1. ಟಿಪ್ಪು ಗಲಭೆ
ನಾನು ಮತ್ತು ಗೆಳೆಯ ಜೋಬಿ ಚಿತ್ರದುರ್ಗ ಕೋಟೆ ನೋಡುವ ಸಲುವಾಗಿ ಅವೆಂಜರ್ ಬೈಕಲ್ಲಿ ಬೆಂಗಳೂರಿಂದ ಹೊಗಿದ್ದೆವು.
ಉರಿ ಬಿಸಿಲಲ್ಲಿ, ಸುತ್ತು ಸುತ್ತಿನ ಕೋಟೆ ನೋಡುವಷ್ಟರಲ್ಲಿ ಸುಸ್ತಾಗಿತ್ತು.
ಅದು ಟಿಪ್ಪು ಹುಟ್ಟಿದ ದಿನವಾಗಿತ್ತು. ಚಿತ್ರದುರ್ಗದ ಮುಸ್ಲಿಂ ಬಾಂಧವರು ಟಿಪ್ಪು ಜಯಂತಿ ಆಚರಿಸುತ್ತಿದ್ದರು. ಭಯಂಕರ ಮೆರವಣಿಗೆಗಳು ನಡೆಯುತ್ತಿದ್ದೆವು. ಹತ್ತಾರು ಗುಂಪುಗಳಿದ್ದವು.
ಪ್ರತಿ ಗುಂಪುಗಳು, ಒಂದು ಟ್ರಕ್ ಮೇಲೆ ದೊಡ್ಡ ದೊಡ್ಡ ಮ್ಯೂಸಿಕ್ ಸಿಸ್ಟಮ್ಸ್ ಇಟ್ಟು … ಘನ ಘೋರವಾದ ನೃತ್ಯ ಸಂಭ್ರದಲ್ಲಿ ಮುಳುಗಿದ್ದರು.
ಮ್ಯೂಸಿಕ್ ಬೀಟ್ಸ್ ಗಳು ನಮ್ಮೊಳಗಿದ್ದ ‘ಮೆಂಟಲ್ ಮಂಜ’ ನನ್ನು ಕೆರಳಿಸಿತಾದಾರು,ಇಳಿದು ಸ್ಟೆಪ್ ಹಾಕುವಷ್ಟು ವ್ಯವಧಾನ ಇರಲಿಲ್ಲ.
ಕೋಟೆ ನೋಡಿಯಾದ ಮೇಲೆ, ಜೋಬಿಯ ಲೋಕಲ್ ಗೆಳೆಯನೊಬ್ಬ ನಮ್ಮನ್ನು ಕೂಡಿಕೊಂಡ. ಅವನೊಡನೆ ಚಂದವಳ್ಳಿ ತೋಟ, ಗುಹೆಗಳನ್ನೆಲ್ಲಾ ನೋಡಿಕೊಂಡು .. ಅವರ ಮನೆಯಲ್ಲಿಯೇ ಮಧ್ಯಾಹ್ನದ ಊಟ, ನಿದ್ರೆ ಮುಗಿಸಿ ಬೆಂಗಳೂರಿನ ಕಡೆಗೆ ವಾಪಾಸಾಗಲು ನಿರ್ಧರಿಸಿದೆವು.
_____________________________________________________
ಇಷ್ಟರಲ್ಲಿ!! ಒಂದು ರೌಂಡ್ ಕೋಮು ಗಲಭೆಯೂ ನಡೆದು, ಸಿಟಿಯೊಳಗೆ ಹೋಗುವುದು ನಿಷಿದ್ದವಾದಂತಾಯಿತು.
” ಮೆರವಣಿಗೆಕಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಿನಿಮಾದ ಪೋಸ್ಟರ್ ಹರಿದಿದ್ದರಿಂದ ಮೊದಲುಗೊಂಡ ಗಲಭೆಯೂ, ಅತಿರೇಕಕ್ಕೆ ಹೋಗಿದೆ..” ಎಂಬ ವರ್ತಮಾನವು ನಮ್ಮನ್ನು ತಲುಪಿತು.
ಇದು ವರ್ಷ ವರ್ಷ ಹಿಂಗೇನಾ..? ಅಂತ ಆ ಸ್ಥಳೀಯ ಮಿತ್ರನನ್ನು ಕೇಳಿದ್ದಕ್ಕೆ .. –
“ಇಲ್ಲ!! ಇಲ್ಲ!! ಈ ವರ್ಷ ಶುರು ಮಾಡ್ಕಂಡಿರಾದು. ಗಣಪತಿ ಉತ್ಸವ, ಕನ್ನಡ ರಾಜ್ಯೋತ್ಸವಗಳಿಗೆ ಕೌಂಟರ್ ಕೊಡೋದಕ್ಕೆ ಇದು.” ಅಂದ.
ಈ ಘಟನೆ ನಡೆದು ಮೂರು ವರ್ಷಗಳಾಗಿತ್ತು.
ಮತ್ತೆ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಸಂಭ್ರಮಿಸಬೇಕು ಅಂತ ಸಿದ್ದರಾಮಯ್ಯ ಸರ್ಕಾರದವರು ಸುತ್ತೋಲೆ ಹೊರಡಿಸಿದಾಗ...
ಮಾಡಕ್ಕೆ ಬ್ಯಾರೆ ಕ್ಯಾಮೆ ಇರಲಿಲ್ವಾ..? ಅನ್ನಿಸ್ತು.
ಮಾಡವ್ರು ಮಾಡ್ತಾರೆ..? ಮಾಡದವ್ರು ಇಲ್ಲ.. ಈಗಲೇ ಕಿತ್ತಾಡಕ್ಕೆ ಬೇಜಾನ್ ವಿಷಯಗಳಿವೆ.
_____________________________________________________
ಮೊದಲ ಟಿಪ್ಪು ಜಯಂತಿಯ ದಿನ
ಬೆಳಗಿನಿಂದಲೇ ನನ್ನ ಫೇಸ್-ಬುಕ್ ಟೈಮ್ ಲೈನ್!! ಪರ ವಿರೋಧಗಳ ಬೃಹತ್ ಲೇಖನಗಳಿಂದ ತುಂಬಿ ಹೋಯ್ತು.
