ಜೈಮಿನ ಭಾರತವೂ ಮತ್ತು ಗಂಗೆಯ ಒಡಲಿನ ಆಮೆಗಳೂ
ಪವಿತ್ರ ಗಂಗಾ ನದಿ ತಟದಲ್ಲಿ, ಸತ್ತವರ ಅಂತಿಮ ಸಂಸ್ಕಾರ ಮಾಡುವರು ಮತ್ತು ನಂತರದ ಅಸ್ಥಿಯನ್ನ, ನದಿ ನೀರಿಗೆ ಹಾಕುವರು. ಅಲ್ಲಿಗೆ ಸತ್ತವನ ಆತ್ಮಕ್ಕೆ ಶಾಂತಿ. ಬೂದಿ ಹಾಕೋದ್ರಿಂದ ಗಂಗೆ ಮೈಲಿಗೆ ಆಗಲ್ಲ ಬಿಡಿ. ಆದರೆ ಸುಡುತ್ತಿರುವಾಗ, ಸೌದೆ ಖಾಲಿ ಆಗಿಬಿಟ್ಟರೆ, ಅರ್ದಂಬರ್ಧ ಸುಟ್ಟಿರೋ ದೇಹಗಳನ್ನ ನೀರಿಗೆ ಹಾಕುವರಂತೆ. ಕೆಲವು ಸಾರಿ ಫ್ರೆಷ್ ಆಗಿರೋ ಡೆಡ್ ಬಾಡಿಯನ್ನೇ ಸಲೀಸಾಗಿ ಗಂಗೆಯ ಮಡಿಲಿಗೆ ಹಾಕಿ ಕೈ ತೊಳೆದುಕೊಳ್ಳುವರಂತೆ. ಈ ವಿಷಯಗಳು ಬಹಳಷ್ಟು ಮಂದಿಗೆ ತಿಳಿದಿರುವಂತದ್ದೆ. (ಸಿನಿಮಾಗಳಲ್ಲಿ ನೋಡಿರುವಂತೆ) ಆದರೆ ಇಂಟರೆಸ್ಟಿಂಗ್ ಆಗಿರೋ ವಿಷಯ ಹೇಳ್ತೇನೆ ಕೇಳಿ. 

ನೀರನ್ನೆಲ್ಲಾ ಹೊಲಸನ್ನಾಗಿಸಿರುವ ಅರ್ಧಂಬರ್ಧ ಬೆಂದ ದೇಹಗಳನ್ನ, ತಿಂದು ಹಾಕಲು, ಸರ್ಕಾರದವರು ವಿಶೇಷ ಜಾತಿಯ ಆಮೆಗಳನ್ನ ಗಂಗೆಗಯ ಮಡಿಲಿಗೆ ಬಿಟ್ಟರಂತೆ. ಜಸ್ಟ್ ಇಮ್ಯಾಜಿನ್. ಈ ಆಮೆಗಳು ಮನುಷ್ಯನ ಫ್ಲೆಷ್ ತಿಂದು ಗಂಗೆಯನ್ನು ಸ್ವಚ್ಛಗೊಳಿಸುತ್ತಿರುವ ಅಮೋಘ ಸನ್ನಿವೇಶ. ಆಮೆಗಳು ಬೃಹದಾಕಾರವಾಗಿ ಬೆಳೆದು, ದೊಡ್ದಾಮೆಗಳಾಗಿ ಜೀವಂತ ಮನುಷ್ಯರನ್ನೇ ಭೇಟೆಯಾಡುವ ಕಲ್ಪನೆಗಳು ತಟ್ಟನೆ ಕಣ್ಣ ಮುಂದೆ ಬಂದು, ಮುದ ನೀಡುತ್ತವೆಯಲ್ಲವೆ. ಆದರೆ ದೊಡ್ಡಾನೆಗಳ ದುರಂತದ ಕಥೆ ಕೇಳಿ.

