ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದೂ ಅಲ್ಲದೆ, ಆ ಕಾರನ್ನು ಮನೆವರೆಗೂ ತಂದು ಬಿಟ್ಟು ಹೋಗುವ ಕರ್ಮವು 'ಕರುಣ' ನ ತಲೆಗೇ ಅಂಟಿಕೊಂಡಿತು. ಕಾರು ಬೇಕು ಅಂತ ಅಂದುಕೊಂಡಾಗಲೇ ಡ್ರೈವಿಂಗ್ ಕಲಿಯಲು ಸೇರಿಕೊಳ್ಳಬೇಕೆಂಬುದು ಅವನ ವಾದ. ಆದರೆ ಕೂಸು ಹುಟ್ಟದೇ ಕುಲಾವಿ ಹೊಲಿಸೋದು ಬೇಡ ಎಂಬುದು ನನ್ನ ಮನಸ್ಥಿತಿ. ಅಂತೂ ಬೈದುಕೊಳ್ಳುತ್ತಲೇ ಮನೆವರೆಗೂ ಕಾರು ಓಡಿಸಿಕೊಂಡು ಬಂದ.
ಅಮ್ಮ; ಕಾರಿಗೆ ಭರ್ಜರಿಯಾಗಿಯೇ ಪೂಜೆ ಮಾಡಲು ಅನುವಾದಳು. ಅಪ್ಪನಂತು, ‘ ಎಷ್ಟು ಕೊಡಬೋದು ಹೇಳಿ ಕಾರಿಗೆ..? ’ ಅಂತ ಪೂಜೆಗೆ ನಿಂತಿದ್ದ ಊರಿನ ಸಹ ವರ್ತಿಗಳಿಗೆ ಕೇಳಿ; ಕೇಳಿ; ಹೆಮ್ಮೆಯಿಂದ ಬೀಗುತ್ತಿದ್ದರು. ಅದು ಅಭಿಮಾನಕ್ಕೂ ಹೆಚ್ಚಾಗಿ; ತನ್ನ ಮಗ ಮೋಸ ಹೋಗದೇ ವ್ಯವಹಾರವೊಂದನ್ನು ಕುದುರಿಸಿಕೊಂಡು ಕಾರು ತಂದಿದ್ದಾನೆಂಬುದನ್ನು ಪದೆಪದೆ ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದ ರೀತಿ. ಮಧ್ಯಮ ವರ್ಗದ ಪುಟ್ಟ ಪುಟ್ಟ ಸಂಭ್ರಮಗಳನ್ನು ಮರೆಸುವಂತೆ ಆವರಿಸಿಕೊಳ್ಳುವುದು ಅವರ ಅತಿಯಾದ ವ್ಯವಹಾರ ಜ್ನಾನ ಎನಿಸುತ್ತದೆ.
ಕಾರಿನ ಸಂಪೂರ್ಣ ಚೌಕಾಸಿ-ಡೀಲ್ ಅನ್ನು ಕರುಣನ ತಲೆಗೆ ಕಟ್ಟಿ ನಾ ನೆಮ್ಮದಿಯಿಂದಿದ್ದೆ. ಪೂಜೆ ಸಾಂಗವಾಗಿ ನಡೀತಲಿತ್ತು. ಅತ್ತ ಕಡೆ ಕಾರಿನ ಗುಣಗಾನ ಮತ್ತು ಅವಗುಣಗಾನದ ಕೆಲವು ಮಂತ್ರಗಳೂ ಕೇಳಿಸುತ್ತಿದ್ದವು.
ಹೇ!! ಪೆಟ್ರೋಲ್ ಕಾರಾ… ರೀಸೇಲ್ ವ್ಯಾಲ್ಯೂ ಕಮ್ಮಿ. ಯಾರ್ ತಗೋತಾರೆ.?
ಜಾಸ್ತಿ ಆಯ್ತೇನೋ, ಮಾಡೆಲ್ ಸ್ವಲ್ಪ ಹಳೇದು
ಎಷ್ಟ್ ಓಡಿದೆ..? ಟೈರ್ ಹೊಸಾವ. ಸ್ಟೇಪ್ನಿನು ಕೊಟ್ಟಿದಾರಾ..?
ಅಫಿಷಿಯಲ್ ಯೂಜು ಅನ್ಸತ್ತೆ
ಹೇ… ಬರಿ ನಲವತ್ ಸಾವ್ರ ಅಷ್ಟೇನಾ ಓಡಿರೋದು..?? ಮೀಟ್ರು ರೀಡಿಂಗು ಚೇಂಜ್ ಮಾಡಿರ್ ಬೇಕು.
