಲಿಸಿ, ಟಾಯ್ಲೆಟ್ ಒಳ್ಗೆ ಹೋಗಿ ಸುಮಾರು ಹೊತ್ತು
ಅಳುವುದು;

ಪುನಃ ಬರೆಯಲು ಪ್ರಾರಂಬಿಸುವುದು; ನಡೆದಿತ್ತು.

ಒಂಥರಾ ಮೈ-ಮನಸ್ಸು-ಮಿದುಳೆಲ್ಲಾ ಸ್ತಬ್ಧವಾಗಿ. ಪ್ರಯಾಸವಿಲ್ಲದೆ, ಎಲ್ಲೋ ಜಾರಿ
ಹೋಗುತ್ತಿರುವ ಅನುಭವ. ಹೀಗೆ ಬರೆಸಿಕೊಂಡು ಮುಕ್ತಾಯವಾಯಿತು.

‘ ಒಂದು ಪ್ರೀತಿಯ ಕಥೆ ’

ನನ್ನ ಕೆಲಸ ಮುಗಿದಿತ್ತು.

ಸುಮಾರು ಸ್ನೇಹಿತರು ಕಥೆಯನ್ನು ಓದಿ, ಆತ್ಮೀಯವಾಗಿ ಪ್ರತಿಕ್ರಿಯಿಸಿದರು.

ಆವತ್ತು, ಗೆಳೆಯನ ಮದ್ವೆಗೆ ಊಟದ ಪಂಕ್ತಿಯಲ್ಲಿ ಕೂತಿದ್ದೆ. ಸೌಟು, ಬಕೇಟುಗಳ ದಡಬಡ
ಸದ್ದಿನ ಜೊತೆಗೆ ಜನಗಳ ಗಿಜಿಗಿಜಿ. ಪಕ್ಕದಲ್ಲಿ ಕುಳಿತಿದ್ದ ಶಶಾಂಕ, ಏನೇನೊ ಮಾತಾಡ್ತಾ
ಮಧ್ಯದಲ್ಲಿ ‘ ಲೋ, ಕಥೆ ಓದಿಬಿಟ್ಟು ಅತ್ತುಬಿಟ್ಟೆ ಮಗ, ಮೇ ಹಿಜ್ ಸೋಲ್ ರೆಸ್ಟ್ ಇನ್
ಪೀಸ್ ’ ಅಂದ.

ಗೆಳೆಯ ರವಿ, ಕಥೆ ಓದಿಬಿಟ್ಟು ಈ ಥರ ಮೇಲ್ ಮಾಡಿದ್ದ \
 ‘ ಲೇ kc ನಾನ್ ಲೈಫ್ನಲ್ಲಿ ಹೊರಗಡೆ ಎಸ್ಟೆ ಬಿಂದಾಸಗಿದ್ರು ನಂಗೆ ತುಂಬಾನೆ
ಸೆಂಟಿಮೆಂಟ್ ಇದೆ. ಸುಮಾರ್ ದಿನ ಆದ್ಮೇಲೆ ಲೈಫ್ ನಲ್ಲಿ ಕಣ್ಣೀರ್ ಬಂದಿದೆ. ನಾನ್ ನಿನ್
presentation ಬಗ್ಗೆ ಹೇಳ್ತಿಲ್ಲ. i can feel it. sorry!! let his soal find
peace. this much only i can say . ’

ಗೆಳೆಯ ರೂಪಿಗೆ, ಬರೆಯೋದಕ್ಕಿಂತ ಮುಂಚೇನೆ, ವಿಷಯಗಳು ಗೊತ್ತಿದ್ದವು. ಕಥೆ ಓದಿದ ಮೇಲೆ ‘
ಮತ್ತೆ ಕಣ್ಣಿರ್ ಹಾಕಿಸ್-ಬುಟ್ಟೆ ಕಣ್ಲಾ ’ ಅಂದ.

ಒಂದಿನ ಬೆಳ್ಗೆ, ಬೆಳ್ಗೆ ಕಾಲ್ ಬಂತು. ಆ ಕಡೆಯಿಂದ ಮಾತನಾಡುತ್ತಿದ್ದವನು, ತಾನು ‘ ಮಧು
’ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ. ಕಣ್ಣು ಬಿಟ್ಟವನಿಗೆ ‘ ಯಾವ ಮಧು ..? ’
ಅನ್ನೋದು ಅಷ್ಟು ಬೇಗ ಹೊಳೆಯಲಿಲ್ಲ. ಮಧು, ಸಾವನದುರ್ಗ ಬೆಟ್ಟಕ್ಕೆ ಹೋದಾಗ, ದಾರಿಯಲ್ಲಿ
ಪರಿಚಯವಾದವರು. ಮಾತಿನ ಮಧ್ಯೆ ನನ್ನ ‘ ಕನಸೂರು ’ ಬ್ಲಾಗಿನ ಬಗ್ಗೆ ಅವರಿಗೆ ಹೇಳಿದ್ದೆ.
ನನ್ನ ಫೋನ್ ನಂಬರು ಸಂಪಾದಿಸಿ, ಅಷ್ಟು ಬೆಳಗಿನ ಜಾವ ಫೋನಾಯಿಸಿದ್ದರು.

‘ ಒಂದು ಪ್ರೀತಿಯ ಕಥೆ ಓದ್ದೆ. ಓದುವಾಗಲೇ ಅಳು ಬಂತು,\
 ಕೊನೆಗೆ ಅದು ನಿಮ್ಮ ತಮ್ಮಾನೆ ಅಂತ ಗೊತ್ತಾಗಿ,\
 ತುಂಬಾ ಬೇಜಾರಾಯ್ತು ’ ಅಂದರು. ದುಃಖ ಕಾಣಿಸುತ್ತಿರಲಿಲ್ಲ, ಕೇಳಿಸುತ್ತಿತ್ತು.

ವಿಷಯ ಗೊತ್ತಾಗಿ ತುಂಬಾ ಜನ ‘ ಸಾಂತ್ವಾನ ’ ಅನ್ನೋದನ್ನ ಹೇಳಿದ್ರು. ‘ ವಿಷಯ
ಗೊತ್ತಾದರೂ. ಅದರ ಬಗ್ಗೆ, ಒಂದ್ ಮಾತೂ ಕೇಳ್-ಲಿಲ್ವಲ್ಲಾ ಕಳ್-ನನ್ಮಗ ’ ಅಂತ ಆತ್ಮೀಯರ
ಮೇಲೆ ಕೋಪಾನು ಬರ್ತಿತ್ತು.

ನೋವಲ್ಲಿರೋರ ಮೇಲೆ ಸಾಂತ್ವಾನದ ನುಡಿಗಳು ಅಷ್ಟು ಪರಿಣಾಮ ಬೀರೋದಿಲ್ಲ. ಎಲ್ಲಾ ನಾಗರಿಕ
ಶಿಷ್ಟಾಚಾರಗಳ ಎಲ್ಲೆಗಳನ್ನು ಮೀರಿ, ಮೈ-ಮನಸ್ಸು, ಸಂಕಟದಲ್ಲಿರುತ್ತದೆ. ಆದರೂ. ನಾಟಕೀಯ
ಅಂತ ಅನ್ನಿಸಿದರೂ ಪರವಾಗಿಲ್ಲ, ಸ್ವಲ್ಪ ಮಟ್ಟಿಗೆ ಸಾಂತ್ವಾನ ಹೇಳಬೇಕಾಗಬಹುದು. ..? ಆ
ಸಂದರ್ಭದಲ್ಲಿ, ಮನಸ್ಸು ಚಿಕ್ಕ ಮಗು ರೀತಿ ಜಿದ್ದು ಮಾಡ್ತಾ ಇರತ್ತೆ.

* * * * *

13. ಪ್ರಸ್ತುತ ಮತ್ತು ಅಪ್ರಸ್ತುತ
----------------------------

ನಾನಂತೂ ಓದ್ದೋನು. ನಾಕಾರು ಕಡೆ ತಿರುಗಾಡುವವನು. ಅಪರೂಪಕ್ಕಂತ ರಜಾ ದಿನಗಳಲ್ಲಿ ಮಾತ್ರ
ಊರಿಗೆ ಹೋಗುವವನು. ಮತ್ತು ಮೊದಲಿಂದಲೂ ಹೊರಗೇ ಬೆಳೆದವನು.

‘ ನನಗೂ ಒಬ್ಬ ತಮ್ಮ ಇದ್ದ. ’ ಅಂತ ಕಾನ್ಷಿಯಸ್ ಆಗಿ ನೆನಪು ಮಾಡಿಕೊಳ್ಳಬೇಕೀಗ. ಅಷ್ಟು
ಮರೆತಿದ್ದೇನೆ.

ಮೊದಮೊದಲು ತೀವ್ರವಾಗಿ ಕಾಡುತ್ತಿದ್ದವನು, ಈಗ ನೆನಪಿಗೇ ಬರುವುದಿಲ್ಲ.

ಆದರೆ ಅಪ್ಪ, ಅಮ್ಮನ ಸಿನಾರಿಯೋ ನೆ ಬೇರೆ. ಸದಾ ಮನೆ-ತೋಟದಲ್ಲೇ ಲೈಫು.

ಮನೆಯ ಒಂದೊಂದು ಮೂಲೆಗೂ ‘ ಪವಿ ’ ಯ, ಅಸ್ತಿತ್ವದ ಮೈಲಿಗೆ ಇದೆ.

ತಮ್ಮಗಳ ಭಾವ ಪ್ರಪಂಚದಲ್ಲಿ,

ಒಂದೊಂದು ಮೆಲುಕುಗಳಿಗೂ,

ಸುಖ-ಸಂತೋಷ,

ನೋವು-ನಲಿವು,

ಮುನಿಸು ಮುಂತಾದವಕ್ಕೆಲ್ಲಾ ಅವರು ಒಳಗೊಳಗೆ ಬಂಧಿ. ಕಣ್ಣ ಮುಂದಿರುವಾಗ ಮಾತ್ರ, ಅವರ ಕ್ಷಣಗಳನ್ನು ನಾವು ಆಕ್ಯುಪೈ ಮಾಡಲು ಸಾಧ್ಯ. ಆಮೇಲೆ, ತೆಗ್ಗಿನ ಕಡೆಗೆ ನೀರು
ಹರಿವಂತೆ ಅವರ ಆಲೋಚನಾ ಲಹರಿಯದ್ದು ಅತ್ತಲೇ ಪಯಣ.

ಈ ನೋಯಿಸುವ ನೆನಪುಗಳಿಗೆ ತುದಿ-ಮೊದಲು ಎಂಬುದಿಲ್ಲ. ಅದು ಮರುಕಳಿಸಲು, ರಾತ್ರಿ ಬಿದ್ದ
ಯಾವುದೋ ಕನಸಿನ ತುಣುಕು ಸಾಕು; ಊಟಕ್ಕೆ ಕೂರುವಾಗ ಕಮ್ಮಿಯಾಗುತ್ತಿದ್ದ ತಟ್ಟೆ ಯ ಕೌಂಟು;
ಯಾರೊಬ್ಬರು ಅವನ ಗುಣಗಾನ ಮಾಡಿದರೂ ಸಾಕು; ಬರ್ಥ್ ಡೇ; ಡೆತ್ ಡೇ; ಗಣಪತಿ ಹಬ್ಬ;
ದೀಪಾವಳಿ ಹಬ್ಬ; ಜಾತ್ರೆ; ತೇರು; ಇತ್ಯಾದಿಗಳು.

ಮಕ್ಕಳ ಶೋಕ, ಅಪ್ಪ-ಅಮ್ಮಂದಿರನ್ನು ಅಷ್ಟು ಸುಲಭವಾಗಿ ಬಿಡುವಂತದ್ದಲ್ಲ.

ಅಪ್ಪ ಬೆಳಗ್ಗೆ ಬೆಳಗ್ಗೆ ಹಿತ್ತಲಿಂದ ಫ್ರೆಷ್ ಆಗಿರೋ ಹೂವನ್ನು ತಂದು ಅವನ ಫೋಟೋಗೆ
ಸಿಕ್ಸೋದಂತೆ, ಅಕಸ್ಮಾತ್ ಗಾಳಿಗೆ ಹೂವು ಬಿದ್ದಾಗ ಅಮ್ಮ - ‘ ಅಯ್ಯೋ, ಯಾಕೋ ಕಂದ, ಹೂವ
ಬೀಳಿಸಿಬಿಟ್ಟೆ. ಕೋಪ ಏನೋ ನಮ್ ಮೇಲೆ. ’ ಅಂತ ಆ ಹೂವನ್ನು ತೆಗೆದು ಪುನಃ ಫೋಟೋಗೆ
ಸಿಕ್ಸೋದಂತೆ.

ಕೂತುಕೊಂಡು ಇದನ್ನ ನೋಡೋವಾಗ ಮೆಂಟಲ್ ಆಸ್ಪತ್ರೆನಲ್ಲಿ ಇದೀನಾ ಅನ್ನೋ ಫೀಲಿಂಗ್ ಬರ್ತದೆ.

ಅವರ ಅಸಹಾಯಕತೆ ನೋಡಿ, ಬಯ್ಯಬೇಕೋ. ..? ಅಥವಾ ಇದರಾಚೆಗೂ ಪ್ರಪಂಚ ಸಖತ್ ದೊಡ್ಡುದಿದೆ
ಅಂತ ಬುದ್ಧಿ ಹೇಳಬೇಕೋ ..? ಗೊತ್ತಾಗಲ್ಲ.

ಕೆಲವರು ತಮ್ಮನ್ನ ತಾವು ಜೀವಂತವಾಗಿ ಇಟ್ಟುಕೊಳ್ಳೋದಕ್ಕೆ ಕಷ್ಟ ಪಟ್ಟು , ಕೊನೆಗೆ
ಇಲ್ಲವಾಗ್ತಾರೆ. ನಮಗೆ ಎಲ್ಲಾ ಇದೆ. ಇಲ್ಲವಾಗುವ ಮುನ್ನ, ಬದುಕಬೇಕು. ಒಂದು ಹುಟ್ಟು;
ಒಂದು ಜೀವನ; ಒಂದೇ ಸಾರಿ ಸಾವು;

* * * * *

[ಒಂದು ಪ್ರೀತಿಯ ಕಥೆ]  ಕಥೆಗಿಂತ ಹೆಚ್ಚಾಗಿ ಆ ತರದ ಬದುಕನ್ನು, ಬದುಕಿ ಹೋಗಿರುವವರ ಕುರಿತಾಗಿ ಇದ್ದ ಡಾಕ್ಯುಮೆಂಟೇಷನ್. ಬಿಡುವಿದ್ದಾಗ, [ಇದನ್ನೂ ಓದಿ.]

Friday, November 29, 2013

ಡ್ರೈವಿಂಗ್ ಸ್ಕೂಲ್ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಂಡ ಮೇಲೆ ಡ್ರೈವಿಂಗ್ ಸ್ಕೂಲಿಗೆ ಸೇರಿದೆ.   
ಡ್ರೈವಿಂಗ್ ಹೇಳಿಕೊಡುವವನು ಕೊಂಚ ವಯಸ್ಸಾದ ವ್ಯಕ್ತಿ.
ಡ್ರೈವಿಂಗ್ ಜೊತೆಗೆ!! ತನ್ನ ಡ್ರೈವಿಂಗ್ ಜೀವನದ ಸಾಹಸಗಥೆಗಳನ್ನೆಲ್ಲಾ ಹೇಳುತ್ತಿದ್ದರು.
ಆ ಸಾಹಸಗಾಥೆಗಳ ಸಾಲಿನಲ್ಲಿ ..
' ನೈಜವಾಗಿ ಕಂಡಂತಹಾ ಅಪಘಾತಗಳ ಭಯಾನಕ ವರ್ಣನೆಗಳೂ' ಸೇರಿರುತ್ತಿದ್ದವು.

"ಹೈವೇನಲ್ಲಿ ನೂರ್ ಕಿಲೋಮೀಟರು ಸ್ಪೀಡಲ್ಲಿ ಗಾಡಿ ಬರ್ತಾ ಇದೆ.
ಇದಕ್ಕಿದ್ದಂಗೆ ಫ್ರೆಂಟ್ ದು ರೈಟ್ ಟೈರು ಬರ್ಸ್ಟ್ ಆಗಿದೆ.
ಸ್ಟೇರಿಂಗು ಅದೇ ಫೋರ್ಸಲ್ಲಿ  ಕ್ಲಾಕ್ ವೈಸ್ ತಿರುಗಿ ಬಿಟೈತೆ.
ಸ್ಟೇರಿಂಗ್ ಒಳಗೆ ಕೈ ಜಾರಿದ್ದರಿಂದ, ಕೈ ಲಟಕ್ ಅಂತ ಪೀಸಾಗಿದೆ.
ಗಾಡಿ ಸೀದಾ ಹೋಗಿ!! ಡಿವೈಡರ್ ಗೆ ಬಡಿದ ತಕ್ಷಣ...,
ಮಂಡಿ ಕೆಳಗೆ ಕಾಲು ಇದಿಯಲ್ಲಾ.. ಅವು ಹಂಗೇ ಪೀಸ್ ಪೀಸ್ "
ಎಲ್ಲದಕ್ಕೂ ಹೂ ಗುಡುತ್ತಿದ್ದವನು ...