ಮಾಂಸದ ಆಸೆಯಿಂದ, ಅಲ್ಲಿನ ಲೋಕಲ್ ಪಾಪುಲೇಷನ್ ಗಳು ಆಮೆಗಳನ್ನು ಭೇಟೆಯಾಡಿ ತಿಂದು ಹಾಕುತ್ತಿರುವರಂತೆ. ಸಮಾಜ ಕಲ್ಯಾಣ ಮಾಡಲು ಬಂದ ಆಮೆಗಳು ನಾಶವಾಗುತ್ತಿವೆ. 'ಆಮೆಗಳ ಸಂತತಿ ಹೆಚ್ಚಾಗಿ !, ಅಭಿವೃಧ್ದಿ ಕಾರ್ಯಗಳಿಗೆ ತೊಡಕಾಗಿದೆ ' ಎಂಬುದು ಮತ್ತೊಂದು ಮೂಲದ opposite ಸುದ್ಧಿ. ಇದನ್ನ ಓದಿದಾಗ, ಜೈಮಿನಿ ಭಾರತದ ಒಂದು ಘಟನೆ ನೆನಪಾಗ್ತ ಇದೆ. 

---

ಕುರುಕ್ಷೇತ್ರದ ನಂತರ ಅಣ್ಣಂದಿರನ್ನು ಕೊಂದ ಪಾಪ ಪರಿಹಾರಕ್ಕಾಗಿ, ಅರ್ಜುನ(ಪಾಂಡವರು) ಅಶ್ವಮೇಧ ಯಾಗ ಮಾಡುವ. ಅಶ್ವಮೇಧ ಯಾಗ ಅಂದ್ರೆ, ಯಾಗದ ಕುದುರೆ ಹಾದುಹೋಗುವ ಮಾರ್ಗದಲ್ಲಿ ಸಿಗುವ ಪ್ರತಿಯೊಬ್ಬ ರಾಜರು ಮತ್ತು ಸಾಮಂತರು ಆ ಕುದುರೆಗೆ ತಲೆಬಾಗಬೇಕು. ತೀಟೆ ಇದ್ದವರು ಕುದುರೆಯನ್ನ ಕಟ್ಟಿ ಹಾಕುದ್ರೆ, ಅವರ ಹತ್ರ ಯುದ್ಧ ಮಾಡಿ ಕುದುರೆಯನ್ನು ಬಿಡಿಸಿಕೊಂಡು ಮುಂದಕ್ಕೆ ಹೋಗಬೇಕು. 

ಈ ಲಾಂಗ್ ಜರ್ನಿಯಲ್ಲಿ ಒಬ್ಬಳು ರಾಜನ ಹೆಂಡತಿ (ಹೆಸರು ನೆನಪಿಲ್ಲ). ಆ ಕುದುರೆಯನ್ನು ಕಟ್ಟಿ ಹಾಕಿಸುವಳು. ರಾಜನಿಗೆ ಇಷ್ಟ ಇಲ್ಲದೆ ಇದ್ದರೂ ಹೆಂಡತಿಯ ಒತ್ತಾಸೆಯಿಂದ ಕುದುರೆ ಕಟ್ಟಿ, ಯುದ್ಧ ಮಾಡಲು ಹೋಗಿ ಹೊಗೆ ಹಾಕಿಸಿಕೊಂಡು ವಾಪಾಸು ಬರುವನು ರಾಜ. ' ಆಳುವವನು ಹೆಂಡ್ರು ಮಾತು ಕೇಳಿ ಹಾಳಾಗೋದೆ ' ಅಂತ ಹೆಂಡತಿಗೆ ಯಕ್ಕಾಚಿಕ್ಕಿ ಉಗಿದಾಕುವನು. ಈಗ ಹೆಂಡತಿಗೆ ಅರ್ಜುನನ ಮೇಲೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. 