ಮಾರುತಿ ಅಲ್ವೇ ಸೈಕಲ್ ರಿಪೇರಿ ಮಾಡೋನು ... ಕಾರ್ ಬಿಚ್ಚಿ ರಿಪೇರಿ ಮಾಡ್ತಾನೆ. ಮೇಂಟೆನೆನ್ಸ್ ಕಮ್ಮಿ. ಅರಾಮು
ಕಾರೇನೊ ತಂದ್ರಿ, ಎಲ್ ನಿಲ್ಲುಸ್ತೀರಾ..?
ಟ್ರಾಕ್ಟರ್ ಓಡಿಸೋರಿಗೆ, ಕಾರೇನು ಕಷ್ಟ ಅಲ್ಲ; ಆರಾಮಾಗಿ ಓಡಿಸ್-ಬೋದು, ಪವರ್ ಸ್ಟೇರಿಂಗು; ಒಂದೇ ಕೈಲಿ ತಿರುಗಿಸಿ ಬಿಡ್ಬೋದು
ಇತ್ಯಾದಿ ಇನ್ನು ಮುಂತಾದವುಗಳು.
ಪೂಜೆ ಮುಗಿದ ಮೇಲೆ, ನಿಂಬೆ ಹಣ್ಣು ತುಳಿಸಿ ಕರುಣನನ್ನೇ ಕರೆದುಕೊಂಡು ದೇವಸ್ಥಾನದ ಕಡೆಗೆ ಹೊರಟೆ. ಹೊಸ ಹಳೆ ಕಾರಿನ ಪೂಜೆಗೆಂದು.
ನಮ್ಮೂರಿನಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿ ನಮ್ಮ ಗ್ರಾಮದೇವರು, ಬಸವಣ್ಣನ ದೇವಸ್ಥಾನವಿದೆ. ಇಲ್ಲಿ ಬಸವಣ್ಣ ದೇವರು ಕಲ್ಲುಬಂಡೆಯೊಳಗಿಂದ ಮೂಡಿದ್ದಾನೆ. ಮೊದಲು ಬಸವಣ್ಣ ದೇವರ ತಲೆ ಮಾತ್ರ ಕಾಣಿಸುತ್ತಿತ್ತಂತೆ. ವರುಷಗಳು ಕಳೆದಂತೆ, ಬಸವಣ್ಣ ಕುಳಿತಿರುವ ಕಾಲು ಸ್ವಲ್ಪ ಹೊರ ಬಂದಿದ್ದು; ಇನ್ನೂ ಸ್ವಲ್ಪ ವರ್ಷಗಳಲ್ಲಿ ಪೂರ್ಣ ಬಸವಣ್ಣ ಕಾಣುತ್ತಾನೆ ಎಂದು ಕಥೆ ಹೇಳುತ್ತಾರೆ. ಪೂಜೆಯ ಶೃಂಗಾರಕ್ಕೂ ಸ್ವಲ್ಪ ಮುಂಚೆ ದೇವರನ್ನು ತೊಳೆಯುವ ಸಂರ್ಭದಲ್ಲಿ ಬಂದಾಗ, ಕುಳಿತಿರುವ ಅರ್ಧ ದೇವರನ್ನು ಸ್ಪಷ್ಟವಾಗಿ ನೋಡಬಹುದು.
ಬಸವಣ್ಣನ ಇದೇ ಕಥೆಯನ್ನು ನನ್ನ ಒರಿಸ್ಸಾದ ಗೆಳೆಯ ಮಾನಸ್ ಗೆ ಹೇಳಿದಾಗ, ಅವನು ನನ್ನನ್ನು ಅಪಹಾಸ್ಯ ಮಾಡಿದ್ದೂ ಅಲ್ಲದೇ… “ ಭಗವಾನ್ ಜಬ್ ಪೂರಾ ಬಾಹರ್ ಆಯೇಗಾ..!! ಓ ಭಾಗ್ ಜಾಯೆಗಾ” ಎಂದ. "ಇಲ್ಲಪ್ಪಾ!! ವರುಷ ವರುಷಕ್ಕೂ ದೇವರು ಕೊಂಚ ಕೊಂಚ ಹೊರ ಬರುತ್ತಿರುವುದನ್ನು ಜನಗಳು ನೋಡಿಯೇ, ಹೇಳುತ್ತಿರುವುದು" ಅಂದರೆ , "ದೇವರು ಹೊರಗ್ ಬಂದ ದಿನ ನನಗೂ ಫೋನ್ ಮಾಡಿ ಹೇಳು, ಅಕಸ್ಮಾತ್ ನಾನ್ ಬದುಕಿದ್ರೆ.. ಬರ್ತೀನಿ" ಅಂಥ ಜೋಕ್ ಕಟ್ ಮಾಡ್ತಾನೆ.
