Friday, January 25, 2013

ಕನಸೂರಿಗೆ ೨೨,೦೦೦ ಕ್ಲಿಕ್ಕುಗಳು; ಓದುಗರಾದ ಗೆಳೆಯರಿಗೆ ಮತ್ತು ಗೆಳೆಯರಾದ ಓದುಗರಿಗೆ ಅಭಿನಂದನಾ ಬರಹ

ಅಭಿರುಚಿ ಬೇರೆ ಬೇರೆ ಇರುವ ಗೆಳೆಯರ ಮಧ್ಯೆ ಕುಳಿತು; ಬರೆದು; ಅವರನ್ನು ಓದುವಂತೆ
ಗೋಗರಿಯುವುದಿದೆಯಲ್ಲ, ಅದೊಂತರ ವಿಚಿತ್ರ ಅನುಭವ.

ಫ್ರೆಂಡು ರವಿ ನನ್ನ ಕವಿತೆಗಳ ಹುಟ್ಟು ದ್ವೇಷಿ 'ಮಳೆಯು ಬರುತ್ತಿತ್ತು. ಅವಳು ಬಂದಳು.
ದಾವಣಿ ಕೈಲಿ ಹಿಡಿದಳು, ಗೆಜ್ಜೆ ಕಟ್ಟಿದಳು' ಈ ರೀತಿ ಹೇಳುತ್ತಲಿ, ನನ್ನ ಕವಿತೆಗಳ
ತೇಜೋವಧೆ ನಡೆಸುವನು.

' ನೀನು ಒಂದಲ್ಲಾ ಒಂದಿನ ನನ್ನ ಕವಿತೆ appreciate ಮಾಡ್ತಿಯ ' ಅಂದ್ರೆ ' ಓದುದ್ರೆ
ಆಲ್ವಾ ಅದನ್ನ ಹೊಗಳೋದು. ನೀನು ಸಾವಿರ ಪೇಜ್ ಗದ್ಯ ಬರಿ. ಓದ್ತೀನಿ. ಆದರೆ ಪದ್ಯ ಬರೆದು
ಮಾತ್ರ ತೋರಿಸಬೇಡ. ಈ ಕವಿಗಳಿಗೂ ಮಾಡಕ್ಕೆ ಕೆಲಸ ಇಲ್ಲ. ` ಪ್ರೀತಿ ಇಲ್ಲದ ಮೇಲೆ. ಹೂವು
ಅರಳಿತು ಹೇಗೆ. ? ಮೋಡ ಕಟ್ಟಿ ಮಳೆ ಬಂತು ಹೇಗೆ. ? ` ಅಂತೆಲ್ಲಾ ಬರೀತಾರೆ. ಹೂವು
ಅರಳಕ್ಕೂ, ಮಳೆ ಬರಕ್ಕೂ. ಈ ಪ್ರೀತಿಗೂ ಏನಪ್ಪಾ ಸಂಬಂಧ. ಬರುದ್ರೆ ನಮ್ಮ ದುಂಡಿರಾಜ್
ಬರೀತಾರಲ್ಲ ಹಂಗ್ ಬರೀಬೇಕು. 'ನಾವಿಬ್ಬರು ನಮಗಿಬ್ಬರು ಸಾಕಂತ ಮಧ್ಯ ರಬ್ಬರು. ` ಅಬ್ಬಾ
, ಅದ್ಭುತ ಹಿಂಗ್ ಇರ್ಬೇಕು ಕವಿತೆ ಅಂದ್ರೆ. ಅದನ್ನ ಬಿಟ್ಟು 'ಅವಳು ಬಂದಳು ಗೆಜ್ಜೆ
ಕಟ್ಟಿ ಕುಣಿದಳು ನಾನೊಬ್ಬ ನಾಲಾಯಕ್ ನಿಂತಿದ್ದೆ' ಅದು ಕವಿತೆ, ಅದು ಅರ್ಥ ಆಗ್ಲಿ, ಆಗದೆ
ಇರ್ಲಿ, ಅದನ್ನ ಹೊಗಳೋದಕ್ಕೆ ಇನ್ನೊಂದಿಬ್ರು ಜೊತೆನಲ್ಲಿ.'

' ಲೋ ಅದು ಕವಿಸಮಯ. ನಿನ್ನಂತ ರುಚಿ ಹೀನನ ಜೊತೆ ಇದ್ದುಕೊಂಡು, ನನ್ನ ಸಾಹಿತ್ಯ ಕೃಷಿಗೆ
ಹಿನ್ನಡೆ ಆಗ್ತಾ ಇದೆ. ಅಪ್ಪಿತಪ್ಪಿ ನಾನೇನಾದ್ರು ಬುಕ್ ಬರುದ್ರೆ ಮುನ್ನುಡಿನಲ್ಲಿ
ನಿನ್ನ ಬಗ್ಗೆ ಬರಿತೇನೆ.

' ಈ ಪುಸ್ತಕ ಇಷ್ಟು ತಡವಾಗಿ ಬರ್ತಾ ಇದೆ ಅಂದ್ರೆ, ಅದುಕ್ಕೆಲ್ಲಾ ರವಿನೆ ಕಾರಣ. ಒಂದು
ಪ್ರತಿಭೆಯನ್ನ ಬೆಳೆಯುವ ಹಂತದಲ್ಲಿ ಚಿವುಟಿ ಹಾಕುತ್ತಿದ್ದ.'  ಆಗ ಅಭಿಮಾನಿಗಳು ಸರಿಯಾಗಿ
ಮಾಡ್ತಾರೆ ' ಅಂದೆ. ಅದಕ್ಕವನು 'ಆ ಪುಸ್ತಕ ಓದಿದವರೆಲ್ಲಾ ನನಗೆ ಥ್ಯಾಂಕ್ಸು ಹೇಳ್ತಾರೆ
ಬಿಡು. ಇವನ ಕವಿತೆಗಳ ಟಾರ್ಚರ್ ಅನ್ನ, ಇಷ್ಟು ದಿನ ಹೆಂಗ್ ತಡೆದು ಕೊಂಡ್ರಿ ಅಂತ ಮರುಕ
ಪಡ್ತಾರೆ. ಇಷ್ಟು ದಿನ ಬುಕ್ ಬರೆಯದೇ ಇರೋ ಹಂಗೆ ತಡೆದು ಹಿಡಿದದ್ದಕ್ಕೆ. ದೊಡ್ಡದೊಂದು
ಬೊಕೆನು ಕಳಿಸ್ತಾರೆ ' ಅನ್ನುವನು. ಇದು ಪದ್ಯ ದ್ವೇಷಿಯ ಕಥೆಯಾದರೆ, ಗದ್ಯ ದ್ವೇಷಿ
ಗೆಳೆಯ ಶ್ರೀಶೈಲ್ ನ ಮಾತು ಇಂತಿದೆ.

' ಇರುವೆ ಸಕ್ಕರೆ ತಿನ್ನೋದರ ಬಗ್ಗೆ ಬರಿ ಅಂದ್ರೆ ಏನಪ್ಪಾ ಬರೀತಿರ. ? ಇರುವೆ ಇತ್ತು;
ಬಂತು; ಸಕ್ಕರೆ ತಿಂತು. ಫಿನೀಷ್. ಆದ್ರೆ ಈ ಕೆಸಿ ಬಡ್ಡಿಮಗ ಇರುವೆ ಸಕ್ಕರೆ
ತಿನ್ನೋದನ್ನೆ, ನಾಕೈದು ಪೇಜು ಉದ್ದ ಬರೀತಾನೆ. ' ಅಂತಾನೆ.

ಇನ್ನೊಬ್ಬ ಅಭಿಮಾನಿ ಮಿತ್ರ ಶಫಿಯ ಕಥೆ ಇಂತಿದೆ. ನಾನು ಬರೆದಿದ್ದ ಹೂನವಿಲೆಯ ಹಂತಕ ಕಥೆಯ
ದೊಡ್ಡ ಅಭಿಮಾನಿ. ಮೊದಮೊದಲು ಅವನು ಹೊಗಳುವಾಗ ಖುಷಿ ಆಗ್ತಾ ಇತ್ತು. ಆನಂತರ ಇದುವರೆಗೂ,
ನಾನು ಏನೇ ಬರೆದರೂ 'ಹೂನವಿಲೆಯ ಹಂತಕ ರೇಂಜಿಗೆ ಇಲ್ಲಮ್ಮಾ ಇದು. ' ಅಂತಾನೆ. ಇವನದ್ದು
ಒಳ್ಳೆ ಕಥೆ ಆಯ್ತಲ್ಲ ಅನ್ನಿಸ್ತಾ ಇರತ್ತೆ.

ಮನೆಗೆ ಯಾರಾದ್ರು ಅವನ ಸ್ನೇಹಿತರು ಬಂದ್ರೆ ಸಾಕು 'ಕವಿಗಳು ಹೂನವಿಲೆಯ ಹಂತಕ ಬರೆದಿರೋರು
' ಅಂತ ಪರಿಚಯ ಮಾಡಿಸ್ತಾನೆ. ಅವರನ್ನ ಇಂಟರ್ನೆಟ್ ಮುಂದೆ ಕೂರಿಸಿ 'ನೀವು ಈ ಕಥೆಯನ್ನ
ಓದಲೇಬೇಕು ' ಅಂತ ಹೇಳಿ ಬ್ಲಾಗ್ ಓಪನ್ ಮಾಡ್ತಾನೆ. ಪಾಪ, ಗೆಳೆತನದ ಮರ್ಜಿಗೆ
ಸಿಕ್ಕಿಕೊಂಡು ಅವರು ಕಷ್ಟ ಪಟ್ಟು ಓದುವರು.

