ಮೈನಾ ಕನ್ನಡ ಸಿನಿಮಾದ ಮೊದಲಾರ್ಧದ ನಿರೂಪಣೆ!! - ಇದು ರಿವೀವ್ ಅಲ್ಲ
ಹೆಸರು ಮೈನಾ,  ಪ್ರತಿ ಸಾರಿ ಮೈನಾ ಅಂತ ಹೆಸರಿಡಿದು ಕರೆದಾಗಲೂ ಅದೇನೋ ಖುಷಿ. ಪ್ರಪಂಚಕ್ಕೆ ಕೋಗಿಲೆಯು ಕೂಗೋದು ಮಾತ್ರ ಗೊತ್ತು. ಮೈನಾ ಶಿಳ್ಳೆ ಹೊಡೆಯತ್ತೆ ಅನ್ನೋದು, ತುಂಬಾ ಜನಕ್ಕೆ ಗೊತ್ತೇ ಇಲ್ಲ. ಹಂಗೇನೆ ನನ್ನ ಮೈನಾ ಕೂಡ. ಅವಳಿಗೆ ಖುಷಿ ಆದಾಗ ಪಕ್ಕದಲ್ಲಿದ್ದರೆ, ತೋಳನ್ನ ಹಿಂಡುವಳು, ಕಿವಿಯಲ್ಲಿ ಊದುವಳು. ನನಗದು ಇಷ್ಟ. ನನ್ನ ಮೈನಾಳನ್ನು ಮೊದಲನೇ ಸಾರಿ ನೋಡಿದ್ದು ರೈಲಲ್ಲಿ. ಗತಕಾಲದಿಂದಲೂ ಈ ರೈಲುಗಳಿಗೊಂದು ರೊಮ್ಯಾಂಟಿಕ್ ಟಚ್ ಇದೆ ಅನ್ಸತ್ತೆ. ಕಿಟಕಿ ಆಚೆ ಆಬ್ಬೋ ಅನ್ನೋ ಹಂಗೆ, ಮಳೆ ಸುರೀತ ಇತ್ತು. ನನ್ನ ಮೈನಾ ಕಿಟಕಿಯ ಕಂಬಿ ಹಿಡಿದುಕೊಂಡು, ಆಚೆ ನೋಡ್ತಾ ಇದ್ದಳು. ಗಾಲಿ ಉರುಳಿಸಿಕೊಂಡು, ಅವಳಹತ್ತಿರ ಹೋದಾಗಲೇ, ಯಾವುದೋ ಅಯಸ್ಕಾಂತದ ಸರಹದ್ದಿನೊಳಗೆ ಹೋದಂತ ಅನುಭವ. ' ಮೇಡಮ್ ' ಅಂತ ಎರಡು ಸಾರಿ ಕೂಗಿದೆ. ಕೇಳಿಸಲಿಲ್ಲ. ಇದಕ್ಕೆ ಮುಂಚೆ ಕೂಡ, ತುಂಬಾ ಜನ ಕೂಗಿದರೂ. ಕೇಳಿಸದಂತೆ, ಹೊರಗೆಲ್ಲೋ ನೋಡುತ್ತಾ ಯಾರ ಜೊತೆಗೋ ಮಾತನಾಡುತ್ತಾ, ನನ್ನನು ನಿರ್ಲಕ್ಷಿಸಿದರು. ಆದರೆ ನನ್ನ ಮೈನಾ ಹಾಗಲ್ಲ. ಅವಳಿಗೆ ನಿಜವಾಗಲೂ ಕೇಳಿಸಿರಲಿಲ್ಲ. ತಟ್ಟೆಯನ್ನ ಜೋರಾಗಿ ಅಲ್ಲಾಡಿಸಿ, ಸದ್ದು ಮಾಡಿದಾಗಲೇ ಎಚ್ಚರ ಆಗಿದ್ದು. ತಿರುಗಿದಳು, ಅಷ್ಟೇ.

ಇಲ್ಲೊಂದು ಹೃದಯ ಬಡಿದುಕೊಳ್ಳೋದನ್ನ ನಿಲ್ಲಿಸಿತು. ಉಸಿರು ಕಟ್ಟಿತು. ಮಾತು ಬರಲೇ ಇಲ್ಲ. ಒಮ್ಮೆ ಜೋರಾಗಿ ನಿಟ್ಟುಸಿರು ಬಿಟ್ಟೆ. ನಿಂತಿದ್ದ ಹೃದಯ 'ದಡಬಡ' ಅಂತ, ಪುನಃಜೋರ್ಬಡಿದುಕೊಳ್ಳೋಕ್ಕೆ ಶುರು ಮಾಡ್ತು. ಆ ಮುಖ ನೋಡುದ್ರೆ ಯಾರಿಗಾದರೂ ಭಿಕ್ಷೆ ಬೇಡುವುದಕ್ಕೆ ಮನಸ್ಸಾಗುತ್ತ. ? ತಟ್ಟೆ ತುಂಬಾ ದಬದಬ ಕಾಯಿನ್ ಗಳು ಬಿದ್ದು, ಝಣಝಣ ಅಂತ ಕುಣಿದಾಡಿದಂತೆ. ಸ್ವಲ್ಪ ಮುಂಚೆ ಅಷ್ಟು ಖುಷಿಯಲ್ಲಿದ್ದ, ಆ ಅವಳಮುಖದಲ್ಲಿ ಸಂತಾಪದ ಗೆರೆಗಳು. 

