Skip to main content

ಮಣ್ಣು ಮಾಡಿದ ದಿನಕೆಲಸದಿಂದ ಬಂದಾಗ ಆರು ವರೆಯಾಗಿತ್ತು. ಅಡುಗೆ ಮನೆಗೆ ಹೋದೆ. ಈರುಳ್ಳಿ, ಟಮೋಟ, ಹಸಿ ಮೆಣಸಿನಕಾಯಿ, ತೊಗರಿ ಬೇಳೆ; ಇಷ್ಟನ್ನ ಕುಕ್ಕರ್ ಒಳಗೆ ಹಾಕಿ; ಎರಡು ಲೋಟ ನೀರು ಸುರಿದು; ಸ್ಟೌವ್ ಮೇಲಿಟ್ಟೆ. ಕುಕ್ಕರಿನ ಮುಚ್ಚಳವನ್ನೂ, ವಿಷಲ್ ಹಾಕುವ ತೂತನ್ನೂ. ಒಮ್ಮೆ ಉಸಿರು ಕಟ್ಟಿ ಊದಿ, ಮುಚ್ಚಿದ್ದಾಯ್ತು.

ಐದಾರು ವಿಷಲ್ ಕೂಗುತ್ತಿದ್ದಂತೆ ಇಳಿಸಿ, ಎರಡು ಚಮಚೆಯಷ್ಟು ಅಮ್ಮ ಮಾಡಿ ಕೊಟ್ಟಿದ್ದ ಸಾಂಬಾರ್ ಪುಡಿ, ಸ್ವಲ್ಪ ಉಪ್ಪು ಹಾಕಿ; ಮಸೆದು, ಸಾಸಿವೆ ಸಿಡಿಸಿ ಒಗ್ಗರಣೆ ಹಾಕಿದ್ದಾಯ್ತು. ಚೆನೈ ಅಲ್ಲ, ಭೂಮಿ ಮೇಲೆ ಎಲ್ಲಿದ್ದರೂ ಮನೆಯದ್ದೇ ರುಚಿಯ ಸಾಂಬಾರು ತಯಾರಾಗುತ್ತದೆ.

ಮನೆಯಿಂದ ಎರಡು ಮಿಸ್ ಕಾಲುಗಳು ಬಂದಿದ್ದವು. ಆರನೇ ಪ್ರಜ್ಞೆ ಅನ್ನೋದೊಂದು ಜಾಗೃತವಾಗಿತ್ತು. ‘ ಮನೆಯಿಂದ ಇಂತದೊಂದು ಫೋನ್ ಕಾಲು ಬರಬಹುದು ’ ಎಂಬ ವಿಚಿತ್ರ ಆಲೋಚನೆಗಳು ತಲೆಯನ್ನು ಬಳಸಿ, ಸುತ್ತಿ ಹೋಗುತ್ತಿದ್ದವು. ತಿರುಗ ಮನೆಗೆ ಫೋನಾಯಿಸಿದೆ. ಬೆರಳುಗಳು ನಡುಗಿತ್ತಿದ್ದವು. ಅತ್ತ ಕಡೆ ಅಪ್ಪಾಜಿ ಫೋನ್ ರಿಸೀವ್ ಮಾಡಿದರು.

‘ ರಜೆ ಇದ್ದರೆ ಊರಿಗೆ ಬಾss ಪ್ಪ, ಪವನಿ ನಿನ್ನ ನೋಡಬೇಕು ಅಂತಿದ್ದಾನೆ ’ ಅಂದರು.

ಅಪ್ಪಾಜಿನೆ ಫೋನ್ ಮಾಡಿದ ಮೇಲೆ, ಪರಿಸ್ಥಿತಿ ಗಂಭೀರವಾಗಿರುವುದು ಗೊತ್ತಾಯ್ತು. ಯಾಕಂದ್ರೆ, ವಿಷಯ ಗಂಭೀರವಾಗದ ಹೊರತು ಅವರು ತಿಳಿಸುವುದು, ಕರೆಯುವುದು ಮಾಡುವುದಿಲ್ಲ.

ಅಜ್ಜಿ, ಅಪ್ಪನಿಂದ ಫೋನ್ ಪಡೆದು, ಮನೆಯಿಂದ ಹೊರ ಬಂದು ಮಾತಾಡೋದಕ್ಕೆ ಶುರು ಮಾಡಿದರು.

‘ ಅವನು ಉಳಿಯೋದು ಕಷ್ಟ ಇದೆ. ಬಂದುಬಿಡಪ್ಪ ಊರಿಗೆ. ಕೊನೆಯದಾಗಿ ನಿನ್ನ ತಮ್ಮನ ಜೊತೆ ಸ್ವಲ್ಪ ದಿನ ಕಳೆಯುವಂತೆ. ’

ಅಜ್ಜಿಯ ಧನಿಯಲ್ಲಿ ದುಃಖ ಇದ್ದರೂ, ತುಂಬಾ ಸುಲಭವಾಗಿ ಆ ಮಾತನ್ನ ಅವರು ಹೇಳಿದರು.

ಪುನಃ ಅಮ್ಮನ ಬಾಯಲ್ಲೂ, ಅದೇ ಮಾತನ್ನ ಕೇಳುವ ಆಸೆ ಇರಲಿಲ್ಲ. ಯಾಕಂದರೆ, ಅವಳು ಅಜ್ಜಿಯಂತೆ, ಮನೆಯಿಂದ ಹೊರ ನಡೆದು ಬಂದು ಮಾತನಾಡುವಷ್ಟು ಅದೃಷ್ಟವಂತೆಯಾಗಿರಲಿಲ್ಲ.

ಒಂದು ಸಣ್ಣ ಅಪಘಾತದಲ್ಲಿ ಕಾಲಿನ ಮೂಳೆ ಮುರಿದಿತ್ತು. ಬ್ಯಾಂಡೇಜು ಸುತ್ತಿದ್ದ ಕಾಲು ಚಾಚಿ ಮಂಚದ ಮೇಲೆಯೇ ಮಲಗಿರುತ್ತಿದ್ದಳು. ತಮ್ಮನ ಮಗ್ಗುಲಲ್ಲೇ ಸದಾ ಕಾಯುತ್ತಾ ಮಲಗಿರುವ, ಅನಿವಾರ್ಯತೆಯು ಸೃಷ್ಟಿಯಾಗಿದ್ದು ಕಾಕತಾಳೀಯ ಮಾತ್ರವಾಗಿತ್ತು.

ಅಧಿಕೃತ ಕರೆ ಬಂದ ಮೇಲೆ, ಗ್ಯಾಸ್ ಬಂದ್ ಮಾಡಿ; ಸಿಕ್ಕ-ಷ್ಟು ಬಟ್ಟೆ ಬ್ಯಾಗಿಗೆ ತುಂಬಿಕೊಂಡು ಹೊರಟೆ. ಮತ್ತೆ ಮನೆಯಿಂದ ಕಾಲ್ ಬಂತು.

‘ ಗಾಬರಿ ಮಾಡ್ಕೋ ಬೇಡ; ಆರಾಮಾಗಿ ಬಾ; ಅಂಥಾದ್ದೇನಿಲ್ಲ; ಹುಷಾರಿಲ್ವಲ್ಲಾ. ಸ್ವಲ್ಪ ದಿನ ಜೊತೆನಲ್ಲಿ ಇದ್ದರೆ; ಚೆನ್ನಾಗಿರ್ತಿತ್ತು; ಅಷ್ಟೆ. ’ ಒಂದೊಂದು ಮಾತಿಗೂ ಅವರು ತಡವರಿಸುತ್ತಿದ್ದದ್ದೂ, ಕೇಳಲಾಗಲಿಲ್ಲ.


******* ೧ *******


ರಾತ್ರಿ ಹನ್ನೊಂದು ಘಂಟೆ. ಚನೈನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ರೈಲುಗಾಡಿ ಸಂಪೂರ್ಣವಾಗಿ ತುಂಬಿ ಹೋಗಿತ್ತಾದರೂ, ಕಿಟಕಿಯ ಬಳಿ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಇನ್ನು, ಬೆಂಗಳೂರು ಬರೋ ವರೆಗೂ ಯಾರೂ ಅಲ್ಲಾಡುವಂತಿಲ್ಲ. ಟಾಯ್ಲೆಟ್ ಬಂದವರೂ ಎದ್ದು ಹೋಗುವಂತಿಲ್ಲ.

ಇಪ್ಪತ್ತು ವರ್ಷ ಪ್ರಾಯದ ತಮ್ಮನಿಗೆ ಸೀರಿಯಸ್ಲಿ ಸೀರಿಯಸ್ಸು. ನಾನು ಅವನನ್ನ ನೋಡೊದಕ್ಕೆ ಹೋಗ್ತಾ ಇದೀನಿ. ಹುಟ್ಟಿನಿಂದಲೂ ಹೃದಯರೋಗಿ ಅವನು. ಮೂರು ವರುಷಗಳ ಹಿಂದೆ, ಖ್ಯಾತ ಹಾರ್ಟ್ ಆಸ್ಪತ್ರೆಯೊಂದರಲ್ಲಿ ಹಾರ್ಟ್-ಆಪರೇಷನ್, ಮಾಡಿಸಿಕೊಂಡು ಬಂದಿದ್ದರು(ಹಂಗಂತ ಹೇಳಿದ್ದರು). ತದನಂತರ, ಅವನು ಸಂಪೂರ್ಣ ಗುಣನಾದನು ಎಂಬ ಭ್ರಮೆಯಲ್ಲಿ ನಾನೂ ಇದ್ದೆ.

‘ ಅವನಿನ್ನೂ ಚಿಕ್ಕ ಹುಡುಗ ಅಲ್ಲ; ತನ್ನ ಕಾಲ ಮೇಲೆ ನಿಂತು ಸ್ವಾವಲಂಬಿ ಆಗಬೇಕು. ಅದಕ್ಕೆ ಎಜುಕೇಷನ್ ಅನಿವರ್ಯ ’ ಎಂದೆಲ್ಲಾ ಹಾರಾಡಿ, ತಮ್ಮ ‘ಪವಿ’ ಯನ್ನು ಹೈಸ್ಕೂಲಿಗೆ ಕಳುಹಿಸುವಂತೆ ಪಟ್ಟು ಹಿಡಿದೆ.

ಅವನಿಗೂ ಸ್ಕೂಲು-ಕಾಲೇಜಿನ ಕಲ್ಪನೆಗಳು ಅತೀವವಾಗಿ ಸೆಳೆದಿದ್ದವು.

ನನ್ನ ಮಾತಿಗೆ ಮನೆಯವರು ಸೊಪ್ಪು ಹಾಕಲಿಲ್ಲ. ಹಳ್ಳಿಯಿಂದ ದೂರವಿದ್ದ ಹೈಸ್ಕೂಲಿಗೆ ಯಾವುದೇ ಕಾರಣಕ್ಕೂ ಕಳುಹಿಸುವುದಿಲ್ಲವಾಗಿ ಹೇಳಿದರು.

ಆ ದಿನಗಳಲ್ಲಿ ಪವಿಯ ಆರೋಗ್ಯ ಸಮಸ್ಯೆಯ ಆಳ-ಅರಿವುಗಳ ಕಲ್ಪನೆ ನನಗಿರಲಿಲ್ಲ. ಅಮ್ಮ, ಪವಿಗಾಗಿರುವ, ಹಾರ್ಟ್ ಆಪರೇಷನ್ ಪ್ರಸಂಗ ಕೇವಲ ಒಂದು ನಾಟಕವಾಗಿಯೂ; ಅವನ ಹೃದಯ, ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆಯೆಂದೂ; ಅವನು ಕೊನೆಯ ದಿನಗಳನ್ನು ಬದುಕುತ್ತಿರುವುದೆಂದೂ ತಿಳಿಸಿದ ಮೇಲೆ ನನಗಾದ ದಿಗ್ಭ್ರಮೆ ಅಷ್ಟಿಷ್ಟಲ್ಲ.

ನನ್ನ ಕಣ್ಣಿಗೆ ಕಾಣುವ ಪ್ರಪಂಚಕ್ಕೂ ಮತ್ತು ಎಂದೆಂದಿಗೂ ನನಗೇ ಅರ್ಥವೇ ಆಗಲಾರದ ಮತ್ತೊಂದು ಪ್ರಪಂಚಕ್ಕೂ ಬಹಳ ಅಂತರವಿತ್ತು.

ನನ್ನದೇ ಮಾತುಗಳನ್ನು ನೆನೆಸಿಕೊಂಡು, ನಾನೆಷ್ಟು ತುಚ್ಚನೆಂಬುದಾಗಿ ನನ್ನ ಮೇಲೆಯೇ ಮೂಡಿದ ಅಸಹ್ಯ ಭಾವವೂ;

ಇಷ್ಟೆಲ್ಲಾ ನೋವು-ಸಂಕಟಗಳನ್ನು ಒಳಗೆ ಇಟ್ಟುಕೊಂಡು, ಯಾರೊಂದಿಗೂ ಹಂಚಿಕೊಳ್ಳಲಾಗದೆ ನರಳುತ್ತಿದ್ದ ಅಪ್ಪ, ಅಮ್ಮನ ಮೇಲೆ ವಿಷಾದ ಮಿಶ್ರಿತ ಹೆಮ್ಮೆಯೂ;
ನಗುನಗುತ್ತಾ ಓಡಾಡುವ ಪವಿಯನ್ನು ನೋಡುವಾಗ, ಬದುಕಿನ ಅಸಹಾಯಕತೆಯ ಬಗ್ಗೆ ಮೂಡುತ್ತಿದ್ದ ಖಿನ್ನತೆಯೂ;
ಎಲ್ಲವೂ ಕಲಸುಮೆಲೋಗರ.

ರೈಲಿನ ಒಳಾಂಗಣಕ್ಕೆ ಬೆನ್ನು ಮಾಡಿಕೊಂಡು, ಮುಖಾದಿಯಾಗಿ ಸಂಪೂರ್ಣ ಕಿಟಕಿಯ ಕಡೆಗೆ ತಿರುಗಿ ಕುಳಿತಿದ್ದೆ. ಬಹುಷಃ ‘ ಭಾವನೆಗಳನ್ನು ಅದುಮಿಕೊಳ್ಳಲಾಗದೆಯೇ ಸುರಿಯುತ್ತಿದ್ದ ಕಣ್ಣೀರನ್ನು ಇತರರು ಗಮನಿಸಬಾರದು ’ ಎಂಬುದು ನನ್ನ ಉದ್ದೇಶವಾಗಿತ್ತು. ತುಂಬಾನೆ ದುಃಖದಲ್ಲಿದ್ದೇನೆ. ಅವನನ್ನು ನೆನೆಪಿಸಿಕೊಂಡ ತಕ್ಷಣ ಬಳ ಬಳ ಕಣ್ಣೀರು ಬರುತ್ತಿದೆ.

‘ ಚೆನೈ ಸಿಟಿಯ ಮಧ್ಯದಲ್ಲಿಯೇ ಇದ್ದ ಕಪಾಲೇಶ್ವರ ದೇವರ ಬಳಿ, ಏನನ್ನು ಕೇಳಿಕೊಂಡರೂ, ಅದು ನೆರವೇರುತ್ತದೆ ’ ಎಂಬುದಾಗಿ ಕಲ್ಕತ್ತೆಯ ಸಹೋದ್ಯೋಗಿ ಗೆಳತಿ ಮೋಮಿತ ಹೇಳುತ್ತಿದ್ದಳು.

