ನನ್ನ ಊಹೆಗಳು ಮತ್ತು ನನ್ನ ಲೋಕ

**ಮಳೆ ಹೇಗೆ ಬರುತ್ತೆ. ?** ಮೇಲೆ, ಆಕಾಶದಲ್ಲಿ ಗಟ್ಟಿಯಾಗಿ ತೇಲುತ್ತಿರುವ ಮಂಜುಗಡ್ಡೆಯಂತಹ ಮೋಡಗಳು, ಒಂದಕ್ಕೊಂದು ಡಿಕ್ಕಿ ಹೊಡೆದು, ಪುಡಿ ಪುಡಿಯಾಗಿ ಕೆಳಗೆ ಉದುರುತ್ತವೆ. ನೆಲ ಮುಟ್ಟೋ ಅಷ್ಟರಲ್ಲಿ, ಮಂಜುಗಡ್ಡೆಯು ಕರಗಿ ಮಳೆ ಹನಿಗಳಾಗುತ್ತವೆ. 'ಆವಿಕಲ್ಲು ಮಳೆ' ಬಿದ್ದು, ನೆಲದ ಮೇಲೆ ಪುಟ್ಟ ಪುಟ್ಟ ಮಂಜುಗಡ್ಡೆಗಳನ್ನು ಕಂಡಾಗ, 'ಹೋ ಇವುಗಳು ಕೆಳಗೆ ಬಂದರೂ ಇನ್ನೂ ಕರಗಲೇ ಇಲ್ಲವಾ.' ಅನ್ನಿಸುವುದು. ಇದು ಮಳೆಗೆ, ನಾನು Introduce ಆದಂತಹ ರೀತಿ. ಈಗಲೂ ಕೂಡ ಹಿಲ್ ಸ್ಟೇಷನ್ ಗಳಲ್ಲಿ ಮೋಡಗಳ ನಡುವೆ ಹಾದು ಹೋಗುವಾಗ, ಇದು ಕೆಳಗಿನೂರಿನ ಮೇಲೆ 'ಮಳೆ ಹನಿ' ಆಗಿ ಹೆಂಗ್ ಬೀಳತ್ತೆ ಅನ್ನೋ ಕೌತುಕ.. ಹಾಗೆ ಉಳಿದುಬಿಟ್ಟಿದೆ. 

---

ನಮ್ಮ ಸ್ಕೂಲ್ ಟೀಚರ್ ಗೆ, ತಿರುಗುವ ಗ್ಲೋಬ್ ತೋರಿಸಿ. ' ಇಲ್ಲಿ ಕೆಳಗಡೆ ಇದಾರಲ್ಲ. ಅವರೆಲ್ಲ ಉದುರಿ ಹೋಗಲ್ವಾ. ? ' ಅಂತ ಹುಡುಗರೆಲ್ಲಾ ಪ್ರಶ್ನೆ ಮಾಡಿದ್ದೆವು. ಅದಕ್ಕವರು 'ಹಂಗಾದ್ರೆ ಸಮುದ್ರದ ನೀರು ಕೂಡ ಸುರಿದು ಚೆಲ್ಲಿ ಹೋಗಬೇಕು ಆಲ್ವಾ. ?' ಅಂತ ತಿರುಗಿ ಕೇಳಿದರು. ಒಂದು ಕ್ಷಣ ' ಹೌದಲ್ವಾ. ?' ಅನ್ನಿಸಿಬಿಡ್ತು. ಗುರುತ್ವಾಕರ್ಷಣೆ ಮತ್ತು ವಾತಾವರಣದ ಕಾನ್ಸೆಪ್ಟು, ದೊಡ್ಡದಾಗಿ ಎಷ್ಟೆಲ್ಲಾ ವಿವರಿಸಿದರೂ ಕೂಡ, ಅದು ತಲೆಗೆ ಹೋಗೇ ಇರಲಿಲ್ಲ. ಬುದ್ಧಿವಂತರೆಲ್ಲಾ, ಹೇಳ್ತಾ ಇದ್ದಾರೆ ಅಂದ ಮೇಲೆ ಅದು ಹಂಗೆ ಇರ್ಬೇಕು ಅನಿಸಿತೆ ಹೊರತು, ' ಅದೆಲ್ಲಾ ಹೆಂಗೆ ಸಾಧ್ಯ. ? ' ಅನ್ನೋ ಪ್ರಶ್ನೆಗಳು ಹಂಗ್ ಹಂಗೆ ಉಳಿದುಕೊಂಡು ಬಿಟ್ಟಿದ್ದವು. ಅಂದ್ರೆ ಉಳಿದುಕೊಂಡು ಬಿಟ್ಟಿವೆ. 