'ಲೋ ಶಫಿ ಬಿಟ್ಟು ಬಿಡ್ಲಾ ಅವರನ್ನ ಯಾಕೆ ಹಿಂಸೆ ಮಾಡ್ತೀಯ. ? ನಿನ್ನ ಫ್ರೆಂಡ್ ಆಗಿರೋ
ಕರ್ಮಕ್ಕೆ ಅವರು ಏನೇನನ್ನೆಲ್ಲಾ ಅನುಭವಿಸಬೇಕು. ' ಅಂದ್ರೆ'ಸುಮ್ನೆ ಇರೋಮ್ಮಾ ನೀನು
ಹೂನವಿಲೆಯ ಹಂತಕನನ್ನ ವರ್ಡ್ ಫೇಮಸ್ ಮಾಡ್ಬೇಕು. 'ಅಂತಾನೆ. ಒಳಗೊಳಗೆ ಖುಷಿ ಆಗತ್ತೆ
ಆದರೆ ಅವನ ಗೆಳೆಯರ ಮೇಲೆ ಮರುಕಾನು ಉಂಟಾಗುತ್ತೆ.

ಅಂತೂ ಸ್ನೇಹಿತರುಗಳೇ ಓದಿ ನನ್ನ ಬ್ಲಾಗು 22,000  ಹಿಟ್ಸು ಕ್ರಾಸ್ ಮಾಡಿದೆ.
ಬರೆಯುವುದನ್ನೇ ಕಮ್ಮಿ ಮಾಡಿದ್ದಾಗ, ಮೆಚ್ಚುಗೆಯ ಮಾತುಗಳನ್ನಾಡಿ ಬ್ಲಾಗಿಗೆ ಹಾಕುವಂತೆ
ಮಾಡಿದವನು ಗೆಳೆಯ 'ನಿರಂಜನ ಗೌಡ'. ಅವನಿಗೆ ಥ್ಯಾಂಕ್ ಯು.

ಬರೆದದ್ದನ್ನು ಮೊದಲು ಓದಿ ಪ್ರತಿಕ್ರಿಯಿಸುವ ಮತ್ತು fb ಶೇರ್ ಮಾಡುವ ದೊಡ್ಡ ಮನಸ್ಸಿನ
ಗೆಳೆಯರಾದ ರವಿ, ರೂಪಿ, ಅಭಿ ಗೂ ಥ್ಯಾಂಕ್ ಯು.

ಹೆಸರುಗಳು ತುಂಬಾ ಏನಿಲ್ಲ. ಗೊತ್ತಿರುವ ಆತ್ಮೀಯ ಓದುಗರು ಅಂದ್ರೆ ಗಜು, ಶಶಿಕಿರಣ,
ಶಶಾಂಕ, ಪ್ರವೀಣ್ ಕಶ್ಯಪ್,ಶಫಿ, ರಾಜೇಶ, ಅವಿನಾಶ್.. ಅಷ್ಟೇ ಅವರಿಗೂ ಥ್ಯಾಂಕ್ಸು.
ಮೊದ್ಲು ಆರ್ಕುಟ್ ನಲ್ಲಿ ಶೇರ್ ಮಾಡ್ತಿದ್ದೆ. ಈಗ ಈ ಬ್ಲಾಗಿಗೆ ಮೀಡಿಯಾ ಲಿಂಕು
ಅಂತಿರೋದು, ಫೇಸ್-ಬುಕ್. ನನ್ನ ಹಿಂಸೆಗಾದರೂ, ಇದನ್ನು ಓದುವ ಎಲ್ಲಾಮಿತ್ರರಿಗೂ ಮತ್ತು
ಇಷ್ಟ ಪಟ್ಟು ಓದುವ ಅನಾಮಿಕ ಮಿತ್ರ ವೃಂದಕ್ಕೂ. ಕಷ್ಟ ಪಟ್ಟುಕೊಂಡು ಒಂದು ಥ್ಯಾಂಕ್ಸು
ಮಾತ್ರಹೇಳಬಲ್ಲೆ. ಥ್ಯಾಂಕ್ ಯು ಸೋ ಸೋ ಮಚ್.
 
 

Monday, January 21, 2013

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.) 


' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. '

ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ. 

ಬಹುಷಃ ಹಳೇ ಸಿನಿಮಾಗಳಲ್ಲಿ ನೋಡಿರಬಹುದು. ಅತ್ಯಾಚಾರಕ್ಕೆ ಒಳಗಾದ ಒಂದು ಹೆಣ್ಣಿನ ಪಾತ್ರಕ್ಕೆ ಸಿನಿಮಾದ ಮಧ್ಯದಲ್ಲಿಯೇ ಒಂದು ಗತಿ ಕಾಣಿಸಿ ಬಿಡ್ತಾರೆ. ಯಾಕಂದ್ರೆ ಕಥೆ ಹೇಳುವವನಿಗೆ ಆ 'ಪಾತ್ರ' ತುಂಬಾ ಅಸಹ್ಯ ಹುಟ್ಟಿಸುತ್ತಾ ಇರಬಹುದು. ಅದಕ್ಕೆ ಕಥೆಯೊಳಗೆ, ದ್ವೇಷ ತೀರಿಸಿಕೊಳ್ಳುವ ಹೆಸರಲ್ಲೋ. ? ಏನೋ. ? ಒಟ್ಟಾರೆ ಆ ಪಾತ್ರಕ್ಕೆ ಮುಕ್ತಿ ಸಿಗೋದು ಸಾವಿನ ಜೊತೆಗೆ. ಇದು ಕಥೆ ಹೇಳುವವನ ಮೈಂಡ್ ಸೆಟ್ ಅಲ್ಲಾ. ? ಕುಳಿತು ನೋಡುವ ಪ್ರೇಕ್ಷಕನ ವಿಚಾರಧಾರೆಯ ಪ್ರತಿಬಿಂಬ. 

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ
ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ
ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)

‘ ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ
ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ
ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ
ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ
ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ
ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ’

Sunday, January 6, 2013

ಸೊಕ್ಕಿನ ಕೋಗಿಲೆ ; ಕೊರಳು ಮತ್ತು ಕೊಳಲನ್ನು ಬಂಧಿಸಿದ ಪ್ರೀತಿ ಎಂಬ ಮಾಯೆಯ ಸುತ್ತ


ಅವಳು ಇದ್ದದ್ದು ಹಾಗೆ, ಸೊಕ್ಕಿನ ಕೋಗಿಲೆಯ ಹಾಗೆ. ಆ ಕೋಗಿಲೆಯ ಕಂಠಕ್ಕೆ ತೂಗದ
ತಲೆಗಳಿಲ್ಲ, ಮಣಿಯದ ಮನಗಳಿಲ್ಲ.

ಹೆಸರು ಪೂರ್ವಿ, ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.
ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ ತೊಯ್ದ ಆತ್ಮಗಳನ್ನ ಆ
ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು
ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ, ಹೃದಯ ಕಿತ್ತು ಬಂದಂತೆ. ಸಹಜ
ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ ಹೆಣ್ಣಿನ
ಸೌಂಧರ್ಯದ ಜೊತೆ ಬೆರೆತು, ಅಮಲಿನ ಅಲೆಗಳನ್ನು ಸೃಷ್ಟಿಸುತ್ತಿತ್ತು.

> ಹುಟ್ಟು ಒಮ್ಮೆಯಾದರೆ ಸಾವು ಸಾವಿರ ಬಾರಿ. ತನ್ನ ಹಾಡಿನ ಉಚ್ಛ ಸ್ಥಾಯಿಯಲ್ಲಿ
> ಹಾಡುವಾಗಲೆಲ್ಲಾ, ಸಾವಿನ ಮನೆಯ ಕಾಲಿಂಗ್ ಬೆಲ್ ಬಡಿದು ಬರುತ್ತಿದ್ದಳು. ಅಂತಹಾ ಮೇರು
> ಪ್ರತಿಭೆ ಅವಳದು.

ಜನಪ್ರಿಯತೆಯ ಕೊಬ್ಬು ತಲೆಗೇರಿದೆ ಎಂದು ಮೂದಲಿಸಿದರು ಓರಗೆಯವರು. ಆರಾಧಿಸುವ
ಅಭಿಮಾನಿಗಳು ಪ್ರೀತಿಯಿಂದ ‘ಸೊಕ್ಕಿನ ಕೋಗಿಲೆ’ ಅಂತಲೇ ಕರೆದರು.