" ಏನ್ ಸಾರ್ ಬರಿ ಕೈ - ಕಾಲು ಮುರ್ದೋದ ಕಥೆಗಳೇ ಹೇಳ್ತೀರಾ .. " ಅಂದ್ರೆ

ನನ್ನ ಪ್ರಶ್ನೆಯನ್ನು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡು...

" ಬರಿ ಕೈ ಕಾಲು ಮುರ್ದಿರೋದಲ್ಲಾ,
 ನನ್ನ ಸರ್ವೀಸ್ ನಲ್ಲಿ,  ತಲೆಗಳೇ ಜಜ್ಜಿ ಹೋಗಿರೋ ಘಟನೆಗಳನ್ನ ನೋಡಿದ್ದೇನೆ.
ಹೋಗ್ತಾ ಹೋಗ್ತಾ.. ಸ್ಟೇರಿಂಗ್ ರಾಡು ಕಟ್ಟಾಗಿ..,
ಕಂಟ್ರೋಲ್ ಸಿಗದೇ ಪಲ್ಟಿ ಹೊಡೆದದ್ದೂ ಇವೆ, ಗಾಡಿಗಳು." ಎಂದು ಶುರುವಚ್ಚಿಕೊಂಡರು.

" ಡ್ರೈವಿಂಗ್ ತುಂಬಾ ಕೆಟ್ಟ ಪ್ರೊಫೆಷನ್!!
ನಾವು ಎಷ್ಟೇ ಹುಷಾರಾಗಿದ್ರು,
ಹಣೆಬರಹ ನೆಟ್ಟಗಿಲ್ಲ ಅಂದ್ರೆ !! ಏನೂ ಮಾಡಕ್ಕಾಗಲ್ಲ." ಎಂಬ ಎಂಡಿಂಗ್ ಕೋಟುಗಳೂ ಇರುತ್ತಿದ್ದವು.
ಈವಯ್ಯಂಗೆ ವಯಸ್ಸು ಬೇರೆ ಜಾಸ್ತಿ ಆಗದೆ. ಕೆಟ್ಟ-ಕೊಳ್ಕ ಬಯ್ಯಂಗೂ ಇಲ್ಲ.
ಹೊಸದಾಗಿ ಸ್ಟೇರಿಂಗ್ ಹಿಡಿದು ಕುಳಿತವನಿಗೆ,
ದಬಾರ್!!
ಡಬಾರ್!!
ಡಿಶ್ಕ್ಯೋ!!  ಇನ್ಸಿಡೆಂಟುಗಳನ್ನು ಹೇಳ್ತಿದಾರೆ.
ಲೈಫು!!  ಟಾಮ್ ಅಂಡ್ ಜೆರ್ರಿ ರೀತಿ ಕಾಮೆಡಿ ಚೇಸಿಂಗಾ ..?  

ದಾರಿಯಲ್ಲಿ, ತಮ್ಮ ಬಳಿ ಡ್ರೈವಿಂಗ್ ಕಲಿತ ಮನೆಗಳನ್ನು ತೋರಿಸಿ..
ಒಬ್ಬೊಬ್ಬರ ಬಗ್ಗೆಯೂ ಸವಿವರವಾಗಿ ವಿವರಿಸುತ್ತಿದ್ದರು.
"ಈ ಮನೇಲಿ!! ಅಣ್ಣ, ತಮ್ಮ ಇದಾರೆ.
ಇಬ್ಬರೂ ನನ್ನ ಹತ್ರಾನೆ ಡ್ರೈವಿಂಗ್ ಕಲ್ತಿದ್ದು.
ಒಂದ್ಸಾರಿ ಏನಾಯ್ತಂದ್ರೆ...
ಅಣ್ಣ!! ಮನೆ ಬಳಿ ಕಾರ್ ಪಾರ್ಕ್ ಮಾಡ್ತಾ ಇದಾನೆ.
ತಮ್ಮ!! ಕಾರ್ ಮುಂದೆ ನಿಂತ್ಕೊಂಡು
'ಆ ಬರ್ಲಿ!! ಬರತ್ತೆ ಬರಲಿ!! ಎಳ್ಕೋ ಇನ್ನೊಂಚೂರು!!
ಆ ಬರ್ಲಿ..
ಆ ಬರ್ಲಿ,
ಆ ಬರ್ಲಿ ' ಅಂತ ಕೈ ಬೀಸಿ ಕರೆಯುತ್ತಾ ಇದಾನೆ.
ಅಣ್ಣನೂ ಮೆಲ್ಲಕ್ಕೆ ಕಾರ್ ಬಿಡ್ತಾ ಇದಾನೆ.
ತಮ್ಮ ಒಂದೇ ಸಾರ್ತಿಗೆ  'ಸ್ಟಾಪ್!!'  ಎಂದು ಕೂಗಿ.. ಕೈ ಅಡ್ಡ ತೋರಿಸಿದ್ದಾನೆ.
ಅಣ್ಣ ಗಾಬರಿಯಲ್ಲಿ,  ಬ್ರೇಕ್ ಬದಲು ಅಕ್ಸಿಲರೇಟರ್ ಜೋರಾಗಿ ಒತ್ತಿದ.
ಕಾರು ಚಂಗನೆ ನೆಗೆದು.. ಆ ಎದುರಿಗಿರೋ ಕಂಬಕ್ಕೆ ಗುದ್ದಿದೆ.
ಅಕಸ್ಮಾತ್  ಕಂಬ ಇಲ್ಲ ಅಂದಿದ್ರೆ ಅಥವಾ
ತಮ್ಮನಾದವನು ಕಾರು ಮತ್ತು ಕಂಬದ ಮಧ್ಯೆ ನಿಂತಿದ್ದರೆ ಛಿದ್ರ ಛಿದ್ರ ಆಗಿ ಬಿಡ್ತಿದ್ದ.
ತಮ್ಮನ ಲಕ್ಕು ಚೆನ್ನಾಗಿತ್ತು. ಏನೂ ಆಗ್ಲಿಲ್ಲ.
ಅಣ್ಣನಿಗೂ ಅಂತಾ ಪೆಟ್ಟಾಗಲಿಲ್ಲ.
ಕಾರು ಮಾತ್ರ!! ರೇಡಿಯೇಟರ್ ಸಮೇತ... ಫ್ರೆಂಟ್ ಎಲ್ಲಾ ಪುಡಿ ಪುಡಿ ಆಗೋಯ್ತು" ಅಂದರು.

ನನಗೂ ಕೆಟ್ಟ ಕೋಪ ಬಂತು.
ಭಯಾನು ಆಯ್ತು.
"ಹಂಗೂ ಆಗತ್ತಾ... ಬ್ರೇಕ್ ಬದಲು ಆಕ್ಸಿಲೇಟರ್ ಕೂಡ ಒತ್ತುತೀವಾ ...? " ಅಂದೆ.

"ಆಗಬಹುದು. ಯಾಕಿಲ್ಲ. ತಲೆ ನೆಟ್ಟಗೆ ಇಟ್ಕೊಳ್ಳದೆ.., ಕಾರ್ ಓಡಿಸಿದ್ರೆ, ಹಿಂಗೂ ಆಗತ್ತೆ, ಮತ್ತೂ ಆಗತ್ತೆ." ಅಂದರು ನಿರ್ಭಾವುಕರಾಗಿ.

' ಉಸಿರಿದ್ರೆ ಉಪ್ಪು ಮಾರಿಕೊಂಡು ಜೀವ್ನ ಮಾಡ್ಬೋದು. ಈ ಕಾರು-ಗೀರು ಶೋಕಿ ಎಲ್ಲಾ ಯಾಕಪ್ಪಾ ನಮಗೆ ..? ' ಅನ್ನೋ ಹತಾಶೆಯೂ ಮೂಡಿದಾಗ... 
" ಹೇ!! ಅರವತ್ತು-ಎಪ್ಪತ್ತು ದಾಟಿರೋರೆ ಹೊಸದಾಗಿ ಕಲಿತು, ಕಾರ್ ಬಿಡ್ತಾರೆ.
ನೀವಿನ್ನು ಯಂಗು!! ನಿಮ್ಮ ಕೈಲಿ ಆಗಲ್ವಾ...? " ಎಂಬುದಾಗಿ ಹೇಳಿ ಹುರಿದುಂಬಿಸುತ್ತಿದ್ದರು.


ಕಾರು ಬಿಡುವಾಗ ನಾನು ಕೇಳುತ್ತಿದ್ದ ಸ್ಟುಪಿಡ್ ಪ್ರಶ್ನೆಗಳಿಂದ ಕೋಪಗೊಳ್ಳುತ್ತಿದ್ದರಷ್ಟೇ ಅಲ್ಲದೆ,
ಹೀನಾಮಾನವಾಗಿ ಬಯ್ಯುತ್ತಿದ್ದರು.
" ಟಾಪ್ ಗೇರ್ ನಿಂದ, ವಾಪಾಸು ನಾಲ್ಕನೇ ಗೇರಿಗೆ ಎಳೆಯುವಾಗ ..
ತಪ್ಪಿ ರಿವರ್ಸ್ ಗೇರಿಗೆ ಬಿದ್ದರೆ.. ಕಾರು ಹಿಂದಕ್ಕೆ ಹೋಗುವುದಿಲ್ಲವೇ..?" ಎಂದು ಕೇಳಿದಾಗ..

"ಇಲ್ಲ!! ಅದು ರಿವರ್ಸ್ ಗೇರಿಗೆ ಬೀಳಲ್ಲ "ಅಂದರು.

ನಾನು ಬಿಡಲಿಲ್ಲ. "ಅಕಸ್ಮಾತ್ ಬಿತ್ತು ಅಂತಾನೆ ಇಟ್ಕೋಳಿ. ಆಗ ಏನಾಗತ್ತೆ..?"

"ಇಲ್ಲ!! ಬೀಳೋ.. ಛಾನ್ಸೇ ಇಲ್ಲ!!"ಅಂದರು.

"ವರ್ಸ್ಟ್ ಕೇಸ್ ರಿವರ್ಸ್ ಗೇರಿಗೆ ಬಿತ್ತು ಅಂದ್ರೆ!!..?"
ಆತ ರೆಸ್ಟ್ ಲೆಸ್ ಆದ, ಮತ್ತು ಸ್ಟಾರ್ಟೆಡ್ಡು  ಶೌಟಿಂಗು...

"ಹೇಳ್ತಾ ಇದೀನಿ ತಾನೆ... ಬೀಳಲ್ಲ.. ಬೀಳಲ್ಲ!! ಅಂತ.. ಹಂಗೇನಾದ್ರು ಬಿದ್ರೆ.. ಗೇರ್ ಬಾಕ್ಸು ಪುಡಿ ಪುಡಿ ಆಗತ್ತೆ.." ಹಾ ಹೂ ಎಂದು ಕುಣಿದಾಡಿದ.
ಹಿಂಗೇ ಸಾಗಿತ್ತು!! ನಮ್ಮ ಕಲಿಕೆ. 


ಡ್ರೈವಿಂಗ್ ಶುರು ಮಾಡಿದ ಮೇಲೆ, ಹಾಲಿವುಡ್ ಸಿನಿಮಾಗಳು ರುಚಿಸಲು ಪ್ರಾರಂಭಿಸಿತು.
ಕಾರಿನ ಚೇಸಿಂಗುಗಳಲ್ಲಿ, ಅವರು ತೋರಿಸುವ ಸಣ್ಣ ಸಣ್ಣ ಟೆಕ್ನಿಕಲ್ ಮೂವ್-ಗಳು
ಹೆಚ್ಚು ಅರ್ಥವಾಗಿ ಮುದ ನೀಡುತ್ತಿತ್ತು.  
ಹ್ಯಾಂಡ್ ಬ್ರೇಕ್ ಎತ್ತಿ, ಕಾರನ್ನು ರೊಯ್ಯನೆ ಸ್ಲೈಡ್ ಮಾಡುತ್ತಿದ್ದುದು... ಇನ್ನು ಮುಂತಾದವು.  
********

 

ಟ್ರಾಫಿಕ್ಕಲ್ಲಿ ಕಾರು ಬಿಡುವುದನ್ನು ಕಲಿಸಲು, ಒಮ್ಮೆ ಬಿ ಇ ಎಲ್ ಸರ್ಕಲ್ ಕಡೆಗೆ ಕರೆದುಕೊಂಡು ಹೋದರು.
ಅದು ತುಂಬಾ ಟ್ರಾಫಿಕ್ಕಿನ ಏರಿಯಾ.
ವೇಗವಾಗಿ ಬಂದ ಸ್ಕೂಟಿಯವನು ... ಸ್ಕಿಡ್ ಆಗಿ.. ಕಾರಿನ ಮುಂದೆ ದಬಾರನೆ ಬಿದ್ದ.
ಪಕ್ಕದಲ್ಲಿ ಕುಳಿತಿದ್ದ ಟೀಚರ್ ಕಾಲಡಿಯಲ್ಲೂ..  ಇದ್ದ ಕ್ಲಚ್ಚು,  ಬ್ರೇಕುಗಳನು ಅವರು ಸಮಯೋಚಿತವಾಗಿ ಒತ್ತಿದ್ದರಿಂದ ಕಾರು ನಿಂತಿತು.
ಮೊದಲೇ ಟ್ರಾಫಿಕ್ಕಲ್ಲಿ ಅಂಡ್ ಬಾಯಿಗೆ ಬಂದದೆ..,
ಇಂತದ್ರಲ್ಲಿ ಇನ್ಯಾವನೋ ಅವನಾಗವನೇ ಬಂದು ಕಾರಿನ ಮುಂದೆ ಬಿದ್ದಿದ್ದ.
ಬಿದ್ದವನು ಎದ್ದ.
ಡ್ರೈವಿಂಗ್ ಸ್ಕೂಲಿನ ಕಾರು, ಬೇಕಾದಂತೆ ಬಯ್ಯಬಹುದು ಎಂದೆನಿಸಿ,
" ಕಲಿಯೋರು!! ಇಲ್ಲಲ್ಲ ರೀ ಬಂದು ಕಲಿಯೋದು. ಯಾವ್ದಾದ್ರು ಖಾಲಿ ಜಾಗಕ್ಕೆ  ಹೋಗಿ ಕಲೀರಿ.." ಎಂದ.
ನಮ್ಮ ಟೀಚರು ಮುಂಗೋಪಿ.
ಅದುವರೆಗೂ ಸುಮ್ಮನಿದ್ದವನು ಇದ್ದಕ್ಕಿದ್ದಂತೆ ... ರೇಜಾಗಿ
"ಯಾವ್ದೋ ಬಯಲಲ್ಲಿ ಕಲ್ತಿರೋದಕ್ಕೆ!! ಈ ರೀತಿ ಸಮ ದಾರೀಲು ಅಂಡು ಮ್ಯಾಲೆ ಮಾಡ್ಕೋಂಡು ಮಕಾಡೆ ಬಿದ್ದಿದ್ದು. ನಮಗೆ ಹೇಳಕ್ ಬರ್ತೀಯ. ಹೋಗೋ ಬೋ.. ಮಗನೆ, ಸೂ..ಮಗನೆ."   ಜಗಳ ಆರಂಭವಾಯಿತು. 
ಲಿಟರಲಿ ಐ ವಾಸ್ ಶಿವರಿಂಗ್.

" ನೋಡುದ್ರಾ ಅವನಿಗೆ ನೆಣ ಎಷ್ಟಿದೆ..? 
ಅವನಾಗವನೇ ಬಂದು, ಬಿದ್ದು, ನಿಗರಾಡ್ತಾನೆ.
 ಬರಿ ಡ್ರೈವಿಂಗ್ ಕಲಿತರೆ ಸಾಲದು, ಬಾಯಿ ಮಾಡೋದೂ ಕಲೀಬೇಕು.
ಇಲ್ಲಾ ಅಂದ್ರೆ ತಪ್ಪು ಯಾರದ್ದೇ ಇದ್ದರೂ.., ನಾವು ಹರಕೆ ಕುರಿಗಳಾಗಿ ಬಿಡ್ತೀವಿ.
ಹೆದರ ಬಾರ್ದು. ಧೈರ್ಯವಾಗಿ ಕೆಟ್ಟ, ಕೆಟ್ಟದಾಗಿ ಬಯ್ಯೋದನ್ನೂ ಕಲೀಬೇಕು. " ಯುದ್ಧೋತ್ತರ ವಿಮರ್ಶೆಗಳೂ ನಡೆದವು.

ಹಂಗಾದ್ರೆ ಒಂದು ಕಾರಿನ ಜೊತೆಗೆ ಲೈಫು ಇಷ್ಟು ಕಾಂಪ್ಲಿಕೇಟ್ ಆಗ್ತಾನು ಹೋಗುತ್ತಾ..?

Tuesday, November 19, 2013

ಒಂದು ಅನುಭವಕ್ಕಾಗಿ 'ದಾಟು' ವನ್ನು ಓದಬೇಕು
ನಾನು ಓದಿರುವಷ್ಟು ಕಾದಂಬರಿಗಳ ಮಿತಿಯೊಳಗೆ, ಭೈರಪ್ಪನವರ 'ದಾಟು' ಕಾದಂಬರಿ ಬಗ್ಗೆ, ಅವರೇ ಹೇಳುವ ಈ ಮಾತುಗಳು ಅಕ್ಷರಷಃ ಸತ್ಯ. 