ಮಂಡಿಯ ಮೇಲಿದ್ದ ಕಾಲುಗಳನ್ನೊಮ್ಮೆ ನೋಡಿದಳು. ಅವಳ ಕಣ್ಣು ಅನುಕಂಪದಿಂದ ತುಂಬಿತು. ಪಾಪ ಆ ದಿನ ಅವಳನ್ನು ಅಷ್ಟು ಮುಜುಗರಕ್ಕೆ ಈಡು ಮಾಡಬಾರದಿತ್ತು. ಬಯಾಟ್ ಹೊಡೆದಿದ್ದ ನನ್ನ ಡೈಲಾಗ್ ಪ್ರಾರಂಭಿಸಿದೆ. 

' ಮೇಡಮ್ ಎರಡೂ ಕಾಲಿಲ್ಲ. ಪ್ಲೀಸ್ ಮೇಡಮ್. ದಾನ ಕೊಡಿ ' ಅಂದೆ. ತನ್ನ ಬ್ಯಾಗಿನಲ್ಲಿ ದುಡ್ಡಿಗಾಗಿ ಹುಡುಕಿ, ನೂರು ರೂಪಾಯಿ ನೋಟು ತೆಗೆದಳು. ಅದನ್ನು ನನ್ನ ತಟ್ಟೆಯೊಳಗೆ ಹಾಕುತ್ತಾ. ' ನೋಡು ಇದು ನಾನು ತುಂಬಾ ಕಷ್ಟ ಪಟ್ಟು ದುಡಿದಿರುವ ದುಡ್ಡು. ದಯವಿಟ್ಟು, ಕೆಟ್ಟ ಕೆಲಸಗಳಿಗೆ ಬಳಸಬೇಡ. ಸಾಧ್ಯ ಆದರೆ ಈ ರೀತಿ ಭಿಕ್ಷೆ ಬೇಡೋದನ್ನನಿಲ್ಲಿಸು. ದೇವರು, ಕಾಲು ಕೊಡದೆ ಇರಬಹುದು. ಆದರೆ ಛಲ ಅನ್ನೋದೊಂದು ಕೊಟ್ಟಿರ್ತಾನೆ. ಅದಿದ್ರೆ, ಗೌರವಯುತವಾಗಿ ಬದುಕೋದಕ್ಕೆ ಯಾವುದಾದರು ಒಂದು ದಾರಿ, ಖಂಡಿತ ಕಾಣತ್ತೆ. ' ಅಂದಳು. 

ಅವಳು ಹೇಳಿದ ಮಾತುಗಳು, ಆ ಕ್ಷಣದಲ್ಲಿ ಕೇಳಿಸಿತ್ತು ಮಾತ್ರ. ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗಿರಲಿಲ್ಲ. ಯಾಕಂದ್ರೆ ದುಂಡಾದಮುಖಕ್ಕೆ ಒಪ್ಪುವಂತಿದ್ದ, ಕಪ್ಪು ಬಣ್ಣದ ಚಿಕ್ಕ ಬೊಟ್ಟು, ನನ್ನನ್ನು ಅನಂತತೆಗೆ ಹೊತ್ತು ಹೋಗಿತ್ತು. ಇಷ್ಟು ಹೇಳಿದವಳು ಮುಖ ತಿರುಗಿಸಿದಳು. ತಟ್ಟೆಯಲ್ಲಿದ್ದ ನೂರು ರೂಪಾಯಿ ನೋಟನ್ನು ಕೈಲಿ ಎತ್ತಿ ಹಿಡಿದು ಶಪಥ ಮಾಡುವವನಂತೆ ಹೇಳಿದೆ. 

' ಇದುವರೆಗೂ ಇಷ್ಟು ಆತ್ಮೀಯತೆಯಿಂದ ಪ್ರೀತಿಯಿಂದ, ನನ್ನ ಹತ್ರ ಯಾರೂ ಈ ರೀತಿ ಹೇಳಿರಲಿಲ್ಲ. ಈ ದಿನ ನನ್ನ ಜೀವನದಲ್ಲಿ ಒಂದು ಪಾಠ ಕಲಿತೆ. ನಾನು ದುಡಿದು ತೋರಿಸುತ್ತೇನೆ. ಥ್ಯಾಂಕ್ ಯು ಮೇಡಮ್. ನೀವು ನನ್ನ ಕಣ್ಣು ತೆರೆಸಿದಿರಿ. '  ಸ್ವಲ್ಪ ಅಲ್ಲಾ ತುಂಬಾನೆ ಟೂ ಮಚ್ ಅನಿಸಿದರೂ.., ಹೇಳಬೇಕೆನಿಸಿತ್ತು. ಹೇಳಿದೆ.  ಆಕೆ ಸ್ವಲ್ಪವೂ ವಿಚಲಿತಗೊಳ್ಳದೆ ಹೇಳಿದಳು. 

' ನಿಜವಾಗಲೂ ನೀ ಹೇಳಿದಂತೆ ನಡೆದು ಕೊಂಡದ್ದೆ ಆದರೆ, ನಿಮ್ಮನ್ನ ನೋಡಿ ಖುಷಿ ಪಡುವವರ ಸಾಲಿನಲ್ಲಿ ನಾನು ಮೊದಲನೆಯವಳಾಗಿರ್ತೇನೆ. ' ಆ ಮುಖದ ಮೇಲೊಂದು ನಗು ಇತ್ತು ಮತ್ತು ಅಷ್ಟು ಸಾಕಿತ್ತು. 

ಗಾಲಿ ಉರುಳಿಸಿಕೊಂಡು ಹಾಗೇ ಮುಂದಕ್ಕೆ ಹೋದೆ. ಭಿಕ್ಷೆ ಕೇಳಲಿಲ್ಲ. ಸ್ವಲ್ಪ ಮುಂದೆ ಹೋದ ಮೇಲೆ ತಿರುಗಿ ನೋಡಿದೆ. ಮೈನಾ ಕೂತಲ್ಲಿಂದಲೇ ಸೀಟಿನಿಂದ ಬಾಗಿ, ನನ್ನನ್ನು ನೋಡುತ್ತಿದ್ದಳು. ಅವಳ ಮುಖ ಪ್ರಸನ್ನತೆಯಿಂದ ಕೂಡಿತ್ತು. ಮುಗುಳ್ನಕ್ಕೆ ಅವಳೂ ನಕ್ಕಳು.