> ‘ನಾನು ನಾನಾಗಿಯೇ ಇರಬೇಕೆಂದರೆ, ಸ್ವಲ್ಪ ಅಹಮ್ಮು ಮೈಗೂಡಿಸಿಕೊಳ್ಳಬೇಕು. ವಿಧೇಯತೆಯ
> ಕೂಸಾದರೆ, ಅಭಿಮಾನದ ಅಲೆಯಲ್ಲಿ ಕೊಚ್ಚಿಹೋಗಬೇಕಾಗುತ್ತದೆ. ’

ಇದು ಪೂರ್ವಿಯ ಅಂತಃಕರಣ. ಸಂಗೀತದ ಸಾಂಗತ್ಯದ ಜೊತೆಗೆ,ಅವಳದ್ದು, ಒಂಟಿ ಜೀವನ. ತನ್ನ
ಒಂಟಿತನವನ್ನೊಮ್ಮೆ ಪ್ರಶ್ನಿಸಿಕೊಳ್ಳುತ್ತಾ ಬರೆವಳು ‘ನಾಲ್ಕು ಗೋಡೆಗಳ ನಡುವೆ ನಾನು
ಒಬ್ಬಂಟಿ ಅಂತನ್ನಿಸುವುದಿಲ್ಲ. ಮನೆಯ ಮಹಡಿ ಹತ್ತಿ, ಸುತ್ತಿ ನೋಡಿದರೆ, ನಾನೊಬ್ಬಳು
ಒಂಟಿ ಹೌದು. ನನ್ನ ಕಣ್ಣಿಗೆ ಕಾಣುವ ಈ ಅಗಾಧ ಪ್ರಪಂಚ ಗುಂಪು ಕಟ್ಟಿರುವ ಒಬ್ಬಂಟಿಗಳ
ಬೀಡು. ಸುಮ್ಮನಿದ್ದಾಗಲು, ನಾ ಸುಮ್ಮನಿದ್ದೇನೆ ಅನ್ನಿಸೋದಿಲ್ಲ. ಎಲ್ಲರ ಜೊತೆ ಕೂಗು
ಹಾಕಿ ಹರಟುವಾಗ, ಒಂದೊಂದು ಮಾತುಗಳಲ್ಲಿ, ಒಬ್ಬೊಬ್ಬರೂ ಒಂಟಿತನದ ಜೊತೆಗೆ ಜಿದ್ದಿಗೆ
ಬಿದ್ದು ಹೋರಾಡುವುದು ಕಾಣಿಸುತ್ತದೆ. ಬಹಶಃ ಕಾಲದ ಜೊತೆಗೆ ಅನಾವರಣಕೊಳ್ಳುತ್ತಾ ಹೋಗೋದು
ನಮ್ಮ ಒಂಟಿತನ. ’

ಸಂಗೀತದ ಜೊತೆಗೆ ಅವಳದ್ದು, ಮೊದಲ ಮದುವೆಯಾಗಿ ಹೋಗಿತ್ತು. ಸಂಗೀತದ ತೀವ್ರತೆಯನ್ನು
ಅನುಭವಿಸಿದವಳಿಗೆ, ಸಂಬಂಧಗಳಲ್ಲಿಯೂ ಅಂತಹುದೇ ಉತ್ಕಟತೆಯ ಹೆಬ್ಬಯಕೆ.

‘ನಾವು ಯಾರಿಗೆ ಜಾಸ್ತಿ ಅರ್ಥ ಆಗಬೇಕೋ, ಸಾಧ್ಯ ಆದಷ್ಟು ಅವರನ್ನ ನಮ್ಮೊಳಗೆ
ಬಿಟ್ಟುಕೊಳ್ಳಬೇಕು. ಎದೆಯ ಬಾಗಿಲಲ್ಲೇ ನಿಂತು ಮಾತಾಡಿಸಿ ಕಳಿಸುವುದಾದರೆ. ಆ ಕರ್ಮಕ್ಕೆ
ಸಂಬಂಧ ಯಾಕ್ ಬೇಕು. ? ಆ ಸಂಬಂಧಕ್ಕೊಂದು ವ್ಯರ್ಥ ಹೆಸರೇಕೆ ಬೇಕು. ಏನೇ ಇದ್ದರೂ.
ಎಲ್ಲದೂ ತೀವ್ರವಾಗಿರಬೇಕು. ಹಚ್ಚಿಕೊಂಡರೂ ಅದು ಸಿಕ್ಕಾಪಟ್ಟೆ . ಪ್ರೇಮ ಅಂದ್ರೆ
ಉತ್ಕಟಪ್ರೇಮ. ಚೂರು ಪಾರು ಇಲ್ಲ’ ಎನ್ನುವಳು.

ಅದೊಂದು ಬಲು ದೊಡ್ಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ಸೆಲೆಬ್ರಿಟಿ ಆಕರ್ಷಣೆಗಾಗಿ
ಪೂರ್ವಿಯನ್ನು ಆಹ್ವಾನಿಸಲಾಯ್ತು. ಕೂತಲ್ಲಿ, ನಿಂತಲ್ಲಿ ಹಲ್ಲು ಕಿರಿಯುವುದರಿಂದ ತುಟಿಯ
ಸ್ನಾಯುಗಳು ಬಿಗಿಯುತ್ತವೇ ಎಂದು ಅರಿತಿದ್ದವಳು, ಚೈತನ್ಯವಿಲ್ಲದ ನಗುವನ್ನು ತೋರುವ
ಬದಲು, ಬಾಯೊಳಗೆ ಅದುಮಿದ್ದಳು. ಅಭಿಮಾನಿಗಳ ಪ್ರೀತಿಯ ಮೇರೆಗೆ, ಎರಡು ಸಾಲು ಹಾಡನ್ನೂ
ಹಾಡಿದಳು. ದೊಡ್ಡತನದ ದೊಡ್ಡ ಸಮಾರಂಭದಲ್ಲಿ, ಅವಳ ಧ್ವನಿ ಜೀವವಾಯುವಿನಂತೆ ಪ್ರವಹಿಸಿತು.
ಕಾರ್ಯಕ್ರಮದ ಕೊನೆಯಲ್ಲಿ, ಸಂಘಟಕನೊಬ್ಬ ಕಟುವಾಗಿ ನುಡಿದನು.

‘ ನಿಮಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ದುಡ್ಡು ಕೊಡುವುದಲ್ಲದೇ, ನಗುವುದಕ್ಕೂ
ಹೆಚ್ಚಿನ ಹಣವನ್ನೇನಾದರೂ ಕೊಡಬೇಕೆ. ? ’. ಎಲ್ಲರ ಮುಂದೆಯೂ, ಅವನ ಕಪಾಳಕ್ಕೊಂದು
ಕೊಟ್ಟಳು. ಮನೆಗೆ ಬಂದು ಹಾಸಿಗೆಯ ಮೇಲೆ ಮಕಾಡೆ ಬಿದ್ದಳು. ಮಣ್ಣಿನ ಬಣ್ಣದ ಬೈಂಡ್
ಮಾಡಿದ್ದ, ತನ್ನ ಡೈರಿಯನ್ನು ತೆಗೆದು ಬರೆಯುತ್ತಾ ಹೋದಳು.

‘ಎಲ್ಲರೂ ಬೆರಳು ಮಾಡುವಂತೆ, ನಿಜವಾಗಿಯೂ ನಾನು ಬದಲಾಗುತ್ತಲೇ ಇದ್ದೇನಾ. ? ಕಾಲದ ಜೊತೆ
ಜನಗಳು ಬದಲಾಗ್ತಾರಾ ಅಥವಾ ಕಾಲದ ಜೊತೆ ಬದಲಾಗೋದು, ಆ ಜನಗಳ ಮೇಲಿನ ನಮ್ಮ ಅಭಿಪ್ರಾಯ
ಮಾತ್ರಾವಾ..? ಬದಲಾದ ನಮ್ಮತನದ ಜೊತೆಗೆ ಸರಿ ಹೊಂದದ, ಸಮೂಹವನ್ನೇ ಧಿಕ್ಕರಿಸುತ್ತೇವಾ?
ಗೊತ್ತಿಲ್ಲ. ಇಲ್ಲ ನಾನು ಬದಲಾಗಿಲ್ಲ ನನ್ನೊಳಗಿರುವ ತುಂಟತನ, ಈಗಲೂ ಹಾಗೆಯೇ ಇದೆ.

ಸ್ಕೂಲ್ ಬಸ್ ಹತ್ತುವಾಗ, ಅಮ್ಮನ ಕೈ ಬಿಡುವ ಪುಟ್ಟ ಮಕ್ಕಳನ್ನು ನೋಡಿ ಆನಂದಿಸಿದ್ದೇನೆ.
ರಸ್ತೆ ಬದಿಯಲ್ಲಿ ಶಾಯರಿ ಹೇಳುತ್ತಾ ಗೋಲ್-ಗುಪ್ಪ ಮಾರುವ, ಆ ಹುಡುಗನ ಕೈಯಿಂದ ಪಡೆದ
ಗೋಲ್-ಗುಪ್ಪವನ್ನು, ಈಗಲೂ ಬಾಯಿ ತುಂಬಿಕೊಂಡು ಆಸ್ವಾಧಿಸಿದ್ದೇನೆ. ನಾನು ನಗಬಲ್ಲೆ;
ನಾನು ಹರಟಬಲ್ಲೆ; ನಾನು ಪ್ರೀತಿಸಬಲ್ಲೆ; ನನ್ನನ್ನು ಅರಗಿಸಿಕೊಳ್ಳುವನಿಗೆ ನನ್ನ
ಹೆಣ್ತನವನ್ನು ಧಾರೆ ಎರೆಯಬಲ್ಲೇ.’

ಪೂರ್ವಿ ಕೆಲಕಾಲ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿದು, ಮನದೊಳಗಣ, ಸೂರ್ಯನ ಕಿರಣಗಳಿಗೆ
ಅತಿಥಿಯಾಗಿ ಕಾಲ ಹಾಕಿದಳು.

* * * * *

ಸಾವಿರಾರು ಜನರು ಸೇರಿದ್ದ ಬಹುದೊಡ್ಡ ಸಂಗೀತ ಸಮಾರಂಭ. ಅಲ್ಲಿ ಪೂರ್ವಿ ಸಾಧಾರಣ ಶ್ರೋತೃ.
ವೇದಿಕೆಯ ಮೇಲೆ, ಎಲ್ಲಾ ಸಂಗೀತ ಸಾಧನಗಳನ್ನು ಭಾರಿಸುವುದನ್ನು ಕ್ಷಣಕಾಲ
ಮುಗುಮ್ಮಾಗಿಸಿದರು. ಎರಡು ಕ್ಷಣ ನಿಶ್ಯಬ್ದ. ಆ ನಿಶ್ಯಬ್ದವನ್ನು ಬೇದಿಸಿಕೊಂಡು ಬಂದದ್ದು
ಕೊಳಲಿನ ಸದ್ದು. ಉಸಿರು ಬೆರಳುಗಳ ಕೊಳಲಿನ ಜಾದುವಿಗೆ, ಪೂರ್ವಿ ತನ್ನನ್ನು ತಾನು
ಸಂಪೂರ್ಣವಾಗಿ ಅರ್ಪಿಸಿಕೊಂಡಳು.

