ಅಮ್ಮ ಒಂದಷ್ಟು ಪಿಂಗಾಣಿ ಲೋಟಗಳನ್ನು ತಂದಿದ್ದಳು. ‘ಸೋ-ಕೇಸ್ ನಲ್ಲಿ ಮೊದಲೇ ಜಾಗ ಇಲ್ಲ.
ಇನ್ನು ಈ ಸೋ ಪೀಸುಗಳು ತಂದದ್ದು ಯಾಕೆ. ? ’ ಅಂದೆ.
‘ಹೆಂಗಂತಿಯಲ್ಲೋ. ? ಇವು ಶೋ ಇಡೋದಕ್ಕಲ್ಲ, ಬಳಸೋದಕ್ಕೆ. ತಂದಿರೋದು’ ಎಂದಳು. ಅಮ್ಮನ
ಆಸೆಯಂತೆ ಪಿಂಗಾಣಿ ಲೋಟದಲ್ಲೇ ಟೀ ಸಮಾರಧಾನೆ ನಡೆಯುತ್ತಿತ್ತು. ಮೊದಮೊದಲು ತುಟಿ
ಸುಟ್ಟುಕೊಳ್ಳುತ್ತಿದ್ದುದೂ,. ಟೀ ಮುಗಿದು ಹೋದ ಮೇಲೆಯೂ, ತಳದಲ್ಲಿ ಇನ್ನೂ ಇರಬಹುದೇನೋ
ಎಂದು ಲೋಟವನ್ನು ಎತ್ತಿ ಸುರಿದುಕೊಂಡು, ಖಾಲಿ ಅಂತ ಗೊತ್ತಾದ ಮೇಲೆ ನಿರಾಶರಾಗಿ
ಕೆಳಗಿಡುತ್ತಿದ್ದುದು ನಡೆದೇ ಇತ್ತು. ಇದು ಭಾರದ ಪಿಂಗಾಣಿ ಲೋಟ ಮತ್ತು ಹಿಂದೆ ಇದ್ದ
ಹಗುರದ ಸ್ಟೀಲ್ ಲೋಟಗಳ ನಡುವಿದ್ದ inertia ಸಮಸ್ಯೆ.
ಅವಶ್ಯಕತೆ ಇರಲಿ ಬಿಡಲಿ, ಅಡುಗೆ ಮನೆಯು ತುಂಬಿ ತುಳುಕಬೇಕು ಎಂಬುದು ಅವಳ ಆಶಯ.
ಅದಕ್ಕಾಗಿ ವಿವಿಧ ರೇಡಿಯಸ್ ಗಳ ತಟ್ಟೆ , ಪಾತ್ರೆ, ಬಾಕ್ಸು , ಲೋಟ, ಸೌಟುಗಳ
ಪರ್ಮುಟೇಷನ್ನು ಕಾಂಬಿನೇಷನ್ನುಗಳು. ‘ ಇರೋರು ನಾಲಕ್ಕು ಜನಕ್ಕೆ ಇಷ್ಟೆಲಾ ಯಾಕಮ್ಮಿ. ?
’ ಅಂದರೆ ಸಾಕು ‘ ನೆಂಟ್ರು ಬಂದರೆ ಪಕ್ಕದ ಮನೆಗೆ ಹೋಗಿ ಅನ್ನೋದಕ್ಕಾಗುತ್ತೇನೊ. ? ’
ಎನ್ನುವಳು.
ಸ್ಕೂಲ್ ಡೇ ಗಳಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ, ತಟ್ಟೆ , ಟಿಫೀನು
ಕ್ಯಾರಿಯರು ಮತ್ತು ದೊಡ್ಡ ಬೇಸಿನುಗಳನ್ನು ಗೆದ್ದು ತಂದಾಗ ಖುಷಿ ಪಡುತ್ತಿದ್ದಳು.
ಅದನ್ನು ಹೇಳಿಕೊಳ್ಳುತ್ತಿದ್ದುದರಲ್ಲಿಯೂ ಯಾವುದೇ ಚೌಕಾಸಿ ಇರುತ್ತಿರಲಿಲ್ಲ. ಮನೆಗೆ
ಬರುತ್ತಿದ್ದ ಹೆಣ್ಣು ಅತಿಥಿಗಳನ್ನು, ಸೀದಾ ಅಡುಗೆ ಮನೆಗೆ ಕರೆದುಕೊಂಡು ಹೋಗಿ,
ಅಕಸ್ಮಾತ್ ಗೆದ್ದು ತಂದಿದ್ದ ಬಾಕ್ಸಿನಲ್ಲಿ ಏನಾದರು ಇದ್ದರೆ, ಅದನ್ನು ಇನ್ನೊಂದಕ್ಕೆ
ಸುರಿದು; ತೋರಿಸುತ್ತಾ ಹೇಳುವಳು ‘ ಇವು ನನ್ನ ಮಗನಿಗೆ ಪ್ರೈಜ್ ಬಂದಿರೋವು ’ ಅಂತ.
