Saturday, January 3, 2015

ದೇವರು, ಒಬ್ಬೊಬ್ಬನಿಗೂ ಗುಟ್ಟಾಗಿ ದರ್ಶನ ಕೊಡುವನೇಕೆ.?

ನಿದಿರೆಯ ಮಧ್ಯೆ ಎಚ್ಚರವಾಯ್ತು. ತಲೆಯಲ್ಲಿ ಜುಮ್ ಎನ್ನುವಂತ ಸದ್ದು. ಹೊಟ್ಟೆ ಮಳಸಿದಂತಾಗುತ್ತಿತ್ತು. ಮಲಗಿದ್ದಲ್ಲಿಂದಲೇ ಕೈ ಚಾಚಿ ಸ್ವಿಚ್ ಒತ್ತಿದೆ. ಬೆಳಕಲ್ಲಿ, ಗಡಿಯಾರ ಹನ್ನೆರಡು ದಾಟಿ ಹತ್ತು ನಿಮಿಷವಾಗಿರುವುದು ಕಾಣುತ್ತಿದೆ.
ಎದ್ದು ಕುಳಿತೆ. 'ಅಂಥಾ ಲೇಟ್ ನೈಟ್ ಏನಲ್ವಲ್ಲಾ.'  ಓದು ಮುಗಿಸಿ, ಮಲಗಲು ಹೋಗುವುದೇ ಒಂದರ ಮೇಲಾಗುತ್ತಿತ್ತು. ಇವತ್ತು ಸ್ವಲ್ಪ ಬೇಗನೇ ಮಲಗಿದ್ದೆ.

'ಹಸಿವು' ಅಂದ್ರೆ  ಹಿಂಗೆಲ್ಲಾ ಇರತ್ತಾ..? ಸ್ವಲ್ಪ ನಿಶ್ಯಕ್ತಿಯಾದಂತೆ ಅನ್ನಿಸಬೇಕು, ಅಶ್ಟೇ. ಆದರೆ ಇಷ್ಟು ತೀವ್ರವಾಗಿ. ಊಟ ಮಾಡದೆಯೇ ಮಲಗಿದ್ದು ತಪ್ಪಾಯ್ತು.

ಸ್ಟೌವ್ ಬತ್ತಿ ಮೇಲೆತ್ತಿ, ಬೆಂಕಿಕಡ್ಡಿ  ಗೀರಿ ಒಳಗೆ ಹಾಕಿದೆ. ಒಂದು ಕಡೆಯಿಂದ ಊದುತ್ತಾ; ಹಾ..!! ಬೆಂಕಿ ತಾಗಿದ ಮೇಲೆ ಎರಡು ನಿಮಿಷ ಬಿಡಬೇಕು. ಇಲ್ಲಾಂದ್ರೆ ಅನ್ನವು, ಸೀಮೆಣ್ಣೆ ವಾಸನೆ ಬಂದು ಬಿಡುತ್ತದೆ. ದಬಾಕಿದ್ದ ಕುಕ್ಕರ್ ಇಳಿಸಿಕೊಂಡು, ಅಕ್ಕಿಯ ಚೀಲಕ್ಕೆ ಕೈ ಹಾಕಿದೆ. ನನ್ನ ಅಚ್ಚರಿಗೆ, ಅಕ್ಕಿ ಮುಗಿದು ಹೋಗಿದ್ದು ಕಂಡಿತು. 'ಛೇ!! ಮುಗಿದು ಹೋದದ್ದು ನೆನಪಿದ್ದರೂ; ತರಲಾರದಷ್ಟು ಮೈಗಳ್ಳತನ.' ಇಂತ ಮೈಗಳ್ಳತನದಿಂದಾಗಿ ಕೆಲವು 'ರಾತ್ರಿ-ಊಟ' ಗಳು ಸ್ಕಿಪ್ ಆಗಿದ್ದಾಗಿಯೂ; ಇವತ್ತಿನ ಹಸಿವು; ಅಬ್ಬಾ!! ಯಾವತ್ತೂ ಆಗಿರಲಿಲ್ಲ.

ಸ್ಟೌ ವ್ ಸಂಪೂರ್ಣವಾಗಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ಬತ್ತಿ ಕೆಳಗಿಳಿಸಿ ಒಂದೇ ಉಸಿರಿಗೆ 'ಉಫ್' ಅಂದೆನಾದರೂ ತತ್ತಕ್ಷಣ ಸ್ಟೌ ಹೊತ್ತುಕೊಂಡು ರೋಮಿನಿಂದ ಹೊರಗೋಡಿದೆ. ಇಲ್ಲಾಂದ್ರೆ ನನ್ನ ಪುಟ್ಟ ರೂಮಿಡೀ ಸೀಮೆಣ್ಣೆ ಘಾಟು ತುಂಬಿಕೊಳ್ಳುತ್ತದೆ.