---

ಆ ದಿನಭಿಕ್ಷೆ ಬೇಡಿದ ಮೊತ್ತ ನೂರು ರೂಪಾಯಿಯ ಹೊರತಾಗಿ ನಾಲ್ಕು ನೂರಾ ನಲವತ್ತ ಎರಡು ರೂಪಾಯಿ. ಮೈನಾ ಕೊಟ್ಟಿದ್ದ ನೂರು ರೂಪಾಯಿಯನ್ನೂ ಸೇರಿಸಿದ್ದೇ ಆದಲ್ಲಿ ಐದು ನೂರರ ಗಡಿ ಮುಟ್ಟಿ, ಗೆದ್ದು ಬಿಡುತ್ತಿದ್ದೆ. ಆದರೆ ಮೈನಾ ಕೊಟ್ಟ ಹಣ, ಕೇವಲ ಹಣದಂತೆ ಕಾಣಿಸಲಿಲ್ಲ. 

ಮೂರು ದಿನಗಳ ಔಟಿಂಗ್ ಗಾಗಿ ' ದೂದ್ ಸಾಗರ್ ' ಜಲಪಾತ ನೋಡಲು ಬಂದಿದ್ದ ಗೆಳೆಯರು, ಮಧ್ಯದಲ್ಲಿ ನನಗೆ ಕಾಲು ಇಲ್ಲದ ಭಿಕ್ಷುಕನ ವೇಷ ಹಾಕಿಸಿ ಒಂದು ದಿನದ ಮಟ್ಟಿಗೆ ಭಿಕ್ಷುಕನಂತೆ ಬದುಕಿ, ಐದು ನೂರುರೂಪಾಯಿ ಸಂಪಾದಿಸಬೇಕೆಂದು, ಚಾಲೆಂಜ್ ಮಾಡಿದರು. ಭಿಕ್ಷುಕನ ನಟನೆ ಸಹಜವಾಗಿ ಒಪ್ಪುತ್ತದೆ, ಅಂತ ನಿರ್ಧರಿಸಿಕಮಿಟ್ ಆದೆನಾದರೂ, ಈ ನಿರ್ಧಾರ ನನ್ನ ಜೀವನಕ್ಕೆ ಇಷ್ಟು ದೊಡ್ಡ ತಿರುವು ನೀಡುತ್ತದೆ, ಅನ್ನೋದು ಗೊತ್ತಿರಲಿಲ್ಲ. 

ಮೈನಾಳನ್ನು ಮೊದಲ ನೋಟದಲ್ಲಿ ಪ್ರೀತಿಸಿದ್ದೆ. ಅವಳ ಮೊದಲ ಮಾತುಗಳಿಗೆ ಶರಣಾಗಿದ್ದೆ. ನೂರು ರೂಪಾಯಿ ದುಡ್ಡನ್ನು ಅಂಗೈ ಮೇಲೆ, ಕಣ್ಣಿನ ನೇರಕ್ಕೆ ಹಿಡಿದುಕೊಂಡು ಹೇಳಿದೆ - ' ವಾಪಾಸ್ ಊರಿಗೆ ಹೋಗುವುದಾದರೇ, ಅದು ಮೈನಾಳ ಜೊತೆಗೇ' ಗೆಳೆಯರೆಲ್ಲಾ ಹೊರಟು ಹೋದರು. ಕಾಲಿಲ್ಲದವನ ಪಾತ್ರವೇ, ಅವಳ ಜೊತೆ ಸೇರಲು ಸಹಾಯ ಮಾಡಿತು.

---

ರೈಲಿನಲ್ಲಿ ಪೇಪರ್ ಮಾರುವ ಕೆಲಸ ಶುರುವಾಯ್ತು. ಹಿಂದಿನ ದಿನ ಕುಳಿತಿದ್ದ, ಅದೇ ಸೀಟಿನ ಮೇಲೆ ಕುಳಿತಿದ್ದಳು. ಪೇಪರ್ ಬಂಡಲ್ ಅನ್ನು ಒಂದು ಕೈಲಿ ಹಿಡಿದುಕೊಂಡು, ಇನ್ನೊಂದು ಕೈನಲ್ಲಿ ಗಾಲಿ ಉರುಳಿಸುತ್ತಾ ಅವಳ ಮುಂದೆ ಹೋದಾಗ. ನನ್ನನ್ನು ನೋಡಿ ಉಬ್ಬಿ ಹೋದಳು. ದುಡ್ಡು ಕೊಟ್ಟು, ಪತ್ರಿಕೆಯೊಂದನ್ನು ಕೊಂಡಳು. 

'ಈಗ ನಿಮ್ಮನ್ನ ಅಪ್ರಿಶಿಯೇಟ್ ಮಾಡದೆ. ಬೇರೆ ದಾರೀನೆ ಇಲ್ಲ. ' ಎಂದಳು. 'ಎಲ್ಲಾ ನಿಮ್ಮ ಆಶೀರ್ವಾದ. 'ಅಂತ ಬೊಗಳೆ ಬಿಟ್ಟೆನಾದರೂ, ಈ ಹಿಂದೆ ಅಂಕೆಯಿಲ್ಲದೆ ಖರ್ಚು ಮಾಡುತ್ತಿದ್ದ ಹಣದ ಮಧ್ಯೆ ಈಗಿನ ಒಂದೊಂದು ರೂಪಾಯಿ ಅಮೂಲ್ಯ ಅಂತನಿಸಿದ್ದು ಅವಳ ಕೃಪೆಯಿಂದ. 