ನಡಿ ಹತ್ಲಾಗೆ ಅಂತ, ಭಾನುವಾರವಷ್ಟೇ ಆ ಕಪಾಲೇಶ್ವರ ದೇವಸ್ಥಾನಕ್ಕೆ ಹೋಗಿ ಬಂದಿದ್ದೆ. ದೇವರು ಅಂದ್ರೆ ಶುದ್ಧ ಹೃದಯದ ಒಂದು ಆತ್ಮ!! ನನ್ನ ಸಂತೋಷಕ್ಕಾಗಿ, ತಮ್ಮನ ಆರೋಗ್ಯ ವೃದ್ಧಿಗಾಗಿ, ಕಪಾಲೇಶ್ವರನ ಮುಂದೆ ಹಣ್ಣು, ಹೂವು, ಕಾಯಿ ಹಿಡಿದು ಕ್ಯೂನಲ್ಲಿ ನಿಂತೆ.

‘ ಸೃಷ್ಟಿ ಯ ಒಂದು ಜೀವ, ತಿಂಗಳುಗಳಿಂದ ಅನ್ನಾಹಾರ, ನಿದ್ರೆ ಬಿಟ್ಟು ನರಳುತ್ತ್ತಿದೆ. ನಿನ್ನ ಹತ್ತಿರ ತುಂಬಾ ಅಂತೇನು ಕೇಳಿಕೊಳ್ಳೋದಿಲ್ಲ. ಅವನು ಹೊಟ್ಟೆ ತುಂಬಾ ಊಟ ಮಾಡಬೇಕು. ಕಣ್ತುಂಬಾ ನಿದ್ದೆ ಮಾಡಬೇಕು. ’

ಅದಕ್ಕಿಂತ ಹೆಚ್ಚಿಗೆ., ಏನನ್ನ ಕೇಳಬೇಕು ಅನ್ನೋದು ತೋಚಲಿಲ್ಲ.

‘ ಈ ಪ್ರಪಂಚ ಕೊಡಬಹುದಾದ ಯಾವುದನ್ನೂ ಆತ, ಮನೆಯರಿಗೆ ಕೊಡಲು ಸಾಧ್ಯವಿರಲಿಲ್ಲ ’ ಎಂಬುದು ಗೊತ್ತಿದ್ದರೂ, ಅಪ್ಪ-ಅಮ್ಮ, ಪವಿಯನ್ನು ಮುದ್ದಿನಿಂದ ಸಾಕುತ್ತಿದ್ದರು.

‘ ನನ್ನ ಮಗ ಇಂತದ್ದು ಬೇಕು ಅಂದರೂ ಸಾಕು, ಅದನ್ನ ಕೊಡುಸ್ತೀನಿ. ’ ಅಂತ ಅಪ್ಪ ಯಾರ ಮುಂದೇನಾದ್ರು ಹೇಳಿಕೊಳ್ಳುವಾಗ.,

‘ ಅಕಸ್ಮಾತ್ ಅವನು ಆಕಾಶದಲ್ಲಿ ಹಾರಾಡೋ ಹೆಲಿಕಾಪ್ಟರ್ ಕೇಳುದ್ರೆ, ಇವರು ಕೊಡುಸ್ತಾರ ..? ’ ಅನ್ನೋ ಡೌಟ್ ಬಂದು ನಗ್ತಿದ್ದೆ.

ಅವನೂ ಕೂಡ, ಇಂತದ್ದೇ ಬೇಕು ಅಂತ ಹಠ ಹಿಡಿಯೋ ಸ್ವಭಾವದವನಾಗಿರಲಿಲ್ಲ. ಆಗಲ್ಲ, ಅಂತ ಅವನನ್ನು ಓಲೈಸೋದು ತುಂಬಾ ಸುಲಭ ಆಗಿದ್ದರೂ ಕೂಡ, ಯಾವುದಕ್ಕೂ ಕಾಂಪ್ರಮೈಸ್ ಆಗದ ರೀತಿಯಲ್ಲಿ ನೋಡಿಕೊಳ್ಳುವರು. ಕೇಳಿ, ಕೇಳಿದ್ದನ್ನ ಕೊಡಿಸುವರು. ತಾನು ಇಷ್ಟ ಪಟ್ಟ ರೀತಿಯಲ್ಲಿ, ಬದುಕಲು ಬಿಟ್ಟರು.

ಅವನ ಜೀವನ ಟ್ರಾಫಿಕ್ಕಲ್ಲಿ ಹೋಗ್ತಾ ಇರೋ ಆಂಬುಲೆನ್ಸ್ ರೀತಿ. ಯಾವ ಸಿಗ್ನಲ್-ಗಳಿಗೂ ನಿಲ್ಲಿಸುವಂತಿಲ್ಲ. ಸುತ್ತಮುತ್ತ ಇದ್ದವರು; ಸಂಬಂದವಿಲ್ಲದಿದ್ದರೂ ತಾವಾಗಿಯೇ ದಾರಿ ಬಿಟ್ಟು ಕೊಡುವರು. ಅದೊಂದು ರೀತಿಯ ಪ್ರಿವಿಲೈಜಡ್ ಲೈಫು.

ದೊಡ್ಡವನಾದಂತೆ, ಮುದ್ದು-ಮುದ್ದಾದ ಮುಖದ ಮೇಲೆ ಮೂಡುತ್ತಿದ್ದ ಚಿಗುರು ಮೀಸೆಯು, ಪ್ರಪಂಚದ ವಿಕಾರತೆಯನ್ನೂ, ವಾಸ್ತವವನ್ನೂ ಅರ್ಥಮಾಡಿಕೊಳ್ಳುವ ಹಂತಕ್ಕೆ ಮೆಚೂರ್ ಆಗ್ತಾ ಹೋಯ್ತು.

ಪವಿಯ ಸ್ನೇಹಿತರಲ್ಲಿ ಯಾರೋ ‘ ನೀನೀಗ ಚಿಕ್ಕ ಹುಡುಗ ಅಲ್ಲ, ದೊಡ್ಡೋನು; ಕೊನೆವರೆಗೂ ಅಪ್ಪ-ಅಮ್ಮನ ಹಂಗಲ್ಲಿ ಹಿಂಗೇ. ಬದುಕಿರಬೇಕು; ನಿನ್ನ ಕೈಲಿ ಏನೂ ಕೆಲಸ ಮಾಡೋದಕ್ಕೆ ಆಗಲ್ಲ; ವೇಸ್ಟ್ ಬಾಡಿ; ’ ಎಂದೆಲ್ಲಾ ವಿಧವಿಧವಾಗಿ ಹಂಗಿಸಿದ್ದಾರೆ.

ಪವಿ, ತುಂಬಾ ಸೂಕ್ಷ್ಮ ಸ್ವಭಾವದವನು. ಈ ಮಾತುಗಳ, ಆಳ ಅಗಲಗಳನ್ನು ಬಹುವಾಗಿ ಪರಾಮರ್ಶಿಸಿದ್ದಾನೆ. ಊಟ, ತಿಂಡಿ ಬಿಟ್ಟು ಒಂದೇ ಸಮನೆ ಅಳುತ್ತಿದ್ದಾನೆ.

ದೊಡ್ಡವನಾಗುತ್ತಾ ಹೋದಂತೆ, ಇಂತಹ ಮತ್ತು ಇದಕ್ಕಿಂತಲೂ ಹರಿತವಾದ ಮಾತುಗಳಿಗೆ ಅವನು ತಯಾರಾಗಬೇಕಿತ್ತು. ಬಹುಷಃ ತನ್ನ ದೇಹ ಸತತವಾಗಿ ನೀಡುತ್ತಿದ್ದ ಹಿಂಸೆಗಿಂತಲೂ, ತಾನು ದೊಡ್ಡವನಾದಂತೆ ಬದಲಾಗುತ್ತಿದ್ದ ಜನರ ಧೋರಣೆ, ಹೆಚ್ಚಾಗಿ ನೋಯಿಸಿರಬೇಕು.

ನಮ್ಮ ದೇಹ ಒಂದೇ ಒಂದು ಸಣ್ಣ ಸಮಸ್ಯೆಯಿಂದ ಬಳಲಿದಾಗ, ನಮ್ಮ ವಿಷ್-ಲಿಸ್ಟಿನ ಕಡೆಗೆ ಮಲಗಿದ್ದಲ್ಲಿಂದಲೇ ಕಣ್ಣಾಯಿಸಿ..

‘Wait!! ದೇಹ ಕೊಂಚ ದಣಿದು ಬಿಟ್ಟದೆ. ಆರಾಮಾದ ಮೇಲೆ ಕೂಡ, ಆ ಬದುಕನ್ನು ಮತ್ತೆ ಜೀವಿಸಬಹುದು. ಈ ಕ್ಷಣಕ್ಕೆ ನನಗೆ ವಿಶ್ರಾಂತಿ ಬೇಕು. ’ ಎಂದು ಹೇಳಿ ಸುಮ್ಮನಾಗುತ್ತೇವೆ.

ಆದರೆ ತಮ್ಮ ಖಾತೆಯಲ್ಲಿ ಹೆಚ್ಚು ಸಮಯ ಇಲ್ಲದೇ ಇರುವವರು..?

ಚಿಕ್ಕ ಚಿಕ್ಕ ನೋವುಗಳಿಗೆ ಸೋತು ಮಲಗುವಂತಿಲ್ಲ.
ಇನ್ನೇನು, ದೇಹ ತನ್ನಿಂದಾಗದು ಅಂತ ಮುಷ್ಕರ ಹೂಡುವವರೆಗಾದರೂ, ತಮ್ಮಿಷ್ಟದ ಬದುಕನ್ನು ಅವರು ಜೀವಿಸಬೇಕು.

ಪವಿ!! ಬದುಕ್ತಾ ಇದ್ದಿದ್ದು ಅಂತದೇ ಬದುಕನ್ನು. ‘ ಏನಾದ್ರು ಆಗಲಿ, ಎಷ್ಟಾಗತ್ತೋ. ಅಷ್ಟು ಬದುಕಿ ಬಿಡೋಣ ’ ಅನ್ನೋ ಆತುರ.

ಒಂದು ವಾರದ ಹಿಂದೆ, ತನ್ನ ಶಾಲಾ ಗೆಳತಿಯ ಮದುವೆಗೆಂದು ಹೋಗಿದ್ದನು. ನಲುಗಿದ ದೇಹದ ಮೇಲೊಂದು ಗರಿ-ಗರಿ ಬಟ್ಟೆ ಹಾಕಿ, ಸೋತು ಸುಣ್ಣವಾಗಿರುವ ಮುಖದ ತುಂಬಾ ಲವಲವಿಕೆಯ ನಗು ತುಂಬಿಕೊಂಡು, ಅಪ್ಪನ ಜೊತೆಯಾಗಿ ಮದುವೆಗೆ ಹೋದನು. ಅಪ್ಪನದ್ದು ಒಂದು ರೀತಿಯ ಕಾವಲುಗಾರನ ಕೆಲಸ. ಅವನನ್ನು, ಅವನ ಪಾಡಿಗೆ ಎಲ್ಲರ ಮಧ್ಯೆ ಬಿಟ್ಟು., ತಾವು ಒಂದಷ್ಟು ದೂರದಲ್ಲಿ ಕಾಯುವ ಕೆಲಸ. ಈ ವಾಚ್ ಮ್ಯಾನ್ ಕೆಲಸವನ್ನು ಅವರು ಸುಮಾರು ಇಪ್ಪತ್ತು ವರ್ಷಗಳಿಂದಲೂ ಮಾಡುತ್ತಲೇ ಬಂದಿದ್ದಾರೆ.

ಮದುವೆಯಲ್ಲಿ, ತನ್ನ ಎಲ್ಲ ಗೆಳೆಯರ ಜೊತೆ ಹರಟು, ನಕ್ಕು, ಒಂದು ಕುರ್ಚಿಯ ಮೇಲೆ ವಿಶ್ರಾಂತಿಗೆಂದು ಕುಳಿತಿದ್ದಾನೆ. ಅಷ್ಟೇ, ಅಪ್ಪಾಜಿಯನ್ನು ಸನ್ನೆ ಮಾಡಿ ಕರೆದು, ತನ್ನಿಂದಾಗದು ಎಂದು ಹೇಳಿ ಕುಸಿದಿದ್ದಾನೆ. ಅಲ್ಲಿಂದ ಆಸ್ಪತ್ರೆಗೆ ತೋರಿಸಿಕೊಂಡು, ವಾಪಸು ಮನೆಗೆ ಬಂದಿದ್ದಾರೆ. ಅವತ್ತಿನಿಂದ ಮತ್ತೆ ಅವನು ಮನೆಯಿಂದ ಹೊರಗೆ ಬಂದಿಲ್ಲ.

ನಾನೂ ಡೈಲಿ ಫೋನ್ ಮಾಡ್ತಿದ್ದೆ. ‘ ಊಟ ಮಾಡಿದನಾ ..? ನಿದ್ದೆ ಮಾಡಿದನಾ ..? ’ ಎಂದು ಕೇಳುತ್ತಿದ್ದ ಎರಡು ಪ್ರಶ್ನೆಗಳಿಗೆ ಅಮ್ಮ ಅತ್ತು-ಕರೆದು ವಿವರಿಸುತ್ತಿದ್ದಳು.

ಸ್ವಲ್ಪ ಊಟ ಜೀರ್ಣವಾಗಿ; ರಿಲಾಕ್ಸ್ ಆದನೆಂದರೆ, ಪವಾಡ ನಡೆದ ರೀತಿಯಲ್ಲಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಗೊಳಿಸುವನು.


*******  ೨ *******


ಚೆನೈ ಇಂದ ಬೆಂಗಳೂರಿಗೆ ಬಂದು ಅಲ್ಲಿಂದ ಶಿವಮೊಗ್ಗ ರೈಲು ಹತ್ತಿದ್ದೆ. ಸಾಮಾನ್ಯವಾಗಿ ಮಧ್ಯಾಹ್ನ 12 ಅಥವಾ 1 ಘಂಟೆಯೊಳಗೆ ಮನೆಯಲ್ಲಿರುತ್ತಿದ್ದೆ. ರೈಲು ತಡವಾದ್ದರಿಂದ, ಮನೆ ತಲುಪಿದಾಗ ಎರಡು ಘಂಟೆ.

ನಮ್ಮ, ಮನೆ ಇರೋದು ಕೂಡ ರೈಲಿನಂತೆ. ಬೋಗಿಗಳು ಒಂದಕ್ಕೊಂದು ಅಂಟಿಕೊಂಡಂತೆ, ಒಂದರ ಹಿಂದೊಂದಿವೆ. ಅಗಲ ಕಮ್ಮಿ., ಉದ್ದ ಜಾಸ್ತಿ.