ಹೊರಗೆ ವಠಾರ ತಣ್ಣಗಿದೆ. ಮಲಗಿದ್ದರೂ; ಮಲಗಿಲ್ಲದಿದ್ದರೂ ಎಲ್ಲ ರೂಮುಗಳೂ ಮುಚ್ಚಿಕೊಂಡಿವೆ. ವೆಂಕಟೇಶ್ವರ ನಿಲಯದ ಹದಿನೆಂಟು ಸಿಂಗಲ್ ಬ್ಯಾಚುಲರ್ ರೂಮುಗಳೂ ಸದ್ದಿಲ್ಲದೆ; ಇಲ್ಲ ಕೆಳಗೆ, ಗ್ರೌಂಡ್ ಫ್ಲೋರಿನ ಮೂಲೆ ರೂಮಿನಲ್ಲಿ ಟಿವಿಯ ಸದ್ದು ಬರುತ್ತಿದೆ. 'ಆಂಧ್ರದವನಂತೆ; ಇಲ್ಲಿ ಬ್ಯಾಂಕಲೋ ಪನವಂತೆ; ತಿಂಗಳಿಗೆ ಟ್ವೆಂಟಿ ಥೌಸಂಡ್ ಜೀತಮಂತೆ; ಅವನ ರೂಮಲ್ಲಿ ಟಿವಿಯಂತೆ; ಡಿಶ್ ಅಂತೆ; ' ಪಕ್ಕದ ರೂಮಿನ ಗೆಳೆಯ ಗೌಡರಮುನಿ ಹೇಳುತ್ತಿದ್ದುದು ನೆನಪಾಯ್ತು. ಅವನೂ ಈ ಹೊತ್ತಿನಲ್ಲಿ, ಅಲ್ಲೇ ಇದ್ದಿರಬೇಕು.

ಸ್ಟೌ ತಣ್ಣಗಾಗಿತ್ತು. ಸೀಮೆಣ್ಣೆಯ ಘಾಟು ಪ್ರಕೃತಿಯ ಜೊತೆಗೆ ಲೀನವಾಗಿತ್ತು. ಅದನ್ನು ಎತ್ತಿಕೊಂಡು, ಒಳನಡೆದು ಕದವಿಕ್ಕಿದೆ. ನಿದ್ರೆ ಅಂತೂ ಬರುತ್ತಿಲ್ಲ. ವ್ಯಾಲೆಟ್ಟಿನಿಂದ ನೂರು ರೂಪಾಯಿ ನೋಟು ತೆಗೆದೆ.  'ಸೈಕಲ್ ಹತ್ತಿಕೊಂಡು; ಶಿವಮೊಗ್ಗ ನಗರದ ಮುಖ್ಯ ಬಸ್ ನಿಳಾಣಕ್ಕಾದರೂ ಹೋಗೋಣವೇ..? ಬೇಡ, ತಲೆ ಚಕ್ಕರ್ ಬಂದಂತಾಗುತ್ತಿದೆ.' ನೋಟು ತೆಗೆದು ಟೇಬಲ್ಲಿನ ಮೇಲಿಟ್ಟೆ.


ಅಬ್ರಕ ದಬ್ರ ಗಿಲಿಗಿಲಿಮಿಲಿ ಮ್ಯಾಜಿಕ್ ಎಂದು ಹೇಳಬೇಕಂತೆ; ನೋಟು ಇದ್ದಕ್ಕಿದ್ದಂತೆ ಮೃಷ್ಟಾನ್ನವಾಗಿ ಬದಲಾಗಬೇಕಂತೆ; ಅಯ್ಯೋ ಅಶ್ಟು ಬೇಡ ಚಿತ್ರಾನ್ನ ವಾಗಿಯಾದರೂ ಬದಲಾಗಬೇಕಂತೆ; ಹಹಹ; ಹಸಿವು ಜೀವಕ್ಕಿದೆ. ಕಲ್ಪನೆಗಳಿಗೆ ಹಸಿವಿಲ್ಲ. in fact ಅವು ಎಂದಿಗಿಂತ ಹೆಚ್ಚೇ ಕ್ರಿಯಾಶೀಲವಾಗಿವೆ. ' ದೇವರು ಅಂದ್ರೆ, ಏನು..? ಯಾವನಿಗ್ಗೊತ್ತು. ನಾನಂತು ಇದುವರೆಗೂ ನೋಡಿಲ್ಲ. ಕಥೆ ಹೇಳುವವರು; ಅಥವಾ ಕಥೆ ಕಟ್ಟುವವರು ಗುಟ್ಟಾಗಿ ನೋಡಿರುವವರೇ. ಸಾಕ್ಷಿ ಏನು..? ಅವರು ಹೇಳಿದ್ದೆಲ್ಲಾ ನಂಬಬೇಕಾ..?' ಏನೇನೋ ಕನವರಿಕೆಗಳು. ಈ ಆಲೋಚನೆಗಳು ವಿಷಯಾಂತರಗೊಳ್ಳುವುದೇ ಒಂದು ವಿಸ್ಮಯ.