ಅಂದುಕೊಂಡಂತೆ!! ಮಡಿಕೇರಿಯ ಗಲಭೆಗಳು ಮತ್ತು ಅದನ್ನು ಸುತ್ತುವರೆದ ವರದಿಗಳು ಬರಲಿಕ್ಕೆ ಶುರು ಆಗಿದ್ವು.
ವಿಷಯ ಪರಮಾಣು ವಿಚ್ಛೇಧನದಂತೆ ಹಬ್ಬಿ ಎಲ್ಲವನ್ನೂ ನುಂಗಿಕೊಳ್ಳುತ್ತದೆ ಎಂಬ ಕನಿಷ್ಟ ಪರಿಜ್ಞಾನವಿಲ್ಲದೆ, ರಂಗು ರಂಗಾಗಿ ಬಿತ್ತರಿಸುತ್ತಿದ್ದ ಸುದ್ದಿ ವಾಹಿನಿಗಳ ಮೇಲೆ ಕೋಪ ಬಂತು.
ತಕ್ಷಣ!!... ಸಿಟಿ ಕಡೆ ಹೋಗಬೇಡ್ರಿ ಅಂತ ವಾರ್ನ್ ಮಾಡೋಕೆ ಮನೆಯವರಿಗೆ ಕಾಲ್ ಮಾಡಿದೆ.
ಅವರು ರಿಸೀವ್ ಮಾಡಲಿಲ್ಲ. ಸಖತ್ ಭಯ ಆಯ್ತು. ಕೋಮುಗಲಭೆಗಳ ಸಾವು-ನೋವಿಂದ ಮೊನ್ನೆ ಮೊನ್ನೆಯಿನ್ನೂ ನನ್ನ ಶಿವಮೊಗ್ಗ ಹೊರ ಬಂದಿತ್ತು.
_________________________________________
ಹಲವಾರು ಬಾರಿ ರೀ-ಟ್ರೈ ಮಾಡಿದ ಮೇಲೆ ಅಮ್ಮ!! ರಿಸೀವ್ ಮಾಡಿದಳು.
“ಎಲ್ಲಿದೀರಾ..? ” ಅಂದೆ
“ಶಿಮೋಗ ಬಂದಿದೀವಿ. ಗಾಂಧಿ ಬಜಾರಲ್ಲಿ, ಮಜ್ಜಿಗೆ ಕುಡೀತಾ ಇದೀನಿ.” ಒಂದು ಕ್ಷಣ ದಿಗಿಲಾಯ್ತು..
ಮತ್ತೂ ಮುಂದುವರೆದು.. ” ಟಿಪ್ಪು ಜಯಂತಿ!! ಅಂತೆ. ಗಾಂಧಿ ಬಜಾರಲ್ಲಿ!! ಮಸೀದಿ ಮುಂದೆ ಮಜ್ಜಿಗೆ ಕೊಡ್ತಿದಾರೆ. ಕುಡೀತಾ ಇದೀನಿ.” ಅಂದಳು.
ಯಪ್ಪಾ!!
” ಸರಿ!! ಸರಿ!! ಏನ್ ಕೊಟ್ರು ಕುಡಿ ನೀನು. ಅಲ್ಲೆಲ್ಲಾ ಜಾಸ್ತಿ ಹೊತ್ತು ಇರಬೇಡ. ಮೊದ್ಲು ಮನೆಗೆ ಹೊರಡ್ರಿ. ” ಅಂದೆ.
” ಹಬ್ಬದ ಸಾಮಾನು, ತಗಳ್ದೆ ಹೋಗದಾ.. ” ಎಂಬ ಪ್ರಸೆಂಟ್ ಕಂಟಿನುಯಸ್ ಮಾತಿನ ಜೊತೆ ಮಜ್ಜಿಗೆ ಕುಟುಕಿಸುತ್ತಿದ್ದುದು ಮಾರ್ದನಿಸುತ್ತಿತ್ತು.
ಡಿಬೇಟ್ ಮಾಡೋರು ಮಾಡ್ತಿರ್ತಾರೆ. ಬದುಕೋರು ಬದುಕ್ತಿರ್ತಾರೆ.
************** ***************
2 . ಸಾವಿನ ಮನೆಯಲ್ಲಿ ಸ್ವರ್ಣ
ರಾತ್ರಿಯ ಕನಸು, ಕನಸೆಂದು ಅರ್ಥವಾಗುವುದರೊಳಗೆ ಬೆಳಗಾಗಿಬಿಟ್ಟಿತ್ತು. ಗೆಳೆಯ ಸೀನನ ಮುಖ ಅಂಗಳದಲ್ಲಿ ಕಾಣಿಸಿತು. ಕೊಂಚ ದಿಗಿಲುಗೊಂಡವನಂತೆ ಕಾಣುತ್ತಿದ್ದ. ದಿನವಿಡಿ ನಮ್ಮ ಜೊತೆ ಕಾಲೇಜಿನಲ್ಲಿ ಓದುವ ಕೆಲಸ ಮಾಡಿ, ಸಂಜೆಯಾದ ಮೇಲೆ ಸ್ವರ್ಣಚಂಪ ಅಗರಬತ್ತಿಯನ್ನು, ಮಿಳಗಟ್ಟದ ಪ್ರತಿಯೊಂದು ದಿನಸಿ ಅಂಗಡಿಗಳಿಗೆ ಸಪ್ಲೈ ಮಾಡುತ್ತಿದ್ದ.
'ಗೀತ ಸುಸೈಡ್ ಮಾಡ್ಕೊಂಡಿದಾಳಂತೆ. ' ಎಂದ.
ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯಲಿಲ್ಲ. ಸಾವು ಪ್ರಧಾನಮಂತ್ರಿಯದ್ದೇ ಆಗಲಿ ಅಥವಾ ಮಗ್ಗುಲು ಮನೆಯ ಮುದಿ ಅಜ್ಜನದ್ದೇ ಆಗಿರಲಿ. ಅದೊಂದು ದುಃಖದ ಸಮಾಚಾರ. ಸುದ್ದಿಯನ್ನು ಕೇಳಿದ ತಕ್ಷಣ ಸಂತಾಪ ಸೂಚಕ ಪದಗಳು ತಿಳಿಯುವುದೇ ಇಲ್ಲ. ಗೀತ ಪಕ್ಕದ ಕೇರಿಯ ಓರಗೆಯ ಹುಡುಗಿ. ಮದುವೆಗಳಲ್ಲಿ, ಜಾತ್ರೆಗಳಲ್ಲಿ ನೋಡಿ ಕಣ್ಣು ತುಂಬಿಕೊಡದ್ದಷ್ಟೆ ನೆನಪು.