> ' ದಾಟುವಿನಷ್ಟು ಆಳವಾಗಿ ಜಾತಿವ್ಯವಸ್ಥೆ ಮತ್ತು ಜಾತಿಯತೆಯ ಬೇರುಗಳ ವಿಶ್ಲೇಷಣೆಯನ್ನು ಬೇರಾವ ಕಾದಂಬರಿಯೂ ಮಾಡಿಲ್ಲ. ' 

Thursday, October 24, 2013

Killer App : ಕಥಾನಕ


ಸ್ನೇಹಿತನ ಮದುವೆಗೆಂದು ಮೈಸೂರಿಗೆ ಹೋದವರು,
ಒಂದು ಗಿಫ್ಟನ್ನು ಕೊಡುವ ಕನಿಷ್ಟ ಸೌಜನ್ಯವನ್ನು ತೋರದಿದ್ದರೂ,
ರಿಸಪ್ಷನ್ನಿನಲ್ಲಿ!! ಸ್ಟೇಜಿನ ಮೇಲೆ ನಮ್ಮಗಳ ದಂತಪಂಕ್ತಿಗಳೆಲ್ಲವೂ ತೋರುವಂತೆ
ಫೋಟೋ ಮತ್ತು ವೀಡಿಯೋದವರಿಗೆ ಪೋಸು ಕೊಟ್ಟು,
ಮದುವೆಯ ಮಹದಡುಗೆಯನ್ನು ಮನಸಾರೆ!!  ಉಂಡು,
ಬೆಟ್ಟ-ಗಿಟ್ಟ ಸುತ್ತಿಕೊಂಡು,
ವಾಪಾಸು ಬೆಂಗಳೂರಿನ ಕಡೆಗೆ ಹೊರಟಾಗ ರಾತ್ರಿ ೯ ಘಂಟೆ.
ಜೊತೆಯಲ್ಲಿ ಅಭಿ, ಶೈಲು ಮತ್ತು ಕೀರ್ತನ.

ಮಂಡ್ಯ ದಾಟಿದ ಮೇಲೆ, ಸೂಸು ಗೆಂದು  ಹೈವೇ.. ಬದಿಯಲ್ಲಿ ಬೈಕುಗಳನು ನಿಲ್ಲಿಸಿ,
ಗಾಳಿಗೆ ಹಾರಿಸುವಾಗ..,ಮರೆತದ್ದು ನೆನಪಿಸಿಕೊಂಡವನಂತೆ, ಹೊಟ್ಟೆ ಸವರಿಕೊಳ್ಳುತ್ತಾ..
"ಯಾಕೋ.. ಹೊಟ್ಟೆ ಹಾಳಾಗಿದೆ ಮಗ!!" ಅಂತಂದ ಅಭಿ!!

'ಹೊಟ್ಟೆ ಹಾಳಾಗಿದೆ' ಎಂಬ ಒಕ್ಕಣೆಯು, ಬೇಡದ ಹೊತ್ತಲ್ಲಿ,
ಬರಬರಾದ್ದು ಬರುವಂತಾದಾಗ ಮೂಡುವ ನಾಯ್ಸು.

ಮುಂದೆ ಯಾವುದಾದರೂ ಸಾರ್ವಜನಿಕ ಶೌಚಾಲಯಕ್ಕೆ ಹೋಗುವಿಯಂತೆ ಎಂದಾಗ,
' CCD ಗೆ ಹೋಗೋಣ '  ಎಂದುತ್ತರಿಸಿದ ಅಭಿ.
CCD ಅಂದರೆ, ಯಾವುದೋ ಹೈಟೆಕ್ ಶೌಚಾಲಯಕ್ಕಿರುವ ಅಬ್ರಿವೇಷನ್ನೋ, ಏನೋ ಅಂದುಕೊಂಡು
' ವಾಟ್ ಈಸ್ CCD ..? ' ಎಂದು ಕೇಳಿದ್ದಕ್ಕೆ,
' ಅಷ್ಟು ಗೊತ್ತಿಲ್ಲವಾ...? CCD ಅಂದರೆ ಕೆಫೆ ಕಾಫಿ ಡೆ ' ಅಂದ.

' ಹಂಗಾದ್ರೆ ಅದು KKD ಎಂದಾಗಬೇಕಿತ್ತಲ್ಲವೇ..? ' ಎನ್ನುತ್ತಾ  ತಲೆ ಕೆರೆದುಕೊಳ್ಳುವಾಗ,  ಹೈವೇ ನಲ್ಲಿ ಇದ್ದ ದೊಡ್ಡದಾದ ಫ್ಲೆಕ್ಸಿನಲ್ಲಿ ... ಸಮೋಸ ಮತ್ತು ಕಾಫಿ ಚಿತ್ರದ ಜೊತೆಗೆ
'ಕೋಂಬೊ ೪೯ ರೂಪಾಯಿಗಳು'  ಎಂಬುದಾಗಿ ಬರೆದಿದ್ದುದು,
ಕಾಫಿ ಡೇ ಕಡೆಗೆ ಹೋಗುವ ದಿಢೀರ್ ನಿರ್ಧಾರವನ್ನು, ಮತ್ತಷ್ಟು ಹಿತಕರವೆನ್ನಿಸಿತು.

ಕಾಫಿ ಡೇ ಒಳ್ಗೆ ಹೋಗುತ್ತಿದ್ದಂತೆ,
ಅಭಿ 'ವಾಷ್ ರೂಮ್' ಯಾನೆ 'ಶೌಚಾಲಯ' ದ ಕಡೆಗೆ ನಡೆದ.
ಆಕಳಿಕೆ, ತೂಕಡಿಕೆಯಂತೆ ಇದೂ ಕೂಡ ವೈರಲ್ ಆಗಿದ್ದರಿಂದಲೋ ಏನೋ...
ಶೈಲು ಕೂಡ ಅಭಿ ನಡೆದು ಹೋದ ದಾರಿಯನ್ನೇ ಹಿಡಿದ.
ನಾನು ಮತ್ತು ಕೀರ್ತನ ಮೆತ್ತನೆಯ ದೊಡ್ಡ ಹಾಸಿನ ಮೇಲೆ, ಸಣ್ಣ ದೇಹವನ್ನು ಆದಷ್ಟು ಚೆಲ್ಲಿ ಕುಳಿತೆವು.

ಹೋದ ಮಿತ್ರರು ಹೋದ ರೀತಿಯಲ್ಲೇ ವಾಪಾಸು ಬಂದರು.  
ಕೆಳಗಿನಿಂದ ನೀರನ್ನು ಪಂಪು ಮಾಡುವ ಸಲುವಾಗಿ, ಟಾಯ್ಲೆಟ್ಟಿಗೆ ಹದಿನೈದು ನಿಮಿಷಗಳ ಬ್ರೇಕು ನೀಡಿ, ಅದರ ಕಾವಲಿಗೆ ಒಬ್ಬನನ್ನು ನಿಲ್ಲಿಸಿದ್ದರಂತೆ. ಪಾಪ!! ಮೂತ್ರದ ಮನೆಯ ಬಾಗಿಲು ಬಡಿದು ಬಂದ ಮೇಲೆ, ಒತ್ತಡ ಮತ್ತು ತೀವ್ರತೆ ಹೆಚ್ಚಾಗಿ ... ಕುಂತಲ್ಲಿಯೇ ತುಣುಪುಣು ಕುಣಿಯುತಿದ್ದರು.

ಇಂತಹಾ ಸು-ಸಂದರ್ಭದಲ್ಲಿ ನಾನು ಓದಿದ್ದ 'Killer Brands' ಎಂಬ ಪುಸ್ತಕದಲ್ಲಿ  'ಕಾಫಿ-ಡೆ' ಕುರಿತಾಗಿ ಪ್ರಸ್ತಾಪಿಸಿದ್ದ ಕೆಲವು ವಿಚಾರಗಳನ್ನು ಹೇಳಿಕೊಳ್ಳುವ ಮನಸ್ಸಾಯಿತು.
" A lot can happen over coffee " ಅನ್ನೋದು ' ಕಾಫಿ ಡೇ' ಯ ಟ್ಯಾಗ್ ಲೈನು.
ಈ ಟ್ಯಾಗ್ ಲೈನ್ ಮತ್ತು ಅದರ ಹಿಂದಿರುವ ಸೃಜನಾತ್ಮಕ ಬ್ರಾಂಡಿಗ್ ಕಲ್ಪನೆ ಅಪೂರ್ವವಾದದ್ದು.
ಅಂದರೆ ಇಲ್ಲಿ ಕಾಫಿ!! ಅನ್ನೋದು ನೆಪ ಮಾತ್ರ. ಅದು ತನ್ನದೇ ಆದ ಕಲ್ಚರು ಸೃಷ್ಟಿಸಿಕೊಂಡಿದೆ.
 ಡ್ರಿಂಕಿಂಗು ಮತ್ತು ಈಟಿಂಗು ಜೊತೆಗೆ consumer ಗಳ ಪಾಸಿಬಿಲಿಟಿಗಳನ್ನ ಮತ್ತೊಂದು ಲೆವೆಲ್ ಗೆ   ಕೊಂಡೊಯ್ದ ಶ್ರೇಯ " A lot can happen over coffee " ಗೆ ... ಸಲ್ಲುತ್ತದೆ.

ಇಂತದ್ದನ್ನೆಲ್ಲಾ ಆ ಬುಕ್ಕಲ್ಲಿ ಬರೆದಿದ್ರು . 

" ಕಾಫಿ ಡೇ ..  created a new set of consumers...you know."
ಎಂದು ಹೇಳುತ್ತಾ, ನನ್ನ ಸೆನ್ಸಾಫ್ ಪ್ರಸೆನ್ಸಿಗೆ, ಶ್ಲಾಘನೆಯನ್ನು ನಿರೀಕ್ಷಿಸುತ್ತಾ ..   ಅವರತ್ತ ನೋಡಿದೆ.
ಕೀರ್ತನ  -
"ಯಾ!! ಯಾ!! It has created a new set of consumers"
ಎಂದು ವಿಡಂಬನಾತ್ಮಕವಾಗಿ ನಗುತ್ತಾ "ಹಾಟ್ ಸೀಟ್" ಮೇಲೆ ಕುಳಿತಿದ್ದ ಅಭಿ!! ಶೈಲುವಿನ ಕಡೆಗೆ ಬೊಟ್ಟು ಮಾಡಿ ತೋರಿಸಿದ.

ಅವರು ಅವನ ಜೋಕಿಗೆ ನಗುವ ಸ್ಥಿತಿಯಲ್ಲೂ ಇರಲಿಲ್ಲ ಮತ್ತು ನನ್ನ ಕಥೆಗೆ ತಲೆದೂಗುವ ಸ್ಥಿತಿಯಲ್ಲೂ ಇರಲಿಲ್ಲ.  
 

*****
' ಕಿಲ್ಲರ್ ಬ್ರಾಂಡ್'  ಎಂಬ ಮ್ಯಾನೇಜ್-ಮೆಂಟ್ ಕುರಿತಾದ ಇಂಗ್ಲೀಷು ಪುಸ್ತಕವನ್ನು ಓದಿದುದರ ಹಿಂದೆಯೂ
 ಒಂದು ದುರಂತ ಇತಿಹಾಸವಿತ್ತು. 
 

ಡಿಗ್ರಿ ಮುಗಿದು ಸುಮಾರು ಎರಡು ವರುಷಗಳ ತರುವಾಯ,
ಮಿತ್ರರೆಲ್ಲಾ ಒಂದು ಕಡೆ ಬೃಹತ್ ಸಭೆ ಸೇರಿದ್ದೆವು.
ಸಭೆಯು, ಗೆಳೆಯ ಅಭಿ!! ಸಾರಥ್ಯದಲ್ಲಿ ನಡೆಯುತ್ತಿತ್ತು.

" ನಾವುಗಳು ಜೀವನದಲ್ಲಿ ಏನಾದರು ಮಾಡಲೇಬೇಕು. " ಅಂದಾಗ
ಕೋರಸ್ ನಲ್ಲಿ " ಹೌದು!! ಹೌದು!! ಮಾಡಲೇಬೇಕು."

" ನಮ್ಮ ಹತ್ರ ಇರೋ 
ಟ್ಯಾಲೆಂಟನ್ನ ನಾವು ತೋರಿಸಲೇ ಬೇಕು." ಅಂದಾಗ
ಅದೇ ಕೋರಸ್ ನಲ್ಲಿ  "ಹೌದು!! ಹೌದು!! ಟ್ಯಾಲೆಂಟನ್ನ ತೋರಿಸಲೇಬೇಕು.."


"ಸೋ...  ಈಗ ಎಲ್ಲಿಂದ ಶುರು ಮಾಡಬೇಕು ...? " ಅಂದಾಗ...

"ಹೌದಲ್ವಾ..? ಎಲ್ಲಿಂದ ಶುರು ಮಾಡಬೇಕು..? "

ಮುಂದೆ!! ಅಭಿ ತನ್ನ ತಲೆಯೊಳಗಿದ್ದ   'ಕಿಲ್ಲರ್ ಆಪ್' ಕಲ್ಪನೆಯನ್ನು ಹೊರಹಾಕಿದ.

" ನಾವು!! ಫೇಸ್-ಬುಕ್ ತರದ್ದು ಒಂದು ಮಾಡಬೇಕು.
ಫೇಸ್ಬುಕ್ ತರದ್ದು ಅಂದ್ರೆ ಮತ್ತೊಂದು 'ಸೋಷಿಯಲ್ ನೆಟ್-ವರ್ಕಿಂಗ್' ಸೈಟ್ ಅಲ್ಲ.
ಫೇಸ್ಬುಕ್ ತರದ್ದು ಒಂದು "ಕಿಲ್ಲರ್ ಅಪ್ಲಿಕೇಷನ್" ಮಾಡಬೇಕು.
ಆ ಥರಾನೆ ಮಾರ್ಕೇಟ್ ನ ಸೀಳಿಕೊಂಡು ಹೋಗಿ ಸೆನ್ಸೇಷನ್ ಕ್ರಿಯೇಟ್ ಮಾಡಬೇಕು.
'ರೇಡಿಯೋ' ಹೆಸರಿಗೆ ಸಮಾನಾಂತರವಾಗಿ ಫಿಲಿಪ್ಸ್ ಪದವನ್ನ ಬಳಸ್ತಿದ್ರಂತೆ.
ವಾಕ್-ಮ್ಯಾನ್ ಅನ್ನೋದು ಸೋನಿ ಕಂಪನಿಯ ಒಂದು ಪ್ರಾಡಕ್ಟಿನ ಹೆಸರಾಗಿ ಉಳಿದಿಲ್ಲ,
' ಸ್ಕೈಪ್'  ಇರಬಹುದು,  ಟ್ವಿಟರ್ ಇರಬಹುದು ಅಥವಾ  ಮತ್ತೇನೆ ಇರಬಹುದು..,
 ' ಔಟ್ ಆಫ್ ದಿ ಬಾಕ್ಸ್' ಯೋಚಿಸಿದಾಗ ಮಾತ್ರ ಸೃಷ್ಟಿಯಾದಂತವು. "

" ಯಾವುದೇ ಒಂದು ಪ್ರಾಡಕ್ಟಿಗೆ  ಅಥವಾ ಸಾಫ್ಟ್-ವೇರ್ ಅಪ್ಲಿಕೇಷನ್ ಗೆ...
"ಕಿಲ್ಲರ್ ಆಪ್" ಅನ್ನೋ ಟೈಟಲ್ ಬರಬೇಕು ಅಂದರೆ ...
ಆ - ಅದಕ್ಕೆ ಏನೇನೆಲ್ಲಾ ಗುಣವಿಶೇಷಣಗಳು ಇರಬೇಕಾಗುತ್ತದೆ ..? "
ಎಂದು ಹೇಳಿ ಒಂದು ಕ್ಷಣ ಸುಮ್ಮನಾದ..
 ಇನ್ನು ತುಂಬಾನೆ ಹೇಳಿ ಕೊನೆಗೆ ಕೊಂಚ ಪಾಸ್!! ಕೊಟ್ಟ ಮೇಲೆಯೇ....
ಅವನ ಕೊನೆಯ ಮಾತು ಪ್ರಶ್ನೆ  ಎಂಬುದಾಗಿಯೂ ಮತ್ತು ಅದಕ್ಕೆ ಅವನು ಉತ್ತರವನ್ನು ನಿರೀಕ್ಷಿಸುತ್ತಿದ್ದಾನೆ ಎಂಬುದಾಗಿಯೂ ಅರ್ಥವಾಗಿದ್ದು.
 

ಸೋ ಐಡಿಯಾ ಹೆಂಗಿರಬೇಕು ಅಂದರೆ ...
ಯುನಿಕ್ ಆಗಿರಬೇಕು,  ಚೆನ್ನಾಗಿರಬೇಕು.


ಡ್ಯಾಷ್...  ಡ್ಯಾಷ್...  ಡ್ಯಾಷ್...
ಮಿಷನ್ ಸ್ಟಾರ್ಟೆಡ್!!