ಲೈಟು ಕೆಡಿಸಿ, ಮತ್ತೆ ಮಲಗಲು ಪ್ರಯತ್ನಿಸೋಣವೆನಿಸಿತು. ಮಂಚದ ಮೇಲೆ ಕುಳಿತಾಗ, ಯಾರೋ ಕದ ಬಡಿಯುತ್ತಿರುವ ಸದ್ದು. ರಾತ್ರಿ ಒಂದರ ಹತ್ತಿರ ಹತ್ತಿರ. ಮುನಿ ಇರಬೇಕು. ಬಾಗಿಲು ತೆರೆದೆ. ಎದುರಿಗೆ 'ರಂಗಜ್ಜ' ನಿಂತಿದ್ದಾನೆ. ಕೈಯಲ್ಲಿ ಟಿಫನ್ ಬಾಕ್ಸಿದೆ.

---

ರಂಗಜ್ಜ ನಮ್ಮ 'ವೆಂಕಟೇಶ್ವರ ನಿಲಯ' ಎಂಬ ಪುಟ್ಟ ವಠಾರವನ್ನು ಕಾಯುವ ವಾಚ್-ಮ್ಯಾನ್. ಎಂಭತ್ತಕ್ಕೂ ಹೆಚ್ಚು ವಯಸ್ಸಾಗಿರುವ ಹಣ್ಣಣ್ಣು ಮುದುಕನೊಬ್ಬ ವಾಚ್-ಮ್ಯಾನ್ ಅಂದರೆ ಅಚ್ಚರಿಯಾಗಬಹುದು. ಬಹುಷ: ಕಾವಲಿಗೆ, ಕಮ್ಮಿ ಬೆಲೆಗೆ ಒಂದು ಮನುಷ್ಯ ಜೀವಿಯಂತಿದ್ದರೆ ಸಾಕು ಎಂದಿರಬೇಕು. ಮೇಲಿನ ಫ್ಲೋರ್-ಗೆ ಹೋಗುವ ಮೆಟ್ಟಿಲಿನ ಅಡಿಯಲ್ಲಿರುವ ಪುಟ್ಟ ಜಾಗವೇ ರೂಮಿನಂತಾಗಿ; ರಂಗಜ್ಜನ permanent ನಿವಾಸ; ಒಂಥರ ಕರ್ಮಭೂಮಿ.

' ಏನ್ ರಂಗೂ ' ಅಂದೆ, ಎಂದಿನ ಸಲಿಗೆಯಲ್ಲಿ.

'ಇವತ್ತು, ನನ್ನ ಮೊಮ್ಮಗಳು ಬಂದಿದ್ದಳು. ನೋಡ್ಕೋಂಡ್ ಹೋಗೋದಕ್ಕೆ; ಊರಿಂದ ' ಒಂದೊಂದು ಉಚ್ಛಾರಕ್ಕೂ, ಬೊಚ್ಚು ಬಾಯಿಯ ಗಾಂಧಿತಾತನ ತಲೆಯು ಕುತ್ತಿಗೆಯ ಕನೆಕ್ಷನ್ನೇ ಇಲ್ಲದೆ ಮೇಲೆ ತೇಲುತ್ತಿತ್ತು.

' ಬರುವಾಗ; ಮನೆಯಿಂದ ಚಪಾತಿ-ಪಲ್ಯ ಮಾಡಿಕೊಂಡು ತಂದಿದ್ದಳು. ತನ್ನ ಅಜ್ಜನಿಗೆ ಇನ್ನೂ ಹಲ್ಲು ಅರೆಯುತ್ತವೆ ಅನ್ನೋ ಭ್ರಾಂತು ಅದಕ್ಕೆ. ವಾಪಾಸ್ ಹೆಂಗ್ ಕಳಿಸ್ಲಿ..? ಮತ್ತೆ ಇನ್ನೊಂದ್ ಸಾರಿ ಯಾವತ್ತಾದ್ರು ನೋಡಬೇಕು ಅಂತ ಅನ್ನಿಸಿದರೆ; ಏನಾದರೂ ಮಾಡಿಕೊಂಡು ತರೋದಾದ್ರೆ, ದೋಸೆ ಮಾಡಿಸಿಕೊಂಡು ತಾ ಅಂತ ಹೇಳಿದೆ. ' ರಂಗುವಿನ ಮಾತಿನಲ್ಲಿ ಸತ್ಯವಿತ್ತು. ಮೆತ್ತಗೆ ಅನ್ನ ಬೇಯಿಸಿಕೊಂಡು, ಹೋಟೆಲಿಂದ ತಂದ ಸಾರಿನಲ್ಲಿ ಕಿವುಚಿಕೊಂಡು ಕುಡಿಯುತ್ತಿದುದನ್ನು  ನೋಡಿದ್ದೆ.

