Skip to main content

You are Beautiful ; ಅಪ್ರತಿಮ ಸುಂದರಿಗೆ ಹೀಗೊಂದು ಕಾಂಪ್ಲಿಮೆಂಟು


ಮನಸ್ಸು ಎರಡನೇ ಸಾರಿ ಎಚ್ಚರಿಕೆ ಕೊಡ್ತು : ‘ ಬೇಡ ಮಗ!! ಕೆರ ಕಳ್ಕೊಂಡು ಹೊಡಿತಾಳೆ. ’


ನೋಡೋಣ ಬಿಡು. ಯಾರಿಗಾದ್ರೂ ಏನನ್ನಾದ್ರೂ ಹೇಳಬೇಕು ಅಂತಿದ್ರೆ, ಹೇಳಿಬಿಡಬೇಕು. ಮುಂದೆ ಒಂದಿನ ವಿಷಾದ ಇರಬಾರದು. ನಾನೇನು ಅವಳಿಗೆ ಐ ಲವ್ ಯು ಅಂತ ಹೇಳ್ತಾ ಇಲ್ವಲ್ಲಾ. ಒಳ್ಳೇದು ಕೆಟ್ಟದ್ದು ಅಂತ ನೋಡ್ತಾ ಇದ್ರೆ… ಸೋತುಪುರುಕ ಆಗಿ ಬಿಡ್ತೇನೆ’

ಹೇಳೋದಾದರೂ ಏನು…? ಏನಿಲ್ಲ, ‘ ಯು ಆರ್ ಬ್ಯೂಟಿಫುಲ್’ ಅನ್ನೋದು. ಅದಕ್ಕಿಂತ ಹೆಚ್ಚು-ಕಮ್ಮಿ ಏನ್ ಹೇಳೋದಕ್ಕೆ ಸಾಧ್ಯ..?

ತುಂಬಾ ಸುಂದರವಾಗಿ ಕಾಣ್ತಾಳೆ. ಯಾವತ್ತೋ ಒಂದಿನ ಎದುರಿಗೆ ಕಾಣಿಸಿಕೊಂಡು, ಸುಯ್ಯಂತ ಹೊರಟು ಹೋಗಿದ್ರೆ, ‘ಅಬ್ಬಾ!! ಏನ್ ಹುಡ್ಗಿ’ ಅಂತ ಅಂದು ಸುಮ್ಮನಾಗಿ ಬಿಡಬಹುದಿತ್ತು. ತೆರೆದ ಬಾಯಿ ಮುಚ್ಚೊದರೊಳಗಾಗಿ ಅವಳ ನೆನಪುಗಳು ಕಲೆಯುತ್ತಿದ್ದವೇನೊ. ಆದರೆ ಅವಳು ದಿನಾ ನಾಲಕ್ಕು ವರೆಗೆ ಸರಿಯಾಗಿ, ಕೆಫೆಟೇರಿಯಾದಲ್ಲಿ ಕಾಣಿಸಿಕೊಳ್ತಾಳೆ. ಅಲ್ಲಿ ಇಬ್ಬರು ಡುಮ್ಮನೆ ಬಾಡಿ-ಗಾರ್ಡ್ ಗಳು ಅವಳಿಗೋಸ್ಕರ ಕಾಯ್ತಾ ಇರ್ತಾರೆ. ಆ ಅಂಥವಳು ಕಾಫಿ ಕುಡಿಯೋವರೆಗೂ, ‘ಒನ್ ಓ ಕ್ಲಾಕ್ ‘ ದಿಕ್ಕಿಗೆ ಚೇರ್ ಜೋಡಿಸಿಕೊಂಡು ಕೂತು, ಅವಳನ್ನ ನೋಡ್ತೇನೆ. ಖುಷಿ ಅಂತೂ ಆಗತ್ತೆ. ತಾನು ಇಷ್ಟು ಸುಂದರವಾಗಿರೋದು ಗೊತ್ತಿರಬಹುದು. ಆದರೆ ಅದನ್ನ, ಅವಳಿಗೆ ಅಷ್ಟೇ ಸುಂದರವಾಗಿ ಯಾರೂ ಹೇಳಿರಬಾರದು. ಹಂಗೆ ಹೇಳಬೇಕು. ಹೇಳಲಿಲ್ಲ ಅಂದ್ರೆ!! ಹೇಳಬಹುದಿತ್ತಲ್ಲಾ ಅನ್ನೋ ಗುಂಗು ಇದ್ದುಬಿಡತ್ತೆ.

ಸರಿ, ಹೇಳೋದಾದ್ರೂ ಏನು!! ಮತ್ತದೆ ಪ್ರಶ್ನೆ!! ಅದೇ ಅಂದುಕೊಂಡಾಗಿದೆಯಲ್ಲ ‘ಯು ಆರ್ ಬ್ಯೂಟಿಫುಲ್ >>>> ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಸುಂದರವಾದ ಹುಡುಗಿ ಅಂದ್ರೆ ನೀನು. ಇಷ್ಟೊಂದು ಸುಂದರವಾಗಿರೋದಕ್ಕೆ ಥಾಂಕ್ ಯು. ನನ್ನ ಈ ದಿನವನ್ನು, ನನ್ನ ಈ ಕ್ಷಣಗಳನ್ನು ಸುಮಧುರ ಗೊಳಿಸಿದ್ದಕ್ಕೆ, ಥಾಂಕ್ ಯು'

ಮನಸ್ಸಿನಲ್ಲಿಯೇ ಇದರ ಇಂಗ್ಲೀಷ್ ಭಾವಾನುವಾದ ತಯಾರಾಗುತ್ತಿತ್ತು.

ಕ್ಯೂಬಿಕಲ್ ನಿಂದ ಕೆಫೆಟೇರಿಯಾಗೆ ಹೋಗಿ, ಎಂದಿನಂತೆ ಚೇರು ಎಳೆದುಕೊಂಡು ಕುಳಿತೆ. ಬಹಳಷ್ಟು ಕಂಪನಿಗಳು ಇರುವ ಟೆಕ್ ಪಾರ್ಕಿನಲ್ಲಿರುವ!! ಕಾಮನ್ ಕಾಫಿ ಹೀರುವ ಜಾಗಗಳಲ್ಲಿ ಒಂದು ಇದು. ಸೆರಾ ಕೆಫೆ!! ಅಂತ ಅದರ ಹೆಸರು. ಅವಳು ಬರುವಾಗ ಹೇಳೋಣ ಅಂದುಕೊಂಡೆನಾದರೂ… ‘ಬೇಡ!! ಬೇಡ!! ಹೋಗೋವಾಗ ಹೇಳೋಣ’ ಅನ್ನಿಸ್ತು. ಅಯ್ಯಾ ಇದೇ ರೀತಿ ಎಷ್ಟು ದಿನ ಅಂದುಕೊಂಡಿಲ್ಲ. ಬರುವಾಗ ಅಥವಾ ಹೋಗುವಾಗ ಅನ್ನೋ ಗೊಂದಲಗಳ ಮಧ್ಯೆ ಅವಳು ಹೋಗಿಯೇ ಬಿಟ್ಟಿರ್ತಾಳೆ.