ಚಪ್ಪಲಿ ಬಿಚ್ಚಿ ಪಡಸಾಲೆಯಲ್ಲಿದ್ದ ಕಾಟ್ ನ ಅಡಿಯಲ್ಲಿ ಸರಿಸಿ, ಹಾಲ್ ದಾಟಿಕೊಂಡು ರೂಮಿಗೆ ಹೋದೆ.
ಮಂಚದ ಮೇಲೆ ಅಮ್ಮ ಮತ್ತು ತಮ್ಮ ಮಲಗಿದ್ದಾರೆ.
ನನ್ನನ್ನು ನೋಡಿದವನೇ ತಮ್ಮ, ಕಾಲು ಕೆಳಗೆ ಇಳಿ ಬಿಟ್ಟು ಎದ್ದು ಕುಳಿತ. ಅವನ ಪಕ್ಕದಲ್ಲಿ ಕುಳಿತೆ.
ಹೆಗಲ ಮೇಲೆ ಕೈ ಹಾಕಿ ‘ ಅಣ್ಣಯ್ಯ, ಹೆಂಗಿದಿಯಾ ..? ನಿಮ್ಮೂರ್ ಕಡೆ ಮಳೆ-ಬೆಳೆ ಎಲ್ಲಾ ಹೆಂಗಿದೆ ’ ಅಂದ.

‘ ಚೆನ್ನಾಗಿದೆ ’ ಅಂದೆ. ತಪ್ಪಿಕೊಂಡು ಒಂದು ಮುತ್ತು ಕೊಟ್ಟೆ.

‘ ಅಣ್ಣಯ್ಯಾ ’ ಅನ್ನೋದು ಖುಷಿಯ ತುದಿಯಲ್ಲಿದ್ದಾಗ, ಪ್ರೀತಿಯಾಗಿ ಅವನು ಬಳಸುವ ಸಲೂಟೇಷನ್ನು. ಆ ಕ್ಷಣ!! ಅದು ಅವನಿಗಿಂತ ನನಗೇ ಹೆಚ್ಚು ಆತ್ಮೀಯವೆನಿಸಿತ್ತು. ನನ್ನ ನೋಡಿದವನು, ಬಹುವಾಗಿ ಸಂಭ್ರಮಿಸಿದ.

ಅವನ ಹಿಂದೆ ಎದ್ದು ಕುಳಿತಳು ಅಮ್ಮ. ‘ ಒಂದು ವಾರ ಆಯ್ತು. ನನ್ನ ಮಗ ಊಟ ಮಾಡಿಲ್ಲ. ನಿದ್ದೆ ಮಾಡಿಲ್ಲ. ದೇವರು!! ಸರಿಯಿಲ್ಲ ’ ಇನ್ನು ಮುಂತಾಗಿ, ಸ್ವಲ್ಪವೂ ಸದ್ದು ಮಾಡದ ರೀತಿಯಲ್ಲಿ, ಬಿಕ್ಕಳಿಸಿ ಅಳುತ್ತಾ, ಸಂಜ್ನೆಯಲ್ಲಿ ವಿವರಿಸತೊಡಗಿದಳು.

ಅವಳ ಸಧ್ಯದ ಪರಿಸ್ಥಿತಿ, ಯಾರೂ ಊಹಿಸಲಾಗದಷ್ಟು ಕಠೋರವಾಗಿತ್ತು. ತಮ್ಮನನ್ನು ಬಿಟ್ಟು ಹೋಗಿ ಅಮ್ಮನನ್ನು ಅಪ್ಪಿ ಕುಳಿತೆ.

‘ ಅಣ್ಣನ್ ನೋಡುದ್ ತಕ್ಷಣ ಚಿಗುರು ಬುಟ್ಯಲ್ಲೋ. ಹನ್ನೆರಡು ಘಂಟೆಯಿಂದ ಏಳೋದು; ಬಾಗಿಲು ನೋಡದು; ಮಲಗೋದು ಮಾಡ್ತಿದಾನೆ. ಸುಮ್ನೆ ಮಲಗೋ ಸುಸ್ತಾಗತ್ತೆ ಅಂದ್ರೂ , ಪ್ಚ ಇಷ್ಟೊತ್ತಿಗೆ ಅಣ್ಣಯ್ಯ ಬರಬೇಕಿತ್ತು ಆಲ್ವಾ ..? ಟ್ರೈನು ಇನ್ನೂ ಬಂದಿಲ್ವಾ ಮ್ಮ ಅಂತ ಕೇಳೋನು.

ಅಲ್ಲಿ ಕೂರಲು, ಆಗಲಿಲ್ಲ. ಎದ್ದು ಹಿತ್ತಲ ಕಡೆಗೆ ಹೋದೆ.

ತಂಗಿ ಬಚ್ಚಲಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಅಮ್ಮ ಮತ್ತು ತಮ್ಮನನ್ನು ನೋಡಿ-ಹೋಗಲು ಬರುತ್ತಿದ್ದ ನೆಂಟರ ಸಲುವಾಗಿ ರಾಶಿಯಷ್ಟು ಎಂಜಲು ತಟ್ಟೆ, ಪಾತ್ರೆ ಗಳು ಸೃಷ್ಟಿಯಾಗಿದ್ದವು. ತೊಳೆಯುತ್ತಿದ್ದಳು.

‘ ಏನೆ ಮಾಡ್ತಿದಿಯಾ ..? ’ ಅಂದೆ.

ಅವಳು ಏನೂ ಹೇಳಲಿಲ್ಲ.

ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದು ಮಾತ್ರ ಕಾಣುತ್ತಿತ್ತು.

ಅದೇ ದಿನ, ರಾತ್ರಿ 8 ಘಂಟೆ. ಹಾಲ್-ನಲ್ಲಿ, ಖುರ್ಚಿಯ ಮೇಲೆ ಪವಿ ಕುಳಿತಿದ್ದಾನೆ. ಅಮ್ಮ, ತುತ್ತು ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರೂ. ಸುತ್ತ ಕುಳಿತಿದ್ದೇವೆ.

ಈ ರೀತಿ ತೃಪ್ತಿಯಾಗಿ. ಊಟ ಮಾಡಿಯೂ ಬಹಳ ದಿನಗಳಾಗಿತ್ತಂತೆ. ‘ ಸ್ವಲ್ಪ ಊಟ ಅರಗಿಸಿಕೊಂಡರೂ ಸಾಕು, ಎದ್ದುಬಿಡುವನು ’ ಅನ್ನುತ್ತಿದ್ದ ಅಮ್ಮನಿಗೆ ಒಳಗೊಳಗೆ ಸಂತಸ.

‘ ಸ್ವಲ್ಪ ಚೇತರಿಸಿಕೊಳ್ಳಲಿ. ಬೆಂಗಳೂರಿಗೆ ಕರ್ಕೋಂಡ್ ಹೋಗಿ, ಆಪರೇಶನ್ ಮಾಡಿಸಿಯೇ ಬಿಡುವ. ಏನಾಗುತ್ತೋ ಆಗಿ ಹೋಗ್ಲಿ. ಈ ರೀತಿಯಾಗಿ, ಕಷ್ಟ ಪಡೋದು ನೋಡಕ್ಕಾಗಲ್ಲ . ’ ಅಂತಿದ್ದರು ಅಪ್ಪ.

ಊಟ ಮುಗಿದ ಮೇಲೆ, ಕುಳಿತಿದ್ದ ಖುರ್ಚಿಯಲ್ಲಿಯೇ ಕೊಂಚ ನಿದ್ರಿಸುವನಂತೆ ಮಾಡಿದ.

ನಂತರ ಕಣ್ಣು ಬಿಟ್ಟು, ಎಲ್ಲರನ್ನೂ ನೋಡುವುದು; ಸಂಜ್ನೆ ಮಾಡುವುದು; ಮಾತಾನಾಡಲು ಪ್ರಯತ್ನಿಸುವುದು; ಕೈ ಬೀಸುವುದು; ನಡೆದಿತ್ತು.

ನನ್ನ ಕಡೆಗೆ ಕೈ ಬೀಸಿ ಕರೆಯುತ್ತಾ ‘ ನನಗೆ ಮನೆ ಕೊಡು ’ ಎಂದ.

‘ ಯಾವ ಮನೆ ..? ’ ಎಂದು ಕೇಳಿದ್ದಕ್ಕೆ ಮತ್ತೂ ಕ್ರೋಧಗೊಂಡು ‘ ನನ್ನ ಮನೆ ಕೊಡು ’ ಎಂದ.

ಯಾವ ಮನೆಯೆಂದು ಅರ್ಥವಾಗಲಿಲ್ಲ.

ಬಣ್ಣದ ಹಾಳೆಗಳು, ನೋಟ್ ಬುಕ್ಕಿನ ಹಾರ್ಡ್ ಬೈಂಡ್ ಗಳನ್ನು ಬಳಸಿ ಮನೆ, ದೇವಸ್ಥಾನ ಮೊದಲಾದ ಮಾಡೆಲ್ ಗಳನ್ನು ಮಾಡಿ, ಯಾರಿಗಾದರೂ ಕೊಡುತ್ತಿದ್ದ.

ಟೀಚರ್ ಟ್ರೈನಿಂಗ್, ಮಾಡುತ್ತಿದ್ದ ಕಜಿನ್ ತಂಗಿಗೆ, ಅವಳ ಟ್ರೈನಿಂಗಿಗೆ ಬೇಕಾದ ರಟ್ಟಿನ ಮಾಡೆಲ್ ಗಳನ್ನು ಮಾಡಿಕೊಡುವವನು ಇವನೇ..

ಹಾಗದರೆ, ಅವನು ಕೇಳುತ್ತಿದ್ದುದು ಅಂಥಹುದೇ ಯಾವುದೋ ಮನೆ ಇರಬೇಕು, ಎಂದೆಣಿಸಿ ಅಟ್ಟದ ಮೇಲೆ ಹೋಗಿ, ಹುಡುಕಿದೆ. ಯಾವುದೂ ಸಿಗಲಿಲ್ಲ. ಕೇವಲ ರಟ್ಟಿನ ಮಾಡೆಲ್ ಗಳೂ ಅಲ್ಲದೆ,

ತನಗೆ ಮನಸ್ಸಿಗೆ ಬಂದದ್ದನ್ನೆಲ್ಲಾ ಹಾಳೆಯಲ್ಲಿ ಗೀಚಿ, ಹೊಲಿದು ಪುಸ್ತಕದಂತೆ ಮಾಡಿಕೊಂಡಿದ್ದ. ‘ ತಿತಿತಿ ಎಂಬ ಹುಡುಗನು ತಿತಿತಿತಿತಿತಿ ಎಂಬ ಹುಡುಗಿಯನ್ನು ಎತ್ತಲು ಹೋಗಿ ಚೆಚೆಚೆ ಹೋದನು. ’ ಎಂಬ ಒಂದು ಜೋಕು ಆ ಪುಸ್ತಕದಲ್ಲಿತ್ತು. ಬಹುಷಃ ಅದನ್ನು ಅವನು ಬಹಳ ಎಂಜಾಯ್ ಮಾಡಿದ್ದಿರಬೇಕು.

ಸರಕ್-ಸರಕ್-ಸರಕ್ ಎಂದು ತಿರುಗಿಸಿ, ಕೆಲವೇ ಮೂವ್-ಗಳಲ್ಲಿ, ರೂಬಿಕ್ ಕ್ಯೂಬ್ ನ ಕ್ಲಿಷ್ಟಕರವಾದ ಪಜಲ್ ಬಿಡಿಸಿ ಅಚ್ಚರಿ ಪಡಿಸುವನು. ಅವನ ತಲೆ ತುಂಬಾ ಚೆನ್ನಾಗಿಯೇ ಕೆಲ್ಸ ಮಾಡ್ತಿತ್ತು.

‘ ಮನೆ ಕೊಡು, ಮನೆ ಕೊಡು. ’ ಎಂದು ಕೇಳುತ್ತಿದ್ದವನು ಸ್ವಲ್ಪ ಹೊತ್ತಿನಲ್ಲಿ ಸುಮ್ಮನಾದ. ಮತ್ತೆ ಎಚ್ಚರಗೊಂಡು ಹೂವಿನ ಊಜಿಯ ಒಳಗೆ ಬಚ್ಚಿಟ್ಟಿದ್ದ ನೂರು ರೂಪಾಯಿ ಹಣವನ್ನು ತೆಗೆದು,

‘ ಅಣ್ಣಯ್ಯಾ. ಬಟ್ಟೆ ತಗೋ ’ ಅಂತ ನನ್ನ ಕೈಗಿಟ್ಟ.

ನಾನು ಯಾವಾಗಲೂ ಕೆಟ್ಟ ಬಟ್ಟೆ ಉಡುವುದಾಗಿಯೂ; ಅದಕ್ಕೆ, ಅವನು ಒಳ್ಳೆ ಬಟ್ಟೆ ತಗೋ ಅಂತ ದುಡ್ಡು ಕೊಡುತ್ತಿರುವುದಾಗಿಯೂ; ಹಣವನ್ನು ಪಡೆದುಕೊಳ್ಳಬೇಕಾಗಿಯೂ; ಅವನ ಮಾತು ಸಂಜ್ನೆಗಳನ್ನು ಇಂಟರ್-ಪ್ರಿಟ್ ಮಾಡಿ, ನಕ್ಕರು. ನಾನೂ ನಕ್ಕೆ.

ಅಂಗವಿಕಲ ಅಥವಾ ಬುಧ್ಧಿಮಾಂದ್ಯ ಮಕ್ಕಳುಗಳ ಬಹುದ್ಡೊಡ್ಡ ಸಮಸ್ಯೆ ಅಂದರೆ, ‘ ಪ್ರಪಂಚ ಅಸಹ್ಯ ಪಟ್ಟುಕೊಳ್ಳುವ ವಿಷಯಗಳು, ಅವರ ಪಾಲಿಗೆ ಏನೂ ಅನ್ನಿಸದೇ ಇರುವುದು.’ ಅಂದರೆ ಗಲೀಜು ಮಾಡಿಕೊಳ್ಳುವುದು. ಅದು ಅವರಿಗೆ ಅನಿವಾರ್ಯ ಕೂಡ.

ಬಹುಷಃ ಅಮ್ಮ, ಬಿಟ್ಟರೆ ಮತ್ಯಾರೂ ಆ ಗಲೀಜು ಕೆಲಸಗಳಿಗೆ ಕೈ ಹಾಕಲಾರರು. ಪ್ರೀತಿ-ಪೇಮದ ಬಗ್ಗೆ ಮಾತಾಡೋದು ಸುಲ್ಬ, ಹೇಲು ಬಾಚೋದು ಅಷ್ಟು ಸುಲ್ಬ ಅಲ್ಲ.

‘ ಗಲೀಜು ಅನ್ನೋ ವಿಷಯಗಳಲ್ಲಿ, ನನ್ನ ಮಗ ಯಾವತ್ತೂ ತೊಂದರೆ ಕೊಡಲಿಲ್ಲ. ರಕ್ತವನ್ನೇ ಕಕ್ಕಿ, ಕುಸಿದು ಬೀಳುವಂತಹ ಪರಿಸ್ಥಿತಿ ಇದ್ದಾಗಲೂ ಕೂಡ, ಟಾಯ್ಲೆಟ್ ಬಂದ್ ತಕ್ಷಣ ತೇಗುತ್ತಲಾದರೂ. ಹೋಗಿ; ಕೂತು; ಬಂದುಬಿಡುತ್ತಿದ್ದ ’ ಎಂದು ಅಮ್ಮ ಹೇಳುತ್ತಿದ್ದುದನ್ನು ಕೇಳಿದ್ದೆ.

