ನನ್ನ ಖುಷಿಯ ಸಂದರ್ಭಗಳನ್ನು ಸಾರ್ಥಕಗೊಳಿಸಿದ ಪುಟ್ಟ ಪುಟ್ಟ ನೆನಪುಗಳು

BH ರೋಡ್ ಪಕ್ಕದಲ್ಲಿಯೇ ಒಂದು ದೇವಸ್ಥಾನ ಇದೆ. BH ಅಂದರೆ Banglore to Honnavar ಅಂತ. ತುಂಬಾ ಲಾಂಗ್ ಮತ್ತು ಪೇಮಸ್ ರೋಡು. ಹೈವೆ ಗೀವೆ ತರ ಇದಕ್ಕೂ  ಬಿಹೆಚ್ ಅಂತಾರೆನೊ ಅಂದುಕೊಂಡಿದ್ದೆ. ಇದಕ್ಕೂ ಒಂದು ಅರ್ಥ ಇದೆ ಅನ್ನೋದು ಇತ್ತೀಚೆಗೆ ತಿಳಿದದ್ದು. BH ರೋಡಲ್ಲಿ, ಶಿವಮೊಗ್ಗದಿಂದ ಬೆಂಗ್ಳೂರ್ ದಿಕ್ಕಿನಲ್ಲಿ ಬರೋವಾಗ, ಭದ್ರಾವತಿ ಬಿಟ್ಟು  ಸುಮಾರು ಕಾಲ್ ಗಂಟೆ ಮೇಲೆ,  ಬಲಭಾಗಕ್ಕೆ  ಈ ದೇವಸ್ಥಾನ ಕಾಣ್ಸತ್ತೆ.  ದೇವಸ್ಥಾನದ ಸುತ್ತ ಮುತ್ತ ದೂರದವರೆಗೂ ಯಾವ ಮನೆ-ಮಹಲು-ಮಠ-ಮನುಷ್ಯರುಗಳಿರುವ ಕುರುಹಿಗಳು ಕಾಣಿಸುವುದಿಲ್ಲ. ರಸ್ತೆ ಪಕ್ಕದಲ್ಲಿದೆ ಅನ್ನೋದೊಂದು ಬಿಟ್ಟರೆ, ದೇವಸ್ಥಾನವು ನಿರ್ಜನ ಪ್ರದೇಶದಲ್ಲಿಯೇ ಮರ-ಗಿಡ-ಬಟಾ ಬಯಲುಗಳ ನಡುವಿದೆ.


ಸರಿ ಈಗ ವಿಷಯಕ್ಕೆ ಬರೋಣ.
ದೇವಸ್ಥಾನದ ಕಾಂಪೌಂಡ್ ಹೊರಭಾಗದಲ್ಲಿ ಒಂದು ಅಜ್ಜಿ  ಕುಳಿತಿರುತ್ತದೆ. ‘ ಎಲ್ಲಾ ದೇವಸ್ಥಾನಗಳ ಹೊರಗೂ ಅಂಟಿಕ್ ಪೀಸ್ ಗಳ ಥರ ಬಿಕ್ಷುಕರು ಕುಳಿತಿರ್ತಾರೆ; ಅದ್ರಲ್ಲಿ ವಿಶೇಷತೆ ಏನಿದೆ ‘ ಅನ್ನಬಹುದು. ಹೌದು ಅದ್ರಲ್ಲಿ ಏನೂ ವಿಶೇಷತೆ ಇಲ್ಲ. ಹಾಗೇನೆ ಇದ್ರಲ್ಲೂ ಏನು ವಿಶೇಷತೆ ಇಲ್ಲ.

ನಾನು ಅತ್ಯಂತ ಚಿಕ್ಕ ವಯಸ್ಸಿನವನು ಇದ್ದಾಗಿನಿಂದಲೂ ಈ ಅಜ್ಜಿಯನ್ನು ನೋಡುತ್ತಲೇ ಬಂದಿದ್ದೇನೆ. ನಾ ದೊಡ್ಡವನಾಗ್ತಾ ಬಂದ್ರು; ಅಜ್ಜಿ ಮಾತ್ರ ಅಜ್ಜಿಯಾಗಿಯೇ ಇದ್ರು.

ಕಾಲ ಹೋಗ್ತಾ…; ಹೋಗ್ತಾ…; ಅಜ್ಜಿ ಕುಳಿತಿರುತ್ತಿದ್ದ ಖಾಲಿ ಜಾಗದಲ್ಲಿ ಒಂದು ಶೆಟರ್ ಸೃಷ್ಟಿಯಾಯ್ತು. ಅಜ್ಜಿ ಕುಳಿತಿರುತ್ತಿದ್ದ ಉದ್ದಗಲಕ್ಕೆ ಸರಿ ಹೊಂದುವಂತೆ; ನಾಯಿ ಗೂಡಿನಂತಹ ಪುಟ್ಟ ಶೆಡ್ಡು ಅದು. ಮಳೆ ಇರಲಿ; ಬಿಸಲಿರಲಿ; ಅದೇನು ಆಶ್ಚರ್ಯವೋ ಎಂಬಂತೆ ಅಜ್ಜಿಯ ದರ್ಶನ ಒಂದು ಸಾರಿಯೂ ತಪ್ಪುತ್ತಿರಲಿಲ್ಲ. ಅದು ಅಲ್ಲೇ ಪಿಕ್ಸು.
ತರೀಕೆರೆಯಲ್ಲಿದ್ದ ನನ್ನ ಅಮ್ಮನ ಅಮ್ಮ(ಅಜ್ಜಿ) ಮನೆಗೆ ಹೋಗುವಾಗೆಲ್ಲಾ ದಾರಿಯಲ್ಲಿ ಈ ಅಜ್ಜಿಯನ್ನು ನೋಡುತ್ತಿದ್ದೆ. ಕೆಂಪು ಬಸ್ಸಿನ ಕಿಟಕಿ ಗಾಜಿನ ಒಳಗೆ ನಾನು; ಶೆಡ್ ಒಳಗೆ ಅಜ್ಜಿ.