ಮೈನಾ ' ದೂದ್ ಸಾಗರ್ ' ಜಲಪಾತದ ಮಾರ್ಗವಾಗಿ ಹಾದು ಹೋಗುವ ರೈಲಿನಲ್ಲಿ  ಪ್ರತಿದಿನ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದಳು. ನಾನು ' ದೂದ್ ಸಾಗರ್ ' ಹಿಂದಿನ ನಿಲ್ದಾಣದಲ್ಲಿ, ಅವಳಿದ್ದ ಬೋಗಿಯಲ್ಲಿ ಪೇಪರ್ ಮಾರುವವನಂತೆ ಹತ್ತುವುದು, ಮುಂದಿನ ನಿಲ್ದಾಣದಲ್ಲಿ ಇಳಿದು ಬಿಡುವುದು. ಈ ಅಂತರದಲ್ಲಿ ಸಿಗುತ್ತಿದ್ದ ಇಪ್ಪತ್ತು ನಿಮಿಷಗಳನ್ನು, ಸಾಧ್ಯವಾದಷ್ಟು ಅವಳೊಂದಿಗೆ ಕಳೆಯುವಂತೆ ನೋಡಿಕೊಳ್ಳುವುದು. ಅವಳು ಕುಳಿತುಕೊಳ್ಳುತ್ತಿದ್ದ ಸೀಟು ಮಾತ್ರ ಸದಾ ಖಾಯಂ ಅವಳಿಗಾಗಿ ಮೀಸಲಿರುತ್ತಿತ್ತು. ಅಲ್ಲೇ ಇಬ್ಬರೂ ಹರಟುತ್ತಿದ್ದೆವು. ನಮ್ಮದು ಕೆಳಗೆ ಕುಳಿತು ಕೇಳುವ-ಹೇಳುವ ಕೆಲಸ. ಪ್ರತಿ ದಿನ ಮುಂದಕ್ಕೆ ಹೋದ ಮೇಲೆ, ಕೊನೆಯ ಬಾರಿಗೊಮ್ಮೆ ಹಿಂದೆ ನೋಡಿ ಮುಗುಳ್ನಗುವುದು, ನಡೆದಿತ್ತು. 

ಕಾಲುಗಳು ಇರುವ ಟಾಪ್ ಸೀಕ್ರೇಟ್ ಮಾತ್ರ, ಯಾವಾಗ್ ಹೇಳಬೇಕು ಗೊತ್ತಾಗಲಿಲ್ಲ. ನನ್ನ ಪ್ರೀತಿಯೇ ಬೂಟಾಟಿಕೆ ಅಂದುಕೊಂಡು ಬಿಟ್ಟರೆ, ಅನ್ನೋ ಭಯ. ಆದರೂ ನಾನಿದ್ದ ಪರಿಸ್ಥಿತಿಯಲ್ಲಿ, ಯಾರಾದರೂ ನನ್ನನ್ನು ಇಷ್ಟ ಪಡಬಹುದು ಅಂತ ಅಂದುಕೊಳ್ಳುವುದೇ, ಪರಮ ಮೂರ್ಖತನ ಅನ್ನಿಸುತ್ತಿತ್ತು. ನಮ್ಮ ಮಾತು ಕಥೆ ಸ್ನೇಹ ನಡೆದಿತ್ತು. 

'ನೀನಂದರೆ ತುಂಬಾ ಇಷ್ಟ ' ಅನ್ನೋದನ್ನ ಸೂಚ್ಯವಾಗಿ ಹೇಳಿ, ಭಯದಲ್ಲಿ ಹೊರಟುಬಿಟ್ಟೆ. ಎರಡು ದಿನಗಳು ಅತ್ತ ಕಡೆ ಸುಳಿಯಲಿಲ್ಲ. ಅವಳು ಕಿಟಕಿಯಾಚೆ ಹುಡುಕುತ್ತಿದ್ದುದು ಮಾತ್ರ, ದೂರದಲ್ಲಿ ನಿಂತು ನೋಡುತ್ತಿದ್ದೆ. ಅದೇ ಎರಡು ದಿನ ಆದ ಮೇಲೆ, ಅವಳ ಮುಂದೆ ಪ್ರತ್ಯಕ್ಷನಾದೆ. ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ರೈಲಿನ್ನೂ ಹೊರಟಿರಲಿಲ್ಲ. ಕಳ್ಳ ಬೆಕ್ಕಿನಂತೆ ನಿಂತಿದ್ದೆ. ನನ್ನ ಕೈಯನ್ನೊಮ್ಮೆ ಹಿಡಿದು 'You are my perfect match' ಎನ್ನುತ್ತಾ ಕಿಟಕಿಯ ಬಳಿ ನೇತು ಹಾಕಿದ್ದ ಬ್ಯಾಗನ್ನು ಎತ್ತಿ, ಏನನ್ನೋ ಕೊಡಲು ಹುಡುಕುತ್ತಿದ್ದಳು. 

ಅದೇ ಸಮಯಕ್ಕೆ, ಕಳ್ಳನೊಬ್ಬ ಕಿಟಕಿಯ ಹೊರಗಿಂದ ಕೈ ಹಾಕಿ, ಬ್ಯಾಗನ್ನು ಎಳೆದು ಕೊಂಡು ಓಟ ಕಿತ್ತ. ' ಅಯ್ಯಯ್ಯೋ ಕಳ್ಳ ಕಳ್ಳ 'ಅಂತ ಬೊಬ್ಬೆ ಹೊಡೆದಳು. ನಾನು ಕಾಲಿಲ್ಲದವನು. ಏನ್ ಮಾಡೋದು ಅಂತ ನೋಡುವಷ್ಟರಲ್ಲಿ ಅಪ್ರಯತ್ನವಾಗಿ ಅಲ್ಲಿಂದ ಎದ್ದು, ನೆಗೆದು ಕಳ್ಳನ ಹಿಂದೆ ಓಡಿಬಿಟ್ಟೆ. 