ಅವಳು ಹೊರಟಳು. ಇವತ್ತು ಬಿಟ್ಟರೆ, ಯಾವತ್ತೂ ಇಲ್ಲ ಅನ್ನಿಸ್ತು. ಹಿಂಬಾಲಿಸಿಕೊಂಡು ಹೋದೆ. ಆ ಬಾಡಿಗಾರ್ಡುಗಳು ಅವಳನ್ನು ಬಿಟ್ಟು ದೂರ ಹೋಗುವ ಲಕ್ಷಣಗಳು ಕಾಣಿಸಲೇ ಇಲ್ಲ. ‘ಎಕ್ಸ್-ಕ್ಯೂಸ್ ಮಿ’ ಅಂದುಬಿಟ್ಟೆ. ಬಾಡಿ ಗಾರ್ಡುಗಳನ್ನು ಬಿಟ್ಟು. ಆಕೆ ಎರಡು ಹೆಜ್ಜೆ ಹಿಂದೆ ಬಂದಳು.

ಹೇಳಬೇಕು ಅಂದುಕೊಂಡಿದ್ದನ್ನೆಲ್ಲಾ ಒಂದೇ ಉಸಿರಿಗೆ ಇಂಗ್ಲಿಷಿನಲ್ಲಿ ಹೇಳಿದೆ. ಎರಡು ಕಂಗಳ ದೃಷ್ಟಿ, ಮೂಗಿನ ನೇರಕ್ಕೆ ಹಾದು ಹೊರಬಂದಿತ್ತು. ಅದನ್ನ ಮುನಿಸು ಅನ್ನಬಹುದು ಅಥವಾ ಆಗಿರುವ ಅಲ್ಪ ಸ್ವಲ್ಪ ಖುಷಿಯನ್ನ ತೋರಿಸಿಕೊಳ್ಳದೇ ಇರೋ ಮುಖಸ್ಥಿತಿ ಅನ್ನಬಹುದು. ಸರಿಯಾಗಿ ಗೊತ್ತಾಗಲಿಲ್ಲ. ಮತ್ತೊಮ್ಮೆ ತಲೆಬರಹವನ್ನು ಹೇಳಿದೆ.

‘ಯು ಆರ್ ಬ್ಯೂಟಿಫುಲ್’

ಅವಳ ತೋರಿಕೆಯ ಕೋಪ, ಮುಂದುವರೆಲಿಲ್ಲ. ಬಾಯಿ ಬಿಗಿ ಹಿಡಿಯಲೂ ಆಗದೆ, ಹೊಡೆದು ಬಂತೊಂದು ನಗು. ನಕ್ಕಳು. ನಗ್ತಾನೆ ಇದ್ದಳು. ಅದರಲ್ಲಿ ನಗೋ ಅಂತದ್ದು ಏನಿತ್ತೋ, ಗೊತ್ತಾಗಲಿಲ್ಲ. ಹಾಸ್ಯಾಸ್ಪದನಾಗಿಬಿಟ್ಟೆ. ಯು ಟರ್ನ್ ಮಾಡಿ, ಸರಸರ ಹೊರಟೆನಾದರೂ, ಮತ್ತೆ ವಾಪಾಸಾದೆ.

‘ಆ ದೇವರು ಯಾವುದೇ ಚೌಕಾಸಿ ಮಾಡದೆ, ನಿನ್ನನ್ನ ಇಷ್ಟು ಸುಂದರವಾಗಿ ಸೃಷ್ಟಿ ಮಾಡಿ ಕಳಿಸಿದ್ದಾನೆ. ಆದರೆ ನಿನ್ನ ಅಪ್ಪ ಅಮ್ಮ, ನಿನಗೆ ಅಷ್ಟೇ ಸುಂದರವಾದ ಹೆಸರನ್ನ ಹುಡುಕಿ ಇಟ್ಟಿರ್ತಾರೆ ಅನ್ನೋದನ್ನ, ನಾನು ನಂಬೋದಿಲ್ಲ. ಆದರೂ ಏನಾದರೂ ಒಂದು ಇರಲೇಬೇಕಲ್ಲ. ’ ಇಷ್ಟು ಹೇಳಿ, ಅವಳ ಉತ್ತರಕ್ಕಾಗಿ ಮುಖ ನೋಡುತ್ತಾ ನಿಂತೆ. ಇದು ಮೊದಲ ಪ್ಲಾನಿನಲ್ಲಿರಲಿಲ್ಲ. ಆ ಸಮಯಕ್ಕೆ ತಲೆಗೆ ಬಂದಿದ್ದು.

ಪ್ರಶ್ನಾರ್ಥಕ ಭಾವದಲ್ಲಿ‌ ‘ಅದೇನ್ ಕೇಳ್ತದಿಯೋ. ಮಗನೆ’ ಅನ್ನುವಂತೆ ನೋಡಿದಳು.

‘ನಿನ್ನ ಹೆಸರು’ ಅಂದೆ

ಸ್ವಲ್ಪ ಪಾಜ್ ಕೊಟ್ಟು ‘ಹರಿಣಿ ’ ಅಂದಳು.

ಅವಳ ಧ್ವನಿಯಿಂದ ಮೊದಲನೇ ಸಾರಿ ಬಂದ ಶಬ್ಧ. ಅದು ನನಗಾಗಿ ಬಂದದ್ದು . ಹರಿಣಿ ಅಂದರೆ ಹೆಣ್ಣು ಜಿಂಕೆ. ಅಲ್ಲ ಅದು ಹರಿಣ. ಇವಳು ಹರಿಣಿ. ಮತ್ತೆ ಯು ಟರ್ನ್. ನೆಲ ನೋಡಿಕೊಂತಲೇ ನಡೆದುಬಿಟ್ಟೆ.


********** 1 ************

ಎರಡು ದಿನಗಳ ಮೇಲೆ ಮತ್ತೆ ಸಿಕ್ಕಳು. ಅಂದರೆ, ಅವಳಿಗೆ ನಾನು ಸಿಕ್ಕೆ. ‘ಹು ಆರ್ ಯು!! ಡು ಐ ನೊ ಯು’ ಅಂದಳು. ನಿನ್ನ ಹೆಸರು ಏನು ಅಂತ ಕೇಳಿದ್ದಿದ್ದರೆ ‘ನನ್ನ ಹೆಸರು ಚೇತನ’ ಅಂತ ಸಲೀಸಾಗಿ ಹೇಳಿಬಿಡುತ್ತಿದ್ದೆ. ಆದರೆ 'ಹು ಆರ್ ಯು' ಅನ್ನೋದು ನನಗೆ ನಾನೇ ತುಂಬಾ ಸಾರಿ ಕೇಳಿಕೊಂಡು ಮುಜುಗರಕ್ಕೆ ಒಳಗಾದ ಪ್ರಶ್ನೆ. ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ನನ್ನ ನಿಶ್ಯಬ್ಧವನ್ನು ಸಹಿಸಲಾಗದೇ ಅವಳೇ ಮುಂದುವರೆದಳು -

‘ನಿನ್ ಹೆಸರೇನು..? ಅಂತ ಕೇಳಿದ್ರು; ಯಾರು ನೀ.. ಅಂತಲೂ ಹೇಳ್ದೆ ಓಡಿಬಿಟ್ಟೆ ’

‘ತಾಜ್ ಮಹಲ್ ನೋಡೋದಕ್ಕೆ ಹೋದವರ ಹೆಸರು, ವಿಸಿಟರ್ಸ್ ಲಿಸ್ಟಲ್ಲಿ ಸಾವಿರ ಇರತ್ತೆ. ಅದನ್ನ ಕಟ್ಟಿಕೊಂಡು ತಾಜ್ ಮಹಲ್ ಗೆ ಏನಾಗಬೇಕು.’ ಅಂದೆ.

