Skip to main content

ಟ್ರೆಕ್ ಟು ಸ್ಕಂದಗಿರಿ

'ಸ್ಕಂದಗಿರಿ' ಗೆ ಚಾರಣಕ್ಕೆಂದು ಹೊರಟಾಗ, ರಾತ್ರಿ ಹನ್ನೊಂದು ದಾಟಿತ್ತು. ಹೋಗುವಾಗ
ಇದ್ದದ್ದು ಒಟ್ಟು ಏಳು ಜನ ಮತ್ತು ನಾಲ್ಕು ಬೈಕು. ನಮ್ಮಲ್ಲಿ ಅತ್ಯಂತ ಸುಳ್ಳುಗಾರನೆಂದು
ಹೆಸರಾದವನು ಶ್ರೀ. ಎಲ್ಲಾ ಗೊತ್ತು ಎಂದು ಎಲ್ಲರನ್ನು ಕರೆದುಕೊಂಡು ಹೋಗಿ,
ನಡುದಾರಿಯಲ್ಲಿ ಕೈ ಚೆಲ್ಲಿಬಿಡುವುದೇ ಹೆಚ್ಚು.  ಸ್ಕಂದಗಿರಿಯದ್ದೂ ಹೆಚ್ಚು ಕಮ್ಮಿ ಅದೇ
ಸ್ಥಿತಿ.

ಬೆಂಗಳೂರಿನಿಂದ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ಬದಲಾಗಿ, ಯಲಹಂಕದೊಳಗಿಂದ ಹಳ್ಳಿ
ಹಳ್ಳಿಗಳನ್ನು ಬಳಸುತ್ತಾ ಸಾಗಿದೆವು. ತಾನು ಈ ಹಿಂದೆ ಹಲವಾರು ಬಾರಿ ಹೋಗಿರುವುದಾಗಿ
ಶ್ರೀ ಹೇಳಿಕೊಳ್ಳುವನಾದರೂ, ಆ ಹೇಳಿಕೊಳ್ಳುವಿಕೆಯಲ್ಲಿಯೇ ಕಪಟತೆ ಕಾಣಿಸುತ್ತಿತ್ತು.
ಆದರೂ ಜಡ, ನಿರ್ವಿಕಾರ, ನಿರ್ಲಿಪ್ತ, ನಿರ್ವೀರ್ಯ ಟೆಕ್ಕಿ ಸಮುದಾಯಕ್ಕೆ ಏನಾದರೊಂದು
ಮಾಡಲು ಒಂದು ಸಣ್ಣ ಪುಶ್ ಬೇಕು. ಇಲ್ಲಾಂದ್ರೆ ಹೊರಡೋದಕ್ಕೆ ಮನಸ್ಸು ಬರೋದಿಲ್ಲ.

ಮೊದಲು ಹಳ್ಳಿಗಳ ಮಧ್ಯೆ ಕಳೆದು ಹೋದೆವು. ಕತ್ತಲಲ್ಲಿ, ಹಳ್ಳಿ ರಸ್ತೆಗಳಲ್ಲಿ ಲೆಫ್ಟು
ರೈಟು ಗಳು ಸ್ಪಷ್ಟವಾಗಿ ಕಾಣಿಸುತ್ತಿದುದೇ ಕಷ್ಟಸಾಧ್ಯ. ಅಂತಾದ್ರಲ್ಲಿ  ಮಾರ್ಗ ಸೂಚಿ
ಸೈನ್ ಬೋರ್ಡುಗಳನ್ನು ಎಲ್ಲಿಂದ ಹುಡುಕುವುದು. ತಡರಾತ್ರಿ ಆಗುವ ಹೊತ್ತಿಗೆ ಸರಿಯಾಗಿ
ಸ್ಕಂದಗಿರಿ ಮಾರ್ಗ gps ನಲ್ಲಿ ಟ್ರೇಸ್ ಆಯ್ತು. ಅದರ ಬಾಲ ಹಿಡಿದು ಹೊರಟೆವು. ಆನಂತರ
ತಗಲಾಕ್ಕೊಂಡಿದ್ದು ನಾಲ್ಕು ಬೀಟ್ ಪೋಲೀಸುಗಳ ಕೈಲಿ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್
ಗಳನ್ನು ಇಟ್ಟವರು ನಮ್ಮನ್ನೆಲ್ಲಾ ರಸ್ತೆಯ ಮೇಲೆಯೇ ಸುತ್ತಿವರೆದರು. ಕಗ್ಗತ್ತಲ ಬೆತ್ತಲೆ
ರಸ್ತೆಯಲ್ಲಿ ನಮಗೆ ನೀವು, ನಿಮಗೆ ನಾವು ಎನ್ನುವಂತೆ... ಪೋಲೀಸರು ಮತ್ತು ನಮ್ಮನ್ನು
ಬಿಟ್ಟು ಬೇರಾರೂ ಇಲ್ಲ.

ಅವರು ಕಷ್ಟ ಸುಖ ಮಾತನಾಡುವ ನೆಪದಲ್ಲಿ, ಎಲ್ಲರ ಬ್ಯಾಗುಗಳ ಮೇಲೆಯೂ ಕೋಲಿನಿಂದ ಹೊಡೆದು
ಹೊಡೆದು ನೋಡುವರು. ಅವರ ಹುಡುಕಾಟವು ಬಿಯರ್ ಬಾಟ್ಲಿಗೆಂದು, ಗೊತ್ತಿತ್ತು. ಬಿಯರ್
ಬಾಟ್ಲಿಗಳು ಸಿಕ್ಕರೆ,  ಸೀಜ್ ಮಾಡುತ್ತಿದ್ದರೋ..? ಅಥವಾ ಮಧ್ಯರಾತ್ರಿ ಮಧ್ಯಪಾನ
ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಇನ್ನಷ್ಟು ಹೆದರಿಸಿ, ಬೆದರಿಸಿ ಒಂದೆರಡು ಹೆಚ್ಚು
ಗಾಂಧಿ ನೋಟುಗಳಿಗೆ ಕೈ ಹಾಕುತ್ತಿದ್ದರೋ..? ಗೊತ್ತಿಲ್ಲ. ಅವರ ದುರಾದೃಷ್ಟಕ್ಕೆ,
ನಮ್ಮಲ್ಲಿ ಯಾರ ಬಳಿಯೂ, ಧೂಮಪಾನ.., ಮದ್ಯಪಾನದಂತಹ ಕಲಬೆರಕೆಗಳು ಇರಲಿಲ್ಲ.  ಬದಲಾಗಿ
ಸೇಬು, ಒಣ ದ್ರಾಕ್ಷಿ, ಗೋಡಂಬಿ, ಗ್ಲುಕೋಸ್ ಪಟ್ಟಣ ಸಿಕ್ಕಿತು.

