ಶ್ರೀಸಾಮಾನ್ಯನ Job Securityಶಿವಮೊಗ್ಗದ ಗಾಂಧಿ ಪಾರ್ಕ್ ದ್ವಾರದ ಎದುರಿಗೆ ಒಂದು ಟೀ ಅಂಗಡಿ. ಗಾಂಧಿ ಪಾರ್ಕಿಗೆ ಐದಾರು ದ್ವಾರಗಳಿವೆ. ನಾ ಹೇಳೋದಕ್ಕೆ ಹೊರಟಿರೋ ದ್ವಾರ ಇರೋದು, ಬಸವೇಶ್ವರ ಸರ್ಕಲ್ ಕಡೆಗೆ ಇರುವಂತದ್ದು. ಟೀ ಅಂಗಡಿ ಅಂದರೆ, ಅದೊಂದು ಸರ್ಕಲ್-ಗಳಲ್ಲಿ ಇರುವ ನಂದಿನಿ ಮಿಲ್ಕ್ ಪಾರ್ಲರ್ ನಂತಹ ಪೆಟ್ಟಿಗೆ ಅಂಗಡಿ. ಶಾಲಾ ದಿನಗಳಿಂದಲೂ ಆ ಟೀ ಅಂಗಡಿಯ ಅಸ್ತಿತ್ವದ ಪರಿಚಯವಿದ್ದಾಗಿಯೂ, ಪಿ-ಯು-ಸಿ ಗೆ ಬಂದ ಮೇಲೆ ಟೀ ರುಚಿ ನೋಡಿದ್ದು.

ಒಂದು ರೂಪಾಯಿಯ ಚೋಟಾ ಟೀ ಕುಡಿದು, ಸೆಕೆಂಡ್ ಶೋ ಸಿನಿಮಾಗೆ ಹೋಗುತ್ತಿದ್ದುದು. ಮಲ್ಲಿಕಣ್ಣ ಅಂತ ಅವರ ಹೆಸರು. ಅವರು ಯಾವಾಗಲೂ ಅಂಗಡಿಯೆಂಬ ಡಬ್ಬಿಯೊಳಗೆ ಬಂಧಿತರಾಗಿರುತ್ತಾರೆ. ಸ್ವತಂತ್ರ ಮಲ್ಲಿಕಣ್ಣನನ್ನು ನಾನು ನೋಡಿಯೇ ಇರಲಿಲ್ಲ. ಹೊರ ನಿಂತು, ಟೀ ಪಡೆದು, ಕುಡಿದು ದುಡ್ಡು ಕೊಡುತ್ತಿದ್ದುದು ಅಶ್ಟೇ. 

ಪಿ-ಯು-ಸಿ ಮುಗಿದ ಮೇಲೆ ಓದಿಗಾಗಿ ಮೈಸೂರು, ನಂತರ ಬೆಂಗಳೂರು ಸೇರಿದರೂ ಕೂಡ, ಊರಿಗೆ ಬಂದಾಗ, ಪೇಟೆಯ ಕಡೆಗೆ ಹೋದಾಗಲೆಲ್ಲಾ ಒಂದು ಚೋಟಾ ಟೀ ಏರಿಸುವುದು ಅಭ್ಯಾಸ. ಹತ್ತು ವರುಷಗಳಿಗಿಂತಲೂ ಪುರಾತನವಾದ ಕೊಡುಕೊಳ್ಳುವಿಕೆ.

ಸುಮಾರು ಮೂರ್ನಾಲ್ಕು ತಿಂಗಳಿಂದ ಈಚೆಗೆ, ಪೇಟೆಯ ಕಡೆಗೆ ಹೋದಾಗ ಮಲ್ಲಿಕಣ್ಣನ ಟೀ ಅಂಗಡಿ ನಾಪತ್ತೆಯಾಗಿತ್ತು. ಒಡೆದು ಹಾಕಿದ್ದರು. ' ಅಯ್ಯಯ್ಯೋ ' ಅನಿಸ್ತು. ಇದಾದ ಮೇಲೆ ಮೂರ್ನಾಲ್ಕು ಬಾರಿ ಆ ರಸ್ತೆಯ ಕಡೆಗೆ ಬೈಕಲ್ಲಿ ಹೋದಾಗಲೂ, ಸ್ವಲ್ಪ ಸ್ಲೋ ಮಾಡಿ ಆಚೀಚೆ ನೋಡುತ್ತಿದ್ದೆ. ಮೊನ್ನೆ ಶಿವಮೊಗ್ಗ ಹೋದಾಗ, ಆ ರಸ್ತೆಯಲ್ಲಿ ಸರ್ರನೆ ಹೋಗುತ್ತಿದ್ದೆ. ಟೀ ಅಂಗಡಿ ಇದ್ದ ಖಾಲಿ ಜಾಗದಲ್ಲಿ ಮಲ್ಲಿಕಣ್ಣ ನಿಂತಿದ್ದು ಕಾಣಿಸಿತು. ಅದಾಗಲೇ ಮುಂದೆ ಹೋಗಿದ್ದವನು, ಬೈಕು ತಿರುಗಿಸಿಕೊಂಡು ಬಂದೆ.

ಒಂದು ಸಣ್ಣ ಪ್ಲಾಸ್ಟಿಕ್ ಖುರ್ಚಿಯ ಮೇಲೊಂದು ಗುಟ್ಕಾ ಬ್ಯಾಗು. ಅದರಲ್ಲಿ ಪ್ಲಾಸ್ಟಿಕ್ ಲೋಟಗಳು. ಅವರ ಕೈಲೊಂದು ಪುಟ್ಟದಾದ ಟೀ ಪ್ಲಾಸ್ಕು.