"ಲೋ, ಆ ದಿವ್ಸ ಪ್ರಪಂಚ ಪ್ರಳಯ ಆಗುತ್ತಂತೆ" ಅಂತ ಮಾತ್ರ ನಾನು ಅವನಿಗೆ ಹೇಳಲಿಲ್ಲ. ಇನ್ನೂ ಉರಿಸ್ತಾನೆ.
"ಲೋ, ಆ ದಿವ್ಸ ಪ್ರಪಂಚ ಪ್ರಳಯ ಆಗುತ್ತಂತೆ" ಅಂತ ಮಾತ್ರ ನಾನು ಅವನಿಗೆ ಹೇಳಲಿಲ್ಲ. ಇನ್ನೂ ಉರಿಸ್ತಾನೆ.
ಪೂಜಾರಿಯವರು ಕಾರಿನ ಮೇಲೆಲ್ಲಾ ಚಾಕ್ ಪೀಸಿನಲ್ಲಿ ದೇವರ ಚಿತ್ರವನ್ನು ಬರೆದು, ಅದ್ದೂರಿಯಾಗಿ ಪೂಜೆ ಮಾಡಿದರು. ಅವರ ಸರ್ವೀಸ್ ಚಾರ್ಜ್ ಅನ್ನು ಅವರದೇ ಆರತಿ ತಟ್ಟೆಗೆ ಹಾಕಿ, ಕೈ ಮುಗಿದೆ. ಕರುಣ ಮಾತ್ರ ದೇವಸ್ಥಾನದ ಇಂಚಿಂಚನ್ನೂ ಬಿಡದೆ, ಬಡಿದು ಬಡಿದು ನೋಡುವುದರಲ್ಲಿ ತಲ್ಲೀನನಾಗಿದ್ದ. ತನ್ನ ಸಿವಿಲ್ ಇಂಜಿನಿಯರು ಬುಧ್ದಿಯನ್ನು ಇಲ್ಲೂ ತೋರಿಸುತ್ತಿದ್ದ.
“ಅಬ್ಬಬ್ಬಬ್ಬಾ ಏನ್ ಕಟ್ಟಿದಾರೆ ಮಗ, ಈ ದೇವಸ್ಥಾನ ಎಷ್ಟು ವರ್ಷ ಹಳೇದ್ ಇರ್ಬೋದು…?” ಪ್ರಶ್ನಿಸಿದ.
“ನಾನು ಹುಟ್ಟೋಕೆ ಮುಂಚೆ ಇಂದಾನು ಈ ದೇವಸ್ಥಾನ ಇಲ್ಲೇ ಇದೆ. ನಮ್ಮಪ್ಪ ಹುಟ್ಟೋಕ್ ಮುಂಚೆಯಿಂದಲೂ ಇಲ್ಲೇ ಇರ್ಬೋದು. ಸುಮಾರು ಐವತ್-ಅರವತ್ ವರ್ಷ ಹಿಂದೆ ”
“ಹಾಕ್… ಥೂ… ಈ ಒಂದೊಂದು ಕಂಬಗಳ ವಾಸ್ತುಶಿಲ್ಪದ ಮೌಲ್ಯ ಗೊತ್ತಿದಿಯಾ ನಿನಗೆ. ನನ್ನ ಊಹೆ ಪ್ರಕಾರ ಇವು ಈ ಶತಮಾನದ್ದಂತು ಅಲ್ಲ” ಅಂದ.
“ಹೋ!! ಹೌದಾ .. ಇರ್ಬೌದು.” ಅಂದೆ.
ಅದೇ ಪ್ರಶ್ನೆಯನ್ನು ಅವನು ಅಲ್ಲೇ ಇದ್ದ ಹಿರಿಯ ತಲೆಯೊಂದಕ್ಕೆ ಕೇಳಿದ್ದಕ್ಕೆ ಅವರು … “ಇದು ಚ್ವಾಳ್ರು ಕಟ್ಟಿದ್ದ ದೇವಸ್ಥಾನ. ಚ್ವಾಳ್ರು ಕಾಲುದ್ದು” ಅಂದ್ರು. ಕರುಣ ಸಖೇದಾಶ್ಚಾರ್ಯದಿಂದ ಬಾಯಿ ತೆರೆದ.