ಅಪ್ಪಿ ತಪ್ಪಿಯೂ ನಾವ್ಯಾರೂ ನಮ್ಮನ್ನು ಸಾಫ್ಟ್-ವೇರ್ ಇಂಜಿನಿಯರುಗಳೆಂದು
ಪರಿಚಯಿಸಿಕೊಳ್ಳಲಿಲ್ಲ. ಬದಲಾಗಿ, ಬೇರೆ ಊರುಗಳಿಂದ ಇಲ್ಲಿಗೆ ಬಂದು, ಇಂಜಿನಿಯರಿಂಗ್
ಓದುತ್ತಿರುವ ವಿದ್ಯಾರ್ಥಿಗಳೆಂದು ಹೇಳಿಕೊಂಡೆವು. ನಮ್ಮನ್ನು ವಿದ್ಯಾರ್ಥಿಗಳೆಂದು
ತಟಕ್ಕನೆ ಒಪ್ಪಿಕೊಂಡರು. ಅವರಿಗೆ ದೊರೆತಿದ್ದ ಸೇಬು, ದ್ರಾಕ್ಷಿ, ಗೋಡಂಬಿಗಳು ನಮ್ಮ
ಇಮೇಜ್ ಅನ್ನು ಅತ್ಯಂತ ಹೀನಾಯ ಮಟ್ಟಕ್ಕೆ ಒಳ್ಳೆಯವರನ್ನಾಗಿಸಿತ್ತು.  ಆದರೂ ... ಮುಂದೆ
ಹೋಗಲು ಬಿಡಲೊಲ್ಲರು.

'ನಿಮ್ಮ ಅಪ್ಪ-ಅಮ್ಮಂಗೆ ಫೋನ್ ಮಾಡಿ ಕೊಡ್ರಿ...? ಅವರು ಪರ್ಮೀಷನ್ ಕೊಟ್ರೆ..,
ನಿಮ್ಮನ್ನ ಮುಂದೆ ಬಿಡ್ತೇವೆ..?'

'ಮುಂದೆ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಯಾರು ಹೊಣೆ..?' ಇತ್ಯಾದಿ ಇನ್ನು ಮುಂತಾದ
ಲೋಕಾಭಿರಾಮದ ಜೊತೆಗೆ

' ನಡೀರಿ ಮನೆಗೆ ವಾಪಾಸ್ '  ಅಂದಾಗ ... ಅಭಿ ಸೀದಾ ಬೈಕಿನ ಬಳಿ ನಡೆದವನೇ ..

' ನಡಿರಲೋ ನಡಿರೋ .. ಯಾವನಿಗೆ ಬೇಕು ಈ ಪೋಲೀಸಿನವರ ಸವಾಸ ' ಎಂದು ಗೊಣಗಿದನು.ಇಂತಹ
ಸಂದರ್ಭದಲ್ಲಿ ಶ್ರೀ ತನ್ನ ಸುಳ್ಳಿನ ಕಂತೆ(ಕಥೆ)ಗಳನ್ನು ಶುರುವಚ್ಚಿಕೊಂಡ.

' ಇವತ್ತು ಮುಂಜಾನೆ ಪಾಟೀಲ್ ಪುಟ್ಟಪ್ಪ ಅವರಿಂದ ಮಠದಲ್ಲಿ ಪ್ರವಚನ ಇದೆ. ಅದನ್ನ
ಕೇಳೋದಕ್ಕೆ ನಾವೆಲ್ರೂ ರಾತ್ರೀನೇ ಹೊರಟು ಬಂದಿದ್ದೇವೆ' ಅಂದ

ಎಲ್ಲರೂ ಒಂದು ಕ್ಷಣ ದಂಗಾದೆವು.  ಪೋಲೀಸರು ಪಾಟೀಲ ಪುಟ್ಟಪ್ಪನವರ ಪ್ರವಚನದ ಬಗ್ಗೆ
ಕ್ರಾಸ್ ಕೊಶ್ಚನ್ ಗಳನ್ನು ಕೇಳುತ್ತಾ ಹೋದರು. ಅವರು ಕೇಳಿದ್ದಕ್ಕೆಲ್ಲಾ... ಶ್ರೀ ತಟಪಟ
ಅಂತ ಒಂದಕ್ಕೊಂದು ಸೇರಿಸಿಕೊಂಡು ಹೇಳುತ್ತಾ ಹೋದ.
'ಲೋ!! ಸಾಕು ಸುಮ್ಕೆ  ಇರೋ.. ಹೇಳ್ತಿರೋದೆಲ್ಲಾ ಸುಳ್ಳು ಅಂತ ಗೊತ್ತಾದ್ರೆ, ಅಂಡಿನ
ಮೇಲೆ ನಾಲ್ಕು ಬಾರಿಸ್ತಾರೆ.' ಅನ್ನೋ ಎಚ್ಚರಿಕೆಯ ಸಂದೇಶ ಬಂದರೂ ಶ್ರೀ ಕಥೆ
ಹೇಳುವುದರಲ್ಲಿ ತನ್ಮಯನಾಗಿದ್ದ. ಮತ್ತು ಪೋಲೀಸಿನವರೂ ವಿವರಣೆಗಳನ್ನು ಕೇಳುವುದರಲ್ಲಿ
ತಲ್ಲೀನರಾಗಿದ್ದರು. ದುರಂತ ಅಂದ್ರೆ ಯಾವ ಪುಟ್ಟಪ್ಪ..? ಅನ್ನೋದು ಪೋಲೀಸಿನವರಿಗೂ
ಗೊತ್ತಿಲ್ಲ. ಅವರ ಬಗ್ಗೆ ಹೇಳುತ್ತಿದ್ದ ಶ್ರೀಗು ಗೊತ್ತಿಲ್ಲ. ಅವನು ಹೇಳುತ್ತಿದ್ದುದು
ಶುದ್ಧ ಸುಳ್ಳು ಎಂಬುದಾಗಿಯೂ, ನಾವುಗಳು ಸ್ಕಂದಗಿರಿಗೆ ಚಾರಣಕ್ಕೆಂದೇ ಹೊರಟವರು
ಎಂಬುದಾಗಿಯೂ ಪೋಲೀಸಿನವರಿಗೆ ಗೊತ್ತು. ಮತ್ತು ಅದು ನಮಗೂ ಗೊತ್ತಿರುವ ಸಂಗತಿ ಎಂಬುದು,
ಅವರಿಗೂ ಗೊತ್ತು. ಆದರೂ 'ಗಟ್ಟಿಯಾಗಿ ಸುಳ್ಳು ' ಎಂದು ಯಾರೂ ಹೇಳುತ್ತಿಲ್ಲ.

ಹೀಗೂ ನಗುನಗುತ್ತಾ ಸುಳ್ಳನ್ನು ಸತ್ಯದಂತೆ ಹೇಳಿ, ಸುಳ್ಳಿಗೆ ಕಟಿಬದ್ದರಾಗಿ ನಿಂತು
ಸಾಧಿಸುವುದು ಒಂದು ಕಲೆಯೇ.

ಮುಂದೇನಾಗಬಹುದು ಎಂಬುದು ಖಚಿತವಾಗಿ ತಿಳಿದಿರಲಿಲ್ಲವಾದರೂ..,  ಸ್ವಲ್ಪ ಹೊತ್ತು ಕಾದರೇ
ಏನೋ ಒಂದು ಆಗಬಹುದು ಅನ್ನೋ ಆಶಾವಾದ.