ಈಗ ಎರಡು ದಿನಗಳಿಂದ ಉಚ್ಚೆ ಕೂಡ ನಿಂತು ಹೋಗಿತ್ತಂತೆ. ಕಿಡ್ನಿಯಲ್ಲಿಯೂ ಏನೋ ಸಮಸ್ಯೆಯಾಗಿರಬೇಕು ಎಂದರು. ಅವನ ದೇಹದಲ್ಲಿ ಏನು ಚೆನ್ನಾಗಿದೆ. ಅವನು, ಬದುಕಿರೋದಾದರೂ ಹೆಂಗೆ ಅಂತ ಉತ್ತರ ಹೇಳೋದಕ್ಕೂ ಅಲ್ಲಿ ಯಾರೂ ಇರಲಿಲ್ಲ.

‘ ದೊಡ್ಡ ಡಾಕ್ಟ್ರೇ ಆಗಲ್ಲ ಅಂದ ಮೇಲೆ ಇಲ್ಲಿ ನಾವೇನ್ ಮಾಡಕ್ಕಾಗತ್ತೆ. ’ ಚಿಕ್ಕ ಡಾಕ್ಟರ ಅಂಬೋಣ.

ರೀಸಸ್ ಮಾಡಲು ಅಣ್ಣನ ಜೊತೆ ಹೊರಗೆ ಹೋಗಿ ಬರುವಂತೆ, ಅಪ್ಪ ಹೇಳಿದಾಗ, ಸುತಾರಾಂ ಅವನು ಒಪ್ಪಲಿಲ್ಲ. ಅಪ್ಪ ಪೂಸಿ ಹೊಡೆದು ಕಳುಹಿಸಿದರು.

ಅವನನ್ನು ಹಿಡಿದು, ಹಿತ್ತಲ ಕಡೆಗೆ ಬಂದು ಪ್ಯಾಂಟಿನ ಜಿಪ್ಪು ಸಡಿಲಿಸಿದಾಗ, ತನ್ನ ಜೀವವನ್ನೇ ಹಿಂಡಿಕೊಂಡು ಚಿಕ್ಕದು ಮಾಡಿಕೊಂಡ.

‘ ಏನೂ ಆಗಲ್ಲ, ಕಣೋ ’ ಅಂದರೂ

‘ ಅಣ್ಣಯ್ಯಾ. ನೀನು ಕೆಳಗಡೆ ನೋಡಬೇಡ ’ ಅನ್ನುವನು.

ಈ ‘ ಅಚ್ಚುಕಟ್ಟುತನಕ್ಕೆ ’, ಏನು ಹೇಳಬೇಕು..?

ನಾನು ಯಾವತ್ತೂ ಅವನ ಸೇವೆ ಮಾಡಿಲ್ಲ. ಬಹುಷಃ ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದ್ದಲ್ಲಿ, ಮಾಡುತ್ತಿರಲಿಲ್ಲವೇನೋ ..? ಗೊತ್ತಿಲ್ಲ. ಮನುಷ್ಯ ಸ್ವಭಾವಗಳು, ಹಿಂಗೇ ಅಂತ ಹೇಳುಕ್ಕಾಗಲ್ಲ.

ಆದರೆ ಅಪ್ಪ-ಅಮ್ಮ ರಿಗೆ ಅವನ ಮೇಲಿದ್ದ ಪ್ರೀತಿ, ಬದಲಾಗಲು ಸಾಧ್ಯವಿರಲಿಲ್ಲ. ಅವನ ಆರೈಕೆ, ಪೋಷಣೆ, ಶುಶ್ರೂಶೆ, ಮುಂತಾದವೆಲ್ಲಾ ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ಹೋಗಿದ್ದವು.

ಪವಿಗೆ, ಅಪ್ಪ-ಅಮ್ಮನ ಅವಶ್ಯಕತೆಗಿಂತ ಹೆಚ್ಚಾಗಿ, ಇವರುಗಳ ಭಾವನಾತ್ಮಕ ಬೇಕುಗಳಿಗೆ ಪವಿಯನ್ನು ಹೆಚ್ಚಾಗಿ ಅವಲಂಬಿಸಿದ್ದರು.

ಅವನ ಸುತ್ತಲೇ, ಒಂದಷ್ಟು ಬಯಕೆಗಳ ಕೋಟೆ ಕಟ್ಟಿ, ಸುಖಿಸುತ್ತಿದ್ದರು.

ಅದೂ ಅಲ್ಲದೆ, ತನ್ನ ಅಮ್ಮನ ಹೊರತಾಗಿ ಯಾರ ಬಳಿಯೂ ಸೇವೆ ಸ್ವೀಕರಿಸದ, ಉತ್ಸವಮೂರ್ತಿ ಅವನು.

ಹಲವಾರು ಬಾರಿ, ಬೆಳಗಿನ ಜಾವ ಎದ್ದಾಗ, ಪೆಚ್ಚು ಮೋರೆ ಹಾಕಿ ಕೊಂಡು ಸುತ್ತಲೂ ಕುಳಿತಿರುತ್ತಿದ್ದರು, ಅಪ್ಪ-ಅಮ್ಮ. ತಾವುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ತಮ್ಮನನ್ನು ಕಾದಿರುತ್ತಿದ್ದ ವಿಚಾರವನ್ನು ಹೇಳುವರು. ಅವನಿಗೆ ಇದ್ದಕ್ಕಿದ್ದಂತೆ ಏನೇನೆಲ್ಲಾ ಆಗ್ತಿತ್ತು.

‘ ರಾತ್ರಿಯೆಲ್ಲಾ ವಾಂತಿ, ನೋವು, ನರಳಾಟ. ಅಷ್ಟು ಸದ್ದಿದ್ದರೂ, ಒಂಚೂರು ಕಮಕ್ಕಿಮಕ್ ಅನ್ನದ ಹಾಂಗೆ ಮಲಗಿದ್ದೀಯ..? ನಿನ್ನ ನಂಬಿ, ಮಗನ್ನ ಬಿಟ್ಟು ಹೋದ್ರೆ ಏನ್ ಕಥೆ..? ಹೀಗೇನಾ... ನೋಡಿಕೊಳ್ಳೋದು, ನನ್ನ ಮಗನನ್ನಾ ..? ' ಅಮ್ಮ ಸೆಂಟಿಮೆಂಟ್ ಮಾಡುವಳು.

ನನಗೋ. ನಿದ್ದೆ, ಅಂದ್ರೆ ಯಮ ನಿದ್ದೆ,

ಆದರೆ, ತಾವು ಎಚ್ಚರವಿದ್ದಾಗಿಯೂ, ನನ್ನ ನಿದ್ರೆಗೆ ಭಂಗ ಬರದಂತೆ ನೋಡಿಕೊಂಡಿರುತ್ತಿದ್ದ ಸೂಕ್ಷ್ಮತೆಯು ಅವರ ಪ್ರೀತಿಯ ಅರ್ಥವಾಗದ ಮತ್ತೊಂದು ಸ್ವರೂಪ.

ಹೀಗೆ ಪವಿ, ಸೀರಿಯಸ್ಲಿ ಸೀರಿಯಸ್ ಆಗುತ್ತಿದ್ದುದು ಅಷ್ಟೇ, ಸ್ಪೀಡ್ ಮತ್ತು ರಿಕವರಿ ಆಗುತ್ತಾ ಇದ್ದುದೂ ಕೂಡ ಅಷ್ಟೇ ಸ್ಪೀಡ್.

ಎಲ್ಲಾ ಕೈ ಮೀರಿತು ಅನ್ನುತ್ತಿದ್ದ ಹಾಗೆ, ಸಕ್ಕರೆ ನೀರು ಕುಡಿಸಿ ಮತ್ತು ಅದನ್ನು ಅವನು ಅರಗಿಸಿಕೊಳ್ಳುವುದನ್ನೇ ಕಾಯುತ್ತಾ ಕೂರುವರು. ಸಕ್ಕರೆ ನೀರು ಸಕ್ಸಸ್ ಫುಲ್ಲಾಗಿ ಒಳ್ಗೆ ಹೋಯ್ತು ಅಂದರೆ, ಅದು ಡೈಜೆಸ್ಟ್ ಆಗೋದರೊಳಗೆ ಎದ್ದು ಕೂರುವನು. ಹೊಸದಾಗಿ ನೋಡುವವರು ಗಾಬರಿ ಬೀಳುತ್ತಿದ್ದರು.

ಹಿತ್ತಲಿಂದ ವಾಪಾಸು ಕರೆತಂದು, ಮೊದಲು ಮಲಗಿದ್ದ ಮಂಚದ ಮೇಲೆ ಮಲಗಿಸಿದೆವು. ಊಟ ಮಾಡಿದ ಮೇಲೆ ಸದ್ದಿಲ್ಲದೇ ಮಲಗಿದ. ಗಂಟೆಗಳು ಕಳೆದರೂ ಯಾವುದೇ ನರಳಾಟವಿಲ್ಲ. ಎರಡು ದಿನಗಳ ಹಿಂದೆ ಕಪಾಲೇಶ್ವರ ದೇವರ ಬಳಿ ಬೇಡಿಕೊಂಡಿದ್ದಂತೆ. ಊಟ, ನಿದ್ರೆಯನ್ನು ಸಂಪಾಗಿ ದಯಪಾಲಿಸಿದ್ದ ಶಿವ.

******* ೩  *******


ಪವಿಯ ತಲೆ ಸವರುತ್ತಾ ಹಿಂದಿನ ದಿನ ನಡೆದ ಸಂಗತಿಯನ್ನು ಅಮ್ಮ, ವಿವರಿಸಿದಳು.

‘ ನೆನ್ನೆ ನನ್ನ ಮಗ ಹೋಗ್-ಬಿಟ್ಟಿದ್ದ. ದೇವರ ದಯ ಬದುಕುಳಿದ. ಇನ್ನು ಅವನಿಗೆ ಏನು ಆಗಲ್ಲ. ’ ಪ್ರಾಯಕ್ಕೆ ಬರುವ ಹೊತ್ತಿಗೆ ಅವನ ಜೀವನದಲ್ಲಿ ಒಂದು ಕಂಟಕ ಬರುತ್ತೆ. ಅದನ್ನು ಅವನು ಜಯಿಸಿಬಿಟ್ಟ ಅಂದ್ರೆ, ಚಿರಂಜೀವಿ ಆಗಿ ಬಿಡ್ತಾನೆ ‘ ಅಂತ ಹೇಳಿದ್ರು. ಪಂಚಾಗದ ಪ್ರಕಾರ ನೆನ್ನೆಗೇ ಅವನಿಗೆ ವರ್ಷ ತುಂಬ್ತು. ಇನ್ನು, ಏನು ಆಗಲ್ಲ ಅವನಿಗೆ. ’

‘ರಾತ್ರಿ ಒಂದು-ಎರಡು ಘಂಟೆ ಆಗಿತ್ತು ಅನ್ಸತ್ತೆ. ಹೋಗ್ ಬಿಟ್ಟಿದ್ದ ನನ್ನ ಮಗ. ಉಸಿರು ಕೂಡ ನಿಂತು ಬಿಟ್ಟಿತ್ತು. ದೊಡ್ಡ ಜೀವ ಹೊರಟು ಬಿಟ್ಟಿತ್ತು. ಪವನಿ, ಪವನಿ, ಅಂತ ಕಿರುಚಿಕೊಂಡ್ರು ಸದ್ದಿಲ್ಲ. ಅಯ್ಯೋ, ಪವಿ, ಎದ್ದೇಳಪ್ಪಾ, ಅಣ್ಣ ಬರ್ತಿದಾನೆ ಕಣೋss ಎದ್ದಳೋss ಅಂತಂದರೂ ಏನೂ ಸದ್ದಿಲ್ಲ.’

‘ ಐದು ನಿಮಿಷದ ಮೇಲೆ ಉಸಿರು ತಿರುಗಿಸಿಕೊಂಡ. ಅದು ಹೆಂಗ್ ತಿರುಗಿಸಿಕೊಂಡ್ ಮೇಲೆದ್ದನೋ. ಆ ಶಿವನಿಗೇ ಗೊತ್ತು. ಎದ್ದವನೇ, ಅಮ್ಮಾss ಅಳಬೇಡಮ್ಮ. ನೀ ಅತ್ತೆ ಅಂತ ಬಂದೆ. ನಾನು ಎಲ್ಲೂ ಹೋಗಲ್ಲಮ್ಮಾ. ಅಳಬೇಡಮ್ಮಾ. ಅಂದ. ’

ಅಮ್ಮ ತನ್ನ ಲಹರಿಯಲ್ಲಿ ಹೇಳುತ್ತಿದ್ದಳು.

ಈ ರಂಪಾಟದಲ್ಲಿ ಅಮ್ಮ, ತನ್ನ ಮೂಳೆ ಮುರಿದಿದ್ದ ಕಾಲಿಗೆ ಸುತ್ತಿದ್ದ ಬ್ಯಾಂಡೇಜನ್ನು ಹಾಳು ಮಾಡಿಕೊಂಡದ್ದಾಗಿಯೂ; ಕಾಲು ಮತ್ತಷ್ಟು ಹಾಳಾಗಿದ್ದಾಗಿಯೂ ತಿಳಿಯಿತು.

ಮತ್ತೆ ಅಪ್ಪಾಜಿ ಶುರುಮಾಡಿದರು -

‘ ರಾತ್ರಿ, ಎರಡು ಕಣ್ಣುಗಳ ಮಧ್ಯೆ, ನರವೊಂದು ದಪ್ಪಗೆ ಕಾಣಿಸುವಂತೆ ಊದಿಕೊಳ್ಳುತ್ತಾ ಬಂತು. ಸಂಕಟವನ್ನು ತಾಳಲಾರದೆ ಮ್ಮಾss ಕಣ್ಣು ಕಿತ್ತು ಬಿಡು; ಮ್ಮಾ ಕಣ್ಣು ಕಿತ್ತು ಬಿಡು ಅಂತ ಕಣ್ಣನ್ನೇ ಕಿತ್ತುಕೊಳ್ಳೋದಕ್ಕೆ ಹೋಗ್ತಿದ್ದ. ’

‘ ಪಾಪ, ಅದೆಷ್ಟು ನೋವು ಅನುಭವಿಸುತ್ತಿದ್ದನೋ. ..? ಏನೋ ..? ಸಮಾಧಾನ ಮಾಡಕ್ಕಾಗ್ಲಿಲ್ಲ. ಇವತ್ತು ಬಾಳ ಅರಾಮಿದನಾಪ್ಪ. ನೆನ್ನೆಯದು ನೆನೆಸಿಕೊಂಡ್ರೆ ಭಯಾನೆ ಆಗ್ತಿತ್ತು. ಇನ್ನು ಸರಿ ಹೋಗ್ತಾನೆ. ’

ನೆನ್ನೆದಿನ ತನ್ನ ದೊಡ್ಡಪ್ಪನ ಬಳಿ ಬೀಡಿ ಹಚ್ಚಿಸಿಕೊಂಡು, ಹೊಗೆಯನ್ನು ತನ್ನ ಅಜ್ಜಿಯ ಮೇಲೆ ಬಿಡುತ್ತಾ, ಏಯ್!! ಓಲ್ಡ್ ಲೇಡಿ, ಲೈಫು ಎಂಜಾಯ್ ಮಾಡ್ಬೇಕು. ಗೊತ್ತಾಯ್ತಲ್ಲ ಅಂತಿದ್ದನಂತೆ. ಅದನ್ನೇ, ಎಲ್ಲರೂ ನೆನೆಸಿಕೊಂಡು ನಕ್ಕರು.