' ನಿನಗೆ ಕೊಡೋಣ ಅಂತಿದ್ದವನು, ಮರೆತು ಮಲಗಿಬಿಟ್ಟೆ. ಈಗ ವಂದ ಮಾಡಕ್ಕೆ ಅಂತ ಎಚ್ಚರ ಆಯ್ತು. ಮೇಲೆ ನೋಡ್ತ್ತೀನಿ; ನಿನ್ನ ರೂಮ್ ಲೈಟ್ ಇನ್ನ ಉರೀತಲೇ ಇದೆ. ಅಯ್ಯೋ ನನ್ನ ಬುದ್ದಿಗೆ; ನೆನಪು ಬಂದು ತಂದೆ. ಊಟ ಆಗಿದ್ರು, ತಿಂದು ಮಲಗು. ಏನಾಗಲ್ಲ..'  ಬೇಡ-ಬೇಡ ಎನ್ನುವ ಸುಳ್ಳು ಸೌಜನ್ಯದಿಂದಲೇ ನಾನದನ್ನು ಪಡೆದೆ.

ಬಹಳಷ್ಟು ಕಾರಣಗಳಿಗೆ; ಆ ಚಪತಿ ಅತ್ಯಮೂಲ್ಯ ಖಾದ್ಯವೆನಿಸಿತು. 'ನಿನಗೆ ಶರಣಾದರೆ, ನಿನ್ನನ್ನು ನಂಬಿದವರನ್ನು ನೀನು ಕೈಬಿಡುವುದಿಲ್ಲ' ವಿವೇಕಾನಂದರು ದೇವರಿಗೆ ಹೇಳಿದ ಇಂಥದೇ ಸಂಧರ್ಭದ ಮಾತೊಂದು ನೆನಪಾಯ್ತು.
ದೇವರ ಅಸ್ತಿತ್ವದ ನಂಬಿಕೆಯಲ್ಲಿಯೇ ಇನ್ನೂ ಡೈಲೆಮ್ಮ ಇದೆ. ಹೀಗಿರುವಾಗ ಸಂಪೂರ್ಣವಾಗಿ ನಿನಗೆ ಶರಣಾಗುವ ಮಾತೆಲ್ಲಿಂದ ಬಂತು. ಆದರೂ ಈ ಕ್ಷಣ ನನಗೆ ದೊರೆತ ಜೀವದ್ರವ್ಯದ ಮೂಲ ಯಾವುದು..? ದೇವರು ಗುಟ್ಟಾಗಿ ಬಂದು ಒಬ್ಬೊಬ್ಬರಿಗೇ ದರ್ಶನ ಕೊಡುವನಾ..? ಛೇ!! ಛೇ!! ಇದೆಲ್ಲಾ ಕಾಕತಾಳೀಯ ಅಷ್ಟೇ.

ಅಂಗಾತ ಮಲಗಿದ್ದವನು, ಕೈ ಚಾಚಿ ಸ್ವಿಚ್ ಆಫ್ ಮಾಡಿದೆ. ತೇಗಿನ ಜೊತೆಗೆ ಬಂದ 'ಅನ್ನದಾತೋ ಸುಖೀಭವ' ಅನ್ನೋ ಉಕ್ತಿ ನನ್ನ ಕಿವಿಗೂ ಕೇಳಿಸಿತು. ಮಂತ್ರದಿಂದ ಮಾವಿನಕಾಯಿ ಉದ್ರಲ್ಲ. ಬೆಳಗ್ಗೆ ರಂಗುಗೆ ದೋಸೆ ಕೊಡಿಸಬೇಕು.

