Skip to main content

ಒಲವಿಗೆ ರೂಪದರ್ಶಿ, ನೋವಿಗೆ ರಾಯಭಾರಿ

ನಾನು ಭಾವಜೀವಿ; ಬರೆಯುವವನು; ನೀನು ನನ್ನ ಅಂತಃಸತ್ವ. ಚೇತನವೂ ಹೌದು; ಚೆಲುವೂ ಹೌದು.
ನೀನು ತುಂಬಾ ದೂರ ಇದ್ದೆ. ಬಹಳ ದೂರ. ಅಲ್ಲಿ ನಿನ್ನ ಪಾಡಿಗೆ ನಿನ್ನಯ ಸಹಜೀವನ ನಡೀತಲಿತ್ತು. ಇಲ್ಲಿ ನನ್ನ ಪಾಡಿಗೆ ನನ್ನದ್ದು!!

ಆದರೆ ಎಲ್ಲೋ ಇದ್ದ ನೀನು, ನನಗೆ ಸ್ಪೂರ್ತಿ. ನನ್ನ ಬಹಳಷ್ಟು ಖುಷಿಯ ಕಾರಣಗಳು ನಿನ್ನ ಆ ಅಸ್ತಿತ್ವದ ನೆಲೆಯಲಿದ್ದುವು. ಅಂದರೆ!! ನೀನು ಅನ್ನೋಳೊಬ್ಬಳು ಇರುವುದೇ ನನ್ನ ಖುಷಿಯಾಗಿ ಮತ್ತು ನನ್ನ ಖುಷಿಗಾಗಿ.

ನನ್ನ ಅಸ್ತಿತ್ವದ ಕೊಂಚ ಸುಳಿವು ಕೂಡ ನಿನಗಿಲ್ಲ. ಅಂದರೆ ನನ್ನಂಥವನೊಬ್ಬನಿರುವ ಸಾಧ್ಯತೆಗಳು ನಿನ್ನ ಪಾಲಿಗೆ ಅಸಾಧುವಾದ ವಿಷಯ. ವಾಸ್ತವದಲ್ಲಿ ನೀ ಹೆಂಗಿರುವೆಯೋ ನನಗೂ ತಿಳಿಯದು. ನನಗೆ ಬೇಕಾದಂತೆ; ನಾ ಅಂದುಕೊಂಡಂತೆ; ನನ್ನೆಲ್ಲಾ ನಿರ್ವಿಕಾರ ಭಾವಗಳಿಗೆ ಜೀವದಂತೆ; ನನ್ನಲ್ಲೇ ಜನ್ಮತಾಳಿ; ಬೆಳೆದು;

ಇಂಥ ಹುಚ್ಚುತನವೊಂದು ತಲೆ ಏರಿ ಕುಳಿತಿದ್ದಾಗಲೂ, ಯಾವುವೂ ಅಸಹಜ ಅಂತನಿಸಲಿಲ್ಲ. ಇಷ್ಟ ಪಟ್ಟು ಕಟ್ಟಿಕೊಂಡಿದ್ದ ಕನವರಿಕೆಗಳನ್ನು ಪೋಷಿಸಿದೆ.

ಕಲ್ಪನೆಯ ರಾಜಕುಮಾರಿ ಒಮ್ಮೆ ಕಂಡಳು. ಒಂದು ವಿಸ್ಮಯದ ರೀತಿಯಲ್ಲಿ!!  ಭಾವ ಪ್ರಪಂಚದ ಸಾರಥಿಯಂತೆ;
ನನ್ನ ‘ರಾಜಕುಮಾರಿ’; ನನ್ನ ಅಂತಃಸತ್ವವೇ ಉಸಿರಿಗೆ ದೇಹವನ್ನು ಸುತ್ತಿಕೊಂಡು ಇಳೆಗೆ ಧಾವಿಸಿರುವ ಹಾಗೆ...
ನನ್ನೊಳಗಿದ್ದ ದೇವತೆ; ಸ್ಪೂರ್ಥಿ; ಬದುಕಿನ ಆಸೆ ಮತ್ತು ಆಶಯ; ಎಂಬುದಾಗಿ ಹಲವು ಮುದ್ದಿನ ಅಪವಾದಗಳು.