> ಕೆಲವು ಸದ್ದುಗಳೇ ಹಾಗೆ. ಎಲ್ಲಿ ಅನಾಹುತ ಸೃಷ್ಟಿಸುತ್ತವೇ..? ಎಂಬುದರ ಅಂದಾಜು,
> ನುಡಿಸುವವನಿಗೇ ತಿಳಿದಿರುವುದಿಲ್ಲ.

ಕೊಳಲು ನುಡಿಸಿದವನ ಹೆಸರು, ಹರಿಯೋದಯ ಮಿತ್ರ. ಚಿಗುರು ಮೀಸೆಯ ಯುವಕ. ಮಿತ್ರ ಪೂರ್ವಿಯ
ಕಂಠದ ಆರಾಧಕನೂ ಹೌದು. ಅವಳ ಅಹಮ್ಮಿನ ಬಗ್ಗೆ ತಿಳಿದವನಿಗೆ, ಸ್ವಲ್ಪ ಮಟ್ಟಿನ
ನಿರ್ಲಕ್ಷ್ಯದ ಭಾವನೆ ಇತ್ತು. ಪೂರ್ವಿ ಮಿತ್ರನಿಗಿಂತ ಎರಡು ವರ್ಷ ಹಿರಿಯವಳು. ಆದರೂ
ಕಲೆಯ ನೆಲೆಯಲ್ಲಿ ಇಬ್ಬರ ಸ್ನೇಹವು ಕುದುರಿತು.

ಪೂರ್ವಿಯ ಸಂಘಕ್ಕೆ ಹಾತೊರೆಯುತ್ತಿದ್ದ ಬಹಳಷ್ಟು ಗಂಡಸರ ನಡುವೆ, ಕೊಳಲಿನ ಮಾಂತ್ರಿಕ
ಮಿತ್ರ ಕೊಂಚ ಬೇರೆಯಾಗಿ ನಿಂತ. ಅವಳು ಸೋತಳು. ಯಾವುದಕ್ಕೆ ಎಂಬ ಪ್ರಶ್ನೆಗೆ ಅವಳಲ್ಲಿಯೇ
ಉತ್ತರವಿಲ್ಲ. ಅಗಾಧ ಬಾಹು ಹೊತ್ತಿದ್ದ ಅವನ ಸೌಂಧರ್ಯಕ್ಕಾ. ? ಮಂತ್ರ ಮುಗ್ಧವಾಗಿಸುವ
ಅವನ ಕೊಳಲಿನ ವಳ್ಳೆಗಾ. ? ಅಥವಾ ಸೋತಿದ್ದು ‘ತನ್ನ ಬಗೆಗಿದ್ದ ಅವನ ನಿರ್ಲಕ್ಷ್ಯಕ್ಕಾ. ?

ಮಿತ್ರ, ಹಸನ್ಮುಖಿ. ಜೀವನದ ಬಗೆಗಿನ ಅವನ ನಿಲುವು ಪೂರ್ವಿಯದ್ದಕ್ಕಿಂತ ಭಿನ್ನ.
ಪೂರ್ವಿಗೆ ಕಲೆಯೇ ಜೀವನ. ಮಿತ್ರನಿಗೆ ಕೊಳಲು ಜೀವನದ ಭಾಗ. ಒಂಟಿತನವನ್ನು ಅಪ್ಪಿ ಬೆಳೆದ
ಪೂರ್ವಿಗೆ, ಬದಲಾಗುವ ಜನಗಳ ನಡುವಳಿಕೆ ರೇಜಿಗೆ ತರಿಸುತ್ತಿತ್ತು. ಮಿತ್ರ ಸಂಘಜೀವಿ.
ಇಬ್ಬರಲ್ಲಿಯೂ ಪ್ರೇಮಾಂಕುರವಾಯಿತು.

ಯಾರಿಗೂ ಕಾಣದ ಪೂರ್ವಿಯ ಅಸಹಾಯಕತೆ; ಅವಳ ಚಂಚಲತೆ; ಪ್ರೀತಿಯ ಉತ್ಕಟತೆ; ಮಿತ್ರನಿಗೆ
ಕಾಣಿಸುತ್ತಿತ್ತು. ಹೊರ ಪ್ರಪಂಚಕ್ಕೆ ಕುಡಿದ ಕುದುರೆಯಂತೆ ಅನಿಸುವ ಪೂರ್ವಿ, ಮಿತ್ರನ
ಪ್ರೀತಿಯ ಬಾಹುಗಳಡಿಯಲ್ಲಿ ಎಳೆ ಮಗುವಿನಂತಾದಳು. ವೈರುಧ್ಯಗಳ ನಡುವೆ ಅವರನ್ನು
ಬಂಧಿಸಿದ್ದು, ಕಲೆಯಿಂದ ಪ್ರಾರಂಭಗೊಂಡ ಪ್ರೀತಿ. ಅವರು ಬೆರೆತರು. ಸಂಗೀತದ ನೊಗಕ್ಕೆ
ಹೆಗಲು ಕೊಟ್ಟು ದೇಶ-ವಿದೇಶಗಳನ್ನು ಸುತ್ತಿದರು. ಕಲಾರಸಿಕರ ಸಂಗೀತದಾಹವನ್ನು ತಣಿಸಿದರು.
ಅವನ ಕೊಳಲಿಗೆ, ಅವಳ ಕಂಠದ ಉಬ್ಬುತಗ್ಗುಗಳು ನರ್ತಿಸುತ್ತಿದ್ದವು. ಅವರು ಬೆರೆತರು;
ಪ್ರಪಂಚದ ಅಣತಿಗಳನ್ನು ಗಾಳಿಗೆ ತೂರಿದರು; ಹಾರ ಬದಲಿಸಿದರು. ಒಂದಾದರು. ತೋಳಿನಿಂದ
ಬಾಚಿಕೊಂಡ ಅವಳು, ಎದೆಯ ಮೇಲೆ ಕಿವಿ ಇಟ್ಟು, ಪಿಸುಗುಟ್ಟಿದಳು ‘ ಕೊನೆವರೆಗೂ ಈ
ಹುಚ್ಚಿಯನ್ನ ಹಿಂಗೇ ಪ್ರೀತಿಸ್ತೀನಿ ಅಂತ ಆಶ್ವಾಸನೆ ಕೊಡು’

‘ ನಿನ್ನ ಹೆಸರಿಗೆ, ನನ್ನ ಶ್ವಾಸವನ್ನೇ ಮುಡಿಪಿಟ್ಟಿದ್ದೇನೆ. ’ ಅಂದನು ಹಣೆಯ ಮೇಲೆ
ಮುತ್ತಿಡುತ್ತಾ.

‘ you completed me ’ ಅಂದಳು. ‘ಹೌ. ದಾ. ? i need you completely ’ ಎನ್ನುತ್ತಾ
ಅಪ್ಪುಗೆಯನ್ನು ಬಿಗಿ ಮಾಡಿದ. ‘ನನಗೆ ಸಿಟ್ಟು ಮೂಗಿನ ತುದಿನಲ್ಲೇ ಇರತ್ತೆ. ’ ಮೂಗನ್ನೇ
ಎದೆಗೆ ತೀಡಿದಳು.‘ ನಾನು ತುಂಬಾ ಇಷ್ಟ ಪಟ್ಟಿದ್ದು, ನಿನ್ನ ಆ ತುದಿ ಬಾಗಿದ ಮೂಗನ್ನೇ
ಪೂರ್ವಿ. ಅದೊಂದನ್ನ ನನಗೆ ಬಿಟ್ಟುಬಿಡು. ನಾನು ನೋಡಿಕೊಳ್ತೇನೆ. ’ ಎಂದನು.

ಪೂರ್ವಿ ನಾಚುತ್ತಾ ನುಡಿದಳು ‘ ಅದು ಹಾಗಲ್ಲ, ನಾನು ಪಾಪಿ-ಕೋಪಿ ಕಣೋ. ಜೀವನ ಪೂರ್ತಿ
ಆಗುವಷ್ಟು ಸಾರಿಯನ್ನ, ಈಗಲೇ ಕೇಳಿ ಬಿಡ್ತೇನೆ. ಮುಂದೆ ಅದನ್ನ expect ಮಾಡಬಾರದು.
ಆಯ್ತಾ. ? ’. ಸಾರಿ, ಸಾರಿ ಎಂಬುದಾಗಿ ಹೇಳುತ್ತಾ ಹೋದಳು. ಒಂದಿಂಚು ಮುಖ ಮುಂದಕ್ಕೆ
ಬಂದಿತ್ತು. ಆಯ್ತೆಂದು ತಲೆಯಾಡಿಸಿದ.

‘ಮುದ್ದು ಮುಖಕ್ಕೆ ಪೆದ್ದುತನ ತುಂಬಾ ಒಪ್ಪುತ್ತೆ. ಅದನ್ನ ಒಂದು ಕ್ಷಣ ಹಾಗೆ ಇಟ್ಕೋ.
ಪದೆ ಪದೆ ಸಿಗಲ್ಲ ನನಗದು. ಕಣ್ತುಂಬಿಸಿಕೊಳ್ತೇನೆ. ’ ಮುಖದ ಮೇಲಿನ ನಾಚಿಕೆಯನ್ನು, ಅವನ
ಎದೆಯೊಳಗೆ ಅಡಗಿಸಿಬಿಟ್ಟಳು. ಉಸಿರ ಬಿಸಿಗೆ, ಅವರ ಎದೆ ಬಲೂನಿನಂತಾಗಿ ಆಗಸದಲ್ಲಿ
ತೇಲುತ್ತಿತ್ತು.