---

ಅಷ್ಟು ವೇಗವಾಗಿ ಓಟ ಕಿತ್ತ, ಕಳ್ಳನನ್ನು ದೂರದವರೆಗೂ ಅಟ್ಟಿಸಿ ಕೊಂಡು ಹೋದೆನಾದರು. ಹಿಡಿಯಲಾಗಲಿಲ್ಲ. ವಾಪಾಸು ಬರುವಷ್ಟರಲ್ಲಿ ರೈಲು ಹೊರಟು ಹೋಗಿತ್ತು. ಮೈನಾ ಪ್ಲಾಟ್ ಫಾರಂ ನ ಮೇಲೆ ಒಂಟಿಯಾಗಿ ಕುಳಿತಿದ್ದಳು. ಅವಳ ಮುಖದಲ್ಲಿ ಕೋಪ ನಿಗಿ ನಿಗಿ ಉಕ್ಕುತ್ತಿತ್ತು. ನಾನು ತಪ್ಪಿತಸ್ತನಂತೆ, ಮುಂದೆ ತಲೆ ತಗ್ಗಿಸಿ ನಿಂತೆ. 

' ನೀನು ಮೋಸಗಾರ ' ಅಂದಳು. 

' ಕಳ್ಳ ಸಿಗದೇ ಇದ್ದರೆ, ನಾನೇನ್ ಮಾಡಲಿ. ' ಅಂದೆ. ಅವಳು ಉಗಿದದ್ದು, ಈಗ ತಾನೇ ಮೂಡಿದ ನನ್ನ ಕಾಲಿಗೆ ಎಂಬುದು ನನಗೂ ತಿಳಿದಿತ್ತು. ಸಣ್ಣ ಮೌನ ಆವರಿಸಿತು. ಅವಳ ಪಾಲಿಗೆ 'ನನಗೆ ಕಾಲುಗಳು ಇರೋದು ಅತ್ಯಂತ ಸಂತೋಷದ ಸಂಗತಿ. ' ಆಗದೇ ಇರಬಹುದು ಅನಿಸಿತ್ತು. 

' ನಿನಗೆ ಕಾಲುಗಳು ಇವೆಯಾ. ?' ನಂಬಲಾಗದವಳಂತೆ ಕೇಳಿದಳು. ಅವಳ ಧನಿಯಲ್ಲಿ ಅರ್ದ್ರತೆ ಇತ್ತು. ಕಳೆದ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ ಇಂತಹುದೊಂದು, ಹತಾಶ ಭಾವನೆಯನ್ನು ಅವಳ ಮುಖದಲ್ಲಿ ನೋಡಿದ್ದು. 

' ಹೌದು, ನನಗೆ ಮೊದಲಿಂದಲೂ ಕಾಲುಗಳು ಇವೆ ' ಅಂದೆ. ಮುಂದಿನದ್ದು ಹೇಳುವ ಮೊದಲೇ, ಬಿಕ್ಕಳಿಸುತ್ತಾ ಅಳಲು ಪ್ರಾರಂಭಿಸಿದಳು. ಸೋತವಳಂತೆ, ಮುಖ ತಿರುಗಿಸಿಕೊಂಡಳು. ಈ ಮೊದಲು, ಯಾರ ಮುಂದೆಯೂ ಈ ರೀತಿ, ಅತ್ತಿರಲಿಲ್ಲವಂತೆ. ' ಮಳೆ ಬರ್ತಿದೆ. ನಡಿ ಹೋಗೋಣ. ' ಅಂದೆ. 

' ಕಾಲು ಇಲ್ಲದೇ ಇರುವವಳು, ಹೆಂಗೋ ನಡೆಯೋದು. ? ' ಅರ್ಧ ಸ್ಟೇಷನ್ ಗೆ ಕೇಳಿಸುವಂತೆ ಕೂಗಿದಳು. 'ನನಗೆ, ಇದಿಯಲ್ಲ'ಎಂದೆ, ಅಷ್ಟೇ ಪ್ರಶಾಂತವಾಗಿ. 

---

ನನ್ನ ಮೈನಾಗೆ, ಕಾಲುಗಳು ಇಲ್ಲದಿರುವ ಸಂಗತಿ, ಇಷ್ಟು ಸಸ್ಪೆನ್ಸ್ ಆಗಿ ಹೇಳುವ ಅವಶ್ಯಕತೆ ಇರಲಿಲ್ಲ. ಅವಳು ಎರಡು ಷಾಕ್-ಗಳಿಂದ ಹೊರ ಬಂದಿರಲಿಲ್ಲ. 'ಹಂಗಾದ್ರೆ ನಿನಗೆ ಎಲ್ಲಾ ಮೊದಲೇಗೊತ್ತಿತ್ತಾ. ?' ಪ್ರಶ್ನಿಸಿದಳು. 

