ಬಸ್ ಪಾಸು ಕಳೆದುಕೊಂಡಿದ್ದ ಕಥೆ


ಏಳನೇ ಕ್ಲಾಸಿನ ಶೈಕ್ಷಣಿಕ ವರ್ಷವು ಪ್ರಾರಂಭವಾಗಿ ಸುಮಾರು, ಮೂರು ತಿಂಗಳು ಕಳೆಯುವ ಹೊತ್ತಿಗೆ, ಅಚಾತುರ್ಯವೊಂದು ನನ್ನಿಂದ ನಡೆದು ಹೋಯ್ತು. ನನ್ನ ಬಸ್ ಪಾಸನ್ನು ಕಳೆದುಕೊಂಡು ಬಿಟ್ಟೆ. ಶಾಲಾ ಜೀವನದಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬೇಕಾಗಿದ್ದ ಏಕೈಕ ಅತ್ಯಮೂಲ್ಯವಾದ ವಸ್ತುವೆಂದರೆ, ಬಸ್ ಪಾಸು. ನಮ್ಮ ಹಳ್ಳಿಯಿಂದ ಪೇಟೆಯ ಸ್ಕೂಲಿಗೆ ಬರಲು, KSRTC ಯವರು ಕೊಟ್ಟಿದ್ದ ಉಚಿತ ಬಸ್ ಪಾಸು ಅದು. ಎಲ್ಲೆಲ್ಲಿ ಅಂತ ಹುಡುಕಿದರೂ ಸಿಗಲಿಲ್ಲ.

' ಈ ವರುಷದ ವಿದ್ಯಾಭ್ಯಾಸ ಇಷ್ಟಕ್ಕೇ ಸಾಕೆಂದೂ, ಮುಂದಿನ ವರುಷ ಹೊಸದಾಗಿ ಶಾಲೆಗೆ ಸೇರಬೇಕೆಂದೂ' ತಂದೆಯವರು ಹತಾಶರಾಗಿ ಹೇಳಿದರೆಂದರೆ, ಬಸ್-ಪಾಸಿನ ಅಲಭ್ಯತೆ ಸೃಷ್ಟಿಸಿದ ಸಮಸ್ಯೆಯ ತೀವ್ರತೆಯು ಅರಿವಾಗಬಹುದು.

ಒಂದು ತಿಂಗಳಿಂದ,  ಬಸ್ ನಲ್ಲಿ ಪಾಸ್ ಇಲ್ಲದೆಯೂ; ದುಡ್ಡು ಕೊಡದೆಯೂ ಓಡಾಡುತ್ತಿದ್ದೆ. ಅದೊಂದು ಅತ್ಯಂತ ರಂಜನೀಯ ಮತ್ತು ಸಾಹಸಮಯ ಪಯಣ. ಕಂಡಕ್ಟರು ತನ್ನ ಬಳಿಗೆ ಬರುವುದನ್ನೇ ಅಭ್ಯಸಿಸಬೇಕು. ಅವರು ಕೇಳುವ ಮುಂಚೆಯೇ ಅತ್ಯಂತ ಆತ್ಮವಿಶ್ವಾಸದಿಂದ 'ಪಾಸ್' ಎಂದು ಚೀರಿ ಹೇಳಬೇಕು. ಅಪ್ಪಿ ತಪ್ಪಿ ಕಂಡಕ್ಟರು ಪಾಸ್ ತೋರಿಸಲು ಕೇಳಿದಾಗ ಬ್ಯಾಗು, ಜಿಯಾಮೆಟ್ರಿ, ಜೋಬುಗಳಲ್ಲೆಲ್ಲಾ ಹುಡುಕಾಡಿ 'ಅಯ್ಯೋ!! ಪಾಸು ಮನೇಲಿ ಬಿಟ್ಟು ಬಂದಿದ್ದೇನೆ' ಎಂಬಂತೆ ನಟಿಸಬೇಕು. 'ಚೆಕಿಂಗ್ ಇನ್-ಸ್ಪೆಕ್ಟರು ಬಂದರೆ ಏನಪ್ಪಾ ಮಾಡೋದು..?' ಎನ್ನುತ್ತಾ ಬಸ್ ಇಳಿಯುವವರೆಗೂ ಉಸಿರು ಬಿಗಿ ಹಿಡಿದು ಕಾಯುತ್ತಾ ಕೂರಬೇಕು. ಸಾಕಪ್ಪಾ ಜೀವನ ಅನಿಸಿಬಿಟ್ಟಿತ್ತು.