' ಅದು ಹೆಂಗೆ ಕೆಲವು ಐಡಿಯಾಗಳು!! ಕಿಲ್ಲರ್-ಆಪ್ ಗಳಾಗಿ ಬದಲಾಗಿ ಲೋಕವನ್ನೇ ನಿಬ್ಬೆರಗಾಗಿಸುತ್ತವೆ ಮತ್ತು
ಇನ್ನು ಕೆಲವು ... ಗೆಲ್ಲುವ  ಚೈತನ್ಯವಿದ್ದರೂ , ಸತತ ಪ್ರಯತ್ನಗಳು  ಇದ್ದಾಗಿಯೂ ಕೂಡ
"ಕಿಲ್ಲರ್ ಆಪ್" ಆಗುವಲ್ಲಿ ವಿಫಲಗೊಂಡು ..
ಮಾರ್ಕೆಟ್ ರೇಸ್ ನಲ್ಲಿ ಹಿಂದುಳಿದು,
ಕೊನೆಗೆ .. ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಅಂತರ್ಧಾನವಾಗುತ್ತವೆ... '
ಎಂಬುದಾಗಿ ಎಲ್ಲರೂ ತಮ್ಮ ತಮ್ಮ ಜೀವನಾನುಭವಕ್ಕೆ  ನಿಲುಕಿದ ಘಟನೆಗಳು,
ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು...,  ಅದ್ಭುತ ಅಭಿಪ್ರಾಯಗಳ  ಧೀರ್ಘ ವರದಿಯನ್ನು ಸಿದ್ಧಪಡಿಸಿದರು.

ಅಂತೂ ಕೊನೆಗೆ  ' ಏನೋ  ಒಂದು ಮಾಡಬೇಕು ' ಅನ್ನೋ ನಿರ್ಧಾರಕ್ಕೆ ಬರಲಾಯಿತು.
ಅದು ' ಕಿಲ್ಲರ್ ಆಪ್ ' ಆಗುತ್ತೆ ಅನ್ನೋ ಧೈರ್ಯದಲ್ಲಿ ,
ಮತ್ತು ಅದನ್ನು  ' ಕಿಲ್ಲರ್ ಆಪ್ ' ಮಾಡಲೇಬೇಕು ಎನ್ನುವ ಧೃಡ ಸಂಕಲ್ಪದಿಂದಲಿ,
 ಖಾಸಗಿಯಾಗಿ ಮತ್ತು ಸಾಮೂಹಿಕವಾಗಿ ಕೆಲ್ಸಗಳನ್ನೂ ಶುರುಮಾಡಿದೆವು.
 

ನಾಗ-ದೋಷ, ಖುಜ-ದೋಷದ ತರ ಯಾರಿಗೂ ಸ್ತ್ರೀ-ದೋಷ,  ಇರದಿದ್ದರಿಂದ
ತಲೆ ಮೊಸ್ರು ಮಾಡ್ಕೋಳೋಕು ಲೈಫಲ್ಲಿ ಹೊಸದಾಗಿ ಒಂದು ' ಛಾನ್ಸು' ಸಿಕ್ಕಿತ್ತು.
ಹೊಸ ಹೊಸ ತಂತ್ರಜ್ನಾನಗಳಿಗೆ, ಹೊಸ ಹೊಸ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡೆವು. 
 ಕಲ್ಪನೆಗಳು!! ಕನಸುಗಳು!! ಐಡಿಯಾಗಳು!! ಲಂಗುಲಗಾಮಿಲ್ಲದೇ ತನ್ನಿಷ್ಟ ಬಂದ ದಿಕ್ಕಿನೆಡೆಗೆ ಓಡುತ್ತಿದ್ದವು.
ಪ್ರೊಜೆಕ್ಟರ್ರೆ ಇಲ್ಲದೆ, ಖಾಲಿ ಗೋಡೆ ಮೇಲೆ ಕಲರ್ ಕಲರ್ ಕನಸುಗಳು!!!! ಡಾಲರ್ ಲೆಕ್ಕದಲ್ಲಿ.. ಕಾಣುತ್ತಿದ್ದವು. 
' ಐಡಿಯಾಗಳು ತುಂಬಾನೆ  ಹಂಚಿ ಹೋದರೆ, ಅವುಗಳು ಡೈಲೂಟ್ ಆಗ್ತವೆ.
ಆದಕಾರಣ .. ನಮ್ಮ 'ಪ್ರಾಜೆಕ್ಟ್  XYZ' ಒಂದು ಹಂತಕ್ಕೆ ಬರುವವರೆಗಾದರೂ ..
ಮೂರನೆಯವರೊಂದಿಗೆ ಹಂಚಿಕೊಳ್ಳಬಾರದೆಂದೂ, ಇಂಥದ್ದೊಂದು ಕಾನ್ಫಿಡೆನ್ಷಿಯಾಲಿಟಿಯನ್ನು ಮೇಂಟೇನ್ ಮಾಡಬೇಕೆಂದು'
 ಕರಾರು ವಿಧಿಸಿದಾಗ ..
' ಅಬ್ಬಾ!! ನಾವು ಎಂಥದೋ ಭಯಂಕರವಾದುದನ್ನೇ ಮಾಡುತ್ತಿರಬೇಕು....
ಎಂಬುದಾದ 'ಭ್ರಮೆ'ಯೊಂದು ಆವರಿಸಿಕೊಂಡು ಒಳಗೊಳಗೆ ಕಚಗುಳಿ ಇಟ್ಟಂತಾಗುತ್ತಿತ್ತು.
( ದುರಂತ ಅಂದ್ರೆ ಈ ಥರಾನೆ ಭಯಂಕರವಾದುದನ್ನು ತಲೆಯಲ್ಲಿ ಇಟ್ಟುಕೊಂಡು,
ಶತಾಯಗತಾಯ ಪ್ರಯತ್ನಿಸುತ್ತಿದ್ದ ವಿವಿಧ ಗೆಳೆಯರ ಬಳಗಗಳು ಆ ಆನಂತರ ಬೆಳಕಿಗೆ ಬಂದವಾದರೂ...
ಅವರೂ ನಮ್ಮಂತೆ ಕಾನ್ಫಿಡೆನ್ಷಿಯಾಲಿಟಿಯ ಹೆಸರಲ್ಲಿ, ಕೆಲಸ ಹೊಗೆ ಹಾಕುಸ್ಕೋಳೋವರ್ಗು,
 ತಮ್ಮ ಪ್ರಯತ್ನಗಳ  ಬಗ್ಗೆ  ಹೊರಗಡೆ ಉಸಿರೆತ್ತಿರಲಿಲ್ಲ.)


ನಮ್ಮ ಸಭೆಯಲ್ಲಿ ಲಾಭದ ಹಂಚಿಕೆಯ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿದ್ದವು.
' ಎಲ್ಲದರಲ್ಲೂ ಕ್ಲಾರಿಟಿ ಇರಬೇಕು . ದೊಡ್ಡ ಮೊತ್ತದ ಹಣ ಹರಿದುಬರುವಾಗ ಹಂಚಿಕೊಳ್ಳುವಲ್ಲಿ ಸಮಸ್ಯೆ ಯಾಗಬಾರದು '
ಎಂಬ ವಾದಗಳು ಸೀಮಂತಕ್ಕೆ ಹೋದವರು,
ಹುಟ್ಟೋ ಮಗುವಿಗೆ ಸ್ವೆಟರ್ ಗಿಫ್ಟು ಕೊಡಲು ಅಂಗಡಿಯವನ ಜೊತೆ ನಿಂತು ಬಾರ್ಗೇನು ಮಾಡುತ್ತಿರುವಂತೆ ಕಂಡರೂ ..,
 ಈಗ ಅಂದುಕೊಂಡಷ್ಟು ಕಾಮೆಡಿಯಾಗಿ, ಆಗ ಅನಿಸುತ್ತಿರಲಿಲ್ಲ.  

ಗೆಳೆಯ ಜೋಬಿಯಂತೂ... ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,
' ತನಗೆ ಯಾವುದೇ ವಿಧವಾದ ಲಾಭವು ಬೇಡವೆಂದೂ,
ಕೇವಲ ಹವ್ಯಾಸಕ್ಕೆಂದು ನಮ್ಮ ಈ ಮಹತ್ಕಾರ್ಯದಲ್ಲಿ,
ಸಹಭಾಗಿಯಾಗಿ, ಸಹಕರಿಸುವುದಾಗಿಯೂ '  ಹೇಳಿ...  ನಮ್ಮನ್ನೆಲ್ಲಾ ಬೆಚ್ಚಿಬೀಳಿಸಿದ.
ಹಹಹಾ...  ಒಂದು ಷೇರ್ ಕಮ್ಮಿ ಆದಂಗಾಯ್ತು.

ನಮ್ಮಗಳ ಈ 'ಬಯಲು ನಾಟಕ' ಬಹಳ ದಿನಗಳು ನಡೆಯಲಿಲ್ಲ.
ಜೀವನವು ತನ್ನ ಕಬಂದ ಬಾಹುಗಳಿಂದ ನಮ್ಮನ್ನೆಲ್ಲಾ ಅಪ್ಪಿಕೊಂಡು,
ತನ್ನಿಷ್ಟ ಬಂದ ದಿಕ್ಕಿಗೆ ಎತ್ತಿ ಎಸೆಯಿತು.

ಡಿಚ್ಚುಡು!! ಡಂಪುಡು!! ಕ್ವಿಟ್ಟುಡು!!

*****

 
 ಶ್ರೀ ಶೈಲು ಮತ್ತು ಶ್ರೀ ಅಭಿ ..
ತಮ್ಮ ಇತಿಮಿತಿಗೆ ಮೀರಿದ್ದ ಅನೈಚ್ಚಿಕ ಸ್ನಾಯುಗಳ ಅಣತಿಯನ್ನು ಪಾಲಿಸಿದ ನಂತರ ನಮ್ಮನ್ನು ಕೂಡಿಕೊಂಡರು.

ಬಿಲ್ಲಿಂಗ್ ಮಾಡಲು ಎದ್ದು ಹೋಗಿ, ೪೯ ರೂಪಾಯಿಗೆ ಸಿಗುವ ' ಸಮೋಸ +  ಕಾಫಿ '  ಯ combo ಕೇಳಿದ್ದಕ್ಕೆ,
' ಅದೆಲ್ಲಾ ಇಲ್ಲ!! ಕ್ಯಾಪಚಿನೋ starts from ೮೦ ರುಪೀಸ್ ' ಅಂದ ಅಂಗಡಿಯವನು.
' ಸುಮ್ಮನೆ ಸುಮ್ಮನೆ, ಹೈವೇಗಳಲ್ಲಿ ಅಷ್ಟು ದೊಡ್ಡ ಬೋರ್ಡು ಹಾಕಿ!!
ಕಮ್ಮಿ ರೇಟಿಂದು ತೋರಿಸಿ, ಒಳಗೆ ಬಂದ ಮೇಲೆ ಅದಿಲ್ಲ, ಇನ್ನೊಂದಿದೆ!!  ಅನ್ನೋದು ಎಷ್ಟು ನ್ಯಾಯ..? '
ಎಂಬುದಾಗಿ ಜಿದ್ದು ಮಾಡಿದೆನಾದ್ರೂ...
ಕೊನೆಗೆ ನಾಕು ಕ್ಯಾಪಚಿನೋ ಪಡೆದು ಹೋಗಬೇಕಾಯಿತು.

ಅಂಗಡಿಯವನ ಜೊತೆ ಜಗಳವಾಡಿದ್ದನ್ನ ವಿವರಿಸಿದ್ದಕ್ಕೆ,
 ' ಅದರಲ್ಲಿ ವಿಶೇಷವಾದದ್ದು ಏನೂ ಇಲ್ಲವೆಂದು,
ಜಸ್ಟ್ ೮೦ ರುಪೀಸ್ ತಾನೇ..? '
ಅನ್ನುವಂತಿತ್ತು ಮಿತ್ರರ ಕೊಂಕು ನೋಟ!!.
ನನಗೂ ಸಖತ್ ಕೋಪ ಬಂತು.
ಎಲ್ಲರೂ exact ಆಗಿ ಅವರವರ ೮೦ ರೂಪಾಯಿ ಷೇರ್ ಕೊಟ್ಟರಷ್ಟೇ ಎದ್ದು ಬರುವುದಾಗಿಯೂ,
ಇಲ್ಲವಾದಲ್ಲಿ ಇಲ್ಲೇ ಕೂರುವುದಾಗಿಯೂ ಹಠ ಹಿಡಿದು ಕುಳಿತೆ.
ಕೋಪವನ್ನು ಹಿಂಗಾದರೂ ಹೊರ ಹಾಕಲೇಬೇಕಿತ್ತು.
ಎಲ್ಲರ ಹತ್ತಿರ ಹಣ ಪಡೆದು, ಕಾಫಿ ಡೇ ಗೆ ಬೆನ್ನು ಮಾಡಿ ಹೊರಡುವಾಗ,

" ಲೋ!!  ೨-೩ ರೂಪಾಯಿ ಕೆಲಸಕ್ಕೆ, ಮುನ್ನೂರ ಇಪ್ಪತ್ತು ರೂಪಾಯಿ, ಪ್ಲಸ್ಸು ಸರ್ವೀಸ್ ಟ್ಯಾಕ್ಸು ಕಕ್ಕಬೇಕಾಯ್ತಲ್ರೋ...? "  
ಅಂದದ್ದಕ್ಕೆ ಸುಮ್ನೆ ನಗ್ತಾರಪ್ಪ ಹುಡುಗ್ರು. 


Thursday, October 17, 2013

ವ್ಯವಸಾಯ ಅಂದರೆ, ಲಾಭದಾಯಕ ವ್ಯಾಪರವೋ ಅಥವಾ ಕಲಾತ್ಮಕ ಜೀವನ ಶೈಲಿಯೋಕುಂಟೆಯ ಮೇಲೆ ಕೂತು, ಎತ್ತಿನ ಬಾಲವನು ಮುರಿದು, ' ಹೋಯ್ ' ಎಂದು ಅಬ್ಬರಿಸುವಾಗ, ಕುಂಟೆಯ ಅಲುಗಿಗೆ ತಗಲುವ ಮಣ್ಣಿನ ಎಂಟೆಗಳನು ಒಡೆದು ಪುಡಿ ಮಾಡುತ್ತಾ ಓಟ ಕೀಳುವ, ಜೋಡಿ ಎತ್ತುಗಳ ಸ್ಟೇರಿಂಗು ಹಿಡಿದರೆ… ಅದೊಂತರ ರೋಲರ್ ಕೋಸ್ಟರ್ ರೈಡಿನ ಅನುಭವ. 

Thursday, October 3, 2013

ಜೈಮಿನ ಭಾರತವೂ ಮತ್ತು ಗಂಗೆಯ ಒಡಲಿನ ಆಮೆಗಳೂ
ಪವಿತ್ರ ಗಂಗಾ ನದಿ ತಟದಲ್ಲಿ, ಸತ್ತವರ ಅಂತಿಮ ಸಂಸ್ಕಾರ ಮಾಡುವರು ಮತ್ತು ನಂತರದ ಅಸ್ಥಿಯನ್ನ, ನದಿ ನೀರಿಗೆ ಹಾಕುವರು. ಅಲ್ಲಿಗೆ ಸತ್ತವನ ಆತ್ಮಕ್ಕೆ ಶಾಂತಿ. 

Saturday, September 21, 2013

ಇಂಗ್ಲೀಷು ಕಂಗ್ಲೀಷು ಕಂತೆ ಪುರಾಣ

ಇಂಜಿನಿಯರಿಂಗ್ ಕಾಲೇಜಿನ ಪ್ರಾರಂಭದ ದಿನಗಳು. ಸಾರಿಕ ಅನ್ನೋ ಮೇಡಮ್ಮು  ಪ್ರೇಮಲೋಕದ ಶಶಿಕಲಾ ಶೈಲಿಯಲ್ಲಿ, ಫುಲ್ಲು ಚಿಲ್ ಚಿಲ್ಲಾಗಿ 'ಹಲೋ. Guys ' ಎನ್ನುತ್ತಾ ತರಗತಿಯ ಒಳಗೆ ಬಂದರು. ಈ 'ಹಲೋ. Guys ' ಗೆ ಪ್ರತಿಯಾಗಿ 'No!. we are gays' ಎಂಬ ಕೌಂಟರ್ ಕಾಮೆಂಟು ಹಿಂದಿನ ಸಾಲಿನ ಪೋಲಿ ಹುಡುಗನಿಂದ, ಗದ್ದಲದ ನಡುವೆ ಪ್ರತಿಧ್ವನಿಸಿತು. 

Friday, September 20, 2013

School Bus


ಆ ದಿನ ಅಪ್ಪಾಜಿಗೆ, ಫೋನ್ ಮಾಡಿದಾಗ, ಅವರು ರಿಸೀವ್ ಮಾಡಲಿಲ್ಲ. ಮನೆಯಲ್ಲಿ ಯಾರೊಬ್ಬರೂ ಫೋನಿಗೆ ದಕ್ಕಲಿಲ್ಲ. ಸುಮಾರು ಹೊತ್ತಿನ ನಂತರ ಅಮ್ಮ, ಕಾರಣ ಹೇಳಿದಳು. 