ನನ್ನ ದಿನಗಳು ರಂಗು ರಂಗಾದವು.
ಕಣ್ಣ ಮುಂದಿದ್ದ ನಿನ್ನದು, ಕಲ್ಪನೆಯಲ್ಲಿದ್ದ ರಾಜಕುಮಾರಿಗಿಂತಲೂ ಹೆಚ್ಚು ಆಕರ್ಷಣೆ; ಹೆಚ್ಚು ಸೆಳೆತ; ಅಷ್ಟೇ ತವಕ. ಹೆಣ್ಣು ಜೀವವೇ ಅಂಥದ್ದಿರಬೇಕು. ಅದರ ಪರಿಧಿಯೊಳಗೆ ಇಳಿದರೆ, ಸೆಳೆತವು ನೂರುಮಡಿ ಹೆಚ್ಚು.
ತುಂಬಾನೆ ಕಾಡುತ್ತಿದ್ದೆ. ಇಂಥಹಾ ತಳಮಳಗಳನ್ನು ನಿನಗಲ್ಲ, ಯಾರಿಗೂ ಹೇಳುವುದು ಅಷ್ಟು ಸುಲಭವಲ್ಲ. ಬಟಾ ಬಯಲಲ್ಲಿ ಬಲೆಯಲ್ಲಿ ಸಿಕ್ಕಿ ಕೊಂಡಿರುವಂತೆ; ಮಾಡದ ತಪ್ಪಿಗೆ ಒದೆ ತಿಂತಿರುವಂತೆ.

ನನ್ನ ಎಲ್ಲವೂ ಆಗಿದ್ದವಳು, ಏನೇನೂ ಅಲ್ಲದಂತೆ ನಿಂತೆ;
ಏನೂ ಅಲ್ಲವೆನ್ನುತ್ತಲೇ ಶುಷ್ಕ ಮನದ ಎಲ್ಲೆ ಮೀರಿ ಪಸರಿಸಿದೆ;
ಸಾಗರದೊಳಗಿನ-ಹನಿವೋ ಹನಿವೊಳಗಿನ-ಸಾಗರವೋ;
ಚುಕ್ಕಿಯೊಳಗಣ-ಲೋಕವೋ ಲೋಕದೊಳಗಿನ-ಚುಕ್ಕಿಯೋ;
ನನ್ನ ಆಲೋಚನೆಗಳೆಲ್ಲೆಲ್ಲಾ ನೀನೋ… ಅಥವಾ ಸದಾ ನಿನ್ನ ಆಲೋಚನೆಯಲ್ಲಿ ನಾನೋ;
ನೀ ಹೂಗುಟ್ಟುವ ಹುಡುಕಾಟದಲ್ಲಿ ನಾ ಸವೆದು ಹೋಗಿದ್ದರ ಸುಳಿವು ನನಗೇ ಸಿಗಲಿಲ್ಲ.
ಯಾರಿವನು..? ಅನ್ನುವ ವಿಚಿತ್ರ ಕುತೂಹಲ ನಿನಗೆ. ಒಬ್ಬರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ಜೀವಮಾನವೇ ಸಾಲುವುದಿಲ್ಲದಿರುವಾಗ; ನಾ ಯಾರಂತ ಪರಿಚಯಿಸಿಕೊಳ್ಳಲಿ.
ನಿನಗೆ ಪರಿಚಿತನೇ;
ಬಹಳ ಹತ್ತಿರದಿಂದ ಬಲ್ಲವನೆ;

ಭಿನ್ನವಾಗಿತ್ತು ವಾಸ್ತವ!!

ಕಣ್ಣ ಮೇಲಿದ್ದ ಪ್ರೀತಿ-ಪ್ರೇಮಗಳ ನಶೆಯ ಪೊರೆಯು ಮೆತ್ತಗೆ ಹರಿದು ಸರಿಯುತ್ತಾ ಹೋಯ್ತು.
ನಾನೇ ಕಟ್ಟಿಕೊಂಡಿದ್ದ ದಪ್ಪ ಕಲ್ಲಿನ ಕೋಟೆಯೇ ನನ್ನ ಸಮಾಧಿಯೆನಿಸುತ್ತಾ ಹೋಯ್ತು.
ಸುಮ್ಮನಾದೆನು. ಒಂಟಿಯಾದೆನು.
ಎದೆಯೊಳಗೆ ಗುಂಗಿ ಹುಳು ಗುಯ್ ಅಂತ ಅನ್ನುತ್ತಿರುವ ಸದ್ದು. ನೋವು!!