ಪ್ರತಿ ದಿನ ಮನೆಯಲ್ಲಿ .. 'ಪಾಸ್ ಸಿಕ್ತಾ ..? ಪಾಸ್ ಸಿಕ್ತಾ ..?' ಎಂದು ಕೇಳುವರು.  ಅವರ ಆಶಾವಾದವು ಒಪ್ಪತಕ್ಕದ್ದೆ. ಆದರೆ ಇಲ್ಲವಾಗಿರುವ ಬಸ್ ಪಾಸನ್ನು ಪ್ರತಿದಿನವೂ ಹುಡುಕುವುದಾದರೂ ಎಲ್ಲಿಂದ. ಬಸ್ ಡಿಪೋಗೆ ಹೋಗಿ  'ಡ್ಯೂಪಲಿಕೇಟ್ ಸಿಗುತ್ತಾ..?' ಅಂತ ಕೇಳಿದ್ದಕ್ಕೆ ಅವರೂ ಲೇವಡಿ ಮಾಡಿ ನಕ್ಕು ಬಿಟ್ಟರು.

ನನ್ನ ತಾಪತ್ರಯವನ್ನೆಲ್ಲಾ ಶಮನಗೊಳಿಸಲೆಂದು ನಮ್ಮ ತಂದೆಯವರೇ ಸ್ಕೂಲಿಗೆ ಬಂದರು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಂದೆ ಅಂದ್ರೆ ಹೀರೊ ಈಮೇಜ್ ಇರುತ್ತದಾದರೂ, ಪ್ರಾಥಮಿಕ ಹಂತದ ಶಿಕ್ಷಣ ಮುಗಿಯುವ ಹೊತ್ತಿಗೆ, ಅಪ್ಪ ಯಾಕೋ ಹಳಬನಂತೆ ಕಾಣಿಸುತ್ತಾನೆ. ಅವನ ಅವವೇ ತಿರುಗ-ಮುರುಗಾ ಮಾತುಗಳು, ಬೋರಿಂಗ್ ಅನಿಸುವ ಕೃತಿಗಳು ಬೇಸರ ತರಿಸುತ್ತಿರುತ್ತವೆ. 'ಅಪ್ಪ, ನಿನಗೆ ಏನೂ ಗೊತ್ತಾಗಲ್ಲ ಸುಮ್ಮನೆ ಇರು'  ಅನ್ನೋದು ಬಯಾಟ್ ಆಗಿ ಹೋಗಿರತ್ತೆ.

ಅಪ್ಪ ಸ್ಕೂಲಿಗೆ ಬಂದಾಗ, ಮುಜುಗರ ಆಗಿದ್ದಂತು ಸತ್ಯ. ಆದರೆ ಅದಕ್ಕಿಂತ ಹೆಚ್ಚು, ಅಪಮಾನಕ್ಕೆ ಒಳಗಾಗುವಂತಹ ಯೋಜನೆಗಳನ್ನು ತನ್ನೊಂದಿಗೆ ಹೊತ್ತು ತಂದಿರುವ ಸುದ್ದಿ ಕೇಳಿ ಗಾಬರಿ ಆಗೋಯ್ತು.ಅವರು ಪ್ರಿನ್ಸಿಪಾಲ್ ಬಳಿ ಹೋಗಿ, ಸ್ಕೂಲಿನ ಲೆಟರ್ ಹೆಡ್ ನಲ್ಲಿ, 'ತನ್ನ ಮಗನ ಬಸ್ ಪಾಸು!! ಕಳೆದು ಹೋಗಿರುವುದಾಗಿಯೂ; ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿರುವುದಾಗಿಯೂ; ಯಾರಿಗಾದರೂ ಬಸ್ ಪಾಸ್ ಸಿಕ್ಕರೆ, ದಯವಿಟ್ಟು ಅದನ್ನು ತಲುಪಿಸಬೇಕಾಗಿಯೂ..' ಬರೆದಿತ್ತು ಲೆಟರ್ ಹೆಡ್ ನಲ್ಲಿ.

ಅದನ್ನು ಓದಿಯೇ, ನನ್ನ ಹೃದಯ ಒಡೆದುಹೋಯಿತು. ಈ ಸುತ್ತೋಲೆಯನ್ನು ಹಿಡಿದುಕೊಂಡು  ಪ್ರತಿ ಕ್ಲಾಸ್ ರೂಮು ಪ್ರದಕ್ಷಿಣೆ ಹಾಕಿ, ಎಲ್ಲರಿಗೂ ಕೇಳುವಂತೆ ಜೋರು ಓದಬೇಕು. ಮೊದಲನೆಯದಾಗಿ ಈ ಪ್ಲಾನ್ ವರ್ಕ್ ಔಟ್ ಆಗಲ್ಲ. ಎರಡನೆಯದಾಗಿ, ಇಷ್ಟೋಂದು ಧೈನ್ಯವಾಗಿ ಎಲ್ಲರ ಮುಂದೆ ಗೋಗರೆಯೋದು ಅಪಮಾನ ಅನ್ನಿಸುತ್ತಿತ್ತು. 

