Monday, January 20, 2014

ಅತಿ ವೇಗ, ತಿಥಿ ಬೇಗ
ಗೋಪಿ ಸರ್ಕಲ್ ನಲ್ಲಿರೋ ಪಂಚತಾರ ಐಸ್ ಕ್ರೀಮ್ ಪಾರ್ಲರ್ ಮುಂದೆ ನಿಂತಾಗ, ಗಡ್ ಬಡ್ ತಿನ್ನುವಾಸೆಯಾಗಿ ಗೆಳೆಯ ಕಾರ್ತಿಕನಿಗೆ ಫೋನಾಯಿಸಿದೆ. ' ಯಾವಾಗ್ ಬಂದೆ. ? ಎಲ್ಲಿದಿಯಾ. ? ' ಮುಂತಾದ ಪ್ರಶ್ನೆಗಳ ನಂತರ, ಹತ್ತು ನಿಮಿಷದಲ್ಲಿ ತಾನೂ ಕೂಡಿಕೊಳ್ಳುವುದಾಗಿ ಹೇಳಿದ. 

ಬೈಕಲ್ಲಿ ಬಂದವನು, ಹೆಲ್ಮೆಟ್ ತೆಗೆದು ಕೈಲಿ ಹಿಡಿದು ನಿಂತ. ' ಶಿವಮೊಗ್ಗ ದಲ್ಲಿ ಯಾವಾಗ್ಲೋ. ಹೆಲ್ಮೆಟ್ ಕಡ್ಡಾಯ ಮಾಡಿದ್ದು. ' ಅಂತ ಕೇಳಿದ್ದಕ್ಕೆ ' ಬೈಕ್ ನಿಂದ ಬಿದ್ದ ಮೇಲೆ. , ನಾನೇ ಕಡ್ಡಾಯ ಮಾಡಿಕೊಂಡಿದ್ದೇನೆ. ' ಅಂದ. 


ಪಂಚತಾರದ ಒಳಗೆ ಹೋಗುವಾಗ, ಎದಿರು ಬಂದ ಸಾಕಷ್ಟು ಕಪಲ್ ಗಳನ್ನು ಕಂಡು, ' ಐಸ್ ಕ್ರೀಮ್ ತಿನ್ನೋದಕ್ಕೆ ಹುಡ್ಗೀರನ್ನ ಕರೀಬೇಕು ಕಣ್ಲಾ. ಹುಡ್ಗೂರನ್ನಲ್ಲ ' ಅಂದ. 

' ಅಂದರೆ ಐಸ್-ಕ್ರೀಮ್ ತಿನ್ನೋದನ್ನ ಬಿಟ್ಟು ಬಿಡು, ಅಂತ ಹೇಳ್ತಿದ್ದೀಯ. ' ಅಂದರೆ ಮೊದಲು ಕನ್-ಫ್ಯೂಸ್ ಆಗಿ ನಂತರ ಅರ್ಥವಾದವನಂತೆ ನಕ್ಕ. 

ತಿನ್ನುವ ಪದಾರ್ಥದ ಬಗ್ಗೆ ಮೊದಲೇ ಕ್ಲಾರಿಟಿ ಇದ್ದಿದ್ದರಿಂದ, ಮೆನು ನೋಡಿ ಗೊಂದಲಗೊಳ್ಳುವ ಸಾಹಸ ಮಾಡಲಿಲ್ಲ. ಕಾರ್ತಿಕನೂ ಗಡ್-ಬಡ್ ಗೆ ಸೈ ಅಂದ. ವೆನಿಲಾ, ಸ್ಟ್ರಾಬೆರಿ ತಿಂದು ಮುಗಿಸಿ ಅಡಿಯಲ್ಲಿರುವ ಜೆಲ್ಲಿ ಮತ್ತು ಕೊಳೆತ ಅನಾನಸ್ ಹಣ್ಣುಗಳಿಗೆ ಚಮಚೆ ದೂಕುವ ಹೊತ್ತಿಗೆ, ನಮ್ಮ ಮಾತುಕಥೆ ತೀವ್ರವಾದ ವೈಯಕ್ತಿಕ ಪರಿಮಿತಿಯನ್ನು ದಾಟಿ, ಪ್ರೊಫೆಷನ್ ಮತ್ತು ದೇಶೀಯ ಸಮಸ್ಯೆಗಳ ಕಡೆಗೆ ತಿರುಗಿತ್ತು. 

'ನಿದಿಗೆ ಹಳ್ಳಿ ಹತ್ರ ಧರ್ಮಸ್ಥಳ KSRTC ಬಸ್ಸು ಡಿವೈಡರ್ ಗೆ ಆನಿಸಿಕೊಂಡು ನಿಂತಿತ್ತು. ಯಾವುದೋ ಟಿ ವಿ ಸ್ ಎಕ್ಸೆಲ್ ಗೆ ಗುದ್ದಿತ್ತಂತೆ. ಸ್ಪಾಟ್ ಔಟು ಅಂತಿದ್ರು ಜನ ಏನಾಗಿತ್ತು. ? ' ಎಂದು, ಬರುವಾಗ ದಾರಿಯಲ್ಲಿ ಕಂಡಿದ್ದ ಬಸ್ಸಿನ ಕುರಿತಾಗಿ ಕೇಳಿದ್ದಕ್ಕೆ 

' ನನ್ನ ಡ್ಯೂಟಿ ಹವರ್ಸ್ ನಲ್ಲಿ. ಅಂತ ಕೇಸ್ ಯಾವುದೂ ಬರ್ಲಿಲ್ಲ. ' ಅಂದ ಸಹಜವಾಗಿ. ಕಾರ್ತಿಕ ದೊಡ್ಡಾಸ್ಪತ್ರೆಯಲ್ಲಿ ಕ್ಯಾಷುಯಲಿಟಿ ಮೆಡಿಕಲ್ ಆಫೀಸರ್(CMO). ದೊಡ್ಡಾಸ್ಪತ್ರೆ ಅಂದರೆ, ' ಶಿವಮೊಗ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ '. ಗಾತ್ರ ಮತ್ತು ಗುಣವಿಶೇಷಣಗಳ ಸಲುವಾಗಿ ಸ್ಥಳೀಯ ಗ್ರಾಮಸ್ಥರುಗಳಿಂದ ಈ ರೀತಿಯಾದ ಅನ್ವರ್ಥ ನಾಮವನ್ನು ಪಡೆದಿದೆ. ಅವನು ಹೇಳಿದ ಮಟ್ಟಿಗೆ CMO ಗಳು ಅಂದ್ರೆ, ಸುತ್ತ-ಮುತ್ತ ಎಲ್ಲೇ ಅಪಘಾತಗಳು, ಹೊಡೆದಾಟಗಳು ನಡೆದು ಆಡ್ಮಿಟ್ ಆಗುವ ಪೇಷೆಂಟುಗಳಿಗೆ ಮೊದಲ ಸ್ಪರ್ಷ ಕೊಡುವ ಪುಣ್ಯ ಕರ್ಮಿಗಳು. ಜೀವ ಇನ್ನು ಹೋಗಿಲ್ಲ ಅಂದ್ರೆ, ಪ್ರಾಥಮಿಕ ಶುಶ್ರೂಷೆ ನಡೆಸಿ ಸಂಬಂಧಪಟ್ಟ ಸ್ಪೆಷಲೈಜಡ್ ಡಾಕ್ಟರುಗಳಿಗೆ ಬಾಡಿಯನ್ನು ರವಾನಿಸಿ, ವರದಿಯನ್ನು ಪೋಲೀಸರಿಗೆ ಕೊಡುವುದು; ಜೀವ ಹೋಗಿದ್ರೆ, ದೇಹದ ಮೇಲಾಗಿರುವ ಅಡ್ಡ ಪರಿಣಾಮಗಳನ್ನು ಅಭ್ಯಸಿಸಿ, ಸಾವಿನ ಕಾರಣವನ್ನು ಬರೆಯುವುದು. 