" ಗಲಾಟೆ ಮಾಡದೇ.. ಸೈಲೆಂಟ್ ಆಗಿ ಹೋಗಬೇಕು. ಮುಂದೆ ಎಲ್ಲಾದರೂ ರಸ್ತೆ ಮೇಲೆ
ಬೈಕುಗಳನ್ನು ನಿಲ್ಲಿಸಿದ್ರೆ ... ಸೀದಾ ಸ್ಟೇಷನ್ ಗೆ ಎಳ್ಕೋಂಡ್ ಹೋಗ್ತೇವೆ.
ಗೊತ್ತಾಯ್ತಾ..? ನಡೀರಿ ಇಲ್ಲಿಂದ "
ಅಂತೂ ಪೋಲೀಸರು ಬ್ಯಾರಿಕೇಡ್ ಎಳೆದು ದಾರಿ ಮಾಡಿಕೊಟ್ಟರು.

ಸ್ಕಂದಗಿರಿ ಪರ್ವತದ ಬುಡಕ್ಕೆ ಸಮೀಪಿಸುತ್ತಿದ್ದಂತೆಯೇ ಒಂದು ಹಳ್ಳಿ ಸಿಕ್ಕಿತು. ಆ
ಹಳ್ಳಿಯ ರಸ್ತೆಗಳಲ್ಲೆಲ್ಲಾ .. ಬ್ಯಾಟರಿ(ಟಾರ್ಚು) ಅಡ್ಡ ಹಿಡಿದು.., ಕೈ
ತೋರಿಸುತ್ತಿದ್ದರು. ಇಷ್ಟೋಂದ್ ಜನ ಒಟ್ಟೊಟ್ಟಿಗೆ ಲಿಫ್ಟ್  ಕೇಳುತ್ತಿದ್ದುದು
ವಿಚಿತ್ರವೆನಿಸಿತಾದರೂ... ಅವರೆಲ್ಲಾ ಪರ್ವತ ಹತ್ತೋದಕ್ಕೆ ದಾರಿ ತೋರಿಸುವ
ಅನ್-ಅಫೀಷಿಯಲ್ ಲೋಕಲ್ ಗೈಡುಗಳು ಎಂಬುದು ನಂತರ ತಿಳಿಯಿತು.

"ನಾನು ಮೂರು ಸಾರಿ ಹೋಗಿ ಬಂದಿದ್ದೇನೆ. ಗೈಡು ಬೇಡ. ಏನು ಬೇಡ. ನಾನೇ ಗೈಡ್ ಮಾಡ್ತೇನೆ"
ಅಂದನು ಶ್ರೀ. ಯಾರಿಗೂ ನಂಬಿಕೆಯಿಲ್ಲ. ಸಮದಾರಿಯಲ್ಲಿ ದಾರಿತಪ್ಪಿಸುವ ಚೈತನ್ಯವಿರುವವನು
ಬೆಟ್ಟದ ಕತ್ತಲು ದಾರಿಯನ್ನು ಬೆಳದಿಂಗಳ ಬೆಳಕಲ್ಲಿ ಹತ್ತಿಸಿಯಾನೇ ಎಂಬ ಅಳುಕು
ಮೂಡಿದ್ದಂತು ಸತ್ಯ. ಆದರೂ ದೇವರ ಮೇಲೆ, ಅಪ್ಪ-ಅಮ್ಮಂದಿರ ಪುಣ್ಯಾಫಲಗಳ ಮೇಲೆ ಭಾರ ಹಾಕಿ,
ಅವನನ್ನು ಹಿಂಬಾಲಿಸಿದೆವು.

ನಮ್ಮ ಗುಂಪಿನಲ್ಲಿ ಅತ್ಯಂತ ಕ್ರೇಜಿ ಫೆಲೋ ಅಂದ್ರೆ ಅತೀತ್. ಆತನಿಗಿರುವ ಅಪಾರ ಎನರ್ಜಿ
ನೋಡಿ, ಜಲಸಿ ಬರ್ತದೆ ನಮಗೆ. ದಡದಡದಡ ಸಿಕ್ಕಸಿಕ್ಕ ಕಡೆ ಹೋಗುವನು. 'ಹೇ ಮ್ಯಾನ್ ಐ
ಫೌಂಡ್ ದ ವೇ' ಎನ್ನುತ್ತಾ ಮತ್ತಷ್ಟು ದೂರ ಹೋಗಿ ನಿಂತು .. 'ಡೋಂಟ್ ಕಮ್. ದಿಸ್ ಈಸ್
ನಾಟ್ ದ ವೇ!!' ಎನ್ನುವನು. ಒಂದೇ ಬೆಟ್ಟವನ್ನು ನೂರಾರು ಬಾರಿ ಹತ್ತಿ ಇಳಿದು ಹತ್ತಿ
ಇಳಿದು ಹತ್ತುವನು. 'ಲೋ ಸುಮ್ಕೆ ನಮ್ಮ ಜೊತೆ ಬಾ ಗುರು' ಅಂದರೂ ಕೇಳಲೊಲ್ಲನು.

ಅಂತೂ ಅಂದುಕೊಂಡಂತೆ ಶ್ರೀ ಬೆಟ್ಟದ ಮೇಲೆ ನಮ್ಮ ದಾರಿ ತಪ್ಪಿಸಿದ. ರಾತ್ರಿ ಮೂರು ಘಂಟೆ.
ಕಾಲು ದಾರಿ ಬಿಟ್ಟು ಬಹಳಷ್ಟು ಅಡ್ಡ ದಾರಿಗಳನ್ನು ಬಳಸಿ ಬೆಟ್ಟದ ಮತ್ತೊಂದು ಮಗ್ಗುಲಿಗೆ
ಬಂದು ಅಸಹಾಯಕರಾಗಿ, ಒಂದು ಬೃಹತ್ ಬಂಡೆಯ ಮೇಲೆ ಬಿದ್ದಿದ್ದೆವು. ಒಂದಷ್ಟು ದೂರದಲ್ಲಿ
ಟಾರ್ಚ್ ಬೆಳಕುಗಳ ಮಿಣಿ ಮಿಣಿ ಓಡಾಟ ಮಾತ್ರ ಕಾಣಿಸುತ್ತಿತ್ತು.

' ಈಗಂತೂ ದಾರಿ ಹುಡ್ಕೋದಕ್ಕೆ ಆಗೋದಿಲ್ಲ. ಸುತ್ತೆಲ್ಲಾ ಬರಿ ಪೊದೆ ಇದೆ. ಬೆಳ್ಗೆ ವರೆಗೂ
ಇದೇ ಬಂಡೆಯ ಮೇಲೆ ಮಲಗಿ ಹರಟುವುದೆಂದು ಮಾತಾಯಿತು.'
ಬೆಳದಿಂಗಳ ಚಂದ್ರ ಸೊಗಸಾಗಿ ಕಾಣುತ್ತಿದ್ದ. ತಣ್ಣನೆಯ ಗಾಳಿ, ಕುತ್ತಿಗೆಯ ಮೇಲೆ
ಹರಿಯುತ್ತಿದ್ದ ಬೆವರು ಹನಿಗಳ ಮೂಲಕ ಸುಯ್ಯನೆ ಹಾದು ಹೋಗುವಾಗ ತಂಪೆನಿಸುತ್ತಿತ್ತು.
ದೂರದಲ್ಲಿ ಮಲಗಿದ್ದ ಬೆಂಗಳೂರು.. ಸುಖ ನಿದ್ರೆಯಲ್ಲಿತ್ತು. ಹೊತ್ತು ಮೀರುತ್ತಿತ್ತು.