"ಅಪ್ಪ!! ನಾ ಹೋಗಲ್ಲ. ಬೇಕಿದ್ರೆ ನೀನೆ ಹೋಗು" ಎಂದು ಹಠ ಮಾಡಿ ಕುಳಿತೆ.

"ಇದರಲ್ಲಿ ಮಾನ ಹೋಗುವಂತದ್ದು ಏನೋ ಇದೆ. ನಿನ್ನ ಬೇಜವಾಬ್ದಾರಿತನದಿಂದ ಪಾಸ್!! ಕಳ್ಕೋಂಡಿದಿಯಾ..? ಯಾರ್ಗಾದ್ರು ಸಿಕ್ಕುದ್ರೆ, ಕೊಡ್ರಪ್ಪ ಅಂತ ಕೇಳ್ತಿರೋದು ಅಷ್ಟೇ. , ಜೊತೆನಲ್ಲಿ ನಾನು ಬರ್ತೀನಿ, ನಡಿ!! " ಅಂದರು. ಆದರೂ ಅಪ್ಪನ ತಲೆಯಲ್ಲಿ ಇಂತ ಕ್ರಿಮಿನಲ್ ಐಡಿಯಾ ತುಂಬಿದವರು ಯಾರೆಂದು ತಿಳಿಯಲಿಲ್ಲ. ಅವರ ಅಣತಿಯಂತೆ, ಪ್ರತಿ ಕ್ಲಾಸ್ ರೂಮಿನಲ್ಲಿ ಹೋಗಿ ಕೇಳಿದ್ದೂ ಆಯಿತು.

ಈ ಮೊದಲು ನನ್ನ ಪಾಸ್ ಕಳೆದು ಹೋಗಿದ್ದನ್ನ ಯಾರೊಂದಿಗೂ ಹೇಳಿಯೂ ಇರಲಿಲ್ಲ. ಅಪ್ಪ!! ಹೊರಟು ಹೋದ ಮೇಲೆ ಇತ್ತ, ನನ್ನ ಕೊಠಡಿಯಲ್ಲಿದ್ದ ಸ್ನೇಹಿತರೆಲ್ಲರೂ ತಮ್ಮ ತಮ್ಮ ಬ್ಯಾಗುಗಳನ್ನೆಲ್ಲಾ ಕೊಡವಿ, ಕೊಡವಿ ಪರೀಕ್ಷಿಸಿಕೊಂಡರು. ಕೆಲವರು ಶಾಲೆಯ ಆವರಣದಲ್ಲಿ ಪಾಸ್ ಹುಡುಕಲು ಮುತುವರ್ಜಿ ವಹಿಸಿಕೊಂಡು ಬಂದರು. ಇದೇ ಅವಕಾಶದಲ್ಲಿ, ಪಿ. ಚೇತನ್ ನನ್ನೊಂದಿಗೆ ಪಾಸ್ ಹುಡುಕಲು ಸೇರಿಕೊಂಡ.
ಪಿ. ಚೇತನ್ ನನ್ನ ಆತ್ಮೀಯ ಗೆಳೆಯನಾಗಿದ್ದವನು. ಆದರೂ ಕೆಲ ತಿಂಗಳುಗಳ ಹಿಂದೆ, ಯಕ್ಕಾ-ಚಿಕ್ಕಿ ಜಗಳ ಆಡಿಕೊಂಡು ದೂರಾಗಿದ್ದೆವು. ಈ ಸಂದರ್ಭವನ್ನೇ ಬಳಸಿಕೊಂಡು, ಇಬ್ಬರೂ ಚಾಳಿ ಕಟ್ಟಿದೆವು. 
ಬಹುಷಃ ಕ್ಲಾಸಿನಲ್ಲಿ ಧೈನ್ಯವಾಗಿ ಸುತ್ತೋಲೆಯನ್ನು ಓದಿದ್ದು ಅವನ ಮನ ಕರಗಿಸಿದ್ದಿರಬೇಕು. 

ನಮ್ಮ ಕ್ಲಾಸ್ ರೂಮಿದ್ದ, ಬಲಭಾಗದ ಕಿಟಕಿಯಾಚೆ, ಗೋಡೆ ಮತ್ತು ಕಾಂಪೌಂಡಿನ ಮಧ್ಯೆ!! ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದಿತ್ತು.
ಅದು ಮನುಷ್ಯ ಮಾತ್ರದವರು ನುಗ್ಗಲಾಗದ ಗಲೀಜು ಮತ್ತು ಗಿಡಗೆಂಟೆಗಳಿಂದ ಕೂಡಿದ್ದ ಪುಟ್ಟ ಓಣಿಯಂತಹ ಜಾಗ.
ಮೇಷ್ಟ್ರುಗಳು ಹೊಡೆಯಲು ತರುತಿದ್ದ ಕೋಲುಗಳನ್ನು, ಇದೇ ಮುಳ್ಳಿನ ಮಧ್ಯೆ!! ಕಿಟಕಿಯಿಂದ ಎಸೆದು ಬಿಡುತ್ತಿದ್ದೆವು.
ಪಿ. ಚೇತನ್,  ಆ ಜಾಗದಲ್ಲಿಯೂ ಒಮ್ಮೆ  ಪಾಸ್-ಗಾಗಿ ಹುಡುಕುವಂತೆ ಸೂಚಿಸಿದ.