'ಗೀತಳಿಗೆ ಮದುವೆ ನಿಶ್ಚಯವಾಗಿತ್ತು. ಹಳೆಯ ಪ್ರಿಯಕರನೊಬ್ಬ, ಮದುವೆ ಮಗನಿಗೆ ಫೋನ್ ಮಾಡಿ!! ಗೀತಳನ್ನು ಬಿಟ್ಟುಬಿಡುವಂತೆ ಹೇಳಿದ್ದಾನೆ. ಇದರಿಂದ ಗೊಂದಲಗೊಂಡ ಮಾಡುವೆ ಮಗ ಗೀತಳಿಗೆ ಫೋನ್ ಮಾಡಿ - '
` ತಡಿ ಮನೆಗೆ ಬಂದು, ನಿಮ್ಮಪ್ಪಂಗೆ ಎಲ್ಲಾ ಹೇಳ್ತೇನೆ. ` ಎಂದಿದ್ದಾನೆ. ಇವಳು ಭಯ ಬಿದ್ದು ನೇಣು ಹಾಕ್ಕೋಂಡು, ಸತ್ತೋಗಿದ್ದಾಳೆ.
ಈಗ ಪ್ರೇಮಿಸಿದ ಹುಡುಗ ಮತ್ತು ಮದುವೆಯ ಮಗ ಇಬ್ಬರನ್ನೂ ಪೋಲೀಸರು ಹುಡುಕುತ್ತಿದ್ದಾರೆ. '
ಸಾವಿನ ಮನೆಯ ಸುತ್ತಲೂ ಅದಾಗಲೇ ಸಿಕ್ಕಾ-ಪಟ್ಟೆ ಜನ ಸೇರಿದ್ದರು. ಸಾವಿಗೆ ಸಾವಿರ ಕಾರಣಗಳನ್ನು ಹೇಳಿದ ಸೀನ. ಆದರೆ ಅಲ್ಲಿ ಹುಡುಗಿ ಅನ್-ರೂಲ್ಡ್ ಹಾಳೆಯ ಮೇಲೆ ' ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದು, ಸಹಿ ಮಾಡಿದ್ದಳು. ಸಾಯುವ ಕೊನೆ ಹಂತದಲ್ಲಿಯು ಬದುಕಿನ ವೃತ್ತಿಪರತೆಯನ್ನು ಮೆರೆಯುವ ಪ್ರತಿಯೊಂದು ಆತ್ಮಾಹುತಿ ಕೇಸುಗಳು ದುರಂತ-ಜೋಕುಗಳಂತೆ ಕಾಣುತ್ತವೆ. ಅಲ್ಲಾ ನನ್ನ ಸಾವಿಗೆ ನಾನೆ ಕಾರಣ ಅಂತ ಬರೆದಿಡುವುದರ ಅವಶ್ಯಕತೆಯಾದರೂ ಏನಿರಬಹುದು. ?
' ಇಷ್ಟ ಪಟ್ಟವನ ಜೊತೆ, ಮನೆಬಿಟ್ಟು ಓಡಿ ಹೋಗಬಹುದಿತ್ತಲ್ಲಮ್ಮಾ. ಮಗಳು ಎಲ್ಲೋ ಒಂದು ಕಡೆ ಬದುಕಿದ್ದಾಳೆ ಅನ್ನೊ ಸಮಾಧಾನದಲ್ಲಿಯಾದರೂ ಇರ್ತಾ ಇದ್ವಿ. ?' ಅಲ್ಲೊಂದು ಹೆಂಗಸು ಎದೆ ಬಡಿದುಕೊಳ್ಳುತ್ತಾ ಅಳುತ್ತಿತ್ತು. ಇದೊಂದು ದೊಡ್ಡವರ ಅವಕಾಶವಾದಿತನ ಎನಿಸಿತು.
ಒಂದು ಸ್ಟುಪಿಡ್ ಮುದುಕಿ ಸತ್ತ ಹುಡುಗಿ ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಊಟ ಮಾಡಿದ್ದನ್ನೆ ವಿಶೇಷಾರ್ಥಗಳನ್ನು ನೀಡುತ್ತಾಹೇಳುತ್ತಿದ್ದಳು. ಸತ್ತ ಮೇಲೆ ಸ್ವರ್ಗಕ್ಕೆ ಹೋಗುವವರೆಗೂ ಶಕ್ತಿ ಬೇಕಂತೆ. ಅದೊಂದು ಲಾಂಗ್-ವಾಕ್ ಅಂತೆ. ಅದಕ್ಕೆ ಸಾಯುವವರು, ಸಾಯುವ ಮುಂಚೆ, ತಮಗೆ ಗೊತ್ತಿಲ್ಲದಂತೆಯೇ ಜಾಸ್ತಿ ಊಟ ಮಾಡಿರ್ತಾರಂತೆ. ಕಾನ್ಸೆಪ್ಟ್ ಚೆನ್ನಾಗಿತ್ತು.