'ಅರಾಮ, ಅಣ' ಅಂದೆ.

'ಹೂನಪ್ಪ, ಅರಾಮು' ಅಂದರು.

ಪ್ರತಿ ಸಾರಿ ಟೀ ಕುಡಿಯೋದಕ್ಕೆ ಹೋದಾಗಲೂ ಕೊಂಚ ಕುಶಲೋಪರಿ ನಡೆಯುತ್ತಿತ್ತು. ನನಗೆ ಏನ್ ಕೇಳಬೇಕು ಗೊತ್ತಾಗಲಿಲ್ಲ. ಒಂದು ಟೀ ಕೇಳ್ದೆ. ಪ್ಲಾಸ್ಕಿನ ಮುಚ್ಚಳ ತೆಗೆದು, ಟೀ ಸುರುವಿ ಕೊಟ್ಟರು.

' ಏನಾಯ್ತು ಅಂಗಡೀಗೆ..? ತಿಂಗಳಿಂದ ಕಾಣಿಸ್ತಿಲ್ಲ. ' ಅಂದೆ

'ಹೇಯ್, ತಿಂಗಳಲ್ವೋ... ' ನಗುತ್ತಾ ಹೇಳಿದರು 'ಅಂಗಡಿ ಹೊಡೆದು ಹಾಕಿ, ಮೂರು ತಿಂಗಳು ಮೇಲಾಯ್ತು. ಅದೇನೋ ಕಾಂಕ್ರೀಟ್ ಡ್ರೈನೇಜ್ ಮಾಡ್ತಾರಂತೆ. ಮೂರು ತಿಂಗಳು ಆಯ್ತು ನೋಡು. ಕೆಲ್ಸಾನೆ ಶುರು ಮಾಡಿಲ್ಲ.
ಅದೆಲ್ಲಾ ಆದ ಮೇಲೆ, ಮತ್ತೆ ಅಂಗಡಿ ಹಾಕ್ತೀನಪ್ಪ' ಅಂದರು. ಅವರ ನಗುವಿನಲ್ಲೂ, ಮಾತಿನಲ್ಲೂ ನೋವಿನ ವ್ಯಂಗ್ಯತೆ ಕಾಣಿಸುತ್ತಿತ್ತು.

ಅವರ ಜೀವನ ಏನು ಅಲ್ಲಿಗೇ ಮುಗಿಯುವಂತದ್ದಲ್ಲ. ಎಲ್ಲೋ ಒಂದು ಕಡೆ, ಒಂದು ರೀತಿಯಲ್ಲಿ ಮುಂದುವರೆಯುತ್ತದೆ ಅಂತಿಟ್ಟುಕೊಳ್ಳೋಣ.ಆದರೂ ಜೀವನ ಪರ್ಯಂತ ಗಾಜಿನ ಟೀ ಲೋಟಗಳನ್ನು ತೊಳೆದು ಬೆಳ್ಳಗಾಗಿದ್ದ ಅಂಗೈ ನೋಡಿ ಬೇಜಾರಾಯ್ತು. ಆ ಕೈಯಿಂದ ಅವರು ಮತ್ತೆ ಏನು ಮಾಡಬಲ್ಲರೋ ಅನ್ನಿಸ್ತು. 

ಟೀ ಕುಡಿದು ಮುಗಿಸಿ, ಖಾಲಿ ಲೋಟವನ್ನು ಎತ್ತ ಎಸೆಯುವುದೆಂದು ಅತ್ತಿತ್ತ ನೋಡುತ್ತಿದ್ದೆ. ರಟ್ಟಿನ ಬಾಕ್ಸಿನ ಕಡೆಗೆ ಕೈ ತೋರಿಸಿದರು. ಲೋಟ ಎಸೆದು, ಹತ್ತು ರೂಪಾಯಿ ಕೊಟ್ಟೆ. 

'ಹೇಯ್, ಐದ್ ರೂಪಾಯಿ ಚೇಂಜ್ ಇದ್ದರೆ ಕೊಡು' ಅಂದರು.

'ಇಲ್ವಲ್ಲಾ, ಆ ಐದು ರೂಪಾಯಿಗೆ ಬೇರೆ ಏನಾದ್ರು ಇದ್ದರೆ ಕೊಡ್ರಿ' ಅಂದೆ.  ಅವರ ಬ್ಯಾಗಿನಲ್ಲಿ ಅಂಥಾದ್ದೇನೂ ಇರಲಿಲ್ಲ.

'ಸರಿ, ಬೇಡ ಬಿಡಿ, ಮುಂದಿನ ಸಾರಿ ಬಂದಾಗ ಸರಿ ಹೋಗುತ್ತೆ' ಅಂದೆ. ಆಯ್ತು ಎಂಬಂತೆ ತಲೆ ಆಡಿಸಿದವರು, ಮತ್ತೇನೋ ಹೊಳೆದಂತಾಗಿ ..

'ಬೇಡ, ತಡಿ ಮಾರಾಯ, ನೀ ಮತ್ತೆ ಯಾವಾಗ್ ಬರ್ತೀಯೋ, ನಾ ಇರ್ತೀನೋ ಇಲ್ವೋ.?' ಎನ್ನುತ್ತಾ ತಮಗೆ ತಾವೆ ಮಾತನಾಡಿಕೊಳ್ಳುತ್ತಲೂ,  ತಮ್ಮ ಪ್ಯಾಂಟಿನ ಜೋಬುಗಳಿಗೆ ಕೈ ಹಾಕಿ ಒಂದೊಂದೆ ನಾಣ್ಯವನ್ನು ಕೂಡಿಸಿ, ಐದು ರೂಪಾಯಿ ಕೊಟ್ಟರು.

Comments