'ಎಲ್ಲಾ ಅಂದ್ರೆ. ? ' ಪ್ರಶ್ನೆಯನ್ನು, ಅವಳಿಗೇ ತಿರುಗಿಸಿದೆ. ಎರಡು ಕ್ಷಣ ಸುಮ್ಮನಾದಳು. ಮೈನಾಳಿಗೆ ಕಾಲುಗಳು ಇಲ್ಲದೆ ಇರುವುದು, ನನಗೊಂದು ವಿಷಯವೇ ಅಲ್ಲ ಅನ್ನುವ ಹಾಗೆ ನಡೆದುಕೊಳ್ಳುವ ಜರೂರತ್ತು ಇತ್ತು. ಸೂಕ್ಷ್ಮ ಮನಸ್ಸಿನ ಮೈನಾ ನನ್ನ ಸ್ವಾಭಿಮಾನಿ ಮೈನಾ, ತನ್ನ ಮೇಲೆ ನನಗೆ ಅನುಕಂಪ ಇದೆ ಅಂತ ತಪ್ಪು ತಿಳಿದದ್ದೇ ಆದಲ್ಲಿ, ಅವಳನ್ನು ಓಲೈಸೋದಕ್ಕೆ ಆಗಲೀ. ಒಪ್ಪಿಸೋದಕ್ಕೆ ಆಗಲಿ,  ಸಾಧ್ಯವಿರಲಿಲ್ಲ.

' ಎಲ್ಲಾ ಗೊತ್ತಿದ್ದೂ ನನ್ನ ಪ್ರೀತಿಸುತ್ತಿದ್ದೆಯಾ. ?' ಮಂಡಿ ಮೇಲಾಗಿದ್ದ ಕಪ್ಪು ಕಲೆಗಳನ್ನೇ ದಿಟ್ಟಿಸುತ್ತಾ ಕೇಳಿದಳು. ' ಹೌದು 'ಅಂದೆ ಅಷ್ಟೇ. 'ನಾನು, ಚಿಕ್ಕವಳಿದ್ದಾಗ ಪೋಲಿಯೋ ಅಟ್ಯಾಕ್ ಆಗಿ, ಎರಡೂ ಕಾಲುಗಳ, ಸ್ವಾಧೀನ ಹೊರಟು ಹೋಯ್ತು. 'ತುಂಬಾ ಕಷ್ಟ ಪಟ್ಟು ಹೇಳಿದಳು. ಅದನ್ನು ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿ ಇರಲಿಲ್ಲ. ಆದರೂ ಅವಳ ಸಮಾಧಾನಕ್ಕೆ, ಊ ಗುಡುತ್ತಿದ್ದೆ. ' ಆದರೆ ನೀನು ನನಗೆ perfect match ಅಲ್ಲಾ. ನನ್ನ ಪರಿಸ್ಥಿತಿ ನಿನಗಿಲ್ಲ. ನಿನಗೂ ಕಾಲಿಲ್ಲ ಅಂತ ನಂಬಿ ಮೋಸ ಹೋದೆ.'ಮತ್ತದೇ ಕಾಲುಗಳನ್ನ ನೋಡಿ ಬಿಕ್ಕಳಿಸಲು ಶುರು ಮಾಡಿದಳು. 

' ನಿಜ ಹೇಳಬೇಕಂದರೆ, ನೀನೇ ನನಗೆ perfect match. ನಿನ್ನ ಪರಿಸ್ಥಿತಿ ನನಗೆ ಇಲ್ಲದೇ ಇರಬಹುದು. ಆದರೆ ನಿನ್ನ ನೋವು ನನಗೆ ಗೊತ್ತು. ನಿನಗೋಸ್ಕರ, ನಿನ್ನಂತೆ ಮಂಡಿ ಮೇಲೆ ನಾನೂ ಬದುಕಿದ್ದೇನೆ. ನನ್ನನ್ನ ನಂಬು ಮೈನಾ . ಈ ಕಾಲುಗಳು ಇವೆ, ಅನ್ನೋದನ್ನ ಬಿಟ್ರೆ ಬೇರೆ ಯಾವ ಸುಳ್ಳನ್ನೂ ನಾನು ಹೇಳಿಲ್ಲ. ' ಅವಳ ಮಟ್ಟಕ್ಕೆ ಇಳಿದು, ಮಂಡಿಯ ಮೇಲೆ ಕುಳಿತೆ. 

' ಬೇಡ ಮುಂದೆ ನಿನಗೆ, ನನ್ನ ಮೇಲೆ ಆಸಕ್ತಿ ಕಮ್ಮಿ ಆಗಬಹುದು. ಮುಂದೆ ಆಗ ನನಗೆ, ಅಂಗವಿಕಲತೆ ನನ್ನ ಬಲಹೀನತೆ ಅನ್ನಿಸಬಹುದು. ಮುಂದೆ ಏನಾದ್ರೂ ಆಗಬಹುದು. ಬೇಡ ' 

' ಮೈನಾ ನೀನು ನನಗೆ ತುಂಬಾ ಸ್ಪೆಷಲ್. ಮುಂದೆ ನಾವು ಈ ಬದುಕಿಗೆ ಸೆಡ್ಡು ಹೊಡೆದು ಬದುಕಬಹುದು. ಮುಂದೆ ನಿನಗೂ ಕಾಲು ಬರಬಹುದು. ಮುಂದೆ ನಾವೂ ಓಡಬಹುದು. ಯಾರಿಗ್ಗೊತ್ತು ಮುಂದೆ ನಮ್ಮದೇ ಈಪ್ರಪಂಚ ಇನ್ನೂ ಸುಂದರವಾಗಿಕಾಣಿಸಬಹುದು. ' 

' ನೀ ನನ್ನ ಪ್ರಪಂಚದೊಳಗೆ ಯಾಕೋ ಬಂದೆ. ? ' ಎಂದಳು.

---

ಮತ್ತದೇ ರೈಲು. ಈ ಬಾರಿ ಪಕ್ಕದಲ್ಲಿ ಮೈನಾ. ಅವಳ ಕೊರಳಲ್ಲಿ ಕಟ್ಟಿದ್ದ ತಾಳಿ. 