Sunday, August 11, 2013

ಒಂದು ಅಪಘಾತದ ಸುತ್ತ

ಇಂಜಿನಿಯರಿಂಗ್ ಅಂತಿಮ ವರ್ಷ. ಶೈಲು, ರವಿ ಹೊರತಾಗಿ ನಮ್ಮಲ್ಲಿ( ಗುಂಪಿನ ಹೆಸರು ಬಿ ಬಿ ಹುಡುಗರು) ಉಳಿದೋರಿಗೆಲ್ಲಾ ಕೆಲಸ ಸಿಕ್ಕಿತ್ತು. ಶೈಲುಗೆ, ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿ ಗೊತ್ತಿತ್ತು. ಸೋ ಅದರ ಬಗ್ಗೆ ವಿಷಾಧ ಇರಲಿಲ್ಲ. ಇನ್ನು ರವಿ:
ಒಂದು ಕೆಲಸದ ಅವಶ್ಯಕತೆ, ಎಲ್ಲರಿಗಿಂತಲು ಅವನಿಗೆ ಜಾಸ್ತಿ ಇತ್ತು. ಆ ಅವಶ್ಯಕತೆ ಅವನಿಗೆ ಮಾತ್ರ ಅಲ್ಲ, ಖುಷ್ ಖುಷಿಯಾಗಿದ್ದ ನಮ್ಮೆಲ್ಲರಿಗೂ ಇತ್ತು. ಸುಮಾರು ಕಂಪನಿಗಳಿಗೆ ಎಡತಾಕಿದರೂ, ಒಂದಕ್ಕೂ ಆಯ್ಕೆ ಆಗಲಿಲ್ಲ. ಅಭಿ, ಜೋಬಿ, ಶೇಕ್ ನಂತ ಗಮಾಡ್ ಗಳಿಗೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಸಿಕ್ಕಿರೋವಾಗ, ಧೈತ್ಯ ಪ್ರತಿಭೆ ‘ರವಿ’ ಗೆಕೆಲಸ ಸಿಗದೇ ಇದ್ದದ್ದು, ನಮಗೆಲ್ಲಾ ಖೇದಕರ ಅನ್ನಿಸುತ್ತಿತ್ತು.

ರವಿಗೆ ಕೆಲಸ ಸಿಗದೇ ಇದ್ದದ್ದಕ್ಕೆ, ಕಾರಣಗಳೂ ಇದ್ದವು. ಲಕ್ ಇರಲಿಲ್ಲ, ಇಂಗ್ಲೀಷ್ ಸಮಸ್ಯೆ. ಕೋಡಿಂಗ್ ಬಗ್ಗೆ ಆಸಕ್ತಿ ಇಲ್ಲದೇ ಇರೋದು. ಆದರೂ ಜೀವನೋಪಾಯಕ್ಕೆ ಒಂದು ಕೆಲಸದ ಅನಿವಾರ್ಯತೆ ಇತ್ತು. ಪ್ರತಿ ಕಂಪನಿ ಮಿಸ್ ಆದಾಗಲೂ. ‘ ನಿನಗೋಸ್ಕರ ಯಾವುದೋ ದೊಡ್ಡದು, ಕಾಯ್ತಾ ಇರಬೇಕು ಬಿಡು, ಮಗ ’ ಅಂತ ನಾವು, ಸಮಾಧಾನ ಮಾಡೋದಕ್ಕೆ ಹೋದರೆ, ‘ನನಗೆ, ನನ್ನ ಬಗ್ಗೆ ಬೇಜಾರಿಲ್ಲ ಮಗ. ಆದರೆ ಒಂದು ಒಳ್ಳೆ ಕಂಪನಿ, ಗ್ಲೋಬಲ್ ಟಾಪ್ ಟೆನ್ ಒಳಗೆ ಬರೋದನ್ನ, ಜಸ್ಟು ಮಿಸ್ ಮಾಡಿಕೊಂಡು ಬಿಡ್ತು. ‘ಎನ್ನುವನು. ‘ಎಲಾ ಬಡ್ಡಿಮಗನೆ ’ ಅಂದುಕೊಂಡುಸುಮ್ಮನಾಗುತ್ತಿದ್ದೆವು.

ಇಂತಹ ಸಂದಿಗ್ಧ, ಸುಸಂದರ್ಭದಲ್ಲಿ Bharath Electronics Limited(BEL) ಕಂಪನಿ ನಮ್ಮ ಕಾಲೇಜಿಗೆ, ಕ್ಯಾಂಪಸ್ ಸೆಲೆಕ್ಷನ್ ಗೆ ಅಂತ ಬಂತು.

2
ಎಲೆಕ್ಟ್ರಾನಿಕ್ ವಿಷಯಗಳನ್ನ ಪ್ರಾಕ್ಟಿಕಲ್ ಆಗಿ ಅರ್ಥ ಮಾಡಿಕೊಂಡು, ಅದನ್ನ ಅಷ್ಟೇ ಕಾಮೆಡಿಯಾಗಿ ವಿವರಿಸೋದರಲ್ಲಿ ರವಿಯದ್ದು ಅಪ್ಪರ್ ಹ್ಯಾಂಡು. ಆಗಾಗ ಲೀಕೇಜ್ ಕರೆಂಟನ್ನ ಒಂದು ಕೈಲಿ ಹಿಡಿದುಕೊಂಡು, ಇನ್ನೊಂದು ಕೈಲಿ ನಮ್ಮನ್ನು ಮುಟ್ಟಿ. ಷಾಕ್ ಹೊಡೆಸುತ್ತಿದ್ದ. ಸೋ ಹೆಂಗಾದ್ರೂ ಇದರಲ್ಲಿ ಕೆಲಸ ಸಿಗತ್ತೆ, ಅನ್ನೋದು ನಮ್ಮ ಆಶಯವಾಗಿತ್ತು.

ಮೊದಲ ಸುತ್ತಿನ ರಿಟನ್ ರೌಂಡ್ ಬರೆದು ಬಂದ ಮೇಲೆ, ಎಲ್ಲರೂ ಒಟ್ಟಾಗಿ ಕ್ಯಾಂಪಸ್ ತುಂಬಾ ಅಲೆದೆವು. ಮಧ್ಯಾಹ್ನದ ಹೊತ್ತಿಗೆ, ಪ್ಲೇಸ್-ಮೆಂಟ್ ಆಫೀಸಿನ ಹೊರಭಾಗದಲ್ಲಿ ನಿಂತೆವು. ಮುಂದಿನ ಸುತ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಕರೆಯಲು ಪ್ರಾರಂಭಿಸಿದರು. ‘ರವಿ’ಅನ್ನೋ ಒಂದು ಹೆಸರಿಗಾಗಿ ಎಲ್ಲರೂ ಕಾಯುತ್ತಿದ್ದೆವು. ಅಂತೂ ‘ರವಿ’ ಅಂತ ಕೂಗಿದರು.


ಅಭಿ ಗೆಲುವಿನ ಕೇಕೆ ಹಾಕಿದ. ಅವನ ಜೊತೆಗೆ ನಾವೂ ಸೇರಿಕೊಂಡು ಕೂಗಿದೆವು. ಬಹುಷಃ ಕೆಲಸ ಸಿಕ್ಕಿದಾಗಲೂ, ಪ್ಲೇಸ್-ಮೆಂಟ್ ಆಫೀಸ್ ಮುಂದೆ ಈ ರೀತಿ ಕೇಕೆ ಹಾಕಿರಲಿಲ್ಲ ಅನ್ಸತ್ತೆ. ಪಿನ್ ಡ್ರಾಪ್ ಸೈಲೆಂಟ್ ಆಗಿದ್ದ, ಜಾಗದಲ್ಲಿ ಮೂಡಿದ ಗದ್ದಲದಿಂದಾಗಿ ಎಲ್ಲರೂ ತಿರುಗಿ ನೋಡಿದರು. ರವಿ ಅಂತೂ. ಮುಜುಗರದ ಮುದ್ದೆಯಾಗಿ ‘ ಅಯ್ಯಯ್ಯಯ್ಯ ಏನಾ ಆಯ್ತು ಇವಕ್ಕೆ, ಹಲ್ಕ ನನ್ಮಕ್ಳ ಸುಮ್ಕೆ ಇರ್ರೋ ಕಿರುಚಾಡಿ, ನನ್ನ ಮಾನ ಮರ್ಯಾದೆ ತೆಗಿ ಬೇಡ್ರಿ. ’ ಅಂತ ಬಯ್ದ. ನಮಗ್ಯಾರಿಗೂ ‘ಅನಾಗರಿಕರು’ ಅನ್ನೋ ಫೀಲ್ ಬರಲೇ ಇಲ್ಲ. ಇಂಟ್ರೂಗೆ ಹೊರಡುವಾಗಲೂ, ಕೇವಲ ‘ಟೈ’ ಕೇಳಲು ಕೂಡ, ಮುಜುಗರ ಪಟ್ಟುಕೊಳ್ಳುತ್ತಿದ್ದವರ ಮಧ್ಯೆ,, ಯಾರದ್ದೋ ಶೂ ಇನ್ಯಾರದ್ದೋ ಟೈ ಮತ್ಯಾರದ್ದೋ ಬೆಲ್ಟು ಹೊತ್ತು ಹೋಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದ, ಹುಡುಗರ ಬಗ್ಗೆ ಹೆಮ್ಮೆ ಇತ್ತು. ಹಾಗೆಯೇ, ಇಲ್ಲೇ ಇವನಿಗೆ ಕೆಲಸ ಅನ್ನೋದು ಕೂಡ ಪಕ್ಕಾ ಆಗೋಯ್ತು.


ರೂಪಿ ಬೈಕು ಓಡಿಸಿಕೊಂಡು ಬಂದು, ಪ್ಲೇಸ್-ಮೆಂಟು ಆಫೀಸ್ ಮುಂದೆ ನಿಂತ. ನಾನು, ರೂಪಿಯ ಜೊತೆಗೆ ಸರಸ್ವತಿ ಪುರಂ ನಲ್ಲಿದ್ದ ಹಾಸ್ಟೆಲಿಗೆ ಹೋಗಿ, ಫಾರ್ಮಲ್ಲು ಧಿರಿಸುಗಳು ಮತ್ತು ಇವನುಡಿಪ್ಲೋಮಾದಲ್ಲಿ ಮಾಡಿದ್ದ ಪ್ರಾಜೆಕ್ಟುಗಳ ವಿವರಗಳನ್ನುತರುವುದಾಗಿಯೂ, ಅಲ್ಲಿವರೆಗೂ, ಉಳಿದವರೆಲ್ಲಾ ರವಿ ಜೊತೆ, ಇಲ್ಲೇ ಇರುವುದಾಗಿಯೂ ಮಾತಾಯಿತು. ಬೈಕು ಹತ್ತಿ ಕುಳಿತಿದ್ದ ನನ್ನನ್ನು ಇಳಿಸಿ, ರವಿಯೇ ಬೈಕಿನ ಹಿಂದೆ ಕುಳಿತ. ‘ ಇಂಟ್ರೂ. ಗೆಇನ್ನ ಟೈಮ್ ಇದೆ. ಅಲ್ಲಿವರೆಗೂ ನಾನೇನು ಮಾಡ್ಲಿ ಇಲ್ಲಿ. ? ನಾನೇ ಹೋಗಿ ಬರ್ತೇನೆ ’ ಅಂದ. ‘ಲೋ ರವಿ ನೀನು ಇಲ್ಲೇ ಇರು ಮಗ ಸ್ವಲ್ಪ ಓದಿ, ಪ್ರಿಪೇರ್ ಆಗುವಂತೆ. ’ ಅಂತ ಜೋಬಿ ಅಂದದ್ದಕ್ಕೆ, ‘ಥೂ ಇಷ್ಟು ವರ್ಷದಲ್ಲಿ ಓದಕ್ಕೆ ಆಗದೆ ಇರೋದನ್ನ, ಈಗೆನ್ಲಾ ಓದಿ ದಬಾಕೋದು. ಅದೇನ್ ಕೇಳ್ತಾರೋ. ನೋಡೋಣ ಬಿಡು. ’ ಅಂದ ರವಿ. ರೂಪಿ, ರವಿ ಸ್ಪ್ಲೆಂಡರ್ ಬೈಕಿನಲ್ಲಿ ಹೊರಟರು.


ಐವತ್ತು ಮೀಟರ್ ಕೂಡ ಹೋಗಿರಲಿಲ್ಲ. ಸಿಕ್ಕಾಪಟ್ಟೆ ಸ್ಪೀಡಾಗಿ ಬರುತ್ತಿದ್ದ, ಸ್ಕೂಟಿಯವನೊಬ್ಬ, ಲಂಬವಾಗಿ ಬಂದವನೇರೂಪಿಯ ಕಾಲುಗಳಿಗೆ ಗುದ್ದಿದ. ಹೋಗುತ್ತಿದ್ದಬೈಕು ಎಡಕ್ಕೆ ಬಿತ್ತು. ರಕ್ತ ಚೆಲ್ಲಾಡಿತು.

3
ಸರ್ಕಲ್ ಮಧ್ಯದಲ್ಲಿದ್ದ ಪೋಲ್ ಬಳಸಿ ಸುತ್ತಬೇಕಾಗಿದ್ದ ಸ್ಕೂಟಿಯವನು, ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿಸಿ, ಸುಯ್ಯಂತ ಬಂದವನೇ ಬೈಕಿಗೆ ಗುದ್ದಿ ಬಿಟ್ಟ. ರೂಪಿಗೆ ಅವನು ನೇರವಾಗಿ ಬರುವನು ಎಂಬ ಅಂದಾಜು ಇರಲಿಲ್ಲ. ಹಿಂದೆ ಕೂತಿದ್ದ ರವಿ, ತನ್ನ ಎಡಗೈ ಮೇಲೆ, ಉಜ್ಜುತ್ತಾ ಹೋಗಿ ಸ್ವಲ್ಪ ಮುಂದೆ ಬಿದ್ದ. ರೂಪಿಯ ಬಲಗಾಲಿನ ಪಾದ, ಗುದ್ದಿದ ರಭಸಕ್ಕೆ ಜಜ್ಜಿ ಹೋಗಿತ್ತು. ರಕ್ತ ಸುರಿಯುತ್ತಿತ್ತು. ನೋಡು ನೋಡುತ್ತಿದ್ದಂತೆ ಅಪಘಾತವೊಂದು ನಡೆದು ಹೋಯಿತು. ಅದೂ ಕೂಡ ನಮಗೆ ಆತ್ಮೀಯರೆನಿಸಿಕೊಂಡವರು, ಕಣ್ಣ ಮುಂದೆಯೇ ರಸ್ತೆಯಲ್ಲಿ ಬಿದ್ದಿದ್ದರು. ಸಮರೋಪಾದಿ ಕಾರ್ಯಾಚರಣೆ ಪ್ರಾರಂಭವಾಯಿತು.
ಜೋಬಿಯು, ರವಿಯನ್ನು ಆಟೋ ಹತ್ತಲು ಕರೆದುಕೊಂಡು ಹೊರಟ. ಅತ್ತ ಕಡೆ ಜೋಬಿ, ರವಿಗೆ ಪ್ರಥಮ ಚಿಕಿತ್ಸೆ ಮಾಡಿಸಿ, ಹೇಗಾದರೂ ಇಂಟರ್-ವ್ಯೂವ್ ಗೆ ಕರೆತರಲೇ ಬೇಕು ಎನ್ನುತ್ತಿದ್ದ. ಇತ್ತನಾನು ಮತ್ತು ಅಭಿ ರೂಪಿಯನ್ನು ಸುತ್ತುವರೆದೆವು. ಮುಂದೆ ಮುಂದೆ ಹೋಗುತ್ತಿದ್ದರೂ. ‘ನನ್ನದಿರಲಿ, ನನಗೇನು ಆಗಿಲ್ಲ. ರೂಪಿಗೆ ಏನಾಯ್ತು ನೋಡ್ರೋ. ‘ಎನ್ನುತ್ತಲೇ ಕೂಗುತ್ತಿದ್ದ ರವಿ. ಅತೀತ್ ಬಿದ್ದು ಹೋಗಿದ್ದ ಬೈಕು, ಮತ್ತದರ ಪುಡಿಗಳನ್ನುಒಟ್ಟು ಮಾಡಿಸಿ ಗುಡ್ಡೆ ಹಾಕಲು ಹೋದ.


ರೂಪಿಯನ್ನು ಆಟೊದೊಳಗೆ ಹಾಕಿಕೊಂಡು, ಹತ್ತಿರದ ಬಸಪ್ಪ ಮೆಮೋರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಬಲಗಾಲಿನ ಪಾದದಚಪ್ಪಲಿಯನ್ನು ಬಿಚ್ಚು ಎಂಬುದಾಗಿ ರೂಪಿ ಹೇಳಿದ. ಸ್ಯಾಂಡಲ್ ನ ಬೆಲ್ಟುಗಳ ಮಧ್ಯ ದಿಂದ ಮಾಂಸವು ಹಿಡಿಯಾಗಿ ಹೊರ ಬಂದಿತ್ತು. ಅದನ್ನು ನೋಡಿದರೆ ಮೂರ್ಛೆ ಹೋಗುವಂತಾಗುತ್ತಿತ್ತು. ‘ ಅಯ್ಯಯ್ಯೋ ನನ್ನ ಕೈನಲ್ಲಿ ಆಗಲ್ಲ ಮಗ ’ ಅಂದೆ. ಅವನು ನಕ್ಕ.