ಎಶ್ಟೋ ಸಾರಿ ನನ್ನ ಮಾತುಗಳು; ನನಗೇ ಸರಿಯಾಗಿ ಅರ್ಥ ಆಗಿರಲ್ಲ. ಆದರೆ ಅವಳು ಬಹಳ ಬೇಗ ಕ್ಯಾಚ್ ಮಾಡಿದ್ಲು. ಪಟಾರ್ ಅನ್ನೋ ನಗು. ನಗುತ್ತಿದ್ದಳು. ನಗ್ತಾನೆ ಇದ್ದಳು.


‘ನನ್ನೇನಾದರೂ ಲವ್ ಮಾಡ್ತಾ ಇದೀಯ .. ? ’ ಪ್ರಶ್ನಾರ್ಥಕ ಭಾವದಲ್ಲಿ ಕೇಳಿದರೂ, ಅಂತದ್ದೆಲ್ಲ ಇದ್ರೆ, ದುಬಾರಿ ಆಯ್ಕೆ ನಿಮ್ಮದು ಅನ್ನೋ ಹಂಗಿತ್ತು ಟೋನು.

‘ಇಲ್ಲ ನನಗೆ ಮಾತ್ರ ಅಲ್ಲ. ನಿನ್ನ ಲವ್ ಮಾಡೋದಕ್ಕೆ ಆಗಲಿ ಅಥವಾ ಮದುವೆ ಆಗೋದಕ್ಕೆ ಆಗಲಿ; ಯಾರಿಗೂ ಅರ್ಹತೆ ಇಲ್ಲ. ’

‘ವಾಟ್ ಈಸ್ ರಾಂಗ್ ವಿಥ್ ಮಿ ’ ಅಂದಳು. ಸುತ್ತಿ ಬಳಸಿ ಮಾತಾಡಬಾರದಿತ್ತು. ಕೊರೆದಂತಾಗಬಹುದು. ವಿವರವಾಗಿ ಹೇಳಿಲ್ಲ ಅಂದ್ರೆ, ಇವಳಿಗೆ ಅರ್ಥ ಆಗಲ್ಲ ಅನ್ನಿಸ್ತು.

‘ನನ್ನ ಮಾತಿನ ಅರ್ಥ; ನೀನು ಪ್ರಿನ್ಸಸ್!! ರಾಜಕುಮಾರಿ ಅಂತ. ಆ ಬ್ರಹ್ಮ ನಿನ್ನನ್ನ ಸೃಷ್ಟಿ ಮಾಡಿರೋದೆ ನಗಾಡ್ಕೊಂಡು, ಓಡಾಡ್ಕೊಂಡು ಖುಷ್ ಖುಷಿಯಾಗಿ ಇರಲಿ ಅಂತ. ಅಷ್ಟೇ!! ಯಾರಿಗೋ ಕುತ್ತಿಗೆ ಕೊಟ್ಟು, ಸಂಸಾರ ಮಾಡೋದು; ಮಕ್ಕಳನ್ನ ಹೇರೋದು; ಫ್ಯಾಮಿಲಿ; ಕರ್ಮಕಾಂಡಗಳು. ಉಹುಂ!! ಡಿಸ್ನಿ ಲೋಕ ಅನ್ನೋದೇನಾದ್ರು ರಿಯಲ್ ಇದ್ದರೆ, ಸ್ಪೀಡ್ ಪೋಸ್ಟಲ್ಲಿ ಕಳಿಬಹುದಿತ್ತು. ನೀನು ಅಲ್ಲಿ ಸಲ್ಲುವ ಹೊಸ ರಾಜಕುಮಾರಿ ’ ನನ್ನ ಮೊದಲ ಸಾಲಿನಿಂದಲೇ ಅವಳು ಬಾಯಿ ಬಿಗಿದು ನಗುತ್ತಿದ್ದಳು. ಮತ್ತೆ ಶೇಪ್ ಔಟು.

ಕೆಫೆ ಆಚೆ; ಅವಳ ಪ್ರಪಂಚ ಏನಿದೆಯೋ ನನಗೆ ಗೊತ್ತಿರಲಿಲ್ಲ. ಹಾಗೇನೆ, ನನ್ನ ಪ್ರಪಂಚ ಏನು ಅನ್ನೋದು; ಅವಳಿಗೂ ಗೊತ್ತಿರಲಿಲ್ಲ. ದಿನದ ಈ ಹತ್ತು-ಹದಿನೈದು ಅಥವಾ ಇಪ್ಪತ್ತು ನಿಮಿಷಗಳು ಅಪ್ಯಾಯಮಾನ ಅನ್ನಿಸುತ್ತಿದ್ದವು.
********* 2 **********

ಒಂದಿನ ‘ನಿನ್ನ ಸೊಂಟದ ಸೈಜು ಥರ್ಟಿನಾ? ’ ಅಂತ ಕೇಳಿದಳು.

‘ಹೌದು!! ಸ್ಟಾರ್ಟಿಂಗ್ ನಂಬರ್ ಅದು ಅನ್ಸತ್ತೆ. ಯಾಕ್ ಕೇಳ್ದೆ ? ‘ಅಂದೆ. ಅದಕ್ಕವಳು ಪ್ಯಾಂಟಿನ ಹಿಂಬದಿ ತೋರಿದಳು. ಹೊಸ ಜೀನ್ಸು ಪ್ಯಾಂಟಿಗೆ, ಅಂಟಿಸಿದ್ದ ಉದ್ದನೆಯ 30 ನಂಬರ್ ಸ್ಟಿಕ್ಕರ್ ಹಾಗೇ ಇತ್ತು. ಯಾರೂ ಗಮನಿಸಿರಲಿಲ್ಲವೋ ಅಥವಾ ಗಮನಿಸಿದರೂ ನನಗೆ ಹೇಳಿರಲಿಲ್ಲವೋ!! ಗೊತ್ತಿಲ್ಲ .ಇವಳು ಅದಕ್ಕೂ ನಗುತ್ತಿದ್ದಳು.

ಅದೊಂಥರ ದೇಜ-ವೂ ಕ್ಷಣದ ರೀತಿ. ಒಂದು ಕ್ಷಣದ ಮುಂಚೆ ಆ ನಗು ನೆನಪಾಗಿ!! ನಿಜವಾಗಿ!! ನಂತರ ಕಳೆದು ಹೋಗುತ್ತಿತ್ತು. 'ನೀನು ನಗೋದು ಅಷ್ಟು ಜೋರಾಗಿ ಕೇಳುಸ್ತಾ ಇದ್ದರೂ ಕೂಡ, ನೋಡೋದಕ್ಕೆ ಸ್ಲೋ ಮೋಷನ್ನಲ್ಲಿ; ಇನ್ನೂ ನಗ್ತಾನೆ ಇದಿಯ!! ಆಡಿಯೋ ಮತ್ತು ವೀಡಿಯೋ ಸಿಂಕ್ ಆಗ್ತಿಲ್ಲ!! ನನಗೇ ತಲೆ ಕೆಟ್ಟಿದೆಯಾ ಅಥವಾ ನೀನು ನಗೋದೆ ಹೀಗೆನಾ …? ’ ಅಂತ ಕೇಳಿದ್ದಕ್ಕೆ ‘ನಾನು ಅಷ್ಟೊಂದು ವಿಯರ್ಡ’ ಎನ್ನುತ್ತಾ ತನ್ ತಾನೆ ನೋಡಿಕೊಳ್ಳುವಳು.