> ಎಲ್ಲದನ್ನೂ, ಎಲ್ಲರನ್ನೂ ಬಿಟ್ಟು  ಒಮ್ಮೊಮ್ಮೆ ಕಳೆದುಹೋಗಬೇಕು.

'ನಾವು ಯಾವಾಗಲು..., ಗುರಿಯನ್ನು ಸಂಭ್ರಮಿಸಬಾರದು. ಅದನ್ನು ಮುಟ್ಟಲು ಹೋಗುವಾಗಿನ
ಜರ್ನಿ!! ಪ್ರಯಾಣ!! ವನ್ನು ಆನಂದಿಸಬೇಕು...' ಎಂಬುದು ಸೋತವರ ನುಡಿಮುತ್ತುಗಳಾಗಿದ್ದವು.
ಜನಗಳೆಲ್ಲಾ ಓಡಾಡಿ ನಿರ್ಮಿಸಿರುವ ದಾರಿಯಲ್ಲಿ ಹೋಗಿದ್ದರೆ, ಅದು ಸೀದಾ ಬೆಟ್ಟದ ತುದಿಗೆ
ಕರೆದುಕೊಂಡು ಹೋಗುತ್ತಿತ್ತು. ನಾವು ಬಹುಷಃ ಸೌದೆ ಕಡಿಯುವವರ ಕಳ್ಳ ಮಾರ್ಗಗಳಲ್ಲಿ
ಸಾಗಿ.., ಬಂಧಿಯಾಗಿದ್ದೆವು.

ಅತೀತ್ ಎಲ್ಲಿಂದಲೋ ಓಡಿಬಂದವನು ... "ಮ್ಯಾನ್ ಐ ಫೌಂಡ್ ದ ವೇ!! ಐ ಫೌಂಡ್ ದ ವೇ ..."
ಎಂದ. ದೂರದಲ್ಲಿದ್ದ ಚಾರಣಿಗರ ಗುಂಪಿನ ಬೆಳಕಿನ, ಜಾಡು ಹಿಡಿದು ಹೋಗಿ..., ಕಾಲುದಾರಿ
ಇದ್ದ ಸ್ಥಳವನ್ನು ಪತ್ತೆ ಮಾಡಿದ್ದ.
ಎದ್ದು ಹೊರಟೆವು. ಮುಳ್ಳಿನ ಪೊದೆಗಳ ಮೂಲಕ ಒಬ್ಬೊಬ್ಬರನ್ನೇ ದಾಟಿಸಬೇಕಾಯಿತು. ಬೆಳಕು
ಹರಿಯುವುದರ ಒಳಗಾಗಿ, ಬೆಟ್ಟದ ತುದಿಯನ್ನು ತಲುಪಬೇಕು. ಸೂರ್ಯೋದಯದ ಸಂಭ್ರಮವನ್ನು
ನೋಡಬೇಕು. ಕೇಕೆ ಹಾಕಬೇಕು. ಇದಕ್ಕೆಲ್ಲಾ ಎಲ್ಲಿಯೂ ಸ್ಟಾಪ್ ಕೊಡದ ರೀತಿಯಲ್ಲಿ ಸರಸರನೆ
ಬೆಟ್ಟ ಹತ್ತಬೇಕು.  ಒಬ್ಬರಿಗೊಬ್ಬರು ಆಸರೆಯಾಗುತ್ತಾ.. ಬೆಳಕು ಬಿಟ್ಟುಕೊಂಡು
ಬೆಟ್ಟವನ್ನು ಏರಿದೆವು.

ಸ್ಕಂದಗಿರಿ ಮೇಲೆ ಅಕ್ಷರಷಃ ಸಾವಿರದಷ್ಟು ಚಾರಣಿಗರು. 'ಅಯ್ಯಯ್ಯೋ!! ಇಷ್ಟೋಂದ್ ಜನ
ಇದಾರೆ ಇಲ್ಲಿ. ಪೋಲೀಸ್ರು ಅಷ್ಟೋತ್ ಪಂಚಾಯ್ತಿ ಮಾಡುದ್ರು. ಅವರು ಪ್ರಶ್ನೆ ಮಾಡಿದ
ವರಸೆಗೆ, ನಾವ್ ಯಾವ್ದೋ ಕಾನೂನು ಬಾಹಿರ ಕೆಲ್ಸಾನೆ ಮಾಡ್ತಿದೀವಿ
ಅನ್ನಿಸಿಬಿಟ್ಟಿತ್ತು'.

ಸರಿಯಾಗಿ ಬೆಟ್ಟದ ತುದಿ ತಲುಪಿದಾಗ ನೀಲಿ ಬಣ್ಣದ ಬೆಳಕು ಮೆಲ್ಲಗೆ ಪಸರಿಸುತ್ತಿತ್ತು.
ಚುಕ್ಕಿಗಳು ಒಂದೊಂದೇ ಮಾಯವಾಗುತ್ತಿದ್ದವು. ನಿಂತವರನ್ನು!! ದಬ್ಬಿ ಬೀಳಿಸುವಷ್ಟರ
ಮಟ್ಟಿಗೆ ಗಾಳಿ ಬುರ್ರೆಂದು ಬೋರ್ಗರೆಯುತ್ತಿತ್ತು.
ಟೈಟಾನಿಕ್ ಸ್ಟೈಲಲ್ಲಿ ಕೈ ಎತ್ತಿ ನಿಂತೆವು. ಗೆಲುವಿನ ಕೇಕೆ; ಹೊಗೆ ರೀತಿಯಲ್ಲಿ
ಮೋಡಗಳು, ಕಾಲಿನ ಅಡಿಯಲ್ಲಿ. ನಮಗೆ ಅನುಕೂಲಕರವಾಗುವಷ್ಟು ಜಾಗವನ್ನು ಮಾಡಿಕೊಂಡು...
ಗುಂಪಾಗಿ ಕುಳಿತೆವು.

ಸೂರ್ಯ ಬಂದ. ಬೆಂಕಿ ಕಡ್ಡಿ ತಗೋಂಡು ಆಗಸದ ಚಾವಣಿಗೆ ಬೆಂಕಿ ಹಚ್ಚುವಂತೆ ಬಂದ. ಅವನ
ಸ್ಪರ್ಷದಿಂದ ಪೂರ್ವ ದಿಕ್ಕೆಲ್ಲಾ ದಗದಗನೆ ಹೊತ್ತಿ ಉರಿಯುವಂತೆ ಕೆಂಪಾಯ್ತು.  ಆ
ಕ್ಷಣಗಳನ್ನು ಅನುಭವಿಸಬೇಕು ಅಷ್ಟೇ.. ನಮ್ಮ ದಣಿವೆಲ್ಲಾ ಕರಗಿ ಹೋಗುವ ಸಾರ್ಥಕದ ಕ್ಷಣವೇ
ಸೂರ್ಯೋದಯ.