“ಪ್ರಪಂಚವನ್ನು ಓದೋಕೆ ಮುಂಚೆ, ನಿನ್ನ ಊರನ್ನು ನೀನು ಮೊದಲು ಓದು. ಹೊರಗಿಂದ ಯಾರಾದ್ರು ಬಂದ್ರೆ, ನಿಮ್ಮೂರನ್ನ ಹಿಂಗೇನಾ ಪರಿಚಯಿಸೋದು” ಅಂತ ಉಗಿದ.
“ನನಗೆ ಪೌರಾಣಿಕ ಸ್ವಾರಸ್ಯ ಕಥೆಗಳಲ್ಲಿ ಆಸಕ್ತಿ ಇದೆಯೇ ಹೊರತು ಚಾರಿತ್ರಿಕ ಮೌಲ್ಯಗಳು, ಅಂಕಿ-ಅಂಶಗಳಲ್ಲೆಲ್ಲಾ ಆಸಕ್ತಿ ಇಲ್ಲ” ಅಂದೆ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬಂತಹ ಬಿಗುವಿನಲ್ಲಿ. ಆದರೆ ಇಂತಹ ಸರಳ ಪ್ರಶ್ನೆಗಳಿಗಾದರೂ ಉತ್ತರ ಗೊತ್ತಿರಬೇಕಾಗಿತ್ತು ಎನಿಸಿತು.
“ನಮ್ಮ ಮೇಸ್ತ್ರಿಗಳಿಗೆ , ತಿಳಿ ಬಿಳಿ ಸಿಮೆಂಟ್ ಕೊಟ್ಟರೂ ಕೂಡ ಇಂಥ ಫಿನಿಷಿಂಗ್ ಮಾಡಕ್ಕೆ ಅಳ್ತಾವೆ. ಕಲ್ಲು ಬಂಡೆಗಳು, ಉಳಿ, ಸುತ್ತಿಗೆ ಇಷ್ಟರಲ್ಲೇ ಎಂಥಾ ಕೈಚಳಕ. ಕಲ್ಲು ಗಳನ್ನೇ, ಒಂದರ ಮೇಲೆ ಒಂದು ಡಯಾಗನಲ್ ಆಗಿ ಇಡ್ತಾ ಛಾವಣಿ ಮಾಡಿದಾರೆ. ಹೊರಗಿನ ಪೌಳಿ ಕೂಡ ಆರ್ಟಿಸ್ಟಿಕ್ ಆಗಿದೆ. ಇಷ್ಟು ಸುಂದರವಾಗಿ ಒಂದು ಬಿಲ್ಡಿಂಗ್ ಎಲಿವೇಷನ್ ಕೊಡೋದಕ್ಕೆ ಬಹಳ ಕಷ್ಟ ಆಗತ್ತೆ” ಅಂದ
“ಅಂದ್ರೆ ಚೋಳರು ನಿಮಗಿಂತ ಒಳ್ಳೇ ಸಿವಿಲ್ ಇಂಜಿನಿಯರುಗಳು ಅನ್ನು…?”
“ಆಬ್ವಿಯಸ್ಲಿ!!”
ಕಾರು ಪೂಜೆ ಮಾಡಿಸಿಕೊಂಡು ತೋಟದ ಮಾರ್ಗವಾಗಿ ಮನೆಗೆ ಹೊರಟೆವು. ಅಪ್ಪ ಕಾರಿನಲ್ಲಿ ಮಚ್ಚು ಇಟ್ಟಿದ್ದರು. ತೋಟದಲ್ಲಿ ಎಳನೀರು ಕುಡಿದುಕೊಂಡು ಬನ್ನಿರೆಂಬುದು ಅಪ್ಪನ ಆಜ್ನೆಯಾಗಿತ್ತು. ಇಷ್ಟೆಲ್ಲಾ ಉಪಕಾರ ಮಾಡಿದ ಕರುಣ ಎಂಬ ಕರುಣನಿಗೆ ಒಂದು ಎಳನೀರು ಹೆಚ್ಚೇ..? ತೋಟದ ಮುಂದೆ ಕಾರು ನಿಲ್ಲಿಸಿ, ಮಚ್ಚು ಹಿಡಿದು ವೀರಾವೇಶವಾಗಿ ಒಳ ನಡೆದೆ. ಅವನ ಕೈಗೆ ಮಚ್ಚು ಕೊಟ್ಟು
“ನೋಡ್ಲಾ.. ಇದು ತೆಂಗಿನ ಮರ. ಎಳನೀರು ಮರದ ಮೇಲೆ ಬಿಡೋದು. ಮರ ಚಿಕ್ಕವು. ಸೊ!! ಕೈಗೆನೆ ಏಟುಕ್ತಾವೆ. ಎಷ್ಟ್ ಬೇಕಾದ್ರು ಕಿತ್ತು, ಕೊಚ್ಚಿ ಕುಡಿ” ಅಂದೆ.