ನನ್ನೊಳಗೊಬ್ಬನ ಹುಡುಕುತ್ತಾ

ಇದೀಗ ಆಧ್ಯಾತ್ಮ, ನೈತಿಕತೆ ಅಂದುಕೊಂಡು.. ಹ್ಯಾಕ್ ಸಾ ಬಿಲೇಡು ತಗಂಡು ಕುಯ್ತೀನಿ ಅನ್ನೋದು,
ಟೈಟಲ್ ನೋಡುದ್ ತಕ್ಷಣ ಗೊತ್ತಾಗಿರ್ಬೇಕು.
ಬರೆಯೋದಕ್ಕೆ ಹೊರಟಿರೋದು ಕೂಡ ಅದರ ಬಗ್ಗೆಯೇ….
ಹುಡುಕ್ತಾನೆ ಇದ್ದೇನೆ. ನನ್ನೊಳಗಬ್ಬನು ಎಲ್ಲಿ ಅಂತ. ಬದಲಾಗುತ್ತಲಿರುವ ನನ್ನವೇ ಮೌಲ್ಯಗಳ ಡೆಲ್ಟಾಗಳನ್ನು .. ನೋಡಿ ಒಮ್ಮೊಮ್ಮೆ ಕಂಗಾಲಾಗುತ್ತದೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ ಅನ್ನೋದನ್ನ ಸಿನ್ಸೀಯರ್ ಆಗಿ ಓದಿ, ಕೇಳಿ, ಮೆಚ್ಚಿ  ಅಹುದುಹುದು ಎನ್ನುತ್ತಿದ್ದ ನನ್ನ ಪ್ರಜ್ನೆ…
ಇವತ್ತು ಇವೇ ಸಾಲುಗಳ ಮೇಲೊಂದು ಸ್ಟಾರ್ ಇಟ್ಟು , ಕಂಡೀಷನ್ಸು ಅಪ್ಲೈ ಅನ್ನುತ್ವೆ .  ನನ್ನ ಜೀವನ ಪ್ರೀತಿಯನ್ನೇ ಪ್ರಶ್ನಿಸುತ್ತವೆ.

ಸರಿ ತಪ್ಪುಗಳ ವ್ಯಾಖ್ಯಾನ!! ನನ್ನದೇ ಕಾಲದ ಜೊತೆಗೆ ಬದಲಾಗುತ್ತಾ ಬಂತಾ … ಅಥವಾ
ತಪ್ಪು ಅಂತ ಗೊತ್ತಾದ ಮೇಲೂ ಅದನ್ನು ಸಮರ್ಥಿಸಿಕೊಂಡು ಮುಂದುವರೆಯುವ  ‘ ಕರಪ್ಟ್- ಪ್ರೌಢಿಮೆ’ ಯನ್ನು ಇಷ್ಟು ದಿನಗಳ ಜೀವನಾನುಭವ ನೀಡಿತಾ …?
ಹಂಗಾದ್ರೆ ನಿಜವಾದ ಸರಿ ಯಾವುದು…? ಮತ್ತು ನಿಜವಾದ ತಪ್ಪು  ಯಾವುದು …?

ಸೆಕೆಂಡ್ ಪಿ-ಯು ಓದುವಾಗ….
ಬಹಿರಂಗಗೊಂಡಿದ್ದ  ಪ್ರಶ್ನೆಪತ್ರಿಕೆಯೊಂದನ್ನು ಹಿಡಿದು, ಅವಕ್ಕೆ ಉತ್ತರ ಹುಡುಕಿಕೊಡಬೇಕೆಂದು ಕೇಳಿ ಬಂದಿದ್ದ ಗೆಳೆಯನನ್ನು ಇಲ್ಲವೆಂದು ಕಳಿಸಿದ್ದೆ.
ಕಾರಣ!! ಉತ್ತರ ಹೇಳುವಾಗ, ಆ ಪ್ರಶ್ನೆಗಳನ್ನು ನೋಡಿ,  ಓದಿ, … ಪರೀಕ್ಷೆಯಲ್ಲಿ ಅವೇ ಪ್ರಶ್ನೆಗಳಿಗೆ ಉತ್ತರ ಬರೆದು …, ಪಾಪಪ್ರಜ್ನೆಯಲ್ಲಿ ಬದುಕಬೇಕಾಗುತ್ತದೆಂಬ ತಪ್ಪು ಅನ್ನೋ ಭಯ.
ಮುಂದೆ ಇಂಜಿನಿಯರಿಂಗು ಬರುವಷ್ಟರಲ್ಲಿ ಇಂತದೆಲ್ಲಾ ತಪ್ಪು ಅನಿಸಲಿಲ್ಲ.
“ಹೇ!! ಎಜುಕೇಷನ್ ಸಿಸ್ಟಮ್ ಸರಿಯಿಲ್ಲ.. ಇಲ್ಲಿ ವಸ್ತುನಿಷ್ಠವಾಗಿ ಒಬ್ಬರ ಪ್ರತಿಭೆಯನ್ನು ಅಳೆಯೋದಿಲ್ಲ” ಅಂತ ತಪ್ಪಿಗೆ ಸಮಜಾಯಿಷಿ ಕೊಡುವಷ್ಟರ ಮಟ್ಟಿಗೆ ನನ್ನ ಪ್ರಜ್ನೆ ಪ್ರೌಢಿಮೆಯನ್ನು ಪಡೆದಿತ್ತು.
ಇಲ್ಲಿ ತಪ್ಪಿರುವುದು ನನ್ನ ಕರ್ಮದಲ್ಲಿ. ಅದನ್ನು ಸರಿಯೆಂದು ಸಮಾಧಾನಿಸಲು ಹೋಗುವುದೂ ಕೂಡ ಕರ್ಮದ ದಾರಿ ತಪ್ಪಿಸುವಿಕೆ.