---

ಅಮಾವಾಸ್ಯೆ  ಮತ್ತು ಪೌರ್ಣಿಮೆಗಳು, ಚಂದ್ರ ಸಣ್ಣಗಾಗಿ ದೊಡ್ಡದಾಗೋದು, ಇವೆಲ್ಲವು ವಿಚಿತ್ರ ಅನ್ನಿಸುವುದು. ಗಣಪತಿಯ ಶಾಪವೊಂದೆ ಲಾಜಿಕಲ್ ಆಗಿ ಆ ದಿನಗಳಲ್ಲಿ ಚಂದ್ರನ ದ್ವಂದ್ವ ನೀತಿಯನ್ನು ನನಗೆ ಅರ್ಥೈಸಿದ್ದು. ಅದಕ್ಕಿಂತ ಹುಚ್ಚು ಅಂದರೆ, ಊರಿಗೆ ಒಬ್ಬೊಬ್ಬ ಚಂದ್ರ ಇರ್ತಾನೆ ಅಂತ ಬಗೆದದ್ದು. ಒಮ್ಮೆ ಮದುವೆ ದಿಬ್ಬಣದ ಜೊತೆಗೆ, ಲೈಲಾಂಡ್ ಲಾರಿಯಲ್ಲಿ ದೂರದ ಊರಿಗೆ ಹೋದಾಗ, ಉದ್ದಕ್ಕೂ ಜೊತೆಯಲ್ಲೇ ಬಂದ ಚಂದ್ರನನ್ನು ಮಲಗಿಕೊಂಡು ನೋಡಿದೆ. ಆಗ 'ಹೋ ಇವನು ಒಬ್ಬನೇನ ಇರೋದು' ಅಂತ ಪಕ್ಕ ಮಾಡಿಕೊಂಡದ್ದು. ಚಂದ್ರನಿಗೆ ಸ್ವಂತ ಬೆಳಕಿಲ್ಲ. ಅದು ಬೆಳಗುವುದು ಸೂರ್ಯನ ಬೆಳಕಿನ ಪ್ರತಿಬಿಂಬದಿಂದಾಗಿ. ಅಂತೆಲ್ಲಾ ದೊಡ್ಡದಾಗಿ ಹೇಳುವಾಗ, ಅದನ್ನ ಹಂಗೆ ಉರು ಹೊಡೆದು ಒಪ್ಪಿಸಿದ್ದೆನಾದರೂ, ಅದೇನದು ಸ್ವಂತ ಬೆಳಕು ಮತ್ತು ಬಾಡಿಗೆ ಬೆಳಕು ಅನ್ನೋ confusion ಮಾತ್ರ ಹಂಗೇ ಉಳಿದುಹೋಯಿತು. ಈ ಚಂದ್ರ ಏಳಿಸಿದ ಪ್ರಶ್ನೆಗಳು, ಕಂಡುಕೊಂಡ ಉತ್ತರಗಳು, ಮೊದಲ assumption ಗಳು ಮತ್ತು ಆ ಸಣ್ಣ ಸಣ್ಣ ಕೌತುಕಗಳು. ಅಬ್ಬಾ. ಅಬ್ಬಬ್ಬ

---

ನಮ್ಮೂರಿಂದ ಸೈಕಲ್ ಹೊಡ್ಕೊಂಡು ಪಕ್ಕದ ಊರಿನ ಸ್ಕೂಲಿಗೆ ಹೋಗಬೇಕಿತ್ತು. ಹೋಗ್ತಾ ಅಪ್ ಇರ್ತಿತ್ತು. ಬರ್ತಾ ಡೌನ್ ಇರ್ತಿತ್ತು. ಹೋಗ್ತಾನು ಡೌನ್ ಇರ್ಬೇಕು ಮತ್ತು ಬರ್ತಾನು ಡೌನ್ ಇರ್ಬೇಕು. ಆಗ ಸೈಕಲ್ ಓಡಿಸೋದಕ್ಕೆ ಆರಾಮು. ' ಅಂತಹದ್ದೊಂದು ಕಳ್ಳ ದಾರಿ ಕಂಡು ಹಿಡಿಯಬೇಕು' ಆನ್ನೋದು ನನ್ನ ಬಹುದಿನಗಳ ಕನಸಾಗಿತ್ತು. ಆ ಪ್ರಯತ್ನವನ್ನು ಬಿಟ್ಟಿದ್ದು, ಎನರ್ಜಿಯದ್ದು 'ಯುನಿವರ್ಸಲ್ ಲಾ' ಕೇಳಿದ ಮೇಲೆ. ಈಗಲೂ ಹೊಸ ಹೊಸ ಕಲ್ಪನೆಗಳು, ತಾವು ಮುಂದುವರೆಯುವುದಕ್ಕಿಂತ ಮೊದಲು 'ಲಾ ಆಫ್ ಕನ್ಸರ್ವೇಷನ್ ಆಫ್ ಎನರ್ಜಿ' ಯನ್ನ ಒಮ್ಮೆ ಚುಂಬಿಸಿ, ವ್ಯಾಲಿಡೇಟ್ ಆಗಿ ಹೊರಡುತ್ತವೆ. 