‘ ಮೊದಲ ಸಾರಿಗೆ ಬೀಡಿ ಬಾಯೊಳಗಿಟ್ಟಿದ್ದರಿಂದ ಕೆಮ್ಮಿದನೆಂದೂ; ಬೀಡಿ ಪಡೆದದ್ದನ್ನು ಯಾರ ಬಳಿಯೂ ಹೇಳ ಬಾರದಂತ, ಪ್ರಾಮಿಸ್ ಮಾಡಿಸಿಕೊಂಡಿದ್ದನ್ನೂ; ’ ಹೇಳಿದರು.

ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಅಪ್ಪ, ಅಮ್ಮ, ತಂಗಿ, ಅಜ್ಜಿ ಯಾರಾದರೊಬ್ಬರು ಎಚ್ಚರವಿರುವಂತೆ ನೋಡಿಕೊಂಡರು.

ಹಿಂದಿನ ದಿನ ರಾತ್ರಿ ರೈಲಿನಲ್ಲಿ, ನಿದ್ದೆ ಸರಿಯಾಗಿರದ ಕಾರಣಕ್ಕಿರಬಹುದು ಅಥವಾ ಸಹಜವಾಗಿಯೇ ನಿದ್ದೆ ಆವರಿಸಿಕೊಂತು.

ರಾತ್ರಿ ಎರಡು ಘಂಟೆ ಹೊತ್ತಿಗೆ, ತಾನು ಮಲಗಿದ್ದ ದಿಕ್ಕು ಬದಲಿಸಿದ. ಹೀಗೆ. ಹಲವು ಬಾರಿ ತನಗೆ ತೃಪ್ತಿಯಾಗುವವರೆಗೂ ಉಲ್ಟಾ-ಸೀದಾ ಎದ್ದು ಎದ್ದು ಮಲಗಿ ನಿದ್ರಿಸುತ್ತಿದ್ದ.

ಮುಂಜಾನೆ ನಾಲ್ಕು ಘಂಟೆಯ ಹೊತ್ತು. ನಾನು ಮತ್ತು ಅಪ್ಪಾಜಿ ಇಬ್ಬರು ಎಚ್ಚರಿದ್ದೆವು. ಪವಿ, ಎದ್ದವನೇ, ಮೊಳೆಗಳಿಗೆ ನೇತು ಹಾಕಿದ್ದ ಬಟ್ಟೆಗಳಿಂದ ಒಂದು ಬಟ್ಟೆಯನ್ನು ಆರಿಸಿ., ಉಡಿಸುವಂತೆ ಹೇಳಿದ.

ಅದು ಅಪ್ಪಾಜಿ, ತನ್ನ ಕೈಯಾರೆ ಹೊಲಿದಿದ್ದ ಹೊಸ ಅಂಗಿ. ತಾವು ಟೈಲರಿಂಗ್ ಬಿಟ್ಟು ಇಪ್ಪತ್ತು ವರ್ಷಗಳಾಗಿದ್ದರೂ, ಮಗನಿಗೆ ಮಾತ್ರ ಬಟ್ಟೆ ಹೊಲಿದು ಕೊಡುತ್ತಿದ್ದರು. ಕೊಂಚ, ಸಿಲಿಂಡರ್ ಶೇಪ್ ನಲ್ಲಿದ್ದ ತಮ್ಮನ ಮೈಕಟ್ಟಿಗೆ ಒಪ್ಪುವಂತೆ , ಅಂಗಿಯನ್ನು ಹೊಲಿಯುವುದು ಕೂಡ ಚಾಲೆಂಜಿಂಗ್ ಕೆಲಸ. ಹಾಗಾಗಿ ಅಪ್ಪಾಜಿ, ಹೊಲಿದಿದ್ದ ಅಂಗಿಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದ.

ಹೊಸ ಬಟ್ಟೆ ಹಾಕಿಕೊಂಡು ಮಲಗಿದ. ಅವನೊಳಗೆ ಏನು ನಡೆಯುತ್ತಿದ್ದಿರಬಹುದು ಎಂದು. ಅರ್ಥವಾಗುತ್ತಿರಲಿಲ್ಲ.
ಯಾವುದೇ ರೀತಿಯ ಹೊಯ್ದಾಟವಿಲ್ಲ;
ನರಳಾಟವಿಲ್ಲ;
ಪ್ರಶಾಂತವಾಗಿದ್ದಾನೆ.

ಬೆಳಗಿನ ಜಾವ ಆರು ಘಂಟೆಯಾಗುತ್ತಲೂ, ವೇಗವಾಗಿ ಉಸಿರು ತೆಗೆದುಕೊಳ್ಳಲು ಪ್ರಾರಂಭಿಸಿದ. ಮಲಗಿದ್ದ ಅಮ್ಮ, ಎದ್ದು ಕುಳಿತಳು.

ಅಪ್ಪಾಜಿ ಅವನನ್ನು ತೊಡೆಯ ಮೇಲೆ ಹಾಕಿಕೊಂಡರು.

ತೆರೆದ ಬಾಯಿಗೆ, ಸ್ವಲ್ಪ ಸ್ವಲ್ಪ ವೇ ನೀರು ಬಿಟ್ಟರು. ಮೊದಲೆರಡು ಸಿಪ್ ಗಳನ್ನು ಗುಟುಕಿಸಿದ. ಆಮೇಲಿಂದು ವಾಪಾಸು ಬಂತು.

‘ ಅಯ್ಯೋ, ಕಂದ!! ಹಂಗೆಲ್ಲಾ. ಮಾಡಬೇಡ ಕಂದ. ಎರಡೇ ಎರಡು ಗುಟುಕು ತಗೋ ಕಂದ. ಪವನೀss ’ ಎಂಬುದಾಗಿ ಬೊಬ್ಬಿರಿದು, ಅಪ್ಪ ಎದೆಗೆ ಅವುಚಿಕೊಂಡರು.

ಅಮ್ಮ ಗೋಡೆಯ ಕಡೆಗೆ ತಿರುಗಿಕೊಂಡು, ಹಲ್ಲು ಕಚ್ಚಿಕೊಂಡು, ದೇವರ ಕಡೆಗೆ ಪ್ರಾರ್ಥಿಸಲು ಪ್ರಾರಂಭಿಸಿದಳು.

ದೊಡ್ಡಮ್ಮ, ಅವನ ಪಾದ ಮುಟ್ಟಿ ನೋಡಿ. ‘ ಹೋಯ್ತು ಜೀವ ’ ಎಂದು ಹೇಳಿ ಅಳುತ್ತಾ ಹೊರಗೆ ಹೋದರು.

ಆ ಕ್ಷಣದಲ್ಲಿ ನಾನು ಸಂಪೂರ್ಣ ಸ್ವಾರ್ಥಿಯಾದೆ. ತಮ್ಮನ ಕಡೆಗೂ ನೋಡಲಿಲ್ಲ. ಮಂಚ ಹತ್ತಿ, ಅಮ್ಮನನ್ನು ಅಪ್ಪಿ ಕುಳಿತೆ.

ಅಮ್ಮ ಇನ್ನೂ, ಕಣ್ಣು ಮುಚ್ಚಿ ಒಂದೇ ಸಮನೆ ದೇವರನ್ನು ಪ್ರಾರ್ಥಿಸುತ್ತಿದ್ದಳು.

‘ ನನ್ನ ಮಗ ಚಿರಂಜೀವಿ!! ಅವನಿಗೆ ಏನೂ ಆಗುವುದಿಲ್ಲ!! ಇಷ್ಟು ವರ್ಷ ಬದುಕಿಸಿರುವ ದೇವರೂ ಮತ್ತೂ ಅವನನ್ನು ಕಾಯುತ್ತಾನೆ!!. ’

ಈ ಕ್ಷಣ ಅಮ್ಮನಿಗೆ ಏನಾಗಬಹುದು ..?
ಅವಳಿಗೆ ಏನು ಬೇಕಾದ್ರು ಆಗಬಹುದು..?

‘ಅಯ್ಯೋss, ಕಪಾಲೇಶ್ವರ. ಮತ್ತೆ, ನಿನ್ನ ಹತ್ರ ಬಂದು ಹಣ್ಣು ಕಾಯಿ ಹೊಡುಸ್ತೀನಿ. ದಯವಿಟ್ಟು ನನ್ನಮ್ಮನಿಗೆ ಏನೂ ಮಾಡಬೇಡ. ’ ಎಂಬುದಾಗಿ ಮನದೊಳಗೇ ಹರಕೆಯೊಂದನ್ನು ಕಟ್ಟಿಕೊಂಡೆ.

ಅಮ್ಮ, ಕಣ್ಣು ಬಿಡಲೊಲ್ಲಳು, ಕಚ್ಚಿಕೊಂಡಿದ್ದ ಹಲ್ಲು ಸಡಿಲಿಸಲೊಲ್ಲಳು. ಬಿಗಿಯಾಗಿ ತಪ್ಪಿಕೊಂಡು ಕುಳಿತೆ.

ಅಮ್ಮನನ್ನು ಕಳೆದುಕೊಂಡು ಬಿಡುವೆನೆಂಬ ಭಯ-ಆತಂಕಗಳು ಸೃಷ್ಟಿ ಯಾಗಿತ್ತೇ ವಿನಃ ಆ ಕ್ಷಣದ ತಮ್ಮನ ನಿರ್ಗಮನವು, ನನ್ನ ಗಮನಕ್ಕೇ ಬರುತ್ತಿಲ್ಲ.

ಆ ಕ್ಷಣ ಅಳು ಬರಲಿಲ್ಲ. ದುಃಖ ಆಗಲಿಲ್ಲ. ಏನೂ ಅನ್ನಿಸ್ತಾನೆ ಇಲ್ಲ.

ಹಂಗಾದ್ರೆ, ನಾನು ನನ್ನ ತಮ್ಮನಿಗೆ ಏನೂ ಆಗಿರಲಿಲ್ಲವಾ …?

*******  ೪ *******

ತಮ್ಮನ ದೇಹವನ್ನು, ಮನೆಯ ಹೊರಗಿನ ಪಡಸಾಲೆಯ ಮಂಚದ ಮೇಲೆ ಇಟ್ಟಿದ್ದಾರೆ. ಅವನು ಮೊದಲು ಮಲಗಿದ್ದ ಅದೇ ಹಾಸಿಗೆಯ ಮೇಲೇ ಒಳಗೆ ಕುಳಿತಿದ್ದ ಅಮ್ಮ,

‘ ಪವಿ, ಕಂದಾ, ನನ್ನ ಬಿಟ್ಟು ಹೋಗ್-ಬ್ಯಾಡೋ. ’ ಎಂದು ಘೀಳಿಡುತ್ತಾ, ಮಂಚದಿಂದ ಕೆಳಗೆ ಹಾರಿದಳು. ಅದಾಗಲೇ ಮುರಿದಿದ್ದ ಕಾಲಿನ ಮೂಳೆ, ಇದರಿಂದ ಮತ್ತಷ್ಟು ಹಾಳಾಯಿತು.

ತೆವಳುತ್ತಲೇ, ತಮ್ಮನಿರುವಲ್ಲಿಗೆ ಬಂದು ಮಂಚದ ಪಕ್ಕದಲ್ಲಿ ಕುಳಿತಳು. ಅಳು ನಿಲ್ಲಿಸಿದಳು. ಮತ್ತೆ, ಸಂಪೂರ್ಣ ನಿಶ್ಯಬ್ಧ.

ಮೆಲ್ಲಗೆ ತಮ್ಮನ ದೇಹವನ್ನು ಅಲುಗಿಸುತ್ತಾ, ‘ ಏಳು ಕಂದ, ಟೈಮಾಯ್ತು. ಬೂಸ್ಟ್ ಕುಡಿಯುವಂತೆ. ಯಾಕಪ್ಪ ಇಷ್ಟು ನಿದ್ದೆ ಮಾಡ್ತಾ ಇದಿಯಾ. ಎದ್ದೇಳು, … ಹೇ, ಯಾರೋ ಅದು ಅವನ ಹಣೆ ಮೇಲೆ ಇಷ್ಟು ಕುಂಕುಮ ಇಟ್ಟಿರೋದು ’ ಎನ್ನುತ್ತಾ ಅದನ್ನು ಒರೆಸಿದಳು.

ಅವಳ ನೋವನ್ನು ಸ್ಪರ್ಷಿಸುವ ಶಕ್ತಿ ಯಾರಿಗೂ ಇರಲಿಲ್ಲ. ನನಗೂ ಇರಲಿಲ್ಲ. ಅಳುವ ಹಂಗೂ ಇಲ್ಲ ಮತ್ತು ಆ ಜಾಗ ಬಿಟ್ಟು ಎದ್ದು ಬರೋ ಹಂಗೂ ಇಲ್ಲ.

‘ಬಾಡಿ’ ನೋಡಲು ಬರುತ್ತಿದ್ದ ಅವನ ಸ್ನೇಹಿತರಿಗೆಲ್ಲಾ ‘ ಹೇಯ್, ನೀನು ಅವನ ಫ್ರೆಂಡ್ ಅಲ್ವೇನೋ. ಗಣಪತಿ ಇಡೋದಕ್ಕೆ ದುಡ್ಡು ಕಲೆಕ್ಟ್ ಮಾಡಕ್ಕೆ ಕರ್ಕೋಂಡ್ ಹೋಗು. ನೀ ಏಳ್ಸುದ್ರೆ, ಇವನು ಎದ್ದೇಳ್ತಾನೆ ’ ಎನ್ನುವಳು.

ಒಂದೊಂದು, ಕ್ಷಣವೂ ನನ್ನ ಗಮನವೆಲ್ಲಾ ಅಮ್ಮನ ಮೇಲೆಯೇ ಇದೆ ಹೊರತು, ಅಗಲಿರುವ ತಮ್ಮನ ಮೇಲಿಲ್ಲ. ಅಳುತ್ತಿದ್ದುದೂ ಕೂಡ ಅಮ್ಮನ ಪರಿಸ್ಥಿತಿ ನೋಡಲಾಗದೆ.

ಆಗಿದ್ದು, ಆಗೋಯ್ತು. ಈಗ ನನಗೆ ಅಮ್ಮ ಬೇಕು.

ಅವಳಿಗೆ ಏನಾದ್ರು ಆದ್ರೆ, ನನಗೆ ಅಡುಗೆ ಮಾಡಾಕೋರು ಯಾರು ..? ನನ್ನ ಬಟ್ಟೆ ತೊಳೆಯೋರು ಯಾರು ..? ತಮ್ಮನಿಂದ ಯಾರಿಗೆ ಏನು ಉಪಯೋಗ. ..? ಅಥವಾ ಮನಸ್ಸಿನೊಳಗೆ ಮತ್ತೇನು ಕಾಣದ ಲೆಕ್ಕಾಚಾರವೋ ನಾ ಅರಿಯೆ..