‘ನಾನೆ ಹೇಳ್ತಾ ಇದೀನಿ. ಏನೂ ಆಗಲ್ಲ ತೆಗಿಯೋ. ’ ಅಂದ ರೂಪಿ. ‘ ಮನ್ಷಾನೇನೊ ನೀನು. ’ ಅನ್ನಬೇಕೆನಿಸಿತು. ಅವನನ್ನು ನಾವು ನಿರ್ಭಾವುಕ ಅಂತಲೇ ಸಂಭೋದಿಸುವುದು. ಸ್ಟ್ರೆಚರ್ ಮೇಲೆ ರೂಪಿಯನ್ನು ಡಾಕ್ಟರ ಕೊಠಡಿಗೆ ಸಾಗಿಸಿದೆವು. ಚಿಕಿತ್ಸೆ ಪ್ರಾರಂಭವಾಯಿತು.


ನಮಗಿಂತಲೇ ಮುಂಚೆ ಬಂದಿದ್ದ ಶೈಲು ಆಸ್ಪತ್ರೆಯ ಫಾರ್ಮಲಿಟೀಸ್ ಗಳನ್ನೆಲ್ಲಾ ಪೂರೈಸಿದ್ದ. ರೂಪಿಯವರ ಮನೆಯವರಿಗೆ ವಿಷಯ ಮುಟ್ಟಿಸುವ ಕೆಲಸವೊಂದು ಬಾಕಿ ಉಳಿದಿತ್ತು. ಅಪಘಾತದ ತೀವ್ರತೆ ಹೆಚ್ಚೇ ಇರಲಿ ಅಥವಾ ಮಾಡರೇಟೆಡ್ ಆಗೇ ಇರಲಿ. ಆ ವಿಷಯವನ್ನು ಮನೆಯವರಿಗೆ ತಿಳಿಸುವ ಬಾಧೆಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ಕೆಲಸವನ್ನೂ ಅಭಿ ಮೆತ್ತಗೆ ನಿರ್ವಹಿಸಿದ. ‘ ಅಂಕಲ್ ಜಾಸ್ತಿ ಸೀರಿಯಸ್ ಏನಿಲ್ಲ. ಒಂದು ಚಿಕ್ಕ ಆಕ್ಸಿಡೆಂಟ್ ಅಷ್ಟೇ. ಕಾಲಿಗೆ ಮಾತ್ರ ಪೆಟ್ಟಾಗಿರೋದು. ’ ಇತ್ಯಾದಿ, ಇನ್ನು ಮುಂತಾದ ಪೀಠಿಕೆಗಳಿಂದ ವಿವರಿಸಿದ. ಕಾಣದವರ ಮನದದಲ್ಲಿ ಉಂಟಾಗುವ ಉದ್ವಿಘ್ನತೆಯನ್ನು ಊಹಿಸುವುದು ಸಾಧ್ಯವಿಲ್ಲ. ಚಿಕಿತ್ಸೆ ಪರಿಣಾಮಕಾರಿಯಾಗದೆ ರೂಪಿಯನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

4
ರೂಪಿಯವರ ತಂದೆ ಕೇಂದ್ರ ಸರ್ಕಾರಿ ನೌಕರರಾಗಿದ್ದರಿಂದ, ಈ ಹೊತ್ತಿನಲ್ಲಿ ಹಣ ಒಂದು ಬ್ಲಾಕರ್ ನಂತೆ ಅವನ ಚಿಕಿತ್ಸೆಯನ್ನು ಕಾಡಲಿಲ್ಲ. ನಮ್ಮಲ್ಲಿ ಸಹಾಯವಿರಲಿ, ಸಾಲಕ್ಕಂತಲೂ ಅಷ್ಟು ಮೊತ್ತದ ಹಣವನ್ನು ಭರಿಸುವ ಸಾಮರ್ಥ್ಯ ಗುಂಪಿನ ಯಾವ ಗೆಳೆಯರಲ್ಲೂ ಇರಲಿಲ್ಲ. ನಮ್ಮದೆಲ್ಲಾ ಜಸ್ಟು ಎಬೋ ಪಾವರ್ಟಿ ಲೈನು ಫ್ಯಾಮಿಲಿಗಳು. ಅತ್ತ ಕಡೆ ಜೋಬಿಯು ಕೈ ಮೂಳೆ ಮುರಿದಿದ್ದರವಿಗೆ ಕೇವಲ ಪ್ರಥಮ ಚಿಕಿತ್ಸೆ ಕೊಡಿಸಿ, ಪುನಃ ಕಾಲೇಜಿಗೆ ಕರೆತಂದು ಇಂಟ್ರೂ ಗೆ ಸಾಲಿನಲ್ಲಿ ಕೂರಿಸಿ ಮತ್ತು ಅವನನ್ನು ನೋಡಿಕೊಳ್ಳಲು ಅತೀತ್ ನನ್ನು ಜೊತೆ ಮಾಡಿ ನಮ್ಮಲ್ಲಿಗೆ ಬಂದು ಸೇರಿದ.


ಡಾಕ್ಟರುಗಳೊಂದಿಗೆ ಮಾತನಾಡುವುದರಿಂದ ಹಿಡಿದು, ಎಲ್ಲಾ ರೀತಿಯ ಸಾಲುಗಳಲ್ಲಿ ನಿಲ್ಲುವುದು, ಫಾರಂ ತುಂಬುವುದು ಮತ್ತು ಅನುಮತಿ ಇಲ್ಲದಿರುವ ಕೊಠಡಿಗಳೊಳಗೂ ಕೂಡ ಅನಾಯಾಸವಾಗಿ ಓಡಾಡುತ್ತಾ ಅತ್ಯಂತ ಮುತುವರ್ಜಿಯಿಂದ ನೋಡಿಕೊಂಡವನು ಶೈಲು. ಇಡೀ ಘಟನೆಯನ್ನು ಸ್ವಲ್ಪವೂ ಭಾವುಕವಾಗಿ ತೆಗೆದುಕೊಳ್ಳದೆ, ತನ್ನದೇ ಜೋವಿಯಲ್ ಶೈಲಿಯಲ್ಲಿ, ಯಾವುದೋ ಈವೆಂಟ್ ಆರ್ಗನೈಸ್ ಮಾಡುತ್ತಿರುವ ಜೋಷ್ ನಲ್ಲಿ ಎಲ್ಲವನ್ನೂ ನಿರ್ವಹಿಸುತ್ತಿದ್ದ. ಇದುವರೆಗೂ ಅವನ ಗೆಳೆತನದಲ್ಲಿ, ಒಬ್ಬರ ನೋವಿಗೆ, ಸಾವಿಗೆ ಅವನು ಮರುಗಿದ್ದು, ಕಣ್ಣೀರು ಹಾಕಿದ್ದು ನಾನು ನೋಡಿಲ್ಲ. ಆತನಲ್ಲಿ ಯಾರದೋ ನೋವಿಗೆ ಮರುಕವಿರುವುದಿಲ್ಲ, ಆದರೆ ಅದಕ್ಕೆ ಏನಾದರು ಮಾಡಬಹುದು ಅಂತಾದರೆ ಮಾಡ್ತಾನೆ ಅಷ್ಟೇ.


ರೂಪಿಗೆ ಕಾಲಿನ ಆಪರೇಷನ್ ಮಾಡಲು ಆಪರೇಷನ್ ಥಿಯೇಟರ್ ಒಳಗೆ ಹೋದರು. ಘಂಟೆಗಳು ಉರುಳಿದರೂ ಅಲ್ಲಿನ ಯಾವುದೇ ಅಪ್-ಡೇಟ್ಸು ಸಿಗಲಿಲ್ಲ. ಇತ್ತ ಸ್ಕೂಟಿಯಲ್ಲಿ ಗುದ್ದಿದವನ ಪಂಚಾಯತಿ ಆಸ್ಪತ್ರೆಯ ಅಂಗಳದಲ್ಲಿ ಶುರುವಾಗಿತ್ತು. ನನ್ನದೇನೂ ತಪ್ಪಿಲ್ಲವಾಗಿಯೂ, ಅವನೇ ನೂರು ಕಿಲೋಮೀಟರ್ ಸ್ಪೀಡಲ್ಲಿ ಬಂದು ತನ್ನ ಸ್ಕೂಟಿಗೆ ಗುದ್ದಿದ್ದಾಗಿಯೂ ಮೊಂಡು ವಾದ ಮಾಡುತ್ತಾ ಪರಿಚಯದ ರೌಡಿಯಂತಹ ಗೆಳೆಯರನ್ನೆಲ್ಲಾ ಆಸ್ಪತ್ರೆಯಲ್ಲಿ ಕೂಡಿ ಹಾಕಿದ. ಅದುವರೆಗೂ ತಾಳ್ಮೆಯಿಂದಿದ್ದ ಜೋಬಿ ಮತ್ತು ಅಭಿ ಒಟ್ಟಿಗೇ ಸಿಟ್ಟಿಗೆದ್ದರು.


‘ನನ್ನ ಬೈಕೇ ಕೊಡ್ತೇವೆ. ಐವತ್ತು ಮೀಟರ್ ನಲ್ಲಿ ನೂರು ಕಿಲೋಮೀಟರ್ ಸ್ಪೀಡ್ ಗೆ ಎತ್ತಿ ತೋರಿಸಿಬಿಡು. ಆಮೇಲೆ ತಪ್ಪು ನಿನ್ನದೋ, ನಮ್ಮದೋ ಹೇಳ್ತೀವಿ ’ ಎನ್ನುತ್ತಾ ಜೋಬಿ ಜಗಳಕ್ಕೆ ನಿಂತ. ಜೋಬಿಗೆ ಕೋಪ ಬರುವ ಪ್ರಾಬಬಿಲಿಟಿ ಕಡಿಮೆ. ಆದರೆ ಬಂತು ಅಂತಾದರೆ ಅದು ಭಯಂಕರವಾಗಿರುತ್ತದೆ. ಅವನನ್ನು ಸಮಾಧಾನ ಪಡಿಸುವಲ್ಲಿ ಸಾಕು ಬೇಕಾಗಿ ಹೋಯ್ತು. ಪೋಲೀಸ್ ಕಂಪ್ಲೇಂಟ್ ಆಗದಂತೆ ತಡೆಹಿಡಿಯುವುದು, ಅಪಘಾತ ಮಾಡಿದವರ ಕಡೆಯ ತಂತ್ರವಾಗಿತ್ತು. ಆ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವವರು ರೂಪಿಯ ತಂದೆಯವರು ಮಾತ್ರವಾಗಿಯೂ, ಸುಖಾ ಸುಮ್ಮನೆ ಈ ವಿಷಯವಾಗಿ ನಾವು ಜಗಳಕ್ಕೆ ನಿಲ್ಲುವುದರಲ್ಲಿ ಅರ್ಥವಿಲ್ಲವೆಂದಾಗಿಯೂ. ಅವರ ಕಣ್ಣಿಗೆ ಬೀಳದಂತೆ ನಾವೆಲ್ಲರೂ ಬೇರೆಯ ಕಡಗೆ ಬಂದೆವು.

5
ಇಂಟ್ರೂ ಮುಗಿಸಿದ ನಂತರ ರವಿ, ಅಭಿ ಮತ್ತು ಜೋಬಿ ರೂಪಿ ತಂದೆಯವರ ಜೊತೆಗೆ ಪೋಲೀಸ್ ಠಾಣೆ ಗೆ ಹೋದರು. ಅಲ್ಲಿ ರವಿಯಿಂದ ಘಟನೆಯ ವಿವರವಾದ ಹೇಳಿಕೆಗಳನ್ನು ದಾಖಲಿಸಲಾಯಿತು ಮತ್ತು ಪ್ರತ್ಯಕ್ಷದರ್ಶಿಗಳಾಗಿ ಅಭಿ ಮತ್ತು ಜೋಬಿ ಯ ಸಾಕ್ಷಿಸಹಿಯನ್ನೂ ಪಡೆಯಲಾಯಿತು. ಅಪಘಾತದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನಜ್ಜುಗುಜ್ಜಾಗಿ ಹೋಗಿದ್ದ ರವಿಯನ್ನು, ಠಾಣೆಯಲ್ಲಿ ಘಂಟೆಗಟ್ಟಲೆ ಕೂರಿಸಿ, ಹೇಳಿಕೆ ಸಂಗ್ರಹಿಸುವ ಕಾರ್ಯ ಅಮಾನವೀಯವಾಗಿತ್ತು. ಪೋಲೀಸ್ ಠಾಣೆಯಿಂದ ರವಿಯನ್ನು, ಸೀದಾ ಅಪೋಲೋ ಆಸ್ಪತ್ರೆಗೇ ಕರೆತರಲಾಯಿತು.
ರಾತ್ರಿ ಹತ್ತು ಘಂಟೆಯಾಗಿತ್ತು. ರವಿ ನೋವಿನಿಂದ ಬಳಲುತ್ತಿದ್ದ. ಅವನನ್ನು ಒಂದು ಬೆಡ್ ಮೇಲೆ ಮಲಗಿಸಿದ ವೈದ್ಯರು, ಇತರೆ ಎಮರ್ಜೆನ್ಸಿ ಕೇಸುಗಳಿಂದಾಗಿ ಆತನ ಕಡೆಗೆ ಗಮನ ಹರಿಸಲಿಲ್ಲ. ಲಿಟರಲಿ ರವಿ ಕಣ್ಣೀರು ಸುರಿಸುತ್ತಿದ್ದ. ಅವನು ಇಷ್ಟು ಹತಾಶನಾಗಿ ಅಳುತ್ತಿ ದ್ದುದನ್ನು ಇದೇ ಮೊದಲ ಬಾರಿಗೆ ನಾನು ನೋಡಿದ್ದು. ನಾನು ಹೋಗಿ ತುಂಬಾನೆ ಹಂಬಲ್ ಆಗಿ ಬೆಗ್ಗರ್ ರೀತಿಯಲ್ಲಿ, ವೈದ್ಯರನ್ನು ವಿಚಾರಿಸಿದಾಗ ಅವರು ಬರಲಿಲ್ಲ. ನಂತರ ಶೈಲು ಬಂದು ತನ್ನ ಉತ್ತರ ಕರ್ನಾಟಕದ ಶೈಲಿಯಲ್ಲಿ ವ್ಯವಹರಿಸಿದ ಮೇಲೆ ಅವರು ತತ್ತಕ್ಷಣ ಬಂದರು.
‘ ಈಗ ನೋವಿಗಷ್ಟೇ ಚಿಕಿತ್ಸೆ ಸಾಕೆಂದೂ. , ನಾಳೆ ಆರಾಮಾಗಿ ಹೋಗಿ ಕಾಮಾಕ್ಷಿ ಜನರಲ್ ಆಸ್ಪತ್ರೆಯಲ್ಲಿ ಮುರಿದ ಕೈ ತೋರಿಸಿಕೊಳ್ಳುವುದಾಗಿಯೂ ’ ರವಿ ಹೇಳಿದ. ವೈದ್ಯರು ಸಿಂಪಲ್ಲಾಗಿ ಪೆನ್ ಕಿಲ್ಲರ್ ಸೂಜಿ ಹಾಕಿದರು. ಸುಸ್ತಾಗಿದ್ದವನು ಆಪಲ್ ಜೂಸ್ ಕುಡಿಸಿದ ಮೇಲೆ ಸ್ವಲ್ಪ ಆರಾಮದ ಮತ್ತು ರೂಪಿಯನ್ನು ಒಂದು ಸಾರಿ ನೋಡಲೇ ಬೇಕು ಎಂಬುದಾಗಿ ಹಠ ಹಿಡಿದ.

6
ಆಪರೇಶನ್ ಮುಗಿದ ಮೇಲೆ ನಾವೂ ಅವನನ್ನು ನೋಡಲಾಗಿರಲಿಲ್ಲ. ರೂಪಿ ನಾಲ್ಕನೇ ಮಹಡಿಯಲ್ಲಿದ್ದ. ಒಬ್ಬರನ್ನೂ ಒಳಬಿಡಲು ಒಪ್ಪದ ಸೆಕ್ಯೂರಿಟಿಯವನಿಗೆ ಕಾಗಜ್ಜಿ ಗುಬ್ಬಜ್ಜಿ ಕಥೆ ಹೇಳಿ, ಅವನ ದೋಸ್ತಿ ಮಾಡಿಕೊಂಡು ಎಲ್ಲರೂ ವಾರ್ಡಿನ ಒಳಗೆ ಹೋಗುವಂತೆ ನೋಡಿಕೊಂಡವನು ಶೈಲು.


ರೂಪಿ ಆಪರೇಶನ್ ಧಿರಿಸಿನಲ್ಲಿ ಸೆಕ್ಸಿಯಾಗಿ ಕಾಣಿಸುತ್ತಿದ್ದ. ರವಿ - ರೂಪಿ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಗೊಳೋ ಅನ್ನುವುದೊಂದು ಬಾಕಿ. ಶ್ಯಾನೆ ಸೆಂಟಿಮೆಂಟಲ್ ಸಿಚುಯೇಷನ್ನು.

‘ ನಿನ್ನ ಕೆಲಸ ಏನಾಯ್ತು ’ ಕೇಳಿದ ರೂಪಿ.

‘ ಒಳಗೆ ಹೋದಾಗಲೂ ಸಿಕ್ಕಾಪಟ್ಟೆ ನೋವಿತ್ತು. ಕೂರೋದಕ್ಕೆ ಆಗ್ತಾ ಇರಲಿಲ್ಲ. ಇಂಟ್ರೂ ಮಾಡುವವನು ಎರಡೇ ಎರಡು ಪ್ರಶ್ನೆ ಕೇಳಿ. ‘ಸರಿ ಮನೆಗೆ ಹೋಗಿ ರೆಸ್ಟು ತಗೋಳಪ್ಪ’ ಅಂದ.