---

ಶಿವಮೊಗ್ಗ ಮತ್ತು ಭದ್ರಾವತಿ ನಡುವೆ, ಸುಮಾರು 18-20 ಕಿಲೋಮೀಟರ್ ಉದ್ದದ ಚತುಷ್ಪತ ರಸ್ತೆಯನ್ನು ನಿರ್ಮಿಸಿರುವುದಾಗಿಯೂ; ತೀರ ಇತ್ತೀಚೆಗೆ, ಅಂದರೆ ಮೂರು ನಾಲ್ಕು ತಿಂಗಳುಗಳಿಂದ ಈಚೆಗೆ ಈ ಚತುಷ್ಪತ ರಸ್ತೆಯ ಉತ್ಖನನ ಕೆಲಸ ನಡೆದಿರುವುದಾಗಿಯೂ; ನುಣ್ಣನೆಯ ಡಾಂಬರಿನಿಂದಾಗಿ, ರಸ್ತೆಯ ಮೇಲೆ ವಾಹನಗಳು ಓಡುವ ಬದಲಾಗಿ, ಹಾರುವ ಹಂತಕ್ಕೆ ಚಲಿಸುತ್ತಿರುವುದರಿಂದ ವಾರಕ್ಕೆ ಮೂರು-ನಾಲ್ಕು ಹೆಣ ಬೀಳುತ್ತಿರುವವು. ಈ ವಿಷಯವೇ ನಮ್ಮ ಸಧ್ಯದ ಮಾತುಕಥೆಯ ಹಿನ್ನಲೆ. 

ರಜಕ್ಕೆ ಅಂತ ಊರಿಗೆ ಬಂದಾಗಲೆಲ್ಲಾ, ಬರಿ ಆಕ್ಸಿಡೆಂಟುಗಳನ್ನೇ ನೋಡುತ್ತಿದ್ದೇನೆ. ಹಿಂದಿನ ಬಾರಿ ಊರಿಗೆ ಬಂದಾಗ, ಇನ್ನೂ ಊರ ಕಡೆಗೆ ಟಾಕ್ಸಿನಲ್ಲಿ ಬರೋವಾಗಲೇ, ಒಂದು ಆಕ್ಸಿಡೆಂಟ್ ನೋಡಿದ್ದೆ. ಟಾಕ್ಸಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಅದಕ್ಕಿಂತ ಹಿಂದಿನ ಬಾರಿ, ನಮ್ಮೂರಿನವನೊಬ್ಬರು ಅದೇ ಜಾಗದಲ್ಲಿ ಬಿದ್ದು ಸತ್ತಿದ್ದನ್ನೇ, ನೆನಪು ಮಾಡಿಕೊಳ್ಳುತ್ತಾ, ಹೆದರುತ್ತಾ ಬರ್ತಾ ಇದ್ದೆ. ನನ್ನ ಕರ್ಮಕ್ಕೆ ಅದೇ ಜಾಗದಲ್ಲಿ ಒಂದು ಬಾಡಿ ರಸ್ತೆ ಮಧ್ಯದಲ್ಲಿ ಬಿದ್ದಿದೆ. ಜನ ಸೇರಿದ್ದಾರೆ. ಹೆದರಿ ' ನಮ್ಮನೆಯವರಾಗದಿದ್ದರೆ ಸಾಕು ' ' ನಮ್ಮ ಕುಟುಂಬದವರು ಆಗದಿದ್ದರೆ ಸಾಕು' ಕಡೆಗೆ  ' ನಮ್ಮ ಊರಿನವರು. ಗೊತ್ತಿರೋರು ಯಾರೂ. ಆಗದಿದ್ದರೆ ಸಾಕು' ಅಂತ ಧ್ಯಾನಿಸುತ್ತಾ ಆ ಬಾಡಿಯನ್ನು ನೋಡಿದ್ದೆ. ಟ್ಯಾಕ್ಸಿ ಡೈವರನಂತೂ. ನಿಟ್ಟುಸಿರು ಬಿಡುತ್ತಾ. ' ಈ ವಾರದಲ್ಲಿ ಐದನೆ ಹೆಣ ' ಅಂದ. '

 ಯಾಕ್ ಸಾರ್ ಈ ರೀತಿ ಸಾಯ್ತಾ ಇದಾರೆ ಈ ರೋಡಲ್ಲಿ ' ಅಂತ ಟಾಕ್ಸಿಯವನನ್ನು ಕೇಳಿದ್ದಕ್ಕೆ. ' ರೋಡ್ ಏನೋ. ನುಣ್ಣಗೆ ಮಾಡಿಬಿಟ್ಟರು. ಆದರೆ ಇನ್ನ ಪೇಂಟ್ ಹೊಡೆದಿಲ್ಲ, ಸಾರ್. ಡಿವೈಡರ್ ಗೆ ಪೇಂಟ್ ಹೊಡೆದಿಲ್ಲ. ರಸ್ತೆ ಮಧ್ಯದಲ್ಲಿರೋ ಲೇನ್ ಸಪರೇಷನ್ ಲೈನ್ ಗೆ ಪೇಂಟ್ ಮಾಡಿಲ್ಲ. ನೋಡಿ ಹೋಗೋ ಗಾಡಿಗಳು, ಎಲ್ಲಾದ್ರೂ ಯಾವ ಲೇನ್ ನಲ್ಲಿ ಹೋಗ್ತಾ ಇದಾವೆ ಅಂತ ಕಾಣ್ಸತ್ತಾ ನಿಮಗೆ. ' ಎನ್ನುತ್ತಾ ಕತ್ತಲಲ್ಲಿ ಡಿಮ್-ಅಂಡ್ ಡಿಪ್ ಮಾಡಿ ತೋರಿಸಿದ. 

'ಊರಗಲ ರೋಡಲ್ಲಿ ಎಲ್ಲಿದೀವಿ ಅನ್ನೋದೂ ಗೊತ್ತಾಗದೇ ಸ್ಪೀಡಾಗಿ ಹೋದ್ರೆ ಹಿಂಗಾಗುತ್ತೆ. ' ಅಂದ. 'ರಸ್ತೆ ಮಾಡಿದ ತತ್ತಕ್ಷಣ ಅದಕ್ಕೆ ಸಂಬಂಧಪಟ್ಟ ಲೇನ್ ಮಾರ್ಕಿಂಗ್ ಗಳನ್ನು ಮಾಡಬೇಕಾಗಿಯೂ, ಇಲ್ಲವಾದಲ್ಲಿ ಈ ಗ್ಯಾಪಲ್ಲೇ ಸುಮಾರು ಹೆಣ ಬೀಳುವುದಾಗಿಯೂ. ' ಅವನ ಅಂಬೋಣ. ಒಟ್ಟಾರೆಯಾಗಿ ಈ ಅಪಘಾತಗಳಲ್ಲಿ ಹಸುನೀಗುತ್ತಿರುವವರು, ಹೈವೆಗೆ ಅಂಟಿಕೊಂಡಂತಿರುವ ಹಳ್ಳಿಗಳ ದ್ವಿಚಕ್ರ ವಾಹನ ಸವಾರರು ಮತ್ತು ರಸ್ತೆ ದಾಟುವ ಪಾದಚಾರಿಗಳು. ಅದರಲ್ಲೂ ಹೆಚ್ಚಾಗಿ, ಹೈವೇಯಿಂದ ತಮ್-ತಮ್ಮ ಹಳ್ಳಿಯ ಕಡೆಗೆ ತಿರುಗುವ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳಾಗುತ್ತಿವೆ. 