ನನಗೆ ಆ ಸಂದರ್ಭದಲ್ಲಿ ಅಮ್ಮ ಬೇಕಿತ್ತು.

ನಡುಮನೆಯಲ್ಲಿ ಅಪ್ಪನ ಸರ್ಕಸ್ ಶುರುವಾಯ್ತು. ಡಾಕ್ಟರುಗಳು ಕೊಡುತ್ತಿದ್ದ ರಿಪೋರ್ಟ್-ಗಳದ್ದೊಂದು ರಾಶಿ, ಹೃದಯವನ್ನು ಚಿತ್ರೀಕರಿಸಿದ್ದ ಸಿಡಿಗಳು, ಮಾತ್ರೆಗಳು, ಔಷಧಿ ಡಬ್ಬಿಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕುಳಿತರು.

‘ ಫೈಲ್-ಗಳನ್ನೆಲ್ಲಾ, ಹೆಗ್ಲಿಗಾಕ್ಕೋಂಡು. ಮಗನ್ನ ಕರ್ಕೋಂಡು ಆಸ್ಪತ್ರೆಯಿಂದ-ಆಸ್ಪತ್ರೆಗಳಿಗೆ ಅಲೀತಿದ್ದೆ. ಏನ್ ಕುಮಾರಪ್ಪ, ಮಗನ್ನ ಕರ್ಕೋಂಡು ಹೊಂಟ್ ಬುಟ್ಟಾ . ..?ಅಂತ ಕೇಳೋರು ಜನ. ’

‘ ಯಾರೊಬ್ರೂ ನನ್ನ ಮಗನ್ನ ಉಳಿಸೋಕಾಗ್ಲಿಲ್ವಾ ..? ದೇವ್ರೇ, ನಿನಗೆ ನನ್ನ ಮಗನ ಮೇಲೆ ಅಷ್ಟೂ ಕರುಣೆ ಇಲ್ಲದಾಯ್ತಾ. ಕೊನೆಗೂ, ಬಲಿ ತಗೋಂಡು ಬುಟ್ಯಲ್ಲಾ . ’ ಅಪ್ಪನ ಜೊತೆಗೆ ತಂಗಿ ಸೇರಿಕೊಂಡಳು. ಅವರು ಅಪ್ಪ-ಮಗಳು ಒಬ್ಬರನ್ನೊಬ್ಬರು ಹಿಡ್ಕಂಡು ಗೊಳೋ, ಅನ್ನೋಕ್ ಶುರು ಮಾಡಿದ್ರು.

ಜನಗಳು ಬರೋದು, ಹೋಗದು, ಮಾಡಿದರೂ. ಅಮ್ಮನಿಗೆ ಏನೊಂದೂ ತಿಳಿಯುತ್ತಿಲ್ಲ. ಭುಜ ಅಲುಗಿಸಿ. ‘ ಅಳಮ್ಮಾ. ಅಳು ’ ಅಂದ್ರೂ ಅಳ್ತಿಲ್ಲ. ಮಗನ ಜೊತೆ ಸಂಭಾಷಣೆಯಲ್ಲಿ ತೊಡಗಿರುವಳು.

ಸುಮಾರು ಒಂಭತ್ತು ಘಂಟೆಯ ಹೊತ್ತಿಗೆ, ಅಮ್ಮನ ತಮ್ಮ, ಬಂದರು.

ಅವರನ್ನು ನೋಡಿದೊಡನೇ, ‘ ಬಾರೋ ನೀ ಹೇಳುದ್ರೆ, ಗ್ಯಾರಂಟಿ ಎದ್ದೇಳ್ತಾನೆ ಕಣೋ. ಮಾಮನ ಮಾತು ಕೇಳ್ತಾನೆ ಕಣೋ ನೀನು ಎಬ್ಸೋ, ’ ಮಾಮನ ಕೊರಳಿಪಟ್ಟಿ ಹಿಡಿದು ಘೀಳಿಟ್ಟಳು. ಅಷ್ಟು ಹೊತ್ತಿನ ದುಃಖ ಒಮ್ಮೆಲೇ ಹೊರಗೆ ಬಂತು.

ಉಸಿರು ತೆಗೆದುಕೊಳ್ಳಲಾಗದೇ, ದಬಾರನೆ ಮೂರ್ಛೆ ಬಿದ್ದಳು. ‘ ಮಿನಿ ಹಾರ್ಟ್ ಅಟ್ಯಾಕು ’ ಅಂದರು. ಅಲ್ಲಿಂದಲ್ಲೇ ಬಿಟ್ಟು . ಅಮ್ಮನ್ನ ಕರ್ಕೋಂಡು ಆಸ್ಪತ್ರೆಗೆ ಹೊರಟೆವು.

ನಮ್ಮ ಫ್ಯಾಮಿಲಿ ಡಾಕ್ಟರನ್ನು ಹುಡುಕಿಕೊಂಡು ಹೋದಾಗ, ಅವರು ಸಿಗಲಿಲ್ಲ.

ಅವರಿಗೆ ಫೋನಾಯಿಸಿದಾಗ, ‘ ಹುಚ್ಚಿ, ಅವಳು. ಅವಳನ್ನ ಯಾವ್ದಾದ್ರು ರೂಮಲ್ಲಿ ಕೂಡಿ ಹಾಕ್ರಿ. ಇಲ್ಲಾಂದ್ರೆ, ಅವಳನ್ನೂ ಕಳ್ಕೋತೀರ. ..? ’ ಅಂದ್ರು. ಕೊನೆಗೆ ಚಿಕ್ಕ ಸ್ವಾಮಿ ಆಸ್ಪತ್ರೆಗೆ ಹೋದೆವು.

‘ ಹೋದ ವಾರ ಪವನ್ ಅಂತ ಹಾರ್ಟ್ ಪೇಷೆಂಟ್ ಬಂದಿದ್ದನಲ್ಲಾ, ಅವನು, ಬೆಳಗ್ಗೆ ಎಕ್ಸ್-ಪೈರ್ ಆಗಿಬಿಟ್ಟ ಸಾರ್!! ಅವರಮ್ಮಂಗೆ ಸೀರಿಯಸ್ ಆಗಿದೆ. ’ ಅಂತ ಜೊತೆಯಲ್ಲಿ ಬಂದಿದ್ದ ಕಜಿನ್ ಬ್ರದರ್-ಗಳು ವಿವರಿಸಿದರು.

ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡು, ಡ್ರಿಪ್ಸ್ ಹಾಕಿದರು. ವಯಲೆಂಟ್ ಆಗದ ರೀತಿಯಲ್ಲಿ, ‘ ಮತ್ತು ’ ಬರುವ ಚುಚ್ಚುಮದ್ದು ನೀಡಿದರು.

ಅಮ್ಮನ ಗಮನಕ್ಕೆ ಬಾರದ ರೀತಿಯಲ್ಲಿ, ಅಂತಿಮಸಂಸ್ಕಾರ ನಡೆಯುವಂತಿರಲಿಲ್ಲ.

ಪ್ರಜ್ನೆ ಬಂದ ಮೇಲೆ, ‘ ನನ್ನ ಮಗ, ಎಲ್ಲಿ ..? ’ ಅಂತ ಕೇಳ್ತಾಳೆ.

ಇವೆಲ್ಲಾ, ಭಾವನೆಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ, ಅತಿರೇಕಕ್ಕೆ ಹೋಗುವ ಮನುಷ್ಯ ಸ್ವಭಾವಗಳು.

ಅರೆಪ್ರಜ್ನಾವಸ್ಥೆಯಲ್ಲಿ, ‘ ಇಲ್ಲಾ, ನೀವೆಲ್ಲಾ ಸೇರ್ಕೊಂಡು, ನನಗೇನೋ ಮಾಡಿಬಿಟ್ರಿ. ನನಗೆ ಕಣ್ಣು ಬಿಡಕ್ ಆಗ್ತಾ ಇಲ್ಲ. ಮತಾಡೋದಕ್ಕೆ ಆಗ್ತಾ ಇಲ್ಲ. ನಾನು ನನ್ನ ಮಗನ ಹತ್ತಿರ ಹೋಗಬೇಕು. ಅಲ್ಲಿಗೆ ಕರ್ಕೋ ಹೋಗ್ರಿ. ನಾನು ನನ್ನ ಮಗನ ಹತ್ತಿರ ಹೋಗಬೇಕು. ’ ಎಂಬುದಾಗಿ ಸಣ್ಣಗೆ ಮಮ್ಮಲ ಮರುಗುತ್ತಿದ್ದಳು.

ಕೈ ಹಿಡಿದು ಪಕ್ಕದಲ್ಲಿಯೇ ಕುಳಿತಿದ್ದವನಿಗೆ, ಆ ಮಾತುಗಳು ಕೇಳಿಸುತ್ತಿದ್ದವು.

ತಮ್ಮ ಶವವಾಗಿದ್ದಾನೆ. ಮನೆಯಲ್ಲಿ ಅಂತ್ಯ ಸಂಸ್ಕಾರದ ಸಿದ್ದತೆಗಳು ನಡೆಯುತ್ತಿವೆ. ನಾನು ಆಸ್ಪತ್ರೆಯಲ್ಲಿ ಅಮ್ಮನ ಪಕ್ಕದಲ್ಲಿ ಕುಳಿತಿದ್ದೇನೆ.

ಮಧ್ಯಾಹ್ನದ ಹೊತ್ತಿಗೆ, ಅಮ್ಮನನ್ನು ಡಿಸ್ಚಾರ್ಜ್ ಮಾಡಿಸಿದೆವು. ‘ ಇಂಜೆಕ್ಷನ್ ಪವರ್ ಸಂಜೆ ವರ್ಗೂ ಇರತ್ತಾದರೂ., ಬಹಳ ಭಾವಾವೇಶಕ್ಕೆ ಒಳಗಾಗದ ರೀತಿಯಲ್ಲಿ ಮ್ಯಾನೇಜ್ ಮಾಡ್ರಿ ’ ಅಂತ ಡಾಕ್ಟರು ಸಲಹೆಯನ್ನೂ ಕೊಟ್ಟರು.

ಬೇರೊಂದು ಮನೆಯಲ್ಲಿ ಅಮ್ಮನನ್ನು ಮಲಗಿಸಿ, ಅವಳ ಪಕ್ಕದಲ್ಲಿ ಕುಳಿತಿದ್ದೆ. ಈಗಲೂ ಮನೆಯಲ್ಲಿ ಏನು ನಡೆಯುತ್ತಿದೆ, ಗೊತ್ತಿಲ್ಲ.

ನನಗೆ ಅಮ್ಮ ಬೇಕು. ಯಾರು ಏನಾದ್ರು ಹಾಕ್ಕೋಂಡ್ ಸಾಯ್ ಹೋಗ್ಲಿ.

ತಮ್ಮನ ದೇಹ, ಎತ್ತುವ ಹೊತ್ತಿಗೆ ಸರಿಯಾಗಿ ಅಮ್ಮನನ್ನು ಕರೆದುಕೊಂಡು ಅಲ್ಲಿಗೆ ಹೋದೆ. ಅದಕ್ಕಿಂತ ಮುಂಚೆ ಮನೆಗೆ ಹೋಗಿ, ‘ ಅಮ್ಮನನ್ನು ನೋಡಿ ಗೊಳೋ. ಅನ್ನುವುದಾಗಲೀ, ಹೆಚ್ಚು ಮಾತನಾಡಿಸುವುದಾಗಲೀ ಮಾಡಬಾರದೆಂದು ’ ಅಲ್ಲಿರುವವರಿಗೆ ಹೇಳಿದ್ದೆ. ಆದರೂ ಗೋಳಾಡುವುದು ಬಿಡಲಿಲ್ಲ.

ಅಂತಿಮ ಯಾತ್ರೆ ಶುರುವಾಯಿತು. ಮನೆ ಮುಂದೆ ಬೆಂಕಿ ಹಾಕೋದ್ರಿಂದ ಹಿಡಿದು . ಸ್ಮಶಾಣದಲ್ಲಿ ಗುಂಡಿ ಅಗಿದು ಮಣ್ಣು ಮಾಡುವ ಮಧ್ಯೆ ನೂರೆಂಟು ಪ್ರೊಸೀಜರ್ ಗಳು.

ಶಾಸ್ತ್ರ, ಸಂಪ್ರದಾಯಗಳು, ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದವು ಅಂದರೆ, ನೊಂದವರಿಗೆ ಅಳೋದಕ್ಕೂ. ಫೀಲ್ ಮಾಡಿಕೊಳ್ಳೋದಕ್ಕೂ ಸ್ಪೇಸ್ ಇಲ್ಲ.

‘ ಎಲ್ಲಾ, ಹೋಗ್ತೀರದೆ, ಮುಂದೆ. ನಮಗೂ ಇಂತಾದ್ದೊಂದು ಜರ್ನಿ ಇದ್ದೇ ಇದೆ. ’ ಎಂಬುದನ್ನು ಸಲೀಸಾಗಿ ಹೇಳುತ್ತಾ, ಹೆಚ್ಚು ಭಾವುಕರಾದವರನ್ನು ಮನಸಾರೆ ಹಂಗಿಸುತ್ತಿದ್ದರು ಕೆಲವರು.

ಹೊರಗೆ ನಿಂತು ಸಾವು ನೋಡುವವರಿಗೆ ಇದು ಒಂದು, ‘ ಹಾ, ಏನೋ ಆಗಿದೆ. ’ ಅನ್ನೋ ಸಮಾಚಾರ. ಆದರೆ ಒಂದು ಸಾವು ಇಷ್ಟು ಕಠೋರವಾಗಿರತ್ತಾ ..?

ಬರಬೇಕಾದವರು, ನೋಡಬೇಕಾದವರು, ಎಲ್ಲರೂ ಒಂದು ಸಾರಿ ನೋಡಿಕೊಂಡ ಮೇಲೆ, ಬಾಡಿಯನ್ನು ಗುಂಡಿಯ ಒಳಗೆ ಇಟ್ಟರು. ಆಗ ಕುಸಿದು ಬಿದ್ದವಳೆಂದರೆ ನನ್ನ ತಂಗಿ.

ತಮ್ಮ-ತಂಗಿ ಹೆಚ್ಚೂ ಕಮ್ಮಿ ಓರಗೆಯವರು. ಜೊತೆಯಲ್ಲಿಯೇ ಬೆಳೆದವರು.ಜೊತೆಯಲ್ಲಿಯೇ ಆಡಿದವರು. ಕಿತ್ತಾಡಲು ಕೂಡ ಇಬ್ಬರ ಮಧ್ಯೆ ಸಮಾನವಾದ ವಿಷಯಗಳಿರುತ್ತಿದ್ದವು. ಅವನ ಸ್ಕೂಲಿನ ಬ್ಯಾಗುಗಳನ್ನು ಇವಳೇ ಹೊರಬೇಕಿತ್ತು. ಕೆಲವು ಸಾರಿ, ಕೂಸುಮರಿ ಮಾಡಿಕೊಂಡು ಅವನನ್ನೂ ಹೊತ್ತುಕೊಂಡು ಬಂದದ್ದು ಇದೆ.