ಬಹುಷಃ ಎಲ್ಲಿಯವರೆಗೂ ಯಾವುದೇ ಕ್ರಿಯೆಗೆ!! ಶಿಕ್ಷೆಯ ಭಯ ಬಾಧಿಸುವುದಿಲ್ಲವೋ …, ಅಲ್ಲಿಯವರೆಗೂ ಎಲ್ಲಾ ವಿಧದ ಅಲೌಡ್ ತಪ್ಪುಗಳನ್ನು ಮಾಡಬಹುದು ಎಂಬುದಾಗಿ ವಾದಿಸಿ ಸಮರ್ಥಿಸಿಕೊಳ್ಳುವ
‘ಕರಪ್ಟ್- ಪ್ರೌಢಿಮೆ’ ದಿನದಿನದ ಜೊತೆಗೆ ಜನಗಳಿಗೆ ಅಂಟಿಕೊಳ್ಳುತ್ತಾ ಹೋಗಬಹುದು.

ಹಂಗಾದ್ರೆ ಧೈರ್ಯ ಜಾಸ್ತಿ ಇದ್ದವ್ನು ಮತ್ತು ಅರಗಿಸಿಕೊಳ್ಳಬಲ್ಲವನು ಹೆಚ್ಚು ತಪ್ಪುಗಳನ್ನು ಮಾಡಬಹುದು. ಧೈರ್ಯ ಕಮ್ಮಿ ಇದ್ದಲ್ಲಿ ಭಯದ ನೆರಳಲ್ಲಿ ತಪ್ಪು ಅನ್ನೋದು ತಪ್ಪೆಂದು ಬಿಟ್ಟು ಬಾಳಬಹುದು. ಇವುಗಳ ಮಧ್ಯೆ ತಪ್ಪು ಯಾವುದು ಮತ್ತು ಸರಿ ಯಾವುದು.
ನಮ್ಮ ಮೌಲ್ಯಗಳು ಹೋದದ್ದು ಎಲ್ಲಿಗೆ.
ಮೌಲ್ಯಗಳು ಅನ್ನೋದಕ್ಕಿಂತ, ನಂಬಿಕೊಂಡು ಬಂದಿದ್ದ ಸತ್ಯ ಗಳ ಕಥೆ ಏನಾಯ್ತು..?

ನನ್ನ ಖುಷಿಯ ಸಂದರ್ಭಗಳನ್ನು ಸಾರ್ಥಕಗೊಳಿಸಿದ ಪುಟ್ಟ ಪುಟ್ಟ ನೆನಪುಗಳು

BH ರೋಡ್ ಪಕ್ಕದಲ್ಲಿಯೇ ಒಂದು ದೇವಸ್ಥಾನ ಇದೆ. BH ಅಂದರೆ Banglore to Honnavar ಅಂತ. ತುಂಬಾ ಲಾಂಗ್ ಮತ್ತು ಪೇಮಸ್ ರೋಡು. ಹೈವೆ ಗೀವೆ ತರ ಇದಕ್ಕೂ  ಬಿಹೆಚ್ ಅಂತಾರೆನೊ ಅಂದುಕೊಂಡಿದ್ದೆ. ಇದಕ್ಕೂ ಒಂದು ಅರ್ಥ ಇದೆ ಅನ್ನೋದು ಇತ್ತೀಚೆಗೆ ತಿಳಿದದ್ದು. BH ರೋಡಲ್ಲಿ, ಶಿವಮೊಗ್ಗದಿಂದ ಬೆಂಗ್ಳೂರ್ ದಿಕ್ಕಿನಲ್ಲಿ ಬರೋವಾಗ, ಭದ್ರಾವತಿ ಬಿಟ್ಟು  ಸುಮಾರು ಕಾಲ್ ಗಂಟೆ ಮೇಲೆ,  ಬಲಭಾಗಕ್ಕೆ  ಈ ದೇವಸ್ಥಾನ ಕಾಣ್ಸತ್ತೆ.  ದೇವಸ್ಥಾನದ ಸುತ್ತ ಮುತ್ತ ದೂರದವರೆಗೂ ಯಾವ ಮನೆ-ಮಹಲು-ಮಠ-ಮನುಷ್ಯರುಗಳಿರುವ ಕುರುಹಿಗಳು ಕಾಣಿಸುವುದಿಲ್ಲ. ರಸ್ತೆ ಪಕ್ಕದಲ್ಲಿದೆ ಅನ್ನೋದೊಂದು ಬಿಟ್ಟರೆ, ದೇವಸ್ಥಾನವು ನಿರ್ಜನ ಪ್ರದೇಶದಲ್ಲಿಯೇ ಮರ-ಗಿಡ-ಬಟಾ ಬಯಲುಗಳ ನಡುವಿದೆ.