ಈಗ ರಸ್ತೆಗೆ ಪೇಂಟ್ ಬಳಿದು, ಅಪಘಾತ ಸಂಭವಿಸುವ ಹಾಟ್-ಸ್ಪಾಟ್ ಗಳ ಬಳಿ ಹೊಸದಾಗಿ ಸ್ಪೀಡ್ ಬ್ರೇಕರ್ ಗಳನ್ನು ಹಾಕಿರುವರು. ಅಪಘಾತದ ರೇಷಿಯೋ, ಸ್ವಲ್ಪ ಕಡಿಮೆ ಆಗಿದೆಯಶ್ಟೇ ಹೊರತು ನಿಂತಿಲ್ಲ. ಇಲ್ಲಿ ತಪ್ಪು, ಅತಿ-ಅತಿಯಾದ ವೇಗವಾಗಿ ಸಾಗುವ ದೊಡ್ಡ ವಾಹನ ಚಾಲಕರುಗಳದ್ದೋ ಅಥವಾ ಸುಂದರವಾಗಿ ರಸ್ತೆ ನಿರ್ಮಿಸಲಾಗಿರುವ ಸರಕಾರದ್ದೋ ಅಥವಾ ಹೈವೆ ಕಾನ್ಷಿಯಸ್ ಇಲ್ಲದೇ, ಬಂದು ದಪ್ಪು-ದಪ್ಪು ಅಂತ ಬಿದ್ದು ಸಾಯುತ್ತಿರುವ ಮುಗ್ದ ಹಳ್ಳಿ ಜನಗಳದ್ದೋ. ? ತಿಳಿಯದಾಗಿದೆ. 

ಇಂತಹ ಹೈವೇ ಗಳನ್ನು ನಿರ್ಮಿಸುವಾಗ, ಅದಕ್ಕೆ ಹೊಂದಿಕೊಂಡಂತಿರುವ ಹಳ್ಳಿಗಳಿಗೆ. ಸೂಕ್ತವಾದ ಸರ್ವೀಸ್ ರಸ್ತೆಗಳನ್ನೋ ಅಥವಾ ಅಂಡರ್ ಪಾಸ್ ಗಳನ್ನೋ ಅಥವಾ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ತಡೆ ಗೋಡೆಗಳನ್ನು ನಿರ್ಮಿಸಿ ಒಂದೊಂದು ಹಳ್ಳಿಯೂ ಕೇವಲ ಒಂದು ಕಡೆ ಹೈವೆಗೆ ಕೂಡಿಕೊಳ್ಳುವಂತಾಗಬೇಕು. ಅಂತಹಾ ಸ್ಥಳಗಳಲ್ಲಿ ಮಾತ್ರ ದೊಡ್ಡ ವಾಹನ ಚಾಲಕರು ಸ್ವಲ್ಪ ವೇಗ ತಗ್ಗಿಸಿಕೊಂಡು ಹುಷಾರಾಗಬಹುದು. 

ಆದರೂ ಇದಕ್ಕೆ ತಾತ್ಕಾಲಿಕವಾಗಿ ಇರುವ ಸಲ್ಯೂಷನ್ ಅಂದರೆ, ಹೈವೆಗೆ ಸೇರಿಕೊಳ್ಳುವಾಗ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರವಾಗಿರೋದು. ಅದಕ್ಕೂ ಮೀರಿ ಏನಾದರೂ ಆದರೆ ಅದು ದೈವೇಚ್ಛೆ. 

---

ಈ ವಿಷಯವಾಗಿ ವೈದ್ಯ ಮಿತ್ರ ಕಾರ್ತಿಕನಿಂದ ಬರುವ ಏಕೈಕ ಮಾತು ಅಂದರೆ:

> ಹೆಲ್ಮೆಟ್ ಹೆಲ್ಮೆಟ್ ಮತ್ತು ಹೆಲ್ಮೆಟ್ 

ರಸ್ತೆ ಅಪಘಾತಗಳಲ್ಲಿ ಸಾಯುವ, ಪೇಷೆಂಟುಗಳ ವರದಿಯನ್ನು ದಿನವೂ ಬರೆಯುವ ಕಾರ್ತಿಕ ಹೇಳುವುದಿಷ್ಟೇ.

> ' ದೇಹದ ಮೇಲೆ, ತರಚಿದ ಗಾಯಗಳ ಹೋರತಾಗಿ ಏನೆಂದರೆ ಏನೂ ಆಗಿರಲ್ಲ. ಆದರೆ ಜೀವ ಹೋಗಿರತ್ತೆ. ಕಣ್ಣು ಮುಚ್ಚಿಕೊಂಡು ರಿಪೋರ್ಟ್ ಬರೆಯಬಹುದು.  `ತಲೆಗೆ ಪೆಟ್ಟು ಬಿದ್ದಿದೆ. ಮಿದುಳಿನಲ್ಲಿ ರಕ್ತಸ್ರಾವ ಆಗಿದೆ. ಮತ್ತು ಜೀವ >ಹೋಗಿದೆ.` ಹೆಲ್ಮೆಟ್ ಹಾಕಿದ್ದಲ್ಲಿ, ಅಡ್ಮಿಟ್ ಕೂಡ ಮಾಡಿಕೊಳ್ಳದ ಹಾಗೆ, ಟ್ರೀಟ್ ಮಾಡಿ ಮನೆಗೆ ಕಳಿಸಬಹುದು. ಕೈ ಕಚಿ ಪಿಚಿ ಆಗಿದ್ರೆ ಕತ್ತರಿಸಿ ಬಿಸಾಕಬಹುದು. ಕಾಲು ಮುರಿದಿದ್ರೂ, ನಡಿ ಅತ್ಲಾಗೆ ಅಂತ ಮುರಿದು ಎಸೆಯಬಹುದು. ಏನೇ >ಆಗಿದ್ರೂ ಮಾಂಸನೆಲ್ಲ ಒಳಗೆ ಹಾಕಿ, ಹೊಲಿದು ಜೀವ ಉಳಿಸಿಕೊಳ್ಳುವತ್ತ ಹೋರಾಡಬಹುದು. ಆದರೆ, ಟು ವೀಲರ್-ದು ಒಂದು ದೊಡ್ಡ ದುರಂತ ಅಂದ್ರೆ, ಹೆಂಗೇ ಬಿದ್ದರೂ ಸರಿ, ತಲೆ ಹೋಗಿ ನೆಲಕ್ಕೋ, ಡಿವೈಡರ್ ಗೋ, ಅಥವಾ ಎದುರಿನ >ವಾಹನಕ್ಕೋ ಹೊಡೆದಿರತ್ತೆ. ಜೀವ ಹೋಗಿರತ್ತೆ. 

ಟು ವೀಲರ್ ಅಂದ್ರೆ ಅದು ಶವದ ವಾಹನ. ಹತ್ತಿದ ಮೇಲೆ ಇಳಿಯುವ ವರೆಗೂ ನೂರಾರು ಅನ್-ಸರ್ಟನಿಟಿಗಳ ಮಧ್ಯೆ ಅದು ತಿರುಗುತ್ತಿರುತ್ತದೆ. ಮೊದಲು 'ಟು-ವೀಲರ್ ಓಡಿಸುವವನು. ತಪ್ಪು ಮಾಡಬಾರದು. ' ಎರಡನೆಯದು ' ಬೇರೆ ಯಾರದ್ದೋ ತಪ್ಪಿಗೆ ತಾನು ಬಲಿಯಾಗದಂತೆ ಎಚ್ಚರವಹಿಸಿಕೊಂಡು ಇರಬೇಕು. ' ಎಲ್ಲಕ್ಕಿಂತ ಹೆಚ್ಚಾಗಿ ಹೆಲ್ಮೆಟ್ ಧರಿಸಬೇಕು. ' 

ಇವು ಅಧಿಕೃತವಾಗಿ ಶಂಖದಿಂದಲೇ ಬಂದ ತೀರ್ಥ. ನೋಡ್ರಪ್ಪ ಏನ್ ಮಾಡ್ತೀರ ..?

Tuesday, January 7, 2014

ಒಲವಿಗೆ ರೂಪದರ್ಶಿ, ನೋವಿಗೆ ರಾಯಭಾರಿ

ನಾನು ಭಾವಜೀವಿ; ಬರೆಯುವವನು; ನೀನು ನನ್ನ ಅಂತಃಸತ್ವ. ಚೇತನವೂ ಹೌದು; ಚೆಲುವೂ ಹೌದು.
ನೀನು ತುಂಬಾ ದೂರ ಇದ್ದೆ. ಬಹಳ ದೂರ. ಅಲ್ಲಿ ನಿನ್ನ ಪಾಡಿಗೆ ನಿನ್ನಯ ಸಹಜೀವನ ನಡೀತಲಿತ್ತು. ಇಲ್ಲಿ ನನ್ನ ಪಾಡಿಗೆ ನನ್ನದ್ದು!!