ಪ್ರೀತಿಯಿಂದ ತಂದ ವಜ್ರದುಂಗರವನ್ನು ಹಿಡಿದು, ಮಂಡಿ ಮೇಲೆ ಕುಳಿತು ‘ಪೂರ್ವಿ ನನ್ನ
ಬಾಳಸಂಗಾತಿ ಆಗೋದಕ್ಕೆ ನೀನು ಒಪ್ತೀಯ ?’ ಕೇಳಿದ. ‘ನಾನು ನಿನ್ನ ಆತ್ಮ ಸಂಗೀತ; ನಿನ್ನ
ಗೆಳತಿ; ನನ್ನ ದಿಕ್ಕು ತಪ್ಪಿದ ದೋಣಿ, ಹುಟ್ಟು ಹಾಕದೆ ತೀರ ಸೇರುತ್ತಿದೆ, ಅಂತ
ಅನ್ನಿಸ್ತಾ ಇದೆ. ಇದು ನಿಜಾನ’ - ಅವಳ ಕಣ್ಣುಗಳು ಹನಿಗೂಡುತ್ತಿದ್ದವು. ಉಂಗುರವನ್ನು
ಬೆರಳಿಗೆ ತೊಡಿಸಿ, ಪುನಃ ಅಪ್ಪಿಕೊಂಡನು.

‘ತೀರಕ್ಕೆ ಯಾಕ್ ಬರ್ತೀಯ. ಪೂರ್ವಿ? ನಿನ್ನ ದಿಕ್ಕು ತಪ್ಪಿದ ದೋಣಿನಲ್ಲಿ ನಂಗೂ ಸ್ವಲ್ಪ
ಜಾಗ ಕೊಡು. ನೀನು ಹೇಳಿದ ಕಡೆಗೆ, ಹುಟ್ಟು ಹಾಕ್ತೇನೆ. ಕೊನೆವರೆಗೂ ಒಟ್ಟಿಗೆ ಇರಬೇಕು
ಅಂತ ಇರೋದು ಬೇಡ. ಒಟ್ಟಿಗೆ ಜೀವಿಸೋಣ. ಯಾರಿಗೋ ಆದರ್ಶ, ಮತ್ಯಾರಿಗೋ ಮಾದರಿಯಾಗಿ
ಬದುಕೋದು ಬೇಡ. ನಮಗೋಸ್ಕರ ಬದುಕೋಣ. ಸತ್ತ ಮೇಲೆ ಹಿಂಬಾಲಿಸುವ ಸಾಧನೆಯ ಬಂಗಾರದ ಹೆಜ್ಜೆ
ಗುರುತುಗಳಿಗಿಂತ, ನಾವು ಇರುವವರೆಗೂ ನೆರಳು ಕೊಡುವ ಪುಟ್ಟ ಗುಡಿಸಲು ಕಟ್ಟಿಕೊಳ್ಳೋಣ. ’

ವಸಂತಗಳು ಉರುಳಿದವು. ಸಮಯದ ಜೊತೆಗೆ ಅವರು ಒಬ್ಬರಿಗೊಬ್ಬರು ಅರ್ಥವಾಗಬೇಕಾಗಿರುವುದೇನು
ಉಳಿದಿರಲಿಲ್ಲ. ಅವರು ಅವರಂತೆಯೇ ಒಬ್ಬರನ್ನೊಬ್ಬರು ಒಪ್ಪಿದರು. ನಂಬಿಕೆಗಳೇ ಹಾಗೆ
ಬಲವಾಗಿ ಬೇರೂರಿದ ಮೇಲೆ ಮುಗಿಯಿತು. ಅಲ್ಲಿ ಕಾರಣಗಳು ಮತ್ತು ವಿವರಣೆಗಳಿಗೆ ಕಿವಿಗಳು
ಕಿವುಡಾಗಿ ಬಿಡುತ್ತವೆ. ಅವರು ನಾಡಿ ಮಿಡಿತದ ಅಣತಿಗೆ ಸ್ಪಂದಿಸುವಷ್ಟು ಬೆರೆತರು.
ಸಂಭ್ರಮಿಸಿದರು.

* * * * *

ಮಿತ್ರ ತನ್ನ ಕೈಯನ್ನೊಮ್ಮೆ ಹಿಸುಕಿಕೊಂಡ. ‘ ಅವಳ ಹಠಮಾರಿತನ, ಮಿತಿ ಮೀರಿತ್ತು. ಅದು
ನಮ್ಮಿಬ್ಬರ ನಡುವಿದ್ದಾಗ ಸಹಿಸಿಕೊಂಡೆ. ಆದರೆ ಸಹ ಕಲಾವಿದನನ್ನು, ವೇದಿಕೆಯ ಮೇಲೆಯೇ
ಅಪಮಾನಿಸುವ ಅವಳ ನಡುವಳಿಕೆ ಸಹನೆಯನ್ನು ಕೆಡಿಸಿ ಬಿಟ್ಟಿತು. ಭಾವನೆಗಳ ಹಂಗಿನಲ್ಲಿ
ಬಚ್ಚಿಟ್ಟುಕೊಂಡು, ಜಗತ್ತನ್ನೇ ತುಚ್ಚವಾಗಿ ಕಾಣುವುದೇ? ಆದರೂ, ನಾ ಹಾಗೆ
ಮಾಡಬಾರದಿತ್ತು. ಅದೂ ಕೂಡ ಅದೇ ವೇದಿಕೆಯ ಮೇಲೆ, ಸಾವಿರಾರು ಜನಗಳ ಸಮ್ಮುಖದಲ್ಲಿ. ಅವಳು
ಹೇಗೆ ಅನ್ನೋದು ನನಗೆ ಗೊತ್ತಿತ್ತಲ್ಲವೇ. ? ಪೂರ್ವಿ ಶಾಂತ ಸಾಗರದ ಒಡಲಲಿ ಅವಿತಿರುವ
ಚಂಡಮಾರುತ ಅನ್ನುವುದು ಗೊತ್ತಿದ್ದೂ, ಒಂದು ಕ್ಷಣ ಸೈರಣೆ ಕಳೆದುಕೊಂಡೆ.’ ಮಿತ್ರ ಕೆನ್ನೆ
ಸವರಿಕೊಂಡು, ತನ್ನ ಬಲಗೈಯ ಕಡೆಗೆ ವಿಷಾದದ ನೋಟ ಬೀರಿದ. ಹಿಂದಕ್ಕೆ ಹೋದ ಅಲೆ ಬರುವುದು
ತಡವಾದರೆ, ಅಪ್ಪಳಿಸುವಂತೆ ಬರುತ್ತದೆ ಎಂದು ಅರಿತಿದ್ದವನು, ಎದೆಯನ್ನು
ಬಂಡೆಯಾಗಿಸಿಕೊಂಡು ಕಾಯುತ್ತಿದ್ದ. ಆ ಅಲೆ ತಿರುಗಿ ಬರಲೇ ಇಲ್ಲ.

ಪೂರ್ವಿ ತನ್ನ ಡೈರಿಯ ಪುಟಗಳನ್ನು ತಿರುಗಿಸುತ್ತಾ ಹೋದಳು. ಮದುವೆಯ ನಂತರದ ಸಂಭ್ರಮದ
ದಿನಗಳಲ್ಲಿ ಬರೆದಿದ್ದ ‘ happily married ’ ಎಂಬ ಕೊನೆಯ ಸಾಲುಗಳಾಚೆ ಏನನ್ನೂ
ಬರೆದಿರಲಿಲ್ಲ. ಅವಳ ಒಂಟಿತನವನ್ನು, ಭೋಗಿಸುತ್ತಿದ್ದ ಡೈರಿಯು, ಮಿತ್ರನ ಆಗನದ ನಂತರ
ಅನಾಥವಾಗಿತ್ತು. ನಾಲ್ಕು ವಸಂತಗಳು ಸರಿದಿದ್ದವು. ಆ ಕೊನೆಯ ಸಾಲಿನ ಮೇಲೆ ಪುನಃ
ತಿದ್ದಿದಳು. ತಿದ್ದುತ್ತಲೇ ಹೋದಳು. ಹಾಳೆಯು ಹರಿದು ಹೋಯಿತು. ನಡುಗುತ್ತಿದ್ದ ಕೈಗಳಿಂದ,
ಒದ್ದೆಯಾದ ಕಣ್ಗಳನ್ನು ಒರೆಸಿಕೊಂಡಳು. ಬರೆಯುತ್ತಾ ಹೋದಳು.

‘ ಸಾಲಿನಿಂದ ಸಾಲಿಗೆ ಸಂಬಂಧವೇ ಇಲ್ಲದೆ, ಸೋಲುತ್ತಾ ಸಾಗುವ ಸಾವಿನ ಸೊಲ್ಲುಗಳಿವು. ಥೇಟು
ನನ್ನ ರೀತಿ. ಮನಸ್ಸು ಅಜಾಗೃತವಾಗಿದ್ದಾಗಲೂ ಮೂಡುವ vibration ಗಳಿವು. ಅಂದುಕೊಳ್ಳುವ
ಮನಸ್ಸಿಗೂ, ಉರುಳುವ ನಾಲಗೆಗೂ ಹಗ್ಗ ಜಗ್ಗಾಟ ಇರತ್ತಲ್ಲಾ ಹಂಗೆ.