ನನ್ನ ಮಾತು ಪ್ರಾರಂಭ ಆಗ್ತಿದ್ದಂಗೆ, ನಗೋದಕ್ಕೆ ಶುರು ಮಾಡುವಳು. ಒಂದೋ .. ಖುಷಿಗೆ ನಗ್ತಿದ್ದಳು. ಇಲ್ಲಾ ಇರಿಟೇಷನ್ ಎಲ್ಲೆ ಮೀರಿ ನಗು ಬರ್ತ ಇತ್ತು. ನಾನಂತೂ ಫುಲ್ ಶಕ್ತಿ ತುಂಬಿಕೊಂಡು, ಮುಚ್ಚುಮರೆಯಿಲ್ಲದೆ ಹತ್ತಿಸುತ್ತಿದ್ದೆ. ನನ್ನ ನಾನು ತುಂಬಾ ಲಕ್ಕಿ ಅಂತಲೆ ಅಂದುಕೊಳ್ತಿದ್ದೆ.

' ಒಂದ್ ಸಾರಿ ಯಾರನ್ನೋ ನೋಡಿದ್ದಕ್ಕೆ, ‘ಹಮ್ ಮ್‌ ಪರವಾಗಿಲ್ಲ. ಬೇರೆ ಬೇರೆಯವರನ್ನು ಕೆಟ್ಟ ದೄಷ್ಟಿ ಇಂದ ನೋಡ್ತಿಯ ‘ಅಂದಳು.

ನನ್ನಂತವನ ವಿಷಯದಲ್ಲಿ ಅದೆಂತ ಪೊಸೆಸಿವ್ ನೆಸ್ ಇರೋದಕ್ಕೆ ಸಾಧ್ಯ.

‘ಕೆಟ್ಟ ದೃಷ್ಟಿ ಅಲ್ಲ, ಹಾಗೆ!! ಒಳ್ಳೆ ದೃಷ್ಟಿ ಇಟ್ಟು ನೋಡಿದೆ. ’ ಅಂದೆ.

‘ ಒಟ್ನಲ್ಲಿ ದೃಷ್ಟಿ ಇಟ್ಟು ನೋಡಿದೆ. ’ ಅಂದಳು.

‘ರಸ್ತೆನಲ್ಲಿ ಸಿಗೋ ದೇವರಿಗೆಲ್ಲಾ, ಎಷ್ಟೇ ನಮಸ್ಕಾರ ಮಾಡಿದ್ರು, ಹಣ್ಣು ಕಾಯಿ ಹೊಡೆಸೋದು, ಮನೆದೇವರಿಗೆ ತಾನೆ …. ? ’ ಡೈಲಾಗ್ ಏನೋ ಹೊಡೆದೆ. ಆದರೆ ಅದನ್ನ ಅವಳಿಗೆ ಅರ್ಥ ಮಾಡಿಸೋದ್ರಲ್ಲಿ ಸಾಕಾಗ್ ಹೋಯ್ತು. ಸಧ್ಯದ ಮಟ್ಟಿಗೆ ನನ್ನ ಮನದೇವ್ರು ಆಗಿದ್ದಳು. ನನ್ನ ಅಸ್ತಿತ್ವವನ್ನ ‘ಬರಿ ಕನಸು’ ಅಂತ ಘೋಷಿಸಿ, ಈ ಸೌಂಧರ್ಯನುಭೂತಿಯಲ್ಲಿ ನಿಶ್ಚಿಂತೆಯಿಂದ ಇದ್ದು ಬಿಡಬೇಕು ಅನ್ನಿಸ್ತಿತ್ತು.


********* 3 *******


‘ ಹೆಣ್ಣಿನ ಸೌಂಧರ್ಯವನ್ನ ಹೊಗಳಬರದು, ಹೊಗಳಬಾರದು, ಹೊಗಳೋಕಾಗದು, ಹೊಗಳಿತೀರದು…

ಆದರೂ ಸ್ವಲ್ಪಾನು ಪಾರ್ಷಿಯಾಲಿಟಿ ಮಾಡದೇ, ಪ್ರಪಂಚದ ಮನಮೋಹಕ ವಸ್ತುಗಳನ್ನ, ಸೃಷ್ಟಿಗಳನ್ನ ನಿಮ್ಮ ಮುಸುಡಿಗಳ ಜೊತೆ ತಗಲಾಕುತ್ತಲೇ ಬಂದಿದ್ದೇವೆ.

ಅದೇನು ಸೌಂಧರ್ಯ ಅನ್ನೋದು ನಿಮ್ಮಿಂದ ಪ್ರಾರಂಭ ಆಗಿ, ಪ್ರಕೃತಿಯಲ್ಲಿ ಲೀನವಾಗುತ್ತೋ, ಅಥವಾ ಪ್ರಕೃತಿಯಿಂದ ಮೊದಲುಗೊಂಡು ನಿಮ್ಮ ಕಣ್ಣುಗಳಲ್ಲಿ ಕೊನೆಯಾಗುತ್ತೋ, ಅಥವಾ ನೀವೇ ಪ್ರಕೃತಿನೋ .?

ಗಂಡಿನ ರಸಿಕತೆ ಅನ್ನೋದನ್ನ, ಕಬ್ಬಿನ ಜಲ್ಲೆ ತರ ಅರೆದು ಅರೆದು ಹೊಗಳಿ, ಬರೆಸಿದ್ದೀರಿ. ’

ಇಂಥದರಲ್ಲಿ ನಿನ್ನನ್ನು ಯಾರು ಅಂತ ವರ್ಣಿಸಲಿ -

‘ ಜಿರಾಫೆ ನೆಕ್,ಕು ಒಂಟೆ ನೆಕ್ಕು ಅಂತ ಯಾರಾದ್ರು ನಿನ್ನನ್ನ ರೇಗಿಸಿದ್ರೆ, ಖುಷಿ ಪಡು. ಭುಜದೊಳಗೆ ಹುದುಗಿ ಹೋಗಿರೋದಕ್ಕಿಂತ, ಇಷ್ಟು ಎತ್ತರದವರೆಗೂ ಹಬ್ಬಿದೆ. ಅದರ ಚಂದವೊ ಚಂದ. ನಿನ್ನ ಎತ್ತರಕ್ಕೆ ಹೇಳಿ ಮಾಡಿಸಿದಂಗಿದೆ ಭುಜ. ನಿನ್ನ ಕೂದಲುಗಳ ಒರಳಾಟಕ್ಕೆ ಬೇಕಾದಷ್ಟು ಜಾಗವಿದೆ.`