ಅಂತೂ ಇಂತೂ ಸ್ವಲ್ಪ ಜಾಗ ಮಾಡಿಕೊಂಡು ಹುಡುಗಿಯ ಕಳೇಬರದ ಹತ್ತಿರ ನಡೆದೆವು. ಎಷ್ಟೇ ಹತ್ತಿರದವರು ಸತ್ತರೂ ಕೊನೆ ಘಳಿಗೆಯಲ್ಲಿ ಅವರ ಮುಖ ನೋಡುವುದು ಉಭಯ ಸಂಕಟದ ವಿಚಾರ. ಯಾಕಂದ್ರೆ ಮುಂದೆ ಅವರ ಬಗ್ಗೆ ನೆನೆಸಿದಾಗಲೆಲ್ಲಾ ಕೊನೆಯ ಬಾರಿ ಕಂಡ ಆ ಮುಖವೇ ಕಣ್ಣ ಮುಂದೆ ಬಂದು ವೇದನೆಯಾಗುತ್ತದೆ. ಅವಳ ಮುಖ ನೋಡುತ್ತಿದ್ದಂತೆ ಹೊಟ್ಟೆ ಕಿವುಚಿದಂತಾಯಿತು. ಅದೇನು ಸಂಬಂಧವಿಲ್ಲದಿದ್ದರೂ ಮುಖ ಸಪ್ಪಗಾಗಿ, ಕಣ್ಣಲ್ಲಿ ಹನಿ ತುಂಬಿಕೊಂತು. ನನ್ನ ಪಕ್ಕದಲ್ಲಿಯೇ ನಿಂತಿದ್ದ ಸೀನನೂ ಸಾವಿನ ಮನೆಯ ಅನಾಥ ಮೌನವನ್ನು ಆಹ್ವಾನಿಸಿಕೊಂಡು ಧೈನ್ಯದಿಂದ ಕೈಮುಗಿದು ನಿಂತ.
' ಆಹಾ ನೋಡ್ಲಾ ಇಲ್ಲೂನು ಸ್ವರ್ಣಚಂಪ ಅಗರಬತ್ತಿ ಸ್ಮೆಲ್ ಬರ್ತಾ ಇದೆ. ನಮ್ಮ ಬ್ರಾಂಡ್' ಎಂದ. ನಗು ತಡೆದುಕೊಳ್ಳಲಾಗಲಿಲ್ಲ.
************** ***************
3 . ಕಾಲೇಜಿನ ಅಪರೂಪದ ಅತಿಥಿ!!
ಡಿಗ್ರಿ ಓದುವಾಗ ನನಗೊಬ್ಬ ಗೆಳೆಯನಿದ್ದ. ಅಲ್ಲ ಸಹಪಾಠಿ ಇದ್ದ. ಗೆಳೆಯ ಅಂದ್ರೆ ಗೆಳೆಯನೂ ಅಲ್ಲ; ಸಹಪಾಠಿ ಅಂದ್ರೆ ಸಹಪಾಠಿಯೂ ಅಲ್ಲ; ಹುಣ್ಣಿಮೆಯ ಚಂದ್ರನಂತೆ ತಿಂಗಳಿಗೊಮ್ಮೆ ಲ್ಯಾಬ್ ನಲ್ಲಿ ಮಾತ್ರ ಅವನನ್ನು ನೋಡುತ್ತಿದ್ದುದು. ಅವನ ಜೊತೆ-ಜೊತೆಯಾಗಿ ಎಕ್ಸ್-ಪೆರಿಮೆಂಟ್ ಮಾಡಬೇಕಾಗಿ ಬಂದಿದ್ದರಿಂದ ಮಾತ್ರ ಅಂಥವನೊಬ್ಬ ನಮ್ಮ ಕ್ಲಾಸಿನಲ್ಲಿ ಇದ್ದನೆಂಬುದು ನನಗೆ ಗೊತ್ತಿತ್ತು. ಉಳಿದವರಿಗೆ ಅದೂ ಇಲ್ಲ. ಲ್ಯಾಬ್ ಮುಗಿಯುತ್ತಿದ್ದಂತೆ ಮರೆಯಾಗಿ ಬಿಡುವನು. ಆ ದಿನವೂ ಕ್ಲಾಸ್ ಅಟೆಂಡ್ ಮಾಡುತ್ತಿರಲಿಲ್ಲ.
ಈ ಅಪರೂಪದ ಅತಿಥಿಯನ್ನು ಮತ್ತೆ ನೋಡುತ್ತಿದ್ದುದು ಮುಂದಿನ ಯಾವುದೋ ಲ್ಯಾಬ್ ನಲ್ಲಿ ಮಾತ್ರ. ಅವನೇನು ದಡ್ಡನಾಗಿರಲಿಲ್ಲ. ಅಪರೂಪಕ್ಕಂತ ಲ್ಯಾಬಿಗೆ ಬಂದರೂ ಎಲ್ಲಾ ಎಕ್ಸ್-ಪೆರಿಮೆಂಟ್ ಗಳನ್ನು ಅನಾಯಾಸವಾಗಿ ಮಾಡುತ್ತಿದ್ದ.
ತಾಂತ್ರಿಕ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲೂ ತುಂಬಾ ಚುರುಕಾಗಿದ್ದ. ತುಂಬಾ ಬುದ್ಧಿವಂತರು ಹಿಂಗೆ ತಿಕ್ಕಲುಗಳಾಗಿರುವುದು ಕಾಮನ್ನು.
ಕಾಲೇಜಲ್ಲಿ ಓದಿ ದಬ್ಬಾಕುತ್ತಿದ್ದುದು ಅಷ್ಟಕ್ಕೆ ಅಷ್ಟೇ ಆಗಿದ್ದಾಗಿಯೂ ಕೂಡ ... ಅಟೆಂಡೆನ್ಸ್ ಗೆ ಹೆದರಿಕೊಂಡು ಪ್ರತಿ ದಿನ ಕ್ಲಾಸುಗಳಿಗೆ ಹೋಗುತ್ತಿದ್ದೆವು. ಇವನ ಹುಚ್ಚು ಧೈರ್ಯವನ್ನು ನೋಡಿ ನನಗಂತೂ ಗಾಬರಿಯಾಗುತ್ತಿತ್ತು. ತನ್ನ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವನೇನೋ ಎಂಬುದಾಗಿ ಸಹಜವಾದ ಕರುಣೆಯೂ ಬಂದು ಅವನನ್ನೊಮ್ಮೆ ಕೇಳಿದೆ..
' ಲೋ!! ಒಂದಿನಾನು ಕ್ಲಾಸಿಗೆ ಬರಲ್ಲ, ಪರೀಕ್ಷೆ ಬರೆಯೋದಕ್ಕೆ ಬಿಡ್ತಾರೆನೋ ನಿನ್ನ. ಹಾಜರಿ ಕಮ್ಮಿ ಅಂತ ಇನ್ನೋಂದ್ ವರ್ಷ ಕೂರುಸ್ತಾರೆ. ಸುಮ್ನೆ ಲೈಫ್ ಯಾಕ್ ಮಗ ಹಾಳ್ ಮಾಡ್ಕೋತೀಯ ' ಅಂದೆ.