‘ನಿನ್ನ ಕಾಲಿಗೆ ಏನ್ ಹೇಳುದ್ರು ’ ರವಿ ಕೇಳ್ದ.

ಮಂಡಿಯವರೆಗೂ ಬ್ಯಾಂಡೇಜಿನಿಂದ ಸುತ್ತಿದ್ದ ಕಾಲು ತೋರಿಸಿ ಹೇಳಿದ - ‘ಕಿತ್ತೋಗಿದ್ದ ಮಾಂಸವನ್ನೆಲ್ಲಾ ಸೇರಿಸಿ ಹೊಲಿಗೆ ಹಾಕಿದ್ದಾರೆ. ಮಧ್ಯದ ಕಾಲ್ ಬೆರಳು ಕೂಡಿಸೋದಕ್ಕೆ ಆಗದೆ, ಕತ್ತರಿಸಿ ಹಾಕಿದ್ದಾರೆ. ’ ಅಂದ.


‘ ಛೇ ನನ್ನಿಂದಾಗಿ ಅಪರೂಪಕ್ಕೆಂದು ದೊರೆತ ಕೆಲಸದ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು. ’ ಎಂಬುದಾಗಿ ರೂಪಿಯು ಮತ್ತು ‘ಛೇ ಕೇವಲ ನನ್ನಿಂದಾಗಿ ನೀನು ನಿನ್ನ ಮಧ್ಯ ಬೆರಳನ್ನೇ ಕಳೆದುಕೊಳ್ಳಬೇಕಾಯ್ತು. ’ ಎಂಬುದಾಗಿ ರವಿಯು. ಇಬ್ಬರೂ ಒಬ್ಬರಿಗೊಬ್ಬರು ಪಾಪಿಗಳೆಂಬಂತೆ, ಪಾಪಪ್ರಜ್ಞೆಯಿಂದ ನರಳುತ್ತಿದ್ದರು.


ನಮ್ಮ ಸ್ನೇಹಿತರ ಜೀವನದಲ್ಲಿ ನಾವು ನೋಡಿದ ಅತ್ಯಂತ ಎಮೋಷನಲ್ ಮೊಮೆಂಟ್ ಇದು ಎಂದು ಒಕ್ಕೂರಲಿನಿಂದ ಅವಿರೋಧವಾಗಿ ನಿರ್ಧರಿಸುವಂತಿತ್ತು ಸಂದರ್ಭ.   

Thursday, July 18, 2013

ಪಿಸಿ ಅಸೆಂಬಲ್ ಮಾಡೋ ನೆಪದಲ್ಲಿವಠಾರದ ಮನೆಯವರೊಬ್ಬರು ತಮ್ಮ ಕಂಪ್ಯೂಟರ್ ಅಸೆಂಬಲ್ ಮಾಡಿ, ಆನ್ ಮಾಡಿ ಕೊಡುವಂತೆ ಕೇಳಿದರು.
ಸಾಫ್ಟ್- ವೇರ್ ಟೆಕ್ಕಿ ಅಂದ ಮೇಲೆ ಮಿನಿಮಮ್ ಇಷ್ಟು  ತಲೆ ಇರಬೇಕು ಎಂದು ಪ್ರಪಂಚ ಬಯಸುವುದರಲ್ಲಿ ತಪ್ಪಿಲ್ಲ.
ಆದರೆ ನಾಲ್ಕು ಜನ ಆಸಕ್ತಿಯಿಂದ ಸುತ್ತುವರಿದು ನೋಡುತ್ತಾ ನಿಂತಾಗ,
ಮಾಡಬಹುದಾದ ಕುಶಲ ಕೆಲಸ ಇದಲ್ಲ ಎಂಬುದು ನನ್ನ ಅಭಿಪ್ರಾಯ.

ಸರಿ!! ನಾನೂ ಆ ಕಂಪ್ಯೂಟರಿನ ಬಿಡಿಭಾಗಗಳನ್ನು ಸುರಿದುಕೊಂಡು,
ಪವರ್ ಕಾರ್ಡು!! ಡಾಟಾ ಕೇಬಲ್ ಗಳನ್ನು ವಿಂಗಡಿಸುತ್ತಿದ್ದೆ.
ಪುಟ್ಟ ಮಗುವೊಂದು ತೆವಳುತ್ತಾ ಬಂದು ,
ನಾನು ಹಿಡಿದಿದ್ದ ಸಿ-ಪಿ-ಯು ಬಾಕ್ಸಿನ ಸಪೋರ್ಟ್ ಪಡೆದು ನಿಂತು, ಗುರಾಯಿಸಿತು.
ಅರ್ಧ ಹೊರ ಬಂದಿದ್ದ  ಕಾಪರ್ ವಯರ್ ನಿಂದ ಮೆಲ್ಲಗೆ ಚುಚ್ಚಿ ,
ಮಗುವನ್ನು ಅಲ್ಲಿಂದ ಓಡಿಸಿದೆ.

' ಇದು ತಮ್ಮ ನಾದಿನಿ ಬಳಸುತ್ತಿದ್ದ ಕಂಪ್ಯೂಟರ್ ಆಗಿಯೂ,
ನಾಲ್ಕು ವರುಷಗಳಿಂದ ಬಳಸದೇ ಪಾಳು ಬಿದ್ದಿದ್ದಾಗಿಯೂ,
ಇದನ್ನು ತೆಗೆದು ಕೊಂಡು ಹೋಗಲೇಬೇಕು ಎಂದು ಒತ್ತಾಯ ಮಾಡಿದ್ದಾಗಿಯೂ...
 ಇದನ್ನು ತಂದದ್ದು '
ಎಂದು ಮನೆಯ ಯಜಮಾನರು ಹೆಮ್ಮೆಯಿಂದ ಹೇಳಿಕೊಂಡರು.
ಪಾಳು ಬಿದ್ದದ್ದನ್ನು,  ಒತ್ತಾಯ ಮಾಡಿ ಹೊರಿಸಿ ಕಳಿಸಿದ್ದನ್ನೇ ಅದ್ಭುತವಾಗಿ ಹೇಳಿದರು.

ನನ್ನ ಕೆಲಸದಲ್ಲಿ ನಾನು ತಲ್ಲೀನನಾಗಿದ್ದೆ.
ಆ ಡಬ್ಬ ಕಂಪ್ಯೂಟರಿನ ಇತಿಹಾಸದಿಂದ ಮೊದಲುಗೊಂಡು,
ತಮ್ಮ ನಾದಿನಿ ಸಾಫ್ಟ್-ವೇರ್ ಟೆಕ್ಕಿ ಆದಾಗಿನ ವಿಷಯಗಳನ್ನು ಅವರು ಬಹಳ ಆಸಕ್ತಿಯಿಂದ ವಿವರಿಸುತ್ತಿದ್ದರು.
 ಒಂದು ಸಾಫ್ಟ್-ವೇರ್ ಕಂಪನಿಯ ಹೆಸರು ಹೇಳಿ!!
 'ನಿಮಗೆ ಅದು ಗೊತ್ತಿರಲೇಬೇಕಲ್ಲ...?' ಅಂದರು.
'ಹೌದು!! ಹೌದು!! ತುಂಬಾ ದೊಡ್ಡ ಕಂಪನಿ ' ಅಂದೆ.

ಕಂಪ್ಯೂಟರ್ ಆನ್ ಮಾಡಿದಾಗ ಸದ್ದು ಮಾಡುತ್ತಾ 'ವಿಂಡೋಸ್'  ತೆರೆದುಕೊಂಡಿತು.
' ನಾನಿನ್ನು ಬರುತ್ತೇನೆ ' ಎಂದು ಹೊರಡುತ್ತಿದ್ದಂತೆ...,

' ಅಯ್ಯೋ!! ಹಂಗೇ ಹೋಗ್ತೀರ..?
ಕಾಫಿ ಟೀ ಏನಾದ್ರು ತಗೋಂಡೆ ಹೋಗ್ಬೇಕು .. ' ಅಂದರು.

' ಬೇಡ ಪರವಾಗಿಲ್ಲ..' ಅಂದೆ. ಅವರು ಬಿಡಲಿಲ್ಲ.
ಕಾಫಿ ಬೇಡ ಅಂದರೆ, ಕಾಫಿ ಬೇಡ ಅಂತಲೇ ಅರ್ಥ ಬರುವುದಿಲ್ಲ.
ಅದನ್ನು ಮಾಡುವ ವರೆಗೂ ಮತ್ತು ಅದನ್ನು ಕುಡಿಯುವ ವರೆಗೂ ಸೃಷ್ಟಿಯಾಗುವ,
ಧೀನ-ಧೈನ್ಯ ನಿಶ್ಯಬ್ಧಕ್ಕೆ  ದಾರುಣವಾಗಿ ಬಲಿಯಾಗಬೇಕಲ್ಲ ಎಂಬ ಭಯ.

ಗಟ್ಟಿ ಹಾಲಿನ ನೊರೆ ಕಾಫಿ ಹೀರುತ್ತಿರುವಾಗ,
ಕಂಪ್ಯೂಟರ್ ಬಗ್ಗೆ ನನಗೆ ಗೊತ್ತಿದ್ದ ಅಲ್ಪ ಟಿಪ್ಸು  ಕೊಡೋಣವೆಂದು ಹೋದೆ.
'ಛೇ! ಛೇ!! ನನಗೆ ಇದೆಲ್ಲ ಅರ್ಥ ಆಗಲ್ಲ '...
ಮನೆಯ ಯಜಮಾನರು ತಲೆ ಕೊಡವಿದರು.
ಅವರ ಹೆಂಡತಿಗೆ ಹೇಳಿದ್ದಕ್ಕೆ ,
ಅವರೂ ತಮಗೆ ಏನೂ ತಿಳಿಯೋದಿಲ್ಲವೆಂದೂ, ಬೇಡವೆಂದೂ ಹೇಳಿದರು.

ತಲೆ ಕೆಡ್ತು ... "ಮತ್ತೆ!! ಕಂಪ್ಯೂಟರು ಯಾರಿಗೆ ...?" ಅಂದೆ.

 " ಇನ್ಯಾರಿಗೆ!! ನಮ್ಮ ಮಗನಿಗೆ " ಎನ್ನುತ್ತಾ ಅಂಬೆಗಾಲಿಡುತ್ತಿದ್ದ ಮಗುವನ್ನು ಎತ್ತಿ ತೋರಿಸಿದರು.
ಬಾಯೊಳಗಿದ್ದ ಕಾಫಿ!!  ನಂಜೇರಿತು.

" ಛೇ!! ಛೇ!! ಮೊದಲೇ ಹೇಳೋದಲ್ವ ...? ಟೇಬಲ್ ಬದಲು ನೆಲದ ಮೇಲೇನೆ... ಅಸೆಂಬಲ್ ಮಾಡಿ ಇಡ್ತಿದ್ದೆ ..." ಅಂದೆ.
ವಿಡಂಬನಾತ್ಮಕವಾಗಿ ಹೇಳಿದ್ದನ್ನು ಜೋಕು ಎಂದು ಅಪಾರ್ಥ ಮಾಡಿಕೊಂಡು .... ನಕ್ಕರು.
 ಪ್ರಿ ನರ್ಸರಿಗೆ ಅದಾಗಲೇ ಐವತ್ತು ಸಾವಿರ ಕಟ್ಟಿ !!  ಪಬ್ಲಿಕ್ ಸ್ಕೂಲಲ್ಲಿ ಸೀಟ್ ಅಡ್ವಾನ್ಸು  ಬುಕ್ಕಿಂಗ್ ಮಾಡಿರುವುದನ್ನು ಹೇಳಲು ಅವರು ಮರೆಯಲಿಲ್ಲ.

Saturday, July 13, 2013

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ.
ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ
ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು
ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ
ಸುತ್ತು,

**ಪೋಷಾಕು**
ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ,
ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು,
ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ
ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು
ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್
ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು.

ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ
ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು
ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು
'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ.

ನನ್ನನ್ನು ನೋಡುತ್ತಿದ್ದಂತೆ ಅಮ್ಮ ಕರುಣಾಜನಕವಾಗಿ ಕೇಳಿದಳು  "ಏನಪ್ಪಾ ಹಿಂಗ್
ಬಂದಿದಿಯಾ...?" ನನಗೂ ತಾಳ್ಮೆ ಅಲ್ಲಾ, ತಲೆ ಕೆಟ್ಟು ಹೋಯ್ತು.

" ಮಮ್ಮಿ, ನಾನು ನಿನ್ನ ಮಗ ಅಂತ ಯಾರಿಗೂ ಹೇಳೋದಕ್ಕೆ ಹೋಗ್ ಬೇಡ... ಸಮಸ್ಯೇನೆ ಇರಲ್ಲ.
"ನಿಷ್ಟುರವಾಗಿ ಹೇಳಿ ಹೊರಬಂದೆ.

ಕೆಟ್ಟದಾಗಿ ಇರಬೇಕು ಅನ್ನೋ ಜಿದ್ದು ಖಂಡಿತ ಇಲ್ಲ.  ಚೆನ್ನಾಗಿ ಕಾಣಬೇಕು ಅಂತೆಲ್ಲಾ
ಇದೆ. ಆದರೂ ಕೆಲವೊಮ್ಮೆ , ಈ ಪ್ರಿಯಾರಿಟಿಗಳು, ಏನು ಅನ್ನೋದು ಅರ್ಥ ಆಗೋದಿಲ್ಲ. ಯಾರು
ಯಾರನ್ನಾದರೂ ಮದ್ವೆ ಆಗಲಿ. ಆದರೆ ಆ ಮದುವೆಗೆ ಹೋದಾಗ ನಿಮ್ಮ ಪೋಷಾಕು,
ಅದ್ಭುತವಾಗಿರಬೇಕು.

** ನಿಶ್ಚಿತಾರ್ಥ **
ಕಾಲೇಜಿನಲ್ಲಿ ಜೊತೆಯಾಗಿ ಓದಿದ್ದ ಗೆಳೆತಿಯೊಬ್ಬಳು, ಆಲ್ ಆಫ್ ಸಡನ್ -" ಹಾಯ್" ಅಂತ
ಮೆಸೇಜಿಸಿದಳು.ಬಹಳ ಅಪರೂಪಕ್ಕೆ ಬಂದ ಹಾಯ್ ಗೆ ಪ್ರತಿಯಾಗಿ ಅಂತದೇ "ಹಾಯ್" ಕಳಿಸಿದೆ.
ಮುಂದಿನದ್ದು ನಿರೀಕ್ಷಿಸಿದಂತೆ " ಹೌ ಆರ್ ಯು ..?"  ಈ ಪ್ರಶ್ನೆಯನ್ನ ಅದೆಷ್ಟು ಜನ
ಸಾಂಧರ್ಬಿಕವಾಗಿ ಫಿಲ್ಲರ್ ಗಳಂತೆ ಬಳಸುತ್ತಾರೆ ಮತ್ತು ಇನ್ನೆಷ್ಟು ಜನ ಮೀನ್ ಮಾಡ್ತಾರೆ
ಅನ್ನೋದು ಸಣ್ಣ ಡೌಟು.

"ಐ ಯಾಮ್ ಫೈನ್" ಅನ್ನುವ ಬದಲಾಗಿ, "ಏನು ವಿಷಯ...?" ಅಂತ ಕಳಿಸಿದೆ. "ಏನಾದ್ರು ವಿಷಯ
ಇರ್ಲೇಬೇಕಾ ...?" ಅಂದಳು. "ಹಂಗೆಲ್ಲಾ, ಸುಮ್ ಸುಮ್ಮನೆ... ಕಷ್ಟ ಸುಖ ಮಾತಾಡೋದಕ್ಕೆ
.. ಮೆಸೇಜು ಮಾಡಲ್ವಲ್ಲ, ತಾವುಗಳು "ಅಂದೆ.
"ಹಿ ಹಿ ಹಿ... ನನ್ನ ಎಂಗೇಜುಮೆಂಟು ಫಿಕ್ಸು ಆಗದೆ. ನೀನು ಬರ್ಲೇಬೇಕು..."  "ಅಯ್ಯೋ,
ಕಂಗ್ರಾಜುಲೇಷನ್ನು."ನಿಶ್ಚಿತಾರ್ಥವನ್ನು, ಪ್ರಿಪರೇಟರಿ ಪರೀಕ್ಷೆ ರೀತಿ ಆಡಂಬರವಾಗಿಸುವ
ಮನುಷ್ಯ ಪ್ರಯತ್ನದ ವಿರುದ್ಧ ಸಣ್ಣ ಧ್ವನಿ ಇದೆ. ಗೆಳೆಯ ರವಿಗೆ ಇದರ ವೈಜ್ನಾನಿಕ ಕಾರಣ
ಏನಿರಬಹುದು ಎಂದು ಕೇಳಿದ್ದಕ್ಕೆ ಹೇಳುವನು.