‘ ನಿನ್ನ ಕೆನ್ನೆಗೆ ಗುಳಿಗಳು ಇಲ್ಲದೆ ಇರಬಹುದು. ಆದರೆ ಮಾತು-ಮಾತಿನ ಮಧ್,ಯೆ ಗಲ್ಲ ತಂತಾನೆ ಹಿಂಡಿಕೊಂಡು; ಮಧ್ಯೆ ಒಂದು ಸಣ್ಣ ಕೊರಕಲು ಮೂಡತ್ತಲ್ಲ; ಹುಚ್ಚು ಹಿಡಿಸುವಂತಿದೆ. `

‘ ಹಲ್ಲುಗಳು ಆರ್ಡರ್ ನಲ್ಲಿದ್ದರೆ ದಾಳಿಂಬೆ ಬೀಜಗಳು ಜೋಡಿಸಿಟ್ಟಂತಿವೆ ಅಂತಾರೆ. ಅದಿಲ್ಲ!! ಅಪ್ಪಿತಪ್ಪಿ ತಪ್ಪಾಗಿ ಮೇಲೆ ಬೆಳೆದಿರೋ, ಆ ಒಂದೇ ಒಂದು ಹೊರಗಿನ ಕೋರೆಹಲ್ಲು. ಅಬ್ಬಬ್ಬಾ!! ನಗೋವರೆಗೂ ರೆಪ್ಪೆ ಬಡಿಯದ ಹಾಗೆ ಕಾಯುವಂತೆ ಮಾಡತ್ತೆ. ಹಾಗಂತ ಪದೆ ಪದೆ ನೀನು ನಗಬೇಕು ಅಂತಲೂ ಇಲ್ಲ. ಕೋಪಿಸಿಕೊಂಡು ಬಾಯಿ ತೆಗೆದರೂ ಸಾಕು.’

‘ ದಪ್ಪಗಿದ್ದು, ಗುಡ್ಡೆ ಹೊರಬರುವಂತಿರೋ ಪ್ರಜ್ವಲ ಕಣ್ಣುಗಳಿಲ್ಲ. ಪರವಾಗಿಲ್ಲ. ತೆಗೆದಷ್ಟೇ ಮೆತ್ತಗೆ, ಹಾಸಿಗೆ ಮೇಲಿಂದ ಮೈಮುರಿದು ಏಳುವಂತೆ ತೆರೆದುಕೊಳ್ಳುವ ಸೋಮಾರಿ ರೆಪ್ಪೆಗಳು. ಒಳಗಿರೋದು ಕಪ್ಪೆಚಿಪ್ಪು ಮಧ್ಯದ ಎರಡು ಮುತ್ತುಗಳು ಅಂತ ಹೇಳಬಹುದಾ.? ಇಲ್ಲ ಬೇಡ. ಅವನ್ನ ಹೊಗಳೋದಕ್ಕೆ, ಕಲ್ಮಶಕಳೆದಿರೋ ಹಾಲು ಹಲ್ಲಿನ ಪುಟ್ಟ ಮಗುವಿಗೆ ಕನ್ನಡ ಕಲಿಸಬೇಕು. ಅದು ಹೇಳೋದನ್ನ ಕೇಳಿ ಹೇಳಬೇಕು.

ಕಣ್ಣಿನ ಕೆಳಗಿರೋ ಸಣ್ಣಗಿನ ಊದಿದಂತಹ ಗುರುತು. ಏನನ್ನಬೇಕು ಅದನ್ನ ಗೊತ್ತಿಲ್ಲ. ಮಲಗಿ ಎದ್ದಾಗ ಮಾತ್ರ ಇರತ್ತೆ ಅದು. ಆದರೆ ನಿನಗದು ಸ್ವಾಭಾವಿಕನೇ ಯಾವಾಗಲೂ ಉಳಿದುಬಿಟ್ಟಿದೆ. ಅಷ್ಟು ದಪ್ಪ ಕಾಡಿಗೆ ಹಚ್ಚಬೇಡವೆ ಹುಡುಗಿ. ಕಣ್ಣುಗಳಿಗೇಕೆ ಕಪ್ಪು ಬೇಲಿ.

‘ ನುಣುಪಾದ ಮುಖದ ಮೇಲೆ ಅಲ್ಲೋ ಇಲ್ಲೋ ಒಂದು ಸಣ್ಣ ಮಚ್ಚೆನಾದರೂ ಕಾಣಸಿಗಬಹುದಾ ಅಂತ ತುಂಬಾ ದಿನ ಹುಡುಕಿದ್ದೇನೆ. ಆದರೆ ಮಚ್ಚೆ ಇರಲಿ, ಒಂದು ಸಣ್ಣ ಕಲೆ ಕೂಡ ಕಾಣಿಸಲಿಲ್ಲ. ಪರವಾಗಿಲ್ಲ. ’

‘ ನಿನ್ನ ಬಣ್ಣ - ಬಿಳಿ, ಎಣ್ಣೆಗೆಂಪು, ಕೆಂದು ಅಂತೆಲ್ಲ ಹೇಳೋದಿಲ್ಲ. ಅದು ನಿನ್ನದೇ ಬಣ್ಣ. ನಿನ್ನ ಸೌಂಧರ್ಯಕ್ಕೊಂದು ಹೆಸರು ಸಿಕ್ಕ ದಿನ, ಆ ಬಣ್ಣದ ಹೆಸರನ್ನೂ ಹೇಳ್ತೇನೆ. ’

‘ ಮೂಗು ಸಂಪಿಗೆಯೋ-ಟಮೋಟವೋ ಅರಿಯೆ. ಮೂಗುತಿ ಹಾಕೋ ಹೆಸರಲ್ಲಿ, ಆ ನುಣುಪಿನ ಮೇಲೆ ಬಾವಿ ಮಾತ್ರ ತೊಡಬೇಡ. ಯಾವ ಮುತ್ತಿಗೂ, ಹರಳಿಗೂ ನಿನ್ನ ನೋಯಿಸುವ ಅಧಿಕಾರ ಇಲ್ಲ. ’

‘ ಯಾವುದು!! ಏನೇ ಇರಲಿ. ನಿನ್ನ ನೋಡಿದ ಯಾವೊಬ್ಬ ಅರಸಿಕನಾದರೂ ಕೂಡ ಮೊದಲು ಗಮನಿಸೋದು, ಆ ನಿನ್ನ ತುಟಿಗಳನ್ನ. ಅಲ್ಲ ಆ ತುಟಿಯ ಎರಡು ಕೊನೆಗಳನ್ನ, ಎರಡೂ ತುದಿಯಲ್ಲಿ ಸ್ವಲ್ಪ ಎಳೆದಿದ್ದಾರೆ ಅನ್ನೋ ಹಂಗಿದೆ. ತುಂಬಾ ಚಂದ ಇದೆ.’