---

ಇನ್ನು ಲೆಕ್ಕಕ್ಕೆ introduce ಆದ ಬಗೆ. ಶೂನ್ಯದ ಕಲ್ಪನೆ ಬೇಗ ಅರ್ಥ ಆಯಿತಾದರೂ, ನೆಗಟಿವ್ ಸಂಖ್ಯೆಗಳ ಕಲ್ಪನೆ ಬಹಳ ದಿನಗಳ ವರೆಗೂ ಕಾಡಿಸಿತು. ಕ್ಲಾಸ್ ರೂಮಲ್ಲಿ ಒಂಬತ್ತು ಜನ ಇದ್ದಾರೆ. ಅದರಲ್ಲಿ ಎಂಟು ಜನ ಎದ್ದು ಹೋದರೆ ಉಳಿದದ್ದು ಒಬ್ಬ. ಅವನೂ ಎದ್ದು ಹೋದರೆ ಉಳಿದದ್ದು 'ಜೀರೋ' ಅಂದರೆ ಶೂನ್ಯ, ಅಂದರೆ ರೂಮು ಖಾಲಿ. ಇದೇ ರೀತಿ ಇಲ್ಲಿ 'ಮೈನಸ್ ಒಂದು'.. 'ಮೈನಸ್ ಎರಡು' ಹೆಂಗ್ ತೋರಿಸೋದು. ' ಈ ನೆಗಟೀವ್ ಸಂಖ್ಯೆಗಳನ್ನ ಹೆಂಗಪ್ಪಾ ಕಲ್ಪಿಸಿಕೊಳ್ಳೋದು' ಅಂತ ಪರದಾಡಿಬಿಟ್ಟೆ. ಹೆಂಗೋ ಪ್ರಾಯೋಗಿಕ ಸಮಸ್ಯೆಗಳ ಜೊತೆಯಲ್ಲಿದ್ದಾಗ ' ನೆಗಟಿವ್' ಸಂಖ್ಯೆಗಳು ಅರ್ಥವಾಗಿ. , ಬಂದುವಾಗಿ ಜೀವನ ಸುಗಮವಾಯಿತಾದರೂ. ಮುಂದೆ ತಲೆ ಕೆಟ್ಟು ಹೋದದ್ದು ಪಿ ಯು ಸಿ ಯಲ್ಲಿ. i (ರೂಟ್ ಆಫ್ ಮೈನಸ್ ಒನ್) ಎಂಬ ಇಮ್ಯಾಜಿನರಿ ಸಂಖ್ಯೆ ಬಂದಾಗ. ಮೊದಲನೇ ಸಾರಿ ರಸಾಯನ ಶಾಸ್ತ್ರದ, ಪರಮಾಣು ಸೂತ್ರ (molecular formula) ಗಳನ್ನು ಓದಿದಾಗ ಸಖತ್ ರೋಮಾಂಚನ. ' ಪ್ರಪಂಚದಲ್ಲಿರೋ ಯಾವುದೇ ವಸ್ತುವನ್ನು ಈ ತರಹದ್ದೊಂದು. ಅಣು, ಪರಮಾಣು ಮತ್ತು ಪರಮಾಣುಸೂತ್ರಗಳಿಂದ ಬಂಧಿಸಬಹುದಾದರೆ. , ಚಿನ್ನ ಬೆಳ್ಳಿ ವಜ್ರಗಳನ್ನು ಪರಮಾಣುಸೂತ್ರದಂತೆ ಜೋಡಿಸಿ ತಯಾರಿಸಬಹುದು. ಹೀಗೆ ಯಾವುದೇ ವಸ್ತುವನ್ನೂ ಕೂಡ ಕೆಮಿಸ್ಟ್ರಿ ಲ್ಯಾಬ್ ಒಳಗೆ ಟಕ್ ಅಂತ ರೂಪಿಸಿ ಬಿಡಬಹುದು' ಅಂತನಿಸಿದ್ದು. ಆದರೆ ' ಬ್ಲಾಕ್ ಬೋರ್ಡಿನ ಮೇಲೆ ಬರೆದ ಕೆಮಿಸ್ಟ್ರಿಯ ಪ್ಲಸ್. ಪ್ಲಸ್. ಈಕ್ವಲ್ ಗಳು, ವಾಸ್ತವದಲ್ಲಿ ಅಷ್ಟೇ ಸಿಂಪಲ್ ಅಲ್ಲ,' ಅಂತ ಅರ್ಥ ಆದದ್ದು, ನಿರಾಸೆ ಮೂಡಿಸಿತು. ಇದಕ್ಕಿಂತ extreme ಅಂದರೆ, ' ಪಿರಿಯಾಡಿಕ್ ಟೇಬಲ್ ನಲ್ಲಿರುವ ಬೇಸಿಕ್ ಆಟಮ್ ಗಳಾಚೆ, ಇನ್ನೂ ಆಟಮ್ ಗಳು ಇರಬಹುದೇನೋ. ಅಕಸ್ಮಾತ್ ಅವುಗಳಲ್ಲಿ ಯಾವುದಾದರು ನನ್ನ ಕೈಗೆ ಸಿಕ್ಕರೆ. ಅದರ ಹೆಸರು 'ಚೇತನಿಯಮ್' ಅಂತ ಇಡಬಹುದು' ಎಂದು ಕನಸು ಕಾಣುತ್ತಿದ್ದದ್ದು. 