ನಡು ಜಾರಿದ, ತಡ ರಾತ್ರಿಯಲಿ.        
ಕೊನೆ ಮುರಿದ, ಬೆಣ್ಣೆಶಶಿ ಬೆಳ್ಕಿನಲಿ.        
ಕಾತುರವಿತ್ತು ಕಾಣಬೇಕು,        
ಕಾಲಡಿಯ ಮೋಡವನೆತ್ತಿ.        
       
ಹತ್ತಿ; ಇಳಿದು; ತೇಗಿ; ಅಂತೂ        
ತಲುಪಿ ಸ್ಕಂದಗಿರಿಯ ನೆತ್ತಿ.          

ಆಗಸದ ಚಾವಣಿಗೆ ಬೆಂಕಿಯ ಹಚ್ಚಿ,        
ಇಬ್ಬನಿಯ  ಕರಗಿಸುತಲಿ,        
ಪೋಲಿದರ್ಶನ ಕೊಡುತ ರವಿ ಬಂದ        
ಪಾರದರ್ಶಕ ರವಿಕೆಯಂತಿದ್ದ,        
ತಿಳಿ ನೀಲಿ ಮೋಡದಡಿಯಿಂದ.  
"ಹೇ!! ಮ್ಯಾನ್!! ಸನ್ ಈಸ್ ಲುಕಿಂಗ್ ಅಟ್ ಅಜ್!! " ಅತೀತ್ ಚಿಕ್ಕ ಹುಡುಗನಂತೆ
ಅಚ್ಚರಿಯಿಂದ ಹೇಳಿದ್ದು ಇನ್ನೂ ಗುಯ್ ಗುಡುತ್ತಿದೆ.

Comments

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು.

ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ.

ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ.
ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು.

'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು.

ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ...
'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ '
ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು.

' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು.

' ಲೋ!! ಇವ್ರು ಆಲ್ಬಂ ಕೊ…

You are Beautiful ; ಅಪ್ರತಿಮ ಸುಂದರಿಗೆ ಹೀಗೊಂದು ಕಾಂಪ್ಲಿಮೆಂಟು

ಮನಸ್ಸು ಎರಡನೇ ಸಾರಿ ಎಚ್ಚರಿಕೆ ಕೊಡ್ತು : ‘ ಬೇಡ ಮಗ!! ಕೆರ ಕಳ್ಕೊಂಡು ಹೊಡಿತಾಳೆ. ’


ನೋಡೋಣ ಬಿಡು. ಯಾರಿಗಾದ್ರೂ ಏನನ್ನಾದ್ರೂ ಹೇಳಬೇಕು ಅಂತಿದ್ರೆ, ಹೇಳಿಬಿಡಬೇಕು. ಮುಂದೆ ಒಂದಿನ ವಿಷಾದ ಇರಬಾರದು. ನಾನೇನು ಅವಳಿಗೆ ಐ ಲವ್ ಯು ಅಂತ ಹೇಳ್ತಾ ಇಲ್ವಲ್ಲಾ. ಒಳ್ಳೇದು ಕೆಟ್ಟದ್ದು ಅಂತ ನೋಡ್ತಾ ಇದ್ರೆ… ಸೋತುಪುರುಕ ಆಗಿ ಬಿಡ್ತೇನೆ’

ಹೇಳೋದಾದರೂ ಏನು…? ಏನಿಲ್ಲ, ‘ ಯು ಆರ್ ಬ್ಯೂಟಿಫುಲ್’ ಅನ್ನೋದು. ಅದಕ್ಕಿಂತ ಹೆಚ್ಚು-ಕಮ್ಮಿ ಏನ್ ಹೇಳೋದಕ್ಕೆ ಸಾಧ್ಯ..?

ತುಂಬಾ ಸುಂದರವಾಗಿ ಕಾಣ್ತಾಳೆ. ಯಾವತ್ತೋ ಒಂದಿನ ಎದುರಿಗೆ ಕಾಣಿಸಿಕೊಂಡು, ಸುಯ್ಯಂತ ಹೊರಟು ಹೋಗಿದ್ರೆ, ‘ಅಬ್ಬಾ!! ಏನ್ ಹುಡ್ಗಿ’ ಅಂತ ಅಂದು ಸುಮ್ಮನಾಗಿ ಬಿಡಬಹುದಿತ್ತು. ತೆರೆದ ಬಾಯಿ ಮುಚ್ಚೊದರೊಳಗಾಗಿ ಅವಳ ನೆನಪುಗಳು ಕಲೆಯುತ್ತಿದ್ದವೇನೊ. ಆದರೆ ಅವಳು ದಿನಾ ನಾಲಕ್ಕು ವರೆಗೆ ಸರಿಯಾಗಿ, ಕೆಫೆಟೇರಿಯಾದಲ್ಲಿ ಕಾಣಿಸಿಕೊಳ್ತಾಳೆ. ಅಲ್ಲಿ ಇಬ್ಬರು ಡುಮ್ಮನೆ ಬಾಡಿ-ಗಾರ್ಡ್ ಗಳು ಅವಳಿಗೋಸ್ಕರ ಕಾಯ್ತಾ ಇರ್ತಾರೆ. ಆ ಅಂಥವಳು ಕಾಫಿ ಕುಡಿಯೋವರೆಗೂ, ‘ಒನ್ ಓ ಕ್ಲಾಕ್ ‘ ದಿಕ್ಕಿಗೆ ಚೇರ್ ಜೋಡಿಸಿಕೊಂಡು ಕೂತು, ಅವಳನ್ನ ನೋಡ್ತೇನೆ. ಖುಷಿ ಅಂತೂ ಆಗತ್ತೆ. ತಾನು ಇಷ್ಟು ಸುಂದರವಾಗಿರೋದು ಗೊತ್ತಿರಬಹುದು. ಆದರೆ ಅದನ್ನ, ಅವಳಿಗೆ ಅಷ್ಟೇ ಸುಂದರವಾಗಿ ಯಾರೂ ಹೇಳಿರಬಾರದು. ಹಂಗೆ ಹೇಳಬೇಕು. ಹೇಳಲಿಲ್ಲ ಅಂದ್ರೆ!! ಹೇಳಬಹುದಿತ್ತಲ್ಲಾ ಅನ್ನೋ ಗುಂಗು ಇದ್ದುಬಿಡತ್ತೆ.

ಸರಿ, ಹೇಳೋದಾದ್ರೂ ಏನು!! ಮತ್ತದ…

ಒ೦ದು ಪ್ರೀತಿಯ ಕಥೆ

“ ಅಮ್ಮಾ!! ಅವಳ ಹುಟ್ಟುಹಬ್ಬಕ್ಕಾದರೆ ಪಾಯಸ ಮಾಡ್ತೀಯ. ಆದರೆ ಪ್ರತಿ ಸಾರಿ ನನ್ನ
ಹುಟ್ಟುಹಬ್ಬಕ್ಕಾದರೆ ಯಾಕಮ್ಮಾ… ? ಏನೂ ಮಾಡಲ್ಲ. ?. ನೋಡು!! ಈ ಸಾರಿ ನನ್ನ
ಹುಟ್ಟುಹಬ್ಬಕ್ಕೆ ಹೋಳಿಗೆ-ಊಟ ಮಾಡ್ಬೇಕು. ತಿಳೀತಾ. !!”.