ಸರಿ ಈಗ ವಿಷಯಕ್ಕೆ ಬರೋಣ.
ದೇವಸ್ಥಾನದ ಕಾಂಪೌಂಡ್ ಹೊರಭಾಗದಲ್ಲಿ ಒಂದು ಅಜ್ಜಿ  ಕುಳಿತಿರುತ್ತದೆ. ‘ ಎಲ್ಲಾ ದೇವಸ್ಥಾನಗಳ ಹೊರಗೂ ಅಂಟಿಕ್ ಪೀಸ್ ಗಳ ಥರ ಬಿಕ್ಷುಕರು ಕುಳಿತಿರ್ತಾರೆ; ಅದ್ರಲ್ಲಿ ವಿಶೇಷತೆ ಏನಿದೆ ‘ ಅನ್ನಬಹುದು. ಹೌದು ಅದ್ರಲ್ಲಿ ಏನೂ ವಿಶೇಷತೆ ಇಲ್ಲ. ಹಾಗೇನೆ ಇದ್ರಲ್ಲೂ ಏನು ವಿಶೇಷತೆ ಇಲ್ಲ.

ನಾನು ಅತ್ಯಂತ ಚಿಕ್ಕ ವಯಸ್ಸಿನವನು ಇದ್ದಾಗಿನಿಂದಲೂ ಈ ಅಜ್ಜಿಯನ್ನು ನೋಡುತ್ತಲೇ ಬಂದಿದ್ದೇನೆ. ನಾ ದೊಡ್ಡವನಾಗ್ತಾ ಬಂದ್ರು; ಅಜ್ಜಿ ಮಾತ್ರ ಅಜ್ಜಿಯಾಗಿಯೇ ಇದ್ರು.

ಕಾಲ ಹೋಗ್ತಾ…; ಹೋಗ್ತಾ…; ಅಜ್ಜಿ ಕುಳಿತಿರುತ್ತಿದ್ದ ಖಾಲಿ ಜಾಗದಲ್ಲಿ ಒಂದು ಶೆಟರ್ ಸೃಷ್ಟಿಯಾಯ್ತು. ಅಜ್ಜಿ ಕುಳಿತಿರುತ್ತಿದ್ದ ಉದ್ದಗಲಕ್ಕೆ ಸರಿ ಹೊಂದುವಂತೆ; ನಾಯಿ ಗೂಡಿನಂತಹ ಪುಟ್ಟ ಶೆಡ್ಡು ಅದು. ಮಳೆ ಇರಲಿ; ಬಿಸಲಿರಲಿ; ಅದೇನು ಆಶ್ಚರ್ಯವೋ ಎಂಬಂತೆ ಅಜ್ಜಿಯ ದರ್ಶನ ಒಂದು ಸಾರಿಯೂ ತಪ್ಪುತ್ತಿರಲಿಲ್ಲ. ಅದು ಅಲ್ಲೇ ಪಿಕ್ಸು.
ತರೀಕೆರೆಯಲ್ಲಿದ್ದ ನನ್ನ ಅಮ್ಮನ ಅಮ್ಮ(ಅಜ್ಜಿ) ಮನೆಗೆ ಹೋಗುವಾಗೆಲ್ಲಾ ದಾರಿಯಲ್ಲಿ ಈ ಅಜ್ಜಿಯನ್ನು ನೋಡುತ್ತಿದ್ದೆ. ಕೆಂಪು ಬಸ್ಸಿನ ಕಿಟಕಿ ಗಾಜಿನ ಒಳಗೆ ನಾನು; ಶೆಡ್ ಒಳಗೆ ಅಜ್ಜಿ.