ಹತ್ನೇ ಕ್ಲಾಸು ರಿಸಲ್ಟ್  ಬಂದ ದಿನ, ಸ್ವೀಟು ಕಟ್ಟಿಸಿಕೊಂಡು; ನಮ್ಮಜ್ಜಿಗೆ ಕೊಡುವ ಸಲುವಾಗಿ ಅಪ್ಪನ್ ಜೊತೆ ಬೈಕಲ್ ಹೋಗ್ತಾ ಇದ್ದೆ.
ನಮ್ಮ ಕುತೂಹಲದ ಬಗ್ಗೆ ತಿಳಿದಿದ್ದ ಅಪ್ಪ, ದೇವಸ್ಥಾನದ ಬಳಿ ಬೈಕು ನಿಲ್ಲಿಸಿದರು. ಸ್ವೀಟ್ ಬಾಕ್ಸಿನಿಂದ ಒಂದಷ್ಟು ಸ್ವೀಟು ತೆಗೆದು, ನಮ್ಮ ಆಂಟಿಕ್ ಪೀಸಿನಂತಿದ್ದ ಅಜ್ಜಿಗೂ ಕೊಟ್ಟೆ.
ಹೀಗೆ ನನ್ನ ಖುಷಿಯ ಸಂದರ್ಭಗಳನ್ನು ಸಾರ್ಥಕಗೊಳಿಸಿದ ಪುಟ್ಟ ಪುಟ್ಟ ನೆನಪುಗಳು ಉಳಿದವು.

ಬಸ್ಸಲ್ಲಿ ಸಂಚರಿಸುವಾಗೆಲ್ಲಾ … ಆ ಒಂದು ಜಾಗ ಬರುವ ಸೂಚನೆ ಸಿಗುತ್ತಿದ್ದಂತೆಯೇ; ಹಾ ಬಂತು-ಬಂತು-ಬಂತು; ಎನ್ನುವ ಹುಡುಗಾಟಿಕೆಯ ಸಹಜ ಕುತೂಹಲವು ನಾನು ದೊಡ್ಡವನಾಗುತ್ತಲೂ ಹಾಗೆಯೇ ಉಳಿದುಕೊಂತು.
ನನ್ನ ಮತ್ತು ಅಜ್ಜಿಯ ಭಾವನಾತ್ಮಕ ಸಂವಹನ ಇಷ್ಟಕ್ಕೇ ಮೀಸಲು.

ಹೀಗೆ ಬಸ್ಸೊಳಗೆ ನಾನು; ಗೂಡೊಳಗೆ ಅಜ್ಜಿ.

ಹೀಗೆ ಕೆಲವು ವರುಷಗಳು ಕಳೆದವು.
ಒಂದ್ ಸಾರಿ; ಗೂಡೊಳಗಿಂದ ಅಜ್ಜಿ ಮಾಯ ಆಯ್ತು, ಕಾಣಿಸಲಿಲ್ಲ.
ಇನ್ನೂ  ಸ್ವಲ್ಪ ದಿನ ಆದ ಮೇಲೆ ಶೆಡ್ ಕೂಡ ಮಾಯ ಆಯ್ತು.  ವಿಚಾರಿಸಿದಾಗ; ಅಜ್ಜಿ ಇಲ್ಲ ಅಂದ್ರು.

ಅಲ್ಲೊಂದು ಅಜ್ಜಿ ಇತ್ತು ಎನ್ನುವ ಯಾವ ಕುರುಹುಗಳಿಲ್ಲದ ಮಟ್ಟಿಗೆ, ಅಲ್ಲಿ ಏನೂ ಇಲ್ಲವಾಯ್ತು.
ಆದ್ರೂ ಪ್ರತಿ ಸಾರಿ ಆ ರಸ್ತೆಯಲ್ಲಿ; ಅಯಸ್ಕಾಂತದಂತೆ ಸೆಳೆಯುವ ಆ ಜಾಗ ಮಾತ್ರ; ಅಲ್ಲಿ ಏನೋ ಇದೆ ಅಂತ ಹೇಳತ್ತೆ. ಅಪ್ರಯತ್ನವಾಗಿ ಮಾಮೂಲಿನಂತೆ ಕೈಗಳು ಎದೆ ಮುಟ್ಟಿಕೊಂಡು ನಮಸ್ಕರಿಸುತ್ತವೆ. ಅದು ದೇವರಿಗೋ; ಅಥವಾ ಅಜ್ಜಿಗೋ ಮತ್ಯಾರಿಗೋ ಕಾಣೆ. ಎನೂ ಇಲ್ಲವಾಗಿಯೂ; ಅಪರೂಪದ್ದೇನೋ ಕಾಣುವ ವಿಚಿತ್ರ ಅನುಭವ.

Comments