ಸ್ಟೀಲ್ ತಟ್ಟೆ, ಬೇಸಿನ್ನುಗಳ ಮುಂದೆ, ಸರ್ಟಿಫಿಕೇಟುಗಳು. ಸ್ಮರಣಿಕೆಯ ಮೊಮೆಂಟೋಗಳು ಅವಳ
ಪಾಲಿಗೆ ತೃಣಕ್ಕೆ ಸಮಾನ. ಅವನ್ನೆಲ್ಲಾ ಸುಮ್ಮನೆ ವೇಸ್ಟ್ ಆಗಿ, ಸೋ ಕೇಸಲ್ಲಿ ಧೂಳು
ವರೆಸುತ್ತಾ ಇಡಬೇಕಲ್ಲಾ. ? ಎಂಬುದು ಅವಳ ಅಂಬೋಣ.
ಒಮ್ಮೆ ಓಲೆ ಕೊಳ್ಳಲು ಜೊಯಾಲುಕಾಸ್ ಚಿನ್ನದ ಅಂಗಡಿಗೆ ಹೋಗಿದ್ದೆವು. ಅಂಗಡಿಯ ಹೆಸರು
ಉಚ್ಛಾರ ಮಾಡಲಾಗದೆ, ‘ಇದು ಎಂತ ಅಂಗಡಿಗೆ ಬಂದ್ಯೋ. ? ಹೆಸರೇ ಹೇಳಕ್ಕೆ ಬರದೆ ಇರೋದು. ’
ಅಂದಳು ಅಮ್ಮ. ಅಂಗಡಿಯ ಒಳಗೆ ಹೋಗುತ್ತಿದ್ದಂತೆ ಹಳೇ ಸಿನಿಮಾಗಳಲ್ಲಿ ವಿಲನ್ ಗಳಿಗೆ ನಿಧಿ
ಸಿಕ್ಕಾಗ ಸಂಭ್ರಮ ಪಡುತ್ತಾ ನೋಡುತ್ತಾ ನಿಲ್ಲುವರಲ್ಲಾ. ? ಅಂತಹಾ reaction ಅಮ್ಮನಿಂದ.
ಅಶ್ಟು ದೊಡ್ಡ ಚಿನ್ನದ ಭಂಡಾರಕ್ಕೆ ಮೊದಲ್ ಭೇಟಿ.
‘ಚೇತನ ಇವೆಲ್ಲಾ ನಿಜವಾಗಲು ಚಿನ್ನದ ಆಭರಣಗಳೇನೊ. ? ’ ಎಂದಳು. ‘ ಹೂ ಮಮ್ಮಿ’ ಅಂದ್ರೆ ‘
ಟಿವಿನಲ್ಲಿ ಸುಮ್ಮನೆ ಉಮಾ ಗೋಲ್ಡು ಹಾಕ್ಕೊಂಡ್ ತೋರುಸ್ತಾರೆ ಅನ್ಕೊಂಡಿದ್ದೆ. ನಿಜವಾಗಲು
ಇರುತ್ವೆ ಅಂತ ಗೊತ್ತೇ ಇರಲಿಲ್ಲ ’ ಎನ್ನುವಳು ನಗುತ್ತಾ.
ಅಮ್ಮನಿಗೆ ಬಂಗಾರದ ಮೇಲೆ ಸ್ತ್ರೀ ಸಹಜ ವ್ಯಾಮೋಹ. ನೋಡಿ ಸಂಭ್ರಮ ಪಟ್ಟು ಸುಮ್ಮನಾಗಿ
ಬಿಡುವಳು. ಅಲ್ಲಿದ್ದ ಭವ್ಯವಾದ ದೊಡ್ಡ ಆಭರಣಗಳ, ಬೆಲೆ ತಿಳಿದುಕೊಳ್ಳುವ ಕುತೂಹಲ. ಆದರೂ
ಅಷ್ಟು ದೊಡ್ಡ ಅಂಗಡಿ. ಬೆಲೆ ಕೇಳಿಬಿಟ್ಟರೆ ಕೊಂಡುಕೊಳ್ಳಲೇ ಬೇಕಾಗುತ್ತದೇನೊ ಎಂಬ
ಮುಜುಗರ ಅವಳಿಗೆ. ಆದರೂ ಕೇಳಬೇಕು ಆಂದುಕೊಂಡದ್ದನ್ನು, ಗಂಟಲೊಳಗೆ ಇಟ್ಟುಕೊಳ್ಳುವ
ಸ್ತ್ರೀ ಜಾಯಮಾನವಲ್ಲ. ಸೇಲ್ಸ್ ಮ್ಯಾನ್ ಹುಡುಗನಿಗೆ ಕೇಳಿದಳು. ಆ ಹುಡುಗ ರೇಟು
ಕೇಳಿದ್ದಕ್ಕೆ, ಆ ವಡವೆಯನ್ನೇ ತಂದು ಅವಳ ಕೈಗೆ ಕೊಟ್ಟು ಬಿಟ್ಟ.