" ಮದುವೆ ೧೦೦% ಪಕ್ಕಾ ಅನ್ನೋ ಫೀಲಿಂಗು ಇಬ್ಬರ ಮನೆಯವರಿಗೂ ಬರಲಿ ಅಂತ, ಎಂಗೇಜುಮೆಂಟು
ಜೋರಾಗಿ ಮಾಡ್ತಾರೆ. ಊರವರಿಗೆಲ್ಲಾ ಕರೆದು ಟಾಂ ಟಾಮಿಸಿರೋದ್ರಿಂದ..., ಹೆಚ್ಚು ಕಮ್ಮಿ
ಏನೇ ಆದರೂ ಮದುವೆ ನಡೆಯಲೇಬೇಕು ಅನ್ನೋ ಎಮೋಶನಲ್ ಲಾಕಿಂಗು, " ಅಂದ.

ಸಂಭ್ರಮಕ್ಕೊಂದು ನೆಪ ಇದ್ರೆ ಸಾಕು. ಅದರಲ್ಲಿ ಇದೂ ಕೂಡ ಒಂದು ಅಂತ ಆದರೆ ಸಂತೋಷ.
ಆದರೆ ಎಲ್ಲದಕ್ಕೂ ಒಂದು ಸ್ಟಾಂಡರ್ಡ್ ಸೆಟ್ ಮಾಡಿ, ಎಲ್ಲಾ ವರ್ಗದವರಿಗೂ ಅನಿವಾರ್ಯವಾಗಿ
ಹೇರುವುದು ಸಮಸ್ಯೆ,.

ಗೆಳೆಯ ನಂದಿ - "ನಾವುಗಳೆಲ್ಲಾ, ಈ ಹುಡಿಗೀರಿಗೆ ಯಾವಾಗ ನೆನಪಾಗದಿದ್ರೂ...,  ಈ ಮದ್ವೆ
ಫಿಕ್ಸು ಆಗ್ತಿದ್ದಂಗೆ ಅವರ ಜೀವನದಲ್ಲಿ ಬಂದು ಹೋಗಿರೋ ಎಲ್ಲಾ ಹುಡುಗ್ರು ... ನೆನಪಾಗಿ
.  ಎಂಗೇಜುಮೆಂಟಿಗೂ ಬನ್ನಿ , ಮದುವೆಗೂ ಬನ್ನಿ ಅಂತಾರೆ ," ಅಂದ.  ಅವನ ಮಾತಿನಲ್ಲಿನ
ಹತಾಶೆಯನ್ನು ಅಪಹಾಸ್ಯ ಮಾಡಬಹುದಾದರೂ..., ಅವನ ಕೋಟ್ಸುಗಳನ್ನು
ಅಲ್ಲಗೆಳೆಯುವಂತಿರಲಿಲ್ಲ.

** ಸಾಮೂಹಿಕ ವಿವಾಹ; Being simple needs complicated explanations **
ಅಮ್ಮನ ಕಾಲ್, ರಿಸೀವ್ ಮಾಡುತ್ತಿದ್ದಂತೆ ಕೇಳಿದಳು, ' ಏನೋ, .? ಅದು.. ಇಷ್ಟು ಗಲಾಟೆ
ಕೇಳಿಸ್ತಾ ಇದೆ. ಎಲ್ಲೋ ಇದಿಯ..?'  'ಮನೆ ಒಳಗೇ ಇದ್ದೇನೆ ಮಮ್ಮಿ.. ನಮ್ಮ
ಏರಿಯಾದಲ್ಲಿ..., ಮನುಷ್ಯರುಗಳು ಸೇರಿಕೊಂಡು ದೇವರ ಮದುವೆ ನಡೆಸುತ್ತಿರುವರು. ರೋಡು
ಫುಲ್ಲು ಲೈಟು, ಮೈಕು, ಸಾಂಗುಗಳು, ಆದಕಾರಣ ಇಷ್ಟು ಗಲಾಟೆ ಕೆಳುಸ್ತಾ ಇದೆ.'

'ಏನೋ.. ಹಂಗಂದ್ರೆ ..?' ಅಂದಾಗ  'ತಿರುಪತಿನಲ್ಲಿ ಮಲಗಿದ್ದ ದೇವರನ್ನು ಹೊತ್ತು ತಂದು,
ಬಲವಂತವಾಗಿ "ಶ್ರೀನಿವಾಸ ಕಲ್ಯಾಣ" ನಡೆಸುತ್ತಿರುವರು.ಸಾಲದ್ದಕ್ಕೆ ವೈಕುಂಠದ
ಬಾಗಿಲುಗಳನ್ನ, ನಮ್ಮ ಆಟದ ಮೈದಾನದಲ್ಲಿ ಮರುಸೃಷ್ಟಿ ಮಾಡಿರುವರು'
ಎಂದೆ.

'ಅಯ್ಯೋ, ಮೊದಲೇ ಹೇಳಿದ್ದಿದ್ದರೆ...,  ನಾನೂ ಬರ್ತಾ ಇದ್ದೆನಲ್ಲ. ಶ್ರೀನಿವಾಸ ಕಲ್ಯಾಣ
ನೋಡುವ ಭಾಗ್ಯ ತಪ್ಪಿ ಹೋಯ್ತು.'

' ಎಂಥಾ ಭಾಗ್ಯ, ಬರತ್ತೆ ಮಮ್ಮಿ.. ಕೋಟಿಗಟ್ಟಲೇ ಖರ್ಚು ಮಾಡಿ ದೇವರಿಗೆ ಮದುವೆ ಮಾಡಿಸುವ
ಬದಲು, ಇದೇ ದುಡ್ಡಲ್ಲಿ ಸಾಮೂಹಿಕ ವಿವಾಹ ನಡೆಸಿದ್ದೇ ಆದರೆ, ಒಂದಷ್ಟು ಕುಟುಂಬಗಳಿಗೆ
ತಮ್ಮ ಬಿಗ್ಗು ಬಿಗ್ಗು ಎಕಾನಮಿ ಬ್ಯಾರಿಯರ್ ಜಂಪ್ ಮಾಡೋದಕ್ಕೆ ಸಹಾಯ ಆಗ್ತಿತ್ತು '
ಎಂದಿನ ಲೋಕೋದ್ಧಾರಕ ಶೈಲಿಯಲ್ಲಿ ಹೇಳಿದೆ.

'ಒಬ್ಬ ಮನುಷ್ಯ, ತಾನು ಹುಟ್ಟಿ , ಬೆಳೆದು, ಪ್ರೌಢಾವಸ್ಥೆಗೆ ಬಂದ ಮೇಲೂ ಕೂಡ..,ಆತ
ಪುಗಸಟ್ಟೆಯಾಗಿ ಮದುವೆಯಾಗಬೇಕು ಅಂತ ಬಯಸ್ತಾನೆ ಅಂದ್ರೆ, ಯಾವ ಸೌಭಾಗ್ಯಕ್ಕೆ ಆತ ಮುಂದೆ
ಜೀವಿಸಬೇಕು. ಮನ್ಷಂಗೆ ಛಲ ಇರ್ಬೇಕು.
ತಾನೂ ಕೂಡ ಎಲ್ಲರ ಹಂಗೆ ಚೆನ್ನಾಗಿ ಬದುಕಬೇಕು.. ಅಂತ ಹಠ ಕಟ್ಟಿ ಬದುಕಬೇಕು. '

'ಎಲ್ಲರೂ ಒಬ್ಬರ ಮುಂದೆ ಒಬ್ಬರು ಬದುಕೋದಲ್ಲ, ಒಬ್ಬರ ಜೊತೆಗೆ ಒಬ್ಬರು ಬದುಕಬೇಕು.
ಸಿಂಪಲ್ ಆಗಿ ಇರೋದಕ್ಕೆ ಅರ್ಥಾನೆ ಇಲ್ವಾ ..?'

' ಸಿಂಪಲ್ ಆಗಿರ್ತೇನೆ,  ಸಿಂಪಲ್ ಆಗಿರ್ತೇನೆ ಅಂತನ್ನುತ್ತಾ...,ಧಾರಿದ್ರ್ಯವನ್ನ
ಹೊತ್ತು ತಿರುಗೋದು..., ಕೈಲಾಗದವರ ಮಾತುಗಳು. ಅಂಥವರನ್ನ ಸಮಾಜ ತನ್ನ
ಮುಖ್ಯವಾಹಿನಿಯಲ್ಲಿ ಬದುಕೋದಕ್ಕೆ ಬಿಡೋದಿಲ್ಲ... '

ತಲೆ ಕೆಟ್ಟು ಹೋಯ್ತು... ಅಮ್ಮನ ಕೌಂಟರ್ ಗಳೇ ಹಾಗೆ..,  ನನ್ನ ತರ್ಕದ ಮೂಲಧಾತುವನ್ನೇ
ಕಸಿದುಕೊಂಡು ದಿಕ್ಕುತಪ್ಪಿಸುವಳು. ಹಾಗಂತ, ಅವಳ ಮಾತುಗಳಿಗೆ.., ಒಪ್ಪಿಗೆಯನ್ನಂತೂ
ನೀಡಲಾರೆ.

ಬಾಯಿ ತೆಗೆದರೆ ಸಾಕು, ಧರ್ಮಸ್ಥಳುಕ್ಕೋಗಿ.. ಸಾಮೂಹಿಕ ವಿವಾಹ ಆಗ್ತೇನೆ ಅಂತ
ಹೇಳುತ್ತಿದ್ದ ಗೆಳೆಯ ರವಿಗೆ ನಮ್ಮ ಸಂಭಾಷಣೆಯನ್ನು ಕೇಳಿಸಿದೆ.  ಅದಕ್ಕವನು
' ಅವರು ಹೇಳೋದು ಕೂಡ ಸರೀನೆ. ಯಾಕಂದ್ರೆ ಅವರು ಎಲ್ಲರ ರೀತಿ ಯೋಚ್ನೆ ಮಾಡ್ತಿದಾರೆ.
ಆದರ್ಶವಾಗಿ ಬದುಕಿದಾಗ ಮಾತ್ರ ಅದರ ಸುಖ, ರುಚಿ, ಅರ್ಥ ಆಗೋದು. Being Simple needs
complicated explanations.. ' ಅಂದ.


**ರಿಸೆಪ್ಷನ್ನು ಮತ್ತು ಸ್ಟೇಜು**
ಸ್ಟೇಜಿನ ಮೇಲೆ... ಮರ್ಕ್ಯೂರಿ ಲೈಟಿನ ನಿಷ್ಕಾರುಣ್ಯ ನೋಟಕ್ಕೆ, ಸದಾ ತುಟಿ ಎಳೆದ
ಮಂದಹಾಸವನ್ನು ಕಾಯ್ದುಕೊಂಡು, ಮುಂಬರುವ ಅತಿಥಿಗಳಿಗೆ ಕೈ ಮುಂದಕ್ಕೇ ಹಿಡಿದು ನಿಂತಿದ್ದ
ನವ ವಧು ವರರ ಸ್ಥಿತಿಯನ್ನು ನೋಡಿ ನಂದಿ ಹೇಳಿದ

" ಈ ಥರ ಎಲ್ಲಾ.. ನಿಲ್ಲೋದಕ್ಕೆ ನನಗೆ ಆಗೊಲ್ಲಪ್ಪ. ನನ್ನ ಮದ್ವೆಗೆ , ಸರ್ಯಾಗಿ ಗಾಂಜಾ
ಹೊಡ್ಕೊಂಡ್ ಬರ್ತೇನೆ.  ಮದ್ವೆ ಹೆಂಗ್ ಸುರುವಾಗಿ, ಹೆಂಗ್ ಮುಗಿದ್ ಹೋಯ್ತು ಅನ್ನೋದೆ
ಗೊತ್ತಾಗಬಾರದು. ಅಮಲು ಇಳಿಯೋದ್ರೊಳಗೆ, ಮದ್ವೆನೂ ಮುಗಿದುಬಿಡಬೇಕು" ಅಂದ.

ಗೆಳೆಯನಿಗೆ ವಿಷ್ ಮಾಡಲು, ನಾವೂ ಅದೇ ಸ್ಟೇಜಿನ ಮೇಲೆ ಹೋದೆವು. "ನನ್ನ ಮದ್ವೆ ಗೆ, ನೀವು
ಬಂದಿದ್ದು ತುಂಬಾ ಖುಷಿ ಆಯ್ತು." ಅಂದ.

"ಹೋ, ಹೌದಾ....? " ಸರ್ಕಾಸ್ಟಿಕ್ ಆಗಿ ಹೇಳಿದ ನಂದಿ.
ಮೊನ್ನೆ ಮೊನ್ನೆ ವರೆಗೂ ತಮ್ಮಂತೆ ಆದರ್ಶವಾದಿಯಾಗಿದ್ದ ಗೆಳೆಯನೊಬ್ಬ, ಈಗ ಎಲ್ಲರ ರೀತಿ "
ನೀವು ಬಂದದ್ದು ಸಂತೋಷ ಆಯ್ತು...." ಅಂತ ಬಯಾಟ್ ಮಾಡಿ ಹೇಳುತ್ತಿದ್ದುದು ನಂದಿಗೆ
ರೇಜಿಗೆ ಹತ್ತಿಸಿತು.
ತುಂಬು ಮನಸಿನ ಹಾರ್ಧಿಕ ಶುಭಾಷಯಗಳನ್ನು ಅರ್ಧ ಹೇಳುವ ಮೊದಲೇ..., ಫೋಟೋದವನು ' ಸೈಡಿಗೆ
ಬನ್ನಿ ' ,' ಸೈಡಿಗೆ ಬನ್ನಿ ' ಫೋಟೋ ಹಿಡಿಬೇಕು. ಅಂದ

ಫೋಟೋ ಹಿಡಿದ ಮೇಲಾದರೂ ವಿಷ್ ಮಾಡೋಣ ಅಂತ ಹೋದ್ರೆ, ವೀಡಿಯೋದವನದ್ದು ಇನ್ನು
ಮುಗಿದಿರಲಿಲ್ಲ.

''ಸ್ಟಿಲ್ ಫೋಟೋಗೆ ಸ್ಟಿಲ್ ಆಗಿ ನಿಲ್ಲೋದು ಸರಿ, ಆದರೆ ವೀಡಿಯೋಗೆ ಯಾಕೆ..? ಸ್ಟಿಲ್
ಆಗಿ ನಿಲ್ಲಬೇಕು...? "ಅಂತ ಕೇಳ್ದ ನಂದಿ. ಅಷ್ಟರಲ್ಲಿ ವೀಡಿಯೋದವನದ್ದು ಹಿಡಿದು
ಆಗಿತ್ತು. ಬಾಯಲ್ಲಿ ಉಳಿದಿದ್ದ ಇನ್ನರ್ಧ ವಿಷಸ್ ಕಂಪ್ಲೀಟ್ ಮಾಡೋಣವೆಂದು ವಾಪಾಸ್
ತಿರುಗಿದರೆ, ಅಲ್ಲಿ ಮುಂದಿನ ಬ್ಯಾಚು ಬಂದುಬಿಟ್ಟಿತ್ತು.

ವರ ಗೆಳೆಯ ದೂರದಿಂದಲೇ... " ಊಟ ಮಾಡ್ಕೊಂಡೇ ಹೋಗ್ಬೇಕು ..." ಅಂದ.
ಅದಕ್ಕಂತಲೇ ಬಂದವರಿಗೆ ನಗೂನು ಬಂತು.
ಆದರೂ 'ಊಟ ಮಾಡ್ಕಂಡೇ ಹೋಗ್ಬೇಕು...' ಅನ್ನೋದನ್ನೇ ಎಲ್ಲರಿಗೂ ಹೇಳುತ್ತಿದ್ದವನ ಮೇಲೆ
ಕರುಣೆಯೂ ಬಂತು.


ಪರಿಸಮಾಪ್ತಿ
ಮದುವೆ ಮಾತುಕಥೆಗಳು ಮುಗಿದ ಮೇಲೆ ನಂದಿ ಹೇಳಿದ " ಮೊದ್ಲು ಈ ಪ್ರಪಂಚ ನೋಡಿ ನಗೋದನ್ನ
ಸ್ವಲ್ಪ ಕಮ್ಮಿ ಮಾಡಬೇಕು."

" ಯಾಕೆ..? " ಅಂದರೆ

" ನಾವು ಯಾವುದನ್ನೆಲ್ಲಾ ನೋಡಿ , ಹೀಯಾಳಿಸಿ ನಕ್ಕಿರ್ತೇವೋ, ಮುಂದೆ ಅದೇ ಬದುಕು ನಮಗೆ
ಸಿಕ್ಕಾಗ, ಇಡೀ ಪ್ರಪಂಚ ನಮ್ಮನ್ನ ನೋಡಿ ನಗ್ತಾ ಇದೀಯೇನೋ ಅಂತ ಒಳಗೊಳಗೆ ಫೀಲ್ ಆಗುತ್ತೆ.
"

" ಮುಂದಿನದ್ದು ಮುಂದೆ ನೋಡ್ಕೋಳೋಣ, ಈಗಂತೂ ನಗೋದನ್ನ ನಿಲ್ಲಿಸಬಾರ್ದು. ಪ್ರಪಂಚಾನೆ ಸರಿ
ಇಲ್ಲ ಅಂತ ನಕ್ಕುಬಿಡೋಣ " ಅಂದಾಗ ಎಲ್ಲೆಲ್ಲೋ ಎಲ್ಲಾ ಸಿನಾರಿಯೋಗಳು ಕಣ್ಮುಂದೆ ಬಂದು
ನಗುವೊಂದು ರಮ್ಮನೆ ಅಪ್ಪಳಿಸಿತು.