ಅದಕ್ಕವನು; ತಾನು ಅತ್ಯಂತ ಪ್ರಭಾವಿ ಮನೆತನದಿಂದ ಬಂದವನಾಗಿಯೂ; ತನ್ನನ್ನು ಪರೀಕ್ಷೆ ಬರೆಯದಂತೆ ತಡೆದು ಕೂರಿಸುವವರು ಇಲ್ಲಿ ಯಾರೂ ಇಲ್ಲವೆಂದೂ ಬಹಳ ಸರಳವಾಗಿ ವಿವರಿಸುತ್ತಾ ಹೋದ. ಅವನು ಬಳಸಿದ ಭಾಷೆಯಲ್ಲಿ ಯಾವ ಗತ್ತು-ದವಲತ್ತು ಇಲ್ಲವಾಗಿಯೂ; ಬಹಳ ಸರಳವಾಗಿ ಇವೆಲ್ಲಾ ಕಾಮನ್ನು ಎನ್ನುವಂತೆ ಹೇಳುತ್ತಾ ಹೋದ.
"ನಮ್ಮ ತಂದೆ ಮೆಡಿಕಲ್ ಕಾಲೇಜಲ್ಲಿ ಅನಾಟಮಿ ಹೆಡ್ಡು. ಒಂದ್ ಸಾರಿ ಏನಾಯ್ತು ಅಂದ್ರೆ, ನಮ್ಮ ತಂದೆಯವರ ಕಾರನ್ನ ಒಬ್ಬ ಟ್ರಾಫಿಕ್ ಪೋಲೀಸು, ಅಡ್ಡ ಹಾಕಿಕೊಂಡ. ಅವರು ಒಂದು ಸೀರಿಯಸ್ ಆಪರೇಷನ್ ಇದೆ ಅಂತಂದರೂ ಬಿಡದೇ, ಡಾಕ್ಯುಮೆಂಟ್ ವೆರಿಫಿಕೇಷನ್ ಗೆ ಅವರನ್ನು ಕಾಯಿಸಿ ನಿಲ್ಲಿಸಿದ. ಮುಂದೆ ಏನಾಯ್ತು ಗೊತ್ತಾ..? ಅವರ ಹೈಯರ್ ಆಫೀಸರ್ ಜೊತೆ ನಮ್ಮ ತಂದೆ ಗಾಲ್ಫ್ ಆಡೋದಕ್ಕೆ ಹೋಗ್ತಾರೆ. ಅಲ್ಲಿ ಈ ಟ್ರಾಫಿಕ್ ಪೋಲೀಸನ್ನ ಕರೆಸಿ ಇಡೀ ದಿನ ಹೊರಗ್ ನಿಲ್ಲಿಸಿದ್ರು. ಶಿಕ್ಷೆ ಅಂತ " ಅಂದ.
ನಿಮ್ಮಪ್ಪ ಮಾಡಿದ್ದು ತಪ್ಪಲ್ವಾ ಅಂದ್ರೆ; ಅವನು ಮಾಡಿದ್ದು ತಪ್ಪಲ್ವಾ ಅಂತ ಕೇಳ್ತಾನೆ.
ಈ ಘಟನೆಯನ್ನು ಹಿನ್ನಲೆಯಾಗಿಟ್ಟುಕೊಂಡು ಮುಂದಿನ ತನ್ನ ಗೇಮ್ ಪ್ಲಾನ್ ಹೇಳುತ್ತಾ ಹೋದನು ..:
" ಈ ಕಾಲೇಜ್ ಟ್ರಸ್ಟಿನವರದ್ದು ಮೆಡಿಕಲ್ ಕಾಲೇಜುಗಳು ಕೂಡ ಇವೆ. ಪ್ರತಿ ವರ್ಷ ಮೆಡಿಕಲ್ ಕಾಲೇಜ್ ಪರ್ಮೀಷನ್ extend ಮಾಡಬೇಕು ಅಂದ್ರೆ ವೆರಿಫಿಕೇಷನ್ ಗೆ ಅಂತ ಬರ್ತಾರೆ. ನಮ್ಮ ಅಂಕಲ್ಲಿಗೆ ಅಲ್ಲೆಲ್ಲಾ ಗೊತ್ತು. ಅವರ ಕೈನಲ್ಲಿ ನಮ್ಮ ಪ್ರಿನ್ಸಿಗೆ ಫೋನ್ ಮಾಡಿಸಿದರೆ ಆಯ್ತು. ಒಂದಕ್ಕೊಂದು ಲಿಂಕ್ ಇದೆ. ನನ್ನ ಅಟೆಂಡೆನ್ಸ್ ಪ್ರಾಬ್ಲಮ್ ತಾನಾಗೆ ಸಾಲ್ವ್ ಆಗತ್ತೆ. " ಅಂದ.
ಅವನ ಜಾಗದಲ್ಲಿ ನಾವಿದ್ದರೂ ಆದಷ್ಟು ನಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವೇನೊ. ಆದರೆ ಒಬ್ಬೇ ಒಬ್ಬನ ವೈಯಕ್ತಿಕ ಲಾಲಸೆಗಳ ಮೇಲೆ ಇಡೀ ವ್ಯವಸ್ಥೆಯ ಆಗು-ಹೋಗುಗಳು ಅವಲಂಬಿತವಾಗಿರುತ್ತದೆ ಎಂಬುದನ್ನು ಕೇಳಿ ತುಂಬಾ ಖೇದಕರವೆನಿಸಿತು. ಇವನು ಪರೀಕ್ಷೆ ಬರೆದು ತೇರ್ಗಡೆಯಾಗಿ ಮುಂದಿನದಕ್ಕೆ ಹೋಗಲು ಸಂಪೂರ್ಣ ಯೋಗ್ಯನಾದ ವಿದ್ಯಾರ್ಥಿ.ಅಷ್ಟೋಂದು ಟ್ಯಾಲೆಂಟ್ ಕೂಡ ಇದೆ. ಆದರೆ ತಮ್ಮ ತಮ್ಮ ಅಧಿಕಾರಗಳನ್ನು ಬಳಸಿ ಒಂದು ಕರಪ್ಟ್ ವಾತಾವರಣವನ್ನು ನಿರ್ಮಿಸುವುದು ತಪ್ಪು.