ಆದರೆ ಎಲ್ಲೋ ಇದ್ದ ನೀನು, ನನಗೆ ಸ್ಪೂರ್ತಿ. ನನ್ನ ಬಹಳಷ್ಟು ಖುಷಿಯ ಕಾರಣಗಳು ನಿನ್ನ ಆ ಅಸ್ತಿತ್ವದ ನೆಲೆಯಲಿದ್ದುವು. ಅಂದರೆ!! ನೀನು ಅನ್ನೋಳೊಬ್ಬಳು ಇರುವುದೇ ನನ್ನ ಖುಷಿಯಾಗಿ ಮತ್ತು ನನ್ನ ಖುಷಿಗಾಗಿ.

ನನ್ನ ಅಸ್ತಿತ್ವದ ಕೊಂಚ ಸುಳಿವು ಕೂಡ ನಿನಗಿಲ್ಲ. ಅಂದರೆ ನನ್ನಂಥವನೊಬ್ಬನಿರುವ ಸಾಧ್ಯತೆಗಳು ನಿನ್ನ ಪಾಲಿಗೆ ಅಸಾಧುವಾದ ವಿಷಯ. ವಾಸ್ತವದಲ್ಲಿ ನೀ ಹೆಂಗಿರುವೆಯೋ ನನಗೂ ತಿಳಿಯದು. ನನಗೆ ಬೇಕಾದಂತೆ; ನಾ ಅಂದುಕೊಂಡಂತೆ; ನನ್ನೆಲ್ಲಾ ನಿರ್ವಿಕಾರ ಭಾವಗಳಿಗೆ ಜೀವದಂತೆ; ನನ್ನಲ್ಲೇ ಜನ್ಮತಾಳಿ; ಬೆಳೆದು;

ಇಂಥ ಹುಚ್ಚುತನವೊಂದು ತಲೆ ಏರಿ ಕುಳಿತಿದ್ದಾಗಲೂ, ಯಾವುವೂ ಅಸಹಜ ಅಂತನಿಸಲಿಲ್ಲ. ಇಷ್ಟ ಪಟ್ಟು ಕಟ್ಟಿಕೊಂಡಿದ್ದ ಕನವರಿಕೆಗಳನ್ನು ಪೋಷಿಸಿದೆ.

ಕಲ್ಪನೆಯ ರಾಜಕುಮಾರಿ ಒಮ್ಮೆ ಕಂಡಳು. ಒಂದು ವಿಸ್ಮಯದ ರೀತಿಯಲ್ಲಿ!!  ಭಾವ ಪ್ರಪಂಚದ ಸಾರಥಿಯಂತೆ;
ನನ್ನ ‘ರಾಜಕುಮಾರಿ’; ನನ್ನ ಅಂತಃಸತ್ವವೇ ಉಸಿರಿಗೆ ದೇಹವನ್ನು ಸುತ್ತಿಕೊಂಡು ಇಳೆಗೆ ಧಾವಿಸಿರುವ ಹಾಗೆ...
ನನ್ನೊಳಗಿದ್ದ ದೇವತೆ; ಸ್ಪೂರ್ಥಿ; ಬದುಕಿನ ಆಸೆ ಮತ್ತು ಆಶಯ; ಎಂಬುದಾಗಿ ಹಲವು ಮುದ್ದಿನ ಅಪವಾದಗಳು.

ನನ್ನ ದಿನಗಳು ರಂಗು ರಂಗಾದವು.
ಕಣ್ಣ ಮುಂದಿದ್ದ ನಿನ್ನದು, ಕಲ್ಪನೆಯಲ್ಲಿದ್ದ ರಾಜಕುಮಾರಿಗಿಂತಲೂ ಹೆಚ್ಚು ಆಕರ್ಷಣೆ; ಹೆಚ್ಚು ಸೆಳೆತ; ಅಷ್ಟೇ ತವಕ. ಹೆಣ್ಣು ಜೀವವೇ ಅಂಥದ್ದಿರಬೇಕು. ಅದರ ಪರಿಧಿಯೊಳಗೆ ಇಳಿದರೆ, ಸೆಳೆತವು ನೂರುಮಡಿ ಹೆಚ್ಚು.
ತುಂಬಾನೆ ಕಾಡುತ್ತಿದ್ದೆ. ಇಂಥಹಾ ತಳಮಳಗಳನ್ನು ನಿನಗಲ್ಲ, ಯಾರಿಗೂ ಹೇಳುವುದು ಅಷ್ಟು ಸುಲಭವಲ್ಲ. ಬಟಾ ಬಯಲಲ್ಲಿ ಬಲೆಯಲ್ಲಿ ಸಿಕ್ಕಿ ಕೊಂಡಿರುವಂತೆ; ಮಾಡದ ತಪ್ಪಿಗೆ ಒದೆ ತಿಂತಿರುವಂತೆ.

ನನ್ನ ಎಲ್ಲವೂ ಆಗಿದ್ದವಳು, ಏನೇನೂ ಅಲ್ಲದಂತೆ ನಿಂತೆ;
ಏನೂ ಅಲ್ಲವೆನ್ನುತ್ತಲೇ ಶುಷ್ಕ ಮನದ ಎಲ್ಲೆ ಮೀರಿ ಪಸರಿಸಿದೆ;
ಸಾಗರದೊಳಗಿನ-ಹನಿವೋ ಹನಿವೊಳಗಿನ-ಸಾಗರವೋ;
ಚುಕ್ಕಿಯೊಳಗಣ-ಲೋಕವೋ ಲೋಕದೊಳಗಿನ-ಚುಕ್ಕಿಯೋ;
ನನ್ನ ಆಲೋಚನೆಗಳೆಲ್ಲೆಲ್ಲಾ ನೀನೋ… ಅಥವಾ ಸದಾ ನಿನ್ನ ಆಲೋಚನೆಯಲ್ಲಿ ನಾನೋ;
ನೀ ಹೂಗುಟ್ಟುವ ಹುಡುಕಾಟದಲ್ಲಿ ನಾ ಸವೆದು ಹೋಗಿದ್ದರ ಸುಳಿವು ನನಗೇ ಸಿಗಲಿಲ್ಲ.
ಯಾರಿವನು..? ಅನ್ನುವ ವಿಚಿತ್ರ ಕುತೂಹಲ ನಿನಗೆ. ಒಬ್ಬರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ಜೀವಮಾನವೇ ಸಾಲುವುದಿಲ್ಲದಿರುವಾಗ; ನಾ ಯಾರಂತ ಪರಿಚಯಿಸಿಕೊಳ್ಳಲಿ.
ನಿನಗೆ ಪರಿಚಿತನೇ;
ಬಹಳ ಹತ್ತಿರದಿಂದ ಬಲ್ಲವನೆ;

ಭಿನ್ನವಾಗಿತ್ತು ವಾಸ್ತವ!!

ಕಣ್ಣ ಮೇಲಿದ್ದ ಪ್ರೀತಿ-ಪ್ರೇಮಗಳ ನಶೆಯ ಪೊರೆಯು ಮೆತ್ತಗೆ ಹರಿದು ಸರಿಯುತ್ತಾ ಹೋಯ್ತು.
ನಾನೇ ಕಟ್ಟಿಕೊಂಡಿದ್ದ ದಪ್ಪ ಕಲ್ಲಿನ ಕೋಟೆಯೇ ನನ್ನ ಸಮಾಧಿಯೆನಿಸುತ್ತಾ ಹೋಯ್ತು.
ಸುಮ್ಮನಾದೆನು. ಒಂಟಿಯಾದೆನು.
ಎದೆಯೊಳಗೆ ಗುಂಗಿ ಹುಳು ಗುಯ್ ಅಂತ ಅನ್ನುತ್ತಿರುವ ಸದ್ದು. ನೋವು!!