ದೊಡ್ಡ ಶೂನ್ಯ; ತುಂಬಾ ದೊಡ್ಡ ಮೌನ; ಬೆನ್ನು ಬಿಡಲಿಲ್ಲ ನಿನ್ನ ನೆರಳು. ನಿನ್ನ ಹೆಜ್ಜೆ ಗುರುತುಗಳು ಎದೆಯೊಳಗೆ ಇಳಿದವು. ಉಳಿದವು. ನಿನ್ನನು ಕಾಣದೇ ಇರಬಲ್ಲವನಾದರೂ; ಮರೆತವನು ಇರಲಾಗಲಿಲ್ಲ. ಮೊದಲು ಸತ್ತು ಸೋಲುತ್ತಾ ಹೋದೆ.
ದೇಹದ ರೋಮರೋಮಗಳಿಗೆ ಆ ಹೆಸರಿನ ಪರಿಚಯ ಇದೆ.
ನನ್ನ ಪ್ರಜ್ನೆಯ ಪ್ರತಿ ಅಂತಸ್ತುಗಳಲಿ ನಿನ್ನದೇ ಅಸ್ತಿತ್ವದ ವ್ಯಥೆ ಇದೆ.
ನನ್ನ ಪ್ರತಿ ಸೋಲಿಗೆ ಸಮರ್ಥನೆ ಕೊಡಲು ಬರುವ ಥರ್ಡ್ ಅಂಪೈರೂ ಹೌದು;
ಗೆಲ್ಲಬೇಕೆನಿಸಲು ಇರುವ ತಿಳುವಳಿಕೆಯಿಲ್ಲದ ಕಾರಣವೂ ಹೌದು;
ಬೆಳಗಿನ ಪಿಸುರುಗಟ್ಟಿದ ಕಣ್ಣಿನ ಮೊದಲ ದೃಶ್ಯವೂ ಹೌದು;
ನನ್ನ ಒಲವಿಗೆ ರೂಪದರ್ಶಿ, ನೋವಿಗೆ ರಾಯಭಾರಿ;
ನನ್ನ ಪಾಲಿಗೆ ನೀನು ಎಲ್ಲವೂ ಹೌದು.
ಕಾಯ-ವಾಚ-ಮನಸ ಕನಸುಗಳು;
ಕುಳಿತು-ಕಾದು-ಬೇಸ್ತು ಬಿದ್ದ ನೆನಪುಗಳು.
ಉಳಿದು-ಬೆಳೆದು-ಬರಿದಾಗುತ್ತಿರುವ ಮಾನವಿಲ್ಲದ ಬತ್ತಲೆ ಭಾವಗಳು.
ನಾ ನೋಡಬೇಕು ಅಂತ ಬಯಸುವ ಕಟ್ಟ ಕಡೆಯ ಹೆಣ್ಣು ಹೌದೆಂದರೂ ಅದೆಲ್ಲಿ ಕಾಣಿಸಿಕೊಂಡು ಬಿಡುವೆಯೋ ಅನ್ನೋ ಭಯ; ನೋವು; ಕಾತುರ ಮತ್ತು ಸಂತಸ.

ನಮ್ಮ ನಮ್ಮ ಸಂಕಟಗಳಿಗೆ ಬೇರೆ ಯಾರನ್ನಾದರೂ ಅಪಾಧಿಸಿದರೆ, ಅವರ ತಿರಸ್ಕಾರದ ನೆಪದಲ್ಲಾದರೂ ನೆಮ್ಮದಿಯಿಂದ ಇರಬಹುದು. ನಮ್ಮ ಸಂಕಟಗಳಿಗೆ, ನಾವೇ ಕರ್ತೃಗಳಾದಾಗ ಯಾರನ್ನಂತ ಆಪಾಧಿಸುವುದು.
ಸ್ವಯಂಕೃತ-ಅಪರಾಧಗಳೇ ಹೀಗೆ!! ಧಾರುಣವಾಗಿರತ್ತವೆ.
ಏನನ್ನೂ ಅಪೇಕ್ಷಿಸದೆ ಯಾರನ್ನಾದರು ತುಂಬಾ ಹಚ್ಚಿಕೊಂಡರೆ ಮನ್ಸಿಗೆ ಆಹ್ಲಾದ ಅನ್ಸತ್ತೆ. ಪ್ರೀತಿ ಅನ್ನೋದೊಂದು ಬಹಳ ಒಳ್ಳೆಯ ಅನುಭವ. ನೀನಿಲ್ಲದೆ; ನಿನ್ನ ಹೆಸರಲ್ಲಿ  ನಾ ಕೇಳದೆ ಪಡೆದೆ.

Comments