ಇಷ್ಟು ದೊಡ್ಡ ಕಾಲೇಜು; ಇಷ್ಟು ದೊಡ್ಡ ಹೆಸರು; ಇಷ್ಟು ದೊಡ್ಡ intellectual ಗಳು... ಒಬ್ಬ ಯಕಃಶ್ಚಿತ್ ಹುಡುಗನ ಅಂಟೆಂಡೆನ್ಸ್ ವಿಷಯಕ್ಕಾಗಿ ತಮ್ಮ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ತಾರೆ ಅಂದರೆ 'ಥೂ .. ಅಸಹ್ಯ'.
ಲ್ಯಾಬ್ ಗಳಿಗೂ ಸರಿಯಾಗಿ ಬರ್ತಿರಲಿಲ್ಲ. ಮುಂದೆ; ಸೆಮಿಸ್ಟರ್ ಪರೀಕ್ಷೆಯು ಬಂತು. ಅದೇನಾಶ್ಚರ್ಯವೋ ಎಂಬಂತೆ, ಅವನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿರಲಿಲ್ಲ. ಅವನ ಪ್ಲಾನು ವರ್ಕೌಟ್ ಆಗಿರಲಿಲ್ಲವೋ ಅಥವಾ ಮತ್ತೇನೋ ಅರಿಯೆ. ಆದರೆ ನಾನು ಓದುತ್ತಿದ್ದ ನನ್ನ ಕಾಲೇಜಿನ ಬಗ್ಗೆ ಒಂದು ಕ್ಷಣ ಹೆಮ್ಮೆ ಎನಿಸಿತು.
ಮುಂದಿನ ವರ್ಷದಿಂದ ಅವನು ಕ್ಯಾಂಪಸ್ ನಲ್ಲಿ ಕಾಣಿಸುತ್ತಿದ್ದ ದೃಶ್ಯವೂ ಸರ್ವೇ ಸಾಮಾನ್ಯವಾಯಿತು, ಜೂನಿಯರ್ ಆಗಿ.
************** ***************
4. ಅಪ್ಪನಿಗೆ ಆಂಜಿಯೋಪ್ಲಾಸ್ಟಿ ಮಾಡಿಸಿದ ದಿನ
ಅಪ್ಪಂಗೆ ಅಂಜಿಯೊ ಪ್ಲಾಸ್ಟಿ ಮಾಡಿಸೋದಿತ್ತು. ಹೃದಯಕ್ಕೆ ರಕ್ತ ಪೂರೈಸುವ ನಾಳದ ಒಳಭಾಗದಲ್ಲಿ ಕೊಬ್ಬು ಅಂಟಿಕೊಳ್ಳುತ್ತಾ ಹೋಗಿ, ಹೆಚ್ಚಾಗಿ, ರಕ್ತ ಸರಾಗವಾಗಿ ಸರಿದಾಡಲು ಸಹಕರಿಸದೇ ಇರುವ ಸ್ಥಿತಿ. ರಕ್ತ ನಾಳವನ್ನು ಬ್ಲಾಕ್ ಆಗಿರುವ ಜಾಗದಲ್ಲಿ ಹಿಂಜಿಸಿ, ಒಂದು ಸಣ್ಣ ಮೆಶ್ ತರದ ಪೈಪು ಕೂರಿಸುವ ಕೆಲಸ. ಇದನ್ನ ಸ್ಟೆಂಟ್ ಹಾಕೋದು, ಅಂಜಿಯೋಪ್ಲಾಷ್ಟಿ, ptc ಅಂತಾರಂತೆ.
ಜಯದೇವ ಆಸ್ಪತ್ರೆ. ಅಪ್ಪನ ಬೆಡ್ ಪಕ್ಕದಲ್ಲಿ ಒಬ್ಬರು ಅಜ್ಜ ಇದ್ದರು. ಹಣ್ಣಣ್ಣು ಮುದುಕ.
ಅವರಿಗೆ ಹೃದಯ ಬಡಿತ ಕಡಿಮೆ ಇದ್ದು, ಕೆಲಸ ಮಾಡ್ತಿಲ್ವಂತೆ. ಹೃದಯದ ಬದಲಿ ಕೆಲಸಕ್ಕೆ ಮತ್ತು ಅದಕ್ಕೆ ಬೆಂಬಲವಾಗಿ ಮಿಷನ್ ಇದೆ.
ಆ ಮಿಷನ್ ಕೆಲಸ ಮಾಡೋದಕ್ಕೆ ಅದಕ್ಕೊಂದು ಬ್ಯಾಟರಿಯೂ ಇದೆ. ಬ್ಯಾಟರಿ ರೀಚಾರ್ಜ್ ಮಾಡಿಸಿಕೊಳ್ಳುವುದಕ್ಕೆ ಅಜ್ಜ ಅಡ್ಮಿಟ್ ಆಗಿರುವುದು.
ಅವಾಗಾವಾಗ ರೀಚಾರ್ಜ್ ಮಾಡಿಸಬೇಕಾಗಿರುವುದಾಗಿಯೂ, ಅದಕ್ಕೆ ಎರಡುವರೆ ಲಕ್ಷವೆಂದೂ ಹೇಳಿದರು.
ಲಕ್ಷಕ್ಕಿಂತ ಹೆಚ್ಚಾಗಿ, ಅಲಕ್ಷವೆನಿಸಿದ್ದು 'ಸಂಪೂರ್ಣ ಹೃದಯದ ಸೆಟಪ್ಪು' . ಸಾಲ್ಡರಿಂಗು!! ವೆಲ್ಡಿಂಗು!! ಪಂಕ್ಚರು!! ರೀಚಾರ್ಜು!! ಏನಪ್ಪಾ ಇದು ಹಾಲ್ಟಿನ ಕಥೆ ..?
ಮನ್ಸ ಬದುಕಿರೋದಕ್ಕೆ ಏನೇನ್ ಮಾಡ್ತಾನೋ..
'ಇಷ್ಟು ಕಷ್ಟ ಪಡೋ ಬದಲು, ಒಂದ್ ನಿಮಿಷ ಬ್ಯಾಟರಿ ಆಫ್ ಮಾಡಿದರೆ ಆಯ್ತಪ್ಪ' ಅಂದೆ, ಮೆಲ್ಲಗೆ.