ದೊಡ್ಡ ಶೂನ್ಯ; ತುಂಬಾ ದೊಡ್ಡ ಮೌನ; ಬೆನ್ನು ಬಿಡಲಿಲ್ಲ ನಿನ್ನ ನೆರಳು. ನಿನ್ನ ಹೆಜ್ಜೆ ಗುರುತುಗಳು ಎದೆಯೊಳಗೆ ಇಳಿದವು. ಉಳಿದವು. ನಿನ್ನನು ಕಾಣದೇ ಇರಬಲ್ಲವನಾದರೂ; ಮರೆತವನು ಇರಲಾಗಲಿಲ್ಲ. ಮೊದಲು ಸತ್ತು ಸೋಲುತ್ತಾ ಹೋದೆ.
ದೇಹದ ರೋಮರೋಮಗಳಿಗೆ ಆ ಹೆಸರಿನ ಪರಿಚಯ ಇದೆ.
ನನ್ನ ಪ್ರಜ್ನೆಯ ಪ್ರತಿ ಅಂತಸ್ತುಗಳಲಿ ನಿನ್ನದೇ ಅಸ್ತಿತ್ವದ ವ್ಯಥೆ ಇದೆ.
ನನ್ನ ಪ್ರತಿ ಸೋಲಿಗೆ ಸಮರ್ಥನೆ ಕೊಡಲು ಬರುವ ಥರ್ಡ್ ಅಂಪೈರೂ ಹೌದು;
ಗೆಲ್ಲಬೇಕೆನಿಸಲು ಇರುವ ತಿಳುವಳಿಕೆಯಿಲ್ಲದ ಕಾರಣವೂ ಹೌದು;
ಬೆಳಗಿನ ಪಿಸುರುಗಟ್ಟಿದ ಕಣ್ಣಿನ ಮೊದಲ ದೃಶ್ಯವೂ ಹೌದು;
ನನ್ನ ಒಲವಿಗೆ ರೂಪದರ್ಶಿ, ನೋವಿಗೆ ರಾಯಭಾರಿ;
ನನ್ನ ಪಾಲಿಗೆ ನೀನು ಎಲ್ಲವೂ ಹೌದು.
ಕಾಯ-ವಾಚ-ಮನಸ ಕನಸುಗಳು;
ಕುಳಿತು-ಕಾದು-ಬೇಸ್ತು ಬಿದ್ದ ನೆನಪುಗಳು.
ಉಳಿದು-ಬೆಳೆದು-ಬರಿದಾಗುತ್ತಿರುವ ಮಾನವಿಲ್ಲದ ಬತ್ತಲೆ ಭಾವಗಳು.
ನಾ ನೋಡಬೇಕು ಅಂತ ಬಯಸುವ ಕಟ್ಟ ಕಡೆಯ ಹೆಣ್ಣು ಹೌದೆಂದರೂ ಅದೆಲ್ಲಿ ಕಾಣಿಸಿಕೊಂಡು ಬಿಡುವೆಯೋ ಅನ್ನೋ ಭಯ; ನೋವು; ಕಾತುರ ಮತ್ತು ಸಂತಸ.

ನಮ್ಮ ನಮ್ಮ ಸಂಕಟಗಳಿಗೆ ಬೇರೆ ಯಾರನ್ನಾದರೂ ಅಪಾಧಿಸಿದರೆ, ಅವರ ತಿರಸ್ಕಾರದ ನೆಪದಲ್ಲಾದರೂ ನೆಮ್ಮದಿಯಿಂದ ಇರಬಹುದು. ನಮ್ಮ ಸಂಕಟಗಳಿಗೆ, ನಾವೇ ಕರ್ತೃಗಳಾದಾಗ ಯಾರನ್ನಂತ ಆಪಾಧಿಸುವುದು.
ಸ್ವಯಂಕೃತ-ಅಪರಾಧಗಳೇ ಹೀಗೆ!! ಧಾರುಣವಾಗಿರತ್ತವೆ.
ಏನನ್ನೂ ಅಪೇಕ್ಷಿಸದೆ ಯಾರನ್ನಾದರು ತುಂಬಾ ಹಚ್ಚಿಕೊಂಡರೆ ಮನ್ಸಿಗೆ ಆಹ್ಲಾದ ಅನ್ಸತ್ತೆ. ಪ್ರೀತಿ ಅನ್ನೋದೊಂದು ಬಹಳ ಒಳ್ಳೆಯ ಅನುಭವ. ನೀನಿಲ್ಲದೆ; ನಿನ್ನ ಹೆಸರಲ್ಲಿ  ನಾ ಕೇಳದೆ ಪಡೆದೆ.

Monday, January 6, 2014

ಕಾಮೆಂಟ್ ಕವಿಗಳು

ಕವಿತೆಗಳನ್ನು ಮೆಚ್ಚಿ, ಯಾರಾದ್ರು ಬರೆದಾಗ ತುಂಬಾ ಖುಷಿ ಆಗತ್ತೆ. ಆ ರೀತಿ ಉತ್ಸಾಹದಿಂದ
ಬರೆದವರನ್ನ, ಸರಿಯಾಗಿ aknowledge ಮಾಡಕ್ಕಾಗದೇ ಇದ್ರೂ ಕೂಡ, ಅವರುಗಳ ಸಾಲುಗಳು
ಮಾತ್ರ, ನನ್ನ ಖುಷಿಯ ಬುತ್ತಿಯ ತುತ್ತುಗಳಂತಿವೆ.

ಅರೆಘಳಿಗೆಯ ಮನೋಲ್ಲಾಸಕ್ಕೆ ಕಾರಣವಾದ ನನ್ನ ಪದ್ಯಗಳಿಗೂ ಮತ್ತು ಮೆಚ್ಚಿ ಭಾವನೆಗಳಿಗೆ
ಪ್ರತಿಯಾಗಿ ಸ್ಪಂದಿಸಿರುವ ಕಾಮೆಂಟ್ ಕವಿಗಳಿಗೂ ಇಬ್ರಿಗೂ ಥ್ಯಾಂಕ್ಯು. ಕೆಲವು ಕವಿತೆಗಳು
ಮತ್ತು ಕವಿತೆಯ ಭಾವಕ್ಕೆ ಕಾಮೆಂಟ್ ರೂಪದಲ್ಲಿ ಬಂದ ಗೆಳೆಯರ ಪ್ರತಿ ಭಾವಗಳನ್ನು ಇಲ್ಲಿ
ಹಾಕುತ್ತಿರುವೆ. Enjoy :)

### ಕನಸೂರ ದಾರಿಯಲಿ

ರೆಪ್ಪೆ ಕೂಡಿದ ಮೇಲೆ,
 ತೆರೆದುಕೊಳ್ಳುವ ಮಾಯಾನಗರಿ(ಕನಸು)
 ಮೈ ಕೊಡವಿ ಏಳುವ ಪಾತ್ರಗಳು
 ಸೂತ್ರ ಹರಿದು ಸಜ್ಜಾಗುವ
 ಎಲ್ಲೋ. ನೋಡಿದ ಮುಖಗಳು.

ಕನಸೂರ ದಾರಿಯಲಿ
 ಅಂತ್ಯಗಾಣದ ದೃಶ್ಯಗಳು.
 ಭ್ರಮೆಯ ಸೂರಿನಡಿಯಲ್ಲಿ
 ನನ್ನ ಕೂಡುವ ಜೀವಗಳು.

ಅಲ್ಲೊಂದು ಕಥೆ,
 ಕಥೆಯೊಳಗೊಂದು ಉಪಕಥೆ
 ಎಚ್ಚರವಾದಾಗಲೆಲ್ಲಾ ಅದಲು ಬದಲಾಗುವ ಪಾತ್ರಗಳು.

ಕನಸುಗಳ ಮೌನ ಮೆರವಣಿಗೆಯಲ್ಲಿ
 ಕಲ್ಪನೆಗಳದ್ದೆ ಕಾರು-ಬಾರು
 ಅಲ್ಲಿ ನಾನೇ ರಾಜ, ಅವಳೇ ರಾಣಿ,
 ನನ್ನ ಬಂಧು-ಮಿತ್ರರೆಲ್ಲಾ ಸೈನಿಕರು.