ಅಷ್ಟು ಜನಗಳ ಮುಂದೆ ನನಗೆ ಹೊಡೆದಿದ್ದಕ್ಕೆ ನಿನ್ನ ಮೇಲೆ ಕೋಪ ಇಲ್ಲ ಮಿತ್ರ. ಅದೇ
ಕ್ಷಣದಲ್ಲಿ, ನಿನಗೆ ನಾ ತಿರುಗಿಸಿ ಹೊಡೆದಾಗಲೇ, ಕೋಪ ಕರಗಿ ಹೋಯ್ತು. ನಿನ್ನ ಜೊತೆ
ಬದುಕುವ ಯೋಗ್ಯತೆ, ನನಗಿಲ್ಲ ಕಣೋ.

> ಜೀವನ ಅಂದ್ರೆ, ಉದ್ದಕ್ಕೂ. ಎಲ್ಲರಿಗೂ ಸುಳಿವುಗಳನ್ನು ಕೊಡುತ್ತಾ. ತಮ್ಮನ್ನು
> ಬಿಡಿಸುವಂತೆ ಗೋಗರೆಯುವ ಒಂದು ಒಗಟು.

ನನ್ನ ಒಗಟನ್ನು ಬೇರೆಯವರು ಬಿಡಿಸೋದು ಇಷ್ಟ ಇಲ್ಲ. ಎಲ್ಲರ ರೀತಿ ಇರೋದಕ್ಕಾಗಲ್ಲ.
ನಾನ್ಯಾಕೆ ಹೀಗೆ. ? ಅನ್ನೋದು ನನಗೂ ಗೊತ್ತಿಲ್ಲ. ಬಹುಷಃ ನನ್ನ ಜೊತೆ
ಬೆರೆಯುವುದಕ್ಕಿಂತ, ಗುರುತಿಸಿಕೊಳ್ಳೋದಕ್ಕೆ ಹಾತೊರೆಯುವ ಸಮೂಹ ಸೃಷ್ಟಿ ಆಗ್ತಾ
ಇದ್ದಂತೆ, ನಾನು ಎಲ್ಲರನ್ನೂ ಅನುಮಾನದಿಂದ ನೋಡೋದಕ್ಕೆ ಪ್ರಾರಂಭಿಸಿದೆ. ಸಂಗೀತ, ನನಗೆ
ಬೇರೆ ಯಾರಲ್ಲಿಯೂ, ಯಾವುದರಲ್ಲಿಯೂ ರುಚಿ ಇಲ್ಲದಂತೆ ಮಾಡಿತು. ಅಲ್ಲಿಂದ ನನ್ನ
ಭಾವಜಗತ್ತು ಏಕಾಂತವಾಗಿ ವಿಕಾರವಾಗೋದಕ್ಕೆ ಪ್ರಾರಂಭ ಆಯ್ತು. ಅಂಥ ಸಂಧರ್ಭದಲ್ಲಿ ನೀನು
ಸಿಕ್ಕಿದೆ. ನೀನೆ ಪ್ರಪಂಚ ಆಗಿ ಬಿಟ್ಟೆ.

> ಕೆಲವರಿಗೆ ಎಲ್ಲರ ಕಣ್ಣಲ್ಲೂ.. ತಾವು ಒಳ್ಳೆಯವಾರಿಗಿಯೇ ಉಳಿಯೋ ಹವ್ಯಾಸ ಇರತ್ತೆ.
> ಆತ್ಮವಂಚನೆ ಆದರೂ ಸರಿ ಒಳ್ಳೆಯವರಾಗಿಯೇ ಉಳಿದು ಬಿಡ್ತಾರೆ.

ಬಹುಷಃ ನಿನ್ನ ಕಣ್ಣಲ್ಲಿ ಮಾತ್ರ ಒಳ್ಳೆಯವಳಾಗಿ ಉಳಿಬೇಕು ಅನ್ಸತ್ತೆ ಅಷ್ಟೆ. ಮತ್ಯಾರು
ಏನಾದರೂ ನನಗೆ ಬೇಕಿಲ್ಲ.

ಭಾವನೆಗಳು ಒತ್ತರಿಸಿಕೊಂಡು ಬರದೆ ಹಾಡಿದ್ದೆಲ್ಲವೂ, ಅಕ್ಷರ ಕಲಿವ ಮಕ್ಕಳು ಗೀಚಿದ
ರೇಖೆಗಳಂತೆ. ತುದಿಗಳು ಕೂಡುವುದಿಲ್ಲ. ಶೃತಿಗಳು ಸೇರೋದಿಲ್ಲ. ನೀ ನನ್ನೊಳಗಿನ ಧನಿ ಕಣೋ
ಮಿತ್ರ. ನನ್ನ ಕಂಠದಿಂದ ಹೊಮ್ಮುತ್ತಿದ್ದ ತರಂಗಗಳು, ನಿನ್ನ ಮೆಚ್ಚಿಸಬೇಕು ಅಂತಲೇ.
ನನಗಾಗಲಿ, ನನ್ನ ಕಂಠಕ್ಕಾಗಲಿ ಯಾವತ್ತೂ ತರತರದ ಕಾಂಪ್ಲಿಮೆಂಟುಗಳನ್ನ, ಈ ಪ್ರಪಂಚದಿಂದ
ನಿರೀಕ್ಷಿಸಲಿಲ್ಲ. ಆ ಕ್ಷಣದ ಅನುಭವ. ಆ ಕ್ಷಣದ ನಿನ್ನ ಖುಷಿ. ಹಾಡುವಾಗ ಅದರ ಜೊತೆಗಿನ
ನನ್ನ ಸಂವಾದ ಮತ್ತು ಸ್ಪಂದನೆ. ಎಲ್ಲಕ್ಕಿಂತ ಹೆಚ್ಚಾಗಿ, ನಾನು ಕಾಣ ಬಯಸುವಾ ಮತ್ತು
ಕಾಣುವಾ ಆ ನಿನ್ನ ಮೆಚ್ಚುಗೆಯ ಅಹಮ್ಮಿನ ನೋಟ.

ನನಗ್ಗೊತ್ತು ನಾನು ಅಂದ್ರೆ ನಿನಗೆ ಪ್ರಾಣ ಅಂತ. ಪ್ರತಿ ಸಾರಿಯೂ ನನ್ನ ಪರ ವಹಿಸಿಕೊಂಡು
ಬರ್ತೀಯ. ತಪ್ಪು ನನ್ನದೇ ಇದ್ರೂ, ನನಗಾಗಿ ಎಲ್ಲರ ಜೊತೆ ಹೋರಾಡ್ತೀಯ. ಈ ಸಾರಿ ಮಾತ್ರ
ಯಾಕೋ ಹೊಡೆದೆ ? ಈಡಿಯಟ್.

ಸಾಕು ಮಿತ್ರ. ಇನ್ನು ನಾ ನಿನಗೆ ಕಷ್ಟ ಕೊಡಲ್ಲ. ನನ್ನ ಮರೆತು ಹೋಗೋದಕ್ಕೆ, ನನ್ನ ಬಗ್ಗೆ
ಸ್ವಲ್ಪ ತಿರಸ್ಕಾರ ಭಾವನೆ ಬೆಳೆಸಿಕೊ. ಇಲ್ಲಾ ಅಂದ್ರೆ ನನ್ನ ನೆನಪಲ್ಲೇ ಸತ್ತು
ಹೋಗ್ತೀಯ. ಒಮ್ಮೆ ತಿರಸ್ಕಾರ ಭಾವನೆ ಮೂಡಿತು ಅಂದ್ರೆ, ಆ ತಿರಸ್ಕೃತಳ ಅಸ್ತಿತ್ವ, ಯಾವ
ರೂಪದಲ್ಲಿ ಇದ್ದರೂ. ಅದು ಗೌಣ.

ಆಟದಲ್ಲಿ ಗೆಲ್ಲಬೇಕು ಅಂತ ಇದ್ರೆ, ಮುಗಿಯುವ ಕೊನೆ ಕ್ಷಣದವರೆಗೂ, ಕ್ರೀಡಾ ಸ್ಪೂರ್ತಿ
ಬಿಡದೆ ಆಡಬೇಕು. ಕೈಚೆಲ್ಲಿ, ಮೈದಾನವನ್ನೇ ಬಿಟ್ಟು ಹೊರನಡೆದರೆ, ಅಲ್ಲಿ ಸೋಲು
ಗೆಲುವಿಗಿಂತ ಹೆಚ್ಚಾಗಿ ಕಾಡುವುದು, ನಮ್ಮ ಫಲಾಯನವಾದಿ Attitude. ಅದರ ವಿಷಾದ ಮಾತ್ರ,
ಎಲ್ಲಿವರೆಗೂ ನನ್ನ ಕಾಡುತ್ತೋ ಗೊತ್ತಿಲ್ಲ. ನನ್ನ ಕ್ಷಮಿಸಿ ಬಿಡು ಮಿತ್ರ. ನಿನಗೆ, ಹಂಗ್
ಹೊಡೀ ಬಾರದಿತ್ತು ಕಣೋ. ನೀ ಯಾಕ್ ಹೊಡಿಬೇಕಿತ್ತು. ?