ಅಮ್ಮ ನಕ್ಕಳು. 'ಹಂಗೆಲ್ಲಾ ತಮಾಷೆ ಮಾಡಬಾರದು.. ' ಅಂತಲೂ ಅಂದಳು.
ನಾನು ಸೀರಿಯಸ್ ಆಗಿಯೇ ಹೇಳಿದ್ದು. ಇದೆಂಥಕ್ಕೆ ಇಷ್ಟೆಲ್ಲಾ ಹರಸಾಹಸ ಪಟ್ಟು ಬದುಕಿಸೋದಾ.. ?
'ಮಿಷನ್ ಎಲ್ಲಿದೆ..?' ಅಂತ ಅಮ್ಮ ಕೇಳಿದ್ದಕ್ಕೆ ಎದೆಯ ಭಾಗವನ್ನು ತೋರಿಸಿತು ಅಜ್ಜ.
ಅಷ್ಟಕ್ಕೇ ನಿಲ್ಲದೆ, ಅಮ್ಮನ ಕೈ ಹಿಡಿದು, ತನ್ನ ಎದೆಯ ಭಾಗವನ್ನು ಒತ್ತುವಂತೆ ಹಿಡಿಯಿತು.
ಅಮ್ಮ ಕರೆಂಟ್ ಹೊಡೆದವಳಂತೆ ಕೈ ಹಿಂದೆ ತೆಗೆದಳು. ದೇಹದೊಳಗೆ ಮಿಷನ್ ಇರುವುದೇ ಒಂದು ರೋಮಾಂಚನದ ಸಂಗತಿಯಾಗಿತ್ತು.
ಹಲ್ಲಿಲ್ಲದ ಅಜ್ಜ ನಾಲಗೆ ಹೊರ ಹಾಕುತ್ತಾ ನಕ್ಕಿತು.
'ಅಜ್ಜ ವಯಸ್ಸೆಷ್ಟು.?' ಅಂದರೆ 'ಎಂಬತ್ತೆರಡು, ಮತ್ತೆ ಮೂರು ತಿಂಗಳು' ಅಂತೆ.
ಎಂಬತ್ತೆರಡರ ಯಂಗ್ ಮೆನ್, ತನ್ನ ಚುರುಕಾದ ಮಾತುಗಳಿಂದ ನರ್ಸುಗಳನ್ನೂ ಮತ್ತು ಫೆಲೋ ಪೇಷೆಂಟುಗಳನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದದ್ದು ಮಜವಾಗಿತ್ತು.
ಎಂಬತ್ತು ದಾಟಿದ ಅಜ್ಜನ ಜೀವನ ಪ್ರೀತಿ ಮತ್ತು ಲವಲವಿಕೆ ಅಮ್ಮನಿಗೆ ಬಹುವಾಗಿ ಹಿಡಿಸಿತು.
ಇತ್ತಕಡೆ ಐವತ್ತರ ಅಪ್ಪ 'ನಾಳೆ ನಂದು ಆಪರೇಷನ್' ಎಂಬುದನ್ನು ನೆನೆದು ಮಂಕಾಗಿ ಕುಳಿತಿದ್ದರು.
ಅವರಾಗಲೇ ನಮ್ಮ ತೋಟದ ಉದ್ದಗಲಗಳು, ಸರಹದ್ದಿನ ಗುರುತಿನ ಕಲ್ಲುಗಳನ್ನೂ ನನಗೆ ತೋರಿಸಿ ಬಂದಿದ್ದರು.
ಎಂಬತ್ತೆರಡರ ಅಜ್ಜನ ಧೈರ್ಯವನ್ನು, ಅಪ್ಪನ ದುಗುಡದ ಜೊತೆ ಹೋಲಿಸಿಕೊಂಡು ಅಮ್ಮ ರೇಗಿಸುತ್ತಿದ್ದುದು ತಮಾಷೆಯಾಗಿತ್ತು.
'ನಾಳೆ ನಮ್ಮದೆಲ್ಲಾ ಮತ್ತೆ ಹುಟ್ಟು ಐತೆ. ಒಂಥರ ಸತ್ತು ಹುಟ್ಟಿದಂಗೆ. ಉಳಿದಿರೋ ಜೀವನವನ್ನ ಚನ್ನಾಗ್ ಬದುಕಬೇಕು.' ಅನ್ನೋ ಪಂಚ್ ಗಳೂ ಬಂದವು.
ಪೇಷೆಂಟು ಗಳೆಲ್ಲಾ ಒಬ್ಬರಿಗೊಬ್ಬರು ಗುಡ್ ಲಕ್!! ಬೆಸ್ಟ್ ಆಫ್ ಲಕ್ ಹೇಳಿಕೊಂಡು ಮಲಗಿದರು.
ಅಜ್ಜನ ಪಕ್ಕದಲ್ಲಿಯೇ ಕುಳಿತಿದ್ದ ಅವರ ಮಗ ತಲೆ ಸವರುತ್ತಾ..,
'ದನದ ದಲ್ಲಾಳಿ ವ್ಯಾಪಾರ ಮಾಡ್ಕಂಡು ಸಾಕಿದಾನೆ ನಮ್ಮಪ್ಪ!! ನಾವು ಇವತ್ತು ಹಿಂಗಿದಿವಿ ಅಂದ್ರೆ ಅದಕ್ಕೆ ನಮ್ಮಪ್ಪನೇ ಕಾರಣ.
ಏಳು ಮಕ್ಳನ್ನ ಸಾಕದು ಅಂದ್ರೆ ಸುಲಭವಾ..?
ಎಲ್ರನ್ನೂ ಓದ್ಸಿದಾನೆ. ಹೆಣ್ಣು ಮಕ್ಕಳನ್ನ ಒಳ್ಳೊಳ್ಳೆ ಕಡೆ ಕೊಟ್ಟು ಮದ್ವೆ ಮಾಡಿದಾನೆ.
ಏನೂ ಇಲ್ಲದರಿಂದ ಜೀವನ ಶುರು ಮಾಡಿ, ಒಂದೊಂದಾಗಿ ಜೋಡಿಸಿದ್ದಾನೆ.