‘ಒಬ್ಬ ಕಲಾವಿದ ಚಿತ್ರ ಬರೆಯೋವಾಗ ಕಣ್ಗಳಿಂದ ಶುರು ಮಾಡ್ತಾನಂತೆ. ಮೊದಲು ಆ ಕಂಗಳಿಗೆ ಜೀವ ಬಂದ ಮೇಲೆ, ಅದರ ಭಾವಕ್ಕೆ ತಕ್ಕಂತೆ ಉಳಿದದ್ದು ಬರೀತಾರಂತೆ. ಯಾರೋ ಹೇಳಿದ್ದು. ಬರಿ ಕಣ್ಣುಗಳಿಂದ ಚಿತ್ರಪಟದ ಮೂಡ್ ಅನ್ನೇ ಬದಲಿಸಬಹುದೇನೊ. ಆದರೆ ನನ್ನ ಪ್ರಕಾರ; ನಿನ್ನನ್ನು ತಿದ್ದುವಾಗ ಆ ದೇವರು ಮೊದಲು ಎಲ್ಲವನ್ನೂ ಒಪ್ಪವಾಗಿ ಮಾಡಿದ್ದಾನೆ. ಕೊನೆಗೆ ದೃಷ್ಟಿ ಆಗದೇ ಇರಲಿ ಅಂತ ಆ ತುಟಿಗಳ ಕೊನೆಯನ್ನ ಹಂಗೇ ಚೂಪು ಮಾಡಿ ಮುಕ್ಕು ಮಾಡಿದಂತಿದೆ. ಅವನ ಲೆಕ್ಕಾಚಾರ ತಲೆಕೆಳಗಾಗಿರೋದೆ ಅಲ್ಲಿ. ಒಟ್ಟು ಸೌಂಧರ್ಯವನ್ನ ಅಲ್ಲೇ ಇಟ್ಟ ಹಂಗಾಗಿದೆ. ಈ ತರದ ತುಟಿಗಳು ತುಂಬಾ ಅಪರೂಪ. ಇದ್ದವರು ಮಾತ್ರ ಗುರುತಿಸಿಕೊಳ್ಳೋದು ಆ ತುಟಿಗಳಿಂದಲೇ. ನೋಡಿದ ತಕ್ಷಣ ಫುಲ್ ಖುಷಿ ಆಗಿ ಬಿಡತ್ತೆ.’

ಇಷ್ಟು ಹೇಳಿ ಸ್ವಲ್ಪ ಸುಮ್ಮನಾದೆ; ಇನ್ನೂ ಹೇಳುವನಿದ್ದೆ. ಆದರೆ ಮೌನ!! ಅನ್ನೋದಕ್ಕೆ ಅರ್ಥವಿರುವುದಿಲ್ಲ. ಅವಳ ಮೌನವನ್ನ; ಹೇಗಂತ ಅರ್ಥ ಮಾಡ್ಕೋಬೇಕು ಗೊತ್ತಾಗಲಿಲ್ಲ.

‘ಪ್ಲೀಸ್ಡ್ ... ’ ಅಂದಳು

‘ಇಲ್ಲ!! ನೀನು ಹೆಮ್ಮೆ ಪಡಬೇಕು’ ಅಂದೆ.

‘ಒಂದು ಕ್ಷಣ ಆ ಸೌಂಧರ್ಯದ ಗತ್ತು ಕಾಣಿಸಿ ಮಾಯ ಆಯ್ತು. ಸುಯ್.... ಅಂತ ಗಾಳಿ ಬೀಸಿ ನಿಂತ ಮೇಲೆ, ದಬದಬದಬ ಮಳೆ ಸುರಿಯುತ್ತಲ್ಲ ಅಂತಹಾ ಸಂತೃಪ್ತಿಯ ಭಾವ ಅವಳ ಮುಖದಲ್ಲಿ. ಕನ್ನಡಿ ಇಲ್ಲದೇನೆ ತನ್ನ ಇಡೀ ದೇಹರಾಶಿಯನ್ನ ಅಹಮ್ಮಿನ ಭಾವದಲ್ಲಿ ಉಸಿರೆಳೆಯುತ್ತಾ ನೋಡಿಕೊಂಡಂತೆ. ಅವಳಲ್ಲಿ ಉಂಟಾದ ಆ ಸಣ್ಣ ಸಂಚಲನವನ್ನು ನೋಡಿದಾಗ, ನನ್ನ ಇಡೀ ಜೀವಮಾನವನ್ನೇ, ಈ ಒಂದು ಕ್ಷಣಕ್ಕಾಗಿ ಜೀವಿಸಿದ್ದೆನಾ ಅನ್ನಿಸ್ತು.

’ ನಾನು ಒಟ್ಟಾಗಿ ಆಗಿ ಹೇಗಿದ್ದೇನೆ ‘ ಅಂತಲೇ ಬಾಯಿ ಬಿಟ್ಟು ಕೇಳಿದಾಗ, ಇಷ್ಟೆಲ್ಲಾ ಹೇಳದೆ ಇರಲಾಗಲಿಲ್ಲ.
********* 4 *******

‘ ಹರಿಣಿ!! ನೀನು ಅಸ್ಸಾಮು ’ ಅಂದೆ.

ಅದು 'ಅಸ್ಸಾಮ್ ಅಲ್ಲ ಆ..ಸಂ!! ನೀನು ಜಾಬ್-ಲೆಸ್' ಅಂದಳು.

 ‘ಬೆಂಕಿ ಇಲ್ಲದೆ ಹೊಗೆ ಆಡತ್ತಾ..?’ ಅವಳು ಇರೋದು ಹೀಗೆಯೇ; ಅಪ್ರತಿಮ ಸುಂದರಿ. ಅದಕ್ಕಲ್ಲವೆ, ವರ್ಣಿಸಬೇಕು ಅಂದುಕೊಳ್ಳುತ್ತಿದ್ದಂತೆ, ಪದಗಳು ಗ್ರಾವಿಟಿ ಗೆ ಸಿಕ್ಕಂತೆ ತತ್ತರ ಬಿತ್ತರಾಗಿ ಬೀಳುತ್ತವೆ.

ಅಲ್ಲಿಂದ ಹೊರಟು ಹೋಗಲು, ಅವಳಿಗದು ಕೊನೆಯ ದಿನವಾಗಿತ್ತು. ನನ್ನ ಕೈಲಿ ಎರಡು ಫೋಲ್ಡೆಡ್ ಲೆಟರ್ ಇತ್ತು.

‘ಲವ್ ಲೆಟರಾ? ’ ಅಂತ ಕೇಳಿದಳು, ನಗುತ್ತಾ..

‘ಈ ಮೊದಲೇ ಹೇಳಿದ್ನಲ್ಲ. ಅದನ್ನ ನಿನಗೆ ಕೊಡೋದಕ್ಕೆ ಯಾರಿಗೂ… ಮೂರು-ಕಾಸಿನ ಯೋಗ್ಯತೆ ಇಲ್ಲ ಅಂತ.’

‘ಶಟ್ ಆಪ್ ’ ಅಂತ ಚೀರಿದಳು. ಹುಬ್ಬೇರಿಸಿ ಆ ಲೆಟರ್ ಗಳು ಏನಂತ ಸಂಜ್ನೆ ಮಾಡಿ ಕೇಳಿದಳು.