ಹತ್ನೇ ಕ್ಲಾಸು ರಿಸಲ್ಟ್  ಬಂದ ದಿನ, ಸ್ವೀಟು ಕಟ್ಟಿಸಿಕೊಂಡು; ನಮ್ಮಜ್ಜಿಗೆ ಕೊಡುವ ಸಲುವಾಗಿ ಅಪ್ಪನ್ ಜೊತೆ ಬೈಕಲ್ ಹೋಗ್ತಾ ಇದ್ದೆ.
ನಮ್ಮ ಕುತೂಹಲದ ಬಗ್ಗೆ ತಿಳಿದಿದ್ದ ಅಪ್ಪ, ದೇವಸ್ಥಾನದ ಬಳಿ ಬೈಕು ನಿಲ್ಲಿಸಿದರು. ಸ್ವೀಟ್ ಬಾಕ್ಸಿನಿಂದ ಒಂದಷ್ಟು ಸ್ವೀಟು ತೆಗೆದು, ನಮ್ಮ ಆಂಟಿಕ್ ಪೀಸಿನಂತಿದ್ದ ಅಜ್ಜಿಗೂ ಕೊಟ್ಟೆ.
ಹೀಗೆ ನನ್ನ ಖುಷಿಯ ಸಂದರ್ಭಗಳನ್ನು ಸಾರ್ಥಕಗೊಳಿಸಿದ ಪುಟ್ಟ ಪುಟ್ಟ ನೆನಪುಗಳು ಉಳಿದವು.

ಬಸ್ಸಲ್ಲಿ ಸಂಚರಿಸುವಾಗೆಲ್ಲಾ … ಆ ಒಂದು ಜಾಗ ಬರುವ ಸೂಚನೆ ಸಿಗುತ್ತಿದ್ದಂತೆಯೇ; ಹಾ ಬಂತು-ಬಂತು-ಬಂತು; ಎನ್ನುವ ಹುಡುಗಾಟಿಕೆಯ ಸಹಜ ಕುತೂಹಲವು ನಾನು ದೊಡ್ಡವನಾಗುತ್ತಲೂ ಹಾಗೆಯೇ ಉಳಿದುಕೊಂತು.
ನನ್ನ ಮತ್ತು ಅಜ್ಜಿಯ ಭಾವನಾತ್ಮಕ ಸಂವಹನ ಇಷ್ಟಕ್ಕೇ ಮೀಸಲು.

ಹೀಗೆ ಬಸ್ಸೊಳಗೆ ನಾನು; ಗೂಡೊಳಗೆ ಅಜ್ಜಿ.

ಹೀಗೆ ಕೆಲವು ವರುಷಗಳು ಕಳೆದವು.
ಒಂದ್ ಸಾರಿ; ಗೂಡೊಳಗಿಂದ ಅಜ್ಜಿ ಮಾಯ ಆಯ್ತು, ಕಾಣಿಸಲಿಲ್ಲ.
ಇನ್ನೂ  ಸ್ವಲ್ಪ ದಿನ ಆದ ಮೇಲೆ ಶೆಡ್ ಕೂಡ ಮಾಯ ಆಯ್ತು.  ವಿಚಾರಿಸಿದಾಗ; ಅಜ್ಜಿ ಇಲ್ಲ ಅಂದ್ರು.

ಅಲ್ಲೊಂದು ಅಜ್ಜಿ ಇತ್ತು ಎನ್ನುವ ಯಾವ ಕುರುಹುಗಳಿಲ್ಲದ ಮಟ್ಟಿಗೆ, ಅಲ್ಲಿ ಏನೂ ಇಲ್ಲವಾಯ್ತು.
ಆದ್ರೂ ಪ್ರತಿ ಸಾರಿ ಆ ರಸ್ತೆಯಲ್ಲಿ; ಅಯಸ್ಕಾಂತದಂತೆ ಸೆಳೆಯುವ ಆ ಜಾಗ ಮಾತ್ರ; ಅಲ್ಲಿ ಏನೋ ಇದೆ ಅಂತ ಹೇಳತ್ತೆ. ಅಪ್ರಯತ್ನವಾಗಿ ಮಾಮೂಲಿನಂತೆ ಕೈಗಳು ಎದೆ ಮುಟ್ಟಿಕೊಂಡು ನಮಸ್ಕರಿಸುತ್ತವೆ. ಅದು ದೇವರಿಗೋ; ಅಥವಾ ಅಜ್ಜಿಗೋ ಮತ್ಯಾರಿಗೋ ಕಾಣೆ. ಎನೂ ಇಲ್ಲವಾಗಿಯೂ; ಅಪರೂಪದ್ದೇನೋ ಕಾಣುವ ವಿಚಿತ್ರ ಅನುಭವ.