“ಹಂಗಾದ್ರೆ ನಿಂಗೆ ಎಳನೀರು ಕೊಚ್ಚೋದಕ್ಕೂ ಬರಲ್ವಾ ..?” ಅಂಥ ಬಹಳ ಆಶ್ಚರ್ಯದಿಂದ ಕೇಳಿದ.
“ಖಂಡಿತವಾಗ್ಲು ಬರಲ್ಲ. ಅಂಥಾ ಸಿಚುಯೇಷನ್ನು ಇದುವರ್ಗು ಬಂದಿಲ್ಲ. ಅಪ್ಪನ ಜೊತೆ ಬಂದ್ರೆ ಅವರೇ ಕೊಚ್ಚಿ ಕೊಡ್ತಾರೆ. ನಾನು ಒಬ್ಬನೇ ಬಂದಾಗ ಎಳನೀರು ಕುಡಿಯಲ್ಲ. ಅಷ್ಟೇ ” ಅಂದೆ.
“ಕಂಪ್ಯೂಟರ್ ಮುಂದೆ ಕೂತು, ಟಕ್ಕು ಟಕ್ಕು ಅನ್ನೋದ್ ಬಿಟ್ರೆ ಬೇರೆ ಬರಲ್ವಾ…? ರೈತನ ಮನೆಗೆ ಕಪ್ಪು ಚುಕ್ಕಿ ನೀನು” ಅಂತ ಪಂಚ್ ಡೈಲಾಗ್ ಹೊಡೆದ.
“ಲೋ!! ಬೇಕಂದ್ರೆ ಕೊಚ್ಚಿ ಕುಡಿ. ಇಲ್ಲಾಂದ್ರೆ, ಮನೆಗೆ ಹೋದ್ ಮೇಲೆ ನಮ್ಮಪ್ಪ ಕೊಚ್ಚಿ ಕೊಡ್ತಾರೆ, ಕುಡಿವಿಯಂತೆ” ಅಂದೆ.
ಆಶ್ಚರ್ಯವೆಂಬಂತೆ ಅವನೇ ಕೊಚ್ಚಿ ಕುಡಿದ. ಅವನು ಕೊಚ್ಚಿ ಕೊಟ್ಟ ಎಳನೀರನ್ನು ನಾನು ಕುಡಿದದ್ದು ಹಾಸ್ಯಾಸ್ಪದವಾಗಿತ್ತು.
ಮನೆಗೆ ಹೋದ ಮೇಲೆ; ಕಲಿಯುವವರೆಗೂ ಕಾರಿಗೊಂದು ಶಾಶ್ವತ ವ್ಯವಸ್ಥೆ ಮಾಡಿ ಪಾರ್ಕ್ ಮಾಡಲಾಯ್ತು.
ಅದೇನು ಸೈಕಲ್ಲೇ, ಎದ್ದು ಬಿದ್ದು ಕಲಿತು ಓಡಿಸೋದಕ್ಕೆ.
“ನೋಡ್ಲಾ.. ಇದು ತೆಂಗಿನ ಮರ. ಎಳನೀರು ಮರದ ಮೇಲೆ ಬಿಡೋದು. ಮರ ಚಿಕ್ಕವು. ಸೊ!! ಕೈಗೆನೆ ಏಟುಕ್ತಾವೆ. ಎಷ್ಟ್ ಬೇಕಾದ್ರು ಕಿತ್ತು, ಕೊಚ್ಚಿ ಕುಡಿ” ಅಂದೆ.
“ಹಂಗಾದ್ರೆ ನಿಂಗೆ ಎಳನೀರು ಕೊಚ್ಚೋದಕ್ಕೂ ಬರಲ್ವಾ ..?” ಅಂಥ ಬಹಳ ಆಶ್ಚರ್ಯದಿಂದ ಕೇಳಿದ.