‘ಸ್ವಪ್ನ ಸುಂದರಿಯೊಬ್ಬಳು ಕನಸಲ್ಲಿ ಬಂದು, ‘ ನೀನು ಕವಿ ಆಗಬೇಕಿತ್ತು .. ‘ ಅಂತ ಆರ್ಡರ್ ಮಾಡೋ ರೀತಿನಲ್ಲಿ ಆಶೀರ್ವಾದ ಮಾಡಿದ್ದಳು. ಅವಳು ತಮಾಷೆಗೆ ಕವಿ ಅಂದ ಮೇಲೂ, ಒಂದು ಕವಿತೆ ಬರೆದು!! ಒಂದರ ಮೇಲೊಂದು ಕೂತಿರೋ ಕೋರೆ ಹಲ್ಲು, ಕಣ್ ತುಂಬಾ ಕಾಣೋ ರೀತಿ, ಒಂದು ವೈಡ್ ಸ್ಮೈಲ್ ತಗೋಳ್ದೇ ಇದ್ದರೆ, ನಾನೊಬ್ಬ ಬದುಕಿರೋದು ವೇಸ್ಟು ಅಂತ ಅನ್ನಿಸ್ತು. ಅದಕ್ಕೆ ಈ ಕವಿತೆ. ’

‘ ನೋಡಬಹುದಾ ’ ಅಂತ ಆತುರವಾಗಿ ಲೆಟರ್ ಪಡೆಯಲು ಮುಂದಾದಳು. ಯಾಕೋ ತೋರಿಸುವ ಮನಸಾಗಲಿಲ್ಲ. ‘ಇವತ್ತು ಬೇಡ ನಾಳೆ ತೋರಿಸ್ತೇನೆ’ ಅಂದೆ. ತುಂಬಾ ಇಷ್ಟ ಪಟ್ಟು ಬರೆದಿರುವ ಕವಿತೆ. ವರುಷಗಟ್ಟಲೆ ಎದೆಯಲ್ಲಿ ಕೊಳೆ ಹಾಕಿ ಬಿದ್ದಿದ್ದುವು; ಅದೆಶ್ಟೋ ಭಾವಗಳು. ಒಂದು ದಿನದ ಮಟ್ಟಿಗೆ ಹಾಳೆಯ ಮೇಲೂ ಇದ್ದೂ, ತಂಗಳಾಗಲಿ. ಅದು ಮೂಡಿದ ರಭಸಕ್ಕೇ… ನನ್ನನ್ನ ನಾನು ಸಂಭಾಳಿಸಲಾಗಿಲ್ಲ. ಇನ್ನು; ಅದಕ್ಕೆ ಅವಳ ಸ್ಪಂದನ ದಿಢೀರ್ ಅಂತ ಸಿಕ್ಕರೆ, ಸತ್ತೇ ಹೋಗ್ತೇನೆ, ಅನ್ನಿಸ್ತು.

ಕೊಟ್ಟಿರೋ ಪ್ರಶಸ್ತಿಗಿಂತ, ಆದನ್ನ ಈಸ್ಕೋಳೋವಾಗ ತೆಗೆದ ಆ ಫೋಟೋ ಫ್ರೇಮ್ ನ ಒರೆಸಿ ಒರೆಸಿ ಇಡ್ತೇವೆ. ಬಿರುದು, ಸಮ್ಮಾನಗಳಿಗಿಂತ ಕೊಟ್ಟವರು ಮುಖ್ಯ ಆಗಿರ್ತಾರಲ್ಲ, ಹಾಗೆ. ನನಗೆ ಇವಳ ಕಾಂಪ್ಲಿಮೆಂಟು ಹತ್ತಿರ ಅನ್ನಿಸ್ತು. ಬರೆದೆ; ಬರೆದೆ; ಬರೆದೆ; ತಾನು ಎಷ್ಟು ಸ್ಪೆಷಲ್ ಅನ್ನೋದು ಅವಳಿಗಷ್ಟೇ ಕಾಣಬೇಕು. ಅಷ್ಟು ಸುಂದರವಾಗಿ ನಾನದನ್ನ ಅವಳಿಗೆ ಕೊನೆಯದಾಗಿ ಹೇಳಬೇಕಿತ್ತು. ’

ಅವಳು ಬರಲ್ಲ ಅಂದುಕೊಂಡಿದ್ದೆ, ಬಂದಳು. ನನಗೋಸ್ಕರವೇ ಬಂದಿದ್ದಳು. ಕವಿತೆ ಒಡೆದು ತೆರೆಯಲು ಮುಂದಾದಳು. ಪುನಃ ತಡೆದೆ .

‘ತಡಿ!!, ಅದರಲ್ಲೇನಿದೆ ಹೇಳ್ತೇನೆ. ನಾ ಅಂದುಕೊಂಡ ಏರಿಳಿತದಲ್ಲೇ ಪ್ರಪಂಚಕ್ಕೆ ಈ ಕವಿತೆ ತೆರೆದುಕೊಳ್ಳಬೇಕು. ಅದನ್ನ ಹೇಳೋವಾಗ ಧ್ವನಿ ನಡುಗಬಹುದು, ತಪ್ಪು ತಿಳೀಬೇಡ.’

‘ ಉಸಿರು!! ಧನಿಪೆಟ್ಟಿಗೆಯಲ್ಲಿ ಮಾಡುಲೇಟ್ ಆಗೋವಾಗ, ಮನಸ್ಸು ಶಬ್ಧಗಳನ್ನ ಬಿಟ್ಟು ಭಾವಗಳನ್ನ ಚೇಸ್ ಮಾಡ್ತಿರತ್ತೆ. ನೀನು ಸೂಕ್ಷ್ಮವಾಗಿ ಆಲಿಸಿದರೆ, ಆ ತಲ್ಲಣಗಳನ್ನೂ ಗಳನ್ನೂ ಕೇಳಿಸಿಕೊಳ್ಳಬಹುದು.’

‘ ಯಾವ ರಾಗದಲ್ಲಿ ಹೇಳಬೇಕು ಅನ್ನೋದನ್ನ, ನನ್ನ ಕರ್ಕಶ ಉಸಿರು ನಿರ್ಧಾರ ಮಾಡತ್ತೆ. ಎಲ್ಲೆಲ್ಲಿ ನಿಲ್ಲಿಸಿ ಮುಂದಕ್ಕೆ ಹೋಗಬೇಕು ಅನ್ನೋದನ್ನ, ನಿನ್ನ ಆ ಸೋಮಾರಿ ಕಣ್ ರೆಪ್ಪೆಗಳು ನಿರ್ಧರಿಸುತ್ತವೆ. ’

‘ ಇದು ನಿನಗಾಗಿ ಬರೆದ ಕವಿತೆ. ನಾ ಬರೆದ ಕವಿತೆ. ’

‘ಸರಿ!! ಸರಿ!! ಇನ್ನೊಂದು. ಕೈನಲ್ಲಿರೋದೇನು. ’ ಕೈಗೆ ಮೈಸೂರ್ ಪಾಕ್ ಕೊಟ್ಟರೂ, ಮುಚ್ಚಿಟ್ಟ ಡಬ್ಬಿಯಲ್ಲಿ ಮತ್ತೆ ಏನಿರಬಹುದು ಅಂತ ಹುಡುಕುವ ಎಳೆ ಹುಡುಗಿಯದ್ದಿದ್ದಂತಿತ್ತು, ಆ ಮುಖ.

‘ಎರಡೂ ಹಾಳೆನಲ್ಲೂ ಅದೇ ಕವಿತೆ ಇದೆ. ಒಂದು ಬೈಯರ್ ಕಾಪಿ, ಇನ್ನೊಂದು ಬ್ಯಾಂಕ್ ಕಾಪಿ ತರ.’ ಅಂದೆ. ಅವಳಿಗೆ ಅರ್ಥ ಆಗಲಿಲ್ಲ.