---

ಇಪ್ಪತ್ತನಾಲಕ್ಕು ತಾಸು ದುಡ್ಡು ಕೊಡುವ 'ATM' ಮಷೀನನ್ನು ನೋಡಿದಾಗ, ' ಬ್ಯಾಂಕುಗಳು ಮತ್ತು ATM ಸೆಂಟರ್ ನಡುವೆ ಬೆಲ್ಟು ಇರತ್ತೆ. ನಾವು ದುಡ್ಡು ಕೇಳಿದಾಗ ATM ಬ್ಯಾಂಕಿನ ಲಾಕರ್ ಒಳಗೆ ಹೋಗಿ ದುಡ್ಡು ಹೊತ್ತು ತರುತ್ತದೆ' ಅಂದುಕೊಳ್ಳುತ್ತಿದ್ದೆ. ತಿರುಪತಿಯಲ್ಲಿ, ಹುಂಡಿಯ ಹಣ ಬೆಲ್ಟಿನ ಮೇಲೆ ಹರಿದು ಹೋಗುವುದನ್ನು ನೋಡಿದ್ದು, ಈ assumption ಗೆ ಪುಷ್ಟಿ ನೀಡಿತ್ತು. ಸೋ ಹಂಗೆ ಇಲ್ಲೂ ಕೂಡ, ' ದುಡ್ಡು ಬ್ಯಾಂಕಿನಿಂದ, ಬೆಲ್ಟಿನ ಮೇಲೆ ಬಂದು ATM ಗೆ ಬೀಳುತ್ತದೆ' ಅಂತಲೇ ತಿಳಿದಿದ್ದೆ. ATM ಮಷೀನುಗಳಿಗೆ, ದುಡ್ಡು ತುಂಬುವುದನ್ನೊಮ್ಮೆ ನೋಡಿದಾಗ, ' ಅಯ್ಯೋ ಇಷ್ಟೇನಾ' ಅನ್ನಿಸಿತು. ' ಛೇ ಈ ಆಂಗಲ್ ನಲ್ಲಿ ಯಾಕೆ ಯೋಚನೆನೆ ಮಾಡಲಿಲ್ಲ. ?' ಅನ್ನೋ ಪ್ರಶ್ನೆ ಬಂತಾದರೂ. ಬಹುಷಃ ದುಡ್ಡನ್ನು ಕಂಡು ಭಯ ಪಡುತ್ತಿದ್ದುದರಿಂದ, ಈ ರೀತಿ ಅನಾಮತ್ತಾಗಿ ದುಡ್ಡು ತುಂಬಿ ಹೋಗುವುದನ್ನು ಕಲ್ಪಿಸಿಕೊಳ್ಳಲಾಗಿರಲಿಲ್ಲ. 