“ಖಂಡಿತವಾಗ್ಲು ಬರಲ್ಲ. ಅಂಥಾ ಸಿಚುಯೇಷನ್ನು ಇದುವರ್ಗು ಬಂದಿಲ್ಲ. ಅಪ್ಪನ ಜೊತೆ ಬಂದ್ರೆ ಅವರೇ ಕೊಚ್ಚಿ ಕೊಡ್ತಾರೆ. ನಾನು ಒಬ್ಬನೇ ಬಂದಾಗ ಎಳನೀರು ಕುಡಿಯಲ್ಲ. ಅಷ್ಟೇ ” ಅಂದೆ.
“ಕಂಪ್ಯೂಟರ್ ಮುಂದೆ ಕೂತು, ಟಕ್ಕು ಟಕ್ಕು ಅನ್ನೋದ್ ಬಿಟ್ರೆ ಬೇರೆ ಬರಲ್ವಾ…? ರೈತನ ಮನೆಗೆ ಕಪ್ಪು ಚುಕ್ಕಿ ನೀನು” ಅಂತ ಪಂಚ್ ಡೈಲಾಗ್ ಹೊಡೆದ.
“ಲೋ!! ಬೇಕಂದ್ರೆ ಕೊಚ್ಚಿ ಕುಡಿ. ಇಲ್ಲಾಂದ್ರೆ, ಮನೆಗೆ ಹೋದ್ ಮೇಲೆ ನಮ್ಮಪ್ಪ ಕೊಚ್ಚಿ ಕೊಡ್ತಾರೆ, ಕುಡಿವಿಯಂತೆ” ಅಂದೆ.
ಆಶ್ಚರ್ಯವೆಂಬಂತೆ ಅವನೇ ಕೊಚ್ಚಿ ಕುಡಿದ. ಅವನು ಕೊಚ್ಚಿ ಕೊಟ್ಟ ಎಳನೀರನ್ನು ನಾನು ಕುಡಿದದ್ದು ಹಾಸ್ಯಾಸ್ಪದವಾಗಿತ್ತು.
ಮನೆಗೆ ಹೋದ ಮೇಲೆ; ಕಲಿಯುವವರೆಗೂ ಕಾರಿಗೊಂದು ಶಾಶ್ವತ ವ್ಯವಸ್ಥೆ ಮಾಡಿ ಪಾರ್ಕ್ ಮಾಡಲಾಯ್ತು.
ಅದೇನು ಸೈಕಲ್ಲೇ, ಎದ್ದು ಬಿದ್ದು ಕಲಿತು ಓಡಿಸೋದಕ್ಕೆ.
ಸರಳವಾಗಿ ಅಚ್ಚುಕಟ್ಟಾಗಿ ಬರೆಯೋದು ಹೆಂಗೆ ಅಂತ ನಿನ್ನಿಂದ ಕಲಿಬೇಕು. ನಾನೆಲ್ಲೋ ಕಡೆಗೆ ಕಲ್ಪವೃಕ್ಷದ ಪ್ರಸಾದ ನಿನ್ನ ಕಾರಿನ ಮೇಲೆ ಬೀಳುವ ಟ್ವಿಸ್ಟ್ ಇರುತ್ತೆ ಅನ್ಕೊಂಡಿದ್ದೆ!
ReplyDeleteThanks Manjunath
Deleteಹಹ!! ನಿನ್ನ ಕಲ್ಪನೆ ಕೂಡ ಚೆನ್ನಾಗಿದೆ.
ಈ ಬರಹಕ್ಕೆ ಒಂದು ಚೌಕಟ್ಟು ಅಂತ ಇರಲಿಲ್ಲ. ಒಂದೇ ಫ್ಲೋ ನಲ್ಲಿ ಇದ್ದರೂ ಕೂಡ ಆ ಮೂರುಅಧ್ಯಾಯಗಳನ್ನ ಒಂದಕ್ಕೊಂದು ಲಿಂಕ್ ಮಾಡಕ್ಕಾಗಲಿಲ್ಲ. ಅದಕ್ಕಂತಲೇ ಮೂರು ಹೆಸರಿಟ್ಟೆ. You may also like this http://kanasuru.com/life-at-kudru-island/
http://blog.kanasuru.com/2013/11/blog-post_29.html
ReplyDelete