ನನಗೆ ಸ್ವಲ್ಪ ಕೊಬ್ಬು ಜಾಸ್ತಿ, ಅಣ್ಣನೆಂಬ ಗತ್ತು ಆಗಿರಬಹುದು ಅಥವಾ ಮತ್ತೇನೋ...

******* ೫ *******

ಕತ್ತಲಾಯಿತು.
ಮಣ್ಣು ಮಾಡಿದ ದಿನ(ಮಣ್ ಮಾಡೋದು ಅಂದ್ರೆ ಶವ ಸಂಸ್ಕಾರ ಮಾಡೋದು ), ಮನೆಯವರ ಹೊರತಾಗಿ ಯಾರೊಬ್ಬರೂ, ತೀರಿ ಹೋದವರ ಮನೆಯಲ್ಲಿ ಉಳಿದುಕೊಳ್ಳುವಂತಿಲ್ಲ. ಇದು ಸಂಪ್ರದಾಯ.

ಬೆಳಗಿನಿಂದಲೂ ನಡೆಸಿದ ಸಂಪ್ರದಾಯಗಳಲ್ಲಿ, ಇದೊಂದೆ ನನಗೆ ಅಚ್ಚು ಮೆಚ್ಚು ಅನಿಸಿದ್ದು. ಸಧ್ಯ, ಎಲ್ಲ ತೊಲಗಿದರು, ಅನ್ನೋ ನಿರಾಳ ಭಾವ.

ನಾನು, ಅಮ್ಮ, ಅಪ್ಪ ಮತ್ತು ತಂಗಿ. ನಾವು ನಾಲ್ಕೇ ಜನ ಮನೆಯಲ್ಲಿ. ಎಲ್ಲರೂ ಸಮಾನ ದುಃಖಿಗಳು. ಈಗ ಯಾರೂ ಯಾರ ಮುಂದೆಯೂ ಬಹಿರಂಗವಾಗಿ ರೋಧಿಸುವಂತಿಲ್ಲ. ಎಲ್ಲರೂ, ಎಲ್ಲರನ್ನೂ ಸಮಾಧಾನ ಪಡಿಸಬೇಕು.

ಮಂಚದ ಮೇಲೆ ಮಧ್ಯದಲ್ಲಿ ಅಮ್ಮ ಮಲಗಿದ್ದಾಳೆ. ಆಚೆಕಡೆ ತಂಗಿ, ಈಚೆಕಡೆ ನಾನು. ಅಪ್ಪಾ ಅವರು ಕೆಳಗೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಯಾರೊಬ್ಬರೂ ನಿದ್ರಿಸುತ್ತಿಲ್ಲ.
ಮಾತು, ಮಾತು, ಮಾತು, ಮಧ್ಯೆ ಒಂದು ಧೀರ್ಘ ಮೌನ.
ಸೂರಿನ ಹೆಂಚುಗಳನ್ನ ದಿಟ್ಟಿಸುತ್ತಾ, ಒಂದಷ್ಟು ನೆನಪುಗಳ ಜೋಲಿಯಲಿ ತಾವು ತೂಗಿ, ಆನಂತರ ಅನುಭವಿಸಿದ್ದನ್ನ ಹೇಳುವರು.

‘ ನೆನ್ನೆ ದಿನ ಇದೇ ಹಾಸಿಗೆಯ ಮೇಲೆ ರಣರಣ ಅಂತ ನರಳುತ್ತಿದ್ದ ನನ್ನ ಮಗ, ಈವತ್ತು ಅರಾಮಾಗಿ ಮಲಗಿದ್ದಾನೆ. ಇನ್ನು ಮುಂದೆ, ಅವನಿಗೆ ಯಾವ ರೀತಿಯ ನೋವುಗಳೂ ಬಾಧಿಸುವುದಿಲ್ಲ.’

ಅಂತ ಅಮ್ಮ ಹೇಳುವಾಗ ಅದು ನಿಜವಾ ..? ಹಾಗೂ ಇರತ್ತಾ ..? ಅಥವಾ ಹಾಗೂ ಯಾಕಿರಬಾರದು ಅನ್ನೋ ಥಾಟು.

‘ ತೊಟ್ಲಲ್ಲಿ ಮಗು ಬಿಟ್ಟು ಬಂದಿದ್ದೇನೆ ಅಂತ ಅಮ್ಮಂದಿರು ಹೇಳೋ ಹಂಗೆ,\ ಅಯ್ಯೋ, ಮನೆಯಲ್ಲಿ ನನ್ನ ಮಗ ಒಬ್ಬನ್ನೇ ಬಿಟ್ಟು ಬಂದಿದ್ದೇನೆ ಅಂತ ಹೇಳಿ ಎಲ್ಲೇ ಹೋದ್ರು, ಸಂಜೆಯೊಳಗೆ ಮನೆಗೆ ಬರ್ತಿದ್ದೆ. ಈಗ ಆ ಥರ ಏನೂ ಇಲ್ಲ. ’

‘ ಅವನೂ ದೊಡ್ಡವನಾಗ್ತಾ ಇದ್ದ. ಇನ್ನು ಬದುಕಿದ್ರೂ ತುಂಬಾ ಕಷ್ಟ ಪಡಬೇಕಿತ್ತು. ಹೋಗಿದ್ದು ಒಳ್ಳೇದಾಯ್ತು. ’ ಅನ್ನುವಳು ಅಮ್ಮ. ಇಷ್ಟು ಬೇಗ ಎಲ್ಲಾ ಮುಗಿದು ಹೋಯ್ತಾ ..?

‘ ಸಾವು ಅಂದ್ರೆ ಏನು..? ’ ಅನ್ನೋದು ನಮ್ಮ ಅನುಭವಕ್ಕೆ ಮೊದಲ ಬಾರಿಗೆ ಯಾವತ್ತೋ ಒಂದಿನ ಬಂದಿರತ್ತೆ.

ನಮ್ಮ ಪಕ್ಕದ ಮನೆಯಲ್ಲೊಬ್ಬರು ಅಜ್ಜಿ ಇದ್ದರು. ಸದಾ ಮನೆಯ ಹೊರಗಿನ ಕಾಂಕ್ರೀಟ್ ಜಗುಲಿಯ ಮೇಲೆ ಕೂತಿರುತ್ತಿದ್ದರು. ಅನಾರೋಗ್ಯದಿಂದ ಒಂದಿನ ತೀರಿ ಹೋದರು. ಅವರ ಮರಣದ ದಿನ ಅದೇ ಜಗುಲಿಯ ಮೇಲೆ ಶವವನ್ನು ಇಟ್ಟಿದ್ದರು. ಆ ವಾತಾವರಣವೇ ಡಿಸ್ಟರ್ಬಿಂಗ್ ಅನ್ನಿಸುತ್ತಿತ್ತು.

ಆ ನಂತರ, ಆ ಜಗುಲಿಯ ಮೇಲೆ ಅವರು ಕೂರುವುದನ್ನು ನಾನು ನೋಡಲೇ ಇಲ್ಲ. ಹಂಗಾದ್ರೆ ಅವರು ಇನ್ಮೇಲೆ ಅಲ್ಲಿ ಕೂರೋದಿಲ್ವಾ ..? ಯಾರ ಕೈಗೂ ಸಿಗೋದಿಲ್ಲವಾ ..? ಯಾರ ಕಣ್ಣಿಗೂ ಕಾಣೋದಿಲ್ಲವಾ ..? ಎಂಬ ವಿಚಾರಗಳೆಲ್ಲಾ ತಲೆಯನ್ನು ಹೊಕ್ಕಿ, ಮೊದಲ ಬಾರಿಗೆ ‘ ಸಾವು ’ ಭಯ ಮೂಡಿಸಿತ್ತು.

ಇದಾದ ಮೇಲೆಯೂ ಕೂಡ ಸಾವಿನ ಸುದ್ದಿಗಳು, ಇತರೆ ಸಮಾಚಾರಗಳ ಜೊತೆಗೆ ಸುತ್ತಿಕೊಂಡು ಹೋಗಿರುತ್ತಿದ್ದವು. ಅವರು ಬದುಕಿ ಹೋಗಿರುವುದರ ಬಗ್ಗೆ ಹೇಳುತ್ತಿದ್ದ ನಾಲ್ಕು ಒಳ್ಳೆಯ ಮಾತುಗಳ ಆಚೆ, ಆ ವ್ಯಕ್ತಿಗಳ ಯಾವುದೇ ನೆನಹು, ಕುರುಹುಗಳು ಸಿಗದೇ, ಬಹಳ ಕಡಿಮೆ ಸಮಯದೊಳಗೆ ಕಾಲಗರ್ಭದೊಳಗೆ ಅವರೆಲ್ಲಾ ಕಳೆದು ಹೋಗಿರುತ್ತಿದ್ದರು.

ಒಂದಿನ, ಸ್ಕೂಲು ಮುಗಿಸಿಕೊಂಡು ಒಬ್ಬನೇ ಮನೆಯ(ಊರಿನ) ಕಡೆಗೆ ನಡೆದು ಬರುತ್ತಿದ್ದೆ. ಬೈಕಿನಲ್ಲಿ ಹೋಗುತ್ತಿದ್ದ ನಮ್ಮೂರಿನ ಇಬ್ಬರು ನಿಲ್ಲಿಸಿ,

‘ ನಿಮ್ಮಜ್ಜ ದನಗಳಿಗೆ ನೀರು ಕುಡ್ಸೋವಾಗ, ಚಾನಲ್ ಗೆ ಬಿದ್ದು ಸತ್ತೋದ್ರು. ’ ಅಂತ ಹೇಳಿ ಅದೇ ಬೈಕಿನಲ್ಲಿ ಕೂರಿಸಿಕೊಂಡು ಊರಿಗೆ ಬಂದರು.

ವಯಸ್ಸು ಚಿಕ್ಕದಿದ್ದುದರಿಂದಲೋ ಅಥವಾ ಅಜ್ಜನ ಜೊತೆಗೆ ಅಷ್ಟಾಗಿ ಭಾವನಾತ್ಮಕಾವಾಗಿ ಬೆರೆಯದಿದ್ದುದರ ಪ್ರಭಾವವೋ. ದುಃಖ ಅಂತೂ ಆಗಲಿಲ್ಲ.

ರಾತ್ರಿಯಿಡಿ ಶವವನ್ನು ಕಾಯುವಾಗ, ಭಜನೆ ಕಾರ್ಯಕ್ರಮವಿರುತ್ತದೆ. ನಾನು ಮತ್ತು ನನ್ನ ವಯಸ್ಸಿನ ಕೆಲವು ಮೊಮ್ಮಕ್ಕಳು, ಭಜನೆಯವರ ಜೊತೆಗೆ ಸೇರಿಕೊಂಡು ರಾತ್ರಿಯಿಡೀ ಕಣ್ಣು ಮುಚ್ಚದ ರೀತಿಯಲ್ಲಿ ಎಚ್ಚರವಿದ್ದು ನೃತ್ಯ ಮಾಡಿದೆವು.

ದೊಡ್ಡವರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿ ಹೋಗಿದ್ದರು. ಇದಾವುದರ ಪರಿವೇ ಇಲ್ಲದೇ ಭಜನೆಯವರ ಜೊತೆ ಸೇರಿಕೊಂಡು ನಾವುಗಳು ಕುಣಿಯುತ್ತಿದ್ದೆವು. ನನಗೆ ನೆನಪಿರುವಂತೆ ಮೊದಲಬಾರಿಗೆ, ರಾತ್ರಿಯಿಡೀ ಎಚ್ಚರವಿದ್ದು ಸೂರ್ಯೋದಯವನ್ನು ನೋಡಿದ ಮೊದಲ ಅನುಭವ ಅದು.

ಇದಾಗಿ ಎರಡು ದಿನಗಳ ಬಳಿಕ, ಶೋಕದಿಂದ ಕೊಂಚ ಹೊರಬಂದ ನಂತರ ನನ್ನ ಅಪ್ಪ ಮೊದಲು ಮಾಡಿದ ಕೆಲಸ ಅಂದ್ರೆ,

‘ ನಮ್ಮಪ್ಪ ಸತ್ತೋದ್ರೆ ಡ್ಯಾನ್ಸ್ ಮಾಡ್ತೀಯ ..? ’ ಅಂತ ಬಯ್ದು ಅಂಡಿನ ಮೇಲೆ ಬಾರಿಸಿದ್ದು.

ಆದ್ರೆ ಸಾವು ಇಷ್ಟು ಕ್ರೂರವಾಗಿರತ್ತೆ ಅಂತ ಗೊತ್ತಿರಲಿಲ್ಲ. ನನ್ನ ತಮ್ಮ ಇಲ್ಲವಾಗಿರುವ ವ್ಯಾಕ್ಯೂಮ್, ಅವನನ್ನು ಮಣ್ಣುಮಾಡಿ ಬರುವುದರೊಳಗೆ ಹೊರಟು ಹೋಗಿತ್ತಾ . ..?

ಬೆಳಗಿನಷ್ಟು ಹೊಯ್ದಾಟವಿಲ್ಲ.
ಆತಂಕವಿಲ್ಲ.
ಅಂತಹಾ ಭಾವ ಯಾರಿಗೂ ಇದ್ದಂತೆ ಕಾಣಲಿಲ್ಲ.

ಎಲ್ಲರೂ ಆರಾಮಾಗಿ, ಅವನ ನೆನಪುಗಳನ್ನು ಮೆಲುಕು ಹಾಕುತ್ತಾ ನಗುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ನೆನೆದು ಸಾರ್ಥಕತೆಯನ್ನು ಅನುಭವಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಮಧ್ಯೆ, ಗತ್ತು, ಗೌರವದಿಂದ ಅವನು ಬದುಕಿದ್ದೇ ಒಂದು ಮಿರಾಕಲ್ ಅನ್ನುವಂತೆ ಮಾತನಾಡುತ್ತಿದ್ದಾರೆ.
ಅಥವಾ ಅವನು ಇಲ್ಲವಾಗಿರುವ ವಿಷಯವನ್ನು ಯಾರ ಚೇತನಗಳೂ ಒಪ್ಪಿಕೊಳ್ಳಲಾಗುತ್ತಿಲ್ಲವೇ..?

ಹಲವು ದಿನಗಳವರೆಗೂ ., ನನ್ನ ಗೆಳೆಯರು ಅನ್ನಿಸಿಕೊಂಡ ಯಾರೊಂದಿಗೂ ಮಾತನಾಡಿರಲಿಲ್ಲ. ಯಾರಾದ್ರು ನನ್ನ ಹುಡುಕ್ಕೊಂಡಾದ್ರು ಬರಬಾರದಾ ..? ಎಲ್ಲಾ ಹೇಳ್ಕೋಂಡು ಅವರ ಮುಂದೆ ‘ಗೊಳೋ, . ’ ಅಂತಾನಾದ್ರು ಅಳಬಾರ್ದಾ ..? ಅನ್ನೋ ಮನಸ್ಸಾಗ್ತಿತ್ತು.