“ ಸಾರಿ!! ಕಂದ. ತಪ್ಪಾಯ್ತು. ನಿನ್ನಾಣೆ ಮರೆಯೊಲ್ಲ. ಈ ಬಾರಿ ನಿನ್ನ ಹುಟ್ಟುಹಬ್ಬದ ದಿನ
ಹೋಳಿಗೆ ಊಟ ಮಾಡೋಣ, ಸರೀನಾ. ಅಡಿಕೆ ಕೊಯ್ಲು ಇರೋ ಟೈಮಲ್ಲೇ ನಿನ್ನ ಹುಟ್ಟುಹಬ್ಬ
ಬರುತ್ತಲ್ಲೋ ಮಗನೆ. ನಮ್ಮ ಕೆಲಸಗಳ ಮಧ್ಯೆ ಅದು ಬಂದದ್ದೂ; ಹೋದದ್ದು ಗೊತ್ತ್ ಇಲ್ಲ.
ಆದ್ರೆ ಈ ಸಾರಿ ಎಷ್ಟೇ. ಕಷ್ಟ ಆದರು. ಹೋಳಿಗೆ ಊಟ ಮಾಡೊಣ. ”

‘ ಆಯ್ತಮ್ಮಾ. ಸರಿ!! ’ ಎಂದನು ಚಿರಂಜೀವಿ. ಹುಟ್ಟುಹಬ್ಬಕ್ಕೆ ಹೋಳಿಗೆ ಅಡಿಗೆ ಮಾಡಬಾರದು
ಅಂತಲ್ಲ. ಆದರೆ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವಂತಹ ನಾಜೂಕು ಜೀವನ ಪದ್ಧತಿಯನ್ನು
ಅವರು ರೂಢಿಸಿಕೊಂಡಿರಲಿಲ್ಲ.

October 7, 2010 ‘ ಹೋಳಿಗೆ ಬೇಕು ಅಂದಿದ್ದ ಮಗು, ಇಷ್ಟು ಹೊತ್ತಾದರು ಊಟಕ್ಕೆ
ಯಾಕೆ ಬರಲಿಲ್ಲ.’ ಅಮ್ಮ ಹೋಳಿಗೆ ಅಡುಗೆ ಮಾಡಿಟ್ಟು ಮಗನ ಬರುವಿಗೆ ಕಾಯುತ್ತಾ,
ಗೊಣಗುತ್ತಾ ಕುಳಿತಿದ್ದಾಳೆ. ರಾತ್ರಿ ಹೊತ್ತು ಗೆಳೆಯರ ಮನೆಗೆ ಹೋಗಿ, ಹರಟುತ್ತಾ
ಕೂರುವುದು ಅವನ ಅಭ್ಯಾಸ. ಬಾಗಿಲ ಕಡೆಗೆ ನೋಡುತ್ತಾ “ ಪಾಪ ಮಗು!! ಹಗಲೆಲ್ಲಾ ಮನೇಲಿ,
ಒಬ್ಬನೇ ಕೂತು ಸಾಕಾಗಿರುತ್ತೆ. ಆಸರ-ಬೇಸರ ಕಳೆಯಲು ರಾತ್ರಿ ಹೊತ್ತು, ಒಂದಿಷ್ಟು
ಮಾತಾಡಿಕೊಂಡು ಬರುತ್ತೆ. ಸ್ಕೂಲಿಗೆ ಹೋಗುವ ಹುಡುಗರು ರಾತ್ರಿ ಹೊತ್ತು ಬಿಟ್…

ಒಂದು ಅಪಘಾತದ ಸುತ್ತ

ಇಂಜಿನಿಯರಿಂಗ್ ಅಂತಿಮ ವರ್ಷ. ಶೈಲು, ರವಿ ಹೊರತಾಗಿ ನಮ್ಮಲ್ಲಿ( ಗುಂಪಿನ ಹೆಸರು ಬಿ ಬಿ ಹುಡುಗರು) ಉಳಿದೋರಿಗೆಲ್ಲಾ ಕೆಲಸ ಸಿಕ್ಕಿತ್ತು. ಶೈಲುಗೆ, ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿ ಗೊತ್ತಿತ್ತು. ಸೋ ಅದರ ಬಗ್ಗೆ ವಿಷಾಧ ಇರಲಿಲ್ಲ. ಇನ್ನು ರವಿ:

ಒಂದು ಕೆಲಸದ ಅವಶ್ಯಕತೆ, ಎಲ್ಲರಿಗಿಂತಲು ಅವನಿಗೆ ಜಾಸ್ತಿ ಇತ್ತು. ಆ ಅವಶ್ಯಕತೆ ಅವನಿಗೆ ಮಾತ್ರ ಅಲ್ಲ, ಖುಷ್ ಖುಷಿಯಾಗಿದ್ದ ನಮ್ಮೆಲ್ಲರಿಗೂ ಇತ್ತು. ಸುಮಾರು ಕಂಪನಿಗಳಿಗೆ ಎಡತಾಕಿದರೂ, ಒಂದಕ್ಕೂ ಆಯ್ಕೆ ಆಗಲಿಲ್ಲ. ಅಭಿ, ಜೋಬಿ, ಶೇಕ್ ನಂತ ಗಮಾಡ್ ಗಳಿಗೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಸಿಕ್ಕಿರೋವಾಗ, ಧೈತ್ಯ ಪ್ರತಿಭೆ ‘ರವಿ’ ಗೆಕೆಲಸ ಸಿಗದೇ ಇದ್ದದ್ದು, ನಮಗೆಲ್ಲಾ ಖೇದಕರ ಅನ್ನಿಸುತ್ತಿತ್ತು.

ರವಿಗೆ ಕೆಲಸ ಸಿಗದೇ ಇದ್ದದ್ದಕ್ಕೆ, ಕಾರಣಗಳೂ ಇದ್ದವು. ಲಕ್ ಇರಲಿಲ್ಲ, ಇಂಗ್ಲೀಷ್ ಸಮಸ್ಯೆ. ಕೋಡಿಂಗ್ ಬಗ್ಗೆ ಆಸಕ್ತಿ ಇಲ್ಲದೇ ಇರೋದು. ಆದರೂ ಜೀವನೋಪಾಯಕ್ಕೆ ಒಂದು ಕೆಲಸದ ಅನಿವಾರ್ಯತೆ ಇತ್ತು. ಪ್ರತಿ ಕಂಪನಿ ಮಿಸ್ ಆದಾಗಲೂ. ‘ ನಿನಗೋಸ್ಕರ ಯಾವುದೋ ದೊಡ್ಡದು, ಕಾಯ್ತಾ ಇರಬೇಕು ಬಿಡು, ಮಗ ’ ಅಂತ ನಾವು, ಸಮಾಧಾನ ಮಾಡೋದಕ್ಕೆ ಹೋದರೆ, ‘ನನಗೆ, ನನ್ನ ಬಗ್ಗೆ ಬೇಜಾರಿಲ್ಲ ಮಗ. ಆದರೆ ಒಂದು ಒಳ್ಳೆ ಕಂಪನಿ, ಗ್ಲೋಬಲ್ ಟಾಪ್ ಟೆನ್ ಒಳಗೆ ಬರೋದನ್ನ, ಜಸ್ಟು ಮಿಸ್ ಮಾಡಿಕೊಂಡು ಬಿಡ್ತು. ‘ಎನ್ನುವನು. ‘ಎಲಾ ಬಡ್ಡಿಮಗನೆ ’ ಅಂದುಕೊಂಡುಸುಮ್ಮನಾಗುತ್ತಿದ್ದೆವು.