‘ ನನ್ನದೊಂದು ಚಿಕ್ಕ ವಿಷ್ ಇದೆ. ತುಂಬಾನೆ ಪುಟ್ಟ ಆಸೆ. ಈ ಎರಡೂ ಹಾಳೆಗಳ ಮೇಲೂ ಇಬ್ಬರೂ ಸಹಿ ಮಾಡೋಣ. ನಿನ್ನ ಕಾಪಿ, ಮನೆಗೆ ಹೋದ ಮೇಲೆ ಹರಿದು ಬಿಸಾಡು. ಆದರೆ ನಾನಿದನ್ನು ಕಾಪಾಡಿಕೊಳ್ತೇನೆ. ಎಲ್ಲಿವರೆಗೂ ಅಂದ್ರೆ, ಗೊತ್ತಿಲ್ಲ.

ಯಾರಾದ್ರು ‘ನಶೆ’ ಅಂದ್ರೆ ಏನು. ? ‘ಸ್ಟೊನ್ಡ್’ ಅಂದ್ರೆ ಏನು. ? ಅಂತ ಕೇಳಿದ್ರೆ, ಇದನ್ನ ತೋರಿಸಬೇಕು. ನಿನ್ನದು ರಾ ಬ್ಯೂಟಿ!! ನನ್ನದು ಅಂತಹದ್ದೇ ಒಂದು ರಾ ಕವಿತೆ. ’

‘ನೀನು ಇಷ್ಟು, ಅಗ್ರೆಸ್ಸೀವ್ ಆಗಬೇಡ. ಭಯ ಆಗತ್ತೆ. ಯಾರಾದ್ರು ಹೊಗಳಿದರೆ ಖಂಡಿತ ಖುಷಿ ಆಗತ್ತೆ. ಆದರೆ, ನಿನ್ನನ್ನ ಜನ ಹುಚ್ಚ ಅಂತಾರೆ ’ ಅಂದಳು.

ಕವಿತೆ ಕೇಳಿದ ಮೇಲೆ, ಅವಳು ಯಾವುದರ ಮೇಲೂ ಸಹಿ ಮಾಡಲಿಲ್ಲ. ಆ ಎರಡೂ ಕಾಪಿಗಳ ಮೇಲೆ, ನನ್ನ ಸಹಿ ಹಾಕಿಸಿಕೊಂಡು, ಎರಡನ್ನೂ ಈಸ್ಕೊಂಡಳು. ’

ಕೇಳಿದ್ದಕ್ಕೆ - ‘ ಈ ಕವಿತೆ; ನಾನು ಕೊಂಡುಕೊಳ್ಳಲು ಆಗದೇ ಇರೋ ದುಬಾರಿ ಕನ್ನಡಿ. ‘ ಅಂದಳು, ಸಹವಾಸದೋಷದಿಂದ.

‘ ಇದು ಅಮೂಲ್ಯ ಉಡುಗೊರೆ!! ಇದನ್ನ ನನ್ನ ಹತ್ತಿರ ಇಟ್ಟುಕೊಂಡಿರ್ತೇನೆ. ನಿನಗಿದು ಬೇಡ. ನಿನ್ನ ಖುಷಿ!! ಉತ್ಸಾಹ!! ಆ ಕ್ಷಣದ ಹುಚ್ಚುತನಕ್ಕೆ!! ಮಾತ್ರ ನಾನು ಸೀಮಿತ ಆಗಬೇಕು. ನೆನಪಾಗಿ ಕಾಡಬಾರದು. ನನ್ನ ಪಳಯುಳಿಕೆಗಳು, ನಿನ್ನ ಹತ್ರ ಉಳಿಬಾರದು. ’ ಅಂದಳು.

ನೆನಪಿಸಿಕೊಂಡರೂ ಅವಳದು ಇಂಥದೇ ಪಿಕ್ಚರ್ ಅನ್ನೋದು ಮನದಲ್ಲಿ ಮೂಡೋದಿಲ್ಲ. ಅವಳ ಸಾವಿರ ಚೇತನಗಳಲ್ಲಿ, ಯಾವುದಂತ ಸೆರೆಹಿಡಿಯಲಿ. ಅವಳ ಸೌಂಧರ್ಯದ ಕವಲುಗಳನ್ನ ಕೂಡಿ ಹಾಕೋದಕ್ಕೆ, ಎರಡು ರಸಿಕ ಕಣ್ಣುಗಳು ಬೇಕು. ಆ ಸೌಂಧರ್ಯಕ್ಕೆ ಸೋತ ಕಣ್ಣುಗಳಿಗೆ, ಕಲ್ಪನೆಗಳ ರೆಕ್ಕೆ ಮೂಡಬೇಕು. ಅಲ್ಲಿಂದಾನೆ, ತಾನು ಕಂಡ ವಿಸ್ಮಯವನ್ನ ಆ ಕಣ್ಗಳು ತನ್ನ ಒಡೆಯನ ಅಭಿವ್ಯಕ್ತಿ ಮಾಧ್ಯಮದ ಮೂಲಕ ಪ್ರಪಂಚಕ್ಕೆ ಹಂಚಬೇಕು. ಸೌಂದರ್ಯ; ಸೌಂದರ್ಯ ಅಂದ್ರೆ ನಶೆಯ ನೆರಳು. ಹಿಂದಲೆಯ ಭಾರ. ಎಲ್ಲರೂ ಎಚ್ಚರವಾಗಿರ್ತಾರೆ. ಹಾಗಂತ ಅಂದುಕೊಂಡಿರ್ತಾರೆ.

Comments

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ. ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ. ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು. 'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು. ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ... 'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ ' ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು. ' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು. ' ಲ

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು. ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿ

ಇಬ್ಬರು ಪೋಕರಿ ಮಕ್ಕಳ ಜೊತೆಗೆ

ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್ ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು' ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು......  ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಬಾಧೆ. ' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? ' ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ. ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು ಕಟಾವು ಮಾಡುತ್ತಿದ್ದರು. 'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬ

ಎಮ್ಮೆ ಕಾನೂನು ; ಜಸ್ಟಿಸ್ ಡೀಲೈಡ್ ಈಸ್ ಜಸ್ಟಿಸ್ ಡಿನೈಡ್

'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ,  ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ,  ಸೊ ಅದನ್ನು  ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ.  ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ.  ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು,  ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ,  ಗಾಡಿ ಓಡಿಸಬೇಕು.  ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ,  ಬೈಕು ನಿಲ್ಲಿಸಬೇಕು.  ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್  ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ,  ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ. ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ, ‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್ ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು. ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ ಹಾಕಿಸಿಕೊಂಡವರಿರಬಹುದು ಎಂದು

ತೀರದ ಹುಡುಕಾಟ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. 'ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.' ​ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ... ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು. ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲ

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)  ' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ' ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.  ಬಹುಷಃ ಹಳೇ ಸಿನಿಮಾಗ

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!! ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ. ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. 'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ. ' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. 'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು. 'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ. ಇಬ್ಬರೂ ಎದ್ದು ಹೊರಟರು. ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು ' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' . 'ಯಾಕೆ..? ನಾನೇನ್ ಮಾಡಿದೆ..?' ಎಂದ. 'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು, **ಪೋಷಾಕು** ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು. ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ. ನನ್ನನ್ನು ನೋಡುತ್ತಿದ್ದಂತೆ ಅಮ

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು. ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು. ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು. ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ, ಇವರನ್ನು ಒಂದೇ ಮನೆಯ ಅಣ್ಣ ತ