ಈಗ್ಲು ಬನ್ರಿ ಊರ ಕಡೆ. ಐದು ಎಕರೆ ತೋಟ, ಐವತ್ತು ಕುರಿ, ನಾಲಕ್ಕು ಹುಂಜ, ಹತ್ತು ಹಸ-ಕರ ಎಲ್ಲಾ ಹೆಂಗಿಟ್ಟಿದಾನೆ ಅಂದ್ರೆ, ನಮಗೆ ನಾಚಿಕೆ ಆಗುತ್ತೆ.
ಅವನು ಗಟ್ಟಿಗ!! ಕಲ್ಲಿನಂತೋನು.' ತನ್ನ ಅಪ್ಪನ ಬಗ್ಗೆ ಅತೀವವಾದ ಹೆಮ್ಮೆ.
' ಸುಮ್ನೆ ನಮ್ಮ ಜೊತೆ ಉಸಿರಾಡಿಕೊಂಡು ಇದ್ದರೂ ಸಾಕು, ಎಲ್ರೂ ಖುಷಿಯಾಗಿರ್ತೇವೆ. ' ಅಂತಲೂ ಹೇಳುವುದನ್ನು ಮರೆಯಲಿಲ್ಲ.
ಆಪರೇಷನ್ ದಿನ. ಅಪ್ಪನ ಜೊತೆ ಅಜ್ಜನೂ ರೆಡಿ. ಅಖಂಡ ವಸ್ತ್ರಧಾರಿಗಳಾದ ನೂರಾರು ಹೀನ ಹೃದಯಿಗಳು ಪಂಕ್ಚರ್ ಗಾಗಿಯೂ, ರಿ ಬೋರ್ ಗಾಗಿಯೂ, ಬೈಪಾಸ್ ಗಳಿಗಾಗಿಯೂ ಸಿದ್ಧರಾದರು.
ಅದೇನು, ವಿಪರ್ಯಾಸವೋ ಎಂಬಂತೆ ಅಜ್ಜ!! ಯಮಯಾತನೆಯಿಂದ ನರಳಲಾರಂಭಿಸಿತು.
ಸಿಸ್ಟರ್, ಡಾಕ್ಟರ್ ಎಲ್ಲರೂ ಒಮ್ಮೆಗೆ ದೌಡಾಯಿಸಿದರು. ಎದೆ ಗುದ್ದುವರು, ಮುಖದ ಮೇಲೆ ಗಾಳಿಯ ಯಂತ್ರ ಇಡುವರು. ಮಗ, 'ಅಣ್ಣಾ!! ' ಎಂಬುದಾಗಿ ಘೀಳಿಡುವನು.
ಮಗಳು, ಒಂದೇ ಸಮನೆ ರೋಧಿಸಲು ಪ್ರಾರಂಭಿಸುವರು.
ಆಪರೇಷನ್ ಮಾಡುವ ಬದಲಾಗಿ, ಅವರನ್ನ ತೀವ್ರ ನಿಗಾ ಘಟಕಕ್ಕೂ, ಅಲ್ಲಿಂದ ಅದಕ್ಕೂ ಮೇಲಿನ ಎಮರ್ಜೆನ್ಸಿ ರೂಮಿಗೂ ವರ್ಗಾಯಿಸಲಾಯಿತು.
ಮೈ ತುಂಬಾ ಚುಚ್ಚಿದಾರೆ!! ಪಲ್ಸ್ ಇಲ್ಲ!! ಇವತ್ತಿನ ಆಪರೇಷನ್ ಕ್ಯಾನ್ಸಲ್!! ಬದುಕದು ತುಂಬಾ ಕಷ್ಟ ಅಂತೆ .. ಮುಂತಾದ ಮಾತುಗಳು, ಅವರ ಮನೆಯವರ ಮಾತುಗಳ ನಡುವೆ ನುಸುಳುತ್ತಿದ್ದವು. ದುರಾದೃಷ್ಟವೆಂಬಂತೆ ಅದೇ ದಿನ ಅಜ್ಜನ ಮಿಷನ್ ಬ್ಯಾಟರಿ ಡೆಡ್ ಆಯ್ತಂತೆ.
ಆಮೇಲೆ ಅಜ್ಜನಿಗೆ ಏನೇನಾಯ್ತೊ ಕಾಣೆ!!
ಕೊನೆಗೆ ಅಪ್ಪನ ಅಂಜಿಯೊಪ್ಲಾಸ್ಟಿ ಮುಗಿಸಿ, ಮನೆಗೆ ವಾಪಾಸಾಗುವ ದಾರಿಯಲ್ಲಿ 'ಅಣ್ಣ!! ನಿನ್ನ ಜೊತೆ ಮಾತಾಡಬೇಕಂತೆ, ಸನ್ನೆ ಮಾಡ್ತಿದಾನೆ. ' ಅಂತ ಅಜ್ಜನ ಮಗನು, ಮಗಳನ್ನು ಕರೆದದ್ದು ನೋಡಿದೆ. ಅವರು ಓಡಿದರು. ದುಃಖದಲ್ಲಿದ್ದರು. ಬದುಕುವ ಆಸೆ ಎಲ್ಲರಿಗೂ ಇದೆ. ಬದುಕಿಸಿಕೊಳ್ಳುವರ ಪ್ರೀತಿಯೂ, ಆರೈಕೆಯೂ ಅಷ್ಟೇ ಇದೆ. ಇವರಿಬ್ಬರನ್ನ ಬಿಟ್ಟು ನೋಡುವವರಿಗೆ 'ವಯಸ್ಸು' ಅನ್ನೋದು ಒಂದು ಒಗಟು.
' ಒಂದ್ ನಿಮಿಷ ಮಿಷನ್ ಆಫ್ ಮಾಡುದ್ರೆ ಸಾಕು ಅಂತ ಹೇಳ್ತಿದ್ದೆ. ಅಷ್ಟೇ ಮಾಡದಾಗಿದ್ರೆ, ಇಷ್ಟೆಲ್ಲಾ ಕಷ್ಟ ಪಡಬೇಕಿತ್ತಾ..? ' ಅಂದಳು ಅಮ್ಮ.
Comments
Post a Comment