ಮೊದಮೊದಲು ನನ್ನ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ, ಗೆಳೆಯ ನಿರಂಜನ ಈ
ಕವಿತೆಗೆ ಪ್ರತಿಕ್ರಿಯಿಸಿದ್ದು ಹೀಗೆ.
`ಕನಸುಗಳ ಮೌನ ಮೆರವಣಿಗೆಯಲ್ಲಿ ಕಲ್ಪನೆಗಳದ್ದೆ ಕಾರು-ಬಾರು ಅಲ್ಲಿ ನಾನೇ ರಾಜ……. ಅಲ್ಲಿ ನೀ ಪ್ರಣಯರಾಜ, ಪ್ರೇಮಕವಿ. ಅವಳು ನಿನ್ನ ಪದಗುಚ್ಛಗಳಿಗೆ ಮನಸೂರೆಗೊಂಡವಳು. ನಾನು ನಿನ್ನ ಮಿತ್ರ, ನಿನ್ನ ಕನಸಿನ ಕೋಟೆಯ ಕಾವಲುಗಾರ. ನಿನ್ನ ಕನಸಿನ ಲೋಕದೊಳು ತೇಲಿ ಬರುವ ಕವನಗಳ ಹಿಡಿವ ಮೊದಲಿಗನಾಗಬೇಕೆಂಬ ನಿರೀಕ್ಷೆಯಲ್ಲಿರುವ ಸ್ವಾರ್ಥಿ ಸೈನಿಕ ನಾನು.`

* * * * *

**ಪ್ರೀತಿಯಲಿ ಸೋತವನು, ಸತ್ತವನು**

ಕಣ್ಮುಚ್ಚಿದರೆ ಮಾತ್ರ ಕಾಣುವ ಸೊಗಸು.
 ಕಲ್ಪನೆಯ ಹುಚ್ಚುಕುದುರೆಯ ಬೆನ್ನೇರಿ,
 ಕುಣಿಕುಣಿದು
 ನಡುರಾತ್ರಿಯಲೂ ಎದ್ದೆದ್ದು
 ಕೈ-ಚಿವುಟಿ ಬಿಕ್ಕಳಿಸಿ
 ಮುಂಜಾವಿನ ಕನಸಿಗೂ
 ವಾಸ್ತವದ ಪುಕ್ಕ ತೊಡಿಸಿ
 ಇರುಳಾಗುವ ತನಕ,
 ತನ್ನೆದೆಯ ಮಿಡಿತ ಎಣಿಸಿ.
 ಕಣ್ಣುಮುಚ್ಚಲೆಂದೇ ಕತ್ತಲೆಗಾಗಿ
 ಕಾಯುವ ಹುಂಬತನ
 ಸದಾ ಸೂತಕದ-ಹಡಗಲ್ಲಿ ಇವನ ಪಯಣ.

ಗೆಳೆಯ ರೂಪಿ ಇದಕ್ಕೆ ಹಾಕಿದ್ದ ಕಾಮೆಂಟು :
`ಸದಾ ಸೂತಕದ-ಹಡಗಲ್ಲಿ ಇವನ ಪಯಣ……. ಪಯಣಕ್ಕೆ ಹಡಗೇ ಇಲ್ಲ ಎಂಬುವುದು ನನ್ನ ಅಂಬೋಣ`

* * * * *

**ಇದು ಹೃದಯದ ಹೊತ್ತಿಗೆ, ಮುನ್ನುಡಿ ಬೇಕೆ. ?**

ಎಲ್ಲವನ್ನೂ ಹೇಳಿದ್ದೆ
 ಒಲವನ್ನು ಬಿಟ್ಟು
 ಹೂಗಳೆಲ್ಲವ ಹಾಸಿದ್ದೆ
 ರೋಜಾವೊಂದನ್ನು ಬಿಟ್ಟು.
 ಪ್ರೇಮಪತ್ರವೆಂದೆ, ಖಾಲಿ ಕಾಗದವ ಕೊಟ್ಟು.
 ಒಳಗಿನ ಮೌನಕೆ
 ಪದಗಳು ಬಾರದೆ ಹೋಯ್ತು.

ಬಿಚ್ಚಿ ಓದಲು ನಾಚಿ,
 ಹಿಂತಿರುಗಿ ಕೊಟ್ಟಳು.
 ತಪ್ಪೆನಿಸಿದರೂ ಅಪ್ಪಿ,
 ಮೆದು ಮುತ್ತಿಟ್ಟಳು.

ನಾನೇ ಪೆದ್ದು ಅಂದರೆ,
 ನನಗಿಂತಲು ಪೆದ್ದು ನನ್ನವಳು.
 ಸಂಭವಿಸಿದ ಒಲವಿಗೆ,
 ನಿವೇದನೆಯ ಪೀಠಿಕೆ. ?
 ಇದು ಹೄದಯದ ಹೊತ್ತಿಗೆ,
 ಮುನ್ನುಡಿ ಬೇಕೆ. ?

ಒಲವು ನಿವೇದನೆಯಾಗಲೇ ಇಲ್ಲ.
 ಒಲವಿನ ಹೊಸಚಿಲುಮೆ ನಿಲ್ಲಲೂ ಇಲ್ಲ.

ಈ ಕವಿತೆಗೆ ಗೆಳೆಯ ಶಶಿಕಿರಣನ ಕಿರಣಗಳು ಈ ರೀತಿಯದ್ದಾಗಿದ್ದವು.
`ಎಲ್ಲವನೂ ಹೇಳುವುದೇ ಪ್ರ್ರಿತಿ ಅಲ್ಲ; ಹೊತ್ತಿಗೆ ಬರೆಯುವುದೇ ದೊಡ್ಡಸ್ತಿಕೆ ಅಲ್ಲ; ಪ್ರೀತಿಯೇ ಆನಂದದ ನಿವೇದನೆ, ಅದಕ್ಯಾಕೆ ಬೇಕು. ಮುನ್ನುಡಿ ಎಂಬ ಆರಂಭ ಒಪ್ಪಿಗೆ ಓಲೈಕೆಯೆಂಬ ಕೊನೆ.`
:) ಬಹಳ ಚೆನ್ನಾಗಿದೆ ಲೊ. ನಿನ್ನ ಆ ಮಳೆಯ ಹುಡುಗೀನೆ ನೆನಪಾದಳು. ಕವಿತೆ ಓದಿ.

* * * * *

**ಸಾರ್ಥಕ ಸಾವು** ಸಿಡಿಲೂ ಬಡಿಯಲಿಲ್ಲ,
 ಕಾಳ್ಗಿಚ್ಚೂ ಹತ್ತಲಿಲ್ಲ,
 ಅಂಥಾ ವಯಸ್ಸೂ ಆಗಿರಲಿಲ್ಲ,
 ನಿಂತ ಮರ ನಿಂತಂತೆ ಒಣಗಿ ಬಿತ್ತು,
 ಯಾರೂ ಗಮನಿಸಲೇ ಇಲ್ಲ.

Actually ಈ ಹನಿ ಅಥವಾ ಮಿನಿಕವಿತೆಯನ್ನ ಒಂದು ಸಾರ್ಥಕ ಸಾವಿಗೆ, ಸಮಾನಾಂತರವಾಗಿ
ಬರೆದದ್ದು. ನಮ್ಮ ಮಧ್ಯೆ ಯಾರೋ. ಅದ್ಭುತವಾಗಿ ಜೀವಿಸುತ್ತಾ ಇರ್ತಾರೆ. ಎಲೆ ಮರೆ ಕಾಯಿ
ರೀತಿ ಅವರ ಸಾವಿಗೆ ಅಂಥಾ ಕಾರಣಗಳೇನೂ. ಇರಲ್ಲ ಬದುಕಿದ್ದವರು ಒಂದಿನ ಸಾಯಲೇ ಬೇಕು ಅನ್ನೋ
ಸಿಂಪಲ್ ಕಾರಣಕ್ಕೆ ಅವರ ದೇಹ ಒಂದಿನ ಕೆಲಸ ಮಾಡೋದು ನಿಲ್ಸತ್ತೆ ಈ ಥರದ್ದೊಂದು context
ನಲ್ಲಿ ಕವಿತೆ ಬರೆದದ್ದು. ಇದಕ್ಕೆ ರವಿ ಪ್ರತಿಕ್ರಿಯಿಸಿದ್ದು ಈ ರೀತಿ :
`ಪ್ರಾಬಬ್ಲಿ ನೀರು ಸರಿಯಾಗಿ ಹಾಕ್ತಿರ್ಲಿಲ್ಲ ಅಂತ ಅನ್ಸತ್ತೆ ಕಣ್ಲಾ. ಹಹಹಾ.`

* * * * *

ಜಾರುವ ಸೆರಗಿನ,
 ಲೆಕ್ಕ ತಪ್ಪಿದರೂ
 ಇಳಿಬಿದ್ದ ಮುಂಗುರುಳ,
 ಬಿಡಿಯಾಗಿ ಎಣಿಸಿದನು.