' ನೋಡು ನನಗೆ ಕಾಲು ಇಲ್ಲದೆ ಇರಬಹುದು. ಆದರೆ ಆತ್ಮಾಭಿಮಾನ ತುಂಬಾ ಇದೆ. ಯಾವುದೇ ಕಾರಣಕ್ಕೂ, ನನ್ನ ಅಂಗವಿಕಲತೆಯನ್ನ ಹಂಗಿಸಬಾರದು. ' ಸರಕ್ಕನೆ ರೈಲು ಸುರಂಗದೊಳಗೆ ತೂರಿತು. ಮೌನದ ಸುರಂಗ ದಾಟಿದ ಮೇಲೆ ಬಂದ ಬೆಳಕು. 

' ತಾಳಿ ಕಟ್ಟಿದ ಮೇಲೆ ಯಾಕೆ ಈ ಅನುಮಾನ ? ' ನಗುತ್ತಾ ಕೇಳಿದೆ. ಅವಳ ಮುಗ್ಧ ಷರತ್ತುಗಳಿಗೆ, ಹೆಚ್ಚಿಗೆ ಸಮಜಾಯಿಷಿ ಕೊಡುವ ಗೋಜಿಗೆ ಹೋಗಲಿಲ್ಲ. ಮತ್ತೂ ಅದನ್ನೇ ಕೇಳಿದಾಗ,

'ನಡೆಯೋದಕ್ಕೆ ಆಗಲ್ಲ ಅನ್ನೋದು ಗೊತ್ತಿದ್ದೇ, ನಿನಗೆ ಮೈನಾ ಅಂತ ಹೆಸರಿಟ್ಟಿರೋದು. ಮನಸ್ಸಿಗೆ ರೆಕ್ಕೆಗಳಿದ್ದರೆ, ಕಲ್ಪನೆಗಳದ್ದೇ ತೆರೆದ ಆಕಾಶ ಇರಬೇಕಾದ್ರೆ, ನೀನು ಅಂಗವಿಕಲೆ ಹ್ಯಾಗೆ ಆಗ್ತೀಯ? ಅದಕ್ಕೇ ಕಾಲುಗಳು ಇಲ್ಲದೆ ಇರೋದು, weakness!! ಎಂದು ಯಾವತ್ತೂ ತಿಳಿಬಾರದು. ಈಗ ನಿನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯೋ, ಮುಂದೆ ಕೂಡಅಷ್ಟೇ ಇಷ್ಟ ಪಡಬೇಕು. ' 

' ಸತ್ಯ ಹೇಳು, ನನ್ನ ಬಗ್ಗೆ ನಿನಗಿರೋದು ಅನುಕಂಪಾನೊ. ? ಪ್ರೀತಿನೋ. ? 'ಕಣ್ಣುಗಳನ್ನೇ ದಿಟ್ಟುಸುತ್ತಾ ಕೇಳಿದಳು. 

'ಅನುಕಂಪಾನೆ ಇಲ್ಲದೆ ಇರೋ, ಪ್ರೀತಿ ಇದಿಯಾ. ? ' ಎಂದೆ. 

'ಈ ಥರ ಪಜಲ್ ರೀತಿ ಹೇಳುದ್ರೆ ನನಗೆ ಅರ್ಥ ಆಗಲ್ಲ. ಕೇಳಿದ್ದಕ್ಕೆ ನೇರವಾಗಿ ಹೇಳಬೇಕು. ಪ್ಲೀಸ್ ಹೇ. ಳೋ. ನಿನಗೆ ನನ್ನ ಮೇಲಿರೋದು ಅನುಕಂಪ ನೋ, ಅಥವಾ ಪ್ರೀತಿನೋ. ? ' 

' ವಾರಗಟ್ಟಲೇ ಮಂಡಿ ಮೇಲೆ ಕುಳಿತು, ಕಷ್ಟ ಪಟ್ಟು ಹಿಡಿದ ಕಪ್ಪೆ ಇದು. ಏನನ್ನೋ ಹೇಳೋದಕ್ಕೆ ಹೋದರೆ, ಕೈ ಯಿಂದ ಹಾರಿಬಿಡತ್ತೆ. ' ಅಂದೆ. ನಕ್ಕಳು

 ' ನೀನು ನಿಜ ಹೇಳ್ತಾ ಇದ್ದೀಯ ತಾನೆ. ?'ಮತ್ತದೇ ಪ್ರಶ್ನೆ. ' ಅಯ್ಯಯ್ಯೋ ನಿನಗೊತ್ತಾ. ? ನಾನು ಮದುವೆ ಆಗಿದ್ದು ಒಬ್ಬಳು ಕಾಲು ಇಲ್ಲದೇ ಇರುವ ಹುಡುಗಿಯನ್ನ. ಪ್ಚ ಆತುರದಲ್ಲಿ ಕಮಿಟ್ ಆಗಿಬಿಟ್ಟೆ. ' 

' ನಿನ್ನದು ಪರವಾಗಿಲ್ಲ. ಆದರೆ ನಿನಗೊತ್ತಾ. ? ನಾನು ಮದುವೆ ಆಗಿದ್ದು, ಒಬ್ಬ ತಲೆನೆ ಇಲ್ಲದ ಹುಡುಗನ್ನ. ' ನಗಲು ಪ್ರಾರಂಭಿಸಿದಳು. ತೋಳಿನಲ್ಲಿ ಬಂಧಿಯಾಗಿದ್ದ ಆ ನಗು, ಇಷ್ಟು ಸಾಕು ಇನ್ನು ಮುಂದೆ ಬದುಕೋದೆಲ್ಲಾ ಬೋನಸ್ ದಿನಗಳು ಅನಿಸಿತು.