‘ಬೇಡ ಬೇಡ ರೇಟ್ ತಿಳಿದುಕೊಳ್ಳೋಣ ಅಂತ ಅಷ್ಟೇ. ಪರ್ಚೇಸ್ ಮಾಡಲ್ಲ. ’ ಎಂದಳು. ಅದಕ್ಕವನು
‘ಅಯ್ಯೋ ನೋಡಿದ್ದನ್ನೆಲ್ಲಾ ತಗೋಬೇಕು ಅಂತೆಲ್ಲಾ ಇಲ್ಲಮ್ಮ. ಪರವಾಗಿಲ್ಲ ನೋಡಿ. ’
ಎನ್ನುತ್ತಾ ಅವಳು ಬೊಟ್ಟು ಮಾಡಿದ್ದನ್ನೆಲ್ಲಾ, ಶೋಕೇಸ್ ನಿಂದ ಹೊರ ತೆಗೆದು ತಂದು
ತೋರಿಸಿದ. ‘ಇವುನ್ನೆಲ್ಲಾ ಯಾರಾದ್ರು ಪರ್ಚೇಸ್ ಮಾಡ್ತಾರ. ?’ ಎಂಬ ಮುಗ್ಧ
ಪ್ರಶ್ನೆಯೊಂದನ್ನು ಕೇಳಿದಳು.
‘ಪರ್ಚೇಸ್ ಮಾಡದೆ, ಸುಮ್ಮನೆ ಇಲ್ಲಿ ಇಡೋದಕ್ಕಾಗುತ್ತಾ. ?’ ಎಂದ. ಕಲ್ಲುಗಳಷ್ಟೇ ಅಲ್ಲ,
ಕನ್ಯೆಯರೂ ಈ ಪಾಟಿ ಮೇಘಾ ವಡವೆಗಳನ್ನು ಕೊಳ್ಳುವರೆಂಬುದನ್ನು ಹೇಳಿದ.
‘ಚೇತನ ಒಂದೇ ಒಂದು ಉಂಗುರ ತಗಳೋ ನಿನಗೆ. ಭಾರ ಇರೋದು ಬೇಡ. ತೆಳ್ಳುದೆ ತಗೋಳಪ್ಪ. ಗಂಡು ಮಕ್ಕಳ ಮೈ ಮೇಲೆ ಸ್ವಲ್ಪನಾದರು ಬೆಳ್ಳಿನೋ, ಚಿನ್ನಾನೋ ಇರ್ಬೇಕು. ಒಳ್ಳೇದಾಗುತ್ತೆ. ’ -
ಅಂತ ಅಂಗಡಿಯಲ್ಲಿ ತನ್ನ ಲಾಜಿಕ್ ಲೆಸ್ ಗೋಗರೆತ ಶುರು ಮಾಡಿದಳು. ‘ ನಿಲ್ಲದು ಮೈಮೇಲೆ ಉಡುದಾರ ಜನಿವಾರ, ಇನ್ನು ನನಗೇಕೆ. ? ಬೆಳ್ಳಿ ಬಂಗಾರ ’ ಅಂತ ನನ್ನ ಹಳೇ ಪದ್ಯ ಓದಿದೆ. ಸುಮ್ಮನಾದಳು.
ಮಮ್ಮಿ ಕೆಲ ದಿನಗಳು ಬಂಗಾರದ ಹ್ಯಾಂಗ್ ಓವರ್ ನಿಂದ ಹೊರ ಬಂದಿರಲಿಲ್ಲ.
‘ಪ್ರಪಂಚ ಪ್ರಳಯ ಆಗೋದು ಪಕ್ಕಾ ಆದ್ರೆ, ಹೇಳು. ಮನೆ ತೋಟ ಮಾರಾಕಿಬಿಟ್ಟು , ಆ ಹುಡುಗ ತೋರಿಸಿದ್ದನಲ್ಲ, ಅದರಲ್ಲಿ ಎಷ್ಟಾಗುತ್ತೋ ಅಶ್ಟು ವಡವೆಗಳನ್ನ ಪರ್ಚೇಸ್ ಮಾಡಿ ತಂದು ಬಿಡೋಣ. ’ ಎಂದು ತನ್ನ ಮಹದಾಸೆಯನ್ನು ಹೇಳುವಳು.
nakku nakku sakayitu :) chennagide..
ReplyDeletethank you :)
ReplyDelete