ರವಿಯ ಪ್ರತಿಕ್ರಿಯೆ: ಅದ್ಯಾವನ್ಲಾ ಅವನು ಗಮಾಡ್ ನನ್ಮಗ ಸೆರಗು ಜಾರೋವಾಗ್ಲು. ಕೂದ್ಲು.
ಏಣಿಸೋ ಅಂತವನು. ನನ್ನ ಎಲ್ಲಾ ಕವಿತೆಗಳನ್ನು ಓದಿ, ಸದಾ ಹಿಂಸಿಸುವ ಇವನ ಒಟ್ಟಾರೆ
ಪ್ರತಿಕ್ರಿಯೆ ಇದು.

ಲೆ ಕೆಸಿ, ನಿದ್ರೆ ಬರ್ತಿದೆ. ನಿನ್ ಕವನ ಓದಿ ಅಂತ ತಪ್ಪು ತಿಳ್ಕೋಬೇಡ ನಾನ್ ಅಷ್ಟು
ಡೈರೆಕ್ಟ್ ಆಗಿ ಹೇಳೋ ಮನ್ಷ ಅಲ್ಲ ಆಲ್ ಆರ್ ಗುಡ್ ಓನ್ಲಿ. ಛೇ not just good
excellent only…. , ಏನ್ ಮಾಡೋದು. ಆದ್ರೂ ನಿದ್ರೆ ಬರ್ತಿದೆ. ನಿನ್ನ ಕವನಗಳಿಂದ
ಅಲ್ಲ. ಮಲ್ಗೋ ಟೈಮ್ ಆಯ್ತು ಅದ್ರಿಂದ.

* * * * *

ಇಶ್ಟೆಲ್ಲಾ ಗೊತ್ತಿರೋರ ಮಧ್ಯೆ ಕೆಲವರು ಇದ್ದಾರೆ. ಅವರನ್ನ Anonymous ಅನ್ನೋ ಒಂದು
ಹೆಸರಿಂದ ಮಾತ್ರ ಗುರುತಿಸಬಲ್ಲೆ. ಆ ಕಾಮೆಂಟ್ ಗಳಂತೂ ಬಹಳಾನೆ ಖುಷಿ ಕೊಟ್ಟಿವೆ.

### ಹೇಳು ನೀನೆ ಹೇಳು.

ಏನ. ? ಬರೆಯಲಿ ಗೆಳತಿ,
 ಈಗ ನೀನೇ ಹೇಳು,
 ಮುದ್ದು ಮುಖದ ಮೇಲೊಂದು
 ಸಿಹಿನಗೆಯು ಮೂಡಲು

ನನ್ನ ನೆನಪು ನಿನಗೆ
 ಕವಿತೆ ಮುಗಿವರೆಗೆ
 ಮಿತಿಯ ನಾ ಅರಿವೆ.
 ಈ ಒಂದು ಕ್ಷಣ
 ನಿನ್ನ ಖುಷಿಗೆ ನಾ ಆಗಬೇಕು ಕಾರಣ.

ಏನ. ? ಬರೆಯಲಿ ಗೆಳತಿ,
 ನೀ. ನೇ. ಹೇಳು.
 ಮುದ್ದು ಮುಖದ ಮೇಲೊಂದು
 ಸಿಹಿನಗೆಯು ಮೂಡಲು
 ಹೇಗಿರಲಿ ಹೇಳು. ?
 ನಿನಗಾಗಿ ಬರೆವ
 ತುಂಡು ತುಂಡು ಸಾಲುಗಳು

ಓದಿಹೋದ ಮೇಲೂ
 ಕಾಡುವಂತ ಭಾವವಿರಲಾ. ?
 ಸುಮ್ಮನಿದ್ದಲೆಲ್ಲಾ
 ಗುನುಗುವಂತ ಪ್ರಾಸವಿರಲಾ. ?
 ಸುಳ್ಳು ಹೋಲಿಕೆಯಾದರು ಸರಿ
 ಸುಂದರ ಹೊಗಳಿಕೆ ಇರಲಾ…?
 ಈ ಒಂದು ಕ್ಷಣದಿ
 ನಿನ್ನ ಮೊಗದ ಮೂಡಣದಿ
 ನಗುವಿನ ಸೂರ್ಯ ಉದಯಿಸಲಿ.
 ಹೇಳು ಏನ. ? ಬರೆಯಲಿ.

Anonymous ಪ್ರತಿಸ್ಪಂದನೆ:
`ಕಾಡುವ ಭಾವದೊಂದಿಗೆ, ಗುನುಗುವ ಪ್ರಾಸವಿರಲಿ. ಸುಂದರ ಹೋಗಳಿಕೆಯೊಂದಿಕೆ, ನಿಜವು ಬೆರೆತಿರಲಿ. ಏನಿರಲಿ ಇರದಿರಲಿ, ನಿನ್ನ ಒಲವಿರಲಿ. ನಗುವಳು ಗೆಳತಿ, ಹೂವಂತೆ ಮುಖವರಳಿ`

* * * * *

### ಹುಡುಗಾಟದ ಒಲವು, ಸುಳ್ಳು

‘ಅರಿಯಲಿಲ್ಲ, ಬೆರೆಯಲಿಲ್ಲ,
 ಸುಳಿದು ನೋಟ ನೆರೆಯಲಿಲ್ಲ’ ,
 ಅಂದಮೇಲೆ,
 ನಾ ಬಯಸಿದ್ದು ಏಕಂತ?
 ಮಾತಿಗೆ ಮಾತಿಲ್ಲ,
 ಕಥೆಗೂ ಎಳೆಯಿಲ್ಲ,
 ತೊಟ್ಟಿಕ್ಕುವ ಮಾಡಿದು,
 ಬೇಕಂತ ಭೂಗತ, ಏಕಾಂತ

ಪೂರ್ಣವಿರಾಮದ ಚುಕ್ಕಿಯನ,
 ಒಂದರ ಮುಂದೊಂದು ಇಡುವೆ.
 ಚಂದವ ಮಾಡುತ, ಇಟ್ಟ ಚುಕ್ಕಿಯನ,
 ಮುಗಿದ ಕಥೆಯನ್ನೇ, ಎಳೆದಾಡುವೆ.

‘ಮರೆತು-ಗಿರಿತು’ ಅನ್ನೋ ಮಾತೆ, ಕಷ್ಟ ಕಣೆ.
 ಪೂಸಿ ಹೊಡಿಯಬೇಕಿದೆ, ಪೆದ್ದು ಮನಸನ್ನೆ.
 ನೀ ನಡೆದಾಡಿದ, ಈ ಲೋಕ ಸುಳ್ಳು.
 ನೀ ಇರೋದೆ, ನನ್ನ ಪಾಲಿನ ಸುಳ್ಳು.
 ನೀ ಕಳೆದು ಹೋದದ್ದು,
 ಅಯ್ಯೋ ನಗೆಪಾಟಲು ಸುಳ್ಳು.
 ನಾ ಹುಡುಕಾಡಿದ,
 ಹುಡುಗಾಟದ ಒಲವೇ ಸುಳ್ಳು.
 ಹೇಳು ಶುರು ಮಾಡಲಿ,
 ಎಲ್ಲಿಂದ.? ಎನ್ನ ಮನದೆನ್ನೆ.
 ಕಳೆದುಕೊಳ್ಳಬೇಕಿದೆ, ಸಣ್ಣ ನಂಬಿಕೆಯನ್ನೆ.