ಇಂತಹ ಸಂದಿಗ್ಧ, ಸುಸಂದರ್ಭದಲ್ಲಿ ಬಿ ಇ …

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು.

ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ.

ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ.

ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿಗರು…

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು.
ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು.
ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!!
ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ.
ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ.
'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ.

' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ.

'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು.

'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ.

ಇಬ್ಬರೂ ಎದ್ದು ಹೊರಟರು.

ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು
' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' .

'ಯಾಕೆ..? ನಾನೇನ್ ಮಾಡಿದೆ..?' ಎಂದ.

'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್ಕೆ!!. ?…

​ಶಿವಮೊಗ್ಗ ಸುತ್ತಮುತ್ತ ​ ( ದಿನ -1)

ರವಿ!! ರೂಪಿ!! ಮತ್ತು ನಾನು(ಚೇತನ್) ಚಳಿಗಾಲದ ಮಲೆನಾಡಿನ ಹಲ ತುಣುಕುಗಳ ಆಸ್ವಾದನೆಗೆಂದು ಹೊರಟವರು. ಮೂರು ದಿನಗಳ ಟ್ರಿಪ್ಪು. ಮಿಜಾಲ್ಟಿಗೆ ಬಂದಿರೋ ಗಂಡು ಮಕ್ಳದೆಲ್ಲಾ ಒಂದೇ ಸಮ ಮದ್ವೆಗಳು ನಡೆಯುತ್ತಿರುವುದರಿಂದ, ಟೆಂಪೋ ಟ್ರಾವೆಲ್ಸ್ ನಂಥ ಗಾಡಿಗಳಲ್ಲಿ ತಿರುಗುತ್ತಿದ್ದ ನಮ್ಮ ದೊಡ್ಡ ಗುಂಪು, ವ್ಯಾಗನಾರ್ ಗೂ ಸಾಕೆನಿಸುತ್ತಲಿದೆ.
ಪ್ರವಾಸದ ಸ್ಟಾರ್ಟಿಂಗ್ ಪಾಯಿಂಟ್ ಹೊನ್ನವಿಲೆ. ಅಂದರೆ ನನ್ನೂರು.  ಬಂದಿದ್ದ ಗೆಳೆಯರ ಅತಿಥಿ ಸತ್ಕಾರ ಮಾಡಿ, ಬೇಗಬೇಗ ಕಾರು ಹತ್ತಿಸುವ ಅನಿವಾರ್ಯತೆ ಇತ್ತು. ಯಾಕಂದ್ರೆ ಎಲ್ಲರ ಮದುವೆ ಮಾಡಿಸಿಯೇ ತೀರಬೇಕೆಂದು ಹಠ ತೊಟ್ಟಿರುವ ನಾವುಗಳು, ಪ್ರತಿ ಬಾರಿ ಒಬ್ಬೊಬ್ಬರ ಮನೆಗೆ ಹೋದಾಗಲೂ.. ಮದುವೆಯ ಬಗೆಗಿನ ಸಕಾರಣಗಳನ್ನು ವಿವರಿಸಿ ಪೋಷಕರ ಬ್ರೇನ್ ವಾಷ್ ಮಾಡುವ ಯಾನೆ ಫಿಟಿಂಗ್ ಇಟ್ಟು ಬರುವ ಕೆಲಸಗಳನ್ನು ಸಾಂಘಿಕವಾಗಿ ನಡೆಸುತ್ತಲಿದ್ದೆವು. ಈ ಬಾರಿ ಬಲಿ ಕಾ ಬಕ್ರ ನಾನು.

ಸಕ್ರೆಬೈಲು!! ಪಸ್ಟು ವಿಸಿಟ್ ಕೊಟ್ಟ ಸ್ಥಳ ಸಕ್ರೆಬೈಲು.  ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಆನೆ ಸವಾರಿ, ಆನೆ ಸೆಲ್ಫಿ, ಸೊಂಡಿಲು ಆಶೀರ್ವಾದ ಎಲ್ಲವೂ ಇದೆ. ರಜಾ ದಿನವಾದ್ದರಿಂದ ಆನೆಗಳನ್ನ ನೋಡೋದಕ್ಕೆ ತುಂಬಾ ಜನ ಮುತ್ತಿಕೊಂಡಿದ್ದರು. ಒಂದೊಂದು ಸೊಂಡಿಲ ಆಶಿರ್ವಾದಕ್ಕೂ ಹತ್ತು ರೂಪಾಯಿ ನೋಟು ಸೊಂಡಿಲ ಸಂದಿಗೆ ಸೇರಿಸುತ್ತಿದ್ದುದು ನೋಡಲು ಮಜವಾಗಿತ್ತು. ನಾವು, ಸೊಂಡಿಲಿನ ಏಟಿಗೂ, ಕೋರೆ ಹಲ್ಲಿನ ಸ್ಪರ್ಶಕ್ಕಾಗಿಯೂ …

ತಡಿಯ೦ಡಮೋಳ್-ಗೆ ಸಾಗಸಮಯ ಯಾತ್ರೆ!!!

ತಡಿಯಂಡಮೋಳ್ ಮಡಿಕೇರಿಯ ಅತಿ ಎತ್ತರದ ಶಿಖರ. ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚಗೆ
ಮಲಗುವುದು ಬಿಟ್ಟು, ತಡಿಯಂಡಮೋಳ್ ಬೆಟ್ಟವನ್ನು ಹತ್ತಿ, ಟೆಂಟ್ ಹಾಕಿ, ಬೆಂಕಿ
ಹಚ್ಚಿಟ್ಟು, ರಾತ್ರಿಯೆಲ್ಲಾ ತೂಕಡಿಸಿದೆವು. ಈ ಸೌಭಾಗ್ಯಕ್ಕೆ ಅಷ್ಟು ದೂರ
ಹೋಗಬೇಕಿತ್ತಾ. ? ಗೊತ್ತಿಲ್ಲ.