' ಹೋಗಯ್ಯ. ಗಂಡ ನಿನ್ನ ಕೈಲಾಗದೆ ಇದ್ರೆ ಏನಂತೆ, ಅರ್ಜುನನ್ನ ನಾನು ಕೊಲ್ಲುತ್ತೇನೆ ' ಎಂದು ಶಪತ ಮಾಡಿ ಮನೆಯಿಂದ ಹೊರಬೀಳುವಳು. ನನಗಂತೂ, ಲಕ್ಷ್ಮೀಶ(ಕರ್ತೄ) ಆ ಹೆಂಗಸಿನ ಕೈಲಿ ಈಗ. ಏನೇನು ಮಾಡಿಸಬಹುದು ಎನ್ನುವ ಕುತೂಹಲ. ಅಲ್ಲಿಂದ ಹೊರಟ ಆ ಹೆಂಡತಿ ಸೀದ ಗಂಗಾ ನದಿಯ ದಡಕ್ಕೆ ಬರುವಳು. ಅಲ್ಲಿ ನಾವಿಕರಿಗೆ ಪ್ರಶ್ನೆ  ಹಾಕುವಳು. 

' ಇಲ್ಲಿ ಯಾರಾದ್ರು ಈ ಅಪವಿತ್ರೆ ಗಂಗಾ ನದಿಯ, ಹನಿ ನೀರನ್ನೂ ಮುಟ್ಟಿಸದ ರೀತಿಯಲ್ಲಿ, ಆಚೆ ದಡಕ್ಕೆ ನನ್ನನ್ನು ಕರೆದೊಯ್ಯುವಿರಾ. ' (ಗಂಗೆಯನ್ನು ಉರ್ಸೋದಕ್ಕೆ ಪ್ಲಾನು ) ಅಲ್ಲಿರುವರಿಗೆಲ್ಲಾ ಆಶ್ಚರ್ಯ. ' ಎಲಾ ಇವಳ ಗಂಗಾ ನದಿಯ ನೀರನ್ನು ಮುಟ್ಟುವುದು, ಜನ್ಮಜನ್ಮದ ತಪಸ್ಸಿನ ಫಲ ಅಂತ ಜನ ತಿಳಿದಿರುವಾಗ. ಇವಳು ಎಲ್ಲಿಂದ ಬಂದಳು. ' ಅಂತ ಸಿಡುಕುವರು. 

' ಯಾಕಮ್ಮ ಹೆಂಗೈತೆ ಮೈಗೆ. ಗಂಗೆಯನ್ನೇ ಅಪವಿತ್ರೆ ಅಂತ ಹೇಳ್ತೀಯ ಏನು ರೀಸನ್ನು. ' ಅಂತ ಕೇಳಿದರು. ಆಗ ಆ ಹೆಂಡತಿ ' ಗಂಗೆಗೆ ಮಾತ್ರ ಆ ಕಾರಣವನ್ನು ಹೇಳುತ್ತೇನೆ. ನಿಮಗೆಲ್ಲಾ ಹೇಳಕ್ಕಾಗಲ್ಲ. ' ಎಂದುಬಿಟ್ಟಳು. 

ಗಂಗೆ ಲಬಕ್ಕಂತ ಪ್ರತ್ಯಕ್ಷ. ಶ್ಯಾನೆ ಕುತೂಹಲ ದಿಂದಾಗಿ. 'ಹೆಂಗಸರಿಗೆ ಬೈದರೆ, ಕಾರಣ ತಿಳಿದುಕೊಳ್ಳುವ ಕೆಟ್ಟ ಕುತೂಹಲ ' ಗಂಗೆಯಂತ ಗಂಗೆಯನ್ನೂ ಬಿಡಲಿಲ್ಲ ಎಂಬುದಾಗಿಯೂ ಮತ್ತು 'ಹೆಂಗಸರಿಗೆ ಕೋಪ ಬಂದರೆ, ಅರ್ಜುನನಂತ ಅರ್ಜುನನೂ ಸಾಯಬೇಕಾಗುತ್ತದೆ. ' ಎಂಬುದಾಗಿಯೂ ತನ್ನ ಕಾವ್ಯದಲ್ಲಿ ಭಲೇ ಸೊಗಸಾಗಿ ನಿರೂಪಿಸುತ್ತಾನೆ ಲಕ್ಷ್ಮೀಶ. 

ಏನೇ ಆಗಲಿ, 'ಆ ಹೆಂಡ್ತಿ ವಾಸ್ ಕರೆಕ್ಟು '. ಗಂಗೆ ಸಿಕ್ಕಾಪಟ್ಟೆ ಮಲಿನಳಾಗಿದ್ದಾಳೆ.

Comments