 'ನೀನು ಒಳ್ಳೆಯವನ, ಪೆದ್ದುನ ಅರ್ಥ ಆಗ್ತಿಲ್ಲ. 'ಎಂದಳು. 'ಎರಡನೇ ಆಪ್ಷನ್ನೇ ಚನ್ನಾಗಿದೆ. ರಿಸ್ಕು ಕಮ್ಮಿ'ಎಂದೆ. ' ಅದು ಸರಿ ನನಗೆ ಕಾಲುಗಳಿಲ್ಲ ಅನ್ನೋ ವಿಷಯ ನಿನಗ್ಯಾವಾಗ ಗೊತ್ತಾಗಿದ್ದು. ? 'ಗ್ರೇಟ್ ಸೀಕ್ರೇಟ್ ಕೇಳಿದಳು. 

' ಮೂರನೆಯ ದಿನವೇ ಗೊತ್ತಾಯ್ತು. ಪ್ರತಿದಿನ ನೀನು, ಡೋರ್ ಹತ್ತಿರ ಇರೋ ಆ ಸಿಂಗಲ್ ಸೀಟ್ ನಲ್ಲೇ ಕೂತಿರ್ತಿದ್ದೆ ಆಲ್ವಾ. ? ಆ ದಿನ ನೀನು ಪತ್ರಿಕೆ ತಗೋಂಡು, ಚಿಲ್ಲರೆಗೋಸ್ಕರ ಬ್ಯಾಗಲ್ಲಿ ಹುಡುಕಾಡ್ತಾ ಇದ್ದೆ. ತಲೆಯಲ್ಲಿ ಮುಡಿದಿದ್ದ ತಾಳೆ ಹೂವನ್ನು, ಹಾಗೇ ತನ್ಮಯನಾಗಿ ನೋಡುತ್ತಿರುವಾಗ, ಅಕಸ್ಮಾತ್ ಆಗಿ ನನ್ನ ದೃಷ್ಟಿ ಆ ತಲೆ ಯಿಂದ ಮೇಲಕ್ಕೆ ಹೋಯ್ತು. ಅಲ್ಲಿ 'ಅಂಗವಿಕಲರ ಸೀಟ್' ಅನ್ನೋದನ್ನ ಹಿಂದಿಯಲ್ಲಿ ಬರೆದಿದ್ದರು. ಕಾಕತಾಳಿಯ ಅಥವಾ ಏನಾದ್ರು ಆಗಿರಬಹುದು ಅಲ್ವಾ ಅನ್ನಿಸ್ತು. ಒಂದು ಕ್ಷಣ ಜೀವ ಡಸಕ್ಕಂತು. ತಕ್ಷಣ ನನಗದನ್ನ ಒಪ್ಪಿಕೊಳ್ಳೋದಕ್ಕೆ ಆಗಲಿಲ್ಲ. ನಾನು ನಂಬಲೂ ಇಲ್ಲ. ಕೊನೆ ಸ್ಟಾಪ್ ವರೆಗೂ ಕಾಣದ ಹಾಗೆ ಬಂದೆ. ಎಲ್ಲಾ ಅರ್ಥ ಆಗಿ ಹೋಯ್ತು. 

ನಿನ್ನ ಹತ್ತಿರ ಬಂದು, ನಿನ್ನನ್ನ ಕನ್ವಿನ್ಸು ಮಾಡುವ ಶಕ್ತಿ ಇರಲಿಲ್ಲ. ಅದಕ್ಕೆ ಎಷ್ಟು ದಿನ ಆಗತ್ತೋ, ಅಷ್ಟು ದಿನ ಇದೇ ನಾಟಕವನ್ನು ಮುಂದುವರೆಸೋಣ ಅಂದುಕೊಂಡೆ. ' ಹೇಳಿದ್ದನ್ನೆಲ್ಲಾ ಅವಳು ಕೇಳುತ್ತಲಿದ್ದಳು. 

'ಅದು ಸರಿ ಆ ದಿನ, ಕಳ್ಳ ಬ್ಯಾಗು ಹೊತ್ತು ಓಡೋಕೆ ಮುಂಚೆ, ಅದರಿಂದ ನನಗೆ ಏನನ್ನೋ ಕೊಡುವುದಕ್ಕೆ ನೋಡ್ತಾ ಇದ್ಯಲ್ಲ ಏನದು. ? ' ಕೇಳಿದೆ. '

 ಆಕಳ್ಳ ಬ್ಯಾಗ್ ಹೊತ್ತುಕೊಂಡು ಓಡಿದ್ದೆ ಒಳ್ಳೆಯದಾಯ್ತು. ನಿನಗೋಸ್ಕರ, ತೆವಳುವಾಗ ನೋವಾಗಬಾರದು ಅಂತ. ಕೈಗಳಿಗೆ ಹಾಕುವ ಹೊಸ ಚಪ್ಪಲಿಯನ್ನತಂದಿದ್ದೆ 'ಎಂದಳು. 

---


 ಕಥೆಯ ಮೊದಲಾರ್ಧದವನ್ನು ಮಾತ್ರ, ನನ್ನದೇ ಧಾಟಿಯಲ್ಲಿ, ನನ್ನದೇ ಮಾತುಗಳಲ್ಲಿ,ಇಲ್ಲಿ ನಿರೂಪಿಸಿದ್ದೇನೆ. They lived happie happily ever after.. ಫುಲ್ಲು ಬೇಕಂದ್ರೆ, ಹೋಗಿ ಸಿನಿಮಾ ನೋಡಿ.

Comments

  1. Please, movie nodbedi! My sincere opinion. Ishte story saaku. :)

    ReplyDelete

Post a Comment