ಈ ಕವಿತೆಗೆ Anonymous ಪ್ರತಿಕ್ರಿಯಿಸಿದ ರೀತಿ. ಒಂದೊಂದು ಸಾಲಿಗೂ ಪಟ್-ಪಟ್ ಪಟಾರ್
ಏಟುಗಳು.

`ಅರಿಯುವ ಅಗತ್ಯ ಅಪನಂಬಿಕೆಗೆ,      ಬೆರೆಯುವ ಅನಿವಾರ್ಯ ಚಪಲತೆಗೆ,      ಕನ್ನೋಟ-ಕಳ್ಳಾಟವೆಲ್ಲಾ ಅಪ್ರಭುದ್ದತೆಗೆ      ಅಂದಮೇಲೆ,      ನೀ ಬಯಸಿದ್ದು ಲೌಕಿಕ ಕಾಮವನ್ನೋ;      ನಿರ್ಧರಿಸು ಅಲೌಕಿಕ ಪ್ರೇಮವನ್ನೊ      ಒಲವೇ ಸುಳ್ಳೆಂಬುದು ನಿಜವಾದರೆ,      ಎಳೆದಾಡದೆ ಮುಗಿಸಿಬಿಡು ಕಥೆಯನ್ನೆ      ಅಥವಾ      ಶುರುಮಾಡು ಮತ್ತೊಂಮ್ಮೆ ಮೊದಲಿನಿಂದಲೆ,      ಕಳೆದುಕೊಳ್ಳದೆ ಈ ಬಾರಿ ಆ ಸಣ್ಣ ನಂಬಿಕೆಯನ್ನೆ:-)`

* * * * *

### ಕೊನೆಹನಿ

ಪುನಃ ಬೇರೆ ಯಾರನ್ನೋ ಅಲ್ಲ,
 ನಿನ್ನ ಕೂಡ ಮತ್ತೆ ಅಷ್ಟು ಪ್ರೀತಿಸಲಾರೆ
 ಸಣ್ಣಗಾಗಿದ್ದು ಉದ್ಯಾನದ ಕಾರಂಜಿ ಅಲ್ಲ,
 ಸುಮ್ಮನಾಗಿದ್ದು ನನ್ನ ಸ್ಪೂರ್ಥಿಚೇತನ

Anonymous ಮಾತುಗಳು

`ಪುನಃ ಅವಳನ್ನೂ ಅಲ್ಲ,       ನಿನ್ನ ಕೂಡ ಮತ್ತೆ ಅಷ್ಟು  ಪ್ರೀತಿಸಬೇಡ         ಸುಮ್ಮನಾಗಿದ್ದು ನಿನ್ನ ಸ್ಪೂರ್ಥಿಚೇತನ ಅಲ್ಲ,       ಸಣ್ಣಗಾಗಿದ್ದು 'ನೀನು' ಚೇತನ  .:P`

* * * * *

### ಸಿಕ್ಕೊಮ್ಮೆ ಸೋಲಬೇಕು

ನೆಪಗಳ ಪಟ್ಟಿ ಮಾಡಿರುವೆ
 ಮಾತು ಬೆಳೆಸಲು.
 ತಾಲೀಮು ನಡೆಸಿರುವೆ
 ಸಿಕ್ಕಾಗ ನಗಿಸಲು
 ಮತ್ತೊಮ್ಮೆ ಭಾವುಕನಾಗಬೇಕು
 ಸಿಕ್ಕೊಮ್ಮೆ ಸೋಲಬೇಕು

Anonymous ಪ್ರತಿಕ್ರಿಯಿಸಿದ ರೀತಿ

`ನೆಪಗಳೇಕೆ ಮಾತಿಗೆ,       ಮೌನ ಸಾಕು       ತಾಲೀಮೇಕೆ ನಗಿಸಲು,       ನೀನೆ ಸಾಕು       ಮತ್ತೊಮ್ಮೆ ಭಾವುಕನಾಗಲು       ಸಿಕ್ಕೊಮ್ಮೆ ಸೋಲಲು.:-)`

* * * * *

Anonymous ಜೊತೆಗೆ ಕವಿತೆಗಳ ಜುಗಲುಬಂದಿ ಸಾಗಿದ್ದು ಹೀಗೆ

ಪ್ರತಿ ಕವಿತೆಯ ಕಡೆಯಲ್ಲಿ
 ನನ್ನ ಹೆಸರ ಬರೆದರೂ ತಪ್ಪದೆ.
 ನಾ ಪರಪಂಚಕ್ಕೆ ಅಪರಿಚಿತನಾಗಿಯೇ ಉಳಿದೆ.
 ಕವಿತೆಯಿಂದ ಕವಿತೆಗೆ
 ನೀ ಆಪ್ತಳು,
 ಚಿರಪರಿಚಿತಳು ಆಗುತ್ತಲೇ ಹೋದೆ.

`ಪ್ರತಿ ಕವಿತೆಯಲ್ಲೂ ನಿನ್ನಂತರಂಗವ ತೆರೆದಿಡುತ್ತಾ,       ಭಾವನೆಗಳ ಪ್ರವಾಹವ ಹರಿಬಿಡುತ್ತಾ,       ಅಪರಿಚಿತ ಪ್ರಪಂಚಕ್ಕೆ ಪರಿಚಿತನಾದೆ.       ಚಿರಪರಿಚಿತಳು ಅವಳಾದರೂ , ಓದುಗರ ಆಪ್ತ ನೀನೆ ಅದೆ`

ತೆರೆದಿಟ್ಟ ಅಂತರಂಗದಲೂ ಕಂಡವಳು ಅವಳು,
 ಹರಿಬಿಟ್ಟ ಭಾವ ಪ್ರವಾಹದಲೂ ಮಿಂದವಳು ಅವಳು,
 ಪದಗಳ ಅಂತಃಶಕ್ತಿಯೇ ಅವಳಾಗಿರುವಾಗ,
 ಕೊನೆಯಲ್ಲಿ ಬರೆದ ನನ್ನ ಹೆಸರು ಕೇವಲ ನಿಮಿತ್

`ತೆರೆದಿಟ್ಟ ಅಂತರಂಗದಲೂ ಅವಳನ್ನು ಕಾಣಿಸಿದವನು ನೀನು,       ಹರಿಬಿಟ್ಟ ಭಾವ ಪ್ರವಹದಲೂ ಅವಳನ್ನು ಮೀಸಿದವನು ನೀನು,       ಪದಗಳ ಅಂತಃಶಕ್ತಿ ಅವಳಾಗಲು ಕಾರಣ ನೀನಾಗಿರುವಾಗ ,       ಕೊನೆಯಲ್ಲಿ ಬರೆದ ನಿನ್ನ ಹೆಸರು ಹೇಗಾದೀತು ಕೇವಲ ನಿಮಿತ್ತ ???.:-)`

ಬರಿಯ ಕಾವ್ಯದಲಿ ಮೆರೆಸಿದರೆ ಬಂದದ್ದೇನು ಭಾಗ್ಯ ?
 ಜೊತೆಯಲಿ ಎರಡು ಹೆಜ್ಜೆ ಹಾಕಿದರೆ ತಿಳಿದೀತು ನಾನಾ ಯೋಗ್ಯ
 ಒಲ್ಲದವಳ ಮುಖದಲಿ ನಗು ಮೂಡಿಸಬಹುದಷ್ಟೆ .
 ಒಲವನು ಎದೆಯಲಿ ಈ ನಿಮಿತ್ತ ಬಿತ್ತಲಾಗದಷ್ಟೇ

ಜುಗಲುಬಂದಿ ಹೀಗೆ ಉತ್ತರಿಸುತ್ತಾ ಸಾಗಿತ್ತು.