ಅಮ್ಮ ಹೇಳ್ತಿದ್ದಂತೆ, ನಾನೊಬ್ಬ ಲೋನರ್, ಇರ್ಬೇಕು. ‘ ಜನಗಳ ಜೊತೆ ಇದ್ರೆ ಶ್ಯಾದ್ರೆ ಆಗ್ತದೆ ನಿಂಗೆ. ಒಂಟಿ ಸಲಗ, ಒಂಟಿ ನಾಯಿ, ನೀನು ’ ಅಂತ ಅಮ್ಮ ಬಯ್ಯುತ್ತಿದ್ದಳು.

ನನ್ನಂತಹಾ ತಿಕ್ಕಲು ಜೀವಿಗೂ, ಸಿಕ್ಕ-ಷ್ಟೂ ಜೀವನವನ್ನು ಹಿಡಿಹಿಡಿಯಾಗಿ ಅನುಭವಿಸಿ ಬದುಕಿದ ಪವಿಗೂ ಉತ್ತರ ಧ್ರುವದಿಂ ದಕ್ಷಿಣ ಧ್ರುವದ ಅಂತರ.

‘ ಏನೇ, ಆಗಲಿ, ಅವನು ಬಂದಗೆ ನೀನು ಬರಲ್ಲ ಬಿಡು. ಅವನ ಬುದ್ಧಿನಲ್ಲಿ ಕಾಲು ಭಾಗ ಕೂಡ ನಿನಗಿಲ್ಲ ಬಿಡು, ಚನ್ನಾಗಿದ್ದಿದ್ದರೆ, ನಿನ್ನ ಮೀರಿಸಿ ಬಿಟ್ಟಿರುತ್ತಿದ್ದ. ಅವನ ಕಾಲ್ ದೆಸೆ ನುಸುದ್ರು, ಅವನ ತರ ಆಗಲ್ಲ ನೀನು ’ ಎಂಬೆಲ್ಲಾ ಕರ್ಣಕಠೋರ ನಿಂದನೆಗಳು ಎಲ್ಲರಿಂದಲೂ ತೇಲಿ ಬರುತ್ತಿದ್ದುದು, ಎಳೆಯ ಮನಸ್ಸಿನಲ್ಲಿ ಕೋಪ ಸಿಟ್ಟುಗಳನ್ನು ಸೃಷ್ಟಿಸಿದರೂ., ಪವಿಯ, ಯಾತನೆಗಳನು ಮೀರಿದ ಅಸ್ತಿತ್ವವನ್ನು ನೋಡಿದಾಗ ‘ ಸಾಮಾನ್ಯದವನಲ್ಲ, ಇವನು ’ ಅಂತನಿಸುತ್ತಿತ್ತು.

ಬಹುಷಃ ಇದೇ ಕಾರಣಕ್ಕೆ ‘ ಬ್ಲಾಕ್ ’ ಸಿನಿಮಾ ತುಂಬಾ ಇಷ್ಟವಾಗಿ, ತಂಗಿ, ತನ್ನ ಮದುವೆಯ ದಿನ, ಎಂದಿಗೂ ಮದುವೆಯಾಗಲಾರದ ಅಂಗವಿಕಲ ಅಕ್ಕನ ಮುಂದೆ confess ಮಾಡುವ ಇಡೀ ಸನ್ನಿವೇಶ ಭಾವಪ್ರವಾಹದೊಳಗೆ ದಬ್ಬಿತ್ತು.

******* ೬ *******

ಸುಮಾರು ಇಪ್ಪತ್ತು ದಿನಗಳವರೆಗೂ ಮನೆಯಲ್ಲಿಯೇ ಇದ್ದು, ‘ ಎಲ್ಲಾ ಸರಿ, ’ ಅಂತನ್ನಿಸಿದ ಮೇಲೆ ಚೆನೈ ಕಡೆಗೆ ಹೊರಟೆ.

ಊರಲ್ಲಿದ್ದಾಗ, ಮನೆಯವರನ್ನು ಸಂತೈಸುವ ಭರದಲ್ಲಿ., ನಡೆದಿರುವ ಸಂಗತಿಯ ಅಗಾಧತೆಯ ಅನುಭವ ಆಗಿರಲಿಲ್ಲ. ಆದರೆ ಚೆನೈ ಗೆ ಬಂದ ಮೇಲೆ, ಪರಿಸ್ಥಿತಿ ಬಿಗಡಾಯಿಸಿತು.

ನೆನಪುಗಳು; ಅತ್ಮ್ಮಿಯರು ಅನಿಸಿಕೊಂಡವರಿಗೆ ಮೊದಲಿಂದ-ಕೊನೆವರೆಗು ಹೇಳುತ್ತಿದ್ದ ಅವವೆ ಮಾತುಗಳು; ಕಣ್ಣು ಮುಚ್ಚಿ ಬಿಡುವುದರೊಳಗೆ ಬದಲಾಗುತ್ತಿದ್ದ, ಚಿತ್ರ-ವಿಚಿತ್ರ ಸನ್ನಿವೇಶಗಳು; ತಾತ್ಕಾಲಿಕ ಹುಚ್ಚು ತನ,

‘ ವಿಷಯ ಗೊತ್ತಾದರೂ ಅದರ ಬಗ್ಗೆ, ಒಂದ್ ಮಾತೂ ಕೇಳ್-ಲಿಲ್ವಲ್ಲಾ ಕಳ್-ನನ್ಮಗ ’ ಅಂತ ಆತ್ಮೀಯರ ಮೇಲೆ ಕೋಪಾನು ಬರ್ತಿತ್ತು. ನೋವಲ್ಲಿರೋರ ಮೇಲೆ ಸಾಂತ್ವಾನದ ನುಡಿಗಳು ಅಷ್ಟು ಪರಿಣಾಮ ಬೀರೋದಿಲ್ಲ. ಎಲ್ಲಾ ನಾಗರಿಕ ಶಿಷ್ಟಾಚಾರಗಳ ಎಲ್ಲೆಗಳನ್ನು ಮೀರಿ, ಮೈ-ಮನಸ್ಸು, ಸಂಕಟದಲ್ಲಿರುತ್ತದೆ. ಆದರೂ. ನಾಟಕೀಯ ಅಂತ ಅನ್ನಿಸಿದರೂ ಪರವಾಗಿಲ್ಲ, ಸ್ವಲ್ಪ ಮಟ್ಟಿಗೆ ಸಾಂತ್ವಾನ ಹೇಳಬೇಕಾಗಬಹುದು. ..? ಆ ಸಂದರ್ಭದಲ್ಲಿ, ಮನಸ್ಸು ಚಿಕ್ಕ ಮಗು ರೀತಿ ಜಿದ್ದು ಮಾಡ್ತಾ ಇರತ್ತೆ.

ನಾನಂತೂ ಓದ್ದೋನು. ನಾಕಾರು ಕಡೆ ತಿರುಗಾಡುವವನು. ಅಪರೂಪಕ್ಕಂತ ರಜಾ ದಿನಗಳಲ್ಲಿ ಮಾತ್ರ ಊರಿಗೆ ಹೋಗುವವನು. ಮತ್ತು ಮೊದಲಿಂದಲೂ ಹೊರಗೇ ಬೆಳೆದವನು.

‘ ನನಗೂ ಒಬ್ಬ ತಮ್ಮ ಇದ್ದ. ’ ಅಂತ ಕಾನ್ಷಿಯಸ್ ಆಗಿ ನೆನಪು ಮಾಡಿಕೊಳ್ಳಬೇಕೀಗ. ಅಷ್ಟು ಮರೆತಿದ್ದೇನೆ.

ಮೊದಮೊದಲು ತೀವ್ರವಾಗಿ ಕಾಡುತ್ತಿದ್ದವನು, ಈಗ ನೆನಪಿಗೇ ಬರುವುದಿಲ್ಲ.

ಆದರೆ ಅಪ್ಪ, ಅಮ್ಮನ ಕಥೆಯೇ ಬೇರೆ. ಸದಾ ಮನೆ-ತೋಟದಲ್ಲೇ ಜೀವನ.
ಮನೆಯ ಒಂದೊಂದು ಮೂಲೆಗೂ ‘ ಪವಿ ’ ಯ, ಅಸ್ತಿತ್ವದ ಮೈಲಿಗೆ ಇದೆ.
ತಮ್ಮಗಳ ಭಾವ ಪ್ರಪಂಚದಲ್ಲಿ,
ಒಂದೊಂದು ಮೆಲುಕುಗಳಿಗೂ,
ಸುಖ-ಸಂತೋಷ,
ನೋವು-ನಲಿವು,
ಮುನಿಸು ಮುಂತಾದವಕ್ಕೆಲ್ಲಾ ಅವರು ಒಳಗೊಳಗೆ ಬಂಧಿ.
ಕಣ್ಣ ಮುಂದಿರುವಾಗ ಮಾತ್ರ, ಅವರ ಕ್ಷಣಗಳನ್ನು ನಾವು ಆಕ್ಯುಪೈ ಮಾಡಲು ಸಾಧ್ಯ. ಆಮೇಲೆ, ತೆಗ್ಗಿನ ಕಡೆಗೆ ನೀರು ಹರಿವಂತೆ ಅವರ ಆಲೋಚನಾ ಲಹರಿಯದ್ದು ಅತ್ತಲೇ ಪಯಣ.

ಈ ನೋಯಿಸುವ ನೆನಪುಗಳಿಗೆ ತುದಿ-ಮೊದಲು ಎಂಬುದಿಲ್ಲ. ಅದು ಮರುಕಳಿಸಲು,

ರಾತ್ರಿ ಬಿದ್ದ ಯಾವುದೋ ಕನಸಿನ ತುಣುಕು ಸಾಕು;
ಊಟಕ್ಕೆ ಕೂರುವಾಗ ಕಮ್ಮಿಯಾಗುತ್ತಿದ್ದ ತಟ್ಟೆ ಯ ಕೌಂಟು;
ಯಾರೊಬ್ಬರು ಅವನ ಗುಣಗಾನ ಮಾಡಿದರೂ ಸಾಕು;
ಬರ್ಥ್ ಡೇ; ಡೆತ್ ಡೇ; ಗಣಪತಿ ಹಬ್ಬ; ದೀಪಾವಳಿ ಹಬ್ಬ; ಜಾತ್ರೆ; ತೇರು; ಇತ್ಯಾದಿಗಳು. ಯವಾಗಲೂ ಕಾಡಿಸ್ತಾನೆ.
ಪುತ್ರಶೋಕ, ಅಪ್ಪ-ಅಮ್ಮಂದಿರನ್ನು ಅಷ್ಟು ಸುಲಭವಾಗಿ ಬಿಡುವಂತದ್ದಲ್ಲ.

ಅಪ್ಪ ಬೆಳಗ್ಗೆ ಬೆಳಗ್ಗೆ ಹಿತ್ತಲಿಂದ ಫ್ರೆಷ್ ಆಗಿರೋ ಹೂವನ್ನು ತಂದು ಅವನ ಫೋಟೋಗೆ ಸಿಕ್ಸೋದಂತೆ, ಅಕಸ್ಮಾತ್ ಗಾಳಿಗೆ ಹೂವು ಬಿದ್ದಾಗ ಅಮ್ಮ - ‘ ಅಯ್ಯೋ, ಯಾಕೋ ಕಂದ, ಹೂವ ಬೀಳಿಸಿಬಿಟ್ಟೆ. ಕೋಪ ಏನೋ ನಮ್ ಮೇಲೆ. ’ ಅಂತ ಆ ಹೂವನ್ನು ತೆಗೆದು ಪುನಃ ಫೋಟೋಗೆ ಸಿಕ್ಸೋದಂತೆ.

ಕೂತುಕೊಂಡು ಇದನ್ನ ನೋಡೋವಾಗ ಮೆಂಟಲ್ ಆಸ್ಪತ್ರೆನಲ್ಲಿ ಇದೀನಾ ಅನ್ನೋ ಫೀಲಿಂಗ್ ಬರ್ತದೆ.
ಅವರ ಅಸಹಾಯಕತೆ ನೋಡಿ, ಬಯ್ಯಬೇಕೋ. ..? ಅಥವಾ ಇದರಾಚೆಗೂ ಪ್ರಪಂಚ ಸಖತ್ ದೊಡ್ಡುದಿದೆ ಅಂತ ಬುದ್ಧಿ ಹೇಳಬೇಕೋ ..? ಗೊತ್ತಾಗಲ್ಲ.

ಕೆಲವರು ತಮ್ಮನ್ನ ತಾವು ಜೀವಂತವಾಗಿ ಇಟ್ಟುಕೊಳ್ಳೋದಕ್ಕೆ ಕಷ್ಟ ಪಟ್ಟು , ಕೊನೆಗೆ ಇಲ್ಲವಾಗ್ತಾರೆ. ನಮಗೆ ಎಲ್ಲಾ ಇದೆ. ಇಲ್ಲವಾಗುವ ಮುನ್ನ, ಬದುಕಬೇಕು. ಒಂದು ಹುಟ್ಟು; ಒಂದು ಜೀವನ; ಒಂದೇ ಸಾರಿ ಸಾವು;

Comments

  1. I have no words to express, I know the feeling of missing someone who is close to heart...

    Life just goes on , we have to live as it comes.. Have a great life...

    ReplyDelete
  2. en helbekantane gottagtilla....... comment madde sumniroku aagthilla.... speachless...nimagagiddanu anubhavisi horabanda anubhava....nimmadu bhavuka kutumba....ellavu olledagli aste...

    ReplyDelete

Post a Comment

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ. ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ. ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು. 'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು. ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ... 'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ ' ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು. ' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು. ' ಲ

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು. ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿ

ಇಬ್ಬರು ಪೋಕರಿ ಮಕ್ಕಳ ಜೊತೆಗೆ

ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್ ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು' ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು......  ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಬಾಧೆ. ' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? ' ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ. ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು ಕಟಾವು ಮಾಡುತ್ತಿದ್ದರು. 'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬ

ಎಮ್ಮೆ ಕಾನೂನು ; ಜಸ್ಟಿಸ್ ಡೀಲೈಡ್ ಈಸ್ ಜಸ್ಟಿಸ್ ಡಿನೈಡ್

'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ,  ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ,  ಸೊ ಅದನ್ನು  ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ.  ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ.  ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು,  ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ,  ಗಾಡಿ ಓಡಿಸಬೇಕು.  ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ,  ಬೈಕು ನಿಲ್ಲಿಸಬೇಕು.  ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್  ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ,  ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ. ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ, ‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್ ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು. ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ ಹಾಕಿಸಿಕೊಂಡವರಿರಬಹುದು ಎಂದು

ತೀರದ ಹುಡುಕಾಟ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. 'ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.' ​ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ... ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು. ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲ

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)  ' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ' ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.  ಬಹುಷಃ ಹಳೇ ಸಿನಿಮಾಗ

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!! ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ. ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. 'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ. ' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. 'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು. 'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ. ಇಬ್ಬರೂ ಎದ್ದು ಹೊರಟರು. ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು ' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' . 'ಯಾಕೆ..? ನಾನೇನ್ ಮಾಡಿದೆ..?' ಎಂದ. 'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು, **ಪೋಷಾಕು** ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು. ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ. ನನ್ನನ್ನು ನೋಡುತ್ತಿದ್ದಂತೆ ಅಮ

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು. ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು. ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು. ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ, ಇವರನ್ನು ಒಂದೇ ಮನೆಯ ಅಣ್ಣ ತ