ನನ್ನ ಮೂಗಿಗೆ, ನಿನ್ನ ಮೇಲೆ ತುಂಬಾ ಕೋಪ ಬರ್ತಿದೆ. ನಿನಗೆ ‘ಸಾರಿ’ ಹೇಳೋದಕ್ಕೂ ಅವಕಾಶ
ಕೊಡಬಾರದು ಅನ್ನೋ ಹಠದಲ್ಲಿ ನುಂಗಿ ಬಿಟ್ಟಿದ್ದೇನೆ. ಆದರೆ, ಈಗ್ಯಾಕೋ ನನಗೆ ಬದುಕಬೇಕು
ಅಂತ ಅನ್ನಿಸ್ತಿದೆ. ’

ಒಮ್ಮೆಲೇ ಬಾಯಿಂದ ಉಕ್ಕಿ ಬಂದ ರಕ್ತ, ಅಕ್ಷರಗಳನ್ನು ಕೆಡಿಸುತ್ತಾ, ತಾನು ಬರೆಯುತ್ತಿದ್ದ
ಹಾಳೆಯ ಮೇಲೆ ಚೆಲ್ಲಿತು. ಪೂರ್ವಿ ಹಾಸಿಗೆಯ ಮೇಲೆ ಹೊರಳಿದಳು. ಪುಡಿಯಾಗಿದ್ದ ಉಂಗುರುದ
ವಜ್ರದ ಹರಳುಗಳು, ಅವಳ ಕರುಳನ್ನು ಕತ್ತರಿಸಲು ಪ್ರಾರಂಭಿಸಿದ್ದವು.

Saturday, January 5, 2013

ಹೊಸವರ್ಷ

 ನಿರಂತರವಾಗಿ ಸಾಗಿದೆ...
 ವಸುಂಧರೆಯ
 ಉರುಳುಸೇವೆ,
 ಇಷ್ಟದೈವ ಸೂರ್ಯನಿಗೆ
 ಸ್ವಾಗತಿಸೋಣ ಅವಳ,
 ಮತ್ತೊಂದು ಸುತ್ತನು
 ನಾವಂದುಕೊಂಡ
 ಹೊಸ ವರ್ಷದ ಬಾಗಿಲಿಗೆ ವರ್ಷದ ಹಿಂದೆ ಗೋಡೆಯ ಆಣಿಗೆ ನೇಣು ಹಾಕಿದ್ದ, ಕ್ಯಾಲೆಂಡರಿಗಿಂದು ಅಂತ್ಯ ಸಂಸ್ಕಾರ.
 ಕೈ ತಪ್ಪಿ ಹಳೆಯ ಇಸವಿ ಬರೆದು, ಕಾಟು ಮಾಡಿದ ಮೇಲೆ ಬಯಲಾಗುವ ಹೊಸ ವರ್ಷದ
ಪಕ್ಕಾ-ಲೆಕ್ಕ.
 ಜನ್ಮದಿನ ಗೊತ್ತಿಲ್ಲದೇ ಹುಟ್ಟಿದವರಿಗಿಂದು, ಬರ್ಥಡೇ ಕೇಕು ತಿನ್ನುವ ಬಂಪರ್ ಆಫರ್.
 ಯಾವ ಅರ್ಥದಲ್ಲಿ ಈ ಒಂದಿನ ವಿಶೇಷ ಅನ್ನೋದು, ನನಗೆ ಅರ್ಥ ಆಗದೆ ಇರೋ ಬಹಳಷ್ಟು
ವಿಷಯಗಳಲ್ಲಿ ಒಂದು.
 ಆದರೂ ಸಂಭ್ರಮದ ಸ್ಕೂಲಲ್ಲಿ ನನ್ನದೂ ಒಂದು ಪ್ರಾಕ್ಸಿ
 ವಾಡಿಕೆಯ ಸೂರ್ಯನಿಗೆ ವಿಶೇಷ ದಿನಗಳ ಅರಿವಿಲ್ಲ. ಅವನ ಬೆಳಕನ್ನು ಬಗ್ಗಿಸಿ ದಿನಕ್ಕೆ
ಬಣ್ಣ ತುಂಬಬೇಕಿರುವವರು ನಾವು
 ಮುಂದಿನ ಎಲ್ಲಾ ದಿನಗಳು ಅಷ್ಟೇ ಸೊಗಸಾಗಿ ಇರಲೆಂದು ಹಾರೈಸುವೆ.

 ಶುಭವಾಗಲಿ- ಹೊಸವರ್ಷಕ್ಕೆ ಅಂತ ಬರೆದ ಶುಭಾಷಯ

ಮಲ್ಲಿಗೆ ವಾಸನೆಗೆ ಉಲ್ಟಿ ಆದದ್ದು

ನಾನಾಗ ಎಂಟು ವರ್ಷದವನಿದ್ದೆ.
ಹಿಂದಿನ ದಿನ ಚಿಕ್ಕೆರೆಯಲ್ಲಿ ಗಣಪತಿ ಮುಳುಗಿಸಲು ಹೋಗಿ, ಮಳೆಯಲ್ಲಿ ನೆನೆದು ಶೀತ, ಜ್ವರ ಬಂದಿತ್ತು.
ನನ್ನ ಚಿಕ್ಕಮ್ಮ, ನನ್ನನ್ನು ತುದಿಪೇಟೆ ಆಸ್ಪತ್ರೆಗೆ ಅಂತ ಕರೆದೊಯ್ದಳು.


ಆಸ್ಪತ್ರೆ ಅಂದ್ರೆ ಭಯ!! ಅದರಲ್ಲೂ ಸೂಜಿ ಹಿಡಿದು ನಿಲ್ಲುವ ಡಾಕ್ಟರುಗಳು ಭಯಾನಕವಾಗಿ ಕಾಣಿಸುತ್ತಿದ್ದರು.
ಡಾಕ್ಟರು ನನ್ನನ್ನು ನೋಡುವ ಮೊದಲೇ!! 'ನನಗೆ ಸೂಜಿ ಬೇಡ!! ಮಾತ್ರೆ ಸಾಕು' ಅಂತ ವಿನಯವಾಗಿ ಪ್ರಾರ್ಥಿಸುತ್ತಿದ್ದೆ.
ಅಪ್ಪಿ ತಪ್ಪಿ ಅವರು ಸೂಜಿ ಹಾಕಲೇ.. ಬೇಕೆಂದರೆ, ಇಬ್ಬರು ನರ್ಸುಗಳು ಮತ್ತು ಚಿಕ್ಕಮ್ಮ!! ನನ್ನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಮಲಗಿಸಬೇಕಾಗಿತ್ತು.
'ಉಸಿರು ಬಿಗಿ ಹಿಡ್ಕೋಬೇಡ!! ಸೂಜಿ, ಒಳಗೆ ಮುರಿದು ಹೋಗಿಬಿಡತ್ತೆ.' ಅಂತ ಡಾಕ್ಟರು ಎಚ್ಚರಿಕೆ ಕೊಡುವರು.
ಆದರೂ ಸೂಜಿಯ ಮೊನೆ ಚರ್ಮವನ್ನು ಸ್ಪರ್ಷಿಸುವುದರೊಳಗಾಗಿ ಉಸಿರು ತಂತಾನೆ ಕಟ್ಟಿಕೊಂಡು ಬಿಡುತ್ತಿತ್ತು.
ಒದ್ದಾಡುವ ಏಟಿಗೆ, ಏನಾದರೂ ಅನಾಹುತವಾಗುತ್ತಿತ್ತು.
ಬಹುಷಃ ಜೀವನದಲ್ಲಿ ನೋವು ಸಹಿಸಿಕೊಳ್ಳುವ ಮೊಟ್ಟ ಮೊದಲ ಅನುಭವ ಪಡೆದದ್ದು,
ಮೊದಲ ಬಾರಿಗೆ ಗಲಾಟೆ ಮಾಡದೆ ಶಾಂತವಾಗಿ ಸೂಜಿ ಚುಚ್ಚಿಸಿಕೊಂಡ ದಿನವೇ ಇರಬೇಕು.

ನಾನು ಮತ್ತು ಚಿಕ್ಕಮ್ಮ, ಆಸ್ಪತ್ರೆಯಲ್ಲಿ ಸಾಲಿನಲ್ಲಿ.. ನಿಂತಿದ್ದೆವು.
ನನ್ನ ಮುಂದೆ ನಿಂತ ಹೆಂಗಸೊಂದು, ತಲೆ ತುಂಬಾ ಮಲ್ಲಿಗೆ ಹೂವು ಮುಡಿದು ಬಂದಿತ್ತು.
ಕೆಲವೊಮ್ಮೆ, ಕೆಲವು ಸುಗಂಧಗಳು ಎಷ್ಟು ಹಿಂಸೆ ಕೊಡುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸುವುದು ಸಾಧ್ಯವಿಲ್ಲ.
ಆ ಮಲ್ಲಿಗೆ ಹೂವಿನ ವಾಸನೆಗೆ ತಲೆ ತಿರುಗಲು ಪ್ರಾರಂಭಿಸಿತು. ಆದರೂ ಅದನ್ನು ಹೇಳಿಕೊಳ್ಳುವಂತಿಲ್ಲ.
ನಮ್ಮ ಸರತಿಗಾಗಿ ಕಾಯುತ್ತಾ ನಿಂತೆ.
ಆ ವಾಸನೆಯಿಂದ ತಲೆ ನೋವು ಹೆಚ್ಚುತ್ತಾ ಹೋಗಿ, ಹೊಟ್ಟೆ ತೊಳಸಲು ಪ್ರಾರಂಭಿಸಿತು.
ಅರ್ಧ ಗಂಟೆಯ ಕಾದಿದ ನಂತರ, ಇನ್ನೇನು ಮಲ್ಲಿಗೆ ಮುಡಿದ ಆವಮ್ಮ ಡಾಕ್ಟರ ಬಳಿಗೆ ಹೋಗಬೇಕು ಅನ್ನುವಷ್ಟರಲ್ಲಿ,
ಆವಮ್ಮನ ಮೇಲೆ ಮತ್ತು ರೂಮಿನ ತುಂಬಾ 'ಬಕ್ ಬಕ್' ಅಂತ ಕಕ್ಕಿಬಿಟ್ಟೆ.
ಡಾಕ್ಟರು ಹೊರಗೆ ಬರುವಷ್ಟರಲ್ಲಿ, ನಾನು ನನ್ನ ಚಿಕ್ಕಮ್ಮ ಆಸ್ಪತ್ರೆಯಿಂದ ಓಟ ಕಿತ್ತೆವು.
ಅಲ್ಲಿ ಓಡಲು ಶುರು ಮಾಡಿದವರು, ಆಸ್ಪತ್ರೆಯ ಪೌಳಿ ದಾಟುವವರೆಗೂ ನಿಲ್ಲಲಿಲ್ಲ.
ಹೊರಗೆ ಬಂದ ಮೇಲೆ, ನಗಲು ಪ್ರಾರಂಭಿಸಿದೆವು.
" ನೋಡು!! ತಿರುಗಿ ಹೋದ್ರೆ ನಮ್ಮನ್ನ ಹಿಡ್ಕೋತಾರೆ.. ಈಗ ಸೀದಾ ಮನೆಗೆ ಹೋಗೋಣ" ಅಂದಳು.
ನನಗೂ ಅದೇ ಬೇಕಿತ್ತು.
ಆಸ್ಪತ್ರೆಯೇ ಇಲ್ಲದೆ ಜ್ವರ ಹೊರಟು ಹೋಯ್ತು.
ಆವತ್ತಿನಿಂದ ಆ ಆಸ್ಪತ್ರೆಯ ಕಡೆಗೆ ತಲೆ ಹಾಕಲಿಲ್ಲ.
ಭಯ!! ಎಲ್ಲಿ ಹಿಡ್ಕೊಂಡ್ ಬಿಡ್ತಾರೋ ಅಂತ. :-)