---

ಇನ್ನು ಹುಟ್ಟು ಸಾವು ಕನಸು ಆತ್ಮ ಗಳೆಂಬ ಕೀ ವರ್ಡ್ ಗಳನ್ನು, ತಲೆಯೆಂಬ ಗೂಗಲ್ ಒಳಗೆ ಹಾಕಿ ಸರ್ಚ್ ಮಾಡಿದ್ದೇ ಬಂತು. ಉತ್ತರ ಮಾತ್ರ ಇಲ್ಲ. ಜೀವನದ ಒಂದೊಂದು ಘಟನೆಗಳು, ಇವುಗಳನ್ನು ಅರ್ಥ ಮಾಡಿಸುವ ಬದಲು, ಇನ್ನ ಕಾಂಪ್ಲಿಕೇಟ್ ಮಾಡುತ್ತಲೇ ಹೋಗುತ್ತವೆ. ಇವುಗಳಿಗೆ ಸಂಬಂಧಪಟ್ಟ ಸಾಹಿತ್ಯವನ್ನು ಜಾಸ್ತಿ ಓದಿದರೆ ನಮ್ಮ ಸ್ವಂತ ಕಲ್ಪನೆಗಳು, ಅವರಿವರ ದಾರಿ ಹಿಡಿದು ಬಿಡುತ್ತದೆ ಅನ್ನೋ ಭಯ. ಅದರಲ್ಲೂ ಈ ಕನಸಿನ ಬಗ್ಗೆ ಓಶೋ ಒಂದು ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. 

' ನೀವು ಈಗ ಮಲಗಿದ್ದೀರಿ. ನಿಮ್ಮ ಪಕ್ಕದಲ್ಲಿ ಹೆಂಡತಿನು ಮಲಗಿದ್ದಾಳೆ. ಆದರೆ ನೀವು ಇಬ್ಬರೂ ಸತ್ಯ ಅನ್ನೋದಕ್ಕೆ ಏನು ಗ್ಯಾರಂಟಿ. ? ನೀವು ಯಾರದ್ದೋ ಕನಸಿನಲ್ಲಿ ಹೀಗೆ ಮಲಗಿರಬಹುದು. ಬಹುಷಃ ನಿಮ್ಮ ಸಾವಿನ ಜೊತೆಗೆ, ಈಗಿನ ಈ ಕನಸು ಮುಗಿದು, ನಿಜವಾಗಲೂ ಎಚ್ಚರವಾಗಬಹುದು. ' ಇದನ್ನು ಓದಿ ಫುಲ್ ಗಾಬರಿ ಆಗಿ ಬಿಟ್ಟಿತ್ತು. 'INCEPTION ' ಅನ್ನೋ ಇಂಗ್ಲೀಷ್ ಸಿನಿಮಾ ನೋಡಿದಾಗ ಓಶೋನ ಈ ಮಾತುಗಳು ತಿರುಗ ನೆನಪಾಗಿತ್ತು. 

---

ನಮ್ಮ ಅರಿವು ಯಾವುದಾದರೊಂದು ಹೊಸ ವಿಷಯದ ಸಂಪರ್ಕಕ್ಕೆ ಬರುತ್ತಿದ್ದಂತೆ, ಆ ವಿಷಯದ ನಿಗೂಢತೆ ಮತ್ತು ಅರ್ಥ ವಿಶಾಲತೆಯನ್ನು ಕೇಳಿ ನೋಡಿ ಅಥವಾ ಅನುಭವಿಸಿ ತಿಳಿದುಕೊಳ್ಳುವುದಕ್ಕಿಂತ ಸ್ವಲ್ಪ ಮೊದಲು.. ನಮ್ಮ ತಲೆಯಲ್ಲೊಂದು, ನಮ್ಮದೇ ಊಹೆಯ picture ಮೂಡಿರುತ್ತದೆ. ಬಹುಷಃ ಆ picture ವಾಸ್ತವ ಸತ್ಯಕ್ಕೆ ಎಷ್ಟು ಹತ್ತಿರವಾಗಿರುತ್ತದೆ ಎನ್ನುವುದು. ನಮ್ಮ ಈ ಹಿಂದಿನ ಅನುಭವ ಮತ್ತು ಜೀವನವನ್ನು ನಾವು ನೋಡುವ ರೀತಿಯ ಮೇಲೆ ನಿಂತಿರುತ್ತದೆ. 

> ನಾವೀಗ ಪರಿಚಿತಗೊಳ್ಳಲು ಹೊರಡುತ್ತಿರುವ ಹೊಸ ವಿಷಯವನ್ನು, ಕೇಳಿ ತಿಳಿದುಕೊಳ್ಳುವ ಮೊದಲೇ, ನಾವಂದುಕೊಳ್ಳುವುದಿದೆಯಲ್ಲಾ, ಅದು ನಮ್ಮ ಪೆದ್ದುತನದ ಜೊತೆಗೆ.. ನಾವು ಸದಾ ನಡೆಸುವ ತಿಕ್ಕಾಟ. 

Comments

Post a Comment