ನಾವು ಏಳು ಜನ ಆಪ್ತಮಿತ್ರರು ' ಅಬಿ-ಜಾಬಿ-ರವಿ-ರೂಪಿ-ಗಜ-ಷೇಕು ಮತ್ತು ನಾನು '
ಚಾರಣಕ್ಕೆಂದು ಹೊರಟವರು. ಇವರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವ ದರ್ಶನವನ್ನು ಮಾಡಿಸುವುದು,
ಸ್ಥಳ ಪುರಾಣವನ್ನು ವಿವರಿಸುವುದು, ಮುಖಸ್ತುತಿ ಇತ್ಯಾದಿ ಇತ್ಯಾದಿಗಳನ್ನು ಮಾಡುವುದು ಈ
ಬರಹದ ಉದ್ದೇಶವಲ್ಲ. ಮುಂದುವರೆಯೋಣ.

ಒಂದು ಸುಂದರ ಸಂಜೆಯಂದು ಬೆಂಗಳೂರಿನಿಂದ ಒಟ್ಟಾಗಿ ಹೊರಟವರು, ಮಧ್ಯ-ರಾತ್ರಿ ಎರಡರ
ಹೊತ್ತಿಗೆ ಮೈಸೂರು ಮಾರ್ಗವಾಗಿ ಕುಶಾಲನಗರ ತಲುಪಿದೆವು. ಉಳಿದಿದ್ದ ಅಲ್ಪ ರಾತ್ರಿಯನ್ನು
ಜಾಬಿಯ ಮನೆಯಲ್ಲಿ ಕಳೆದು, ಬೆಳಗಿನ ಜಾವ ಚಾರಣಕ್ಕೆಂದು ಸಿದ್ಧರಾಗಿ ನಿಂತೆವು. ನಮ್ಮಂತಹ
ಅತಿಥಿಗಳ ಸೇವೆ ಮಾಡುವ ಪುಣ್ಯ ಜಾಬಿಗೆ ಲಭಿಸಿತ್ತು. ಆ ಪುಣ್ಯಕಾರ್ಯದಿಂದ ಜಾಬಿಯನ್ನು
ವಂಚಿತನನ್ನಾಗಿ ಮಾಡಬಾರದೆಂಬ ಉದ್ದೇಶದಿಂದ, ಅವನ ಅತಿಥಿ ಸತ್ಕಾರ್ಯವನ್ನೂ
ಸ್ವೀಕರಿಸಿದೆವು. ನಂತರ ಒಂದು ಕಾರು ಮತ್ತು ಒಂದು ಬೈಕಿನಲ್ಲಿ ನಮ್ಮ ಪ್ರಯಾಣ
ಮಡಿಕೇರಿಯತ್ತ ಸಾಗಿತು. ಪರ್ವತ ನಗರ ಮಡಿಕೇರಿಯನ್ನು ಸುತ್ತಿಕೊಂಡು ನಾಪೋಕ್ಲು ಎಂಬ ಊರಿನ
ಮಾರ್ಗವಾಗಿ ಕಕ್ಕಬ್ಬೆಯನ್ನು ತಲುಪಿದಾಗ ಮಧ್ಯಾಹ್ನ 12.

ಕರ್ನಾಟಕ…

ಡ್ರೈವಿಂಗ್ ಸ್ಕೂಲ್

ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಂಡ ಮೇಲೆ ಡ್ರೈವಿಂಗ್ ಸ್ಕೂಲಿಗೆ ಸೇರಿದೆ.

ಡ್ರೈವಿಂಗ್ ಹೇಳಿಕೊಡುವವನು ಕೊಂಚ ವಯಸ್ಸಾದ ವ್ಯಕ್ತಿ.
ಡ್ರೈವಿಂಗ್ ಜೊತೆಗೆ!! ತನ್ನ ಡ್ರೈವಿಂಗ್ ಜೀವನದ ಸಾಹಸಗಥೆಗಳನ್ನೆಲ್ಲಾ ಹೇಳುತ್ತಿದ್ದರು.
ಆ ಸಾಹಸಗಾಥೆಗಳ ಸಾಲಿನಲ್ಲಿ ..
' ನೈಜವಾಗಿ ಕಂಡಂತಹಾ ಅಪಘಾತಗಳ ಭಯಾನಕ ವರ್ಣನೆಗಳೂ' ಸೇರಿರುತ್ತಿದ್ದವು.

"ಹೈವೇನಲ್ಲಿ ನೂರ್ ಕಿಲೋಮೀಟರು ಸ್ಪೀಡಲ್ಲಿ ಗಾಡಿ ಬರ್ತಾ ಇದೆ.
ಇದಕ್ಕಿದ್ದಂಗೆ ಫ್ರೆಂಟ್ ದು ರೈಟ್ ಟೈರು ಬರ್ಸ್ಟ್ ಆಗಿದೆ.
ಸ್ಟೇರಿಂಗು ಅದೇ ಫೋರ್ಸಲ್ಲಿ ಕ್ಲಾಕ್ ವೈಸ್ ತಿರುಗಿ ಬಿಟೈತೆ.
ಸ್ಟೇರಿಂಗ್ ಒಳಗೆ ಕೈ ಜಾರಿದ್ದರಿಂದ, ಕೈ ಲಟಕ್ ಅಂತ ಪೀಸಾಗಿದೆ.
ಗಾಡಿ ಸೀದಾ ಹೋಗಿ!! ಡಿವೈಡರ್ ಗೆ ಬಡಿದ ತಕ್ಷಣ...,
ಮಂಡಿ ಕೆಳಗೆ ಕಾಲು ಇದಿಯಲ್ಲಾ.. ಅವು ಹಂಗೇ ಪೀಸ್ ಪೀಸ್ "
ಎಲ್ಲದಕ್ಕೂ ಹೂ ಗುಡುತ್ತಿದ್ದವನು ...

" ಏನ್ ಸಾರ್ ಬರಿ ಕೈ - ಕಾಲು ಮುರ್ದೋದ ಕಥೆಗಳೇ ಹೇಳ್ತೀರಾ .. " ಅಂದ್ರೆ

ನನ್ನ ಪ್ರಶ್ನೆಯನ್ನು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡು...

" ಬರಿ ಕೈ ಕಾಲು ಮುರ್ದಿರೋದಲ್ಲಾ,
ನನ್ನ ಸರ್ವೀಸ್ ನಲ್ಲಿ, ತಲೆಗಳೇ ಜಜ್ಜಿ ಹೋಗಿರೋ ಘಟನೆಗಳನ್ನ ನೋಡಿದ್ದೇನೆ.
ಹೋಗ್ತಾ ಹೋಗ್ತಾ.. ಸ್ಟೇರಿಂಗ್ ರಾಡು ಕಟ್ಟಾಗಿ..,
ಕಂಟ್ರೋಲ್ ಸಿಗದೇ ಪಲ್ಟಿ ಹೊಡೆದದ್ದೂ ಇವೆ, ಗಾಡಿಗಳು." ಎಂದು ಶುರುವಚ್ಚಿಕೊಂಡರು.

" ಡ್ರೈವಿಂಗ್ ತುಂಬಾ ಕೆಟ್ಟ ಪ್ರೊಫೆಷ…

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.) 


' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. '

ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ. 

ಬಹುಷಃ ಹಳೇ ಸಿನಿಮಾಗಳಲ್ಲಿ ನೋಡಿ…