ಜಾನಪದ ಲೋಕದಲ್ಲಿ

ಇದು ನಾನು ಅಭಿ ಜಾನಪದ ಲೋಕಕ್ಕೆ ಹೋದಾಗ ತೆಗೆದ ಫೋಟೊ.
ಜಾನಪದ ಲೋಕ!! ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ರಾಮನಗರದ ಹತ್ತಿರ ಇದೆ.
ಇವರು ಮಡಕೆ ಮಾಡೋದನ್ನೇ ಫೋಟೋ ತೆಗೆಯುತ್ತಾ ಇದ್ದೆ.
ಬಾಯಿ ಸುಮ್ಕೆ ಇರಬೇಕಲ್ಲ. ಅದಕ್ಕೆ ತಾತನ ಬಗ್ಗೆ ವಿಚಾರಿಸಿದೆ.
ಇವರು ರಾಮನಗರದಿಂದ ಪ್ರತಿದಿನ ಮಡಕೆ ಮಾಡುವ ಸಲುವಾಗಿ ಜಾನಪದ ಲೋಕಕ್ಕೆ ಬರುವುದಾಗಿಯೂ,
ಬೆಳಗ್ಗೆ ಯಿಂದ ಸಂಜೆ ವರೆಗೂ ಮಡಕೆ ಮಾಡೋದನ್ನ ಬರುವ ಪ್ರವಾಸಿಗರೂ ಅಚ್ಚರಿಯಿಂದ ನೋಡುತ್ತಾ ನಿಲ್ಲುವುದಾಗಿಯು,
ಮಾಡಿರುವ ಮಡಕೆಯ ಮೇಲೆ ಕುಸುರಿ ಕೆತ್ತನೆ ಮಾಡಿ, ಇಲ್ಲೇ ಮಾರಾಟವನ್ನೂ ಮಾಡುವುದಾಗಿಯೂ ತಿಳಿಸಿದರು.
ಬಂಡವಾಳ ಹಾಕಿ, ಮಡಕೆ ಮಾರಾಟ ಮಾಡಿ ನಿರ್ವಹಿಸುತ್ತಿರುವ ಮಾಲೀಕರು, ತಾತನಿಗೆ ತಿಂಗಳ ಸಂಬಳ ಕೊಡುವುದಾಗಿಯೂ ತಿಳಿಸಿದರು.
ಇಷ್ಟೇ ಆಗಿದ್ದರೆ ಏನೂ ಆಗ್ತಾ ಇರ್ಲಿಲ್ಲ.
ಆದರೆ ನನ್ನೊಳಗಿರುವ ತಥಾಕಥಿತ ಕ್ರಾಂತಿಕಾರಿಯೊಬ್ಬ ಪ್ರಶ್ನೆ ಮಾಡಿದ.
" ತಾತ!! ಮಡಿಕೆ ಮಾಡುವ ಸಂಸ್ಕೃತಿ ನಿಮ್ಮ ಜೊತೆಗೇನೆ ಮುಗಿದು ಹೋಗಿ ಬಿಡತ್ತೇನೊ.
ಯಾರಾದ್ರು ಆಸಕ್ತಿ ಇರುವವರು ನಿಮ್ಮ ಹತ್ರ ಕಲಿಯೋದಕ್ಕೆ ಅಂತ ಬಂದ್ರೆ ಹೇಳಿಕೊಡಬಹುದು ಆಲ್ವಾ ...? " ಅಂದೆ.
" ನಾವು ಹೇಳಿಕೊಡ್ತಾ ಕುಂತ್ರೆ ಜಾಸ್ತಿ ಮಡಕೆ ಮಾಡೋದಕ್ಕೆ ಆಗುತ್ತಾ..? ಮಾಲೀಕರು ಬಿಡಬೇಕಲ್ಲಾ...? " ಹಾಗೆ .. ಹೀಗೆ ಎನ್ನುತ್ತಾ ತಾತಪ್ಪ ... ಶ್ರಮಿಕ ವರ್ಗದ ಪ್ರತಿನಿಧಿಯಂತೆ , ಮಾಲೀಕನ ಮೇಲೆ ಹರಿಹಾಯ್ದ.
ಇದನ್ನು ಕೇಳಿಸಿಕೊಂಡ, ಒಳಗೆ ಕುಳಿತಿದ್ದ ಮಾಲೀಕ ಹೆಂಗಸು ಬಯ್ಯುತ್ತಾ ಹೊರ ಬಂದರು.
ಇಬ್ಬರ ನಡುವೆ ಘೋರ ಮಾತಿನ ಚಕಮಕಿ ಶುರುವಾಯ್ತು. ಲಿಟರಲಿ ಬೀದಿ ಜಗಳ. ನಾನು, ಅಭಿ ಮೆತ್ತಗೆ ಅಲ್ಲಿಂದ ಜಾಗ ಖಾಲಿ ಮಾಡಿದೆವು.


"ಲೋ ಕೆ ಸಿ!! ಸುಮ್ಕೆ ಇರೋದ್ ಬಿಟ್ಟು, ಅವರಿಬ್ಬರಿಗೂ ತಂದಿಟ್ಟು ಬಿಟ್ಟ್ಯಲ್ಲೋ...?
ದೊಡ್ಡ ಸಮಾಜ ಸುಧಾರಕನ ತರ ಕಾಳಜಿ ತೋರಿಸಿ, ಡೌ ಮಾಡ್ತೀಯ ? " ಅಂದ ಅಭಿ.

" ಬಾಡಿಗೆ ಕಟ್ಟಿ, ಬಂಡವಾಳ ಹಾಕಿ ಅದನ್ನ ಮಾರಾಟ ಮಾಡೋ ಅಷ್ಟರಲ್ಲಿ ನಮಗೆ ಸಾಕು ಬೇಕಾಗಿ ಹೋಗತ್ತೆ.
ಅಂತಹದರಲ್ಲಿ ಬಂದಿರೋ ಪ್ರವಾಸಿಗರ ಮುಂದೆಲ್ಲಾ ನಮ್ಮ ಬಗ್ಗೆ ಚಾಡಿ ಹೇಳ್ತೀಯಾ ..? " ಇದು ಬಂಡವಾಳಷಾಹಿಯ ವಾದ.
ತಾತನದ್ದು ಶ್ರಮಿಕ ವರ್ಗದ ಹತಾಶೆ.
ಭಾರತ ದರ್ಶನ ವಾಗಿ ಹೋಯ್ತು.

ಅದೇ ದಿನ ಜಾನಪದ ಲೋಕದಲ್ಲಿ, ಜನಪದ ಸಂಗೀತದ ಮಿನುಗು ತಾರೆ!! ಅದ್ಭುತ ಗಾಯಕ " ಕೆ. ಯುವರಾಜ್ " ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸುಯೋಗವೇ ಸರಿ. ಸ್ಪಾಟ್ ನಲ್ಲೇ!! ಹಾಡು ಹೇಳೋದಕ್ಕೆ ಶುರು ಮಾಡಿದರು. ಕಲೆ ಜೊತೆ ಬೆಸೆದಿರುವವರೊಂದಿಗೆ ಹರಟೋದೆ ಒಂದು ಮಜಾ!!

ನನ್ನದೂ ಶಿವಮೊಗ್ಗ ಅಂತ ಕೇಳಿದ ಮೇಲೆ.
" ಅಲ್ಲೇ!! ವಿನೋಬನಗರದ ಹತ್ರ ಮನೆ ಇರೋದು. ಒಂದ್ಸಾರಿ ಮನೆ ಕಡೆ ಬಾ!! ಇದೇ ಮಲೆನಾಡಿನ ವಾತಾವರಣವನ್ನು ನನ್ನ ಮನೆ ಸುತ್ತ ನಿರ್ಮಿಸಿದ್ದೇನೆ." ಅಂದರು.
ಅವರ ವಿಶ್ವಾಸದ ನುಡಿಯಿಂದ ಖುಷಿಯಾಯ್ತು.