ಇಬ್ಬರೂ ಓಣಿಯಲ್ಲಿ ಕಾಂಪೌಂಡ್ ಮೇಲಿಂದಲೇ, ನಡೆಯುತ್ತಾ ನಮ್ಮ ಕ್ಲಾಸ್ ರೂಮ್ ಕಿಟಕಿಗೆ ಹೊಂದಿಕೊಂಡಿದ್ದ ಜಾಗಕ್ಕೆ ಬಂದೆವು.
ಕೊಚ್ಚೆ ಯಲ್ಲಿ, ಪೆನ್ನಿನ ಕ್ಯಾಪುಗಳು, ರದ್ದಿ, ಮೇಸ್ಟ್ರ ಕೋಲುಗಳು ಕಾಣಿಸುತ್ತಿದ್ದವು.

ನಿಧಿ ಹುಡುಕಲು ಹೋದವರಿಗೆ, ಸರ್ಪನ ತಲೆಯಲ್ಲಿ ವಜ್ರ ಕಾಣಿಸುವಂತೆ, ಗಲೀಜು ಕೊಚ್ಚೆಯ ಮದ್ಯೆ!! ನನ್ನ ಬಸ್ ಪಾಸು ಕಾಣಿಸಿತು.
ದಪ್ಪನೆಯ ಪ್ಲಾಸ್ಟಿಕ್ ಲ್ಯಾಮಿನೇಷನ್ ಇದ್ದುದರಿಂದ, ಅಷ್ಟು  ದಿನಗಳಾದರೂ ಏನೂ ಆಗದೆ.. ಥಳಥಳಿಸುತ್ತಿತ್ತು. ಯಾವನೋ ಬಡ್ಡಿ ಮಗ ಕಿಟಕಿಯಿಂದ ಎಸೆದು ಬಿಟ್ಟಿದ್ದಿರಬೇಕು. 
'ನನ್ನ ಪಾಸು ಸಿಕ್ತು'  ಎಂದು ಎಲ್ಲರಿಗೂ ತೋರಿಸುತ್ತಾ ಸಂಭ್ರಮಿಸಿದೆ.

ಈಗ... 'ಪಾಸ್' 'ಪಾಸ್' 'ಪಾಸ್' ಎಂದು ಕಂಡಕ್ಟರಿಗೆ ಚೀರಿ ಹೇಳುವಾಗ, ಎಲ್ಲಿಲ್ಲದ ಖುಷಿ ನನಗೆ.
ಆ ಬಸ್ ಪಾಸು ಅಲ್ಲೇ ಬಿದ್ದಿರಬಹುದು ಎಂಬುದಾಗಿ ಪಿ. ಚೇತನ್ ಹೇಳಿ ಕರೆದುಕೊಂಡು ಹೋಗಿದ್ದು  ಮಾತ್ರ ಅಚ್ಚರಿಯನ್ನು ಮೂಡಿಸಿತ್ತು. 

Comments

 1. ಚೈಲ್ಡ್ ಹುಡ್ ಮೆಮೊರೀಸ್ ಚೆನ್ನಾಗಿತ್ತು :). ಆದರೆ ಪಾಸ್ ಎಸೆದಿದ್ದ ಕಾರಣ ಸರಿಯಾಗಿ ಅರ್ಥವಾಗಿಲ್ಲ!

  ReplyDelete
  Replies
  1. ಧನ್ಯವಾದಗಳು .. ಇದು ಕಥೆ :) ಕಾರಣ ನನಗೂ ಗೊತ್ತಿಲ್ಲ. ಮತ್ತು ಅವನೇ ಪಾಸ್ ಎಸಿದಿದ್ದಾನೆಂದು ನಾನು ಎಲ್ಲಿಯೂ ಹೇಳಿಲ್ಲ :)

   Delete
 2. ಹ ಹಾ. ನಿಮ್ಮ ಬರವಣಿಗೆ ಬಾಲ್ಯದ ಇಂಥ ಹಲವಾರು ನೆನಪುಗಳನ್ನು ತಂದವು. ಸೊಗಸಾದ ನಿರೂಪಣೆ ನಿಮ್ಮದು. ಉತ್ತಮ ಬರವಣಿಗೆ ಇದೆ ನಿಮಗೆ.

  ReplyDelete

Post a Comment